ಮಕ್ಕಳಿಗಾಗಿ ಅರ್ಥಶಾಸ್ತ್ರ

ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ಥರ್ ದುಫ್ಲೊ ಪೂರ್ ಎಕನಾಮಿಕ್ಸ್ – ರಿಥಿಂಕಿಂಗ್ ಪಾವರ್ಟಿ ಅಂಡ್ ವೇ ಟು ಎಂಡ್ ಇಟ್ ಪುಸ್ತಕವನ್ನು ೨೦೧೧ರಲ್ಲಿ ಪ್ರಕಟಿಸಿದ್ದರು. ಅದರ ಹೆಸರೇ ಸೂಚಿಸುವಂತೆ ಅದರಲ್ಲಿ ಬಡತನವನ್ನು ಕುರಿತಂತೆ ಮರುಚಿಂತನೆಯನ್ನು ಮಾಡಲಾಗಿದೆ. ಜೊತೆಗೆ ಅದನ್ನು ಕೊನೆಗಾಣಿಸುವ ಬಗೆಯೂ ಅದರಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪೂರ್ ಅನ್ನುವ ಪದ ಇದು ಬಡತನದ ಬಗೆಗಿನ ಪುಸ್ತಕ ಅನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಬಡತನವನ್ನು ಕುರಿತಂತೆ ಅರ್ಥಶಾಸ್ತ್ರದ ದಾರಿದ್ರ್ಯವನ್ನೂ ತೋರಿಸುತ್ತದೆ. ಅವರು ಹೇಳುವಂತೆ ಬಡತನವನ್ನು ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲೇ ಸಮಸ್ಯೆಯಿದೆ. ಬಡವರ ಬದುಕಿನ ಸಂಕಷ್ಟವನ್ನು ಅದು ಗಮನಿಸುವುದಿಲ್ಲ. ಬದಲಿಗೆ ಬಡವರು ಬದಕಲು ನಡೆಸುತ್ತಿರುವ ಹೆಣಗಾಟಕ್ಕೆ ಅವರೇ ಕಾರಣ ಅನ್ನೋ ತರ ಮಾತನಾಡುತ್ತಿವೆ. ದುಫ್ಲೊ ಸಂದರ್ಶನವೊಂದರಲ್ಲಿ ಹೇಳಿರುವಂತೆ ಬಡವರ ಬದುಕು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುಂಬಾ ತಪ್ಪು ಗ್ರಹಿಕೆಗಳಿವೆ. ದುರಂತವೆಂದರೆ ಇಂದು ಬಡತನಕ್ಕೆ ಸಂಬಂಧಿಸಿದ ಬಹುತೇಕ ನೀತಿಗಳು ಇಂತಹ ತಪ್ಪು ಗ್ರಹಿಕೆಗಳನ್ನು ಆಧರಿಸಿಯೇ ರೂಪುಗೊಂಡಿವೆ. ಬಡವರ ಬಗ್ಗೆ ಇರುವ ಹಲವು ಪೂರ್ವಗ್ರಹಗಳನ್ನು ಅವರು ಪುಸ್ತಕದಲ್ಲಿ ಪರಿಶೀಲಿಸಿದ್ದಾರೆ.
ಬಡತನದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನಾಗಲಿ, ಅದರಿಂದ ಮೂಡಿಬಂದ ನೀತಿಗಳನ್ನಾಗಲಿ ತಪ್ಪು ಎಂದು ತಳ್ಳಿಹಾಕುವುದು ಇವರ ಉದ್ದೇಶವಲ್ಲ. ಅವರಿಗಿರುವ ಬೇಸರ ಅಂದರೆ ಹಲವು ಅಧ್ಯಯನಗಳಲ್ಲಿ ಬಡವರು ಕ್ಯಾರಿಕೇಚೆರುಗಳಾಗಿ ಚಿತ್ರಿತರಾಗಿದ್ದಾರೆ ಅನ್ನುವುದು. ಬಡವರೂ ಉಳಿದವರಂತೆಯೇ ಪ್ರತಿಭೆ, ಶಕ್ತಿ, ದೌರ್ಬಲ್ಯ, ಮಿತಿ ಎಲ್ಲಾ ಇರುವ ಮನುಷ್ಯರು. ಅವರೆಲ್ಲಾ ಮಹಾನ್ ಪ್ರತಿಭಾವಂತರು, ಹೂಡುವುದಕ್ಕೆ ಹಣ ಇಲ್ಲ ಅಷ್ಟೆ. ಇದ್ದಿದ್ದರೆ ಅವರೆಲ್ಲಾ ಬಿಲ್ ಗೇಟ್ಸ್ ಆಗಿಬಿಡುತ್ತಾರೆ ಅಂತ ನೋಡುವಷ್ಟೇ ಅವರೆಲ್ಲಾ ದಡ್ಡರು ಅಂತ ನೋಡುವುದು ತಪ್ಪು. ದುಫ್ಲೊ ಹೇಳುವಂತೆ ಅವರಲ್ಲೂ ಎಲ್ಲಾ ಥರದವರಿರುತ್ತಾರೆ. ಕೆಲವರಿಗೆ ಹಾಗೆ ಬೆಳೆಯುವ ಸಾಮರ್ಥ್ಯವೂ ಇರುತ್ತದೆ. ಹಾಗೆಯೇ ಕೆಲವರಿಗೆ ಸಾಮರ್ಥ್ಯವಿರುವುದಿಲ್ಲ. ಎಲ್ಲರಿಗೂ ರಿಸ್ಕ್ ತೆಗೆದುಕೊಳ್ಳುವ ಮನಸ್ಥಿತಿಯೂ ಇರುವುದಿಲ್ಲ. ಬಹುಶಃ ಬಡತನವೇ ಕೆಲವರನ್ನು ರಿಸ್ಕ್ ತೆಗೆದುಕೊಳ್ಳಲು ಒತ್ತಾಯಿಸಿದೆ. ಇಲ್ಲದಿದ್ದರೆ ಅವರಲ್ಲೂ ಹಲವರು ಆರಾಮಾಗಿ ಇರೋದಕ್ಕೆ ಇಷ್ಟ ಪಡುತ್ತಿದ್ದರು.
ನಮ್ಮನ್ನು ಕಾಡುತ್ತಿರುವ ಹಲವು ಪ್ರಮುಖ ಸಮಸ್ಯೆಗಳನ್ನು ನೋಡುವ ಬಗೆಯನ್ನು ಬದಲಿಸಿಕೊಳ್ಳಲು ಅಭಿಜಿತ್ ಹಾಗೂ ದುಫ್ಲೊ ನಮ್ಮನ್ನು ಒತ್ತಾಯಿಸುತ್ತಾರೆ. ಅದು ತುಂಬಾ ಮುಖ್ಯ. ನಮ್ಮ ಎಲ್ಲಾ ಸಮಸ್ಯೆಗಳಿಗೂ ಒಂದು ಸಾರ್ವತ್ರಿಕವಾದ ಪರಿಹಾರವಿದೆ ಎಂದು ಭಾವಿಸುವುದರಲ್ಲೇ ಸಮಸ್ಯೆಯಿದೆ ಎನ್ನುವುದು ಅವರ ನಿಲುವು. ಉದಾಹರಣೆಗೆ ಬಡತನವನ್ನೇ ಗಮನಿಸಿ. ಸಂಶೋಧಕರು ತಮ್ಮ ಕೊಠಡಿಗಳಿಂದ ಹೊರಬಂದು ವಾಸ್ತವ ಜಗತ್ತನ್ನು ಗಮನಿಸಿದರೆ ಬಡವರು ಅನುಭವಿಸುತ್ತಿರುವ ಹಲವು ಸಮಸ್ಯೆಗಳು ಕಾಣುತ್ತವೆ. ಬಡತನವನ್ನು ಒಂದು ದೊಡ್ಡ ಸಮಸ್ಯೆಯಾಗಿ ನೋಡದೆ ಈ ನೂರಾರು ಪರಿಹರಿಸಬಹುದಾದ ಸಣ್ಣ ಸಣ್ಣ ಸಮಸ್ಯೆಗಳ ಮೊತ್ತವಾಗಿ ನೋಡುವುದಕ್ಕೆ ಸಾಧ್ಯವಾಗಬೇಕು. ಆಗ ನಮಗೆ ಪರಿಹರಿಸಲಾಗದ ಭೂತಾಕಾರದ ಸಮಸ್ಯೆ ಪರಿಹಾರ ಸಾಧ್ಯವಾಗುವ ಹಲವು ಸಣ್ಣ ಸಣ್ಣ ಸಮಸ್ಯೆಗಳಾಗಿ ಕಾಣುತ್ತವೆ. ಆರೋಗ್ಯ, ಶಿಕ್ಷಣ, ಹಣಕಾಸು, ಉದ್ಯಮಶೀಲತೆ ಹೀಗೆ ಹಲವು ಸಮಸ್ಯೆಗಳು ಸೇರಿಕೊಂಡು ಬಡತನದ ಸಮಸ್ಯೆಯಾಗಿದೆ ಅನ್ನುವುದು ತಿಳಿಯುತ್ತದೆ. ಈ ಸಮಸ್ಯೆಗಳನ್ನು ಇನ್ನೊಂದಿಷ್ಟು ಸೂಕ್ಷ್ಮವಾಗಿ ನೋಡಿದರೆ ಅವು ಮತ್ತೆ ಹಲವು ಸಣ್ಣ ಸಣ್ಣ ಸಮಸ್ಯೆಗಳ ಮೊತ್ತವಾಗಿ ಕಾಣುತ್ತವೆ. ಆರೋಗ್ಯದ ಸಮಸ್ಯೆ ಆಗ ಪೌಷ್ಠಿಕಾಂಶದ ಕೊರತೆ, ಶಿಶು ಮರಣ, ಆಮಶಂಕೆ, ಲಸಿಕೆ ಇತ್ಯಾದಿ ಬಿಡಿಸಿಕೊಳ್ಳಬಹುದಾದ ಸಮಸ್ಯೆಗಳಾಗಿ ಕಾಣುತ್ತದೆ. ಇವುಗಳಲ್ಲಿ ಎಷ್ಟೋ ಸಮಸ್ಯೆಗಳನ್ನು ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗದೇ ಹೋಗಬಹುದು. ಆದರೂ ಪರಿಹಾರದ ಕಡೆ ಸಣ್ಣ ಸಣ್ಣ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುತ್ತಾ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಹಾಗೆಯೇ ಇಟ್ಟ ಹೆಜ್ಜೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ, ಜವಾಬ್ದಾರಿಯಿಂದ ಮುಂದುವರಿಯುವುದಕ್ಕೂ ಆಗುತ್ತದೆ. ಇಂತಹ ಬಿಡಿ ಬಿಡಿ ಸಮಸ್ಯೆಗಳಿಗೆ ಸಿಕ್ಕ ಉತ್ತರ ಒಟ್ಟಾರೆಯಾಗಿ ಬಡತನಕ್ಕೆ ಒಂದು ಉತ್ತರವನ್ನು ಸೂಚಿಸಬಹುದು.
ಬ್ಯಾನರ್ಜಿ ಹಾಗೂ ದುಫ್ಲೊ ತಮ್ಮ ಪುಸ್ತಕದಲ್ಲಿ ಬಡತನಕ್ಕೆ ಕಾರಣವಾದ ಇಂತಹ ಹಲವು ಮುಖ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಅವಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಹಲವು ಅಧ್ಯಯನಗಳನ್ನು ಹಾಗೂ ಸಿದ್ದಾಂತಗಳನ್ನು ಪರಿಶೀಲಿಸುವ ಜೊತೆಗೆ ಅದಕ್ಕೆ ಪೂರಕವಾಗಿ ಜನರ ವಾಸ್ತವ ಬದುಕನ್ನು ಪರಿಶೀಲಿಸುವ ಕೆಲಸವನ್ನೂ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮೂಡಿಬಂದ ಗ್ರಹಿಕೆಗಳನ್ನು ಪ್ರಯೋಗಗಳ ಮೂಲಕ ಪರೀಕ್ಷಿಸಿ ನೋಡುವ ಪ್ರಯತ್ನವನ್ನೂ ಮಾಡಿದ್ದಾರೆ. ಇವರು ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸುವ ರ್ಯಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ -ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳ ವಿಧಾನವನ್ನು ಅರ್ಥಶಾಸ್ತ್ರಕ್ಕೆ ತಂದಿದ್ದಾರೆ. ಈ ವಿಧಾನದ ಬಗ್ಗೆ ಹಲವು ಟೀಕೆಗಳಿವೆ. ಜೀನ್ ಡ್ರೀಜ್ ಅದನ್ನು ಅಂತಿಮ ಕ್ರಮವೆಂದಾಗಲಿ ಅಥವಾ ಶ್ರೇಷ್ಠ ಕ್ರಮವೆಂದಾಗಲಿ ಪರಿಗಣಿಸುವುದನ್ನು ವಿರೋಧಿಸುತ್ತಾರೆ. ಆದರೆ ಕನಿಷ್ಠ ಕೆಲವು ಸಂದರ್ಭದಲ್ಲಿ ಅದೊಂದು ಉಪಯುಕ್ತ ಕ್ರಮವೆಂಬುದನ್ನು ಒಪ್ಪಿಕೊಳ್ಳಬಹುದು. ಬಡತನವನ್ನು ಕುರಿತಂತೆ ಪರ್ಯಾಯವಾದ ನಿಲುವು ಸಾಧ್ಯ ಅಂತ ಒಪ್ಪಿಕೊಂಡರೂ ಬಡತನವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಕಡೆಗಣಿಸಲಾಗದ ಕೃತಿ ಅನ್ನುವುದರಲ್ಲಿ ಸಂದೇಹವಿಲ್ಲ.
ದುಫ್ಲೋ ಹಾಗೂ ಬ್ಯಾನರ್ಜಿಯವರಿಗೆ ಕಥೆ ಹೇಳುವ ಗುಣ ಇದೆ. ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಅವರು ಬಡತನದ ಚಿತ್ರವನ್ನು ಕಟ್ಟಿಕೊಡುವುದಕ್ಕೆ ಹಲವು ಘಟನೆಗಳನ್ನು, ಪ್ರಸಂಗಗಳನ್ನು ಬಳಸಿಕೊಂಡಿದ್ದಾರೆ. ಅವು ನಮಗೆ ಬಡತನದ ಹಲವು ಆಯಾಮಗಳನ್ನು ತಿಳಿಸುತ್ತವೆ. ಆ ಘಟನೆಗಳು ನಮ್ಮನ್ನು ಕಾಡುತ್ತವೆ. ಅವರಿಗೆ ತಮ್ಮ ಅಧ್ಯಯನವನ್ನು ಕೇವಲ ಅಕೆಡೆಮಿಕ್ ವಲಯದಲ್ಲಿ ಮಾತ್ರವಲ್ಲ ಎಲ್ಲರೊಂದಿಗೂ ಹಂಚಿಕೊಳ್ಳಬೇಕೆಂಬ ಕಾಳಜಿ ಇದೆ. ಮಕ್ಕಳಿಗೂ ಈ ವಿಚಾರಗಳು ತಿಳಿಯಬೇಕು ಅನ್ನುವುದು ಅವರ ವಿಚಾರ. ಮೂಲ ಪುಸ್ತಕ ಬಂದಾಗಲೇ ಮಕ್ಕಳಿಗಾಗಿ ಈ ಪುಸ್ತಕವನ್ನು ಪುನರ್‌ರಚಿಸಬೇಕು ಅಂದುಕೊಂಡಿದ್ದರಂತೆ. ಈಗ ದುಫ್ಲೋ ಅವರ ಪೂರ್ ಎಕಾನಮಿಕ್ಸ್ ಫಾರ್ ಕಿಡ್ಸ್ ಪುಸ್ತಕ ಹೊರಬಂದಿದೆ. ಇಂತಹ ಪ್ರಯತ್ನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವರ ಮೂಲ ಅಧ್ಯಯನದಲ್ಲಿ ಬರುವ ಎಲ್ಲಾ ವಿಷಯಗಳನ್ನು ಮಕ್ಕಳ ಪುಸ್ತಕದಲ್ಲಿ ತರಲು ಸಾಧ್ಯವಾಗುವುದಿಲ್ಲ. ಕೆಲವನ್ನು ಹೆಕ್ಕಿಕೊಳ್ಳಬೇಕಾಗುತ್ತದೆ.
ಇನ್ನೊಂದು ಸಮಸ್ಯೆ ಅಂದರೆ ಬಡವರ ಬದುಕಿನ ಎಷ್ಟೋ ಅಂಶಗಳು ನಿರ್ದಿಷ್ಟ ಸಂಸ್ಕೃತಿಯೊಂದಿಗೆ ತೆಕ್ಕೆ ಹಾಕಿಕೊಂಡಿರುತ್ತವೆ. ಕೆಲವು ನಿರ್ದಿಷ್ಟ ಭೂಪ್ರದೇಶಕ್ಕೆ ಸಂಬಂಧಿಸಿರುತ್ತದೆ. ಅವುಗಳಲ್ಲಿ ಹೆಚ್ಚು ಸಾರ್ವತ್ರಿಕವಾದ ಸಮಸ್ಯೆಗಳನ್ನು ಆರಿಸಿಕೊಳ್ಳಬೇಕು. ಇಂತಹ ಹಲವು ಸಾರ್ವತ್ರಿಕವಾದ ಸಮಸ್ಯೆಗಳಿಗೆ ಜಾಗತಿಕವಾಗಿ ಒಂದೇ ರೀತಿಯ ಪರಿಹಾರವೂ ಸಾಧ್ಯವಾಗುತ್ತದೆ. ಅಂದರೆ ಒಂದು ಕಡೆ ಕಂಡುಕೊಂಡ ಪರಿಹಾರವನ್ನು ಇನ್ನೊಂದೆಡೆ ಪ್ರಯೋಗಿಸುವುದಕ್ಕೂ ಸಾಧ್ಯವಾಗುತ್ತದೆ.
ಜೊತೆಗೆ ಮಕ್ಕಳ ಪುಸ್ತಕ ಅಂದರೆ ಚಿತ್ರಗಳು ಬೇಕು. ಚಿತ್ರಗಳು ಪ್ರತ್ಯೇಕವಾಗಿ ನಿಲ್ಲಬಾರದು. ವಿವರಣೆಗೆ, ಉದ್ದೇಶಕ್ಕೆ ಪೂರಕವಾಗಿರಬೇಕು. ಈ ದೆಸೆಯಲ್ಲಿ ಕಲಾವಿದೆ ಶಾಯೆನ್ ಒಲೀವ್ಹಿಯೆ ಒಳ್ಳೆಯ ಕೆಲಸ ಮಾಡಿದ್ದಾರೆ. ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಇಲ್ಲಿ ಕಥೆ ಹಾಗೂ ಚಿತ್ರಗಳು ಒಂದಕ್ಕೊಂದು ಪೂರಕವಾಗಿದೆ. ಡಫ್ಲೊ ಹೇಳುವಂತೆ ಕಥೆ ಕೇವಲ ಚಿತ್ರಕ್ಕೆ ಹಿನ್ನಲೆಯಲ್ಲ. ಹಾಗೆಯೇ ಚಿತ್ರಗಳು ಕೇವಲ ಕಥೆಯ ಇಲ್ಲಸ್ಟ್ರೆಷನ್ ಅಲ್ಲ. ಎರಡೂ ಬೇರೆ ಬೇರೆ ಆಯಾಮಗಳಲ್ಲಿ ಕಥೆಯನ್ನು ಹೇಳುತ್ತಿವೆ. ದುಫ್ಲೋ ಹೇಳುವ ಸಾರ್ವತ್ರಿಕತೆ ಚಿತ್ರದಲ್ಲೂ ಕಾಣುತ್ತದೆ. ಯಾವುದೇ ಪಾತ್ರಗಳು, ಪರಿಸರ ಒಂದು ನಿರ್ದಿಷ್ಟ ಸ್ಥಳಕ್ಕೆ, ಜನಾಂಗಕ್ಕೆ ಫಿಕ್ಸ್ ಆಗಿಲ್ಲ. ಇಲ್ಲಿಯ ಪಾತ್ರಗಳನ್ನು ಯಾವುದೇ ಒಂದು ನಿರ್ದಿಷ್ಟ ದೇಶದವು, ಜನಾಂಗದವೂ ಅಂತ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲಿ ಬರುವ ನೀಲೂ, ಅಫಿಯಾ, ಬಿಬಿರ್, ಊಲಾ, ನೆಸೊ, ನಾಜೆ ಇತ್ಯಾದಿ ಪಾತ್ರಗಳು ಭಾರತದ್ದೋ, ಕೆನ್ಯಾ ಅಥವಾ ವಿಯೆಟ್ನಾಂ ಅಥವಾ ಯಾವುದೇ ದೇಶದವರೂ ಆಗಿರಬಹುದು. ಬಹುಶಃ ಈ ಉದ್ದೇಶಕ್ಕಾಗಿಯೇ ಇಲ್ಲಿಯ ಚಿತ್ರಗಳು, ಬಣ್ಣ ಎಲ್ಲವೂ ಸ್ಟೈಲೈಸ್ ಆಗಿವೆ. ಮರಗಳು, ಬೆಟ್ಟಗಳು, ಪ್ರಾಣಿಗಳು ಎಲ್ಲಾ ಚಿತ್ರಗಳನ್ನು ಸರಳವಾದ ಜ್ಯಾಮಿತಿಯ ಆಕಾರಗಳನ್ನು ಬಳಸಿಕೊಂಡು ರಚಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಬಡತನವನ್ನು ತೋರಿಸಲು ಬಳಸುವ S ಮತ್ತು ಐ ಆಕಾರದ ರೇಖೆಗಳನ್ನು ಪುಸ್ತಕದುದ್ದಕ್ಕೂ ಬಳಸಿಕೊಂಡಿದ್ದಾರೆ. ಇವೆಲ್ಲಾ ಬಡವರ ಬದುಕಿನ ಏರಿಳಿತವನ್ನು ತೋರಿಸುತ್ತದೆ.
ಮಕ್ಕಳಿಗೆ ಏಕೆ?
ಡುಫ್ಲೊ ಹೇಳುವ ಒಂದು ಕಾರಣ ಮಕ್ಕಳು ಹೊಸ ಚಿಂತನೆಗಳಿಗೆ ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತಾರೆ. ಜೊತೆಗೆ ಅವರು ಜಾಣರೂ ಕೂಡ. ಏನು ಹೇಳಿದರೂ ಗ್ರಹಿಸಿಕೊಳ್ಳುತ್ತಾರೆ. ಜೊತೆಯ ಅರ್ಥಶಾಸ್ತ್ರಜ್ಞರ ಜೊತೆ ಚರ್ಚಿಸುವಂತೆಯೇ ಮಕ್ಕಳೊಂದಿಗೂ ಸಂಶೋಧನೆಗಳನ್ನು ಕುರಿತು ಮಾತನಾಡಬೇಕು. ಅವರಿಗೂ ಬಡತನ, ನಿರುದ್ಯೋಗ ಇತ್ಯಾದಿ ವಿಷಯಗಳು ತಿಳಿದಿರಬೇಕು. ಮಕ್ಕಳೂ ಆ ಬಗ್ಗೆ ಯೋಚಿಸಬೇಕು. ಪರಿಹಾರವನ್ನು ಕುರಿತು ಚಿಂತಿಸಬೇಕು. ಅವರು ಇಂತಹ ಗಂಭೀರ ವಿಷಯಗಳ ಚರ್ಚೆಯ ಭಾಗವಾಗಬೇಕು ಅನ್ನುವುದು ಡುಫ್ಲೊ ಅವರ ಮುಖ್ಯ ಕಾಳಜಿ. ಮಕ್ಕಳನ್ನು ಬೌದ್ಧಿಕವಾಗಿ ಪ್ರೇರೇಪಿಸಬಲ್ಲ ಸಾಮರ್ಥ್ಯ ಈ ಪುಸ್ತಕಗಳಿಗಿದೆ. ಡಫ್ಲೋ ಹಾಗೂ ಬ್ಯಾನರ್ಜಿಯವರು ಬಡತನದ ಸಮಸ್ಯೆಯನ್ನು ಹಲವು ಸಣ್ಣ ಸಣ್ಣ ಸಮಸ್ಯೆಗಳ ಗುಚ್ಚವಾಗಿ ನೋಡುವ ಕ್ರಮದಿಂದಾಗಿ ಬಡತನದ ಚಿತ್ರವನ್ನು ಹತ್ತು ಚಿಕ್ಕ ಚಿಕ್ಕ ಕಥೆಗಳಾಗಿ ಒಡೆಯುವುದಕ್ಕೆ ಸಾಧ್ಯವಾಗಿದೆ.
ಇದು ಮೊದಲು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಗಿದ್ದು. ಅಲ್ಲಿ ಪ್ರಕಾಶಕರ ಒತ್ತಾಯದ ಮೇರೆಗೆ ಪ್ರತಿ ಕಥೆಗೂ ಒಂದು ವಿವರವಾದ ಟಿಪ್ಪಣೆ ಬರೆಯಲಾಗಿದೆ. ಬಡತನಕ್ಕೆ ತಮ್ಮನ್ನು ಹೊಣೆಗಾರಿಕೆಯನ್ನು ಮಾಡಲಾಗುತ್ತಿದೆ ಅನ್ನುವ ಭಾವನೆ ತಂದೆ ತಾಯಿಗಳಿಗೆ ಬಾರದಿರಲಿ ಅನ್ನುವ ಕಾರಣಕ್ಕೆ ಈ ವಿವರಣೆಯನ್ನು ಸೇರಿಸಲಾಗಿದೆಯಂತೆ. ಇಂಗ್ಲೀಷ್ ಅವತರಣೆಕೆಯಲ್ಲೂ ಈ ಟಿಪ್ಪಣಿಗಳಿವೆ. ಆದರೆ ಕನ್ನಡದಲ್ಲಿ ಪ್ರಥಮ್ ಐದು ಕಥೆಗಳನ್ನು ಆರಿಸಿಕೊಂಡು ಐದು ಪ್ರತ್ಯೇಕ ಪುಸ್ತಕಗಳನ್ನಾಗಿ ಪ್ರಕಟಿಸಿದೆ. ಆರ್ಥಿಕ ವಿಕಾಸ ಮತ್ತು ಮೂಲಭೂತ ಅಧಿಕಾರಗಳನ್ನು ಪಡೆಯುವ ಬಗೆಗಿನ ಐದು ಪುಸ್ತಕಗಳ ಸರಣಿಯಾಗಿ ಪ್ರಕಟಿಸಿದೆ. ಕನ್ನಡದ ಅನುವಾದವನ್ನು ಎಚ್ ಎಸ್ ರಾಘವೇಂದ್ರ ರಾವ್, ಓ ಎಲ್ ನಾಗಭೂಷಣಸ್ವಾಮಿ, ಎಸ್ ದಿವಾಕರ್, ಜೆ ವಿ ಕಾರ್ಲೊ ಹಾಗೂ ಎಲ್ ಸಿ ನಾಗರಾಜ್ ಮಾಡಿದ್ದಾರೆ.
ಮೊದಲ ಕಥೆ ’ನೀಲೂ ಇನ್ನು ಶಾಲೆ ತಪ್ಪಿಸಿಕೊಳ್ಳುವುದಿಲ್ಲ’. ನೀಲೂಗೆ ಶಾಲೆಯಲ್ಲಿ ಮಾಡುವ ಪಾಠ ಅರ್ಥವಾಗದೆ ಕಲಿಕೆಯಲ್ಲಿ ಆಸಕ್ತಿ ಹೋಗಿ ಶಾಲೆಗೆ ತಪ್ಪಿಸಿಕೊಳ್ಳುವುದಕ್ಕೆ ಪ್ರಾರಂಭಿಸುತ್ತಾಳೆ. ಕೊನೆಗೆ ಅದು ನೀಲೂ ಒಬ್ಬಳ ಸಮಸ್ಯೆ ಅಲ್ಲ ಶಾಲೆಯ ಬಹುತೇಕ ಮಕ್ಕಳ ಸಮಸ್ಯೆ ಅಂತ ತಿಳಿಯುತ್ತದೆ. ಅಷ್ಟೇ ಅಲ್ಲ ಭಾರತದ ಶೇಕಡ ೫೦ರಷ್ಟು ಐದನೇ ತರಗತಿ ಮುಗಿಸಿದ ಮಕ್ಕಳಿಗೆ ಓದುವ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಅವರಿಗೆ ಆಧುನಿಕ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅಂದರೆ ಮಕ್ಕಳ ತಿಳುವಳಿಕೆಯ ಮಟ್ಟದಿಂದ ಶಿಕ್ಷಣ ಪ್ರಾರಂಭವಾಗುವುದಿಲ್ಲ. ತಿಳುವಳಿಕೆಯ ಮಟ್ಟ ಹಾಗೂ ಕಲಿಸುವ ಮಟ್ಟದ ನಡುವಿನ ಈ ಅಂತರ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಕಥೆಯಲ್ಲಿ ಅದಕ್ಕೆ ಪರಿಹಾರವಾಗಿ ಊರಿನ ಹಿರಿಯ ಮಕ್ಕಳ ನೆರವಿನಿಂದ ಮಕ್ಕಳಿಗೆ ಮೂಲಪಾಠವನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕೆ ಪ್ರೇರಣೆ ಪ್ರಥಮ್ ಸಂಸ್ಥೆಯ ’ಬಾಲಸಖಿ’ ಯೋಜನೆ. ಆ ಬಗ್ಗೆ ವಿಶೇಷವಾದ ಉಲ್ಲೇಖವನ್ನು ಅವರು ತಮ್ಮ ಪುಸ್ತಕದಲ್ಲೂ ಮಾಡಿದ್ದಾರೆ.
ಇನ್ನೊಂದು ಕಥೆಯಲ್ಲಿ ಅಫಿಯಾಗೆ ಆರೋಗ್ಯ ಚೆನ್ನಾಗಿಲ್ಲ. ನಿದ್ದೆ ಇಲ್ಲ. ಹಳ್ಳಿ ಡಾಕ್ಟ್ರು, ಮಂತ್ರವಾದಿ ಎಲ್ಲರನ್ನೂ ನೋಡಿಯಾಗುತ್ತದೆ. ಕೊನೆಗೆ ಮಲೇರಿಯಾ ಅಂತ ಗೊತ್ತಾಗುತ್ತದೆ. ಮಲೇರಿಯ ಜನರನ್ನು ಸೊರಗಿಸಿಬಿಡುತ್ತದೆ. ಖಾಯಿಲೆ ಇದ್ದಾಗಷ್ಟೇ ಅಲ್ಲ್ಲ, ಅಮೇಲೂ ಅವರು ದುರ್ಬಲರಾಗಿಬಿಡುತ್ತಾರೆ. ದುಡಿಮೆ ಶೇಕಡ ೫೦ರಷ್ಟು ಕುಗ್ಗಿಬಿಡುತ್ತದೆ. ಔಷಧಿಗಳೂ ತಂಬಾ ದುಬಾರಿ. ಸರ್ಕಾರ ಆರೋಗ್ಯ ಸೇವೆಗೆ ಅಂತಹ ಮಹತ್ವ ನೀಡುತ್ತಿಲ್ಲ. ಅದು ಪರಿಣಾಮಕಾರಿಯಾಗಿಲ್ಲ. ಔಷಧಿಗಳು ಅಗ್ಗದಲ್ಲಿ ಎಲ್ಲರಿಗೂ ಸಿಗುವಂತೆ ಆಗಬೇಕು. ಇವೆಲ್ಲವೂ ನಿಜ. ಅದರೆ ಇಂತಹ ಕೆಲವು ಖಾಯಿಲೆಗಳು ಬಾರದಂತೆ ನೋಡಿಕೊಳ್ಳುವುದಕ್ಕೆ ಜನರಿಗೆ ಸಾಧ್ಯವಿದೆ. ಸೊಳ್ಳೆ ಪರದೆ ಬಳಸುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದಿತ್ತು. ಹಾಗೆಯೇ ಲಸಿಕೆಯಿಂದ ಎಷ್ಟೋ ಖಾಯೆಲೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ಕ್ಲೋರಿನ್ ಹಾಕಿ ಕುಡಿಯುವ ನೀರನ್ನು ಶುದ್ಧಗೊಳಿಸಿಕೊಳ್ಳಬಹುದು. ಹೀಗೆ ಹಲವು ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬಹುದು. ಆದರೆ ಜನ ಏಕೆ ಆ ನಿಟ್ಟಿನಲ್ಲಿ ಯೋಚಿಸುವುದಿಲ್ಲ ಅನ್ನುವುದು ಒಂದು ಒಗಟು. ಅಭಿಜಿತ್ ಹಾಗೂ ದುಫ್ಲೋ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಜನ ತಕ್ಷಣದ ಅನುಕೂಲವನ್ನಷ್ಟೇ ಸಾಮಾನ್ಯವಾಗಿ ನೋಡುತ್ತಾರೆ. ಎಂದೋ ಬರಬಹುದಾದ ಖಾಯಿಲೆಯ ಬಗ್ಗೆ ಉದಾಸೀನ ತೋರುತ್ತಾರೆ ಅನ್ನುವುದೂ ಒಂದು ಕಾರಣ. ಹಾಗಾಗಿ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಜನರನ್ನು ಒಲೈಸುವುದಕ್ಕೆ, ಮನವೊಲಿಸುವುದಕ್ಕೆ ಪ್ರಯತ್ನಿಸಬೇಕು ಅನ್ನುತ್ತಾರೆ ಇವರು. ಪ್ರಾಯೋಗಿಕವಾಗಿ ಲಸಿಕೆ ಹಾಕಿಸಿಕೊಂಡರೆ ಒಂದು ಕೆಜಿ ಬೇಳೆ ಕೊಡುವುದಾಗಿ ಘೋಷಿಸಲಾಯಿತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಲಸಿಕೆ ಹಾಕಿಸಿಕೊಳ್ಳಲು ಹೆಚ್ಚು ಜನ ಬಂದರೆ ಸಂಘಟಕರಿಗೂ ಖರ್ಚು ಕಡಿಮೆಯಾಗುತ್ತದೆ. ಯಾಕೆಂದರೆ ಲಸಿಕೆಗೆ ಹಾಕುವುದಕ್ಕೆ ಅಂತ ಹಣ ಖರ್ಚು ಮಾಡಿ ಕ್ಯಾಂಪನ್ನು ಸಂಘಟಿಸಲಾಗಿರುತ್ತದೆ. ಒಟ್ಟಿಗೆ ಹೆಚ್ಚು ಜನ ಬಂದರೆ ಅದೇ ಖರ್ಚಿನಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕಿಬಿಡಬಹುದು. ನೀವು ತಲಾ ಒಂದು ಕೆಜಿ ಬೇಳೆಯನ್ನು ಪುಕ್ಕಟೆ ಹಂಚಿದರೂ ದುಬಾರಿಯೇನಾಗುವುದಿಲ್ಲ. ಜೊತೆಗೆ ಒಟ್ಟಾರೆ ಆರೋಗ್ಯದ ಮೇಲಿನ ಪರಿಣಾಮ ನೋಡಿದರೆ ಇದು ಒಳ್ಳೆಯ ಹೂಡಿಕೆ. ಹಾಗಾಗಿ ಜನರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸುವುದಕ್ಕೆ ಕ್ರಮಗಳನ್ನು ತೆಗೆದುಕೊಳ್ಳವುದು ಬಡತನವನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಮುಖ್ಯ ಕ್ರಮವನ್ನಾಗಿ ಇವರು ಸೂಚಿಸುತ್ತಾರೆ.
ಬಿಬಿರ್ ಅನ್ನೋದು ಕೊನವು ಎಂಬ ಮಾಟಗಾತಿಯೊಬ್ಬಳ ಕಥೆ. ಆಕೆಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ. ಊರಾಚೆ ಗುಡಿಸಲೊಂದರಲ್ಲಿ ವಾಸ ಮಾಡುತ್ತಿರುತ್ತಾಳೆ. ಎಲ್ಲರೂ ಅವಳನ್ನು ಮಾಟಗಾತಿಯೆಂದು ದೂರ ಇಟ್ಟಿರುತ್ತಾಳೆ. ಗೆಳೆಯರೊಂದಿಗೆ ಓಟದ ಪಂದ್ಯದಲ್ಲಿ ಸೋತ ಬಿಬಿರ್ ಮಾಟಗಾತಿಯನ್ನು ಮಾತನಾಡಿಸಬೇಕಾಗಿ ಬರುತ್ತದೆ. ಹಾಗೆ ಮಾತನಾಡಿದಾಗ ಅವಳು ಉಳಿದವರಂತೆ ಸಾಮಾನ್ಯ ಹೆಂಗಸು ಅನ್ನೋದು ಅವನಿಗೆ ಅರ್ಥವಾಗುತ್ತದೆ. ಒಮ್ಮೆ ಮಿಡತೆಗಳ ಹಿಂಡು ಬಂದು ಊರಿನ ಫಸಲನ್ನೆಲ್ಲಾ ತಿಂದು ಹಾಕಿಬಿಡುತ್ತದೆ. ಜನ ಅದಕ್ಕೆ ಮಾಟಗಾತಿ ಕೊನವುಳ ದುಷ್ಟ ಮಂತ್ರಗಳೇ ಕಾರಣ ಅಂತ ಅವಳನ್ನು ಹೊರದಬ್ಬಬೇಕು ಅಂತ ನಿರ್ಧರಿಸುತ್ತಾರೆ. ಬಿಬಿರ್ ಅವಳು ಮಾಟಗಾತಿಯಲ್ಲ ಅಂತ ಜನರನ್ನು ಸಮಾಧಾನಪಡಿಸುತ್ತಾನೆ. ಅವಳಿಗೆ ನೆರವಾಗುತ್ತಾನೆ. ಕೊನೆಗೆ ಸರ್ಕಾರದ ಯೋಜನೆಯಿಂದ ಸಿಕ್ಕ ಹೊಲಿಗೆ ಯಂತ್ರದಿಂದ ಅವಳು ಬಟ್ಟೆ ಹೊಲಿಯುವ ಕೆಲಸ ಮಾಡುತ್ತಾಳೆ. ಜೊತೆಗೆ ಕೊರೊನ ಸಮಯದಲ್ಲಿ ಮಾಸ್ಕ್ ಹೊಲಿಯುವುದಕ್ಕೆ ಊರಿನವರನ್ನೂ ಪ್ರೇರೇಪಿಸಿ, ಅವರಿಗೂ ಉದ್ಯೋಗ ಸಿಗುವಲ್ಲಿ ನೆರವಾಗುತ್ತಾಳೆ. ಇಂದಿಗೂ ವಯಸ್ಸಾದ ಹೆಂಗಸರನ್ನು ಮಾಟಗಾತಿಯರೆಂದು ಕರೆದು ಹೊರಗೆ ಹಾಕುವ ವ್ಯವಸ್ಥೆ ಇದೆ. ಇವರಲ್ಲಿ ಹೆಚ್ಚಿನವರು ನಿರ್ಗತಿಕ ವಿಧವೆಯರಾಗಿರುತ್ತಾರೆ. ಕ್ಷಾಮದ ಸಮಯದಲ್ಲಿ ಅಂತಹವರನ್ನು ಕೊಲ್ಲುವ ಪ್ರಕರಣಗಳು ಹಲವು ಕಡೆ ನಡೆದಿವೆ. ಯುರೋಪಿನಲ್ಲಿ ೧೮೦೦ರ ಸುಮಾರಿನಲ್ಲಿ ಫಸಲು ಕೈಕೊಟ್ಟಾಗ, ಆಹಾರದ ಕೊರತೆಯುಂಟಾದಾಗ ಮಾಟಗಾತಿಯರನ್ನು ಕೊಲ್ಲುವ ಪ್ರಕರಣಗಳು ವಿಪರೀತವಾಗಿತ್ತಂತೆ. ತಾಂಜೀನಿಯಾದಲ್ಲೂ ಇಂತಹದೇ ಪ್ರಕರಣಗಳು ನಡೆದಿವೆ. ಒಂದಿಷ್ಟು ಜನರನ್ನು ಕೊಂದುಬಿಟ್ಟರೆ ಉಳಿದವರಿಗೆ ಆಹಾರ ಸಾಕಾಗಬಹುದು ಅನ್ನುವ ಲೆಕ್ಕಾಚಾರ ಇರಬಹುದು. ಬರಗಾಲ ಬಂದಾಗ ಇದ್ದಕ್ಕಿದ್ದ ಹಾಗೆ ಮನೆಯಲ್ಲಿದ್ದ ವಯಸ್ಸಾದ ಹೆಂಗಸು ಮಾಟಗಾತಿಯಾಗಿ ಕಾಣತೊಡಗುತ್ತಾಳೆ. ಬರಗಾಲದ ಸಮಯದಲ್ಲಿ ಗ್ರಾಮೀಣ ಭೂರಹಿತ ರೈತರ ಮನೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಸಾಯುವ ಸಂಖ್ಯೆಯೇ ಹೆಚ್ಚು. ಅಮಾರ್ತ್ಯಸೇನ್ ಗುರುತಿಸುವಂತೆ ಬರಗಾದಲ್ಲಿ ಜನರ ಹಸಿವಿಗೆ ಆಹಾರದ ಕೊರತೆ ಕಾರಣವಲ್ಲ. ಲಭ್ಯವಿರುವ ಆಹಾರವನ್ನು ಸರಿಯಾಗಿ ವಿತರಿಸದೇ ಇದ್ದುದು ಬಹುಮಟ್ಟಿಗೆ ಕಾರಣ. ಈ ಕಥೆಯಲ್ಲಿ ಬಿಬಿರ್ ಬಡ ಅಸಾಹಾಯಕ ಕೊನವುಳ ಪರವಾಗಿ ನಿಲ್ಲುತ್ತಾನೆ. ಈ ಕಥೆ ಓದುವ ಮಕ್ಕಳನ್ನು ಇಂತಹ ಅಸಹಾಯಕ ಹೆಂಗಸರ ಪರವಾಗಿ ನಿಲ್ಲುವುದಕ್ಕೆ ಕರೆ ನೀಡುತ್ತದೆ.
ಬಡತನದೊಂದಿಗೆ ತೆಕ್ಕೆ ಹಾಕಿಕೊಂಡಿರುವ ಇನ್ನೊಂದು ಸಮಸ್ಯೆ ಲಿಂಗತಾರತಮ್ಯ. ಮಹಿಳೆಯರ ಬಗ್ಗೆ ಇರುವ ಪೂರ್ವಗ್ರಹ. ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ನಾಯಕರಾಗುವುದಕ್ಕೆ ಸಾಧ್ಯವಿಲ್ಲ ಅನ್ನೋದು ಜಗತ್ತಿನಾದ್ಯಂತ ಇರುವ ನಂಬಿಕೆ. ಅವರು ಮನೆ ನಿರ್ವಹಿಸಿಕೊಂಡು ಮನೆಯೊಳಗೆ ಇರಬೇಕಾದವರು. ಅವರಿಗೆ ನಾಯಕತ್ವ ಸಾಧ್ಯವಿಲ್ಲ ಅನ್ನೋದು ಸಾಮಾನ್ಯ ಭಾವನೆ. ಭಾರತದಲ್ಲಿ ಮಹಿಳೆಯರಿಗೆ ಪಂಚಾಯತಿಗಳಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಯಿತು. ಹಾಗಾಗಿ ಮಹಿಳೆಯರಿಗೆ ಅವಕಾಶ ಕೊಡುವುದು ಅನಿವಾರ್ಯವಾಯಿತು. ಹಾಗೆ ಊಲಾಳ ಅಮ್ಮ ನೂರ್ ಮಹಿಳೆಯರಿಗೆ ಮೀಸಲಿದ್ದ ಕ್ಷೇತ್ರದಿಂದ ಗೆದ್ದು ಪಂಚಾಯಿತಿ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಮೊದಲು ಊಲಾಳ ಅಪ್ಪ ಮಾಗೂ ಅಧ್ಯಕ್ಷನಾಗಿದ್ದ. ಈಗ ಆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ. ನೂರ್ ಈ ಬಾರಿ ಸ್ಪರ್ಧಿಸುವುದಿಲ್ಲ ಅಂತ ನಿರ್ಧರಿಸುತ್ತಾಳೆ. ನಿಜವಾಗಿ ಆಡಳಿತ ನಡೆಸುವವನು ಗಂಡ. ಹೆಂಗಸು ಸುಮ್ಮನೆ ಹೆಸರಿಗೆ ಅನ್ನುವುದು ಸಾಮಾನ್ಯ ನಂಬಿಕೆ. ಇದನ್ನು ಪರೀಕ್ಷಿಸಲು ಊಲಾ ಮತ್ತು ಬಿಬಿರ್ ಜನರ ಅಭಿಪ್ರಾಯವನ್ನು ಕೇಳಲು ನಿರ್ಧರಿಸುತ್ತಾರೆ. ಅಗ ಅವರಿಗೆ ನೂರ್ ಮಾಡಿದ್ದ ಕೆಲಸಗಳ ತಿಳಿಯುತ್ತದೆ. ಹತ್ತು ವರ್ಷದಿಂದ ಕೆಟ್ಟು ಕೂತಿದ್ದ ಬೋರ್‌ವೆಲ್ಲನ್ನು ರಿಪೇರಿ ಮಾಡಿಸಿರುತ್ತಾಳೆ. ಮಹಿಳೆಯರಿಗೆ ಕೆಲಸ ಕೊಡಿಸಿರ್ತಾಳೆ. ಮಹಿಳೆಯರು ಕೆಲಸ ಮಾಡುತ್ತಿದ್ದಾಗ ಮಕ್ಕಳನ್ನು ನೋಡಿಕೊಳ್ಳಲು ಯಾರನ್ನಾದರೂ ನೇಮಿಸುತ್ತಿದ್ದಳು. ಸೋರುತ್ತಿದ್ದ ಸ್ಕೂಲಿನ ಮಾಡು ರಿಪೇರಿ ಮಾಡಿಸಿದ್ದಳು. ಗ್ರಾಮಕ್ಕಾಗಿ ತನ್ನ ಅಮ್ಮ ತುಂಬಾ ಒಳ್ಳೆ ಕೆಲಸ ಮಾಡಿದ್ದಾಳೆ ಅಂತ ಗೊತ್ತಾಗುತ್ತದೆ. ಆದರೆ ಗಂಡನ ವಿರುದ್ದ ಅವಳು ಚುನಾವಣೆಗೆ ನಿಲ್ಲುವುದಕ್ಕೆ ಒಪ್ಪುವುದಿಲ್ಲ. ಕೊನೆಗೆ ಮಕ್ಕಳು ನೀಲೂಳ ಅಮ್ಮ ಶೋನಾಳನ್ನು ಒಪ್ಪಿಸಿ ನಿಲ್ಲಿಸುತ್ತಾರೆ. ಮಾಗೂಗೆ ಗೆದ್ದೆ ಗೆಲ್ಲುತ್ತೇನೆ ಅನ್ನುವ ವಿಶ್ವಾಸ ಇರುತ್ತದೆ. ಸಾರಾಯಿ ಹಂಚುತ್ತಾನೆ. ಟಿ ಶರ್ಟ್ ಹಂಚುತ್ತಾನೆ. ಕೊನೆಗೆ ಗೆಲ್ಲುವುದಿಲ್ಲ ಅನಿಸಿ ಶೋನಾಳನ್ನು ಬೆದರಿಸುತ್ತಾನೆ. ಕೊನೆಗೆ ನೂರ್ ಗಂಡಿನಿಗೆ ಒಳ್ಳೆ ಕೆಲಸವನ್ನು ಮಾಡುವವರನ್ನು ಬೆಂಬಲಿಸಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಸಲಹೆ ನೀಡುತ್ತಾಳೆ. ಶೋನಾ ಗೆಲ್ಲುತ್ತಾಳೆ.
ಇದು ಎಸ್ಥರ್ ಪಶ್ಚಿಮ ಬಂಗಾಳದಲ್ಲಿ ಅಧ್ಯಯನ ಮಾಡಿದಾಗ ಗಮನಿಸಿದ್ದ ಸಂಗತಿ. ಅಲ್ಲಿ ಇವರು ನಡೆಸಿದ ಸಮೀಕ್ಷೆಯ ಪ್ರಕಾರ ಮಹಿಳಾ ಪ್ರತಿನಿಧಿಗಳು ಹಳ್ಳಿಯ ಬೇರೆ ಹೆಣ್ಣು ಮಕ್ಕಳ ಅವಶ್ಯಕತೆಗೆ ಗಮನಕೊಟ್ಟಿದ್ದರು. ಹೊಸ ಬಾವಿಗಳನ್ನು ತೋಡಿಸಿದ್ದರು. ಹಾಳಾಗಿದ್ದ ಬಾವಿಗಳನ್ನು ದುರಸ್ತಿ ಮಾಡಿಸಿದ್ದರು. ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದರು. ಇರುವ ಬಜೆಟ್ಟಿನಲ್ಲೇ ಪುರುಷರಿಗಿಂತ ಹೆಚ್ಚು ಕೆಲಸ ಮಾಡಿದ್ದೂ ಕಂಡು ಬರುತ್ತದೆ. ಗಂಡಸರಿಗೆ ಹೋಲಿಸಿದರೆ ಮಹಿಳೆಯರ ಶಿಕ್ಷಣ ಮಟ್ಟ ಕಡಿಮೆ. ರಾಜಕೀಯವಾಗಿ ಅನುಭವ ಕಡಿಮೆ. ಅವರ ವಿರುದ್ಧ ಪೂರ್ವಗ್ರಹಗಳು ಹೆಚ್ಚು ತೀವ್ರವಾಗಿದ್ದವೂ. ಇವೆಲ್ಲವುಗಳ ನಡುವೆಯೂ ಅವರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಕಾಣಿಸುತ್ತದೆ. ನಿಜ ನೂರ್ ತರಹದ ಕೆಲವರು ಗಂಡನನ್ನು ವಿರೋಧಿಸಿಕೊಂಡು ಮುಂದೆ ಬರಲು ಹಿಂದೇಟು ಹಾಕಿದ್ದರು. ಆದರೆ ಹೊಸಬರು ಮುಂದೆ ಬಂದಿದ್ದಾರೆ. ಮೊದಲಿಗೆ ಜನರು ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಮಹಿಳೆಯರಿಗೆ ಮತ ನೀಡಬೇಕಿತ್ತು. ನಂತರದಲ್ಲಿ ಬೇರೆ ಆಯ್ಕೆಯಿದ್ದಾಗಲೂ ಮಹಿಳೆಯರಿಗೆ ಮತನೀಡಿದ್ದು ಕಂಡುಬರುತ್ತದೆ.
ವಲಸೆ ಇಂದು ತುಂಬಾ ದೊಡ್ಡ ಸಮಸ್ಯೆಯಾಗಿ ನಮ್ಮ ಮುಂದಿದೆ. ಉದ್ಯೋಗದ ಕೊರತೆಯಿಂದ ಬೇರೆ ಕಡೆಗೆ ಕೆಲಸ ಹುಡುಕಿಕೊಂಡು ಹೋಗುವುದು ಸ್ವಾಭಾವಿಕ ಪ್ರಕ್ರಿಯೆ. ನೆಸೊ ಅನ್ನುವ ಹುಡುಗ ಕೂಡ ಹಾಗೆ ಕೆಲಸ ಹುಡುಕುತ್ತಾ ಸಿಟಿಗೆ ಹೋಗುತ್ತಾನೆ. ಅಲ್ಲಿ ಇವನಿಗಿಂತ ಮೊದಲೇ ಹೋಗಿದ್ದ ಇವನ ನೆಂಟರು ಇವನಿಗೆ ಕೆಲಸ ಕೊಡಿಸುತ್ತಾರೆ. ಮಲಗಲು ಜಾಗ ಇಲ್ಲ. ಕೆಲಸ ನಡೆಯುತ್ತಿದ್ದ ಜಾಗದಲ್ಲೇ ರಾತ್ರಿ ಕಳೆಯುತ್ತಿದ್ದ. ದುಡಿದ ಹಣದಲ್ಲಿ ಅಮ್ಮ ಅಪ್ಪನಿಗೆ ದುಡ್ಡು ಕಳಿಸಿದ. ಮಧ್ಯದಲ್ಲಿ ಊರಿಗೆ ಹೋಗಿದ್ದಾಗ ಕಸ ಹೆಕ್ಕುತ್ತಿದ್ದ ಗೆಳೆಯ ನಾಜೆಯನ್ನು ಕಂಡ. ನಾಜೆಯದ್ದು ತುಂಬಾ ಬಡತನದ ಬದುಕು. ಬೇರೆ ದಾರಿ ಇಲ್ಲದೆ ಅವನೂ ನೆಸೊನ ಜೊತೆ ಸಿಟಿಗೆ ಹೋಗುತ್ತಾನೆ. ಬಲು ಬೇಗ ದುಡ್ಡು ಉಳಿಸಿ ಮನೆಯವರಿಗೆ ಕಳುಹಿಸುವುದಕ್ಕೆ ಅವನಿಗೆ ಸಾಧ್ಯವಾಗುತ್ತದೆ. ಪಟ್ಟಣದ ಬದುಕಿನಲ್ಲೂ ಏಳು ಬೀಳು ಇರುತ್ತದೆ. ಕೊರೋನಾ ಸಮಯದಲ್ಲಿ ಇಡೀ ಊರನ್ನು ಲಾಕ್‌ಡೌನ್ ಮಾಡಲಾಯಿತು. ಬಸ್ಸಿಲ್ಲದೆ ನೆಸೊ ನಾಜೆ ಇಬ್ಬರು ನಡೆದುಕೊಂಡು ಊರಿಗೆ ಬರಬೇಕಾಯಿತು. ಆ ಅನುಭವ ನೆಸೊವನ್ನು ಧೃತಿಗೆಡಿಸಿರುತ್ತದೆ. ಕೋವಿಡ್ ನಿಂತ ಮೇಲೆ ಅವನು ಮತ್ತೆ ವಲಸೆ ಹೋಗುವುದಿಲ್ಲ. ಊರಲ್ಲೇ ಉಳಿಯುತ್ತಾನೆ. ನಾಜೆ ಮಾತ್ರ ಮತ್ತೆ ಸಿಟಿಗೆ ಕೆಲಸಕ್ಕೆ ಹೋಗುತ್ತಾನೆ. ವಲಸೆ ಹೋಗುವುದು ಸುಲಭದ ಅನುಭವವಲ್ಲ. ಮನೆಯವರನ್ನೆಲ್ಲಾ ಬಿಟ್ಟು, ಗೊತ್ತಿಲ್ಲದ ಜಾಗಕ್ಕೆ, ಗೊತ್ತಿಲ್ಲದವರ ನಡುವೆ ಕೆಲಸ ಮಾಡುವುದು ಆತಂಕದ ವಿಷಯ. ತಮ್ಮ ಊರಿನಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ ಅನಿಸಿದಾಗ ಮಾತ್ರ ವಲಸೆ ಹೋಗುತ್ತಾರೆ. ಮೊದಲು ದೈರ್ಯದಿಂದ ಹೋದ ನೆಸೊ ಅಂತಹವರು ಕೂಡ ನಂತರದ ಕೋವಿಡ್ ಭೀತಿಯ ನಂತರ ವಲಸೆ ಹೋಗದೆ ಊರಲ್ಲೇ ನಿಂತರು. ಬೇರೆ ಕಡೆ ಕೆಲಸ ಮಾಡಿ ಹೆಚ್ಚಿನ ಹಣ ಸಂಪಾದಿಸಬಹುದು ಅಂತ ತಿಳಿದಿದ್ದರೂ ಹೋಗುವುದಕ್ಕೆ ಧೈರ್ಯ ಮಾಡಲಿಲ್ಲ. ವಲಸೆಯ ಬಗ್ಗೆ ದುಫ್ಲೋ ಹಾಗೂ ಬ್ಯಾನರ್ಜಿಯವರು ಒಂದು ವಿವರವಾದ ಲೇಖನವನ್ನು ತಮ್ಮ ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.
ಬಡವರು ಉಳಿದವರಂತಯೇ ಸಾಮಾನ್ಯ ಮನುಷ್ಯರು. ಬಡತನ ಒಂದಿಷ್ಟು ರಿಸ್ಕ್ ತೆಗೆದುಕೊಳ್ಳಲು ಒತ್ತಾಯಿಸುತ್ತದೆ. ಆದರೆ ಎಲ್ಲರೂ ಹಾಗೆ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ತೀರಾ ದಾರಿಯಿಲ್ಲವಾದಾಗ ಅನಿವಾರ್ಯವಾಗಿ ಕೆಲವು ಕೆಲಸವನ್ನು ಮಾಡುತ್ತಾರೆ. ಅವರು ಮಾಡುವ ಕೆಲಸದಲ್ಲಿ ಅವರು ಪರಿಣತರೂ ಆಗಿರುವುದಿಲ್ಲ. ಅದನ್ನು ಮಾಡುವ ಇಷ್ಟವೂ ಅನೇಕರಿಗಿರುವುದಿಲ್ಲ. ಅನಿವಾರ್ಯವಾಗಿ ಮಾಡುತ್ತಾರೆ. ಇದರಲ್ಲಿ ಉದ್ದಿಮೆದಾರಳಾಗಲೂ ಬಯಸುವ ಇಮ್ಯುನಿಯ ಕಥೆ ಇದೆ. ಇದು ಕನ್ನಡಕ್ಕೆ ಅನುವಾದವಾಗಿಲ್ಲ. ಅವಳು ಸಾಲ ಸಿಗುತ್ತದೆ ಅನ್ನುವ ಕಾರಣಕ್ಕೆ ಉದ್ದಿಮೆ ನಡೆಸಲು ಮುಂದಾಗುತ್ತಾಳೆ. ಆದರೆ ಏನೂ ಮಾಡಬೇಕು ಅಂತ ಗೊತ್ತಿಲ್ಲ. ಆ ಬಗ್ಗೆ ಅವಳು ಯೋಚಿಸಿಯೇ ಇಲ್ಲ. ಹಲವು ಪ್ರಯತ್ನಗಳು ವಿಫಲವಾಗುತ್ತದೆ. ಕೊನೆಗೆ ದೊಡ್ಡ ಸಂಘಟನೆಯೊಂದಿಗೆ ಸೇರಿಕೊಂಡು ಕೆಲಸ ಮಾಡುವ ಆಲೋಚನೆ ಬರುತ್ತದೆ. ಕೆಲವು ಪಾಠಗಳನ್ನು ಟ್ಯಾಬ್ಲೆಟ್ಟುಗಳಲ್ಲಿ ಹಾಕಿ ಶಾಲೆಗಳಲ್ಲಿ ಮಕ್ಕಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತಾಳೆ. ಪ್ರಥಂ ಅಂತ ಸಂಸ್ಥೆಯ ಮಾರ್ಗದರ್ಶನ, ತರಬೇತಿಯಲ್ಲಿ ಅವಳು ಕೆಲಸ ಕಂಡುಕೊಳ್ಳುತ್ತಾಳೆ. ಹುಟ್ಟುತ್ತಲೇ ಎಲ್ಲರಿಗೂ ಉದ್ದಿಮೆದಾರರಾಗುವ ಸಾಮರ್ಥ್ಯವಿರುವುದಿಲ್ಲ. ಅದಕ್ಕೆ ತರಬೇತಿ, ಮಾರ್ಗದರ್ಶನ ಎಲ್ಲವೂ ಬೇಕಾಗುತ್ತದೆ. ಕೆಲವರಿಗೆ ಸಾಧ್ಯವೇ ಅಗದೇ ಇರಬಹುದು. ಹೀಗೆ ಹಲವು ಸಮಸ್ಯೆಗಳನ್ನು ಮಕ್ಕಳಿಗಾಗಿ ದುಫ್ಲೊ ಚರ್ಚಿಸಿದ್ದಾರೆ.
ನೀಲೂ ಮತ್ತು ಅವಳ ಗೆಳೆಯರು ತಮ್ಮ ಕಥೆಗಳ ಮೂಲಕ ನಮ್ಮ ಮುಂದೆ ಜೀವಂತ ನಿಲ್ಲುತ್ತಾರೆ. ಅಭಿಜಿತ್ ಬ್ಯಾನರ್ಜಿಯವರು ಮೊದಲ ಮಾತಿನಲ್ಲಿ ಹೇಳುವಂತೆ ಕೆಲವೊಮ್ಮೆ ಬೇಸರಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಭರವಸೆ ಮೂಡಿಸುತ್ತಾರೆ. ಕಷ್ಟಪಟ್ಟು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಮ್ಮೆ ಯಶಸ್ವಿಯಾಗುತ್ತಾರೆ. ಕೆಲವೊಮ್ಮೆ ಹತಾಶರಾಗಿರುತ್ತಾರೆ. ಕೆಲವೊಮ್ಮೆ ಸಂತೋಷದಿಂದ ಇರುತ್ತಾರೆ. ಕೆಲವೊಮ್ಮೆ ಸನೀಹದವರಾಗಿ ತೋರುತ್ತಾರೆ. ಕೆಲವೊಮ್ಮೆ ದೂರದವರು ಅನಿಸುತ್ತದೆ. ಅವರ ಬದುಕು ನಮ್ಮದಕ್ಕಿಂತ ಭಿನ್ನವಾಗಿಯೂ ತೋರುತ್ತದೆ. ಕೆಲವೊಮ್ಮೆ ನಮ್ಮದೇ ಬದುಕು ಅನಿಸುತ್ತದೆ. ಒಟ್ಟಾರೆಯಾಗಿ ಮಾನವೀಯತೆಗೆ ನಮ್ಮನ್ನು ತೆರೆದುಕೊಳ್ಳುವಂತೆ, ಸ್ಪಂದಿಸುವಂತೆ ಒತ್ತಾಯಿಸುತ್ತದೆ. ನಮ್ಮ ಬಹುತೇಕ ಮಕ್ಕಳು ಅ ಜಗತ್ತನ್ನು ನೋಡಿರಲಿಲ್ಲ. ಅಥವಾ ಜಗತ್ತನ್ನು ಹಾಗೆ ನೋಡಿರಲಿಲ್ಲ. ದುಫ್ಲೊ ಹಾಗೂ ಶಾಯೇನ್ ಒಲೀವ್ಹಿಯೆ ಅವರ ಪ್ರಯತ್ನದಿಂದ ನಮ್ಮ ಮಕ್ಕಳಿಗೆ ಜಗತ್ತನ್ನು ಬೇರೆ ರೀತಿಯಲ್ಲಿ ನೋಡುವುದಕ್ಕೆ ಅವಕಾಶ ಸಿಕ್ಕಿದೆ. ಹೊಸ ನೋಟದಿಂದ, ಹೊಸ ಮನಸ್ಸುಗಳಿಂದ ಉತ್ತಮ ಪರಿಹಾರಗಳು ಸಿಗಬಹುದು.