ಮೂಲ: ಅಂಜಿಶ್ನು ದಾಸ್
ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚಿ ೧೮, ೨೦೨೫
ಈಗ ಕ್ಷೇತ್ರ ಮರುವಿಂಗಡನೆ ಕುರಿತ ಚರ್ಚೆ ತೀವ್ರವಾಗುತ್ತಿದೆ. ೨೦೨೬ರೊಳಗೆ ಅದು ನಿರ್ಧಾರವಾಗಬೇಕು. ಲೋಕಸಭೆಯಲ್ಲಿ ಸ್ಥಾನಗಳನ್ನು ನಿಗದಿಪಡಿಸಲು ಕೇವಲ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು ಎಂದು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾಕೆಂದರೆ ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಹಲವು ಪರ್ಯಾಯ ಕ್ರಮಗಳನ್ನು ಹಲವು ವರ್ಷಗಳಿಂದ ಸೂಚಿಸುತ್ತಾ ಬರಲಾಗಿದೆ. ಫಲವತ್ತತೆಯ ದರವನ್ನು ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಅನ್ನುವುದರಿಂದ ಮೊದಲುಗೊಂಡು ರಾಜ್ಯಸಭಾದ ಸುಧಾರಣೆ ಮಾಡಬೇಕು ಅನ್ನುವವರೆಗೆ ಹಲವಾರು ಸಲಹೆಗಳು ಚರ್ಚಿತವಾಗುತ್ತಿದೆ.
ಕೆಲವನ್ನು ಇಲ್ಲಿ ಗಮನಿಸೋಣ:
ಸೀಟುಗಳ ಮಿತಿಯನ್ನು ಏರಿಸುವುದು:
ಸರಳವಾದ ಪರಿಹಾರವೆಂದರೆ ಲೋಕಸಭೆಯಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು. ಈಗ ಸಂವಿಧಾನ ಅದನ್ನು ೫೫೦ಕ್ಕೆ ಮಿತಿಗೊಳಿಸಿದೆ. ಮಿತಿಯನ್ನು ಹೆಚ್ಚಿಸುವುದರಿಂದ ದೇಶಾದ್ಯಂತ ಎಲ್ಲಾ ಕ್ಷೇತ್ರಗಳ ಜನಸಂಖ್ಯೆ ಸಮಾನವಾಗಿರುವಂತೆ ನೋಡಿಕೊಳ್ಳಬಹುದು.
ಅಮೇರಿಕೆಯ ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್ ನ್ಯಾಷನಲ್ ಪೀಸ್ ಸಂಸ್ಥೆಯ ಥಿಂಕ್ ಟ್ಯಾಂಕ್‌ನ ಸಂಶೋಧಕರಾದ ಮಿಲನ್ ವೈಷ್ಣವ್ ಹಾಗೂ ಜಮಿ ಹಿಂಟ್ಸನ್ ಅವರು ೨೦೨೬ರಲ್ಲಿ ಭಾರತಲ್ಲಿನ ಜನಸಂಖ್ಯೆಯ ಅಂದಾಜನ್ನು ಆಧರಿಸಿ ೮೪೮ ಕ್ಷೇತ್ರಗಳು ಬೇಕಾಗುತ್ತದೆ ಎಂದು ಲೆಕ್ಕ ಹಾಕಿದ್ದಾರೆ. ಆಗ ಯಾವುದೇ ರಾಜ್ಯದಲ್ಲ್ಲೂ ಒಟ್ಟಾರೆ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದಿದ್ದಾರೆ. ಈ ಕ್ರಮದ ಒಂದು ಅನುಕೂಲವೆಂದರೆ ಪ್ರತಿ ಕ್ಷೇತ್ರದಲ್ಲಿನ ಜನಸಂಖ್ಯೆಯ ಪ್ರಮಾಣ ಕಡಿಮೆಯಿರುತ್ತದೆ. ಹಾಗಾಗಿ ಪ್ರಾತಿನಿಧಿಕ ಪ್ರಜಾಸತ್ತಾತ್ಮಕತೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಉದಾಹರಣೆಗೆ ಈ ಲೆಕ್ಕದ ಪ್ರಕಾರ ೮೪೮ ಸಂಖ್ಯೆಯ ಲೋಕಸಭೆಯಲ್ಲಿ ಉತ್ತರ ಪ್ರದೇಶದಲ್ಲಿ ೧೪೩ ಕ್ಷೇತ್ರಗಳಿರುತ್ತವೆ. ಈಗ ಅಲ್ಲಿ ೮೦ ಕ್ಷೇತ್ರಗಳಿವೆ. ತಮಿಳುನಾಡಿಗೆ ೪೯ ಕ್ಷೇತ್ರಗಳು ಸಿಗುತ್ತದೆ ಈಗ ಅಲ್ಲಿ ೩೯ ಕ್ಷೇತ್ರಗಳಿವೆ.
ಮಾಜಿ ಐಎಎಸ್ ಅಧಿಕಾರಿಗಳಾದ ರಂಗರಾಜನ್ ಆರ್ ಅವರು ದಿ ಇಂಡಿಯನ್ ಫೋರಂ ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಪ್ರತಿಪಾದಿಸುವ ಪ್ರಕಾರ ೨೦೬೦ರ ವೇಳೆಗೆ ಭಾರತದ ಜನಸಂಖ್ಯೆ ಗರಿಷ್ಠ ಮಟ್ಟ ತಲುಪಿ ನಂತರ ಕಡಿಮೆಯಾಗತೊಡಗುತ್ತದೆ. ಅವರ ಅಭಿಪ್ರಾಯದಲ್ಲಿ ಲೋಕಸಭೆಗೆ ಈಗಿರುವಷ್ಟೇ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ರಾಜ್ಯದ ಅಸೆಂಬ್ಲಿಗೆ ಸೀಟುಗಳನ್ನು ಹೆಚ್ಚಿಸಬೇಕು. ಯಾಕೆಂದರೆ ಎಂಎಲ್‌ಎಗಳು ತಮ್ಮ ಕ್ಷೇತ್ರದಲ್ಲಿ ಹೆಚ್ಚು ನಿಕಟವಾಗಿ ಕೆಲಸ ಮಾಡುತ್ತಾರೆ. ರಂಗರಾಜನ್ ಇನ್ನೂ ಮುಂದುವರಿದು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವನ್ನು ಹಾಗೂ ಅನುದಾನವನ್ನು ನೀಡಬೇಕು. ಅದರಿಂದ ಪ್ರಜಾಸತ್ತಾತ್ಮಕತೆ ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವತಂತ್ರ ಸಂಶೋಧನಾ ಕೇಂದ್ರವಾದ ತಕ್ಷಶಿಲಾ ಸಂಸ್ಥೆಯ ಪ್ರಣಯ್ ಕೋಟಸ್ಥಾನೆ ಹಾಗೂ ಸುಮನ್ ಜೋಷಿಯವರ ಸಲಹೆ ಭಿನ್ನವಾಗಿದೆ. ಕ್ಷೇತ್ರಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದರೆ ಉತ್ತರ ಪ್ರದೇಶಕ್ಕೆ ಸಿಗುವ ಹೆಚ್ಚಿನ ಪ್ರಾತಿನಿಧ್ಯದಿಂದಾಗಿ ಅದು ಪಾರ್ಲಿಮೆಂಟಿನ ಮೇಲೆ ವಿಪರೀತ ಪ್ರಭಾವ ಬೀರುವ ಸಾಧ್ಯತೆಯಿದೆ. ಹಾಗಾಗಿ ರಾಜ್ಯಗಳನ್ನು ವಿಂಗಡಿಸುವುದಕ್ಕೆ ಶಿಫಾರಸ್ಸು ಮಾಡುತ್ತಾರೆ. ರಾಜ್ಯಗಳನ್ನು ವಿಂಗಡಿಸುವುದರಿಂದ ಆಡಳಿತದಲ್ಲಿ ಸುಧಾರಣೆಯಾಗುತ್ತದೆ. ವಿಪರೀತ ಜನರಿರುವ ಪ್ರದೇಶದಲ್ಲಿ ಆಳ್ವಿಕೆ ನಡೆಸುವುದಕ್ಕಿಂತ ಸಣ್ಣ ರಾಜ್ಯಗಳಲ್ಲಿ ಹೆಚ್ಚು ಸಮರ್ಥವಾಗಿ ಆಡಳಿತ ನಡೆಸಬಹುದು ಎನ್ನುತ್ತಾರೆ.
ಈಗಿರುವ ಮರುವಿಂಗಡಣೆಯ ಕ್ರಮದಲ್ಲಿ ಕ್ಷೇತ್ರವನ್ನು ವಿಂಗಡಿಸಲು ಆ ಕ್ಷೇತ್ರದಲ್ಲಿರುವ ಒಟ್ಟಾರೆ ಜನರನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಅವರಿಗೆ ಮತದಾನದ ವಯಸ್ಸು ಆಗಿದೆಯಾ, ಅವರು ಮತದಾರರಾಗಿ ದಾಖಲಾಗಿದ್ದಾರಾ, ಇಲ್ಲವಾ ಯಾವುದನ್ನೂ ಗಮನಿಸುವುದಿಲ್ಲ. ಪ್ರತಿಯೊಂದು ಸೀಟೂ ಆ ಕ್ಷೇತ್ರದಲ್ಲಿರುವ ಎಲ್ಲಾ ಜನರನ್ನೂ ಪ್ರತಿನಿಧಿಸುತ್ತಿರುತ್ತದೆ. ಹಲವು ರಾಜ್ಯಗಳಲ್ಲಿ ಜನ ಆಯಾ ಕ್ಷೇತ್ರದ ಮೂಲದವರು ಆಗಿಲ್ಲದೇ ಇರಬಹುದು. ಆದರೂ ಅವರನ್ನು ಈಗಿರುವ ಮರುವಿಂಗಡಣೆಯ ಸೂತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ.
ಈ ಅಸಮಂಜಸತೆಯನ್ನು ಸರಿಪಡಿಸುವುದಕ್ಕೆ ಕೇವಲ ಮತದಾರರನ್ನು ಆಧರಿಸಿ ಸೀಟುಗಳನ್ನು ನಿರ್ಧರಿಸಬೇಕು ಅನ್ನುವ ವಾದವೊಂದಿದೆ. ದೆಹಲಿಯಲ್ಲಿನ ಕಾನೂನು ನೀತಿಯನ್ನು ಅಧ್ಯಯನ ಮಾಡುವ ವಿಧಿ ಕೇಂದ್ರವೂ ನಿಜವಾಗಿ ಚುನಾವಣೆಯಲ್ಲಿ ಪ್ರತಿನಿಧಿಗಳನ್ನು ಬಾಧ್ಯರನ್ನಾಗಿ ಮಾಡುವ ಸಾಮರ್ಥ್ಯವಿರುವ ಅಥವಾ ಮಾಡುವರನ್ನು ಆಧರಿಸಿ ಮತಕ್ಷೇತ್ರದ ಗಾತ್ರವನ್ನು ನಿರ್ಧರಿಸುವುದು ಹೆಚ್ಚು ನ್ಯಾಯಯುತವಾದ ವ್ಯವಸ್ಥೆಯಾಗುತ್ತದೆ ಎಂದು ಸೂಚಿಸಿದೆ.
ಆದರೆ ಈ ವರದಿಯಲ್ಲಿ ಒಂದು ಇಳಿಕೆ ಅನುಪಾತ ಕ್ರಮವನ್ನೂ ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳು ಕಡಿಮೆ ಪ್ರಾತಿನಿಧ್ಯಕ್ಕೆ ಒಪ್ಪಿಕೊಂಡು ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕೆ ಅವಕಾಶ ಮಾಡಿಕೊಡುತ್ತವೆ
ಉದಾಹರಣೆಗೆ, ಕೆನಡಾ ತನ್ನ ಸಂವಿಧಾನವನ್ನು ೨೦೧೧ರಲ್ಲಿ ತಿದ್ದುಪಡಿ ಮಡಿ, ದೊಡ್ಡದಾದ ಹಾಗೂ ವೇಗವಾಗಿ ಬೆಳೆಯುತ್ತಿರುವ ಪ್ರಾಂತ್ಯಗಳು ಹಾಗೂ ಪುಟ್ಟ ಮತ್ತು ನಿಧಾನವಾಗಿ ಅಭಿವೃದ್ಧಿಯಾಗುತ್ತಿರುವ ಪ್ರಾಂತ್ಯಗಳ ನಡುವೆ ಸಮತೋಲನ ಸಾಧಿಸಲು ಇಳಿಕೆ ಅನುಪಾತ ಕ್ರಮವನ್ನು ಜಾರಿಗೆ ತಂದಿತು. ಇದರ ಪ್ರಕಾರ ಹೌಸ್ ಆಫ್ ಕಾಮನ್ಸ್‌ಗೆ ಒಂದು ಆದರ್ಶ ಎನ್ನಬಹುದಾದ ಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಮತ್ತು ಪ್ರತಿ ಪ್ಯಾಂತ್ಯಕ್ಕೆ ಅದರ ಗಾತ್ರವನ್ನು ಆಧರಿಸಿ ಸೀಟುಗಳನ್ನು ನಿಗದಿಪಡಿಸಲಾಗುತ್ತದೆ. ಆ ಸಂಖ್ಯೆ ಸೆನೆಟ್ಟಿನಲ್ಲಿ ನಿಗದಿಪಡಿಸಲಾಗಿರುವ ಸಂಖ್ಯೆಗಿಂತ ಕಡಿಮೆ ಇದ್ದರೆ ಅಥವಾ ಹಿಂದೆ ನಿಗದಿಯಾದ ಸಂಖ್ಯೆಗಿಂತ ಕಡಿಮೆ ಇದ್ದರೆ, ಆ ಪ್ರಾಂತ್ಯಗಳಿಗೆ ಹೆಚ್ಚಿನ ಸೀಟನ್ನು ನಿಗದಿ ಮಾಡಿ ಈ ಕೊರತೆಯನ್ನು ಸರಿಪಡಿಸಲಾಗುತ್ತದೆ. ಇದರಿಂದ ಸಣ್ಣ ಪ್ರಾಂತ್ಯಗಳಿಗೆ ಕನಿಷ್ಠ ಪ್ರಾತಿನಿಧ್ಯ ಖಾತರಿಯಾಗುತ್ತದೆ. ಇತರ ಪ್ರಾಂತ್ಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆಯುತ್ತವೆ ಎಂದು ವರದಿ ಹೇಳುತ್ತದೆ.
ಎಸ್. ರಾಜಾ ಸೇತು ದುರೈ ಮತ್ತು ಆರ್. ಶ್ರೀನಿವಾಸನ್ ಅವರು ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದ ಲೇಖನದಲ್ಲಿ, (ಇವರು ಕ್ರಮವಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ತಮಿಳುನಾಡು ರಾಜ್ಯ ಯೋಜನಾ ಆಯೋಗದ ಸದಸ್ಯ) ಕೆನಡಾ ವ್ಯವಸ್ಥೆಯನ್ನು ಲೋಕಸಭೆಗೆ ಅನ್ವಯಿಸಿದರೆ, ಒಟ್ಟು ಲೋಕಸಭೆಯ ಪ್ರತಿನಿಧಿಗಳ ಸಂಖ್ಯೆ ೫೫೨ ಆಗುತ್ತದೆ ಎಂದು ಲೆಕ್ಕ ಹಾಕಿದ್ದಾರೆ. ಉದಾಹರಣೆಗೆ, ಉತ್ತರಪ್ರದೇಶಕ್ಕೆ ೯ ಹೆಚ್ಚುವರಿ ಸೀಟುಗಳು ಸಿಗುತ್ತವೆ, ಮತ್ತು ಅದರ ಒಟ್ಟು ಸೀಟುಗಳು ೮೯ ಆಗುತ್ತವೆ. ಆದರೆ, ತಮಿಳುನಾಡಿಗೆ ೩೯ ಸೀಟುಗಳೇ ಉಳಿಯುತ್ತವೆ. ಯಾವುದೇ ಬದಲಾವಣೆಯೂ ಆಗುವುದಿಲ್ಲ.
ಫಲವತ್ತತೆಯ ದರವನ್ನು ಗಣನೆಗೆ ತೆಗೆದುಕೊಂಡರೆ
ದುರೈ ಮತ್ತು ಶ್ರೀನಿವಾಸನ್ ಅವರು ಒಟ್ಟು ಫಲವತ್ತತೆ ದರ (ಟೋಟಲ್ ಫರ್ಟಿಲಿಟಿ ರೇಟ್- ಟಿಎಫ್‌ಆರ್)ವನ್ನು ಮರವಿಂಗಡಣೆಯ ಪ್ರಕ್ರಿಯೆಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಉದಾಹರಣೆಗೆ, ಹದಿನೈದನೇ ಹಣಕಾಸು ಆಯೋಗವು ೨೦೨೧-೨೬ ರಾಜ್ಯಗಳಿಗೆ ಹಣಕಾಸು ಹಂಚಿಕೆಗೆ ಸಂಬಂಧಿಸಿದಂತೆ ಸಲಹೆ ನೀಡುವ ಸಂದರ್ಭದಲ್ಲಿ ಜನಸಂಖ್ಯೆಯ ಸಮಸ್ಯೆಯನ್ನು ಸರಿತೂಗಿಸುವುದಕ್ಕೆ ಒಟ್ಟು ಫಲವತ್ತತೆಯ ದರವನ್ನು ಗಣನೆಗೆ ತೆಗೆದುಕೊಂಡಿತು. ಇದರಿಂದ ಒಟ್ಟಾರೆ ಫಲವತ್ತತೆಯ ದರವನ್ನು ನಿಯಂತ್ರಿಸಿದ ರಾಜ್ಯಗಳಿಗೆ ಅನ್ಯಾಯವಾಗುವುದು ತಪ್ಪುತ್ತದೆ. ದುರೈ ಹಾಗೂ ಶ್ರೀನಿವಾಸನ್ ೨೦೧೧ರ ಜನಗಣತಿಯಿಂದ ಟಿಎಫ್‌ಆರ್‌ನ್ನು ಗಣನಿಗೆ ತೆಗೆದುಕೊಂಡು ಜನಸಂಖ್ಯೆಯನ್ನು ಲೆಕ್ಕ ಹಾಕಲು ಒಂದು ಸೂತ್ರವನ್ನು ರೂಪಿಸಿದ್ದಾರೆ.
ಅವರ ಲೆಕ್ಕಾಚಾರಗಳ ಪ್ರಕಾರ, ಲೋಕಸಭೆಯ ಸದಸ್ಯರ ಸಂಖ್ಯೆ ೭೫೦ಕ್ಕೆ ಏರುತ್ತದೆ. ಆದರೆ, ಸೀಟುಗಳನ್ನು ಮರುಹಂಚಿಕೆ ಮಾಡುವಾಗ, ಜನಸಂಖ್ಯೆಯ ದರವನ್ನು ನಿಯಂತ್ರಿಸುತ್ತಿರುವ ರಾಜ್ಯಗಳಿಗೆ ಅನ್ಯಾಯವಾಗುವುದು ತಪ್ಪುತ್ತದೆ.
ಉದಾಹರಣೆಗೆ, ಉತ್ತರ ಪ್ರದೇಶಕ್ಕೆ ೧೦೬ ಸೀಟುಗಳು ಮತ್ತು ಬಿಹಾರಕ್ಕೆ ೫೦ ಸೀಟುಗಳು (ಪ್ರಸ್ತುತ ೪೦) ಸಿಗುತ್ತವೆ. ಆದರೆ, ಕಡಿಮೆ ಜನಸಂಖ್ಯೆಯಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ೫೫ ಸೀಟುಗಳು ಸಿಗುತ್ತವೆ.
ರಾಜ್ಯಸಭೆಯ ಸುಧಾರಣೆ
ಲೋಕಸಭೆಯ ಸೀಟುಗಳ ಮರುಹಂಚಿಕೆಯಿಂದ ಆಗಬಹುದಾದ ನಕಾರಾತ್ಮಕ ಪರಿಣಾಮಗಳನ್ನು ಸರಿತೂಗಿಸಲು, ರಾಜ್ಯಸಭೆಯಲ್ಲಿ ಸುಧಾರಣೆಗಳನ್ನು ತರಬೇಕಾಗುತ್ತದೆ ಎನ್ನುವ ವಾದವೂ ಇದೆ.
ವಿಧಿ ಸೆಂಟರ್ ಪ್ರಕಟಿಸಿರುವ ವರದಿಯ ಪ್ರಕಾರ, ರಾಜ್ಯಸಭೆಯ ಸೀಟುಗಳನ್ನು ಇಳಿಕೆ ಅನುಪಾತ ಕ್ರಮದಲ್ಲಿ ಹಂಚಲಾಗುತ್ತದೆ. ಇದರಿಂದ, ಸಣ್ಣ ರಾಜ್ಯಗಳಿಗೆ ಪ್ರಾತಿನಿಧ್ಯ ಕಡಿಮೆಯಾಗುವುದು ತಪ್ಪುತ್ತದೆ. “ಈ ಸೂತ್ರದ ಪ್ರಕಾರ, ಮೊದಲ ೫ ಮಿಲಿಯನ್‌ವರೆಗೆ ಪ್ರತಿ ಮಿಲಿಯನ್ ಜನರಿಗೆ ಒಂದು ಸೀಟು ನೀಡಲಾಗುತ್ತದೆ. ೫ ಮಿಲಿಯನ್ ನಂತರ ಪ್ರತಿ ಎರಡು ಮಿಲಿಯನ್ ಜನಸಂಖ್ಯೆಗೆ ಒಂದು ಹೆಚ್ಚುವರಿ ಸೀಟು ನೀಡಲಾಗುತ್ತದೆ. ಇದರಿಂದ, ರಾಜ್ಯದ ಜನಸಂಖ್ಯೆ ಹೆಚ್ಚಾದಂತೆ, ಸೀಟು-ಜನಸಂಖ್ಯೆಯ ಅನುಪಾತ ಕಡಿಮೆಯಾಗುತ್ತದೆ,” ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ, ಈ ಸೂತ್ರವನ್ನು ನಂತರದ ದಿನಗಳಲ್ಲಿ ತರ್ಕಬದ್ಧವಾಗಿ ಜಾರಿಗೊಳಿಸಿಲ್ಲ. ಪ್ರಸ್ತುತ, ೧೦ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು ರಾಜ್ಯಸಭೆಯ ೨೫೦ ಸೀಟುಗಳಲ್ಲಿ ೧೫೬ ಸೀಟುಗಳನ್ನು ಹೊಂದಿವೆ. ಆದರೆ, ೯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು ತಲಾ ಒಂದು ಸೀಟನ್ನಷ್ಟೇ ಹೊಂದಿವೆ.
ಐರೋಪ್ಯ ಪಾರ್ಲಿಮೆಂಟ್‌ನ ಉದಾಹರಣೆಯನ್ನು ಬಳಸಿ, ವಿಧಿ ಸೆಂಟರ್ ಪ್ರತಿ ರಾಜ್ಯಕ್ಕೆ ಕನಿಷ್ಠ ಮತ್ತು ಗರಿಷ್ಠ ಸೀಟುಗಳನ್ನು ನಿಗದಿಪಡಿಸಿ, ಸಣ್ಣ ರಾಜ್ಯಗಳ ಹಕ್ಕಿಗೆ ಚ್ಯುತಿಯಾಗದಂತೆ ಸೀಟುಗಳನ್ನು ಹಂಚಿಕೆ ಮಾಡುವ ಸಲಹೆಯನ್ನು ಮುಂದಿಟ್ಟಿದೆ. “ಕನಿಷ್ಠ ೫ ಸೀಟುಗಳು ಮತ್ತು ಗರಿಷ್ಠ ೨೦ ಸೀಟುಗಳನ್ನು ನಿಗದಿಪಡಿಸಿದರೆ, ಅತಿ ಸಣ್ಣ ರಾಜ್ಯಗಳಿಗೂ ಒಟ್ಟಾಗಿ ಅತಿ ದೊಡ್ಡ ರಾಜ್ಯದಷ್ಟೇ ಪ್ರಾತಿನಿಧ್ಯ ಸಾಧ್ಯವಾಗುತ್ತದೆ.” ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ, ರಾಜ್ಯಸಭೆಯ ಅಧಿಕಾರಗಳು ಸೀಮಿತವಾಗಿವೆ ಮತ್ತು ಅದರಿಂದಾಗಿ ರಾಜ್ಯಗಳನ್ನು ಸಮರ್ಥವಾಗಿ ಪ್ರತಿನಿಧಿಸಲು ರಾಜ್ಯಸಭೆ ಸಾಮಾನ್ಯವಾಗಿ ವಿಫಲವಾಗುತ್ತದೆ. ರಾಜ್ಯಸಭೆಯ ಸದಸ್ಯರು ತಮ್ಮನ್ನು ಆಯ್ಕೆ ಮಾಡುವ ವಿಧಾನಸಭೆಯ ರಾಜ್ಯದ ನಿವಾಸಿ ಆಗಿರಬೇಕಾಗಿಲ್ಲ. ಹಾಗಾಗಿ, ಬಜೆಟ್‌ನಂತಹ ವಿತ್ತೀಯ ಶಾಸನಗಳಿಗೆ ಸಂಬಂಧಿಸಿದ ಹಣಕಾಸು ಮಸೂದೆಗಳ ಮೇಲೆ ರಾಜ್ಯಸಭೆಗೆ ಯಾವುದೇ ಹಕ್ಕು ಇರುವುದಿಲ್ಲ. ಇದರಿಂದಾಗಿ, ಪ್ರಮುಖ ಹಣಕಾಸು ನೀತಿಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯ ಪಾತ್ರ ತುಂಬಾ ಸೀಮಿತವಾಗಿದೆ. ಇದರಿಂದಾಗಿ ರಾಜ್ಯಗಳ ಹಿತಾಸಕ್ತಿಗಳನ್ನು ಪೂರ್ಣವಾಗಿ ಪ್ರತಿನಿಧಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.
ಈ ಸಮಸ್ಯೆಯನ್ನು ಪರಿಹರಿಸಲು, ರಾಜ್ಯಸಭೆಯನ್ನು ಚುನಾಯಿತ ಸಂಸ್ಥೆಯಾಗಿ ಮಾಡಬೇಕು. ಅಮೇರಿಕೆಯ ಸೆನೆಟ್ ಮಾದರಿಯಲ್ಲಿ ಇದನ್ನು ರೂಪಿಸಬೇಕು. ಅಲ್ಲಿ ಪ್ರತಿ ರಾಜ್ಯಕ್ಕೆ ಇಬ್ಬರು ಸದಸ್ಯರಿರುತ್ತಾರೆ. ಇದರಿಂದ, ಲೋಕಸಭೆಯ ಜನಸಂಖ್ಯಾ-ಆಧಾರಿತ ಸೀಟುಗಳನ್ನು ಸರಿತೂಗಿಸಬಹುದು. ರಾಜ್ಯಸಭೆಗೆ ನೀವು ಯಾವುದೇ ಕ್ರಮದಲ್ಲಿ ಸ್ಥಾನಗಳನ್ನು ಹಂಚಿದರೂ ಅಂದರೆ ಜನಸಂಖ್ಯೆಯ ಆಧಾರದ ಮೇಲೆ ಹಂಚಿ ಅಥವಾ ಪ್ರತಿಯೊಂದು ರಾಜ್ಯಕ್ಕೂ ಸಮಾನ ಸ್ಥಾನಗಳನ್ನು ನೀಡಿದ್ದರೂ ಚುನಾಯಿತ ರಾಜ್ಯಸಭೆಯೂ ಪರಿಣಾಮಕಾರಿಯಾಗಬೇಕಾದರೆ, ಮೇಲ್ಮನೆಗೆ ಹಣಕಾಸು ಮಸೂದೆಗಳನ್ನು ತಿದ್ದುಪಡಿ ಮಾಡುವ ಅಧಿಕಾರವಿರಬೇಕು ಹಾಗೂ ಚುನಾಯಿತ ಪ್ರತಿನಿಧಿ ಅಲ್ಲಿಯ ನಿವಾಸಿಯಾಗಿರಬೇಕು ಎನ್ನುವ ನಿಯಮವನ್ನು ಪುನಃ ಜಾರಿಗೆ ತರಬೇಕು.
ಇದಕ್ಕೆ ಪರಿಹಾರವಾಗಿ ಅಮೆರಿಕದ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಂಶೋಧನಾ ಸಹೋದ್ಯೋಗಿ ಶ್ರುತಿ ರಾಜಗೋಪಾಲನ್ ಅವರು ರಾಜ್ಯಸಭೆಯನ್ನು “ರೆವೆನ್ಯೂ ಸಭೆ”ಯಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದ್ದಾರೆ. ಕ್ಷೇತ್ರ ವಿಂಗಡಣೆಗೆ ವಿತ್ತಿಯ ಒಕ್ಕೂಟ ವ್ಯವಸ್ಥೆಯನ್ನೆ ಮುಖ್ಯವಾಗಿ ಕೇಂದ್ರ ಮಾಡಿಕೊಳ್ಳಬೇಕು ಎಂದು ರಾಜಗೋಪಾಲನ್ ವಾದಿಸುತ್ತಾರೆ. ವಿಭಿನ್ನ ರಾಜ್ಯಗಳ ಕಂದಾಯ ಸಂಗ್ರಹಣೆ ಹಾಗು ಖರ್ಚು ನಿಭಾಯಿಸುವ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುತ್ತದೆ. ಕೇಂದ್ರ ಸರ್ಕಾರವು ರಾಜ್ಯಗಳ ಅಗತ್ಯವನ್ನು ಆಧರಿಸಿ ನಿಧಿಯನ್ನು ವಿತರಿಸುತ್ತದೆ. ಕಡಿಮೆ ಜನಸಂಖ್ಯೆ ಕಡಿಮೆ ಇರುವ ಹೆಚ್ಚು ಶ್ರೀಮಂತ ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು ಜನಸಂಖ್ಯೆಯಿರುವ ಉತ್ತರದ ಬಡ ರಾಜ್ಯಗಳಿಗಿಂತ ರಾಷ್ಟ್ರೀಯ ಆದಾಯದ ನಿಧಿಗೆ ಹೆಚ್ಚು ಕೊಡುಗೆ ನೀಡುತ್ತವೆ. ಆದರೆ ಶ್ರೀಮಂತ ರಾಜ್ಯಗಳಿಗೆ ಕೇಂದ್ರ ನಿಧಿಯಿಂದ ಸಿಗುತ್ತಿರುವ ಪಾಲು ಮಾತ್ರ ಕಡಿಮೆ. ಆದರೆ ಲೋಕಸಭೆಗೆ ಮಾತ್ರ ಹಣಕಾಸು ಮಸೂದೆಗಳನ್ನು ಅಂಗೀಕರಿಸುವ ಅಧಿಕಾರವಿದೆ. “ಇಂದು ವಿತ್ತೀಯವಾಗಿ ಕೇಂದ್ರೀಕೃತವಾದ ವ್ಯವಸ್ಥೆಯಿದೆ. ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಸೀಟುಗಳನ್ನು ಹಂಚುವ ಮೂಲಕ ಅವುಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜಗೋಪಾಲನ್ ವಾದಿಸಿದ್ದಾರೆ.
ರಾಜಗೋಪಾಲನ್ ಸೂಚಿಸುವ “ರೆವೆನ್ಯೂ ಸಭಾ” ಕ್ರಮದಲ್ಲಿ, ರಾಜ್ಯಗಳ ಸ್ವಂತ ತಲಾ ಆದಾಯವನ್ನು ಆಧರಿಸಿ ಮೇಲ್ಮನೆಯನ್ನು ಸಂಪೂರ್ಣವಾಗಿ ಮರುರೂಪಿಸಲಾಗುತ್ತದೆ. ಇದನ್ನು ಜನಸಂಖ್ಯೆಯನ್ನು ಆಧರಿಸಿದ ಲೋಕಸಭೆಗೆ ಪೂರಕವಾಗಿ, ರೂಪಿಸಲಾಗುತ್ತದೆ. ಸ್ವಂತ ತಲಾ ಆದಾಯ- ಓಆರ್‌ಪಿಸಿ(ಓನ್ ರೆವೆನ್ಯೂ ಪರ್ ಕ್ಯಾಪಿಟ) ರಾಜ್ಯಗಳ ಸ್ವಂತ ವರಮಾನ ಮೂಲದಿಂದ ಸೃಷ್ಟಿಸಬಹುದಾದ ಆದಾಯವನ್ನು ಸೂಚಿಸುತ್ತದೆ. ಅಂದರೆ ಇದು ಒಟ್ಟು ರಾಜ್ಯದ ಆದಾಯ ಸಂಗ್ರಹಣೆಯ ಸಾಮರ್ಥ್ಯವನ್ನು ಸೂಚಿಸುತ್ತದೆ.
ರೆವೆನ್ಯೂ ಸಭೆಯಲ್ಲಿ, ಪ್ರತಿ ರಾಜ್ಯದ ಓಆರ್‌ಪಿಸಿಯನ್ನು ರಾಷ್ಟ್ರೀಯ ಸರಾಸರಿಯೊಂದಿಗೆ ಹೋಲಿಸಿ ರಾಜ್ಯದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ರಾಜ್ಯದ ಸ್ಥಾನಗಳನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಪ್ರಸ್ತುತ ೩೧ ರಾಜ್ಯಸಭಾ ಸ್ಥಾನಗಳಿವೆ. ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆಯಾದರೆ ೪೦ ಕ್ಕೆ ಏರಬಹುದು. ಆದರೆ, ಉತ್ತರ ಪ್ರದೇಶದ ಓಆರ್‌ಪಿಸಿ ರೂ. ೫,೦೫೦ ಆಗಿದೆ, ಇದು ರಾಷ್ಟ್ರೀಯ ಸರಾಸರಿ ರೂ. ೮,೭೭೧ಕ್ಕಿಂತ ಕಡಿಮೆಯಾಗಿದೆ. ಉತ್ತರ ಪ್ರದೇಶದ ಓಆರ್‌ಪಿಸಿ ಮತ್ತು ರಾಷ್ಟ್ರೀಯ ಸರಾಸರಿಯ ಅನುಪಾತವನ್ನು ಬಳಸಿದರೆ, ರೆವೆನ್ಯೂ ಸಭೆಯಲ್ಲಿ ಅದರ ಸಂಖ್ಯೆ ಕಡಿಮೆಯಾಗುತ್ತದೆ. ಅಂತೆಯೇ, ತಮಿಳುನಾಡಿನ ಓಆರ್‌ಪಿಸಿ ರೂ. ೧೩,೫೬೫ ಆಗಿದೆ, ಇದು ರಾಷ್ಟ್ರೀಯ ಸರಾಸರಿಗಿಂತ ೧.೫ ಪಟ್ಟು ಹೆಚ್ಚಾಗಿದೆ. ರಾಜ್ಯಕ್ಕೆ ಪ್ರಸ್ತುತ ೧೮ ರಾಜ್ಯಸಭಾ ಸ್ಥಾನಗಳಿವೆ, ಇದು ಜನಸಂಖ್ಯೆಯ ಆಧಾರದ ಮೇಲೆ ೧೩ ಕ್ಕೆ ಇಳಿಯಬಹುದು, ಆದರೆ ರೆವೆನ್ಯೂ ಸಭೆಯಲ್ಲಿ ಇದಕ್ಕೆ ೨೦ ಸ್ಥಾನಗಳು ಸಿಗುತ್ತದೆ.
ಅಂದರೆ ರೆವೆನ್ಯೂ ಸಭೆಯ ಪರಿಕಲ್ಪನೆಯಿಂದ ಸ್ವತಂತ್ರವಾಗಿ ಹೆಚ್ಚು ನಿಧಿಯನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ರಾಜ್ಯಗಳಿಗೆ ಅನುಕೂಲವಾಗುತ್ತದೆ. ಜೊತೆಗೆ ಇದರಿಂದ ಆರ್ಥಿಕವಾಗಿ ದುರ್ಬಲವಾಗಿರುವ ರಾಜ್ಯಗಳಿಗೆ ಹೆಚ್ಚಿನ ಆದಾಯವನ್ನು ಸಂಗ್ರಹಿಸಿಕೊಳ್ಳುವುದಕ್ಕೆ ಬೇಕಾದ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದಕ್ಕೆ ಪ್ರೋತ್ಸಾಹವೂ ಸಿಗುತ್ತದೆ. ಇದರಿಂದ “ರಾಜಕೀಯ ಪ್ರೋತ್ಸಾಹ ಹಾಗೂ ಆರ್ಥಿಕ ಬೆಳವಣಿಗೆ ಒಂದಕ್ಕೊಂದು ತೆಕ್ಕೆಹಾಕಿಕೊಂಡು ಪರಸ್ಪರ ಪೂರಕವಾಗಿ ಬೆಳೆಯುತ್ತವೆ.