ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್



ಈ ಬಾರಿ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ರಿಚರ್ಡ್ ಎಚ್ ಥೇಲರ್ ಅವರಿಗೆ ಸಂದಿದೆ. ಭಾರತೀಯರಿಗೆ ಥೇಲರ್ ಮತ್ತೂ ಒಂದು ಕಾರಣಕ್ಕೆ ಪರಿಚಿತರು. ನಿರ್ನೋಟಿಕರಣ ಜಾರಿಗೊಂಡಾಗ ಅವರು ಅದರಿಂದ ಭ್ರಷ್ಟಾಚಾರ ಕಮ್ಮಿಯಾಗುತ್ತದೆ ಅಂತ ಹೇಳಿದ್ದರು. ಈಗ ಆ ಕಾರಣಕ್ಕೆ ಕೆಲವರು ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ೨೦೦೦ ರೂಪಾಯಿ ನೋಟು ಜಾರಿಗೆ ತರುತ್ತಿದ್ದಾರೆ ಅಂತ ಗೊತ್ತಾದಾಗ ಥೇಲರ್ ಅವರೇ ಬಯ್ದಿದ್ದರು. ಅವರ ಉದ್ದೇಶ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು ಎಂಬುದು. ಹೋಗಲಿ ಬಿಡಿ ಮುಳುಗುತ್ತಿರುವವರಿಗೆ ಆಸರೆಗೆ ಒಂದು ಹುಳ್ಳುಕಡ್ಡಿ ಸಿಕ್ಕರೂ ಖುಷಿಯಾಗುತ್ತದೆ.


ಥೇಲರ್ ಅವರ ಮುಖ್ಯ ವಿಚಾರ ಅಂದರೆ ಸಾಂಪ್ರದಾಯಿಕ ಅರ್ಥಶಾಸ್ತ್ರ ಹೇಳುವಂತೆ ನಾವು ವಿವೇಚನಾಶೀಲರಲ್ಲ. ಜನ ಯಾವಾಗಲೂ ತರ್ಕಬದ್ಧವಾಗಿ ನಡೆದುಕೊಳ್ಳುವುದಿಲ್ಲ. ನಮ್ಮ ಮುಂದೆ ಎರಡು ಆಯ್ಕೆಗಳಿದ್ದರೆ ನಾವು ಹೆಚ್ಚಾಗಿ ತಪ್ಪು ಆಯ್ಕೆಯನ್ನೇ ಮಾಡಿಕೊಳ್ಳುತ್ತೇವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಹಸಿವಾದಾಗ ನಾವು ಬರ್ಗರ್ ಹಾಗು ಚಿಪ್ಸ್ ಕೊಳ್ಳುತ್ತೇವೆ. ಅವರ ನಡ್ಜ್ ಸಿದ್ದಾಂತ ಒಂದು ಸರಳವಾದ ಗ್ರಹಿಕೆಯ ಮೇಲೆ ನಿಂತಿದೆ. ಜನ ಸಾಮಾನ್ಯವಾಗಿ ಸುಲಭವಾದುದನ್ನು ಆರಿಸಿಕೊಳ್ಳುತ್ತಾರೆಯೇ ಹೊರತು, ಅದು ಒಳ್ಳೆಯದೋ, ಜಾಣತನದ್ದೋ ಆಗಬೇಕಾಗಿಲ್ಲ.


ಥೇಲರ್ ಅವರನ್ನು ವರ್ತನ-ಅರ್ಥಶಾಸ್ತ್ರದ (ಬಿಹೇವಿಯರಲ್ ಎಕನಾಮಿಕ್ಸ್) ಪಿತಾಮಹ ಎನ್ನಬಹುದು. ಅವರು ಮನುಷ್ಯನ ವರ್ತನೆಗೆ ಸಂಬಂಧಿಸಿದಂತೆ ಮನೋವಿಜ್ಞಾನದಲ್ಲಿ ಆಗಿರುವ ಅಧ್ಯಯನವನ್ನು ಅರ್ಥಶಾಸ್ತ್ರಕ್ಕೆ ಅನ್ವಯಿಸಿ ತಮ್ಮ ಸಿದ್ಧಾಂತವನ್ನು ಹೆಣೆದಿದ್ದಾರೆ. ಮನುಷ್ಯನ ವರ್ತನೆ ತುಂಬಾ ಸಂಕೀರ್ಣವಾದದ್ದು. ನಾವು ತರ್ಕಬದ್ಧವಾಗಿ ನಿರ್ಧಾರ ತೆಗೆದುಕೊಳ್ಳಲು ಬಯಸಿದರೂ ಕೂಡ ನಮ್ಮ ನಿರ್ಧಾರವನ್ನು ನಿರ್ಧರಿಸುವುದು ನಮ್ಮ ಗ್ರಹಣ ಶಕ್ತಿ, ನಮ್ಮ ಆತ್ಮಸ್ಥೈರ್ಯ. ನಮ್ಮ ನಿರ್ಧಾರಗಳು ಸಾಮಾನ್ಯವಾಗಿ ನಮ್ಮ ಸ್ವ ಹಿತಾಸಕ್ತಿಯಿಂದ ನಿರ್ಧಾರವಾಗುತ್ತದೆ. ನಮ್ಮ ಸಾಮಾಜಿಕ ಕಾಳಜಿಗಳ ಪಾತ್ರವೂ ಅದರಲ್ಲಿ ಇದೆ. ಜೊತೆಗೆ ಗ್ರಹಣ ಸಾಮರ್ಥ್ಯ, ಸ್ವ-ನಿಯಂತ್ರಣ ಹಾಗೂ ಪ್ರೇರಣೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.


ಕಳೆದ ನಾಲ್ಕು ದಶಕಗಳಿಂದ ಮಾಡಿರುವ ಇವರ ಅಧ್ಯಯನ, ವರ್ತನ-ಅರ್ಥಶಾಸ್ತ್ರಕ್ಕೆ ಒಂದು ಬುನಾದಿಯನ್ನು ಹಾಕಿಕೊಟ್ಟಿದೆ. ಅದಕ್ಕೆ ಪರಿಕಲ್ಪನಾತ್ಮಕ ಹಾಗೂ ಪ್ರಾಯೋಗಿಕವಾದ ಬುನಾದಿಯನ್ನು ಹಾಕಿಕೊಟ್ಟಿದೆ. ಮನಷ್ಯನ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಊಹಿಸುವುದಕ್ಕೆ ಇದರಿಂದ ಅನುಕೂಲವಾಗುತ್ತದೆ.
ವರ್ತನ ಅರ್ಥಶಾಸ್ತ್ರದಿಂದ ಹಲವರು ಪ್ರಭಾವಿತರಾಗಿದ್ದಾರೆ. ಪ್ರಧಾನಮಂತ್ರಿ ಡೇವಿಡ್ ಕ್ಯಾಮೆರನ್ ಅವರಲ್ಲಿ ಒಬ್ಬರು. ಅದರಿಂದ ಜನರ ವರ್ತನೆಗೆ ಸಂಬಂಧಿಸಿದಂತೆ ಒಳಅರಿವು ಇರುವಂತಹ ತಂಡವನ್ನು ರೂಪಿಸಲು ಸಾಧ್ಯ ಎಂದು ಅವರು ಕಂಡುಕೊಂಡಿದ್ದರು. ಅವರು ವರ್ತನ ಅರ್ಥಶಾಸ್ತ್ರವನ್ನು ಆಡಳಿತದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ’ನಡ್ ಯುನಿಟ್’ ಪ್ರಾರಂಭಿಸಿದ್ದರು. ಅದು ಅವರು ತುಂಬಾ ಅಚ್ಚುಮೆಚ್ಚಿನ ಯೋಜನೆಗಳಲ್ಲಿ ಒಂದಾಗಿತ್ತು. ಹಲವು ದೇಶಗಳು ಇದನ್ನು ಅಳವಡಿಸಿಕೊಂಡಿವೆ. ಭಾರತದ ನೀತಿ ಆಯೋಗ ಕೂಡ ಆ ಬಗ್ಗೆ ಯೋಚಿಸಿದೆ. ಜನರ ವರ್ತನೆಯನ್ನು ಒಂದು ದಿಕ್ಕಿನಲ್ಲಿ ರೂಪಿಸುವುದಕ್ಕೆ ಇದರಿಂದ ಅನುಕೂಲವಾಗುತ್ತದೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಇದನ್ನು ಹಲವರು ಬಳಸಿಕೊಂಡಿದ್ದಾರೆ. ಉದಾಹರಣೆಗೆ ರಾಜಸ್ತಾನದಲ್ಲಿ ರೋಗನಿರೋಧಕ ಲಸಿಕೆಗಳನ್ನು ಹೆಚ್ಚು ಜನರಿಗೆ ತಲುಪಿಸುವ ದೃಷ್ಟಿಯಿಂದ ಮಕ್ಕಳನ್ನು ಸ್ಥಳೀಯ ಆರೋಗ್ಯ ಕೆಂದ್ರಗಳಿಗೆ ಕರೆದುಕೊಂಡು ಬಂದವರಿಗೆ ಪುಕ್ಕಟೆಯಾಗಿ ಕಾಳು ಇತ್ಯಾದಿ ಕೊಟ್ಟಾಗ ಅದರ ದರ ಹೆಚ್ಚಾಯಿತು. ಕೆನ್ಯಾದಲ್ಲಿ ಹೆಚ್‌ಐವಿ ರೋಗಿಗಳು ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವಂತೆ ಮಾಡಲು ಪ್ರತಿವಾರ ಎಸ್‌ಎಂಎಸ್ ಕಳುಹಿಸಲಾಯಿತು. ಪಕ್ಕದ ಮನೆಯವರು ತೆರಿಗೆ ಕಟ್ಟಿದ್ದಾರೆ ಎಂಬ ಮಾಹಿತಿಕೊಟ್ಟು ತೆರಿಗೆ ವಸೂಲಾತಿಯನ್ನು ಹೆಚ್ಚಿಸಿಕೊಂಡ ದೇಶಗಳಿವೆ. ಮಾರುಕಟ್ಟೆಯ ಮಂದಿಯಂತೂ ಯಥೇಚ್ಛವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ.


ಥೇಲರ್ ಈ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಹೇಳುತ್ತಾರೆ. ಜನ ನಷ್ಟ ತಪ್ಪಿಸಿಕೊಳ್ಳುವುದರ ಕಡೆ ಹೆಚ್ಚು ಕಾತುರರಾಗಿರುತ್ತಾರೆಯೇ ಹೊರತು ಒಂದು ಯೋಜನೆ ತರುವ ಲಾಭದ ಬಗ್ಗೆಯಲ್ಲ. ಹಾಗಾಗಿ ಜನರ ವರ್ತನೆಯನ್ನು ಪ್ರಭಾವಿಸಲು ಒಂದು ಯೋಜನೆಯ ಅನುಕೂಲಗಳನ್ನು ತಿಳಿಸುವುದಕ್ಕಿಂತ ಅದರ ಅನಾನುಕೂಲಗಳನ್ನು ಮನವರಿಕೆ ಮಾಡಿಕೊಡಬೇಕು. ಬಯಲಿನಲ್ಲಿ ಕಕ್ಕಸ್ಸಿಗೆ ಹೋಗದಂತೆ ಜನರ ಮನಸ್ಸನ್ನು ಒಲಿಸಲು, ಶೌಚಾಲಯದ ಅನುಕೂಲವನ್ನು ವಿವರಿಸುವುದಕ್ಕಿಂತ ಬಯಲಿನಲ್ಲಿ ಕಕ್ಕಸ್ಸಿಗೆ ಹೋಗುವುದರಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಡುವುದು ಒಳ್ಳೆಯದು. ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವರು ಥೇಲರ್ ಸಲಹೆಗಳನ್ನು ಬಳಸಿಕೊಂಡಿದ್ದಾರೆ. ಥೇಲರ್ ಅವರ ಪುಸ್ತಕ “ನಡ್ಜ್:ಇಂಪ್ರೂವಿಂಗ್ ಡಿಸಿಷನ್ಸ್ ಎಬೌಟ್ ಹೆಲ್ತ್, ವೆಲ್ತ್, ಅಂಡ್ ಹ್ಯಾಪಿನೆಸ್” ಈ ಕಾರಣಕ್ಕೆ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು.


ಇವರ ಇನ್ನೊಂದು ಪ್ರಮುಖ ಸಿದ್ಧಾಂತ, ಮನುಷ್ಯನ “ಮನಸ್ಸಿನ ಲೆಕ್ಕಾಚಾರ”ದ ಪ್ರಕ್ರಿಯೆಗೆ ಸಂಬಂಧಿಸಿದ್ದು. ಬಳಕೆದಾರ ತನ್ನ ವೈಯಕ್ತಿಕ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ಲೆಕ್ಕಾಹಾಕಿಕೊಂಡು ಇಡೀ ಪ್ರಕ್ರಿಯೆಯನ್ನು ಸರಳ ಮಾಡಿಕೊಳ್ಳುತ್ತಾನೆ. ಅವನು ತನ್ನ ಒಟ್ಟಾರೆ ಹಣಕಾಸು ಸ್ಥಿತಿಯ ಮೇಲೆ ಆಗುವ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳದೆ ತಕ್ಷಣದ ಫಲಿತಾಂಶದ ಬಗ್ಗೆಯಷ್ಟೇ ಯೋಚಿಸುತ್ತಾನೆ. ಹೀಗೆ ಥೇಲರ್ ಸಿದ್ಧಾಂತ ಹಲವು ಮಗ್ಗಲಲ್ಲಿ ಯೋಚಿಸುತ್ತದೆ. ಇದಕ್ಕೆ ಎಡ ಬಲ ಎರಡೂ ಕಡೆಯಿಂದ ಟೀಕೆಗಳಿವೆ. ಆದರೂ ಮನುಷ್ಯನ ವರ್ತನೆಯನ್ನು ಅರ್ಥಶಾಸ್ತ್ರದ ಕೇಂದ್ರವಾಗಿ ಮಾಡಿದ್ದು ಇವರ ಸಾಧನೆಯೇ. ಅದಕ್ಕೆ ನೋಬೆಲ್ ಬಹುಮಾನ ಬಂದ ತಕ್ಷಣ ಅವರು ತಮ್ಮ ಪ್ರಮುಖ ಸಾಧನೆಯನ್ನು ಕುರಿತಂತೆ “ಆರ್ಥಿಕ ಚಟುವಟಿಕೆಯ ಕರ್ತೃಗಳು ಮನುಷ್ಯರು ಎಂಬುದನ್ನು ಗುರುತಿಸಿದ್ದೇನೆ. ಅದನ್ನು ಆರ್ಥಿಕ ಮಾದರಿಗಳು ಅಳವಡಿಸಿಕೊಳ್ಳಬೇಕು.” ಎಂದು ಹೇಳಿದ್ದು. ನೋಬಲ್ ಕಮಿಟಿ ಇವರ ಸಿದ್ದಾಂತವನ್ನು ಕ್ರೋಢೀಕರಿಸುತ್ತಾ ಥೇಲರ್ “ಅರ್ಥಶಾಸ್ತ್ರ ಹಾಗೂ ವ್ಯಕ್ತಿಯ ತೀರ್ಮಾನಗಳ ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಬೆಸೆದಿದ್ದಾರೆ” ಎಂದು ಹೇಳಿದೆ.


ವರ್ತನ ಅರ್ಥಶಾಸ್ತ್ರ ನಮ್ಮನ್ನು ಬಹುಕಾಲ ಚಿಂತನೆಗೆ ಹಚ್ಚುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ.