ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ


ಒಬ್ಬರ ನಿಲುವು ಇನ್ನೊಬ್ಬರಿಗೆ ಸರಿ ಅನ್ನಿಸದೇ ಹೋದರೆ ಹಲವು ಸಲ ಅದು ದ್ವೇಷಕ್ಕೋ, ಆವೇಶದ ಚರ್ಚೆಗೋ ಕಾರಣವಾಗುತ್ತದೆ. ಯಾರಿಗೂ ಇನ್ನೊಬ್ಬರ ನಿಲುವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಇರುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ ಎಷ್ಟೋ ವಿಷಯದಲ್ಲಿ ಒಮ್ಮತವೂ ಸಾಧ್ಯವಾಗುತ್ತದೆ. ಇನ್ನೊಬ್ಬರ ನಿಲುವನ್ನು ಗೌರವಿಸುವುದಕ್ಕೂ ಆಗುತ್ತದೆ. ಅದರಿಂದ ಹೊಸ ಅರಿವೂ ಸಾಧ್ಯವಾಗಬಹುದು. ವಿಭಿನ್ನ ವಿಚಾರಗಳು ಘೋರ ದ್ವೇಷಕ್ಕೆ, ಪ್ರತಿಕಾರಕ್ಕೆ ಕಾರಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಹನೆಯ ಸಂವಾದದಿಂದ ಅನುಕೂಲವಾಗಬಹುದು. ಆರೋಗ್ಯಕರ ಪ್ರಜಾಸತ್ತೆಗೆ ಅದು ಅನಿವಾರ್ಯ. ಅಭಿಪ್ರಾಯಭೇಧ ಹಲವು ಸಂದರ್ಭಗಳಲ್ಲಿ ಭಾವನಾತ್ಮಕ ಮಟ್ಟದಲ್ಲಿ ಇರುತ್ತದೆಯೇ ವಿನಾ ಬೌದ್ಧಿಕ ಮಟ್ಟದಲ್ಲಿ ಅಲ್ಲ. ಭಿನ್ನಮತ ಅನ್ನುವುದು ವಿಚಾರಗಳು ಬೆಳೆಯುವುದಕ್ಕೆ ಒಂದು ಫಲವತ್ತಾದ ಅವಕಾಶ ಅಂತ ಯೋಚಿಸುವುದಕ್ಕೆ ಸಾಧ್ಯವಾಗಬೇಕು.


ಕೆಲವು ವರ್ಷಗಳ ಹಿಂದೆ, ಇಂತಹ ಒಂದು ಕುತೂಹಲಕಾರಿ ಸಂವಾದ ಇಬ್ಬರು ದೊಡ್ಡ ಚಿಂತಕರ ನಡುವೆ ನಡೆಯಿತು. ನೋಬೆಲ್ ಪ್ರಶಸ್ತಿ ವಿಜೇತ ಡೇನಿಯಲ್ ಕನ್ಹೆಮನ್ ಹಾಗೂ ಗ್ಯಾರಿ ಕ್ಲೈನ್ ಪರಸ್ಪರ ವಿರೋಧಿ ಪಂಥಗಳಿಗೆ ಸೇರಿದ ಚಿಂತಕರು. ಕ್ಲೈನ್ ಇಂಟ್ಯೂಷನ್ – ಒಳಅರಿವನ್ನು ತೀರಾ ನೆಚ್ಚಿಕೊಂಡವನು. ತೀರಾ ಒತ್ತಡದ ಸಂದರ್ಭದಲ್ಲಿ ಒಳಅರಿವನ್ನು ಆಧರಿಸಿ ತೆಗೆದುಕೊಂಡ ನಿರ್ಧಾರಗಳು ಸರಿ ಇರುತ್ತವೆ ಎಂದು ವಾದಿಸುವ ಪಂಥಕ್ಕೆ ಸೇರಿದವನು. ಕನ್ಹೆಮನ್‌ಗೆ ಒಳಅರಿವನ್ನು ಕುರಿತಂತೆ ಅಂತಹ ಉತ್ಸಾಹವೇನು ಇರಲಿಲ್ಲ. ಒಳಅರಿವನ್ನು ಆಧರಿಸಿ ತೆಗೆದುಕೊಂಡ ನಿರ್ಧಾರಗಳು ವಿಫಲಗೊಂಡಾಗ ಖುಷಿಪಡುತ್ತಿದ್ದ ಮನುಷ್ಯ ಅವರು.


ಒಮ್ಮ ಕನ್ಹೆಮನ್‌ಗೆ ಕ್ಲೈನ್ ಜೊತೆ ಕೆಲಸ ಮಾಡುವ ಆಸೆ ಆಯಿತು. ಕ್ಲೈನ್ ಅದಕ್ಕೆ ಒಪ್ಪಿಕೊಂಡ. ಇಬ್ಬರೂ ಕೂತು ಒಳಅರಿವನ್ನು ಕುರಿತು ಅಧ್ಯಯನ ಮಾಡಲು ಪ್ರಾರಂಭಿಸಿದರು. ಈ ಪ್ರಯತ್ನದಲ್ಲಿ“Conditions for intuitive expertise: A failure to disagree,” ಎಂಬ ಒಳ್ಳೆಯ ಲೇಖನವೊಂದು ಮೂಡಿಬಂತು. ಅದರ ಹೆಸರೇ ಎಲ್ಲವನ್ನು ಹೇಳಿಬಿಡುತ್ತದೆ.


ಪ್ರಾರಂಭದಲ್ಲಿ ಇಬ್ಬರಿಗೂ ಈ ಪ್ರಯತ್ನದಲ್ಲಿ ಅಂತಹ ಭರವಸೆಯೇನು ಇರಲಿಲ್ಲ. ಅದು ಸ್ವಾಭಾವಿಕವೇ. ಕ್ಲೈನ್ ಪರಿಣತರು ನಿರ್ಧಾರವನ್ನು ತೆಗೆದುಕೊಳ್ಳುವಾಗ ಒಳಅರಿವನ್ನು ನೆಚ್ಚಿಕೊಳ್ಳಬೇಕು ಅಂತ ನಂಬಿದವನು. ಅದನ್ನು ಪ್ರೋತ್ಸಾಹಿಸುವುದಕ್ಕೆ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದವನು. ಹೀಗೆ ನಿರ್ಧಾರಗಳು ಸ್ವಾಭಾವಿಕವಾಗಿ ಮೂಡಬೇಕು ಅಂತ ವಾದಿಸುತ್ತಿದ್ದವನು. ಕನ್ಹೆಮನ್ ಅದಕ್ಕೆ ತದ್ವಿರುದ್ಧವಾಗಿ ಒಳಅರಿವನ್ನು ಆಧರಿಸಿದ ನಿರ್ಧಾರಗಳು ತಪ್ಪಾಗಿರುವ ಸಾಧ್ಯತೆಯೇ ಹೆಚ್ಚು ಎಂದು ನಂಬಿದ್ದವನು. ಅಷ್ಟೇ ಅಲ್ಲ ಅಂತಹ ನಿರ್ಧಾರಗಳ ಮಿತಿಗಳನ್ನು ಕುರಿತೇ ಹೆಚ್ಚು ಅಧ್ಯಯನ ಮಾಡಿದವನು.
ಹಲವು ಸುತ್ತಿನ ಚರ್ಚೆಗಳಾದ ಮೇಲೆ ಒಂದು ಪ್ರಶ್ನೆಯಿಂದ ಅಧ್ಯಯನವನ್ನು ಪ್ರಾರಂಭಿಸಲು ಅವರಿಬ್ಬರು ನಿರ್ಧರಿಸಿದರು. ಅನುಭವಸ್ಥ ಪರಿಣತರು ತಮಗೆ ಒಳಅರಿವು ಇದೆ ಎಂದುಕೊಂಡಾಗ ಅದನ್ನು ಯಾವ ಸಂದರ್ಭದಲ್ಲಿ ನಂಬಬಹುದು? ಇಬ್ಬರೂ ಅವರ ಮಟ್ಟಿಗೆ ಸ್ಪಷ್ಟವಾಗಿದ್ದರು. ಒಳಅರಿವನ್ನು ಕುರಿತು ಅಪಾರ ವಿಶ್ವಾಸವಿದ್ದ ಕ್ಲೈನ್ ಸ್ವಾಭಾವಿಕವಾಗಿಯೇ ಅದನ್ನು ಎಲ್ಲಾ ಸಂದರ್ಭಗಳಲ್ಲೂ ನೆಚ್ಚಿಕೊಳ್ಳಲು ಸಿದ್ಧನಿದ್ದ. ಆದರೆ ಕನ್ಹೆಮನ್‌ಗೆ ಅದರ ಬಗ್ಗೆ ಅಪಾರ ಅನುಮಾನ. ಅವನು ಗಣಿತೀಯ ಸೂತ್ರಗಳನ್ನು ಹೆಚ್ಚು ನೆಚ್ಚಿಕೊಂಡವನು. ಹಾಗಾಗಿ ಅವನು ಅದನ್ನು ಹಾಗೆ ಸಾರಾಸಗಟಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಚರ್ಚೆ ಹಲವು ವರ್ಷಗಳು ಮುಂದುವರೆಯಿತು. ಕೆಲವೊಮ್ಮೆ ಬಿಸಿ ಚರ್ಚೆಗಳಾದವು. ಒಮ್ಮತ ಸಾಧ್ಯವೇ ಇಲ್ಲವೇನೋ ಅಂತ ಅನ್ನಿಸಿದ್ದ ಸಂದರ್ಭಗಳೂ ಇದ್ದವು. ಆದರೆ ಇವೆಲ್ಲವುಗಳ ನಡುವೆಯೂ ಸಂವಾದ ಸಾಧ್ಯವಾಯಿತು, ಹಲವು ವಿಷಯಗಳಲ್ಲಿ ಒಮ್ಮತವೂ ಸಾಧ್ಯವಾಯಿತು.


ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹರ್ಬರ್ಟ್ ಸಿಮನ್ನನನ್ನು ಎಲ್ಲರೂ ಗೌರವಿಸುತ್ತಿದ್ದರು. ಆತ ಒಳಅರಿವಿಗೆ ಒಂದು ಸರಳವಾದ ವ್ಯಾಖ್ಯೆಯನ್ನು ನೀಡುತ್ತಾನೆ. ಅದನ್ನು ಸ್ಥೂಲವಾಗಿ ಹೇಳುವುದಾದರೆ ನಿಮಗೆ ಎದುರಾಗುವ ಸಂದರ್ಭ ನಿಮಗೆ ಸುಳಿವನ್ನು, ಸೂಚನೆಯನ್ನು ನೀಡುತ್ತದೆ. ಈ ಸುಳಿವಿನಿಂದಾಗಿ ನಿಮ್ಮ ನೆನಪಿನಲ್ಲಿ ಸಂಗ್ರಹವಾಗಿರುವ ಮಾಹಿತಿಗಳು ತೆರೆದುಕೊಳ್ಳುತ್ತವೆ. ಆ ಮಾಹಿತಿಗಳಲ್ಲಿ ನಿಮಗೆ ಉತ್ತರ ಸಿಗುತ್ತದೆ. ಅದನ್ನು ಗುರುತಿಸುವ ಕ್ರಿಯೆಯೇ ಒಳಅರಿವು. ಮನೆಗೆ ಬೆಂಕಿಬಿದ್ದಿದ್ದಾಗ ಮನೆ ಇನ್ನೇನು ಕುಸಿಯಲಿದೆ ಅನ್ನುವ ಸೂಚನೆಯಿಂದ, ಅಗ್ನಿಶಾಮಕದಳದವರ ಅನುಭವದ ನೆನಪು ತೆರೆದುಕೊಳ್ಳುತ್ತದೆ. ತಕ್ಷಣ ಅವರು ಹೊರಗೆ ಹೋಗುತ್ತಾರೆ. ಚೆಸ್ ಆಡುವಾಗ ಎದುರಾಳಿ ಮಾಡಿದ ಒಂದು ನಡೆಯಿಂದ, ನುರಿತ ಆಟಗಾರನ ಸ್ಮೃತಿಪಟಲದಲ್ಲಿ ನೂರಾರು ವಿನ್ಯಾಸಗಳು ತೆರೆದುಕೊಳ್ಳುತ್ತವೆ. ಸರಿಯಾದ ನಡೆಯನ್ನು ಗುರುತಿಸಿ ತನ್ನ ನಡೆಯನ್ನು ಮಾಡುತ್ತಾನೆ. ಈ ಗುರುತಿಸುವ ಕ್ರಿಯೆ ಪರಿಣತ ಆಟಗಾರನ ಇಂಟ್ಯೂಷನ್. ಈ ವ್ಯಾಖ್ಯೆ ಒಳಅರಿವಿನ ಮಾಂತ್ರಿಕತೆಯನ್ನು ಪ್ರತಿದಿನದ ನೆನಪಿನ ಅನುಭವವನ್ನಾಗಿಸುತ್ತದೆ.
ಕೆಲವು ರೀತಿಯ ಒಳಅರಿವು ನಮಗೆ ಸಲೀಸಾಗಿ ದಕ್ಕಿಬಿಡುತ್ತದೆ. ಒಂದು ಸ್ಥಳದಲ್ಲಿ ನಡೆದ ಒಂದು ಅಹಿತಕರ ಘಟನೆಯಿಂದ ಆ ಸ್ಥಳದ ಬಗ್ಗೆ ನಮಗೆ ಅರಿವಿಲ್ಲದೆ ಆತಂಕದ ಭಾವನೆ ಬಂದುಬಿಡುತ್ತದೆ. ಅಂತಹ ಅರಿವಿಗೆ ಒಂದು ಅನುಭವ ಸಾಕು. ಭಾವನಾತ್ಮಕ ಕಲಿಕೆ ಬೇಗ ಆಗಿಬಿಡುತ್ತದೆ. ಆದರೆ ತಜ್ಞತೆಗೆ ಹೆಚ್ಚು ಸಮಯ ಬೇಕು. ಅದು ಹೆಚ್ಚು ಸಂಕೀರ್ಣವಾದ ಕಲಿಕೆ. ಉದಾಹರಣೆಗೆ ಚೆಸ್. ಅದು ಕೇವಲ ಒಂದು ಕೌಶಲವಲ್ಲ, ಅದು ಹಲವಾರು ಕೌಶಲಗಳ ಸಮೂಹ. ಹಾಗಾಗಿ ಅದಕ್ಕೆ ಸಮಯ ಬೇಕು. ಒಂದು ಅಧ್ಯಯನದ ಪ್ರಕಾರ ಅದಕ್ಕೆ ೧೦,೦೦೦ ಗಂಟೆಗಳು ಅಂದರೆ ಸುಮಾರು ೬ವರ್ಷಗಳ ಅಭ್ಯಾಸ ಬೇಕು. ಅಂತಹ ಅಭ್ಯಾಸದಿಂದ ಒಬ್ಬ ಗಂಭೀರ ಆಟಗಾರನಿಗೆ ಸಾವಿರಾರು ವಿನ್ಯಾಸಗಳ ಪರಿಚಯವಾಗುತ್ತದೆ.


ಚೆಸ್ ಒಂದರ್ಥದಲ್ಲಿ ಓದುವುದನ್ನು ಕಲಿತಂತೆ. ಪ್ರಾರಂಭದಲ್ಲ್ಲಿ ಅಕ್ಷರಗಳನ್ನು ಗುರುತಿಸುವುದನ್ನು ಕಲಿಯುತ್ತಾರೆ. ನಂತರ ಅದನ್ನು ಪದಗಳಾಗಿ ಜೋಡಿಸುವುದನ್ನು ಕಲಿಯುತ್ತಾರೆ. ಚೆನ್ನಾಗಿ ಕಲಿತ ಮೇಲೆ ಗೊತ್ತಿಲ್ಲದ ಪದಗಳನ್ನೂ ಸಲೀಸಾಗಿ ಗುರುತಿಸಿ ಓದಿಬಿಡುತ್ತಾರೆ. ಓದಿಗಿಂತ ಚೆಸ್ ಹೆಚ್ಚು ಕಠಿಣ ಅನ್ನುವುದು ನಿಜ. ಆದರೆ ಒಬ್ಬ ಪರಿಣತ ಚೆಸ್ ಆಟಗಾರ ಸಾವಿರಾರು ಗಂಟೆಯ ಅಭ್ಯಾಸದ ನಂತರ ನೋಡಿದೊಡನೆ ಪರಿಸ್ಥಿತಿಯನ್ನು ಗ್ರಹಿಸಬಲ್ಲ ನಿಪುಣತೆಯನ್ನು ಪಡೆದಿರುತ್ತಾನೆ.
ಹೀಗೆ ಹಂತಹಂತವಾಗಿ ನಡೆದ ಅವರ ಅಧ್ಯಯನದಿಂದ ಒಳಅರಿವಿನ ಕೌಶಲ ಹಾಗೂ ಅದನ್ನು ಸಂಪಾದಿಸುವ ವಿಧಾನವನ್ನು ಕುರಿತಂತೆ ಒಮ್ಮತಕ್ಕೆ ಬಂದರು! ಆದರೆ ಒಬ್ಬ ಪರಿಣತನ ಒಳಅರಿವಿನ ನಿರ್ಧಾರಗಳನ್ನು ಯಾವ ಸಂದರ್ಭದಲ್ಲಿ ನಂಬಬಹುದು? ಅನ್ನುವ ಪ್ರಶ್ನೆ ಕುರಿತಂತೆ ಒಮ್ಮತಕ್ಕೆ ಬರುವುದಕ್ಕೆ ಸಮಯ ಹಿಡಿಯಿತು.
ಒಳಅರಿವನ್ನು ಕುರಿತು ಮಾತನಾಡುತ್ತಿದ್ದಾಗ ಅವರಿಬ್ಬರ ಮನಸ್ಸಿನಲ್ಲಿ ತೀರಾ ವಿಭಿನ್ನವಾದ ಪರಿಣತರು ಇದ್ದರು. ಕ್ಲೈನ್ ಮನಸ್ಸಿನಲ್ಲಿ ಅಗ್ನಿಶಾಮಕ ಪಡೆಯವರು, ಕ್ಲಿನಿಕಲ್ ನರ್ಸುಗಳು ಮೊದಲಾದವರು ಇದ್ದರು. ಇವರೆಲ್ಲಾ ನಿಜವಾದ ಪರಿಣತಿಯಿರುವ ವೃತ್ತಿಗೆ ಸೇರಿದವರು. ಹಾಗಾಗಿ ಅವನಿಗೆ ಒಳಅರಿವನ್ನು ಕುರಿತಂತೆ ಅಪಾರನಂಬಿಕೆ. ಇದಕ್ಕೆ ತದ್ವಿರುದ್ಧವಾಗಿ ಕನ್ಹೆಮನ್ ಮನಸ್ಸಿನಲ್ಲಿ ಸ್ಟಾಕ್ ಪಿಕ್ಕರ‍್ಸ್, ರಾಜಕೀಯ ವಿಜ್ಞಾನಿಗಳು ಮೊದಲಾದವರಿದ್ದರು. ಇವರೆಲ್ಲಾ ಯಾವುದೇ ವಿಶ್ವಾಸಾರ್ಹ ಆಧಾರಗಳಿಲ್ಲದೆ ಧೀರ್ಘಾವಧಿಯ ಊಹೆಗಳನ್ನು ಮಾಡುತ್ತಿದ್ದ ಜನ. ಸ್ವಾಭಾವಿಕವಾಗಿಯೇ ಕನ್ಹೆಮನ್‌ಗೆ ಇವರ ಒಳರಿವಿನಲ್ಲಿ (ಇಂಟ್ಯುಷನ್ನಿನಲ್ಲಿ) ನಂಬಿಕೆ ಇರಲಿಲ್ಲ.
ಈ ಅರಿವು ಅವರನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಸಹಮತ ಸಾಧ್ಯವಾಗುತ್ತಾ ಹೋಯಿತು. ಪರಿಣತರು ತೀರಾ ಆತ್ಮವಿಶ್ವಾಸದಿಂದ ತೆಗೆದುಕೊಂಡ ನಿರ್ಣಯಗಳನ್ನು ಒಪ್ಪಿಕೊಳ್ಳಬಹುದೇ? ಇಲ್ಲ ಧೃಡನಂಬಿಕೆಯಷ್ಟೇ ಸಾಲದು. ಯಾಕೆಂದರೆ ಪರಿಣತರು ತಮಗೆ ಸಲೀಸಾಗಿ ಉತ್ತರ ಸಿಕ್ಕಾಗ ಹಾಗೂ ಅಂತಹ ನಿರ್ಧಾರಗಳಲ್ಲಿ ಯಾವುದೇ ಸಂದಿಗ್ಧತೆಗಳೂ ಕಾಣಿಸದೇ ಹೋದಾಗ ಅದನ್ನು ಧೃಡವಾಗಿ ನಂಬಿಕೊಂಡುಬಿಡುತ್ತಾರೆ. ಇದನ್ನು ಇಬ್ಬರೂ ಒಪ್ಪಿಕೊಂಡರು. ಹಾಗಾದರೆ ಎಂತಹ ಸನ್ನಿವೇಶದಲ್ಲಿ ಪರಿಣತರ ಒಳಅರಿವು ವಿಶ್ವಾಸಾರ್ಹವಾಗುತ್ತದೆ? ಅವು ವಿಶ್ವಾಸಾರ್ಹವಾಗಬೇಕಾದರೆ ಎರಡು ಸನ್ನಿವೇಶಗಳು ಅನಿವಾರ್ಯ. ಮೊದಲನೆಯದಾಗಿ ಸನ್ನಿವೇಶ ಸಾಕಷ್ಟು ರೆಗ್ಯುಲರ್ ಆಗಿರಬೇಕು, ನಿಯತವಾಗಿರಬೇಕು. ಎರಡನೆಯದಾಗಿ ಈ ಕ್ರಮವನ್ನು ಗ್ರಹಿಸಿಕೊಳ್ಳಲು ಧೀರ್ಘಕಾಲೀನ ಅಭ್ಯಾಸಕ್ಕೆ ಅವಕಾಶವಿರಬೇಕು. ಉದಾಹರಣೆಗೆ ಚೆಸ್‌ನಲ್ಲಿ ಒಂದು ಕ್ರಮಬದ್ಧತೆ ಇದೆ. ಕಲಿಕೆಗೂ ಅವಕಾಶವಿದೆ. ಆದರೆ ಜೂಜಿನಲ್ಲಿ ಯಾದೃಚ್ಚಿಕತೆ ಹೆಚ್ಚು. ವೈದ್ಯರು, ಅಗ್ನಿಶಾಮಕದಳದವರು, ಓಟದಾಳುಗಳ ಪರಿಸ್ಥಿತಿ ಹೆಚ್ಚು ಸಂಕೀರ್ಣ. ಆದರೆ ಅಲ್ಲಿಯೂ ಒಂದು ಕ್ರಮವಿರುತ್ತದೆ. ಆದರೆ ರಾಜಕೀಯ ವಿಜ್ಞಾನಿಗಳಿಗೆ ಇಂತಹ ಕ್ರಮಬದ್ಧ ಪರಿಸ್ಥಿತಿ ಇರುವುದಿಲ್ಲ. ಅಲ್ಲಿ ಅನಿಶ್ಚಿತತೆ ಹೆಚ್ಚು. ಅಂತಹ ಸಂದರ್ಭದಲ್ಲಿ ನಿಖರವಾಗಿ ಅಂದಾಜಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಅವರನ್ನು ದೂಷಿಸುವುದು ಸರಿಯಲ್ಲ. ಆದರೆ ಅಂತಹ ಅಸಾಧ್ಯವಾದ ಸಂದರ್ಭದಲ್ಲಿ ತಾವು ಸರಿಯಾಗಿ ಅಂದಾಜಿಸುತ್ತೇವೆ ಅನ್ನುವುದು ಖಂಡಿತಾ ತಪ್ಪು.


ಪರಿಣತರಿಗೆ ತಮ್ಮ ನಿರ್ಧಾರದ ಮಿತಿಗಳೂ ಗೊತ್ತಿರಬೇಕು. ಅದು ಸಾಮಾನ್ಯವಾಗಿ ಅವರಿಗೆ ಗೊತ್ತಿರುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಹಲವು ಸಂದರ್ಭಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಒಳಅರಿವನ್ನು ಕುರಿತ ಹಲವಾರು ಅಂಶಗಳು, ತೀರಾ ಸರಳ ಅನ್ನಿಸುವ ಹಲವಾರು ಸತ್ಯಗಳು ಅವರ ಅಧ್ಯಯನದಿಂದ ನಮ್ಮ ಮುಂದೆ ಅನಾವರಣಗೊಳ್ಳುತ್ತವೆ.


ಈ ಅಧ್ಯಯನ ನಮಗೆ ಒಳ ಅರಿವನ್ನು ಕುರಿತಂತೆ ಒಳನೋಟಗಳನ್ನು ನೀಡಿದ ಕಾರಣಕ್ಕೆ ಮಾತ್ರವಲ್ಲ ಇಬ್ಬರೂ ತೀರಾ ಭಿನ್ನವಾಗಿ ಯೋಚಿಸುವ ಚಿಂತಕರು ಒಟ್ಟಿಗೆ ಚಿಂತಿಸುವ, ಪರಸ್ಪರರನ್ನು ಅರ್ಥಮಾಡಿಕೊಳ್ಳುವ, ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ಸ್ಥಿತಿ ಸಾಧ್ಯವಾಗಿದ್ದು ಸೌಗತಾರ್ಹ ಬೆಳವಣಿಗೆ. ಇಂತಹ ಪ್ರಯತ್ನಗಳು ಹೆಚ್ಚೆಚ್ಚು ಆಗುವಂತಾದರೆ? ನಮ್ಮನ್ನು ಒಪ್ಪದವರನ್ನು ಅಪ್ಪುವುದಕ್ಕೆ ನಮಗೆ ಸಾಧ್ಯವಾದರೆ?