ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ.
ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕಾದ ದ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ. ನನ್ನ ಬೇರುಗಳ ಸಂಗೀತವನ್ನು ಮತ್ತು ಆ ಸಂಸ್ಕೃತಿಯನ್ನು ನಾನು ನನ್ನೊಳಗೇ ಇಟ್ಟುಕೊಂಡಿದ್ದೆ. ನನ್ನ ಸಂಗೀತದ ಮೂಲಕ ನನಗೇ ಅರಿವಿಲ್ಲದಂತೆ ನಾನು ಆಫ್ರಿಕಾ ಮತ್ತು ಅದರ ಜನರ ಧ್ವನಿಯಾದೆ, ನಾನು ರಾಜಕಾರಣವನ್ನು ಹಾಡುವುದಿಲ್ಲ. ನಾನು ಕೇವಲ ಹಾಡುತ್ತೇನೆ ಮತ್ತು ಸತ್ಯವನ್ನು ಹೇಳುತ್ತೇನೆ. ನಾನು ಹೇಳುವ ಸತ್ಯ ರಾಜಕಾರಣ ಆಗಬಹುದು. ನಾನೊಬ್ಬ ರಾಜಕೀಯ ಗಾಯಕಿಯಲ್ಲ. ನನಗೆ ರಾಜಕೀಯದ ಅರ್ಥ ಕೂಡ ಏನೆಂದು ತಿಳಿದಿಲ್ಲ. ಜನ ಭಾವಿಸಿದ್ದಾರೆ ನಾನು ಪ್ರಜ್ಞಾಪೂರ್ವಕವಾಗಿ ದಕ್ಷಿಣ ಆಫ್ರಿಕಾದಲ್ಲಿ ಏನಾಗುತ್ತಿದೆ ಎನ್ನುವುದನ್ನು ಹೇಳುತ್ತಿದ್ದೇನೆ ಎಂದು. ಇಲ್ಲ! ನಾನು ನನ್ನ ಬದುಕನ್ನೇ ಹಾಡುತ್ತಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಯಾವಾಗಲು ಏನು ಆಗುತ್ತಿದೆಯೋ ಅದನ್ನು, ಅದರಲ್ಲೂ ವಿಶೇಷವಾಗಿ ಯಾವುದು ನಮ್ಮನ್ನು ತುಂಬಾ ನೋಯಿಸುತ್ತದೆಯೋ ಅದನ್ನು ಹಾಡುತ್ತೇವೆ.
ಹೀಗೆ ಬದುಕನ್ನೇ ಹಾಡಿದ ಮಕೇಬಾ ಹುಟ್ಟಿದ್ದು ೧೯೩೨ರ ಮಾರ್ಚ್ ೦೪ರಂದು ಜೋಹಾನ್ಸ್‌ಬರ್ಗಿನ ಹೊರವಲಯದಲ್ಲಿ ಕರಿಯರಿಗಾಗಿ ನಿರ್ಮಿಸಿದ್ದ ಸೋಫಿಯಾ ಟೌನಿನಲ್ಲಿ. ಅವಳ ತಾಯಿ ಸ್ವಾಜ಼ಿ ಮತ್ತು ತಂದೆ ಖೋಸಾ ಬುಡಕಟ್ಟಿಗೆ ಸೇರಿದವರು. ಅವಳ ಬಾಲ್ಯ ಯೌವ್ವನವೆಲ್ಲವೂ ಕಡುಬಡತನ ಹಾಗೂ ವಸಾಹಾತುಶಾಹಿಯ ದಬ್ಬಾಳಿಕೆಯಲ್ಲಿ ಕಳೆಯಿತು. ಮನೆಯಲ್ಲಿ ಸದಾ ಬಡತನ. ನನಗೆ ಹಾಕಿಕೊಳ್ಳಲು ಶೂಗಳೂ ಇರಲಿಲ್ಲ. ನಾನು ಬಾಲ್ಯ ದಲ್ಲಿ ಬೆಳೆದದ್ದೇ ನನಗಿಂತ ದೊಡ್ಡವರು ಹಾಕಿಬಿಟ್ಟ ಬಟ್ಟೆಯನ್ನು ಹಾಕಿಕೊಂಡು.
ಆದರೆ ಸಂಗೀತ ಅವರ ಬದುಕಿನ ಭಾಗವಾಗಿತ್ತು.. ನಮ್ಮ ಮನೆಗಳಲ್ಲಿ ಸದಾ ಸಂಗೀತ ಮತ್ತು ಕುಣಿತ ಇರುತ್ತಿತ್ತು. ನಮಗೆ ಖುಷಿ ಯಾದಾಗಲೆಲ್ಲಾ ನಾವು ಮನಬಿಚ್ಚಿ ಹಾಡಿ, ಕುಣಿಯುತ್ತೇವೆ. ನಮ್ಮಮ್ಮ ಅದ್ಭುತ ವಾಗಿ ಹಾಡುತ್ತಿದ್ದಳು. ಅವಳು ಮೌತ್ ಆರ್ಗನ್, ಥಂಬ್ ಪಿಯಾನೋ, ಡ್ರಂ ಹೀಗೆ ಹಲವಾರು ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸುತ್ತಿದ್ದಳು. ಸಾಂಪ್ರದಾಯಿಕ ನೃತ್ಯಗಳನ್ನೂ ಸೊಗಸಾಗಿ ಮಾಡು ತ್ತಿದ್ದಳು. ನಾವು ಭಾನುವಾರಗಳಂದು ಅಂಗಳದಲ್ಲಿ ಸಂತೋಷವಾಗಿ ಹಾಡಿ-ಕುಣಿದು, ತಿಂದು-ಕುಡಿದು, ಮಸ್ತಿ ಮಾಡುತ್ತಿದ್ದೆವು. ಇನ್ನು ಮದುವೆಗಳಲ್ಲಿ ಕುಣಿಯುತ್ತಿದ್ದೆವು. ತುಂಬಾ ಹೆಚ್ಚಾಗಿ ಕುಣಿಯು ತ್ತಿದ್ದುದು ಸಾವಿಗೆ ಸಂಬಂಧಿಸಿದ ಕಲ್ಪಗಳು ಮತ್ತು ಆಚರಣೆಗಳಲ್ಲಿ.
ಅವರು ಕ್ರೈಸ್ತರಾಗಿ ಮತಾಂತರವಾದ ಮೇಲೆ ಸಾಂಪ್ರದಾಯಿಕ ಸಂಗೀತನೃತ್ಯಗಳ ಜೊತೆಗೆ ಚರ್ಚಿನ ಹಾಡುಗಳು, ಕ್ರೈಸ್ತ ಮಿಷನರಿಗಳು ಹೇಳಿಕೊಡುವ ಗೀತೆಗಳು, ವಾದ್ಯಗಳು, ಮಟ್ಟುಗಳು ಸೇರಿಹೋಗುತ್ತಾ, ವಸಾಹತುಶಾಹಿಯ ಹಿಂಸೆ, ಕ್ರೌರ್ಯ, ಒತ್ತಡಗಳ ನಡುವೆಯೇ ಎರಡು ಸಂಗೀತಧಾರೆಗಳು ಬೆಸೆದು ಕೊಂಡವು. ಭಾನುವಾರದ ಕ್ವಯರ್ ಶಾಲೆಯಲ್ಲಿ ಹಾಡುತ್ತಿದ್ದ ಗೀತೆಗಳು, ಜ಼ುಲು, ಸೊಥೋ ಭಾಷೆಯ ಭಕ್ತಿಗೀತೆಗಳು ನನ್ನನ್ನು ಪುಳಕಿತಗೊಳಿಸುತ್ತಿತ್ತು. ನನ್ನೊಳಗೊಂದು ಹುಮ್ಮಸ್ಸು ಮೂಡಿ, ಚೈತನ್ಯ ಹರಿದಾಡುತ್ತಿದೆ ಎನಿಸುತ್ತಿತ್ತು.
ನನ್ನ ಆಕಾರ ಪುಟ್ಟದಾಗಿದ್ದರೂ ನನ್ನ ಧ್ವನಿ ಮಾತ್ರ ತುಂಬಾ ಜೋರಾಗಿತ್ತು. ನಾನು ಚರ್ಚಿ ನಿಂದ ಮನೆಗೆ ಬರುವಾಗ ಬೆಪಾಡಿ ಬುಡಕಟ್ಟಿನವರ ಹಾಡಿಗಳ ಒಳಗಿನಿಂದ ಹಾದು ಬರುತ್ತಿದ್ದೆ. ಸಂಗೀತ ಅನ್ನೋದು ಬೆಪಾಡಿಗಳ ಮೈಮನಸ್ಸೆಲ್ಲಾ ತುಂಬಿ ಕೊಂಡಿತ್ತು. ಅವರ ಸಂಗೀತ ತುಂಬಾ ಸಂಕೀರ್ಣ. ಅವರ ಜೀವಂತಿಕೆ, ಲವಲವಿಕೆ ನನ್ನನ್ನು ಬೆರಗು ಗೊಳಿಸುತ್ತಿತ್ತು. ನಾವೇ ಬಡವರು ಅಂದರೆ ಅವರು ನಮಗಿಂತಲೂ ಬಡವರು. ಆದರೆ ಈ ಜಗತ್ತಿನ ಯಾವ ಜಂಜಾಟವೂ ಕಾಡದಂತೆ ಅವರನ್ನು ಖುಷಿಯಾಗಿಟ್ಟಿದ್ದು ಸಂಗೀತವೇ ಅನ್ನಿಸುತ್ತದೆ. ಸಂಗೀತ ಎನ್ನುವುದು ಒಂದು ರೀತಿಯ ಜಾದೂ ಎನ್ನುವುದನ್ನು ನಾನು ಈಗಾಗಲೇ ಕಂಡುಕೊಂಡಿ ದ್ದೇನೆ. ಸಂಗೀತಕ್ಕೆ ಏನೇನನ್ನೋ ಮಾಡುವ ಶಕ್ತಿಯಿದೆ. ದುಃಖದಲ್ಲಿರುವವರನ್ನು ಖುಷಿ ಪಡಿಸುತ್ತದೆ, ಮಂಕಾಗಿರುವವರನ್ನು ಬಡಿದೆಬ್ಬಿಸುತ್ತದೆ. ನನಗದೇನು ಮಾಡುತ್ತಿದೆ ಅನ್ನೋದು ಗೊತ್ತು. ನನ್ನಾಳಕ್ಕೆ ಇಳಿದು ನನ್ನ ಮೈ ತೂಗುವಂತೆ, ಮುಲುಗುವಂತೆ ಮಾಡುತ್ತದೆ. ನಗು ನಿಧಾನವಾಗಿ ನನ್ನ ತುಟಿಯ ಮೇಲೆ ಅರಳುತ್ತದೆ. ಕೈಗಳು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತವೆ. ಸಂಗೀತ ನಮ್ಮಲ್ಲಿ ಇರೋತನಕ ಯಾರೂ ನಮ್ಮನ್ನು ತುಳಿಯುವುದಕ್ಕೆ ಸಾಧ್ಯವಿಲ್ಲ. ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ ಅಂತಿದ್ರು ಶಾಲೆಯ ಸೀನಿಯರ್ ಕೋರಸ್‌ನ ಕಂಡಕ್ಟರ್ ಮೊಲೇಫ್. ನನಗೆ ಅದೇನೂ ಗೊತ್ತಾಗ್ತಾ ಇರಲಿಲ್ಲ. ಆದರೆ ಹಾಡ್ತಾ ಇದ್ರೆ ನನಗೆ ತುಂಬಾ ಖುಷಿಯಾಗ್ತಾ ಇತ್ತು.
ಮಕೇಬಾಗೆ ಎಲ್ಲಾ ಭಯವನ್ನೂ ಮೀರಿಕೊಳ್ಳಲು ಸಂಗೀತ ಸದಾ ಸಹಾಯ ಮಾಡುತ್ತಿತ್ತು. ಒಮ್ಮೆ ಸುರಿಯುವ ಮಳೆಯಲ್ಲಿ ಶಾಲೆಯಿಂದ ಮನೆಗೆ ಓಡಿಬರುತ್ತಿದ್ದಾಗ ಸಿಡಿಲುಬಡಿದು ಅವಳ ಕಣ್ಣೆದುರೇ ಅವಳ ಗೆಳತಿ ಸುಟ್ಟುಹೋದಳು. ಆ ಭಯವನ್ನು ಮೀರಿಕೊಳ್ಳೋಕ್ಕೂ ಅವಳಿಗೆ ನೆರವಾಗಿದ್ದು ಸಂಗೀತ.
ನನ್ನ ಗೆಳೆಯ ಗೆಳೆತಿಯರೆಲ್ಲರೂ ಸಂಗೀತದ ಆಸಕ್ತಿಯವರೇ. ಭಾನುವಾರ ಒಂದು ಮನೆಯಲ್ಲಿ ಸೇರಿ, ಅಡುಗೆ ಮಾಡಿಕೊಂಡು ಊಟಮಾಡುತ್ತಿದ್ದೆವು. ಎಲ್ಲಾ ಫಿಡ್ಜ್‌ಜೆರಾಲ್ಡ್, ಬಿಲ್ಲಿ ಹಾಲಿಡೇ, ಇವರ ಧ್ವನಿಮುದ್ರಿಕೆಗಳನ್ನು ಗಂಟೆಗಟ್ಟಲೆ ಕೇಳುತ್ತಿದ್ದೆವು. ಈ ಅದ್ಭುತ ಜಾಜ಼್ ಗಾಯಕರು ನನಗೆ ತುಂಬಾ ಇಷ್ಟ. ಆಗ್ತಾ ಇದ್ದರು. ನನ್ನ ದೊಡ್ಡಣ್ಣ ಜೋಸೆಫ್ ತುಂಬಾ ಸಂಗೀತಪ್ರಿಯ. ಆತ ಸೊಪ್ರಾನೋ ಸ್ಯಾಕ್ಸೋಫೋನ್, ಪಿಯಾನೋ ನುಡಿಸುತ್ತಿದ್ದ. ನನಗಾಗಿ ತುಂಬಾ ಧ್ವನಿಮುದ್ರಿಕೆಗಳನ್ನು ತರುತ್ತಿದ್ದ. ನನ್ನನ್ನು ಹಾಡುವಂತೆ ಪ್ರೋತ್ಸಾಹಿಸುತ್ತಿದ್ದ. ಅಮೇರಿಕನ್ ಹಾಡುಗಳನ್ನು ನನಗೆ ಹೇಳಿಕೊಡುತ್ತಿದ್ದ. ನನಗೆ ಇಂಗ್ಲಿಷ್ ಬರೋದಕ್ಕೆ ಮುಂಚೆಯೇ ಆ ಹಾಡುಗಳನ್ನು ನಾನು ಹಾಡ್ತಿದ್ದೆ.
೧೭ರ ಹರೆಯದ ಮಕೇಬಾಳ ಪ್ರೇಮವಿವಾಹ ಪತಿ ಗೂಲಿಯ ಸಂಶಯ ಪ್ರವೃತ್ತಿ, ಕ್ರೌರ್ಯ ಮತ್ತು ಅಮಾನವೀಯತೆಯಿಂದ ಮುರಿದುಬೀಳುತ್ತದೆ. ಆಗ ಎರಡು ಮೂರು ವರ್ಷಗಳಿಂದ ಹಾಡಲಾಗುತ್ತಿಲ್ಲ ಎನ್ನುವ ಕೊರಗಿನಲ್ಲಿದ್ದ ಮೀರಿಯಂ ತನ್ನ ಸೋದರನ ಕ್ಯೂಬನ್ ಬ್ರದರ‍್ಸ್ ಎನ್ನುವ ತಂಡ ಸೇರಿ ತನ್ನೆದೆ ಬಿರಿದುಹೋಗುವಂತೆ ಹಾಡಿ, ತನ್ನ ದುಗುಡವನ್ನೆಲ್ಲಾ ಮರೆಯಲು ಪ್ರಯತ್ನಿಸುತ್ತಾಳೆ. ಯುವತಿಯೊಬ್ಬಳು ವೇದಿಕೆಯಲ್ಲಿ ಹಾಡುವುದು ಆಫ್ರಿಕಾದ ಸಮಾಜಕ್ಕೆ ಒಪ್ಪಿತವಲ್ಲ. ನೆರೆಹೊರೆಯವರು ಅವಳನ್ನು ಸೂಳೆ, ಗಂಡನನ್ನು ಬಿಟ್ಟುಬಂದಿದ್ದಾಳೆ ಎಂದು ಮಾತನಾಡಿ ಕೊಳ್ಳುತ್ತಾರೆ. ಆದರೆ ಅವಳ ತಾಯಿ ಅದ್ಯಾವುದಕ್ಕೂ ಸೊಪ್ಪು ಹಾಕದೆ ಬದುಕಿನುದ್ದಕ್ಕೂ ಮಗಳನ್ನು ಬೆಂಬಲಿಸುತ್ತಾಳೆ.
ಆಫ್ರಿಕಾದ ಖ್ಯಾತ ಮ್ಯಾನ್‌ಹಟ್ಟನ್ ಬ್ಯಾಂಡಿನ ನೇಥನ್ ಮಡ್ಲ್‌ಡ್ಲ್ ಮಕೇಬಾಳ ಕಂಠ ನೈಟಿಂಗೇಲ್ ಕಂಠದಂತೆ ಬಲು ಮಧುರವಾಗಿದೆ ಎಂದು ತನ್ನ ಬ್ಯಾಂಡಿನಲ್ಲಿ ಹಾಡಲು ಆಯ್ಕೆ ಮಾಡಿಕೊಳ್ಳುತ್ತಾನೆ. Iಟಿಣಡಿoಜuಛಿiಟಿg ಒiಡಿiಚಿm ಒಚಿಞebಚಿ, ಔuಡಿ oತಿಟಿ ಓuಣ ಃಡಿoತಿಟಿ ಃಚಿbಥಿ ಎಂಬ ತಲೆಬರಹದ ಪೋಸ್ಟರ್‌ಗಳು ಎಲ್ಲೆಲ್ಲೂ ರಾರಾಜಿಸುತ್ತವೆ. ಈ ತಂಡದೊಂದಿಗೆ ಮಕೇಬಾ ಆಫ್ರಿಕದ ವಿಭಿನ್ನ ದೇಶಗಳಿಗೆ ಹೋಗುತ್ತಾಳೆ. ಮಕೇಬಾಳ ದೊಡ್ಡಕ್ಕ ಪೆಗ್ಗಿ ಫ್ಯಾಂಗೋ ಒಳ್ಳೆಯ ಗಾಯಕಿ ಮತ್ತು ನಟಿ. ಅವಳು ಪಾಶ್ಚಾತ್ಯ ಉಡುಗೆ ತೊಡುಗೆ ಮತ್ತು ನಡವಳಿಕೆಯ ಬಗ್ಗೆ ಮಕೇಬಾಳಿಗೆ ಮಾರ್ಗದರ್ಶನ ನೀಡುತ್ತಾಳೆ. ಮಕೇಬಾಳಿಗೆ ಮೇಕಪ್ ಸ್ವಲ್ಪವೂ ಇಷ್ಟ ವಾಗುತ್ತಿರಲಿಲ್ಲ. ’ಮೇಕಪ್ ವಸ್ತುಗಳು ಬಿಳಿಯರ ಉತ್ಪಾದನೆ. ಅದು ಅವರಿಗೆ ಸರಿಹೊಂದುತ್ತದೆ. ನಮಗಲ್ಲ. ನಾವು ಕರಿಯರು ಅದನ್ನು ಬಳಿದು ಕೊಂಡರೆ, ಮಖವಾಡ ತೊಟ್ಟಂತೆ ಕಾಣುತ್ತದೆ. ನಾವು ನಾವಾಗೇ ಇರಬೇಕು’ ಅನ್ನುತ್ತಿದ್ದಳು ಅಮ್ಮ. ನಾನು ಲಾವಣ್ಯಭರಿತ, ಆಕರ್ಷಣೀಯ ಹೆಂಗಸಲ್ಲ. ನನಗೆ ಸಹಜವಾಗಿ ಇರುವುದಕ್ಕೆ ಇಷ್ಟ. ದೊಡ್ಡ ದೊಡ್ಡ ಕಿವಿಯೋಲೆಗಳು ಮತ್ತು ಬಣ್ಣಬಣ್ಣದ ಮಣಿಸರವೇ ನನ್ನ ನಿಜವಾದ ಅಲಂಕಾರ. ಹಾಗಿದ್ದಾಗ್ಯೂ ೧೫೦ ಪೌಂಡುಗಳನ್ನು ನೀಡಿ ಕೊಕೋಕೋಲಾದ ಜಾಹಿರಾತಿಗೆಂದು ಮಕೇಬಾಳ ಲೈಫ್ ಸೈಜ಼್ ಕಟ್‌ಔಟ್‌ಗಳನ್ನು ಎಲ್ಲೆಡೆ ಹಾಕುತ್ತಾರೆ.
ಗ್ಯಾಲೋಸ್ಟೋನ್ ರೆಕಾರ್ಡಿಂಗ್ ಕಂಪನಿಗೆ ಇವರೆಲ್ಲರೂ ಹಾಡುತ್ತಿದ್ದರು. ಅವರು ಎರಡು ಪೌಂಡ್ ಮತ್ತು ಕೆಲವು ಷಿಲ್ಲಿಂಗ್ಸ್ ಕೊಡುತ್ತಿದ್ದರು. ರಾಯಲ್ಟಿ ನೀಡುತ್ತಿರಲಿಲ್ಲ. ಆಫ್ರಿಕಾದಲ್ಲಿ ಗಾಯಕರ ಒಂದು ಯೂನಿಯನ್ ಇತ್ತು. ಆದರೆ ಕರಿಯರಿಗೆ ಅದರ ಸದಸ್ಯತ್ವ ಇರಲಿಲ್ಲ. ರೇಡಿಯೋದಲ್ಲಿ ಪ್ರಸಾರವಾದ ಮಕೇಬಾಳ ಖೋಸಾ ಧಾಟಿಯ ಐಚಿಞuಣ shuಟಿಚಿ Iಟಚಿಟಿgu ಎಂಬ ಪ್ರೇಮಗೀತೆ ಯನ್ನು ಕೇಳಿದ ಅಮೇರಿಕಾದ ರಚನಕಾರನೊಬ್ಬ ತನ್ನ ಇಂಗ್ಲಿಷ್ ಹಾಡೊಂದನ್ನು ಮಕೇಬಾ ಕಂಠದಲ್ಲಿ ಧ್ವನಿಮುದ್ರಿಸಿ ಕೊಡುವಂತೆ ಗ್ಯಾಲೋಸ್ಟೋನ್ ಕಂಪನಿ ಯನ್ನು ಕೇಳಿಕೊಳ್ಳುತ್ತಾನೆ. ಕರಿಯರು ಇಂಗ್ಲಿಷ್ ಹಾಡು ಹಾಡುವಂತಿರಲಿಲ್ಲ. ಆದರೆ ಅದು ಹೇಗೋ ಧ್ವನಿಮುದ್ರಣ ಕಂಪನಿಯವರು ’ಯು ಟೆಲ್ ಸಚ್ ಲೌವ್ಲಿ ಲೈಸ್’ ಎನ್ನುವ ಹಾಡನ್ನು ಧ್ವನಿಮುದ್ರಿಸುತ್ತಾರೆ. ಅದು ಪಾಶ್ಚಾತ್ಯ ದೇಶಗಳಲ್ಲಿ ಅಪಾರ ಜನಪ್ರಿಯತೆ ಯನ್ನು ಪಡೆಯುತ್ತದೆ.
ಆದರೆ ಇವು ಯಾವುವೂ ಅವರು ಕಪ್ಪು ಜನರು ಎನ್ನುವ ವಾಸ್ತವವನ್ನು ಬದಲಿಸುತ್ತಿರಲಿಲ್ಲ. ಆಫ್ರಿಕೆ ಯಲ್ಲಿ ಕರಿಯರು ಯಾವುದೇ ಆಸ್ತಿಯನ್ನು ಹೊಂದು ವಂತಿರಲಿಲ್ಲ. ಹಾಗಾಗಿ ಮನೆಯನ್ನು ಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಅಪಾರ್ಥೀಡ್‌ನಿಂದಾಗಿ ನಮ್ಮ ಮನೆ ಗಳು ಹೆಚ್ಚು ಕಡಿಮೆ ಊರ ಹೊರಗೆ ಕಾಲೋನಿಗಳಲ್ಲಿ ಇರುತ್ತಿದ್ದವು. ಕರಿಯರ ನೆಲದಲ್ಲೇ ಕರಿಯರಿಗಾಗಿ ಪ್ರತ್ಯೇಕವಾಗಿದ್ದ ಸಿನಿಮಾ ಮಂದಿರದಲ್ಲಿ ಕರಿಯರು ಹಾಲಿವುಡ್ ಸಿನಿಮಾ ನೋಡುವ ದುರಂತವನ್ನೂ ಮಕೇಬಾ ಕಟ್ಟಿಕೊಡುತ್ತಾಳೆ. ಕಠಿಣವಾದ ವಸಾಹತು ಕಾನೂನುಗಳಿಂದ ಕರಿಯರು ಶಿಕ್ಷಣ ಮುಂದು ವರಿಸಲು ಸಾಧ್ಯವಿರುವುದಿಲ್ಲ. ಬಿಳಿಯರು ಕಪಟ ದಿಂದ ಕರಿಯರನ್ನು ಹೇಗೆ ಅಪರಾಧಿಗಳನ್ನಾಗಿ ಪರಿವರ್ತಿಸುತ್ತಾರೆ ಎನ್ನುವ ಸ್ವಂತ ಅನುಭವವನ್ನೂ ಮಕೇಬಾ ದಾಖಲಿಸುತ್ತಾಳೆ.
ಪೋಲಿಸರು ಸದಾ ಅವರನ್ನು ಕಾಡುತ್ತಿದ್ದರು. ಯಾವುದೇ ತಪ್ಪಿಲ್ಲದಿದ್ದರೂ ಮಕೇಬಾ ಕೂಡ ಹಲವು ಬಾರಿ ಜೈಲಿಗೆ ಹೋಗಿ ಬರಬೇಕಾಯಿತು. ಪ್ರಾಣಿಗಳಿ ಗಿಂತ ಕೀಳಾದ ಈ ಸ್ಥಿತಿಯಲ್ಲಿ ಇನ್ನೆಷ್ಟು ದಿನ ಇರಬೇಕೆಂದು ಎಷ್ಟೋ ಬಾರಿ ಅನ್ನಿಸುತ್ತಿತ್ತು. ನಾವು ನಮ್ಮದೇ ನೆಲದಲ್ಲಿ ಹೊಲಸಿಗಿಂತ ಕಡೆಯಾಗಿದ್ದೆವು. ಆದರೆ ಸಂಪೂರ್ಣ ಒತ್ತಡ ಬಾರದೆ ಯಾವುದೂ ಸಿಡಿಯುವುದಿಲ್ಲ ಅಲ್ಲವೇ? ಇಷ್ಟೆಲ್ಲಾ ಹಿಂಸೆಯನ್ನು ಅನುಭವಿಸಿದರೂ ಬಿಳಿಯರೆಲ್ಲರೂ ಕೆಟ್ಟವರು ಎನ್ನು ವಂತಹ ದನಿಯಲ್ಲಿ ಅವಳು ಎಲ್ಲೂ ಮಾತನಾಡು ವುದಿಲ್ಲ. ಅತ್ಯಂತ ಆರೋಗ್ಯಕರ ಮನಸ್ಸಿನ ಅವಳಿಗೆ ಎಲ್ಲರಲ್ಲೂ ಇರುವ ಮನುಷ್ಯತ್ವ ಕಾಣಿಸುತ್ತಿತ್ತು ಮತ್ತು ಅವಳಿಗೆ ಅದರ ಅನುಭವವೂ ಆಗುತ್ತದೆ.
ಈ ನಡುವೆ ಮಕೇಬಾ ಆಫ್ರಿಕನ್ ಜಾಜ಼್ ಅಂಡ್ ವೆರೈಟಿ ಎನ್ನುವ ತಂಡದೊಂದಿಗೆ ಆಫ್ರಿಕಾ ದುದ್ದಕ್ಕೂ ಪಯಣಿಸಿ ಶೋ ನೀಡುತ್ತಾಳೆ. ಈ ತಂಡದ ನಿರ್ಮಾಪಕ ಆಲ್‌ಫ್ರೆಡ್ ಹರ್ಬರ‍್ಟ್. ಅವನ ತಾಯಿ ಸಾರಾ ಸಿಲ್ವಿಯಾ ಯಹೂದಿ ರಂಗಭೂಮಿಯ ಬಹು ದೊಡ್ಡ ಹೆಸರು. ವೆರೈಟಿ ತಂಡದ ಅತ್ಯಂತ ಖ್ಯಾತಗಾಯಕಿ ಡಾರೋತಿ ಮಸೂಕಾ ಹಲವು ಹೊಸ ಮಟ್ಟುಗಳನ್ನು ಮಕೇಬಾಳಿಗೆ ಕಲಿಸುತ್ತಾಳೆ.
ಆಲ್‌ಫ್ರೆಡ್ ಹರ್ಬರ‍್ಟ್, ಕಮ್ ಬ್ಯಾಕ್ ಆಫ್ರಿಕಾದ ನಿರ್ಮಾಪಕ ರೊಗೋಸನ್, ನಂತರದಲ್ಲಿ ಕಿಂಗ್ ಕಾಂಗ್‌ನ ನಿರ್ಮಾಪಕ ಜಾಸ್ ಒಪೇರಾದ ಹ್ಯಾರಿ ಬ್ಲೂಮ್ ಇವರೆಲ್ಲರೂ ಯಹೂದಿಗಳು. ಇವರೆಲ್ಲರ ಪ್ರಯತ್ನದಿಂದ ಮಕೇಬಾಳಿಗೆ ಯುರೋಪಿಗೆ ಹೋಗಲು ಪಾಸ್‌ಪೋರ್ಟ್ ಮತ್ತು ಟಿಕೇಟುಗಳು ದೊರಕುತ್ತವೆ. ಹೊರಡುವುದಕ್ಕೆ ಮೊದಲು ಗುಡ್‌ಬೈ ಫಾದರ್, ಗುಡ್‌ಬೈ ಮದರ್ ಮತ್ತು ಈಫಿ ಎನ್‌ಡ್ಲೆಲಾ (ಐ ಆಸ್ಕ್ ಯು ಟು ಶೋ ಮಿ ದ ವೇ) ಎನ್ನುವ ಹಾಡನ್ನು ಧ್ವನಿಮುದ್ರಿಸುತ್ತಾಳೆ. ಎರಡೂ ಹಾಡುಗಳು ತುಂಬಾ ಜನಪ್ರಿಯವಾಗುತ್ತವೆ.
ಅವಳು ಹಾಡಿದ ಕಮ್ ಬ್ಯಾಕ್ ಆಫ್ರಿಕಾ ಚಿತ್ರದ ಪ್ರದರ್ಶನ ವೆನಿಸ್‌ನಲ್ಲಿರುತ್ತದೆ. ಅವಳು ಪ್ಯಾರಿಸ್ ವರೆಗೂ ಏರೋಪ್ಲೇನಿನಲ್ಲಿ ಹೋಗುತ್ತಾಳೆ. ಏರೋ ಪ್ಲೇನಿನಲ್ಲಿ ಮೊದಲ ಬಾರಿಗೆ ದೇಶ ಬಿಟ್ಟು ಹೋಗುವ ಕಪ್ಪುಹೆಣ್ಣಿನ ಅನುಭವವನ್ನು ತುಂಬಾ ಮನಮುಟ್ಟು ವಂತೆ ವಿವರಿಸುತ್ತಾಳೆ. ಅವಳ ಮುಗ್ಧತೆ, ಆತಂಕ, ಸಂಭ್ರಮ, ಭಯ, ಅಜ್ಞಾನ ಎಲ್ಲವೂ ಅದರಲ್ಲಿದೆ. ಪ್ಯಾರಿಸ್ಸಿನಿಂದ ರೊಗೋಸನ್ ಅವಳನ್ನು ಕಾರಿನಲ್ಲಿ ವೆನಿಸ್‌ಗೆ ಕರೆದೊಯ್ಯುತ್ತಾನೆ. ವೆನಿಸ್‌ಗೆ ಹೋಗು ವಾಗ ಬಿಳಿಯರು ಹೊಲದಲ್ಲಿ ಕೆಲಸ ಮಾಡು ವುದನ್ನು ಕಂಡು, ಬಿಳಿಯರು ಇವೆಲ್ಲ ಕೆಲಸಗಳನ್ನು ಮಾಡುತ್ತಾರೆಯೇ ಎನ್ನುವ ಅಚ್ಚರಿ ಮಕೇಬಾಳಿಗೆ.
ಲಂಡನ್ನಿನ ಬಿಬಿಸಿ ದೂರದರ್ಶನದಲ್ಲಿ ಇನ್ ಟೌನ್ ಟುನೈಟ್ ಎಂಬ ಖ್ಯಾತ ಕಾರ್ಯಕ್ರಮಕ್ಕೆ ಮಕೇಬಾಳನ್ನು ಆಹ್ವಾನಿಸುತ್ತಾರೆ. ಅಲ್ಲಿ ಕಿಂಗ್‌ಕಾಂಗ್ ಒಪೇರಾಗೆ ಹಾಡಿದ ಬ್ಯಾಕ್ ಆಫ್ ದ ಮೂನ್ ಗೀತೆಯನ್ನು ಹಾಡುತ್ತಾಳೆ. ಅಂದಿನ ಕಾರ್ಯಕ್ರಮ ನೋಡಿದ ಅಮೇರಿಕೆಯ ಪ್ರಖ್ಯಾತ ನಟ, ಗಾಯಕ, ನಾಗರಿಕ ಹಕ್ಕುಗಳ ಹೋರಾಟಗಾರ ಹ್ಯಾರಿ ಬೆಲಾಫಾಂಟ್ ಇವಳನ್ನು ಅಮೇರಿಕೆಗೆ ಆಹ್ವಾನಿಸು ತ್ತಾನೆ. ಸ್ಟೀವ್ ಆಲೆನ್ ಮತ್ತು ಅಮೇರಿಕೆಯ ಖ್ಯಾತ ರಂಗಕರ್ಮಿ ಮ್ಯಾಕ್ಸ್ ಗೋರ್ಡನ್ ಕೂಡ ಮಕೇಬಾಳ ಬಗ್ಗೆ ತುಂಬಾ ಆಸಕ್ತಿ, ಉತ್ಸುಕತೆ ತೋರಿಸುತ್ತಾರೆ. ಮಕೇಬಾ ಅದೆಷ್ಟು ಮುಗ್ಧಳೆಂದರೆ ಅವರೆಲ್ಲರೂ ಬಹಳ ದೊಡ್ಡ ವ್ಯಕ್ತಿಗಳು ಎನ್ನುವುದು ಕೂಡ ಅವಳಿಗೆ ತಿಳಿದಿರುವುದಿಲ್ಲ.
ಇವರೆಲ್ಲರ ಪ್ರಯತ್ನದ ಫಲವಾಗಿ ೧೯೫೯ರ ನವೆಂಬರ್ ೩೦ರಂದು ಮಕೇಬಾ ಅಮೇರಿಕೆಗೆ ಬರುತ್ತಾಳೆ. ಬೆಲಾಫಾಂಟೆಯನ್ನು ಮಕೇಬಾ ಬಿಗ್ ಬ್ರದರ್ ಎಂದು ಕರೆಯುತ್ತಿರುತ್ತಾಳೆ. ಬೆಲಾಫಾಂಟೆಯ ಒಡನಾಟದಲ್ಲಿ ಮಕೇಬಾ ತುಂಬಾ ಕಲಿಯುತ್ತಾಳೆ ಮತ್ತು ಬೆಳೆಯುತ್ತಾಳೆ. ಬೆಲಾಫಾಂಟೆಯ ಸಹಾಯ ಇಲ್ಲದಿದ್ದಲ್ಲಿ ಅಮೇರಿಕೆಯಲ್ಲಿ ತಾನೊಬ್ಬ ದೊಡ್ಡ ತಾರೆಯಾಗುವುದು ಸಾಧ್ಯವಿರಲಿಲ್ಲ ಎಂದು ಅವಳಿಗೆ ಚೆನ್ನಾಗಿ ತಿಳಿದಿತ್ತು. ಅವಳಿಗಾಗಿ ಅವರು ಎಲ್ಲವನ್ನೂ ಮಾಡುತ್ತಾರೆ. ಸೂಕ್ಷ್ಮಸಂವೇದಿಯಾದ ಜಾನ್ ಪ್ರಾಟ್ ಎಂಬ ಒಬ್ಬ ಪ್ರತಿಭಾವಂತ ಉಡುಪು ವಿನ್ಯಾಸ ಗಾರನಿಂದ ಅವಳಿಗೆ ಹೊಂದುವಂಥ, ಆಡಂಬರ ವಿಲ್ಲದ ಉಡುಪನ್ನು ಸಿದ್ಧಪಡಿಸಿಕೊಡುತ್ತಾರೆ.
ಅವಳ ಮೊದಲ ಶೋ ಲಾಸ್ ಅಂಜಲಿಸ್‌ನ ಸ್ಟೀವ್ ಆಲೆನ್ ಲೈವ್ ಶೋ. ಅದರಲ್ಲಿ ಇನ್‌ಟು ಯಾಮ್ ಎಂಬ ಗೀತೆ ಹಾಡಬೇಕಿತ್ತು. ಏನಾದರೂ ತಪ್ಪಾಗಿಬಿಟ್ಟರೆ ಲೈವ್ ಶೋನಲ್ಲಿ ಸರಿಮಾಡಲು ಸಾಧ್ಯವಿರಲಿಲ್ಲ. ನಾನು ಹೆದರಿಕೆಯಿಂದ ನಡುಗು ತ್ತಿದ್ದೆ. ಆದರೆ ಹಿನ್ನೆಲೆಯಲ್ಲಿ ವಾದ್ಯಗಳು ಪ್ರಾರಂಭ ವಾದಂತೆ, ನಾದ ಶ್ರೀಮಂತಿಕೆಯಲ್ಲಿ ನನಗೆ ಎಲ್ಲವೂ ಮರೆಯಿತು. ನನ್ನೆದೆಯೊಳಗಿಂದ ಹೊರ ಹರಿದ ಹಾಡು ಎಲ್ಲರನ್ನೂ ತೋಯಿಸಿತು. ನನ್ನ ದೇಹ ಮನಸ್ಸುಗಳು ನನಗರಿವಿಲ್ಲದೆಯೇ ತೊನೆಯುತ್ತಿದ್ದವು.
ಮ್ಯಾಕ್ಸ್ ಗೋರ್ಡನ್ ತನ್ನ ವಿಲೇಜ್ ವ್ಯಾನ್ ಗಾರ್ಡ್ ಸಂಸ್ಥೆಯಲ್ಲಿ ಅವಳಿಗೆ ನಾಲ್ಕು ವಾರಗಳ ಕಾಂಟ್ರಾಕ್ಟ್ ನೀಡುತ್ತಾನೆ. ಅವಳು ಆಫ್ರಿಕದ ಯೋಧ ನೊಬ್ಬನನ್ನು ಕುರಿತ ಜೆಕೀಲೆ ಮಾವೆನಿ ಎನ್ನುವ ಶೋಕಗೀತೆಯನ್ನು ಹಾಡುತ್ತಿದ್ದಾಗ ನನ್ನ ಭಾವಗಳು ಜನರೆದೆಗೂ ಹರಿಯುತ್ತಿದೆ ಎಂದು ನನಗನ್ನಿಸುತ್ತಿತು. ಅದಾದ ನಂತರ ಬ್ಯಾಕ್ ಆಫ್ ದ ಮೂನ್, ಮದುವೆಯ ಹೆಣ್ಣಿನ ಖೊಸಾ ಹಾಡು ಕ್ಲಿಕ್ ಸಾಂಗ್ ಹಾಡುತ್ತಾಳೆ. ಅದರಲ್ಲಿ ನಾಲಿಗೆ ಕ್ಲಿಕ್ ಕ್ಲಿಕ್ ಎನ್ನುವ ಸದ್ದು ಮಾಡುತ್ತದೆ. ಅಂದಿನಿಂದ ಅವಳನ್ನು ಕ್ಲಿಕ್ ಕ್ಲಿಕ್ ಗರ್ಲ್ ಎಂದು ಕರೆಯಲಾರಂಭಿಸುತ್ತಾರೆ. ನಂತರ ಸೆವೆನ್ ಗುಡ್ ಇಯರ‍್ಸ್ ಎಂಬ ಯೆಡ್ಡಿಶ್ ಹಾಡನ್ನು ಹಾಡುತ್ತಾಳೆ. ಕಾರಿನಲ್ಲಿ ಮರಳಿ ಬರುವಾಗ ಬೆಲಾಫಾಂಟ್ ನ್ಯೂಯಾರ್ಕ್, ನಿನ್ನಂತಹವರನ್ನು ಕಂಡೇ ಇಲ್ಲ, ಎನ್ನುತ್ತಾರೆ.
ಹೃದಯಾಂತರಾಳದಿಂದ ಹೊಮ್ಮುತ್ತಿದ್ದ ಇವಳ ಸಹಜ, ಶ್ರೀಮಂತ ಸಂಗೀತಕ್ಕೆ ಸಿಡ್ನಿ ಪಾಯ್‌ಟಿಯರ್, ಡ್ಯೂಕ್ ಎಲ್ಲಿಂಗ್‌ಟನ್, ದಿಯಾಹೆನ್ ಕ್ಯಾರೋಲ್, ನೀನಾ ಸಿಮೋನ್, ಮೈಲ್ಸ್ ಡೇವಿಸ್, ಎಲಿಜ಼ಬೆತ್ ಟೇಲರ್ ಮುಂತಾದ ಅಮೇರಿಕೆಯ ಪ್ರತಿಭಾವಂತ ಕಲಾವಿದರೆಲ್ಲರೂ ಮಾರು ಹೋಗುತ್ತಾರೆ. ಅಧ್ಯಕ್ಷ ಜಾನ್ ಕೆನಡಿಯ ಹುಟ್ಟುಹಬ್ಬದ ದಿನ ಹಾಡಲು ಇವಳನ್ನು ಆಹ್ವಾನಿಸುತ್ತಾರೆ. ಕಾರ್ಯಕ್ರಮದ ನಂತರ ಕೆನಡಿ ಇವಳನ್ನು ಮನೆಗೆ ಕರೆಸಿಕೊಂಡು I ರಿusಣ ತಿಚಿಟಿಣeಜ ಥಿou ಣo ಞಟಿoತಿ ಒiss ಒಚಿಞebಚಿ hoತಿ veಡಿಥಿ gಟಚಿಜ ಚಿಟಿಜ ಠಿಡಿouಜ I ಚಿm ಣo hಚಿve ಚಿಟಿ ಂಜಿಡಿiಛಿಚಿಟಿ ಚಿಡಿಣisಣ ಠಿಚಿಡಿಣiಛಿiಠಿಚಿಣe iಟಿ mಥಿ biಡಿಣhಜಚಿಥಿ ಛಿeಟebಡಿಚಿಣioಟಿs. ಎನ್ನುತ್ತಾರೆ. ಆದರೆ ಮಕೇಬಾ ಮಾತ್ರ ಯಾರಿಗಾಗಿಯೂ ಬದಲಾಗದೆ, ತಾನಾಗಿಯೇ ಉಳಿದಿದ್ದಳು. ಅವಳು ಉಳಿದವರನ್ನೂ ಅದೆಷ್ಟು ಪ್ರಭಾವಿಸಿದಳೆಂದರೆ, ಉಳಿದ ಆಫ್ರಿಕನ್ನರೂ ಮೇಕಪ್ ಮಾಡಿಕೊಳ್ಳುವುದು ಮತ್ತು ಗುಂಗುರು ಕೂದಲನ್ನು ನೇರ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಟ್ಟರು.
ತೆರೆದ ಮನಸ್ಸಿನ ಮೀರಿಯಂ ಸದಾ ಬೇರೆ ಕಲಾವಿದರಿಂದ ಕಲಿಯಲು ಪ್ರಯತ್ನಿಸುತ್ತಿದ್ದಳು. ಜಾನಿ ಮ್ಯಾಥಿಸ್ ಮತ್ತು ಕಾರ್ಮನ್ ಮೆಕ್‌ರೇ ಇವರಿಬ್ಬರೂ ಮೈಕನ್ನು ನಿರ್ವಹಿಸುವ ರೀತಿ ಅದ್ಭುತ. ಅದರಲ್ಲೂ ಕಾರ್ಮನ್ ಮೆಕ್‌ರೇ ಮೈಕಿನಲ್ಲಿ ಹಾಡುವಾಗ ಪ್ರತಿಯೊಂದು ಪದವೂ ತುಂಬಾ ಸ್ಪಷ್ಟವಾಗಿ, ಅದರ ಎಲ್ಲಾ ಏರಿಳಿತಗಳು ಮತ್ತು ಸೂಕ್ಷ್ಮದ ಜೊತೆಗೆ ಕೇಳುತ್ತಿತ್ತಂತೆ. ತಾನು ಅವರಿಂದ ಅದನ್ನು ಕಲಿತೆ ಎನ್ನುತ್ತಾರೆ ಮಕೇಬಾ. ಛಾಡ್ ಮಿಷಲ್ ಟ್ರಯೋ ಎಂಬ ತುಂಬಾ ಪ್ರತಿಭಾವಂತ ಜಾನಪದ ಗಾಯಕರ ಗುಂಪಿಗೆ ಮಕೇಬಾಳನ್ನು ವಿಲಿಯಂ ಮಾರಿಸ್ ಪರಿಚಯಿಸುತ್ತಾನೆ.
ಮಕೇಬಳಿಗೆ ನಮೀಬಿಯಾವನ್ನು ಸ್ವತಂತ್ರ ಗೊಳಿಸಲು ವಿಶ್ವಸಂಸ್ಥೆಯಲ್ಲಿ ಕಾರ್ಯನಿರತನಾಗಿರುವ ಮಬುರುಂಬಾ ಅವರ ಪರಿಚಯವಾಗುತ್ತದೆ. ಅವರ ಮೂಲಕ ಮಕೇಬಾ ವಿಶ್ವಸಂಸ್ಥೆಗೆ ಕಾಲಿಡುತ್ತಾಳೆ. ಇತ್ತ ಆಫ್ರಿಕಾದ ಷಾರ್ಪೆ ವಿಲ್ಲೆಯಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ನಿರಾಯುಧರಾದ ಪ್ರತಿಭಟನಕಾರರ ಮೇಲೆ ಅಧಿಕಾರಿಗಳು ಗುಂಡು ಹಾರಿಸುತ್ತಾರೆ. ನೂರಾರು ಜನರು ಸತ್ತು, ಹಲವರು ಗಂಭೀರವಾಗಿ ಗಾಯಗೊಳ್ಳುತ್ತಾರೆ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸನ್ನು ನಿಷೇಧಿಸುತ್ತಾರೆ. ಆಫ್ರಿಕಾದ ಸ್ವಾತಂತ್ರ ಚಳುವಳಿಯ ಕಾವು ಅಮೇರಿಕೆಗೂ ತಟ್ಟುತ್ತದೆ. ಆಫ್ರಿಕಾ ಕುರಿತು ಅಮೇರಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಆಗ ಮಕೇಬಾ ಬೆಲಾಫಾಂಟೆಯವರ ನೆರವಿನಿಂದ ಅಮೇರಿಕೆಯ ವಿಭಿನ್ನ ಕಾಲೇಜುಗಳಲ್ಲಿ ಹಾಡುತ್ತಾಳೆ. ವಿದ್ಯಾರ್ಥಿಗಳ ಜೊತೆ ಮಾತನಾಡಿ ಆಫ್ರಿಕಾದ ಬಗ್ಗೆ ಇರುವ ವಿಚಿತ್ರವಾದ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತಾಳೆ. ಆಗ ದಕ್ಷಿಣ ಆಫ್ರಿಕಾದ ಸರ್ಕಾರ ಮಕೇಬಾಳನ್ನು ಬಹಿಷ್ಕರಿಸುತ್ತದೆ. ಅವಳ ವೀಸಾ ರದ್ದುಪಡಿಸುತ್ತದೆ. ತಾಯಿ ತೀರಿ ಹೋದಾ ಗಲೂ ಅವಳಿಗೆ ಹೋಗಲು ಅನುಮತಿ ಕೊಡುವು ದಿಲ್ಲ. ೩೦ ವರ್ಷಗಳು ಪರಕೀಯತೆಯ ಭಾವದಲ್ಲಿ ತೀವ್ರವಾಗಿ ಬಳಲುತ್ತಾಳೆ.
ಮಕೇಬಾಳಿಗೆ ನಿಧಾನವಾಗಿ ಅಮೇರಿಕೆಯ ಒಳಗಿದ್ದ ವರ್ಣದ್ವೇಷದ ಪರಿಚಯವಾಗುತ್ತದೆ. ಅಟ್ಲಾಂಟಾದಲ್ಲಿ ಜನಾಂಗೀಯತೆಯ ಕಹಿಯ ಅನು ಭವವಾಗುತ್ತದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ನ ಪರಿಚಯವಾಗುತ್ತದೆ. ಅವಳು ಅಮೇರಿಕಾ ಮತ್ತು ದಕ್ಷಿಣ ಆಫ್ರಿಕದ ನಡುವಿನ ವ್ಯತ್ಯಾಸವನ್ನು ಒಂದೇ ಮಾತಿನಲ್ಲಿ ಹೇಳುತ್ತಾಳೆ. ಅಮೇರಿಕದಲ್ಲಿ ಜನಾಂಗೀಯತೆ ಇದೆ. ಆದರೆ ಅಮೇರಿಕೆಯ ಸಂವಿಧಾನ ಅದನ್ನು ಸಮರ್ಥಿಸು ವುದಿಲ್ಲ. ಆದರೆ ದಕ್ಷಿಣ ಆಫ್ರಿಕಾದ ಸಂವಿಧಾನ ಅದನ್ನು ಸಮರ್ಥಿಸುತ್ತದೆ. ತಾನು ಮಾಡಬೇಕಾದ್ದು ತುಂಬಾ ಇದೆ ಎಂದು ಮಕೇಬಾಳಿಗೆ ಅನ್ನಿಸುವುದಕ್ಕೆ ಪ್ರಾರಂಭವಾಗುತ್ತದೆ.
ಕೆನ್ಯಾ ಮುಂತಾದ ಕಡೆಗಳಿಂದ ಬರುವ ಆಫ್ರಿಕನ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ವಸತಿ ಕಲ್ಪಿಸಲು ನಿಧಿಸಂಗ್ರಹಣೆಗೆ ಸಹಾಯಾರ್ಥ ಪ್ರದರ್ಶನ ನೀಡಿ ಟಾಂ ಎಂಬೋಯ ಅವರಿಗೆ ಸಹಾಯ ಮಾಡು ತ್ತಾಳೆ. ಮಾವ್ ಮಾವ್ ಅನಾಥರಿಗಾಗಿ ಹಣ ಸಂಗ್ರಹಿಸಲು ಆಫ್ರಿಕೆಗೆ ಅವಳನ್ನು ಆಹ್ವಾನಿಸುತ್ತಾರೆ. ಆದರೆ ವೀಸಾ ಇಲ್ಲದೆ ಹೋಗಲು ಸಾಧ್ಯವಿರುವುದಿಲ್ಲ. ಟ್ಯಾಂಜೀನಿಯಾದ ಅಧ್ಯಕ್ಷ ಜೂಲಿಯಸ್ ಎನ್ ನಯರೇರೆ ಅಮೇರಿಕಾದಿಂದ ಹೊರಗೆ ಹೋಗಲು ಸಾಧ್ಯವಾಗುವಂತಹ ವಿಶೇಷ ಪಾಸ್‌ಪೋರ್ಟನ್ನು ಮಕೇಬಾಳಿಗೆ ನೀಡುತ್ತಾನೆ. ಎಷ್ಟೋ ದಿನಗಳ ನಂತರ ಆಫ್ರಿಕಾದ ನೆಲದಲ್ಲಿ ಕಾಲಿಡುವುದು ಅವಳಲ್ಲಿ ಪುಳಕ ಹುಟ್ಟಿಸುತ್ತದೆ. ಅಲ್ಲಿ ಕಿಲಿಮಂಜಾರೋ ಪರ್ವತದ ಬುಡದಲ್ಲಿ ನಿಂತ ಮಕೇಬಾ ನನ್ನ ಹಾಡು ಮತ್ತು ಹೋರಾಟ ಎರಡನ್ನೂ ಮುಂದುವರಿಸುತ್ತೇನೆ. ನನಗೆ ಮತ್ತು ಈಗಷ್ಟೇ ರೂಪುಗೊಳ್ಳುತ್ತಿರುವ ಆಫ್ರಿಕಾದ ದೇಶಗಳಿಗೆ ಸಮಾನವಾದ ಅಂಶವೊಂದಿದೆ. ಅದು ನಮ್ಮ ಧ್ವನಿ. ಅದನ್ನು ಬಳಸಿಕೊಂಡು ಏನು ಮಾಡಬಹುದು ಎನ್ನುವುದನ್ನು ನಾವಿಬ್ಬರೂ ಹುಡುಕುತ್ತಿದ್ದೇವೆ, ಎನ್ನುತ್ತಾಳೆ.
ಅವಳಿಗೆ ಯುನೈಟೆಡ್ ನೇಷನ್ಸ್‌ನ ೧೧ ಜನರ ಸ್ಪೆಷಲ್ ಕಮಿಟಿ ಫಾರ್ ಅಪಾರ್ಥೀಡ್ ಮುಂದೆ ಆಫ್ರಿಕಾದ ಪರವಾಗಿ ಮಾತನಾಡುವ ಅವಕಾಶ ದೊರಕುತ್ತದೆ. ಅಲ್ಲಿ ಮಕೇಬಾ ವಸಾಹತು ಸರ್ಕಾರ ನನ್ನ ಇಡೀ ದೇಶವನ್ನೇ ಒಂದು ಜೈಲನ್ನಾಗಿ ಮಾಡಿದೆ. ’ಈ ಭಯಂಕರ ಕ್ರೌರ್ಯವನ್ನು ನಿಲ್ಲಿಸಿ,’ ಎಂದು ಮನುಷ್ಯರೆಲ್ಲರೂ ಧ್ವನಿ ಎತ್ತಬೇಕಾದ ಕಾಲ ಬಂದಿದೆ. ವಿಶ್ವಸಂಸ್ಥೆ ದಕ್ಷಿಣ ಆಫ್ರಿಕಾದ ಸರ್ಕಾರ ವನ್ನು ನಿಷೇಧಿಸಬೇಕು. ಅಲ್ಲಿಗೆ ಆಯುಧಗಳ ಸರಬ ರಾಜನ್ನು ನಿಲ್ಲಿಸಬೇಕು. ಏಕೆಂದರೆ ಈ ಆಯುಧ ಗಳನ್ನು ನಿರಾಯುಧರಾದ ಆಫ್ರಿಕಾದ ಹೆಂಗಸರು ಮತ್ತು ಮಕ್ಕಳ ಮೇಲೆ ಬಳಸುತ್ತಾರೆ, ಎಂದು ದಿಟ್ಟವಾಗಿ ಮಾತನಾಡಿದ್ದಕ್ಕೆ ದಕ್ಷಿಣ ಆಫ್ರಿಕಾದ ಸರ್ಕಾರ ಅವಳ ಧ್ವನಿಮುದ್ರಿಕೆಗಳ ಮಾರಾಟವನ್ನು ನಿಷೇಧಿಸುತ್ತದೆ. ಆದರೆ ಜನ ಅದನ್ನು ಬೇರೆ ಬೇರೆ ರೀತಿಗಳಲ್ಲಿ ಕದ್ದು ಕೇಳಿ ಅವಳೊಂದಿಗೆ ತಮ್ಮ ಸ್ವದೇಶ ಪ್ರೇಮವನ್ನು ಹಂಚಿಕೊಳ್ಳುತ್ತಾರೆ. ೧೯೬೫ರಲ್ಲಿ ಂಟಿ ಇveಟಿiಟಿg ತಿiಣh ಃeಟಚಿಜಿoಟಿಣe/ಒಚಿಞebಚಿ ಎಂಬ ಅತ್ಯುತ್ತಮ ಜಾನಪದಗೀತೆಗಳ ಆಲ್ಬಂಗಾಗಿ ಮಕೇಬಾಗೆ ಗ್ರಾಮಿ ಪ್ರಶಸ್ತಿ ನೀಡುತ್ತಾರೆ. ಇದನ್ನು ಪಡೆದ ಮೊತ್ತಮೊದಲ ಆಫ್ರಿಕಾದ ಮಹಿಳೆ ಮಕೇಬಾ.
೧೯೬೮ರಲ್ಲಿ ಅಮೆರಿಕೆಯ ಬ್ಲ್ಯಾಕ್ ಪ್ಯಾಂಥರ‍್ಸ್ ಗುಂಪಿನ ಕ್ರಾಂತಿಕಾರಿ ನಾಯಕ ಸ್ಟೋಕ್ಲಿ ಕಾರ್ಮಿಕಲ್ ಜೊತೆಗಿನ ವಿವಾಹದಿಂದ ಅಮೆರಿಕೆಯಲ್ಲಿನ ಅವಳ ಎಲ್ಲಾ ಕಾರ್ಯಕ್ರಮಗಳೂ ರದ್ದಾಗುತ್ತವೆ. ಆದರೆ ಮಕೇಬಾ ಸ್ವಲ್ಪವೂ ವಿಚಲಿತಳಾಗುವುದಿಲ್ಲ. ಆಫ್ರಿಕಾದ ಉದ್ದಗಲಕ್ಕೂ ಸಂಚರಿಸಿ ಕಾರ್ಯಕ್ರಮಗಳನ್ನು ನೀಡುತ್ತಾ ಜನರಲ್ಲಿ ಹುರುಪು ಹುಮ್ಮಸ್ಸನ್ನು ತುಂಬು ವುದನ್ನು ಮುಂದುವರಿಸುತ್ತಾಳೆ.
ವೈಯಕ್ತಿಕ ಬದುಕಿನ ದುರಂತಗಳು ಮಕೇಬಾಳ ಹಾಡಿಗೆ ಎಂದೂ ಅಡ್ಡಿಯಾಗಲಿಲ್ಲ. ೩೬ರ ಹರೆಯದ ಮಗಳು ಬೋಂಗಿ ೧೯೮೫ರಲ್ಲಿ ತೀರಿಹೋದಾಗ ಮೊಮ್ಮಕ್ಕಳ ಹೊಣೆ ಮಕೇಬಾಳ ಹೆಗಲೇರುತ್ತದೆ. ಮಗಳನ್ನು ಹೂಳಲು ಕಾಫಿನ್ ಕೊಳ್ಳಲು ಅವಳ ಬಳಿ ಹಣವಿರುವುದಿಲ್ಲ. ಎದೆ ಬಿರಿದುಹೋಗುವ ಸಂಕಟದಲ್ಲಿ ಮಕೇಬಾ ಮಗಳನ್ನು ಹೂಳುತ್ತಾಳೆ. ಕ್ಯಾನ್ಸರ್, ಆರ್ಥರೈಟಿಸ್ ಇವುಗಳಿಂದ ಅಪಾರ ಹಿಂಸೆ ಅನುಭವಿಸುತ್ತಿದ್ದರೂ ಅವಳ ಅದಮ್ಯ ಚೈತನ್ಯ ಮಾತ್ರ ಹಾಗೆಯೇ ಇತ್ತು. ೩೦ ವರ್ಷಗಳ ನಂತರ ೧೯೯೧ರಲ್ಲಿ ನೆಲ್ಸನ್ ಮಂಡೇಲಾ ಅವರಿಂದಾಗಿ ಮಕೇಬಾ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಮರಳುತ್ತಾಳೆ.
ಬದುಕಿಡೀ ದಮನಿತರ ನೋವನ್ನೇ ಹಾಡಿದ ಮಕೇಬಾ ಅವರಿಗಾಗಿ ಹಾಡುತ್ತಲೇ ತೀರಿಹೋಗುತ್ತಾಳೆ. ಇಟಲಿಯಲ್ಲಿ ಸಂಘಟಿತ ಕೊಲೆ ಮತ್ತು ಅಪರಾಧಗಳ ವಿರುದ್ಧ ಬರೆಯುತ್ತಿದ್ದ, ಹಾಗಾಗಿ ಕೊಲೆ ಬೆದರಿಕೆ ಎದುರಿಸುತ್ತಿದ್ದ ರಾಬರ್ಟ್ ಸವಿಯಾನೋಗೆ ನೈತಿಕ ಬೆಂಬಲ ನೀಡಲು ಇಟಲಿಯ ನೇಪಲ್ಸ್ ಸಮೀಪದ ಕ್ಯಾಸ್ಟೆಲ್ ವಾಲ್‌ಟರ‍್ನೋ ನಗರದಲ್ಲಿ ನವೆಂಬರ್ ಹತ್ತರಂದು ಹಾಡುತ್ತಿದ್ದಳು. ಸಂತೋಷದಿಂದ ಹಾಡಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಾಗ ಹೃದಯಾ ಘಾತದಿಂದ ಕುಸಿದು ಬಿದ್ದು ಬದುಕಿಗೆ ವಿದಾಯ ಹಾಡಿದಳು. ಬದುಕಿದ್ದಾಗಲೂ ಮಕೇಬಾಗೆ ಬದುಕು, ಹಾಡು, ವೇದಿಕೆ ಎಂದೂ ಬೇರೆ ಆಗಿರಲಿಲ್ಲ. ಸಾವಿನಲ್ಲಿಯೂ ಅದು ಬೇರೆ ಆಗಲಿಲ್ಲ.