[ಕುಸ್ತಿಪಟುಗಳ ಹೋರಾಟ ಇಂದು ಜಗತ್ತಿನ ಸುದ್ದಿಯಾಗಿದೆ. ಆದರೂ ಪರಿಹಾರ ಕಾಣುತ್ತಿಲ್ಲ. ಸರ್ಕಾರ ಬ್ರಜ್ ಭೂಷಣ್ ಅನ್ನು ಯಾಕೆ ರಕ್ಷಿಸುವುದಕ್ಕೆ ಪಣ ತೊಟ್ಟಿದೆ ಅನ್ನುವುದೂ ತಿಳಿಯುತ್ತಿಲ್ಲ. ಅಷ್ಟೊಂದು ದುರ್ಬಲವಾಗಿದೆಯೇ ಅನ್ನುವ ಅನುಮಾನ ಕಾಡುತ್ತಿದೆ. ಕುಸ್ತಿಪಟುಗಳ ಹೋರಾಟವನ್ನು ಕುರಿತ ಶೈಲಜಾ ಬರೆದಿದ್ದ ಲೇಖನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.]
ಸೀತೆ, ದ್ರೌಪದಿ, ಬೌದ್ಧ ವಿಹಾರಗಳಲ್ಲಿನ ಭಿಕ್ಕುಣಿಯರು, ಸಾರ್ವಜನಿಕವಾಗಿ ಅತ್ಯಾರಕ್ಕೊಳಗಾದ ಭಾಂವ್ರೀದೇವಿ, ಹತರಸ್‌ನ ಸಂತ್ರಸ್ತೆ, ಬಲ್ಕಿಶ್‌ಬಾನು, ಹೀಗೆ ಆ ಕಾಲದಿಂದ ಈ ಕಾಲದ ತನಕ ನ್ಯಾಯಕ್ಕಾಗಿ ಕಾದಿದ್ದ ಮತ್ತು ಕಾಯುತ್ತಿರುವ ಹೆಣ್ಣುಮಕ್ಕಳ ಕ್ಯೂ ತುಂಬಾನೇ ದೊಡ್ಡದಿದೆ. ಹಾಗೆಯೇ ಅಂದಿನಿಂದ ಇಂದಿನ ತನಕ ಅಲ್ಪ ಸ್ವಲ್ಪ ಬದಲಾವಣೆಗಳೊಡನೆ ಕಾಣುವ ಕೆಲವು ಸಾಮಾನ್ಯ ಸಂಗತಿಯೆಂದರೆ, ಕಿರುಕುಳಕ್ಕೊಳಗಾದ ಮಹಿಳೆಯರೇ ತಮಗೆ ಅಪಮಾನವಾಗಿದೆ ಎಂದು ಸಾಬೀತು ಪಡಿಸಬೇಕು. ಕಿರುಕುಳ ಕೊಟ್ಟವರು ಎದೆಯುಬ್ಬಿಸಿ ತಮ್ಮನ್ನು ಯಾರು, ಏನು ಮಾಡಬಲ್ಲರು, ಎಂದು ಹೆಮ್ಮೆಯಿಂದ ತೊಡೆ ತಟ್ಟಿ ಓಡಾಡುತ್ತಿರುತ್ತಾರೆ. ಕೀಚಕ ದ್ರೌಪತಿಯನ್ನು ಎಳೆದಾಡುವಾಗ, ಅವಳು ರಕ್ಷಣೆಗೆಂದು ವಿರಾಟನ ಸಭೆಗೆ ಓಡಿಬಂದರೆ, ಕೀಚಕನನ್ನು ಪ್ರಶ್ನಿಸುವ ಬದಲು ವಿರಾಟ ಮಹಾರಾಜ ಏನೂ ಆಗಿಯೇ ಇಲ್ಲವೆಂಬಂತೆ ನಿರುಮ್ಮಳವಾಗಿ ಕುಳಿತಿದ್ದ. ಸಭಾಸದರೆಲ್ಲರೂ ಆ ಘಟನೆಗೆ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಿರಾಳವಾಗಿದ್ದರು. ಇದೆಂಥ ಸೋಜಿಗ ಅಲ್ಲವೇ?
ಈಗ ಈ ಕ್ಯೂನಲ್ಲಿ ಇದ್ದಾರೆ ಭಾರತದ ಮಹಿಳಾ ಕುಸ್ತಿಪಟುಗಳು. ರಸಲರ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರತದ ಪ್ರಖ್ಯಾತ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೀಶ್ ಪೋಗಟ್ ಮತ್ತು ಅವರ ಅಳಲನ್ನು ಬೆಂಬಲಿಸುವ ಪ್ರಖ್ಯಾತ ಕುಸ್ತಿ ಪಟು ಬಜರಂಗ್ ಪುನಿಯಾ ಲೈಂಗಿಕ ಕಿರುಕುಳ ಸಂತ್ರಸ್ತರೆಲ್ಲರ ಪರವಾಗಿ ಗಟ್ಟಿಯಾಗಿ ದನಿಯೆತ್ತಿದ್ದಾರೆ. ಈ ಮೂವರು ಒಲಿಂಪಿಕ್ಸ್, ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಹೆಮ್ಮೆಯ ಕ್ರೀಡಾ ಪಟುಗಳು.
ವಿಭಿನ್ನ ಕ್ರೀಡಾ ಪ್ರಕಾರಗಳಲ್ಲಿನ ಉತ್ಕೃಷ್ಟ ಮಹಿಳಾ ಕ್ರೀಡಾಪಟುಗಳು ಹಲವು ಕಾಲದಿಂದ ತಾವು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ದೂರುತ್ತಾ, ಗೊಣಗಾಡುತ್ತಲೇ ಬಂದಿದ್ದಾರೆ. ಆದರೆ ಧೈರ್ಯದಿಂದ ಸಾರ್ವಜನಿಕವಾಗಿ ಮಾತನಾಡಲು ಹಿಂಜರಿದಿದ್ದಾರೆ. ಅದಕ್ಕೆ ಹಲವು ಕಾರಣಗಳಿವೆ. ಆದರೆ ದೂರ ನಿಂತು ನೋಡುವ ಸಾರ್ವಜನಿಕರು, ಹೀಗೆ ಹಿಂಸೆ ಕಿರುಕುಳ ಇದೆ ಅಂತ ಮೊದಲೇ ಹೇಳುವುದಕ್ಕೆ ಏನು ಕಷ್ಟ ಎಂದು ಟೀಕಿಸುತ್ತಾರೆ. ಹಾಗೆ ಏನನ್ನೂ ಸಾರ್ವಜನಿಕವಾಗಿ ಹೇಳದಂತಹ ಒತ್ತಡ ಮನೆಯವರು ಹಾಗೂ ಹತ್ತಿರದ ಸಂಬಂಧಿಕರಿಂದ ಬರುತ್ತದೆ. ಹೇಗಾದರು ಸಹಿಸಿಕೊಳ್ಳಿ. ಏಕೆಂದರೆ ಅದು ಕುಟುಂಬದ ಮಯಾರ್ದೆಯ ಪ್ರಶ್ನೆ ಎಂದು ಹೆಣ್ಣುಮಕ್ಕಳ ಬಾಯಿ ಮುಚ್ಚಿಸಿರುವುದು ಎಲ್ಲಾ ಹೆಣ್ಣುಮಕ್ಕಳ ಅನುಭವ. ಸಾರ್ವಜನಿಕವಾಗಿ ಹೇಳಿ ಪ್ರತಿಭಟಿಸಲು ಮುಂದಾಗುವ ಹೆಚ್ಚಿನ ಕ್ರೀಡಾಪಟುಗಳು ತಮ್ಮ ವೃತ್ತಿಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ಕಳೆದುಕೊಳ್ಳಲು ಸಿದ್ಧರಿರಬೇಕು. ಕ್ರೀಡಾ ವಕೀಲರೂ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸೌರಭ್ ಮಿಶ್ರಾ ಹೇಳುತ್ತಾರೆ, ಹೀಗೆ ದೂರು ನೀಡಿದ ಕ್ರೀಡಾಪಟುಗಳು ಮತ್ತೆ ಮಾತನಾಡದಂತೆ ಹಾಗೂ ಮತ್ತೆ ಅವರಿಗೆ ಸ್ಪರ್ಧಿಸುವ ಅವಕಾಶವೇ ಇಲ್ಲದಂತೆ ಮಾಡಲಗುತ್ತದೆ. ಈ ಮಾತನ್ನು ಸಾಕ್ಷಿ ಮಲಿಕ್ ಕೂಡ ಸಮರ್ಥಿಸುತ್ತಾರೆ. ಜೊತೆಗೆ ಮೊದಲೇ ಲೈಂಗಿಕ ಕಿರುಕುಳದಿಂದ ಸಿಕ್ಕಾಪಟ್ಟೆ ನೊಂದಿರುವ ಹೆಣ್ಣುಮಕ್ಕಳು ತಾವು ಅನುಭವಿಸಿರುವ ಕಿರುಕುಳವನ್ನು ಮತ್ತೆ ಮತ್ತೆ ವಿಭಿನ್ನ ಸಮಿತಿಗಳ ಮುಂದೆ ಹೇಳಿಕೆ ನೀಡುವಂತೆ ಮಾಡಲಾಗುತ್ತದೆ. ಅದು ಸಂತೃಸ್ತರಿಗೆ ಅತ್ಯಂತ ಹಿಂಸೆ ಮತ್ತು ನೋವನ್ನು ಉಂಟುಮಾಡುವ ಸನ್ನಿವೇಶ. ಇನ್ನು ಕಿರುಕುಳಕೊಟ್ಟವರು ಮತ್ತಷ್ಟು ಕಿರುಕುಳ ಕೊಟ್ಟು ಹೆಮ್ಮೆಯಿಂದ ಬೀಗುವಂತಹ ಅವಕಾಶವನ್ನು ನಮ್ಮ ರಾಜಕೀಯ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಇಂತಹ ಕಹಿ ಅನುಭವ ಈ ಕ್ರೀಡಾಪಟುಗಳ ಮುಂದೆ ಇದೆ. ಅಂತಹ ಒಂದು ಜೀವಂತ ಉದಾಹರಣೆಯನ್ನು ವಿನೀಶ್ ಪೋಗಟ್ ಉದಾಹರಿಸುತ್ತಾರೆ. ಪೂರ್ವ ಭಾರತದ ರಾಜ್ಯವೊಂದರಲ್ಲಿ ಹೆಣ್ಣುಮಕ್ಕಳು ತಮಗೆ ಕಿರುಕುಳ ಕೊಡುತ್ತಿದ್ದ ತರಬೇತುದಾರನ ವಿರುದ್ಧ ರೆಸಲಿಂಗ್ ಫೆಡೆರೇಷನ್ ಆಫ್ ಇಂಡಿಯಾಕ್ಕೆ ದೂರು ನೀಡಿದರು. ಆತನನ್ನು ೧೦ ದಿನಗಳ ಕಾಲಕ್ಕೆ ಸಸ್ಪೆಂಡ್ ಮಾಡಿದರು. ಆದರೆ ೭ನೆಯ ದಿನವೇ ಬರೀ ಕೋಚ್ ಆಗಿದ್ದ ಆತ ಹೆಡ್ ಕೋಚ್ ಆಗಿ ಮರಳಿ ಕೆಲಸಕ್ಕೆ ಬಂದ. ಇದು ರಸಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯವೈಖರಿ.
ಆದರೆ ಇವೆಲ್ಲವನ್ನೂ ಮೀರಿ ಈ ಮೂವರು ತಮ್ಮ ಉಜ್ವಲವಾದ ಭವಿಷ್ಯವನ್ನೂ ಮತ್ತು ಮುಂಬರುತ್ತಿರುವ ಒಲಿಂಪಕ್ ಕ್ರೀಡೆಗಳಲ್ಲಿ ತಮಗೆ ದೊರಕಬಹುದಾದ ಪದಕಗಳನ್ನು ಬದಿಗೊತ್ತಿ ನ್ಯಾಯಕ್ಕಾಗಿ ಪಣತೊಟ್ಟು ನಿಂತಿದ್ದಾರೆ. ಶೋಷಿತ ಜ್ಯೂನಿಯರ್ ಕ್ರೀಡಾಕಾರ್ತಿಯರನ್ನು ರಕ್ಷಿಸುತ್ತಿದ್ದಾರೆ. ವಿನೀಷಾ ಪೋಗಾಟ್ ಅವರ ಬದುಕಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಾಧ್ಯತೆ ಹೊಂದಿರುವ ವರ್ಷ ೨೦೨೩. ಸ್ವತಃ ವಿನೀಶಾ ಹೇಳುವಂತೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅತ್ಯಂತ ಕಠಿನತರವಾದ ತರಬೇತಿಯಲ್ಲಿದ್ದು, ಬುದ್ಧಿಗೆ ಹೊಳೆಯುವುದಕ್ಕೂ ಮೊದಲು ದೇಹದ ಪ್ರತಿಯೊಂದು ಮೂಳೆಗೂ ತಾನು ಮುಂದೇನು ಮಾಡಬೇಕೆಂಬುದು ಸಹಜವಾಗಿಯೇ ಅರಿವಾಗಬೇಕಾದಷ್ಟು ಅಭ್ಯಾಸದಲ್ಲಿ ತೊಡಗಬೇಕಾದ ಅಮೂಲ್ಯವಾದ ಕಾಲ ಇದು. ಆದರೆ ಒಬ್ಬ ವ್ಯಕ್ತಿಗೆ ಅದೆಲ್ಲಕ್ಕಿಂತಲೂ ಮಾನವ ಘನತೆ ಮುಖ್ಯ ಎಂದು ಭಾವಿಸಿ, ತಾನು ಹಾಗೂ ತನ್ನಂತಹ ಲಕ್ಷಾಂತರ ಮಹಿಳಾ ಕ್ರೀಡಾಪಟುಗಳ ಬವಣೆಗೆ ಪ್ರತಿಭಟನೆಯ ದನಿಯಾಗುವ ಅಪೂರ್ವ ನಿರ್ಧಾರದ ಮೂಲಕವೇ ಅವರು ಐತಿಹಾಸಿಕ ದಾಖಲೆಯೊಂದನ್ನು ಬರೆದಿದ್ದಾರೆ. ಇಲ್ಲಿ ದೂರು ನೀಡಿರುವ ಹುಡುಗಿಯರ ಹೆಸರುಗಳನ್ನು ಬಯಲುಮಾಡಲು ಪೋಗಟ್ ನಿರಾಕರಿಸಿದ್ದಾರೆ. ಇವರೆಲ್ಲರೂ ಹಳ್ಳಿಯ ರೈತಾಪಿ, ಪಿತೃಪ್ರಧಾನ ಧೋರಣೆಯ ಕುಟುಂಬದವರು. ನಾಳೆ ಏನಾದರೂ ಆದರೆ ಅವರು ತಮ್ಮ ಹಳ್ಳಿಯಲ್ಲಿ ಮನೆಯಿಂದ ಹೊರಬಂದು ಬದುಕಲು ಸಾಧ್ಯವಿಲ್ಲ. ಹಳ್ಳಿಯ ಜನ ಸುಶಿಕ್ಷಿತರಲ್ಲ. ಈ ಹುಡುಗಿಯರು ಮುಂಬೈ ಅಥವಾ ಲಂಡನ್ನಿಗೆ ಹೋಗಿ ಜೀವನ ನಡೆಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ತಮ್ಮ ವೃತ್ತಿಬದುಕನ್ನೇ ಪಣಕ್ಕೆ ಒಡ್ಡಿಕೊಂಡು ಈ ತಾರಾ ಕುಸ್ತಿಪಟುಗಳು ಉಳಿದವರನ್ನು ರಕ್ಷಿಸುತ್ತಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲಿರುವ ಆರೋಪವೇನು?
ಬ್ರಿಜ್ ಭೂಷಣ್ ಒಬ್ಬ ಅಪ್ರಾಪ್ತವಯಸ್ಕಳೂ ಸೇರಿದಂತೆ ಏಳು ಜನ ಕ್ರೀಡಾಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರು ಮಹಿಳಾ ಕ್ರೀಡಾಪಟುಗಳನ್ನು ಸದಾ ಹಿಂಬಾಲಿಸುವುದು, ಲೈಂಗಿಕ ಉದ್ದೇಶದಿಂದ ಅವರನ್ನು ಸ್ಪರ್ಷಿಸುವುದು, ಲೈಂಗಿಕವಾದ ಟೀಕೆಗಳನ್ನು ಮಾಡುವುದು ಮತ್ತು ಅವರ ಸೌಶೀಲ್ಯಕ್ಕೆ ಚ್ಯುತಿ ತರಲು ಪ್ರಯತ್ನಿಸಿದ್ದಾರೆ. ಉಸಿರಾಟವನ್ನು ಪರೀಕ್ಷಿಸುತ್ತೇನೆ ಎನ್ನುವ ಕಾರಣ ನೀಡಿ ಹಲವು ಬಾರಿ ಮೊಲೆ ಮತ್ತು ಹೊಟ್ಟೆಯನ್ನು ಮುಟ್ಟಿದ್ದಾರೆ. ಟೂರ್ನ್‌ಮೆಂಟ್ ಸಂದರ್ಭದಲ್ಲಿ ಮತ್ತು ಹೋಟೆಲ್ಲಿನಲ್ಲಿ ಹೀಗೆ ಮಾಡಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಬ್ರಿಜ್‌ಭೂಷಣ್ ಅಧಿಕಾರಾವಧಿ ಪ್ರಾರಂಭವಾದ ದಿನದಿಂದಲೂ ಮಹಿಳಾ ಕುಸ್ತಿಪಟುಗಳು ತೀವ್ರತರವಾದ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ. ಫಿಸಿಯೋಥೆರೆಪಿಸ್ಟ್ ಪರಮ್‌ಜೀತ್ ಮಲಿಕ್ ಓವರ್‌ಸೈಟ್ ಸಮಿತಿಯ ಮುಂದೆ ಹೇಳಿಕೆ ನೀಡುತ್ತಾ, ೨೦೧೪ರಲ್ಲಿಯೂ ಕೆಲವು ಮಹಿಳಾ ಕುಸ್ತಿಪಟುಗಳು ನನ್ನ ಬಳಿ ಅತ್ತುಕೊಂಡು ಬ್ರಜ್ ಭೂಷಣ್ ತಮಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಮೂವರು ಜೂನಿಯರ್ ಕುಸ್ತಿಪಟುಗಳು ತಮ್ಮನ್ನು ರಾತ್ರಿ ಬಂದು ಭೇಟಿ ಮಾಡುವಂತೆ ಬ್ರಜ್ ಭೂಷಣ್ ಹೇಳಿ ಕಳಿಸಿರುವುದರ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ಆಗಿನ ಮಹಿಳಾ ಕೋಚ್ ಕುಲ್‌ದೀಪ್ ಮಲಿಕ್ ಗಮನಕ್ಕೆ ತಂದೆ, ಆದರೆ ಆ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ (ಇಂಡಿಯನ್ ಎಕ್ಸ್‌ಪ್ರೆಸ್ ವರದಿ) ಪ್ರತಿಭಟಿಸುತ್ತಿರುವ ಕುಸ್ತಿ ಪಟುಗಳು ದೇಶದ ಅಧ್ಯಕ್ಷರು, ಪ್ರಧಾನಿ, ಗೃಹಸಚಿವರು, ಕ್ರೀಡಾ ಮಂತ್ರಿಗಳಿಗೆ ಬ್ರಿಜ್ ಭೂಷಣ್ ಅವರನ್ನು ತಕ್ಷಣವೇ ಬಂಧಿಸುವಂತೆ ಮನವಿ ಸಲ್ಲಿಸಿದ್ದಾರೆ. ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ಖಟ್ಲೆಗಳನ್ನು ನಿರ್ವಹಿಸುವ ಪ್ರೇರಣಾ ಸಿಂಗ್ ಹೇಳುವ ಪ್ರಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಿನ ನಿಯಮಗಳು ಸಾಕಷ್ಟು ಬಿಗಿಯಾಗಿವೆ. ಈ ವೇಳೆಗಾಗಲೇ ಬ್ರಜ್ ಭೂಷಣ್ ಅವರನ್ನು ವಿಚಾರಣೆಗೆ ಒಳಪಡಿಸಿ, ಚಾರ್ಜ್‌ಶೀಟ್ ಹಾಕಿಬಿಡಬೇಕಿತ್ತು. ಆದರೆ ಹಾಗಾಗಿಲ್ಲ. ನಂತರ ವಿಷಯ ಸುಪ್ರೀಂ ಕೋರ್ಟಿನ ತನಕ ತಲುಪಿ, ಬ್ರಜ್ ಭೂಷಣ್ ವಿರುದ್ಧ ಎಫ್‌ಐಆರ್ ಹಾಕುವಂತೆ ದೆಹಲಿಯ ಪೋಲಿಸರಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು. ಕೊನೆಗೂ ಏಪ್ರಿಲ್ ೨೮ರಂದು ದೆಹಲಿಯ ಪೊಲೀಸರು ಅವರ ವಿರುದ್ಧ ಎರಡು ಎಫ್‌ಐಆರ್ ಹಾಕಿದರು. ಮೊದಲನೆಯ ಎಫ್‌ಐಆರ್ ಪೋಸ್ಕೋ ನಿಯಮದಡಿ ಹಾಕಿದ್ದಾರೆ, ಎರಡನೆಯದು ಮಹಿಳೆಯ ಸೌಶೀಲ್ಯತೆಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ಕಾರಣಕ್ಕೆ ಹಾಕಿದ್ದಾರೆ. ಪೋಸ್ಕೋ ನಿಯಮದಡಿ ಎಫ್‌ಐಆರ್ ದಾಖಲಿಸಿ ಸುಮಾರು ೨೦ ದಿನಗಳಾಗಿದ್ದರೂ ಕೂಡ ಇನ್ನೂ ಈತನಕ ಬ್ರಿಜ್ ಭೂಷಣ್ ಅವರನ್ನು ಬಂಧಿಸಲಾಗಿಲ್ಲ. ಬಂಧಿಸಬೇಕಾದವರನ್ನು ಬಿಟ್ಟು ನ್ಯಾಯ ಕೇಳಲು ಮೇ ೨೮ರಂದು ಸಂಸತ್ ಮುಂದೆ ಪ್ರತಿಭಟಿಸಲು ಬಂದ ಮಹಿಳಾ ಕ್ರೀಡಾಪಟುಗಳನ್ನು ಬಂಧಿಸಿ ಮತ್ತೆ ಬಿಡುಗಡೆ ಮಾಡಿದ್ದಾರೆ. ಹೀಗೆ ಕೂದಲು ಕೊಂಕದಂತೆ ಬಿಡುಬೀಸಾಗಿ ಇರಲು ಸಾಧ್ಯವಾಗಿರುವ ಈತ ಯಾರು?
ಈ ಬ್ರಿಜ್‌ಭೂಷಣ್ ಯಾರು?
ಬಾಹುಬಲಿ ಎಂದು ಕರೆಸಿಕೊಳ್ಳುವ ಈತ ಭಾರತದ ಸಂಸತ್ತಿಗೆ ೮೦ ಶಾಸಕರನ್ನು ಕಳಿಸುವ ಉತ್ತರಪ್ರದೇಶದ ಗೊಂಡ್ ಪ್ರಾಂತ್ಯದವರು. ಹಲವು ಬಾರಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಅಲ್ಲಿನ ಶ್ರೀಮಂತ, ಪ್ರಭಾವಿ ಶಾಸಕರಲ್ಲಿ ಒಬ್ಬರು. ಇವರ ನೆರವಿಗೆ ನಿಂತಿರುವುದು ಕೂಡ ಇವೇ ಅಂಶಗಳು. ೧೯೯೦ರಿಂದಲೂ ಈತನ ವಿರುದ್ದ ಕ್ರಿಮಿನಲ್ ದಾಖಲೆಗಳಿವೆ. ೧೯೯೦ರಲ್ಲಿ ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹೀಂನ ನಾಲ್ವರು ಸಹಚರರಿಗೆ ಸಹಾಯ ಮಾಡಿದ್ದರು ಎನ್ನುವ ಕಾರಣಕ್ಕೆ ಇವರನ್ನು ಜೈಲಿಗೆ ಹಾಕಿದ್ದರು. ಬ್ರಜ್ ಭೂಷಣ್ ವಿರುದ್ಧ ೪೦ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ಇವೆ. ಕಳ್ಳತನ, ಕೊಲೆ ಪ್ರಯತ್ನ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಅನೈತಿಕ ಹಣದ ವಹಿವಾಟಿಗೆ ಸಂಬಂಧಿಸಿದ ನಾಲ್ಕು ಕೇಸುಗಳು ಈಗಲೂ ಆತನ ವಿರುದ್ಧ ನಡೆಯುತ್ತಿವೆ. ಬ್ರಿಜ್‌ಭೂಷಣ್ ೧೯೯೨ರಲ್ಲಿ ಬಾಬ್ರಿ ಮಸೀದಿಯ ಧ್ವಂಸದ ಕಾಲದಿಂದಲೂ ಬಿಜೆಪಿಯ ಕಟ್ಟಾ ಅನುಯಾಯಿ. ಈಗ ಪೋಸ್ಕೋ ಕಾಯಿದೆಯಡಿ ಬಂಧಿತನಾಗಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಹುರಳಿಲ್ಲದವು ಎಂದು ತಳ್ಳಿಹಾಕುತ್ತಾರೆ. ಪೋಸ್ಕೋ ಕಾಯಿದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಹಾಗಾಗಿ ಸಂತರು, ಸನ್ಯಾಸಿಗಳ ಜೊತೆಗೂಡಿ ಪೋಸ್ಕೋ ಕಾಯಿದೆಯನ್ನು ಬದಲಿಸಲು ಒತ್ತಡ ತರುತ್ತೇನೆ ಎನ್ನುತ್ತಿದ್ದಾರೆ.
ವಿನೀಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಅವರನ್ನೂ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸುವುದಾದರೆ, ತಾನು ಪಾಲಿಗ್ರಾಫ್ ಟೆಸ್ಟ್ ತೆಗೆದುಕೊಳ್ಳಲು ಸಿದ್ಧವಿದ್ದೇನೆ ಎಂದು ಬ್ರಜ್ ಭೂಷಣ್ ನೀಡಿರುವ ಹೇಳಿಕೆಗೆ ಉತ್ತರವಾಗಿ ನಾನು ಮಾತ್ರವಲ್ಲ, ದೂರು ನೀಡಿರುವ ಹೆಣ್ಣುಮಕ್ಕಳೆಲ್ಲರೂ ನಾರ್ಕೋ ಪರೀಕ್ಷೆಗೆ ಒಳಪಡಲು ಸಿದ್ಧವಿದ್ದೇವೆ. ಅದು ನೇರಪ್ರಸಾರವಾಗಲಿ. ಈ ದೇಶದ ಜನರೆಲ್ಲರೂ ಈ ದೇಶದ ಹೆಣ್ಣುಮಕ್ಕಳು ಎಂತಹ ಕ್ರೌರ್ಯ ಅನುಭವಿಸಿದ್ದಾರೆ ಎನ್ನುವುದನ್ನು ನೋಡಲಿ ಎಂದು ವಿನೀಶ್ ಉತ್ತರಿಸಿದ್ದಾರೆ.
ಇಷ್ಟೆಲ್ಲಾ ಆದರೂ ಪದಕ ತಂದಾಗ ಅದು ತಮ್ಮ ಪಕ್ಷದ ಸಾಧನೆ ಎಂದು ಸಾರ್ವಜನಿಕ ಹೇಳಿಕೆಗಳನ್ನು ನೀಡಿದ ಪ್ರಧಾನ ಮಂತ್ರಿಗಳಾಗಲಿ, ಕ್ರೀಡಾ ಮಂತ್ರಿಗಳಾಗಲಿ ತುಟಿಪಿಟಕ್ ಅಂದಿಲ್ಲ. ಕ್ರೀಡಾಪಟುಗಳು ಭ್ರಮನಿರಸನಗೊಂಡಿದ್ದಾರೆ, ನೊಂದಿದ್ದಾರೆ. ರಸಲರ್ಸ್ ಫೆಡೆರೇಷನ್ ಆಫ್ ಇಂಡಿಯಾ ಮಾಡಿರುವ ಹೊಸ ತಿದ್ದುಪಡಿಗಳನ್ನು ವಿರೋಧಿಸುವುದಕ್ಕಾಗದೆ ಈ ರೀತಿ ರಾಜಕೀಯ ತರುತ್ತಿದ್ದಾರೆ. ಕಿರುಕುಳ ಇದ್ದರೆ ಮೊದಲೇ ಹೇಳಬಹುದಿತ್ತಲ್ಲವೇ? ಇದಕ್ಕೆಲ್ಲಾ ರಾಜಕೀಯ ಏಕೆ ತರಬೇಕು ಎಂದು ಹಲವರು ಕ್ರೀಡಾಪಟುಗಳನ್ನು ಗಂಭೀರವಾಗಿ ಟೀಕಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದಿರುವ ಕ್ರೀಡಾಪಟುಗಳು ಕೇಳುತ್ತಾರೆ, ರಾಜಕೀಯ ಯಾಕೆ ತರಬಾರದು? ಇದೊಂದು ಗಂಭೀರವಾದ ಸಾರ್ವಜನಿಕ ಸಮಸ್ಯೆಯಲ್ಲವೇ? ದೇಶದ ಅಥವಾ ವಿಶ್ವದ ಬಹುಸಂಖ್ಯಾತ ಮಹಿಳೆಯರು ಎದುರಿಸುತ್ತಿರುವ ಅಸಹ್ಯಕರವಾದ ಹಿಂಸೆಯ ಪ್ರಶ್ನೆಯಲ್ಲವೇ? ಮಹಿಳೆಯರ ಗೌರವಕ್ಕಾಗಿ ಹೋರಾಡುವುದು ಕೆಟ್ಟ ರಾಜಕಾರಣವಂತೂ ಅಲ್ಲ ತಾನೆ? ಯಾರಾದರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಎನ್ನುವುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಆತನನ್ನು ಆತನ ತಪ್ಪುಗಳಿಗಾಗಿ ಶಿಕ್ಷಿಸುವ ತನಕ ನಾವು ಹೋರಾಡುತ್ತೇವೆ. ನಮಗೆ ನಿಜವಾಗಿಯೂ ಬೇಕಿರುವುದು ಇನ್ನು ಮುಂದೆ ಕುಸ್ತಿಯಲ್ಲಿ ನಮಗೆ ಯಾವುದೇ ಬಗೆಯ ಲೈಂಗಿಕ ಕಿರುಕುಳ ಇರುವುದಿಲ್ಲ ಎನ್ನವ ಭರವಸೆಯಷ್ಟೆ. ಆದರೆ ಈ ದೇಶದಲ್ಲಿ ರಾಜಕೀಯಕ್ಕಿಂತ ದೊಡ್ಡದು ಬೇರೆ ಇನ್ನೇನು ಇಲ್ಲವಲ್ಲ. ಎನ್ನುವ ವಿನೀಶ್ ಪೋಗಟ್ ಮಾತುಗಳು ಈ ದೇಶದ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವ ಲಿಂಗ ಅಸಮಾನತೆ, ರಾಜಕೀಯ ಪ್ರಾಬಲ್ಯವಿಲ್ಲದ ಸಾಮಾನ್ಯ ಪ್ರಜೆಯ ಬವಣೆಗೆ ಹಿಡಿದ ಕನ್ನಡಿ.
ಸರ್ಕಾರಗಳು ಕ್ರಮ ಮೈಗೊಳ್ಳದಿದ್ದರೆ ಖಾಪ್ ಪಂಚಾಯ್ತಿಗಳು ಸಂಸತ್ತಿನ ಮುಂದೆ ಮಹಿಳಾ ಖಾಪ್ ಪಂಚಾಯತಿಯನ್ನು ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದು ನಿಜವಾಗಿಯೂ ತುಂಬಾ ಹೆದರಿಕೆ ಹುಟ್ಟಿಸುವ ಬೆಳವಣಿಗೆ. ಏಕೆಂದರೆ, ಈ ಹಿಂದಿನ ವರ್ಷಗಳಲ್ಲಿ ಲಿಂಗಾಧಾರಿತ ತಾರತಮ್ಯ, ಜಾತಿಯ ಪ್ರಶ್ನೆ ಇವುಗಳ ವಿರುದ್ಧ ನಡೆದ ಚಳುವಳಿಗಳೆಲ್ಲವೂ ಖಾಪ್ ಪಂಚಾಯತಿಯ ಅಧಿಕಾರವನ್ನು ಪ್ರಶ್ನಿಸುತ್ತಲೇ ಬಂದಿವೆ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅವು ಮಹಿಳಾ ವಿರೋಧಿ ಹಾಗೂ ನಿಮ್ನ ವರ್ಗಗಳ ವಿರೋಧಿ ತೀಮಾರ್ನವನ್ನು ಕೈಗೊಂಡಿವೆ. ಉದ್ದಕ್ಕೂ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಲೇ ಬಂದಿವೆ. ಅವುಗಳ ಹೆಚ್ಚಿನ ನಿರ್ಣಯಗಳು ಪ್ರತಿಗಾಮಿ ನಿರ್ಣಯಗಳೇ ಆಗಿದ್ದವು. ಈಗ ಸಂವಿಧಾನದ, ನ್ಯಾಯಾಲಯದ ಹಕ್ಕನ್ನು ಮತ್ತೆ ಖಾಪ್ ಪಂಚಾಯತಿಗಳ ಕೈಗೆ ಒಪ್ಪಿಸುವುದು ಒಂದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಬಹಳ ದೊಡ್ಡ ಹಿನ್ನಡೆ. ಇಂದು ಪಾರ್ಲಿಮೆಂಟಿನ ಹೊಸ ಕಟ್ಟಡದ ಉದ್ಘಾಟನೆಯ ದಿನ ಅವರನ್ನು ನಡೆಸಿಕೊಂಡಿರುವ ರೀತಿ ಪ್ರಜಾಸತ್ತೆಯ ಚರಿತ್ರೆಯಲ್ಲಿ ಬಹುಕಾಲ ಉಳಿಯುವ ಕಪ್ಟುಚುಕ್ಕೆ.
ಮಹಿಳಾ ಕ್ರೀಡಾಪಟುಗಳ ಈ ಪ್ರಶ್ನೆಯನ್ನು ಕೇವಲ ಲೈಂಗಿಕ ಕಿರುಕುಳದ ಪ್ರಶ್ನೆಯನ್ನಾಗಿ ಮಾತ್ರ ಭಾವಿಸಬಾರದು. ಇದು ತುಂಬಾ ಸಂಕೀರ್ಣವಾದ ಹಾಗೂ ಚರ್ಚಿಸಲೇ ಬೇಕಾದ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಒಳಗೊಂಡಿದೆ. ಬೃಹತ್ ಭಾರತದ ಪ್ರಜಾಸತ್ತೀಯ ಮೌಲ್ಯಗಳ ಉಳಿವಿನ ಪ್ರಶ್ನೆಯೂ ಆಗಿದೆ ಎನ್ನುವುದನ್ನು ಖಂಡಿತಾ ಮರೆಯಬಾರದು. ಸಂವಿಧಾನದ ಆಶಯಗಳೆಲ್ಲವೂ ಅಪಾಯಕ್ಕೊಳಗಾಗುತ್ತಿದೆ ಎನ್ನುವ ಎಚ್ಚರಿಕೆಯ ಕರೆಗಂಟೆ ಇದಾಗಿದೆ.