ಬಜೆಟ್ ಹಾಗೂ ವಿತ್ತೀಯ ಕೊರತೆ

ಬಜೆಟ್ -2024
ಹಲವು ಪತ್ರಿಕೆಗಳಲ್ಲಿ ಚುನಾವಣೆ ಹತ್ತಿರದಲ್ಲಿದ್ದರೂ ದೊಡ್ಡ ಘೋಷಣೆಗಳನ್ನು ಬಜೆಟ್ಟಿನಲ್ಲಿ ಮಾಡಿಲ್ಲ ಅನ್ನುವ ಅಭಿಪ್ರಾಯವನ್ನು ಪ್ರಕಟಿಸಿವೆ. ಇದು ಚುನಾವಣಾ ವರ್ಷವಾಗಿರುವುದರಿಂದಲೇ ದೊಡ್ಡ ದೊಡ್ಡ ಭರವಸೆಗಳನ್ನು ಕೊಡಲು ಸಾಧ್ಯವಿಲ್ಲ ಅನ್ನುವುದನ್ನು ಗಮನಿಸಬೇಕು. ಈ ಸಮಯದಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಚುನಾವಣೆಯ ನಂತರ ಸರ್ಕಾರ ಬದಲಾಗುವ ಸಾಧ್ಯತೆಗಳು ಇರುವುದರಿಂದ ಕೇವಲ ಮಧ್ಯಂತರ ಬಜೆಟ್ಟನ್ನು ಮಂಡಿಸಬಹುದು. ಆದರೆ ಮಧ್ಯಂತರ ಬಜೆಟ್ಟಿಗೆ ಸಂವಿಧಾನದಲ್ಲಿ ಅವಕಾಶವಿಲ್ಲದೇ ಇರುವುದರಿಂದ ಸರ್ಕಾರ ಚುನಾವಣೆಯ ಪ್ರಕ್ರಿಯೆ ಮುಗಿಯುವ ತನಕ ಆಡಳಿತ ನಡೆಸುವುದಕ್ಕಾಗಿ ಬೇಕಾದ ಹಣದ ಲೆಕ್ಕವನ್ನು ಮಂಡಿಸಿ ಲೋಕಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಬಹುದು. ಸರ್ಕಾರ ಮತದಾರರನ್ನು ಪ್ರಭಾವಿಸಬಹುದಾದ ಪ್ರಮುಖ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಅವಕಾಶವಿಲ್ಲ.
ಹಾಗಾಗಿ ಸರ್ಕಾರ ಈ ಅವಕಾಶವನ್ನು ತನ್ನ ಹತ್ತು ವರ್ಷದ ಆಡಳಿತದ ಸಾಧನೆಗಳನ್ನು ಹೇಳಿಕೊಳ್ಳಲು ಬಳಸಿಕೊಳ್ಳಬಹುದು ಅನ್ನುವ ಅಂದಾಜಿತ್ತು. ಆ ಕೆಲಸವನ್ನು ಮಾಡಿದೆ. ಬಜೆಟ್ಟಿನ ಮೊದಲ ಭಾಗವಿಡೀ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆಯೇ ಹೇಳಿಕೊಂಡಿದೆ. ತೀರಾ ಮುಖ್ಯ ಅಂಶಗಳಾದ ಸಂಪನ್ಮೂಲದ ಕ್ರೋಡೀಕರಣ ಹಾಗೂ ವಿವಿಧ ಬಾಬ್ತಿನಲ್ಲಿ ಅದರ ಹೂಡಿಕೆಯ ಬಗ್ಗೆ ಅಲ್ಲಿ ವಿವರಗಳಿಲ್ಲ. ವಿಪರ್ಯಾಸ ಅಂದರೆ ವಿರೋದ ಪಕ್ಷಗಳು ಜಾರಿಗೆ ತಂದ ಇಂತಹ ಯೋಜಗನೆಳನ್ನು ರೇವಡಿ ಎಂದು ಲೇವಡಿ ಮಾಡಿದ್ದ ಜನಕಲ್ಯಾಣ ಯೋಜನೆಗಳನ್ನು ಇಲ್ಲಿ ಸಾಧನೆಯೆಂದು ಬನ್ನಿಸಲಾಗಿದೆ.
ಬಜೆಟ್ಟಿನ ಎರಡನೆ ಭಾಗದಲ್ಲಿ ಹಲವು ಜನಕಲ್ಯಾಣಿ ಕಾರ್ಯಕ್ರಮಗಳು ಹಾಗೂ ಮೂಲಸೌಕರ್ಯ ಅಭಿವೃದ್ದಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಘೋಷಿಸಲಾಗಿದೆ. ಬಜೆಟ್ಟಿನ ಕೆಲವು ಅಂಶಗಳನ್ನು ಗಮನಿಸುವ ಪ್ರಯತ್ನ ಇಲ್ಲಿದೆ.
ಮೊದಲಿಗೆ ಸರ್ಕಾರಕ್ಕೆ ತನ್ನ ಖರ್ಚನ್ನು ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಾಧ್ಯವಾಗಿದೆಯೇ? ವಿತ್ತೀಯ ಕೊರತೆ, ಸಾಲದ ಪ್ರಮಾಣ ಇವೆಲ್ಲಾ ಈ ಬಗ್ಗೆ ಚಿತ್ರವನ್ನು ಕೊಡುತ್ತದೆ. ವಿತ್ತೀಯ ಕೊರತೆ ತಪ್ಪಾ, ಎಷ್ಟಿರಬೇಕು ಇತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸುತ್ತಿಲ್ಲ. ಸಧ್ಯಕ್ಕೆ ಸರ್ಕಾರ ವಿತ್ತೀಯ ಕೊರತೆ ಶೇಕಡ ೩ಕ್ಕಿಂತ ಕಡಿಮೆ ಇರಬೇಕು ಅಂತ ಭಾವಿಸಿದೆ. ಶೇಕಡ ಮೂರೇ ಏಕೆ? ಈ ಪ್ರಶ್ನೆಯೂ ಇದೆ. ಇರಲಿ.
೨೦೨೩-೨೪ರಲ್ಲಿ ಬಜೆಟ್ ಮಂಡಿಸುವಾಗ ವಿತ್ತೀಯ ಕೊರತೆ (ಅಂದರೆ ಸರ್ಕಾರದ ಖರ್ಚು ಹಾಗೂ ಆದಾಯದ ನಡುವಿನ ಅಂತರ) ಯನ್ನು ೫.೯%ಕ್ಕೆ ಮಿತಿಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಅದನ್ನು ಸಾಧಿಸಿರುವುದು ಮಾತ್ರವಲ್ಲ ೫.೮%ಕ್ಕೆ ಇಳಿಸುವ ಮೂಲಕ ಇನ್ನೂ ಹೆಚ್ಚಿನ ವಿತ್ತೀಯ ನಿಯಂತ್ರಣವನ್ನು ಸಾಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ನಮಗೆ ಕೇವಲ ಮೂರು ತ್ರೈಮಾಸಿಕಗಳ ಖರ್ಚಿನ ಮಾಹಿತಿ ಅಷ್ಟೇ ಇರುವುದು. ಕೊನೆಯ ತ್ರೈಮಾಸಿಕದ ವರದಿ ಮಾರ್ಚ್ ನಂತರವಷ್ಟೇ ಸಿಗುವುದು. ಹಾಗಾಗಿ ಈಗ ಲಭ್ಯವಿರುವುದು ಕೇವಲ ಅಂದಾಜಷ್ಟೆ. ನಾಲ್ಕನೆಯ ತ್ರೈಮಾಸಿಕದ ಮಾಹಿತಿ ಸಿಕ್ಕ ಮೇಲಷ್ಟೇ ನಿಜವಾದ ವಿತ್ತೀಯ ಕೊರತೆಯ ಸ್ಥಿತಿ ತಿಳಿಯುವುದು.
ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸರ್ಕಾರದ ಖರ್ಚಿನ ಬಗ್ಗೆ ಹೆಚ್ಚಿನ ಮಾಹಿತಿ ಬೇಕು. ಇದಕ್ಕೆ ಸಂಬಂಧಿಸಿದಂತೆ ಕಂಟ್ರೋಲರ್ ಜೆನೆರಲ್ ಆಫ್ ಅಕೌಂಟ್ಸ್ ಪ್ರಕಟಿಸುವ ಅಂದಾಜು ಕೂಡ ಈ ಬಗ್ಗೆ ಮಾಹಿತಿ ನೀಡುತ್ತದೆ. ಬಜೆಟ್ಟಿನ ವಾರ್ಷಿಕ ವರದಿಯೊಂದಿಗೆ ಅದನ್ನು ಹೋಲಿಸಿ ನೋಡಿದಾಗ ಸರ್ಕಾರ ತನ್ನ ಬಜೆಟ್ಟಿನ ಅಂದಾಜಿಗಿಂತ ತುಂಬಾ ಕಡಿಮೆ ಖರ್ಚು ಮಾಡಿದೆ ಅನಿಸುತ್ತದೆ. ಉದಾರಣೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಗೆ ೨೦೨೩-೨೪ರಲ್ಲಿ ಬಜೆಟ್ ಅಂದಾಜು ೧,೧೫,೫೩೨ ಕೋಟಿ ಇತ್ತು. ಪರಿಷ್ಕೃತ ಅಂದಾಜು ೧,೧೬,೭೮೯ ಕೋಟಿ. ಆದರೆ ಸಿಜಿಎ ಪ್ರಕಾರ ಡಿಸೆಂಬರ್‌ವರೆಗೆ ಖರ್ಚಾಗಿರುವುದು ಕೇವಲ ೭೦,೭೯೭ ಕೋಟಿ ರೂಪಾಯಿಗಳು. ಅಂದರೆ ಪರಿಷ್ಕೃತ ಅಂದಾಜಿನ ಕೇವಲ ೬೧% ಮಾತ್ರ ಖರ್ಚಾಗಿದೆ. ಹಾಗಾಗಿ ಹಲವರು ಭಾವಿಸಿರುವಂತೆ ಇರುವ ಸಾಧ್ಯತೆ ಎರಡು. ಒಂದು ಸರ್ಕಾರ ರೈತರ ಬೆಂಬಲಕ್ಕಿದೆ ಎಂದು ಬಿಂಬಿಸುವುದಕ್ಕಾಗಿ ಬೇಕಂತಲೇ ಹೆಚ್ಚಿನ ಮೊಬಲಗನ್ನು ತೋರಿಸಿರಬಹುದು. ಅಥವಾ ಇನ್ನೂ ಮೂರು ತಿಂಗಳಲ್ಲಿ ವಿಪರೀತ ಖರ್ಚು ಮಾಡಿ ರೈತರ ಒಲವನ್ನು ಪಡೆಯುವ ಪ್ರಯತ್ನ ಮಾಡಬಹುದು. ಇನ್ನು ಮೂರು ತಿಂಗಳಲ್ಲಿ ಅದು ಸ್ಪಷ್ಟವಾಗುತ್ತದೆ.
ಜೊತೆಗೆ ವಿತ್ತೀಯ ಕೊರತೆಯಲ್ಲಿ ಇಳಿತವನ್ನು ತೋರಿಸುವುದಕ್ಕೆ ಖರ್ಚನ್ನು ಕಡಿಮೆ ಮಾಡುವುದಕ್ಕೆ ಕೆಲವು ಬಾಬ್ತುಗಳಲ್ಲಿ ಹಣವನ್ನು ಖಡಿತಮಾಡಿರುವ ಸಾಧ್ಯತೆಯೂ ಇದೆ. ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಅಂದರೆ ಮೂಲಭೂತ ಸೌಕರ್ಯ ಇತ್ಯಾದಿಗಳ ಮೇಲಿನ ಬಂಡವಾಳ ಖರ್ಚಿನಲ್ಲಿ ಕಳೆದ ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಒಂದು ಲಕ್ಷ ಕೋಟಿ ಕಡಿತ ಮಾಡಲಾಗಿದೆ. ಇದರಿಂದ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಆಗಬಹುದು. ಹಾಗಾಗಿ ಇಂತಹ ಕ್ರಮಗಳಿಂದ ವಿತ್ತೀಯ ಕೊರತೆಯಲ್ಲಿ ಕಡಿತ ಸಾಧ್ಯವಾದರೂ ಆರ್ಥಿಕತೆಯ ದೃಷ್ಟಿಯಿಂದ ಧೀರ್ಘಾವದಿಯಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ.
ನಾವು ಖರ್ಚಿಗೆ ಸಂಬಂಧಿಸಿದಂತೆ ಇನ್ನೊಂದು ಅಂಶವನ್ನೂ ಗಮನಿಸಬೇಕು. ಅದು ಖರ್ಚಿನ ನಿಜ ಮೌಲ್ಯ. ಅಂದರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡ ತೊಡಗಿಸಿರುವ ಹಣದ ಪ್ರಮಾಣವನ್ನು ಗಮನಿಸಬೇಕು. ಉದಾಹರಣೆಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ೨೦೨೪-೨೫ಲ್ಲಿ ಶೇಕಡ ೧.೭ರಷ್ಟು ಹಣತೊಡಗಿಸಲಾಗಿದೆ. ಆದರೆ ಹಣದುಬ್ಬರದ ದರವನ್ನು ಶೇಕಡ ೬ ಅಂತ ಭಾವಿಸಿದರೆ ನಿಜವಾಗಿ ಅದು ೪.೩% ಇಳಿಕೆಯಾಗುತ್ತದೆ.
ಇವು ಖರ್ಚಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಾದರೆ ಇನ್ನೂ ಅದಕ್ಕೆ ಬೇಕಾದ ಹಣದ ಸಂಗ್ರಹಣೆಯನ್ನು ಕುರಿತಂತೆ ಒಂದಿಷ್ಟು ಅಂಶಗಳನ್ನು ನೋಡಬಹುದು. ಕೊರತೆಯನ್ನು ಎಲ್ಲಿಂದ ತುಂಬಲಾಗುತ್ತದೆ ಅನ್ನುವುದೂ ಮುಖ್ಯ. ಅದು ಆರ್ಥಿಕತೆಯ ತಾಳಿಕೆಯ ದೃಷ್ಟಿಯಿಂದ ಒಳ್ಳೆಯದೇ ಅನ್ನುವುದನ್ನು ಗಮನಿಸಬೇಕು.
ನಿನ್ನೆ ಬಜೆಟ್ಟನ್ನು ಮಂಡಿಸುವಾಗ ಕಳೆದ ವರ್ಷ ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹವಾಗಿದೆ. ತೆರಿಗೆಯೇತರ ಕಂದಾಯ ಬಜೆಟ್ಟಿನಲ್ಲಿ ಅಂದಾಜಿಸಿದ್ದಕ್ಕಿಂತ ಶೇಕಡ ೨೫ರಷ್ಟು ಹೆಚ್ಚು ಸಂಗ್ರಹವಾಗಿದೆ. ಅದಕ್ಕೆ ಮುಖ್ಯ ಕಾರಣ ರಿಸರ್ವ್ ಬ್ಯಾಂಕು ಹಾಗೂ ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳಿಂದ ಸರ್ಕಾರಕ್ಕೆ ವರ್ಗಾಯಿಸಿರುವ ಡಿವೆಡೆಂಡಿನಲ್ಲಿ ಹೆಚ್ಚಳ. ೨೦೨೩-೨೪ರ ೪೮,೦೦೦ ಕೋಟಿ ರೂಪಾಯಿಗಳ ಡಿವಿಡೆಂಡ್ ಸಂದಾಯವಾಗುವುದಾಗಿ ಬಜೆಟ್ ಅಂದಾಜಿತ್ತು. ಆದರೆ ಅದರ ಎರಡು ಪಟ್ಟು ಅಂದರೆ ೧,೦೪,೪೦೭ ಕೋಟಿ ಸಂದಾಯವಾಗಿದೆ. ಇದು ಬೇರೆ ಮೂಲಗಳಿಂದ ಆಗಬೇಕಾಗಿದ್ದ ಬಂಡವಾಳದ ಸಂಗ್ರಹದಲ್ಲಿ ಆದ ಕೊರತೆಯನ್ನು ಅದು ತುಂಬಿದೆ. ಉದಾಹರಣೆಗೆ ಸರ್ಕಾರದ ಸ್ವತ್ತನ್ನು ಮಾರುವ ಮೂಲಕ ೬೧,೦೦೦ ಕೋಟಿ ರೂಪಾಯಿ ಸಂಗ್ರಹಿಸಬಹುದು ಎಂದು ಬಜೆಟ್ಟಿನಲ್ಲಿ ಅಂದಾಜು ಮಾಡಲಾಗಿತ್ತು. ಆದರೆ ಸಂಗ್ರಹವಾಗಿದ್ದು ಕೇವಲ ೩೦,೦೦೦ ಕೋಟಿ.
ಒಟ್ಟಿನಲ್ಲಿ ಖರ್ಚಿನಲ್ಲಿ ಕಡಿತ, ಹರಿದು ಬಂದ ಹೆಚ್ಚಿನ ಡಿವಿಡೆಂಡ್ ಇತ್ಯಾದಿಗಳು ವಿತ್ತೀಯ ಕೊರತೆಯ ಇಳಿತದಲ್ಲಿ ಸಹಾಯ ಮಾಡಿರಬಹುದು.
ಈ ಬಜೆಟ್ಟಿನಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ತನ್ನು ಒದಗಿಸುವಂತಹ ಒಳ್ಳೆಯ ಚಿಂತನೆಗಳೂ ಇವೆ. ವಿವರಗಳನ್ನು ಗಮನಿಸಿದರೆ ಅವು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹದೆನ್ನುವುದು ತಿಳಿಯುತ್ತದೆ.
ಇದೊಂದು ಕೇವಲ ಮಧ್ಯಂತರ ಬಜೆಟ್ ಆದ್ದರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟ. ಆದರೆ ನಮ್ಮ ದೇಶದ ಮೂಲಭೂತ ಸವಾಲುಗಳ ಬಗ್ಗೆ ಸರ್ಕಾರ ಗಂಭೀರವಾಗಿದೆ ಅನ್ನುವ ಭಾವನೆಯಾದರೂ ಮೂಡಬೇಕು. ಸುಮ್ಮನೆ ಎಲ್ಲಾ ಚೆನ್ನಾಗಿದೆ ಅನ್ನುವ ಕನಸಿನಲ್ಲಿ ತೇಲುವುದು ಒಳ್ಳೆಯದಲ್ಲ.
ಅಷ್ಟೇ ಅಲ್ಲ ಅಂಕಿ ಅಂಶಗಳ ಸಂಗ್ರಹಣೆ ಮುಖ್ಯ. ಜನಗಣತಿಯಂತಹ ಪ್ರಮುಖ ಸಮೀಕ್ಷೆಗಳನ್ನು ವಿನಾಕಾರಣ ಮುಂದು ಹಾಕುತ್ತಾ ಹೋಗುವುದರಲ್ಲಿ ಅರ್ಥವಿಲ್ಲ.