ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು

[ಇದು ಪ್ರಭಾತ್ ಪಟ್ನಾಯಕ್ ಮಾಡಿದ ಒಂದು ಭಾಷಣದ ಅನುವಾದ. ಎಲ್ಲಿ ಪ್ರಕಟವಾಗಿದೆ ಅನ್ನುವುದು ನೆನಪಿಲ್ಲ.]

ಸ್ನೇಹಿತರೇ ಹಾಗೂ ಕಾಮ್ರೇಡುಗಳೇ,

ಜಗತ್ತು ಹಾಗೂ ಭಾರತ ಇಂದು ಕೋವಿಡ್-೧೯ ದಾಳಿಗೆ ಸಿಲುಕಿದೆ. ಕೋವಿಡ್-೧೯ ಒಂದು ವಿಚಿತ್ರವಾದ ವೈರಾಣು. ಅದು ತೀವ್ರವಾಗಿ ಹರಡುತ್ತದೆ. ಅದು ಬೇಧಭಾವ ಮಾಡುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಶ್ರೀಮಂತರಾಗಿರಿ, ಯಾವ ಧರ್ಮದವರಾಗಿರಿ ಇದು ಬರಬಹುದು. ಆ ಅರ್ಥದಲ್ಲಿ ಇದು ತಾರತಮ್ಯವಿಲ್ಲದ ವೈರಾಣು. ಇಂತಹ ಒಂದು ವೈರಾಣುವನ್ನು ನಾವು ಕಳೆದ ಒಂದು ಶತಮಾನದಲ್ಲಿ ಕಂಡಿರಲಿಲ್ಲ. ೧೯೧೮ರಲ್ಲಿ ನಮ್ಮನ್ನು ಕಾಡಿದ್ದ ಇನ್‌ಫ್ಲ್ಲುಯೆನ್‌ಝಾ ಇಂತಹ ಒಂದು ವೈರಾಣು. ಅದಾದ ಮೇಲೆ ಇದೇ ಅತ್ಯಂತ ಬೃಹತ್ ವೈರಾಣು ದಾಳಿ. ಈ ವೈರಾಣುವಿನ ಸ್ವಭಾವ ಬಂಡವಾಳಶಾಹಿ ಚಿಂತನೆಗೆ ತದ್ವಿರುದ್ಧವಾದ್ದು. ಎಲ್ಲಾ ವರ್ಗಾಧಾರಿತ ಸಮಾಜಗಳಲ್ಲಿರುವಂತೆ ಬಂಡವಾಳಶಾಹಿ ವ್ಯವಸ್ಥೆ ಕೂಡ ತಾರತಮ್ಯವನ್ನೇ ಬುನಾದಿಯಾಗಿಸಿಕೊಂಡಿದೆ. ಅಲ್ಲಿ ಜನರಿಗೆ ವಿಭಿನ್ನ ಸ್ಥಾನಮಾನ ಇರುತ್ತದೆ. ಬೇರೆ ಬೇರೆ ವರಮಾನ ಇರುತ್ತದೆ. ಸಂಪತ್ತೂ ಒಂದೇ ರೀತಿ ಇರುವುದಿಲ್ಲ. ಸಾಮಾಜಿಕ ಸ್ಥಾನಮಾನದಲ್ಲೂ ವ್ಯತ್ಯಾಸವಿರುತ್ತದೆ. ಈ ತಾರತಮ್ಯ ಬಂಡವಾಳಶಾಹಿ ವ್ಯವಸ್ಥೆಗೆ ಅವಶ್ಯಕ. ಈ ವೈರಾಣುವಿನ ಸೋಂಕು ಕೆಲವೇ ವರ್ಗದ ಜನರಿಗೆ ಸೀಮಿತವಾಗಿರಲಿ ಅಂತ ಅದು ಬಯಸುತ್ತದೆ. ಅದೂ ಅಷ್ಟೇನು ಶ್ರೀಮಂತರಲ್ಲದವರಲ್ಲಿ ಉಳಿಯಲಿ ಅಂತ ಅಪೇಕ್ಷಿಸುತ್ತದೆ. ಆದರೆ ವೈರಾಣುವಿನ ಸ್ವಭಾವವೇ ಆ ರೀತಿಯದಲ್ಲ. ಒಂದು ಗುಂಪಿನ ಜನರಿಗೆ ಬಂದರೆ ಬೇರೆಯವರಿಗೂ ಅದು ಹರಡುತ್ತದೆ. ಜನರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಎಷ್ಟೇ ಅಂತವಿರಬಹುದು. ಆದರೆ ಅವರು ಸಾಮಾಜಿಕ ಒಡನಾಟದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದೇ ಬರುತ್ತಾರೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಲೇಬೇಕು. ಅದರಿಂದಾಗಿ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಈ ವೈರಾಣುವನ್ನು ಎದುರಿಸಲು ಬಂಡವಾಳಶಾಹಿ ಚಿಂತನೆಗೆ ವ್ಯತಿರಿಕ್ತವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಸ್ಪೇನಿನಲ್ಲಿ ಸಾವಿರಾರು ಜನರಿಗೆ ಉಚಿತವಾಗಿ ಚಿಕತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡುವುದಿಲ್ಲ. ಆದರೆ ಕೇವಲ ಸರ್ಕಾರಿ ಆಸ್ಪತ್ರೆಗಳಿಂದ ಅದು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದು ಉಳಿದಂತೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಧ್ಯವಿರಲಿಲ್ಲ. ಇಂಗ್ಲೆಂಡಿನಲ್ಲಿ ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ಲಾಕ್‌ಡೌನ್ ಆವಧಿಯಲ್ಲಿ ಸರ್ಕಾರ ಕೆಲಸ ಕಳೆದುಕೊಂಡವರಿಗೆ ಸಂಬಳವನ್ನು ಕೊಟ್ಟಿದೆ. ಯಾಕೆಂದರೆ ಅವರಿಗೆ ಬದುಕೋದಕ್ಕೆ ಹಣವಿಲ್ಲ ಮತ್ತು ಅವರನ್ನು ನೇಮಿಸಿಕೊಂಡಿದ್ದ ಉದ್ದಿಮೆಗಳೂ ಉತ್ಪಾದಿಸುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಆದಾಯವಿರಲಿಲ್ಲ. ಸರ್ಕಾರ ಅವರಿಗೆ ನೆರವನ್ನು ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಆದರೆ ಇವೆಲ್ಲಾ ಸಾಮಾನ್ಯವಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗುವಂಥವಲ್ಲ. ಆದರೆ ಈಗ ಆಗುತ್ತಿದೆ. ಅದೇ ರೀತಿಯಲ್ಲಿ ಟ್ರಂಪ್ (ಅವರನ್ನು ಇತ್ತೀಚೆಗೆ ಅಮೇರಿಕೆಯ ತತ್ತ್ವಜಾನಿ ಕೊನೆಲ್ ವೆಸ್ಟ್ ನವಫ್ಯಾಸಿಸ್ಟ್ ಗ್ಯಾಂಗ್‌ಸ್ಟರ್ ಅಂತ ಕರೆದಿದ್ದ) ನಾಯಕತ್ವದ ಅಮೇರಿಕೆಯಲ್ಲಿ ಕೂಡ ಸಂಕಷ್ಟದಿಂದ ಪಾರಾಗಲು ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ೧೦೦೦ ಡಾಲರನ್ನು ಕೊಡಲಾಗಿದೆ. ಹಾಗಾಗಿ ಪಕ್ಷಪಾತಿಯಲ್ಲದ ವೈರಾಣುವನ್ನು ಎದುರಿಸುವುದಕ್ಕೆ ಬಂಡವಾಳಶಾಹಿ ವ್ಯವಸ್ಥೆ ಕೂಡ ತನ್ನ ಕ್ರಮವನ್ನು ಬದಲಿಸಿಕೊಂಡಿದೆ. ಇದೇ ಕಾರಣದಿಂದಾಗಿಯೇ ಹೆಚ್ಚು ಸಮಾನತೆ ಇರುವ, ಹೆಚ್ಚು ನ್ಯಾಯಯುತವಾಗಿರುವ ಸಮಾಜಗಳು ಈ ವೈರಾಣುವನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸುತ್ತಿವೆ. ಯಾಕೆಂದರೆ ಅವು ಏಕತೆಯ ಸಂಸ್ಕೃತಿಯನ್ನು ರೂಢಿಸಿಕೊಂಡಿರುತ್ತವೆ. ಸಾಮಾನ್ಯವಾಗಿ ಅವೆಲ್ಲಾ ಸಮಾಜವಾದಿ ರಾಷ್ಟ್ರಗಳು. ಕೇವಲ ಸಮಾಜವಾದಿ ರಾಷ್ಟ್ರಗಳು ಮಾತ್ರ ಸಮರ್ಥವಾಗಿ ನಿಭಾಯಿಸಿವೆ ಎಂದು ನಾನು ಹೇಳುವುದಿಲ್ಲ. ಬೇರೆ ರಾಷ್ಟ್ರಗಳೂ ಚೆನ್ನಾಗಿ ನಿರ್ವಹಿಸುತ್ತಿರಬಹುದು. ವಿಶೇಷವಾಗಿ ಸಮಾಜವಾದಿ ರಾಷ್ಟ್ರಗಳು ಇದನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸುತ್ತಿವೆ. ಅಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿದೆ ಇತ್ಯಾದಿ ತಾಂತ್ರಿಕ ವಿವರಣೆಗಳನ್ನು ಕೊಡುತ್ತಾರೆ. ಆದರೆ ಆ ತಾಂತ್ರಿಕ ವಿಚಾರಗಳೂ ಸಾಧ್ಯವಾಗಿದ್ದೂ ಅಲ್ಲಿರುವ ಏಕತೆಯ, ನ್ಯಾಯಯುತವಾದ ಸಂಸ್ಕೃತಿಯಿಂದ. ಕ್ಯೂಬಾದಲ್ಲಿ ಅತ್ತುತ್ತಮವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದೆ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಟಾಲಿಯಂತೆ ಸಂಕಷ್ಟಕ್ಕೆ ಒಳಗಾದ ಇತರ ದೇಶಗಳಿಗೆ ನೆರವನ್ನು ನೀಡುವುದಕ್ಕೆ ಮುಂದೆ ಬಂದಿದೆ. ಚೈನಾ ಸೋಂಕಿಗೆ ಒಳಗಾದ ಒಂದು ಪ್ರಾಂತ್ಯವನ್ನು ಲಾಕ್ ಡೌನ್ ಮಾಡುವುದರ ಜೊತೆಗೆ ಎಲ್ಲರಿಗೂ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಅವರವರ ಮನೆಬಾಗಿಲಿಗೆ ತಲುಪಿಸಿದೆ. ಈ ದೇಶಗಳಲ್ಲಿರುವ ಒಂದು ರೀತಿಯ ಸಮಾನತೆ, ನ್ಯಾಯಯುತ ಮತ್ತು ಏಕತೆಯ ಮನೋಭಾವವನ್ನು ಇದು ಪ್ರತಿಬಿಂಬಿಸುತ್ತದೆ. ಆ ದೇಶದಲ್ಲಿರುವ ರಾಜಕೀಯ, ಸಾಂಸ್ಥಿಕ ಪರಿಸ್ಥಿತಿಯನ್ನು ನಾವು ಒಪ್ಪದಿರಬಹುದು, ವೈಯಕ್ತಿವಾಗಿ ನನಗೂ ಭಿನ್ನಾಭಿಪ್ರಾಯ ಇದೆ.

ಇದೇ ಮಾತನ್ನು ಇಂಡಿಯಾದ ವಿಷಯದಲ್ಲೂ ಹೇಳಬಹುದು. ಉದಾಹರಣೆಗೆ ಇದರಲ್ಲಿ ತುಂಬಾ ಯಶಸ್ವಿಯಾಗಿರುವ ರಾಜ್ಯ ಕೇರಳ. ಕೇರಳದಲ್ಲಿ ಅತ್ಯುತ್ತಮವಾದಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದೆ. ಅಲ್ಲಿ ಒಳ್ಳೆಯ ಪರೀಕ್ಷೆಯ ಕ್ರಮ ಇದೆ ಇತ್ಯಾದಿ ತಾಂತ್ರಿಕ ವಿವರಣೆಗಳನ್ನು ಕೊಡಬಹುದು. ಆದರೆ ಅವೆಲ್ಲಾ ಸಾಧ್ಯವಾಗಿರುವುದು ಕೂಡ ಒಟ್ಟಾರೆಯಾಗಿ ಜನತೆ ಪಾಲ್ಗೊಳ್ಳುವುದರಿಂದ. ಅದರೆ ಮೂಲಭೂತವಾಗಿ ಅವೆಲ್ಲಾ ಸಾಧ್ಯವಾಗಿರುವುದು ಅಲ್ಲಿಯಾ ಏಕತೆಯ ಮನೋಭಾವದಿಂದ. ಸಮಾನತೆ ಮತ್ತು ನ್ಯಾಯಯುತತೆಯ ಗುಣದಿಂದ. ಜನರೆಲ್ಲಾ ಒಂದಾಗಿ ಈ ಪಿಡುಗಿನ ವಿರುದ್ಧ ಹೋರಾಡಲು ತೊಡಗಿದ್ದಾರೆ. ಅಲ್ಲಿಯ ಸರ್ಕಾರ ಎಡಪಂಥೀಯವಾಗಿರುವುದರಿಂದ ಅದು ಸಾಧ್ಯವಾಗಿದೆ. ಕೇರಳಕ್ಕೆ ಎಡಪಂಥೀಯ ಸಕ್ರಿಯತೆಯ ದೊಡ್ಡ ಇತಿಹಾಸವಿದೆ. ಅಲ್ಲಿ ಮೂಲಭೂತ ಆರೋಗ್ಯ ವ್ಯವಸ್ಥೆ, ಮೂಲಭೂತ ಶಿಕ್ಷಣ ಇತ್ಯಾದಿಗಳನ್ನು ಅಲ್ಲಿಯ ಆಡಳಿತ ಒದಗಿಸಿರುವುದರಿಂದ ಇದು ಸಾಧ್ಯವಾಗಿದೆ. ಈ ಪಿಡುಗಿನಿಂದ ಒಂದಂಶ ಸ್ಪಷ್ಟವಾಗಿದೆ: ಎಲ್ಲಿ ಐಕ್ಯತೆಯ ವಾತಾವರಣ ಇರುತ್ತದೊ ಅಲ್ಲಿ ಇದನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸುವುದಕ್ಕೆ ಸಾಧ್ಯ. ತಾರತಮ್ಯವನ್ನು ತೋರುವ, ವೈಯಕ್ತಿಕವಾಗಿ ಆಕ್ರಮಣಕಾರಿ ಮನೋಭಾವದ ಸಮಾಜದಲ್ಲಿ ಇದನ್ನು ನಿಭಾಯಿಸುವುದು ಕಷ್ಟ. ಭಾರತದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸ್ವಲ್ಪ ಅತಿಯಾಗಿಯೇ ಇದೆ ಅನ್ನಬಹುದು. ಇಲ್ಲಿ ಲಾಕ್‌ಡೌನನ್ನು ಹೆಚ್ಚು ತೀವ್ರವಾಗಿ ಜಾರಿಗೆ ತರಲಾಗಿತ್ತು. ಪಾಕಿಸ್ತಾನವನ್ನು ಬಿಟ್ಟರೆ ಜಗತ್ತಿನ ಇನ್ಯಾವ ದೇಶದಲ್ಲೂ ಲಾಕ್‌ಡೌನ್ ಇಷ್ಟು ತೀವ್ರವಾಗಿ ಜಾರಿಯಲ್ಲಿರಲಿಲ್ಲ. ಆದರೆ ಇಲ್ಲಿ ಜನರಿಗೆ ಅವಶ್ಯಕವಾದ ವಸ್ತುಗಳನ್ನು ಒದಗಿಸುವ ವ್ಯವಸ್ಥೆ ಇರಲಿಲ್ಲ. ಸರ್ಕಾರ ಲಾಕ್‌ಡೌನ್ ಘೋಷಿಸಿತು. ಅದು ಜಾರಿಗೆ ಬಂದಿತು. ಯಾರಿಗೂ ಯಾವುದೇ ನೆರವನ್ನು ಒದಗಿಸಲಿಲ್ಲ. ನಂತರ ಒಂದಿಷ್ಟು ಘೋಷಣೆಗಳನ್ನು ಮಾಡಲಾಯಿತು. ಅದು ಜಿಡಿಪಿಯ ಕೇವಲ ೦.೫ರಷ್ಟಿತ್ತು. ಅಮೇಲೆ ಘೋಷಿಸಿದ ಪರಿಹಾರಗಳು ಬಂಡವಾಳಿಗರಿಗೆ ಅನುಕೂಲ ಒದಗಿಸುವ ಕ್ರಮಗಳಷ್ಟೇ ಆಗಿದ್ದವು. ಹೆಚ್ಚಿನವು ಕೇವಲ ಸಾಲಗಳನ್ನು ಒದಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು. ಜನರಿಗೆ ಯಾವುದೇ ರೀತಿಯ ನೆರವು ಅದರಿಂದ ಸಿಗಲಿಲ್ಲ. ಲಾಕ್‌ಡೌನಿನ ಸ್ವಾಭಾವದಲ್ಲೇ ತಾರತಮ್ಯದ ಮನೋಭಾವ ಇತ್ತು. ಬೇಧಭಾವದ ಸಂಸ್ಕೃತಿ ಎದ್ದು ವ್ಯಕ್ತವಾಗುತ್ತಿತ್ತು.

ಲಾಕ್‌ಡೌನಿನಿಂದ ಹೊಸ ಪ್ರಕರಣಗಳು ನಿಲ್ಲಲಿಲ್ಲ. ಜನರ ಸಂಕಷ್ಟವೂ ಕಮ್ಮಿಯಾಗಲಿಲ್ಲ. ಸೋಂಕು ಹೆಚ್ಚುತ್ತಲೇ ಇದೆ. ಈಗ ನಾವು ಒಂದು ವಿಚಿತ್ರವಾದ ಸ್ಥಿತಿಯಲ್ಲಿದ್ದೇವೆ. ಸೋಂಕು ತೀವ್ರವಾಗಿದೆ, ಆದರೆ ಲಾಕ್‌ಡೌನ್ ತೆಗೆಯಬೇಕು. ಅಂದರೆ ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚುತ್ತದೆ. ಸರ್ಕಾರಕ್ಕೆ ಖಾಸಗೀ ಆಸ್ಪತ್ರೆಗಳ ಮೇಲೆ ಯಾವುದೇ ನಿಯಂತ್ರಣವೂ ಇಲ್ಲ. ಅವು ತುಂಬಾ ದುಬಾರಿ, ಪರೀಕ್ಷೆಗೆ ೪೫೦೦ ರೂಪಾಯಿಗಳನ್ನು ಚಾರ್ಜು ಮಾಡಲಾಗುತ್ತದೆ. ಅಷ್ಟೇ ಅಲ್ಲ ಸರ್ಕಾರಗಳು ಹಲವು ವಿಚಿತ್ರ ವಾದಗಳನ್ನೂ ಮುಂದಿಡುತ್ತಿದೆ. ಉದಾಹರಣೆಗೆ ದೆಹಲಿಯಲ್ಲಿ ಹೊರಗಿನವರು ಬಂದು ನಮ್ಮ ಆಸ್ಪತ್ರೆಗಳನ್ನು ಆಕ್ರಮಿಸಿಕೊಳ್ಳಬಾರದು ಎನ್ನಲಾಗುತ್ತಿದೆ. ಆಸ್ಪತ್ರೆಗಳೇನು ಭರ್ತಿಯಾಗಿಲ್ಲ. ಆದರೂ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ರೋಗಿಗಳು ಬಾರದ ಹಾಗೆ ನಿರ್ಬಂಧ ಹೇರಬೇಕು ಅನ್ನುವ ಮಾತು ಕೇಳಿಬರುತ್ತಿದೆ. ಏಕತೆಯ ಸಂಸ್ಕೃತಿಯ ಸ್ಥಾನದಲ್ಲಿ ತಾರತಮ್ಯದ ಸಂಸ್ಕೃತಿ ಬಂದರೆ ಏನಾಗುತ್ತದೆ ಅನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. ಈ ಬೇಧಭಾವದ ಸಂಸ್ಕೃತಿ ಮೂಲಭೂತವಾಗಿ ಬಂಡವಾಳಶಾಹಿ ಸಂಸ್ಕೃತಿ, ಬೂರ್ಜ್ವಾ ಸಂಸ್ಕೃತಿ. ಈ ಮನೋಭಾವ ಇಟ್ಟುಕೊಂಡು ವೈರಾಣುವನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಈಗ ದೆಹಲಿಯಲ್ಲಿ ಈ ಸೋಂಕಿನಿಂದ ಎಲ್ಲರೂ ಗುಣಮುಖರಾಗುತ್ತಾರೆ ಎಂದೇ ಭಾವಿಸೋಣ. ಆದರೆ ಪಕ್ಕದ ರಾಜ್ಯಗಳಲ್ಲಿ ಅದನ್ನು ಬೆಳೆಯಲು ಬಿಟ್ಟರೆ ಸೋಂಕು ಇಲ್ಲಿಗೆ ಮತ್ತೆ ಬರುತ್ತದೆ. ನನ್ನನ್ನು ನಾನು ಮೊದಲು ನೋಡಿಕೊಳ್ಳೋಣ, ಬೇರೆಯವರಿಗೆ ಏನಾದರೇನು ಅನ್ನುವುದು ಬಂಡವಾಳಶಾಹಿ ಮನೋಭಾವ. ಇಂತಹ ಮನಸ್ಥಿತಿಯಿಂದ ವೈರಾಣುವನ್ನು ಎದುರಿಸಲು ಸಾಧ್ಯವಿಲ್ಲ. ಈ ಸತ್ಯ ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಿಗೂ ಗೊತ್ತಾಗಿದೆ. ಆದರೆ ಭಾರತದಲ್ಲಿ ಅದನ್ನು ಅರ್ಥಮಾಡಿಕೊಂಡಿಲ್ಲ. ಹಾಗಾಗಿಯೇ ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗಿಲ್ಲ. ಕ್ರಮೇಣ ನಮ್ಮ ದೇಶವೂ ಹೇಗೋ ಇದರಿಂದ ಹೊರಬರಬಹುದು. ಆದರೆ ಆ ವೇಳೆಗೆ ಸಾಕಷ್ಟು ಜೀವ ಹಾನಿಯಾಗಿರುತ್ತದೆ, ಉತ್ಪಾದನೆಗೆ ಪೆಟ್ಟುಬಿದ್ದಿರುತ್ತದೆ, ಆದಾಯದನಷ್ಟ ಅಪಾರವಾಗಿರುತ್ತದೆ.

ಕೊರೋನಾ ವೈರಾಣು ಮನುಷ್ಯನ ಸ್ಥಿತಿಯ ಒಂದಿಷ್ಟು ಅಂಶಗಳನ್ನು ಮುನ್ನೆಲೆಗೆ ತಂದಿದೆ. ನಡೆದಿರುವ ಕೆಲವು ಘಟನೆಗಳು ನಾವು ಎಂತಹ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ, ಎಂತಹ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ತೋರಿಸಿದೆ. ಕೊರೋನಾದಂತಹ ಬಾಹ್ಯಘಟನೆಯೊಂದು ನಮ್ಮ ವಾಸ್ತವ ಪರಿಸ್ಥಿತಿಯನ್ನು ನಮ್ಮ ಮುಂದೆ ಅನಾವರಣಗೊಳಿಸಿದೆ. ಕನಿಷ್ಠ ಎರಡು ಮಹತ್ವದ ಅಂಶಗಳನ್ನು ನಾವು ಗಮನಿಸಬೇಕು. ಮೊದಲನೆಯದು ನಮ್ಮ ದೇಶದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಇರುವ ದಾರಿದ್ರ್ಯ. ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕದ ಹಲವು ದೇಶಗಳಲ್ಲಿ ಹಾಗೂ ನಮ್ಮಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಲಕ್ಷಾಂತರ ಜನ ಉತ್ತರ ಭಾರತದ ಸುಡುಬಿಸಿಲಿನಲ್ಲಿ ಕುಟುಂಬ ಮತ್ತು ಮಕ್ಕಳ ಜೊತೆ ನಡೆದುಕೊಂಡೇ ಮನೆಗೆ ಹೋಗಿದ್ದಾರೆ. ಅವರಿಗೆ ಯಾವುದೇ ನೆರವೂ ಸಿಗಲಿಲ್ಲ. ಎಷ್ಟೋ ಜನ ಹಾಗೆ ಹೋಗುವಾಗ ರಸ್ತೆಯಲ್ಲೇ ಸತ್ತಿದ್ದಾರೆ. ಇದು ದಟ್ಟದಾರಿದ್ರ್ಯ ಇರುವ ದೇಶದ ಲಕ್ಷಣ. ಬಡತನ ಅಂದರೆ ಅವಕಾಶಗಳಿಂದ ವಂಚಿತರಾಗುವುದಷ್ಟೇ ಅಲ್ಲ. ಹಕ್ಕುಗಳಿಂದಲೂ ಜನ ವಂಚಿತರಾಗಿದ್ದಾರೆ. ಅವರ ಸ್ಥಿತಿ ನಿಜವಾಗಿ ದಯನೀಯವಾಗಿದೆ. ಅದು ಕೇವಲ ಆದಾಯದ ದೃಷ್ಟಿಯಿಂದ ಮಾತ್ರವಲ್ಲ. ಅವರು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆ. ಕೊರೊನಾ ವೈರಾಣು ಇದನ್ನು ನಮಗೆ ತೋರಿಸಿಕೊಟ್ಟಿದೆ.

ಎರಡನೆಯ ಮುಖ್ಯ ವಿಷಯ ಅಂದರೆ ಹಲವರು ಚರಿತ್ರೆಯ ಅಂತ್ಯ ಬಂದಿದೆ ಅಂತ ವಾದಿಸುತ್ತಿದ್ದಾರೆ. ಚರಿತ್ರೆಯ ಕೊನೆ ಅಂದರೆ ಬಂಡವಾಳಶಾಹಿ ಅಂತಿಮ ವ್ಯವಸ್ಥೆ, ಅದೇ ಕೊನೆಯ ಉತ್ಪಾದನಾ ವಿಧಾನ. ಮುಂದೆ ಬದಲಾವಣೆ ಇರೋದಿಲ್ಲ. ಇದು ಹಳೆಯ ವಾದ. ಹೆಗೆಲ್ ಕೂಡ ಇದನ್ನೇ ಹೇಳಿದ್ದ. ಅದಕ್ಕೆ ಅನುಗುಣವಾಗಿ ಕ್ಲಾಸಿಕಲ್ ರಾಜಕೀಯ ಅರ್ಥಶಾಸ್ತ್ರ ಇದನ್ನೇ ಹೇಳಿತ್ತು. ಮಾರ್ಕ್ಸ್ ಮತ್ತು ಏಂಗೆಲ್ಸ್ ಈ ವಾದದ ವಿರುದ್ದ ಹೋರಾಡಿದ್ದರು. ಲಕ್ಷಾಂತರ ಉತ್ಪಾದಕರು, ದುಡಿಯುವ ವರ್ಗ ದಟ್ಟ ದಾರಿದ್ರ್ಯದ ಸ್ಥಿತಿಯಲ್ಲಿದ್ದಾಗ ಚರಿತ್ರೆ ಅಂತ್ಯವಾಗುವುದಕ್ಕೆ ಸಾಧ್ಯವಿಲ್ಲ ಅಂತ ಅವರು ವಾದಿಸಿದ್ದರು. ಹಾಗಾಗಿ ಅವರು ಈ ಚಿಂತನೆಯನ್ನು ಲೇವಡಿ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ’ಇತಿಹಾಸದ ಅಂತ್ಯ’ ಸಿದ್ಧಾಂತದ ಪ್ರತಿಪಾದನೆ ಮತ್ತೆ ಪ್ರಾರಂಭವಾಗಿದೆ. ಉದಾಹರಣೆಗೆ ಅಲೆಕ್ಸಾಂಡರ್ ಕೊಜೆವ್ ಮತ್ತು ಇತ್ತೀಚೆಗೆ ಫುಕಯಾಮ ಇವರೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯೇ ಅಂತಿಮ ಉತ್ಪಾದನಾ ವಿಧಾನ, ನಾವು ಸಮಾಜವಾದದ ಬಗ್ಗೆ ಮಾತನಾಡಬಾರದು ಅಂತ ವಾದಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಎಡಪಂಥಿಯರೂ ಈ ಬಗ್ಗೆ ಒಲವು ತೋರಿಸಿದ್ದಾರೆ. ಹೀಗೆ ವಾದಿಸುವವರಿಗೆ ಜಗತ್ತಿನಲ್ಲಿ ಕೋಟ್ಯಾಂತರ ಜನ ತೀವ್ರ ದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ ಅನ್ನುವುದು ಗೊತ್ತಿಲ್ಲ. ಅಥವಾ ಬಂಡವಾಳಶಾಹಿ ವ್ಯವಸ್ಥೆ ಬೆಳೆದಂತೆ ಈ ರೀತಿಯ ಸಂಕಷ್ಟಗಳು ಅದರಷ್ಟಕ್ಕೆ ಸರಿಹೋಗುತ್ತದೆ ಎಂದು ನಂಬಿದ್ದಾರೆ. ಅದು ಮೂಲಭೂತವಾಗಿ ನವ ಉದಾರವಾದಿ ಮಂತ್ರ. ಮೊದಲು ಬೆಳವಣಿಗೆ ಹೆಚ್ಚಲಿ, ಇವೆಲ್ಲಾ ಅದರಷ್ಟಕ್ಕೆ ಮಾಯವಾಗಿಹೋಗುತ್ತದೆ ಅನ್ನುವುದು ಅವರ ವಾದ. ವಾಸ್ತವ ಅಂದರೆ ಜಗತ್ತಿನಲ್ಲಿ ನಾಲ್ಕು ದಶಕಗಳಿಂದ ಹಾಗೂ ನಮ್ಮ ದೇಶದಲ್ಲಿ ಮೂರು ದಶಕಗಳಿಂದ ಈ ಸ್ಥಿತಿ ಹಾಗೇ ಮುಂದುವರಿದಿದೆ. ಅಷ್ಟೇ ಅಲ್ಲ ಪೌಷ್ಟಿಕಾಂಶ ಇತ್ಯಾದಿಗಳ ದೃಷ್ಟಿಯಿಂದ ಸ್ಥಿತಿ ಇನ್ನಷ್ಟು ಹಾಳಾಗಿದೆ. ತುಂಬಾ ಜನಕ್ಕೆ ಹೊಟ್ಟೆಗೆ ಇಲ್ಲ. ಹಸಿವಿನಿಂದ ಸಾಯುತ್ತಿದ್ದಾರೆ. ಈ ಪಿಡುಗು ಇದರ ಭೀಕರತೆಯನ್ನು ತೋರಿಸಿಕೊಟ್ಟಿದೆ. ೫% ಬೆಳವಣಿಗೆ ದರ, ೫ ಟ್ರಿಲಿಯನ್ ಆರ್ಥಿಕತೆ ಇತ್ಯಾದಿ ಮಾತುಗಳೆಲ್ಲಾ ಬಹುಸಂಖ್ಯಾತ ಜನತೆಗೆ ಸಂಪೂರ್ಣ ಅಪ್ರಸ್ತುತ. ಹಾಗಾಗಿ ಚರಿತ್ರೆಯ ಅಂತ್ಯ ಅನ್ನುವ ಚಿಂತನೆಯೇ ಸಂಪೂರ್ಣ ಬೋಗಸ್. ಯಾಕೆಂದರೆ ಚರಿತ್ರೆ ಅನ್ನುವುದು ಬಂಡವಾಳಶಾಹಿ ವ್ಯವಸ್ಥೆ ಪ್ರತಿನಿಧಿಸುವ ಕೆಲವು ವ್ಯಕ್ತಿಗಳ ವಿಜಯದೊಂದಿಗೆ ಕೊನೆಯಾಗಲು ಸಾಧ್ಯವಿಲ್ಲ. ಎಲ್ಲವೂ ತನಗೇ ಇರಲಿ (ಪೊಸೆಸಿವ್ ಇಂಡಿವಿಷುಯಲಿಸಂ) ಎನ್ನುವ ವ್ಯವಸ್ಥೆ ಬಹುಪಾಲು ಜನರನ್ನು ದಾರಿದ್ರ್ಯದಲ್ಲಿ ಇಡುತ್ತದೆ ಅನ್ನುವುದು ನಮಗೆ ಗೊತ್ತು. ಇದನ್ನೇ ಕೋವಿಡ್-೧೯ ನಮ್ಮ ಮುಂದೆ ತೆರೆದಿಟ್ಟಿದೆ. ಇಂದು ಬಹು ದೊಡ್ಡ ಕರ್ತವ್ಯ ನಮ್ಮ ಮುಂದಿದೆ. ಈ ಅಪಾರ ಜನಕ್ಕೆ ಭೌತಿಕ ಬೆಳವಣಿಗೆಯನ್ನು ಸಾಧಿಸಬೇಕು. ಇದನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣುವ ಎಲ್ಲವೂ ತನಗೇ ಇರಲಿ ಅನ್ನುವ ಮನಸ್ಥಿತಿಯಿಂದ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಮಾಜವಾದಿ ಪರಿವರ್ತನೆಯಾಗಬೇಕು. ವೈರಾಣುವನ್ನು ಎದುರಿಸುವುದಕ್ಕೂ ಏಕತೆಯ ಸಂಸ್ಕೃತಿ ಬೇಕು ಎಂದು ಕೋವಿಡ್-೧೯ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಮನುಷ್ಯನ ಸ್ಥಿತಿಯನ್ನು ಸರಿಪಡಿಸುವುದಕ್ಕೂ ಏಕತೆಯ ಸಂಸ್ಕೃತಿಯೇ ಬೇಕು. ಬಂಡವಾಳಶಾಹಿ ವ್ಯವಸ್ಥೆಯಿಂದ ಇದು ಸಾಧ್ಯವಿಲ್ಲ. ಯಾಕೆಂದರೆ ಅದು ತಾರತಮ್ಯವನ್ನು ಆಧರಿಸಿರುವ ವ್ಯವಸ್ಥೆ. ಸಮಾಜವಾದಿ ವ್ಯವಸ್ಥೆಗೆ ಮಾತ್ರ ಅದನ್ನು ಸಾಧಿಸುವುದಕ್ಕೆ ಸಾಧ್ಯ.

ಹಾಗಾಗಿ ಕೊರೋನಾ ವೈರಾಣುವಿನ ಬಿಕ್ಕಟ್ಟಿನ ಮುಂದುವರಿಕೆಯಾಗಿ ಎಲ್ಲಾ ಕಡೆಯೂ ವರ್ಗ ಹೋರಾಟ ಆಗುವ ಸಾಧ್ಯತೆ ಇದೆ. ಈಗ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಚರಿತ್ರೆ ಅಂತ್ಯಗೊಂಡಿತು ಅಂತ ಸುಮ್ಮನೆ ಇರುವುದಕ್ಕಾಗುವುದಿಲ್ಲ. ಮುಂದಿನ ಹೆಜ್ಜೆಗಳನ್ನು ಇಡಬೇಕು. ಮುಂದಕ್ಕೆ ಅಂದರೆ ಬಂಡವಾಳಶಾಹಿಯ ಆಚೆಗೆ ಹೋಗಬೇಕು. ಅಂದರೆ ಸಮಾಜವಾದದ ಕಡೆಗೆ ಹೋಗಬೇಕು. ಹಾಗಾಗಿ ವರ್ಗ ಹೋರಾಟ ತೀವ್ರವಾಗುತ್ತದೆ ಎಂದು ನನಗೆ ತೋರುತ್ತದೆ. ಕೇವಲ ಲಾಕ್ ಡೌನ್ ಆವಧಿಯಲ್ಲಿ ಮಾತ್ರವಲ್ಲ. ವೈರಾಣುವಿನ ತೀವ್ರತೆ ಕಡಿಮೆಯಾದ ಮೇಲೂ ಅದು ಮುಂದುವರಿಯುತ್ತದೆ.
ಆ ಪ್ರಕ್ರಿಯೆಯಲ್ಲಿ ಹಲವು ಪ್ರಸ್ತುತವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆ ಸಮಸ್ಯೆಗಳನ್ನು ತಾರತಮ್ಯದ ಸಂಸ್ಕೃತಿಯಿಂದ ಪರಿಹರಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಸಮಾಜವಾದ ಅನಿವಾರ್ಯ. ಅಂದ ತಕ್ಷಣ ಜನರೆಲ್ಲಾ ಸೇರಿಕೊಂಡು ಸಮಾಜವಾದಕ್ಕಾಗಿ ಹೋರಾಡಲು ಸಜ್ಜಾಗುತ್ತಾರೆ ಅಂತಲ್ಲ. ಅವರಿಗೆ ಸಧ್ಯದ ಬೇಡಿಕೆಗಳು ಮುಖ್ಯ. ಅದಕ್ಕಾಗಿ ಹೋರಾಡುತ್ತಾರೆ. ಮುಂಬರುವ ದಿನಗಳಲ್ಲಿ ಪ್ರಸ್ತುತವಾಗುವ ಅಂತಹ ಕೆಲವು ಸಮಸ್ಯೆಗಳನ್ನು ಇಲ್ಲಿ ಪಟ್ಟಿಮಾಡುತ್ತೇನೆ.

ಮೊದಲಿಗೆ ಎಲ್ಲವನ್ನೂ ಖಾಸಗೀಕರಣಗೊಳಿಸುವ ಅದರಲ್ಲೂ ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನ ದೊಡ್ಡ ತಪ್ಪು ಎಂಬುದು ಹೆಚ್ಚು ಕಮ್ಮಿ ಎಲ್ಲರಿಗೂ ಅರ್ಥವಾಗಿದೆ. ಹೆಚ್ಚಿನ ಕಡೆಗಳಲ್ಲಿ ಮುಖ್ಯವಾಗಿ ಐರೋಪ್ಯ ದೇಶಗಳಲ್ಲಿ ಆರೋಗ್ಯ ಸೇವೆ ಸರ್ಕಾರ ಹಣ ನೀಡುತ್ತಿತ್ತು. ಉದಾಹರಣೆಗೆ ಬ್ರಿಟ್ಟನ್ನಿನಲ್ಲಿ ರಾಷ್ಟ್ರೀಯ ಆರೋಗ್ಯ ವಲಯವನ್ನು ದುರ್ಬಲಗೊಳಿಸಬಾರದಿತ್ತು. ಹಾಗೆ ಮಾಡಿದ್ದು ಅತಿದೊಡ್ಡ ದುರಂತದ ನೀತಿ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ತೃತೀಯ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ, ನಮ್ಮ ದೇಶದಲ್ಲಿ ಕೂಡ ಸರ್ಕಾರಿ ಆಸ್ಪತ್ರೆಗಳು ನಮ್ಮ ಆರೋಗ್ಯವನ್ನು ನೋಡಿಕೊಳ್ಳುವುದಿಲ್ಲ. ಏನಿದ್ದರೂ ಖಾಸಗೀ ಕ್ಷೇತ್ರಗಳನ್ನು ಅವಲಂಭಿಸಬೇಕು ಅನ್ನುವ ನಂಬಿಕೆಗೆ ಪೆಟ್ಟುಬಿದ್ದಿದೆ. ಈಗ ಎಲ್ಲರೂ ಬೂರ್ಜ್ವಾ ವಕ್ತಾರರು ಕೂಡ ಅವಶ್ಯಕ ಸೇವೆಗಳು ಸರ್ಕಾರದ ವ್ಯಾಪ್ತಿಯಲ್ಲೇ ಇರಬೇಕು ಅಂತ ಹೇಳುತ್ತಿದ್ದಾರೆ. ಇದಕ್ಕೆ ವಿರೋಧ ಬರುತ್ತದೆ. ವಿರೋಧ ಇದ್ದಾಗ ಹೋರಾಟವೂ ಇರುತ್ತದೆ. ನನ್ನ ದೃಷ್ಟಿಯಲ್ಲಿ ತಕ್ಷಣ ಈ ವಿಷಯದಲ್ಲಿ ಹೋರಾಟವಾಗಬಹುದು ಅನ್ನಿಸುತ್ತದೆ.

ಎರಡನೆಯ ಸಂಘರ್ಷದ ವಿಷಯ ಅಂದರೆ ಈಗ ಕೋವಿಡ್-೧೯ಗೆ ಒಂದು ಔಷಧಿ ಅಥವಾ ಲಸಿಕೆಯನ್ನು ಕಂಡುಹಿಡಿದ ತಕ್ಷಣ ಅದನ್ನು ಪೇಟೆಂಟ್ ಮಾಡಲಾಗುವುದೇ ಅಥವಾ ಅದು ಸಾರ್ವಜನಿಕ ವಲಯದಲ್ಲಿ ಉಳಿಯುವುದೇ ಅನ್ನುವುದು. ಇತ್ತೀಚೆಗೆ ಅದು ಜಾಗತಿಕ ಆರೋಗ್ಯ ಸಂಘಟನೆಯಲ್ಲಿ ಚರ್ಚೆಯಾಗಿದೆ. ಅಮೇರಿಕಾ ಹೊರತುಪಡಿಸಿ ಎಲ್ಲಾ ದೇಶಗಳು ಅದು ಸಾರ್ವಜನಿಕ ವಲಯದಲ್ಲೇ ಉಳಿಯಬೇಕು ಅಂತ ಬಯಸಿವೆ. ಅಮೇರಿಕಾ ಅದನ್ನು ವಿರೋಧಿದೆ. ಅಮೇರಿಕೆಂii ನಿಷ್ಠಾವಂತ ಹಿಂಬಾಲಕನಾದ ಬ್ರಿಟನ್ ಅದನ್ನು ಬೆಂಬಲಿಸಿದೆ. ಔಷಧಿ ಎಲ್ಲೇ ತಯಾರಾದರೂ ಅಮೇರಿಕಾ ಎಲ್ಲವನ್ನೂ ತಾನೇ ಕೊಂಡುಕೊಳ್ಳಲು ಪ್ರಯತ್ನಿಸುತ್ತದೆ. ಅಂದರೆ ಅಮೇರಿಕನ್ನರಿಗೆ ಅದು ಮೊದಲು ಸಿಗಬೇಕು. ನಂತರವಷ್ಟೇ ಬೇರೆಯವರಿಗೆ. ಬೌದ್ಧಿಕ ಆಸ್ತಿಯ ಹಕ್ಕಿನ ಕಾಯ್ದೆಯಿಂದಾಗಿ ಬೇರೆಯವರು ಇದಕ್ಕೆ ಅಪಾರ ಬೆಲೆ ತೆರಬೇಕು. ಬೇರೆಯವರೇ ಅದನ್ನು ಕಂಡುಹಿಡಿದರೂ ತಾನೇ ಮೊದಲು ಬಳಸುವಂತೆ ಹಾಗೂ ಅದು ಬೇರೆಯವರಿಗೆ ಸಿಗದಂತೆ ನೋಡಿಕೊಳ್ಳಲು ಅಮೇರಿಕ ಪ್ರಯತ್ನಿಸುತ್ತದೆ. ಮತ್ತೆ ಏಕತೆಯ ಹಾಗೂ ತಾರತಮ್ಯದ ಸಂಸ್ಕೃತಿಯ ನಡುವೆ ದೊಡ್ಡ ಸಂಘರ್ಷ ನಡೆಯುತ್ತದೆ. ಏಕತೆಯ ಸಂಸ್ಕೃತಿ ಸಾಮಾನ್ಯವಾಗಿ ಹಂಚಿಕೊಳ್ಳುವ ನೀತಿಯನ್ನು ಪ್ರತಿಪಾದಿಸುತ್ತದೆ.
ಬರುವ ದಿನಗಳಲ್ಲಿ ಸಂಘರ್ಷ ಬರಬಹುದಾದ ಮತ್ತೊಂದು ಅಂಶವೆಂದರೆ ಉದ್ಯೋಗದ ಸಮಸ್ಯೆ. ಜನ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳಿಗೆ ಹೋಗಿದ್ದಾರೆ. ಅದಕ್ಕಾಗಿ ನೂರಾರು ಕಿಮೀ ನಡೆದಿದ್ದಾರೆ. ಅವರು ವಾಪಸ್ಸು ಬರುವುದಿಲ್ಲ. ತಾವೆಲ್ಲಿದ್ದಾರೋ ಅಲ್ಲಿ ಉದ್ಯೋಗವನ್ನು ಬಯಸುತ್ತಾರೆ. ಅಲ್ಲೇ ಅವರಿಗೆ ಉದ್ಯೋಗವನ್ನು ಒದಗಿಸಬೇಕು. ಇದಕ್ಕೆ ಬೆಳವಣಿಗಯ ಮಾದರಿಯಲ್ಲಿ, ಕಾರ್ಯತಂತ್ರದಲ್ಲಿ ಬದಲಾವಣೆಯಾಗಬೇಕು. ಈಗ ನಾವು ಅನುಸರಿಸಿಕೊಂಡು ಬರುತ್ತಿರುವ ಬೆಳವಣಿಗೆಯ ನೀತಿಯಿಂದ ಗ್ರಾಮಾಂತರ ಪ್ರದೇಶಗಳು ಸಂಪನ್ಮೂಲಗಳಿಂದ ವಂಚಿತವಾಗಿವೆ. ಅವರಿಗೆ ಅನ್ಯಾಯವಾಗಿದೆ. ಬಂಡವಾಳಶಾಹಿಯ ತಾರತಮ್ಯದ ನೀತಿಯಿಂದ ರೈತರಿಗೆ, ಕೃಷಿಗೆ ಅನ್ಯಾಯವಾಗಿದೆ. ದೊಡ್ಡ ಕೈಗಾರಿಕೆಯನ್ನು, ಏಕಸ್ವೌಮ್ಯ ಬಂಡವಾಳಶಾಹಿಯನ್ನು ಹುರಿದುಂಬಿಸುವ, ಅವರಿಗೆ ಹೆಚ್ಚು ವಿನಾಯಿತಿ ಕೊಡುವ ಪ್ರಯತ್ನ ನಡೆದಿದೆ. ಮೋದಿ ಸರ್ಕಾರ ಈ ಪಿಡುಗನ್ನು ಬಳಸಿಕೊಂಡು ಕಾರ್ಮಿಕ ಕಾನೂನನ್ನು ಹತ್ತಿಕ್ಕಿದೆ. ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತಂದಿದೆ.
ಬಂಡವಾಳಶಾಹಿ ಅನುಸರಿಸುತ್ತಿರುವ ಬೆಳವಣಿಗೆ ಮಾದರಿ ಕೆಲವು ಕ್ಷೇತ್ರಗಳನ್ನು ಕಡೆಗಣಿಸಿದೆ. ಕೆಲವು ಸಾಮಾಜಿಕ ವರ್ಗಗಳ ವಿರುದ್ಧ ತಾರತಮ್ಯ ಮಾಡುತ್ತದೆ. ದೊಡ್ಡ ಬಂಡವಾಳಿಗರಿಗೆ ಉತ್ತೇಜನ ಕೊಡುವುದರಿಂದ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತದೆ. ಆಗ ಜನ ಹಳ್ಳಿಯಿಂದ ಪಟ್ಟಣಗಳಿಗೆ ವಲಸೆ ಬರುತ್ತಾರೆ. ಅಲ್ಲಿ ಅವರಿಗೆ ಕೆಲಸ ಸಿಗುತ್ತದೆ. ಅವರಿಗೆ ಹೆಚ್ಚಿನ ಕೂಲಿ ಸಿಗುತ್ತದೆ ಎನ್ನುವುದು ಅವರ ವಾದ. ಅದು ಅವರ ಬೆಳವಣಿಗೆಯ ಕಲ್ಪನೆ. ಮೂರು ದಶಕಗಳ ಈ ಬೆಳವಣಿಗೆಯ ಮಾದರಿಯನ್ನು ಗಮನಿಸಿದರೆ ಉದ್ಯೋಗದಲ್ಲಿ ಅವರು ಹೇಳುವ ರೀತಿಯ ಬೆಳವಣಿಗೆ ಆಗಿಲ್ಲ. ಉದ್ಯೋಗದಲ್ಲಿ ಆಗಿರುವ ಹೆಚ್ಚಳ ಜನಸಂಖ್ಯೆಯ ದರಕ್ಕಿಂತ ಕಡಿಮೆ. ಹಾಗಾಗಿ ನಗರಗಳಲ್ಲಿ ಅವರಿಗೆ ಬೇಕಾದಷ್ಟು ಕೆಲಸ ಸೃಷ್ಟಿಯಾಗುವುದಿಲ್ಲ. ಲಭ್ಯವಿರುವ ಸೀಮಿತ ಕೆಲಸ ಅವರಲ್ಲೇ ಹಂಚಿಕೆಯಾಗುತ್ತದೆ. ರೈತರಿಗೆ, ಕಾರ್ಮಿಕರಿಗೆ, ಕೃಷಿಕಾರ್ಮಿಕರಿಗೆ ವರಮಾನ ಕಮ್ಮಿಯಾಗುತ್ತದೆ. ಹಾಗಾಗಿ ಪ್ರಸ್ತುತ ಬೆಳವಣಿಗೆಯ ಮಾದರಿಯ ಬಗ್ಗೆಯೇ ಪ್ರಶ್ನೆ ಏಳುತ್ತದೆ. ಈ ತಾರತಮ್ಯದ ವಿರುದ್ಧ ತೀವ್ರ ವರ್ಗ ಹೋರಾಟ ನಡೆಯುತ್ತದೆ. ಮೊದಲಿಗೆ ಇದು ಕಾರ್ಮಿಕ ಕಾನೂನನ್ನು ರದ್ದುಗೊಳಿಸಿದ್ದರ ವಿರುದ್ಧ ಸಂಘರ್ಷ ಪ್ರಾರಂಭವಾಗುತ್ತದೆ.

ಮೊದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಜನ ಇರುವ ಕಡೆ ಉದ್ಯೋಗ ಹೋಗಬೇಕು. ಗ್ರಾಮೀಣ ಉದ್ದಿಮೆಗಳಿಗೆ, ಕೃಷಿಗೆ ಮಹತ್ವ ಕೊಡಬೇಕು. ನಾವು ರಫ್ತು ಆಧಾರಿತ ಕೈಗಾರಿಕಿಕರಣದ ಬಗ್ಗೆ ಮಾತನಾಡುತ್ತೇವೆ. ರಫ್ತು ಅಂದುಕೊಂಡ ತಕ್ಷಣ ಹೊರದೇಶಗಳ ಬಗ್ಗೆ ಮಾತನಾಡುತ್ತೇವೆ. ರಫ್ತು ಅಂದರೆ ಅದು ಅಂತರರಾಷ್ಟ್ರೀಯ ರಫ್ತು. ಆದರೆ ನಮ್ಮ ಯೋಚನೆಯ ವಿಧಾನ ಬದಲಾಗಬೇಕು. ಕೈಗಾರಿಕೆಗಳು ತನ್ನ ಉತ್ಪನ್ನಗಳನ್ನು ಕೃಷಿಗೆ ರಫ್ತು ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯ ದರ ಹೆಚ್ಚಬೇಕು. ಆಗ ಆಂತರಿಕ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅದು ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ. ಮತ್ತೆ ಕೈಗಾರಿಕೆಗಳು ಬೆಳೆಯುತ್ತವೆ. ಹೆಚ್ಚು ಜನರಿಗೆ ತಲುಪುತ್ತದೆ. ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಈ ರೀತಿಯ ಬೆಳವಣಿಗೆಯ ಮಾದರಿಗಾಗಿ ಒತ್ತಾಯ ಬರಬೇಕು.

ತೃತೀಯ ವಿಶ್ವದ ಸಾಲದ ಸಮಸ್ಯೆ ಮತ್ತೊಂದು ಸಂಘರ್ಷದ ವಿಷಯ. ೨೦೧೧ರ ನಂತರ ಮೂಲ ಸರಕುಗಳ ಬೆಲೆ ಕುಸಿದ ಮೇಲೆ ತೃತೀಯ ವಿಶ್ವದ ಸಾಲ ಜಾಸ್ತಿಯಾಗಿದೆ. ಈ ಪಿಡುಗಿಗೆ ಮೊದಲೇ ೨೦೧೧ರಿಂದ ೨೦೧೯ರವರೆಗೆ ಕಚ್ಚಾ ಪದಾರ್ಥಗಳ ಬೆಲೆ ಶೇಕಡ ೩೯ರಷ್ಟು ಕಡಿಮೆಯಾಗಿತ್ತು. ಮೂಲ ಸರಕನ್ನೇ ನೆಚ್ಚಿಕೊಂಡಿರುವ ಆಫ್ರಿಕದ ದೇಶಗಳು, ಲ್ಯಾಟಿನ್ ಅಮೇರಿಕೆಯ ದೇಶಗಳು ತಮ್ಮ ಪಾವತಿಯನ್ನು ಸರಿದೂಗಿಸಿಕೊಳ್ಳುವುದಕ್ಕೆ ಸಾಲ ಮಾಡಬೇಕಾಗಿದೆ. ಅವರ ಸಾಲ ತುಂಬಾ ಹೆಚ್ಚಾಗಿದೆ. ಆಫ್ರಿಕಾದ ಸಾಲ ಈ ಅವಧಿಯಲ್ಲಿ ಹೆಚ್ಚು ಕಮ್ಮಿ ಎರಡರಷ್ಟಾಗಿದೆ. ಸಾಲ ಮರುಪಾವತಿಯ ಹೊರೆ ಹೆಚ್ಚಾಗಿದೆ. ರಫ್ತು ಹೆಚ್ಚಾಗುತ್ತಿಲ್ಲ. ರಫ್ತಿನ ಬೆಲೆ ಕುಸಿಯುತ್ತಿದೆ. ರಫ್ತಿನ ಪ್ರಮಾಣ ಕುಸಿಯುತ್ತಿದೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಕಳುಹಿಸುತ್ತಿದ್ದ ಹಣ ಕಡಿಮೆಯಾಗಿದೆ. ಅದಕ್ಕಿಂತ ಆ ದೇಶಗಳಿಂದ ಹಣಕಾಸು ಹೊರಗೆ ಹೋಗುತ್ತಿದೆ. ಅವರಿಗೆ ಸಾಲ ತೀರಿಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಅವರು ಜಿ-೨೦ ದೇಶಗಳನ್ನು ಏನಾದರೂ ಮಾಡಿ ಅಂತ ಕೇಳಿಕೊಳ್ಳುತ್ತಿವೆ. ಇವೆಲ್ಲಾ ಸರ್ಕಾರ, ಸಾರ್ವಜನಿಕ ಕ್ಷೇತ್ರ ಮಾಡಿಕೊಂಡಿರುವ ಸಾಲ. ಈಗ ಸರ್ಕಾರದಲ್ಲಿ ಈ ಪಿಡುಗನ್ನು ಎದರಿಸಲು ಬೇಕಾದ ಹಣ ಇಲ್ಲ. ಜಿ-೨೦ ಇತ್ತೀಚೆಗೆ ಒಂದು ಒಪ್ಪಂದಕ್ಕೆ ಬಂದಿದೆ. ಅದರ ಪ್ರಕಾರ ಸಾಲದ ಬಡ್ಡಿ ಕಟ್ಟುವ ಆವಧಿಯನ್ನು ಎಂಟು ತಿಂಗಳು, ಸಾಲವನ್ನು ಹಿಂತಿರುಗಿಸುವುದನ್ನು ಎರಡು ವರ್ಷ ಮುಂದೆ ಹಾಕಲಾಗಿದೆ. ಹಾಗಾಗಿ ಸಧ್ಯಕ್ಕೆ ನೀವು ಏನೂ ಕೊಡಬೇಕಾಗಿಲ್ಲ. ನಂತರ ನಮಗೆ ಕೊಡಬೇಕಾದ್ದನ್ನು ಕೊಡಿ ಅಂತ ಹೇಳುತ್ತಿದ್ದಾರೆ. ಇದರಿಂದ ಸಮಸ್ಯೆಯನ್ನು ಮುಂದೆ ಹೋಗಿದೆಯೇ ಹೊರತು ಪರಿಹಾರವಾಗಿಲ್ಲ. ಆ ದೇಶಗಳು ಕೊಡಬೇಕಾದ ಸಾಲವನ್ನು ಕೊಡಬೇಕು. ಜೊತೆಗೆ ಅಲ್ಲಿಯವರೆಗೂ ಮಾಡಿಕೊಳ್ಳುವ ಸಾಲವು ಸೇರಿಕೊಳ್ಳುತ್ತದೆ. ಹಾಗಾಗಿ ಬರುವ ವರ್ಷಗಳಲ್ಲಿ ಸಾಲದ ಹೊರೆಯೂ ಜಾಸ್ತಿಯಾಗುತ್ತದೆ. ಇದು ಜಿ-೨೦ ದೇಶಗಳು ಹಾಗೂ ೭೭ ಅತ್ಯಂತ ಬಡದೇಶಗಳ ನಡುವೆ ಆಗಿರುವ ಒಪ್ಪಂದ. ಅದು ಕೇವಲ ಸಾರ್ವಜನಿಕ ಸಾಲಕ್ಕೆ ಸಂಬಂಧಿಸಿದಂತೆ ಆಗಿರುವ ಒಪ್ಪಂದ. ಬ್ಯಾಂಕ್ ಹಾಗೂ ಖಾಸಗೀ ಸಾಲಕ್ಕೆ ಅದು ಅನ್ವಯವಾಗುವುದಿಲ್ಲ. ಅದನ್ನು ನೀವೆ ನಿರ್ವಹಿಸಿಕೊಳ್ಳಿ, ನಾವೇನು ಮಾಡುವುದಕ್ಕಾಗುವುದಿಲ್ಲ ಅಂತ ಹೇಳಿದ್ದಾರೆ. ಅದೇ ಜಾಗತಿಕ ಬ್ಯಾಂಕ್ ಮತ್ತು ಐಎಂಎಫ್ ಸಾಲಗಳ ವಿಷಯದಲ್ಲೂ ಅನ್ವಯವಾಗುತ್ತವೆ. ಒಟ್ಟಾರೆ ಬಡ ರಾಷ್ಟ್ರಗಳು ತೆಗೆದುಕೊಂಡಿರುವ ಎಲ್ಲಾ ಸಾಲವನ್ನು ಅಂದರೆ ಖಾಸಗಿ ಹಾಗೂ ಸಾರ್ವಜನಿಕ ಸಾಲ ಎಲ್ಲಾ ಸೇರಿದರೂ ಅದು ಜಿ-೨೦ ದೇಶಗಳ ಜಿಡಿಪಿಯ ಶೇಕಡ ೧ರಷ್ಟಾಗುತ್ತದೆ. ಅವರು ಅದನ್ನು ಸಲೀಸಾಗಿ ರದ್ದುಮಾಡಿಬಿಡಬಹುದು. ಇದೇ ಪ್ರಶ್ನೆ ಇಟಲಿ, ಸ್ಪೈನ್ ಇತ್ಯಾದಿ ದೇಶಗಳ ವಿಷಯದಲ್ಲೂ ಬರುತ್ತದೆ. ಅಷ್ಟೇ ಅಲ್ಲ ದಕ್ಷಿಣ ಯುರೋಪಿಯನ್ ದೇಶಗಳಿಗೂ ಸಾಲ ತೀರಿಸುವುದಕ್ಕೆ ಕಷ್ಟವಾಗುತ್ತದೆ. ಗ್ರೀಸ್ ಕೆಲವು ವರ್ಷಗಳ ಹಿಂದೆ ಜರ್ಮನ್ ಬ್ಯಾಂಕುಗಳಿಂದ ಹೊಡೆತ ತಿಂದಂತೆ ಇವೂ ಸಂಕಷ್ಟ ಅನುಭವಿಸಲಿವೆ. ಹಾಗಾಗಿ ಬಡದೇಶಗಳಿಂದ ಈ ಸಾಲವನ್ನು ರದ್ದು ಮಾಡಲಿಕ್ಕೆ ಒತ್ತಾಯ ಬರುತ್ತದೆ. ಅದು ನ್ಯಾಯಯುತವೂ ಹೌದು. ಬ್ರಾಂಡ್ಟ್ ಕಮಿಷನ್ ಪ್ರತಿವರ್ಷ ಜಿಡಿಪಿಯ ಶೇಕಡ ೧ರಷ್ಟನ್ನು ಬಡರಾಷ್ಟ್ರಗಳಿಗೆ ಕೊಡಬೇಕು ಎಂದು ಹೇಳಿತ್ತು. ಈಗ ನಾವು ಕೇಳುತ್ತಿರುವುದು ಕೇವಲ, ಆ ಸಾಲವನ್ನು ಮನ್ನಾ ಮಾಡಿ ಅಂತ ಈ ರಾಷ್ಟ್ರಗಳು ಹೇಳಬಹುದು. ಈ ಪ್ರತಿಯೊಂದು ಅಂಶವನ್ನೂ ಏಕತೆಯ ಸಂಸ್ಕೃತಿ, ತಾರತಮ್ಯದ ಸಂಸ್ಕೃತಿಗಿಂತ ಭಿನ್ನವಾಗಿಯೇ ನೋಡುತ್ತದೆ. ಏಕತೆಯ ಸಂಸ್ಕೃತಿ ಹೇಳುತ್ತದೆ- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇರಲಿ, ಸಾಲವನ್ನು ಮನ್ನಾ ಮಾಡಿಬಿಡೋಣ, ಪರ್ಯಾಯ ಬೆಳನಣಿಗೆಯ ಮಾದರಿಯನ್ನು ಅಳವಡಿಸಿಕೊಳ್ಳೋಣ, ಅವರಿರುವ ಕಡೆಯಲ್ಲೇ ಅವರಿಗೆ ಉದ್ಯೋಗ ಸಿಗುವಂತಹ ಬೆಳವಣಿಗೆಯ ಯೋಜನೆಯನ್ನು ರೂಪಿಸೋಣ. ಜೊತೆಗೆ ಈ ಪಿಡುಗಿನಿಂದ ಇಡೀ ಜಗತ್ತು ಸಂಕಷ್ಟದಲ್ಲಿದೆ. ಅವರ ಸಂಕಷ್ಟವನ್ನು ಬಳಸಿಕೊಂಡು ಕೆಲವು ಔಷಧ ಕಂಪೆನಿಗಳು ಲಾಭ ಮಾಡಿಕೊಳ್ಳಬಾರದು. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ದುಬಾರಿಯಾದ ಬೆಲೆಯನ್ನು ಒತ್ತಾಯಿಸಬಾರದು. ಔಷಧಿ ಎಲ್ಲರಿಗೂ ಪುಕ್ಕಟೆಯಾಗಿ ಸಿಗುವಂತಾಗಲಿ ಎಂದು ಏಕತೆಯ ಸಂಸ್ಕೃತಿ ಬಯಸುತ್ತದೆ. ಈ ಎಲ್ಲಾ ವಿಷಯಗಳಲ್ಲೂ ಏಕತೆಯ ಸಂಸ್ಕೃತಿ ಹಾಗೂ ತಾರತಮ್ಯದ ಸಂಸ್ಕೃತಿಯ ನಡುವೆ ಸಂಘರ್ಷವಾಗುತ್ತದೆ.

ಮೊದಲಿಗೆ ಈ ಕೆಲ ನಿರ್ದಿಷ್ಟ ವಿಷಯಗಳ ಸುತ್ತ ಸಂಘರ್ಷ ಪ್ರಾರಂಭವಾಗುತ್ತದೆ. ಆದರೆ ಅದು ಅಂತಿಮವಾಗಿ ಏಕತೆಯ ಸಂಸ್ಕೃತಿಗಾಗಿ ನಡೆಯುವ ಹೋರಾಟವಾಗುತ್ತದೆ. ಸಮಾಜವಾದಕ್ಕಾಗಿನ ಹೋರಾಟವಾಗುತ್ತದೆ. ಇಂತಹ ವೈರಾಣು ಇನ್ನು ಮುಂದೆ ಹೆಚ್ಚು ಪದೇ ಪದೇ ಕಾಡುತ್ತಿರುತ್ತದೆ. ಕಳೆದ ವೈರಾಣು ಬಂದಿದ್ದು ೧೦೦ ವರ್ಷಗಳ ಹಿಂದೆ. ಇನ್ನು ನೂರು ವರ್ಷ ನೆಮ್ಮದಿಯಿಂದ ಇರಬಹುದು ಅಂತ ಇರುವುದಕ್ಕಾಗುವುದಿಲ್ಲ. ಈಗ ನಾವು ಪ್ರಕೃತಿಯನ್ನು ವಿಪರೀತ ಆಕ್ರಮಿಸಿಕೊಂಡು ಬಿಟ್ಟಿದ್ದೇವೆ. ಬಂಡವಾಳಶಾಹಿಯ ಸ್ವಭಾವವೇ ಆಕ್ರಮಣಕಾರಿಯಾದದ್ದು. ಹಾಗಾಗಿ ಇಂತಹ ವೈರಾಣುವಿನ ಆಕ್ರಮಣ ಪದೇ ಪದೇ ಆಗುತ್ತಿರುತ್ತದೆ. ಇದು ಇಡೀ ಮನುಕುಲವನ್ನೇ ಕಾಡುತ್ತದೆ. ಇಡೀ ಮನುಕುಲ ಉಳಿದುಕೊಳ್ಳಬೇಕು. ಅದಕ್ಕೆ ಏಕತೆಯ ಸಂಸ್ಕೃತಿ ಬೇಕು. ಅದು ಕೇವಲ ಸಮಾಜವಾದದಿಂದ ಮಾತ್ರ ಸಾಧ್ಯ. ಚರಿತ್ರೆಯ ಅಂತ್ಯ ಬಂದಿದೆ ಅನ್ನುವ ನಿಲುವನ್ನು ಕೆಲವು ಎಡಪಂಥಿಯರು ಒಪ್ಪಿಕೊಳ್ಳುತ್ತಿದ್ದಾರೆ. ಯಾಕೆಂದರೆ ಬೃಹತ್ತಾದ, ಹೆಚ್ಚು ಸಂಕೀರ್ಣವಾದ ಮೂಲಭೂತ ಸೌಕರ್ಯವನ್ನು ಬಂಡವಾಳಶಾಹಿ ನಿರ್ಮಿಸಿದೆ. ಇದನ್ನೆಲ್ಲಾ ಉರುಳಿಸುವುದಕ್ಕೆ ಸಾಧ್ಯವಾ ಅನ್ನುವ ಅನುಮಾನ ಅವರಿಗಿದೆ. ಆದರೆ ಬಹುಮುಖ್ಯವಾಗಿ ಒಂದಂಶವನ್ನು ನೆನಪಿಟ್ಟುಕೊಳ್ಳಬೇಕು. ಮೂಲಭೂತ ಸೌಕರ್ಯ ತುಂಬಾ ಸಂಕೀರ್ಣವಾಗಿದ್ದರೂ ಒಂದು ವೈರಾಣುವಿನ ಆಕ್ರಮಣದ ಎದುರು ಅದು ಏನೂ ಅಲ್ಲ. ಮನುಷ್ಯ ಅಭೇದ್ಯನಲ್ಲ. ಮನುಷ್ಯನನ್ನು ಬಂಡವಾಳಶಾಹಿ ನಿರ್ಮಿಸಿರುವ ಈ ಮೇಲ್‌ರಚನೆ ಅಥವಾ ಹಣಕಾಸಿನಿಂದ ರಕ್ಷಿಸುವುದಕ್ಕೆ ಸಾಧ್ಯವಿಲ್ಲ. ನಿಜವಾಗಿ ಮುಖ್ಯವಾಗುವುದು ಬಂಡವಾಳಶಾಹಿಯ ನೈತಿಕ ಅಡಿಪಾಯ. ಏಕತೆಯ ಸಂಸ್ಕೃತಿ ಅನಿವಾರ್ಯ. ಮನುಕುಲ ಉಳಿಯಬೇಕಾದರೆ ಈ ಏಕತೆಯ ಸಂಸ್ಕೃತಿ ಬಲಗೊಳ್ಳಬೇಕು. ನಮಗಿರುವ ದಾರಿ ಏಕತೆಯ ಸಂಸ್ಕೃತಿ, ಸಮಾಜವಾದ ಮಾತ್ರ. ಇದು ಕೇವಲ ಆಸೆಯಲ್ಲ. ಇದು ಪಿಡುಗಿನ ನಂತರದ ಜಗತ್ತಿನ ಅಜೆಂಡಾ ಆಗುತ್ತದೆ. ಈ ಪಿಡುಗು ಮನುಷ್ಯನ ವಾಸ್ತವ ಸ್ಥಿತಿಯನ್ನು ನಮ್ಮ ಮುಂದೆ ತೆರದಿಟ್ಟಿದೆ.