ತಳ್ಳೊ ಮಾಡೆಲ್ ಗಾಡಿಯಿದು ತಳ್ಳಿಬಿಡಪ್ಪ

ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಮೋದಿಯವರಂತೂ ೨೦೪೭ರ ವೇಳೆಗೆ ಅದೊಂದು ಬೃಹತ್ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಜಿಡಿಪಿಯ ಹೆಚ್ಚಳದಂತಹ ಆರ್ಥಿಕ ಸೂಚಿಗಳನ್ನು ಉಲ್ಲೇಖಿಸುತ್ತಾ ಭಾರತದ ಆರ್ಥಿಕತೆ ಅದ್ಭುತವಾಗಿದೆ ಅಂತ ಬನ್ನಿಸಲಾಗುತ್ತಿದೆ. ನಿಜ ಹೊರಗಿನಿಂದ ನೋಡೋಕೆ ಸುಂದರವಾಗಿದೆ. ಸ್ವಲ್ಪ ಒಳಗೆ ನೋಡಿ ಅನ್ನುತ್ತಾರೆ ರತಿನ್ ರಾಯ್ ಅಂತಹವರು. ಅವರು ಹೇಳುವಂತೆ ನಮ್ಮ ಆರ್ಥಿಕತೆ ಒಂದು ಕಾರ್ ಇದ್ದ ಹಾಗೆ. ಚಲಿಸುತ್ತಿರುವ ಕಾರಿನಲ್ಲಿ ಕೂತು ನೋಡಿದಾಗ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಒಮ್ಮೆ ಬಾನೆಟ್ಟನ್ನು ಬಿಚ್ಚಿ ನೋಡಿದರೆ ಒಳಗಿನ ಗಂಭೀರವಾದ ಸಮಸ್ಯೆಗಳೆಲ್ಲಾ ಕಾಣಿಸಿಕೊಳ್ಳುತ್ತವೆ. ಬಾನೆಟ್ ಮುಚ್ಚಿದ್ದಾಗ ಏನೂ ಕಾಣುವುದಿಲ್ಲ. ಬಿಚ್ಚಿದ್ದಾಗ ಎಲ್ಲವೂ ಕಾಣುತ್ತವೆ. ನಿರುದ್ಯೋಗ, ಬಡತನ, ಬೇಡಿಕೆಯ ಕೊರತೆ, ಹೀಗೆ ಒಂದೊಂದೇ ಗೋಚರವಾಗುತ್ತಾ ಹೋಗುತ್ತವೆ. ಚುನಾವಣೆಯಿಂದ ಆದ ಒಂದು ಲಾಭ ಅಂದರೆ ಸರ್ಕಾರ ಕೂಡ ನಿರುದ್ಯೋಗ ಇವೆಲ್ಲಾ ಸಮಸ್ಯೆಗಳು ಅಂತ ಒಪ್ಪಿಕೊಳ್ಳತೊಡಗಿವೆ.
ಭಾರತ ದೊಡ್ಡ ಶಕ್ತಿಯಾಗಿ ಬೆಳೆಯಲಿದೆ ಅನ್ನೋ ಹೇಳಿಕೆಯನ್ನು ಕೆಲವರು ಸಮರ್ಥಿಸಿದ್ದಾರೆ. ಇತ್ತೀಚೆಗೆ ಹಿರಿಯ ಆರ್ಥಿಕ ವರದಿಗಾರ ಮಾರ್ಟಿನ್ ವುಲ್ಫ್ ಕೂಡ ಅಂತಹ ಒಂದು ಲೇಖನವನ್ನು ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆಯಲ್ಲಿ ಬರೆದಿದ್ದಾರೆ. ಸ್ವಾಭಾವಿಕವಾಗಿಯೇ ಅದಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿದೆ. ಹಲವು ಟಿ ವಿ ಛಾನಲ್ಲುಗಳು ಅವರನ್ನು ಸಂದರ್ಶಿಸಿದೆ. ಅವರೇನೂ ಅದ್ಭುತವಾದದ್ದನ್ನು ಹೇಳುತ್ತಿಲ್ಲ ಅನ್ನೋದು ಲೇಖನ ಓದಿದರೆ ಗೊತ್ತಾಗುತ್ತದೆ.
ಭಾರತ ೨೦೪೭ರ ವೇಳೆಗೆ ಬೃಹತ್ ಶಕ್ತಿಯಾಗಿ ರೂಪುಗೊಳ್ಳುತ್ತದೆ ಅನ್ನುವ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ಲೇಖನವನ್ನು ಪ್ರಾರಂಭಿಸಿದ್ದಾರೆ. ಮೊದಲಿಗೆ ಭಾರತದ ಆರ್ಥಿಕತೆಯನ್ನು ಗ್ರೀಸ್ ದೇಶದ ಆರ್ಥಿಕತೆಯೊಂದಿಗೆ ಹೋಲಿಸಿದ್ದಾರೆ. ಅದು ಅಭಿವೃದ್ಧ ರಾಷ್ಟ್ರಗಳ ಪೈಕಿ ಗ್ರೀಸ್ ಅತ್ಯಂತ ಬಡರಾಷ್ಟ್ರ. ೨೦೨೩ರ ತಲಾ ಜಿಡಿಪಿಯನ್ನು ನೋಡಿದರೆ ಭಾರತದ ತಲಾ ಜಿಡಿಪಿ ಗ್ರೀಸ್ ದೇಶದ ತಲಾ ಜಿಡಿಪಿಯ ಕಾಲುಭಾಗದಷ್ಟೂ ಇಲ್ಲ. ಅಷ್ಟೇ ಅಲ್ಲ ಗ್ರೀಸಿನ ಜಿಡಿಪಿ ಈಗಿನ ದರದಲ್ಲಿ ಅಂದರೆ ಕೇವಲ ೦.೬%ರಷ್ಟೇ ಬೆಳೆದರೂ, ಭಾರತದ ಜಿಡಿಪಿ ೪.೮%ರಷ್ಟು ಬೆಳೆದರೂ ೨೦೪೭ರ ವೇಳೆಗೆ ಗ್ರೀಸಿನ ತಲಾ ಜಿಡಿಪಿಯನ್ನು ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ. ಹೆಚ್ಚೆಂದರೆ ಗ್ರೀಸಿನ ತಲಾ ಜಿಡಿಪಿಯ ೬೦%ರಷ್ಟಾಗಬಹುದು. ಗ್ರೀಸಿನ ತಲಾ ಜಿಡಿಪಿಯ ಮಟ್ಟವನ್ನು ತಲುಪಬೇಕಾದರೆ ಭಾರತದ ಜಿಡಿಪಿ ಕನಿಷ್ಠ ೭.೫% ಅಷ್ಟಾದರೂ ಬೆಳೆಯುತ್ತಾ ಹೋಗಬೇಕು. ಅದು ಸಾಧ್ಯವಿಲ್ಲ ಅನ್ನುವುದು ವುಲ್ಫ್ ಅವರಿಗೂ ಗೊತ್ತು.

ಅದಕ್ಕೆ ವುಲ್ಫ್ ತಲಾ ಜಿಡಿಪಿಯ ಗೊಡವೆಯನ್ನು ಬಿಟ್ಟು ಒಟ್ಟಾರೆ ಜಿಡಿಪಿಯ ಲೆಕ್ಕಾಚಾರಕ್ಕೆ ಇಳಿಯುತ್ತಾರೆ. ಜಿಡಿಪಿ ಲೆಕ್ಕಾಚಾರ ಭಾರತಕ್ಕೆ ಅನುಕೂಲವಾಗಿದೆ. ೨೦೫೦ರ ವೇಳೆಗೆ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ ೧.೬೭ ಬಿಲಿಯನ್ ಆಗುತ್ತದೆ. ಚೀನಾದ ಜನಸಂಖ್ಯೆ ೧.೩೨ ಬಿಲಿಯನ್ ಇರುತ್ತದೆ. ಅಮೇರಿಕೆಯ ಜನಸಂಖ್ಯೆ ೩೮೦ ಮಿಲಿಯನ್ ಇರುತ್ತದೆ. ಅಮೇರಿಕೆಯ ನಾಲ್ಕರಷ್ಟು ಜನಸಂಖ್ಯೆ ಇರುವ ಭಾರತಕ್ಕೆ ಅಮೇರಿಕೆಯ ಜಿಡಿಪಿಯನ್ನು ಮೀರಿಸುವುದಕ್ಕೆ ಕಷ್ಟವಾಗಬಾರದು ಎನ್ನುವುದು ಅವರ ತರ್ಕ. ಹಾಗಾಗಿಯೇ ಅವರು ಭಾರತದ ಜಿಡಿಪಿ ಕೇವಲ ೫% ಅಷ್ಟು ಬೆಳೆದರೂ ಅಮೇರಿಕೆ ಈಗಿನಂತೆ ೨.೩% ವೇಗದಲ್ಲಿ ಬೆಳೆದರೆ ೨೦೪೭ರ ವೇಳೆಗೆ ಅಮೇರಿಕೆಯ ಜಿಡಿಪಿಯನ್ನು ಸರಿಗಟ್ಟಬಹುದು. ಎನ್ನುತ್ತಾರೆ. ಅವರೇ ಹೇಳುವಂತೆ ಅಮೇರಿಕ ತಂತ್ರಜ್ಞಾನದ ದೃಷ್ಟಿಯಿಂದ ಭಾರತಕ್ಕಿಂತ ತುಂಬಾ ಮುಂದಿರಬಹುದು. ಅಥವಾ ಚೀನಾದ ಉತ್ಪಾದನಾ ಸಾಮರ್ಥ್ಯವನ್ನು ಮೀರಿಸುವುದಕ್ಕೂ ಭಾರತಕ್ಕೆ ಸಾಧ್ಯವಾಗದೇ ಇರಬಹುದು. ಜೆಡಿಪಿಯ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಅಮೇರಿಕೆಯನ್ನು ಹಿಂದಕ್ಕೆ ಹಾಕಬಹುದು. ಅವರು ಭಾರತದ ಗಾತ್ರವನ್ನು ಅಂದರೆ ಅದರ ಜನಸಂಖ್ಯೆಯ ಪ್ರಮಾಣವನ್ನು ಅದರ ಶಕ್ತಿಯಾಗಿ ನೋಡುತ್ತಾರೆ.

ಆದರೂ ಭಾರತ ೨೦೪೭ರ ವೇಳೆಗೆ ಬೃಹತ್ ರಾಷ್ಟ್ರವಾಗಿ ಬೆಳೆಯಬೇಕಾದರೆ ಜಿಡಿಪಿಯ ದರವನ್ನು ಹೆಚ್ಚಿಸಿಕೊಳ್ಳಬೇಕು. ಉತ್ಪಾದನೆಯಾಗಿದ್ದಕ್ಕೆ ಮಾರುಕಟ್ಟೆ ಬೆಳೆಯಬೇಕು. ಅದಕ್ಕೆ ಎರಡು ದಾರಿಗಳಿವೆ. ಒಂದು ದೇಶದೊಳಗಿನ ಮಾರುಕಟ್ಟೆ ಬೆಳೆಯಬೇಕು. ಇಲ್ಲವೆಂದರೆ ರಫ್ತು ಹೆಚ್ಚಬೇಕು. ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಬಹುಪಾಲು ಜನರಿಗೆ ಕೊಳ್ಳುವ ಶಕ್ತಿ ಕಡಿಮೆ. ಬಡತನ ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿದೆ.
ಭಾರತಕ್ಕೆ ಸ್ವಾತಂತ್ರ ಬಂದಾಗ ದೇಶದ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ವಸಾಹತು ಆಳ್ವಿಕೆ ಅದರ ಸಂಪತ್ತನ್ನು ಹೀರಿ ಹಿಪ್ಪೆ ಮಾಡಿತ್ತು. ಸ್ವಾತಂತ್ರ ಬಂದ ಮೇಲೆ ಅದೊಂದು ಪ್ರಮುಖ ರಾಷ್ಟ್ರವಾಗಿ ಬೆಳೆಯುತ್ತದೆ ಅನ್ನುವ ವಿಶ್ವಾಸವನ್ನು ಮೂಡಿಸಿತ್ತು. ೧೯೭೦ರವರೆಗೂ ಒಂದಿಷ್ಟು ಬೆಳವಣಿಗೆಯೂ ಸಾಧ್ಯವಾಗಿತ್ತು. ಆದರೂ ಭಾರತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಪ್ರಬಲ ಶಕ್ತಿಯಾಗಿ ಬೆಳೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಜೊತೆಗೆ ಬಹುಪಾಲು ಜನರಿಗೆ ಬೆಳವಣಿಗೆ ಫಲ ಸಿಗಲಿಲ್ಲ. ಬಡತನ ಹೆಚ್ಚಿತ್ತು. ಸ್ವಾಭಾವಿಕವಾಗಿಯೇ ತೀವ್ರವಾದ ಅಸಮಾನತೆ ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿತು. ಕೃಷಿಯಲ್ಲೂ ನಿರೀಕ್ಷಿತ ಬೆಳವಣಿಗೆಯಾಗಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಆದಾಯದಲ್ಲಿ ಹೆಚ್ಚಳವಾಗಲಿಲ್ಲ. ಇವೆಲ್ಲಾ ಸ್ಥಳೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ. ವುಲ್ಫ್ ಅವರೇ ಹೇಳುವಂತೆ ದೇಶದಲ್ಲಿ ಒಟ್ಟು ಉತ್ಪಾದಿಸಲಾಗುವ ಸರಕು ಹಾಗೂ ಸೇವೆಗಳಲ್ಲಿ ಕೇವಲ ಶೇಕಡ ೧೫ರಿಂದ ೪೫ರಷ್ಟು ಖರೀದಿಯಾಗುತ್ತಿತ್ತು.

ಇದಕ್ಕಿರುವ ಪರಿಹಾರ ಅಂದರೆ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ಸರ್ಕಾರ ಹೂಡಿಕೆಯನ್ನು ಹೆಚ್ಚು ಮಾಡಬೇಕು. ಅತಿ ಶ್ರೀಮಂತರ ಸಂಪತ್ತು ಹಾಗೂ ವರಮಾನದ ಮೇಲೆ ತೆರಿಗೆಯನ್ನು ಹಾಕಿ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸಬೇಕು. ಆದರೆ ಆಯ್ಕೆ ಮಾಡಿಕೊಂಡ ಉದಾರವಾದೀ ಆರ್ಥಿಕ ನೀತಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬದಲಿಗೆ ಕಾರ್ಪೋರೇಟ್ ಮಂದಿಗೆ ತೆರಿಗೆ ಕಡಿತ ಮಾಡಿ ಅವರನ್ನು ಹೂಡಿಕೆಗೆ ಪ್ರೋತ್ಸಾಹಿಸುವ ದಾರಿಯನ್ನು ಸರ್ಕಾರ ಹಿಡಿಯಿತು. ಅವರ ಉದ್ದೇಶವೇ ಲಾಭ. ಲಾಭವಿದ್ದೆಡೆ ಬಂಡವಾಳ ಹೂಡುತ್ತಾರೆ. ಬೇಡಿಕೆ ಹೆಚ್ಚಾದರೆ ಯಾರೂ ಗೋಗರೆಯದಿದ್ದರೂ ಹೂಡುತ್ತಾರೆ. ಭಾರತದಲ್ಲಿ ಕೊಳ್ಳುವ ಶಕ್ತಿ ಕಡಿಮೆ ಇರುವುದರಿಂದ ಬೇಡಿಕೆ ಕಡಿಮೆ ಇದೆ. ಇದು ವಾಸ್ತವ. ಇದನ್ನು ಹೆಚ್ಚಿಸುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸುಮ್ಮನೆ ತೆರಿಗೆ ಕಡಿಮೆ ಮಾಡಿದ ತಕ್ಷಣ ಅವರು ಹೂಡಿಕೆ ಹೆಚ್ಚಿಸುತ್ತಾರೆ ಅನ್ನುವುದು ಮಿಥ್ಯೆ. ಹಾಗೆಯೇ ಉದಾರೀಕರಣದಿಂದ ಹಾಗೂ ಖಾಸಗೀಕರಣದಿಂದ ಆರ್ಥಿಕತೆ ಬೆಳೆಯುತ್ತದೆ ಅನ್ನುವುದು ಸುಳ್ಳೆನ್ನುವುದು ಸಾಬೀತಾಗಿದೆ. ಇವೆಲ್ಲಾ ಇರುವ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬ್ರಿಟಿಷರ ಕಾಲಕ್ಕಿಂತ ಈಗ ಅಂದರೆ ಬಿಲಿಯನೇರುಗಳ ಆಡಳಿತದಲ್ಲಿ ಅಸಮಾನತೆ ಹೆಚ್ಚಾಗಿದೆ.

ಬಹುಶಃ ವುಲ್ಫ್ ಅವರಿಗೆ ಸ್ಥಳೀಯ ಮಾರುಕಟ್ಟೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ ಅನಿಸಿರಬಹುದು. ಅಥವಾ ಅವರ ಉದಾರವಾದೀ ಆರ್ಥಿಕತೆಯ ಒಲವಿನಿಂದಾಗಿ ದೇಶೀಯ ಮಾರುಕಟ್ಟೆಯ ಅಭಿವೃದ್ಧಿ ಸೂಕ್ತ ದಾರಿಯಾಗಿ ಕಾಣದಿರಬಹುದು. ಅವರು ಸ್ಥಳೀಯ ಮಾರುಕಟ್ಟೆಯನ್ನು ಬೆಳೆಸುವುದಕ್ಕೆ ಪರ್ಯಾಯವಾಗಿ ರಫ್ತನ್ನು ಹೆಚ್ಚಿಸುವುದಕ್ಕೆ ಶಿಫಾರಸ್ಸು ಮಾಡುತ್ತಾರೆ. ರಫ್ತಿನಿಂದ ದೊರೆಯುವ ವಿನಿಮಯದಿಂದ ಆಮದಿಗೆ ಬೇಕಾದಂತಹ ವಿದೇಶಿ ವಿನಿಮಯ ಸಿಗುತ್ತದೆ, ಸ್ಪರ್ಧೆ ಹೆಚ್ಚುತ್ತದೆ. ಇತ್ಯಾದಿ ಅನುಕೂಲಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾರೆ. ಜೊತೆಗೆ ಅವರ ದೃಷ್ಟಿಯಲ್ಲಿ ಭಾರತಕ್ಕೆ ರಫ್ತು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶವೂ ಇದೆ. ೨೦೨೨ರಲ್ಲಿ ಭಾರತದ ರಫ್ತು ಜಾಗತಿಕ ವ್ಯಾಪಾರದ ಕೇವಲ ೨.೨% ಇತ್ತು. ಆದರೆ ಅಮೇರಿಕೆ ಪಾಲು ೧೨.೮% ಹಾಗೂ ಚೀನಾದ ಪಾಲು ೬% ಇತ್ತು. ಹಾಗಾಗಿ ಭಾರತಕ್ಕೆ ರಫ್ತನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೆಚ್ಚಿನ ಅವಕಾಶ ಇದೆ. ಎನ್ನುತ್ತಾರೆ. ಜೊತೆಗೆ ಅವರು ಹೇಳುವಂತೆ ಇಂದು ಜಗತ್ತಿಗೆ ಚೀನಾ ಬಗ್ಗೆ ಒಲವಿಲ್ಲ. ಅವರ ಪರ್ಯಾಯವಾಗಿ ಬೇರೆ ದೇಶಗಳನ್ನು ಹುಡುಕುತ್ತಿದ್ದಾರೆ. ಇದು ಭಾರತಕ್ಕೆ ಸುವರ್ಣ ಅವಕಾಶ ಎಂದು ಭಾವಿಸುತ್ತಾರೆ. ಭಾರತದ ಬಗ್ಗೆ ವಿಶೇಷ ಭರವಸೆ ಇಟ್ಟುಕೊಂಡಿರುವ ವುಲ್ಫ್ ವ್ಯಾಪಾರದ ಉದಾರೀಕರಣ ಪ್ರಕ್ರಿಯೆಯ ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಅನ್ನುವ ಸಲಹೆ ಬೇರೆ ನೀಡುತ್ತಾರೆ. ಅದು ಬೃಹತ್ ರಾಷ್ಟ್ರವಾಗಿರುವುದರಿಂದ ಅದಕ್ಕೆ ಜಗತ್ತನ್ನು ರೂಪಿಸುವ ಸಾಮರ್ಥ್ಯವಿದೆ ಅನ್ನುತ್ತಾರೆ. ಅದು ಭಾರತಕ್ಕ ಜಗತ್ತನ್ನು ಪ್ರಭಾವಿಸುವ ಶಕ್ತಿಯನ್ನು ಕೊಡುತ್ತದೆ.

ಆದರೆ ಚೀನಾ ಅಪಾರ ಹೂಡಿಕೆ ಮಾಡಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತ್ತು. ಈಗಲೂ ಅದಕ್ಕೆ ಅಗ್ಗದ ದರದಲ್ಲಿ ಜಾಗತಿಕ ಮಾರುಕಟ್ಟೆಗೆ ಸರಕುಗಳನ್ನು ಸರಬರಾಜು ಮಾಡುವ ಸಾಮರ್ಥ್ಯವಿದೆ. ಜೊತೆಗೆ ವಿಯಟ್ನಾಂ ಅಂತಹ ದೇಶಗಳು ಭಾರತಕ್ಕೆ ಬಲವಾದ ಸ್ಪರ್ಧೆಯನ್ನು ಕೊಡುತ್ತಿವೆ. ಈಗಾಗಲೇ ಜಾಗತಿಕ ಮಾರುಕಟ್ಟೆಯ ಪಾಲನ್ನು ಸಾಕಷ್ಟು ಕಬಳಿಸಿಕೊಂಡಿದೆ. ಹಾಗಾಗಿ ಭಾರತಕ್ಕೆ ರಫ್ತನ್ನು ಹೆಚ್ಚಿಸಿಕೊಳ್ಳುವುದು ಸುಲಭದ ದಾರಿಯೇನಲ್ಲ.
ಆದರೆ ಎಲ್ಲಾ ನವ ಉದಾರವಾದಿಗಳು ಸೂಚಿಸುವ ದಾರಿ ಇದೇ ಆಗಿದೆ. ಕಾರಣ ಸರಳ. ಅವರಿಗೆ ವಿತ್ತೀಯ ಕೊರತೆಯನ್ನು ನಿಯಂತ್ರಿಸುವುದು ಆದ್ಯತೆಯ ವಿಷಯ. ಖರ್ಚನ್ನು ಸರಿತೂಗಿಸುವುದಕ್ಕೆ ಅತಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುವುದು ಅವರ ಚಿಂತನೆಯಲ್ಲಿಲ್ಲ. ಕಲ್ಯಾಣ ಕಾರ್ಯಕ್ರಮಗಳ ಖರ್ಚನ್ನು ಕಡಿಮೆಮಾಡುವುದು ಅವರು ಸಾಮಾನ್ಯವಾಗಿ ಹಿಡಿಯುವ ದಾರಿ. ಖರ್ಚು ಹೆಚ್ಚು ಮಾಡಿ ಆರ್ಥಿಕತೆಯನ್ನು ಪುನಚ್ಛೇತನಗೊಳಿಸುವುದು ಅವರ ಪಟ್ಟಿಯಲ್ಲಿಲ್ಲ. ಹಾಗಾಗಿ ಅವರಿಗಿರುವ ದಾರಿ ಅಂದರೆ ರಫ್ತನ್ನು ಹೆಚ್ಚಿಸುವ ಮೂಲಕ ಬೆಳವಣೆಗೆಯನ್ನು ಉತ್ತೇಜಿಸುವುದು. ಆದರೆ ಇದರಿಂದ ಜಾಗತಿಕ ಹಣಕಾಸಿನ ಮೇಲೆ ಅವಲಂಬನೆ ವಿಪರೀತ ಹೆಚ್ಚುತ್ತದೆ. ಶ್ರೀಲಂಕಾ, ಬಾಂಗ್ಲಾದೇಶ, ಚೀನಾದಲ್ಲಿ ಇದರ ಸಮಸ್ಯೆಯನ್ನು ನೋಡಿದ್ದೇವೆ. ಜಾಗತಿಕ ಆರ್ಥಿಕತೆ ಕುಸಿದಾಗ ಇಂತಹ ದೇಶಗಳು ಸಂಕಟಕ್ಕೆ ಸಿಕ್ಕವು. ಭಾರತಕ್ಕಿರುವ ಒಂದೇ ಸಮಾಧಾನವೆಂದರೆ ಆಹಾರ ಧಾನ್ಯಗಳ ಸ್ವಾವಲಂಬನೆ. ಜೊತೆಗೆ ರಷ್ಯಾದಂತಹ ದೇಶಗಳಿಂದ ಪೆಟ್ರೋಲನ್ನು ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ.
ಜೊತೆಗೆ ರಫ್ತು ಆಧಾರಿತ ಆರ್ಥಿಕ ಬೆಳವಣಿಗೆ ಕೆಲವು ಸಂದರ್ಭದಲ್ಲಷ್ಟೇ ಯಶಸ್ವಿಯಾಗುವುದು. ಅದೇ ಕಾರಣಕ್ಕೆ ಜೊಸೆಫ್ ಸ್ಟಿಗ್‌ಲಿಟ್ಜ್, ಅಮರ್ತ್ಯಸೇನ್ ಮೊದಲಾದ ಅರ್ಥಶಾಸ್ತ್ರಜ್ಞರು ರಫ್ತು ಆಧಾರಿತ ಆರ್ಥಿಕತೆಯನ್ನು ವಿರೋಧಿಸುತ್ತಾರೆ. ಅದನ್ನು ಎಲ್ಲಾ ಸಂದರ್ಭಕ್ಕೂ ಮದ್ದಾಗಿ ನೋಡಬಾರದು. ಸ್ಥಳೀಯ ಮಾರುಕಟ್ಟೆಯನ್ನು ಬೆಳೆಸಬೇಕು. ಆರ್ಥಿಕ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯವನ್ನು, ಪರಿಸರದ ತಾಳಿಕೆಯನ್ನು ಕಾಪಾಡಿಕೊಳ್ಳಬೇಕು ಅನ್ನುತ್ತಾರೆ.

ನಮ್ಮ ಕಾರಿನ ಉದಾಹರಣೆಯನ್ನು ಮುಂದುವರಿಸುವುದಾದರೆ ಮೊನ್ನೆ ಬಜೆಟ್ಟನ್ನು ಕುರಿತು ಮಾತನಾಡುತ್ತಾ ಶಶಿ ತರೂರ್ ಹೇಳಿದ ಜೋಕು ಚೆನ್ನಾಗಿದೆ. ಕಾರು ರಿಪೇರಿಗೆ ಬಿಟ್ಟಿದ್ದ ಒಡೆಯನಿಗೆ ಮೆಕಾನಿಕ್ ಹೇಳಿದನಂತೆ, ಕಾರು ರಿಪೇರಿ ಮಾಡಲಿಕ್ಕೆ ಆಗಲಿಲ್ಲ. ಹಾರನ್ ಶಬ್ದವನ್ನು ಹೆಚ್ಚಿಸಿದ್ದೇನೆ. ಇಂತಹ ಕ್ರಮಗಳು ಕೇವಲ ಆರ್ಭಟವನ್ನು ಹೆಚ್ಚಿಸಬಹುದು. ಕಾರು ಮಾತ್ರ ತಳ್ಳೊ ಮಾಡೆಲ್ ಗಾಡಿಯೇ.