ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ

ಟಿ ಎಸ್ ವೇಣುಗೋಪಾಲ್

ಇತ್ತೀಚಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ನೆಹರೂವನ್ನೇ ಕಾರಣ ಮಾಡೋದು ಕೆಲವರಿಗೆ ಗೀಳಾಗಿದೆ. ದೇಶದ ವಿಭಜನೆ, ಚೀನಾ, ಪಾಕಿಸ್ತಾನ, ಕೃಷಿ, ಬಡತನ, ಶಿಕ್ಷಣ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯಿರಲಿ ಅದಕ್ಕೆ ನೆಹರೂವನ್ನು ಹೊಣೆ ಮಾಡುವುದು ಸಾಮಾನ್ಯವಾಗಿದೆ. ಅವರು ಸತ್ತು ೬೦ ವರ್ಷವಾದರೂ ಸಂತೋಷವಾಗಿ ಬಯ್ಯುತ್ತಿರುತ್ತೇವೆ. ಇಂದಿನ ಆರ್ಥಿಕ ಬಿಕ್ಕಟ್ಟಿಗೂ ನೆಹರೂ ಆಗ ಅನುಸರಿಸಿದ ಮಾದರಿಯೇ ಕಾರಣ ಅನ್ನುವುದನ್ನು ಕೇಳಿದ್ದೇವೆ.

 

ಭಾರತ ಅನುಸರಿಸಿದ ಆರ್ಥಿಕ ಮಾದರಿಯನ್ನು ಸಾಮಾನ್ಯವಾಗಿ ನೆಹರೂ-ಮಹಾಲನೋಬಿಸ್ ಮಾದರಿ ಅಂತ ಕರೆಯಲಾಗುತ್ತದೆ. ಮಹಾಲನೊಬಿಸ್ ಭಾರತ ಕಂಡ ಒಬ್ಬ ಒಳ್ಳೆಯ ಸಂಖ್ಯಾಶಾಸ್ತ್ರಜ್ಞ. ಜಗತ್ತು ಬೆರಗಿನಿಂದ ನೋಡುವಂತೆ ನಮ್ಮಲ್ಲಿ ಸಾಂಖ್ಯಿಕ ವ್ಯವಸ್ಥೆಯನ್ನು ರೂಪಿಸಿದವರಲ್ಲಿ ಅವರ ಪಾತ್ರ ದೊಡ್ಡದು. ನೆಹರೂ ಕಾಲದಲ್ಲಿ ಆರ್ಥಿಕ ಯೋಜನೆಯನ್ನು ರೂಪಿಸುವ ಹಾಗೂ ಅದಕ್ಕಾಗಿ ಗಣಿತೀಯ ಮಾದರಿಯನ್ನು ರೂಪಿಸುವ ಜವಾಬ್ದಾರಿ ಅವರ ಮೇಲೆ ಇತ್ತು. ಯಾವುದೇ ಚಿಂತನೆಯು ಆ ಕಾಲದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದ ಚಿಂತನೆಗಳಿಂದ ಪ್ರಭಾವಿತವಾಗಿರುತ್ತದೆ. ನೆಹರೂ ಚಿಂತನೆಯನ್ನೂ ಅಂದಿನ ಚಿಂತನೆಯಿಂದ ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ಈಗ ಬಹುತೇಕ ನೆಹರೂ ಟೀಕಾಕಾರರು ನವ ಉದಾರವಾದೀ ಆರ್ಥಿಕ ಚಿಂತನೆಯ ಹಿನ್ನೆಲೆಯಿಂದ ಅದನ್ನು ಟೀಕಿಸುತ್ತಿದ್ದಾರೆ. ಆದರೆ ನವ ಉದಾರವಾದೀ ಚಿಂತನೆಯೇ ಸೋತಿದೆ ಅನ್ನುವರು ಹೇರಳವಾಗಿದ್ದಾರೆ.

 

ನೆಹರೂ ಆಡಳಿತ ವಹಿಸಿಕೊಂಡಾಗ ಇಡೀ ಆರ್ಥಿಕತೆ ರಾಡಿಯಾಗಿತ್ತು. ಶತಮಾನಗಳ ಕಾಲ ನೈಸರ್ಗಿಕ ಸಂಪತ್ತು ಲೂಟಿಯಾಗಿತ್ತು. ದೇಶ ಭೀಕರ ಕ್ಷಾಮ ಕಂಡಿತ್ತು. ಜನರ ಸರಾಸರಿ ಆಯಸ್ಸು ೩೦ ವರ್ಷವೂ ಇರಲಿಲ್ಲ. ಶೇಕಡ ೮೦ಕ್ಕೂ ಹೆಚ್ಚು ಜನ ಅನಕ್ಷರಸ್ತರಾಗಿದ್ದರು. ಭೀಕರ ಕೋಮು ಗಲಭೆ ಕೋಟ್ಯಂತರ ಜನರನ್ನು ನಿರ್ಗತಿಕರನ್ನಾಗಿ ಮಾಡಿತ್ತು. ವಿಭಜನೆಯ ಪರಿಣಾಮವಾಗಿ ೬೦ ಲಕ್ಷಕ್ಕೂ ಹೆಚ್ಚು ಜನ ಭಾರತಕ್ಕೆ ವಲಸೆ ಬಂದಿದ್ದರು. ವಸಾಹತುಶಾಹಿ ಆಡಳಿತದಲ್ಲಿ ತಯಾರಿಕಾ ಕ್ಷೇತ್ರ ನಾಶವಾಗಿತ್ತು. ಭಾರತ ಕೃಷಿ ಪ್ರಧಾನ ಆರ್ಥಿಕತೆಯಾಗಿತ್ತು. ದೇಶದ ಜಿಡಿಪಿಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳದ್ದೇ ಅರ್ಧಕ್ಕಿಂತ ಹೆಚ್ಚು ಪಾಲಿತ್ತು.

 

ಸ್ವಾತಂತ್ರ್ಯ ಜನರಲ್ಲಿ ಅಪಾರ ನಿರೀಕ್ಷೆ ಮೂಡಿಸಿತ್ತು. ಅದಕ್ಕೆ ಸರಿತೂಗಿಸಲು ಬೇಕಾದ ಸಾಮರ್ಥ್ಯ ಸರ್ಕಾರಕ್ಕೆ ಇರಲಿಲ್ಲ. ಜನರಲ್ಲಿ ಭರವಸೆ ಮೂಡಿಸಲು, ಅವರ ಬದುಕಿನ ಸ್ಥಿತಿಯನ್ನು ಸುಧಾರಿಸಲು ಲಭ್ಯವಿರುವ ಎಲ್ಲಾ ರಾಷ್ಟ್ರೀಯ ಸಂಪನ್ಮೂಲಗಳನ್ನು ಪ್ರಜ್ಞಾಪೂರ್ವಕವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿತ್ತು. ಕೈಗಾರಿಕೀಕರಣದ ಮೂಲಕ ಆಧುನಿಕ ಆರ್ಥಿಕತೆಯನ್ನು ರೂಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ೧೯೫೦ರ ಆರ್ಥಿಕ ನೀತಿಯ ಉದ್ದೇಶವಾಗಿತ್ತು. ಇದನ್ನು ರಾಷ್ಟ್ರೀಯ ಯೋಜನಾ ಆಯೋಗದ ಮೂಲಕ ಸಾಧಿಸಬೇಕೆನ್ನುವುದು ಅವರ ಉದ್ದೇಶವಾಗಿತ್ತು.

 

ಅದು ಕೈಗಾರಿಕೀಕರಣ ಇಲ್ಲವೇ ನಾಶ ಅನ್ನುವ ಘೋಷಣೆಗಳ ಕಾಲ. ರಷ್ಯಾದ ಮಾದರಿಯೂ ಮುಂದೆ ಇತ್ತು. ತಯಾರಿಕಾ ಕ್ಷೇತ್ರವನ್ನು ಬೆಳೆಸುವುದು ಸರಿದಾರಿಯಾಗಿ ಕಂಡಿತ್ತು. ಇದರಿಂದ ಉದ್ಯೋಗ ಸೃಷ್ಟಿಯಾಗಲಿ, ಬಡತನದ ಪರಿಹಾರವಾಗಲಿ ಸಾಧ್ಯವಿಲ್ಲ ಅನ್ನುವುದರ ಅರಿವು ಅವರಿಗಿತ್ತು. ಆದರೆ ಆರ್ಥಿಕ ಬೆಳವಣಿಗೆ ನಿರಂತರವಾಗಿ ಆಗುತ್ತಿದ್ದರೆ, ಈ ಉಳಿದೆಲ್ಲಾ ಸಮಸ್ಯೆಗಳ ಕಡೆ ಗಮನಕೊಟ್ಟು ಪರಿಹರಿಸಬಹುದೆನ್ನುವುದು ಅವರ ನಂಬಿಕೆಯಾಗಿತ್ತು. ಜೊತೆಗೆ ಖಾಸಗೀ ಬಂಡವಾಳಿಗರು ಬೃಹತ್ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸೃಷ್ಟಿಯ ಕಡೆ ಗಮನಕೊಡುವುದಿಲ್ಲ ಅನ್ನುವುದು ಸ್ಪಷ್ಟವಿತ್ತು. ಅದರ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕಾಗಿದ್ದರಿಂದ ಆರ್ಥಿಕತೆಯಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಮಹತ್ವದ ಪಾತ್ರವಿತ್ತು. ದೊಡ್ಡ ಕೈಗಾರಿಕೆಗಳು ಹುಟ್ಟಿಕೊಂಡವು. ಮೂಲ ಸೌಕರ್ಯ ನಿರ್ಮಾಣಕ್ಕೆ ಹೂಡಿಕೆ ಹೆಚ್ಚಾಯಿತು. ಹಾಗೆಯೇ ಬಂಡವಾಳ ಸರಕುಗಳ ಉತ್ಪಾದನೆಗೂ ಹೂಡಿಕೆ ಹೆಚ್ಚಾಯಿತು. ಜಿಡಿಪಿಯಲ್ಲಿ ತಯಾರಿಕಾ ಕ್ಷೇತ್ರದ ಪಾಲು ಏರುತ್ತಾ ಹೋಯಿತು. ಚೀನಾವನ್ನೂ ಮೀರಿಸಿ ಬೆಳೆದಿತ್ತು. ಆರ್ಥಿಕತೆಯ ಬೆಳವಣಿಗೆಯ ದೃಷ್ಟಿಯಿಂದ ನೋಡಿದರೆ ಪ್ರಾರಂಭದಲ್ಲಿ ಸಾಧಿಸಿದ ಪ್ರಗತಿ ಅದ್ಭುತವಾದದ್ದು ಎಂದು ಒಪ್ಪಿಕೊಳ್ಳಬೇಕು. ೧೯೦೦-೪೭ರ ನಡುವೆ ಭಾರತದ ತಲಾ ವರಮಾನ ಕುಸಿಯುತ್ತಲೇ ಇತ್ತು. ೧೯೫೦-೬೫ರಲ್ಲಿ ಅದು ಸುಮಾರಾಗಿ ೧.೭% ಇತ್ತು. ಆ ಮಟ್ಟಿನ ಬೆಳವಣಿಗೆ ಹಿಂದೆ ಸಾಧ್ಯವಾಗಿರಲಿಲ್ಲ. ಆದರೆ ನಂತರದಲ್ಲಿ ಅದರಲ್ಲೂ ನೆಹರೂ ಸತ್ತ ನಂತರದ ಕಾಲದಲ್ಲಿ ಬೆಳವಣಿಗೆಯ ದರ ಸ್ಥಗಿತಗೊಳ್ಳುತ್ತಾ ಹೋಯಿತು. ೧೯೭೧ರ ವೇಳೆಗೆ ಇತರ ದೇಶಗಳು ನಮ್ಮನ್ನು ಮೀರಿ ಬೆಳೆಯತೊಡಗಿದ್ದು ವಾಸ್ತವ.

 

ಭಾರತದ ಅಭಿವೃದ್ಧಿ ಮಾದರಿಯೇ ಸ್ವಾವಲಂಬನೆಯನ್ನು ಸಾಧಿಸುವುದಾಗಿತ್ತು. ಹಾಗಾಗಿ ವಿದೇಶಿ ಹಣ ಪಥ್ಯವಾಗಿತ್ತು. ಸರಕು ಹಾಗೂ ಸೇವೆಗಳ ಉತ್ಪಾದನೆಗೆ ಬೇಕಾದ ಯಂತ್ರ ಇತ್ಯಾದಿ ಬಂಡವಾಳ ಸರಕುಗಳನ್ನು ಇಲ್ಲೇ ತಯಾರಿಸಬೇಕು ಅಂತ ಭಾವಿಸಿದ್ದರು. ಅದರಿಂದಾಗಿ ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದಕ್ಕೆ ಆದ್ಯತೆ ನೀಡಲಾಯಿತು. ಬೆಳವಣಿಗೆಯ ದರವನ್ನು ಹೆಚ್ಚಿಸುವುದಕ್ಕೆ ಇರುವ ಒಂದೊಂದೇ ಅಡ್ಡಿಗಳನ್ನು ಮೀರಿಕೊಳ್ಳುತ್ತಾ ಹೋಗಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಅವಶ್ಯಕ ವಸ್ತುಗಳ ತಯಾರಿ ಇಲ್ಲೇ ಆದರೆ ಸ್ವಾವಲಂಬನೆ ಸಾಧ್ಯವಾಗುತ್ತದೆ. ಆಗ ಜಾಗತಿಕ ಮಾರುಕಟ್ಟೆಯ ಅವಲಂಬನೆ ತಪ್ಪುತ್ತದೆ ಅನ್ನುವುದು ಅವರ ಯೋಚನೆಯಾಗಿತ್ತು. ಇಂತಹುದೇ ಮಾದರಿಯನ್ನು ೧೯೨೮ರಲ್ಲಿ ರಷ್ಯಾದ ಜಿ ಎ ಫೆಲ್ಡ್‌ಮನ್ ಬೆಳೆಸಿದ್ದ. ಅದನ್ನು ಹೋಲುವ ಒಂದು ಗಣಿತೀಯ ಮಾದರಿಯನ್ನು ಮಹಾಲನೊಬಿಸ್ ಭಾರತಕ್ಕೆ ರೂಪಿಸಿದ್ದರು.

 

ಈ ಪ್ರಯತ್ನಗಳು ಫಲ ನೀಡಿದ್ದೂ ನಿಜ. ೧೯೫೦ರಲ್ಲಿ ಭಾರತ ತನಗೆ ಬೇಕಾದ ಶೇಕಡ ೯೦ರಷ್ಟು ಯಂತ್ರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ನಂತರದಲ್ಲಿ ಭಾರತದ ಕೈಗಾರಿಕಾ ಕ್ಷೇತ್ರ ಶೇಕಡ ೭.೧ರಷ್ಟು ಬೆಳೆಯತೊಡಗಿತು. ಬಂಡವಾಳ ಸರಕುಗಳ ಆಮದು ೧೯೭೪ರ ವೇಳೆಗೆ ೯%ಗೆ ಇಳಿಯಿತು. ಸರ್ಕಾರದ ಒಡೆತನದಲ್ಲಿ ಉಕ್ಕು ಕಾರ್ಖಾನೆಗಳು, ಟೆಲಿಫೋನ್ ಉದ್ದಿಮೆಗಳು, ಹಡಗು ನಿರ್ಮಾಣ ಕೈಗಾರಿಕೆಗಳು, ದೊಡ್ಡ ದೊಡ್ಡ ಅಣೆಕಟ್ಟುಗಳು ಇವೆಲ್ಲಾ ಕಾಣಿಸಿಕೊಂಡವು. ಸರ್ಕಾರಿ ವಲಯ ಖಾಸಗೀ ವಲಯವನ್ನು ಮೀರಿ ಬೆಳೆಯಿತು. ನಾವು ಅಂದಿನ ಆರ್ಥಿಕತೆಯನ್ನು ಟೀಕಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟಿಕೊಳ್ಳಬೇಕು. ಜೊತೆಗೆ ನಮ್ಮ ಆಮದು ಹಾಗೂ ರಫ್ತು ಕೆಲವು ದೇಶಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅದು ಕ್ರಮೇಣ ಅಮೇರಿಕೆ ಹಾಗೂ ಬ್ರಿಟನ್ ಆಚೆಗೆ ಸಮಾಜವಾದೀ ದೇಶಗಳು ಹಾಗೂ ಹಿಂದುಳಿದ ದೇಶಗಳಿಗೆ ವಿಸ್ತರಿಸಿತೊಡಗಿತ್ತು.

ಆಹಾರ, ಬಟ್ಟೆ ಇತ್ಯಾದಿ ಬಳಕೆಯ ಸರಕುಗಳ ಉತ್ಪಾದನೆ ಹಿಂದೆ ಬಿದ್ದಿದ್ದು ಹೌದು. ಆಗ ಹಲವು ದೇಶಗಳು ಮಾಡಿದಂತೆ ಭಾರತವೂ ಕೃಷಿ ಹಾಗೂ ಕೃಷಿ ಆಧಾರಿತ ಉತ್ಪನ್ನಗಳ ಉತ್ಪಾದನೆಗೆ, ಹಾಗೂ ಅದರ ರಫ್ತಿಗೆ ಗಮನಕೊಡಬೇಕಿತ್ತು ಅನ್ನುವ ಟೀಕೆಯೂ ಇದೆ. ಕೃಷಿಗೆ ಹೆಚ್ಚಿನ ಗಮನಕೊಟ್ಟು ಆಹಾರಧಾನ್ಯದ ಉತ್ಪಾದನೆಯನ್ನೂ ಇನ್ನಷ್ಟು ಹೆಚ್ಚಿಸಬಹುದಿತ್ತು ಅನ್ನುವುದು ನಿಜ. ಆದರೆ ಅದನ್ನು ರಫ್ತು ಮಾಡಿ ವಿದೇಶಿ ವಿನಿಮಯ ಸಂಪಾದಿಸಬೇಕಿತ್ತು, ಆರ್ಥಿಕತೆಯನ್ನು ಬೆಳೆಸುವುದಕ್ಕೆ ವಿದೇಶಿ ವ್ಯಾಪಾರವನ್ನು ಒಂದು ಸಾಧನವನ್ನಾಗಿ ಬೆಳೆಸಬೇಕಿತ್ತು ಅನ್ನುವುದರಲ್ಲಿ ಸಮಸ್ಯೆಯಿದೆ. ಇದು ಬಹುತೇಕ ಮುಕ್ತ ಮಾರುಕಟ್ಟೆ ನೀತಿಯನ್ನು ಪ್ರತಿಪಾದಿಸುವ ನವ ಉದಾರವಾದಿ ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಮಹಾಲನೊಬಿಸ್ ಅಂತಹವರು ಬೇರೆಯದೇ ರೀತಿಯಲ್ಲಿ ಯೋಚಿಸುತ್ತಿದ್ದರು. ಅವರು ಕೃಷಿಯನ್ನು ನಿರ್ಲಕ್ಷಿಸಿರಲಿಲ್ಲ. ಬದಲಿಗೆ ಉತ್ಪಾದನೆಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸಿದ್ದರು. ಹೂಡುವ ಬಂಡವಾಳಕ್ಕೆ ಗರಿಷ್ಠ ಉತ್ಪಾದನೆಯನ್ನು ಸಾಧಿಸುವುದು ಅವರ ಉದ್ದೇಶವಾಗಿತ್ತು. ಜೊತೆಗೆ ಸ್ವಾವಲಂಬನೆಯೂ ಸಾಧ್ಯವಾಗಬೇಕಿತ್ತು. ಆಶೋಕ ರುದ್ರ ಗುರುತಿಸುವಂತೆ ಆಗ ಭಾರತದ ಆರ್ಥಿಕತೆಯಲ್ಲಿ ಮೂರು ವಲಯಗಳನ್ನು ನೋಡಬಹುದಿತ್ತು. ಮೊದಲನೆಯದು ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳು. ಎರಡನೆಯದು ಗಣಿ ಹಾಗೂ ಗಣಿ ಆಧಾರಿತ ಕೈಗಾರಿಕೆಗಳು. ಮೂರನೆಯದು ವಿದ್ಯುತ್ ಇತ್ಯಾದಿ ಸಾರ್ವತ್ರಿಕ ಬಳಕೆಯ ವಲಯ.

 

ಕೃಷಿಯಿಂದ ಎಲ್ಲರಿಗೂ ಬೇಕಾದ ಆಹಾರ, ಬಟ್ಟೆ ಇತ್ಯಾದಿ ಅವಶ್ಯಕತೆಗಳು ಪೂರೈಕೆಯಾಗುತ್ತಿತ್ತು. ಗಣಿ ಹಾಗೂ ಗಣಿ ಆಧಾರಿತ ಕೈಗಾರಿಕೆಗಳು ಆಹಾರ ಹಾಗು ಬಟ್ಟೆಯಂತಹ ಬಳಕೆಯ ಸರಕುಗಳಿಗಷ್ಟೇ ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳನ್ನು ಆಧರಿಸಿತ್ತು. ಗಣಿ ಕೈಗಾರಿಕೆಯ ವಿಸ್ತರಣೆಯಿಂದ ಕೃಷಿ ಕ್ಷೇತ್ರದ ಮೇಲೆ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಆಹಾರದ ಸುರಕ್ಷತೆಗೆ ಹಾನಿಯಾಗದಂತೆ ಗಣಿ ಕೈಗಾರಿಕೆಯನ್ನು ವಿಸ್ತರಿಸುವುದಕ್ಕೆ ಸಾಧ್ಯವಿತ್ತು.

 

ಬ್ರಿಟಿಷರು ಬಿಟ್ಟುಹೋದಾಗ ಭಾರತದ ಆರ್ಥಿಕತೆಯಲ್ಲಿ ಕೃಷಿಯ ಉತ್ಪಾದನೆಯೇ ಪ್ರಧಾನವಾಗಿತ್ತು. ಸೆಣಬು ಹಾಗೂ ಹತ್ತಿ ಬಟ್ಟೆ ಹೆಚ್ಚಾಗಿ ರಫ್ತಾಗುತ್ತಿತ್ತು. ರಫ್ತನ್ನು ಹೆಚ್ಚಿಸಬೇಕೆಂದರೆ ಕೃಷಿಆಧಾರಿತ ಉತ್ಪನ್ನಗಳನ್ನು ಹೆಚ್ಚಿಸಬೇಕಿತ್ತು. ಅಂದರೆ ಆಹಾರ ಧಾನ್ಯಗಳನ್ನು ಬೆಳೆಯುವ ಭೂಮಿಯಲ್ಲಿ ವಾಣಿಜ್ಯ ಬೆಳೆಯನ್ನು ಬೆಳೆಯಬೇಕಾಗುತ್ತಿತ್ತು. ಇದರಿಂದ ಆಹಾರದ ಸುಭದ್ರತೆಗೆ ದಕ್ಕೆಯಾಗುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಹೀಗೆ ಆಗಿತ್ತು. ೧೮೯೭-೧೯೦೨ರ ಅವಧಿಯಲ್ಲಿ ತಲಾ ವಾರ್ಷಿಕ ಆಹಾರಧಾನ್ಯಗಳ ಲಭ್ಯತೆ ೧೯೯ ಕೆಜಿ ಇತ್ತು. ಬ್ರಿಟಿಷರ ಕೃಷಿ ನೀತಿಯಿಂದಾಗಿ ೧೯೪೫-೪೬ರಲ್ಲಿ ಅದು ೧೩೬.೮ ಕೆಜಿಗೆ ಇಳಿದಿತ್ತು. ಆಗ ಅವರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯತೊಡಗಿದ್ದರು. ಜೊತೆಗೆ ಹೆಚ್ಚಿನ ಭೂಮಿಯನ್ನು ಕೃಷಿಗೆ ಒಳಪಡಿಸುವುದಕ್ಕೆ ಅವರು ಮನಸ್ಸು ಮಾಡಲಿಲ್ಲ. ನೀರಾವರಿ, ಉತ್ತಮ ಬೀಜ, ಗೊಬ್ಬರ ಇತ್ಯಾದಿಗಳ ಕಡೆ ಗಮನಕೊಡಲಿಲ್ಲ. ಅದು ಆಹಾರಧಾನ್ಯಗಳ ಉತ್ಪನ್ನಕ್ಕೆ ತೊಂದರೆ ಮಾಡಿತು. ಸ್ವಾತಂತ್ರ್ಯ್ರ ಬಂದ ಮೇಲೆ ಪರಿಸ್ಥಿತಿ ಸುಧಾರಿಸಿತು. ೧೯೬೫ರ ವೇಳೆಗೆ ಅದು ೧೬೮.೪೪ ಕೆಜಿ ಆಗಿತ್ತು. ೧೯೮೦ರ ವೇಳೆಗೆ ೧೮೦ ಕೆಜಿ ತಲುಪಿತ್ತು. ಇನ್ನೂ ಹೆಚ್ಚಿಸುವುದಕ್ಕೆ ಅವಕಾಶವಿತ್ತು ಅನ್ನುವುದು ನಿಜ. ೧೯೮೦ರ ನಂತರ ಉದಾರೀಕರಣದ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಈಗ ೧೬೧ ಕೆಜಿಗೆ ಇಳಿಯಿತು. ನೆಹರೂ ಕಾಲಕ್ಕಿಂತ ಈಗ ಹಸಿವಿನ ಪ್ರಮಾಣ ಹೆಚ್ಚಿದೆ. ಆಗಿನ ಆರ್ಥಿಕ ನೀತಿಯನ್ನು ಟೀಕಿಸುವವರು ಇದನ್ನೂ ಗಮನಿಸಬೇಕು. ರಫ್ತಿನಿಂದ ಬಂದ ವಿದೇಶಿ ವಿನಿಮಯದಲ್ಲಿ ಆಹಾರಧಾನ್ಯಗಳನ್ನು ಆಮದು ಮಾಡಕೊಳ್ಳಬಹುದು ಅಂತ ವಾದಿಸಬಹುದು. ಆದರೆ ಹಾಗೆ ಮಾಡುವುದರಲ್ಲಿ ಕೆಲವು ಸಮಸ್ಯೆಗಳಿವೆ. ಇದನ್ನು ಪ್ರಭಾತ್ ಪಟ್ನಾಯಕ್ ಅಂತಹವರು ಗುರುತಿಸಿದ್ದಾರೆ. ಮೊದಲನೆಯದಾಗಿ ಅಕ್ಕಿಯಂತಹ ಧಾನ್ಯಗಳು ಎಷ್ಟೋ ಸಂದರ್ಭಗಳಲ್ಲಿ ಬೇಕಾದಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಇಂತಹ ತೀರಾ ಅವಶ್ಯಕ ಪದಾರ್ಥಗಳಿಗೆ ಬೇರೆ ದೇಶಗಳನ್ನು ಅವಲಂಬಿಸುವುದು ಅಪಾಯಕಾರಿ. ಕ್ಷಾಮದಿಂದ ಸಂಭವಿಸಿದ ಸಾವು ನೋವನ್ನು ನೋಡಿದ್ದ ನಾಯಕರಿಗೆ ಆಹಾರ ಸುಭದ್ರತೆಯ ಮಹತ್ವ ತಿಳಿದಿರುತ್ತದೆ. ಹಾಗಾಗಿಯೇ ಸರ್ಕಾರ ಹಸಿರುಕ್ರಾಂತಿಯಂತಹ ಪ್ರಯೋಗಗಳಿಗೆ ಕೈಹಾಕಿದ್ದು. ಜೊತೆಗೆ ಭಾರತದಂತಹ ದೊಡ್ಡ ದೇಶಗಳು ಆಮದನ್ನು ಅವಲಂಭಿಸಿದರೆ ಜಾಗತಿಕ ಮಟ್ಟದಲ್ಲಿ ಅದರ ಬೆಲೆ ಏರುವ ಸಾಧ್ಯತೆ ಹೆಚ್ಚು. ಸಮಯಕ್ಕೆ ಸಿಗದೇ ಹೋದರೆ ಪರಿಣಾಮ ಭೀಕರವಾಗಬಹುದು.

 

ಹಾಗಾಗಿಯೇ ನೆಹರು ಕಾಲದಲ್ಲಿ ಕೃಷಿ ಆಧಾರಿತ ಉತ್ಪನ್ನಗಳನ್ನು ರಫ್ತು ಮಾಡುವ ಸಾಹಸವನ್ನು ಮಾಡಲಿಲ್ಲ. ಬದಲಿಗೆ ಗಣಿ ಹಾಗೂ ಗಣಿ ಆಧಾರಿತ ಕೈಗಾರಿಕೆಯನ್ನು ಬೆಳೆಸುವ ಕೆಲಸ ಮಾಡಿತು. ಇದರ ಸುತ್ತ ಕೈಗಾರಿಕಾ ವ್ಯವಸ್ಥೆ ರೂಪಗೊಂಡಿತ್ತು. ನಿಜ, ಐ.ಜಿ ಪಟೇಲ್ ಅಂತಹ ಅರ್ಥಶಾಸ್ತ್ರಜ್ಞರು ವಾದಿಸುವಂತೆ ನಮಗೆ ಈ ಕೈಗಾರಿಕೆಯಲ್ಲಿ ಹೆಚ್ಚಿನ ಅನುಕೂಲವಿತ್ತು. ಒಂದು ಪಕ್ಷ ಇಲ್ಲದಿದ್ದರೂ ಆಹಾರ ಸುಭದ್ರತೆಯ ದೃಷ್ಟಿಯಿಂದ ಈ ದಾರಿ ಸೂಕ್ತ ಅನ್ನುವ ಪ್ರಭಾತ್ ಪಟ್ನಾಯಕ್ ಅವರ ವಾದ ಸರಿಯಿದೆ. ಬಡತನ ಹಾಗೂ ಹಸಿವನ್ನು ಗಂಭೀರವಾಗಿ ತೆಗೆದುಕೊಂಡ ಯಾವುದೇ ಸರ್ಕಾರವೂ ವಿದೇಶಿ ವಿನಿಮಯಕ್ಕೆ ಕೃಷಿ ಉತ್ಪನ್ನದ ರಫ್ತನ್ನು ನೆಚ್ಚಿಕೊಳ್ಳಬಾರದು.

ಆಗ ವಿದೇಶಿ ವಿನಿಮಯದ ಕೊರತೆಯನ್ನು ನೀಗಿಸಿಕೊಳ್ಳುವುದು ಹೇಗೆಂಬ ಸಮಸ್ಯೆ ಎದುರಾಗುತ್ತದೆ. ಬೇಕಾದ್ದನ್ನು ಸಾಧ್ಯವಾದಷ್ಟೂ ನಮ್ಮಲ್ಲೇ ತಯಾರಿಸಿಕೊಳ್ಳುವುದನ್ನು ಅಂದರೆ ಸ್ವಾವಲಂಬನೆಯನ್ನು ಒಂದು ಮಾರ್ಗವನ್ನಾಗಿ ಮಹಾಲನೊಬಿಸ್ ಯೋಚಿಸಿದರು. ಬ್ರಿಟಿಷರ ಕಾಲದಲ್ಲಿ ಆಹಾರದ ಕೊರತೆ ವಿಪರೀತವಿತ್ತು. ೧೯೪೬ ಹಾಗು ೧೯೫೩ರ ನಡುವೆ ೧೪ ಮಿಲಿಯನ್ ಟನ್ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಹೆಚ್ಚು ಆಹಾರ ಬೆಳೆಯೋಣ ಅನ್ನುವುದು ಆಗಿನ ಘೋಷಣೆಯಾಗಿತ್ತು. ಕೃಷಿಗೆ ಇನ್ನಷ್ಟು ಮಹತ್ವ ನೀಡಬೇಕಿತ್ತು ಅನ್ನುವುದು ನಿಜ. ಆದರೆ ವಸಾಹತುಶಾಹಿ ಕಾಲಕ್ಕೆ ಹೋಲಿಸಿದಾಗ ನೆಹರು ಕಾಲದಲ್ಲಿ ಕೃಷಿಯಲ್ಲಿ ಗಣನೀಯವಾದ ಬೆಳವಣಿಗೆ ಸಾಧ್ಯವಾಗಿತ್ತು ಅನ್ನುವುದೂ ಕೂಡ ಸತ್ಯ. ತಲಾ ಆಹಾರ ಧಾನ್ಯದ ಲಭ್ಯತೆ ೧೯೮೦ರ ವೇಳೆಗೆ ೧೮೦ ಕೆಜಿಗಳಷ್ಟಾಗುವುದಕ್ಕೆ ಸಾಧ್ಯವಾಯಿತು. ಕೃಷಿ ಶೇಕಡ ೩ರಷ್ಟು ಬೆಳವಣಿಗೆ ಕಂಡಿತ್ತು. ಕೃಷಿಯನ್ನು ಸೊರಗಲು ಬಿಟ್ಟರೆ ಕೈಗಾರಿಕೆಯೂ ಸೊರಗುತ್ತದೆ. ಕೃಷಿಗೂ ವಿದ್ಯುತ್, ಟ್ರಾಕ್ಟರ್, ಪಂಪ್ ಇತ್ಯಾದಿ ಕೈಗಾರಿಕೆಯ ನೆರವು ಬೇಕಿತ್ತು. ಹಸಿರು ಕ್ರಾಂತಿ ನೆಹರೂ ಸತ್ತ ಮೇಲೆ ಆಗಿದ್ದಾದರೂ ಅದಕ್ಕೆ ಬೇಕಾದ ತಾಂತ್ರಿಕ ಬೆಳವಣಿಗೆ ಆಗಿದ್ದು ನೆಹರು ಕಾಲದಲ್ಲೇ. ಭಾರತದಲ್ಲಿ ಭೂಸುಧಾರಣೆಯನ್ನು, ಲೇವಾದೇವಿ, ಜಮೀನ್ದಾರಿಯಂತಹ ಪದ್ದತಿಯನ್ನು ಮುರಿಯುವುದನ್ನು ಪ್ರಜಾಸತ್ತೆಯ ಚೌಕಟ್ಟಿನಲ್ಲೇ ಮಾಡಬೇಕಿತ್ತು.

 

ಹೆಚ್ಚು ಬಂಡವಾಳ ಬೇಡುವ ಕೈಗಾರಿಕೆಗಳನ್ನಾಗಲಿ, ಮೂಲ ಸೌಕರ್ಯವನ್ನು ಕಲ್ಪಿಸುವುದನ್ನಾಗಲಿ ಖಾಸಗಿಯವರಿಂದ ನಿರೀಕ್ಷಿಸುವುದಕ್ಕೆ ಸಾಧ್ಯವಿರಲಿಲ್ಲ. ಆ ಕೊರತೆಯನ್ನು ಸಾರ್ವಜನಿಕ ಕ್ಷೇತ್ರದ ಪಾಲ್ಗೊಳ್ಳುವಿಕೆಯ ಮೂಲಕ ತುಂಬುವ ಕೆಲಸ ಮಾಡಲಾಯಿತು. ಹಾಗೆಯೇ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಣತರನ್ನು ಸೃಷ್ಟಿಸುವ ಕೆಲಸಕ್ಕೂ ಗಮನ ಕೊಡಲಾಯಿತು. ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಮಿಶ್ರ ಆರ್ಥಿಕತೆಯನ್ನು ನಡೆಸುವ ಕೆಲಸ ನಡೆದಿತ್ತು. ಅವರಿಗೆ ವಸಾಹತುಶಾಹಿ ಆಳ್ವಿಕೆಯ ಕಾಲದ ಅನುಭವದಿಂದ ಮಾರುಕಟ್ಟೆಯ ಬಗ್ಗೆ ವಿಶ್ವಾಸವೂ ಇರಲಿಲ್ಲ. ಅದು ಬ್ರಿಟಿಷರ ಮತ್ತವರ ಬಂಡವಾಳದ ಹಿತಾಸಕ್ತಿಯನ್ನಷ್ಟೇ ಕಾಪಾಡುತ್ತದೆ ಅನ್ನುವುದು ಅವರ ಅನುಭವವಾಗಿತ್ತು. ಅವರಿಗೆ ಖಾಸಗೀ ಸಂಪತ್ತನ್ನು ರಾಷ್ಟ್ರೀಕರಣಗೊಳಿಸುವುದೂ ಒಪ್ಪಿಗೆಯಿರಲಿಲ್ಲ. ಅದೊಂದು ಹೊಸ ಬಗೆಯ ರಾಜಕೀಯ ಹಾಗೂ ಆರ್ಥಿಕ ಪ್ರಯೋಗವಾಗಿತ್ತು. ಈ ಬಗ್ಗೆ ಜಗತ್ತಿನ ಪ್ರಖ್ಯಾತ ಅರ್ಥಶಾಸ್ತ್ರಜ್ಞರೆಲ್ಲಾ ಕುತೂಹಲಿಗಳಾಗಿದ್ದರು. ಅದರಲ್ಲಿ ಅವರು ಪಾಲ್ಗೊಳ್ಳಲು ಉತ್ಸುಕರಾಗಿದ್ದರು.

 

ಜಿಡಿಪಿ ಹಾಗೂ ಹಣದುಬ್ಬರ ಇತ್ಯಾದಿ ಸೂಚಿಗಳ ಮೂಲಕ ನೋಡಿದರೆ ಮೊದಲ ದಶಕದಲ್ಲಿ ಅದರಲ್ಲೂ ವಿಶೇಷವಾಗಿ ೧೯೫೬ರ ನಂತರವಂತೂ ಆರ್ಥಿಕ ಪ್ರಗತಿ ಸಾಕಷ್ಟು ವೇಗವಾಗಿಯೇ ಆಗಿತ್ತು. ಆದರೆ ವೇಗವನ್ನು ತುಂಬಾ ದಿನ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ನೆಹರು ಸಾಯುತ್ತಿದ್ದಂತೆ ನಾಯಕತ್ವದ ಸಮಸ್ಯೆ ಪ್ರಾರಂಭವಾಯಿತು. ಫಸಲು ಕೈಕೊಟ್ಟಿತು. ಪಾವತಿ ಶಿಲ್ಕಿನ ಸಮಸ್ಯೆ ತೀವ್ರವಾಯಿತು. ಭಾರತದ ಕೈಗಾರಿಕೆ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಆರ್ಥಿಕ ಬೆಳವಣಿಗೆ ನಿಧಾನವಾಯಿತು. ಅಸಮಾನತೆ ಏರುತ್ತಾ ಹೋಯಿತು. ಕೈಗಾರಿಕೀಕರಣವೂ ಪೂರ್ಣಗೊಳ್ಳಲಿಲ್ಲ. ವಿದೇಶಿ ವಿನಿಮಯ ಬತ್ತಿಹೋಗಿತ್ತು.

 

ಇದಕ್ಕೆ ಮುಖ್ಯ ಕಾರಣ ಅಂದರೆ ಪ್ರಗತಿಗೆ ಬೇಕಾದ ವಾತಾವರಣ ನಿರ್ಮಾಣವಾಗದೇ ಹೋಗಿದ್ದು. ಉಳುವವನಿಗೆ ಭೂಮಿ ಅನ್ನುವ ಘೋಷಣೆಯ ನಡುವೆಯೂ ಭೂಸುಧಾರಣೆ ಸಮರ್ಪಕವಾಗಿ ಆಗಲಿಲ್ಲ. ಗ್ರಾಮೀಣ ಅಸಮಾನತೆ ತೀವ್ರವಾಗಿತ್ತು. ಅಲ್ಲಿಯ ಜನರಲ್ಲಿ ಕೊಳ್ಳುವ ಶಕ್ತಿ ಇರಲಿಲ್ಲ. ಜನಬಳಕೆಯ ವಸ್ತುಗಳನ್ನು ತಯಾರಿಸುತ್ತಿದ್ದವರು ಖಾಸಗಿ ಕ್ಷೇತ್ರದವರು. ಅವರು ಉತ್ಪಾದಿಸಿದ ಸರಕುಗಳಿಗೆ ಮಾರುಕಟ್ಟೆ ಸೃಷ್ಟಿಯಾಗಲಿಲ್ಲ. ಸರ್ಕಾರ ಅವರಿಗೆ ಬೆಂಬಲ ನೀಡುತ್ತಿತ್ತು. ವಿದೇಶಿ ಉತ್ಪಾದಕರಿಂದ ರಕ್ಷಣೆ ನೀಡಿತ್ತು. ಹಣಕಾಸಿನ ಕೊರತೆಯಿಂದ ಈ ಬೆಂಬಲವನ್ನು ಮುಂದುವರಿಸುವುದಕ್ಕೆ ಸರ್ಕಾರಕ್ಕೂ ಕಷ್ಟವಾಯಿತು. ಸಣ್ಣ ಕೈಗಾರಿಕೆಗಳಿಂದ ರಫ್ತಿನ ಹೆಚ್ಚಳವನ್ನು ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಹೆಚ್ಚಿಸಿದ ಪರೋಕ್ಷ ತೆರಿಗೆಯಿಂದ ಬೆಲೆ ಏರಿಕೆ ಹೆಚ್ಚಾಯಿತು. ಹೀಗೆ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಾ ಹೋಯಿತು. ಎಂಬತ್ತರ ದಶಕದಲ್ಲಿ ಉದಾರವಾದೀ ನೀತಿಯನ್ನು ಸರ್ಕಾರ ಅಪ್ಪಿಕೊಂಡಿತು. ಸರ್ಕಾರ ಒಂದೊಂದಾಗಿ ಈವರೆಗೆ ನಿರ್ಮಿಸಿದ್ದ ಆಸ್ತಿಯನ್ನು ಮಾರತೊಡಗಿತು. ಎಲ್ಲವನ್ನು ಖಾಸಗಿಯವರಿಗೆ ಒಪ್ಪಿಸುತ್ತಾ ಬಂದಿತು. ನಿರುದ್ಯೋಗ, ಅಸಮಾನತೆ ಹೆಚ್ಚಾಯಿತು. ನಿಧಾನಗೊಂಡ ಆರ್ಥಿಕ ಪ್ರಗತಿ, ಕೃಷಿಯ ನಿರ್ಲಕ್ಷ್ಯ, ಪಾವತಿ ಶಿಲ್ಕಿನ ಕೊರತೆ ಇವೆಲ್ಲಾ ಸೇರಿಕೊಂಡು ಬಿಕ್ಕಟ್ಟನ್ನು ಹೆಚ್ಚಿಸಿತು.

 

ಆದರೂ ಆಹಾರದ ಬಿಕ್ಕಟ್ಟು ತೀವ್ರವಾಗಿ ಕಾಡಲಿಲ್ಲ. ಯಾಕೆಂದರೆ ಉತ್ತಮ ಇಳುವರಿಯ ಬೀಜಗಳು, ರಸಾಯನಿಕ ಗೊಬ್ಬರ, ಕೀಟನಾಶಕಗಳು ಇತ್ಯಾದಿಗಳ ಬಳಕೆಯಿಂದ ಹಸಿರು ಕ್ರಾಂತಿಯ ಸಮಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿತು. ಜೊತೆಗೆ ಭೂಮಿಯ ಬಳಕೆ ಹೆಚ್ಚು ಪರಿಣಾಮಕಾರಿಯಾಯಿತು. ಜೊತೆಗೆ ಪಡಿತರ ಪದ್ದತಿಯೂ ಒಂದಿಷ್ಟು ನೆರವಿಗೆ ಬಂತು. ಅದರೆ ಹಲವರು ಗುರುತಿಸಿರುವಂತೆ ಸಾಕ್ಷರತೆ, ಶಿಕ್ಷಣ, ಆರೋಗ್ಯ ಇವಕ್ಕೆಲ್ಲಾ ಕೊಡಬೇಕಾದಷ್ಟು ಗಮನಕೊಡದೇ ಹೋಗಿದ್ದರಿಂದ ಮಾನವ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ರೂಪುಗೊಳಿಸುವುದಕ್ಕೆ ಸಾಧ್ಯವಾಗಿಲ್ಲ.

 

ನೆಲಕಚ್ಚಿದ್ದ ಆರ್ಥಿಕತೆಗೆ ಪುನಚ್ಛೇತನ ನೀಡಿದ್ದು ನೆಹರು ಯುಗದ ಮಹತ್ತರ ಸಾಧನೆ. ಅತಿ ಕಡಿಮೆ ತಲಾ ವರಮಾನವಿರುವ ಆರ್ಥಿಕತೆಯ ಬೆಳವಣಿಗೆಗೆ ಬೇಕಾದ ಅಡಿಪಾಯವನ್ನು ಅದು ಒದಗಿಸಿತ್ತು. ವಸಾಹತುಶಾಹಿ ಆರ್ಥಿಕತೆಯ ರಚನೆಗೆ ಬೇಕಾದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ನಡೆಯಿತು. ಇಂದಿನ ಇಂಡಿಯಾ ಸಾಧ್ಯವಾಗಿದ್ದಕ್ಕೆ ಸ್ವಾತಂತ್ರದ ಪ್ರಾರಂಭದಲ್ಲಿ ನಿರ್ಮಿತವಾದ ಅಡಿಪಾಯ ಕೂಡ ಕಾರಣ. ಅದಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನೆಹರೂ ಆರ್ಥಿಕ ನೀತಿಯನ್ನು ನಾವು ನೋಡುತ್ತಿರುವ ನವ ಉದಾರವಾದೀ ಕನ್ನಡಕ ಕೂಡ ಅಷ್ಟೇ ದೋಷಯುಕ್ತವಾಗಿದೆ. ಅದು ಸಂಪೂರ್ಣ ಮಾರುಕಟ್ಟೆಯನ್ನು, ಖಾಸಗೀ ಕ್ಷೇತ್ರವನ್ನು ನೆಚ್ಚಿಕೊಂಡು ಸಂಪತ್ತಿನ ಕೇಂದ್ರಿಕರಣವನ್ನು, ಅಸಮಾನತೆಯನ್ನು ಪೋಷಿಸುತ್ತಿದೆ.

 

ಜನರ ಒಳಿತನ್ನು ಗಮನದಲ್ಲಿಟ್ಟುಕೊಂಡ ನಿಜವಾದ ಅಭಿವೃದ್ಧಿಯ ಮಾದರಿಯನ್ನು ಕಂಡುಕೊಳ್ಳುವ ನಿಜವಾದ ಪ್ರಯತ್ನ ಈಗಲಾದರೂ ನಡೆಯಬೇಕಾಗಿದೆ.