ಟಿ ಎಸ್ ವೇಣುಗೋಪಾಲ್
ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್‌ಬಿಐ ಗವರ್ನರ್ ಆಗಿದ್ದ ಎಂ.ನರಸಿಂಹಂ ಅವರ ಮನೆಗೆ ಹೋಗಿದ್ದರಂತೆ. ಸ್ವತಃ ಆರ್ಥಿಕ ತಜ್ಞರಾಗಿದ್ದ ನರಸಿಂಹಂ, ಸಿಂಗ್ ಅವರನ್ನು ಉದ್ದೇಶಿಸಿ ‘ನೀವು ಹಣದುಬ್ಬರ ಕಡಿಮೆಯಾಗಿದೆ ಅನ್ನುತ್ತೀರಿ. ಆದರೆ ನಾನು ತರಕಾರಿ ಕೊಳ್ಳುವಾಗ ಮೊದಲಿಗಿಂತ ಹೆಚ್ಚು ಹಣ ಕೊಡುತ್ತಿದ್ದೇನೆ’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಹೌದು, ನನ್ನ ಹೆಂಡತಿಯೂ ಇದೇ ಪ್ರಶ್ನೆ ಕೇಳುತ್ತಾಳೆ. ನನಗೆ ವಿವರಿಸೋದಕ್ಕೆ ಕಷ್ಟವಾಗುತ್ತೆ ಅಂತ ಅವಳಿಗೆ ಹೇಳಿದೆ’ ಅಂದರಂತೆ. ಇಬ್ಬರೂ ತಜ್ಞರು. ಅವರೇ ಹಣದುಬ್ಬರವನ್ನು ವಿವರಿಸುವುದು ಕಷ್ಟ ಅನ್ನುತ್ತಾರೆ.
ಹಾಗೆಯೇ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ವೈ.ವಿ.ರೆಡ್ಡಿ ಅವರ ತಾಯಿ, ‘ವೇಣು, ಬ್ಯಾಂಕಿನವರು ಹೋದ ವರ್ಷ ಕೊಡುತ್ತಾ ಇದ್ದುದಕ್ಕಿಂತ ಈಗ ಕಡಿಮೆ ಬಡ್ಡಿ ಹಣ ಕೊಡುತ್ತಿದ್ದಾರೆ. ಯಾಕೆ ಅಂತ ಕೇಳಿದರೆ, ರಿಸರ್ವ್ ಬ್ಯಾಂಕಿನ ನೀತಿ ಹಾಗಿದೆ ಅಂತಾರೆ’ ಎಂದು ಮಗನನ್ನು ಕೇಳಿದರಂತೆ. ಅದಕ್ಕೆ ರೆಡ್ಡಿ ಅವರು, ‘ಇಲ್ಲ, ನಿನಗೆ ಸಿಗುತ್ತಿರುವ ನೈಜ ಬಡ್ಡಿ ದರ ಹೆಚ್ಚಾಗಿದೆ’ ಎಂದು ಏನೋ ಹೇಳಿದರಂತೆ. ‘ಹೋಗೋ, ಬಡ್ಡಿ ದರದಲ್ಲಿ ನಿಜ, ಸುಳ್ಳು ಅಂತ ಬೇರೆ ಇರುತ್ತೇನೋ’ ಅಂತ ಲೇವಡಿ ಮಾಡಿದರಂತೆ ಅವರ ಅಮ್ಮ.
ಈ ಹಣದುಬ್ಬರದ ಒಗಟನ್ನು ಅಮ್ಮನಿಗೆ ಅರ್ಥ ಮಾಡಿಸಲಿಕ್ಕೆ ರೆಡ್ಡಿಯವರಿಗೂ ಸಾಧ್ಯವಾದಂತಿಲ್ಲ. ರಘುರಾಂ ರಾಜನ್ ಅವರಿಗೂ ಇಂತಹುದೇ ಅನುಭವ ಆಗಿದೆ. ತಮ್ಮಲ್ಲಿದ್ದ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಬಡ್ಡಿಯಿಂದ ಬದುಕುತ್ತಿದ್ದ ಪಿಂಚಣಿದಾರರೊಬ್ಬರು ‘ನನಗೆ ಮೊದಲು ಠೇವಣಿಗೆ ಶೇಕಡ ೧೦ರಷ್ಟು ಬಡ್ಡಿ ಬರುತ್ತಿತ್ತು. ಈಗ ಕೇವಲ ಶೇ ೮ರಷ್ಟು ಬರುತ್ತದೆ. ದಯವಿಟ್ಟು ನನಗೆ ಹೆಚ್ಚು ಬಡ್ಡಿ ಕೊಡಲು ಬ್ಯಾಂಕಿನವರಿಗೆ ತಿಳಿಸಿ. ಇಲ್ಲದಿದ್ದರೆ ನನಗೆ ಜೀವನ ನಡೆಸೋದು ಕಷ್ಟ’ ಅಂತ ಪತ್ರ ಬರೆದಿದ್ದರು.
ಈ ಎಲ್ಲ ಅರ್ಥಶಾಸ್ತ್ರಜ್ಞರು ಆಗ ಹೇಳುತ್ತ ಇದ್ದದ್ದು, ಹಣದುಬ್ಬರದ ದರ ಕಡಿಮೆಯಾಗಿದೆ, ಅದರಿಂದ ಠೇವಣಿದಾರರಿಗೆ ಮೊದಲಿಗಿಂತಲೂ ನೈಜ ಬಡ್ಡಿ ಹೆಚ್ಚು ಸಿಗುತ್ತಿದೆ ಎಂಬ ಮಾತನ್ನು. ಆದರೆ ಯಾರಾದರೂ ‘ಹೇಗೆ’ ಅಂತ ಕೇಳಿದರೆ ಅದನ್ನು ವಿವರಿಸುವುದಕ್ಕೆ ಕಷ್ಟಪಡುತ್ತಿದ್ದರು. ರಘುರಾಂ ರಾಜನ್ ದೋಸೆಯ ಉದಾಹರಣೆ ಕೊಟ್ಟು, ಅದನ್ನು ವಿವರಿಸಲು ಪ್ರಯತ್ನಿಸಿದರು. ಅದನ್ನು ಆಗ ‘ದೋಸೆ ಅರ್ಥಶಾಸ್ತ್ರ’ ಎಂದು ಕರೆಯುತ್ತಿದ್ದರು. ಅವರ ವಿವರಣೆ ಹೀಗಿದೆ:
ಪಿಂಚಣಿದಾರ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾನೆ ಅಂತ ಭಾವಿಸಿಕೊಳ್ಳಿ. ಆಗ ದೋಸೆಯ ಬೆಲೆ ರೂ ೫೦ ಇತ್ತು ಅಂತ ಇಟ್ಟುಕೊಳ್ಳಿ. ಅವನು ಅಷ್ಟೂ ಹಣ ಖರ್ಚು ಮಾಡಿ ದೋಸೆಗಳನ್ನು ಕೊಂಡಿದ್ದರೆ ಅವನಿಗೆ ಒಟ್ಟು ೨,೦೦೦ ದೋಸೆಗಳು ಬರುತ್ತಿದ್ದವು. ಆದರೆ ಅವನಿಗೆ ಹಾಗೆ ಮಾಡುವುದು ಇಷ್ಟವಿರಲಿಲ್ಲ. ಇನ್ನೊಂದಿಷ್ಟು ದುಡ್ಡು ದುಡಿಯಬೇಕು ಎಂಬ ಆಸೆಯಿಂದ ಅವನು ಆ ಒಂದು ಲಕ್ಷವನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾನೆಂದು ಭಾವಿಸಿಕೊಳ್ಳಿ. ಆಗ ಬಡ್ಡಿ ದರ ಶೇ ೧೦ರಷ್ಟು ಇತ್ತು. ಹಾಗಾಗಿ ವರ್ಷಕ್ಕೆ ರೂ ೧೦,೦೦೦ದಷ್ಟು ಬಡ್ಡಿ ಬರುತ್ತಿತ್ತು. ಆಗ ಹಣದುಬ್ಬರದ ದರವೂ ಶೇ ೧೦ರಷ್ಟು ಇತ್ತು. ಅಂದರೆ ದೋಸೆಯ ಬೆಲೆಯೂ ಶೇ ೧೦ರಷ್ಟು ಜಾಸ್ತಿಯಾಗಿರಬೇಕು. ಅಂದರೆ ೫೦+೫=೫೫ ರೂಪಾಯಿ ಆಗುತ್ತದೆ. ಅಂದರೆ ಅವನಿಗೆ ಸಿಕ್ಕ ರೂ ೧೦,೦೦೦ ಬಡ್ಡಿಯಲ್ಲಿ ೧೮೨ ದೋಸೆಗಳನ್ನು ಕೊಳ್ಳಬಹುದಿತ್ತು.
ರಾಜನ್ ಅವರ ಹಣಕಾಸಿನ ನೀತಿಯಿಂದ ಎರಡು ವರ್ಷಗಳಲ್ಲಿ ಹಣದುಬ್ಬರದ ದರ ಶೇ ೫.೫ಕ್ಕೆ ಇಳಿಯಿತು. ಹಾಗೆಯೇ ಬಡ್ಡಿ ದರವನ್ನು ಶೇ ೮ಕ್ಕೆ ಇಳಿಸಲಾಯಿತು. ಶೇ ೮ರಷ್ಟು ಬಡ್ಡಿ ದರದಲ್ಲಿ ಠೇವಣಿದಾರನಿಗೆ ರೂ ೮,೦೦೦ ಬಡ್ಡಿ ಸಿಗುತ್ತದೆ. ಆದರೆ ಹಣದುಬ್ಬರದ ದರ ಶೇ ೫.೫ ಆಗಿರೋದರಿಂದ ದೋಸೆಯ ಬೆಲೆ ಕಡಿಮೆಯಾಗಿ ರೂ ೫೨.೭೫ ಆಗುತ್ತದೆ. ಅವನು ಈಗ ೮,೦೦೦ ರೂಪಾಯಿಯಲ್ಲಿ ೧೫೨ ದೋಸೆ ಪಡೆಯಬಹುದು. ಅಂದರೆ ಅವನಿಗೆ ಸಿಗುತ್ತಿದ್ದ ದೋಸೆಗಳ ಸಂಖ್ಯೆಯಲ್ಲಿ ೩೦ ಕಡಿಮೆಯಾಯಿತು. ಇಷ್ಟೇ ಆದರೆ ಪಿಂಚಣಿದಾರನ ಅಳಲು ಸರಿ. ಆದರೆ ಲೆಕ್ಕ ಇಲ್ಲಿಗೆ ಮುಗಿಯುವುದಿಲ್ಲ. ಅಸಲನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಅಲ್ಲವೇ?
ಹಣದುಬ್ಬರ ದರ ಶೇ ೧೦ ಇದ್ದಾಗ, ಅಂದರೆ ದೋಸೆಯ ಬೆಲೆ ರೂ ೫೫ ಇದ್ದಾಗ ಠೇವಣಿ ಇಟ್ಟಿದ್ದ ೧ ಲಕ್ಷ ರೂಪಾಯಿಯಲ್ಲಿ ೧,೮೧೮ ದೋಸೆಗಳನ್ನು ಕೊಳ್ಳಬಹುದಿತ್ತು. ಹಣದುಬ್ಬರ ಕಡಿಮೆಯಾದ ಮೇಲೆ, ಅಂದರೆ ದೋಸೆಯ ಬೆಲೆ ರೂ ೫೨.೭೫ ಆದಾಗ ಒಂದು ಲಕ್ಷ ರೂಪಾಯಿಗೆ ೧,೮೯೬ ದೋಸೆಗಳು ಸಿಗುತ್ತವೆ. ಅಂದರೆ ಹಣದುಬ್ಬರ ಹೆಚ್ಚಿದ್ದಾಗ, ಅಸಲು ಹಾಗೂ ಬಡ್ಡಿ ದರ ಒಟ್ಟಿಗೆ ಸೇರಿ ೧೮೧೮+೧೮೨=೨,೦೦೦ ದೋಸೆಗಳು ಸಿಗುತ್ತಿದ್ದವು. ಆದರೆ ಹಣದುಬ್ಬರ ಕಡಿಮೆ ಆದಾಗ ಠೇವಣಿದಾರ ೧೮೯೬+೧೫೨=೨,೦೪೮ ದೋಸೆಗಳನ್ನು ಕೊಳ್ಳಬಹುದಿತ್ತು. ಅಂದರೆ ಈಗ ೪೮ ದೋಸೆಗಳು ಹೆಚ್ಚು ಸಿಗುತ್ತಿವೆ. ಹಾಗಾಗಿ ರಘುರಾಂ ರಾಜನ್ ಅವರಿಗೆ ‘ನಾನು ಪಿಂಚಣಿದಾರನ ಹಿತಾಸಕ್ತಿಯನ್ನು ಕಾಪಾಡಿದ್ದೇನೆ. ಅವನ ಸ್ಥಿತಿ ಸುಧಾರಿಸಿದೆ’ ಅನ್ನುವುದಕ್ಕೆ ಸಾಧ್ಯವಾಗಿತ್ತು. ಅದನ್ನೇ ಮನಮೋಹನ್ ಸಿಂಗ್, ರೆಡ್ಡಿ ಇವರೆಲ್ಲಾ ಹೇಳಲು ಪ್ರಯತ್ನಿಸಿದ್ದು. ಅವರೆಲ್ಲರೂ ತಮ್ಮ ಕಾಲದಲ್ಲಿ ಬಡ್ಡಿ ದರಕ್ಕಿಂತ ಹಣದುಬ್ಬರದ ದರ ಕಡಿಮೆ ಇರುವಂತೆ ನೋಡಿಕೊಂಡಿದ್ದರು. ಹಾಗಾಗಿ ಅವರಿಗೆ ಇದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಿತ್ತು. ಆದರೆ ಈಗಿನ ಪರಿಸ್ಥಿತಿ ಬೇರೆ.
ಈಗಿನ ಪರಿಸ್ಥಿತಿಗೆ ದೋಸೆ ಲೆಕ್ಕಾಚಾರವನ್ನು ಮುಂದುವರಿಸೋಣ. ಅಂದರೆ ಈಗಿನ ಬಡ್ಡಿದರ ಶೇ ೫ ಹಾಗೂ ಹಣದುಬ್ಬರದ ದರ ಶೇ ೭.೫ ಅಂತ ಇಟ್ಟುಕೊಂಡು ಲೆಕ್ಕ ಹಾಕೋಣ. ಹಣದುಬ್ಬರದ ದರ ಶೇ ೭.೫ ಇರುವುದರಿಂದ ದೋಸೆಯ ಬೆಲೆ ರೂ ೫೩.೭೫ ಆಗುತ್ತದೆ. ಈಗ ಸಿಗುವ ಬಡ್ಡಿ ರೂ ೫,೦೦೦. ಈ ಬಡ್ಡಿಯಲ್ಲಿ ೯೪ ದೋಸೆಗಳನ್ನು ಕೊಂಡುಕೊಳ್ಳಬಹುದು. ಇನ್ನು ಅಸಲಿಗೆ ಬರೋಣ. ಅಂದರೆ ಒಂದು ಲಕ್ಷದಲ್ಲಿ ದೋಸೆಯೊಂದಕ್ಕೆ ರೂ ೫೩.೭೫ರಂತೆ ೧,೮೬೦ ದೋಸೆಗಳನ್ನು ಕೊಳ್ಳಬಹುದು. ಅಸಲು ಮತ್ತು ಬಡ್ಡಿ ಎರಡೂ ಸೇರಿದರೆ ೧೮೬೦+೯೪=೧೯೫೪ ದೋಸೆಗಳನ್ನು ಕೊಳ್ಳಬಹುದು. ಅಂದರೆ ಮೊದಲಿಗೆ ಹೋಲಿಸಿದರೆ ಅವನು ಕೊಳ್ಳಬಹುದಾದ ದೋಸೆಗಳ ಸಂಖ್ಯೆ ೨,೦೪೮-೧,೯೫೪=೯೪ರಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಈಗಿನ ರಿಸರ್ವ್ ಬ್ಯಾಂಕಿನ ಗವರ್ನರ್‌ಗೆ ‘ನಾನು ಠೇವಣಿದಾರನ ಹಿತಾಸಕ್ತಿಯನ್ನು ಕಾಪಾಡುತ್ತಿದ್ದೇನೆ’ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬ ಪಿಂಚಣಿದಾರ ಬ್ಯಾಂಕಿನಲ್ಲಿಟ್ಟ ಒಂದು ಲಕ್ಷ ರೂಪಾಯಿ ಠೇವಣಿಯ ಮೌಲ್ಯ ಪ್ರತಿವರ್ಷ ೯೪ ದೋಸೆಗಳಷ್ಟು ಕಡಿಮೆಯಾಗುತ್ತಿದೆ.
ಎಲ್ಲಿಯವರೆಗೆ ಬಡ್ಡಿ ದರಕ್ಕಿಂತ ಹಣದುಬ್ಬರದ ದರ ಹೆಚ್ಚಿಗೆ ಇರುತ್ತದೋ ಅಲ್ಲಿಯವರೆಗೆ ಠೇವಣಿದಾರನ ಠೇವಣಿಯ ಮೌಲ್ಯ ಕಡಿಮೆಯಾಗುತ್ತಲೇ ಹೋಗುತ್ತದೆ. ಈಗ ಸಗಟು ಹಣದುಬ್ಬರದ ದರ ಶೇ ೧೪.೫೫ರಷ್ಟಾಗಿದೆ. ಹಾಗೆಯೇ ಚಿಲ್ಲರೆ ಹಣದುಬ್ಬರ ದರ ಶೇ ೬.೯೫. ಇವು ಹಣದುಬ್ಬರವನ್ನು ಅಳತೆ ಮಾಡುವ ಎರಡು ಕ್ರಮಗಳು. ಜನಸಾಮಾನ್ಯರನ್ನು ಕಾಡುವುದು ಚಿಲ್ಲರೆ ಹಣದುಬ್ಬರ ಅಥವಾ ಗ್ರಾಹಕರ ಬೆಲೆ ಸೂಚಿ. ಇದನ್ನು ನಿಯಂತ್ರಣದಲ್ಲಿ ಇಡುವುದು ಅಂದರೆ ಶೇ ೪ರ ಆಸುಪಾಸಿನಲ್ಲಿಡುವುದು ರಿಸರ್ವ್ ಬ್ಯಾಂಕಿನ ಕೆಲಸ. ಮೊದಲು ಕೇಂದ್ರ ಬ್ಯಾಂಕು ಸಗಟು ಹಣದುಬ್ಬರದ ದರವನ್ನು ಅಳತೆಗೋಲಾಗಿ ಪರಿಗಣಿಸಿತ್ತು. ರಘುರಾಂ ರಾಜನ್ ಕಾಲದಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ಮಾಪನವನ್ನಾಗಿ ಪರಿಗಣಿಸಿ ಅದನ್ನು ನಿಯಂತ್ರಿಸುವ ಕಡೆ ಗಮನ ಹರಿಸಲಾಯಿತು.
ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ರೆಪೊ ದರವನ್ನು ಹೆಚ್ಚಿಸುವುದು ರಿಸರ್ವ್ ಬ್ಯಾಂಕಿನ ಒಂದು ಕ್ರಮ. ಕೆಲವು ವರ್ಷಗಳಿಂದ ರಿಸರ್ವ್ ಬ್ಯಾಂಕ್ ಆರ್ಥಿಕ ಬೆಳವಣಿಗೆಯನ್ನು ಸುಧಾರಿಸುವುದಕ್ಕೆ ಆದ್ಯತೆ ನೀಡಿತ್ತು. ಹಾಗಾಗಿ ರೆಪೊ ದರವನ್ನು ನಿರಂತರವಾಗಿ ಇಳಿಸುತ್ತಾ ಬಂದಿತ್ತು. ಆದರೆ ಈಗ ಹಣದುಬ್ಬರದ ದರ ಹೆಚ್ಚುತ್ತಲೇ ಇರುವುದರಿಂದ ಅದರ ನಿಯಂತ್ರಣ ರಿಸರ್ವ್ ಬ್ಯಾಂಕಿಗೆ ಆದ್ಯತೆಯ ವಿಷಯವಾಗಿದೆ. ಸಹಜವಾಗಿಯೇ ಬರುವ ದಿನಗಳಲ್ಲಿ ರೆಪೊ ದರ ಹೆಚ್ಚುವುದನ್ನು ನಿರೀಕ್ಷಿಸಬಹುದು. ಆದರೆ ಆರ್ಥಿಕ ಬೆಳವಣಿಗೆಯೂ ಸ್ಥಗಿತವಾಗಿರುವುದರಿಂದ ಬೆಳವಣಿಗೆಯನ್ನು ಪುನಶ್ಚೇತನಗೊಳಿಸುತ್ತಲೇ ಹಣದುಬ್ಬರವನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಬ್ಯಾಂಕಿನ ಮೇಲಿದೆ.