ಗ್ರಾಮೀಣ ಉದ್ಯೋಗ ಖಾತರಿಯ ಕಲ್ಪನೆಯು ಭಾರತದ ಸಂವಿಧಾನದ ಆಶಯವಾಗಿತ್ತು. ಉದ್ಯೋಗ ಖಾತ್ರಿ ಯೋಜನೆ ಭಾರತದ ಕಾರ್ಮಿಕ ಚಳುವಳಿಯ ಬಹಳ ಕಾಲದ ಬೇಡಿಕೆ. ಲಾಗಾಯ್ತಿನಿಂದ ಉದ್ಯೋಗದ ಹಕ್ಕಿಗಾಗಿ ಲಕ್ಷಾಂತರ ಮಹಿಳೆಯರು, ದಲಿತರು, ಅದಿವಾಸಿಗಳು, ಭೂಹೀನ ಕಾರ್ಮಿಕರು ಹೋರಾಟ ನಡೆಸುತ್ತಲೇ ಇದ್ದರು. ಪ್ರತಿ ಕೈಗೆ ಕೆಲಸ, ಕೆಲಸಕ್ಕೆ ಸರಿಯಾದ ವೇತನ ಅನ್ನುವುದು ಜನಾಂದೋಲನದ ಮುಖ್ಯ ಘೋಷಣೆಯಾಗಿತ್ತು. ಈ ಹೋರಾಟಗಳು ಕೆಲಸ, ಕೂಲಿ ಹಾಗೂ ಘನತೆಯನ್ನು ಬಯಸುತ್ತಿದ್ದ ಜನರ ಧ್ವನಿಯಾಗಿತ್ತು.
ಮಹಾರಾಷ್ಟ್ರ ೧೯೭೦ರಲ್ಲೇ ಇಂತಹ ಒಂದು ಉದ್ಯೋಗ ಖಾತರಿ ಯೋಜನೆಯನ್ನು ಹಮ್ಮಿಕೊಂಡು ರಾಷ್ಟ್ರಕ್ಕೆ ಒಂದು ದಾರಿಯನ್ನು ತೋರಿಸಿತ್ತು. ಬರಗಾಲದ ಸಮಯದಲ್ಲಿ ಜನರ ಸಂಕಷ್ಟಕ್ಕೆ ಪರಿಹಾರವಾಗಿ ’ಮಹಾರಾಷ್ಟ್ರ ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನದ ಆಶಯಕ್ಕೆ, ಜನರ ಹೋರಾಟಕ್ಕೆ ಒಂದು ಭರವಸೆಯನ್ನು ಮೂಡಿಸಿತ್ತು. ಅಕುಶಲ ಕೆಲಸ ಮಾಡಲು ಬಯಸುವ ಎಲ್ಲರಿಗೂ ಕನಿಷ್ಠ ವೇತನದ ಉದ್ಯೋಗದ ಖಾತರಿ ನೀಡುವುದು ಇದರ ಉದ್ದೇಶವಾಗಿತ್ತು. ಬಡತನ ನಿವಾರಣೆಗೆ ಇದನ್ನು ಪರಿಣಾಮಕಾರಿ ವ್ಯವಸ್ಥೆಯನ್ನಾಗಿ ಯೋಜಿಸಲಾಗಿತ್ತು.
೨೦೦೧ರಲ್ಲಿ ರಾಜಾಸ್ಥಾನದಲ್ಲಿ ಕ್ಷಾಮ ತೀವ್ರವಾಗಿದ್ದಾಗ ಮತ್ತೆ ಈ ಬಗ್ಗೆ ಚರ್ಚೆ ಕಾವು ಪಡೆದುಕೊಂಡಿತು. ಉದ್ಯೋಗದ ಖಾತ್ರಿಗಾಗಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ, ಆಹಾರದ ಹಕ್ಕಿಗಾಗಿ ಆಂದೋಲನ ಇತ್ಯಾದಿ ಸಂಘಟನೆಗಳೂ ಒತ್ತಾಯಿಸುತ್ತಿದ್ದವು. ಕಾಂಗ್ರೆಸ್ ೨೦೦೪ರ ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಎಡಪಕ್ಷಗಳು ಹೊರಗಿನಿಂದ ಬೆಂಬಲ ನೀಡಿದ್ದವು. ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಉದ್ಯೋಗ ಖಾತರಿ ಯೋಜನೆಯ ಪರವಾಗಿದ್ದರು. ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಉದ್ಯೋಗ ಖಾತರಿ ಕಾಯ್ದೆಗೆ ಆದ್ಯತೆ ನೀಡಬೇಕೆಂಬುದು ಎಡಪಕ್ಷಗಳೂ ತೀವ್ರವಾಗಿ ಒತ್ತಾಯಿಸಿದ್ದವು.
ಯುಪಿಎ ಸರ್ಕಾರ ೨೦೦೪ರಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯನ್ನು ರಚಿಸಿತ್ತು. ಕೆಲವು ಬುದ್ದಿಜೀವಿಗಳು, ನಿವೃತ್ತ ಅಧಿಕಾರಿಗಳು ಅದರ ಸದಸ್ಯರಾಗಿದ್ದರು. ಆಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅದರ ಅಧ್ಯಕ್ಷರಾಗಿದ್ದರು. ಸಮಿತಿಯ ಮೊದಲ ಸಭೆ ನಡೆದದ್ದು ಆಗಸ್ಟ್ ೧೯, ೨೦೦೪ರಲ್ಲಿ. ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಗ್ರಾಮೀಣ ಬಡವರಿಗೆ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ವಿವರವಾದ ಯೋಜನೆಯನ್ನು ತಯಾರಿಸಿದ್ದರು.
ವ್ಯಾಪಕ ಚರ್ಚೆಯ ನಂತರ ಕರಡು ಯೋಜನೆ ಸಿದ್ದವಾಯಿತು. ಅದನ್ನು ಅನುಮೋದನೆಗಾಗಿ ಪಾರ್ಲಿಮೆಂಟಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕಿತ್ತು. ಹಾಗೆ ಕಳುಹಿಸುವಾಗ ಸರ್ಕಾರ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಮೂಲ ಯೋಜನೆಯಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ದೇಶಾದ್ಯಂತ ಮೂರು ವರ್ಷಗಳಲ್ಲಿ ಜಾರಿಗೆ ತರಬೇಕೆನ್ನುವ ಸಲಹೆ ಇತ್ತು. ಪರಿಷ್ಕರಿಸುವಾಗ ಅದನ್ನು ತೆಗೆಯಲಾಗಿತ್ತು. ಸರ್ಕಾರ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಮೂಲ ಯೋಜನೆಯಲ್ಲಿ ಸೂಚಿಸಲಾಗಿತ್ತು. ತಿದ್ದುಪಡಿಯಲ್ಲಿ ಸರ್ಕಾರಕ್ಕೆ ಕಾಯ್ದೆಯಿಂದ ಹೊರಗುಳಿಯುವ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಹಾಗೆಯೇ ಸಾರ್ವತ್ರಿಕವಾಗಿ ಅದನ್ನು ಜಾರಿಗೊಳಿಸಬೇಕೆಂಬುದು ಮೂಲ ಸಲಹೆಯಾಗಿತ್ತು. ಕೇವಲ ದಾರಿದ್ರ್ಯರೇಖೆಯಿಂದ ಕೆಳಗೆ ಇರುವವರಿಗೆ ಅನ್ವಯಿಸುವಂತೆ ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿತ್ತು.
ಇದರಿಂದ ಉದ್ಯೋಗ ಖಾತರಿ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿತ್ತು. ಯೋಜನೆಯಿಂದ ಹೊರಗುಳಿಯುವ ಸ್ವಾತಂತ್ರವನ್ನು ಸರ್ಕಾರಕ್ಕೆ ನೀಡಿದರೆ ಉದ್ಯೋಗ ಖಾತರಿಯಾಗಿ ಉಳಿಯುವುದಿಲ್ಲ. ದೇಶಾದ್ಯಂತ ಇದನ್ನು ಜಾರಿಗೊಳಿಸುವುದು ಕಡ್ಡಾಯವಾಗಬೇಕು. ಹಾಗೆಯೇ ಕೆಲವು ಆರ್ಥಿಕ ಅಥವಾ ಸಾಮಾಜಿಕ ಸಮುದಾಯಗಳಿಗೆ ಇದನ್ನು ಸೀಮಿತಗೊಳಿಸದೆ ಕೆಲಸ ಮಾಡಲು ಇಚ್ಛಿಸುವವರಿಗೆಲ್ಲಾ ಇದರಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶವಿರಬೇಕು ಎಂದು ಹಲವು ಸಂಘಟನೆಗಳು ಒತ್ತಾಯಿಸತೊಡಗಿದವು. ಬದಲಾವಣೆಗಳನ್ನು ಕೈಬಿಟ್ಟು ಮೂಲ ರೂಪದಲ್ಲೇ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದವು. ಇದಕ್ಕಾಗಿ ದೇಶಾದ್ಯಂತ ಎಲ್ಲೆಡೆ ಆಂದೋಲನ ನಡೆಯಿತು. ಪಾರ್ಲಿಮೆಂಟ್ ರಸ್ತೆಯಲ್ಲೂ ಲಕ್ಷಾಂತರ ಜನ ಮೆರವಣಿಗೆ ನಡೆಸಿದ್ದರು. ಅಂತಿಮವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ) ೨೦೦೫ರಲ್ಲಿ ಮೂಲರೂಪದಲ್ಲೇ ಜಾರಿಗೆ ಬಂದಿತು ೨೦೦೯ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಎಂದು ಮರುನಾಮಕರಣಗೊಂಡಿತು.
ಜೀನ್ ಡ್ರೀಜ್ ಹೇಳುವಂತೆ ೨೦೦೫ರಲ್ಲಿ ಜಾರಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಒಂದು ದಶಕಕ್ಕೂ ಹೆಚ್ಚಿನ ಹೋರಾಟದ ಫಲ. ಪ್ರತಿ ಕುಟುಂಬಕ್ಕೆ ಕನಿಷ್ಟ ನೂರು ದಿನಗಳ ಕೆಲಸ ಕೊಡುವುದರ ಜೊತೆಗೆ ರಸ್ತೆ, ನೀರುಪೂರೈಕೆ ಇತ್ಯಾದಿ ಸಾರ್ವಜನಿಕ ಸ್ವತ್ತಿನ ನಿರ್ಮಾಣ ಅದರ ಉದ್ದೇಶವಾಗಿತ್ತು. ಆರ್ಥಿಕ ಘನತೆ ಅನ್ನುವುದು ಜನರ ಮೂಲಭೂತ ಹಕ್ಕು ಎಂದು ಮನರೇಗಾ ಒಪ್ಪಿಕೊಂಡಿತ್ತು. ಹಾಗೆಯೇ ಜನತೆಗೆ ಗೌರವದ ಬದುಕನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಅದು ಮಾನ್ಯಮಾಡಿತ್ತು. ಮನರೇಗಾದಿಂದಾಗಿ ಗ್ರಾಮೀಣ ಕೆಲಸಗಾರರಿಗೆ ಚೌಕಾಸಿ ಮಾಡುವ ಶಕ್ತಿ ಸ್ವಲ್ಪಮಟ್ಟಿಗಾದರೂ ಸಾಧ್ಯವಾಯಿತು. (ಜೀನ್ ಡ್ರೀಜ್ ಇತ್ತಿಚೆಗೆ ಕಾರವಾನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ)
ಮನರೇಗಾ ಹೇಗೆ ಭಿನ್ನ?
ಆರ್ಥಿಕ ಹಕ್ಕುಗಳು ಭಾರತೀಯ ಸಂವಿಧಾನದ ’ಮೂಲಭೂತ ಹಕ್ಕುಗಳ’ ಪಟ್ಟಿಯಲ್ಲಿ ಸೇರಿಲ್ಲ. ಅದು ’ರಾಜ್ಯ ನಿರ್ದೇಶಕ ತತ್ವಗಳ’ ಅಡಿಯಲ್ಲಿ ಬರುತ್ತದೆ. ಪ್ರಭಾತ್ ಪಟ್ನಾಯಕ್ ಹೇಳುವಂತೆ ಮನರೇಗಾ ಉದ್ಯೋಗದ ಹಕ್ಕನ್ನು ಮಾನ್ಯಮಾಡುವ ಮೂಲಕ ಈ ನ್ಯೂನತೆಯನ್ನು ಸರಿಪಡಿಸಲು ಮತ್ತು ಸಂವಿಧಾನದ ಆಶಯವನ್ನು ಭಾಗಶಃ ಸಾಕಾರಗೊಳಿಸಲು ಪ್ರಯತ್ನಿಸಿತ್ತು. ಮನರೇಗಾದಲ್ಲಿ ಉದ್ಯೋಗ ಒಂದು ಹಕ್ಕಾಗಿತ್ತು. ಎಲ್ಲಾ ಗ್ರಾಮೀಣ ಕುಟಂಬಗಳು ವರ್ಷಕ್ಕೆ ೧೦೦ ದಿನಗಳ ಅಕುಶಲ ದೈಹಿಕ ಶ್ರಮದ ಉದ್ಯೋಗಕ್ಕಾಗಿ ಒತ್ತಾಯಿಸಬಹುದಿತ್ತು. ಇದೊಂದು ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಕೆಲಸಕ್ಕೆ ಬೇಡಿಕೆ ಸಲ್ಲಿಸಿದವರಿಗೆ ಉದ್ಯೋಗ ಕೊಡಬೇಕಿತ್ತು. ಕೆಲಸಕ್ಕೆ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಉದ್ಯೋಗ ಒದಗಿಸದಿದ್ದರೆ, ಅರ್ಜಿದಾರರಿಗೆ ಸರ್ಕಾರ ನಿರುದ್ಯೋಗ ಭತ್ಯೆ ನೀಡಬೇಕಿತ್ತು. ಇದು ಉದ್ಯೋಗ ಬಯಸುವ ಎಲ್ಲ್ಲರಿಗೂ ಅನ್ವಯವಾಗುತ್ತಿತ್ತು. ಯವುದೇ ಸಾಮಾಜಿಕ ಹಾಗೂ ಆರ್ಥಿಕ ಸಮುದಾಯಕ್ಕೆ ಇದು ಸೀಮಿತವಾಗಿರಲಿಲ್ಲ. ಒಂದು ಅಂದಾಜಿನ ಪ್ರಕಾರ ಈ ಯೋಜನೆಯನ್ನು ೧೨.೬೧ ಕೋಟಿ ಜನ ನೆಚ್ಚಿಕೊಂಡಿದ್ದರು.
ಮನರೇಗಾದಲ್ಲಿ ದುಡಿಯುತ್ತಿರುವವರಲ್ಲಿ ಶೇಕಡ ೫೮ರಷ್ಟು ಮಹಿಳೆಯರು. ಮನರೇಗಾ ಯೋಜನೆ ಇದಿದ್ದರೆ ಇದರಲ್ಲಿ ಅರ್ಧದಷ್ಟು ಮಹಿಳೆಯರು ದುಡಿಯುವುದಕ್ಕೆ ಬರುತ್ತಲೇ ಇರಲಿಲ್ಲ. ಮಹಿಳೆಯರು ಮನರೇಗಾ ಕೆಲಸಕ್ಕೆ ಬರುವುದಕ್ಕೆ ಜೀನ್ ಡ್ರೀಜ್ ಹಲವು ಕಾರಣಗಳನ್ನು ಗುರುತಿಸುತ್ತಾರೆ. ಮಹಿಳೆಯರಿಗೆ ಸ್ವಂತದ ವರಮಾನವನ್ನು ಸಂಪಾದಿಸುವುದಕ್ಕೆ ಮನರೇಗಾ ಒಂದು ಅಪರೂಪದ ಅವಕಾಶವಾಗಿತ್ತು. ಮನೆಯ ಸಮೀಪದಲ್ಲೇ ಕೆಲಸ ಸಿಗುತ್ತಿದ್ದುದು ಅವರಿಗೆ ಹೆಚ್ಚು ಅನುಕೂಲವಾಗಿತ್ತು. ಕೆಲಸದ ವಾತಾವರಣ ಹೆಚ್ಚು ಸುರಕ್ಷಿತವಾಗಿತ್ತು. ಪುರುಷರಷ್ಟೆ ವೇತನ ಇವರಿಗೂ ಸಿಗುತ್ತಿತ್ತು. ಜೊತೆಗೆ ಸರ್ಕಾರಿ ಕೆಲಸ ಹೆಚ್ಚು ಗೌರವದ ಕೆಲಸ ಅನ್ನುವ ಭಾವನೆಯೂ ಅವರನ್ನು ಕೆಲಸಕ್ಕೆ ಬರುವುದಕ್ಕೆ ಉತ್ತೇಜಿಸಿರಬಹುದು. ಉದ್ಯೋಗ ನೀಡುವಾಗ ಮಹಿಳೆಯರಿಗೆ ಆದ್ಯತೆ ಕೊಡಬೇಕು, ಕನಿಷ್ಠ ಮೂರನೇ ಒಂದರಷ್ಟು ಮಹಿಳೆಯರಿಗೆ ಕೆಲಸ ದೊರಕುವಂತೆ ನೋಡಿಕೊಳ್ಳಬೇಕು ಎಂದು ಕಾಯ್ದೆಯಲ್ಲೂ ಸೂಚಿಸಲಾಗಿತ್ತು. ಆದರೆ ಮಹಿಳೆಯರನ್ನು ಪ್ರೋತ್ಸಾಹಿಸುವುದಕ್ಕೆ ಯಾವುದೇ ವಿಶೇಷ ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾದ ಅವಶ್ಯಕತೆ ಸರ್ಕಾರಕ್ಕೆ ಬರಲಿಲ್ಲ. ಮಹಿಳೆಯರು ಅವರಷ್ಟಕ್ಕೆ ಕೆಲಸಕ್ಕೆ ಬಂದರು. ಹಾಗೆಯೇ ಮನರೇಗಾ ಯೋಜನೆಯಲ್ಲಿ ಉದ್ಯೋಗ ಪಡೆದುಕೊಂಡವರಲ್ಲಿ ಪರಿಶಿಷ್ಟ ಜಾತಿ ಹಾಗು ಬುಡಕಟ್ಟಿಗೆ ಸೇರಿದವರು ಶೇಕಡ ೩೮ರಷ್ಟು ಜನ ಇದ್ದರು.
ಎರಡನೆಯದಾಗಿ ಇದೊಂದು ವಿಕೇಂದ್ರೀಕೃತ ಯೋಜನೆಯಾಗಿತ್ತು. ಕಾಮಗಾರಿಗಳನ್ನು ಗುರುತಿಸುವುದು ಮತ್ತು ಲೆಕ್ಕಪರಿಶೋಧನೆ ಮಾಡುವುದು ಗ್ರಾಮಸಭೆಗಳ ಜವಾಬ್ದಾರಿಯಾಗಿತ್ತು.
ಮೂರನೆಯದಾಗಿ ರಾಜ್ಯಗಳಿಗೆ ಹೊರೆಯಾಗದಂತೆ ನೋಡಿಕೊಳ್ಳಲು, ಕೇಂದ್ರ ಸರ್ಕಾರವು ವೇತನದ ೧೦೦% ಖರ್ಚನ್ನು ಮತ್ತು ಸಾಮಗ್ರಿ ವೆಚ್ಚದ ೭೫% ಭರಿಸುತ್ತಿತ್ತು. ರಾಜ್ಯ ಸರ್ಕಾರಗಳು ಸಾಮಗ್ರಿ ವೆಚ್ಚದ ೨೫% ಮತ್ತು ನಿರುದ್ಯೋಗ ಭತ್ಯೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕಿತ್ತು. ನಿರುದ್ಯೋಗ ಭತ್ಯೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲೆ ಇದ್ದುದರಿಂದ, ಉದ್ಯೋಗವನ್ನು ಸೃಷ್ಟಿಸುವುದು ಅವರಿಗೆ ಅನಿವಾರ್ಯವಾಗಿತ್ತು.
ಕ್ರಮೇಣ ಮನರೇಗಾದ ಆಚರಣೆಯಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದವು. ಆರಂಭಿಕ ವರ್ಷಗಳಲ್ಲಿ (೨೦೦೬-೨೦೧೨) ಮನರೇಗಾದಿಂದಾಗಿ ಗ್ರಾಮೀಣ ವೇತನದಲ್ಲಿ ಗಮನಾರ್ಹ ಏರಿಕೆ ಸಾಧ್ಯವಾಗಿತ್ತು. ನಂತರದ ದಿನಗಳಲ್ಲಿ, ಹಣದುಬ್ಬರ ಹೆಚ್ಚಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ನೈಜ ವೇತನದ ಬೆಳವಣಿಗೆ ಸ್ಥಗಿತಗೊಂಡಿತ್ತು. ಮನರೇಗಾ ವೇತನವೂ ಸ್ಥಗಿತವಾಯಿತು. ವೇತನದ ಪಾವತಿಯೂ ವಿಳಂಬವಾಗತೊಡಗಿತು. ಭ್ರಷ್ಟಾಚಾರದ ಆರೋಪ ವ್ಯಾಪಕವಾಯಿತು. ಸುಳ್ಳು ಉದ್ಯೋಗದ ಕಾರ್ಡುಗಳು ಕಾಣಿಸಿಕೊಳ್ಳತೊಡಗಿದವು. ಜೊತೆಗೆ ನಂತರ ಆಡಳಿತಕ್ಕೆ ಬಂದ ಎನ್‌ಡಿಎ ಸರ್ಕಾರದ ತೀವ್ರವಾದ ವಿರೋಧವೂ ಸೇರಿಕೊಂಡಿತು. ೨೦೧೫ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಮನರೇಗಾವನ್ನು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಜೀವಂತ ಸ್ಮಾರಕ ಎಂದು ಬಣ್ಣಿಸಿದ್ದರು. ಮನರೇಗವನ್ನು ರದ್ದುಗೊಳಿಸುವ ಪ್ರಯತ್ನ ಪ್ರಾರಂಭವಾಯಿತು. ಮನರೇಗಾವನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯಿತು. ಅದರ ಖರ್ಚಿಗೆ ಮಿತಿ ಹೇರುವ ಪ್ರಯತ್ನವೂ ಆಯಿತು. ಮನರೇಗಾದ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಒಂದೇ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆ ೨೫%ರಷ್ಟು ಇಳಿಯಿತು.
ಆದರೆ ಸಂಕಷ್ಟದ ಸಮಯದಲ್ಲಿ ಇದು ಆಸರೆಯನ್ನು ನೀಡಬಲ್ಲ ಯೋಜನೆಯಾಗಿತ್ತು. ೨೦೦೯-೧೦ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಇದು ಜನರಿಗೆ ಆಸರೆ ಒದಗಿಸುತ್ತು. ಇದು ಸರ್ಕಾರಕ್ಕ್ಕ ತಿಳಿದಿತ್ತು. ಕೋವಿಡ್ ಸಮಯದಲ್ಲಿ ಅದನ್ನು ಆಶ್ರಯಿಸುವುದು ಸರ್ಕಾರಕ್ಕೂ ಅನಿವಾರ್ಯವಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಿದಾಗ ಅಲ್ಲಿ ಅವರಿಗೆ ಆಸರೆಯಾಗಿ ನಿಂತಿದ್ದೇ ಮನರೇಗಾ. ಅದು ಅವರಿಗೆ ಉದ್ಯೋಗ ಕೊಟ್ಟಿತ್ತು. ಇದು ಆರ್ಥಿಕತೆಯ ವಿಮೆಯಂತೆ ಕೆಲಸ ಮಾಡಿತು. ಆದರೂ ಯೋಜನೆಯನ್ನು ನಿಲ್ಲಿಸುವ, ಅದರ ಸ್ವರೂಪವನ್ನು ಬದಲಾಯಿಸುವ ಪ್ರಯತ್ನ ನಡೆದೇ ಇತ್ತು.
ತಂತ್ರಜ್ಞಾನ ಆಧಾರಿತ ಸುಧಾರಣೆಗಳಿಗೆ ಒತ್ತು ನೀಡಿತು. ವೇತನವನ್ನು ನೇರವಾಗಿ ಫಲಾನುಭವಿಗಳ ಆಧಾರ್-ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಒತ್ತು ನೀಡಲಾಯಿತು. ದಿನಕ್ಕೆ ಎರಡು ಬಾರಿ ಕೆಲಸದ ಸ್ಥಳದಲ್ಲಿ ಜಿಯೋ-ಟ್ಯಾಗ್ ಮಾಡಿದ ಫೋಟೋಗಳೊಂದಿಗೆ ಹಾಜರಾತಿ ದಾಖಲಾತಿಯನ್ನು ಕಡ್ಡಾಯಗೊಳಿಸಲಾಯಿತು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ಸಮಸ್ಯೆಯಿತ್ತು. ಅದರಿಂದ ಹಲವು ಕಾರ್ಮಿಕರಿಗೆ ವೇತನ ಪಾವತಿಯಾಗಲಿಲ್ಲ. ವೇತನ ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಂಃPS) ಕಡ್ಡಾಯಗೊಳಿಸಿದ ನಂತರ, ತಾಂತ್ರಿಕ ಸಮಸ್ಯೆಗಳಿಂದ ಲಕ್ಷಾಂತರ ಕಾರ್ಮಿಕರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಲಿಬ್‌ಟೆಕ್ ಇಂಡಿಯಾ ವರದಿಯ ಪ್ರಕಾರ, ೨೦೨೩-೨೪ ರಲ್ಲಿಯೇ ೮ ಕೋಟಿಗೂ ಹೆಚ್ಚು ಕಾರ್ಮಿಕರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಡಿಸೆಂಬರ್ ೨೦೨೧ರಿಂದ ಕೇಂದ್ರ ಸರ್ಕಾರವು ಭ್ರಷ್ಟಾಚಾರದ ಆರೋಪದ ಮೇಲೆ ಪಶ್ಚಿಮ ಬಂಗಾಳಕ್ಕೆ ಮನರೇಗಾ ನಿಧಿಯನ್ನು ತಡೆಹಿಡಿದಿದೆ. ಇದರಿಂದ ಲಕ್ಷಾಂತರ ಕಾರ್ಮಿಕರು ವೇತನವಿಲ್ಲದೆ ಪರದಾಡುವಂತಾಗಿದೆ. ಆದರೆ, ನಕಲಿ ಜಾಬ್ ಕಾರ್ಡ್‌ಗಳ ಸಂಖ್ಯೆ ಇತರ ಕೆಲವು ರಾಜ್ಯಗಳಿಗಿಂತ ಪಶ್ಚಿಮ ಬಂಗಾಳದಲ್ಲಿ ಕಡಿಮೆಯಿದೆ ಎಂದು ವರದಿಗಳು ಸೂಚಿಸುತ್ತವೆ.
ವಿಬಿ ಜಿ ರಾಂ ಜಿ ಜಾರಿಯಾಗಿದ್ದು
ಕೊನೆಗೂ ಸರ್ಕಾರ ಡಿಸೆಂಬರ್ ೨೦೨೫ರಲ್ಲಿ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಔರ್ ಅಜೀವಿಕಾ ಮಿಷನ್ (ವಿಬಿ ಜಿ ರಾಂ ಜಿ) ಕಾಯ್ದೆಯನ್ನು ಜಾರಿಗೊಳಿಸಿತು. ಹೊಸ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸದೇ, ವ್ಯಾಪಕ ಪರಾಮರ್ಶೆಯಿಲ್ಲದೇ, ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಗಂಭೀರ ಚರ್ಚೆಯೂ ಆಗದೆ ಮಸೂದೆಯನ್ನು ಯಥಾವತ್ತು ಅಂಗೀಕರಿಸಲಾಯಿತು.
ಮನರೇಗಾದಲ್ಲಿ ಉದ್ಯೋಗ ಹಕ್ಕಾಗಿತ್ತು. ಈಗ ಅದನ್ನು ಹೇಗೆ, ಎಲ್ಲಿ ಯಾವಾಗ ಮತ್ತು ಹೇಗೆ ಜಾರಿಗೊಳಿಸಬೇಕು ಅನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಅಷ್ಟೇ ಅಲ್ಲ ಅದನ್ನು ನಿರ್ಧರಿಸುವುದಕ್ಕೆ ಮಾನದಂಡವನ್ನೂ ಕೇಂದ್ರವೇ ನಿರ್ಧರಿಸುತ್ತದೆ. ಸಹಜವಾಗಿಯೇ ಯೋಜನೆ ಸಾರ್ವತ್ರಿಕವಾಗುವುದಿಲ್ಲ, ಬೇಡಿಕೆ ಆಧಾರಿತ ಕಾರ್ಯಕ್ರಮವೂ ಆಗುವುದಿಲ್ಲ. ಇದು ಉದ್ಯೋಗ ಖಾತ್ರಿಯ ಉದ್ದೇಶಕ್ಕೆ ಅಪಚಾರ ಅನ್ನುವ ಜೀನ್ ಡ್ರೀಜ್ ಇದನ್ನು ಉದ್ಯೋಗವನ್ನು ಖಾತ್ರಿಯಾಗಿ ನೀಡಲಾಗುತ್ತದೆ ಎನ್ನುವ ಖಾತ್ರಿಯೇ ಇಲ್ಲದ ಉದ್ಯೋಗ ಖಾತ್ರಿ ಯೋಜನೆಯಾಗಿದೆ! ಎಂದು ಟೀಕಿಸಿದ್ದಾರೆ. ಇದನ್ನು ಅವರು ರಿಮೋಟ್ ಕಂಟ್ರೋಲಿನಿಂದ ತೆರೆದುಕೊಳ್ಳುವ ಪ್ಯಾರಾಚೂಟ್ಗೆ ಹೋಲಿಸುತ್ತಾರೆ.
ಮೂಲತಃ ಇದು ಬೇಡಿಕೆ ಆಧಾರಿತ ಯೋಜನೆಯಾಗಿದ್ದರಿಂದ ಮನರೇಗಾದ ಬಜೆಟ್ ಕೇವಲ ಒಂದು ಅಂದಾಜಾಗಿತ್ತು. ಅದು ಯೋಜನೆಯ ಗರಿಷ್ಠ ಮಿತಿಯಾಗಿರಲಿಲ್ಲ. ಬೇಡಿಕೆ ಬಜೆಟ್ಟಿಗಿಂತ ಹೆಚ್ಚಾಗಿದ್ದರೆ ಅದನ್ನು ಒದಗಿಸುವುದು ಕೇಂದ್ರದ ಶಾಸನಬದ್ಧ ಜವಾಬ್ದಾರಿಯಾಗಿತ್ತು. ಆದರೆ ಈಗ ಅದು ಬೇಡಿಕೆ ಆಧಾರಿತ ಮೊತ್ತವಲ್ಲ. ಅದರ ಗರಿಷ್ಠ ಮಿತಿಯನ್ನು ಕೇಂದ್ರ ನಿರ್ಧರಿಸುತ್ತದೆ. ಹಾಗೆಯೇ ಯೋಜನೆಯಲ್ಲಿ ಕೈಗೊಳ್ಳುವ ಕೆಲಸವನ್ನೂ ಇನ್ನು ಮುಂದೆ ರಾಜ್ಯಗಳು, ಗ್ರಾಮ ಸಭೆಗಳು ನಿರ್ಧರಿಸುವುದಿಲ್ಲ. ಕೇಂದ್ರ ನಿರ್ಧರಿಸುತ್ತದೆ. ಅದು ಕೇಂದ್ರದಿಂದ ಆದೇಶವಾಗಿ ಬರುತ್ತದೆ. ಬೇಡಿಕೆ ಆಧಾರಿತ ವ್ಯವಸ್ಥೆಯು ಕೆಳಮಟ್ಟದಿಂದ ಆರ್ಥಿಕತೆಯನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಆದರೆ ಪೂರೈಕೆ ಆಧಾರಿತ ವ್ಯವಸ್ಥೆಯು ಸಾಮಾನ್ಯ ಜನರ ಸಂಕಟಗಳನ್ನು, ಸ್ಥಳೀಯ ಅವಶ್ಯಕತೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತದೆ.
ವಿಬಿ ಜಿ ರಾಂ ಜಿ ಕಾಯ್ದೆಯಲ್ಲಿ ಕೇಂದ್ರವು ಯೋಜನೆಯ ಮೊತ್ತವನ್ನು ನಿರ್ಧರಿಸುತ್ತದೆ. ಅದರ ಶೇಕಡ ೬೦ರಷ್ಟನ್ನು ಅದು ಭರಿಸುತ್ತದೆ. ಉಳಿದ ೪೦% ಹಣವನ್ನು ರಾಜ್ಯಗಳು ಹೊಂದಿಸಿಕೊಳ್ಳಬೇಕು. ಇದು ರಾಜ್ಯಗಳಿಗೆ, ಅದರಲ್ಲೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಕಷ್ಟವಾಗುತ್ತದೆ. ಕೇಂದ್ರದಿಂದ ಹಣಕಾಸಿನ ನೆರವು ಪಡೆಯಬೇಕಾದರೆ ರಾಜ್ಯಗಳು ೪೦% ಹಣವನ್ನು ಹೂಡುವುದಕ್ಕೆ ಸಿದ್ಧವಿರಬೇಕು. ಇಲ್ಲದೇ ಹೋದರೆ ಅವರು ಹೂಡುವುದಕ್ಕೆ ತಯಾರಿರುವ ಮೊತ್ತಕ್ಕೆ ಅನುಗುಣವಾಗಿ ಕೇಂದ್ರದ ನೆರವು ಸಿಗುತ್ತದೆ. ಅಂದರೆ ಯೋಜನೆಯ ಗಾತ್ರ ರಾಜ್ಯಗಳ ಹಣಕಾಸಿನ ಸಾಮರ್ಥ್ಯವನ್ನು ಅವಲಂಭಿಸಿರುತ್ತದೆ. ಹಣಕಾಸಿನ ಸಾಮರ್ಥ್ಯ ಕಡಿಮೆ ಇರುವ ರಾಜ್ಯಗಳು ಅಗತ್ಯವಿದ್ದರೂ ಸಹ ಹಣದ ಕೊರತೆಯಿಂದಾಗಿ ಯೋಜನೆಯನ್ನು ಕಡಿಮೆ ಬಳಸಿಕೊಳ್ಳುವ ಅಪಾಯವಿದೆ. ಆ ಮಟ್ಟಿಗೆ ಯೋಜನೆಗೆ ಕೇಂದ್ರ ಮೀಸಲಿಟ್ಟ ಹಣ ಬಳಕೆಯಾಗದೆ ಉಳಿಯುತ್ತದೆ. ಅಂತಿಮವಾಗಿ ದೂಷಣೆಯನ್ನು ರಾಜ್ಯಗಳ ಮೇಲೆ ಹಾಕಿ ಕೇಂದ್ರ ಜವಾಬ್ದಾರಿಯಿಂದ ಜಾರಿಕೊಳ್ಳಬಹುದು. ಕೊನೆಗ ಅನ್ಯಾಯವಾಗುವುದು ಜನರಿಗೆ.
ತಮ್ಮ ರಾಜ್ಯಗಳಿಗೆ ಅವಶ್ಯಕವಾದ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸ್ವಾತಂತ್ರ್ಯ ರಾಜ್ಯಗಳಿಗಿದೆ. ಆದರೆ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು. ಹಾಗಾಗಿ ಅದು ಜಾರಿಯಾಗುವುದಿಲ್ಲ. ಸಹಜವಾಗಿಯೇ ಕೇಂದ್ರ ನಿರ್ಧರಿಸಿದ ಮಿತಿಯೇ ಯೋಜನೆಯ ಗರಿಷ್ಠ ಮಿತಿಯೂ ಆಗಿಬಿಡುವ ಸಾಧ್ಯತೆ ಹೆಚ್ಚು.
ಕೇಂದ್ರ ತನ್ನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದಲೇ ರಾಜ್ಯಗಳಿಗೆ ೪೦% ಖರ್ಚನ್ನು ವರ್ಗಾಯಿಸುವ ಯೋಜನೆ ಮಾಡಿದ್ದರೆ, ಖರ್ಚನ್ನು ೬೦:೪೦ ಅನುಪಾತದಲ್ಲಿ ವಿಂಗಡಿಸುವುದಕ್ಕಿಂತ ಕೇಂದ್ರವು ೭೫ ದಿನಗಳ ಖರ್ಚನ್ನು ಪೂರ್ಣ ವಹಿಸಿಕೊಂಡು ಹೆಚ್ಚಿನ ೫೦ ದಿನಗಳ ಖರ್ಚನ್ನು ಕ್ರೋಡೀಕರಿಸಲು ರಾಜ್ಯಗಳಿಗೆ ತಿಳಿಸಬಹುದಿತ್ತು. ಎಂದು ಕಾರ್ತಿಕ್ ಮುರುಳಿಧರನ್ ಅಭಿಪ್ರಾಯ ಪಡುತ್ತಾರೆ.
ಉದ್ಯೋಗ ಖಾತರಿ ದಿನಗಳು ೧೨೫ಕ್ಕೆ ಏರಿಕೆ
ವಿಬಿ ಜಿ ರಾಂ ಜಿ ಮಸೂದೆಯಲ್ಲಿ ಉದ್ಯೋಗ ಖಾತರಿ ದಿನಗಳನ್ನು ೧೦೦ರಿಂದ ೧೨೫ ದಿನಕ್ಕೆ ಹೆಚ್ಚಿಸಲಾಗಿದೆ. ಇದು ಸ್ವಾಗತಾರ್ಹ. ಆದರೆ ಇದು ಆಚರಣೆಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಜೀನ್ ಡ್ರೀಜ್ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ.
ಈಗಿರುವ ನೂರು ದಿನಗಳ ಉದ್ಯೋಗವನ್ನು ಬಳಸಿಕೊಳ್ಳುತ್ತಿರುವವರು ಕೇವಲ ೨% ಕುಟುಂಬಗಳು. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆ ಆಗದಿರುವಾಗ, ಇನ್ನು ಹೆಚ್ಚಿನ ದಿನಗಳು ಬಳಕೆಯಾಗುವ ಸಾಧ್ಯತೆ ಕಡಿಮೆ.
ಎರಡನೆಯದಾಗಿ ಶೇಕಡ ೪೦ರಷ್ಟು ಖರ್ಚನ್ನು ರಾಜ್ಯಗಳು ಭರಿಸಬೇಕಾಗಿರುವುದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿದೆ. ಹಾಗಾಗಿ ರಾಜ್ಯಗಳು ಹೆಚ್ಚಿನ ಹೊರೆಯನ್ನು ಹೊರುವ ಸಾಧ್ಯತೆಗಳು ಕಡಿಮೆ. ಹಣಕಾಸಿನ ನೆರವನ್ನು ಕಡಿತ ಮಾಡಿ ಉದ್ಯೋಗದ ದಿನಗಳ ಮಿತಿಯನ್ನು ಏರಿಸುವುದರಿಂದ ಯಾವುದೇ ಅನುಕೂಲವೂ ಆಗುವುದಿಲ್ಲ. ಬದಲಿಗೆ ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು.
ಮೂರನೆಯದಾಗಿ ೧೨೫ ದಿನಗಳ ಉದ್ಯೋಗವನ್ನು ನೀಡಬೇಕೆನ್ನುವುದು ಕಡ್ಡಾಯವೇನಲ್ಲ. ಹಾಗಾಗಿ ಕೇವಲ ಮಿತಿಯನ್ನು ಹೆಚ್ಚಿಸುವುದರಿಂದ ಯಾವುದೇ ಬದಲಾವಣೆಯೂ ಆಗುವುದಿಲ್ಲ. ಈ ಬದಲಾವಣೆ ಮನರೇಗಾ ಯೋಜನೆಯಲ್ಲಿ ಸುಧಾರಣೆಯನ್ನು ತರಲಾಗಿದೆ ಎಂಬ ಭಾವನೆಯನ್ನು ಉಂಟುಮಾಡುವುದಕ್ಕಷ್ಟೆ ಸೇರಿಸಲಾಗಿದೆ.
ಸರ್ಕಾರಕ್ಕೆ ೧೨೫ ದಿನಗಳ ಉದ್ಯೋಗವನ್ನು ಒದಗಿಸುವ ಇರಾದೆಯೂ ಇದ್ದಂತಿಲ್ಲ. ಈ ವರ್ಷ ಮನರೇಗಾಕ್ಕೆ ೯೫,೬೯೨ ಕೋಟಿ ಘೋಷಿಸಿದ್ದಾರೆ. ೧೨೫ ದಿನಗಳ ಕೆಲಸ ನೀಡಲು ಕನಿಷ್ಠ ೩.೮೪ ಲಕ್ಷ ಕೋಟಿ ಬೇಕಾಗುತ್ತದೆ. ಕೇಂದ್ರದ ಪಾಲು ೬೦% ಅಂದರೆ ಬಜೆಟ್ಟಿನಲ್ಲಿ ೨.೩ ಲಕ್ಷ ಕೋಟಿ ರೂಪಾಯಿ ಇಡಬೇಕಿತ್ತು. ಆದರೆ ಈಗ ನಿಗದಿ ಮಾಡಿರುವ ಹಣದಿಂದ ವರ್ಷಕ್ಕೆ ಕೇವಲ ೫೨ ದಿನಗಳ ಕೆಲಸವನ್ನು ನೀಡಬಹುದು. ಹಾಗಾಗಿ ೧೨೫ ದಿನಗಳು ಜಾರಿಯಾಗುವುದಿಲ್ಲ ಅನ್ನುವ ಭರವಸೆ ಸರ್ಕಾರಕ್ಕೂ ಇದ್ದಂತಿದೆ.
ಹಲವು ರಾಜ್ಯ ಸರ್ಕಾರಗಳು ಈಗಾಗಲೇ ತಮ್ಮ ಬಜೆಟ್ ಮಂಡಿಸಿಯಾಗಿದೆ. ಕೇಂದ್ರದ ಯೋಜನೆ ಗೊತ್ತಿಲ್ಲದೆ, ತಮ್ಮ ಹಣವನ್ನು ನಿರ್ಧರಿಸುವುದಕ್ಕೆ ಅವುಗಳಿಗೆ ಸಾಧ್ಯವೂ ಇಲ್ಲ. ಈಗ ಅವುಗಳಿಗೆ ಕೇಂದ್ರ ನಿಗಧಿಪಡಿಸಿದ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ಹೊಂದಿಸುವುದು ಕಷ್ಟ.
ಹೊಸ ಮಸೂದೆಯಲ್ಲಿ ತಂದಿರುವ ಇನ್ನೊಂದು ಬದಲಾವಣೆ ಅಂದರೆ ಕೃಷಿ ಬಿತ್ತನೆ ಮತ್ತು ಸುಗ್ಗಿಯ ಅವಧಿಯಲ್ಲಿ ವರ್ಷಕ್ಕೆ ಒಟ್ಟು ೬೦ ದಿನಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಸುಗ್ಗಿ ಸಮಯದಲ್ಲಿ ಕೃಷಿ ಕಾರ್ಮಿಕರು ಮನರೇಗಾ ಕೆಲಸದಲ್ಲಿ ತೊಡಗಿಕೊಂಡರೆ ಗದ್ದೆಗಳಲ್ಲಿ ಕೆಲಸ ಮಾಡಲು ಜನರಿರುವುದಿಲ್ಲ. ಕಾರ್ಮಿಕರ ಕೊರತೆಯಿಂದ ಕೂಲಿಯೂ ಹೆಚ್ಚಾಗಬಹುದು. ಹಾಗಾಗಿ ಭೂಮಾಲಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಕಾರಣಕ್ಕೆ ಈ ಬದಲಾವಣೆಯನ್ನು ಮಾಡಲಾಗಿದೆ ಎನ್ನಲಾಗಿದೆ. ಆದರೆ ಇದರಿಂದ ರೈತರಿಗೆ ಚೌಕಾಸಿ ಮಾಡುವ ಶಕ್ತಿಯೇ ಹೋಗಿಬಿಡುತ್ತದೆ. ಮನರೇಗಾ ಇದ್ದಿದ್ದರೆ ಕೃಷಿ ಕಾರ್ಮಿಕರಿಗೆ ಗ್ರಾಮದಲ್ಲಿ ಸರಿಯಾದ ಕೂಲಿ ಸಿಗದಿದ್ದರೆ ಕೆಲಸಗಾರರು ಅದನ್ನು ನಿರಾಕರಿಸಬಹುದಿತ್ತು. ಆ ಅವಧಿಯಲ್ಲಿ ಮನರೇಗಾವನ್ನು ನಿಲ್ಲಿಸಿಬಿಟ್ಟರೆ ಚೌಕಾಸಿ ಮಾಡುವ ಶಕ್ತಿಯನ್ನು ರೈತರು ಕಳೆದುಕೊಳ್ಳುತ್ತಾರೆ. ಇದರಿಂದ ದೊಡ್ಡ ರೈತರ ಹಿತಾಸಕ್ತಿಗೆ ರಕ್ಷಣೆ ಸಿಕ್ಕರೂ ರೈತರು ಖಾಸಗಿ ಮಾರುಕಟ್ಟೆಯಲ್ಲಿ ಶೋಷಣೆಗೆ ಒಳಗಾಗುತ್ತಾರೆ ಅನ್ನುವ ಟೀಕೆ ಇದೆ.
ಮನರೇಗಾವನ್ನು ರದ್ದುಗೊಳಿಸುವುದಕ್ಕೆ ಅದರಲ್ಲಿರುವ ಸಮಸ್ಯೆಗಳನ್ನು ಕಾರಣವನ್ನಾಗಿ ನೀಡಲಾಗಿದೆ. ಆದರೆ ಈಗ ಬದಲಾಗಿರುವ ಮಸೂದೆಯಲ್ಲಿ ಆ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಯಾವುದೇ ಕ್ರಮಗಳನ್ನೂ ತೆಗೆದುಕೊಂಡಂತೆ ಕಾಣುವುದಿಲ್ಲ. ಉದಾಹರಣೆಗೆ ವೇತನ ಪಾವತಿಯಲ್ಲಿ ವಿಳಂಬ ಈಗ ಮನರೇಗಾಕ್ಕೆ ಸಂಬಂಧಿಸಿದಂತೆ ಕಾರ್ಮಿಕರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ. ಆದರೆ ಕೇಂದ್ರ ಸರ್ಕಾರ ವೇತನ ಪಾವತಿ ನಿಧಾನವಾದಾಗ ಅದಕ್ಕೆ ಪರಿಹಾರ ನೀಡುವ ಜವಾಬ್ದಾರಿಯಿಂದ ಜಾರಿಕೊಂಡಿದೆ. ಹಾಗಾಗಿ ಪಾವತಿ ವಿಳಂಬಕ್ಕೆ ಅಲ್ಲಿ ಪರಿಹಾರವಿಲ್ಲ. ಇನ್ನು ತಂತ್ರಜ್ಞಾನದ ಬಳಕೆ ಈಗಾಗಲೇ ನಡೆಯುತ್ತಿದೆ. ಅದರಿಂದ ಬೇರೆ ಇನ್ನೂ ಗಂಭೀರವಾದ ಸಮಸ್ಯೆಗಳು ಪ್ರಾರಂಭವಾಗಿವೆಯೇ ಹೊರತು ಹಳೆಯ ಸಮಸ್ಯೆಗಳು ಬಗೆಹರಿದಿಲ್ಲ.
ಮನರೇಗಾ ಬಗ್ಗೆ ಇರುವ ಇನ್ನೊಂದು ಟೀಕೆಯೆಂದರೆ ಇವುಗಳಿಂದ ಉತ್ಪಾದಕತೆ ಹೆಚ್ಚುತ್ತಿಲ್ಲ. ಬದಲಿಗೆ ಕೃಷಿ ಕೂಲಿ ಹೆಚ್ಚಾಗುತ್ತಿದೆ. ಇದಕ್ಕೆ ಹಣ ತೊಡಗಿಸುವುದು ಸಂಪನ್ಮೂಲದ ಪೋಲು ಇತ್ಯಾದಿ, ಇತ್ಯಾದಿ. ಆದರೆ ಕಾರ್ತಿಕ್ ಮುರುಳೀಧರನ್ ಹೇಳುವಂತೆ ಸಮಸ್ಯೆ ಯೋಜನೆಯ ವಿನ್ಯಾಸದಲ್ಲಿಲ್ಲ. ಯೋಜನೆಯ ಅನುಷ್ಠಾನದಲ್ಲಿದೆ. ಉದ್ಯೋಗವು ಸುಲಭವಾಗಿ ದೊರೆಯುವಂತೆ ಮಾಡುವ ಮೂಲಕ, ಸೋರಿಕೆಯನ್ನು ತಗ್ಗಿಸುವ ಮೂಲಕ ಮತ್ತು ಸಮಯಕ್ಕೆ ಸರಿಯಾಗಿ ವೇತನವನ್ನು ಪಾವತಿಸುವ ಮೂಲಕ ಯೋಜನೆಯ ಅನುಷ್ಠಾನವನ್ನು ಸುಧಾರಿಸಿದರೆ ಅದರಿಂದ ಆಗುವ ಲಾಭವು ಗಣನೀಯವಾಗಿ ಸುಧಾರಿಸುತ್ತದೆ. ಯೋಜನೆಯನ್ನು ಉತ್ತಮವಾಗಿ ಜಾರಿಗೊಳಿಸುವುದರಿಂದ ಕಾರ್ಮಿಕರಿಗೆ ಗ್ರಾಮೀಣ ಆರ್ಥಿಕತೆಯಲ್ಲಿ ಪರ್ಯಾಯ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಅದರಿಂದ ಮಾರುಕಟ್ಟೆ ವೇತನ ಮತ್ತು ಖಾಸಗಿ ಉದ್ಯೋಗ ಎರಡೂ ಹೆಚ್ಚಿರುವುದು ಹಲವು ಅಧ್ಯಯನಗಳಿಂದ ತಿಳಿಯುತ್ತದೆ. ಹೆಚ್ಚಿನ ಆದಾಯದಿಂದ ಸ್ಥಳೀಯವಾಗಿ ಬೇಡಿಕೆ ಹೆಚ್ಚಿದೆ. ಇದರಿಂದ ಕೃಷಿಯೇತರ ಉದ್ಯಮಗಳು ಮತ್ತು ಉದ್ಯೋಗಗಳು ಗಣನೀಯವಾಗಿ ಹೆಚ್ಚಿದೆ. ಇದನ್ನು ಹಲವು ಆರ್ಥಿಕ ಸಮೀಕ್ಷೆಗಳು ತಿಳಿಸುತ್ತವೆ.
ಮನರೇಗಾದ ಅನುಷ್ಠಾನದಲ್ಲಿ ಸುಧಾರಣೆಯನ್ನು ತಂದರೆ ಸಮಾನತೆ ಹಾಗೂ ದಕ್ಷತೆ ಎರಡರಲ್ಲೂ ಸುಧಾರಣೆ ಸಾಧ್ಯವಾಗುತ್ತದೆ. ಮನರೇಗಾ ಯೋಜನೆಯಿಂದ ವ್ಯಾಪಕವಾಗಿ ಅನುಕೂಲವಾಗಿದೆ. ಭೂಹಿಡುವಳಿಯ ಆಧಾರದ ಮೇಲೆ ಪರಿಶೀಲಿಸಿದಾಗ, ಕೆಳಗಿನ ಶೇ. ೯೩ರಷ್ಟು ಜನರ ಪರಿಸ್ಥಿತಿ ಸುಧಾರಿಸಿದೆ. ಮೇಲಿನ ಕೇವಲ ಶೇಕಡ ೭ರಷ್ಟು ಶ್ರೀಮಂತರು ಸ್ವಲ್ಪ ನಷ್ಟ ಅನುಭವಿಸಿದ್ದಾರೆ. ಅವರಿಗೆ ಹೆಚ್ಚಿನ ಕೂಲಿ ಕೊಡಬೇಕಾಗಿ ಬಂದಿದೆ. ಆದರೆ ಅನೇಕ ದೊಡ್ಡ ಭೂಮಾಲೀಕರು ಕೃಷಿಯೇತರ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ಬೇಡಿಕೆ ಹೆಚ್ಚಾದಾಗ ಅವರಿಗೂ ಲಾಭವಾಗುತ್ತದೆ.
ಒಟ್ಟಿನಲ್ಲಿ ತನ್ನೆಲ್ಲಾ ಸಮಸ್ಯೆಗಳ ನಡುವೆಯೂ ಮನರೇಗಾ ಬಡವರಿಗೆ, ಮಹಿಳೆಯರಿಗೆ ಆಸರೆಯನ್ನು ಒದಗಿಸಿದೆ. ಅದರಲ್ಲೂ ಸಂಕಷ್ಟದ ಸಮಯದಲ್ಲಿ ಇದು ನೆರವಾಗಿದೆ. ಅದರ ಅನುಷ್ಠಾನದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಅನುಕೂಲವಾಗುತ್ತದೆ. ಈಗ ಅದನ್ನು ದುರ್ಬಲಗೊಳಿಸುವುದರಿಂದ ಗ್ರಾಮೀಣ ಬಡವರಿಗಿದ್ದ ಒಂದು ನೆಲೆಯನ್ನು ನಾಶಮಾಡಲಾಗುತ್ತಿದೆ. ರಾಜ್ಯಗಳ ಸ್ವಾತಂತ್ರ್ಯವನ್ನು ಹಾಗೂ ಸಾಮರ್ಥ್ಯವನ್ನು ಮೊಟಕುಗೊಳಿಸಿದಂತೆ ಆಗುತ್ತದೆ. ಇದು ಏಕಕಾಲಕ್ಕೆ ಬಡವರ ಹಕ್ಕಿನ ಮೇಲೆ ಮತ್ತು ಸಂವಿಧಾನದ ಮೇಲಿನ ದಾಳಿಯೂ ಆಗಿದೆ. ಕೇಂದ್ರದ ಸಹಕಾರ ಹಾಗೂ ಪ್ರೋತ್ಸಾಹ ಇಲ್ಲದೇ ಹೋದರೆ ರಾಜ್ಯಗಳು ಇದನ್ನು ಮುಂದುವರಿಸುವ ಸಾಧ್ಯತೆ ಕಡಿಮೆ. ಕೇಂದ್ರ ಏಕಪಕ್ಷೀಯವಾಗಿ ಯೋಜನೆಯನ್ನು ಬದಲಿಸುವ ಮೂಲಕ ಸಹಕಾರ ಒಕ್ಕೂಟ ವ್ಯವಸ್ಥೆಯ ತತ್ತ್ವವನ್ನು ಉಲ್ಲಂಘಿಸುತ್ತಿದೆ.
