ಯಾನಿಸ್ ವರಾಫಕಿಸ್ ಗ್ರೀಸಿನ ವಿತ್ತಮಂತ್ರಿಗಳಾಗಿದ್ದವರು. ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು. ಅಥೆನ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು. ಹಲವು ಪುಸ್ತಕಗಳ ಕರ್ತೃ. ಸಾಮಾಜಿಕ ಮಾಧ್ಯಮಗಳಲ್ಲೂ ತುಂಬಾ ಸಕ್ರಿಯರು.
ಟ್ರಂಪ್ ನೀತಿಯನ್ನು ಕುರಿತ ಯಾನಿಸ್ ಅಭಿಪ್ರಾಯಗಳು ಸಾಕಷ್ಟು ಆಸಕ್ತಿಯನ್ನು ಕೆರಳಿಸಿವೆ. ಟ್ರಂಪ್ ಬಫೂನ್ ಅಲ್ಲ. ಅವನ ಕೆಲ ಮಾತುಗಳು, ನಡೆಗಳಿಂದಾಗಿ ಹಾಗೆ ತೋರುತ್ತಾನೆ ಅಷ್ಟೆ. ಯಾನಿಸ್ ದೃಷ್ಟಿಯಲ್ಲಿ ಟ್ರಂಪ್‌ಗೆ ಸ್ಪಷ್ಟ ಯೋಜನೆಗಳಿವೆ. ಅಮೇರಿಕೆಯ ಅರ್ಥಿಕತೆ ಬಿಕ್ಕಟ್ಟಿನಲ್ಲಿದೆ. ಡಾಲರ್ ಗಳಿಸಿರುವ ಪ್ರಾಬಲ್ಯದಲ್ಲೇ ಅದರ ಸಮಸ್ಯೆಯೂ ಮೂಲವೂ ಇದೆ. ಜಾಗತಿಕ ಆರ್ಥಿಕತೆಯಲ್ಲಿ ಡಾಲರ್ ರಾಜ. ಅದು ಜಗತ್ತಿನ ಆರ್ಥಿಕತೆಯ ಮೇಲೆ ಅಧಿಪತ್ಯ ಸಾಧಿಸಿದೆ. ನೀವು ಬೇರೆ ದೇಶದಿಂದ ಏನಾದರೂ ಕೊಳ್ಳಬೇಕಾದರೆ ನಿಮಗೆ ಡಾಲರ್ ಬೇಕು. ಸೌದಿ ಅರೇಬಿಯದವರಿಗೆ ಜರ್ಮನಿಯಿಂದ ಏನಾದರೂ ಕೊಳ್ಳಬೇಕೆಂದರೆ ಡಾಲರ್ ಬೇಕು. ಜರ್ಮನಿಯವರಿಗೆ ತಮ್ಮ ಕಾರಿಗೆ ಪೆಟ್ರೋಲ್ ಕೊಳ್ಳುವುದಕ್ಕೆ ಡಾಲರ್ ಬೇಕು. ಡಾಲರಿಗೆ ಇರುವ ಈ ಸೌಲಭ್ಯವೇ ಅದಕ್ಕೆ ತೊಂದರೆಯೂ ಹೌದು. ಅದಕ್ಕಿರುವ ಅಪಾರ ಬೇಡಿಕೆಯಿಂದ ಅದರ ಮೌಲ್ಯ ಹೆಚ್ಚಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೇರಿಕೆಯ ಸರಕುಗಳು ದುಬಾರಿಯಾಗಿವೆ. ಬೆಲೆ ಹೆಚ್ಚಾದರೆ ಜನ ಕೊಳ್ಳುವುದಿಲ್ಲ. ರಫ್ತು ಕಷ್ಟವಾಗುತ್ತದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಡಾಲರ್ ಮೌಲ್ಯ ತಗ್ಗಬೇಕು. ಆದರೆ ಡಾಲರ್ ಅಧಿಪತ್ಯಕ್ಕೆ ದಕ್ಕೆಯಾಗಬಾರದು. ಜಾಗತಿಕ ಪಾವತಿಯೆಲ್ಲಾ ಡಾಲರ್ ಮೂಲಕವೇ ನಡೆಯಬೇಕು. ಟ್ರಂಪ್‌ಗೆ ಕೇಕೂ ಉಳಿಯಬೇಕು. ಅದನ್ನು ತಿನ್ನಲೂ ಬೇಕು. ಡಾಲರ್ ಮೌಲ್ಯವೂ ಇಳಿಯಬೇಕು. ಆದರೆ ಜಗತ್ತು ಮಾತ್ರ ಯುರೊ ಅಥವಾ ಯೆನ್ ಅಥವಾ ಇನ್ಯಾವುದೋ ದೇಶದ ಕರೆನ್ಸಿಯನ್ನು ಕೊಳ್ಳಬಾರದು. ಇದು ಟ್ರಂಪ್ ಲೆಕ್ಕಾಚಾರ.
೧೯೬೦ರವರೆಗೆ ಅಮೇರಿಕೆಯ ರಫ್ತೇ ಆಮದಿಗಿಂತ ಹೆಚ್ಚಿರುತ್ತಿತ್ತು. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಮೇರಿಕೆಯ ಅಧಿಪತ್ಯದ ಬಗ್ಗೆ ಅನುಮಾನವೇ ಇರಲಿಲ್ಲ. ಈ ಅಧಿಪತ್ಯವನ್ನು ಅಮೇರಿಕೆ ಕಾಪಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಅಮೇರಿಕೆ ಐರೋಪ್ಯ ದೇಶಗಳಿಗೆ ಡಾಲರನ್ನು ನೆರವು ಅಥವಾ ಸಾಲದ ರೂಪದಲ್ಲಿ ವರ್ಗಾಯಿಸುತ್ತಿತ್ತು. ಅದನ್ನು ಬಳಸಿ ಯುರೋಪಿಯನ್ನರು ಹಾಗೂ ಜಪಾನಿಯರು ಅಮೇರಿಕೆಯ ಸರಕನ್ನು ಕೊಳ್ಳುತ್ತಿದ್ದರು. ಅಮೇರಿಕೆಯ ಸರಕುಗಳಿಗೆ ಬೇಡಿಕೆ ನಿರಂತರವಾಗಿ ಮುಂದುವರಿದಿತ್ತು. ೧೯೬೦ರ ನಂತರ ಪರಿಸ್ಥಿತಿ ಬದಲಾಯಿತು. ರಫ್ತು ಕುಸಿಯಿತು. ಅಮೇರಿಕೆಯ ವ್ಯಾಪಾರದಲ್ಲಿ ಕೊರತೆ ಕಾಣಿಸಿಕೊಂಡಿತು. ಆಶ್ಚರ್ಯ ಅಂದರೆ ಇದರಿಂದ ಅಮೇರಿಕೆಯ ಆರ್ಥಿಕತೆಗೆ ಸಮಸ್ಯೆಯಾಗಲಿಲ್ಲ. ಅದು ಬೆಳೆಯುತ್ತಲೇ ಹೋಯಿತು. ಕೊರತೆಯಲ್ಲೂ ಅಭಿವೃದ್ಧಿ ಸಾಧಿಸುವುದಕ್ಕೆ ಅಮೇರಿಕೆಗೆ ಮಾತ್ರ ಸಾಧ್ಯವಾಗಿರುವುದು. ಸಾಮಾನ್ಯವಾಗಿ ವ್ಯಾಪಾರದಲ್ಲಿ ಕೊರತೆ ಕಾಣಿಸಿಕೊಂಡಾಗ ರಾಷ್ಟ್ರಗಳು ಆರ್ಥಿಕವಾಗಿ ಸೊರಗುತ್ತವೆ. ಬ್ರಿಟಿಷ್ ಸಾಮ್ರಾಜ್ಯ, ಡಚ್ ಸಾಮ್ರಾಜ್ಯ, ಇವೆಲ್ಲ ಕೊರತೆ ಬಂದ ಕೂಡಲೆ ಪತನಗೊಂಡಿದ್ದನ್ನು ಚರಿತ್ರೆಯಲ್ಲಿ ನೋಡಿದ್ದೇವೆ.
ಅಮೇರಿಕೆಯ ಅಧ್ಯಕ್ಷನಾಗಿದ್ದಾಗ ನಿಕ್ಸನ್ ವ್ಯಾಪಾರದ ಕೊರತೆಯಿಂದ ಸಹಜವಾಗಿಯೇ ಆತಂಕಗೊಂಡ. ಹೆನ್ರಿ ಕಿಸಿಂಜರ್ ರಾಷ್ಟ್ರೀಯ ರಕ್ಷಣಾ ಸಮಿತಿಯ ಮುಖ್ಯಸ್ಥನಾಗಿದ್ದ. ನಿಕ್ಸನ್ ಅವನ ಸಲಹೆ ಕೇಳಿದ. ವ್ಯಾಪಾರದಲ್ಲಿ ಕೊರತೆ ಕಾಣಿಸಿಕೊಂಡ ಕೂಡಲೇ ಖರ್ಚು ಕಡಿತ ಮಾಡಬೇಕು, ಆಮದು ಕಡಿಮೆ ಮಾಡಬೇಕು, ಬಡ್ಡಿ ದರ ಕಡಿಮೆ ಮಾಡಿ ಇತ್ಯಾದಿ ಸಲಹೆಗಳು ಸಾಮಾನ್ಯವಾಗಿ ಬರುತ್ತವೆ. ಆದರೆ ರಾಷ್ಟ್ರೀಯ ರಕ್ಷಣಾ ಸಮಿತಿ ನೀಡಿದ್ದ ಸಲಹೆ ಬೇರೆಯೇ ಆಗಿತ್ತು. ಕೊರತೆಯನ್ನು ಮೂರು ಪಟ್ಟು ಹೆಚ್ಚಿಸಬೇಕು. ಮತ್ತು ಇದನ್ನು ಬೇರೆ ದೇಶದ ಬಂಡವಾಳಿಗರು ತುಂಬಿಕೊಡುವಂತೆ ಮಾಡಬೇಕು ಅಂತ ಸಲಹೆ ಬಂದಿತಂತೆ. ಇದನ್ನೆ ನಿಕ್ಸನ್ ಮಾಡಿದ್ದು. ಅಮೇರಿಕೆಗೆ ಬೇಕಾದ ವಸ್ತುಗಳು ಕ್ರಮೇಣ ಬೇರೆ ದೇಶಗಳಲ್ಲಿ ಉತ್ಪಾದನೆಯಾಗತೊಡಗಿತು. ಅಲ್ಲಿಂದ ತಮಗೆ ಬೇಕಾದ್ದನ್ನು ಆಮದು ಮಾಡಿಕೊಳ್ಳುವುದು ಅಮೇರಿಕೆಗೆ ಅಗ್ಗವಾಗಿತ್ತು. ಇದರಿಂದ ಅಮೇರಿಕೆಯ ವ್ಯಾಪಾರದ ಕೊರತೆಯೇನೋ ಹೆಚ್ಚಿತು. ಆದರೆ ಬೇರೆ ದೇಶದ ಬಂಡವಾಳಿಗರು ತಾವು ಗಳಿಸಿದ ಡಾಲರನ್ನು ಅಮೇರಿಕೆಯಲ್ಲಿ ಚಿರಾಸ್ತಿಯನ್ನೋ, ಬಾಂಡಗಳನ್ನೋ ಇನ್ನೇನನ್ನೋ ಕೊಳ್ಳಲು ಬಳಸುತ್ತಿದ್ದರು. ಹಾಗಾಗಿ ಡಾಲರ್ ಅಮೇರಿಕಾಕ್ಕೆ ಮರಳಿ ಬರುತ್ತಿತ್ತು.
ನಿಕ್ಸನ್ ನಂತರ ಕಾರ್ಟರ್ ಹಾಗೂ ರೀಗನ್ ಎಲ್ಲರೂ ಇದೇ ನೀತಿಯನ್ನು ಅನುಸರಿಸಿ ಕೊರತೆಯನ್ನು ನಿಭಾಯಿಸಿಕೊಳ್ಳುತ್ತಾ ಬಂದರು. ಬೇರೆ ದೇಶದ ಬಂಡವಾಳಿಗರು ಅಮೇರಿಕೆಯ ಕೊರತೆಯನ್ನು ತುಂಬುವಂತೆ ಮಾಡಲು ಸಫಲವಾಗಿದ್ದರು. ಡಾಲರ್ ಜಗತ್ತೇನೋ ಅಬಾಧಿತವಾಗಿ ಬೆಳೆಯುತ್ತಲೇ ಇತ್ತು. ಆದರೆ ಅಮೇರಿಕೆಯ ಉತ್ಪಾದನಾ ಕ್ಷೇತ್ರ ಮಾತ್ರ ಸೊರಗುತ್ತಾ ಬರುತ್ತಿದೆ. ಪುಟ್ಟ ಉತ್ಪಾದನಾ ಆರ್ಥಿಕತೆ ಬೃಹತ್ತಾದ ಡಾಲರ್ ಆರ್ಥಿಕತೆಯ ಭಾರವನ್ನು ಹೊರುತ್ತಿತ್ತು. ಇದು ತುಂಬಾ ದಿನ ನಡೆಯುವುದಿಲ್ಲ. ಅಮೇರಿಕೆ ಸಮತೋಲನವನ್ನು ಕಂಡುಕೊಳ್ಳಬೇಕಾಗಿದೆ. ಡಾಲರ್ ಜಗತ್ತಿನ ಗಾತ್ರವನ್ನು ಕುಗ್ಗಿಸಬೇಕು. ಉತ್ಪಾದನಾ ಕ್ಷೇತ್ರವನ್ನು ಹಿಗ್ಗಿಸಬೇಕು. ಡಾಲರ್ ಮೌಲ್ಯ ೩೦% ಇಳಿದರೆ ಸ್ವಲ್ಪ ಮಟ್ಟಿನ ಸಮತೋಲನ ಸಾಧ್ಯವಾಗಬಹುದು ಅನ್ನುವ ಲೆಕ್ಕಾಚಾರ ಸುತ್ತಾಡುತ್ತಿತ್ತು. ಜೊತೆಗೆ ಡಾಲರ್ ಅಧಿಪತ್ಯಕ್ಕೆ ಪೆಟ್ಟು ಬೀಳಬಹುದೆನ್ನುವ ಆತಂಕವೂ ಇತ್ತು. ಜಪಾನ್ ಹಾಗೂ ಚೀನಾ ದೇಶಗಳ ಬಳಿ ಡಾಲರ್ ಹೇರಳವಾಗಿದೆ. ಅದನ್ನು ಅವರು ಮಾರಿದರೆ ಡಾಲರ್ ಮೌಲ್ಯ ಇಳಿಯುತ್ತದೆ. ಆದರೆ ಅವರು ಜಪಾನಿನ ಯೆನ್, ಚೀನಾದ ಕರೆನ್ಸಿಯನ್ನಾಗಲಿ ಕೊಳ್ಳಬಾರದು. ಬೇರೆ ದೇಶಗಳಿಂದ ರಿಯಾಯಿತಿಯನ್ನು ಪಡೆದುಕೊಳ್ಳುವುದಕ್ಕೆ ಟ್ರಂಪ್ ಸುಂಕವನ್ನು ಆಯುಧವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಉದಾಹರಣೆಗೆ ಜಪಾನಿಗೆ ಅದರ ಬಳಿ ಇರುವ ೧.೨ ಟ್ರಿಲಿಯನ್ ಡಾಲರ್‌ಗಳನ್ನು ಮಾರಿ, ಅಮೇರಿಕೆಯ ಬಾಂಡುಗಳನ್ನೋ, ಕ್ರಿಪ್ಟೊ ಕರೆನ್ಸಿಯನ್ನೋ ಕೊಳ್ಳುವುದಕ್ಕೆ ಒತ್ತಾಯಿಸಬಹುದು. ಆಗ ಡಾಲರ್ ವ್ಯವಸ್ಥೆಗೂ ತೊಂದರೆಯಾಗುವುದಿಲ್ಲ. ಡಾಲರ್ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವುದರಿಂದ ಅದರ ಮೌಲ್ಯ ಕುಸಿಯುತ್ತದೆ. ಅಮೇರಿಕೆಯ ಸರಕು ಅಗ್ಗವಾಗುವುದರಿಂದ ರಫ್ತಿನ ಪ್ರಮಾಣವೂ ಹೆಚ್ಚುತ್ತದೆ.
ಟ್ರಂಪ್ ಚೀನಾದ ಮೇಲೆ ವಿಶೇಷವಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾನೆ. ತನ್ನ ಮೊದಲ ಅಧ್ಯಕ್ಷತೆಯ ಅವಧಿಯಲ್ಲೇ ಇದನ್ನು ಪ್ರಾರಂಭಿಸಿದ್ದ. ಚೀನಾ ಮೇಲಿನ ಸಿಟ್ಟಿಗೆ ಹಲವು ಕಾರಣಗಳನ್ನು ನೀಡಲಾಗಿದೆ. ಅದು ತೈವಾನನ್ನು ಆಕ್ರಮಿಸಿಕೊಳ್ಳ ಹೊರಟಿದೆ. ಜಗತ್ತಿನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಇತ್ಯಾದಿ. ಯಾನಿಸ್ ಹೇಳುವಂತೆ ಇವೆಲ್ಲಾ ಕಾರಣವಲ್ಲ. ತೈವಾನ್ ತನಗೆ ಸೇರಿದ್ದೆಂದು ಚೀನಾ ಲಾಗಾಯ್ತಿನಿಂದ ಹೇಳಿಕೊಂಡು ಬರುತ್ತಿದೆ. ಅದರಲ್ಲಿ ಹೊಸದೇನೂ ಇಲ್ಲ. ಅದು ಗೊತ್ತಿದ್ದೂ ನಿಕ್ಸನ್ ಚೀನಾಕ್ಕೆ ೧೯೭೧ರಲ್ಲಿ ಭೇಟಿ ನೀಡಿದ್ದ. ಕ್ಲಿಂಟನ್ ಚೀನಾವನ್ನು ಜಾಗತಿಕ ವ್ಯಾಪಾರ ಸಂಘಟನೆಯೊಳಕ್ಕೆ ಸೇರಿಸಿಕೊಂಡಿದ್ದ. ಬೇಹಗಾರಿಕೆಯಲ್ಲಿ ಚೀನಾಕ್ಕೆ ಅಮೇರಿಕೆಯನ್ನು ಮೀರಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇವೆಲ್ಲಾ ಕಾರಣಗಳಲ್ಲ.
ಚೀನಾ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಸಾಧಿಸಿದೆ. ಅಮೇರಿಕೆಯ ಪ್ರತಿಯೊಂದು ಡಿಜಿಟಲ್ ತಂತ್ರಜ್ಞಾನಕ್ಕೂ ಚೀನಾ ಪರ್ಯಾಯ ಕಂಡುಕೊಂಡಿದೆ. ಗೂಗಲ್ಲಿಗೆ ಅಲ್ಲಿ ಪರ್ಯಾಯ ಇದೆ. ಜಾಗತಿಕ ಹಣದ ಪಾವತಿಗೆ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಜೊತೆಗೆ ಚೀನಾದಲ್ಲಿ ದೊಡ್ಡ ತಂತ್ರಜ್ಞಾನ ಹಾಗೂ ಬ್ಯಾಂಕ್ ನಡುವೆ ಮೈತ್ರಿ ಸಾಧ್ಯವಾಗಿದೆ. ಅದು ಅಮೇರಿಕೆಯಲ್ಲಿ ಸಾಧ್ಯವಾಗಿಲ್ಲ. ವಾಲ್‌ಸ್ಟ್ರೀಟ್ ಹಾಗೂ ದೊಡ್ಡ ತಂತ್ರಜ್ಞಾನದ ನಡುವೆ ಒಡಂಬಡಿಕೆ ಅಲ್ಲಿ ಸಾಧ್ಯವಾಗಿಲ್ಲ. ಇಂದು ಯುರೋಪಿನಲ್ಲಿ ಗೂಗಲ್ ಆಗಲಿ ಇನ್ನೊಂದಾಗಲಿ ಇಲ್ಲ. ಯುರೋಪ್ ಅಮೇರಿಕೆಯನ್ನು ಅವಲಂಬಿಸಿದೆ. ಚೀನಾ ಅಮೇರಿಕಾಕ್ಕೆ ನಿಜವಾದ ಸ್ಪರ್ಧಿ. ಅದನ್ನು ಮುಗಿಸದಿದ್ದರೆ ಅದು ಅಮೇರಿಕೆ ನಡೆದ ಹಾದಿಯಲ್ಲೇ ನಡೆದು ತನ್ನನ್ನು ಮೀರಿ ಬೆಳೆಯುತ್ತದೆ ಅನ್ನುವ ಆತಂಕ ಅಮೆರಿಕೆಗೆ. ಇದು ಚೀನಾದ ಮೇಲೆ ಅಮೇರಿಕ ಸಾರಿರುವ ಹೊಸ ಶೀತಲ ಸಮರಕ್ಕೆ ಕಾರಣ. ಚೀನಾದ ಮೇಲಿನ ಸಿಟ್ಟಿಗೆ ಸಂಬಂಧಿಸಿದಂತೆ ಅಮೇರಿಕೆಯ ರಾಜಕೀಯ ಪಕ್ಷಗಳಲ್ಲಿ ಒಮ್ಮತವಿದೆ. ಎರಡೂ ಪಕ್ಷಗಳೂ ನಿಲುವೂ ಒಂದೆ. ಅಥವಾ ಯಾನಿಸ್ ಹೇಳುವಂತೆ ಅಮೇರಿಕೆಯಲ್ಲಿ ವಾಸ್ತವದಲ್ಲಿ ಇರುವುದು ಒಂದೇ ಪಕ್ಷ. ಅಲ್ಲಿರುವುದು ಪ್ರಜಾಪ್ರಭುತ್ವವೂ ಅಲ್ಲ. ಅಲ್ಲಿರುವುದು ಕೆಲವು ಆಲಿಗಾರ್ಕಿಗಳ ಆಡಳಿತ. ಚುನಾವಣೆ ನಡೆಯುತ್ತದೆ ಅಷ್ಟೆ. ಚೀನಾ ವಿರುದ್ಧ ಶೀತಲ ಸಮರ ಒಬಾಮ ಕಾಲದಲ್ಲೇ ಪ್ರಾರಂಭವಾಗಿತ್ತು. ಟ್ರಂಪ್ ತನ್ನ ಮೊದಲ ಅವಧಿಯಲ್ಲಿ ಇನ್ನಷ್ಟು ಬೆಳೆಸಿದ. ಬೈಡನ್ ತೀವ್ರಗೊಳಿಸಿದ. ಈಗ ಟ್ರಂಪ್ ಇದನ್ನು ಇನ್ನಷ್ಟು ಅತಿಗೆ ತೆಗೆದುಕೊಂಡು ಹೋಗುತ್ತಿದ್ದಾನೆ.
ಇನ್ನು ಟ್ರಂಪ್ ನೀತಿ ಯಶಸ್ವಿಯಾಗಬಹುದೆ? ಒಂದಿಷ್ಟು ಬಂಡವಾಳ ಅಮೇರಿಕಾಕ್ಕೆ ಹರಿದು ಬರಬಹುದು. ಕೆಲವು ಫ್ಯಾಕ್ಟರಿಗಳು ಪ್ರಾರಂಭವಾಗಬಹುದು. ಆದರೆ ಉದ್ಯೋಗಗಳು ಅದರಲ್ಲೂ ಒಳ್ಳೆಯ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುವ ಸಾಧ್ಯತೆ ಕಡಿಮೆ. ಉದಾಹರಣೆಗೆ ಅಪಲ್ ಅಮೇರಿಕೆಯಲ್ಲಿ ಉದ್ದಿಮೆಯನ್ನು ಪ್ರಾರಂಭಿಸಿದಾಗ ಅದು ಫ್ಯಾಕ್ಟರಿಗಳನ್ನು ನಿರ್ಮಿಸಿತ್ತು, ಉತ್ಪಾದನೆಯನ್ನು ಪ್ರಾರಂಭಿಸಿತ್ತು. ಆದರೆ ಯಾಂತ್ರೀಕರಣದಿಂದಾಗಿ ಅದು ಸೃಷ್ಟಿಸಿದ ಉದ್ಯೋಗ ತುಂಬಾ ಕಡಿಮೆ. ಜರ್ಮನಿಯಲ್ಲೋ, ಜಪಾನಿನಲ್ಲೋ ತಯಾರಾಗುತ್ತಿದ್ದ ಕೆಲ ವಸ್ತುಗಳು ಅಮೇರಿಕೆಯಲ್ಲೇ ತಯಾರಾಗಲು ಆರಂಭವಾಗಬಹುದು. ಸ್ಥಳೀಯ ಉದ್ದಿಮೆದಾರರಿಗೆ ಲಾಭವೂ ಆಗಬಹುದು. ಆದರೆ ಅದರ ಪಾಲು ಕಾರ್ಮಿಕರಿಗೆ ಹಸ್ತಾಂತರವಾಗುವುದಿಲ್ಲ. ಈಗಲೂ ಅಮೇರಿಕೆಯ ಕಾರ್ಮಿಕರ ನೈಜ ಕೂಲಿ ೧೯೭೩ತಲ್ಲಿ ಇದ್ದುದಕ್ಕಿಂತಲೂ ಕಡಿಮೆಯೇ ಇದೆ.
ಇನ್ನೂ ಒಂದು ಸಮಸ್ಯೆ ಇದೆ. ಅಕಸ್ಮಾತ್ ಟ್ರಂಪ್ ಯೋಜನೆಗಳು ಯಶಸ್ವಿಯಾದರೆ ಅಂದರೆ ಅಮೇರಿಕೆಯಲ್ಲೇ ಸಾಕಷ್ಟು ಉತ್ಪಾದನೆ ಪ್ರಾರಂಭವಾದರೆ ಅಮೇರಿಕೆಯಲ್ಲಿ ವ್ಯಾಪಾರದ ಕೊರತೆ ಕಡಿಮೆಯಾಗುತ್ತದೆ. ಅಮೇರಿಕೆ ವ್ಯಾಪಾರದ ಕೊರತೆಯನ್ನು ಎದುರಿಸುತ್ತಿರುವುದರಿಂದಲೇ ಯುರೋಪಿನಲ್ಲಿ, ಜಪಾನಿನಲ್ಲಿ, ಚೀನಾದಲ್ಲಿ ಎಲ್ಲಾ ಕಡೆಗಳಲ್ಲೂ ಕೈಗಾರಿಕೆಗಳು ನಡೆಯುತ್ತಿರುವುದು. ಅವನ್ನು ಅಮೇರಿಕೆಗೆ ಮಾರಿಕೊಂಡೇ ಅಲ್ಲಿಯ ಬಂಡವಾಳಿಗರು ಡಾಲರ್ ಸೇರಿಸಿಕೊಳ್ಳುತ್ತಿರುವುದು. ಅದರಿಂದಲೇ ಅವರ ಅಮೇರಿಕೆಯಲ್ಲಿ ಚಿರಾಸ್ತಿ, ಬಾಂಡುಗಳು ಇತ್ಯಾದಿ ಸ್ವತ್ತುಗಳನ್ನು ಕೊಳ್ಳುತ್ತಿರುವುದು. ಅಮೇರಿಕೆಯ ಹಣಕಾಸು ಮಾರುಕಟ್ಟೆ ಜಿಗಿಜಿಗಿಸುತ್ತಿರುವುದು. ಈಗ ಅಮೇರಿಕೆಯಲ್ಲಿ ಉತ್ಪಾದನೆ ಪ್ರಾರಂಭವಾದರೆ ಈ ವಿದೇಶಿ ಬಂಡವಾಳಿಗರ ಡಾಲರ್ ಥೈಲಿ ಕರಗುತ್ತದೆ. ಇಲ್ಲಿಯ ಬಾಂಡುಗಳನ್ನು ಕೊಳ್ಳುವುದಕ್ಕೆ ಡಾಲರ್ ಇರುವುದಿಲ್ಲ. ಅಮೇರಿಕೆಯ ಹಣಕಾಸು ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಬಹುಶಃ ಟ್ರಂಪ್ ಭರವಸೆ ನೀಡಿರುವ ತೆರಿಗೆ ಕಡಿತಕ್ಕೆ ಬೇಕಾದ ಹಣ ಹುಟ್ಟುವುದೂ ಕಷ್ಟ.
ಒಟ್ಟಾರೆಯಾಗಿ ಅಮೇರಿಕೆಯ ಅಥವಾ ಬಂಡವಾಳಶಾಹಿ ಆರ್ಥಿಕತೆ ಎದುರಿಸುತ್ತಿರುವ ಬಿಕ್ಕಟ್ಟಿಗೆ ಇವ್ಯಾವುವು ಪರಿಹಾರವಲ್ಲ.