ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡುತ್ತಾ, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದವರು ಈಜಿಪ್ಟಿನ ಮಹಾನ್ ಗಾಯಕಿ ಉಮ್ ಕುಲ್ಸುಂ. ಉಮ್ ಕುಲ್ಸುಂ ತೀರಿಹೋದ ೩೦ ವರ್ಷಗಳ ಬಳಿಕವೂ ಅರಬ್ ಸಂಗೀತ ಏನೆಂದು ತಿಳಿದುಕೊಳ್ಳ ಬೇಕಾದರೆ ನೀವು ಉಮ್ ಕುಲ್ಸುಂ ಅವರ ಗಾಯನ ಕೇಳಬೇಕು ಎನ್ನುತ್ತಾರೆ ಅರಬ್ ಲೋಕದ ಹೊಸಪೀಳಿಗೆಯ ಕಲಾವಿದರು. ಉಮ್ ನನ್ನ ಬಹು ಮೆಚ್ಚಿನ ಗಾಯಕಿ. ಎನ್ನುತ್ತಾರೆ ಸಂಗೀತ ಮತ್ತು ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಬಾಬ್ ಡಿಲನ್. ನಾನು ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಉಮ್ ಕುಲ್ಸುಂನಂತಹ ಕಂಠ ದೊಂದಿಗೆ ಹುಟ್ಟಲು ಬಯಸುತ್ತೇನೆ ಎನ್ನುತ್ತಾರೆ ನಮ್ಮ ಲತಾ ಮಂಗೇಶ್ಕರ್. ಹೀಗೆ ನಿಜವಾದ ಅರ್ಥದಲ್ಲಿ ಗ್ಲೋಬಲ್ ಅಗಿರುವ ಉಮ್ ಕುಲ್ಸುಂ ಅವರನ್ನು ನಮಗೆ ಪರಿಚಯಿಸಿದ್ದು ಪಂಡಿತ್ ರಾಜೀವ್ ತಾರಾನಾಥರು. ಭಾಷಣದಲ್ಲಿ. ೨೦೧೯ರಲ್ಲಿ ನಾವು ಈಜಿಪ್ಟಿಗೆ ಹೋಗಿದ್ದಾಗ. ಸ್ಪಿಂಕ್ಸ್ ವಿಗ್ರಹದಷ್ಟೇ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಉಮ್ ಕುಲ್ಸುಂ ಅವರ ಮೂರ್ತಿ ಮತ್ತು ವರ್ಣಚಿತ್ರಗಳು ನಮ್ಮಲ್ಲಿ ಬೆರಗು ಮೂಡಿಸಿತ್ತು.
ನಾವು ಅವಳನ್ನು ಲೇಡಿ ಎಂದು ಕರೆಯುತ್ತೇವೆ. ಅವಳು ಬೃಹತ್ತಾದವಳು. ಪಿರಿಮಿಡ್ಡಿನಂತೆ. ಇಂದಿಗೂ ಕೂಡ ಅವಳ ಕೊರಳು ಕೈರೋದ ರಸ್ತೆಗಳು, ಟ್ಯಾಕ್ಸಿಗಳು, ಕೆಫೆಗಳಿಂದ ಕಾಸಬ್ಲಾಂಕಾ, ಕುವೈತ್‌ವರೆಗೆ ಚಲಿಸುತ್ತಾ ಇರುತ್ತದೆ. ನಮಗಿರುವುದು ಅವಳೊಬ್ಬಳೇ. ಅವಳ ಕಂಠ ನಮ್ಮ ನೆನಪುಗಳಿದ್ದಂತೆ. ಅದು ನಮ್ಮ ನೆನ್ನೆಗಳ ಜೊತೆ ನಮ್ಮ ತಂದೆ ತಾಯಿಯರ ಜೊತೆಗೆ, ನಮ್ಮ ಗೆಳೆಯರು ಮತ್ತು ನಮ್ಮ ಮನೆಯ ಜೊತೆಗೆ ನಮ್ಮನ್ನು ಬೆಸೆಯುತ್ತಿರುತ್ತದೆ. ಅವಳು ಅದನ್ನು ಪ್ರತಿನಿಧಿಸುತ್ತಾಳೆ. ಅವಳ ಹಾಡು ನಮ್ಮ ಅಜ್ಜಿಯನ್ನು ನೆನಪಿಸುತ್ತದೆ, ಈಜಿಪ್ಟನ್ನು ಮತ್ತು ಕೈರೋದ ಹಾದಿಗಳನ್ನು ಸ್ವಂತ ಊರನ್ನು ಮತ್ತು ನೆರೆಹೊರೆಯವರನ್ನು ನೆನಪಿಸುತ್ತದೆ. ಅವಳೆಂದರೆ ಪೂರ್ವ, ಅವಳನ್ನು ನಾವು ಪೂರ್ವದ ತಾರೆ ಎಂದು ಕರೆಯುತ್ತೇವೆ. ಚಳಿಗಾಲದ ರಾತ್ರಿಗಳಲ್ಲಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಇದ್ದು, ಟೀ ಕುಡಿದು ಮಧ್ಯಪ್ರಾಚ್ಯದ ಸಿಹಿತಿನಿಸುಗಳನ್ನು ತಿನ್ನುತ್ತಿ ದ್ದಾಗ ಹಿನ್ನೆಲೆಯಲ್ಲಿ ಯಾವಾಗಲೂ ಉಮ್ ಕುಲ್ಸುಂ ಇರುತ್ತಿದ್ದಳು. ಅವಳು ಸತ್ತು ೪೫ ವರ್ಷಗಳಾದ ಮೇಲೆಯೂ ನಮಗೆ ಅವಳು ಮುಖ್ಯ ಎನಿಸುತ್ತಾಳೆ ಏಕೆಂದರೆ ಆಡುಮಾತಿನಲ್ಲಿ ಹೇಳುವುದಾದರೆ ’ಉಮ್ ಕುಲ್ಸುಂ ಗೊತ್ತಿಲ್ಲ ಎಂದರೆ, ನಿಮ್ಮ ಪಾಸ್‌ಪೋರ್ಟ್ ಹಿಂತೆಗೆದುಕೊಂಡು ಬಿಡುತ್ತಾರೆ.’
ಅಪಾರವಾದ ಸಂಘರ್ಷಗಳು ಮತ್ತು ಯುದ್ಧ ಗಳಿಂದ ನಾವು ಬಳಲಿದ್ದೇವೆ. ಹಾಗಾಗಿ ಜನ ನಿಜವಾಗಿ ಆತುಕೊಳ್ಳಬಹುದಾದ್ದು ಎಂದರೆ ಅದು ಕುಲ್ಸುಂ ಅವರ ಸಂಗೀತ. ಇಲ್ಲಿನ ಜಂಜಾಟದಿಂದ ಪಾರಾಗಿ ಶಾಂತಿ, ನೆಮ್ಮದಿಗಳನ್ನು ಅನುಭವಿಸಲು ಅವರ ಸಂಗೀತದಲ್ಲಿ ಸಾಧ್ಯ. ಅವರ ಸಂಗೀತ ಕೇಳು ತ್ತಿದ್ದರೆ ನಿಮ್ಮ ಕಥೆಯನ್ನೇ ಅವರು ಹೇಳುತ್ತಿದ್ದಾರೆ ಎನಿಸುತ್ತದೆ. ಅವರು ಹಾಡುತ್ತಿರುವ ನೋವು, ಆ ಖಾಲಿತನ, ಆ ಒಂಟಿತನ ಎಲ್ಲವೂ ನನ್ನ ಹಾಗೂ ನನ್ನಂತೆ ಇತರರ ಅನುಭವದ ಭಾಗವಾಗಿದೆ. ಇವೆಲ್ಲವನ್ನೂ ಅವರು ಪ್ರತಿನಿಧಿಸುತ್ತಾರೆ. ಅವರ ತರಹದವರು ಮತ್ತೆ ಬರುವುದಿಲ್ಲ. ಅವರಿಗೆ ಅವರೇ ಸಾಟಿ. ಅವರ ಅಸಾಧಾರಣ ಮಹಿಳೆ. ಹಲವು ಶತಮಾನಗಳ ನಂತರವೂ ಅವರು ಉಳಿಯುತ್ತಾರೆ. ಇದು ಈಜಿಪ್ಟಿನ ಜನತೆಯ ಮನದ ದನಿ.
ಮತ್ತೊಬ್ಬ ಹದಿಹರೆಯದ ಯುವತಿ ಉಮ್ ಕುಲ್ಸುಂ ಅವರನ್ನು ಕುರಿತು ಹೇಳುವ ಮಾತುಗಳು ತುಂಬಾ ಹೃದಯಸ್ಪರ್ಶಿ, ನನ್ನಜ್ಜಿ ಅಲಜ಼ೈಮರ್ ಖಾಯಿಲೆಯಿಂದ ನರಳುತ್ತಿದ್ದಳು. ಅವಳಿಗೆ ತನ್ನ ಮಕ್ಕಳ ಹೆಸರು, ತಾನು ವಾಸಿಸುತ್ತಿದ್ದ ಹಳ್ಳಿ ಎಲ್ಲವೂ ಮರೆತು ಹೋಗಿತ್ತು. ಅವಳಿಗೆ ಉಮ್ ಕುಲ್ಸುಂ ಮತ್ತವಳ ಹಾಡುಗಳು ಬಿಟ್ಟು ಇನ್ನೇನೂ ನೆನಪಿರಲಿಲ್ಲ. ಅವಳು ಸುಮ್ಮನೆ ಕುಳಿತಿರುತ್ತಿದ್ದಳು. ಆದರೆ ನಾನು ರೇಡಿಯೋ ಹಾಕಿದ ಕೂಡಲೆ ಅವಳಿಗೆ ಜೀವ ಬರುತ್ತಿತ್ತು. ಅವಳು ತಾನು ೩೦ರ ಹರೆಯದ ಯುವತಿ ಎಂಬ ಮನಃಸ್ಥಿತಿಯಲ್ಲಿ ಇರುತ್ತಿದ್ದಳು. ಅವಳ ಹಾಡನ್ನು ಕೇಳುತ್ತಿದ್ದಳು. ಆ ಪಾರ್ಟಿಗಳಿಗೆ ತಾನು ಹೋಗುತ್ತಿದ್ದೇನೆ ಎಂಬ ಸ್ಥಿತಿಯಲ್ಲಿ ಇರುತ್ತಿದ್ದಳು. ಅಂದರೆ ಇದರರ್ಥ ಕುಲ್ಸುಂ ನಮ್ಮೊಳಗೆ ಜೀವಿಸಿ ದ್ದಾಳೆ ಮತ್ತು ಜನರಿಗೆ ಬದುಕನ್ನು ಸೃಷ್ಟಿಸುತ್ತಿದ್ದಾಳೆ ಎಂದಲ್ಲವೆ?
ಇಂತಹ ಅಮರ ಗಾಯಕಿಯ ಬದುಕು ಅರಳಿದ್ದು ಎರಡು ಮಹಾಯುದ್ಧಗಳ ನಡುವೆ, ೧೯೧೯ರ ಮಹಾ ಆರ್ಥಿಕ ಕುಸಿತ ಮತ್ತು ೧೯೫೨ರ ಈಜಿಪ್ಟ್ ಕ್ರಾಂತಿಯ ಹೊತ್ತಿನಲ್ಲಿ. ಆಗ ಘಟಿಸಿದ ಗಂಭೀರ ಸಾಮಾಜಿಕ ರಾಜಕೀಯ ಬದಲಾವಣೆಗಳು ಉಮ್ ಕುಲ್ಸುಂ ಅವರ ಬದುಕನ್ನು ಒಬ್ಬ ಪ್ರಜೆಯಾಗಿ ಮತ್ತು ಕಲಾವಿದೆಯಾಗಿ ಪ್ರಭಾವಿಸಿತು. ೫೦ ವರ್ಷಗಳ ಕಾಲ ನಿರಂತರ ಹಾಡಿದ ಅವರು ಈಜಿಪ್ಟ್ ಕಲಾ ಪ್ರಪಂಚದ ಸಂಕೇತವೇ ಆಗಿದ್ದರು.
ಅವರ ವೃತ್ತಿಬದುಕು ರೂಪುಗೊಂಡ ಸಮಯ ದಲ್ಲಿ ಈಜಿಪ್ಟ್ ಮಹತ್ತರವಾದ ರೀತಿಯಲ್ಲಿ ಸ್ಥಿತ್ಯಂತರ ಗೊಳ್ಳುತ್ತಿತ್ತು. ಅಲ್ಲಿ ಪುರುಷರ ಮೇಲಾಟವಿತ್ತು. ವಸಾಹತು ಆಳ್ವಿಕೆಯಲ್ಲಿದ್ದ ಈಜಿಪ್ಟ್ ತನ್ನದೊಂದು ಅಸ್ಮಿತೆಯನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ರೂಪಿಸಿ ಕೊಳ್ಳಲು ಹಪಹಪಿಸುತ್ತಿತ್ತು. ಅಂತಹ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶದಲ್ಲಿ ರೂಪುಗೊಂಡ ಯಶಸ್ವೀ ಕಲಾವಿದೆ ಉಮ್ ಕುಲ್ಸುಂ. ಈಜಿಪ್ಟಿನ ಕುಗ್ರಾಮ ಒಂದರ ಈ ಹುಡುಗಿ ಒಂದು ರಾಷ್ಟ್ರದ ಸಾಂಸ್ಕೃತಿಕ ಸಂಕೇತವಾಗಿ ಬೆಳೆದು, ಅರಬ್ ಸಂಗೀತಕ್ಕೆ ಒಂದು ಸ್ಪಷ್ಟ ವ್ಯಾಖ್ಯಾನ ನೀಡಿ, ಅದರ ಅಂಚುಗಳನ್ನು ವಿಸ್ತರಿಸಿದರು. ಕೈರೋದ ಸಂಗೀತ ಸಂಸ್ಥೆಗಳ ಜೊತೆ ವ್ಯವಹರಿಸಿ, ಅತ್ಯಂತ ಕಠಿಣವಾದ, ಒತ್ತಡ ತುಂಬಿದ ಹಾದಿಯಲ್ಲಿ ಯಶಸ್ವೀ ವೃತ್ತಿಬದುಕನ್ನು ರೂಪಿಸಿ ಕೊಂಡಳು. ಜೊತೆಗೆ ಅತ್ಯಂತ ಪುರಾತನ ಮತ್ತು ತುಂಬಾ ಗೌರವಿಸಲ್ಪಡುವ ಅರಬ್ ಕಲೆಯನ್ನು ಅಭಿವ್ಯಕ್ತಿಸುತ್ತಿದ್ದ ಒಬ್ಬ ಅದ್ಭುತ ಗಾಯಕಿಯಾಗಿ ಹೊರಹೊಮ್ಮಿದಳು.
ಉಮ್ ಕುಲ್ಸುಂ ಈಜಿಪ್ಟಿನ ತಮ್ಮೇ-ಅಲ್-ಜ಼ಹೇರಾ ಎಂಬ ಹಳ್ಳಿಯ ಬಡ ಕುಟುಂಬದಲ್ಲಿ ೧೯೦೪ರ ಮೇ ತಿಂಗಳಿನಲ್ಲಿ ಹುಟ್ಟಿದರು. ಅವರ ತಂದೆ ಅಲ್ ಷೇಕ್ ಇಬ್ರಾಹೀಂ ಅಲ್ ಸಯ್ಯಿದಾಲ್ ಬಲ್ತಾಜಿ. ಅವರು ಸ್ಥಳೀಯ ಮಸೀದಿಯೊಂದರ ಇಮಾಮ್. ತಾಯಿ ಫತ್ಮಾ ಅಲ್ ಮಲೀಜೀ ಗೃಹಿಣಿ. ಕುಲ್ಸುಂ ಮನೆಯ ಕಿರಿಯ ಮಗಳು. ಐದು ವರ್ಷವಾಗಿದ್ದಾಗ ಕುರಾನ್ ಶಾಲೆಯಲ್ಲಿ ಕಲಿತು, ನಂತರ ಹಲವು ಕಿಲೋಮೀಟರ್ ದೂರದ ಶಾಲೆಯಲ್ಲಿ ಮೂರು ವರ್ಷ ಕಲಿತರು. ಸ್ಪಷ್ಟವಾದ ಉಚ್ಚಾರಣೆ ಮತ್ತು ಧ್ವನಿಯ ಏರಿಳಿತಗಳ ಜೊತೆ ಕುರಾನ್ ಓದುವುದನ್ನು ಕಲಿತರು. ಈ ಕಲಿಕೆ ಬದುಕಿಡೀ ಅವರೊಂದಿಗಿತ್ತು. ಅವರ ಸಂಗೀತದಲ್ಲಿ ಬಹು ಮುಖ್ಯ ಪಾತ್ರ ವಹಿಸಿತು.
ಉಮ್ ಕುಲ್ಸುಮಳ ತಂದೆ ಮಸೀದಿಯ ಕೆಲಸದ ಜೊತೆಗೆ ಮದುವೆ ಮುಂತಾದ ಸಮಾರಂಭಗಳಲ್ಲಿ ಧಾರ್ಮಿಕ ಗೀತೆಗಳನ್ನು ಹಾಡುತ್ತಿದ್ದರು. ಅವರ ಜೊತೆ ಮಗ ಖಾಲಿದ್ ಮತ್ತು ಸೋದರಳಿಯ ಸಾಹರ್ ಹಾಡುತ್ತಿದ್ದರು. ತಂದೆ ಖಾಲಿದ್‌ಗೆ ಕಲಿಸುತ್ತಿದ್ದಾಗ ಅದನ್ನು ಕೇಳಿಕೊಂಡು ತಾನು ಕಲಿತೆ ಎಂದು ಉಮ್ ಹೇಳುತ್ತಿದ್ದರು. ಅವಳ ಶಕ್ತಿಶಾಲಿ ಯಾದ ಕಂಠವನ್ನು ಆಲಿಸಿದ ಅವರು ನಂತರ ಅವಳಿಗೂ ಕಲಿಸಿದರು.
ಸಂಗೀತ ಈಜಿಪ್ಟಿನ ಜನರ ಬದುಕಿನ ಭಾಗ ವಾಗಿತ್ತು. ರಂಜ಼ಾನ್ ತಿಂಗಳಿನಲ್ಲಿ, ಪ್ರವಾದಿಯವರ ಹುಟ್ಟುಹಬ್ಬದಲ್ಲಿ ಅಥವಾ ಇನ್ಯಾವುದಾದರೂ ಸಂತರ ಹುಟ್ಟುಹಬ್ಬದಲ್ಲಿ, ಮದುವೆ, ಸುನ್ನತಿ, ನಾಮಕರಣ, ಪ್ರವಾಹ ಬಂದು ನೈಲ್ ನದಿ ಉಕ್ಕಿ ಹರಿದಾಗ ಸಂಗೀತವಿರುತ್ತಿತ್ತು. ಹಲವು ಆಸಕ್ತ ಗಾಯಕರು ಸೂಫಿ ಧಾರ್ಮಿಕ ಗಾಯಕರಿಂದ ತರಬೇತಿ ಪಡೆಯುತ್ತಿದ್ದರು. ಅಲ್-ಲೇತಿ (ಚಿಟ-ಐಚಿಥಿಣhi) ಎನ್ನುವ ಸೂಫಿ ಪಂಥ ತಮ್ಮ ಸಾಂಗೀತಿಕ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿತ್ತು. ಈ ಹಿನ್ನೆಲೆಯವರನ್ನು ಮಿನ್-ಅಲ್-ಮಶಾಯಿಕ್ ಎನ್ನುತ್ತಿದ್ದರು. ಸಾಮಾನ್ಯ ವಾಗಿ ಧಾರ್ಮಿಕ ಹಾಡುಗಳನ್ನು ಹಾಡುತ್ತಿದ್ದವರು ಗಂಡಸರು. ಆದರೆ ಹಲವು ಒಳ್ಳೆಯ ಮಹಿಳಾ ಧಾರ್ಮಿಕ ಗಾಯಕಿಯರಿದ್ದರು. ಅವರು ಪರದೆ ಧರಿಸಿ ಸ್ತ್ರೀಪುರುಷರಿಬ್ಬರಿಗೂ ಹಾಡುತ್ತಿದ್ದರು. ಉಮ್ ಕುಲ್ಸಂ ಅವರ ಉಚ್ಚಾರ, ಉಡುಪು ಹಾಗೂ ನಡವಳಿಕೆಯಿಂದ ಅವರನ್ನು ಮಿನ್-ಅಲ್-ಮಶಾಯಿಕ್ ಎಂದೇ ಗುರುತಿಸುತ್ತಿದ್ದರು.
ಹಿಂದೆಲ್ಲಾ ಗಾಯನಕ್ಕೆ ಯಾವುದೇ ವಾದ್ಯ ಸಹಕಾರ ಇರುತ್ತಿರಲಿಲ್ಲ. ಬದಲಾಗಿ ಗಾಯಕರ ಸಣ್ಣ ತಂಡವೊಂದು ಪ್ರಮುಖ ಗಾಯಕರಿಗೆ ಗಾಯನ ಸಹಕಾರ ನೀಡುತ್ತಿತ್ತು. ನಂತರ ಕೈರೋದ ಧಾರ್ಮಿಕ ಗಾಯಕರು ಸಹಗಾಯನಕ್ಕೆ ಬದಲಾಗಿ ವಯೋಲಿನ್ ಆಥವಾ ಕ್ವಿನ್ ವಾದ್ಯವನ್ನು ಬಳಸಲಾರಂಭಿಸಿದರು. ಉಮ್ ಕುಲ್ಸುಂ ಕಾಲದಲ್ಲಿ ಮವ್ವಾಲ್ ಹಾಡುಗಾರ ರಿದ್ದರು. ಇವು ಆಡುಮಾತಿನಲ್ಲಿದ್ದು ಗ್ರಾಮೀಣ ಸಾಂಸ್ಕೃತಿಕ ಪರಿಸರಕ್ಕೆ ಸೇರಿದ್ದವು. ಮವ್ವಾಲ್ ಹಾಡುವುದಕ್ಕೆ ಮೊದಲು ಲಯಾಲಿಯನ್ನು ಹಾಡುತ್ತಿದ್ದರು. ಮವ್ವಾಲಿಗೆ ಹಿಂದಿನಿಂದಲೂ ಡ್ರಂಗಳು, ಚಪ್ಪಾಳೆ ತಟ್ಟುವುದು, ಡಬ್ಬಲ್ ರೀಡ್ ಇರುವ ಮಿಜ಼್‌ಮಾರ್ (ಗಾಳಿವಾದ್ಯ ಓಲಗದ ಹಾಗೆ ಇರುತ್ತದೆ) ಉರ್‌ಘುಲ್ (ಕೊಳಲಿನ ಹಾಗೆ ರಂಧ್ರಗಳಿರುವ ಗಾಳಿವಾದ್ಯ) ಮುಂತಾದವುಗಳನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದರು. ಹಳ್ಳಿಯ ಕಡೆಗಳಲ್ಲಿ ಗಂಡಸರು ಮಾಡುತ್ತಿದ್ದ ಬೊಂಬು ನೃತ್ಯಕ್ಕೆ ಸಂಗೀತ ನುಡಿಸಲು ಇವುಗಳನ್ನು ಬಳಸುತ್ತಿದ್ದರು. ಅರೇಬಿಕ್ ಮಹಾಕಾವ್ಯ ’ಬಾನಿ ಹಿಲಾಲ್’ ಕಥೆಯನ್ನು ಹಾಡಲು ಸ್ಪೈಕ್ ಫಿಡಲ್ (ರಬಾಬ್) ಅಥವಾ ಡ್ರಮ್ಮನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದರು. ೧೯೦೦ರ ಹೊತ್ತಿಗೆ ಪಾಶ್ಚಾತ್ಯ ಮಿಲಿಟರಿ ಸಂಗೀತವನ್ನು ನುಡಿಸುವುದನ್ನೂ ಈಜಿಪ್ಟಿನ ಜನ ಕಲಿತಿದ್ದರು. ಸ್ಥಳೀಯ ಕಲಾವಿದರ ಕೈಯಲ್ಲಿ ಈ ಮಾರ್ಷಲ್ ಶೈಲಿಯ ನುಡಿಸುವಿಕೆ ಬದಲಾಗಿತ್ತು ಮತ್ತು ತುಂಬಾ ಜನಪ್ರಿಯತೆಯನ್ನು ಪಡೆಯಿತು. ಈ ಎಲ್ಲಾ ಸಂಗೀತವನ್ನು ಕೇಳುತ್ತಾ, ತನ್ನೊಳಗೆ ಸೇರಿಸಿಕೊಂಡು ಕುಲ್ಸುಂ ಬೆಳೆದರು.
ಇದರ ಜೊತೆಗೆ ಕುಲ್ಸುಂ ಮತ್ತವರ ಗೆಳತಿಯರು ಗ್ರಾಮಾಫೋನ್ ರೆಕಾರ್ಡುಗಳನ್ನು ಕೇಳುತ್ತಿದ್ದರು. ಅವರೆಲ್ಲಾ ಬೆಳೆಯುವ ಹೊತ್ತಿಗೆ ಗ್ರಾಮಾಫೋನ್ ಉದ್ಯಮ ಒಂದು ಜನಪ್ರಿಯ ಸಾಂಗೀತಿಕ ಮನೋರಂಜನೆಯಾಗಿತ್ತು. ಈಜಿಪ್ಟಿನ ಕಲಾವಿದರ ಸುಮಾರು ೧೧೦೦ ಧ್ವನಿಮುದ್ರಿಕೆಗಳು ಹೊರಬಂದಿದ್ದವು.
ಉಮ್ ಕುಲ್ಸುಂ ಸಂಗೀತಲೋಕಕ್ಕೆ ಕಾಲಿಟ್ಟಾಗ ಅಲ್ಲಿ ವಾಗ್ಗೇಯ ಕೃತಿಯೇ ತುಂಬಾ ಮುಖ್ಯವೆನಿಸಿ ಕೊಂಡಿತ್ತು. ಸ್ವತಃ ಕುಲ್ಸುಂ ಕೂಡ ಸಾಹಿತ್ಯ ತುಂಬಾ ಮುಖ್ಯವೆಂದು ಭಾವಿಸಿದ್ದರು. ಕೃತಿಯ ಸಾಹಿತ್ಯ ಪರಿಣಾಮಕಾರಿಯಾಗಿ ಇದ್ದಷ್ಟೂ ಹಾಡು ಪರಿ ಣಾಮಕಾರಿಯಾಗಿರುತ್ತದೆ. ಸಂಗೀತದಲ್ಲಿ ಪದಗಳು ತುಂಬ ಮುಖ್ಯ. ಸರಿಯಾಗಿ ಅರ್ಥ ಸ್ಫುರಿಸುವಂತೆ ಪದಗಳನ್ನು ಉಚ್ಚರಿಸದೇ ಇದ್ದರೆ ಕೇಳುಗರ ಭಾವವನ್ನು ಮೀಟಲು ಸಾಧ್ಯವಿಲ್ಲ. ಪ್ರತಿಯೊಂದು ಪದವನ್ನು ಸ್ವತಃ ನಾವು ಚಪ್ಪರಿಸಿ, ಅನುಭವಿಸಿ ಹಾಡಬೇಕು, ಎನ್ನುತ್ತಿದ್ದರು.
ಕುಲ್ಸುಂ ಸಾರ್ವಜನಿಕವಾಗಿ ಮೊದಲು ಹಾಡಿದ್ದು ಅವರ ಹಳ್ಳಿಯ ಮುಖ್ಯಸ್ಥ ಉಮ್ಡಾನ ಮನೆಯಲ್ಲಿ. ಮಶಾಯಿಕ್ ಹಾಡುಗಳನ್ನು ಇಷ್ಟು ಶಕ್ತಿಯುತವಾಗಿ, ಸೊಗಸಾಗಿ ಹಾಡುವ ಹುಡುಗಿಯ ಸಮಾಚಾರ ಒಂದು ಹಳ್ಳಿಯಿಂದ ಹಳ್ಳಿಗೆ ಹಬ್ಬಿತು. ಬೇರೆ ಸಮಾರಂಭಗಳಿಗೆ ಅವರನ್ನು ಆಹ್ವಾನಿಸಿದರು.
ಕುಲ್ಸುಂ ಅವರ ಕಾಲದಲ್ಲಿ ಸಂಗೀತವನ್ನು ವೃತ್ತಿ ಯಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಉತ್ತೇಜನ ಇರಲಿಲ್ಲ. ಅದರಿಂದ ಬದುಕು ಸಾಧ್ಯವೆಂದು ಅನ್ನಿಸಿ ರಲಿಲ್ಲ. ಅದಕ್ಕೊಂದು ಸಾಮಾಜಿಕ ಘನತೆಯಿರಲಿಲ್ಲ. ಅದು ಗೌರವಾನ್ವಿತ ಕುಟುಂಬಕ್ಕೆ ಸಲ್ಲದ ವೃತ್ತಿ ಎನ್ನುವ ಭಾವನೆಯೂ ಇತ್ತು. ಮಾದಕ ವಸ್ತುಗಳ ಸೇವನೆ, ಮದ್ಯಪಾನ, ಜೂಜು ಹಾಗು ವೇಶ್ಯಾವೃತ್ತಿ ಇವೆಲ್ಲವೂ ಸಂಗೀತದೊಂದಿಗೆ ತಳುಕು ಹಾಕಿಕೊಂಡಿದ್ದವು. ಸಂಗೀತದ ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲೆಲ್ಲಾ ವಿದೇಶೀ ಸೈನಿಕರು ಇರುತ್ತಿದ್ದರು. ಅವರ ಬಳಿ ತುಂಬಾ ಹಣ ಇರುತ್ತಿತ್ತು. ಅವರಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಹಾಗಾಗಿ ಆರಂಭದಲ್ಲಿ ಕಾರ್ಯ ಕ್ರಮ ನೀಡುವಾಗ ಕುಲ್ಸುಂ ಹುಡುಗನಂತೆ ಉಡುಗೆ ತೊಡುತ್ತಿದ್ದರು.
ಹಳ್ಳಿಗಳಲ್ಲಿ ತಾತ್ಕಾಲಿಕ ಟೆಂಟುಗಳನ್ನು ನಿರ್ಮಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಉಮ್ ಕುಲ್ಸುಂ ಎಲ್ಲಾ ಕಡೆಗೂ ತಂದೆಯೊಡನೆ ಹೋಗು ತ್ತಿದ್ದರು. ಆರಂಭದಲ್ಲಿ ಚಿಕ್ಕ ಹುಡುಗಿಯೊಬ್ಬಳು ಸೊಗಸಾಗಿ ಕುರಾನಿನ ಸುರಾ ಓದುತ್ತಾಳಂತೆ ಎನ್ನುವ ಕುತೂಹಲದಿಂದಲೇ ತುಂಬಾ ಜನ ಬರುತ್ತಿದ್ದರು.
ವೃತ್ತಿಬದುಕಿನ ಪ್ರಗತಿಗೆ ಕೈರೋದಲ್ಲಿ ನೆಲೆಸುವುದು ಅನಿವಾರ್ಯವಾದಾಗ ಅವರು ಕೈರೋದಲ್ಲಿ ನೆಲೆಸಿದರು. ಅಲ್ಲಿ ಅವರು ಮೊದಲು ಹಾಡಿದ್ದು ಒಂದು ಮದುವೆಯ ಮನೆಯಲ್ಲಿನ ಮಹಿಳೆ ಯರಿಗಾಗಿ. ಅತಿ ಸಾಮಾನ್ಯ ಉಡುಗೆಯ ಕುಲ್ಸುಂ ಅವರನ್ನು ಶ್ರೀಮಂತ ಮಹಿಳೆಯರು ಅಸಡ್ಡೆಯಿಂದ ನೋಡಿ, ತಮ್ಮದೇ ಮಾತುಕತೆಗಳಲ್ಲಿ ಮುಳುಗಿದ್ದರು. ಆದರೆ ಒಮ್ಮೆ ಉಮ್ ಕುಲ್ಸುಂ ಹಾಡಲು ಶುರು ಮಾಡಿದಾಗ ಅವರೆಲ್ಲರೂ ಆಕೆಯ ಕಂಠಸಿರಿಯನ್ನು ಕೇಳಿ ದಂಗಾದರು. ಮಹಿಳೆಯರ ಬಿಡಾರದಿಂದ ಇಂತಹ ಶಕ್ತಿಯುತವಾದ ಧ್ವನಿಯನ್ನು ಕೇಳಿ, ಅಚ್ಚರಿಗೊಂಡ ಗಂಡಸರು ಸಾರ್ವಜನಿಕವಾಗಿ ಹಾಡು ವಂತೆ ಅವರನ್ನು ಆಹ್ವಾನಿಸಿದರು.
ಆಗ ಹೆಚ್ಚಿನ ಗಾಯಕರೆಲ್ಲರೂ ಹಾಡುತ್ತಿದ್ದುದು ಪ್ರವಾದಿ ಮಹಮದರ ಜೀವನಗಾಥೆಯನ್ನು. ಇವು ಈಜಿಪ್ಟಿನ ಜನರ ಬದುಕು ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಬಹುಮುಖ್ಯ ಭಾಗವಾಗಿದ್ದವು. ಅದನ್ನು ಹಾಡುವ ಶೈಲಿ ಸಂಪೂರ್ಣವಾಗಿ ಹರಳುಗಟ್ಟಿರಲಿಲ್ಲ. ಸತತವಾಗಿ ಬದಲಾಗುತ್ತಿತ್ತು. ಆರಂಭದಲ್ಲಿ ಗದ್ಯ ವಾಚನದಂತಿದ್ದ ಅದು ನಿಧಾನವಾಗಿ ರಾಗಮಯ ವಾದ, ಮಧುರವಾದ, ಇಂಪಾದ ಹಾಡಿನ ರೂಪ ತಳೆಯಿತು. ಅರಬ್ ಸಂಗೀತ ಸಂಪ್ರದಾಯದಲ್ಲಿ ಇಂತಹ ಬದಲಾವಣೆಗಳಿಗೆ ಅವಕಾಶವಿತ್ತು.
ಕುಲ್ಸುಂ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ ದಲ್ಲಿ ಈಜಿಪ್ಟ್ ಬ್ರಿಟಿಷರ ಆಡಳಿತದಲ್ಲಿತ್ತು. ವಸಾಹತು ದೊರೆಗಳ ಮೌಲ್ಯಗಳು ಮತ್ತು ಅವರ ಕಲೆಗಿಂತ ತಮ್ಮ ಮೌಲ್ಯಗಳು ಮತ್ತು ಕಲೆ ಭಿನ್ನವೆಂದು ಸ್ಥಾಪಿಸುವ ರಾಷ್ಟ್ರೀಯವಾದಿ ತವಕ ಈಜಿಪ್ಟಿನಲ್ಲಿ ತೀವ್ರವಾಗಿತ್ತು. ಆಗ ಈಜಿಪ್ಟ್‌ತನ ಎನ್ನುವ ಕಲ್ಪನೆ ಯನ್ನು ಕಟ್ಟಿಕೊಟ್ಟು, ಈಜಿಪ್ಟಿನ ಸಾಂಸ್ಕೃತಿಕ ಅಸ್ಮಿತೆ ಯನ್ನು ಕುಲ್ಸುಂ ತನ್ನ ಸಂಗೀತದ ಮೂಲಕ ನಿರ್ಮಿಸಿದರು.
ಅವರು ಪಾಶ್ಚಾತ್ಯ ಸಂಗೀತದ ಹಲವು ಅಂಶಗಳು ಮತ್ತು ವಾದ್ಯಗಳನ್ನು ಅರಬ್ ಸಂಗೀತಕ್ಕೆ ಒಗ್ಗಿಸಿದರು. ಹಲವು ವಿಭಿನ್ನ ಶೈಲಿಗಳನ್ನು ಅರಬ್ ಸಂಗೀತಕ್ಕೆ ತಂದರು. ಸಂಗೀತ ಇತಿಹಾಸಕಾರರು ಹೇಳುವಂತೆ ಹಿಂದೆಯೂ ಕೂಡ ಗ್ರೀಕ್ ಸಂಗೀತದ ಅಂಶಗಳನ್ನು ಈಜಿಪ್ಟ್ ಸಂಗೀತ ತನ್ನದಾಗಿಸಿಕೊಂಡಿತ್ತು. ಉಮ್ ಕುಲ್ಸುಂ ಅವರ ಕೃತಿಭಂಡಾರ ಪಾಶ್ಚಿಮಾತ್ಯ ಜನಪ್ರಿಯ ಸಂಗೀತ, ಅರಬ್ ಜಾನಪದ ಸಂಗೀತ, ಧಾರ್ಮಿಕ ಸಂಗೀತ ಮತ್ತು ಹಳೆಯ ಅರಬ್ ಸಂಗೀತವನ್ನು ಒಳಗೊಂಡಿತ್ತು.
ಅವರು ಪ್ರವಾದಿ ಮಹಮದರನ್ನು ಸ್ತುತಿಸುವ ಧಾರ್ಮಿಕ ಗೀತೆಗಳನ್ನು, ಜನರ ಆಡುಭಾಷೆಯಲ್ಲಿರುವ ಲಘುಧಾಟಿಯ ದೇಸೀ ಅರಬ್ ಹಾಡುಗಳಾದ ತಕ್‌ತೂಕಾ (ಣಚಿqಣ?qಚಿ), ಜನಪ್ರಿಯ ಪ್ರೇಮಗೀತೆ ಗಳನ್ನು ಹಾಡುತ್ತಿದ್ದರು. ಸ್ವತಃ ದುಡಿಯುವ ವರ್ಗ ದಿಂದ ಬಂದಿದ್ದ ಕುಲ್ಸುಂ ಈ ವರ್ಗಗಳಲ್ಲಿ ತುಂಬಾ ಜನಪ್ರಿಯವಾಗಿದ್ದ ಆಡುಮಾತಿನಲ್ಲಿದ್ದ ಅಜ಼ಲ್ ಗಳನ್ನು, ಭಕ್ತಿಗೀತೆಗಳಾದ ನಿಶಾದ್‌ಗಳನ್ನು ಮತ್ತು ದೇಸೀ ಪಾತ್ರಗಳನ್ನು ಸಂಗೀತದ ಪರಿಧಿಯೊಳಗೆ ತಂದರು. ಅವರ ಗಾನಭಂಡಾರ ಈಜಿಪ್ಟ್ ಮತ್ತು ಅರಬ್ ಸಂಸ್ಕೃತಿಯ ನಿಜವಾದ ಸಂಗ್ರಹವನ್ನು ಒಳಗೊಂಡಿದೆ ಎನ್ನುವುದು ಎಲ್ಲರ ಅಭಿಪ್ರಾಯ ವಾಗಿತ್ತು. ಅವರ ಸಂಗೀತ ಏಕಕಾಲಕ್ಕೆ ಅಭಿಜಾತವೂ ಮತ್ತು ತನ್ನ ನೆಲದ ಜನರ ದೈನಂದಿನ ಬದುಕಿನ ದನಿಯೂ ಆಗಿತ್ತು. ಇವೆಲ್ಲವೂ ಅವರೇ ಕಲ್ಪಿಸಿ ರೂಪಿಸಿಕೊಂಡಿದ್ದ ಕೃತಿಭಂಡಾರವಾಗಿತ್ತು.
ಉಮ್ ಕುಲ್ಸುಂ ಕ್ರಮಿಸಿದ ಹಾದಿ ಮತ್ತು ಅವರೊಬ್ಬ ರಾಷ್ಟ್ರೀಯ ಗಾಯಕಿಯಾಗಿ ಹೊರ ಹೊಮ್ಮಿದ ಪ್ರಕ್ರಿಯೆ ಸುಲಭದ್ದೇನಾಗಿರಲಿಲ್ಲ. ಅದರ ಹಿಂದೆ ಹಲವು ವರ್ಷಗಳ ಪರಿಶ್ರಮವಿತ್ತು. ಅವರು ವೈಯಕ್ತಿಕ ಮತ್ತು ಸಾಂಗೀತಿಕ ಬದುಕಿನಲ್ಲಿ ಮಾಡಿ ಕೊಂಡ ಆಯ್ಕೆಗಳಿಗೆ ಒಂದು ಸ್ಪಷ್ಟವಾದ ಮಾದರಿ ಇತ್ತು. ಆರಂಭದಲ್ಲಿ ತುಂಬಾ ಕಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರಿಗೆ ಇರುವುದು ಒಳ್ಳೆಯ ಕಂಠ ಮತ್ತು ಮಾಧುರ್ಯ ಅಷ್ಟೆ. ಆದರೆ ಕಲೆ ಅದನ್ನು ಮೀರಿದ್ದು ಎಂದು ವಿಮರ್ಶಕರು ವ್ಯಂಗ್ಯ ವಾಡಿದರು. ಅವಳೊಬ್ಬಳು ಧಾರ್ಮಿಕ ಗಾಯಕಿ ಅಷ್ಟೆ. ಇಂತಹ ಗಾಯನ ಶೈಲಿ ಈಜಪ್ಟಿನಲ್ಲಿ ಹಲವು ಶತಮಾನಗಳಿಂದ ಇದೆಯೆಂದರು. ಅವಳು ಸಂಗೀತಕ್ಕೆ ಹೊಸದೇನು ತಂದಿದ್ದಾಳೆ ಎಂದು ಪ್ರಶ್ನಿಸಿದರು. ಇನ್ನು ಕೆಲವರು ಅವಳೊಬ್ಬ ಹಳ್ಳಿಯ ಗಮಾರ್ ಎಂದು ಲೇವಡಿ ಮಾಡಿದರು. ಅವರ ಚಾರಿತ್ರ್ಯವನ್ನು ಅನುಮಾನಿಸಿದರು. ಆದರೆ ಕುಲ್ಸುಂ ಇಂತಹ ಟೀಕೆ ಗಳಿಂದ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ತನ್ನ ಗಮನವನ್ನು ಉತ್ಕೃಷ್ಟತೆಯನ್ನು ಸಾಧಿಸುವತ್ತ ಕೇಂದ್ರೀಕರಿಸಿದರು.
ತಮ್ಮ ಕಲಾತ್ಮಕ ಕೌಶಲ ಮತ್ತು ವೇದಿಕೆಯ ಮೇಲಿನ ಪ್ರಸ್ತುತಿಯನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ ನಿಜ್ರಿದಿ ಎನ್ನುವ ರಚನಕಾರರ ಬಳಿ ತರಬೇತಿ ಪಡೆದು ತಮ್ಮ ಕಂಠದಲ್ಲಿ ಹೆಚ್ಚಿನ ಸುಲಲಿತತೆಯನ್ನು ಬೆಳೆಸಿಕೊಂಡು, ಸರಾಗವಾಗಿ ಹಾಡಲಾರಂಭಿಸಿದರು. ಇವರಿಗೆ ಊದ್ ಕಲಿಸಲು ಮತ್ತು ಮುವಾಶ್ಶಹಾತ್ ಹಾಡುವುದನ್ನು ಕಲಿಸಲು ಅವರ ತಂದೆ ಓರಿಯಂಟಲ್ ಮ್ಯೂಸಿಕ್ ಕ್ಲಬ್‌ನ ಮಹಮೂದ್ ರಹ್ಮಿಯನ್ನು ಖಾಸಗಿಯಾಗಿ ನೇಮಿಸಿ ದರು. ಏಕೆಂದರೆ ಆಗ ಮಹಿಳೆಯರಿಗೆ ಆ ಕ್ಲಬ್‌ಗೆ ಪ್ರವೇಶವಿರಲಿಲ್ಲ. ಅವರ ಪ್ರಮುಖ ಗುರು ಅಲ್ ಶೇಕ್ ಅಬೂ ಅಲ್ ಇಲಾ ಮಹಮೂದ್ ಮಶಾಯಿಕ್ ಸಂಗೀತ ಸಂಪ್ರದಾಯದಲ್ಲಿ ಪರಿಣತರು. ಅವರು ಅಭಿಜಾತ ಸಂಗೀತದ ಕೃತಿಭಂಡಾರವೇ ಆಗಿದ್ದರು. ಕುಲ್ಸುಂಗೆ ತಮ್ಮ ಶಕ್ತಿಶಾಲಿಯಾದ ಕಂಠವನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು, ಅದರ ಬಾಗುಬಳುಕುಗಳು ಹೇಗಿರಬೇಕು ಮತ್ತು ಹಾಡಿನ ಅರ್ಥ ಹಾಗೂ ರಾಗ ಪರಸ್ಪರ ಹೇಗೆ ಮೇಳೈಸಬೇಕೆಂಬುದನ್ನು ಹೇಳಿಕೊಟ್ಟರು. ಟರ್ಕಿ ಮತ್ತು ಜಿಪ್ಸಿ ಹಾಡುಗಳ ಕೂಗಾಟದ ಪ್ರಭಾವವನ್ನು ತೊಡೆದು ಹಾಕಿ, ಅಸಲೀ ಅರಬ್ ಪ್ರಸ್ತುತಿಯ ಕಲಾತ್ಮಕತೆಯನ್ನು ಸಂಗೀತದಲ್ಲಿ ರೂಪಿಸಿದರು.
ಆ ತನಕ ಕುಲ್ಸುಂ ಹಾಡುತ್ತಿದ್ದ ಹೆಚ್ಚಿನ ಹಾಡು ಗಳು ಬಳಕೆ ತಪ್ಪಿದ್ದ ಆರ್ಷೇಯ ಅರಬ್ ಭಾಷೆಯವು. ಅವು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಗುಣಾತ್ಮಕವಾಗಿ ಉತ್ಕೃಷ್ಟವಾದ ಹಾಡುಗಳನ್ನು ರಚಿಸಿಕೊಡುವಂತೆ ಅಹಮದ್ ರಾಮೀ ಎನ್ನುವ ಖ್ಯಾತ ಕವಿಯನ್ನು ಕುಲ್ಸುಂ ಕೇಳಿಕೊಂಡರು. ಆ ಹಾಡುಗಳು ತುಂಬಾ ಜನಪ್ರಿಯವಾದವು.
ಅವರ ಬದುಕಿನ ಅತ್ಯಂತ ಯಶಸ್ವೀ ದಿನಗಳು ಪ್ರಾರಂಭವಾದದ್ದು ೧೯೨೩ರಲ್ಲಿ ಓಡಿಯಾನ್ ಕಂಪನಿ ಅವರ ಧ್ವನಿಮುದ್ರಿಕೆಗಳನ್ನು ಹೊರತಂದಾಗ. ನಗರ ಪ್ರದೇಶಗಳಲ್ಲಿ ಖ್ಯಾತರಾಗಿದ್ದ ಗಾಯಕಿಯರ ಧ್ವನಿ ಮುದ್ರಿಕೆಗಳಿಗಿಂತ ಹೆಚ್ಚಾಗಿ ಕುಲ್ಸುಂ ಅವರ ಧ್ವನಿ ಮುದ್ರಿಕೆಗಳು ಮಾರಾಟವಾಗುತ್ತಿದ್ದವು. ಈಜಿಪ್ಟಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಹಾಡಿದ್ದ ಉಮ್ ಕುಲ್ಸುಂ ಎಲ್ಲರಿಗೂ ಪರಿಚಿತ ರದ್ದರು. ಹಾಗಾಗಿ ನಗರಕ್ಕೆ ಬಂದ ಗ್ರಾಮೀಣ ಜನರು ಧ್ವನಿಮುದ್ರಿಕೆಗಳ ಮೇಲೆ ಕುಲ್ಸುಂ ಅವರ ಚಿತ್ರ ನೋಡಿ, ಅವರ ಧ್ವನಿತಟ್ಟೆಗಳನ್ನು ಕೊಳ್ಳುತ್ತಿದ್ದರು. ೧೯೨೬ರಲ್ಲಿ ಓಡಿಯನ್ ರೆಕಾರ್ಡಿಂಗ್ ಕಂಪನಿ ಉಳಿದೆಲ್ಲ ಕಲಾವಿದರಿಗಿಂತ ಕುಲ್ಸುಂಗೆ ಹೆಚ್ಚಿನ ಸಂಭಾವನೆ ನೀಡುತ್ತಿತ್ತು.
ಕಲಾಪೋಷಣೆಯನ್ನು ವಸಾಹತುಶಾಹಿಗೆ ಒಂದು ಪ್ರತಿರೋಧವಾಗಿ ಪರಿಗಣಿಸುವ ಬೆಳವಣಿಗೆ ಈಜಿಪ್ಟಿನಲ್ಲಿ ಪ್ರಾರಂಭವಾಗಿತ್ತು. ಹಾಗಾಗಿ ಅಲ್ಲಿ ಕಲೆ ಎನ್ನುವುದು ಒಂದು ರಾಜಕೀಯ ಅಭಿವ್ಯಕ್ತಿ ಯಾಗಿತ್ತು. ಕುಲೀನ ವರ್ಗಗಳಿಂದ ಮೊದಲ್ಗೊಂಡು ದುಡಿಯುವ ವರ್ಗಗಳ ತನಕ ಎಲ್ಲರೂ ಒಂದು ಅಸಲೀ ಈಜಿಪ್ಷಿಯನ್ ಸಂಗೀತದ ಹುಡುಕಾಟ ದಲ್ಲಿದ್ದರು. ಪುರಾತನ ಅರೇಬಿಯನ್ ಮತ್ತು ಮುಸ್ಲಿಂ ಆಚರಣೆಗಳು ಸಾಂಸ್ಕೃತಿಕ ಅಭಿವೃದ್ಧಿಯ ಆಧಾರ ವಾದವು. ಅವುಗಳ ಮೌಲಿಕತೆಯನ್ನು ಒತ್ತಿ ಹೇಳ ಲಾಯಿತು ಈಜಿಪ್ಟ್ ರಾಷ್ಟ್ರೀಯ ಪ್ರಜ್ಞೆ ಮತ್ತು ಮುಸ್ಲಿಂ ಪ್ರಜ್ಞೆ ಎರಡನ್ನೂ ಬೆಸೆಯಲಾಯಿತು. ಉಮ್ ಕುಲ್ಸುಂ ಸಂಗೀತ ಕ್ಷೇತ್ರದಲ್ಲಿ ಇದರ ದನಿಯಾದರು. ’ಸಲೋ ಕ್ವಲ್ಬಿ’ ಎಂಬ ಅವರ ಪ್ರಖ್ಯಾತ ಹಾಡು ಪ್ರವಾದಿ ಮಹಮದರ ಸ್ತುತಿಯಾಗಿ ಆರಂಭವಾಗುತ್ತದೆ. ಅದರಲ್ಲಿ ಅವರು ಸೇರಿಸಿರುವ ಕೇವಲ ಆಶಿಸಿ, ಬಯಸುವುದರಿಂದ ಬೇಡಿಕೆಗಳು ಈಡೇರುವುದಿಲ್ಲ, ಹೋರಾಟದಿಂದಷ್ಟೇ ವಿಶ್ವವನ್ನು ಪಡೆಯಬಹುದು ಎಂಬ ಎರಡು ಸಾಲುಗಳು ಈಜಿಪ್ಟಿನ ರಾಷ್ಟ್ರೀಯ ತೆಯ, ಸ್ವಾತಂತ್ರ್ಯದ ಹಂಬಲದ ದನಿಯಾಯಿತು. ಎರಡನೆಯ ಮಹಾಯುದ್ಧದ ನಂತರ ಈಜಿಪ್ಟಿನ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ತೀವ್ರವಾದ ಹೋರಾಟ ನಡೆಸುತ್ತಿದ್ದಾಗ ಉಮ್ ಕುಲ್ಸುಂ ಅತ್ಯಂತ ಶಕ್ತಿಶಾಲಿ ಯಾಗಿ ಹಾಡುತ್ತಿದ್ದ ಈ ಸಾಲುಗಳು ಜನರನ್ನು ಬಡಿದೆಬ್ಬಿಸುತ್ತಿತ್ತು. ಅದು ಏಕಕಾಲಕ್ಕೆ ರಾಷ್ಟ್ರೀಯತೆ ಹಾಗೂ ಧಾರ್ಮಿಕತೆಯ ಅಭಿವ್ಯಕ್ತಿಯಾಗಿತ್ತು.
ಜನರ ಮನಸ್ಸಿನಲ್ಲಿ ಅಮೂರ್ತವಾಗಿ ಇದ್ದಿರ ಬಹುದಾದ ಭಾವನೆ ಮತ್ತು ಕಲ್ಪನೆಗಳಿಗೆ ತನ್ನ ಹಾಡುಗಳ ಮೂಲಕ ಒಂದು ಸ್ಪಷ್ಟ ರೂಪ ನೀಡಿದರು. ಜನರಿಗೆ ಕುಲ್ಸುಂ ಅವರ ಸಂಗೀತದಲ್ಲಿ ತಮ್ಮ ಅಸ್ಪಷ್ಟ ಕಲ್ಪನೆ ಸಾಕಾರವಾಗಿದೆ ಅನ್ನಿಸಿ ಅದರೊಂದಿಗೆ ತಾದಾತ್ಮ್ಯ ಸಾಧ್ಯವಾಯಿತು. ತಮ್ಮ ಸಾರ್ವಜನಿಕ ಬದುಕಿನಲ್ಲಿ ಮತ್ತು ತಮ್ಮ ಸಂಗೀತದಲ್ಲಿ ದೇಶೀಯತೆಗೆ ಒತ್ತುಕೊಟ್ಟರು. ಅವರೊಬ್ಬ ರಾಷ್ಟ್ರೀಯ ಐಕಾನ್ ಆಗಿ, ಒಂದು ಬಲವಾದ ರಾಜಕೀಯ ದನಿಯಾಗಿ ಹೊರಹೊಮ್ಮಿದ್ದಕ್ಕೆ ಅವರ ಅಸಾಧಾರಣ ಕಂಠ ಮತ್ತು ಸಂಗೀತಾತ್ಮಕತೆಯ ಜೊತೆಗೆ ಅವರ ಹಾಡುಗಳು ತೀವ್ರವಾಗಿದ್ದ ರಾಷ್ಟ್ರೀಯ ಚಳುವಳಿಯ ಸಂವಾದಕ್ಕೆ ಹೊಂದುತ್ತಿದ್ದವು. ೧೯೪೦ರಿಂದ ತಮ್ಮ ಸಂಗೀತ ಮತ್ತು ಹಾಡುಗಳ ಮೂಲಕ ಉಮ್ ಕುಲ್ಸುಂ ಜನರ ಭಾಷೆ, ಅವರ ಭಾವನೆಗಳು ಮತ್ತು ಸಂವೇದನೆಗಳನ್ನೇ ಅಭಿವ್ಯಕ್ತಿಸತೊಡಗಿದರು. ಅವರ ಯಾವುದೇ ಹಾಡು ಅಥವಾ ಅವರು ನಟಿಸಿದ ಸಿನಿಮಾದ ನಾಯಕಿಯರು ಯಾವುದೋ ಕನಸಿನ ರಮ್ಯಲೋಕಕ್ಕೆ ಸೇರಿದವರಾಗಿರಲಿಲ್ಲ. ಎಲ್ಲರೂ ಇಲ್ಲಿನ ಮಣ್ಣಿನ ವಾಸನೆಯನ್ನು ಹೊಂದಿದ್ದರು.
ಅವರ ಇಡೀ ಸಂಗೀತ ಒಂದು ಸಮಷ್ಟಿ ಪ್ರಜ್ಞೆಯ ಅಭಿವ್ಯಕ್ತಿಯಾಗಿತ್ತು. ೧೯೫೨ರಿಂದ ೬೦ರವರೆಗೆ ಅವರು ಹೆಚ್ಚಾಗಿ ಹಾಡಿದ್ದೆಲ್ಲಾ ರಾಷ್ಟ್ರಭಕ್ತಿಗೀತೆಗಳೇ. ೧೯೬೭ರಲ್ಲಿ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಈಜಿಪ್ಟ್ ಹೀನಾಯ ವಾದ ಸೋಲನ್ನು ಅನುಭವಿಸಿತು. ಆಗ ಇಡೀ ಅರಬ್ ಪ್ರಪಂಚದಲ್ಲಿ ಹಾಡಿ ಅದರಿಂದ ಬಂದ ೨,೫೩೦,೦೦೦ ಡಾಲರ್ ಮೊತ್ತದ ಹಣವನ್ನು ರಾಷ್ಟ್ರದ ಖಜಾನೆಗೆ ನೀಡಿದರು.
ತಮ್ಮ ಉಡುಗೆ ತೊಡುಗೆಗಳಲ್ಲಿಯೂ ಕುಲ್ಸುಂ ಈಜಿಪ್ಟ್‌ತನವನ್ನು ಅಭಿವ್ಯಕ್ತಿಸುತ್ತಿದ್ದರು. ತಮ್ಮ ಸಾಂಪ್ರದಾಯಿಕ ಈಜಿಪ್ಟಿನ ಉಡುಪಿನ ಘನತೆಗೆ ಧಕ್ಕೆ ಬಾರದಂತೆ ತಮ್ಮ ಕಾಲದ ಉಡುಪಿನ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಂಡರು. ಅವರ ಉಡುಪಿಗೆ ಉದ್ದವಾದ ತೋಳಿದ್ದು ಅದು ಹೆಕ್ಕತ್ತಿನ ತನಕ ಇರುತ್ತಿತ್ತು. ಈಜಿಪ್ಟಿನ ಸಾಂಪ್ರದಾಯಿಕ ಉಡುಗೆಯಾದ ಜಲ್ಲಬಿಯಾವನ್ನೇ ತೊಡುತ್ತಿದ್ದರು. ಕೂದಲನ್ನು ಮೇಲಕ್ಕೆ ಎತ್ತಿ ತುರುಬು ಕಟ್ಟುತ್ತಿದ್ದರು. ಅದು ದುಡಿಯುವ ವರ್ಗದ ಮಹಿಳೆಯರ ತುರುಬನ್ನು ಮತ್ತು ಕುಲ್ಸುಂ ಅವರ ಗತವನ್ನು ನೆನಪಿಸುತ್ತಿತ್ತು. ಬಲಗೈನಲ್ಲಿ ಒಂದು ಸುಂದರವಾದ ರೇಷ್ಮೆಯ ಕರವಸ್ತ್ರವನ್ನು ಹಿಡಿದಿರುತ್ತಿದ್ದರು. ಅದು ಅವರ ಗುರುತಾಗಿತ್ತು.
ಶಾವ್‌ಕಿಯವರ ಪದ್ಯಗಳನ್ನು ಧ್ವನಿಮುದ್ರಿಕೆಗಳಿಗೆ ಹಾಡುವ ಮೂಲಕ ಉಮ್ ಕುಲ್ಸುಂ ಜನಸಾಮಾನ್ಯ ರಿಗೆ ಕಾವ್ಯವನ್ನು ಪರಿಚಯಿಸಿ ಕಲಿಸಿದರು ಎಂದು ಅವರನ್ನು ಕೊಂಡಾಡುತ್ತಾರೆ. ಜನ ಮನೆಯಲ್ಲಿ, ಬೀದಿಯಲ್ಲಿ ಹೋಗುವಾಗ, ತೋಟದಲ್ಲಿ ಸುತ್ತಾಡು ವಾಗ, ಶಾಲೆಯಲ್ಲಿರುವಾಗ ಕುಲ್ಸುಂ ಅವರ ಹಾಡುಗಳನ್ನು ಸದಾ ಗುನುಗುತ್ತಿದ್ದರು. ನಾನು ಕಾಲೇಜಿನಲ್ಲಿದ್ದಾಗ ನಮ್ಮ ಕಾಲೇಜಿನ ದ್ವಾರಪಾಲಕನಿಗೆ ನಾನು ಸಂಗೀತಪ್ರೇಮಿ ಎಂದು ತಿಳಿದಿತ್ತು. ’ನೀನು ಉಮ್ ಕುಲ್ಸುಂ ಅವರ ಹೊಸ ಧ್ವನಿಮುದ್ರಿಕೆಯನ್ನು ಕೇಳಿದ್ದಿಯಾ’ ಎಂದು ನನ್ನನ್ನು ಕೇಳಿ, ಉತ್ಕೃಷ್ಟ ಸಾಹಿತ್ಯವಿರುವ ಆ ಹಾಡನ್ನು, ಕಾಲೇಜಿನ ಅನಕ್ಷರಸ್ಥ, ಅಶಿಕ್ಷಿತ ದ್ವಾರಪಾಲಕ ಸ್ವಲ್ಪವೂ ತಪ್ಪಿಲ್ಲದೆ ಹಾಡುತ್ತಿದ್ದ ಎಂದು ಖ್ಯಾತ ವಿಮರ್ಶಕರೊಬ್ಬರು ಹೇಳುತ್ತಾರೆ. ಈಜಿಪ್ಟಿನ ಉತ್ಕೃಷ್ಟ ಸಾಹಿತ್ಯವನ್ನು, ಭಾಷೆಯನ್ನು ಕುಲ್ಸುಂ ತಮ್ಮ ಸಂಗೀತದ ಮೂಲಕ ಜನರಿಗೆ ಪರಿಚಯಿಸಿ ಅದನ್ನು ಸವಿಯುವಂತೆ ಮಾಡಿದರು.
ನಿಧಾನವಾಗಿ ಕುಲ್ಸುಂ ಅತ್ಯಂತ ಪ್ರಭಾವಿ ವ್ಯಕ್ತಿ ಗಳಿಂದ ಮೊದಲುಗೊಂಡು ಹಳ್ಳಿಯ ಜನಸಾಮಾನ್ಯ ರ ತನಕ ಈಜಪ್ಟಿನ ಜನತೆಯ ಬದುಕಿನ ಭಾಗವಾ ದರು. ಪ್ರತಿ ಗುರುವಾರ ರೇಡಿಯೋದಲ್ಲಿ ಪ್ರಸಾರ ವಾಗುತ್ತಿದ್ದ ಕುಲ್ಸುಂ ಅವರ ಗಾಯನ ಕೇಳಲು ಜನ ಕಾತರರಾಗಿ ಕಾಯುತ್ತಿದ್ದರು. ಗುರುವಾರ ಸಂಜೆ ಈಜಿಪ್ಟಿನ ಬೀದಿಗಳು ಅಕ್ಷರಶಃ ನಿರ್ಜನವಾಗಿ ಇರುತ್ತಿದ್ದವು. ಎಲ್ಲರೂ ರೇಡಿಯೋದ ಮುಂದೆ ಇರುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.
೧೯೭೨ರವರೆಗೂ ಕುಲ್ಸುಂ ಹಾಡುತ್ತಿದ್ದರು. ನಂತರ ಆರೋಗ್ಯದ ಸಮಸ್ಯೆ ಉಲ್ಬಣಿಸಿ ೧೯೭೫ರಲ್ಲಿ ಮೂತ್ರ ಪಿಂಡದ ಸಮಸ್ಯೆಯಿಂದ ತೀರಿಕೊಂಡರು. ಅವರ ಅಂತ್ಯಸಂಸ್ಕಾರದಂದು ನಾಲ್ಕು ಮಿಲಿಯನ್ ಜನ ಕೈರೋದಲ್ಲಿ ಸೇರಿದ್ದರು. ಈಜಿಪ್ಟಿನ ಜನಪ್ರಿಯ ನಾಯಕ ನಿಸಾರ್ ಸತ್ತಾಗಲೂ ಈ ಸಂಖ್ಯೆಯಲ್ಲಿ ಜನ ಸೇರಿರಲಿಲ್ಲ. ಪುರುಷರ ಪಾರಮ್ಯವಿರುವ ನಾಡಿನಲ್ಲಿ ಉಮ್ ಕುಲ್ಸುಂ ಅವರ ಹೆಣವಿದ್ದ ಶವಸಂಪುಟವನ್ನು ಸರ್ಕಾರಿ ಅಧಿಕಾರಿಗಳ ಕೈಯಿಂದ ತೆಗೆದುಕೊಂಡು ದುಃಖತಪ್ತ ಜನ ಕೈರೋದ ಬೀದಿ ಬೀದಿಗಳಲ್ಲಿ ಅದನ್ನು ಹೆಗಲು ಬದಲಾಯಿಸಿಕೊಂಡು ಮೆರವಣಿಗೆ ಹೋದರು. ಇದು ಇತಿಹಾಸದಲ್ಲಿ ಎಂದೂ ಕಂಡರಿಯದ್ದು. ಉಮ್ ಕುಲ್ಸುಂ ಈಜಿಪ್ಟಿನ ಜನರ ನರನಾಡಿಗಳಲ್ಲಿ ಇಂದೂ ಇದ್ದಾರೆ.