ಮಾನವ ಕ್ರೌರ್ಯದ ವೈವಿಧ್ಯಗಳು.

೧೯೭೬ರಿಂದ ೧೯೮೧ರ ಅವಧಿಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದುವಾಗ ನನ್ನನ್ನು ಪದೇ ಪದೇ ಕಾಡಿ, ಕಲಕಿ, ನಿದ್ದೆ ಕೆಡಿಸಿದ್ದು ಯಹೂದಿಗಳ ಸಾಮೂಹಿಕ ಕಗ್ಗೊಲೆ ಮತ್ತು ಸಿನಿಮಾಗಳಲ್ಲಿ ನೋಡಿದ್ದ ಕಾನ್ಸಂಟ್ರೇಷನ್ ಕ್ಯಾಂಪಿನ ಕ್ರೌರ್ಯ. ಯುರೋಪಿಗೆ ಹೋಗಬೇಕು, ಅವುಗಳನ್ನು ನಾನೇ ಸ್ವತಃ ನೋಡಬೇಕು ಎನ್ನುವುದು ನನ್ನ ಬಹು ದೊಡ್ಡ ಆಸೆಯಾಗಿತ್ತು. ಆದರೆ ಅದಕ್ಕಾಗಿ ನಾನು ನಿವೃತ್ತಳಾಗುವ ತನಕ, ಅಂದರೆ, ೩೮ ವರ್ಷಗಳು ಕಾಯಬೇಕಾಯಿತು. ೨೦೧೮ರಲ್ಲಿ ಬರ್ಲಿನ್ ಸಮೀಪದ ಸ್ಯಾಕ್ಸನ್ ಹೌಸೆನ್ ಮತ್ತು ೨೦೨೩ರಲ್ಲಿ ಪೋಲ್ಯಾಂಡಿನ ಔಷ್ವಿಟ್ಡ್ಸ್ ಮತ್ತು ಬರ್ಕನೋವ್ ಕಾನ್ಸಂಟ್ರೇಷನ್ ಕ್ಯಾಂಪ್‌ಗಳಿಗೆ ಹೋಗುವ ಸಂದರ್ಭ ಒದಗಿತು.
೨೦೧೮ರಲ್ಲಿ ನನಗೆ ನಿ
ವೃತ್ತಿಯಾದಾಗ, ಫ್ರಾಂಕ್‌ಫರ್ಟ್‌ನಲ್ಲಿ ಇದ್ದ ನನ್ನ ಆತ್ಮೀಯ ವಿದ್ಯಾರ್ಥಿ ವಿಕ್ರಂ, ಜರ್ಮನಿಗೆ ಬರಲೇಬೇಕು ಎಂದು ಒತ್ತಾಯಿಸಿದ. ಅಲ್ಲಿಗೆ ಹೋದ ನಾವು, ಬರ್ಲಿನ್‌ಗೂ ಹೋದೆವು. ಅದರ ಸಮೀಪದಲ್ಲೇ ಇದ್ದ ಸ್ಯಾಕ್ಸನ್ ಹೌಸೆನ್‌ಗೆ ಹೋದೆವು. ಅದನ್ನು ನೋಡುತ್ತಾ ಮನಸ್ಸು ಸೋತು ಹೋಯಿತು. ರಾಜಕೀಯ ಹಾಗೂ ಜನಾಂಗೀಯ ದ್ವೇಷದ ತೀವ್ರತೆಯ ಕರಾಳ ಮುಖ ನಮ್ಮ ಮುಂದೆ ತೆರೆದುಕೊಂಡಿತ್ತು. ಯಹೂದಿಗಳ ದೇಹವನ್ನು ಸುಡಲು ನಿರ್ಮಿಸಿದ್ದ ಫರ್ನೆಸ್‌ಗಳು ದ್ವೇಷದ ಕಾವನ್ನು ಹೊರಸೂಸುತ್ತಿದ್ದವು. ತೀರಾ ಕಿರಿದಾಗಿ, ತಣ್ಣಗೆ ಕೊರೆಯುತ್ತಿದ್ದ ಜೈಲಿನ ಕೋಣೆಗಳು ಒಂಟಿತನ ಹತಾಶೆಯನ್ನು ವ್ಯಕ್ತಪಡಿಸುವುದರ ಜೊತೆಗೆ ತನ್ನ ಸಹಮಾನವನ ಸಂಕಟಕ್ಕೆ ಮನುಷ್ಯ ಅದೆಷ್ಟು ನಿರ್ಭಾವುಕವಾಗಿ, ತಣ್ಣಗೆ ಪ್ರತಿಕ್ರಿಯಿಸಬಲ್ಲ ಎನ್ನುವುದನ್ನು ಅನಾವರಣಗೊಳಿಸಿತ್ತು.

ಆದರೆ ನನ್ನೊಳಗನ್ನೇ ನಡುಗಿಸಿ, ನಾನು ಈವರೆಗೆ ನಂಬಿಕೊಂಡಿದ್ದ ಎಲ್ಲವನ್ನೂ ಪ್ರಶ್ನೆಗೊಡ್ಡುವಂತೆ ಮಾಡಿದ್ದು ಪೋಲ್ಯಾಂಡಿನ ಔಷ್ವಿಟ್ಡ್ಸ್ ಮತ್ತು ಬರ್ಕನೋವ್ ಕಾನ್ಸಂಟ್ರೇಷನ್ ಕ್ಯಾಂಪುಗಳು. ೨೦೨೩ರ ಫೆಬ್ರುವರಿಯಲ್ಲಿ ಆತ್ಮೀಯ ಗಳೆಯರಾಗಿದ್ದ ಚಂದ್ರಶೇಖರಯ್ಯನವರ ಮಗ ಸದಾನಂದನ ಮದುವೆಗೆ ನಮ್ಮ ಗೆಳೆಯರ ದಂಡು ಪೋಲ್ಯಾಂಡಿಗೆ ತೆರಳಿತು. ಅಲ್ಲಿ ಪೋಲ್ಯಾಂಡಿನ ಔಷ್ವಿಟ್ಡ್ಸ್ ಮತ್ತು ಬರ್ಕನೋವ್ ಕ್ಯಾಂಪಿಗೆ ಹೋದೆವು. ನ್ಯಾಜ಼ಿ ಆಳ್ವಿಕೆಯ ೧೨ ವರ್ಷಗಳಲ್ಲಿ (೧೯೩೩-೧೯೪೫) ಸುಮಾರು ೨೫ ಕಾನ್ಸಂಟ್ರೇಷನ್ ಕ್ಯಾಂಪುಗಳು ಇದ್ದವು. ಅವುಗಳಲ್ಲಿ ನಾವು ಹೋದ ಕ್ಯಾಂಪ್ ಇಡೀ ಯುರೋಪಿನಲ್ಲೇ ಅತ್ಯಂತ ದೊಡ್ಡ ಹಾಗೂ ಕ್ರೂರವಾದ ಕ್ಯಾಂಪ್. ೧೯೩೩ರಲ್ಲಿ ಈ ಕ್ಯಾಂಪ್‌ಗಳು ಅಸ್ತಿತ್ವಕ್ಕೆ ಬಂದದ್ದು ಕಮ್ಯೂನಿಷ್ಟ್ ಕಾರ್ಯಕರ್ತರನ್ನು ಹತ್ತಿಕ್ಕುವ ರಾಜಕೀಯ ಕಾರಣಕ್ಕೆ. ನಂತರದಲ್ಲಿ ಇದು ಜನಾಂಗೀಯ ದ್ವೇಷವನ್ನು ತೀರಿಸಿಕೊಳ್ಳುವ ಕೇಂದ್ರಗಳಾದವು. ಈ ಕ್ಯಾಂಪುಗಳಲ್ಲಿ ಒಟ್ಟಾರೆ ೧.೭ ಮಿಲಿಯನ್ ಜನ ಕೊಲೆಗೀಡಾದರು. ಔಷ್ವಿಡ್ಸ್ ಕ್ಯಾಂಪಿನಲ್ಲಿ ಅತ್ಯಂತ ವೈವಿಧ್ಯಮಯವಾದ ವಿಧಾನಗಳಲ್ಲಿ ಕೈದಿಗಳನ್ನು ಕೊಂದರು. ಉಳಿದ ಕ್ಯಾಂಪುಗಳಲ್ಲಿ ಈ ವೈವಿಧ್ಯತೆ ಕಂಡುಬರುವುದಿಲ್ಲ.
ಔಷ್ವಿಟ್ಡ್ಸ್ ಮತ್ತು ಬರ್ಕನೋವ್ ನೋಡುವಾಗ ಜೀವ ತಲ್ಲಣಿಸಿಹೋಯಿತು. ಧಾರ್ಮಿಕ, ಜನಾಂಗೀಯ, ಹಾಗೂ ರಾಜಕೀಯ ದ್ವೇಷದಿಂದ ಮನುಷ್ಯ ತನ್ನದೇ ಕುಲದ ಮತ್ತೊಂದು ಜೀವಿಯನ್ನು ಅಳಿಸಿ ಹಾಕಲು ಅದೆಷ್ಟು ವಿಭಿನ್ನ ಬಗೆಗಳಲ್ಲಿ ತನ್ನ ಸೃಜನಶೀಲತೆಯನ್ನು ವ್ಯಕ್ತಪಡಿಸಬಲ್ಲ ಎನ್ನುವುದಕ್ಕೆ ಅದು ಸಾಕ್ಷಿಯಾಗಿತ್ತು. ಹೊರಗೆ ಕೊರೆಯುತ್ತಿದ್ದ ಮೈನೆಸ್ ಆರು ಡಿಗ್ರಿ ಚಳಿಗಿಂತಲೂ ಹೆಚ್ಚಾಗಿ ಮನುಷ್ಯನ ತಣ್ಣನೆಯ ಕ್ರೌರ್ಯ ಮೈಮನಗಳನ್ನು ಕೊರೆಯಿತು. ಮನಸ್ಸು ಮುದುಡಿಹೋಯಿತು. ಹಲವು ಪ್ರಶ್ನೆಗಳು ನನ್ನನ್ನು ಕಾಡಲಾರಂಭಿಸಿದವು. ಈ ರಾಷ್ಟ್ರೀಯತೆ, ರಾಷ್ಟ್ರಪ್ರೇಮ, ಧರ್ಮ, ಮಹಿಳಾ ಪ್ರಶ್ನೆಗಳು, ಇವುಗಳ ಜೊತೆಗೆ ಬೆಳೆದಿರುವ ಚಳುವಳಿಗಳು, ಅವುಗಳಿಗೆ ಸಂಬಂಧಿಸಿದಂತೆ ದಿನದ ಬದುಕಿನಲ್ಲಿ ಕಾಣುವ ವೈರುಧ್ಯಗಳು ನನ್ನನ್ನು ತೀವ್ರವಾಗಿ ಕಾಡತೊಡಗಿದವು. ಅಂದು ಕಾಡಲಾರಂಭಿಸಿದ ಎಷ್ಟೋ ಪ್ರಶ್ನೆಗಳು ಹಾಗೂ ವೈರುಧ್ಯಗಳು ಇಂದಿಗೂ ಹಾಗೇ ಉಳಿದಿವೆ. ಮನುಷ್ಯನನ್ನು ತನ್ನ ಸಹಜೀವಿಯ ಸಂಕಟ ಕಲಕುವುದಿಲ್ಲವೇ? ಹೆಂಗಸರು ಉಳಿದ ಹೆಂಗಸರ ಮೇಲಾಗುವ ಕ್ರೌರ್ಯ ದಬ್ಬಾಳಿಕೆಯನ್ನು ವಿರೋಧಿಸುವುದಿಲ್ಲವೇ? ತಮ್ಮ ಗುಂಪಿಗೆ ಸೇರದ ಹೆಂಗಸರ ಮೇಲೆ ದಬ್ಬಾಳಿಕೆ ಮಾಡುವಂತೆ ಅವರನ್ನು ಪ್ರೇರೇಪಿಸುವ ಅಂಶ ಯಾವುದು? ಅಧಿಕಾರ ಸಿಕ್ಕಾಗ ಹೆಂಗಸರು ಗಂಡಸರಷ್ಟೇ ಕ್ರೂರಿಗಳಾಗುತ್ತಾರೆ. ಹಾಗಾಗಿ ಹೆಂಗಸರಲ್ಲಿ ವಿಶೇಷವಾದ ಕಾರುಣ್ಯವಿದೆ ಎನ್ನುವುದು ನಿಜವೇ? ಯಾವ ಪಾಪವನ್ನೂ ಅರಿಯದ ಮುಗ್ಧಮಕ್ಕಳನ್ನು ಕೊಲ್ಲುವುದು ಹೇಗೆ ಸಾಧ್ಯ? ಹೀಗೆ ಏನೇನೋ.
ಆ ಕ್ಯಾಂಪಿನಲ್ಲಿ ಗಂಡಸರು, ಹೆಂಗಸರು, ಮಕ್ಕಳು ಸೇರಿದಂತೆ ೧೧ ಲಕ್ಷ ಮಂದಿ ಅತ್ಯಂತ ವೈವಿಧ್ಯಮಯ ಬಗೆಗಳಲ್ಲಿ ಕೊಲ್ಲಲ್ಪಟ್ಟರು. ಗ್ಯಾಸ್ ಛೇಂಬರ್‌ನಲ್ಲಿ ಹಲವರು ಸತ್ತರೆ, ವಿಷದ ಇಂಜೆಕ್ಷನ್ ಮೂಲಕ ಸತ್ತವರು ಮತ್ತೆಷ್ಟೋ ಮಂದಿ. ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರದ ಹೆಸರಲ್ಲಿ ಭೇದಿ ಔಷಧವನ್ನು ನೀಡಿ ಹಲವರನ್ನು ಕೊಂದರು. ಕೊರೆಯುವ ಚಳಿಯಿಂದ ಮಲಗಿದಲ್ಲೇ ಮರಗಟ್ಟಿ ತೀರಿಹೋದವರೆಷ್ಟೋ ಮಂದಿ.
ಇನ್ನು ವ್ಯವಸ್ಥಿತ ಉಪವಾಸದಿಂದ ಸತ್ತವರು ಸಾವಿರಾರು ಮಂದಿ. ವಿಜ್ಞಾನಿಗಳು ಮಾಡುತ್ತಿದ್ದ
ಸಂಶೋಧನೆಗಳಿಗೆ ಗಿನ್ನಿಪಿಗ್ ಆಗಿ ಮೈಯ್ಯೆಲ್ಲಾ ವ್ರಣವಾಗಿ, ಬಗೆ ಬಗೆಯ ಸಮಸ್ಯೆಗೆ ಒಳಗಾಗಿ ಸತ್ತವರು ಮತ್ತಷ್ಟು. ಪರಸ್ಪರ ಒಬ್ಬರಿಂದೊಬ್ಬರು ಬೇರಾಗಿದ್ದ ಕುಟುಂಬದ ಸದಸ್ಯರು ಒಂಟಿತನ ಮತ್ತು ಹೆದರಿಕೆಯಿಂದಲೇ ಸತ್ತುಹೋದರು. ಸೈನ್ಯದ ಅಧಿಕಾರಿಗಳ ಲೈಂಗಿಕ ತೃಷೆಗೆ ಬಲಿಯಾಗಿ ಹೋದ ಹೆಣ್ಣುಮಕ್ಕಳು ಇನ್ನೆಷ್ಟೋ. ಹೈ ವೋಲ್ಟೇಜ್ ಇಲೆಕ್ಟ್ರಿಕ್ ತಂತಿಯ ಮೇಲೆ ಹಾಕಿ ಕೊಂದದ್ದು ಮತ್ತೆಷ್ಟೋ ಜನರನ್ನು.
ನಮಗೆ ಒಬ್ಬ ಮಹಿಳೆ ಗೈಡ್ ಆಗಿ ಬಂದರು. ಆಕೆ ಅಲ್ಲಿನ ವಿವರಗಳನ್ನೆಲ್ಲಾ ನಿಧಾನವಾಗಿ ಇಂಗ್ಲಿಷ್‌ನಲ್ಲಿ ಹೇಳುತ್ತಾ, ಕ್ಯಾಂಪಿನಲ್ಲಿದ್ದ ಹಲವರು ದಿನಚರಿಗಳನ್ನು ಬರೆದಿದ್ದರು ಎನ್ನುವುದನ್ನು ತಿಳಿಸಿದರು. ೧೯೪೫ರ ನಂತರ ಅಲ್ಲಿಂದ ಬದುಕುಳಿದು ಬಂದವರು ತಮ್ಮ ಅನುಭವಗಳನ್ನು ದಾಖಲಿಸಿದ್ದನ್ನೂ ಹೇಳಿದರು. ಇವುಗಳ ನೂರಾರು ಪ್ರತಿಗಳನ್ನು ತೆಳು ಹಳದಿ ಬಣ್ಣದ ಕಾಗದದ ಮೇಲೆ ಮುದ್ರಿಸಿ ಅಲ್ಲಿ ಇಟ್ಟಿರುವುದನ್ನು ತೋರಿಸಿದರು. ಅದರಲ್ಲಿ ಮನ ಕಲಕುವಂತಹ ಹಲವು ಸೂಕ್ಷ್ಮವಾದ ವಿವರಗಳು ಇದ್ದವು.
ಇಂತಹ ಕ್ಯಾಂಪಿಗೆ ಬರುತ್ತಿದ್ದ ಜನರನ್ನು ಮೊದಲು ವಿಂಗಡಿಸಲಾಗುತ್ತಿತ್ತು. ಮೊತ್ತಮೊದಲು ಸಾವಿನ ಬಾಯಿಗೆ ಹೋಗುತ್ತಿದ್ದವರು ತುಂಬಾ ದುರ್ಬಲರಾಗಿದ್ದ ಪುರುಷರು, ಮಹಿಳೆಯರು ಮತ್ತು ವಯೋವೃದ್ಧರು. ಏಕೆಂದರೆ ಅವರು ಉಪಯೋಗಕ್ಕೆ ಬರುತ್ತಿರಲಿಲ್ಲ. ಅವರಿಗೆ ಆಹಾರ ಕೊಡುವುದು ನಿರುಪಯುಕ್ತ ಎನ್ನುವುದು ನ್ಯಾಜ಼ಿಗಳ ಅಭಿಪ್ರಾಯವಾಗಿತ್ತು. ಈ ವಯಸ್ಸಾದವರನ್ನು ನಂಬಿಸಿ, ಮೋಸದಿಂದ ಕೊಲ್ಲುತ್ತಿದ್ದ ರೀತಿಯನ್ನು ಔಷ್ವಿಟ್ಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಓಟ್ಟೋ ಮಾಲ್ ಎಂಬುವರು ದಾಖಲಿಸಿದ್ದಾರೆ. ಕ್ಯಾಂಪಿಗೆ ಬರುವ ವೃದ್ಧರು ಮತ್ತು ದುರ್ಬಲರಿಗೆ, ಅವರ ವಸ್ತುಗಳನ್ನೆಲ್ಲಾ ಹುಷಾರಾಗಿ ಇಡುವಂತೆ ಹೇಳಿ, ನೀವು ಇಲ್ಲಿ ಆರಾಮಾಗಿ ಇರಬಹುದು ಎಂದು ನಂಬಿಸಿ, ಸ್ನಾನ ಮುಗಿಸಿ ಬಂದ ಮೇಲೆ ಅವರನ್ನು ಕೊಠಡಿಗಳಿಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದರು. ನಂತರ ಅವರಿಗೆ ನಂಬಿಕೆ ಮೂಡುವಂತೆ ಟವಲ್ ಮತ್ತು ಸೋಪು ನೀಡಿ, ಸ್ನಾನಕ್ಕೆ ಕಳುಹಿಸಿ, ವಾಪಸ್ಸು ಬಂದು ಸಾಮಾನುಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಆ ಸ್ನಾನದ ಕೋಣೆಗಳ ಮೇಲೆ ಸೋಂಕು ನಿವಾರಣಾ ಕೊಠಡಿ ಎನ್ನುವ ಬೋರ್ಡ್ ಇರುತ್ತಿತ್ತು. ಆದರೆ ವಾಸ್ತವವಾಗಿ ಅವರೆಲ್ಲರೂ ಹೋಗುತ್ತಿದ್ದದ್ದು ಗ್ಯಾಸ್ ಚೇಂಬರಿಗೆ. ನ್ಯಾಜ಼ಿಗಳಿಗೆ ಯಹೂದಿಗಳೆಲ್ಲರೂ ಸೋಂಕಿನ ಹಾಗೆ ಕಾಣುತ್ತಿದ್ದರು! ಒಳಗೆ ಹೋದ ಕೂಡಲೆ ಷವರ್‌ನಿಂದ ಹೊರಬರುತ್ತಿದ್ದದ್ದು ವಿಷದ ಗಾಳಿ. ಅವರ್ಯಾರೂ ಮತ್ತೆಂದೂ ತಮ್ಮ ಸಾಮಾನುಗಳನ್ನು ತೆಗೆದುಕೊಳ್ಳಲು ಮರಳಲೇ ಇಲ್ಲ. ಮಾಲ್ ಹೇಳುತ್ತಾರೆ, ಹೀಗೆ ಸತ್ತವರನ್ನು ಹೊರಗೆ ಎಳೆದುಹಾಕಿ ಅವರ ಕೂದಲನ್ನು ಕತ್ತರಿಸುತ್ತಿದ್ದರು. ಚಿಮಟದಿಂದ ಅವರ ಹಲ್ಲುಗಳನ್ನು ಕಿತ್ತು ಅದರಲ್ಲಿರಬಹುದಾದ ಬಂಗಾರದ ಹಲ್ಲುಗಳನ್ನು ತೆಗೆದುಕೊಂಡು ಆ ದೇಹಗಳನ್ನು ಸುಡಲು ಒಯ್ಯುತ್ತಿದ್ದರು.
ಹೀಗೆ ಕೊಂದ ಯಹೂದಿಗಳ ಸಾಮಾನು ಸರಂಜಾಮುಗಳನ್ನು ವಿಂಗಡಿಸಲು ಉಳಿದ ಯಹೂದಿ ಮಹಿಳಾ ಕೈದಿಗಳನ್ನು ಹಚ್ಚುತ್ತಿದ್ದರು. ಈ ಕೆಲಸ ಮಾಡುತ್ತಿದ್ದ ಎನ್ನುವ ಕಿಟ್ಟಿ ಹಾರ್ಟ್ ಎಂಬ ಪೋಲಿಷ್ ಜ್ಯೂ ಹುಡುಗಿ ಅವರ ಬಟ್ಟೆಗಳು, ಆಟಿಕೆಗಳು ಹಾಗೂ ಅವರು ತಂದಿದ್ದ ಒಡವೆ, ಹಣ, ಅಮೂಲ್ಯವಾದ ಹರಳುಗಳು ಇವೆಲ್ಲವನ್ನೂ ಬೇರೆ ಮಾಡುತ್ತಿದ್ದುದನ್ನೂ ಮತ್ತು ಭ್ರಷ್ಠ ನ್ಯಾಜ಼ಿ ಅಧಿಕಾರಿಗಳು ನಿರ್ಲಜ್ಜೆಯಿಂದ ಅದರಲ್ಲಿನ ಅಮೂಲ್ಯ ವಸ್ತುಗಳನ್ನು ಲಪಟಾಯಿಸಿಕೊಂಡು ಹೋಗುತ್ತಿದ್ದುದನ್ನು ದಾಖಲಿಸುತ್ತಾಳೆ.
ಈ ಕ್ಯಾಂಪಿನಿಂದ ಬದುಕುಳಿದು ಬಂದ ಹೆಣ್ಣುಮಗಳೊಬ್ಬಳು ತಮ್ಮನ್ನು ಏನು ಮಾಡುತ್ತಿದ್ದರು ಎನ್ನುವುದನ್ನು ಹೇಳುತ್ತಾಳೆ. ಕ್ಯಾಂಪಿಗೆ ಹೋದಕೂಡಲೆ ತಮ್ಮನ್ನು ಸಂಪೂರ್ಣ ಬೆತ್ತಲಾಗಿಸಿ, ನ್ಯಾಜ಼ಿ ಪುರುಷರು ಕುರಿಯ ಮೈಮೇಲಿನ ಕೂದಲನ್ನು ಬೋಳಿಸುವಂತೆ ತಮ್ಮ ತಲೆಗೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಿದ್ದರು. ಬೋಳುತಲೆ, ಬೆತ್ತಲು ಮೈ ನೋಡಿಕೊಂಡಾಗ ಸ್ವತಃ ತಮ್ಮನ್ನು ತಾವೇ ಗುರುತಿಸಲು ಸಾಧ್ಯವಾಗದೇ ಹೋದ ಘೋರ ಅನುಭವವನ್ನು ಹೇಳಿಕೊಳ್ಳುತ್ತಾಳೆ. ಮತ್ತೊಬ್ಬ ಬದುಕುಳಿದ ಕೈದಿ ಮಹಿಳಾ ಗಾರ್ಡುಗಳು ತಮ್ಮನ್ನು ಒದ್ದು ಗಾಯಗೊಳಿಸುತ್ತಿದ್ದರು ಎನ್ನುತ್ತಾಳೆ. ಅಲ್ಲಿದ್ದ ಈ ಮಾಹಿತಿಯನ್ನು ಓದುವಾಗ ಅಧಿಕಾರ ಮತ್ತು ರಾಜಕೀಯ ಸಿದ್ಧಾಂತಗಳು ಬುದ್ಧಿ ಮತ್ತು ವಿವೇಕವನ್ನು ಆವರಿಸಿಕೊಂಡಾಗ ಹೆಂಗಸರು, ಗಂಡಸರು ಅಂತೆಲ್ಲಾ ಇಲ್ಲವೇನೋ, ಮನುಷ್ಯನನ್ನು ಕ್ರೌರ್ಯ ಮೆಟ್ಟಿಕೊಳ್ಳುತ್ತದೆ ಅನ್ನಿಸಲಾರಂಭಿಸಿತು. ಮಹಿಳೆಯರು ಪುರುಷರಿಗಿಂತ ಎಲ್ಲಿ ಭಿನ್ನ ಎನ್ನುವುದನ್ನು ಅರ್ಥೈಸಿಕೊಳ್ಳಲಾಗದೆ ಗಲಿಬಿಲಿಯಾಯಿತು.
ಗಟ್ಟುಮುಟ್ಟಾಗಿದ್ದವರನ್ನು ಕ್ಯಾಂಪುಗಳಲ್ಲಿ ಕೂಲಿಗಳಾಗಿ ಬಳಸಿಕೊಂಡರು. ಅವರನ್ನು ಸ್ಲೇವ್ ಲೇಬರ್ ಎಂದು ಕರೆಯುತ್ತಿದ್ದರು. ದುಡಿಯಲು ಅಸಮರ್ಥರಾದಾಗ ಅವರನ್ನೂ ಕೊಂದರು. ಸುಮ್ಮನೆ ಇಷ್ಟು ಜನ ಸತ್ತರು ಎಂದು ಹೇಳಿದರೆ ಸತ್ತುಹೋದವರ ಲೆಕ್ಕ ಮನಸ್ಸಿಗೆ ಬರುವುದಿಲ್ಲ. ಆಶ್ವಿಷ್ಡ್ಸ್‌ನಲ್ಲಿ ಇರುವ ಕೆಲವು ದೊಡ್ಡ ದೊಡ್ಡ ಕೊಠಡಿಗಳನ್ನು ನೋಡಿದರೆ ತೀರಿ ಹೋದವರ ಸಂಖ್ಯೆಯ ಅಗಾಧತೆ ನಮಗೆ ಮನದಟ್ಟಾಗುತ್ತದೆ. ಆ ಒಂದೊಂದು ಕೊಠಡಿಯೂ ಮಾನವನ ಕ್ರೌರ್ಯದ ಪರಾಕಾಷ್ಠೆಯ ಚಿತ್ರಗಳು. ಒಂದು ಕೋಣೆಯಲ್ಲಿ ಮಕ್ಕಳ ಚಪ್ಪಲಿಗಳ ಗುಡ್ಡವಿದೆ, ಮತ್ತೊಂದರಲ್ಲಿ ಕನ್ನಡಕಗಳ ಬೆಟ್ಟ, ಮಗದೊಂದರಲ್ಲಿ ನಡೆಯಲಾಗದಿದ್ದವರ ಕೃತಕಕಾಲುಗಳ ಮಾಡೆತ್ತರದ ರಾಶಿ, ಇನ್ನೊಂದರಲ್ಲಿ ಒಂದು ಕಾಲಕ್ಕೆ ಹಲವು ಹೆಂಗಸರು ಅಕ್ಕರೆಯಿಂದ ಬಾಚಿಕೊಳ್ಳುತ್ತಿದ್ದ ಅವರ ನೀಳವಾದ ತಲೆಕೂದಲ ಬೃಹತ್ ಗುಡ್ಡೆ, ಕ್ಯಾಂಪಿಗೆ ಬರುವಾಗ ಪ್ರತಿಯೊಂದು ಕುಟುಂಬವೂ ಅತ್ಯಂತ ಪ್ರೀತಿಯಿಂದ ಬಹುಮುಖ್ಯವೆಂದು ಆರಿಸಿಕೊಂಡು ಬಂದಿದ್ದ ಪಾತ್ರೆಗಳ ಸಮುದ್ರ, ಮಕ್ಕಳು ಮೆಚ್ಚಿ ಮುದ್ದಿಸುತ್ತಿದ್ದ ಅವರ ಆಟಿಕೆಗಳು, ಬರೆಯುವ ಸ್ಲೇಟುಗಳು, ಒಂದೇ ಎರಡೇ. ಬಹುಶಃ ಮಿಡಿಯುವ ಅತ್ಯಂತ ಸಾಮಾನ್ಯ ಹೃದಯವೂ ಒಡೆದುಹೋಗಬಹುದಾದಂಥ ನೋಟಗಳು.
ಅವರನ್ನು ಕೂಡಿಡುತ್ತಿದ್ದ ಕೊಠಡಿಗಳು ಉಸಿರಾಡಲೂ ಕಷ್ಟವಾಗುವಷ್ಟು ಕಿರಿದಾಗಿ ಇಕ್ಕಟ್ಟಾಗಿದ್ದವು. ಆ ರೂಮಿನ ನೆಲ ತಣ್ಣಗೆ ಕೊರೆಯುತ್ತಿತ್ತು. ಸೂರ್ಯನ ಬೆಳಕು ಆ ಕೊಠಡಿಗಳೊಳಕ್ಕೆ ಎಂದೂ ಸುಳಿದಂತೆ ಕಾಣಲಿಲ್ಲ. ನಾವು ಆಸ್ವಿಟ್ಡ್ಸ್‌ಗೆ ಹೋದ ದಿನ ಅಲ್ಲಿನ ತಾಪಮಾನ ಮೈನಸ್ ಆರು ಡಿಗ್ರಿಗಳಿದ್ದವು. ನಾನು ಮೈತುಂಬಾ ಮೂರು ಲೇಯರ್ ಬಟ್ಟೆ ಹಾಕಿಕೊಂಡಿದ್ದರೂ ನನ್ನಿಂದ ಛಳಿ ತಡೆಯಲಾಗಿರಲಿಲ್ಲ. ಅಂಥದ್ದರಲ್ಲಿ ಸರಿಯಾಗಿ ತೊಡಲು, ಹೊದೆಯಲು ಹಾಗೂ ಹೊಟ್ಟೆ ತುಂಬಾ ತಿನ್ನಲು ಏನೇನೂ ಇಲ್ಲದಿದ್ದ ಆ ಕೈದಿಗಳು ಇಲ್ಲಿ ಅದೆಂತಹ ಭಯಂಕರ ಸ್ಥಿತಿಯಲ್ಲಿ ತಮ್ಮ ದಿನಗಳನ್ನು ಕಳೆದಿರಬಹುದು ಎನ್ನುವ ಚಿತ್ರ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದಂತೆ, ನನ್ನ ಮೈ ಮರಗಟ್ಟುತ್ತಿದೆ ಅನ್ನಿಸಲಾರಂಭಿಸಿತ್ತು. ಅವರು ಪರಸ್ಪರ ಯಾವ ರಹಸ್ಯವನ್ನೂ ಹಂಚಿಕೊಳ್ಳಲು ಸಾಧ್ಯವಾಗಬಾರದು ಎನ್ನುವ ಕಾರಣಕ್ಕೆ ಶೌಚಾಲಯಗಳಿಗೆ ಬಾಗಿಲುಗಳು ಕೂಡ ಇರಲಿಲ್ಲ. ಅತ್ಯಂತ ಖಾಸಗಿಯಾಗಿ ನಡೆಯಬೇಕಾದ ಕ್ರಿಯೆ ಕೂಡ ಸಾರ್ವಜನಿಕವಾದ ಆ ಹೊತ್ತಿನಲ್ಲಿ ಅವರ ಜೀವಗಳು ಅದೆಷ್ಟು ಚಡಪಡಿಸಿದ್ದವೋ?
ಸ್ಯಾಕ್ಸನ್ ಹೌಸೆನ್‌ನಲ್ಲಿ ನಮಗೆ ಜರ್ಮನ್ ದಂಪತಿಗಳೊಬ್ಬರ ಭೇಟಿಯಾಯಿತು. ಅವರು ಬರ್ಲಿನ್ ಸಮೀಪದ ಊರೊಂದರಲ್ಲಿ ವಾಸಿಸುತ್ತಿದ್ದರು. ಮಾತಿನ ಸಂದರ್ಭದಲ್ಲಿ ಅವರು ಬೇಸರ ವ್ಯಕ್ತಪಡಿಸಿಕೊಳ್ಳುತ್ತಾ, ನೋಡಿ ಇಂದಿನ ಜರ್ಮನಿಯ ನಾಗರಿಕರು ಕಾನ್ಸಂಟ್ರೇಷನ್ ಕ್ಯಾಂಪಿನೊಳಗಿನ ಕ್ರೌರ್ಯ ಮತ್ತು ಹತ್ಯಾಕಾಂಡದ ಬಗ್ಗೆ ತಮಗೇನೂ ಗೊತ್ತೇ ಇಲ್ಲ. ತಾವು ತೀರಾ ಮುಗ್ಧರು ಎನ್ನುವಂತೆ ನಟಿಸುತ್ತಾ ತಮ್ಮ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದು ಶುದ್ಧ ಸುಳ್ಳು. ಏಕೆಂದರೆ, ಎರಡನೇ ಮಹಾಯುದ್ಧದ ನಂತರ ಈ ಕ್ಯಾಂಪುಗಳನ್ನು ತೆರವುಗೊಳಿಸಿ, ಜನರನ್ನು ಬಿಡುಗಡೆ ಮಾಡುವ ಹೊತ್ತಿನಲ್ಲಿ ಭಯಂಕರ ಸ್ಥಿತಿಯಲ್ಲಿದ್ದ ಸಾವಿರಾರು ಹೆಣಗಳು ಅಲ್ಲಿದ್ದವು. ಕಾನ್‌ಸ್ಟೈನ್ ಮತ್ತು ಡೋರಾ ಕ್ಯಾಂಪುಗಳಲ್ಲಿದ್ದ ಹೆಣಗಳನ್ನು ಹೊತ್ತು ತಂದು ಮಣ್ಣು ಮಾಡಿದವರು ಅಲ್ಲಿನ ನಾಗರಿಕರು. ಇದನ್ನೆಲ್ಲಾ ಅವರು ತಮ್ಮ ಮನೆಯಲ್ಲಿ ಮಾತನಾಡಲೇ ಇಲ್ಲವೇ? ಈಗ ಮತ್ತೆ ನಿಯೋ ನಾಜ಼ಿಜಂ ತಲೆಯೆತ್ತುತ್ತಿದೆ. ಇದು ತುಂಬಾ ಅಪಾಯಕಾರಿ ಎಂದರು. ಇಂದು ವಿಶ್ವದಾದ್ಯಂತ ಎಲ್ಲಾ ಚುನಾವಣೆಗಳಲ್ಲಿಯೂ ಮತ್ತೆ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಭವಿಷ್ಯ ನಿಜವಾಗಿ ಬಿಡುತ್ತದೆ ಅಂತ ಅನ್ನಿಸುತ್ತಿದೆ. ಆಶ್ವಿಟ್ಡ್ಸ್‌ನಲ್ಲಿಯೂ ಯುದ್ಧ ಮುಗಿದು ಕ್ಯಾಂಪುಗಳನ್ನು ತೆರವುಗೊಳಿಸುವಾಗ ಮಿತ್ರಪಕ್ಷಗಳು ಇಡೀ ಕ್ಯಾಂಪಿನ ತುಂಬಾ ಎಲ್ಲೆಲ್ಲೂ ಚೆಲ್ಲಾಡುತ್ತಿದ್ದ ಹೆಣಗಳು ಮತ್ತು ಬದುಕುಳಿದಿದ್ದವರು ಹೇಗಿದ್ದರು. ಎನ್ನುವುದನ್ನು ನೋಡಲೇಬೇಕೆಂದು ಪೋಲೆಂಡಿನ ನಾಗರಿಕರು ಮತ್ತು ನ್ಯಾಜ಼ಿ ಅಧಿಕಾರಿಗಳನ್ನು ಕ್ಯಾಂಪಿಗೆ ಕರೆತಂದರು. ಹಾಗಾಗಿ ಆ ತಲೆಮಾರಿನ ಯಹೂದಿಗಳಲ್ಲದ ನಾಗರಿಕರೆಲ್ಲರಿಗೂ ಕಾನ್ಸಂಟ್ರೇಷನ್ ಕ್ಯಾಂಪಿನ ಬಗ್ಗೆ ಎಲ್ಲವೂ ತಿಳಿದಿದ್ದವು.
ಈ ಕ್ಯಾಂಪುಗಳಲ್ಲಿ ಸುಮಾರು ೧.೭ ಮಿಲಿಯನ್ ಗಂಡಸರು, ಹೆಂಗಸರು ಮತ್ತು ಮಕ್ಕಳು ಬಗೆಬಗೆಯಾದ ಹಿಂಸೆಯಲ್ಲಿ ತೀರಿಹೋದರು. ಹೀಗೆ ತೀರಿಹೋದವರನ್ನು ಸುಡುವುದಕ್ಕೆಂದು ದೊಡ್ಡ ದೊಡ್ಡ ಫರ್ನೆಸ್‌ಗಳನ್ನು ನಿರ್ಮಿಸಿದ್ದರು. ಇದರಿಂದ ಬಂದ ಬೂದಿಯನ್ನು ವಿಲೇವಾರಿ ಮಾಡುವುದೇ ಒಂದು ಪ್ರಯಾಸವಾಗಿತ್ತು. ಅದನ್ನು ಜರ್ಮನಿಯ ರೈತರಿಗೆ ಗೊಬ್ಬರವನ್ನಾಗಿ ನೀಡಿದರು. ಆ ಕೂದಲುಗಳ ರಾಶಿಯನ್ನು ಬ್ಯಾಗ್ ಮತ್ತು ಪರ್ಸ್ ತಯಾರಕರಿಗೆ ಕಚ್ಚಾವಸ್ತುವನ್ನಾಗಿ ನೀಡಿದರು. ಆದರೆ ರೈತರಿಗಾಗಲಿ ಅಥವಾ ಆ ಉದ್ಯಮಿಗಳಿಗಾಗಲಿ ಅದರ ಮೂಲ ತಿಳಿದಿರಲಿಲ್ಲ.
ಇತಿಹಾಸ ಹಿಂದೆದೂ ಕಂಡರಿಯದ ಈ ಹತ್ಯಾಕಾಂಡದ ಹೊತ್ತಿನಲ್ಲಿ ಸದ್ದಿಲ್ಲದೆ ವ್ಯಕ್ತವಾಗುತ್ತಿದ್ದ ಮಾನವೀಯ ಕಾಳಜಿಯಷ್ಟೇ ಬಹುಶಃ ಹತಾಶವಾಗುವ ಜಗತ್ತಿಗೊಂದು ಆಶಾಕಿರಣ. ೧೯೪೨-೪೫ರ ತನಕ ಔಷ್ವಿಟ್ಡ್ಸ್‌ನಲ್ಲಿದ್ದ ಗುಲಾಮ ಕಾರ್ಮಿಕ ಮ್ಯಾಕ್ಸ್ ಎ ಅಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ. ಕೈದಿಗಳಲ್ಲದ ಪೋಲ್ಯಾಂಡಿನ ನನ್ನ ಸಹಕಾರ್ಮಿಕರ ಔದಾರ್ಯವಿಲ್ಲದಿದ್ದಲ್ಲಿ ನಾನು ಈ ಕ್ಯಾಂಪಿನಿಂದ ಜೀವಂತವಾಗಿ ಹೊರಬರಲು ಸಾಧ್ಯವಿರಲಿಲ್ಲ. ಅವರು ನನಗೆ ಗುಟ್ಟಾಗಿ, ಬ್ರೆಡ್, ಕೇಕ್ ಮತ್ತು ಹಾಲು ನೀಡುತ್ತಿದ್ದರು. ಹಲವು ಕ್ರೈಸ್ತ ಚರ್ಚುಗಳು, ಪಾದ್ರಿಗಳು ಮತ್ತು ಸನ್ಯಾಸಿನಿಯರು ಸದ್ದಿಲ್ಲದೆ ಯಹೂದಿ ಮಕ್ಕಳನ್ನು ತಮ್ಮ ಮಠಗಳಲ್ಲಿ ಮುಚ್ಚಿಟ್ಟು, ಅವರು ಕ್ರಿಶ್ಚಿಯನ್ ಮಕ್ಕಳು ಎಂದು ಬಿಂಬಿಸುವ ಅಸಂಖ್ಯಾತ ನಕಲಿ ದೀಕ್ಷಾಸ್ನಾನದ (ಬ್ಯಾಪ್ಟಿಸಂ) ಪ್ರಮಾಣ ಪತ್ರಗಳನ್ನು ಮುದ್ರಿಸಿ, ಅವರನ್ನು ಪೊರೆದರು. ಹಂಗರಿಯ ಮಾರ್ಗರೆಟ್ ಸ್ಲಾಚಾ ತನ್ನ ಸೋಷಿಯಲ್ ಸರ್ವಿಸ್ ಸಿಸ್ಟರ್‌ಹುಡ್ ಸಂಸ್ಥೆಯ ಮೂಲಕ ಸಾವಿರಕ್ಕಿಂತ ಹೆಚ್ಚಿನ ಯಹೂದಿಗಳನ್ನು ಕಾಪಾಡಿದಳು. ಬರ್ನಾಡ್ ಲಿಸ್ಟಿನ್‌ಬರ್ಗರ್ ಎಂಬ ಜರ್ಮನ್ ಪಾದ್ರಿ, ಹಿಟ್ಲರ್ ಅಧಿಕಾರಕ್ಕೆ ಬಂದ ದಿನದಿಂದಲೂ ಯಹೂದಿಗಳ ಕೊಲೆ ಮತ್ತು ಅವರ ಗಡೀಪಾರನ್ನು ಬಲವಾಗಿ ವಿರೋಧಿಸಿ ಮಾತನಾಡುತ್ತಿದ್ದನು. ಡಕಾವ್‌ನ ಕಾನ್ಸಂಟ್ರೇಷನ್ ಕ್ಯಾಂಪಿಗೆ ಸಾಗಿಸುವಾಗ ಅವನು ಮರಣ ಹೊಂದಿದನು. ಇನ್ನು ಆಸ್ಕರ್ ಶಿಂಡ್ಲರ್‌ನಂತಹ ಮಾನವತಾವಾದಿ ಉದ್ಯಮಿ. ಆತ ನ್ಯಾಜ಼ಿ ಪಕ್ಷದ ಸದಸ್ಯನಾಗಿದ್ದ. ಪಾರ್ಟಿಯೊಳಗೇ ಇದ್ದು ಸ್ವಲ್ಪವೂ ಸುಳಿವು ನೀಡದೆ ತನ್ನ ಕೈಗಾರಿಕೆಯಲ್ಲಿದ್ದ ೧೨೦೦ ಯಹೂದಿಗಳನ್ನು ಅತ್ಯಂತ ಚಾಣಾಕ್ಷತೆಯಿಂದ ಗ್ಯಾಸ್ ಛೇಂಬರಿಗೆ ಹೋಗುವುದನ್ನು ತಪ್ಪಿಸಿ ಕಾಪಾಡಿದ. ಯುದ್ಧ ಮುಗಿಯುವ ಹೊತ್ತಿಗೆ ಯಹೂದಿಗಳನ್ನು ಉಳಿಸಲು ತನ್ನೆಲ್ಲಾ ಹಣ ಆಸ್ತಿಯನ್ನು ಕಳೆದುಕೊಂಡು ಹೆಚ್ಚುಕಡಿಮೆ ನಿರ್ಗತಿಕನಾಗಿದ್ದ. ಯುದ್ಧದ ನಂತರದ ದಿನಗಳಲ್ಲಿ ಅವನನ್ನು ಯಹೂದಿ ಪರಿಹಾರ ಸಂಸ್ಥೆಗಳು ಹಣ ನೀಡಿ ನೋಡಿಕೊಂಡವು. ಅವನನ್ನು ಜೆರೂಸೆಲಂನಲ್ಲಿ ಸಮಾಧಿ ಮಾಡಿದರು. ಬಹುಶಃ ಭವಿಷ್ಯದ ದಿನಗಳಲ್ಲಿಯೂ ಇಂತಹ ಮುಗ್ಧ ಸಾರ್ವಜನಿಕರು, ಧರ್ಮಕ್ಕಿಂತ ಮಾನವತೆ ದೊಡ್ಡದೆಂದು ಭಾವಿಸುವ ಆಧ್ಯಾತ್ಮಿಕ ಮನಃಸ್ಥಿತಿ ಉಳ್ಳವರು ಮತ್ತು ಶಿಂಡ್ಲರ್‌ನಂತಹ ಮಾನವತಾವಾದಿಗಳೇ ಈ ಜಗತ್ತಿಗೆ ಆಶಾಕಿರಣಗಳು ಎನಿಸುತ್ತದೆ.