ಡಾ ಎನ್ ಗಾಯತ್ರಿಯವರು ಅನುವಾದಿಸಿರುವ ವೀಣಾ ಮಜುಂದಾರ್ ಅವರ ಆತ್ಮಕಥಾನಕ ಮೆಮೊರಿಸ ಆಫ್ ಅ ರೋಲಿಂಗ್ ಸ್ಟೋನ್ ಕೃತಿಯ ಕನ್ನಡ ಅನುವಾದ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ಈ ತಿಂಗಳ ಹೊಸತುವಿನಲ್ಲಿ ಪ್ರಕಟವಾಗಿದೆ.
ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ
ವೀಣಾ ಮಜುಂದಾರ್ ಅವರ ಆತ್ಮಕಥೆ
ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ ಆಗಿದ್ದ ವೀಣಾ ಮಜುಂದಾರ್ ಅವರ ಆತ್ಮಕಥಾನಕ ಮೆಮೊರೀಸ್ ಆಫ್ ಆ ರೋಲಿಂಗ್ ಸ್ಟೋನ್. ಈ ಅಮೂಲ್ಯ ಕೃತಿಯನ್ನು ಡಾ ಎನ್ ಗಾಯತ್ರಿಯವರು ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಿಯಾ ಮಾಧ್ಯಮ ಪ್ರೈ.ಲಿ. ಸಂಸ್ಥೆ ಪ್ರಕಟಿಸಿದೆ. ಇದು ಕನ್ನಡ ಸಾರಸ್ವತಲೋಕಕ್ಕೆ, ಮಹಿಳಾ ಅಧ್ಯಯನಕ್ಕೆ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಅಧ್ಯಯನದ ಶಿಸ್ತಿಗೆ ಒಂದು ಬಹು ಮೌಲಿಕವಾದ ಸೇರ್ಪಡೆ ಅಂದರೆ ಉತ್ಪ್ರೇಕ್ಷೆಯಂತು ಖಂಡಿತಾ ಅಲ್ಲ. ತುಂಬಾ ಗಂಭೀರವಾದ ವಿಚಾರಗಳು, ಚರ್ಚೆಗಳನ್ನು ಹೊಂದಿರುವ ಈ ಪುಸ್ತಕದ ಓದನ್ನು ಸುಲಲಿತವಾಗಿ ಓದಿಸಿಕೊಳ್ಳುವ ಅನುವಾದ ಸುಲಭವಾಗಿಸಿದೆ. ಸ್ವತಃ ಮಹಿಳಾ ಚಳುವಳಿ ಮತ್ತು ಮಹಿಳಾ ಅಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಗಾಯತ್ರಿ ಇದರ ಅನುವಾದಕಿ ಆಗಿರುವುದು ಇದನ್ನು ಸಾಧ್ಯ ಮಾಡಿದೆ.
ಈ ಆತ್ಮಕಥಾನಕದ ಆರು ಅಧ್ಯಾಯಗಳು ವೀಣಾ ಅವರ ಬದುಕಿನ ವಿಭಿನ್ನ ಹಂತಗಳನ್ನು, ಅವರ ಬದುಕನ್ನೇ ಬದಲಿಸಿದ ಪಲ್ಲಟಗಳನ್ನು ದಾಖಲಿಸುತ್ತದೆ. ಹಾಗೆಯೇ ಆ ಕಾಲಘಟ್ಟದಲ್ಲಿ ಆದ ಅತ್ಯಂತ ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಅತ್ಯಂತ ಸೂಕ್ಷ್ಮ ಹಾಗೂ ಮಾನವೀಯ ಸ್ಪರ್ಶದೊಡನೆ ದಾಖಲಿಸುತ್ತವೆ. ಭಾರತದಲ್ಲಿ ಮಹಿಳಾ ಚಳುವಳಿಯ ಆರಂಭ, ಹಾಗೆಯೇ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನ ಎಂಬ ಶಿಸ್ತು ಪ್ರಾರಂಭವಾದದ್ದು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಶಿಕ್ಷಣವನ್ನು ಸಾಮಾಜಿಕ ಬದಲಾವಣೆಯ ಮಾಧ್ಯಮವೆಂದು ಭಾವಿಸಿದ್ದು, ಅದರಲ್ಲಿ ಲಿಂಗಸಮಾನತೆ ಎಂಬ ಬಹುಮುಖ್ಯ ಪ್ರಜಾಸತ್ತಾತ್ಮಕ ಮೌಲ್ಯವನ್ನು ಸೇರಿಸಲು ಬಯಸಿದ್ದು ಮತ್ತು ಆ ಮಹತ್ಕಾರ್ಯದಲ್ಲಿ ವೀಣಾ ಹಾಗೂ ಉಳಿದ ಸಮಾನಮನಸ್ಕರ ಅಗಾಧ ಪಾತ್ರ; ಆ ಸಂದರ್ಭದಲ್ಲಿ ಅವರೆಲ್ಲರೂ ಎದುರಿಸಿದ ಉಬ್ಬರವಿಳಿತ ಇವೆಲ್ಲವನ್ನೂ ಚಾಚೂ ತಪ್ಪದೆ ದಾಖಲಿಸುವ ಒಂದು ಅಪೂರ್ವ ಚಾರಿತ್ರಿಕ ದಾಖಲೆಯೂ ಇದಾಗಿದೆ. ಇದರ ಜೊತೆಜೊತೆಗೇ ವೀಣಾ ಅವರ ವೈಯಕ್ತಿಕ, ಕೌಟುಂಬಿಕ ಬದುಕಿನ ಏರಿಳಿತಗಳು, ಭಾವನಾತ್ಮಕ ತಳಮಳಗಳೂ ದಾಖಲಾಗಿವೆ. ಮಹಾದೇವಿ ಅಕ್ಕನಂತೆ ಕೌಟುಂಬಿಕ ಬದುಕಿಗೆ ಸಂಪೂರ್ಣವಾಗಿ ಬೆನ್ನು ತಿರುಗಿಸಿ, ವಿಮೋಚನೆ ಸಾಧಿಸಿಕೊಳ್ಳುವ ಮಾದರಿ ವೀಣಾಳದ್ದಲ್ಲ. ಲೋಕದ ಮುಕ್ಕಾಲು ಮೂರು ಪಾಲು ಹೆಣ್ಣುಮಕ್ಕಳಂತೆ ಎಲ್ಲ ಸಂಬಂಧಗಳು ಮತ್ತು ಕೌಟುಂಬಿಕ ಜಂಜಾಟಗಳ ನಡುವೆಯೇ ಸ್ವಾತಂತ್ರ್ಯ, ಸಮಾನತೆಯನ್ನು ಪಡೆಯಲು ಹೋರಾಡುವ ವೀಣಾಳ ಮಾದರಿ ನಮ್ಮಂಥ ಬಹುಪಾಲು ಸಾಮಾನ್ಯ ಹೆಣ್ಣುಜೀವಗಳಿಗೆ ಆಪ್ತವಾಗುತ್ತದೆ.
ಈ ಆತ್ಮಕಥೆಯ ಓದು ಹಲವು ಕಾರಣಗಳಿಗೆ ತುಂಬಾ ಮುಖ್ಯವಾಗುತ್ತದೆ.
1. ೧೯೨೭ರಲ್ಲಿ ಬಂಗಾಲದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ವೀಣಾ ಮಜುಂದಾರ್ ಭಾರತದ ಸ್ವಾತಂತ್ರಪೂರ್ವ, ಸ್ವಾತಂತ್ರೋತ್ತರ ಮತ್ತು ೨೧ನೇ ಶತಮಾನದಲ್ಲಿನ ಬಹುದೊಡ್ಡ ಪಲ್ಲಟಗಳಿಗೆ ಮತ್ತು ಆಗುಹೋಗುಗಳಿಗೆ ಸಾಕ್ಷಿಯಾಗಿದ್ದವರು. ಅವುಗಳಲ್ಲಿ ಹಲವು ವಿದ್ಯಮಾನಗಳ ಭಾಗವಾಗಿ ಕಾರ್ಯನಿರ್ವಹಿಸುತ್ತಾ ಅತ್ಯಂತ ಸಂವೇದನಾಶೀಲತೆಯಿಂದ ಸ್ಪಂದಿಸಿದವರು. ಭಾರತದ ಎರಡು ಪ್ರಮುಖ ಮಹಿಳಾ ಚಳುವಳಿಯ ಅಲೆಗಳಿಗೂ ಅತ್ಯಂತ ಮೌಲಿಕ ಕೊಡುಗೆ ನೀಡಿದವರು. ತಮ್ಮ ವೃತ್ತಿಬದುಕನ್ನು ಒಬ್ಬ ಸಮಾಜಶಾಸ್ತ್ರದ ಅಧ್ಯಾಪಕಿಯಾಗಿ ಆರಂಭಿಸಿದರು. ಆದರೆ ಸ್ವತಃ ಅವರೊಳಗಿದ್ದ ಮಾನವಪ್ರೇಮ ಮತ್ತು ಸಮಾನತೆಯ ತುಡಿತದಿಂದಾಗಿ ಅವರ ಅಧ್ಯಯನ ಸಂಪೂರ್ಣವಾಗಿ ಅಂತರಶಿಸ್ತೀಯವಾಯಿತು. ಎಲ್ಲ ಶಿಸ್ತುಗಳ ಸೀಮಾರೇಖೆಗಳನ್ನು ಅಳಿಸಿಹಾಕಿತು. ಭಾರತೀಯ ಮಹಿಳೆಯ ಸ್ಥಿತಿಗತಿ ಮತ್ತು ಸಮಾನತೆಯೆಡೆಗೆ ಎನ್ನುವ ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಸಲ್ಲುವಂತಹ ವರದಿಯನ್ನು ಸಿದ್ಧಪಡಿಸಲು ಅವರಿಗೆ ಸಾಧ್ಯವಾಯಿತು. ಎರಡು ವರದಿಗಳಲ್ಲಿನ ಅಧ್ಯಯನದಲ್ಲಿನ ಫಲಿತಗಳು ಇಂದಿಗೂ, ಈ ಕ್ಷಣಕ್ಕೂ ಭಾರತಕ್ಕೆ ಪ್ರಸ್ತುತ. ೧೯೭೫ರ ದಶಕದಲ್ಲಿ ಈ ಎರಡು ವರದಿಗಳು ಇಡೀ ವಿಶ್ವಕ್ಕೆ ಆಹಾ ಎನ್ನುವಂತಹ ಒಂದು ಮಾದರಿ ಒದಗಿಸಿದ್ದು ಒಂದು ಅಪೂರ್ವ ಐತಿಹಾಸಿಕ ಕ್ಷಣ. ಮಹಿಳಾ ಚಳುವಳಿ ಮತ್ತು ಮಾನವ ಹಕ್ಕುಗಳ ಚಳುವಳಿಯಲ್ಲಿ ಸಕ್ರಿಯರಾಗಿದ್ದ ವಿಶ್ವದ ಹಲವು ಶ್ರೇಷ್ಠ ಚಿಂತಕರು ಈ ಅಧ್ಯಯನದಿಂದ ಪ್ರಭಾವಿತರಾದರು. ಇಂತಹ ಅದ್ಭುತ ದಾಖಲೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಎದುರಿಸಿದ ಕಷ್ಟಗಳು, ಪಡೆದ ಒಳನೋಟಗಳು ಈ ಆತ್ಮಕಥಾನಕದಲ್ಲಿ ದಾಖಲಾಗಿವೆ. ಭಾರತದ ಮಹಿಳಾ ಚಳುವಳಿ ಕೇವಲ ನಗರಕೇಂದ್ರಿತ ಎನ್ನುವ ಮಾತಿಗೆ ವ್ಯತಿರಿಕ್ತವಾಗಿ ವೀಣಾ ಅವರ ಅಧ್ಯಯನ. ಅದು ಗ್ರಾಮೀಣ, ಬುಡಕಟ್ಟು, ಅನಕ್ಷರಸ್ಥ, ಬಡ, ಕಾರ್ಮಿಕ ಮಹಿಳೆಯರ ಬದುಕಿನ ಅತ್ಯಂತ ತಳಸ್ಪರ್ಶಿ ಅಧ್ಯಯನವಾಗಿತ್ತು. ಭಾರತದಲ್ಲಿ ಸಂಘಟಿತ – ಅಸಂಘಟಿತ ವಲಯದ, ನಗರ ಮತ್ತು ಗ್ರಾಮೀಣ ಹಾಗೂ ಸುಶಿಕ್ಷಿತ ಮತ್ತು ಅನಕ್ಷರಸ್ಥ ಮಹಿಳೆಯರ ಬದುಕಿನಲ್ಲಿ ಅಗಾಧ ಅಂತರವಿದೆ ಎನ್ನುವುದನ್ನು ಈ ಅಧ್ಯಯನ ಸ್ಪಷ್ಟವಾಗಿ ತೋರಿಸಿತ್ತು. ಗ್ರಾಮೀಣ, ಅಸಂಘಟಿತ, ಅನಕ್ಷರಸ್ಥ ಮಹಿಳೆಯರ ಚಿಂತನೆ ಮತ್ತು ಜೀವನಕ್ರಮದಲ್ಲಿ ಬಹುಸಂಖ್ಯಾತ ಭಾರತದ ಬುದ್ಧಿ ಮತ್ತು ವಿವೇಕವಿದೆ ಎನ್ನುವುದು ವೀಣಾ ಅವರಿಗೆ ಬಕುರ ಮತ್ತು ಮೇದಿನೀಪುರದ ಗ್ರಾಮೀಣ ಮಹಿಳೆಯರೊಂದಿಗೆ ಕೆಲಸಮಾಡುವಾಗ ಅರಿವಾಗಿತ್ತು. ಆ ವಿವೇಕ ಅವರ ಇಡೀ ಅಧ್ಯಯನದ ದಾರಿದೀಪವಾಯಿತು. ನಮ್ಮ ಇಡೀ ರಾಜಕೀಯ ಮತ್ತು ಆರ್ಥಿಕ ಪಾಲಿಸಿಗಳು ಕೇಂದ್ರದಿಂದ ಬುಡಕ್ಕೆ ಚಲಿಸುವ ಬದಲು ಬುಡದಿಂದ ಮೇಲಕ್ಕೆ ಚಲಿಸಬೇಕು. ಆಡಳಿತ ಸಂಪೂರ್ಣ ವಿಕೇಂದ್ರೀಕರಣಗೊಳ್ಳಬೇಕು ಎನ್ನುವುದನ್ನು ೧೯೭೫ರ ದಶಕದಲ್ಲೇ ವೀಣಾ ಈ ವರದಿಗಳಲ್ಲಿ ಗಟ್ಟಿಯಾಗಿ ತೋರಿಸಿದರು. ಈ ತಳಸ್ಪರ್ಶಿ ಅಧ್ಯಯನದ ಫಲಶ್ರುತಿ ನಮ್ಮ ರಾಜಕೀಯ, ಸಮಾಜಿಕ ಹಾಗೂ ಆರ್ಥಿಕ ಪಾಲಿಸಿಗಳಲ್ಲಿ ಪ್ರತಿಫಲಿತವಾಗಬೇಕಾದ ತುರ್ತನ್ನು ಕೂಡ ಅವರು ಮನಗಾಣಿಸಲು ಪ್ರಯತ್ನಿಸಿದರು.
2. ಇದೊಂದು ಅಪರೂಪದ ಅಧ್ಯಯನ. ಒಬ್ಬ ಅಕಡೆಮೀಷಿಯನ್ ತನ್ನ ಅಧ್ಯಯನದ ಪ್ರಕ್ರಿಯೆಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಜನರೊಂದಿಗೆ ಬೆರೆಯುತ್ತಾ ಹೋಗುತ್ತಾರೆ. ಅಲ್ಲಿ ಅವರಿಗಾಗುವ ಜೀವನಾನುಭವ ಅವರ ಅಧ್ಯಯನದ ಕಾಣ್ಕೆ ಮತ್ತು ದಿಕ್ಕನ್ನು ಬದಲಾಯಿಸುತ್ತದೆ. ಮತ್ತೆ ಆ ಕಾಣ್ಕೆ ಅವರ ಚಳುವಳಿಯ ಕಾರ್ಯಚಟುವಟಿಕೆಗಳನ್ನು ರೂಪಿಸುವಲ್ಲಿ ಸಾಕಾರವಾಗುತ್ತವೆ. ಇದು ತೀರಾ ಅಪರೂಪ. ಈ ಪ್ರಕ್ರಿಯೆಯಲ್ಲಿ ಅಗಾಧವಾಗಿ ಬೆಳೆಯುವ ವೀಣಾರ ಅನುಭವದ ಜೊತೆಗೆ ಓದುಗ ಕೂಡ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತಾರೆ. ಇದೊಂದು ಅಪೂರ್ವ ಅನುಭವ.
3. ಸಮಾನತೆ ಎಂದರೇನು ಎನ್ನುವ ಬಹುಮುಖ್ಯ ಪ್ರಶ್ನೆಯನ್ನು ವೀಣಾ ಕೇಳಿಕೊಳ್ಳುತ್ತಾರೆ. ಸಮಾನತೆ ಎಂದರೆ, ಘನತೆ ಮತ್ತು ಸ್ವಾಯತ್ತತೆ. ನ್ಯಾಯ ಎನ್ನುವುದು ಇದ್ದಾಗ ಮಾತ್ರ ಇವೆರಡು ಸಾಧ್ಯ. ಸಮಾನತೆಯನ್ನು ಸಾಧ್ಯವಾಗಿಸುವ ಇಂತಹ ನ್ಯಾಯ ದೊರಕುವುದಕ್ಕೆ ಪ್ರಜಾಪ್ರಭುತ್ವ ಅತ್ಯವಶ್ಯಕವಾದ ರಾಜಕೀಯ ಸಿದ್ಧಾಂತ. ಹಾಗಾಗಿ ಪ್ರಜಾಪ್ರಭುತ್ವ ಅನ್ನುವುದು ಒಂದು ರಾಜಕೀಯ ಅನಿವಾಂii. ವೀಣಾ ಅವರ ಈ ಕಾಣ್ಕೆ ಹಿಂದೆಂದಿಗಿಂತಲೂ ಪ್ರಜಾಪ್ರಭುತ್ವ ತೀವ್ರ ಅಪಾಯದಲ್ಲಿರುವ ಈ ವಿಷಮ ಕಾಲದಲ್ಲಿ ತುಂಬಾ ಮುಖ್ಯವಾಗುತ್ತದೆ.
4. ಭಾರತದಲ್ಲಿ ಮಾನವಿಕ ಶಾಸ್ತ್ರಗಳ ಅಧ್ಯಯನ ಹಾಗೂ ಸಂಶೋಧನೆಯ ದಿಕ್ಕು, ಗುರಿ ಏನಾಗಿರಬೇಕು ಎನ್ನುವುದನ್ನು ಅತ್ಯಂತ ದೂರದರ್ಶಿತ್ವದೊಡನೆ, ಆಳವಾದ ಒಳನೋಟಗಳೊಡನೆ ಯುಜಿಸಿಗೆ ಸ್ಪಷ್ಟವಾಗಿ ತಿಳಿಸಿಕೊಟ್ಟು ಅದರ ಕರಡನ್ನು ಸಿದ್ಧಪಡಿಸಿದವರು ವೀಣಾ. ಪ್ರಜಾಪ್ರಭುತ್ವಕ್ಕೆ ಮತ್ತು ಸಮಾನತೆಗೆ ಅವಶ್ಯಕವಾಗಿರುವ ಎಲ್ಲಾ ಧನಾತ್ಮಕ ಮೌಲ್ಯಗಳು ಶಿಕ್ಷಣದ ಮೂಲಕ ಎಳೆಯ ಮನಸ್ಸುಗಳ ಆಳಕ್ಕೆ ಇಳಿಯಬೇಕು. ಅದು ಬಹುಮುಖ್ಯವಾದ ಕ್ಷೇತ್ರ ಎನ್ನುವುದನ್ನು ಮನಗಾಣಿಸಲು ಅವರು ಪ್ರಯತ್ನಿಸಿದರು.
5. ವರದಕ್ಷಿಣೆ ವಿರೋಧ, ಪಂಚಾಯತಿ ಚುನಾವಣೆಗಳಲ್ಲಿ ಮೀಸಲಾತಿ, ಭ್ರೂಣಲಿಂಗ ಪತ್ತೆ ವಿರುದ್ಧದ ಕಾನೂನು, ವಿಶ್ವವಿದ್ಯಾನಿಲಯ ಶಿಕ್ಷಣದ ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆ. ಮಕ್ಕಳು ಮತ್ತು ತಾಯ್ತನದ ಸುರಕ್ಷೆಗೆ ಸಂಬಂಧಿಸಿದ ಸ್ಕೀಮುಗಳು, ರಾಷ್ಟ್ರೀಯ ಮಹಿಳಾ ಆಯೋಗದ ಸ್ಥಾಪನೆ ಮುಂತಾದವು ಭಾರತದಲ್ಲಿ ಮಹಿಳಾ ಚಳುವಳಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಿರುವ ವಿಚಾರಗಳು. ಇವುಗಳನ್ನು ಗುರುತಿಸಿ, ಮುನ್ನೆಲೆಗೆ ತಂದು ಚಳುವಳಿಯ ಭಾಗವನ್ನಾಗಿ ಮಾಡಿದ ಕೀರ್ತಿ ವೀಣಾ ಮತ್ತವರ ಸಮಾನಮನಸ್ಕ ಗೆಳತಿಯರಿಗೆ ಸೇರಬೇಕು.
ಸಾಮಾನ್ಯವಾಗಿ ಮಹಿಳೆಯರ ಆತ್ಮಕಥೆಗಳಿಗೆ ಉಳಿದವರ ಆತ್ಮಕಥೆಗಳಿಗಿಂತ ಭಿನ್ನವಾದ ಒಂದು ಆಯಾಮವಿರುತ್ತದೆ. ಅವರ ಹಾಡುಗಳು ಭಿನ್ನ. ಇದು ೨೦೦೦ ವರ್ಷಗಳ ಹಿಂದಿನ ಬೌದ್ಧಮಹಿಳೆಯರ ತೇರೀಗಾಥಾದಿಂದ ಮೊದಲ್ಗೊಂಡು ಕಳೆದ ದಶಕದಲ್ಲಿ ಪ್ರಕಟವಾದ ವೀಣಾ ಮಜುಂದಾರ್ ಅವರ ಆತ್ಮಕಥೆ ಉರುಳುವ ಕಲ್ಲಿನ ನೆನಪಿನ ಸುರುಳಿಯ ತನಕ ಹೆಚ್ಚಿನ ಮಹಿಳಾ ಆತ್ಮಕಥೆಗಳಿಗೆಲ್ಲವೂ ಅನ್ವಯಿಸುತ್ತದೆ. ವೀಣಾ ಅವರ ಆತ್ಮಕಥೆಯಲ್ಲಿಯೂ ಈ ಅಂಶಗಳು ಕಾಣುತ್ತವೆ. ಅವರ ಆತ್ಮಕಥಾನಕದಲ್ಲಿ ದೈನಂದಿನ ಬದುಕಿನ ಎಳೆಗಳು ಸೇರಿಕೊಳ್ಳುವ ಕ್ರಮ ಮತ್ತು ಆ ಮೂಲಕ ಅವರು ತಮ್ಮ ವೃತ್ತಿಬದುಕು, ತಮ್ಮ ಅಧ್ಯಯನದ ಶಿಸ್ತು ಇವುಗಳನ್ನು ನೋಡುವ ಮತ್ತು ಗ್ರಹಿಸುವ ಕ್ರಮದಲ್ಲಿಯೇ ಒಂದಿಷ್ಟು ಬದಲಾವಣೆಗಳಿರುತ್ತವೆ. ಹಾಗಾಗಿ ಅವರ ಕಾಣ್ಕೆಗಳು ವಿಶಿಷ್ಟವೂ ಆಗುತ್ತವೆ. ತಮ್ಮಂತೆಯೇ ದಿನದಿನದ ವಾಸ್ತವದೊಡನೆ ಗುದ್ದಾಡುವ ಮಹಿಳೆಯರ ಚಿಂತನಾಕ್ರಮವನ್ನು ಅವರು ದಾಖಲಿಸುತ್ತಾರೆ. ಚಳುವಳಿಗಳಲ್ಲಿ ಭಾಗಿಯಾಗುವ ಹೆಂಗಸರೊಳಗೆ ಸುಪ್ತವಾಗಿ ಅವ್ಯಕ್ತವಾಗಿ ಕಾಡುವ ಕೌಟುಂಬಿಕ ಮತ್ತು ಮಾನವ ಸಂಬಂಧಗಳನ್ನು ಕಳೆದುಕೊಳ್ಳುವ ಹೆದರಿಕೆಯನ್ನು ದಾಖಲಿಸುತ್ತಾರೆ. ಹೊರಗೆ ದುಡಿಯುವುದೇ ಅಲ್ಲದೆ ಮನೆಯೊಳಗಿನ ಎಲ್ಲಾ ಹೊಣೆಗಾರಿಕೆಯನ್ನೂ ಹೊತ್ತು, ಆನಂತರವೂ ಪಾಪಪ್ರಜ್ಞೆಯಲ್ಲಿ ತೊಳಲಾಡುವ ಹೆಂಗಸರ ಭಾವನೆಗಳನ್ನು ದಾಖಲಿಸುತ್ತಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಟ್ಟುಪಾಡುಗಳಿಗೆ ಅಂಟಿಕೊಂಡು ಬೆಳೆಯುವ ಹೆಣ್ಣು ಮನಸ್ಸುಗಳು ಅವುಗಳನ್ನು ವಿರೋಧಿಸಿಕೊಂಡು ಕಳಚಿಕೊಳ್ಳುವ ಪ್ರಕ್ರಿಯೆಯಲ್ಲಿ ಅನುಭವಿಸುವ ತೊಳಲಾಟಗಳನ್ನು ದಾಖಲಿಸುತ್ತಾರೆ.
ಹೆಚ್ಚಿನ ಆತ್ಮಕಥೆಗಳು ಸಂಪೂರ್ಣವಾಗಿ ಸ್ವಕೇಂದ್ರಿತವಾಗಿಬಿಡುತ್ತವೆ.
ಆತ್ಮಕಥೆ ಎಂದರೆ ತಮ್ಮ ತುತ್ತೂರಿಯನ್ನು ತಾವೇ ಊದಿಕೊಳ್ಳುವುದು ಎನ್ನುವ ಗಂಭೀರವಾದ ಟೀಕೆಯಿದೆ. ಆದರೆ ವೀಣಾ ಅವರ ಆತ್ಮಕಥೆ ಹಾಗೆ ಆಗಿಲ್ಲ ಎನ್ನುವುದು ತುಂಬಾ ಗಮನಾರ್ಹ. ಅದು ಏಕಕಾಲಕ್ಕೆ ನಿರ್ದಿಷ್ಟ ಕಾಲಘಟ್ಟಗಳ, ಆ ಕಾಲಘಟ್ಟಗಳಲ್ಲಿ ಜೀವಿಸುವ ವಿಭಿನ್ನ ಹಿನ್ನೆಲೆಯ ಮಹಿಳೆಯರ; ಅವರ ವಿಭಿನ್ನ ಅನುಭವ ವಿವೇಕಗಳ, ಪ್ರಭುತ್ವ ಮತ್ತು ಸಾರಸ್ವತ ಲೋಕಗಳ ಕೊಡುಕೊಳೆಗಳ, ಸಾರಸ್ವತ ಲೋಕವನ್ನು ನಿಯಂತ್ರಿಸಲು ಪ್ರಯತ್ನಿಸುವ ಪ್ರಭುತ್ವ ಮತ್ತು ಪ್ರಭುತ್ವದ ನಿಯಂತ್ರಣವನ್ನು ತನ್ನದೇ ಆದ ರೀತಿಯಲ್ಲಿ ದಾಟಿಕೊಂಡು ತನ್ನ ನೈತಿಕತೆಯನ್ನು ಉಳಿಸಿಕೊಳ್ಳುವ ಸಾರಸ್ವತಲೋಕದ ಕಥೆಯೂ ಆಗಿದೆ. ತನ್ನೊಂದಿಗೆ ಕ್ರಿಯಾಶೀಲರಾದ ಎಲ್ಲಾ ಮಹಿಳೆಯರ ವ್ಯಕ್ತಿತ್ವವನ್ನೂ ವೀಣಾ ಕಣ್ಣಿಗೆ ಕಟ್ಟುವಂತೆ ಅಷ್ಟೇ ಅಲ್ಲ ಬುದ್ಧಿಗೆ ತಟ್ಟುವಂತೆ ಚಿತ್ರಿಸುತ್ತಾರೆ. ಲೋತಿಕಾದಿ, ಫುಲರೇಣುದಿ, ಕುಮುದ್, ಊರ್ಮಿಳಾ ಹಕ್ಸರ್, ಬಂಕುರಾ ಮತ್ತು ಮೇದಿನೀಪುರದ ರೈತಾಪಿ ಹೆಣ್ಣುಮಕ್ಕಳು, ತನ್ನ ಮಕ್ಕಳು, ಪತಿ ಶಂಕರ್, ಪ್ರೊ ನೂರುಲ್ ಹಸನ್, ಜೆ ಪಿ ನಾಯಕ್, ತನ್ನ ವಿದೇಶೀ ಗೆಳತಿಯರು, ಹೀಗೆ ಯಾರ ವ್ಯಕ್ತಿತ್ವದ ವಿಶಿಷ್ಟತೆಯ ಮೆರಗು ಮರೆಯಾಗದಂತೆ ಕಟ್ಟಿಕೊಡುತ್ತಾರೆ. ಅದೇ ರೀತಿಯಲ್ಲಿ ವ್ಯಕ್ತಿಗಳ ಜೊತೆಯಲ್ಲಿ ತನಗಿದ್ದ ಭಿನ್ನಾಭಿಪ್ರಾಯವನ್ನೂ ಮರೆಮಾಚದೆ ಆದರೆ ಕಹಿ ದ್ವೇಷಗಳಿಲ್ಲದೆ ದಾಖಲಿಸುತ್ತಾ ಹೋಗುತ್ತಾರೆ. ಗ್ರಾಮೀಣ ಮಹಿಳೆಯರೊಡನೆ ಕೆಲಸ ಮಾಡುತ್ತಾ ತಮಗೆ ದೊರೆತ ಬದುಕಿನ ಪಾಠಗಳು, ಟುವರ್ಡ್ಸ್ ಈಕ್ವಾಲಿಟಿ ವರದಿಯನ್ನು ತಯಾರಿಸುವಾಗ ಅದನ್ನು ಸಾಧ್ಯವಾಗಿಸಿದ ಹೆಣ್ಣುಮಕ್ಕಳ ಸಾಮೂಹಿಕ ಶ್ರಮ, ಮತ್ತು ಮಹಿಳೆಯರ ಜೀವನಾನುಭವದಲ್ಲಿ ನೆಲೆನಿಂತ ಹೆಂಗಸರನ್ನು ಕುರಿತ ವೈಜ್ಞಾನಿಕ ಸಂಶೋಧನೆಗೆ ನಾಂದಿ ಹಾಡಿದ ಸೆಂಟರ್ ಫಾರ್ ವಿಮೆನ್ಸ್ ಡೆವಲಪ್‌ಮೆಂಟ್ ಸ್ಟಡೀಸ್ ಆರಂಭ ಇವೆಲ್ಲ ಘಟನೆಗಳು ನಮ್ಮ ಮುಂದೆ ಬೇರೊಂದು ಬೌದ್ಧಿಕ ಮತ್ತು ಭಾವನಾತ್ಮಕ ಲೋಕವನ್ನು ತೆರೆದಿಡುತ್ತದೆ.
ಈ ಆತ್ಮಕಥೆಯನ್ನು ಓದುತ್ತಾ ನಾನು ಬೆಳೆದೆ ಹಾಗೂ ಬದಲಾದೆ.
ಶೈಲಜ
೧೮/೦೬/೨೦೨೩
ಮೈಸೂರು