(೦೬/೦೬/೧೯೧೦- ೦೧/೦೫/೧೯೬೫)
[ಒಬ್ಬ ವ್ಯಕ್ತಿಯಲ್ಲಿ ಅತ್ಯುತ್ತಮವಾದ ಎಲ್ಲಾ ಗುಣಗಳು ಮೇಳೈಸುವುದಕ್ಕೆ ಹಾಗೂ ಒಬ್ಬ ಸಂಗೀತಗಾರ ಏಕಕಾಲಕ್ಕೆ ವಾಗ್ಗೇಯಕಾರ, ಸಂಗೀತಶಾಸ್ತ್ರಜ್ಞ, ಗುರು, ಲೇಖಕ ಎಲ್ಲವೂ ಆಗಿರುವುದಕ್ಕೆ ಸಾಧ್ಯವೇ? ಹಾಗೊಂದು ವೇಳೆ ಈ ಎಲ್ಲಾ ಗುಣಲಕ್ಷಣಗಳನ್ನೂ ಒಬ್ಬ ವ್ಯಕ್ತಿಯೇನಾದರೂ ಹೊಂದಿದ್ದರೆ ಅದು ಖಂಡಿತವಾಗಿ ಜಿ.ಎನ್. ಬಾಲಸುಬ್ರಹ್ಮಣ್ಯಂ- ಖ್ಯಾತ ವೀಣಾವಾದಕ ಎಸ್.ಬಾಲಚಂದರ್.]

ಬಹುತೇಕ ಎಲ್ಲರೂ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರನ್ನು ಒಬ್ಬ ಪರಿಪೂರ್ಣ ಸಂಗೀತಗಾರ ಎಂದು ಗುರುತಿಸುತ್ತಾರೆ. ಅವರ ಬದುಕು ಮತ್ತು ಸಂಗೀತದ ಕಥೆ ಈವರೆಗೆ ನಾವು ಕೇಳಿದ ಕಲಾವಿದರೆಲ್ಲರ ಬದುಕಿನ ಕಥೆಗಳಿಗಿಂತ ಭಿನ್ನವಾಗಿದೆ. ಅವರದು ವೃತ್ತಿಪರ ಸಂಗೀತಗಾರರ ಕುಟುಂಬವಲ್ಲ, ವೇದಿಕೆ ಕಲಾವಿದರ ಮನೆಯಲ್ಲ, ಅವರಿಗೊಬ್ಬ ನಿರ್ದಿಷ್ಟ ಗುರುವಿಲ್ಲ, ಕಠಿಣವಾದ ಗುರುಕುಲವಾಸವಿಲ್ಲ. ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ಸ್ ಪದವೀಧರ. ಹೊಟ್ಟೆ ಬಟ್ಟೆಗೆ ಕೊರತೆಯಿಲ್ಲದ ನೆಮ್ಮದಿಯ ಕುಟುಂಬ. ಅತ್ಯಂತ ಸ್ಫುರದ್ರೂಪಿ. ದೈವದತ್ತವಾದ ಸೊಗಸಾದ, ತ್ರಿಸ್ಥಾಯಿಯಲ್ಲಿ ಸುಲಲಿತವಾಗಿ ಸಂಚರಿಸುತ್ತಿದ್ದ ರವಾ ಕಂಠ.
ಜಿಎನ್ಬಿ ಸಂಗೀತಗಾರರಾಗಿದ್ದು ತೀರಾ ಆಕಸ್ಮಿಕ ವೇನಲ್ಲ. ಏಕೆಂದರೆ ಅವರ ಮನೆಯ ವಾತಾವರಣ ಮತ್ತು ಬೆಳೆದ ಪರಿಸರ ಸಂಗೀತದಿಂದ ತುಂಬಿತ್ತು. ಅವರ ತಂದೆ ಗುಡಲೂರು ವಿ. ನಾರಾಯಣಸ್ವಾಮಿ ಅಯ್ಯರ್, ತಾಯಿ ವಿಶಾಲಾಕ್ಷಿ ಅಮ್ಮಾಳ್. ಇಬ್ಬರಿಗೂ ಸುಮಧುರವಾದ ಕಂಠವಿತ್ತು. ಹಿತವಾಗಿ ಹಾಡು ತ್ತಿದ್ದರು. ಕುಂಭಕೋಣಂನಲ್ಲಿ ಹೈಸ್ಕೂಲ್ ಟೀಚರ್ ಆಗಿದ್ದ ನಾರಾಯಣಸ್ವಾಮಿಯವರಿಗೆ ಸಂಗೀತಶಾಸ್ತ್ರದ ಜ್ಞಾನ ಮತ್ತು ಕೇಳ್ಮೆ ಚೆನ್ನಾಗಿತ್ತು. ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್, ಶರಭಶಾಸ್ತ್ರಿ, ನಾಗಸ್ವರಂ ನಟೇಶ ಪಿಳ್ಳೈ, ಹರಿಕಥಾ ವಿದ್ವಾಂಸರಾದ ತಿರುಪ್ಪಾಯನಂ ಪಂಚಾಪಕೇಶ ಶಾಸ್ತ್ರಿಗಳು ಮುಂತಾದವರ ಕಚೇರಿ ಗಳನ್ನು ಪದೇ ಪದೇ ಕೇಳುವ ಅವಕಾಶ ಜಿಎನ್ಬಿಗೆ ದೊರಕಿತು. ಜೊತೆಗೆ ಇವರ ಮನೆಗೆ ಬರುತ್ತಿದ್ದ ಅವರೆಲ್ಲರ ಸಂಗೀತ ಸಂವಾದವನ್ನು ಕೇಳುವ ಭಾಗ್ಯವೂ ಅವರದಾಗಿತ್ತು.
ನಂತರ ನಾರಾಯಣಸ್ವಾಮಿ ಮದ್ರಾಸಿನ ಟ್ರಿಪ್ಲಿಕೇನ್ ಹೈಸ್ಕೂಲಿಗೆ ಹೆಡ್ಮಾಸ್ಟರ್ ಆದರು. ಆಗ ಅವರಿಗೆ ಪಾರ್ಥಸಾರಥಿಸ್ವಾಮಿ ಸಂಗೀತ ಸಭೆ, ಮ್ಯೂಸಿಕ್ ಅಕಾಡೆಮಿ ಇವುಗಳೊಂದಿಗೆ ನಿಕಟವಾದ ಸಂಬಂಧ ಬೆಳೆಯಿತು. ಅಲ್ಲಿಗೆ ಬರುತ್ತಿದ್ದ ಕೊನೇರಿರಾಜಪುರಂ ವೈದ್ಯನಾಥ ಅಯ್ಯರ್, ರಾಮನಾಡ್ ಶ್ರೀನಿವಾಸ ಅಯ್ಯಂಗಾರ್, ಪಲ್ಲಡಂ ಸಂಜೀವರಾವ್, ತಿರುಚ್ಚಿ ಗೋವಿಂದ ಸ್ವಾಮಿ ಪಿಳ್ಳೈ, ಮುಂತಾದವರು ಇವರ ಮನೆಗೂ ಬರುತ್ತಿದ್ದರು. ಹಾಡಿ, ನುಡಿಸುತ್ತಿದ್ದರು. ಸಂಗೀತವನ್ನು ಚರ್ಚಿಸು ತ್ತಿದ್ದರು. ಇವರ ಪಕ್ಕದ ಮನೆಯಲ್ಲಿಯೇ ಪಿಟೀಲುವಾದಕ ಕರೂರು ಚಿನ್ನಸ್ವಾಮಿ ಅಯ್ಯರ್ ಇದ್ದರು. ಅವರ ಮನೆಗೆ ತಿರುವೈಯ್ಯಾರು ಸಭೇಶ ಅಯ್ಯರ್, ಬೂದಲೂರು ಕೃಷ್ಣಮೂರ್ತಿ ಇವರೆಲ್ಲರೂ ಬಂದು, ಹಾಡಿ, ನುಡಿಸುತ್ತಿದ್ದರು. ಜಿಎನ್ಬಿಯ ಮೈಮನಗಳಲ್ಲೆಲ್ಲಾ ಸಂಗೀತವೇ ತುಂಬಿತ್ತು.
ಮಗನ ಸಂಗೀತಾಸಕ್ತಿ ಗಮನಿಸಿದ ನಾರಾಯಣ ಸ್ವಾಮಿಗಳು ತಮ್ಮ ವಠಾರದಲ್ಲಿಯೇ ಇದ್ದ ಪಿಟೀಲು ವಾದಕ ಮಧುರೈ ಸುಬ್ರಹ್ಮಣ್ಯ ಅಯ್ಯರ್ ಬಳಿ ಮಗನನ್ನು ಪಾಠಕ್ಕೆ ಸೇರಿಸಿದರು. ಬಾಲ್ಯದಲ್ಲಿ ಇವರು ಆರುವರೆ ಮನೆ ಶ್ರುತಿಯಲ್ಲಿ, ಅತ್ಯಂತ ದುರಿತ ಕಾಲದಲ್ಲಿ ಹಾಡುತ್ತಿದ್ದರು. ಅರಿಯಾಕುಡಿಯವರೂ ಸೇರಿದಂತೆ ಇವರ ಮನೆಗೆ ಬರುತ್ತಿದ್ದ ಎಲ್ಲಾ ಹಿರಿಯ ವಿದ್ವಾಂಸರೂ ಇವರನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ ಇಷ್ಟಾಗಿಯೂ ತಂದೆಗೆ ಮಾತ್ರ ಮಗ ಸಂಗೀತಗಾರ ಆಗುವುದು ಇಷ್ಟವಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಿದ್ದು ಖ್ಯಾತ ಗಾಂಧಿವಾದಿ ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳು.
ಅರಿಯಾಕುಡಿಯವರ ಪ್ರಭಾವ ಇವರ ಮೇಲೆ ತುಂಬಾ ಗಾಢವಾಗಿತ್ತು. ಅವರನ್ನು ತನ್ನ ಮಾನಸಿಕ ಗುರುವೆಂದೇ ಜಿಎನ್ಬಿ ಭಾವಿಸಿದ್ದರು. ಮಹಾರಾಜ ಪುರಂ ವಿಶ್ವನಾಥ ಅಯ್ಯರ್ ಮತ್ತು ನಾಗಸ್ವರ ಮಾಂತ್ರಿಕ ಟಿ.ಎನ್. ರಾಜರತ್ನಂ ಪಿಳ್ಳೈ ಅವರನ್ನೂ ಇವರು ಗುರುಸಮಾನರಾಗಿ ಭಾವಿಸಿದ್ದರು ಮತ್ತು ಅವರ ಪ್ರಭಾವವೂ ಇವರ ಮೇಲಾಗಿತ್ತು. ಟೈಗರ್ ವರದಾಚಾರ್ಯರ ಬಗ್ಗೆ ಇವರಿಗೆ ತುಂಬಾ ಗೌರವವಿತ್ತು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಕೆಲ ಕಾಲ ಟೈಗರ್ ಅವರ ಬಳಿ ಕಲಿತಿದ್ದರು. ಇವರು ಯದುಕುಲ ಕಾಂಭೋಜಿ, ತೋಡಿ, ಬೇಗಡೆಯಂತಹ ರಾಗಗಳನ್ನು ಹಾಡುವಾಗ ಟೈಗರ್ ಪ್ರಭಾವ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು ಎಂದು ಎಂ.ಡಿ.ರಾಮನಾಥನ್ ಹೇಳುತ್ತಿದ್ದರು.
೧೯೨೮ರಲ್ಲಿ ಇಂಟರ್ಮೀಡಿಯೆಟ್ ಮುಗಿಸಿದ ಜಿಎನ್ಬಿಯನ್ನು ಆಗ ತಾನೆ ಚಿದಂಬರಂನಲ್ಲಿ ಪ್ರಾರಂಭವಾಗಿದ್ದ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಸಂಗೀತದ ಕಾಲೇಜಿಗೆ ಸೇರಿಸಿದರು. ಸಂಗೀತ ಮತ್ತು ಪದವಿ ಎರಡೂ ಒಟ್ಟಿಗೆ ಆಗುತ್ತದೆ ಎಂದು ಆಶಿಸಿದ್ದರು. ಆದರೆ ಆರೋಗ್ಯ ತಪ್ಪಿ ಜಿಎನ್ಬಿ ವಾಪಸ್ಸು ಮದ್ರಾಸಿಗೇ ಬಂದು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ಸ್ ಪದವಿಗೆ ಸೇರಿದರು.
೧೯೨೮ರಲ್ಲಿ ಕಪಾಲೀಶ್ವರನ ದೇವಾಲಯದಲ್ಲಿ ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರ ಕಚೇರಿ ಏರ್ಪಾಡಾಗಿತ್ತು. ಅನಾರೋಗ್ಯದಿಂದ ಅವರಿಗೆ ಬರಲಾಗಲಿಲ್ಲ. ಆಗ ಅವರ ಬದಲು ಸಂಘಟಕರು ಜಿಎನ್ಬಿಯವರನ್ನು ಹಾಡಿಸುವ ಏರ್ಪಾಡು ಮಾಡಿದರು. ಅಷ್ಟು ದೊಡ್ಡವರ ಬದಲು ನಾನೇ? ಎಂದು ಮೊದಲು ಸ್ವಲ್ಪ ಹಿಂಜರಿದರು. ಆದರೆ ಕೊನೆಗೆ ಒಪ್ಪಿಕೊಂಡರು. ಈ ಕಚೇರಿ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಅದ್ಭುತವಾದ ಸಂಗೀತ ಮತ್ತು ಮನಮೋಹಕ ರೂಪ ಎರಡೂ ಇದ್ದ ಜಿಎನ್ಬಿ ಸಂಗೀತ ಕ್ಷೇತ್ರದಲ್ಲಿ ಹೀರೋ ಆದರು. ಅವರು ಕಚೇರಿಗೆ ಲಭ್ಯವಿದ್ದಾರೆಯೇ ಎನ್ನುವುದನ್ನು ನೋಡಿ ಕೊಂಡು ಮಕ್ಕಳ ಮದುವೆ ದಿನಾಂಕವನ್ನು ಜನ ನಿಶ್ಚಯಿಸಲಾರಂಭಿಸಿದರು. ೧೯೩೧ರಲ್ಲಿ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ ಪದವಿ ಪಡೆದರು. ಅಷ್ಟು ಹೊತ್ತಿಗೆ ಅವರು ಸಂಗೀತ ಕ್ಷೇತ್ರ ದಲ್ಲಿಯೂ ಪ್ರಿನ್ಸ್ ಛಾರ್ಮಿಂಗ್ ಎಂದು ಪ್ರಸಿದ್ಧ ರಾಗಿದ್ದರು.
ಅವರು ಸಂಗೀತಕ್ಷೇತ್ರಕ್ಕೆ ಕಾಲಿಟ್ಟಾಗ ಚೆಂಬೈ, ಅರಿಯಾಕುಡಿ, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ, ಟಿ.ಕೆ. ರಂಗಾಚಾರಿ, ಅಲತ್ತೂರು ಸಹೋದರರು, ಸಾತ್ತೂರು, ಪಟ್ಟಮ್ಮಾಳ್, ಎಂ.ಎಸ್. ಮುಂತಾದ ಘಟಾನುಘಟಿ ಗಳೆಲ್ಲರೂ ರಾಜ್ಯಭಾರ ನಡೆಸುತ್ತಿದ್ದರು. ಇಂಥವರ ನಡುವೆ ಇವರು ಮಿಂಚಿದ್ದು ತಮ್ಮ ಅಸಾಧಾರಣ, ಪ್ರತಿಭೆ, ಸೃಜನಶೀಲತೆ, ಸಹಜವಾಗಿಯೇ ಇದ್ದ ಶಾರೀರ ಸೌಖ್ಯದಿಂದ. ಇವರ ಆಲಾಪನಾ ಶೈಲಿ, ಚುರುಕಾದ ಲವಲವಿಕೆ ತುಂಬಿದ ಕೃತಿಪ್ರಸ್ತುತಿ, ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬಿರ್ಕಾಗಳ ಪ್ರಸ್ತುತಿ, ಅಪರೂಪವಾದ ರಾಗಗಳ ಹೃದಯಸ್ಪರ್ಶಿ ಆಲಾಪನೆ, ಅತ್ಯಂತ ಬಿಕ್ಕಟ್ಟಾದ ಪಲ್ಲವಿ ಪ್ರಸ್ತುತಿ, ನೆರವಲ್, ಕೃತಿರಚನೆ ಇವೆಲ್ಲವೂ ಇವರ ಹಿಂದಿನವರಿಗಿಂತ ತುಂಬಾ ಭಿನ್ನವಾಗಿತ್ತು. ತಮ್ಮ ವಿಶಿಷ್ಟ ಶೈಲಿಯಿಂದ ಅವರು ಹೊಸ ಬಾನಿಯನ್ನೇ ಹುಟ್ಟುಹಾಕಿದರು. ಅವರ ಅನನ್ಯ ಪ್ರತಿಭೆ ಸಂಗೀತದ ಪ್ರತಿಯೊಂದು ಅಂಶದಲ್ಲೂ ಕಾಣುತ್ತದೆ.
ಇಷ್ಟೆಲ್ಲಾ ಇದ್ದರೂ ಅವರು ವಿನಯವೇ ಮೈತಳೆದಂತಿದ್ದರು. ಅಹಂಕಾರದ ಮಾತನ್ನೆಂದೂ ಆಡಲಿಲ್ಲ. ತನ್ನ ತಲೆಮಾರಿನ ಹಿರಿಯರೆಲ್ಲರನ್ನೂ ಗೌರವದಿಂದ ಕಂಡರು ಮತ್ತು ಪ್ರತಿಭಾವಂತ ಕಿರಿಯರಾದ ಟಿ.ಆರ್ ಮಹಾಲಿಂಗಂ ಅಂಥವರನ್ನು ಗುರುತಿಸಿ, ಅಪಾರ ಮೆಚ್ಚುಗೆಯನ್ನು ಸೂಚಿಸಿದರು.
ಎಲ್ಲಾ ಪ್ರಕಾರದ ಸಂಗೀತವನ್ನೂ ಸವಿಯು ತ್ತಿದ್ದರು. ಒಮ್ಮೆ ಮದ್ರಾಸಿನಲ್ಲಿ ಬಡೇ ಗುಲಾಂ ಅಲಿ ಖಾನ್ ತುಂಬಾ ಸೊಗಸಾಗಿ ಹಾಡಿದಾಗ, ಸಾರ್ವ ಜನಿಕವಾಗಿಯೇ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅದು ಸಾಕಷ್ಟು ಟೀಕೆ ಟಿಪ್ಪಣಿಗಳಿಗೂ ಕಾರಣವಾಯಿತು. ಆದರೆ ಸ್ವತಃ ಬಡೇಗುಲಾಂ ಅಲಿ ಖಾನ್ ಜಿಎನ್ಬಿಯವರು ತ್ರಿಸ್ಥಾಯಿಯಲ್ಲಿ ವಿಸ್ತರಿಸಿದ ಹಿಂದೋಳ ರಾಗವನ್ನು ಕೇಳಿ ರೋಮಾಂಚಿತರಾಗಿ ಅವರ ಕಾಲು ಮುಟ್ಟಿ ನಮಸ್ಕರಿಸ ಹೋದರು. ಅವರ ತಾನ ಕೇಳಿದ ಬಡೇ ಗುಲಾಂ ಅಲಿ ಖಾನ್ ನಾನು ತಾನವನ್ನು ಹಾಡುವಾಗ ಕಳ್ಳಧ್ವನಿ ಬಳಸು ತ್ತೇನೆ ಆದರೆ ನೀನು ನಿನ್ನ ಸಹಜ ಕಂಠದಲ್ಲಿಯೇ ಅಂತಹ ತಾನವನ್ನು ಹಾಡುತ್ತೀಯೆ. ಅದು ಅದ್ಭುತ, ಎಂದಿದ್ದರು.
ಗಾಯನ ಮತ್ತು ನಾಗಸ್ವರ ಶೈಲಿಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪ್ರತಿಭಾಪೂರ್ಣವಾಗಿ ಜಿಎನ್ಬಿ ಮೇಳೈಸಿದರು. ನಾಗಸ್ವರದಲ್ಲಿ ಹೊಮ್ಮುವ ದುರಿತಕಾಲದ ಸಂಗತಿಗಳು ನುಡಿಯುವಂತಹ ಕಂಠಗಳು ತುಂಬಾ ಅಪರೂಪ. ಜಿಎನ್ಬಿಯವರದು ಅಂತಹ ಅಪರೂಪದ ಕಂಠ. ಅವರ ಕಂಠದ ವೇಗ ಎಷ್ಟೋ ಬಾರಿ ರಾಜರತ್ನಂ ಪಿಳ್ಳೈ ಅವರನ್ನೂ ದಿಗ್ಭ್ರಮೆಗೊಳಿಸುತ್ತಿತ್ತು. ಅತ್ಯಂತ ಘನವಾದ, ತುಸು ಭಾರ ಎಂದೇ ಅನ್ನಿಸಬಹುದಾದ ಅಭಿಜಾತ ಕೃತಿ ಯನ್ನು ಕೂಡ ಶ್ರೀಸಾಮಾನ್ಯನ ಗಮನ ಸೆಳೆಯುವಷ್ಟು ಆಕರ್ಷಕವಾಗಿ, ಮನಸೆಳೆಯುವಂತೆ ಜಿಎನ್ಬಿ ಹಾಡಬಲ್ಲವರಾಗಿದ್ದರು. ಅವರ ಹಿಂದಿನ ತಲೆ ಮಾರಿನಲ್ಲಿ ಮಹಾ ವೈದ್ಯನಾಥ ಅಯ್ಯರ್ ಹೀಗೆ ಹಾಡುತ್ತಿದ್ದರಂತೆ. ಮೂಲತಃ ವಿಳಂಬದಲ್ಲಿದ್ದ ವಾತಾಪಿ ಗಣಪತಿಂ ಭಜೆ, ಚಿಂತಯಮಾಂ (ಭೈರವಿ) ಕೃತಿಗಳನ್ನು ಮಧ್ಯಮಕಾಲಕ್ಕೆ ಬದಲಾಯಿಸಿದವರು ವೈದ್ಯನಾಥ ಅಯ್ಯರ್. (ಟಿ.ಆರ್. ಸುಬ್ರಹ್ಮಣ್ಯಂ). ನನ್ನ ಅಭಿಪ್ರಾಯದಲ್ಲಿ ಮಧ್ಯಮಕಾಲವೇ ಕರ್ನಾಟಕ ಸಂಗೀತದ ಬಹುಮುಖ್ಯ ಅಂಶ. ಇದು ಮನೋಧರ್ಮಕ್ಕೆ ಮತ್ತು ನೆರವಲ್ಲಿಗೆ ಅಪರಿಮಿತವಾದ ಅವಕಾಶವನ್ನು ನೀಡುತ್ತದೆ ಎನ್ನುತ್ತಿದ್ದರು ಜಿಎನ್ಬಿ.
ಕಲ್ಪನಾಸ್ವರಗಳನ್ನು ಹಾಡುವಾಗಲೂ ಜಿಎನ್ಬಿ ಅವರ ಸೃಜನಶೀಲತೆ, ವಿಶಿಷ್ಟತೆ ಎದ್ದು ಕಾಣುತ್ತಿತ್ತು. ಹಿಂದೋಳ ರಾಗದ ಸಾಮಜವರಗಮನಾ ಕೃತಿಗೆ ಸಾಮಾನ್ಯವಾಗಿ ವೇದ ಶಿರೋಮಾತೃಜ ಎನ್ನುವ ಜಾಗಕ್ಕೆ ಮಗಸನಿ ಎಂದು ಎಲ್ಲರೂ ಸ್ವರ ಹಾಕು ತ್ತಾರೆ ಏಕೆಂದರೆ ವೇ ಎನ್ನುವ ಸಾಹಿತ್ಯಭಾಗ ಷಡ್ಜದಿಂದ ಪ್ರಾರಂಭವಾಗುತ್ತದೆ. ಆದರೆ ಜಿಎನ್ಬಿ ಸ, ಮ, ವೇದಶಿರೋ ಎಂದು ಷಡ್ಜಕ್ಕೆ ಸಂವಾದಿ ಯಾದ ಮಧ್ಯಮವನ್ನು ಹಾಡಿ ಬೆರಗು ಮೂಡಿಸು ತ್ತಿದ್ದರು. ಹಾಗೆಯೇ ಶಿವ ಶಿವ ಎನರಾದ ಎನ್ನುವುದಕ್ಕೆ ಸ ದ ಎಂದು ಸ್ವರ ಹಾಕುತ್ತಿದ್ದರು. ಇನ್ನು ಅಭೋಗಿಯ ಮನಸು ನಿಲ್ಪ ಶಕ್ತಿ ಲೇಕ ಎನ್ನುವುದಕ್ಕೆ ಮ ದ ಎಂದು ಸ್ವರ ಹಾಕುತ್ತಿದ್ದರು. ಸಾವೇರಿಯ ಕರಿಕಲಭಮುಖ ಹಾಡುವಾಗ ಸರಿ ಮಪದಗರಿ ಕಲಭಮುಖ ಎಂದು ಹಾಡುತ್ತಿದ್ದರು (ಟಿ.ಆರ್. ಸುಬ್ರಹ್ಮಣ್ಯಂ).
ಅವರ ಮೇಲೆ ಹಿಂದುಸ್ತಾನಿ ಸಂಗೀತದ ಗಾಢ ಪ್ರಭಾವವಿತ್ತು. ಶುದ್ಧಸ್ವರಗಳ ಮೇಲೆ ಅವರಿಗಿದ್ದ ಪ್ರೀತಿಗೆ ಈ ಪ್ರಭಾವವೇ ಕಾರಣ. ಅವರ ಶೈಲಿಯನ್ನು ಇಂದಿರಾ ಮೆನನ್ ನವಅಭಿಜಾತ ಶೈಲಿ ಎಂದು ಕರೆಯುತ್ತಾರೆ. ಒಂದು ಸಲಕ್ಕೆ ಒಂದೇ ಒಂದು ಸ್ವರದ ಮೇಲೆ ಅವರು ಕೇಂದ್ರೀಕರಿಸುತ್ತಿದ್ದರು. ಇದು ಹಿಂದುಸ್ತಾನಿ ಪದ್ಧತಿಯಲ್ಲಿ ಕಂಡುಬರುವ ಒಂದು ಲಕ್ಷಣ. ಅವರು ರಾಗವನ್ನು ಹಂತಹಂತವಾಗಿ ಬೆಳೆಸುತ್ತಾ ಒಂದು ಭವ್ಯ ಸೌಧವನ್ನು ನಿರ್ಮಿಸು ತ್ತಿದ್ದರು.
ಅವರ ಕೃತಿಗಳು ಅವರ ಸೃಜನಶೀಲತೆಗೆ ಒಂದು ರುಜುವಾತು. ಅವರ ವಾಗ್ಗೇಯ ರಚನೆಗಳಲ್ಲಿಯೂ ಅವರ ಬಾನಿ ಎದ್ದು ಕಾಣುತ್ತಿತ್ತು. ಅವರು ರೂಪಿಸಿ ರುವ ಸಂಗತಿಗಳು ಸುಮಾರಾಗಿ ಆಲಾಪನೆಯ ಹಾಗೆಯೇ ಇವೆ. ೨೫೦ಕ್ಕಿಂತ ಹೆಚ್ಚು ಕೃತಿಗಳನ್ನು ತೆಲುಗು, ಸಂಸ್ಕೃತ ಮತ್ತು ತಮಿಳಿನಲ್ಲಿ ರಚಿಸಿದ್ದಾರೆ. ಆದಿತಾಳದ ಮೂರು ವರ್ಣಗಳು ಮತ್ತು ಯದುಕುಲ ಕಾಂಬೋಜಿಯಲ್ಲಿ ಅಟ್ಟತಾಳದ ಒಂದು ವರ್ಣವನ್ನು ರಚಿಸಿದ್ದಾರೆ. ಕಮಲಚರಣೆ ಎನ್ನುವ ಒಂದು ರಚನೆಯನ್ನು ಬಿಟ್ಟು ಇನ್ಯಾವ ಕೃತಿಗೂ ಅವರು ತಮ್ಮ ಮುದ್ರೆಯನ್ನಿಟ್ಟಿಲ್ಲ. ಕೃತಿಗೆ ಯೋಗ್ಯತೆಯಿದ್ದರೆ ಅವು ಸಮಯ ಪರೀಕ್ಷೆಯಲ್ಲಿ ಗೆದ್ದು ಉಳಿದು ಕೊಳ್ಳುತ್ತವೆ. ಅದಕ್ಕೆ ನನ್ನ ಹೆಸರಿನ ಬಲ ಬೇಡ. ಎನ್ನುತ್ತಿದ್ದರು. ಮಾತೃಭಾಷೆಯನ್ನು ತುಂಬಾ ಪ್ರೀತಿಸು ತ್ತಿದ್ದ ಜಿಎನ್ಬಿ ತಮಿಳ್ ಇಸೈ ಸಂಘದ ಚಳುವಳಿ ಯನ್ನು ಬೆಂಬಲಿಸಿದರು.
ಅವರ ಹೆಚ್ಚಿನ ಕೃತಿಗಳು ಮಧ್ಯಮಕಾಲದಲ್ಲಿದ್ದು ಬೇರೆ ಬೇರೆ ಎಡುಪ್ಪುಗಳಲ್ಲಿ ಪ್ರಾರಂಭವಾಗುತ್ತಿದ್ದವು. ಸಾಮಾನ್ಯವಾಗಿ ಕಾನಡಾ ರಾಗದಲ್ಲಿ ಪ್ರಾರಂಭ ವಾಗುವ ಕೃತಿಗಳೆಲ್ಲವೂ ಮಧ್ಯ ಅಥವಾ ಮಂದ್ರ ಸ್ಥಾಯಿಯಲ್ಲಿ ಪ್ರಾರಂಭವಾದರೆ ಇವರ ರಚನೆ ಪರಾನ್ಮುಖಮೇಲನಮ್ಮ ತಾರ ಷಡ್ಜದಿಂದ ಪ್ರಾರಂಭ ವಾಗುತ್ತದೆ. ಬಹುದಾರಿ ರಾಗದ ಕೃತಿಯೂ ತಾರ ಷಡ್ಜದಿಂದಲೇ ಪ್ರಾರಂಭವಾಗುತ್ತದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಾಂತ್ರಿಕ ಸೊಬಗನ್ನೂ ಪರಿಚಯಿಸುತ್ತಿದ್ದರು. ಉದಾಹರಣೆಗೆ ಮೋಹನದ ಸದಾ ಪಾಲಯ, ಹಿಂದೋಳದ ಸಾಮಗಾನಲೋಲೆ, ಅಭೋಗಿಯ ಮನಸಾರಗನೇ ಇವುಗಳಲ್ಲಿ ಸ್ವರಾಕ್ಷರಗಳನ್ನು ಪ್ರಯೋಗಿಸಿದ್ದಾರೆ. ಸ್ವರಾಕ್ಷರಗಳು ಎಷ್ಟು ಸಹಜವಾಗಿ ಮೇಳೈಸಿವೆಯೆಂದರೆ, ಎಲ್ಲೂ ಅವು ಕೃತಕ ಎಂಬ ಭಾವನೆ ಮೂಡುವುದಿಲ್ಲ. ಪದಗಳು ಮತ್ತು ರಾಗದ ಸಂಚಾರಗಳ ನಡುವೆ ಸೊಗಸಾದ, ರಾಗಾತ್ಮಕ ಸಂಬಂಧವನ್ನು ಕಟ್ಟುವುದರಲ್ಲಿ ಅವರದು ಎತ್ತಿದ ಕೈ. ಅವರ ಕದನಕುತೂಹಲ ರಾಗದ ಮೋಹನ ಕೃಷ್ಣ ಇದಕ್ಕೊಂದು ಉತ್ತಮ ಉದಾಹರಣೆ. (ಎಸ್.ರಾಜಂ)
ತೀರಾ ಕೆಲವೇ ಕೃತಿಗಳಿರುವ ಮಾಳವಿ, ಚೆಂಚು ಕಾಂಬೋಜಿ, ವಲಚಿ, ಆಂದೋಳಿಕಾ, ನಾರಾಯಣಿ, ಪೂರ್ಣಚಂದ್ರಿಕಾ, ನಳಿನಕಾಂತಿ ಮುಂತಾದ ರಾಗ ಗಳಲ್ಲಿ ಅವರು ಸೊಗಸಾದ ಕೃತಿಗಳನ್ನು ರಚಿಸಿದ್ದಾರೆ. ಅವರ ತೋಡಿರಾಗದ ವಿಳಂಬಕಾಲದ ಕೃತಿ ಮಮ ಕುಲೇಶ್ವರಂ ತನ್ನ ಭವ್ಯತೆ ಮತ್ತು ಘನತೆಯಲ್ಲಿ ದೀಕ್ಷಿತರ ಕೃತಿಗಳನ್ನು ಹೋಲುತ್ತದೆ. ಪರಸ್ಪರ ತುಂಬಾ ಸಮೀಪದ ಸಂಚಾರಗಳಿರುವ ರೀತಿಗೌಳ, ಶ್ರೀರಂಜಿನಿ ಅಂತಹ ರಾಗಗಳಲ್ಲಿ ಅವರು ಆಯಾ ರಾಗದ ಭಾವಲಕ್ಷಣಗಳನ್ನು ನಿರ್ವಿವಾದವಾಗಿ ಸ್ಥಾಪಿಸು ವಂತಹ ಕೃತಿಗಳನ್ನು ರಚಿಸಿದ್ದಾರೆ. ಅಮೃತ ಬೇಹಾಗ್, ಶಿವಶಕ್ತಿ ಇಂತಹ ಹೊಸ ರಾಗಗಳನ್ನು ಸೃಜಿಸಿದ್ದಾರೆ. (ಎಸ್.ರಾಜಂ)
ಜಿಎನ್ಬಿ ಒಳ್ಳೆಯ ಅಧ್ಯಾಪಕರಾಗಿದ್ದರು. ಒಬ್ಬ ವ್ಯಕ್ತಿಯಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯಬಲ್ಲ ಸಾಮರ್ಥ್ಯ ಅವರಿಗಿತ್ತು. ಮ್ಯೂಸಿಕ್ ಕಾಲೇಜಿನಲ್ಲಿ ಟೈಗರ್ ಪ್ರಾಧ್ಯಾಪಕರಾಗಿ ದ್ದಾಗ ಕೆಲಕಾಲ ಜಿಎನ್ಬಿ ಅಲ್ಲಿ ವಿದ್ಯಾರ್ಥಿಯಾಗಿ ದ್ದರು. ತಮಗೆ ತುರ್ತು ಕಾರ್ಯವಿದ್ದ ಸಂದರ್ಭದಲ್ಲಿ ಟೈಗರ್ ತರಗತಿಯಲ್ಲಿ ಪಾಠ ಮಾಡುವ ಹೊಣೆ ಯನ್ನು ಜಿಎನ್ಬಿಗೆ ಒಪ್ಪಿಸಿ ಹೋಗುತ್ತಿದ್ದರಂತೆ. ಮುಡಿಕೊಂಡಾನ್ ವೆಂಕಟರಾಮ ಅಯ್ಯರ್ ಅವರಿಗೆ ಸಂಗೀತ ಕಲಾನಿಧಿ ಪುರಸ್ಕಾರ ಬಂದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಪಲ್ಲವಿ ಸ್ಪರ್ಧೆಗೆ ಪಾಲ್ಘಾಟ್ ಮಣಿ ಅಯ್ಯರ್, ಮುಡಿಕೊಂಡಾನ್ ಮತ್ತು ಜಿಎನ್ಬಿ ತೀರ್ಪುಗಾರರಾಗಿದ್ದರು. ಯುವಕ ಶೀರ್ಕಾಳಿ ಗೋವಿಂದರಾಜನ್ ಕೂಡ ಒಬ್ಬ ಸ್ಪರ್ಧಿ. ಸೊಗಸಾಗಿ ಹಾಡಿದ ಆತನನ್ನು ತೀರ್ಪುಗಾರರು ಪರೀಕ್ಷಿಸಲು ಪ್ರಾರಂಭಿಸಿದರು. ಉಳಿದಿಬ್ಬರು ಶೀರ್ಕಾಳಿಯನ್ನು ಪ್ರಶ್ನಿಸಿ ಅವರಿಂದ ಉತ್ತರ ಹೊರಡಿಸಲು ಪ್ರಯತ್ನಿಸಿ ದರು. ಆದರೆ ಅವರು ಏನು ಹೇಳುತ್ತಿದ್ದಾರೆ ಎನ್ನುವುದೇ ಶಿರ್ಕಾಳಿಗೆ ಅರ್ಥವಾಗಲಿಲ್ಲ. ಆದರೆ ಅದನ್ನೇ ಜಿಎನ್ಬಿ ಸ್ವಲ್ಪ ವಿವರಿಸಿ, ತನ್ನೊಡನೆ ಹಾಡಲು ಹೇಳಿದಾಗ ಶೀರ್ಕಾಳಿ ಸಲೀಸಾಗಿ ಹಾಡಿದ ರಂತೆ. ಜಿಎನ್ಬಿ, ಉಳಿದೆಲ್ಲರಿಗಿಂತ ಹೆಚ್ಚು ವೇದಿಕೆ ಕಲಾವಿದರನ್ನು ರೂಪಿಸಿದರು. ಎಂ.ಎಲ್. ವಸಂತ ಕುಮಾರಿ, ತಂಜಾವೂರು ಎಸ್ ಕಲ್ಯಾಣರಾಮನ್, ಟಿ.ಆರ್.ಬಾಲಸುಬ್ರಮಣ್ಯಂ, ತ್ರಿಚೂರು ರಾಮ ಚಂದ್ರನ್ ಜಿಎನ್ಬಿಯ ಪ್ರಮುಖ ಶಿಷ್ಯರು. ಅವರ ಶಿಷ್ಯರಲ್ಲದಿದ್ದರೂ ಅವರ ಗಾಢಪ್ರಭಾವಕ್ಕೆ ಒಳಗಾಗಿ ದ್ದವರು ರಾಮನಾಡ್ ಕೃಷ್ಣನ್ ಮತ್ತು ಎಸ್. ರಾಜಂ ಮತ್ತು ಯುವ ತಲೆಮಾರಿನಲ್ಲಿ ಶ್ರೀರಾಂ ಗಂಗಾ ಧರನ್ ಮತ್ತು ಸಂಜಯ್ ಸುಬ್ರಹ್ಮಣ್ಯಂ.
ಜಿಎನ್ಬಿಯವರ ಕಾಲದಲ್ಲಿಯೇ ಅವರನ್ನು ಹಲವರು ಅವರನ್ನು ಗಂಭೀರವಾಗಿ ಟೀಕಿಸುತ್ತಿದ್ದರು. ಅವರ ಶೈಲಿಯು ಮುಂದಿನ ದಿನಗಳಲ್ಲಿ ಉಂಟು ಮಾಡಬಹುದಾದ ದುಷ್ಪರಿಣಾಮಗಳನ್ನು ಕುರಿತು ಗಂಭೀರವಾದ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು. ಕೆಲವರು ಅವರು ಹಾಡುವುದು ಕರ್ನಾಟಕ ಸಂಗೀತವೇ ಎಂದು ಮೂಗು ಮುರಿದರೆ ಮತ್ತೆ ಕೆಲವರು ಅದು ಇಂಗ್ಲಿಷ್ ಸಂಗೀತ ಎಂದು ಲೇವಡಿ ಮಾಡುತ್ತಿದ್ದರು. ಮತ್ತೆ ಕೆಲವರು ಅವರನ್ನು ಪದವೀಧರ ಸಂಗೀತಗಾರ ಎಂದು ಆಡಿಕೊಳ್ಳು ತ್ತಿದ್ದರು. ಮತ್ತೆ ಇನ್ನು ಕೆಲವರಿಗೆ ಇವರ ಪ್ರಭಾವದಿಂದ ಮುಂದೆ ಯಾರೂ ವಿಳಂಬ ಕಾಲವನ್ನು ಹಾಡದೇ ಹೋದರೆ, ಕರ್ನಾಟಕ ಸಂಗೀತದ ವಿಶಿಷ್ಟತೆ ಎನಿಸಿ ಕೊಂಡಿರುವ ಸೊಗಸಾದ ಗಮಕಗಳ ಗತಿಯೇನು ಎನ್ನುವ ನೈಜವಾದ ಆತಂಕವಿತ್ತು.
ತುಂಬಾ ಸ್ಫುರದ್ರೂಪಿಯಾಗಿದ್ದ ಅವರು ಹಲವು ಚಲನಚಿತ್ರಗಳಲ್ಲಿ ಚಲನಚಿತ್ರಗಳಲ್ಲಿ ನಟಿಸಿದರು. ಇದರಿಂದಲೂ ಅವರು ಉಳಿದೆಲ್ಲರಿಗಿಂತ ಜನ ಸಾಮಾನ್ಯರಿಗೆ ಹೆಚ್ಚು ಪರಿಚಿತರಾದರು.
೧೯೬೫ರ ಮೇ೧ರಂದು ಹೃದಯಸಂಬಂಧಿ ತೊಂದರೆಯಿಂದ ತಮ್ಮ ೫೫ನೆಯ ವಯಸ್ಸಿನಲ್ಲಿ ಜಿಎನ್ಬಿ ನಿಧನರಾದರು.