
ಕೋವಿಡ್ ಪಿಡುಗಿನ ಸಮಯಲ್ಲಿ ಅಮೇರಿಕೆಯಲ್ಲಿ ಟ್ರಂಪ್ನ ಕೆಲವು ಗೆಳೆಯರು ತಾವು ಮಾಸ್ಕ್ ಧರಿಸುವುದಿಲ್ಲ. ಅದು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಅಂತ ಗಲಾಟೆ ಮಾಡುತ್ತಿದ್ದರು. ಮಾಸ್ಕ್ ಧರಿಸುವುದರಿಂದ ಸ್ವಲ್ಪ ಅನಾನುಕೂಲವಾಗಬಹುದು. ಆದರೆ ಮಾಸ್ಕ್ ಧರಿಸದೇ ಇರುವುದರಿಂದ ಉಳಿದವರ ಸ್ವಾತಂತ್ರಕ್ಕೆ ಅಂದರೆ ಅವರ ಬದುಕುವ ಹಕ್ಕಿಗೆ ಅಡ್ಡಿ ಮಾಡುತ್ತೇವೆ ಎಂದು ಜೋಸೆಫ್ ಸ್ಟಿಗ್ಲಿಟ್ಜ್ ವಾದಿಸುತ್ತಿದ್ದರು. ಒಬ್ಬರ ಸ್ವಾತಂತ್ರ್ಯ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಈ ಚಿಂತನೆ ಬೆಳೆದು “ರೋಡ್ ಟು ಫ್ರೀಡಂ: ಎಕನಾಮಿಕ್ಸ್ ಅಂಡ್ ದಿ ಗುಡ್ ಸೊಸೈಟಿ” ಒಂದು ಹೊಸ ಪುಸ್ತಕವಾಗಿ ಹೊರಬಂದಿದೆ.
ಜನರಿಗೆ ಬಂದೂಕು ಇಟ್ಟುಕೊಳ್ಳುವುದಕ್ಕೆ, ದ್ವೇಷ ಭಾಷಣ ಮಾಡುವುದಕ್ಕೆ, ಮಾಸ್ಕ್ ಧರಿಸದೇ ಇರುವುದಕ್ಕೆ ಸ್ವಾತಂತ್ರ್ಯವಿರಬೇಕು ಎಂದು ಕೆಲವರು ಭಾವಿಸಿದ್ದಾರೆ. ಇಂತದ್ದೇ ಸ್ವಾತಂತ್ರ್ಯ ಕಲ್ಪನೆಯನ್ನು ಆರ್ಥಿಕ ಕ್ಷೇತ್ರದಲ್ಲೂ ಕೆಲವರು ಬಯಸುತ್ತಾರೆ. ಕಾರ್ಪೊರೇಟ್ ಬಂಡವಾಳಿಗರಿಗೂ ಇಂತಹದ್ದೇ ಸ್ವಾತಂತ್ರ್ಯ ಇರಬೇಕು ಎಂದು ನವ ಉದಾರವಾದೀ ಅರ್ಥಶಾಸ್ತ್ರಜ್ಞರು ವಾದಿಸುತ್ತಾರೆ. ಕಾರ್ಪೊರೇಟ್ ಉದ್ದಿಮೆಗಳ ಚಟುವಟಿಕೆಗಳಿಂದ ಭೂಮಿಗೆ ಹಾನಿಯಾಗಬಹುದು. ಪರಿಸರ ಶಾಶ್ವತವಾಗಿ ನಾಶವಾಗಬಹುದು. ಆದರೂ ಮುಕ್ತ ಮಾರುಕಟ್ಟೆ ನೀತಿಯಲ್ಲಿ ವಿಶ್ವಾಸವಿಡಬೇಕು. ಅದು ಅಂತಿಮವಾಗಿ ಎಲ್ಲವನ್ನು ಸರಿಪಡಿಸುತ್ತದೆ ಎಂಬುದು ಅವರ ವಾದ. ಇನ್ನೂ ಮುಂದುವರಿದು ಅವರು ಬ್ಯಾಂಕುಗಳನ್ನು ಹಾಗೂ ಇತರ ಹಣಕಾಸು ಸಂಸ್ಥೆಗಳನ್ನು ನಿಯಂತ್ರಣಗಳಿಂದ ಮುಕ್ತಗೊಳಿಸಬೇಕು. ಅವುಗಳ ವ್ಯವಹಾರಗಳಿಂದ ಇಡೀ ಆರ್ಥಿಕತೆ ನೆಲಕಚ್ಚುತ್ತಿರಬಹುದು. ಆದರೂ ಅವನ್ನು ನಿಯಂತ್ರಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ. ಸ್ಟಿಗ್ಲಿಟ್ಜ್ ಹೇಳುವಂತೆ ಇದು ತೀರಾ ಸರಳೀಕೃತವಾದ, ಒರಟಾದ ಸ್ವಾತಂತ್ರ್ಯದ ಪರಿಕಲ್ಪನೆ. ೨೦೦೮ರ ಹಣಕಾಸಿನ ಬಿಕ್ಕಟ್ಟು, ಕೊರೋನ ಪಿಡುಗಿನ ಅವಾಂತರ, ತೀವ್ರವಾಗುತ್ತಿರುವ ಹವಾಮಾನ ಬಿಕ್ಕಟ್ಟು ಇವುಗಳನ್ನು ನೋಡಿದ ಮೇಲೆ ಇದು ಸ್ಪಷ್ಟವಾಗಬೇಕು.
ತೋಳಗಳಿಗೆ ಸ್ವಾತಂತ್ರ ಕೊಡುವುದು ಅಂದರೆ ಕುರಿಗಳನ್ನು ಸಾವಿನ ದವಡೆಗೆ ತಳ್ಳುವುದು ಅಂತಲೇ ಎಂದು ದಾರ್ಶನಿಕ ಇಸಯ್ಯ ಬರ್ಲಿನ್ ಹೇಳುತ್ತಿದ್ದಾನೆ. ಒಬ್ಬರಿಗೆ ನೀಡುವ ಸ್ವಾತಂತ್ರ್ಯದಿಂದ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುತ್ತೇವೆ. ಅಮೇರಿಕನ್ನರಿಗೆ ಬಂದೂಕು ಹೊಂದುವುದಕ್ಕೆ ಸ್ವಾತಂತ್ರ್ಯ ನೀಡುವುದು ಅಂದರೆ ಗುಂಡಿಗೆ ಬಲಿಯಾಗದೆ ಶಾಲೆಗೆ ಹೋಗುವ ಸ್ವಾತಂತ್ರ್ಯವನ್ನು ಮಕ್ಕಳಿಂದ ಕಸಿದುಕೊಂಡಂತೆ. ಬಂದೂಕನ್ನು ಹೊಂದುವ ಸ್ವಾತಂತ್ರ್ಯದಿಂದಾಗಿ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಅವರಿಗೆ ಹೆದರಿಕೆಯಿಲ್ಲದೆ ಬದುಕುವ ಸ್ವಾತಂತ್ರ್ಯ ಇಲ್ಲವಾಗಿದೆ.
ಪರಿಪೂರ್ಣ ಸ್ವಾತಂತ್ರ್ಯ ಎಂದು ಯಾವುದೂ ಇಲ್ಲ. ವಿವಿಧ ಸ್ವಾತಂತ್ರ್ಯಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಬೇಕು. ಬದುಕಲು ಇರುವ ಸ್ವಾತಂತ್ರ್ಯ ಬಂದೂಕು ಹೊಂದುವುದಕ್ಕೆ ಇರುವ ಸ್ವಾತಂತ್ರ್ಯಕ್ಕಿಂತ ಶ್ರೇಷ್ಠವಾದದ್ದು. ಬಂದೂಕು ಮಾಲೀಕರ ಹಕ್ಕನ್ನು ಉಳಿದವರ ಬದುಕುವ ಹಕ್ಕಿಗಿಂತ ದೊಡ್ಡದಾಗಿ ನೋಡುವುದಕ್ಕಾಗುವುದಿಲ್ಲ. ಸಾಮಾಜಿಕ ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ಹರಡುವುದಕ್ಕೆ ಇರುವ ಸ್ವಾತಂತ್ರ್ಯಕ್ಕಿಂತ ಮಾಹಿತಿಯ ಜಗತ್ತು ಮಲಿನಗೊಳ್ಳದಿರುವುದು ಹೆಚ್ಚು ಮುಖ್ಯ. ಸಮಾಜದ ಮೇಲೆ ತೀವ್ರ ದುಷ್ಪರಿಣಾಮಗಳಾಗುತ್ತಿದ್ದರೂ ಸುಳ್ಳು ಮಾಹಿತಿ ಹರಡುವುದರಿಂದಲೇ ಕೋಟ್ಯಾಂತರ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಸ್ವಾತಂತ್ರ್ಯ ಬಲು ಮುಖ್ಯವಾದ ಮೌಲ್ಯ. ಅದನ್ನು ನಾವು ಅನುಭವಿಸಬೇಕು. ಆದರೆ ಈ ಸ್ವಾತಂತ್ರ್ಯದ ಪರಿಕಲ್ಪನೆ ಇಂದು ಬಲಪಂಥೀಯರು, ಸಾಂಪ್ರದಾಯವಾದಿಗಳು ಹೇಳವಷ್ಟು ಸರಳವಾದುದಲ್ಲ. ಅದು ಹೆಚ್ಚು ಸಂಕೀರ್ಣವಾದದ್ದು. ಅವರು ತಮ್ಮನ್ನು ಸ್ವಾತಂತ್ರದ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಬಹು ಸಂಖ್ಯಾತರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಿರುತ್ತಾರೆ. ಸ್ಟಿಗ್ಲಿಟ್ಜ್ ತಮ್ಮ ಗ್ರಂಥದಲ್ಲಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಜಾನ್ ಸ್ಟುವಾರ್ಟ್ ಮಿಲ್ ಇಂದ ಪ್ರಾರಂಭಿಸಿ ಹಯೆಕ್, ಮಿಲ್ಟನ್ ಫ್ರೀಡ್ಮನ್, ಅಷ್ಟೇ ಅಲ್ಲ ರೋನಾಲ್ಡ್ ರೀಗನ್ ಹಾಗೂ ಡೋನಾಲ್ಡ್ ಟ್ರಂಪ್ ಅವರ ವಿಚಾರಗಳನ್ನು ವಿಶ್ಲೇಷಿಸುತ್ತಾರೆ. ಇವರೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ವಾತಂತ್ರ್ಯದ ಜೊತೆ ಸಮೀಕರಿಸಿಬಿಟ್ಟಿದ್ದಾರೆ. ಆದರೆ ಬಂಡವಾಳಶಾಹಿ ಬಯಸುವುದು ಶೋಷಿಸುವುದಕ್ಕೆ ಸ್ವಾತಂತ್ರ್ಯ. ನಿರಂತರ ಲಾಭಕ್ಕೆ ಸ್ವಾತಂತ್ರ್ಯ.
ಅರ್ಥಶಾಸ್ತ್ರದಲ್ಲಿ ಬಂದೂಕು ಸಂಸ್ಕೃತಿ ಸೃಷ್ಟಿಸುವ ಹಿಂಸೆ, ಕೊರೋನದಂತಹ ಸೋಂಕು ಹರಡುವುದು ಇವೆಲ್ಲಾ ಎಕ್ಸಟರ್ನಾಲಿಟಿ ಅಥವಾ ಬಾಹ್ಯ ಪರಿಣಾಮ ಅನಿಸಿಕೊಳ್ಳುತ್ತವೆ. ಅಂದರೆ ಕೆಲವು ಅರ್ಥಿಕ ಕ್ರಿಯೆಗಳಿಂದ ಅಥವಾ ಮಾರುಕಟ್ಟೆ ವ್ಯವಹಾರಗಳಿಂದ ಹೊರ ಜಗತ್ತಿನ ಮೇಲೆ ಆಗುವ ದುಷ್ಪರಿಣಾಮಗಳು.
ಆ ರೀತಿಯಲ್ಲಿ ಈ ವಿಶ್ವದ ಮೇಲೆ ಆದ ಅತ್ಯಂತ ದೊಡ್ಡ ಬಾಹ್ಯ ಪರಿಣಾಮ ಅಂದರೆ ಅಂದರೆ ವಾಯು ಮಾಲಿನ್ಯ ಹಾಗೂ ಹವಾಮಾನ ಬದಲಾವಣೆ. ದೊಡ್ಡ ಉದ್ದಿಮೆದಾರರಿಗೆ ವಿಷಾನಿಲವನ್ನು ಸೃಷ್ಟಿಸುವುದಕ್ಕೆ ಇರುವ ಸ್ವಾತಂತ್ರ್ಯ ಇದಕ್ಕೆ ಕಾರಣ. ಇಂತಹ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದರಿಂದ ಮುಂದಿನ ತಲೆಮಾರಿನವರಿಗೆ ಒಳ್ಳೆಯ ಜಗತ್ತಿನಲ್ಲಿ ಬದುಕುವ ಸ್ವಾತಂತ್ರ್ಯ ಹೆಚ್ಚುತ್ತದೆ. ಕೆಟ್ಟ ಹವಾಮಾನ ಹಾಗೂ ಸಮುದ್ರದ ಮಟ್ಟದಲ್ಲಿ ಆಗುವ ಬದಲಾವಣೆಗೆ ಹೊಂದಿಕೊಳ್ಳುವುದಕ್ಕೆ ಹಣ ತೆರಬೇಕಾದ ಅವಶ್ಯಕತೆ ಇರುವುದಿಲ್ಲ. ಹೀಗೆ ಹೇರುವ ನಿಯಂತ್ರಣ ಒಟ್ಟಾರೆ ಸಮಾಜಕ್ಕೆ ಹೆಚ್ಚಿನ ಒಳಿತಾಗುವುದರಿಂದ ಅವು ಸಮರ್ಥಿನೀಯ.
ಅರ್ಥಶಾಸ್ತ್ರದಲ್ಲಿ ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿಗೆ ಇರುವ ಆಯ್ಕೆಯ ಅವಕಾಶಗಳಿಂದ ಅಳೆಯಬಹುದು. ಆಯ್ಕೆಗೆ ಅವಕಾಶಗಳು ಹೆಚ್ಚಿದ್ದಷ್ಟು ಅವನಿಗೆ ಸ್ವಾತಂತ್ರ್ಯ ಹೆಚ್ಚಿದೆ ಅಂತಲೇ ಅರ್ಥ. ಒಬ್ಬ ಹೊಟ್ಟಿಗೇ ಇಲ್ಲದ ಸ್ಥಿತಿಯಲ್ಲಿದ್ದಾನೆ ಅಂದರೆ ಅವನಿಗೆ ಸ್ವಾತಂತ್ರವೇ ಇಲ್ಲ ಎಂತಲೇ ಅರ್ಥ. ಅಂದರೆ ಅವನಿಗೆ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅವಕಾಶವೇ ಇಲ್ಲ. ಒಂದು ಸಮಾಜದಲ್ಲಿ ಬಹುತೇಕ ಜನರು ಇಂತಹದೇ ಸ್ಥಿತಿಯಲ್ಲಿದ್ದರೆ ಆ ದೇಶದಲ್ಲಿ ಸ್ವಾತಂತ್ರ್ಯವಿಲ್ಲ ಅಂತಲೇ ಭಾವಿಸಬೇಕು. ಅಂದರೆ ಅಸಮಾನತೆ ಹಾಗೂ ಬಡತನ ಹೆಚ್ಚಿರುವ ದೇಶಗಳನ್ನು ಸ್ವತಂತ್ರ ದೇಶಗಳು ಎಂದು ಹೇಳಲಾಗುವುದಿಲ್ಲ. ಹಾಗಾಗಿ ಸ್ವತಂತ್ರ್ಯವನ್ನು ಹೆಚ್ಚಿಸುವುದು ಅಂದರೆ ಇಂತಹ ಆಯ್ಕೆಯ ಅವಕಾಶಗಳನ್ನು ಹೆಚ್ಚಿಸುವುದು. ಜನರ ಆಯ್ಕೆಗೆ ಮಿತಿ ಇರುತ್ತದೆ. ಈ ಮಿತಿಯನ್ನು ವಿಸ್ತರಿಸಿದಷ್ಟು ಅವರ ಸ್ವಾತಂತ್ರ್ಯ ಹೆಚ್ಚುತ್ತದೆ. ಬಡತನ, ನಿರುದ್ಯೋಗ ಅಥವಾ ಅನಾರೋಗ್ಯ ಇವೆಲ್ಲಾ ಮನುಷ್ಯನ ಸ್ವಾತಂತ್ರ್ಯವನ್ನು ತುಂಬಾ ಕುಗ್ಗಿಸುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ ಸರ್ಕಾರಗಳು ನೀಡುವ ಹಣಕಾಸಿನ ಬೆಂಬಲ ಹಾಗೂ ಶಿಕ್ಷಣ, ತರಬೇತಿ, ಆರೋಗ್ಯದ ನೆರವು, ಸಬ್ಸಿಡಿಗಳು ಜನರ ಸ್ವಾತಂತ್ರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಸರ್ಕಾರಗಳು ಶಿಕ್ಷಣ, ಮೂಲಭೂತ ಸೌಕರ್ಯ ಹಾಗೂ ಮೂಲಭೂತ ಸಂಶೋಧನೆಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕು. ಅದರಿಂದ ಒಟ್ಟಾರೆ ಜನರ ಆಯ್ಕೆಯ ಅವಕಾಶಗಳು ಅಂದರೆ ಸ್ವಾತಂತ್ರ್ಯ ಹೆಚ್ಚುತ್ತದೆ. ಆದರೆ ಹೀಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡುವುದಕ್ಕೆ ಸರ್ಕಾರಕ್ಕೆ ಹಣಬೇಕು. ಹಣವನ್ನು ಕ್ರೋಡೀಕರಿಸುವುದಕ್ಕೆ ಇರುವ ದಾರಿ ಅಂದರೆ ತೆರಿಗೆ ವಿಧಿಸುವುದು ಅನಿವಾರ್ಯ. ಆದರೆ ಇಂದಿನ ಸಮಾಜದಲ್ಲಿ ಬಂಡವಾಳಿಗರ ದುರಾಸೆಯನ್ನು ವೈಭವೀಕರಿಸಲಾಗುತ್ತಿದೆ. ಅವರ ಮೇಲೆ ತೆರಿಗೆ ವಿಧಿಸುವುದು ಅಪರಾಧ ಅನ್ನುವಂತೆ ಚಿತ್ರಿಸಲಾಗುತ್ತಿದೆ. ಇಡೀ ಜಗತ್ತು ಸಂಕಷ್ಟದಲ್ಲಿದ್ದ ಕೊರೋನ ಪಿಡುಗಿನ ಸಮಯದಲ್ಲಿ ಇವರ ಲಾಭ ವಿಪರೀತ ಏರಿದ್ದನ್ನು ನೋಡಿದ್ದೇವೆ. ಇವರು ತಮ್ಮ ಲಾಭದಲ್ಲಿ, ಸಂಪತ್ತಿನಲ್ಲಿ ಒಂದು ಪಾಲನ್ನು ಸಮಾಜದ ಒಳಿತಿಗೆ ನೀಡಬೇಕು. ಅಮರ್ತ್ಯ ಸೇನ್ ಆರ್ಥಿಕ ಬೆಳವಣಿಗೆಯನ್ನು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿ ನೋಡಿದ್ದರು.
ಆದರೆ ಮುಕ್ತ ಮಾರುಕಟ್ಟಿ ನೀತಿಯನ್ನು ಪ್ರತಿಪಾದಿಸುವ ಅರ್ಥಶಾಸ್ತ್ರಜ್ಞರು, ಸಾಂಪ್ರದಾಯಿಕ ರಾಜಕಾರಣಿಗಳು, ಉದ್ದಿಮೆದಾರರ ಪರವಾಗಿ ಲಾಬಿ ಮಾಡುವ ಗುಂಪುಗಳು ಇದನ್ನು ವಿರೋಧಿಸುತ್ತಾರೆ. ಹಾಗಾಗಿಯೇ ಸ್ಟಿಗ್ಲಿಟ್ಜ್ ಇವರನ್ನು ಪ್ರಬಲವಾಗಿ ಖಂಡಿಸುತ್ತಾರೆ. ಇವರೆಲ್ಲಾ ಸಮಾಜದ ಹಿತಕ್ಕೆ ವಿರುದ್ಧವಾಗಿ ಕೆಲವು ಶ್ರೀಮಂತರ ಹಾಗೂ ಪ್ರಬಲ ಹಿತಾಸಕ್ತಿಗಳಿಗೆ ಅನುಕೂಲವಾಗುವ ನೀತಿಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಬಂಡವಾಳಿಗರ ಸ್ವಾತಂತ್ರ್ಯವನ್ನು ವಿಸ್ತರಿಸುವ ನೀತಿಗಳನ್ನು ಉತ್ತೇಜಿಸುತ್ತಾ ಬಂದಿದ್ದಾರೆ. ಅವರ ಮೇಲಿನ ತೆರಿಗೆಯನ್ನು ಕಡಿತ ಮಾಡುವುದಕ್ಕೆ ಒತ್ತಾಯಿಸುತ್ತಿದ್ದಾರೆ. ಅದರಿಂದ ಹೂಡಿಕೆ ಹೆಚ್ಚುತ್ತದೆ. ಆರ್ಥಿಕ ಪ್ರಗತಿಯಾಗುತ್ತದೆ ಎಂದು ವಾದಿಸುತ್ತಾ ಬರುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯ ಅಂದರೆ ತೆರಿಗೆ ಹಾಗೂ ನಿಯಂತ್ರಣ ಇತ್ಯಾದಿಗಳಿಂದ ಮುಕ್ತವಾಗುವುದು ಎಂದುಕೊಂಡಿದ್ದಾರೆ. ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸರ್ಕಾರ ಮಾಡುವ ಹೂಡಿಕೆಯನ್ನು ವಿರೋಧಿಸುತ್ತಾರೆ. ಕೈಗಾರಿಕೆ ಹಾಗೂ ಹಣಕಾಸು ಕಾರ್ಪೋರೇಷನ್ನುಗಳ ಮೇಲಿನ ನಿಯಂತ್ರಣವನ್ನು ತಪ್ಪಿಸಬೇಕೆನ್ನುತ್ತಾರೆ.
ನವ ಉದಾರವಾದೀ ಅರ್ಥಶಾಸ್ತ್ರಜ್ಞರು ಆರ್ಥಿಕತೆಯನ್ನು ನಿಯಂತ್ರಣಗಳಿಂದ, ಕಾರ್ಪೋರೇಷನ್ನುಗಳ ಮೇಲಿನ ತೆರಿಗೆಯಿಂದ ಮುಕ್ತಗೊಳಿಸುವುದಕ್ಕೆ ಗಮನಕೊಟ್ಟಿದ್ದರು. ಆದರೆ ಸರಕುಗಳನ್ನು ಸಾಗಿಸಲು ರಸ್ತೆಗಳು, ಬಂದರುಗಳು, ಶಿಕ್ಷಿತ ಕಾರ್ಮಿಕರು ಹಾಗೂ ಒಪ್ಪಂದಗಳನ್ನು ಜಾರಿಗೊಳಿಸುವ ಕಾನೂನು ಇಲ್ಲದೇ ಹೋಗಿದ್ದರೆ ಅಮೇರಿಕೆಯಲ್ಲಿ ಉದ್ದಿಮೆಗಳು ಇರಲು ಸಾಧ್ಯವಾಗುತ್ತಿತ್ತಾ?
ಇವರೆಲ್ಲಾ ಖಾಸಗಿ, ಸರ್ಕಾರಿ, ಸಹಕಾರಿ, ಸ್ವಯಂಪ್ರೇರಿತ, ಹಾಗೂ ಲಾಭವಿಲ್ಲದ ಉದ್ದಿಮೆಗಳಿಂದ ಕೂಡಿದ್ದ ಸೊಗಸಾದ ಹಾಗೂ ಸಂಕೀರ್ಣವಾದ ಆರ್ಥಿಕತೆಯನ್ನು ಮುಕ್ತ ಉದ್ದಿಮೆಗಳ ಆರ್ಥಿಕತೆಯಾಗಿ ಬದಲಿಸಿಬಿಟ್ಟರು. ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಿದ್ದಾರೆ.
ಇವರಿಗೆ ಹೊಸದಾಗಿ ಮಾರುಕಟ್ಟೆಗೆ ಬರುವ ಉದ್ದಿಮೆದಾರರನ್ನು ತುಳಿದು ಹಾಕುವ ಸ್ವಾತಂತ್ರ್ಯಬೇಕು. ಕಾರ್ಮಿಕರನ್ನು ಹಿಂಡುವ ಸ್ವಾತಂತ್ರ್ಯ ಬೇಕು. ಬಳಕೆದಾರರನ್ನು ಒಟ್ಟಾಗಿ ಶೋಷಿಸುವ ಸ್ವಾತಂತ್ರ್ಯ ಬೇಕು. ಇದಕ್ಕೆ ಅನುಕೂಲವಾದ ಅನಿಯಂತ್ರಿತ ಅಧಿಕಾರವಿರುವ ಏಕಸ್ವಾಮ್ಯವನ್ನು ಅವರು ಬಯಸುತ್ತಾರೆ. ಅದು ಸ್ವತಂತ್ರ ವ್ಯವಸ್ಥೆ ಹೇಗಾಗುತ್ತದೆ. ಅದು ನಾವು ಬಯಸುವ ಆರ್ಥಿಕತೆಯಾಗುವುದಕ್ಕೆ ಸಾಧ್ಯವಿಲ್ಲ. ಅಲ್ಲಿ ಎಲ್ಲರೂ ಪ್ರಗತಿಯ ಫಲವನ್ನು ಹಂಚಿಕೊಂಡು ಬದುಕುವುದಕ್ಕೆ ಅವಕಾಶವಿರುವುದಕ್ಕೆ ಸಾಧ್ಯವಿಲ್ಲ. ಅದು ಭೌತಿಕ ಸಂಪತ್ತನ್ನು ಕ್ರೋಡೀಕರಿಸಲು ಹೊರಟಿರುವವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ವ್ಯವಸ್ಥೆ. ಅದು ನಮಗೆ ಬೇಕಿಲ್ಲ. ಇಂತಹ ನೀತಿಗಳಿಂದಾಗಿ ಅಸಮಾನತೆ, ಹವಾಮಾನದ ನಾಶ, ಕಾಪೋರೇಟ್ ಏಕಸ್ವಾಮ್ಯ, ೨೦೦೮ರ ಹಣಕಾಸು ಬಿಕ್ಕಟ್ಟು, ಬಲಪಂಥೀಯ ನಿರಂಕುಶ ಆಳ್ವಿಕೆ ಇವೆಲ್ಲಾ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗಾಗಿಯೇ ಸ್ಟಿಗಲಿಟ್ಜ್ ನವ ಉದಾರವಾದೀ ಆರ್ಥಿಕ ನೀತಿಗಳನ್ನು ಅಷ್ಟೊಂದು ತೀವ್ರವಾಗಿ ವಿರೋಧಿಸುವುದು.
ಇದಕ್ಕೆ ಪರ್ಯಾಯವಾಗಿ ಸ್ಟಿಗ್ಲಿಟ್ಜ್ ಪ್ರಗತಿಪರ ಬಂಡವಾಳಶಾಹಿ ವ್ಯವಸ್ಥೆಯನ್ನು ಸೂಚಿಸಿದ್ದಾರೆ. ಅದರಲ್ಲಿ ಸರ್ಕಾರ ಸಾಧ್ಯವಾದಷ್ಟು ತೆರಿಗೆಯನ್ನು ಸಂಗ್ರಹಿಸಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸುತ್ತದೆ. ಅಸಮಾನತೆಯನ್ನು ಕಡಿಮೆ ಮಾಡುವುದಕ್ಕೆ ನಿಯಂತ್ರಣಗಳನ್ನು ತರುತ್ತದೆ. ಕಾರ್ಪೊರೇಟ್ ಅಧಿಕಾರಕ್ಕೆ ಮಿತಿ ಹೇರುತ್ತದೆ. ಶಿಕ್ಷಣದಂತಹ ಮಾನವ ಬಂಡವಾಳ, ಸಹಕಾರ ಹಾಗೂ ವಿಶ್ವಾಸವನ್ನು ಮೂಡಿಸುವಂತಹ ನೀತಿಗಳು ಹಾಗೂ ಸಂಸ್ಥೆಗಳನ್ನು ಒಳಗೊಂಡ ಸಾಮಾಜಿಕ ಬಂಡವಾಳ ಹಾಗೂ ಒಳ್ಳೆಯ ಗಾಳಿ ಹಾಗೂ ತಾಳಿಕೆಯ ಪರಿಸರವಿರುವ ನೈಸರ್ಗಿಕ ಬಂಡವಾಳವನ್ನು ಬೆಳೆಸಲು ಪ್ರಯತ್ನಿಸುತ್ತದೆ. ಇವೆಲ್ಲಾ ಜಿಡಿಪಿಯಲ್ಲಿ ಸೇರುವುದಿಲ್ಲ. ಸಹಕಾರೀ ಸಂಸ್ಥೆಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ. ಅನಾರೋಗ್ಯದಿಂದ ನರಳುತ್ತಿರುವವರಿಗೆ ಹಾಗೂ ವಯಸ್ಸಾದವರಿಗೆ ರಕ್ಷಣೆಗೆ ಗಮನ ಕೊಡಲಾಗುತ್ತದೆ. ಲಾಭವೇ ಕೇಂದ್ರವಾಗಿದ್ದ ವ್ಯವಸ್ಥೆಯಲ್ಲಿ ಇವರನ್ನು ನಿರ್ಲಕ್ಷಿಸಲಾಗಿತ್ತು. ಶೋಷಣೆಯ ಸ್ವಾತಂತ್ರ್ಯದ ಸ್ಥಾನದಲ್ಲಿ ಸ್ಟಿಗ್ಲಿಡ್ಜ ಬದುಕುವುದಕ್ಕೆ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾರೆ.
ವರಮಾನ ಹಾಗೂ ಸಂಪತ್ತಿನ ವಿತರಣೆ ಅಧಿಕಾರದ ವಿತರಣೆಯೊಂದಿಗೆ ತೆಕ್ಕೆ ಹಾಕಿಕೊಂಡಿದೆ. ನಿರಂಕುಶ ಆಳ್ವಿಕೆ ಒಳ್ಳೆಯ ಸಮಾಜದ ಸೃಷ್ಟಿಗೆ ದೊಡ್ಡ ಅಡ್ಡಿ. ಇದನ್ನು ಜಗತ್ತಿನಾದ್ಯಂತ ನೋಡಬಹುದು. ಜನರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುವುದಕ್ಕೆ ಸ್ವಾತಂತ್ರ್ಯವಿರಬೇಕು. ಆದರೆ ಇಂತಹ ನವ ಉದಾರವಾದೀ ನೀತಿಯ ವೈಫಲ್ಯವನ್ನು ತೋರಿಸಿಬಿಟ್ಟರೆ ಬದಲಾವಣೆಯಾಗಿಬಿಡುವುದಿಲ್ಲ. ಇದು ಸ್ಟಿಗ್ಲಿಟ್ಜ ಅವರಿಗೂ ಗೊತ್ತು. ಆದರೆ ಬಲಪಂಥೀಯರು ಹರಡುತ್ತಿರುವ ಸ್ವಾತಂತ್ರ್ಯವನ್ನು ಕುರಿತ ಮಿಥ್ಯೆಯನ್ನು ಮೊದಲಿಗೆ ವಿಫಲಗೊಳಿಸಬೇಕು. ಮಾನವನ ಸ್ವಾತಂತ್ರ್ಯಕ್ಕೆ ಪರಸ್ಪರ ಸಹಕಾರದ ಹಾಗೂ ಹೆಚ್ಚು ಧನಾತ್ಮಕವಾದ ರೂಪವನ್ನು ಕೊಡಬೇಕು. ಇದು ಮೊದಲ ದೊಡ್ಡ ಹೆಜ್ಜೆ. ಇಂದು ನವ ಉದಾರವಾದೀ ಸಿದ್ದಾಂತ ಸಮಾಜದಲ್ಲಿ ಆಳವಾಗಿ ಹೊಕ್ಕಿದೆ. ತಮ್ಮ ಗ್ರಹಿಕೆ ಹಾಗೂ ನಂಬಿಕೆಗೆ ವಿರುದ್ಧವಾದ ಮಾಹಿತಿಯನ್ನು ಜನ ತಿರಸ್ಕರಿಸಿಬಿಡುತ್ತಾರೆ. ಇದು ನಿಜವಾದ ಸಮಸ್ಯೆ. ಆದರೆ ಇಂದು ತೀವ್ರವಾಗುತ್ತಿರುವ ಅಸಮಾನತೆ ಹಾಗೂ ನಾಶವಾಗುತ್ತಿರುವ ಹವಾಮಾನದಿಂದಾಗಿ ನವ ಉದಾರವಾದೀ ಕ್ರಮಕ್ಕೆ ವಿರೋಧ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಯುವಕರು ವಿರೋಧಿಸುತ್ತಿದ್ದಾರೆ. ಆದರೂ ಅಷ್ಟು ಸಲೀಸಲ್ಲ. ಇದೊಂದು ದೊಡ್ಡ ಯುದ್ಧ.
ಇದೊಂದು ಸಾಮೂಹಿಕ ಕ್ರಿಯೆಯಾಗಬೇಕು. ಎಲ್ಲರೂ ತಮ್ಮ ತೆರಿಗೆಗಳನ್ನು ಕಟ್ಟುವಂತೆ ಒತ್ತಾಯಿಸಬೇಕು. ಆಗಷ್ಟೇ ಸಾರ್ವಜನಿಕ ಸೇವೆಗಳಲ್ಲಿ ಹಣವನ್ನು ತೊಡಗಿಸುವುದಕ್ಕೆ ಸಾಧ್ಯ. ಇದರಿಂದ ಅಂತಿಮವಾಗಿ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ. ಬಲವಂತವಾಗಿ ತೆರಿಗೆ ಕಟ್ಟಿದವರಿಗೂ ಒಳ್ಳೆಯದಾಗುತ್ತದೆ. ಅವರು, ಅವರ ಮಕ್ಕಳು ಹಾಗೂ ಪ್ರತಿಯೊಬ್ಬರಿಗೂ ಹೆಚ್ಚೆಚ್ಚು ಆಯ್ಕೆಯ ಅವಕಾಶವಿರುವ ಸಮಾಜದಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತದೆ. ತೆರಿಗೆ ಕಟ್ಟುವುದಕ್ಕೆ ಮಾಡುವ ಒತ್ತಾಯವೂ ವಿಮುಕ್ತಿಯ ಹಾದಿಯಾಗುತ್ತದೆ.