ನರೇಂದ್ರ ಮೋದಿಯವರು ೨೦೧೪ರಲ್ಲಿ ತಮ್ಮ ಸ್ವಾತಂತ್ರೋತ್ಸವದ ಭಾಷಣದಲ್ಲಿ ಯೋಜನಾ ಆಯೋಗವನ್ನು ಒಂದು ’ಕುಸಿದು ಬೀಳುತ್ತಿರುವ ಮನೆ ಅದನ್ನು ರಿಪೇರಿ ಮಾಡುವುದಕ್ಕಿಂತ ಹೊಸ ಮನೆಯನ್ನು ಕಟ್ಟುವುದು ಅಗ್ಗವಾಗುತ್ತದೆ’ ಎಂದು ಘೋಷಿಸಿದರು. ಯೋಜನಾ ಆಯೋಗವನ್ನು ಅವರು ನೆಹರು ಯುಗದ ಪಳೆಯುಳಿಕೆಯಾಗಿ ನೋಡಿದರು. ಅದರ ಬದಲಿಗೆ ನೀತಿ ಆಯೋಗವನ್ನು ರಚಿಸಿದರು.
ಸ್ವಾತಂತ್ರ್ಯ ಬರುವುದಕ್ಕೂ ತುಂಬಾ ಮೊದಲಿನಿಂದಲೂ ನಮ್ಮಲ್ಲಿ ರಾಷ್ಟ್ರೀಯ ಯೋಜನೆಯನ್ನು ಕುರಿತ ಚಿಂತನೆ ನಡೆದಿತ್ತು. ವಸಾಹತುಶಾಹಿ ವಿರೋಧಿ ಹೋರಾಟ ತೀವ್ರವಾಗುತ್ತಾ ಹೋದಂತೆ, ನಮ್ಮದೇ ಆದ ಆರ್ಥಿಕ ಹಾದಿಯನ್ನು ರೂಪಿಸಿಕೊಳ್ಳಬೇಕೆನ್ನುವ ಧ್ವನಿಯೂ ತೀವ್ರವಾಗತೊಡಗಿತು. ಅದು ಬಹುತೇಕ ವಸಾಹತುಶಾಹಿ ಶೋಷಣೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಚಿಂತನೆ. ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಬರುತ್ತಿದ್ದಂತೆ ಈ ಎಲ್ಲಾ ಚಿಂತನೆಗಳ ಫಲವಾಗಿ ಯೋಜನಾ ಆಯೋಗ ಅಸ್ತಿತ್ವಕ್ಕೆ ಬಂತು. ಆರ್ಥಿಕ ಯೋಜನೆಯ ಪರಿಕಲ್ಪನೆ ಕೂಡ ವಸಾಹತುಶಾಹಿ ವಿರೋಧಿ ಹೋರಾಟದ ಭಾಗವಾಗಿಯೇ ರೂಪುಗೊಳ್ಳುತ್ತಾ ಹೋಯಿತು. ಅದರಿಂದ ಸೋವಿಯತ್ ಪ್ರಭಾವದಿಂದ ಇದು ಪ್ರಾರಂಭವಾಯಿತು ಅನ್ನುವುದಕ್ಕಿಂತ ನಾವು ಆರಿಸಿಕೊಂಡ ಯೋಜನೆಯ ಮಾದರಿಯ ಮೇಲೆ ಸೋವಿಯತ್ ಮಾದರಿಯ ಪ್ರಭಾವ ಇದೆ ಎನ್ನುವುದು ಹೆಚ್ಚು ಸರಿಯಿರಬಹುದು. ಆ ಸಮಯದಲ್ಲಿ ಸ್ವತಂತ್ರಗೊಂಡ ಬಹುತೇಕ ಸರ್ಕಾರಗಳು ತಮ್ಮ ರಾಷ್ಟ್ರಗಳ ಆರ್ಥಿಕ ನಿರ್ಮಾಣಕ್ಕೆ ಯೋಜನೆಯನ್ನು ಮುಖ್ಯ ಹಾದಿಯಾಗಿ ಯೋಚಿಸಿದ್ದವು.
ವಸಾಹತುಶಾಹಿ ಆಳ್ವಿಕೆಯುದ್ದಕ್ಕೂ ನಮ್ಮ ನೈಸರ್ಗಿಕ ಸಂಪತ್ತಿನ ಲೂಟಿ ನಿರಂತರವಾಗಿ ನಡೆದಿತ್ತು. ದೇಶ ಭೀಕರ ಕ್ಷಾಮ ಕಂಡಿತ್ತು. ಕೃಷಿ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಕಚ್ಚಾಮಾಲುಗಳು ಅಗ್ಗದ ದರದಲ್ಲಿ ನಮ್ಮಿಂದ ರಫ್ತಾಗುತ್ತಿದ್ದವು. ಸಾಮ್ರಾಜ್ಯಶಾಹಿ ದೇಶಗಳಿಂದ ಉತ್ಪಾದಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ವಸಾಹತುಶಾಹಿಗಳಿಂದ ವಿಮೋಚನೆಗೊಂಡ ಮೇಲೆ ಇದಕ್ಕೆ ವಿರುದ್ಧವಾದ ಆರ್ಥಿಕ ಬೆಳವಣಿಗೆಯ ಮಾದರಿಯನ್ನು ಆಯ್ಕೆಮಾಡಿಕೊಳ್ಳಲಾಯಿತು. ವಿದೇಶಿ ವಿನಿಮಯಕ್ಕಾಗಿ ಆಹಾರ ಧಾನ್ಯಗಳನ್ನು ರಫ್ತನ್ನು ಅವಲಂಬಿಸಬಾರದು ಅನ್ನುವ ಅರಿವು ನಮ್ಮ ನಾಯಕರುಗಳಿಗೆ ಇತ್ತು. ಹಾಗೆ ಮಾಡಿದರೆ ನಮ್ಮ ಆಹಾರದ ಸ್ವಾವಲಂಬನೆ ಸಾಧ್ಯವಾಗುವುದಿಲ್ಲ ಅನ್ನುವುದನ್ನು ವಸಾಹತುಶಾಹಿ ಅನುಭವ ನಮಗೆ ಕಲಿಸಿತ್ತು.
ಬ್ರಿಟಿಷರ ಆಡಳಿತದ ಕೊನೆಯ ಐವತ್ತು ವರ್ಷಗಳಲ್ಲಿ ತಲಾ ಆಹಾರ ಧಾನ್ಯದ ಲಭ್ಯತೆ ೨೫%ರಷ್ಟು ಕಡಿಮೆಯಾಗಿತ್ತು. ಸ್ವಾತಂತ್ರ್ಯ ಸಿಕ್ಕಾಗ ನಮ್ಮಲ್ಲಿ ಬಡತನ ವ್ಯಾಪಕವಾಗಿತ್ತು. ನಿರುದ್ಯೋಗ ವಿಪರೀತವಿತ್ತು. ಜನರ ಸರಾಸರಿ ಆಯಸ್ಸು ೩೦ ವರ್ಷವೂ ಇರಲಿಲ್ಲ. ಶೇಕಡ ೮೦ಕ್ಕೂ ಹೆಚ್ಚು ಜನ ಅನಕ್ಷರಸ್ತರಾಗಿದ್ದರು. ಭೀಕರ ಕೋಮು ಗಲಭೆ ಕೋಟ್ಯಂತರ ಜನರನ್ನು ನಿರ್ಗತಿಕರನ್ನಾಗಿ ಮಾಡಿತ್ತು. ವಿಭಜನೆಯ ಪರಿಣಾಮವಾಗಿ ೬೦ ಲಕ್ಷಕ್ಕೂ ಹೆಚ್ಚು ಜನ ಭಾರತಕ್ಕೆ ವಲಸೆ ಬಂದಿದ್ದರು. ವಸಾಹತುಶಾಹಿ ಆಡಳಿತದಲ್ಲಿ ತಯಾರಿಕಾ ಕ್ಷೇತ್ರ ನಾಶವಾಗಿತ್ತು. ಖಾಸಗಿ ಕ್ಷೇತ್ರ ದುರ್ಬಲವಾಗಿತ್ತು. ದೇಶದ ಪ್ರಗತಿಗೆ ಅವಶ್ಯಕವಾಗಿದ್ದ ಕೈಗಾರಿಕೆಯನ್ನು ನಿರ್ಮಿಸಬಲ್ಲ ಸಾಮರ್ಥ್ಯವಿದ್ದ ಖಾಸಗಿ ಉದ್ದಿಮೆಗಳೂ ಇರಲಿಲ್ಲ. ವಿದೇಶಿ ಉದ್ದಿಮೆಗಳ ಮುಂದೆ ಸ್ಪರ್ಧಿಸುವ ಸಾಮರ್ಥ್ಯವೂ ಖಾಸಗಿ ಕ್ಷೇತ್ರಕ್ಕಿರಲಿಲ್ಲ. ಬೃಹತ್ ಕೈಗಾರಿಕೆಯನ್ನು ನಿರ್ಮಿಸುವುದಕ್ಕೆ ಬೇಕಾದ ಬಂಡವಾಳವನ್ನು ಕ್ರೋಡೀಕರಿಸುವುದಕ್ಕೂ ಅವುಗಳಿಗೆ ಸಾಧ್ಯವಿರಲಿಲ್ಲ. ದೇಶದ ಬೆಳವಣಿಗೆಯನ್ನು ಸಾಧಿಸುವುದಕ್ಕೆ ಸರ್ಕಾರಿ ಉದ್ದಿಮೆಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿತ್ತು. ದೊಡ್ಡ ಉದ್ದಿಮೆಗಳು ಸೇರಿ ಪ್ರಕಟಿಸಿದ್ದ ಬಾಂಬೆ ಯೋಜನೆಯೂ ದೇಶದ ಆರ್ಥಿಕತೆಯನ್ನು ಬೆಳೆಸುವುದಕ್ಕೆ ಸರ್ಕಾರವೇ ಮುಂದಾಗಬೇಕು ಎಂದು ತಿಳಿಸಿತ್ತು. ಆ ಕಾಲದ ಬಹುತೇಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯವೂ ಅದೇ ಆಗಿತ್ತು. ಅದೇ ಬಹುತೇಕ ಸ್ವೀಕೃತ ಬೆಳವಣಿಗೆಯ ಮಾದರಿಯೂ ಆಗಿತ್ತು.
ಸ್ವಾವಲಂಬನೆಯ ಸಾಧನೆ ಭಾರತದ ಅಭಿವೃದ್ಧಿ ಮಾದರಿಯ ಗುರಿಯಾಗಿತ್ತು. ಸ್ವಾವಲಂಬನೆ ಅಂದರೆ ಶತಮಾನಗಟ್ಟಲೆ ವಸಾಹತುಶಾಹಿಯ ಶೋಷಣೆಗೆ ಒಳಗಾಗಿದ್ದ ದೇಶದ ನೈಸರ್ಗಿಕ ಸಂಪನ್ಮೂಲವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು; ಸರಕು ಹಾಗೂ ಸೇವೆಗಳ ಉತ್ಪಾದನೆಗೆ ಬೇಕಾದ ಯಂತ್ರ ಇತ್ಯಾದಿ ಬಂಡವಾಳ ಸರಕುಗಳನ್ನು ಇಲ್ಲೇ ತಯಾರಿಸುವುದು; ಜೊತೆಗೆ ಅವಶ್ಯಕ ವಸ್ತುಗಳನ್ನು ಇಲ್ಲೇ ಉತ್ಪಾದಿಸುವುದು. ಇದು ಸಾಧ್ಯವಾದರೆ ಸ್ವಾವಲಂಬನೆ ಸಾಧ್ಯವಾಗುತ್ತದೆ. ಆಗ ಜಾಗತಿಕ ಮಾರುಕಟ್ಟೆಯ ಅವಲಂಬನೆ ತಪ್ಪುತ್ತದೆ ಅನ್ನುವುದು ಅವರ ಯೋಚನೆಯಾಗಿತ್ತು. ಹಾಗಾಗಿ ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದಕ್ಕೆ ಆದ್ಯತೆ ನೀಡಲಾಯಿತು.
ಇವೆಲ್ಲಾ ತುರ್ತಾಗಿ ಆಗಬೇಕಾದ ವಿಷಯಗಳಾದ್ದರಿಂದ ಸಂವಿಧಾನ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ೧೯೫೦ರಲ್ಲಿ ಯೋಜನಾ ಆಯೋಗವನ್ನು ರಚಿಸಲಾಯಿತು. ಅದರಲ್ಲಿ ನುರಿತ ಅರ್ಥಶಾಸ್ತ್ರಜ್ಞರನ್ನು, ವಿವಿಧ ವಿಷಯಗಳ ತಜ್ಞರನ್ನು ಹಾಗೂ ನುರಿತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿತ್ತು. ಜಾಗತಿಕ ಬ್ಯಾಂಕಿನ ರೀತಿಯಲ್ಲಿ ಯುವ ವೃತ್ತಿಪರರನ್ನು ನೇಮಿಸಿಕೊಳ್ಳಲಾಗಿತ್ತು. ಪ್ರಧಾನಿ ನೆಹರು ಹಾಗೂ ಮಹಾಲನೋಬಿಸ್ ಇದಕ್ಕೆ ಪ್ರೇರಕ ಶಕ್ತಿಯಾಗಿದ್ದರು. ಮಹಾಲನೋಬಿಸ್ ಭಾರತ ಕಂಡ ಒಬ್ಬ ಒಳ್ಳೆಯ ಸಂಖ್ಯಾಶಾಸ್ತ್ರಜ್ಞ. ಜಗತ್ತು ಬೆರಗಿನಿಂದ ನೋಡುವಂತೆ ನಮ್ಮಲ್ಲಿ ಸಾಂಖ್ಯಿಕ ವ್ಯವಸ್ಥೆಯನ್ನು ರೂಪಿಸಿದವರು. ರಾಷ್ಟ್ರೀಯ ಮಾದರಿ ಸಮೀಕ್ಷೆ ಇತ್ಯಾದಿ ಬೃಹತ್ ಪ್ರಮಾಣದ ಸಮೀಕ್ಷೆಗಳನ್ನು ನಡೆಸಲಾಯಿತು. ಮಹಾಲನೋಬಿಸ್ ರಾಷ್ಟ್ರದ ಆರ್ಥಿಕತೆಯ ನಿರ್ವಹಣೆಯಲ್ಲಿ ಸಂಖ್ಯಾಶಾಸ್ತ್ರಕ್ಕೂ ಅರ್ಥಶಾಸ್ತ್ರದಷ್ಟೆ ಮಹತ್ವವನ್ನು ತಂದುಕೊಟ್ಟರು. ಜಗತ್ತಿನಲ್ಲಿ ದಾರಿದ್ರ್ಯ ರೇಖೆಯನ್ನು ರೂಪಿಸಿದ ಮೊದಲ ರಾಷ್ಟ್ರ ಭಾರತವಾಗಿತ್ತು. ಪಂಚವಾರ್ಷಿಕ ಯೋಜನೆಗಳು ಭಾರತದ ಮಿಶ್ರ ಆರ್ಥಿಕತೆಯ ಬೆಳವಣೆಗೆಯ ನೀಲಿ ನಕ್ಷೆಯಾಯಿತು. ಆಧುನಿಕತೆ ಹಾಗೂ ಕೈಗಾರಿಕೀಕರಣದ ಜೊತೆಗೆ ಸಾಕ್ಷರತೆ ಹಾಗೂ ಬಡತನ ನಿರ್ಮೂಲನ ಯೋಜನಾ ಆಯೋಗದ ಗುರಿಯಾಯಿತು.
ಹಲವರು ಗುರುತಿಸಿರುವಂತೆ ಯೋಜನಾ ಆಯೋಗಕ್ಕೆ ಹಲವು ಸಮಸ್ಯೆಗಳಿದ್ದವು. ಮೊದಲನೆಯದಾಗಿ ಭಾರತದ ಹೆಚ್ಚಿನ ಸಂಪನ್ಮೂಲಗಳು ಖಾಸಗಿಯವರ ಕೈಯಲ್ಲಿ ಅದರಲ್ಲೂ ದೊಡ್ಡ ಬಂಡವಾಳಿಗರು ಹಾಗೂ ಜಮೀನುದಾರರ ಕೈಯಲ್ಲಿತ್ತು. ಆಯೋಗವು ರೂಪಿಸಿದ ಯೋಜನೆಗಳನ್ನು ಖಾಸಗಿ ವಲಯದಲ್ಲಿ ಜಾರಿಗೆ ತರುವುದಕ್ಕೆ ಯಾವುದೇ ಪರಿಣಾಮಕಾರಿಯಾದ ವ್ಯವಸ್ಥೆಯೂ ಇರಲಿಲ್ಲ. ಖಾಸಗಿಯವರನ್ನೂ ರಾಷ್ಟ್ರೀಯ ಯೋಜನೆಗೆ ಪೂರಕವಾಗಿ ನಡೆದುಕೊಳ್ಳುವಂತೆ ಮಾಡುವುದಕ್ಕೆ ಪರವಾನಗಿ ಇತ್ಯಾದಿ ನೀತಿಗಳನ್ನು ಪ್ರಯತ್ನಿಸಲಾಯಿತು. ಆದರೆ ಇವು ಪರಿಣಾಮಕಾರಿಯಾಗಲಿಲ್ಲ. ಅದರಿಂದಾಗಿಯೇ ಅಮಿತ್ ಕುಮಾರ್ ಬಗ್ಚಿ ನಮ್ಮ ಯೋಜನೆಗಳನ್ನು ’ಭಾಗಶಃ ಯೋಜನೆ’ ಎಂದು ಕರೆದರು.
ಯೋಜನಾ ಆಯೋಗದ ಮತ್ತೊಂದು ನ್ಯೂನತೆ ಅಂದರೆ ಆಯೋಗದಲ್ಲಿ ರಾಜ್ಯಗಳ ಪ್ರತಿನಿಧಿಗಳು ಇರಲಿಲ್ಲ. ಅದರ ಒಟ್ಟಾರೆ ವಿನ್ಯಾಸ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಲಿಲ್ಲ. ಅದರರ್ಥ ರಾಜ್ಯಗಳೊಂದಿಗೆ ಚರ್ಚೆಯೇ ನಡೆಯುತ್ತಿರಲಿಲ್ಲ ಎಂದಲ್ಲ. ರಾಜ್ಯಗಳೊಂದಿಗೆ ಚರ್ಚಿಸುವುದಕ್ಕೆ ಎರಡು ವ್ಯವಸ್ಥೆಗಳಿದ್ದವು. ಒಂದು ರಾಷ್ಟ್ರೀಯ ಅಭಿವೃದ್ದಿ ಮಂಡಳಿ-ಎನ್ಡಿಸಿ. ಅದರಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಇರುತ್ತಿದ್ದರು. ಯೋಜನಾ ಆಯೋಗ ತಯಾರಿಸಿದ ಯೋಜನೆಗಳಿಗೆ ಅವರ ಸಮ್ಮತಿ ಬೇಕಿತ್ತು. ನಂತರ ಅವರು ಅದಕ್ಕೆ ಪೂರಕವಾಗಿ ತಮ್ಮ ರಾಜ್ಯಗಳ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಯೋಜನಾ ಮಂಡಳಿಯ ಮುಂದೆ ಮಂಡಿಸುತ್ತಿದ್ದರು.
ರಾಜ್ಯಗಳ ಪ್ರತಿನಿಧಿಗಳಿದ್ದ ಇನ್ನೊಂದು ಸಂಘಟನೆ ಅಂದರೆ ಅಂತರರಾಜ್ಯ ಮಂಡಳಿ. ಎನ್ಡಿಸಿಯಲ್ಲಿ ಆರ್ಥಿಕ ವಿಷಯಗಳು ಚರ್ಚೆಯಾಗುತ್ತಿದ್ದರೆ, ಅಂತರರಾಜ್ಯ ಮಂಡಳಿಯಲ್ಲಿ ರಾಜಕೀಯ ವಿಷಯಗಳ ಚರ್ಚೆ ನಡೆಯುತ್ತಿತ್ತು. ಈಗ ಎನ್ಡಿಸಿ ಇಲ್ಲ. ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿದೆ. ಅದರ ಅಧಿಕಾರ ವಿತ್ತ ಮಂತ್ರಾಲಯಕ್ಕೆ ವರ್ಗಾವಣೆಯಾಗಿದೆ. ಎನ್ಡಿಸಿ ಇದ್ದಾಗ ರಾಜ್ಯಗಳು ಒಟ್ಟಿಗೆ ಸೇರಿಕೊಳ್ಳುವುದಕ್ಕೆ ಒಂದು ಅವಕಾಶವಿತ್ತು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಒಟ್ಟಾಗಿ ಒತ್ತಡ ತರುವುದಕ್ಕೆ ಸಾಧ್ಯವಾಗುತ್ತಿತ್ತು. ನಿಜ, ಆಗಲೂ ರಾಜ್ಯಗಳ ಕಾಳಜಿಯನ್ನು ಕೇಂದ್ರ ನಿರ್ಲಕ್ಷಿಸಿದ್ದ ಉದಾಹರಣೆಗಳು ಇದ್ದರೂ ಬಹುತೇಕ ಸಂದರ್ಭದಲ್ಲಿ ರಾಜ್ಯಗಳ ಅಭಿಪ್ರಾಯವನ್ನು ಕೇಳಿಸಿಕೊಳ್ಳಬೇಕಿತ್ತು. ಈಗ ಇರುವ ಪ್ರಾಂತೀಯ ಮಂಡಳಿ ಕೇವಲ ಕೆಲವು ಅನುಕೂಲಗಳನ್ನು, ರಿಯಾಯಿತಿಗಳನ್ನು ಒದಗಿಸುವುದಕ್ಕೆ ಕೇಂದ್ರಕ್ಕೆ ಮನವಿಮಾಡಿಕೊಳ್ಳುವುದಕ್ಕೆ ಒಂದು ವೇದಿಕೆಯಾಗಿದೆ. ಅದು ಸರ್ಕಾರದ ನಿಲುವಿಗೆ ಸವಾಲಾಗುವ ಸಂಸ್ಥೆಯಲ್ಲ. ಯೋಜನಾ ಆಯೋಗ ಆ ಮಟ್ಟಿಗಾದರೂ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿತ್ತು. ಹಾಗಾಗಿ ಯಾರೂ ಅದನ್ನು ಸಂಪೂರ್ಣ ರದ್ದುಗೊಳಿಸೋಣ ಎಂದಿರಲಿಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಅದನ್ನು ಬದಲಿಸುವ ಸಲಹೆಯನ್ನು ಒಪ್ಪಿರಲಿಲ್ಲ.
ಕ್ರಮೇಣ ನಮ್ಮ ಆರ್ಥಿಕ ನೀತಿಯಲ್ಲಿ ಬದಲಾವಣೆಯಾಗತೊಡಗಿತು. ನಾವು ಮತ್ತೆ ವಿದೇಶಿ ಬಂಡವಾಳವನ್ನು, ತಂತ್ರಜ್ಞಾನವನ್ನು, ಸರಕುಗಳನ್ನು ಸ್ವಾಗತಿಸತೊಡಗಿದೆವು. ಉದಾರವಾದಿ ಆರ್ಥಿಕ ನೀತಿಯನ್ನು ಒಪ್ಪಿಕೊಳ್ಳತೊಡಗಿದೆವು. ಹೆಚ್ಚೆಚ್ಚು ಮಾರುಕಟ್ಟೆಯನ್ನು ನೆಚ್ಚಿಕೊಳ್ಳುತ್ತಾ, ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರವನ್ನು ಕಡಿಮೆ ಮಾಡುವ ಕಡೆಗೆ ಚಿಂತನೆ ಸಾಗತೊಡಗಿತು. ಅದರೊಟ್ಟಿಗೆ ಯೋಜನೆಯೂ ತನ್ನ ಮಹತ್ವವೂ ಕಳೆದುಕೊಳ್ಳುತ್ತಾ ಹೋಯಿತು. ಮನಮೋಹನ ಸಿಂಗ್ ಕಾಲದಲ್ಲೂ ಯೋಜನಾ ಆಯೋಗವನ್ನು ರದ್ದುಗೊಳಿಸುವ ಅಥವಾ ಬದಲಿಸುವ ಪ್ರಯತ್ನ ನಡೆಯಲಿಲ್ಲ. ಆದರೆ ದೇಶದ ಬಹುತೇಕ ಆರ್ಥಿಕ ಚಟುವಟಿಕೆಗಳನ್ನು ಉದಾರವಾದಿ ಆರ್ಥಿಕ ಚಿಂತನೆ ನಿರ್ಧರಿಸುತ್ತಿತ್ತು. ಸಾಮಾನ್ಯವಾಗಿ ಭಾವಿಸಿರುವಂತೆ ಸರ್ಕಾರ ಆರ್ಥಿಕತೆಯಲ್ಲಿ ಪಾಲ್ಗೊಳ್ಳಬಾರದು ಎಂದು ನವ ಉದಾರವಾದಿ ಆರ್ಥಿಕ ನೀತಿ ಹೇಳುವುದಿಲ್ಲ. ಬದಲಿಗೆ ಅದು ಸರ್ಕಾರದ ಸ್ವಭಾವದಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತದೆ. ಅದು ಸರ್ಕಾರಗಳು ಕಾರ್ಪೋರೇಟ್ ಹಣಕಾಸು ಬಂಡವಾಳಿಗರನ್ನು ಬೆಂಬಲಿಸಬೇಕು ಎಂದು ಬಯಸುತ್ತದೆ. ಸರ್ಕಾರ ಬ್ಯಾಂಕುಗಳನ್ನು ಖಾಸಗಿಕರಣಗೊಳಿಸುತ್ತದೆ ಅಂದರೆ ಸರ್ಕಾರ ಮಾರುಕಟ್ಟೆಯ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ ಅಂತ ಅಲ್ಲ. ಬದಲಿಗೆ ಬ್ಯಾಂಕುಗಳ ನಿಯಂತ್ರಣವನ್ನು ಕಾರ್ಪೋರೇಟ್ ಬಂಡವಾಳಿಗರಿಗೆ ಬಿಟ್ಟುಕೊಡುತ್ತಿದೆ ಅಂತಷ್ಟೆ ಅರ್ಥ.
ಯೋಜನಾ ಆಯೋಗವನ್ನು ರದ್ದುಗೊಳಿಸುವ ಮೂಲಕ ನರೇಂದ್ರ ಮೋದಿಯವರು ನವಉದಾರವಾದಿ ನೀತಿಗೆ ನಮ್ಮ ಆರ್ಥಿಕತೆಯನ್ನು ಸಂಪೂರ್ಣ ಒಪ್ಪಿಸಿದ್ದಾರೆ. ನೀತಿ ಆಯೋಗದ ವಿನ್ಯಾಸ ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ರಾಜ್ಯಗಳಿಗೆ ಒಟ್ಟಿಗೆ ಸೇರಲು, ತಮ್ಮ ಸಮಸ್ಯೆಗಳನ್ನು, ಅದಕ್ಕಾಗಿ ಒತ್ತಾಯಿಸಲು ಒಂದು ವೇದಿಕೆಯಾಗಿದ್ದ ಎನ್ಡಿಸಿಗೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆಯೂ ಈಗ ಇಲ್ಲ. ಅಂದರೆ ಒಕ್ಕೂಟ ಆರ್ಥಿಕತೆಯ ವ್ಯವಸ್ಥೆಯನ್ನು ನಾಶಮಾಡಲಾಗಿದೆ. ಇಡೀ ಆರ್ಥಿಕತೆಯನ್ನು ವಿತ್ತೀಯ ಮಂತ್ರಾಲಯ ನಿಯಂತ್ರಿಸುತ್ತಿದೆ. ಆರ್ಥಿಕತೆ ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳುತ್ತಿದೆ.
ರಾಜ್ಯಗಳಿಗೆ ಅನುದಾನವು ಹಣಕಾಸು ಆಯೋಗ, ಯೋಜನಾ ಆಯೋಗ, ಹಾಗೂ ವಿತ್ತೀಯ ಮಂತ್ರಾಲಯದ ಮೂಲಕ ಬರುತ್ತಿತ್ತು. ಈಗ ಯೋಜನಾ ಆಯೋಗ ಇಲ್ಲ. ಇನ್ನೂ ಹಣಕಾಸು ಆಯೋಗವೂ ಒಂದು ಸಂವಿಧಾನಾತ್ಮಕ ಸಂಸ್ಥೆ. ಅದು ಬಹುತೇಕ ಒಂದು ಸ್ವಾಯತ್ತ ಸಂಸ್ಥೆಯಾಗಿತ್ತು. ಉಳಿದೆಲ್ಲಾ ಸ್ವಾಯತ್ತ ಸಂಸ್ಥೆಗಳಂತೆ ಸರ್ಕಾರ ಈಗ ಅದನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ತನಗೆ ಬೇಕಾದವರನ್ನು ನೇಮಿಸುವ ಮೂಲಕ ನಿಯಂತ್ರಣವನ್ನು ಸಾಧಿಸುವ ಪ್ರಯತ್ನ ನಡೆದಿದೆ. ಅಂದರೆ ರಾಜ್ಯಗಳು ಈಗ ಎಲ್ಲಕ್ಕೂ ವಿತ್ತೀಯ ಮಂತ್ರಾಲಯವನ್ನು ಆಶ್ರಯಿಸಬೇಕಾಗಿದೆ.
ಕೇಂದ್ರ ಆಯೋಜಿತ ಯೋಜನೆಗಳು ಆರ್ಥಿಕತೆಯನ್ನು ಕೇಂದ್ರೀಕೃತಗೊಳಿಸಲು ಸರ್ಕಾರ ಹಿಡಿದಿರುವ ಇನ್ನೊಂದು ಮಾರ್ಗ. ಕೇಂದ್ರ ತನಗೆ ಬೇಕಾದ ಯೋಜನೆಗಳನ್ನು ರಾಜ್ಯಗಳ ಮೇಲೆ ಹೇರುವ ಮೂಲಕ ರಾಜ್ಯಗಳಿಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸುವ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ. ಇವುಗಳನ್ನು ರೂಪಿಸುವಾಗ ರಾಜ್ಯಗಳೊಂದಿಗೆ ಚರ್ಚಿಸುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಅವುಗಳು ರಾಜ್ಯಗಳಿಗೆ ಬೇಕೂ ಆಗಿರುವುದಿಲ್ಲ. ಅಷ್ಟೇ ಅಲ್ಲ ಇವುಗಳು ಬಹುತೇಕ ರಾಜ್ಯಗಳ ವ್ಯಾಪ್ತಿಗೆ ಬರುವ ಕ್ಷೇತ್ರಗಳಾಗಿರುತ್ತವೆ. ಆದರೂ ಇವನ್ನು ರಾಜ್ಯಗಳ ಮೇಲೆ ಹೇರಲಾಗುತ್ತಿದೆ. ಇದರಿಂದ ರಾಜ್ಯಗಳಿಗೆ ಬರುವ ನಿಧಿಯ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಒಂದು ಸಮಸ್ಯೆ. ಇನ್ನೊಂದು ಸಮಸ್ಯೆ ಅಂದರೆ ಈ ಮೂಲಕ ರಾಜ್ಯಗಳ ಯೋಜನೆಗಳನ್ನೂ ಕೇಂದ್ರ ನಿಯಂತ್ರಿಸುವಂತಾಗಿದೆ. ಕೇಂದ್ರದಿಂದ ಬೇಕಾದ ಅನುದಾನ ಬಾರದೇ ಇರುವುದರಿಂದ ರಾಜ್ಯಗಳು ಖಾಸಗಿ ಬಂಡವಾಳವನ್ನು ಆಕರ್ಷಿಸುವುದಕ್ಕೆ ಪರಸ್ಪರ ಸ್ಪರ್ಧೆಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಕೇಂದ್ರದ ಉದಾರವಾದಿ ನೀತಿಯನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಪರಸ್ಪರ ಸ್ಪರ್ಧಿಸಬೇಕಾಗಿದೆ.
ವಿದೇಶಿ ಬಂಡವಾಳ, ಕಾರ್ಪೋರೇಟ್ ಜಗತ್ತು ಬಯಸುವುದು ಇದನ್ನೇ. ಅದಕ್ಕೆ ಹೆಚ್ಚು ಕೇಂದ್ರೀಕೃತವಾದ, ಪ್ರಬಲ ಸರ್ಕಾರ ಬೇಕು. ಆಗ ಉದಾರವಾದಿ ಆರ್ಥಿಕ ನೀತಿಯನ್ನು ಜಾರಿಗೆ ತರುವುದು ಹೆಚ್ಚು ಸುಲಭ. ರಾಜ್ಯಗಳಿಗೆ ಸ್ವಾಯತ್ತತೆ ಕಡಿಮೆಯಾದಷ್ಟು, ಒಕ್ಕೂಟ ವ್ಯವಸ್ಥೆ ದುರ್ಬಲವಾದಷ್ಟೂ ಇದಕ್ಕೆ ಒಳ್ಳೆಯದು. ಮೊದಲು ಯೋಜನಾ ಆಯೋಗ ದೀರ್ಘಕಾಲೀನ ಯೋಜನೆಯನ್ನು ರೂಪಿಸುತ್ತಿತ್ತು. ವಿತ್ತ ಮಂತ್ರಾಲಯ ಹಣಕಾಸಿನ ವಿಷಯವನ್ನು ನೋಡಿಕೊಳ್ಳುತ್ತಿತ್ತು. ಎರಡರ ನಡುವ ಚರ್ಚೆ ನಡೆಯುತ್ತಿತ್ತು. ಈಗ ಯೋಜನೆ ಅನ್ನುವುದೇ ಇಲ್ಲ. ಪ್ರಧಾನ ಮಂತ್ರಿಗಳಿಗೆ ಯಾವುದಾದರೂ ಕಾರ್ಯಕ್ರಮ ಮುಖ್ಯವಾಗಿ ತೋರಿದರೆ ಅದಕ್ಕೆ ಅನುದಾನ ನೀಡಲಾಗುತ್ತದೆ. ನೀತಿ ಆಯೋಗಕ್ಕೆ ಹಣವನ್ನು ವಿತರಿಸುವ ಅಥವಾ ಯಾವುದೇ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲ. ಹಾಗಾಗಿಯೇ ಹಲವರು ಇದರಲ್ಲಿ ಭಾಗವಹಿಸುವ ಆಸಕ್ತಿ ತೋರುತ್ತಿಲ್ಲ. ನೀತಿ ಆಯೋಗಕ್ಕೆ ಹಣಕಾಸಿನ ಅಧಿಕಾರವಾಗಲಿ ಅಥವಾ ರಾಜ್ಯಗಳ ಯೋಜನೆಗಳನ್ನು ಬೆಂಬಲಿಸುವ ಅಧಿಕಾರವಾಗಲಿ ಇಲ್ಲದಿರುವುದರಿಂದ ಇಂತಹ ಸಭೆಗಳಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಮಮತಾ ಬ್ಯಾನರ್ಜಿಯವರು ಮೋದಿಯವರಿಗೆ ಪತ್ರ ಬರೆದಿದ್ದರು. ೨೦೨೪ರಲ್ಲಿ ಹತ್ತು ರಾಜ್ಯದ ಮುಖ್ಯ ಮಂತ್ರಿಗಳು ಬಹಿಷ್ಕರಿಸಿದ್ದರು.
ಯೋಜನಾ ಆಯೋಗದಲ್ಲಿ ಇದ್ದವರೆಲ್ಲಾ ಅರ್ಥಶಾಸ್ತ್ರಜ್ಞರು, ಪರಿಣತರು ಹಾಗೂ ಅಧಿಕಾರಿಗಳು. ಯಾರೂ ಚುನಾಯಿತ ಪ್ರತಿನಿಧಿಗಳಲ್ಲ. ಅವರು ಮುಖ್ಯ ಮಂತ್ರಿಗಳಿಗೆ ಆರ್ಥಿಕ ವಿಷಯಗಳಲ್ಲಿ ಸಲಹೆ ನೀಡುತ್ತಿದ್ದರು. ಅದು ಸಮಸ್ಯೆಯಾಗತೊಡಗಿತು. ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗ ಇದು ಕಿರಿಕಿರಿಯ ವಿಷಯವಾಗಿರಲಿಲ್ಲ. ಆದರೆ ಕ್ರಮೇಣ ಬೇರೆ ಬೇರೆ ಪಕ್ಷಗಳು ಆಡಳಿತಕ್ಕೆ ಬರತೊಡಗಿದಾಗ ಪರಿಸ್ಥಿತಿ ಬದಲಾಗತೊಡಗಿತು. ಯೋಜನಾ ಆಯೋಗದಿಂದ ತಮ್ಮ ವಾರ್ಷಿಕ ಯೋಜನೆಗಳಿಗೆ ಸಮ್ಮತಿ ಪಡೆಯಲು ಮುಖ್ಯಮಂತ್ರಿಗಳು ವರ್ಷಕ್ಕೊಮ್ಮೆ ಬರಬೇಕಾಗುತ್ತಿತ್ತು. ಇದೊಂದು ಬೇಡದ ರಿಚುವಲ್ ಎಂದು ಹಲವರಿಗೆ ತೋರಿತು. ಆಯೋಗದ ಮುಂದೆ ತಮ್ಮ ಯೋಜನೆಗಳನ್ನು ಸಮರ್ಥಿಸಿಕೊಳ್ಳುವುದು ಅವರ ಅಹಂಕಾರವನ್ನು ಚುಚ್ಚುತ್ತಿತ್ತು. ತಮಿಳು ನಾಡು ಮುಖ್ಯಮಂತ್ರಿ ಜಯಲಲಿತ ಇಂತಹ ಸಭೆಗಳು ತನಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಮೋದಿ ಗುಜರಾತಿನ ಮುಖ್ಯ ಮಂತ್ರಿಯಿದ್ದಾಗ ಅವರಿಗೂ ಈ ಬಗ್ಗೆ ಅಸಹನೆ ಇತ್ತು. ಅವರು ತಮ್ಮ ಯೋಜನೆಗಳನ್ನು ಮಂಡಿಸುವಾಗ ನೆಹರೂ ಕಾಲದಿಂದ ಇಂದಿನವರೆಗೆ ಕೇಂದ್ರದ ಎಲ್ಲ ಯೋಜನೆಗಳನ್ನು ಟೀಕಿಸುತ್ತಿದ್ದರು. ತಮ್ಮ ಸಾಧನೆಗಳನ್ನು ಕುರಿತಂತೆ ವಿಡಿಯೋ ಪ್ರದರ್ಶಿಸುತ್ತಿದ್ದರು. ಕೇಂದ್ರದ ಯೋಜನೆಗಳ ಬಗ್ಗೆ ಧಾರಾಳವಾಗಿ ವ್ಯಂಗ್ಯ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಪ್ರಾಜೆಕ್ಟ್ ಟೈಗರ್ ಅನ್ನು ಉಲ್ಲೇಖಿಸುತ್ತಾ ’ನೀವು ಸಿಂಹಗಳಿಗೆ ಯೋಜನೆಯನ್ನು ರೂಪಿಸುವುದಿಲ್ಲ’ ಎಂದು ಅಕ್ಷೇಪಿಸುತ್ತಾ ’ನೀವೆಲ್ಲಾ ಹುಲಿ ಸೆಕ್ಯುಲಾರ್ ಪ್ರಾಣಿ ಮತ್ತು ಸಿಂಹ ಕಮ್ಯೂನಲ್ ಅಂತ ಭಾವಿಸಿದಂತಿದೆ’ ಎಂದು ತಮಾಷೆ ಮಾಡಿದ್ದರಂತೆ. ಅಲ್ಲಿಂದಲೇ ಬಹುಶಃ ಯೋಜನಾ ಆಯೋಗದ ರದ್ದತಿಯ ಚಿಂತನೆ ಅವರಿಗೆ ಪ್ರಾರಂಭವಾಗಿರಬಹುದು. ಹೊಸ ಸಂಸ್ಥೆ ಯೋಜನಾ ಆಯೋಗದ ರೀತಿಯಲ್ಲಿ ಕಾಣಬಾರದು, ಆ ರೀತಿಯಲ್ಲಿ ನಡೆದು ಕೊಳ್ಳಬಾರದು, ಯೋಜನಾ ಆಯೋಗದ ರೀತಿಯಲ್ಲಿ ಮಾತನಾಡಬಾರದು ಎಂದು ತಿಳಿಸಿದ್ದರು.
ಯೋಜನಾ ಆಯೋಗದಲ್ಲಿ ಅರ್ಥಶಾಸ್ತ್ರಜ್ಞರು, ವಿವಿಧ ಕ್ಷೇತ್ರದ ತಜ್ಞರು, ಐಎಎಸ್ ಅಧಿಕಾರಿಗಳು ಇರುತ್ತಿದ್ದರು. ನೀತಿ ಆಯೋಗದಲ್ಲಿ ಬಹುತೇಕರು ಬ್ಯೂರೋಕ್ರೆಟುಗಳಾಗಿದ್ದಾರೆ. ಇಲ್ಲಿ ಖಾಸಗಿ ಸಲಹೆಗಾರರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಅವರಿಗೆ ಯಾವುದೇ ಉತ್ತರದಾಯಿತ್ವವೂ ಇರುವುದಿಲ್ಲ. ಅವರೆಲ್ಲಾ ಅಂಬಾನಿಯಂತಹ ಯಾವುದೋ ಕಾರ್ಪೋರೆಟುಗಳಿಗೆ ನಿಕಟವರ್ತಿಗಳಾಗಿರುತ್ತಾರೆ. ನೀತಿ ಆಯೋಗದ ಬಜೆಟ್ನಲ್ಲಿ ಇಂತಹ ವೃತ್ತಿಪರ ಸೇವೆಗೆ ನೀಡುತ್ತಿರುವ ಹಣ ವಿಪರೀತ ಏರುತ್ತಿದೆ. ಉದಾಹರಣೆಗೆ ೨೦೧೬ರಲ್ಲಿ ೩೮.೬ ಲಕ್ಷ ಇದ್ದುದು ೨೦೧೯ರಲ್ಲಿ ೧.೮ ಕೋಟಿಯಷ್ಟಾಗಿದೆ. ಮೊದಲು ಲೈಸೆನ್ಸ್ ರಾಜ್ ಆಗಿತ್ತು. ಈಗ ಇದು ಕನ್ಸಲ್ಟೆನ್ಸಿ ರಾಜ್ ಆಗಿದೆ. ಸಾರ್ವಜನಿಕ ಸೇವೆಯನ್ನೂ ಖಾಸಗಿ ಕ್ಷೇತ್ರದ ಮಾದರಿಯಲ್ಲಿ ನಡೆಸಬೇಕು ಅನ್ನುವುದರಲ್ಲಿ ನಿಜವಾಗಿ ಸಮಸ್ಯೆ ಇದೆ. ಖಾಸಗಿ ಕ್ಷೇತ್ರ ಲಾಭವನ್ನು ಗುರಿಯಾಗಿಸಿಕೊಂಡಿರುತ್ತದೆ.
ನೀತಿ ಆಯೋಗವನ್ನು ಒಂದು ಚಿಂತನಾ ತಂಡವನ್ನಾಗಿ, ಸಲಹಾ ಸಂಸ್ಥೆಯಾಗಿ ನೋಡಲಾಗುತ್ತಿದೆ. ಅದಕ್ಕೆ ಯೋಜನಾ ಆಯೋಗಕ್ಕಿದ್ದ ಯಾವ ಅಧಿಕಾರವೂ ಇಲ್ಲ. ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಅದಕ್ಕೊಂದು ನಿರ್ದಿಷ್ಟ ಪಾತ್ರವಿದ್ದಂತಿಲ್ಲ. ಅದು ಪ್ರಾರಂಭದಲ್ಲಿ ಕೆಲವು ಅಧ್ಯಯನಗಳನ್ನು ಪ್ರಕಟಿಸುವುದಕ್ಕೆ ಸೀಮಿತವಾಗಿತ್ತು. ಸರ್ಕಾರದ ಬಗ್ಗೆ ಟೀಕೆ ಬಂದಾಗ ಸರ್ಕಾರವನ್ನು ಸಮರ್ಥಿಸಿಕೊಂಡು ವಿವರಣೆ ನೀಡುತ್ತಿತ್ತು. ಆಗೀಗ ಕೆಲವು ಯೋಜನೆಗಳನ್ನು ರೂಪಿಸುತ್ತಿದೆ. ಪ್ರಣಬ್ ಸೇನ್ ಹೇಳುವಂತೆ ಸರ್ಕಾರ ಕೇಳಿದಾಗ ಹೇಳಿದ ಕೆಲಸ ಮಾಡುವ ಸಂಸ್ಥೆಯಾಗಿದೆ. ಸರ್ಕಾರ ಏನನ್ನಾದರೂ ಪರಿಶೀಲಿಸು ಎಂದರೆ ಅದನ್ನು ಪರಿಶೀಲಿಸುತ್ತದೆ. ಅದೊಂದು ಸರ್ಕಾರದ ಆಂತರಿಕ ಸಲಹಾ ಸಂಸ್ಥೆಯಾಗಿದೆ. ಮೋದಿಯವರು ರೈತರ ವರಮಾನವನ್ನು ದುಪ್ಪಟ್ಟು ಮಾಡಲಾಗುವುದು ಎಂದು ಘೋಷಿಸಿದಾಗ ಅದರ ಪರವಾಗಿ ನೀತಿ ಆಯೋಗದ ರಮೇಶ್ ಚಾಂದ್ ಲೇಖನ ಬರೆದರು. ಕೃಷಿ ಮಸೂದೆಗಳು ರೂಪುಗೊಂಡಿದ್ದರೂ ಇವರ ಕಛೇರಿಯಲ್ಲಿಯಂತೆ. ಸಮಸ್ಯೆ ಅಂದರೆ ಕೃಷಿ ರಾಜ್ಯಗಳ ವ್ಯಾಪ್ತಿಗೆ ಬರುವ ಕ್ಷೇತ್ರ. ಆ ಬಗ್ಗೆ ಯೋಜನೆಗಳನ್ನು ಜಾರಿಗೆ ತರಬೇಕಾದದ್ದು ರಾಜ್ಯಗಳು. ಕೇಂದ್ರ ಹೇಗೆ ಅದರಲ್ಲಿ ಮಧ್ಯಪ್ರವೇಶ ಮಾಡಬಹುದು ಎಂದು ಇವರೆಲ್ಲಾ ತಲೆಕೆಡಿಸಿಕೊಂಡಿದ್ದರು. ಕೊನೆಗೆ ರೈತರ ತೀವ್ರ ವಿರೋಧದಿಂದ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕಾಯಿತು. ಆಗ ರೈತರು ಬುದ್ಧಿಜೀವಿಗಳ ಅಪ್ರಾಮಾಣಿಕತೆಯಿಂದ ಮೋಸ ಹೋಗಿದ್ದಾರೆ. ಎಲ್ಲಾ ರಾಜ್ಯಗಳಿಗೆ ಅದನ್ನು ಜಾರಿಗೊಳಿಸುವ ಇಚ್ಛೆ ಇತ್ತು ಎಂದು ಹೇಳಿದ್ದರು. ನೀತಿ ಆಯೋಗದಲ್ಲಿ ಕೆಲಸಮಾಡುತ್ತಿರುವ ಹೆಚ್ಚಿನವರಿಗೆ ಮೂಲಭೂತವಾಗಿ ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲ. ನೀತಿ ಆಯೋಗದ ಸಿಇಒ ಆಗಿದ್ದ ಅಮಿತಾಬ್ ಕಾಂತ್ ಭಾರತದಲ್ಲಿ ಪ್ರಜಾಸತ್ತೆ ಹೆಚ್ಚಾಯಿತು. ಅದರಿಂದಾಗಿ ಇಲ್ಲಿ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂದಿದ್ದರು.
ನೀತಿ ಆಯೋಗ ಒಂದು ಸಾರ್ವಜನಿಕ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಉದ್ದಿಮೆಗಳಲ್ಲಿ ಬಳಸುವ ನಿರ್ವಹಣೆಯ ಕ್ರಮವನ್ನು ಸಾರ್ವಜನಿಕ ಸಂಸ್ಥೆಗಳಲ್ಲಿ ಅಳವಡಿಸುವ ಕ್ರಮ ಪಾಶ್ಚಾತ್ಯರಲ್ಲಿ ೧೯೮೦ರಲ್ಲಿ ಪ್ರಾರಂಭವಾಯಿತು. ಸಾರ್ವಜನಿಕ ಸೇವಾ ಸಂಸ್ಥೆಗಳನ್ನು, ಖಾಸಗಿ ಕ್ಷೇತ್ರದ ಸಂಸ್ಥೆಗಳೊಂದಿಗೆ ಹೋಲಿಸಿ ಅವುಗಳೊಂದಿಗೆ ಸ್ಪರ್ಧಿಸುವಂತೆ ಮಾಡಲಾಯಿತು. ಇಂತಹ ವ್ಯವಸ್ಥೆಯಲ್ಲಿ ಮಾರುಕಟ್ಟೆ ಕೇಂದ್ರವಾಗುತ್ತದೆ. ಸಾರ್ವಜನಿಕರು ಬಳಕೆದಾರರಾಗಿಬಿಡುತ್ತಾರೆ. ಸಾರ್ವಜನಿಕ ಅಧಿಕಾರಿಗಳನ್ನು ಮ್ಯಾನೇಜರುಗಳಂತೆ ನೋಡಲಾಗುತ್ತದೆ. ಸಾರ್ವಜನಿಕ ಸೇವೆಯನ್ನು ಒದಗಿಸುವುದಕ್ಕೆ ಖಾಸಗಿ ಕಂಪೆನಿಗಳನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟಾರೆ ಸರ್ಕಾರವನ್ನು ಒಂದು ಉದ್ದಿಮೆಯಾಗಿ ನೋಡಲಾಗುತ್ತೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಸರ್ಕಾರದ ಸಾಮಾಜಿಕ ಜವಾಬ್ದಾರಿ ಹಿನ್ನೆಲೆಗೆ ಸರಿಯುತ್ತದೆ. ಹೀಗೆ ಆಧುನಿಕ ಉದ್ದಿಮೆಯ ಮಾದರಿಯಲ್ಲಿ ಆಡಳಿತವನ್ನು ನಡೆಸುವುದರಿಂದ ಏನನ್ನು ಸಾಧಿಸಲಾಗಿದೆ ಅನ್ನುವುದು ತಿಳಿಯುವುದಿಲ್ಲ.
ಯೋಜನಾ ಆಯೋಗಕ್ಕೆ ಹಲವಾರು ಮಿತಿಗಳಿದ್ದವು. ಆದರೂ ಆಗ ಕನಿಷ್ಠ ಮುಂದಿನ ಐದು ವರ್ಷಗಳಲ್ಲಿ ಆರ್ಥಿಕತೆಯ ಸ್ವರೂಪದ ಬಗ್ಗೆ ಸರ್ಕಾರದ ನಿರೀಕ್ಷೆ ಏನು ಅನ್ನುವುದಾದರೂ ತಿಳಿಯುತ್ತಿತ್ತು. ಪಾವತಿ ಶಿಲ್ಕಿನ ಸ್ಥಿತಿ ಹೇಗಿರುತ್ತದೆ? ಹಣದುಬ್ಬರ ಏನಾಗಬಹುದು? ಬೆಳವಣಿಗೆಯ ಸ್ಥಿತಿ ಏನಾಗಬಹುದು? ಇಂತಹ ಎಲ್ಲಾ ಪ್ರಶ್ನೆಗಳಿಗೂ ಯೋಜನಾ ಆಯೋಗವು ಉತ್ತರ ಕೊಡಬೇಕಿತ್ತು. ಮೋದಿ ಸರ್ಕಾರದ ಆರ್ಥಿಕ ಸಹಾ ಸಮಿತಿಯ ಸದಸ್ಯರಾದ ರತಿನ್ ರಾಯ್ ಗಮನಿಸುವಂತೆ ಈಗ ನೀತಿ ಆಯೋಗದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳಬಲ್ಲ ಪರಿಣತರೆ ಇಲ್ಲ. ನಿರ್ದಿಷ್ಟ ಯೋಜನೆಯ ಬದಲು ಮೋದಿಯವರು ವಿಕ್ಸಿತ್ ಭಾರತದ ನೋಟವನ್ನು ಪ್ರಕಟಿಸಿದ್ದಾರೆ. ಆದರೆ ಕೇವಲ ಕನಸು ಕಂಡರೆ ಸಾಲದು, ಅದನ್ನು ಸಾಧಿಸುವುದಕ್ಕೆ ಯೋಜನೆಗಳು ಬೇಕು. ಆದರೆ ನೀತಿ ಆಯೋಗ ಅಂತಹ ಸಂಸ್ಥೆಯಲ್ಲ. ಯೋಜನೆಗಳನ್ನು ರೂಪಿಸುವುದಕ್ಕೆ ಬೇಕಾದ ಪರಿಣತರಾಗಲಿ, ವ್ಯವಸ್ಥೆಯಾಗಲಿ ಅಲ್ಲಿಲ್ಲ.
ಸಹಜವಾಗಿಯೇ ನೀತಿ ಆಯೋಗವನ್ನು ಕುರಿತಂತೆ ಹೆಚ್ಚಿನ ವಿರೋಧಗಳು ಕಾಣಿಸಿಕೊಳ್ಳುತ್ತಿದೆ. ಕೇಂದ್ರ ಆಯೋಜಿತ ಯೋಜನೆಗಳ ಬಗ್ಗೆ ಹಲವು ರಾಜ್ಯ ಸರ್ಕಾರಗಳು ಅಸಮ್ಮತಿಯನ್ನು ತೋರುತ್ತಿವೆ. ವಿರೋಧ ವ್ಯಕ್ತಪಡಿಸಿದ ರಾಜ್ಯ ಸರ್ಕಾರಗಳ ಜೊತೆ ಚರ್ಚಿಸುವ ಬದಲು ಕೇಂದ್ರ ಅವುಗಳ ವಿರುದ್ಧ ಕ್ರಮತೆಗೆದುಕೊಳ್ಳಲಾಗುತ್ತಿದೆ. ಉದಾಹರಣೆಗೆ ತಮಿಳುನಾಡು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ತಿರಸ್ಕರಿಸಿತು. ತಮ್ಮ ರಾಜ್ಯದ ಶಿಕ್ಷಣ ನೀತಿ ಕೇಂದ್ರದ ನೀತಿಗಿಂತ ಹೆಚ್ಚು ಒಳಗೊಳ್ಳುವ ನೀತಿಯಾಗಿದೆ. ಕೇಂದ್ರ ಸೂಚಿಸುವ ಎಷ್ಟೋ ಗುರಿಗಳನ್ನು ತಮ್ಮ ರಾಜ್ಯದಲ್ಲಿ ಈಗಾಗಲೇ ಸಾಧಿಸಿಯಾಗಿದೆ. ತ್ರ್ರಿಭಾಷಾ ಸೂತ್ರ ಹಿಂದಿಯನ್ನು ತಮ್ಮ ಮೇಲೆ ಬಲವಂತವಾಗಿ ಹೇರುವ ಸೂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯ ಕೇಂದ್ರದ ನಡುವಿನ ಸಂಘರ್ಷ ೨೦೨೪ರಲ್ಲಿ ತಾರಕಕ್ಕೆ ಹೋಯಿತು. ಕೇಂದ್ರ ಸಮಗ್ರ ಶಿಕ್ಷಣ ಆಭಿಯಾನ ಯೋಜನೆಗೆ ೨೧೫೨ ಕೋಟಿ ಅನುಧಾನವನ್ನು ನಿಲ್ಲಿಸಿತು. ತಮಿಳುನಾಡು ಎನ್ಇಪಿಯನ್ನು ಪೂರ್ಣವಾಗಿ ಒಪ್ಪಿಕೊಳ್ಳಬೇಕೆಂದು ಕೇಂದ್ರವೂ ಷರತ್ತು ಹಾಕಿತು. ಎಂಕೆ ಸ್ಟಾಲಿನ್ ಅದನ್ನು ಹಿಂದುತ್ವವಾದಿ ನೀತಿಯೆಂದು ಜರಿದಿದ್ದಾರೆ. ಮತ್ತು ಅದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾದದ್ದು ಎಂದು ಟೀಕಿಸಿದ್ದಾರೆ.
ಯೋಜನಾ ಆಯೋಗ ಇದ್ದಿದ್ದರೆ ಈ ರೀತಿಯಲ್ಲಿ ಅನುದಾನವನ್ನು ತಡೆಯುವುದಕ್ಕೆ ಕಷ್ಟವಾಗುತ್ತಿತ್ತು. ಇದು ’ಸ್ಪರ್ಧಾತ್ಮಕ ಒಕ್ಕೂಟ’ ವ್ಯವಸ್ಥೆಯಲ್ಲ. ’ಸ್ಪರ್ಧಾತ್ಮಕ ಕೇಂದ್ರೀಕರಣ’ ವ್ಯವಸ್ಥೆ ಎಂದು ಕೆಲವರು ಇದನ್ನು ಬಣ್ಣಿಸಿದ್ದಾರೆ. ಕೇಂದ್ರ ಹಣ ಕೊಡುತ್ತಿರುವುದು ಕಡಿಮೆ. ಆದರೆ ಎಲ್ಲವೂ ತನ್ನ ನಿಯಂತ್ರಣದಲ್ಲಿರಬೇಕು ಎಂದು ಕೇಂದ್ರ ಬಯಸುತ್ತಿದೆ. ಕೇರಳಕ್ಕೆ ಶಿಕ್ಷಣಕ್ಕೆ ಅಂತ ಕೇಂದ್ರ ಕೊಟ್ಟಿದ್ದು ೩೦೦೦ ಕೋಟಿ. ಆದರೆ ರಾಜ್ಯ ಸರ್ಕಾರ ೪೭,೦೦೦ ಕೋಟಿ ಖರ್ಚು ಮಾಡಿದೆ. ಆದರೆ ರಾಜ್ಯಗಳು ಹಣ ಹೇಗೆ ಖರ್ಚು ಮಾಡಬೇಕು ಅನ್ನುವುದನ್ನು ಕೇಂದ್ರ ನಿರ್ದೇಶಿಸುತ್ತಿದೆ. ಒಟ್ಟಿನಲ್ಲಿ ಎಲ್ಲಾ ಅಧಿಕಾರವು ಕೇಂದ್ರದಲ್ಲಿರಬೇಕು. ಅದಕ್ಕೆ ಎಲ್ಲಾ ಮಾರ್ಗಗಳನ್ನು ಲಜ್ಜೆಯಿಲ್ಲದೆ ಬಳಸಿಕೊಳ್ಳುತ್ತಿದೆ. ಅನುದಾನವೂ ಅಂತಹ ಒಂದು ಸಾಧನವಾಗಿದೆ. ರಾಜ್ಯಗಳ ಮೇಲೆ ಒತ್ತಡ ಹೇರುವುದಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಆ ಮೂಲಕ ರಾಜ್ಯ ಸರ್ಕಾರದ ಯೋಜನೆಗಳಿಗೆ ತಡೆಯೊಡ್ಡುತ್ತಲೇ ಇದೆ. ನೀತಿ ಆಯೋಗವನ್ನು ಬಳಸಿಕೊಳ್ಳುತ್ತಿದೆ. ಜಿಲ್ಲೆಗಳ ಮಟ್ಟದಲ್ಲೂ ನಿಯಂತ್ರಣದ ಪ್ರಯತ್ನ ನಡೆದಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಕೂಡ ರಾಜ್ಯಗಳನ್ನು ಕೇಳಿ ರೂಪಿಸುತ್ತಿಲ್ಲ. ಅವುಗಳಲ್ಲಿ ಹಲವು ರಾಜ್ಯಗಳಿಗೇ ಮೀಸಲಾದ ಕ್ಷೇತ್ರಗಳು. ಆದರೂ ರಾಜ್ಯಗಳ ಅಭಿಪ್ರಾಯ ಕೇಳುತ್ತಿಲ್ಲ. ಆಯುಷ್ಮಾನ್ ಭಾರತ್ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆ. ಅದು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಹಾಗೆಯೇ ಪಿಎಂ ಕಿಸಾನ್ ಯೋಜನೆಯೂ ರಾಜ್ಯದ ವ್ಯಾಪ್ತಿಗೆ ಬರುವ ವಿಷಯ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ರಾಜ್ಯಗಳ ವ್ಯಾಪ್ತಿಯ ಕ್ಷೇತ್ರವನ್ನು ಕಬಳಿಸಿಕೊಳ್ಳುತ್ತಿದೆ.
ಇಂಡಿಯಾ ಇಂದಿಗೂ ರಾಜಕೀಯವಾಗಿ, ಆರ್ಥಿಕವಾಗಿ ಒಕ್ಕೂಟವೆ. ದೇಶದ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಯನ್ನು ನೀಡುವಲ್ಲಿ ರಾಜ್ಯಗಳ ಪಾತ್ರ ವಿಪರೀತವಿದೆ. ಆದರೆ ಹೆಚ್ಚಿನ ಅಧಿಕಾರ ಹಾಗೂ ಹಣ ಕೇಂದ್ರ ಸರ್ಕಾರದ ಬಳಿ ಇದೆ. ವಿತರಣೆಯ ಅಧಿಕಾರ ಬಹುತೇಕ ಕೇಂದ್ರ ಸರ್ಕಾರದ ಕೈಯಲ್ಲಿ ಇರುವುದರಿಂದ ಅದಕ್ಕೆ ರಾಜಕೀಯವಾಗಿ ಹೆಚ್ಚು ಅಧಿಕಾರವಿದೆ. ಕೇಂದ್ರ ಆಯೋಜಿತ ಯೋಜನೆಗಳು ಯಾವಾಗಲೂ ರಾಜಕೀಯದ ತಾಣಗಳಾಗಿವೆ. ಇವೆಲ್ಲಾ ೨೦೦೦ರ ತನಕ ಈ ಯೋಜನೆಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತಿತ್ತು. ಕೇಂದ್ರ ಭಾಗಷಃ ಹಣಕಾಸಿನ ನೆರವು ನೀಡುತ್ತಿತ್ತು. ಯೋಜನಾ ಆಯೋಗವೂ ರಾಜಕೀಯ ಬೆರಸದೆ ಸಂಪನ್ಮೂಲವನ್ನು ಹಂಚುವುದಕ್ಕೆ ಕ್ರಮಗಳನ್ನು ಚಿಂತಿಸುತ್ತಿತ್ತು. ಗಾಡ್ಗಿಲ್-ಮುಖರ್ಜಿ ಸೂತ್ರವೂ ಅಂತಹ ಒಂದು ಯೋಜನೆಯಾಗಿತ್ತು. ಯೋಜನಾ ಆಯೋಗದ ಸ್ಥಾನದಲ್ಲಿ ಬಂದಿರುವ ನೀತಿ ಆಯೋಗ ಯಾವುದೇ ದೃಷ್ಟಿಯಿಂದಲೂ ಆರ್ಥಿಕ ಬೆಳವಣಿಗೆಗೆ ಸೂಕ್ತ ಸಂಘಟನೆಯಲ್ಲ. ರಾಜ್ಯಗಳನ್ನು ದುರ್ಬಲಗೊಳಿಸಲು ಕೇಂದ್ರದ ಒಂದು ಸಾಧನವಷ್ಟೇ ಆಗಿದೆ. ಕೇಂದ್ರವೂ ಅದಕ್ಕೆ ಹೆಚ್ಚಿನ ಮಾನ್ಯತೆ ನೀಡಿಲ್ಲ. ಅದಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಿಲ್ಲ. ಇತ್ತೀಚಿನ ಸಭೆಯಲ್ಲಿ ಸ್ಟಾಲಿನ್ ತಮಿಳುನಾಡಿಗೆ ತೆರಿಗೆ ಹಣದಲ್ಲಿ ಹೆಚ್ಚಿನ ಪಾಲು ನೀಡಬೇಕು ಅಂತ ಕೇಳಿದಾಗ ನೀತಿ ಆಯೋಗವು ಇಲ್ಲಿ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಟೀಕೆ ಟಿಪ್ಪಣೆಗಳನ್ನು ದಾಖಲಿಸಿಕೊಳ್ಳುತ್ತೇವೆ. ಅದನ್ನು ಹಣಕಾಸು ಆಯೋಗಕ್ಕೆ ರವಾನಿಸಲಾಗುತ್ತದೆ ಎಂಬ ಉತ್ತರ ಬಂತು. ಅಷ್ಟನ್ನು ರಾಜ್ಯ ಸರ್ಕಾರಗಳು ನೇರವಾಗಿ ಮಾಡಬಹುದಿತ್ತು. ಮಾಡಿವೆ. ಸರ್ಕಾರವೂ ಇತ್ತೀಚಿನ ದಿನಗಳಲ್ಲಿ ನೀತಿ ಆಯೋಗದಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಮನಮೋಹನ ಸಿಂಗ್ ಕಾಲದಲ್ಲಿ ಯೋಜನಾ ಆಯೋಗದ ಬಗ್ಗೆ ಸರ್ಕಾರಕ್ಕೆ ಗೌರವವಿತ್ತು. ಮಾಂಟೆಕ್ ಸಿಂಗ್ ಅಹುಲ್ವಾಲಿಯ ಯೋಜನಾ ಆಯೋಗದ ಪರಿವಾಗಿ ಸಂಪುಟ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ನೀತಿ ಆಯೋಗಕ್ಕೆ ಸರ್ಕಾರದ ಯಾವುದೇ ವ್ಯವಸ್ಥೆಯಲ್ಲೂ ಒಂದು ಪಾತ್ರವಿಲ್ಲ. ಹತ್ತು ವರ್ಷ ಕಳೆದರೂ ಅದಕ್ಕೊಂದು ಸ್ವತಂತ್ರ ಸ್ಥಾನಮಾನ ಸಿಕ್ಕಿಲ್ಲ. ಕಾರಣ ಸ್ಪಷ್ಟ. ನೀತಿ ಆಯೋಗದ ಮುಖ್ಯಸ್ಥ ಯಾರು? ಪ್ರಧಾನ ಮಂತ್ರಿಗಳು. ಅವರಿಗೆ ಏನೋ ಬೇಕೊ ಅದು ಆಗುತ್ತದೆ.
ಒಟ್ಟಿಲ್ಲಿ ಜಾಗತಿಕ ಹಣಕಾಸು ಅಧಿಕಾರಶಾಹಿಗಳಿಗೆ ದೇಶದ ಆರ್ಥಿಕತೆಯ ಜವಾಬ್ದಾರಿಯನ್ನು ಪೂರ್ಣವಾಗಿ ವಹಿಸಲಾಗಿದೆ. ಅವರು ಬೆಳೆದರೆ ದೇಶ ಬೆಳದಂತೆ ಎಂದು ಸಂಭ್ರಮಿಸಲಾಗುತ್ತದೆ. ವಸಾಹತುಶಾಹಿ ವಿರೋಧಿ ನೀತಿಯನ್ನು ಕೈಬಿಟ್ಟು ಉದಾರವಾದಿ ಆರ್ಥಿಕ ನೀತಿಯನ್ನು ಅಪ್ಪಿಕೊಳ್ಳುತ್ತಿದ್ದೇವೆ. ರಾಜಕೀಯ ಹಾಗೂ ಆರ್ಥಿಕ ಅಧಿಕಾರ ಹೆಚ್ಚೆಚ್ಚು ಕೇಂದ್ರೀಕೃತಗೊಳ್ಳುತ್ತಿದೆ. ರಾಜ್ಯಗಳ ಆರ್ಥಿಕ ಅಧಿಕಾರವನ್ನು ಕಸಿದುಕೊಂಡು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕಾರ್ಪೊರೇಟುಗಳಿಗೆ ವಿಪರೀತ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ರಾಜಕೀಯ ಹಾಗೂ ಆರ್ಥಿಕ ಅಧಿಕಾರದ ಮೂಲಕ ತೀರ ಕೇಂದ್ರಿಕೃತ ಪ್ರಭುತ್ವವನ್ನು ಕಟ್ಟುತ್ತಿದೆ. ಇದು ಒಟ್ಟಾರೆಯಾಗಿ ಯೋಜನಾ ಆಯೋಗ ನೀತಿ ಆಯೋಗವಾದ ಕಥೆ.
