ಜೆರಾರ‍್ಡ್ ಡೆಪಾರ್‌ಡ್ಯು ಪ್ರಖ್ಯಾತ ಫ್ರೆಂಚ್ ನಟ, ಉದ್ಯಮಿ, ಅಪಾರ ಶ್ರೀಮಂತ. ಸ್ವಾಭಾವಿಕವಾಗಿಯೇ ದೊಡ್ಡ ಪ್ರಮಾಣದಲ್ಲಿ ತೆರಿಗೆಯನ್ನು ಕಟ್ಟಬೇಕಿತ್ತು. ಎಲ್ಲಾ ಬಿಲಿಯನೇರುಗಳಂತೆ ಅವನಿಗೂ ತೆರಿಗೆ ಕಟ್ಟುವ ಮನಸ್ಸಿಲ್ಲ. ಎಲ್ಲರೂ ಮಾಡುವಂತೆ ಅವನು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಪಕ್ಕದ ಬೆಲ್ಜಿಯಂಗೆ ಹೋಗಿಬಿಟ್ಟ. ಎಷ್ಟು ಸಲೀಸಾಗಿ ಹೋಗಿಬಿಟ್ಟ ಅಂದರೆ ೨೦೧೨ರಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಹಲವರು ಮರೆತರು. ಆದರೆ ಗೇಬ್ರಿಯಲ್ ಜುಕ್‌ಮನ್ ಅನ್ನೊ ಒಬ್ಬ ಯುವ ಅರ್ಥಶಾಸ್ತ್ರಜ್ಞನಿಗೆ ಇದು ತುಂಬಾ ಕಾಡಿತು. ಅವನು ಇಡೀ ಘಟನೆಯನ್ನು ತೀರಾ ಆಸಕ್ತಿಯಿಂದ ಗಮನಿಸುತ್ತಿದ್ದ. ಆಗಷ್ಟೇ ಅವನು ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಹೇಗೆ ತೆರಿಗೆ ದರ ಅತಿ ಶ್ರೀಮಂತರ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಪ್ರೌಢ ಪ್ರಬಂಧ ಮಂಡಿಸಿದ್ದ. ಶ್ರೀಮಂತರ ತೆರಿಗೆ ಕಳ್ಳತನ, ಸಂಪತ್ತು ಹಾಗೂ ವರಮಾನದ ಕೇಂದ್ರೀಕರಣ, ಅವುಗಳನ್ನು ಅಳೆಯುವುದು, ಅವುಗಳ ಮೇಲೆ ತೆರಿಗೆ ಹಾಕುವುದು ಇತ್ಯಾದಿ ವಿಷಯಗಳು ಅವನ ಕಾಳಜಿಯ ವಿಷಯಗಳಾದವು.
ಈಗ ಅವನು ತುಂಬಾ ಬೆಳೆದಿದ್ದಾನೆ. ೩೮ ವರ್ಷದ ಜುಕ್‌ಮನ್ ವಯಸ್ಸಿನಲ್ಲಿ ಚಿಕ್ಕವನಾದರೂ ವರಮಾನ ಹಾಗೂ ಸಂಪತ್ತನ್ನು ಅಳೆಯುವುದರಲ್ಲಿ ಜಗತ್ತಿನಲ್ಲಿ ಪ್ರಖ್ಯಾತನಾಗಿದ್ದಾನೆ. ಬಿಲಿಯನೇರುಗಳು ಹಾಗೂ ಕಾರ್ಪೋರೇಷನ್ನುಗಳ ಮೇಲೆ ತೆರಿಗೆಯ ವಿಷಯದಲ್ಲಿ ಪರಿಣತನಾಗಿದ್ದಾನೆ. ಅತಿ ಶ್ರೀಮಂತರಿಗೆ ತೆರಿಗೆ ಹಾಕುವ ವಿಷಯಲ್ಲಿ ನಾವು ಹಿಂದೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಏನೂ ಮಾಡುವುದಕ್ಕಾಗುವುದಿಲ್ಲ ಅಂತ ಕೈಚೆಲ್ಲಿ ಕೂರಬಾರದು. ಅವರಿಗೆ ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಿರಬಾರದು ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾನೆ. ನಮ್ಮಲ್ಲಿ ರಘುರಾಂ ರಾಜನ್ ಅಂತಹವರು ಸಂಪತ್ತಿನ ಮೇಲೆ ತೆರಿಗೆ ಪರಿಣಾಮಕಾರಿಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ವಾದಿಸುವಾಗ ಇಂತಹ ಯುವಕರು ಭರವಸೆ ಮೂಡಿಸುತ್ತಾರೆ. ಅಷ್ಟೇ ಅಲ್ಲ ಇವರು ಅದಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನು ಪ್ರಾಮಾಣಿಕವಾಗಿ ಸಂಗ್ರಹಿಸುತ್ತಿದ್ದಾರೆ. ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಜಾಗತಿಕ ಕನಿಷ್ಠ ತೆರಿಗೆಯನ್ನು ವಿಧಿಸುವ ಬಗ್ಗೆ ಒಂದು ವರದಿಯನ್ನೂ ಈ ಬಾರಿಯ ಜಿ-೨೦ ಸಭೆಗಾಗಿ ಜುಕ್‌ಮನ್ ರೂಪಿಸಿದ್ದಾನೆ.
ಫ್ರಾನ್ಸಿನಲ್ಲಿ ಬಲಪಂಥೀಯ ನಾಯಕ ಜೀನ್ ಲೆ ಪಿನ್ ೨೦೦೨ರ ಅಧ್ಯಕ್ಷ ಚುನಾವಣೆಯಲ್ಲಿ ಅಂತಿಮ ಸುತ್ತಿಗೆ ಬಂದಾಗ ಜುಕ್‌ಮನ್ ತೀರಾ ಗಲಿಬಿಲಿಗೊಂಡಿದ್ದ. ನನ್ನ ಬಾಲ್ಯದಲ್ಲೇ ಇದು ಅತ್ಯಂತ ದುರಂತದ ಘಟನೆ ಅಂತ ಆತಂಕಗೊಂಡಿದ್ದ. ಅದು ಅವನನ್ನು ರ‍್ಯಾಡಿಕಲ್ ಚಿಂತಕನನ್ನಾಗಿ ರೂಪಿಸಿತಂತೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದರಲ್ಲಿ ಜವಾಬ್ದಾರಿಯೂ ಇದೆ ಅಂದುಕೊಂಡ.
ತನ್ನ ಗುರು ಪಿಕೆಟ್ಟಿಯಂತೆ ಅವನೂ ಕೂಡ ಅರ್ಥಶಾಸ್ತ್ರ ಪ್ರತ್ಯೇಕವಾಗಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಸಮಾಜಶಾಸ್ತ್ರ, ರಾಜಕೀಯ, ವಿಜ್ಞಾನ ಹೀಗೆ ಬೇರೆ ಬೇರೆ ಸಾಮಾಜ ವಿಜ್ಞಾನಗಳ ಜೊತೆ ಕೆಲಸ ಮಾಡಬೇಕು ಅಂತ ನಂಬಿದ್ದ. ಅದೇ ಕಾರಣಕ್ಕೆ ಅಂತರಶಿಸ್ತೀಯ ಚರ್ಚೆಗಾಗಿ ಒಂದು ಜರ್ನಲ್‌ಅನ್ನು ಪ್ರಾರಂಭಿಸಿದ್ದ. ಇಂದಿಗೂ ಅದರಲ್ಲಿ ತೆರಿಗೆ, ಸಂಪತ್ತು ಹಾಗೂ ಆದಾಯದ ವಿತರಣೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆಯಂತೆ. ಸ್ನಾತಕೋತ್ತರ ಪದವಿ ಮುಗಿಸಿ, ಕೆಲ ಸಮಯ ಒಂದು ಬ್ರೋಕರೇಜ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕಾಕತಾಳೀಯ ಎಂಬಂತೆ ಅದೇ ದಿನ ಲೆಹಮನ್ ಸಹೋದರರು ದಿವಾಳಿಯಾದರು. ಹಣಕಾಸು ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಂತರರಾಷ್ಟ್ರೀಯ ಬಂಡವಾಳ ದೊಡ್ಡ ಪ್ರಮಾಣದಲ್ಲಿ ಸಣ್ಣ ದೇಶಗಳಿಗೆ ಹರಿದು ಹೋಗುತ್ತಿರುವುದು ತಿಳಿಯಿತು. ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಶ್ರೀಮಂತರು ಸಂಪತ್ತು ಹಾಗೂ ಲಾಭವನ್ನು ತೆರಿಗೆ ತೀರಾ ಕಮ್ಮಿ ಇರುವ ಅಥವಾ ತೆರಿಗೆಯೆ ಇಲ್ಲದ ತೆರಿಗೆ ಸ್ವರ್ಗಗಳಿಗೆ ವರ್ಗಾಯಿಸುತ್ತಿದ್ದರು. ಆ ದೇಶಗಳ ಬಗ್ಗೆ ಅವನಿಗೆ ಕುತೂಹಲ ಹೆಚ್ಚಿತು. ವಿದೇಶದಲ್ಲಿರುವ ಸಂಪತ್ತು ಹಾಗೂ ತೆರಿಗೆ ಕಳ್ಳತನದ ಗಾತ್ರದ ಪ್ರಮಾಣದ ಅರಿವು ನನ್ನ ಯೋಚನೆಯ ದಿಕ್ಕನ್ನೇ ಬದಲಿಸಿತು ಎನ್ನುತ್ತಾರೆ ಜುಕ್‌ಮನ್. ಅಂಕಿ ಅಂಶವನ್ನು ವಿಶ್ಲೇಷಿಸುವುದಕ್ಕೆ ಹಾಗೂ ನೀತಿಗಳನ್ನು ರೂಪಿಸುವುದಕ್ಕೆ ಅರ್ಥಶಾಸ್ತ್ರದ ಆಳವಾದ ಅರಿವು ಬೇಕಾಗುತ್ತದೆ ಅನ್ನುವುದು ಸ್ಪಷ್ಟವಾಯಿತು. ಮತ್ತೆ ಸಂಶೋಧನೆಗೆ ಕಾಲಿಟ್ಟ. ಪಿಕೆಟ್ಟಿಯವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ೨೦೧೩ರಲ್ಲಿ ಮುಗಿಸಿದ. ಅದಕ್ಕಾಗಿ ಅವರು ಮಂಡಿಸಿದ ಪ್ರೌಢ ಪ್ರಬಂಧ ಸಾಂಪ್ರದಾಯಿಕವಾಗಿ ತಯಾರಿಸುತ್ತಿದ್ದ ಪ್ರೌಢಪ್ರಬಂಧದ ತರಹ ಇರಲಿಲ್ಲ. ತೆರಿಗೆ ಸ್ವರ್ಗಗಳಲ್ಲಿ ಇಟ್ಟಿರುವ ಸಂಪತ್ತನ್ನು ಅಳೆಯುವುದರ ಬಗ್ಗೆ ಅದರಲ್ಲಿ ಚರ್ಚಿಸಲಾಗಿತ್ತು. ಒಂದು ಅಧ್ಯಾಯದಲ್ಲಿ ಆದಾಯ ಹಾಗೂ ಬಂಡವಾಳಕ್ಕೆ ಸಂಬಂಧಿಸಿದಂತೆ ಚಾರಿತ್ರಿಕವಾದ ಮಾಹಿತಿಯನ್ನು ಒಟ್ಟು ಮಾಡಲಾಗಿತ್ತು. ಅದು ಪಿಕೆಟ್ಟಿಯವರ ಜೊತೆಯಲ್ಲಿ ಬರೆದ ಲೇಖನವಾಗಿತ್ತು. ಆ ಅಧ್ಯಾಯದಲ್ಲಿ ಪಿಕೆಟ್ಟಿಯವರ ಪ್ರಖ್ಯಾತ ಕ್ಯಾಪಿಟಲ್ ಇನ್ ಟ್ವೆಂಟಿಫಸ್ಟ್ ಸೆಂಚುರಿ ಪುಸ್ತಕದಲ್ಲಿನ ಚಿಂತನೆಯ ಬೇರು ಇದೆ.
ನಂತರದ ದಿನಗಳಲ್ಲಿ ಬಿಲಿಯನೇರುಗಳ ತೆರಿಗೆ ಕಳ್ಳತನದ ದಾರಿಗಳನ್ನು ಅರ್ಥಮಾಡಿಕೊಳ್ಳುವುದು, ಅವರ ವರಮಾನ ಹಾಗೂ ಸಂಪತ್ತನ್ನು ಅಂದಾಜು ಮಾಡಲು ಕ್ರಮಗಳನ್ನು ರೂಪಿಸುವುದು ಇವು ಅವರ ಸಂಶೋಧನೆಯ ವಿಷಯವಾಯಿತು. ಜುಕ್‌ಮನ್ ಯಾವುದೇ ಅಂಕಿ ಅಂಶಗಳನ್ನು ಪರಿಶೀಲಿಸುವಾಗ ಅದನ್ನು ದೊಡ್ಡ ವಿಶಾಲವಾದ ಚೌಕಟ್ಟಿನಲ್ಲಿಟ್ಟು ನೋಡುತ್ತಿರುತ್ತಾನೆ. ಸಂಶೋಧನೆ ಅವನಿಗೆ ಒಂದು ಶುಷ್ಕ ಶೈಕ್ಷಣಿಕ ಅಧ್ಯಯನವಾಗುವುದಿಲ್ಲ. ಸಾಮಾಜಿಕ ಕಾಳಜಿ ಅದರ ಮೂಲದಲ್ಲಿ ಇರುತ್ತದೆ.
೧೯೭೫ರಲ್ಲಿ ತೆರಿಗೆ ತಪ್ಪಿಸಿಕೊಳ್ಳುವುದನ್ನು ಸಮಾಜ ದೊಡ್ಡ ಅಪರಾಧವಾಗಿ ನೋಡುತ್ತಿರಲಿಲ್ಲ. ಟ್ಯಾಕ್ಸ್ ಹೆವನ್ಸ್ ಅಂಡ್ ದೈರ್ ಯುಸಸ್ ಅನ್ನುವಂತಹ ಪುಸ್ತಕಗಳು ಅಪಾರವಾಗಿ ಬೇಡಿಕೆಯಲ್ಲಿದ್ದ ಕಾಲ ಅದು. ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಹಲವು ಮಾರ್ಗಗಳನ್ನು ಸೂಚಿಸುವುದೇ ಹಲವು ವ್ಯಕ್ತಿಗಳ ಹಾಗೂ ಸಂಸ್ಥೆಗಳ ವೃತ್ತಿಯಾಗಿತ್ತು. ಆದರೆ ಕ್ರಮೇಣ ೧೯೯೦ರ ನಂತರದಲ್ಲಿ ತೆರಿಗೆ ಕಳ್ಳತನದ ಬಗ್ಗೆ ಸಮಾಜದಲ್ಲಿ ಸಹನೆ ಕಡಿಮೆಯಾಗತೊಡಗಿತು. ಬಿಲಿಯನೇರುಗಳ ಈ ಕಳ್ಳತನದಿಂದ ದೇಶದ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಅನ್ನುವ ಅರಿವು ಹೆಚ್ಚ ತೊಡಗಿತು. ನಿಜ, ಮನೋಭಾವ ಬದಲಾಯಿತು. ಆದರೆ ತೆರಿಗೆ ಸ್ವರ್ಗಗಳಲ್ಲಿ ಬಚ್ಚಿಟ್ಟಿದ್ದ ಸಂಪತ್ತಿನ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟವಿತ್ತು. ಜುಕ್‌ಮನ್ ಅವರ ಸಂಶೋಧನೆ ಈ ನ್ಯೂನತೆಯನ್ನು ತುಂಬುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಅಷ್ಟೇ ಅಲ್ಲ ಅವರ ಬರಹಗಳು ಸಂಬಂಧಪಟ್ಟವರನ್ನು ಈ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಕ್ಕೆ ಒತ್ತಾಯಿಸಿತು. ಕೆಲವು ಹಣಕಾಸು ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ವಿದೇಶಿಯರು ಇಟ್ಟಿದ್ದ ಠೇವಣಿಯ ಬಗ್ಗೆ ಆಯಾ ದೇಶಗಳಿಗೆ ಮಾಹಿತಿಯನ್ನು ಕೊಡಲು ಒಪ್ಪಿಕೊಂಡರು. ಅಂತಹ ಮಾಹಿತಿಯನ್ನು ಪ್ರಕಟಿಸತೊಡಗಿದರು. ಇಂತಹ ಮಾಹಿತಿಗಳು ಜುಕ್‌ಮನ್ ಹಾಗೂ ಗೆಳೆಯರ ಸಂಶೋಧನೆಯನ್ನು ಇನ್ನಷ್ಟು ವಿಸ್ತಾರಗೊಳಿಸಿತು. ಸಿಕ್ಕ ಅಂಕಿಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗರಿಷ್ಠ ಮಾಹಿತಿಯನ್ನು ಹೊರತೆಗೆದರು. ಅವರ ಅಧ್ಯಯನದಿಂದ ತೆರಿಗೆ ಸ್ವರ್ಗಗಳಲ್ಲಿ ಬಚ್ಚಿಟ್ಟ ಸಂಪತ್ತಿನ ಪ್ರಮಾಣ ದೇಶದಿಂದ ದೇಶಕ್ಕೆ ಬೇರೆಯಾಗುತ್ತದೆ ಎನ್ನುವುದು ಸ್ಪಷ್ಟವಾಯಿತು. ಸ್ಕಾಂಡಿನೇವಿಯಾದ ದೇಶಗಳಲ್ಲಿ ಅದರ ಪ್ರಮಾಣ ಕಡಿಮೆಯಿತ್ತು. ಐರೋಪ್ಯರು ಬಚ್ಚಿಟ್ಟ ಹಣ ಶೇಕಡ ೧೫ರಷ್ಟಿತ್ತು. ರಷ್ಯ, ಕೊಲ್ಲಿ ದೇಶಗಳಲ್ಲಿ ಅದು ಶೇಕಡ ೬೦ರಷ್ಟಿತ್ತು.
ಪನಾಮಾ ಹಾಗೂ ಎಚ್‌ಎಸ್‌ಬಿಸಿ ಸ್ವಿಸ್ ಮಾಹಿತಿ ಸೋರಿಕೆ ಜುಕ್‌ಮನ್ ಹಾಗೂ ಗೆಳೆಯರಿಗೆ ಇನ್ನಷ್ಟು ಮಾಹಿತಿಯನ್ನು ಒದಗಿಸಿತು. ಸಮಸ್ಯೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲಮಾಡಿಕೊಟ್ಟಿತು. ಅವರು ಹೀಗೆ ಸಿಕ್ಕ ಮಾಹಿತಿಯನ್ನು ಲಭ್ಯವಿರುವ ತೆರಿಗೆ ದಾಖಲೆಗಳೊಂದಿಗೆ ಇಟ್ಟುಕೊಂಡು, ವಿದೇಶದಲ್ಲಿ ಸಂಪತ್ತನ್ನು ಇಟ್ಟವರು ಅತಿ ಶ್ರೀಮಂತರು ಎಂಬುದನ್ನು ತೋರಿಸಿದರು. ಈ ಬಗ್ಗೆ ಮೊದಲೇ ಅನುಮಾನಗಳಿದ್ದರೂ ಇದನ್ನು ಪುರಾವೆಗಳೊಂದಿಗೆ ಜಗತ್ತಿನ ಮುಂದೆ ಇಟ್ಟಿದ್ದು ಇವರು. ಅವರ ಅಂದಾಜಿನ ಪ್ರಕಾರ ಸ್ಕಾಂಡಿನೇವಿಯನ್ ದೇಶಗಳಿಂದ ಈ ತೆರಿಗೆ ಸ್ವರ್ಗಗಳಲ್ಲಿ ಇಟ್ಟ ಸಂಪತ್ತಿನ ಶೇಕಡ ೯೦ರಷ್ಟನ್ನು ಅಲ್ಲಿಯ ಅತಿ ಶ್ರೀಮಂತ ಶೇಕಡ ೧ರಷ್ಟು ಜನ ಇಟ್ಟಿರುವುದು. ಅಷ್ಟೇ ಅಲ್ಲ, ಶ್ರೀಮಂತರು ತೆರಿಗೆ ತಪ್ಪಿಸಿಕೊಳ್ಳುತ್ತಿರುವ ಪ್ರಮಾಣ ಸಾಮಾನ್ಯವಾಗಿ ಭಾವಿಸಿರುವುದಕ್ಕಿಂತ ತುಂಬಾ ಹೆಚ್ಚೇ ಇದೆ. ಸ್ಕಾಂಡಿನೇವಿಯಾ ದೇಶಗಳ ಶ್ರೀಮಂತರು ತಮ್ಮ ತೆರಿಗೆಯ ಶೇಕಡ ೫ರಷ್ಟನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಅನ್ನುವುದು ಸಾಮಾನ್ಯ ನಂಬಿಕೆಯಾಗಿತ್ತು. ಆದರೆ ವಾಸ್ತವದಲ್ಲಿ ಅವರು ಶೇಕಡ ೨೫ಕ್ಕೂ ಹೆಚ್ಚು ತೆರಿಗೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಕೇವಲ ಶ್ರೀಮಂತರಷ್ಟೇ ಅಲ್ಲ, ಬಹುರಾಷ್ಟ್ರೀಯ ಕಂಪೆನಿಗಳು ಇದೇ ಕೆಲಸವನ್ನು ಮಾಡುತ್ತವೆ. ಅವರು ತಮ್ಮ ಲಾಭವನ್ನು ತೆರಿಗೆ ಕಡಿಮೆ ಇರುವ ದೇಶಗಳಲ್ಲಿ ಘೋಷಿಸುತ್ತಾರೆ. ಆ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಬಹುರಾಷ್ಟ್ರೀಯ ಕಂಪೆನಿಗಳು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ತೀರಾ ಸಂಕೀರ್ಣವಾದ ಹಾದಿಯನ್ನು ಹಿಡಿಯುತ್ತವೆ. ಹಾಗಾಗಿ ಅದನ್ನು ಗುರುತಿಸುವುದು ಹಾಗೂ ಅದರ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟವಾಗುತ್ತದೆ. ಆದರೆ ಜುಕ್‌ಮನ್ ಅವರ ಪತ್ತೆದಾರಿಕೆ ಇಂತಹ ಕಳ್ಳತನವನ್ನು ಬಯಲು ಮಾಡಿದೆ.
ಜುಕ್‌ಮನ್ ಅವರ ಅಂದಾಜಿನ ಪ್ರಕಾರ ೨೦೧೦ರಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಲಾಭದ ಶೇಕಡ ೩೦ರಿಂದ ೪೦ರಷ್ಟನ್ನು ತೆರಿಗೆ ಸ್ವರ್ಗಗಳಲ್ಲಿ ಘೋಷಿಸಿದ್ದಾರೆ. ತೆರಿಗೆ ಸ್ವರ್ಗಗಳಲ್ಲಿ ಉದ್ದಿಮೆಗಳು ತುಂಬಾ ಲಾಭದಾಯಕವಾಗಿ ಕೆಲಸ ಮಾಡುತ್ತಿವೆ ಎಂದು ಬೇರೆ ಹೇಳಿಕೊಳ್ಳುತ್ತಾರೆ. ಆದರೆ ಕಂಪೆನಿಗಳು ಕೊಡುವ ಮಾಹಿತಿಯ ಪ್ರಕಾರವೇ ಅಲ್ಲಿ ತೊಡಗಿಸುವ ಬಂಡವಾಳದ ಪ್ರಮಾಣ ಶೇಕಡ ೧೦ರಷ್ಟಿರುತ್ತದೆ. ಹಾಗೆಯೇ ಕಾರ್ಮಿಕರಿಗೆ ಕೊಡುವ ವೇತನವೂ ಕಡಿಮೆ ಇರುತ್ತದೆ. ಕಡಿಮೆ ಜನರನ್ನು ಬಳಸಿಕೊಂಡು, ಕಡಿಮೆ ಬಂಡವಾಳ ತೊಡಗಿಸಿ ತಮ್ಮ ದೇಶಕ್ಕಿಂತ ಹೆಚ್ಚು ಲಾಭಮಾಡುವುದು ಒಂದು ದೊಡ್ಡ ಪವಾಡ!
ಜುಕ್‌ಮನ್ ಹಾಗೂ ಅವರ ಗೆಳೆಯರ ಅಧ್ಯಯನದಿಂದ ಕೇವಲ ತೆರಿಗೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಉದ್ದಿಮೆಗಳು ಲಾಭವನ್ನು ಉತ್ಪ್ರೇಕ್ಷಿಸಿ ತೋರಿಸುತ್ತಿವೆ ಅನ್ನುವುದು ಸ್ಪಷ್ಟವಾಗುತ್ತದೆ. ಹಲವು ದೇಶಗಳ ಸರ್ಕಾರಗಳಿಗೂ ಈಗ ಇದನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಕೆಲವು ದೇಶಗಳು ಒಪ್ಪಿಕೊಳ್ಳುವುದಕ್ಕೂ ಪ್ರಾರಂಭಿಸಿವೆ. ಪರಿಸ್ಥಿತಿ ಬದಲಾಗುತ್ತಿದೆ. ದೇಶಗಳು ತಮ್ಮಲ್ಲಿನ ವಿದೇಶಿ ಹೂಡಿಕೆದಾರರ ಮಾಹಿತಿಯನ್ನು ಸಂಬಂಧಪಟ್ಟ ದೇಶಗಳಿಗೆ ಕೊಡುವುದಕ್ಕೆ ಈಗ ಒಪ್ಪಿಕೊಳ್ಳುತ್ತಿವೆ. ೨೦೨೧ರ ಅಕ್ಟೊಬರ್ ತಿಂಗಳಿನಲ್ಲಿ ೧೩೦ ದೇಶಗಳು ಉದ್ದಿಮೆಗಳ ಮೇಲೆ ಜಾಗತಿಕವಾಗಿ ಕನಿಷ್ಠ ಶೇಕಡ ೧೫ರಷ್ಟು ತೆರಿಗೆ ವಿಧಿಸುವುದಕ್ಕೆ ಒಪ್ಪಿಕೊಂಡಿವೆ.
ಜುಕ್‌ಮನ್ ಹಾಗೂ ಪಿಕೆಟ್ಟಿಯವರ ಅಧ್ಯಯನಗಳು ತೀವ್ರವಾಗುತ್ತಿರುವ ಆದಾಯ ಹಾಗೂ ಸಂಪತ್ತಿನ ಅಸಮಾನತೆಯ ಬಗ್ಗೆಯೂ ಮಾಹಿತಿ ನೀಡುತ್ತಿವೆ. ೧೯೭೦ರಲ್ಲಿ ಅಮೇರಿಕೆಯಲ್ಲಿ ಶೇಕಡ ೧ರಷ್ಟು ಶ್ರೀಮಂತರ ಬಳಿ ಒಟ್ಟು ವರಮಾನದ ಶೇಕಡ ೧೦ರಷ್ಟು ಇತ್ತು. ಆದರೆ ಅದು ೧೯೮೦ರ ವೇಳೆಗೆ ಶೇಕಡ ೨೦ರಷ್ಟಾಯಿತು. ಈಗ ಅದು ದುಪ್ಪಟ್ಟು ಆಗಿದೆ. ಆದರೆ ಕೆಳಗಿನ ೫೦% ಜನರ ವರಮಾನದಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ. ಹಾಗೆಯೇ ಸಂಪತ್ತಿನ ಕೇಂದ್ರೀಕರಣವನ್ನು ನೋಡಿದಾಗ ಅಲ್ಲಿ ಅಸಮಾನತೆ ಇನ್ನೂ ತೀವ್ರವಾಗಿದೆ. ಮಾರುಕಟ್ಟೆಯನ್ನು ನಂಬಿಕೊಂಡಿರುವ ಅರ್ಥಶಾಸ್ತ್ರಜ್ಞರ ಪ್ರಕಾರ ಜನರ ಕೊಡುಗೆಗೆ ತಕ್ಕಂತೆ ಫಲ ಸಿಗುತ್ತದೆ. ಅದರಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿದರೆ ಆರ್ಥಿಕತೆಗೆ ತೊಂದರೆಯಾಗುತ್ತದೆ. ಅದರಿಂದ ಕಠಿಣ ಶ್ರಮವನ್ನು ಕಡೆಗಣಿಸಿದಂತಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಹಾಗಾಗಿ ಎಲ್ಲರ ಪಾಲಿನಲ್ಲೂ ಕುಸಿತವಾಗುತ್ತದೆ.
ಆದರೆ ಜುಕ್‌ಮನ್ ಹೇಳುವಂತೆ ಸಾರ್ವಜನಿಕರ ಬೆಂಬಲ ಹಾಗೂ ಸಮಾಜದ ಕೊಡುಗೆ ಇಲ್ಲದೇ ಹೋಗಿದ್ದರೆ ಯಾರೂ ಬಿಲಿಯನೇರುಗಳಾಗುತ್ತಿರಲಿಲ್ಲ. ಸಮಾಜದಿಂದ ಪಡೆದುಕೊಂಡಿದ್ದಕ್ಕೆ ಅವರು ತೆರಿಗೆ ಕಟ್ಟಬೇಕು. ಎಷ್ಟು ತೆರಿಗೆ ವಿಧಿಸಬೇಕು ಅನ್ನುವುದನ್ನು ಸಮಾಜ ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆ ನಿರ್ಧರಿಸಬೇಕು. ಜುಕ್‌ಮನ್ ಅಧ್ಯಯನ ಹಲವು ಬಗೆಯ ಪ್ರತಿಕ್ರಿಯೆಯನ್ನು, ಚರ್ಚೆಯನ್ನು ಹುಟ್ಟಿಹಾಕಿದೆ. ಸರ್ಕಾರಗಳು ಶ್ರೀಮಂತರ ಮೇಲೆ ತೆರಿಗೆ ಹಾಕುವ, ತೆರಿಗೆ ಕಳ್ಳತನವನ್ನು ತಪ್ಪಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಒತ್ತಾಯಿಸುತ್ತಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜುಕ್‌ಮನ್ ತುಂಬಾ ಭರವಸೆ ಮೂಡಿಸುತ್ತಿರುವ ಅರ್ಥಶಾಸ್ತ್ರಜ್ಞರಾಗಿದ್ದಾರೆ. ನೋಬೆಲ್ ಸಮಿತಿಯವರಿಗೆ ಅಮೇರಿಕೆಯ ಕೆಲವು ವಿಶ್ವವಿದ್ಯಾನಿಲಯದಾಚೆಗೆ ಹಾಗೂ ಸಾಂಪ್ರದಾಯಿಕ ಅರ್ಥಶಾಸ್ತ್ರದ ಚೌಕಟ್ಟನ್ನು ಮೀರಿ ಯೋಚಿಸುವಂತಾದರೆ ಅರ್ಥಶಾಸ್ತ್ರಕ್ಕೆ ನಿಜವಾಗಿ ಮಹತ್ತರ ಕೊಡುಗೆ ನೀಡಿರುವ ಇಂತಹ ಯುವ ಪ್ರತಿಭೆಗಳು ಕಾಣುತ್ತವೆ.