ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ

ಶೈಲಜಾ

ಕರ್ನಾಟಕದ ನಾಡಗೀತೆ ವಿವಾದ ಇಂದು ಹೈಕೋರ್ಟ್ ಮೆಟ್ಟಲೇರಿರುವುದು ಸಾಕಷ್ಟು ದೊಡ್ಡ ಸುದ್ದಿ. ಗೀತೆಯೊಂದನ್ನು ಹೀಗೇ ಹಾಡಬೇಕು ಎಂದು ಸರ್ಕಾರ ನಿರ್ದೇಶಿಸುವುದು ಸಂಗೀತ ಕಲಾವಿದರ ಸ್ವಾತಂತ್ರ್ಯವನ್ನು ಅಪಹರಿಸುತ್ತದೆ. ಏಕೆಂದರೆ ತಮ್ಮ ಮನಸ್ಸಿಗೆ ಇಷ್ಟ ಬಂದಂತೆ ಕಲೆಯನ್ನು ನಿರೂಪಿಸುವ ಕಲಾವಿದನ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ವಾದ ಹಲವು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹರಣೆಗೆ, ಕಲಾವಿದ, ರಚನಕಾರ, ವಾಗ್ಗೇಯಕಾರ, ಸಂಗೀತ ಸಂಯೋಜಕ ಮತ್ತು ಸಂಗೀತದ ನಡುವಿನ ಪರಸ್ಪರ ಸಂಬಂಧ; ಹಾಗೆಯೇ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಡಿನ ಕಾನೂನುಗಳ ನಡುವಿನ ಸಂಬಂಧದ ಇತಿಮಿತಿಗಳು. ಈ ಸಂಬಂಧಗಳು ಸಾಕಷ್ಟು ಸಂಕೀರ್ಣವೂ, ಗೊಂದಲಮಯವೂ ಆಗಿವೆ.

೨೦೦೩ ಡಿಸೆಂಬರ್ ೨೦ರಂದು, ಕುವೆಂಪುರವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಜಯಭಾರತಜನನಿಯ ತನುಜಾತೆ ಕವನವನ್ನು ನಾಡಗೀತೆಯೆಂದು ಸರ್ಕಾರ ಘೋಷಿಸಿತು. ಈ ಗೀತೆಗೆ ೧೯೫೦ರಲ್ಲಿ ಮೊತ್ತ ಮೊದಲು ರಾಗ ಸಂಯೋಜಿಸಿದವರು ಪದ್ಮಚರಣ್. ಅದನ್ನು ೧೯೫೭ರಲ್ಲಿ ಎಚ್ ಆರ್ ಲೀಲಾವತಿಯವರು ಹಾಡಿದ್ದರು. ಅದರ ಧ್ವನಿಮುದ್ರಿಕೆಯೂ ಲಭ್ಯವಿದೆ. ನಂತರ ಸ್ವತಃ ಎಚ್ ಆರ್ ಲೀಲಾವತಿಯವರು ಅದನ್ನು ರಾಗಮಾಲಿಕೆಯಾಗಿ ಸಂಯೋಜಿಸಿ, ಆಕಾಶವಾಣಿಯಲ್ಲಿ ಹಾಡಿದರು. ನಂತರ ಸಂಯೋಜಿಸಿದ್ದು ಮೈಸೂರು ಅನಂತಸ್ವಾಮಿ; ಆಮೇಲೆ ಸಿ ಅಶ್ವಥ್. ಹೀಗೆ ಅದು ನಾಡಗೀತೆ ಆಗುವ ಮೊದಲೇ ಅದನ್ನು ನಾಲ್ಕು ವಿಭಿನ್ನ ರಾಗಗಳಲ್ಲಿ ಹಾಡುತ್ತಿದ್ದರು.
ಕಾಲಕ್ರಮೇಣ ನಾಡಗೀತೆಗೆ ಸಂಬಂಧಿಸಿದಂತೆ ಹಲವು ವಿವಾದಗಳು ಭುಗಿಲೆದ್ದವು. ನಾಡಗೀತೆಗೆ ಯಾರ ಸಂಯೋಜನೆಯನ್ನು ಅಧಿಕೃತವೆಂದು ಸ್ವೀಕರಿಸಬೇಕು? ಕವನದ ಪೂರ್ಣ ಪಾಠವನ್ನು ಹಾಡಬೇಕೇ ಅಥವಾ ಆಯ್ದ ಭಾಗಗಳನ್ನೇ? ನಾಡಗೀತೆ ಹಾಡುವ ಅವಧಿ ಎಷ್ಟಿರಬೇಕು? ಆ ಗೀತೆಯಲ್ಲಿ ಮಹಿಳೆಯರ ಕುರಿತು ಏನೂ ಇಲ್ಲ. ಹಾಗಾಗಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಸೇರಿಸಿ ಎಂದಿದ್ದರಂತೆ ಪಾಟೀಲ್ ಪುಟ್ಟಪ್ಪನವರು. ಕರ್ನಾಟಕದ ದಾರ್ಶನಿಕರಾದ ಮಧ್ವರ ಹೆಸರು ಇಲ್ಲದೆ ನೆರೆಯ ರಾಜ್ಯದ ಶಂಕರ ಮತ್ತು ರಾಮಾನುಜ ಇವರ ಹೆಸರು ಇರುವ ಗೀತೆ ನಾಡಗೀತೆ ಹೇಗಾಗುತ್ತದೆ ಎನ್ನುವ ಆಕ್ಷೇಪವನ್ನು ಉಡುಪಿಯ ಮಠಾಧೀಶರು ಎತ್ತಿದರು. ಇನ್ನು ಕೆಲವು ಧ್ವನಿಗಳು ತುಂಬಾ ಜೋರಾಗಿ ಅಲ್ಲದಿದ್ದರೂ ಮೆಲುವಾಗಿಯೇ ಕೇಳಿದರು, ಇದೇ ಕವಿಯ ಕವನವನ್ನು ನಾಡಗೀತೆಯಾಗಿ ಏಕೆ ಆಯ್ಕೆ ಮಾಡಬೇಕು? ಎಂದು.

ನಂತರ ಮೂಲಪಠ್ಯದಲ್ಲಿ ಕಬ್ಬಿಗರುದಿಸಿದ ಎನ್ನುವ ಕಡೆ ಕುಮಾರವ್ಯಾಸ ಎಂದೂ, ಮೊದಲ ಹರುಷಿಗರ ಎಂದು ಇರುವೆಡೆ ಬಸವೇಶ್ವರ ಮಧ್ವರ ಹೆಸರನ್ನು ಸೇರಿಸಿದ್ದರ ಬಗ್ಗೆ ಗಂಭೀರವಾದ ಆಕ್ಷೇಪಣೆಗಳು ಬಂದವು. ಹೀಗೆ ಸೇರಿಸುವುದರಿಂದ ಕವಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಕುವಂಪು ಅದನ್ನು ಹೇಗೆ ಬರೆದಿದ್ದರೋ ಹಾಗೇ ಅದನ್ನು ಉಳಿಸಿಕೊಳ್ಳಬೇಕು ಎಂದು ಪೂರ್ಣಚಂದ್ರ ತೇಜಸ್ವಿಯವರು ಸರ್ಕಾರಕ್ಕೆ ಪತ್ರ ಬರೆದರು. ಜೊತೆಗೆ ಶೂದ್ರರನ್ನು ನಿತ್ಯ ನಾರಕಿಗಳು ಮತ್ತು ತಮೋಯೋಗ್ಯರು ಎಂದು ಪರಿಗಣಿಸಿದ್ದ ಮಧ್ವಾಚಾರ್ಯರ ತಾತ್ವಿಕ ನಿಲುವಿನ ಬಗ್ಗೆ ಕುವೆಂಪು ಅವರಿಗೆ ಗಂಭೀರವಾದ ಆಕ್ಷೇಪಗಳಿದ್ದವು. ಶೂದ್ರರು ಮುಕ್ತಿಗೆ ಅನರ್ಹರು ಎನ್ನುವ ಸಿದ್ಧಾಂತವನ್ನು ಹೇಳುವ ಮಧ್ವರನ್ನು ಕೊಂಡಾಡುವುದು ಕುವೆಂಪು ಅವರಿಗೆ ಹೇಗೆ ಸಾಧ್ಯ ಎನ್ನುವುದು ತೇಜಸ್ವಿಯವರ ಅಭಿಪ್ರಾಯವಾಗಿತ್ತು. ಕುವೆಂಪು ಅವರಿಗೆ ೧೯೮೭ರಲ್ಲಿ ಪಂಪ ಪ್ರಶಸ್ತಿ ಬಂದ ಸಂದರ್ಭದಲ್ಲಿ ಈ ಗೀತೆಯನ್ನು ಹಾಡಲಿದ್ದ ಖ್ಯಾತ ಗಾಯಕಿ ಎಚ್ ಆರ್ ಲೀಲಾವತಿಯವರಿಗೆ ಮಧ್ವರ ಹೆಸರನ್ನು ಹಾಡಿನಲ್ಲಿ ಸೇರಿಸಬಾರದೆಂದು ಕುವೆಂಪು ದೂರವಾಣಿಯಲ್ಲಿ ತಿಳಿಸಿದ್ದರು ಎನ್ನುವುದನ್ನು ಲೀಲಾವತಿಯವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇಷ್ಟೆಲ್ಲಾ ಇದ್ದಾಗಲೂ ನಾಡಗೀತೆಗೆ ಮಧ್ವರ ಹೆಸರು ಸೇರ್ಪಡೆಯಾಯಿತು. ನಾಡಗೀತೆ ವಿವಾದ ಕುರಿತಂತೆ ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕೆನ್ನುವುದು ಕಲಾವಿದನ ಸ್ವಾತಂತ್ರ್ಯ ಹರಣವಾದರೆ, ಕವಿಯ ಸಾವಿನ ನಂತರ ಕಾವ್ಯದ ಸಾಲುಗಳನ್ನೇ ಬದಲಿಸುವುದು ಕವಿಯ ಸ್ವಾತಂತ್ರ್ಯದ ಹರಣವಲ್ಲವೇ? ಎನ್ನುವ ಪ್ರಶ್ನೆಯನ್ನು ಎಚ್ ಆರ್ ಲೀಲಾವತಿಯವರು ಕೂಡ ಎತ್ತುತ್ತಾರೆ. ಒಂದು ಗೀತೆಯನ್ನು ನಾಡಗೀತೆ/ರಾಷ್ಟ್ರಗೀತೆ ಮಾಡಿದರು ಎನ್ನುವ ಕಾರಣಕ್ಕೆ ಅದರ ಪೂರ್ಣಪಾಠವನ್ನು ಹಾಡಲೇಬೇಕೆಂದೇನಿಲ್ಲ. ಹಲವು ದಶಕಗಳ ಹಿಂದೆ ಒಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಹಾಡುತ್ತಿದ್ದಾಗ ಅದರ ಕೆಲವು ಚರಣಗಳನ್ನು ಬಿಟ್ಟೇ ಹಾಡುತ್ತಿದ್ದರು.

ಈ ವಿವಾದಗಳಿಗೆ ತೆರೆ ಎಳೆಯಲು ಹಲವು ಸಮಿತಿಗಳನ್ನು ನೇಮಿಸಲಾಯಿತು. ೨೦೦೪ರಲ್ಲಿ ಡಾ ಸಿದ್ದಲಿಂಗಯ್ಯ, ಡಾ ದೊಡ್ಡರಂಗೇಗೌಡ, ಸಂಗೀತತಜ್ಞರಾದ ಎಚ್ ಕೆ ನಾರಾಯಣ್ ಮತ್ತು ಡಾ ರಾಜಶೇಖರ ಮನ್ಸೂರ್ ಇದ್ದ ಜಿ ಎಸ್ ಶಿವರುದ್ರಪ್ಪನವರ ನೇತೃತ್ವದ ಸಮಿತಿ ಅನಂತಸ್ವಾಮಿಯವರ ಸಂಯೋಜನೆಯನ್ನು ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿತ್ತು. ೨೦೧೩ರಲ್ಲಿ ವಸಂತ್ ಕನಕಾಪುರೆ ಸಮಿತಿ ಅನಂತಸ್ವಾಮಿಯವರ ಸಂಯೋಜನೆಯಲ್ಲಿ ಕವನದ ಪೂರ್ಣಪಾಠವನ್ನು ಹಾಡಬೇಕೆಂದಿತು. ೨೦೧೪ರಲ್ಲಿ ಚೆನ್ನವೀರ ಕಣವಿ ಸಮಿತಿ ೧:೩೦ ನಿಮಿಷಗಳಿಗೆ ನಾಡಗೀತೆಯನ್ನು ಇಳಿಸಬೇಕೆಂದು ಶಿಫಾರಸ್ಸು ಮಾಡಿತು. ೨೦೧೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮನು ಬಳಿಗಾರ್ ಸಮಿತಿ ನಾಡಗೀತೆಯನ್ನು ೨:೩೦ ನಿಮಿಷಗಳಲ್ಲಿ ಹಾಡಬೇಕೆಂದಿತು. ನಂತರ ಎಚ್ ಆರ್ ಲೀಲಾವತಿಯವರ ನೇತೃತ್ವದ ೧೮ ಸದಸ್ಯರ ಸಮಿತಿ ಅನಂತಸ್ವಾಮಿ ಸಂಯೋಜಿತ ಗೀತೆಯ ಪೂರ್ಣಪಠ್ಯದ ಗಾಯನವನ್ನು ಶಿಫಾರಸ್ಸು ಮಾಡಿತು. ಅದನ್ನು ಸೆಪ್ಟೆಂಬರ್ ೨೪, ೨೦೨೨ರಲ್ಲಿ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿತು.

ಒಂದು ಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕೆಂಬ ಷರತ್ತು ಸರಿಯಲ್ಲ. ಅದು ನಮ್ಮ ಸಂಗೀತದ ಸ್ವಾತಂತ್ರ್ಯ ಕಸಿದಿದೆ. ಜೊತೆಗೆ ಅನಂತಸ್ವಾಮಿಯವರು ಪೂರ್ಣ ಪಠ್ಯಕ್ಕೆ ರಾಗ ಸಂಯೋಜಿಸಿಲ್ಲ ಹಾಗಾಗಿ ಅದನ್ನು ನಾಡಗೀತೆಯಾಗಿ ಹಾಡುವುದಕ್ಕೆ ಸಾಧ್ಯವಿಲ್ಲ ಎಂದು ಕಿಕ್ಕೇರಿ ಕೃಷ್ಣಮೂರ್ತಿ ಕೋರ್ಟಿನ ಮೆಟ್ಟಿಲೇರಿದರು. ಈ ಆದೇಶವನ್ನು ಸಂವಿಧಾನದ ೧೬೨ನೇ ವಿಧಿಯಡಿ ತನಗಿರುವ ಪರಮಾಧಿಕಾರವನ್ನು ಬಳಸಿ ನಿರ್ದೇಶಿಸಲಾಗಿದೆ ಎಂದು ಸರ್ಕಾರ ಕೋರ್ಟಿನಲ್ಲಿ ಹೇಳಿಕೆ ನೀಡಿತು. ಅನಂತಸ್ವಾಮಿಯವರು ಪೂರ್ಣಪಠ್ಯಕ್ಕೆ ರಾಗಸಂಯೋಜನೆ ಮಾಡಿದ್ದರು. ಆದರೆ ಲಹರಿ ಸಂಸ್ಥೆಯಿಂದ ಧ್ವನಿಸುರುಳಿ ಹೊರತರುವಾಗ ಕೇವಲ ಮೂರು ಚರಣಗಳನ್ನು ಮಾತ್ರ ಹಾಡಲಾಗಿದೆ. ರಾಜು ಅನಂತಸ್ವಾಮಿಯವರು ಸಂಪೂರ್ಣ ಪಠ್ಯವಿರುವ ಗೀತೆಯನ್ನು ತಮ್ಮ ಅಕಾಡೆಮಿಯಲ್ಲಿಯೇ ಹಾಡಿದ್ದರು ಎನ್ನುತ್ತಾರೆ ಎಚ್ ಆರ್ ಲೀಲಾವತಿಯವರು.

ಈ ವಿವಾದ ಕಾವ್ಯ-ಸಂಗೀತ, ಕವನ-ಸಂಗೀತ ಸಂಯೋಜಕ, ಸಂಗೀತ-ಧರ್ಮ, ಕಾವ್ಯ-ಪ್ರಭುತ್ವ, ಸಂಗೀತ-ಬದಲಾವಣೆ ಇವುಗಳ ನಡುವಿನ ಸಂಬಂಧ ಕುರಿತು ಮರುಚಿಂತನೆಯ ಅವಶ್ಯಕತೆಯನ್ನು ಮುನ್ನೆಲೆಗೆ ತಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಸಂಬಂಧಗಳೆಲ್ಲವೂ ನಿರಂತರ ಬದಲಾಗುತ್ತಿರುವ ಸಂಬಂಧಗಳು ಎನ್ನುವುದು ಅರಿವಾಗುತ್ತದೆ.

ಹಿಂದೆ ನಾಡಗೀತೆ ಅಥವಾ ರಾಷ್ಟ್ರಗೀತೆಯ ಕಲ್ಪನೆ ಈಗಿರುವುದಕ್ಕಿಂತ ಅನಿಶ್ಚಿತವಾಗಿತ್ತು. ರಾಷ್ಟ್ರಗೀತೆ ಮತ್ತು ನಾಡಗೀತೆ ಎನ್ನುವ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತಿದ್ದವು. ನಾಡಗೀತೆ ಎನ್ನುವುದು ಒಂದು ನಿರ್ದಿಷ್ಟ ಹಾಡಾಗಿರಲಿಲ್ಲ. ೧೯೨೪ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಮೊದಲನೆಯ ದಿನ ಶಾಂತಕವಿಯ ರಚನೆ ನಮ್ಮದೈ ನಮ್ಮದೀ ಭರತಭೂಮಿ ಎಂಬ ಗೀತೆಯನ್ನು ಭಾರತದ ರಾಷ್ಟ್ರಗೀತೆ ಎಂದು ಹಾಡಲಾಯಿತು. ಎರಡನೆಯ ದಿನ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚಲುವ ಕನ್ನಡನಾಡನ್ನು ಕನ್ನಡ ರಾಷ್ಟ್ರಗೀತೆ ಎಂದು ಹಾಡಲಾಯಿತು. ಬೇರೊಂದೆಡೆ ಗೋವಿಂದ ಪೈ ಅವರ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಹಾಡುತ್ತಿದ್ದರು. ಇನ್ನೂ ವಿಶೇಷವೆಂದರೆ ಸ್ಥಳ, ಭಾಷೆ, ಉಪಭಾಷೆಗೆ ಅನುಗುಣವಾಗಿ ನಾಡಗೀತೆ, ರಾಷ್ಟ್ರಗೀತೆಗಳು ಬದಲಾಗುತ್ತಿದ್ದವು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು ಹೀಗೆ. ಒಂದೇ ಹಾಡನ್ನು ಬೇರೆ ಬೇರೆ ಮಟ್ಟುಗಳಲ್ಲಿ ಹಾಡಲಾಗುತ್ತಿತ್ತು. ವಂದೇ ಮಾತರಂಅನ್ನು ೭೦ ವಿಭಿನ್ನ ಮಟ್ಟುಗಳಲ್ಲಿ ಹಾಡಲಾಗುತ್ತಿತ್ತಂತೆ. ಅದರಲ್ಲಿ ಸುಮಾರು ೪೫ ಮಟ್ಟುಗಳನ್ನು ತಾವು ಕೇಳಿರುವುದಾಗಿ ಗಾಯಕ ಟಿ ಎಂ ಕೃಷ್ಣ ಹೇಳುತ್ತಾರೆ. ಈಗಾಗಲೇ ಗಮನಿಸಿರುವಂತೆ ನಮ್ಮ ಇಂದಿನ ನಾಡಗೀತೆಯೂ ನಾಲ್ಕು ವಿಭಿನ್ನ ರಾಗಗಳಲ್ಲಿ ಲಭ್ಯವಿದೆ. ಹಾಗಾಗಿ ನಾಡಗೀತೆ ಎಂಬ ಕಲ್ಪನೆಯೇ ಹೆಚ್ಚು ಮುಕ್ತವಾಗಿದ್ದು, ಪ್ರಾದೇಶಿಕ ಜನರ ಭಾಷಾವೈವಿಧ್ಯ, ಉಪಭಾಷೆಗಳ ಸೊಗಡಿಗೆ ಹೆಚ್ಚಿನ ಅವಕಾಶವಿತ್ತು. ಬಹುಶಃ ರಾಷ್ಟ್ರೀಯತೆಯ ಕಲ್ಪನೆ ಬಲವಾದಂತೆಲ್ಲಾ ಒಂದು ರಾಷ್ಟ್ರ, ಒಂದು ರಾಷ್ಟ್ರಗೀತೆ, ಒಂದು ರಾಷ್ಟ್ರಭಾಷೆ, ಮುಂತಾದ ಕಲ್ಪನೆಗಳು ಬಲವಾದವು. ಎಲ್ಲವೂ ಸ್ಟಾಂಡರ್ಡೈಸ್ ಆಗಬೇಕೆಂಬ ಚಿಂತನೆ ಮೊದಲಾಯಿತು. ಭಾಷಾ ವೈವಿಧ್ಯ, ಪ್ರಾಂತೀಯ ವೈವಿಧ್ಯ, ದೇಶೀ ಸೊಗಡು ಹಿನ್ನೆಲೆಗೆ ಸರಿಯಿತು.
ಬದಲಾವಣೆ ಸಂಗೀತ ಪರಂಪರೆಯ ಭಾಗವೇ ಆಗಿತ್ತು. ಅದೆಂದೂ ನಿಂತ ನೀರಾಗಿರಲಿಲ್ಲ. ಭಾವಗೀತೆಗಳು, ದೇವರನಾಮ, ವಚನಗಳು, ಸಂತವಾಣಿ ಮುಂತಾದುವನ್ನು ಕಲಾವಿದರು ತಮ್ಮ ಕಲ್ಪನೆಗನುಗುಣವಾಗಿ ಹಾಡುತ್ತಿದ್ದರು. ಸ್ವರ, ಸಾಹಿತ್ಯ ಮತ್ತು ರಾಗ-ತಾಳಗಳ ನಿರ್ದೇಶನ ಇರುವ ವಾಗ್ಗೇಯ ರಚನೆಗಳನ್ನು ಆದಷ್ಟು ಬದಲಿಸದೆ ಹಾಡುತ್ತಿದ್ದರು. ಆದರೆ ಅಲ್ಲಿಯೂ ಬದಲಾವಣೆಗಳಾಗುತ್ತಲೇ ಇದೆ. ತ್ಯಾಗರಾಜರ ಕೃತಿಗಳನ್ನು ಅವರ ಶಿಷ್ಯರು ಹಾಡುವ ಕ್ರಮದಲ್ಲಿ ವ್ಯತ್ಯಾಸಗಳಿವೆ. ಕಾಲಕ್ರಮೇಣ ಕೃತಿಗಳಿಗೆ ಹೊಸ ಸಂಗತಿಗಳು ಸೇರ‍್ಪಡೆಯಾಗಿವೆ. ಸುಬ್ಬರಾಮ ದೀಕ್ಷಿತರ ಸಂಪ್ರದಾಯ ಪ್ರದರ್ಶಿನಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳು ವರ್ಣಮಟ್ಟಿನ ಜೊತೆ ಇವೆ. ಹಾಗಿದ್ದಾಗ್ಯೂ ಹಲವು ಶಾಸ್ತ್ರೀಯ ಸಂಗೀತಗಾರರೇ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಭಿನ್ನವಾಗಿ ಹಾಡಿದ್ದಾರೆ. ಕೃತಿಯ ರಾಗವೇ ಬದಲಾಗಿದೆ. ಕಾಲದಿಂದ ಕಾಲಕ್ಕೆ ರಾಗಗಳ ಸ್ವರೂಪ ಬದಲಾವಣೆಯಾಗಿದೆ. ಅಣ್ಣಮಾಚಾರ್ಯರ ಕೃತಿಗಳಿಗೆ ರಾಗ ನಿರ್ದೇಶನವಿದ್ದರೂ ಎಂ.ಎಸ್.ಸುಬ್ಬುಲಕ್ಷ್ಮಿ, ನೇದನೂರಿ ಕೃಷ್ಣಮೂರ್ತಿಯಂಥ ಖ್ಯಾತ ಗಾಯಕರು ಬೇರೆಯೇ ರಾಗದಲ್ಲಿ ಹಾಡಿದ್ದಾರೆ. ಬದಲಾವಣೆ ಕ್ರಾಂತಿಕಾರಕವಾದಾಗ ಮಾತ್ರ ವಿರೋಧ ವ್ಯಕ್ತವಾಗಿದೆ. ಇಳೆಯರಾಜ ಅವರು ಸಿಂಧುಭೈರವಿ ಎಂಬ ಚಲನಚಿತ್ರದಲ್ಲಿ ತ್ಯಾಗರಾಜರ ಕಾಂಬೋಧಿ ರಾಗದ ಮರಿ ಮರಿ ನಿನ್ನೇ ಎನ್ನುವ ಕೃತಿಯ ರಾಗವನ್ನೇ ಬದಲಿಸಿ ಸಾರಮತಿ ರಾಗದಲ್ಲಿ ಹಾಡಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತು.

ಸಂಗೀತ ಮತ್ತು ಧರ್ಮದ ಸಂಬಂಧವೂ ನಿರಂತರ ಬದಲಾಗುತ್ತಲೇ ಇದೆ. ಆಯಾ ಕಾಲಘಟ್ಟದ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿ, ಪ್ರಭುತ್ವದ ಧೋರಣೆಗಳು ಇದನ್ನು ಗಾಢವಾಗಿ ಪ್ರಭಾವಿಸಿದೆ. ಕರ್ನಾಟಕದ ಸೂಫಿ ಗಾಯನ ಪರಂಪರೆ, ಮೊಹರಂ ಹಾಡುಗಳ ಗಾಯನ, ೧೯ನೇ ಶತಮಾನದಲ್ಲಿ ಕ್ರೈಸ್ತರು ಮತ್ತು ಕರ್ನಾಟಕ ಸಂಗೀತಗಾರರಿಗೂ ಇದ್ದ ಆತ್ಮೀಯ ಸಂಬಂಧಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಮದ್ರಾಸಿನ ಎ ಎಂ ಚಿನ್ನಸ್ವಾಮಿ ಮುದಲಿಯಾರರು ಕ್ರೈಸ್ತರಾಗಿದ್ದರು. ಹಾಗಿದ್ದಾಗ್ಯೂ ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ನೇರ ಶಿಷ್ಯರು ಅವರಿಗೆ ಸಂಗೀತ ಕಲಿಸಿದರು. ಖ್ಯಾತ ಸಂಗೀತ ಶಾಸ್ತ್ರಜ್ಞ ಪಿ ಸಾಂಬಮೂರ್ತಿ ಸಮ್ಮರ್ ಸ್ಕೂಲ್‌ನಲ್ಲಿ ಕ್ರೈಸ್ತರಿಗೆ ಸಂಗೀತ ಕಲಿಸುತ್ತಿದ್ದರು. ಮುಸಲ್ಮಾನರಾದ ಶೇಕ್ ಚಿನ್ನಾ ಮೌಲಾನ ಸಾಹೇಬರು ತಿರುಪತಿಯ ದೇವಾಲಯದಲ್ಲಿ ನಾಗಸ್ವರ ನುಡಿಸುತ್ತಿದ್ದರು. ಖ್ಯಾತ ಗಾಯಕ ಜೇಸುದಾಸ್ ಅಯ್ಯಪ್ಪನ್ ಕುರಿತು ಹಾಡಿದ ಭಕ್ತಿಗೀತೆಗಳು ಇಂದಿಗೂ ಎಲ್ಲರ ಬಾಯಲ್ಲಿಯೂ ಅನುರಣಿಸುತ್ತಿವೆ. ಕ್ರೈಸ್ತರಾಗಿದ್ದ ಅಬ್ರಹಾಂ ಪಂಡಿತರ್ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಗೌರವಿಸಲ್ಪಡುತ್ತಿದ್ದ ವಿದ್ವಾಂಸರಾಗಿದ್ದರು. ಕಳೆದ ದಶಕದ ತನಕ ಇವೆಲ್ಲವೂ ಯಾರಿಗೂ ಅಸಹಜ, ಧರ್ಮವಿರೋಧಿ ಅನ್ನಿಸಿರಲಿಲ್ಲ. ಆದರೆ ಕಳೆದ ದಶಕದಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದನೊಬ್ಬ ಕ್ರಿಸ್ತಗೀತೆಗಳ ಕಚೇರಿ ಮಾಡುತ್ತಾನೆ ಎನ್ನುವುದು, ಖ್ಯಾತ ಗಾಯಕಿಯರಾದ ಅರುಣಾ ಸಾಯಿರಾಂ, ನಿತ್ಯಶ್ರೀ ಮಹಾದೇವನ್, ಓ ಎಸ್ ಅರುಣ್ ಚರ್ಚಿನಲ್ಲಿ ಹಾಡಿದರು ಎನ್ನುವುದು ವಿವಾದಕ್ಕೀಡಾಯಿತು.

ಒಂದು ಕವನ ಅಥವಾ ಕೃತಿ ರಚನೆಯಾದ ಕಾಲಘಟ್ಟದಲ್ಲಿ ವಿವಾದಾತ್ಮಕ ಆಗದಿರಬಹುದು, ಅಷ್ಟೇ ಅಲ್ಲ ಸ್ವೀಕೃತವೂ ಆಗಿರಬಹುದು. ಆದರೆ ಬದಲಾದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪರಿಸರದಲ್ಲಿ ವಿವಾದಕ್ಕೊಳಗಾಗಬಹುದು. ೧೮ನೇ ಶತಮಾನದಲ್ಲಿ ತಂಜಾವೂರು ಸಂಸ್ಥಾನದ ದೇವದಾಸಿ ಮುದ್ದುಪಳನಿ ರಚಿಸಿದ ಶೃಂಗಾರಕಾವ್ಯ ರಾಧಿಕಾ ಸಾಂತ್ವನಮು ಅಂದು ಅಶ್ಲೀಲ ಎನಿಸಿಕೊಳ್ಳಲಿಲ್ಲ. ಆದರೆ ೨೦ನೇ ಶತಮಾನದಲ್ಲಿ ಬೆಂಗಳೂರು ನಾಗರತ್ನಮ್ಮ ಅದನ್ನು ಮತ್ತೆ ಪ್ರಕಟಿಸಿದಾಗ ಅಶ್ಲೀಲ ಕೃತಿಯೆಂದು ಕುಂದಕೂರಿ ವೀರೇಶಲಿಂಗಂ ಗಂಭೀರವಾಗಿ ಆಕ್ಷೇಪವೆತ್ತಿದರು. ಆಗ ವಸಾಹತು ಸರ್ಕಾರ ಅದನ್ನು ಅದನ್ನು ನಿಷೇಧಿಸಿತು. ೧೯೨೪ರಲ್ಲಿ ರಚನೆಯಾದ ಜಯಭಾರತ ಜನನಿಯ ತನುಜಾತೆಯಲ್ಲಿ ಮಧ್ವ, ಬಸವಣ್ಣ, ಕುಮಾರವ್ಯಾಸರ ಹೆಸರುಗಳಿಲ್ಲದ್ದು ಅಂದು ವಿವಾದಾತ್ಮಕವಾಗಲಿಲ್ಲ. ಆದರೆ ನಂತರ ಅದು ವಿವಾದಾತ್ಮಕವಾಯಿತು. ಇದನ್ನೂ ಹೀಗೆ ಬದಲಾಗಿರುವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಿನ್ನೆಲೆಯಲ್ಲಿ ಇಟ್ಟು ಅಧ್ಯಯನ ಮಾಡಬೇಕಾಗುತ್ತದೆ.
ನಾಡಗೀತೆ, ರಾಷ್ಟ್ರಗೀತೆಗಳು ನಿರ್ದಿಷ್ಟವೂ ಏಕರೂಪವೂ ಆಗಿರಬೇಕೆಂಬ ಗ್ರಹಿಕೆ ತುಂಬಾ ಬಲವಾಗಿ ಇರುವ ಈ ಕಾಲಘಟ್ಟದಲ್ಲಿ ಇಂತಹ ಗೀತೆಗಳು ಹೇಗಿರಬೇಕು ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಹೀಗೆ ಒಟ್ಟಾಗಿ ಗುಂಪಿನಲ್ಲಿ ಹಾಡಬೇಕಾದ ಗೀತೆಗಳು ಸರಳವಾಗಿಯೂ ಇರಬೇಕಾಗುತ್ತದೆ ಎನ್ನುವುದನ್ನು ಖ್ಯಾತ ಸಂಗೀತಗಾರರೆಲ್ಲ ಗುರುತಿಸಿದ್ದಾರೆ. ನಾಡಗೀತೆ ಸಮಿತಿಯ ನೇತೃತ್ವ ವಹಿಸಿದ್ದ ಎಚ್ ಆರ್ ಲೀಲಾವತಿಯವರು ಈ ಅಂಶವನ್ನು ಸೊಗಸಾಗಿ ವಿಶ್ಲೇಷಿಸುತ್ತಾರೆ. ಈ ಗೀತೆಗೆ ನನ್ನನ್ನೂ ಸೇರಿದಂತೆ ನಾಲ್ಕು ಜನರ ಸಂಗೀತ ಸಂಯೋಜನೆಯಿದೆ. ಆದರೆ ಎಲ್ಲ ಸಮಿತಿಗಳೂ ಅನಂತಸ್ವಾಮಿಯವರ ಸಂಯೋಜನೆಯನ್ನೇ ಶಿಫಾರಸ್ಸು ಮಾಡಿತು. ನೂರಾರು ಮಂದಿ ಒಟ್ಟಿಗೆ ಹಾಡಲು ಅನುವಾಗುವಂತೆ ಅವರ ಸಂಯೋಜನೆ ಸರಳವಾಗಿ, ಸುಲಲಿತವಾಗಿತ್ತು. ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕೆನ್ನುವುದು ಕಲಾವಿದನ ಸ್ವಾತಂತ್ರ್ಯ ಹರಣವಾದರೆ, ಕವಿಯ ಸಾವಿನ ನಂತರ ಕಾವ್ಯದ ಸಾಲುಗಳನ್ನೇ ಬದಲಿಸುವುದು ಕವಿಯ ಸ್ವಾತಂತ್ರ್ಯದ ಹರಣವಲ್ಲವೇ? ನಾಡಿನ ದೃಷ್ಟಿಯಿಂದ ನೋಡುವಾಗ ನನ್ನ ಇಷ್ಟ ಮುಖ್ಯವಾಗುವುದಿಲ್ಲ, ರಾಜ್ಯದ ಮರ್ಯಾದೆಯ ಪ್ರಶ್ನೆ ಮುಖ್ಯವಾಗುತ್ತದೆ.

ನಾಡಗೀತೆ ಬೇಕೇ ಬೇಕು ಎಂದರೆ ಒಂದು ನಿರ್ದಿಷ್ಟ ಮಾದರಿಗೆ ಅಂಟಿಕೊಳ್ಳಲೇ ಬೇಕಾಗುತ್ತದೆ. ಇದೊಂದು ವಾಸ್ತವಿಕ ಸಮಸ್ಯೆ. ಜನಗಣಮನವನ್ನು ಸ್ಟಾಂಡರ್ಡೈಜ್ ಮಾಡಲು ೧೯೬೦ರ ತನಕ ಭಾರತ ಸರ್ಕಾರವೂ ಸಾಕಷ್ಟು ಹೆಣಗಾಡಿದೆ. ಕೆಲವೊಂದು ಕಡೆ ಲಭ್ಯವಿರುವ ಯಾವ ರಚನೆಯನ್ನೂ ನಾಡಗೀತೆಗಾಗಿ ಬಳಸದೆ ಖ್ಯಾತನಾಮರನ್ನು ಆಹ್ವಾನಿಸಿ ಹೊಸಗೀತೆಯನ್ನೇ ಸಿದ್ಧಪಡಿಸಲಾಗುತ್ತದೆ. ಚೆನ್ನೈನಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಎಂ ಎಸ್ ವಿಶ್ವನಾಥನ್ ಅವರನ್ನು ಆಹ್ವಾನಿಸಿ ತಮಿಳುನಾಡಿನ ನಾಡಗೀತೆಯನ್ನು ರಚಿಸಿ ಸಂಗೀತ ಸಂಯೋಜಿಸಿಕೊಡಲು ಕೇಳಿಕೊಳ್ಳಲಾಯಿತು. ಎಂದು ಹೇಳುತ್ತಲೇ ಗಾಯಕ ಟಿ ಎಂ ಕೃಷ್ಣ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಾರೆ. ಭಾರತದಂತಹ ವೈವಿಧ್ಯಮಯ ಸಂಸ್ಕೃತಿಗಳಿರುವ ದೇಶದ ಸಂಗೀತದಲ್ಲಿ, ಸಂಯೋಜನೆಯಲ್ಲಿ ವೈವಿಧ್ಯತೆಯಿರುವುದು ತುಂಬಾ ಮುಖ್ಯ. ಗೀತೆಯೊಂದನ್ನು ಬೇರೆ ಬೇರೆ ರಾಗದಲ್ಲಿ ಹಾಡಿದರೆ ಬಾಧಕವೇನು? ಅರ್ಥ ಮತ್ತು ಅದರ ಉದ್ದೇಶ ಬದಲಾಗಬಾರದು. ಸಂಸ್ಕೃತಿಗೆ ಸಂಬಂಧಿಸಿದಂತೆ ಏನನ್ನಾದರೂ ಸ್ಟಾಂಡರ್ಡೈಜ್ ಮಾಡಬೇಕೆಂಬುದು ಒಂದು ರೀತಿಯಲ್ಲಿ ಮಿಲಿಟರಿ ಮನೋಭಾವ. ಒಂದು ಹಾಡನ್ನು ಎಲ್ಲರೂ ಒಕ್ಕೊರಲಿನಲ್ಲಿ ಹಾಡಿದ ಮಾತ್ರಕ್ಕೆ ಅದು ಅವರ ಮನಸ್ಸಿನಲ್ಲಿ ಐಕ್ಯತೆಯನ್ನು ಹುಟ್ಟುಹಾಕುತ್ತದೆಯೇ? ಅದು ಕೇವಲ ಏಕರೂಪಗೊಳಿಸುತ್ತದೆ. ಏಕರೂಪತೆಯನ್ನೇ ಐಕ್ಯತೆ ಎಂದು ತಪ್ಪಾಗಿ ಗ್ರಹಿಸಬಾರದು. ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆ ಮಾಡಬೇಕು, ಅದನ್ನು ಹಾಡುವುದು ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮದ ಹೆಗ್ಗುರುತು ಎನ್ನುವ ವಿಚಾರ ೨೦ ವರ್ಷಗಳ ಹಿಂದೆ ಮತ್ತೆ ಮುನ್ನೆಲೆಗೆ ಬಂದಾಗಲೂ ಖ್ಯಾತ ಚಿಂತಕ ಇಮ್ತಿಯಾಜ್ ಅಹ್ಮದ್ ಒಂದು ನಿರ್ದಿಷ್ಟ ಹಾಡನ್ನು ಹಾಡಿದಾಗ ಮಾತ್ರ ರಾಷ್ಟ್ರೀಯತೆಯ ಪ್ರಜ್ಞೆ ಮತ್ತು ರಾಷ್ಟ್ರಪ್ರೇಮ ವ್ಯಕ್ತವಾಗುತ್ತದೆ ಎನ್ನುವುದೇ ಪ್ರಜಾಸತ್ತಾತ್ಮಕ ತತ್ತ್ವಗಳಿಗೆ ವಿರುದ್ಧವಾದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಾಡಗೀತೆಗೆ ಸಂಬಂಧಿಸಿದಂತೆ ನಾನು ಒಬ್ಬ ಕಲಾವಿದೆಗಿಂತ ಹೆಚ್ಚಾಗಿ ನಾಡಪ್ರಜೆಯಾಗಿ ಯೋಚಿಸುತ್ತೇನೆ, ಎನ್ನುತ್ತಾರೆ ಖ್ಯಾತ ಕರ್ನಾಟಕ ಸಂಗೀತ ಕಲಾವಿದೆ, ಸಂಗೀತಶಾಸ್ತ್ರಜ್ಞೆ ಡಾ ಟಿ ಎಸ್ ಸತ್ಯವತಿ. ನಾಡಿನ ಐಕ್ಯತೆಯನ್ನು ಬಿಂಬಿಸುವ ಗೀತೆಗೆ ವ್ಯಾಪಕತೆ ಮತ್ತು ಸ್ವೀಕೃತಿ ಬೇಕಾಗುತ್ತದೆ. ಅದರ ಸ್ವರಮಟ್ಟು ಸ್ಥಿರವಾಗಿ, ಏಕರೂಪವಾಗಿರಬೇಕು. ಇಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಪ್ರಭುಸಮ್ಮಿತೆ ಮುಖ್ಯವಾಗುತ್ತದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಮಿತಿಗೊಳಿಸಿಕೊಳ್ಳಬೇಕಾಗುತ್ತದೆ. ವಿವಾದ ವಿಕೋಪಕ್ಕೆ ಹೋಗುತ್ತದೆ ಎಂದಾದಲ್ಲಿ, ನಾಡಗೀತೆಗೆಂದೇ ಹೊಸ ರಚನೆ ಮಾಡಿಸಿ, ಸ್ವರಸಂಯೋಜಿಸಿ, ಅದನ್ನು ಜಾರಿಗೆ ತರಬೇಕಾಗುತ್ತದೆ. ಆಗಲೂ ಯಾರೂ ವಿವಾದವನ್ನು ಹುಟ್ಟುಹಾಕುವುದಿಲ್ಲ ಅಂತೇನಿಲ್ಲವಲ್ಲ? ಎಂದು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾರೆ.

ಹೀಗೆ ವಾಸ್ತವವಾಗಿ ಸಂಗೀತ ಮತ್ತು ಸಮಾಜದ ಸಂಬಂಧದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಲಿಂಗ, ಧರ್ಮ, ಜಾತಿ, ಭಾಷೆ ಮುಂತಾದ ಪ್ರಮುಖ ಚರ್ಚೆಗಳೆಲ್ಲವೂ ಅಂತರ್ಗತವಾಗಿವೆ. ಬಹುಶಃ ಅದರಿಂದ ಹೊರತುಪಡಿಸಿ ಈ ವಿಚಾರವನ್ನು ನೋಡಲು ಸಾಧ್ಯವಿಲ್ಲವೆನಿಸುತ್ತದೆ.