ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ?

ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ದೃಷ್ಟಿಯಲ್ಲಿ ಉಕ್ರೇನ್ ಸಂಘರ್ಷ ‘ಮೋದಿಯವರ ಯುದ್ಧ’. ಅವರ ಪ್ರಕಾರ ಜಗತ್ತಿನಲ್ಲೇ ಅತಿಹೆಚ್ಚು ಸುಂಕ ಹಾಕುವ ದೇಶ ಭಾರತ–ಸುಂಕದ ಮಹಾರಾಜ. ಅಮೆರಿಕದ ಸರಕುಗಳ ಮೇಲೆ ಸುಂಕ ಹೇರಿ, ಅವು ಭಾರತಕ್ಕೆ ಬಾರದಂತೆ ತಡೆಯುತ್ತಿದೆ. ಇದರಿಂದ ಅಮೆರಿಕದ ಬಳಕೆದಾರರು, ವಾಣಿಜ್ಯೋದ್ಯಮಿಗಳು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ತೆರಿಗೆದಾರರು ಮೋದಿಯವರ ಯುದ್ಧಕ್ಕೆ ಹಣ ತೆರುತ್ತಿದ್ದಾರೆ. ಆದರೆ, ಭಾರತ ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಿಕೊಂಡು ಡಾಲರ್ ಸಂಪಾದಿಸಿಕೊಳ್ಳುತ್ತಿದೆ. ಆ ದುಡ್ಡಿನಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲವನ್ನು ಕೊಂಡು, ಶುದ್ಧೀಕರಿಸಿ, ಜಗತ್ತಿನಾದ್ಯಂತ ಮಾರಿ, ಲಾಭ ಮಾಡಿಕೊಳ್ಳುತ್ತಿದೆ. ಭಾರತದ ಕೆಲವು ಲಾಭಕೋರರು ಹೇರಳ ಲಾಭ ಮಾಡಿಕೊಳ್ಳುತ್ತಿದ್ದಾರೆ. ಭಾರತದ ಅಕ್ರಮ ವ್ಯಾಪಾರದ ಹಣ ಪುಟಿನ್ ಯುದ್ಧ ನಿಧಿಗೆ ಸೇರಿಕೊಳ್ಳುತ್ತಿದೆ. ಲಕ್ಷಾಂತರ ಉಕ್ರೇನ್ ನಾಗರಿಕರು ಸಾಯುತ್ತಿದ್ದಾರೆ.

ಯುದ್ಧಪೂರ್ವದಲ್ಲಿ ಭಾರತ ಶೇ 1ರಷ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಶೇ 35ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಇಷ್ಟೊಂದು ಆಮದು ಅವಶ್ಯಕತೆಗಾಗಿಯಲ್ಲ, ಮತ್ತೆ ಲಾಭಕ್ಕೆ ಮಾರಿಕೊಳ್ಳುವುದಕ್ಕೆ. ಭಾರತದ ಅಕ್ರಮ ವ್ಯಾಪಾರದಿಂದಾಗಿ ಅಮೆರಿಕ 50 ಶತಕೋಟಿ ಡಾಲರ್ ವಾಣಿಜ್ಯ ಕೊರತೆ ಅನುಭವಿಸುತ್ತಿದೆ. ಭಾರತದ ಚದು ರಂಗದಾಟವನ್ನು ಟ್ರಂಪ್ ಚೆನ್ನಾಗಿ ಅರ್ಥೈಸಿಕೊಂಡಿ ದ್ದಾರೆ. ಭಾರತದ ಮೇಲೆ ಶೇ 50ರಷ್ಟು ಸುಂಕ ಹಾಕಿ ದ್ದಾರೆ. ಭಾರತದ ಸುಂಕಕ್ಕೆ ಪ್ರತಿಯಾಗಿ ಶೇ 25ರಷ್ಟು ಸುಂಕ ಮತ್ತು ರಷ್ಯಾದಿಂದ ತೈಲ ಆಮದಿಗಾಗಿ ಶೇ 25ರಷ್ಟು ದಂಡ. ಇದರಿಂದ ಭಾರತ ಪಾಠ ಕಲಿಯ ಬೇಕು. ಅಮೆರಿಕ ತನ್ನನ್ನು ಕಾರ್ಯತಾಂತ್ರಿಕ ಪಾಲುದಾರನಾಗಿ ಭಾವಿಸಬೇಕೆಂದು ಭಾರತ ಬಯಸಿದರೆ, ಅದಕ್ಕನುಗುಣವಾಗಿ ನಡೆದುಕೊಳ್ಳಬೇಕು. ಇದು ಸ್ಥೂಲವಾಗಿ ನವಾರೋ ಅವರ ವಾದ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ‘ಎಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ರಷ್ಯಾ ದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ತಪ್ಪಿಗಾಗಿ ಭಾರತದ ಮೇಲೆ ಸುಂಕ ಹಾಕಲಾಗಿದೆ ಎಂಬ ವಾದದಲ್ಲಿ ಸಂದಿಗ್ಧತೆ ಇದೆ. ಚೀನಾ ನಮಗಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಯುರೋಪ್ ನಮಗಿಂತ ಹೆಚ್ಚು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಅವರಿಗೆ ಈ ತರ್ಕವನ್ನು ಅನ್ವಯಿಸುತ್ತಿಲ್ಲ. ಭಾರತಕ್ಕಷ್ಟೇ ಅನ್ವಯಿಸಲಾಗು ತ್ತಿದೆ. ಪುಟಿನ್ ಬೊಕ್ಕಸಕ್ಕೆ ಭಾರತ ಹಣ ತುಂಬು ತ್ತಿದೆ ಎಂದು ದೂಷಿಸಲಾಗುತ್ತಿದೆ. ಆದರೆ, ಯುರೋಪ್ ಭಾರತಕ್ಕಿಂತ ಹೆಚ್ಚು ರಷ್ಯಾ ಜೊತೆ ವ್ಯಾಪಾರ ಮಾಡುತ್ತಿದೆ. ಅವರನ್ನು ಯಾಕೆ ದೂಷಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳು ತ್ತಿರುವುದಕ್ಕೆ ಈವರೆಗೂ ಅಮೆರಿಕ ಭಾರತವನ್ನು ಆಕ್ಷೇಪಿಸಿರಲಿಲ್ಲ. ಬೈಡೆನ್ ಕಾಲದಲ್ಲೂ ಯಾವುದೇ ವಿರೋಧವಿರಲಿಲ್ಲ. ಆಗಿನ ಚಿಂತನೆಯೇ ಬೇರೆಯಿತ್ತು. 2022ರಲ್ಲಿ ಉಕ್ರೇನ್ ಯುದ್ಧದಿಂದ ತೈಲದ ಬೆಲೆ ವಿಪರೀತ ಆಗುತ್ತದೆನ್ನುವ ಆತಂಕವಿತ್ತು. ರಷ್ಯಾ ದಿಂದ ಭಾರತ ತೈಲ ಕೊಳ್ಳುವುದರಿಂದ ಜಾಗತಿಕ ವಾಗಿ ತೈಲದ ಬೆಲೆ ಕಡಿಮೆಯಾಗುತ್ತದೆಂದು ಅಮೆರಿಕ ದವರೇ ವಾದಿಸುತ್ತಿದ್ದರು. ಹಾಗಾಗಿ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದರಲ್ಲಿ ನಮ್ಮ ಹಿತಾಸಕ್ತಿಯ ಜೊತೆಗೆ ಜಾಗತಿಕ ಹಿತಾಸಕ್ತಿಯೂ ಇದೆ. ನಮ್ಮ ದೇಶದ ಆಸಕ್ತಿಗೆ ಅನುಗುಣವಾಗಿ ನಿರ್ಧರಿಸುವ ಸ್ವಾತಂತ್ರ್ಯ ನಮಗಿರಬೇಕು. ಅದೇ ನಿಜವಾದ ಸ್ಟ್ರಾಟೆಜಿಕ್ ಸ್ವಾಯತ್ತತೆ ಎನ್ನುತ್ತಾರೆ ಜೈಶಂಕರ್.

ಜೈಶಂಕರ್ ಹೇಳುವಂತೆ, ತೈಲದ ವಿಷಯದಲ್ಲಿ ಅಮೆರಿಕದ ನಿಲುವು ಸಮಸ್ಯಾತ್ಮಕವಾಗಿದೆ. ಅಮೆರಿಕದ ಉದ್ದೇಶ ರಷ್ಯಾಕ್ಕೆ ತೈಲದಿಂದ ಬರುವ ಆದಾಯವನ್ನು ಕಡಿಮೆ ಮಾಡುವುದಾಗಿದ್ದರೆ, ರಷ್ಯಾದ ತೈಲ ವ್ಯಾಪಾರವನ್ನು ನಿಷೇಧಿಸಬಹುದಿತ್ತು. ಇರಾನ್ ಹಾಗೂ ವೆನಿಜುವೆಲಾ ವಿಷಯದಲ್ಲಿ ಹಾಗೆ ಮಾಡಿತ್ತು. ಅದು ಸುಲಭ ಹಾಗೂ ನೇರ ಕ್ರಮವಾಗಿತ್ತು. ಆದರೆ, ರಷ್ಯಾದ ವಿಷಯದಲ್ಲಿ ಹಾಗೆ ಮಾಡದೆ, ಭಾರತದ ಮೇಲೆ ಸುಂಕ ಹಾಕಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ ರಷ್ಯಾದ ಮೇಲೆ ಕಠಿಣ ದಿಗ್ಬಂಧನ ಹೇರುತ್ತೇವೆಂದು ಬೆದರಿಸಿತ್ತು. ಆಗ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಆಗಿತ್ತು. ರಷ್ಯಾದ ತೈಲವನ್ನು ನಿಷೇಧಿಸಿದ್ದರೆ ಬೆಲೆ ಇನ್ನೂ ಏರಿಬಿಡುತ್ತಿತ್ತು. ಅದನ್ನು ತಪ್ಪಿಸಲು ರಷ್ಯಾದ ತೈಲಕ್ಕೆ ಬೆಲೆ ಮಿತಿ ಹಾಕಲಾಯಿತು. ಬ್ಯಾರೆಲ್‌ಗೆ 60 ಡಾಲರಿಗಿಂತ ಕಡಿಮೆ ಬೆಲೆಗೆ ಕೊಳ್ಳುವುದಕ್ಕೆ ಅವ ಕಾಶ ನೀಡಲಾಯಿತು. ಅದು ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆಯಾಗಿದ್ದರಿಂದ ರಷ್ಯಾದ ಆದಾಯ ಕಡಿಮೆಯಾಯಿತು. ಭಾರತ ನಿರ್ಧಾರಿತ ಬೆಲೆಯೊ ಳಗೆ ತೈಲ ಖರೀದಿಸುತ್ತಿದೆ. ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಚೀನಾ, ಯುರೋಪ್, ಮುಂತಾದ ದೇಶಗಳೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿವೆ.

ಭಾರತದಿಂದ ಅಮೆರಿಕ ಏನನ್ನು ನಿರೀಕ್ಷಿಸುತ್ತಿದೆ ಅನ್ನುವುದು ಸ್ಪಷ್ಟವಿಲ್ಲ. ತೈಲದ ಆಮದನ್ನು ಭಾರತ ನಿಲ್ಲಿಸಿಬಿಟ್ಟರೆ, ತೈಲದ ಬೆಲೆ ಹೆಚ್ಚಾಗುತ್ತದೆ. ಇದರ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೂ ಆಗುತ್ತದೆ. ನಿರ್ಬಂಧ ಭಾರತಕ್ಕಷ್ಟೇ ಸೀಮಿತವಾಗಿರುವುದರಿಂದ ಉಳಿದ ದೇಶಗಳು ರಷ್ಯಾದಿಂದ ಕೊಳ್ಳುವುದನ್ನು ಮುಂದುವರಿಸುತ್ತವೆ. ರಷ್ಯಾದ ವರಮಾನ ನಿಲ್ಲಲ್ಲ. ಇದು ಖಂಡಿತಾ ಪರಿಣಾಮಕಾರಿ ಕ್ರಮವಲ್ಲ.

ಭಾರತದ ಮೇಲಿನ ಸುಂಕದ ಉದ್ದೇಶ ಬೇರೆ ಇರಬಹುದೆ? ಬಹುಶಃ ಅಮೆರಿಕದ ಕೃಷಿ ಹಾಗೂ ಹೈನು ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆಯುವಂತೆ ಮಾಡುವ ಉದ್ದೇಶವಿರಬಹುದು. ಅಮೆರಿಕದ ರೈತರೊಂದಿಗೆ ನಮ್ಮ ರೈತರಿಗೆ ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲಿ ರೈತರಿಗೆ ವಿಪರೀತ ಸಬ್ಸಿಡಿ ನೀಡುತ್ತಾರೆ. ಸರ್ಕಾರ ಭಾರತದ ರೈತರ ಹಿತಾಸಕ್ತಿಯನ್ನು ತ್ಯಾಗ ಮಾಡಲಾಗದು. ಹಾಗಾದರೆ ಭಾರತ ಏನು ಮಾಡಬಹುದು?

ಜಗತ್ತು ಇಂದು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ತಮ್ಮ ಅಜೆಂಡಾಗೆ ಬೇರೆಯವರನ್ನು ಒಪ್ಪಿಸುವುದಕ್ಕೆ ಸುಂಕವನ್ನು ಅಸ್ತ್ರ ಮಾಡಿಕೊಂಡಿದ್ದಾರೆ. ಅಮೆರಿಕ ಜಗತ್ತಿನಲ್ಲೇ ಆರ್ಥಿಕ ವಾಗಿ ದೊಡ್ಡ ದೇಶ. ಅತಿದೊಡ್ಡ ಮಾರುಕಟ್ಟೆ. ಅದ ರೊಂದಿಗೆ ಸಂಘರ್ಷ ಸಾಧ್ಯವಿಲ್ಲ. ಬಹುತೇಕ ದೇಶ ಗಳು ಒತ್ತಡಕ್ಕೆ ಮಣಿದಿವೆ. ಚೀನಾ ಮಾತ್ರ ಅಮೆರಿಕದ ದಾದಾಗಿರಿಗೆ ಸವಾಲೊಡ್ಡಿ ನಿಂತಿದೆ. ತಂತ್ರಜ್ಞಾನ, ವ್ಯಾಪಾರ ಎಲ್ಲದರಲ್ಲೂ ಅಮೆರಿಕದ ಸಮಕ್ಕೆ ಚೀನಾ ನಿಲ್ಲಬಲ್ಲದು. ಅಮೆರಿಕಕ್ಕೆ ಅನಿವಾರ್ಯವಾದ ಹಲವು ಸರಕುಗಳು ಅದರ ನಿಯಂತ್ರಣದಲ್ಲಿವೆ. ಆದರೆ ನಾವು ಅಮೆರಿಕಕ್ಕೆ ಅನಿವಾರ್ಯವಲ್ಲ. ಒಟ್ಟಾರೆಯಾಗಿ ನೋಡಿ ದಾಗ ಟ್ರಂಪ್ ಸುಂಕ ಹೆಚ್ಚಿಲ್ಲದಿರಬಹುದು. ಆದರೆ, ಜವಳಿ, ರತ್ನ ಮತ್ತು ಆಭರಣಗಳು, ಸೀಗಡಿ ಇತ್ಯಾದಿ ಕೆಲವು ಕ್ಷೇತ್ರಗಳಿಗೆ ತುಂಬಾ ತೊಂದರೆಯಾಗುತ್ತದೆ. ಸರ್ಕಾರದ ನೆರವು ಈ ಕ್ಷೇತ್ರಗಳಿಗೆ ಅವಶ್ಯಕ.

ಅಮೆರಿಕದೊಂದಿಗೆ ನಮ್ಮ ಒಟ್ಟಾರೆ ವ್ಯಾಪಾರ ಇರುವುದು ಕೇವಲ ಶೇ 11ರಷ್ಟು ಮಾತ್ರ. ಉಳಿದ ಶೇ 89ರಷ್ಟು ವ್ಯಾಪಾರ ಅಮೆರಿಕದ ಆಚೆಗೆ ನಡೆಯುತ್ತದೆ. ಉಳಿದ ದೇಶಗಳ ಜೊತೆ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಅಲ್ಲೂ ಸ್ಪರ್ಧೆ ಇರುತ್ತದೆ. ಎಲ್ಲಾ ದೇಶಗಳೂ ಅದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿರುತ್ತವೆ. ಇದು, ರಫ್ತನ್ನೇ ನೆಚ್ಚಿಕೊಂಡರೆ ಆಗುವ ಸಮಸ್ಯೆ. ನಾವು ಹೆಚ್ಚು ಸ್ಪರ್ಧಾತ್ಮಕವಾಗಬೇಕು. ಸರಕಿನ ವ್ಯಾಪಾರಕ್ಕೆ ಸೀಮಿತಗೊಳಿಸಿಕೊಳ್ಳದೆ, ನಮಗೆ ಹೆಚ್ಚು ಸಾಮರ್ಥ್ಯವಿರುವ ಸೇವಾಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕು. ಕೆಲವಾದರೂ ಬಹುರಾಷ್ಟ್ರೀಯ ಒಪ್ಪಂದಗಳ ಜೊತೆಗೆ ಸೇರಿಕೊಳ್ಳಬೇಕು. ಇಂಗ್ಲೆಂಡ್, ಯುರೋಪ್, ಚೀನಾ ಇತ್ಯಾದಿ ದೇಶಗಳ ಜೊತೆಗೆ ದ್ವಿಪಕ್ಷೀಯ ಒಪ್ಪಂದಗಳನ್ನೂ ಮಾಡಿಕೊಳ್ಳಬೇಕು.

ದೊಡ್ಡ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು, ಪ್ರಾಬಲ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಪಾರ ಹಾಗೂ ಆರ್ಥಿಕ ನಿರ್ಬಂಧಗಳನ್ನೆಲ್ಲಾ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತವೆ. ಅವು ಯಾವುದೇ ನೀತಿಗೂ ನಿಷ್ಠರಾಗಿರುವುದಿಲ್ಲ. ಮುಕ್ತ ವ್ಯಾಪಾರ ನೀತಿಯಿಂದ ಲಾಭವಿದ್ದಾಗ ಸುಂಕದ ವಿರುದ್ಧ ಮಾತನಾಡಿದ್ದರು; ಸುಂಕವನ್ನು ತಗ್ಗಿಸುವುದಕ್ಕೆ ಬಹುರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸಿದ್ದರು. ಈಗ ವ್ಯಾಪಾರದ ಕೊರತೆಯನ್ನು ತಗ್ಗಿಸಿಕೊಳ್ಳಬೇಕಾಗಿದೆ. ಸುಂಕಕ್ಕೆ ಶರಣಾಗಿದ್ದಾರೆ. ಬಹುರಾಷ್ಟ್ರೀಯ ಒಪ್ಪಂದ ಗಳನ್ನು ಉಲ್ಲಂಘಿಸುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ನಿಲುವನ್ನು ಬದಲಿಸುತ್ತಿರುತ್ತಾರೆ.

ಭಾರತ ಅಲಿಪ್ತ ರಾಷ್ಟ್ರಗಳ ಚಳವಳಿಯ ಮುಂಚೂಣಿಯಲ್ಲಿದ್ದ ಪ್ರಬಲ ರಾಷ್ಟ್ರವಾಗಿತ್ತು. ಸ್ಟ್ರಾಟೆಜಿಕ್ ಸ್ವಾಯತ್ತತೆಯ ಚಾಂಪಿಯನ್ ಅನಿಸಿ ಕೊಂಡಿತ್ತು. ಯಾವುದೇ ಪ್ರಬಲ ರಾಷ್ಟ್ರಕ್ಕೂ ಅಧೀನ ವಾಗದೆ, ಎಲ್ಲಾ ದೇಶಗಳ ನಡುವೆ ಸಮತೋಲನವನ್ನು ಕಾಪಾಡಿಕೊಂಡಿತ್ತು. ಇಂದು ಆ ಪರಂಪರೆಯನ್ನು ಹಾಗೂ ಅದಕ್ಕೆ ಪೂರಕವಾದ ಸ್ವಾವಲಂಬನೆಯ ಆರ್ಥಿಕತೆಯನ್ನು ಯೋಜಿಸಬೇಕಾಗಿದೆ. ಸ್ವಾವಲಂಬನೆ, ಅದರಲ್ಲೂ ವಿಶೇಷವಾಗಿ ಆಹಾರದ ಸ್ವಾವಲಂಬನೆಯನ್ನು ಬಿಟ್ಟುಕೊಡುವುದು ಸೂಕ್ತವಲ್ಲ. ತೈಲವನ್ನು ಬಿಟ್ಟರೆ ಉಳಿದೆಲ್ಲಾ ವಸ್ತುಗಳನ್ನು ನಮ್ಮಲ್ಲೇ ತಯಾರಿಸಿಕೊಳ್ಳಬಹುದು.

ರಫ್ತನ್ನೇ ನೆಚ್ಚಿಕೊಳ್ಳದೆ ದೇಶದ ಮಾರುಕಟ್ಟೆ ಯನ್ನು ವಿಸ್ತರಿಸುವುದು ನಮ್ಮ ಆದ್ಯತೆಯಾಗಬೇಕು. ಅದಕ್ಕೆ ಜನರ ಕೊಳ್ಳುವ ಶಕ್ತಿ ಹೆಚ್ಚಬೇಕು. ಶಿಕ್ಷಣ, ಉದ್ಯೋಗಾವಕಾಶ, ಆರೋಗ್ಯ, ಇತ್ಯಾದಿ ಜನಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ರೂಪಿಸುವುದಕ್ಕೆ ಗಮನಕೊಡಬೇಕು. ಕೃಷಿ ಹಾಗೂ ಸಣ್ಣ ಉದ್ದಿಮೆಗಳ ಬೆಳವಣಿಗೆ ನಮ್ಮ ಆದ್ಯತೆಯ ವಿಷಯವಾಗಬೇಕು. ಇದಕ್ಕೆ ಬೇಕಾದ ಹಣವನ್ನು ಕ್ರೋಡೀಕರಿಸುವುದಕ್ಕೆ ಸಂಪತ್ತಿನ ಮೇಲಿನ ತೆರಿಗೆಯೂ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಯೋಚಿಸಬೇಕು.