Ananthaswamy Mysore – ಮೈಸೂರು ಅನಂತಸ್ವಾಮಿ

 

ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಈ ಲೇಖನದಲ್ಲಿ ಅನಂತಸ್ವಾಮಿಯವರ ಬದುಕು ಮತ್ತು ಸಂಗೀತವನ್ನು ಅನಂತಸ್ವಾಮಿಯವರ ಜೊತೆಗಿನ ಸಂದರ್ಶನ, ಅವರನ್ನು ಕುರಿತ ಸಂದರ್ಶನ, ಅವರನ್ನು ಕುರಿತು ಖ್ಯಾತ ಕವಿಗಳು ಆಡಿರುವ ಮಾತುಗಳನ್ನು ಒಟ್ಟುಮಾಡಿ ಅವರ ಸಂಗೀತಾತ್ಮಕ ಬದುಕನ್ನು ಕಟ್ಟಲು ಪ್ರಯತ್ನವಿದೆ. ಕವಿ ಸುಮತೀಂದ್ರ ನಾಡಿಗರು ನಡೆಸಿಕೊಟ್ಟಿರುವ ಅನಂತಸ್ವಾಮಿಯವರ ಸಂದರ್ಶನ, ಅನಂತಸ್ವಾಮಿಯವರನ್ನು ಕುರಿತು ಪಂಡಿತ್ ರಾಜೀವ ತಾರಾನಾಥರ ಸಂದರ್ಶನ, ಪುತಿನ, ಲಕ್ಷ್ಮೀನಾರಾಯಣ ಭಟ್ಟರು, ಹೆಚ್ ಎಸ್ ವೆಂಕಟೇಶಮೂರ್ತಿಯವರ ಲೇಖನ ಇವುಗಳು ಇದಕ್ಕೆ ಆಕರ.
ನಿಮಗೆ ಸಂಗೀತದಲ್ಲಿ ಆಸಕ್ತಿ ಹೇಗೆ ಬಂದಿತು?
ಹುಟ್ಟಿದ್ದೇ ಸಂಗೀತ ವಿದ್ವಾನ್ ಆಸ್ಥಾನರತ್ನ ಚಿಕ್ಕರಾಮರಾಯರ ಮನೆಯಲ್ಲಿ. ಅವರು ನನ್ನ ತಾಯಿಯ ತಂದೆ. ಎರಡು ಮೂರು ವರ್ಷ ವಯಸ್ಸಿನಿಂದ ಸಂಗೀತ ಕೇಳುತ್ತಿದ್ದೆ. ಆ ಮನೆಯಲ್ಲಿ ದಿನಾ ಸಂಗೀತ ಕಚೇರಿ ನಡೆಯುತ್ತಿತ್ತು. ಒಂದು ಗುರುವಾರ ಭಜನೆ ಶುರುವಾಗಿತ್ತು ಖಂಜಿರ ಬಾರಿಸುವವರು ಮಾತ್ರ ಬಂದಿಲ್ಲ. ತಾತನಿಗೆ ಏನೋ ಕಿರಿಕಿರಿ. ಅಲ್ಲೇ ಕುಳಿತಿದ್ದ ಆರು ವರ್ಷದ ಮೊಮ್ಮಗ ಖಂಜಿರ ಎತ್ತಿಕೊಂಡು ನುಡಿಸಿದ. ತಾಳ ತಪ್ಪದ ನುಡಿತ. ತಾತ ಕಣ್ಣರಳಿಸಿದರು. ಮಾರನೆಯ ದಿನದಿಂದಲೇ ಹುಡುಗನಿಗೆ ಸಂಗೀತಪಾಠದ ಏರ್ಪಾಡಾಯಿತು. (ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ).
ನನಗೆ ಎಂಟೋ ಒಂಬತ್ತೋ ವರ್ಷವಾದಾಗ ನಮ್ಮ ತಾತನ ಶಿಷ್ಯ ಕೃಷ್ಣಮೂರ್ತಿಯವರು ವರ್ಣದ ತನಕ ಕಲಿಸಿದರು. ಆಮೇಲೆ ನಮ್ಮಪ್ಪ ಬೇರೆ ಮನೆ ಮಾಡಿಕೊಂಡು ಹೋದರು. ಇನ್ನು ಎಸ್‌ಎಸ್‌ಎಲ್‌ಸಿ ತನಕ ಸಂಗೀತಕ್ಕೆ ಕಳಿಸಲಿಲ್ಲ. ಎಸ್‌ಎಸ್‌ಎಲ್‌ಸಿ ಪಾಸಾದ ಮೇಲೆ ಪಲ್ಲಡಂ ನಾಗರಾಜರಾಯರ ಹತ್ತಿರ ಕೊಳಲು ಪಾಠ. ಅದೂ ವರ್ಣದ ತನಕ ಬಂತು ನಿಂತಿತು. ಕಾಲೇಜಿಗೆ ಸೇರಿದ ಮೇಲೆ ನಾನು ಹೀರೋ ಆಗ್ಬೇಕು, ಎಲ್ಲರಿಗಿಂತ ಮೇಲೆ ಅಂತ ತೋರಿಸ್ಕೊಳ್ಳೋಕ್ಕೆ ಎಲ್ಲಾ ಕಲ್ಚರಲ್ ಆಕ್ಟಿವಿಟೀಸ್‌ನಲ್ಲಿಯೂ ಕೊಳಲು ನುಡಿಸ್ತಾ ಇದ್ದೆ. ಆ ಸಮಯದಲ್ಲಿ ಜನರ ಹೊಗಳಿಕೆಯಿಂದ ಕೆಟ್ಟೆ. ಫಿಲ್ಮ್ಸ್‌ನಲ್ಲಿ ಛಾನ್ಸ್ ಸಿಗುತ್ತೆ ಅಂತ ಮದ್ರಾಸಿಗೆ ಓಡಿಹೋದೆ.After great disappointment I had to come back to Mysore. ಯಾರೋ ತಮಿಳು ನಾಯ್ಡು ಸಹಾಯದಿಂದ ವಾಪಸ್ ಬಂದೆ. ಯಾರೋ ದಡ್ಡ ಮನುಷ್ಯರ ಮಗ ತಪ್ಪಿಸಿಕೊಂಡಿದ್ದಾನೆ ಅಂತ ಟಿಕೆಟ್ ಕೊಡಿಸಿ ಕಳಿಸಿದರು. ಇಂಟರ್‌ಮೀಡಿಯೆಟ್ ಕಟ್ಟಿ ಫೇಲಾದೆ. ಮರಗೆಲಸದ ಅಂಗಡೀಲಿ ಮ್ಯಾಂಡೋಲಿನ್ ನೋಡಿ ಅದನ್ನು ಬಾರಿಸಬೇಕು ಅನ್ನಿಸಿತು. ಅದನ್ನು ಬಾರಿಸೋಕ್ಕೆ ಹೋಗಿ ಅದು ಚೆನ್ನಾಗೇ ಬಂತು. ಆ ದಿನಗಳಲ್ಲಿ ಮೈಸೂರಿನಲ್ಲಿ ಪಿ ಶಾಮಣ್ಣ ಅಂತ ಸಂಗೀತ ನಿರ್ದೇಶಕರು. ಅವರು ನಾನು ಮ್ಯಾಂಡೋಲಿನ್ ಬಾರಿಸೋದು ಕೇಳಿ ಪ್ರಭುಲಿಂಗಲೀಲೆ ಅನ್ನೋ ಸಿನಿಮಾದಲ್ಲಿ ಮ್ಯಾಂಡೋಲಿನ್ ಬಾರ‍್ಸೋಕ್ಕೆ ಕರೆದ್ರು. ಅದರಲ್ಲಿ ಮ್ಯಾಂಡೋಲಿನ್, ಡೋಲಕ್, ಕೊಳಲು ಎಲ್ಲಾ ನುಡಿಸಿದೀನಿ. ಸುಮಾರು ೨೦-೨೨ ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿದೀನಿ. ಆಗ ಸಿನಿಮಾ ಸಂಗೀತ ನಿರ್ದೇಶಕ ಆಗಬೇಕು ಅನ್ನೋ ಹುಚ್ಚು ಹಿಡೀತು. ಇದೆಲ್ಲಾ ೧೯೫೬ರ ನಂತರ. ಆಗ ಇಂಟರ್‌ಮೀಡಿಯೆಟ್ ಫೇಲಾದೆ. ಮ್ಯಾತ್ಸ್ ಪೇಪರ್ ದಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಮ್ಯಾಂಡೋಲಿನ್ ನುಡಿಸ್ತಾ ಕುಳಿತಿದ್ದೆ.

ನೀವು ಕಂಪೋಸಿಂಗ್ ಶುರುಮಾಡಿದ್ದು ಯಾವಾಗ?
ಮಹಾರಾಜ ಕಾಲೇಜ್ನಲ್ಲಿ ಎ.ಐ.ಆರ್ ಆರ್ಕೆಸ್ಟ್ರಾ ಜೊತೆ ಕಾಳಿಂಗರಾವ್ ಪ್ರೋಗ್ರಾಂ ಇತ್ತು. ಕೂತು ಕೇಳ್ತಿದ್ದೆ. ಅಷ್ಟು ಹೊತ್ತಿಗೆ ಕಂಪೋಸಿಂಗ್ ಐಡಿಯಾಸ್ ಇದ್ವು. ಆವತ್ತೇ ಇಮ್ಮೀಡಿಯೆಟ್ ಆಗಿ ಮನೆಗೆ ಬಂದು ಕನ್ನಡ ಗೀತೆಗಳನ್ನೆಲ್ಲಾ ತೆಗೆದು ಟ್ಯೂನ್ ಮಾಡ್ಲಿಕ್ಕೆ ಪ್ರಯತ್ನಪಟ್ಟೆ. ಆಮೇಲೆ ನಂದೇ ಒಂದು ಪಾರ್ಟಿ ಮಾಡ್ದೆ. ನಾನು ಕನ್ನಡ ಗೀತೆಗಳನ್ನೇ ಹಾಡಿದಾಗ ಜನ ಮೆಚ್ಕೊಂಡ್ರು. ಗಂಗಾವತರಣ ಟ್ಯೂನ್ ಮಾಡ್ದೆ. ’ಅಬ್ಬಾ ಹುಡುಗಿ’ ಚಿತ್ರಕ್ಕೆ ಮ್ಯಾಂಡೋಲಿನ್ ನುಡಿಸೋಕ್ಕೆ ಕಾಳಿಂಗರಾಯರು ಕರೆದಾಗ ಅವರ ಮುಂದೆ ’ಇಳಿದು ಬಾ ತಾಯಿ’ ಹಾಡಿ ತೋರಿಸಿದೆ.He liked it immensely.. ಇದೇ ರಾಗ ಇನ್ಮೇಲೆ ನಾನೂ ಹಾಡ್ತೀನಿ ಅಂದ್ರು. ನಾಳೆ ರೇಡಿಯೋದಲ್ಲಿ ಹಾಡ್ತೀನಿ ಕೇಳು ಅಂದ್ರು. ನಂಗೆ ಖುಷಿಯಾಗಿ ಹೋಯ್ತು. ಚಿಕ್ಕ ಹುಡುಗ್ರಿಗೆ ಕಾಳಿಂಗರಾಯರು ಅಂದ್ರೆ ದೇವರಿದ್ದಂಗೆ. ಕಾಳಿಂಗರಾವ್ ನನ್ನ ಟ್ಯೂನನ್ನ ಹಾಡಿದ್ದನ್ನು ಕೇಳಿದ್ಮೇಲೆ ನಮ್ಮಪ್ಪಂಗೆ ಖುಷಿಯಾಗಿ ನಿನಗೆ ಬಲವಂತ ಮಾಡೋಲ್ಲ, ನಿನ್ನ ದಾರಿಯಲ್ಲಿ ನೀನು ಹೋಗು ಅಂತ ಪರ‍್ಮಿಷನ್ ಕೊಟ್ರು. I was still with my parents.ನಮ್ಮಮ್ಮ ಪುರಂದರದಾಸರ ದೇವರನಾಮಗಳನ್ನು ಹಾಡ್ತಿದ್ದರು. ಅವರಿಗಷ್ಟು ಟ್ಯೂನ್ ಮಾಡಿಕೊಟ್ಟೆ. ಆಮೇಲೆ ನಮ್ಮಪ್ಪನಿಗೆ ಶಿವಮೊಗ್ಗಕ್ಕೆ ವರ್ಗವಾಯಿತು. ಅವರು ಶಿವಮೊಗ್ಗಾಕ್ಕೆ ಹೋಗೋದಕ್ಕೆ ಮುಂಚೆ ಮನೆಯನ್ನು ಆಲ್ಟರ್ ಮಾಡಿಸಿ, ಒಂದು ರೂಮು ನನಗೆ ಬಿಟ್ಟುಕೊಟ್ಟು, ಬಾಡಿಗೆ ದುಡ್ಡು ನನಗೆ ಕೊಟ್ಟು, ನನ್ನನ್ನು ಎನ್ಕರೇಜ್ ಮಾಡಿದ್ರು. ಅಷ್ಟು ಹೊತ್ತಿಗೆ ನಾನು ಓದಿಗೆ ತಿಲಾಂಜಲಿ ಕೊಟ್ಟಾಗಿತ್ತು.
ನೀವು ಮದ್ರಾಸ್ ಪೂರ್ತಿ ಬಿಡಲಿಕ್ಕೆ ಕಾರಣ?
ನಾನು ಅಣ್ಣ ತಂಗಿ ಸಿನಿಮಾಗೆ ವರ್ಕ್ ಮಾಡ್ತಿದ್ದಾಗ ಡೆಲ್ಲಿಯಲ್ಲಿ ಪ್ರೋಗ್ರಾಂ ಮುಗಿಸಿಕೊಂಡು ಕಾಳಿಂಗರಾಯರು ಬಂದ್ರು. ಇಳಿದು ಬಾ ತಾಯಿ ಹಾಡ್ದೆ ಕಣಯ್ಯ ಒಂದೇ ಸಮ ಚಪ್ಪಾಳೆ. ನೀನು ನನ್ ತರಹಾನೇ ಆಗ್ಬೇಕು ಕಣಯ್ಯ. ಫಿಲ್ಮ್ ಏನು ಬಿಡು, ಹೆಚ್ಗೆ ಗಮನ ಇದಕ್ಕೆ ಕೊಡಬೇಕು ಅಂತ ಪ್ರೆಷರ್ ಹಾಕಿದ್ರು. ಅಡ್ವಸ್ ಕೊಟ್ರು. ಆ ದಿವ್ಸ ಬೀಚ್‌ಗೆ ಹೋಗಿ ತುಂಬಾ ಹೊತ್ತು ಕೂತ್ಕೊಂಡು ಎಂಡ ಎಂಡ್ತಿ ಟ್ಯೂನ್ ಮಾಡ್ದೆ. ಫಿಲ್ಮ್ ಲೈನೇ ಹಿಡಿಸ್ಲಿಲ್ಲ. ಮೈಸೂರಿಗೆ ಬಂದು ನೆಲೆಸಿದೆ.

ಬೆಂಗಳೂರಿನಲ್ಲಿ ಅನಂತಸ್ವಾಮಿಯವರ ಗಾಯನ ಪ್ರತಿಭೆ ವಿಶೇಷವಾಗಿ ಪ್ರಕಾಶಕ್ಕೆ ಬರಲು ಕಾರಣ ಎಂಎಸ್‌ಐಲ್ ಕಾರ್ಯಕ್ರಮ. ನಡುವೆ ಪ್ರಭಾತ್ ಕಲಾವಿದರು ಮಾಡಿದ ಎಲ್ಲಾ ನೃತ್ಯ ನಾಟಕಗಳಿಗೂ ಸಂಗೀತ ನೀಡಿದ್ದು ಅನಂತಸ್ವಾಮಿಯೇ. ಅವರು ಸಂಗೀತ ಸಂಯೋಜಿಸಿದ ಬಾಗಿಲೊಳು ಕೈಮುಗಿದು, ಏಲಾವನ, ನಾಕುತಂತಿ, ತಿಳಿಮುಗಿಲ ತೊಟ್ಟಿಲಲಿ ಇವು ಅವರು ಪ್ರಥಮ ಶ್ರೇಣಿಯ ಸಂಗೀತ ನಿರ್ದೇಶಕರಂದು ಸಾಬೀತು ಪಡಿಸಿದ್ದೇ ಅಲ್ಲದೆ ರತ್ನಮಾಲಾ ಪ್ರಕಾಶರಂತಹ ಅಪೂರ್ವ ಪ್ರತಿಭೆಯ ಗಾಯಕಿಯನ್ನು ಪ್ರಕಾಶಕ್ಕೆ ತಂದವು. (ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ) ಮಾಧುರ್ಯ ಮತ್ತು ಭಾವದೀಪ್ತಿ ಅನಂತಸ್ವಾಮಿಯವರ ಗಾಯನ ಶೈಲಿಯ ಪ್ರಧಾನ ಲಕ್ಷಣಗಳು. (ಎಚ್‌ಎಸ್‌ವಿ).

ಸ್ವತಃ ಮಹಾನ್ ಕಲಾವಿದರಾದ ಪಂಡಿತ್ ರಾಜೀವ ತಾರಾನಾಥ್ ಅನಂತಸ್ವಾಮಿಯವರ ಸಂಗೀತದ ವಿಶಿಷ್ಟತೆಯನ್ನು ಸೊಗಸಾಗಿ ಗುರುತಿಸಿದ್ದಾರೆ. ಅನಂತಸ್ವಾಮಿಯವರ ಸಂಗೀತವನ್ನು ಕೇಳಿದ್ದೆ. ಅವರ ಬಗ್ಗೆ ತುಂಬಾ ಗೌರವವಿತ್ತು. ಏಕೆಂದರೆ ಸಂಗೀತದಲ್ಲಿ ನಾವೆಲ್ಲ ಒಂದೇ ಗೋತ್ರದವರು. ನಾನು ಶಾಸ್ತ್ರೀಯ ಸಂಗೀತದವ, ಅವರು ಸುಗಮ ಸಂಗೀತದವರು ಎನ್ನುವ ಧೋರಣೆ ನಮ್ಮಿಬ್ಬರಲ್ಲೂ ಇರಲಿಲ್ಲ. ಅವರಿಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಗೌರವವಿತ್ತು. ನಾನು ಶಾಸ್ತ್ರೀಯ ಸಂಗೀತದವನಾದರೂ ಸುಗಮ ಸಂಗೀತವನ್ನು ಮೆಲಕು ಹಾಕುವಂತೆ ಮೆಚ್ಚಿಕೊಂಡಿದ್ದೇನೆ. ಹಾಗಾಗಿ ನಮ್ಮಿಬ್ಬರಲ್ಲಿ ನಾವು ಬೇರೆ ಬೇರೆಯವರು ಎನ್ನುವ ಭೇದ ಭಾವವಿರಲಿಲ್ಲ.

ಅನಂತಸ್ವಾಮಿಯವರು ತುಂಬಾ ಅನುಭವಿಸಿ ಹಾಡ್ತಾರೆ. ಆದ್ದರಿಂದ ಅದು ನಮ್ಮನ್ನೂ move ಮಾಡುತ್ತದೆ. ನನ್ನ ಸಂಗೀತ ಜನರ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಉಂಟುಮಾಡಬಹುದು. ಒಂದು ಕೇಳುಗನನ್ನು ನೀರಾಗಿಸಬಹುದು ಅದರ ಸಿಹಿಯಿಂದ – ಅನುಭವದಿಂದ ’ಆಹಾ’ ಎಂದು ಎಂತಹ ಕ್ರೂರ ಮನುಷ್ಯನನ್ನಾದರೂ ಕರಗಿಸಿಬಿಡಬಹುದು. ಇನ್ನೊಂದು ಚಕಮಕಿ – ಅದರಿಂದಾಗುವ excitement.. ಅನಂತಸ್ವಾಮಿಯವರದು ಮೊದಲನೆಯದು; well moving and melodious. ಆ ಮನುಷ್ಯ ಒಬ್ಬ Genius ಎಂದರೆ ತಪ್ಪಾಗಲಾರದು. ನರಸಿಂಹಸ್ವಾಮಿಯವರ ಕಾವ್ಯ ಮತ್ತು ಅನಂತಸ್ವಾಮಿಯವರ ಸಂಗೀತ ಇವೆರಡನ್ನೂ ನಾನು ಒಟ್ಟಿಗೆ ಹೇಳುತ್ತೇನೆಂದರೆ ಅರ್ಥವಾಗಿರಬೇಕು – ಮಾರ್ದವ – ’ಶಬ್ದ ಮಾರ್ದವ’ ಮಾತ್ರವಲ್ಲ ಅದರ ಹಿಂದಿನ ಅನುಭವದ ಮಾರ್ದವ ಕೂಡ. ಅವರ ಸಂಸ್ಕಾರ – ಎಷ್ಟೋ ಸಂಗೀತಗಳನ್ನು ಕೇಳಿದ್ದಾರೆ, ಅನುಭವಿಸಿದ್ದಾರೆ, ಹೊಕ್ಕಿದ್ದಾರೆ, – ಹೊಕ್ಕಿ, ಅದರಲ್ಲಿರುವ ಮೃದುವಾದ ವಿಷಯವನ್ನು ತನ್ನದಾಗಿಸಿಕೊಂಡಿದ್ದಾರೆ. ನನ್ನ ಭಾಷೆಯಲ್ಲಿ ಅವರ ’ಸಮ್‌ಯಕ್ ಯೋಜನೆ’ ಸಂಯೋಜನೆ ಬಹಳ ಹಿತವಾದುದು, melodious compositions.

ಅನಂತಸ್ವಾಮಿಯವರ ಸಂಗೀತಕ್ಕೂ ಬೇರೆಯವರ ಸುಗಮ ಸಂಗೀತಕ್ಕೂ ವ್ಯತ್ಯಾವೇನೆಂದರೆ ಸಂಗೀತದಲ್ಲಿ ದುರ್ಗಮ ಎನ್ನುವುದನ್ನು ಚೆನ್ನಾಗಿ ತಿಳಿದಿದ್ದರಿಂದಲೇ ಅನಂತಸ್ವಾಮಿಯವರ ಸಂಗೀತ ಸುಗಮವಾಯಿತು. ಇವರ ಹಿಂದಿನ ಪೀಳಿಗೆಯವರು ಮತ್ತು ಇವರ ಸಮಕಾಲೀನರು ಕರ್ನಾಟಕ ಸಂಗೀತವನ್ನೇ ಸುಗಮಸಂಗೀತದಲ್ಲಿ ಅಳವಡಿಸುತ್ತಿದ್ದ ಹೊತ್ತಿನಲ್ಲಿ, ಅನಂತಸ್ವಾಮಿಯವರು ಹಿಂದುಸ್ತಾನಿ ಧಾಟಿಗಳನ್ನು ಕೂಡ ಅಳವಡಿಸುತ್ತಿದ್ದರು ಮತ್ತು ಅಳವಡಿಸುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಇವರ compositions ನ quality ಯೇ ಬೇರೆ. ಮೃದುವಾದ ಮುದ್ದಾದ ರೂಪವನ್ನು ಕೊಟ್ಟವರು.

ಅವರ ಸಂಗೀತವೇ ಅವರ ಶಿಷ್ಯವೃಂದಕ್ಕೆ ಕಿವಿಮಾತು. ಅನುಭವ, ಸಂಗೀತದ ಒಕ್ಕಣೆ, ಅದರ performance ಇವೆಲ್ಲದರಲ್ಲೂ ಮಾರ್ದವ, ಹದದಲ್ಲಿರುವ ಮಾರ್ದವ. Very refined, cultured as well as civilized melodyಯನ್ನು ಸಂಯೋಜಿಸಿದವರು ಈತ. ಅವರ ಹಾಡುಗಳನ್ನು, ಶೈಲಿಯನ್ನು ಅತಿರೇಕ ಮಾಡುವುದರಿಂದ ಅದು ಕೆಡಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

ಅನಂತಸ್ವಾಮಿಯವರ ಸಂಗೀತದಲ್ಲಿ ಇಂಪು ಎನ್ನುವುದು ತುಂಬಾ ಬೆಲೆಬಾಳುವ qualityಯಲ್ಲಿದೆ. ಅನಂತಸ್ವಾಮಿಯವರ ಸಾಧನೆಯ ಬಗ್ಗೆ ಹತ್ತಿರವಾಗಿ ಹೇಳಬೇಕಾದರೆ, ನಾನು ಅಲ್ಲಿ ಇಲ್ಲಿ ಸಂಗೀತ ಕಟ್ಟಿದ್ದೀನಿ. ಎಂದಾದರೂ ನಾನು ಸುಗಮ ಸಂಗೀತ compose ಮಾಡಿದರೆ, ಅನಂತಸ್ವಾಮಿಯವರbest compositions ನ ಹತ್ತಿರದ melody ಎಲ್ಲಾದರೂ ಮಾಡಲು ಸಾಧ್ಯವಾದರೆ, ನನಗೆ ಬಹಳ ತೃಪ್ತಿಯಾಗುತ್ತದೆ. ಎಷ್ಟರ ಮಟ್ಟಿಗೆ ಅವರ compositions ನ್ನು ನಾನು ಮೆಚ್ಚಿದ್ದೇನೆ ಮತ್ತು ಗೌರವಿಸುತ್ತೇನೆ ಎಂದರೆ ಅದರ ಹತ್ತಿರವಾದರೂ ನನ್ನ compositionsನಲ್ಲಿ ಸುಳಿಯಲು ಸಾಧ್ಯವಾದರೆ ನನಗೆ ಬಹಳ ತೃಪ್ತಿಯಾಗುತ್ತದೆ.

ಈಗಿನ ಶೃತಿಬದ್ಧವಾದ . . . ಲಯಬದ್ಧವಾದ ಸಂಗೀತದ ’ಕೂಗಿ’ನಿಂದ ಬೇರ‍್ಪಟ್ಟವರು. ಮಾಧುರ್ಯದಿಂದ ಕೂಡಿದ ಅವರ ಗಾಯನ ಬೆಳಗಿನಿಂದ ರಾತ್ರಿಯವರಗೆ ದುಡಿಯುತ್ತಿರುವ ಶ್ರಮಿಕರಿಗೆ ಒಳ್ಳೆಯ ವಿಶ್ರಾಂತಿ ಕೊಡುವಂಥದ್ದು. ಶಾಸ್ತ್ರೀಯ ಸಂಗೀತದ ಬುನಾದಿಯಲ್ಲಿ ಪಾಶ್ಚಾತ್ಯ ಸಂಗೀತವನ್ನು ತುಸು ಬಳಸಿ, ತನ್ನ ರಾಗ ಸಂಯೋಜನೆ ಮತ್ತು ಗಾಯನದಿಂದ ಕವಿತೆಗೆ ಮೆರಗು ಕೊಡುವ ಈ ಮೈಸೂರು ಅನಂತಸ್ವಾಮಿಯ ಕೊಡುಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಬಹಳ ಶ್ರೇಷ್ಠವಾದುದು. (ಪುತಿನ)

ಅನಂತಸ್ವಾಮಿಯವರೊಡನೆ ಕೆಲಸ ಮಾಡುವುದು ಬಹಳ ಸುಲಭ – ಏಕೆಂದರೆ ಅವರ ಗುಣ ಅಬ್ಬರವಿಲ್ಲದ ವ್ಯಕ್ತಿತ್ವ. ಕೆಲಸ ಮಾಡುವ ಜಾಗದಲ್ಲಿ ಎಂತಹ ವಾತಾವರಣವಿದ್ದರೂ ತಮ್ಮ ಕೆಲಸದತ್ತ ಮಾತ್ರ ಗಮನ ಹರಿಸುವ ವ್ಯಕ್ತಿ. ಬಹಳಷ್ಟು ಜನ ’ನನಗೆ ಹಾಗಿರಬೇಕು, ಹೀಗಿರಬೇಕು’ ಎಂದು ಬೇರೆಯವರಿಗೆ ತೊಂದರೆಯಿತ್ತು ತಮ್ಮ ಕೆಲಸ ಮಾಡುತ್ತಾರೆ. ಆದರೆ ಈತ ತಾನುಂಟು, ತನ್ನ ಕೆಲಸವುಂಟು – ಕಾಯಕವೇ ಕೈಲಾಸ ಎಂದಿರುವ ಕಲಾವಿದ.

ಶೈಲಜಾ