
[ಮನಮೋಹನ್ ಸಿಂಗ್ ಬಗ್ಗೆ ಏನೂ ಬರೆಯಲಿಕ್ಕೆ ಆಗಿರಲಿಲ್ಲ. ಸಧ್ಯಕ್ಕೆ ಅಮರ್ತ್ಯಸೇನ್ ಅವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಬರೆದ ಲೇಖನದ ಶೈಲಜ ಮಾಡಿದ ಅನುವಾದವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.]
ಮನ್ಮೋಹನ್ಸಿಂಗ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರೆ, ಎಲ್ಲರಿಗೂ ತಿಳಿದಿರುವುದನ್ನೇ ಮತ್ತೆ ಹೇಳಿದಂತೆ. ಅವರೊಬ್ಬ ಪ್ರತಿಭಾವಂತ ರಾಜಕೀಯ ಧುರೀಣ, ದಾರ್ಶನಿಕ, ಅಸಾಧಾರಣ ಅರ್ಥಶಾಸ್ತ್ರಜ್ಞ, ಅತ್ಯುತ್ತಮ ಅಧ್ಯಾಪಕ, ಅದ್ಭುತ ಆಡಳಿತಗಾರರು, ಒಳ್ಳೆಯ ಪತಿ, ತಂದೆ ಹಾಗೂ ತಾತ. ಎಲ್ಲದಕ್ಕಿಂತ ಹೆಚ್ಚಾಗಿ ಅಪಾರ ಸಹಾನುಭೂತಿಯುಳ್ಳ ಮನುಷ್ಯ. ನಮ್ಮಿಬ್ಬರದು ೭೦ ವರುಷಗಳಿಗೂ ಮೀರಿದ ಆತ್ಮೀಯ ಗೆಳೆತನ. ೬೯ ವರ್ಷಗಳ ಹಿಂದೆ ಕೇಂಬ್ರಿಡ್ಜ್ನ ಸೇಂಟ್ ಜಾನ್ಸ್ ಕಾಲೇಜಿನ ಪದವಿ ತರಗತಿಯಲ್ಲಿ ಅವರನ್ನು ಭೇಟಿಯಾದ ದಿನದಿಂದಲೂ ಅವರ ವಿನಯ, ವಿವೇಕ ಮತ್ತು ಕಾರುಣ್ಯದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ.
ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ಸಂಸ್ಥೆಯನ್ನು ಸೇರುವಂತೆ ಮನಮೋಹನರ ಮನವೊಲಿಸುವುದಕ್ಕೆ ಸಾಧ್ಯವಾದಾಗ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಅವರೊಬ್ಬ ಅದ್ಭುತವಾದ ಟೀಚರ್. ಶಿಷ್ಯರ ಕಣ್ಮಣಿ ಎನಿಸಿಕೊಂಡಿದ್ದರು. ತಮ್ಮ ಸಹೋದ್ಯೋಗಿಗಳ ಜೊತೆಗೂ ತುಂಬಾ ಆತ್ಮೀಯತೆಯಿಂದ ಒಡನಾಡುತ್ತಿದ್ದರು.
ಮನ್ಮೋಹನ್ ಅವರ ಬದುಕಿನ ವಿಭಿನ್ನ ಹಂತಗಳಲ್ಲಿ ಅವರೊಡನೆ ಒಡನಾಡುವ ಅವಕಾಶ ನನಗೆ ದೊರಕಿತು. ಅದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. ಒಬ್ಬ ಸಹಪಾಠಿಯಾಗಿ, ಅಂತರರಾಷ್ಟ್ರೀಯ ಸಿವಿಲ್ ಸರ್ವೆಂಟ್ ಆಗಿ, ನಂತರ ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಸಹೋದ್ಯೋಗಿಯಾಗಿ, ಜಿನೀವಾದಲ್ಲಿರುವ ಅಂತರರಾಷ್ಟ್ರೀಯ ದಕ್ಷಿಣ ಸಮಿತಿಯನ್ನು ಅವರು ನಡೆಸುತ್ತಿರುವಾಗ, ವಿತ್ತಮಂತ್ರಿಯಾಗಿ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುವಾಗ ಅವರೊಡನೆ ಒಡನಾಡಿದ ಅದೃಷ್ಟವಂತ ನಾನು. ಲೆಕ್ಕವಿಡಲು ಸಾಧ್ಯವಿಲ್ಲದಷ್ಟು ಬಾರಿ ವಿಭಿನ್ನ ವಿಷಯಗಳ ಬಗ್ಗೆ ಅವರೊಡನೆ ಚರ್ಚಿಸಿದ್ದೇನೆ. ಈ ಮಾತುಕತೆಗಳು ನನ್ನ ಅರಿವಿನ ವ್ಯಾಪ್ತಿಯನ್ನು ತುಂಬಾ ವಿಸ್ತರಿಸಿದೆ.
ಇಷ್ಟೆಲ್ಲಾ ಆತ್ಮೀಯರಾಗಿದ್ದೂ ಸಿಂಗ್ ಅವರು ತಮ್ಮ ವಿನಯವನ್ನು ನನಗೆ ಕಲಿಸುವಲ್ಲಿ ಸೋತರು. ಪ್ರಧಾನ ಮಂತ್ರಿಯಾಗಿದ್ದಾಗ ಉಳಿದವರೆಲ್ಲರೂ ಮಾತನಾಡಿ ಮುಗಿಸುವುದನ್ನು ಕಾದು ತಾವು ಮಾತನಾಡುತ್ತಿದ್ದರು. ಹೀಗೆ ಎಲ್ಲರೂ ಮಾತನಾಡಿ ಮುಗಿಸುವುದು ಭಾರತದಂತಹ ದೇಶದಲ್ಲಿ ಎಷ್ಟು ಹೊತ್ತು ಹಿಡಿಯುತ್ತದೆ ಎನ್ನುವುದು ನಿಮಗೆಲ್ಲಾ ಗೊತ್ತಲ್ಲಾ? ಅವರು ಈ ಮಟ್ಟದ ವಿನಯ, ಸಂಕೋಚಗಳನ್ನು ಬಿಟ್ಟು ಇನ್ನೂ ಹೆಚ್ಚು ಬಾರಿ ಮಾತನಾಡಿದ್ದರೆ ಚೆನ್ನಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ಭಾರತಕ್ಕೆ ಮತ್ತು ಈ ವಿಶ್ವಕ್ಕೆ ತಿಳಿಸಬೇಕಾಗಿದ್ದ ತೀರಾ ಪ್ರಮುಖ ವಿಷಯಗಳು ಅವರಲ್ಲಿದ್ದವು. ನಮ್ಮ ಖಾಸಗಿ ಮಾತುಕತೆಗಳಲ್ಲಿ, ಈ ವಿಷಯಗಳು ಅತ್ಯಂತ ಸಂಕೋಚದಿಂದ ಆದರೆ ಸುಧೀರ್ಘವಾಗಿ ಚರ್ಚೆಯಾಗುತ್ತಿದ್ದವು. ಇವು ಅವರ ಸಾರ್ವಜನಿಕ ಹೇಳಿಕೆಗಳಾಗಿ ಕಾಣಿಸಿಕೊಂಡಿದ್ದರೆ ನಿಜವಾಗಿಯೂ ಅದೆಷ್ಟು ಅದ್ಭುತವಾಗಿ ಇರುತ್ತಿತ್ತು!
ಮನ್ಮೋಹನ್ ಸಿಂಗ್ ಎಲ್ಲೆಡೆಯಲ್ಲಿಯೂ ತುಂಬಾ ಸಜ್ಜನಿಕೆಯಿಂದ, ಸಂಯಮದಿಂದ ನಡೆದುಕೊಳ್ಳುತ್ತಿದ್ದರು. ತುಂಬಾ ಕಡಿಮೆ ಮಾತನಾಡುತ್ತಿದ್ದರು. ಆದರೆ ಒತ್ತಾಯ ಮಾಡಿ ಮುಂದೆ ತಳ್ಳಿದರೆ ನಿರರ್ಗಳವಾಗಿ, ಗಂಭೀರವಾಗಿ ಮಾತನಾಡಬಲ್ಲವರಾಗಿದ್ದರು. ನನಗೆ ಶ್ವೇತಭವನದಲ್ಲಿ ಮಿಷೆಲ್ ಒಬಾಮಾ ಪಕ್ಕ ಕುಳಿತು ಭರ್ಜರಿ ಔತಣದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಸಿಂಗ್ ಅವರಿಂದಾಗಿಯೇ. ಮನಮೋಹನ್ ಸಿಂಗ್ ಅವರ ಗೌರವಾರ್ಥ ಒಬಾಮಾ ಕುಟುಂಬದವರು ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ನಾನು ಮನಮೋಹನರ ಅತಿಥಿ ಎಂದು ನನ್ನನ್ನು ವೈಭವಯುತವಾಗಿ ನಡೆಸಿಕೊಂಡರು. ವಿಭಿನ್ನ ವಿಷಯಗಳನ್ನು ಕುರಿತು ಸಿಂಗ್ ಅವರನ್ನು ಮಿಷೆಲ್ ಪ್ರಶ್ನಿಸುತ್ತಿದ್ದರು. ಸಿಂಗ್ ಅವರು ಅತ್ಯಂತ ಪ್ರತಿಭಾಪೂರ್ಣ ಉತ್ತರ ನೀಡಿದರು. ಹೀಗೆ ಮಿಷೆಲ್ ಅವರಷ್ಟೇ ಪ್ರತಿಭಾನ್ವಿತರೊಬ್ಬರು ಸಿಂಗ್ ಅವರನ್ನು ಸಂದರ್ಶನ ಮಾಡಿ, ಅದನ್ನು ವಿಶ್ವದಾದ್ಯಂತ ಹಂಚಿಕೊಳ್ಳುವಂತಾಗಿದ್ದರೆ ಎಷ್ಟು ಚೆನ್ನ.
ಐಕ್ಯತೆ ಮತ್ತು ಸಾಮಾಜಿಕ ನ್ಯಾಯ ಎನ್ನುವುದು ಇಂದಿಗೂ ಈ ದೇಶದಲ್ಲಿ ಸಮಸ್ಯೆಯಾಗಿಯೇ ಉಳಿದಿದೆ. ಇದರ ಬಗ್ಗೆ ಯೋಚಿಸಿದಾಗ ಇವೆರಡೂ ಭಾರತಕ್ಕೆ ಎಷ್ಟು ಅವಶ್ಯಕ ಎನ್ನುವುದನ್ನು ಸಿಂಗ್ ಎಷ್ಟು ಚೆನ್ನಾಗಿ ತಿಳಿದಿದ್ದರು ಎನ್ನುವುದು ನನಗೆ ನೆನಪಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮನಮೋಹನ್ ಭಾರತದಲ್ಲಿ ಆರ್ಥಿಕ ಉದಾರೀಕರಣದ ರೂವಾರಿ ಎಂದು ಮಾತ್ರ ಯೋಚಿಸುತ್ತಾರೆ. ಆದರೆ ಅವರು ಆರ್ಥಿಕ ಪ್ರಗತಿಯಲ್ಲಿ ಸಮಾನತೆ ಎಷ್ಟು ಅವಶ್ಯಕ ಎನ್ನುವುದನ್ನು ಎಂದೂ ಮರೆತಿರಲಿಲ್ಲ. ಅದರಲ್ಲಿಯೂ ಮುಖ್ಯವಾಗಿ ಬಡವರ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸಬೇಕು ಎನ್ನುವುದನ್ನು ಅವರು ಎಂದೂ ಮರೆತಿರಲಿಲ್ಲ. ಇದನ್ನೂ ನಾವು ನೆನಪಿಟ್ಟಕೊಳ್ಳಬೇಕು. ಶ್ರೀಮಂತರನ್ನು, ಅತಿಶ್ರೀಮಂತರನ್ನು – ಧನಿಕ ಪ್ರಭುತ್ವವನ್ನು ಬೆಳೆಸುವುದು ಎಂದೂ ಅವರ ಆದ್ಯತೆಯಾಗಿರಲಿಲ್ಲ.
ಸಿಂಗ್ ಅವರು ಪ್ರಾಥಮಿಕ ಆರೋಗ್ಯ ಮತ್ತು ಸಾಮಾನ್ಯ ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡಬಹುದಿತ್ತು. ಹಾಗೆಯೇ ಜಾತಿಯಾಧಾರಿತ ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದು ಹಾಕುವುದಕ್ಕೂ ಮತ್ತಷ್ಟು ಕೆಲಸ ಮಾಡಬಹುದಿತ್ತು ಅನಿಸುತ್ತದೆ. ಈ ಕ್ಷೇತ್ರಗಳಲ್ಲಿ ಅವರು ಬಯಸಿದ್ದಕ್ಕಿಂತಲೂ ಕಡಿಮೆ ಸಾಧಿಸಿದರು ಎನ್ನುವುದು ದುರದೃಷ್ಟಕರ. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮನಮೋಹನ್ ಅವರು ಅಷ್ಟೊಂದು ಸಂಕೋಚದಿಂದ ಇರಬೇಕಿರಲಿಲ್ಲ. ಅವರು ಮುಕ್ತವಾಗಿ ಮಾತನಾಡಬಹುದಿತ್ತು. ತಮ್ಮ ಮನಸ್ಸಿನಲ್ಲಿದ್ದ ಗಾಬರಿ ಕಾಳಜಿಗಳನ್ನು ಸಾರ್ವಜನಿಕವಾಗಿ ಹೇಳಬಹುದಾಗಿತ್ತು. ನಾವು ಅಂಬೇಡ್ಕರ್ ಕಲ್ಪಿಸಿಕೊಂಡಿದ್ದ ಭಾರತವನ್ನು ಕುರಿತು ಹಲವು ಬಾರಿ ಚರ್ಚಿಸಿದ್ದೆವು. ಆದರೆ ಮನಮೋಹನರ ಭಾಷಣಗಳಲ್ಲಿ ಆ ಕಲ್ಪನೆಗೆ ಅಷ್ಟೊಂದು ಪ್ರಾಮುಖ್ಯತೆ ದೊರಕಿರಲಿಲ್ಲ. ಆದರೆ ಆ ಕುರಿತು ಭ್ರಮನಿರಸನಗೊಂಡಿದ್ದರು. ಅದು ಅವರ ಭಾಷಣದಲ್ಲಿ ವ್ಯಕ್ತವಾಗುತ್ತಿತ್ತು.
ಧರ್ಮನಿರಪೇಕ್ಷತೆ ಕುರಿತು ಮನಮೋಹನ್ ತುಂಬಾ ಅಚಲವಾಗಿದ್ದರು. ಅವರ ಖಾಸಗಿ ಮಾತುಕತೆಗಳಲ್ಲಿ ಮತ್ತು ಅವರ ಸಾರ್ವಜನಿಕ ಆದ್ಯತೆಗಳಲ್ಲಿ ಈ ಕಾಳಜಿ ಬಲವಾಗಿ ವ್ಯಕ್ತವಾಗುತ್ತಿತ್ತು. ಭಾರತದಲ್ಲಿ ಧರ್ಮನಿರಪೇಕ್ಷತೆ ಕುರಿತು ಇರುವ ಬದ್ಧತೆ ದುರ್ಬಲವಾಗಿ, ಧರ್ಮ ತೀರಾ ದೊಡ್ಡ ರೀತಿಯಲ್ಲಿ ರಾಜಕಾರಣದೊಳಕ್ಕೆ ತಲೆಹಾಕಿರುವ ಈ ಕಾಲಘಟ್ಟದಲ್ಲಿ ಸಿಂಗ್ ವ್ಯಕ್ತಪಡಿಸುತ್ತಿದ್ದ ಸೆಕ್ಯುಲರ್ ಕಾಳಜಿಗಳನ್ನು ನೆನಪಿಸಿಕೊಳ್ಳಲೇಬೇಕು. ಭಾರತದಲ್ಲಿ ಐಕ್ಯತೆ ಇರಲೇಬೇಕು. ಅದು ತೀರ ಅವಶ್ಯಕ ಎನ್ನುವುದನ್ನು ತುಂಬಾ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದರು. ಧರ್ಮ ಮತ್ತು ಧಾರ್ಮಿಕ ರಾಜಕಾರಣ ಎರಡೂ ಬೇರೆ. ಇವುಗಳ ನಡುವಿನ ವ್ಯತ್ಯಾಸ ಅವರಿಗೆ ತುಂಬಾ ಮುಖ್ಯ ಎನಿಸಿತ್ತು. ರಾಜಕೀಯದಿಂದ ಧರ್ಮವನ್ನು ಹೊರಗಿಡುವುದು ಅವರ ವೈಶಿಷ್ಟ್ಯವಾಗಿತ್ತು. ಅಂತೆಯೇ ಅವರ ಮತ್ತೊಂದು ವಿಶೇಷತೆ ಧಾರ್ಮಿಕ ತಾಟಸ್ಥ್ಯ. ಧರ್ಮ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಅವರು ಧಾರ್ಮಿಕ ವಿಧಿಗಳು ಆಚರಿಸುತ್ತಿದ್ದರು. ೧೯೫೬ರಲ್ಲಿ ನಾನು ಸೈಂಟ್ ಜಾನ್ ಕಾಲೇಜಿನಲ್ಲಿ ಅವರ ಕೊಠಡಿಗೆ ಹೋಗುತ್ತಿದ್ದೆ. ಆಗ ರೂಮಿನಲ್ಲಿ ಅವರು ಶುಭ್ರವಾಗಿ ಒಗೆದು ಒಣಗಿಹಾಕಿದ್ದ ರುಮಾಲು ಕಾಣಿಸುತ್ತಿತ್ತು. ಇಷ್ಟಾಗಿಯೂ ಉಳಿದವರ ಧರ್ಮ ಮತ್ತು ಧಾರ್ಮಿಕತೆಯನ್ನು ಒಪ್ಪಿ ಬೆಂಬಲಿಸುವಾಗ ಅವರ ಸಿಖ್ ಅಸ್ಮಿತೆ ಎಂದೂ ಅಡ್ಡ ಬರುತ್ತಿರಲಿಲ್ಲ. ಅವರೊಳಗೆ ಯಾವ ಘರ್ಷಣೆಯೂ ಇರಲಿಲ್ಲ.
ತುಂಬಾ ಹಿಂದೆ ಈ ಕುರಿತು ನಾನು ಮನಮೋಹನ್ ಅವರೊಂದಿಗೆ ಮಾತನಾಡಿದ ಸಂದರ್ಭವೊಂದು ನೆನಪಾಗುತ್ತದೆ. ರಾಜಕಾರಣವನ್ನು ಧರ್ಮದಿಂದ ದೂರ ಇಡುವುದು ಮತ್ತು ಧಾರ್ಮಿಕ ತಾಟಸ್ಥ್ಯ ಎರಡೂ ತೀರಾ ಬೇರೆ ಬೇರೆ ಎಂದು ಆಗ ನನಗನ್ನಿಸಿತ್ತು. ವಜ್ರಚ್ಛೇದಿಕ ಪ್ರಜ್ಞಾಪರಾಮಿತ ಸೂತ್ರ ನನಗೆ ತುಂಬಾ ಇಷ್ಟವಾದ ಸಂಸ್ಕೃತ ಗ್ರಂಥಗಳಲ್ಲಿ ಒಂದು. ಮನಮೋಹನರ ಈ ವಿಶಿಷ್ಟ ಬಗೆಯ ಧಾರ್ಮಿಕ ತಾಟಸ್ಥ್ಯ ಈ ಗ್ರಂಥದಲ್ಲಿ ಗೌತಮ ಬುದ್ಧ ಆಡುವ ಮಾತುಗಳು ನೆನಪಾಗುತ್ತಿದ್ದವು. ಈ ಗ್ರಂಥವನ್ನು ಕುಮಾರಜೀವ ಕ್ರಿ.ಶ ೪೦೧ರಲ್ಲಿ ಚೀನೀ ಭಾಷೆಗೆ ಅನುವಾದಿಸಿದ. ಇದು ಪ್ರಪಂಚದಲ್ಲಿ ಪ್ರಪ್ರಥಮ ಮುದ್ರಿತ ಪುಸ್ತಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ (೮೬೮ರಲ್ಲಿ ಮುದ್ರಿತವಾಯಿತು). ಈ ಕೃತಿಯಲ್ಲಿ ವಜ್ರಸೂತ್ರ ಎನ್ನುವ ಸೂತ್ರವಿದೆ. ಅದರಲ್ಲಿ ಬುದ್ಧ ತನ್ನ ಶಿಷ್ಯ ಸುಭೂತಿಗೆ: ಬೋಧಿಸತ್ವತ್ವ ಪಡೆಯಲು ಪ್ರಯತ್ನಿಸುತ್ತಿರುವವರು ಎಲ್ಲಾ ಧರ್ಮಗಳನ್ನೂ ಅರಿತಿರುತ್ತಾರೆ, ನೋಡುತ್ತಾರೆ ಮತ್ತು ನಂಬುತ್ತಾರೆ. ಆದರೆ ಅವರು ಯಾವುದೇ ಒಂದು ನಿರ್ದಿಷ್ಟ ಧರ್ಮದ ಗ್ರಹಿಕೆಗೆ ಅಂಟಿಕೊಂಡಿರುವುದಿಲ್ಲ. ಆದರೆ ಅವುಗಳನ್ನು ಅರಿತಿರುತ್ತಾರೆ, ನೋಡುತ್ತಾರೆ ಮತ್ತು ನಂಬುತ್ತಾರೆ. ಬುದ್ಧನು ತಾನು ಪರಿಭಾವಿಸುವ ಧರ್ಮಗಳ ಪಟ್ಟಿಯಲ್ಲಿ ನಿರೀಶ್ವರವಾದ ಮತ್ತು ಆಜ್ಞೇಯತಾವಾದವನ್ನೂ ಸೇರಿಸುತ್ತಾನೆ. ನಾನು ಕೂಡ ಆ ಪಟ್ಟಿಯಲ್ಲಿ ಇರುವವನು. ಹಾಗಾಗಿ ನನ್ನನ್ನೂ ಬೆಂಬಲಿಸಿ ಎಂದು ಬೋಧಿಸತ್ವನ ಹಾದಿಯಲ್ಲಿಯೇ ಸಾಗುತ್ತಿರುವ ಮನಮೋಹನ್ ಅವರನ್ನು ಕೇಳಿಕೊಳ್ಳಬಹುದು.
ನಮ್ಮನ್ನು ಆವರಿಸಿರುವ ಬಹುತ್ವವನ್ನು ಮನಮೋಹನ್ ಗುರುತಿಸಿದ್ದು ಇಂದಿಗೂ ನನಗೆ ತೀರಾ ಮಹತ್ವದ್ದು ಎನಿಸುತ್ತದೆ. ಅವರ ಈ ಕಾಣ್ಕೆ ಏನು ಎನ್ನುವುದು ನಮ್ಮ ಗ್ರಹಿಕೆಯ ಬೇರ್ಪಡಿಸಲಾಗದ ಭಾಗವಾಗಿ ಇರಬೇಕು ಎನ್ನುವುದು ನನ್ನ ಆಸೆ. ಮನಮೋಹನ್ ಅವರ ವಿನಯಪೂರ್ವಕ ಹಿಂಜರಿಕೆಯನ್ನು ನಾವು ಉತ್ತರವಾಗಿ ಸ್ವೀಕರಿಸುವುದಿಲ್ಲ.