ಟಿ. ಎಸ್. ವೇಣುಗೋಪಾಲ್
ಅಮೇರಿಕೆ ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಸರಕುಗಳ ಮೇಲೆ ಸುಂಕ ಹಾಕಲು ಡೋನಾಲ್ಡ್ ಟ್ರಂಪ್ ಪಣತೊಟ್ಟಿದ್ದಾರೆ. ಅದೇ ಅವರ ಆರ್ಥಿಕ ನೀತಿಯ ಹೃದಯ ಆಗಿದೆ. ಟ್ರಂಪ್ ದೃಷ್ಟಿಯಲ್ಲಿ ಅಮೇರಿಕೆಯ ಎಲ್ಲಾ ಸಮಸ್ಯೆಗಳಿಗೂ ಸುಂಕ ರಾಮಬಾಣ. ಪಾಪ ಜಗತ್ತಿನ ಎಲ್ಲಾ ದೇಶಗಳು ಅಮೇರಿಕೆಗೆ ಅನ್ಯಾಯ ಮಾಡುತ್ತಾ ಬಂದಿವೆಯಂತೆ. ಅಮೇರಿಕೆಯ ವ್ಯಾಪಾರದ ಕೊರತೆ ೧.೨ ಟ್ರಿಲಿಯನ್ ಆಗಿರುವುದು ನೋಡಿದರೆ ತಿಳಿಯುವುದಿಲ್ಲವೇ? ಅದಕ್ಕಿಂತ ದೊಡ್ಡ ಪುರಾವೆ ಬೇಕೇ, ಅನ್ನುತ್ತಾರೆ ಟ್ರಂಪ್. ಸ್ನೇಹಿತರು, ಶತ್ರುಗಳು ಯಾರೂ ಹೊರತಲ್ಲ. ಎಲ್ಲರೂ ಈ ವಂಚನೆಯಲ್ಲಿ ಪಾಲುದಾರರೆ. ಪರಿಸ್ಥಿತಿ ಹೀಗೆ ಮುಂದುವರಿಯುವುದಕ್ಕೆ ಬಿಡುವುದಿಲ್ಲ. ಪ್ರತಿಯಾಗಿ ಎಲ್ಲಾ ದೇಶಗಳ ಮೇಲೂ ಸುಂಕ ಹಾಕುತ್ತೇವೆ ಎಂದು ಟ್ರಂಪ್ ಸಾರಿದ್ದಾರೆ. ಇನ್ನು ಮೇಲೆ ಆಮದು ಮತ್ತೂ ದುಬಾರಿಯಾಗುತ್ತದೆ. ಅಮೇರಿಕೆಯ ಉದ್ದಿಮೆಗಳು ನೆಮ್ಮದಿಯಿಂದ ಉತ್ಪಾದನೆಯಲ್ಲಿ ತೊಡಗಿಕೊಳ್ಳಬಹುದು. ಅಮೇರಿಕೆಯಲ್ಲಿ ಮತ್ತೆ ಕಾರ್ಖಾನೆಗಳು ಪ್ರಾರಂಭವಾಗುವಂತೆ ಮಾಡಿ, ಇಲ್ಲಿ ಉತ್ಪಾದನೆಯನ್ನು ಮತ್ತೆ ಪ್ರಾರಂಭಿಸುತ್ತೇನೆ. ಉದ್ಯೋಗವನ್ನು ಹೆಚ್ಚಿಸುತ್ತೇನೆ. ಹೀಗೆ ಮುಂದುವರಿಯುತ್ತದೆ ಟ್ರಂಪ್ ಘೋಷಣೆಗಳು.
ಸುಂಕ ಅನ್ನುವುದು ಕೂಡ ತೆರಿಗೆಯೆ. ಆಮದು ಸರಕುಗಳನ್ನು ಕೊಳ್ಳುವ ಎಲ್ಲರೂ ತೆರಬೇಕಾದ ತೆರಿಗೆ. ಟ್ರಂಪ್ ಏನೇ ಹೇಳಲಿ ಅಂತಿಮವಾಗಿ ಇದರ ಹೊರೆಯನ್ನು ಅಮೇರಿಕನ್ನರೇ ಹೊರಬೇಕು. ಅಮೇರಿಕೆಯ ಪ್ರತಿಯೊಬ್ಬ ಪ್ರಜೆಯೂ ತೆರಬೇಕಾದ ಬೆಲೆ ಹೆಚ್ಚುತ್ತದೆ. ಬಡವರಿಗೆ ಬೇರೆಯವರಿಗಿಂತ ಹೆಚ್ಚು ಹೊಡೆತ ಬೀಳುತ್ತದೆ. ಜಗತ್ತಿನ ದೇಶಗಳೆಲ್ಲಾ ದಿವಾಳಿಯಾಗದೇ ಇರಬಹುದು. ಆದರೆ ಎಲ್ಲಾ ದೇಶಗಳು ಒಂದಲ್ಲ ಒಂದು ರೀತಿಯ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಇದು ಅನಿವಾರ್ಯ.
೮೦ ವರ್ಷಗಳಿಂದ ಒಂದು ಬಗೆಯ ವ್ಯಾಪಾರದ ವ್ಯವಸ್ಥೆಯನ್ನು ಜಗತ್ತು ಕಾಪಾಡಿಕೊಂಡು ಬಂದಿತ್ತು. ಅದರ ಬುಡವನ್ನೇ ಟ್ರಂಪ್ ಅಲ್ಲಾಡಿಸುತ್ತಿದ್ದಾರೆ. ಸಮರ ಸಾರಿದ್ದಾರೆ. ಯುದ್ಧದಲ್ಲಿ ಸಲೀಸಾಗಿ ಗೆದ್ದುಬಿಡುತ್ತೇನೆ ಅಂದುಕೊಂಡು ಯುದ್ಧ ಆರಂಭಿಸಿದ್ದಾರೆ. ಯುದ್ಧಕ್ಕೆ ಮೊದಲು ಎಷ್ಟೇ ಯೋಜನೆಗಳನ್ನು ರೂಪಿಸಿಕೊಂಡಿದ್ದರೂ ವೈರಿಯ ಮುಂದೆ ನಿಂತಾಗ ಅವು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇದು ಎಲ್ಲಾ ಸೇನಾಪತಿಗಳ ಅನುಭವದ ಪಾಠ. ಉತ್ಸಾಹದಿಂದ ಯುದ್ಧಕ್ಕಿಳಿದು ರಣಕಹಳೆ ಊದಿದ ಟ್ರಂಪ್ ಸ್ಥಿತಿಯೂ ಇಂದು ಹಾಗೇ ಆಗಿದೆ. ಚೀನಾ, ಕೆನಡಾ, ಮೆಕ್ಸಿಕೊ ಹಾಗೂ ಐರೋಪ್ಯ ದೇಶಗಳು ಎಲ್ಲವೂ ಟ್ರಂಪ್ ಭಾವಿಸಿದಂತೆ ಶರಣಾಗಿಲ್ಲ. ಸೆಡ್ಡು ಹೊಡೆದು, ಮರುಪಟ್ಟು ಹಾಕಿ, ಅಖಾಡಾಕ್ಕೆ ಇಳಿದಿವೆ.
ವ್ಯಾಪಾರದ ಕೊರತೆ ಅಮೇರಿಕಾಕ್ಕೆ ಹೊಸದೇನೂ ಅಲ್ಲ. ೧೯೭೫ರಿಂದಲೇ ಈ ಪ್ರವೃತ್ತಿ ಪ್ರಾರಂಭವಾಗಿದೆ. ಇದು ಕ್ರಮೇಣ ಹೆಚ್ಚುತ್ತಾ ಕಳೆದ ವರ್ಷ ೧.೨ ಟ್ರಿಲಿಯನ್ ಡಾಲರ್ ತಲುಪಿ ದಾಖಲೆ ಸೃಷ್ಟಿಸಿದೆ. ಅಂದರೆ ಅಮೇರಿಕೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುವುದಕ್ಕಿಂತ ೧.೨ ಟ್ರಿಲಿಯನ್ ಡಾಲರ್‌ನಷ್ಟು ಹೆಚ್ಚು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಅದರ ಅರ್ಥ ಇಷ್ಟೆ, ಅಮೇರಿಕೆಯಲ್ಲಿ ತನ್ನ ದೇಶಕ್ಕೆ ಬೇಕಾದಷ್ಟು ಸರಕುಗಳು ಉತ್ಪಾದನೆಯಾಗುತ್ತಿಲ್ಲ. ಅದು ಸ್ವಾಭಾವಿಕ ಕೂಡ. ದೇಶ ಹೆಚ್ಚೆಚ್ಚು ಅಭಿವೃದ್ಧಿ ಹೊಂದಿದಂತೆ ಆರ್ಥಿಕತೆ ಸೇವಾಕ್ಷೇತ್ರದ ಕಡೆಗೆ ವಾಲುತ್ತದೆ. ಅಮೇರಿಕೆಯಲ್ಲಿನ ಕಾರ್ಖಾನೆಗಳು ಕಡಿಮೆ ಕೂಲಿಗೆ ಕೆಲಸಗಾರರು ಸಿಗುವ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತವೆ. ಉತ್ಪಾದನಾ ವೆಚ್ಚವನ್ನು ತಗ್ಗಿಸುವುದಕ್ಕೆ ಅಮೇರಿಕೆಯೂ ಅದೇ ಕೆಲಸ ಮಾಡಿತ್ತು. ಚೀನಾ, ವಿಯೆಟ್ನಾಂ ಹೀಗೆ ಬೇರೆ ಬೇರೆ ದೇಶಗಳಿಗೆ ಕಾರ್ಖಾನೆಗಳನ್ನು ಸ್ಥಳಾಂತರಿಸಿತ್ತು. ಅದಕ್ಕಾಗಿ ಹಲವು ಒಪ್ಪಂದಗಳನ್ನು ಮಾಡಿಕೊಂಡಿತ್ತು. ನಾಫ್ಟ್ ಒಪ್ಪಂದ ಮೆಕ್ಸಿಕೊ, ಅಮೇರಿಕ ಹಾಗೂ ಕೆನಡಾ ನಡುವೆ ಮುಕ್ತ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮೆಕ್ಸಿಕೊದಲ್ಲಿ ದೊಡ್ಡ ಫ್ಯಾಕ್ಟರಿ ಪ್ರಾರಂಭಿಸಿ, ಕಡಿಮೆ ಕೂಲಿಗೆ ದೊರೆಯುವ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮಾಡಿ ೨೦೦ ಮೈಲಿಯಾಚೆಯ ಟೆಕ್ಸಾಸ್‌ಗೆ ಸಾಗಿಸಬಹುದಿತ್ತು. ಅದಕ್ಕೆ ಯಾವುದೇ ತೆರಿಗೆಯನ್ನಾಗಲಿ, ಸುಂಕವನ್ನಾಗಲಿ ತೆರಬೇಕಾಗಿರಲಿಲ್ಲ. ಆದರೆ ಈಗ ಟ್ರಂಪ್ ಇನ್ನು ಮುಂದೆ ಅದು ಸಾಧ್ಯವಿಲ್ಲ. ನೀವು ಫ್ಯಾಕ್ಟರಿಯನ್ನೇ ಟೆಕ್ಸಾಸ್‌ಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಸುಂಕ ತೆರಬೇಕು ಅನ್ನುತ್ತಿದ್ದಾರೆ. ತಾವೇ ಮಾಡಿಕೊಂಡ ಒಪ್ಪಂದಕ್ಕೆ ವಿದಾಯ ಹೇಳಿದ್ದಾರೆ.
ನಿಜ, ಉತ್ಪಾದನೆಯನ್ನು ಬೇರೆ ದೇಶಗಳಿಗೆ ವರ್ಗಾಯಿಸಿದ್ದರಿಂದ ಅಮೇರಿಕೆ ಸುಮಾರು ೯೦,೦೦೦ ಫ್ಯಾಕ್ಟರಿಗಳನ್ನು ಹಾಗೂ ಹಲವು ಲಕ್ಷ ಉದ್ಯೋಗಗಳನ್ನು ಕಳೆದುಕೊಂಡಿತು. ತನಗೆ ಬೇಕಾದ ಸರಕುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಯಿತು. ವ್ಯಾಪಾರದ ಕೊರತೆ ಏರುತ್ತಾ ಹೋಗುತ್ತಿದೆ. ಇವೆಲ್ಲಾ ನಿಜ. ಆದರೆ ಇವೆಲ್ಲಾ ಆಗಿದ್ದೂ ಅಮೇರಿಕೆಯ ಅನುಕೂಲಕ್ಕೆ ಅನ್ನುವುದನ್ನು ಟ್ರಂಪ್ ಮರೆಯಬಾರದು. ಉತ್ಪಾದನಾ ಕ್ಷೇತ್ರಕ್ಕಿಂತ ಸೇವಾಕ್ಷೇತ್ರ ಹೆಚ್ಚು ಲಾಭದಾಯಕ ಆಗಿದ್ದರಿಂದಲೇ ಶ್ರೀಮಂತ ದೇಶಗಳು ಕಾರ್ಖಾನೆಗಳನ್ನು ಬೇರೆ ದೇಶಗಳಿಗೆ ವರ್ಗಾಯಿಸಿ, ಸೇವಾಕ್ಷೇತ್ರ ಬೆಳೆಸುವ ಕಡೆ ಗಮನಕೊಟ್ಟಿದ್ದು. ಇಂದು ಜಗತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳ ಪ್ರಾಬಲ್ಯವಿರುವುದೇ ಸೇವಾಕ್ಷೇತ್ರದಲ್ಲಿ. ಅವೇ ಬಹುತೇಕ ಉದ್ಯೋಗವನ್ನು ಸೃಷ್ಟಿಸುತ್ತಿರುವುದು. ಅಮೇರಿಕೆಯಲ್ಲಿ ಶೇಕಡ ೮೬ರಷ್ಟು ಜನ ಇರುವುದೇ ಸೇವಾಕ್ಷೇತ್ರದಲ್ಲಿ. ಉತ್ಪಾದನೆ ಕೇವಲ ೧೦% ಜನರಿಗೆ ಉದ್ಯೋಗ ಸೃಷ್ಟಿಸಿದೆ. ಅಮೇರಿಕಾ ಇಂದು ಜಗತ್ತಿಗೆ ಬಹುತೇಕ ರಫ್ತು ಮಾಡುತ್ತಿರುವುದು ಸಾಫ್ಟ್‌ವೇರ್, ಮನರಂಜನೆ ಹಾಗೂ ಹಣಕಾಸು ಸೇವೆ ಇತ್ಯಾದಿ ಸೇವೆಗಳನ್ನು. ಜನರ ವರಮಾನ ಬೆಳೆದಂತೆ ಸೇವಾ ಕ್ಷೇತ್ರದಲ್ಲಿ ಅವರು ಮಾಡುವ ಖರ್ಚು ಹೆಚ್ಚುತ್ತಾ ಹೋಗುತ್ತದೆ. ೧೯೬೦ರಲ್ಲಿ ಬಹುತೇಕ ಅಮೇರಿಕನ್ನರು ಶೇಕಡ ೫೦ಕ್ಕಿಂತ ಹೆಚ್ಚು ಹಣವನ್ನು ಸರಕುಗಳನ್ನು ಕೊಳ್ಳುವುದಕ್ಕೆ ಬಳಸುತ್ತಿದ್ದರು. ಈಗ ಅದು ಶೇಕಡ ೧೫ರಷ್ಟೂ ಇಲ್ಲ. ಹಾಗೆಯೇ ಉದ್ದಿಮೆದಾರರು ಹೆಚ್ಚು ಲಾಭ ಮಾಡುತ್ತಿರುವುದು ಸರಕು ಉತ್ಪಾದನೆಯಲ್ಲಿ ಅಲ್ಲ. ಅವರು ಹಣ ಮಾಡಿಕೊಳ್ಳುತ್ತಿರುವುದು ವಿನ್ಯಾಸ ಹಾಗೂ ಮಾರಾಟದಲ್ಲಿ. ಉದಾಹರಣೆಗೆ ಐಫೋನ್ ತೆಗೆದುಕೊಳ್ಳಿ. ಯಾವುದೇ ಉತ್ಪಾದನೆಯನ್ನೂ ಮಾಡದ ಆಪಲ್ ಕಂಪೆನಿ ಒಟ್ಟು ಮಾರುಕಟ್ಟೆ ಬೆಲೆಯ ಶೇಕಡ ೬೦ರಷ್ಟನ್ನು ಪಡೆದುಕೊಳ್ಳುತ್ತಿದೆ. ಉತ್ಪಾದಿಸುವವರಿಗೆ ಸಿಗುವುದು ಶೇಕಡ ೩೦. ಅದರಲ್ಲೂ ಅಸೆಂಬಲ್ ಮಾಡುವುದಕ್ಕೆ ಸಿಗುವುದು ಕೇವಲ ಶೇಕಡ ೪. ಅಂದರೆ ಭಾರತದಂತಹ ದೇಶಗಳಲ್ಲಿ ಆಗುತ್ತಿರುವ ಕೆಲಸಕ್ಕೆ ಸಿಗುತ್ತಿರುವುದು ಪ್ರತಿ ನೂರು ರೂಪಾಯಿಗೆ ಕೇವಲ ೪ ರೂಪಾಯಿ.
ಸೇವಾಕ್ಷೇತ್ರದಲ್ಲಿ ಅಮೇರಿಕೆ ವಿಪರೀತ ಲಾಭ ಮಾಡಿಕೊಳ್ಳುತ್ತಿದೆ ಎಂದು ರಿಕಾರ್ಡೊ ಹಾಸ್‌ಮನ್ ಹೇಳುತ್ತಿರುವುದು ಸರಿ. ಆಮದು ಮಾಡಿಕೊಳ್ಳುತ್ತಿರುವುದಕ್ಕಿಂತ ಹಲವು ಪಟ್ಟು ಮೌಲ್ಯದ ಸೇವೆಯನ್ನು ರಫ್ತು ಮಾಡುತ್ತಿದೆ. ೨೦೨೩ರಲ್ಲಿ ಹೀಗೆ ಮಾಡಿದ ಹೆಚ್ಚುವರಿ ವ್ಯಾಪಾರದ ಮೌಲ್ಯ ಸುಮಾರು ೨೭೮ ಬಿಲಿಯನ್ ಡಾಲರ್ ಅಷ್ಟಿತ್ತು. ಇದು ನೇರವಾಗಿ ಅಮೇರಿಕೆಯಿಂದ ರಫ್ತಾದ ಸೇವೆಗಳು. ಇದರ ಜೊತೆಗೆ ವಿದೇಶದಲ್ಲಿರುವ ಅಮೇರಿಕೆಯ ಉದ್ದಿಮೆಗಳ ವಹಿವಾಟನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇದು ಹಲವು ಪಟ್ಟು ಹೆಚ್ಚು. ಅಮೇರಿಕೆಯ ಆಪಲ್, ಗೂಗಲ್ ಇತ್ಯಾದಿ ಕಂಪೆನಿಗಳು ೨೦೨೪ರಲ್ಲಿ ವಿದೇಶದಲ್ಲಿರುವ ಉದ್ದಿಮೆಗಳು ೬೩೨ ಬಿಲಿಯನ್ ಡಾಲರ್‌ನಷ್ಟು ಲಾಭ ಗಳಿಸಿದ್ದವು. ಇದನ್ನೂ ಸೇರಿಸಿಕೊಂಡರೆ ಅಮೇರಿಕೆಯ ಸೇವಾಕ್ಷೇತ್ರದ ವ್ಯಾಪಾರದ ಮಿಗುತಾಯ ೧ ಟ್ರಿಲಿಯನ್ ಗಡಿಯಲ್ಲಿದೆ. ಅಮೇರಿಕೆಯ ಉದ್ದಿಮೆಗಳು ವಿದೇಶದಲ್ಲಿ ಗಳಿಸುತ್ತಿರುವ ಲಾಭವನ್ನು ಆಧರಿಸಿ ಲೆಕ್ಕ ಹಾಕಿದರೆ ಹಾಸ್‌ಮನ್ ಹೇಳುವಂತೆ ೨೦೨೪ರಲ್ಲಿ ಅಮೇರಿಕೆಯ ಉದ್ದಿಮೆಗಳ ವಿದೇಶಿ ಹೂಡಿಕೆ ಸುಮಾರು ೧೬.೪ ಟ್ರಿಲಿಯನ್ ಡಾಲರ್ ಆಗುತ್ತದೆ. ಆದರೆ ಅಮೇರಿಕೆಯಲ್ಲಿ ಬೇರೆ ದೇಶಗಳ ಉದ್ದಿಮೆಗಳ ಹೂಡಿಕೆಯ ಮೌಲ್ಯ ಕೇವಲ ೩೪೭ ಬಿಲಿಯನ್.
ಆದರೂ ಹಿಂದುಳಿದ ದೇಶಗಳು ಕೂಡ ಅಮೇರಿಕೆಯ ಬೌದ್ಧಿಕ ಆಸ್ತಿಯನ್ನು ಜತನದಿಂದ ಕಾಪಾಡುತ್ತಿದೆ. ತಮ್ಮ ದೇಶದ ಉದ್ದಿಮೆಗಳ ಹಿತಾಸಕ್ತಿಗೆ ಅನ್ಯಾಯವಾದರೂ ತಾವು ಎಂದೋ ಮಾಡಿಕೊಂಡ ಒಪ್ಪಂದಕ್ಕೆ ಆತುಕೊಂಡೇ ಇದೆ. ೧೯೯೪ರಲ್ಲಿ ನಡೆದ ಟ್ರಿಪ್ಸ್ ಒಪ್ಪಂದದ ಉರುಗ್ವೆ ಸುತ್ತಿನ ಮಾತುಕತೆಯಲ್ಲಿ ಶ್ರೀಮಂತ ರಾಷ್ಟ್ರಗಳ ಬೌದ್ಧಿಕ ಆಸ್ತಿಗೆ ರಕ್ಷಣೆಗೆ ರಕ್ಷಣೆ ಕೊಡುವುದಾಗಿ ಇವು ಒಪ್ಪಿಕೊಂಡಿದ್ದವು. ಆಗ ಅಮೇರಿಕೆಯೂ ಈ ದೇಶದ ಸರಕುಗಳಿಗೆ ತಮ್ಮ ಮಾರುಕಟ್ಟೆಯಲ್ಲಿ ಮುಕ್ತವಾಗಿ ಅವಕಾಶಕೊಡುತ್ತೇನೆಂದು ಒಪ್ಪಿಕೊಂಡಿತ್ತು. ಆದರೆ ಇಂದು ಟ್ರಂಪ್ ಅದಕ್ಕೆ ಬದ್ಧನಾಗಿಲ್ಲ. ಈ ರಾಷ್ಟ್ರಗಳ ಸರಕುಗಳ ಮೇಲೆ ಸುಂಕ ಹಾಕಿ ತಾವೇ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯುತ್ತಿದ್ದಾರೆ. ಜಗತ್ತೆಲ್ಲಾ ತಮಗೆ ಅನ್ಯಾಯವಾಗುತ್ತಿದೆ ಅಂತ ದೂರುತ್ತಿದ್ದಾರೆ. ವ್ಯಾಪಾರದ ಕೊರತೆಯೇ ಅನ್ಯಾಯದ ಸೂಚಿಯಾದರೆ ಅಮೇರಿಕೆಯೂ ಸೇವಾಕ್ಷೇತ್ರದಲ್ಲಿ ಬೇರೆ ದೇಶಗಳಿಗೆ ವಿಪರೀತ ವಂಚನೆ ಮಾಡುತ್ತಿದೆ. ಹಾಗಾಗಿ ಟ್ರಂಪ್ ನಡೆಯೇ ಮಾದರಿಯಾಗುವುದಾದರೆ ಈ ದೇಶಗಳೂ ತಾವು ಮಾಡಿಕೊಂಡ ಒಪ್ಪಂದಕ್ಕೆ ಬದ್ಧರಾಗಿರಬೇಕಾಗಲಿಲ್ಲ. ತಮ್ಮ ದೇಶದ ತಂತ್ರಜ್ಞಾನ, ಔಷಧಿ ಹಾಗೂ ಮನರಂಜನಾ ಕ್ಷೇತ್ರದ ಹಿತಾಸಕ್ತಿಯನ್ನು ಬದಿಗೊತ್ತಿ ಅಮೇರಿಕೆಯ ಉದ್ದಿಮೆಗಳ ಹಿತಾಸಕ್ತಿಯನ್ನು ಕಾಪಾಡಬೇಕಾಗಿಲ್ಲ.
ಹಾಗಾಗಿ ಹಿಂದುಳಿದ ದೇಶಗಳಿಗೆ ಸರಕುಗಳ ಮೇಲೆ ಪ್ರತಿಸುಂಕ ಹಾಕುವುದೊಂದೇ ದಾರಿಯಲ್ಲ, ಸೇವಾ ಕ್ಷೇತ್ರದಲ್ಲಿನ ಹೂಡಿಕೆಯ ಮೇಲೂ ಸುಂಕ ಹಾಕಬಹುದು. ಅಷ್ಟೇ ಅಲ್ಲ, ನಮ್ಮ ದೇಶಗಳಲ್ಲಿ ಅಪಾರ ಲಾಭ ಮಾಡಿಕೊಳ್ಳುತ್ತಿರುವ ಕಾರ್ಪೊರೇಟ್ ಉದ್ಯಮಿಗಳ ಲಾಭದ ಮೇಲೂ ತೆರಿಗೆ ಹಾಕಬಹುದು. ಭಾರತ ಷರತ್ತುಗಳಿಗೆ ಮಣಿದರೆ ರೈತರು, ಕಾರ್ಮಿಕರು, ಸಣ್ಣಪುಟ್ಟ ಉದ್ದಿಮೆಗಳು ದಿಕ್ಕೆಡಬೇಕಾಗುತ್ತದೆ.