ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ

ಪ್ರಭಾತ್ ಪಟ್ನಾಯಕ್

ಇದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯ ಜನತೆಯ ಸಂಗ್ರಾಮದ ವಿಜಯದ ೭೮ನೇ ವಾರ್ಷಿಕೋತ್ಸವದ ದಿನ. ಇಂದು ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆದೇಶವನ್ನು ಪಾಲಿಸುವಂತೆ ಭಾರತವನ್ನು ಬಹಿರಂಗವಾಗಿ ಒತ್ತಾಯಿಸುತ್ತಿದೆ. ಎಂತಹ ವಿಪರ್ಯಾಸದ ಸಂಗತಿಂ. ಆದರೆ, ಈ ಗುಣ ಸಾಮ್ರಾಜ್ಯಶಾಹಿಯ ಸ್ವಭಾವದಲ್ಲೇ ಇದೆ. ವಾಸ್ತವವಾಗಿ, ಈ ೭೮ ವರ್ಷಗಳಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ಭಾರತವನ್ನು ತನ್ನ ಆದೇಶಗಳನ್ನು ಪಾಲಿಸುವಂತೆ ಮಾಡುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಹಿಂದೆ ಮಾಡಿದ್ದ ಪ್ರಯತ್ನಗಳಿಗೂ ಈಗ ಮಾಡುತ್ತಿರುವ ಪ್ರಯತ್ನಗಳಲ್ಲಿ ಎರಡು ಮೂಲಭೂತ ವ್ಯತ್ಯಾಸಗಳಿವೆ.

ಮೊದಲನೆಯದಾಗಿ, ಈಗ “ನಿಮ್ಮ ಸ್ವಂತ ಒಳಿತಿಗಾಗಿ ನಾವು ಹೇಳಿದಂತೆ ಮಾಡಿದೆ ಎಂದು ಮರೆಮಾಚಿ ಮಾಡುತ್ತಿಲ್ಲ. ತೀರಾ ನೇರವಾಗಿ ಒತ್ತಾಯಿಸುತ್ತಿದ್ದಾರೆ. “ನಮ್ಮ ಒಳಿತಿಗಾಗಿ ನಾವು ಕೇಳುವುದನ್ನು ಮಾಡಿ, ಇಲ್ಲದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಎರಡನೆಯದಾಗಿ, ಹಿಂದೆ ಇದನ್ನು ಭಾರತ ಸರ್ಕಾರ ನೇರವಾಗಿ ಎದುರಿಸುತ್ತಿತ್ತು. ಈಗ ಹಾಗೆ ನೇರವಾಗಿ ಎದುರಿಸುತ್ತಿಲ್ಲ. ಈ ದಬ್ಬಾಳಿಕೆಗೆ ಸಂಮಿಶ್ರ ಸಂಕೇತಗಳನ್ನು ರವಾನಿಸುತ್ತಿದೆ. ಇದನ್ನು ವಿವರವಾಗಿ ತಿಳಿಸುತ್ತೇನೆ.

ಸೋವಿಯತ್ ಒಕ್ಕೂಟವನ್ನು ಸುತ್ತುವರಿಯಲು ಅಮೆರಿಕದ ಸಾಮ್ರಾಜ್ಯಶಾಹಿ Sಇಂಖಿಔ ಮತ್ತು ಅಇಓಖಿಔ ಮಾದರಿಯ ಸೈನಿಕ ಒಕ್ಕೂಟಗಳನ್ನು ರಚಿಸಿಕೊಂಡಿತ್ತು. ಸ್ವತಂತ್ರ ಭಾರತ ಅವಕ್ಕೆ ಸೇರಿಲಿಲ್ಲ. ಬದಲಿಗೆ ಅಲಿಪ್ತತೆಯ ನೀತಿಯನ್ನು ಅನುಸರಿಸಿತು. ಅದಕ್ಕಾಗಿ ಅಮೆರಿಕೆಯ ಕೋಪಕ್ಕೆ ಗುರಿಯಾಗಿತ್ತು. ಆಗಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲ್ಲೆಸ್ “ನೀವು ನಮ್ಮೊಂದಿಗಿಲ್ಲದಿದ್ದರೆ, ನೀವು ನಮಗೆ ವಿರುದ್ಧವಾಗಿದ್ದೀರಿ” ಎಂಬ ತರ್ಕವನ್ನು ಮುಂದಿಟ್ಟು ಭಾರತವನ್ನು ಶತೃವೆಂದೇ ಪರಿಗಣಿಸಿದ್ದರು. ಯೋಜನೆಯ ಮಹತ್ವಾಕಾಂಕ್ಷೆಯ ವರ್ಷಗಳಲ್ಲಿ, ಸ್ವಾವಲಂಬನೆ ಮುಖ್ಯವಾಗಿತ್ತು. ಅದನ್ನು ಸಾರ್ವಜನಿಕ ವಲಯದ ಒಡೆತನದಲ್ಲಿ ಭಾರೀ ಕೈಗಾರಿಕೆಯ ತಳಹದಿಯನ್ನು ನಿರ್ಮಿಸುವ ಉದ್ದೇಶವಿತ್ತು. ಮತ್ತು ಆರ್ಥಿಕತೆಯನ್ನು ಸಾಮ್ರಾಜ್ಯಶಾಹಿ ಕುಣಿಕೆಯಿಂದ ಬಿಡಿಸಿಕೊಳ್ಳುವುದು ಮುಖ್ಯವಾಗಿತ್ತು. ಆಗ ಅಮೆರಿಕದಿಂದ ಅಥವಾ ಅದರ ನಿಯಂತ್ರಣದಲ್ಲಿದ್ದ ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳಿಂದ “ಅಭಿವೃದ್ಧಿ ಸಹಾಯ”ವು ಬಹುತೇಕ ಇರಲಿಲ್ಲ. ಭಾರತಕ್ಕೆ ಭೇಟಿ ನೀಡಿದ ಅಮೆರಿಕೆಯ ಅನುದಾನ ಪಡೆದ “ತಜ್ಞರು” ಮಹಾಲನೊಬಿಸ್ ಕಾರ್ಯತಂತ್ರವನ್ನು ವಿರೋಧಿಸಿದರು. ಅದು ಸ್ವಾವಲಂಬನೆಗೆ ಅದ್ಯತೆ ನೀಡುತ್ತಿತ್ತು. (ಡೇನಿಯಲ್ ಮತ್ತು ಆಲಿಸ್ ಥಾರ್ನರ್‌ರವರ ಲ್ಯಾಂಡ್ ಆಂಡ್ ಲೇಬರ್ ಇನ್ ಇಂಡಿಯಾ ಪುಸ್ತಕದಲ್ಲಿ “ಪ್ಲೌಯಿಂಗ್ ದಿ ಪ್ಲಾನ್ ಅಂಡರ್” ಲೇಖನವನ್ನು ಓದಿ).
ಆದರೆ, ಸೋವಿಯತ್ ಒಕ್ಕೂಟದ ಭಾರತವನ್ನು ಬೆಂಬಲಿಸಿತು. ಭಾರತವು ತನ್ನ ಅಲಿಪ್ತತೆಯ ನೀತಿಯನ್ನು ಹಾಗೂ ಸ್ವಾವಲಂಭನೆಯ ನೀತಿಯನ್ನು ಮುಂದುವರಿಸಿಕೊಂಡು ಹೋಯಿತು. ಸಾಮ್ರಾಜ್ಯಶಾಹಿ ಬಂಡವಾಳದ ಪ್ರಾಬಲ್ಯವನ್ನು ಎದುರಿಸುವುದಕ್ಕೆ ಸಾರ್ವಜನಿಕ ಕ್ಷೇತ್ರವನ್ನು ಬಳಸಿಕೊಂಡಿತು. ವಿದೇಶಿ ವಿನಿಮಯವನ್ನು ಮಿತವಾಗಿ ಆದ್ಯತೆಯ ಮೇಲೆ ಬಳಸುವುದು ಅನಿವಾರ್ಯವಾಗಿತ್ತು. ಆದರೂ ಭಾರತ ತನ್ನ ಹಾದಿಯನ್ನು ಬಿಟ್ಟುಕೊಡಲಿಲ್ಲ. ೧೯೫೦ರ ದಶಕದ ಕೊನೆಯಲ್ಲಿ, ಡಲ್ಲೆಸ್‌ರ ಮರಣದ ನಂತರ, ಅಮೆರಿಕೆಯು ತನ್ನ ನಿಲುವನ್ನು ಕ್ರಮೇಣ ಬದಲಿಸಿತು. ಭಾರತವನ್ನು ದೂರವಿಡುವ ನೀತಿಯಿಂದ ತನಗೆ ಸಮಸ್ಯೆಯಾಗುತ್ತದೆ (ಮತ್ತು ಸೋವಿಯತ್ ಒಕ್ಕೂಟಕ್ಕೆ ಸಹಾಯವಾಗುತ್ತದೆ) ಎಂದು ಆತಂಕ ಪಟ್ಟಿತು. ಹಾನಿಗೊಳಿಸುತ್ತಿವೆ ಎಂದು ಭಯಪಟ್ಟು ತನ್ನ ನಿಲುವನ್ನು ನಿಧಾನವಾಗಿ ಬದಲಾಯಿಸಿತು. ಐಸನ್‌ಹೋವರ್‌ರ ಭಾರತ ಭೇಟಿಯ ನಂತರ, ಭಾರತಕ್ಕೆ ಒಂದಿಷ್ಟು ವಿಶ್ವಬ್ಯಾಂಕ್ “ನೆರವು’ ಬರುವುದಕ್ಕೆ ಆರಂಭವಾಯಿತು. ಆದರೆ ಅದು ಕೇವಲ ಮೂಲಸೌಕರ್ಯ ಯೋಜನೆಗಳಿಗೆ ಮಾತ್ರ ಬರುತ್ತಿತ್ತು.

ಮತ್ತೊಮ್ಮೆ, ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ, ಭಾರತದ ಮಧ್ಯಪ್ರವೇಶ ಅಮೇರಿಕಾಕ್ಕೆ ಸುವರ್ಣಾವಕಾಶವನ್ನು ತಪ್ಪಿಸಿಬಿಟ್ಟಿತು. ಗೊಂದಲದ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದಕ್ಕೆ ಅಮೇರಿಕೆಗೆ ಸಾಧ್ಯವಾಗಲಿಲ್ಲ. ಇದರಿಂದ ಸಹಜವಾಗಿಯೆ ಅಮೆರಿಕ ಕೋಪಗೊಂಡಿತು. ಅಮೆರಿಕ ಸರ್ಕಾರವು ಭಾರತವನ್ನು ಹೆದರಿಸಲು ತನ್ನ USS ಎಂಟರ್‌ಪ್ರೈಸ್ ಏರ್‌ಕ್ರಾಫ್ಟ್ ನೌಕೆಯ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ೭೪ ಅನ್ನು ಬಂಗಾಳ ಕೊಲ್ಲಿಗೆ ಕಳುಹಿಸಿತು. ಆದರೆ, ಅಮೆರಿಕದ ಬೆದರಿಕೆಗಳಿಗೆ ತಲೆಕೆಡಿಸಿಕೊಳ್ಳದ ಭಾರತ ತನ್ನ ಹಾದಿಯಲ್ಲೆ ಮುಂದುವರಿಯಿತು. ಮತ್ತು ಬಾಂಗ್ಲಾದೇಶದ ರಚನೆಯ ಪ್ರಕ್ರಿಯೆಗೆ ಸಹಾಯ ಮಾಡಿತು.

 

ಅಮೆರಿಕದ ಸಾಮ್ರಾಜ್ಯಶಾಹಿಗೆ ಹೀಗೆ ಹೆದರಿಸುವುದರ ಹಿಂದೆ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶ ಇರುತ್ತದೆ. ಆದರೆ ಅದು ಅಷ್ಟಕ್ಕೆ ಸೀಮಿತವಲ್ಲ. ಆ ನಿರ್ದಿಷ್ಟ ದೇಶಗಳನ್ನು ತನ್ನ ಅಜೆಂಡಾಗೆ ತಕ್ಕಂತೆ ನಡೆದುಕೊಳ್ಳುವಂತೆ ಮಾಡುವ ಪ್ರಯತ್ನವೂ ಹೌದು. ಇದು ಹಳೆಯ ವಿದ್ಯಾಮಾನ. ಆದರೆ ಆಗ ಸ್ವತಂತ್ರ ಭಾರತ ಇದನ್ನು ಯಶಸ್ವಿಯಾಗಿ ಎದುರಿಸಿತ್ತು. ಈಗ ಅಮೇರಿಕೆ ನಡೆಸುತ್ತಿರುವ ದಬ್ಬಾಳಿಕೆಯೂ ಹೊಸದೇನಲ್ಲ. ಆದರೆ ಅದು ಸಂಪೂರ್ಣ ವಿಭಿನ್ನ ಸಂದರ್ಭದಲ್ಲಿ ನಡೆಯುತ್ತಿದೆ. ಈಗ ಈ ದೇಶಗಳು ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಹಾಗಾಗಿ ಈಗ ಜಾಗತಿಕ ಹಣಕಾಸು ಬಂಡವಾಳ ಹೆಚ್ಚು ಪ್ರಬಲವಾಗಿದೆ.

 

ಡೊನಾಲ್ಡ್ ಟ್ರಂಪ್‌ರ ಈಗಿನ ದಬ್ಬಾಳಿಕೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತಕ್ಕೆ ಸಂಬಂಧಿಸಿದಂತೆ ಅದು ಎರಡು ಕಾರಣಗಳಿಗೆ ಸುಂಕವನ್ನು ವಿಧಿಸುತ್ತಿದೆ. ಮೊದಲನೆಯದು ಆಗಸ್ಟ್ ೧ರೊಳಗೆ ಭಾರತ ಅಮೇರಿಕೆಯೊಂದಿಗೆ ಒಪ್ಪಂದಕ್ಕೆ ಬಂದಿಲ್ಲ. ಹಾಗಾಗಿ ಭಾರತೀಯ ಸರಕುಗಳ ಮೇಲೆ ಅಮೆರಿಕದ ಮಾರುಕಟ್ಟೆಯಲ್ಲಿ ಶೇಕಡ ೨೫ರಷ್ಟು ಸುಂಕವನ್ನು ವಿಧಿಸಿದೆ. ಎರಡನೆಯದು, ರಷ್ಯಾದಿಂದ ತೈಲ ಖರೀದಿಸಿದೆ. ಅದಕ್ಕಾಗಿ ಭಾರತೀಯ ಸರಕುಗಳ ಮೇಲೆ ದಂಡವಾಗಿ ಅಮೇರಿಕೆಯು ಹೆಚ್ಚಿನ ೨೫% ಸುಂಕವನ್ನು ವಿಧಿಸುವ ಬೆದರಿಕೆಯನ್ನು ಹಾಕಿದೆ. ಏಕೆಂದರೆ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ಭಾರತ ತೈಲವನ್ನು ಖರೀದಿಸಿದೆ. ಜೊತೆಗೆ, ಟ್ರಂಪ್ ಃಖIಅS ಬಗ್ಗೆ ಮಾಡಿರುವ ಟೀಕೆಗಳನ್ನು ಗಮನಿಸಿದರೆ, ಟ್ರಂಪ್ ಭಾರತವನ್ನು ಆ ಸಂಸ್ಥೆಯಿಂದ ಹೊರಗೆ ಬರುವಂತೆ ಬೆದರಿಕೆ ಒಡ್ಡಬಹುದು. ಅಥವಾ, ಬಹುಶಃ, ಅಮೆರಿಕದ ಟ್ರೋಜನ್ ಹಾರ್ಸ್‌ನಂತೆ ಕಾರ್ಯನಿರ್ವಹಿಸುವಂತೆ ಒತ್ತಾಯಿಸಬಹುದು. ಆದರೆ ಇದು ತಕ್ಷಣಕ್ಕೆ ಅದು ಪ್ರಸ್ತುತವಲ್ಲ. ತಕ್ಷಣದ ಹಾಗೂ ಮೂಲಭೂತ ವಿಷಯ ಅಂದರೆ ರಷ್ಯಾದಿಂದ ತೈಲ ಖರೀದಿಸುವುದು. ಭಾರತ ಈ ವಿಷಯದಲ್ಲಿ, ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ, ಇದು ಅಮೆರಿಕವನ್ನು ಒಲಿಸುವುದಕ್ಕೆ ಹೆಣಗಾಡುತ್ತಿರುವಂತೆ ಕಾಣುತ್ತಿದೆ.

 

ಭಾರತಕ್ಕೆ ಲಭ್ಯವಿರುವ ಅಮೆರಿಕ-ಅನುಮೋದಿತ ಯಾವುದೇ ಇತರ ಮೂಲಕ್ಕೆ ಹೋಲಿಸಿದರೆ ರಷ್ಯಾದ ತೈಲ ಅಗ್ಗ. ಆದ್ದರಿಂದ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒತ್ತಾಯಿಸುವುದು ಭಾರತವನ್ನು ತನ್ನ ಸ್ವಂತ ಹಿತಾಸಕ್ತಿಗೆ ವಿರುದ್ಧ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದಂತೆ ಆಗುತ್ತದೆ. ಇವು ದಕ್ಷಿಣ ಆಫ್ರಿಕಾದ ಜನಾಂಗೀಯ ತಾರತಮ್ಯದ ವಿರುದ್ಧ ವಿಧಿಸಲಾದಂತಹ ಸಂಯುಕ್ತ ರಾಷ್ಟ್ರಗಳ ನಿರ್ದೆಶಿತ ನಿರ್ಬಂಧಗಳಲ್ಲ; ಅಮೇರಿಕೆ ಹಾಗೂ ಇತರ ಸಾಮ್ರಾಜ್ಯಶಾಹಿ ದೇಶಗಳು ತಮ್ಮ ನಿರ್ದೇಶನವನ್ನು ಉಲ್ಲಂಘಿಸುತ್ತವೆ ಅನ್ನುವ ಕಾರಣಕ್ಕೆ ಕ್ಯೂಬಾ, ಇರಾನ್ ಅಥವಾ ವೆನೆಜುವೆಲಾದಂತಹ ದೇಶಗಳ ವಿರುದ್ಧ ಏಕಪಕ್ಷೀಯವಾಗಿ ವಿಧಿಸಿರುವ ನಿರ್ಬಂಧಗಳಂತಹ ನಿರ್ಬಂಧಗಳು. ಆದ್ದರಿಂದ, ಇಂತಹ ನಿರ್ಬಂಧಗಳನ್ನು ಒಪ್ಪಿಕೊಳ್ಳುವಂತೆ ದೇಶಗಳನ್ನು ಒತ್ತಾಯಿಸುವುದು ಅಂದರೆ, ಸಾಮ್ರಾಜ್ಯಶಾಹಿಯ ಉದ್ದೇಶವನ್ನು ಮುಂದುವರೆಸಲು ಅವರ ಸ್ವಂತ ಹಿತಾಸಕ್ತಿಗಳ ವಿರುದ್ಧ ಹೋಗುವಂತೆ ಮಾಡುವುದಕ್ಕೆ ಒತ್ತಾಯಿಸಿದಂತೆ ಆಗುತ್ತದೆ. ಇದರ ಹಿಂದೆ ಯಾವುದೇ ಘನವಾದ ತತ್ತ್ವವೂ ಇಲ್ಲ. ಇದೆಯೆಂಬ ಸೋಗನ್ನೂ ಅವು ಹಾಕುತ್ತಿಲ್ಲ. ನೇರವಾಗಿ, ಬಹಿರಂಗವಾಗಿ ಸಾಮ್ರಾಜ್ಯಶಾಹಿಯ ಸ್ಟ್ರಾಟಜಿಕ್ ಹಿತಾಸಕ್ತಿಗಳನ್ನು ರಕ್ಷಿಸಲು ತಮ್ಮ ಸ್ವಂತದ ಹಿತಾಸಕ್ತಿಯನ್ನು ಬದಿಗೊತ್ತಿ ಒಪ್ಪಿಕೊಳ್ಳಲು ಒತ್ತಾಯಿಸಲಾಗುತ್ತಿದೆ.

 

ಮೋದಿ ಸರ್ಕಾರವು ಈ ವಿಷಯದಲ್ಲಿ ಟ್ರಂಪ್‌ರನ್ನು ಧೈರ್ಯವಾಗಿ ಮತ್ತು ನಿರ್ಣಾಯಕವಾಗಿ ಏಕೆ ತಿರಸ್ಕರಿಸುತ್ತಿಲ್ಲ? ಚೀನಾವನ್ನು ಬಿಡಿ. ಬ್ರೆಜಿಲ್‌ನಂತಹ ಬಂಡವಾಳಶಾಹಿ ದೇಶದ ಸರ್ಕಾರವು ಕೂಡ ಟ್ರಂಪ್‌ರನ್ನು ಧೈರ್ಯವಾಗಿ ಎದುರಿಸಿದೆ. ಅಧ್ಯಕ್ಷ ಲೂಲಾ ಟ್ರಂಪ್ ಬ್ರೆಜಿಲಿಯನ್ ಸರಕುಗಳ ಮೇಲೆ ಶೇಕಡ ೫೦ರಷ್ಟು ಸುಂಕವನ್ನು ವಿಧಿಸಿದರೆ, ಬ್ರೆಜಿಲ್ ಕೂಡ ಅಮೆರಿಕನ್ ಸರಕುಗಳ ಮೇಲೆ ಶೇಕಡ ೫೦ರಷ್ಟು ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮೋದಿಯವರ ಪುಕ್ಕಲುತನವನ್ನು ಸರಿಯಾಗಿ ಎತ್ತಿ ತೋರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ನಿಕ್ಸನ್‌ರನ್ನು ಧೈರ್ಯದಿಂದ ಎದುರಿಸಿದ್ದನ್ನು ಉಲ್ಲೇಖಿಸಿದ್ದಾರೆ (ಇಂದಿರಾ ಗಾಂಧಿಯವರ ಕಣ್ಣುಗಳನ್ನು ನೋಡಲು ಭಯಪಟ್ಟಿದ್ದೇನೆ ಎಂದು ನಿಕ್ಸನ್ ಒಮ್ಮೆ ಒಪ್ಪಿಕೊಂಡಿದ್ದರು). ಒಬ್ಬ ನಾಯಕನ ಧೈರ್ಯ ಅಥವಾ ಪುಕ್ಕಲುತನ ಅವನ ಬೆಂಬಲಿಗರ ವರ್ಗ ಸ್ವಭಾವವನ್ನು ಅವಲಂಭಿಸಿರುತ್ತದೆ. ಈ ವಿಷಯದಲ್ಲಿ ಲೂಲಾ ಮತ್ತು ಮೋದಿಯವರ ನಡುವೆ ವ್ಯತ್ಯಾಸವಿದೆ. ಲೂಲಾ ಕಾರ್ಮಿಕ ವರ್ಗದ ಬೇರಿನಿಂದ ಬಂದವರು. ಮೋದಿಯವರಿಗೆ ಕೆಲವು ಕಾರ್ಮಿಕರು ಮತ ಚಲಾಯಿಸಿದ್ದರೂ, ಮೂಲತಃ ದೊಡ್ಡ ಬಂಡವಾಳಿಗರ ಬೆಂಬಲದಿಂದ ಅಧಿಕಾರದಲ್ಲಿದ್ದಾರೆ. ಆಗ ಅಮೆರಿಕದ ಸಾಮ್ರಾಜ್ಯಶಾಹಿಯ ದಬ್ಬಾಳಿಕೆ ತಂತ್ರಗಳ ವಿರುದ್ಧ ಭಾರತದ ನಿಲುವಿಗೂ ಈಗಿನ ನಿಲುವಿಗೂ ನಡುವೆ ಅಪಾರ ವ್ಯತ್ಯಾಸವಿದೆ. ಅದಕ್ಕೆ ನೆಹರೂ/ಇಂದಿರಾ ಗಾಂಧಿಯವರ ವೈಯಕ್ತಿಕ ಗುಣಲಕ್ಷಣಗಳು ಮತ್ತು ಮೋದಿಯವರ ವೈಯಕ್ತಿ ಸ್ವಭಾವದ ನಡುವಿನ ವ್ಯತ್ಯಾಸ(ವ್ಯತ್ಯಾಸವಿರುವುದು ಹೌದಾದರೂ) ಕಾರಣವಲ್ಲ. ಬದಲಿಗೆ ಎರಡೂ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ವ್ಯವಸ್ಥೆಗಳ ನಡುವಿನ ವ್ಯತ್ಯಾಸ ಕಾರಣ. ಆಗ ವಸಾಹತು-ವಿರೋಧಿ ಸರ್ಕಾರದ ನಿಯಂತ್ರಿದ ಆರ್ಥಿಕ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ನವ-ಉದಾರವಾದಿ ಆರ್ಥಿಕ ವ್ಯವಸ್ಥೆ ಅಸ್ಥಿತ್ವದಲ್ಲಿದೆ.

 

ಒಂದು ದೇಶದ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿಯ ನಡುವೆ ನಿಖಟವಾದ ಸಂಬಂಧವಿರುತ್ತೆ ಅನ್ನುವುದು ಸ್ಪಷ್ಟ. ಆಗ ಸ್ವಾವಲಂಬನೆಗೆ ಆದ್ಯತೆ ನೀಡಿದ್ದ ಸರ್ಕಾರ ನಿರ್ದೇಶಿತ ಆರ್ಥಿಕ ನೀತಿ ರೂಢಿಯಲ್ಲಿತ್ತು. ಅದು ಭಾರತದ ಅಲಿಪ್ತತೆಯ ವಿದೇಶಾಂಗ ನೀತಿಯೊಂದಿಗೆ ಚೆನ್ನಾಗಿ ಮಿಲಿತವಾಗಿತ್ತು. ಆದ್ದರಿಂದ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯನ್ನು ಎದುರಿಸುವ ಇಚ್ಛೆ ಮತ್ತು ಸಾಮರ್ಥ್ಯ ಅದಕ್ಕಿತ್ತು. ಆದರೆ, ನವ-ಉದಾರವಾದಿ ಆರ್ಥಿಕ ವ್ಯವಸ್ಥೆಗೆ, ಸ್ವಾವಲಂಬನೆಯ ಎಲ್ಲಾ ಪ್ರಯತ್ನಗಳನ್ನು ಹತ್ತಿಕ್ಕುವುದೇ ಹೆಮ್ಮೆಯ ವಿಷಯವಾಗಿದೆ. “ಮೇಕ್ ಇನ್ ಇಂಡಿಯಾ” ಎನ್ನುವುದು ವಿದೇಶಿ ಬಂಡವಾಳಕ್ಕೆ ಭಾರತದಲ್ಲಿ ಉತ್ಪಾದಿಸುವುದಕ್ಕೆ ನೀಡುತ್ತಿರವ ಆಹ್ವಾನ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸ್ವಾವಲಂಬನೆಯ ಪ್ರಯತ್ನಗಳಿಂದ ದೂರವಿಡುವಂತೆ ನೋಡಿಕೊಳ್ಳುವುದರಲ್ಲೆ ಉದಾರವಾದಿ ಆರ್ಥಿಕತೆಯ ಅಸ್ತಿತ್ವ ಇರುವುದು. ಸ್ವಾವಲಂಬನೆಯಿಂದ ದೂರ ಸರಿದಷ್ಟೂ ಆ ದೇಶಗಳು ಸಾಮ್ರಾಜ್ಯಶಾಹಿ ಒತ್ತಡಕ್ಕೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು.

 

ನವ-ಉದಾರವಾದಿ ಆರ್ಥಿಕ ವ್ಯವಸ್ಥೆಯನ್ನು ಭಾರತದಲ್ಲಿ ತರುವಾಗ ಒಂದಿಷ್ಟು ಭರವಸೆಗಳನ್ನು ನೀಡಲಾಗಿತ್ತು. ಅದು ಒಂದು ಶಾಶ್ವತವಾದ ಹೊಸ ವ್ಯವಸ್ಥೆಯನ್ನು ತರುತ್ತದೆ. ಅದರಲ್ಲಿ ಬಂಡವಾಳವು ಜಾಗತಿಕವಾಗಿ ಚಲನಶೀಲವಾಗಿರುತ್ತದೆ. ಮೊದಲು ಜಗತ್ತಿನ ಉತ್ತರದ ದೇಶಗಳಲ್ಲಷ್ಟೇ ನಡೆಯುತ್ತಿದ್ದ ಎಲ್ಲಾ ಬಗೆಯ ಚಟುವಟಿಕೆಗಳು ಇನ್ನು ಮುಂದೆ ದಕ್ಷಿಣದ ಕಡಿಮೆ-ಕೂಲಿಯ ದೇಶಗಳಲ್ಲಿ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಉತ್ತರದಿಂದ ದಕ್ಷಿಣಕ್ಕೆ ಸ್ಥಳಾಂತರಗೊಳ್ಳುತ್ತವೆ. ಇದರಿಂದ ದಕ್ಷಿಣದ ದೇಶಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಬಡತನದ ನಿರ್ಮೂಲನ ಸಾಧ್ಯವಾಗುತ್ತದೆ. ಈ ವಾದದದಲ್ಲಿ ಒಂದು ಸಮಸ್ಯೆ ಇದೆ. ಯಾವುದೇ ಜಾಗತಿಕ ವ್ಯವಸ್ಥೆಯು ಶಾಶ್ವತವಲ್ಲ. ಇಂತಹ ವ್ಯವಸ್ಥೆಗಳನ್ನು ರೂಪಿಸಿರುವುದೆ ಸಾಮ್ರಾಜ್ಯಶಾಹಿಗಳು. ಹಾಗಾಗಿ ಸಾಮ್ರಾಜ್ಯಶಾಹಿಯ ಇಚ್ಛೆಗೆ ಅನುಗುಣವಾಗಿ ಅದು ಮುಂದೆ ಬದಲೂ ಆಗಬಹುದು. ಈಗ ಅದನ್ನು ಸ್ಪಷ್ಟವಾಗಿ ನೋಡಬಹುದು. ಆದರೆ, ಸಾಮ್ರಾಜ್ಯಶಾಹಿಯು ಅಸ್ತಿತ್ವದಲ್ಲಿರುವ ವ್ಯವಸ್ಥೆಯಿಂದ ಹಿಂದೆ ಸರಿದುಕೊಂಡಾಗ, ಅದರಲ್ಲಿ ಸಿಕ್ಕಿಬಿದ್ದಿರುವ ಭಾರತದಂತಹ ದಕ್ಷಿಣದ ದೇಶಗಳಿಗೆ ಅದರಿಂದ ಬಿಡಿಸಿಕೊಂಡು ಹೊರಬರುವುದಕ್ಕೆ ಕಷ್ಟವಾಗುತ್ತದೆ.

ಒಮ್ಮೆ ಒಂದು ದೇಶವು ವಾಣಿಜ್ಯವನ್ನು ಅವಲಂಭಿಸಿಕೊಂಡುಬಿಟ್ಟರೆ ವಾಣಿಜ್ಯದಲ್ಲಿ ಯಾವುದೇ ಏರುಪೇರಾದರೂ ಅದರ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಅದು ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಮರು-ಹೊಂದಾಣಿಕೆ ಮಾಡಿಕೊಳ್ಳಲು ತಯಾರಿರಬೇಕು. ಇಲ್ಲದೆ ಹೋದರೆ ಅದು ಸಾಮ್ರಾಜ್ಯಶಾಹಿಯ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ಆದರೆ, ಇಂತಹ ಮೂಲಭೂತ ಬದಲಾವಣೆಯ ಪ್ರಯತ್ನವನ್ನು ನಗರದ ಮೇಲ್ಮಧ್ಯಮ ವರ್ಗವು ವಿರೋಧಿಸುತ್ತದೆ. ಈ ಮೇಲ್ಮಧ್ಯಮ ವರ್ಗವು ದೊಡ್ಡ ಬೂರ್ಜುವಾಸಿ ಮತ್ತು ನವ-ಉದಾರವಾದಿ ಆರ್ಥಿಕ ವ್ಯವಸ್ಥೆಯಿಂದ ಲಾಭ ಪಡೆದಕೊಂಡಿರುತ್ತದೆ. ವಿಶೇಷವಾಗಿ ಈ ವರ್ಗದ ಜನರ ಹಿತಾಸಕ್ತಿಗೆ ಬದ್ಧವಾದ ಸರ್ಕಾರ ಬಹುತೇಕ ಸಾಮ್ರಾಜ್ಯಶಾಹಿಯ ಬೇಡಿಕೆಗಳಿಗೆ ಮಣಿಯುತ್ತದೆ.
ಇದನ್ನು ಸ್ಪಷ್ಟಪಡಿಸುವುದಕ್ಕೆ ಒಂದು ಉದಾಹರಣೆಯನ್ನು ಗಮನಿಸೋಣ. ಟ್ರಂಪ್‌ರ ಸುಂಕದ ಬೆದರಿಕೆಯಿಂದ ರೂಪಾಯಿಯ ಮೌಲ್ಯ ಕುಸಿಯುವುದಕ್ಕೆ ಪ್ರಾರಂಭವಾಗಿದೆ. ಸುಂಕದ ದರ ಇನ್ನೂ ಹೆಚ್ಚ ತೊಡಗಿದರೆ, ಸರ್ಕಾರ ಬಂಡವಾಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳದೇ ಹೋದರೆ ರೂಪಾಯಿಯ ಮೌಲ್ಯ ಇನ್ನೂ ಕುಸಿಯುತ್ತದೆ. ಬಂಡವಾಳದ ನಿಯಂತ್ರಣದ ಜೊತೆಗೆ ವಾಣಿಜ್ಯ ನಿಯಂತ್ರಣಗಳನ್ನು ತರಬೇಕಾಗುತ್ತದೆ. ಇಲ್ಲದೇ ಹೋದರೆ ವಿದೇಶಿ ವಿನಿಮಯವನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇವೆಲ್ಲಾ ಮಾಡುವುದು ಅಂದರೆ ನವ-ಉದಾರವಾದಿ ಆರ್ಥಿಕ ನೀತಿಯಿಂದ ಹೊರಬಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸುವುದು ಅಂತಲೇ ಅರ್ಥ. ಆದರೆ, ಜಾಗತಿಕ ಹಣಕಾಸು ಬಂಡವಾಳದೊಂದಿಗೆ ತೆಕ್ಕೆಹಾಕಿಕೊಂಡಿರುವ ದೊಡ್ಡ ಬಂಡವಾಳಿಗರು ಇದನ್ನು ವಿರೋಧಿಸುತ್ತಾರೆ. ಇವರ ಹಿತಾಸಕ್ತಿಗಳಿಗೆ ಬದ್ಧವಾದ ಸರ್ಕಾರವು ಬೇರೆ ಯಾವುದೇ ಪರ್ಯಾಯವನ್ನು ಕುರಿತು ಯೋಚಿಸುವುದಿಲ್ಲ. ಬದಲಿಗೆ, ಸಾಮ್ರಾಜ್ಯಶಾಹಿಯ ಬೆದರಿಕೆಗೆ ಮಣಿದ ಅವರ ಬೇಡಿಕೆಗಳೊಂದಿಗೆ ರಾಜಿ ಮಾಡಿಕೊಳ್ಳುತ್ತದೆ.
ಸಾಮ್ರಾಜ್ಯಶಾಹಿಯಿಂದ ಬಿಡುಗಡೆ ಹೊಂದುವುದು ನವ ಉದಾರವಾದಿ ವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ. ಇದನ್ನು ೧೯೯೦ರ ಹಿಂದಿನ ಸರ್ಕಾರಗಳು ಗುರುತಿಸಿದ್ದವು. ನವ-ಉದಾರವಾದಿ ಮಾದರಿಯನ್ನು ಒಪ್ಪಿಕೊಂಡಿರುವುದರಿಂದ ದೇಶದ ಸ್ವಾತಂತ್ರ್ಯವನ್ನು ಸೀಮಿತಗೊಂಡಿದೆ. ಡೊನಾಲ್ಡ್ ಟ್ರಂಪ್‌ರ ದಬ್ಬಾಳಿಕೆ ಇದನ್ನು ಇನ್ನೂ ಸ್ಪಷ್ಟವಾಗಿ ತೆರೆದಿಟ್ಟಿದೆ.

link

https://www.newsclick.in/79th-i-day-imperialism-open-bullying-india