25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.]

ಯಾಕೆ ಕೆಲ ದೇಶಗಳು ಬಡವಾಗಿವೆ?

ಜಗತ್ತಿನ ಶೇಕಡ ೫೦ರಷ್ಟು ಬಡವರ ಬಳಿ ಒಟ್ಟು ಆದಾಯದ ಕೇವಲ ಶೇಕಡ ೧೦ರಷ್ಟು ಮಾತ್ರ ಇದೆ. ಅವರ ಬಳಿ ಇರುವ ಸಂಪತ್ತು ಇನ್ನೂ ಕಡಿಮೆ. ಒಟ್ಟು ಸಂಪತ್ತಿನ ಕೇವಲ ಶೇಕಡ ೨ರಷ್ಟು. ಯಾಕೆ ಇಷ್ಟು ವ್ಯತ್ಯಾಸ? ಅವರು ಬದುಕುತ್ತಿರುವ ದೇಶಗಳ ಸಂಪತ್ತಿನಲ್ಲಿ ಇರುವ ವ್ಯತ್ಯಾಸಗಳು ಇದಕ್ಕೆ ಕಾರಣವಿರಬಹುದು. ಜಗತ್ತಿನ ಶೇಕಡ ೨೦ರಷ್ಟು ಶ್ರೀಮಂತ ದೇಶಗಳು ಅತ್ಯಂತ ಬಡ ಶೇಕಡ ೨೦ ದೇಶಗಳಿಗಿಂತ ಮೂವತ್ತು ಪಟ್ಟು ಶ್ರೀಮಂತವಾಗಿವೆ. ಅಷ್ಟೇ ಅಲ್ಲ ಶ್ರೀಮಂತ ಹಾಗೂ ಬಡ ರಾಷ್ಟ್ರಗಳ ನಡುವಿನ ಅಂತರ ಹಾಗೇ ಉಳಿದುಕೊಂಡು ಬಂದಿದೆ. ಕೆಲವು ಬಡ ದೇಶಗಳಲ್ಲಿ ಪ್ರಗತಿಯಾಗಿದೆ. ಆದರೂ ಅವು ಶ್ರೀಮಂತ ರಾಷ್ಟ್ರಗಳ ಸಮಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಕೆಲವು ದೇಶಗಳು ಯಾಕೆ ಶ್ರೀಮಂತವಾಗಿವೆ, ಕೆಲವು ಯಾಕೆ ಬಡವಾಗಿವೆ? ಈ ವರ್ಷ ನೋಬೆಲ್ ಪ್ರಶಸ್ತಿ ಬಂದ ಡೆರನ್ ಅಸಿಮೊಗ್ಲು, ಸಿಮನ್ ಜಾನ್ಸನ್ ಹಾಗು ಜೇಮ್ಸ್ ಎ ರಾಬಿನ್ಸನ್ ಇದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ.
ಒಂದು ದೇಶ ಇನ್ನೊಂದು ದೇಶಕ್ಕಿಂತ ೫೦% ಹೆಚ್ಚು ಶ್ರೀಮಂತವಾಗಿದ್ದರೆ, ಅದು ಸ್ವಾಭಾವಿಕ ಅಂದುಕೊಳ್ಳಬಹುದು. ಬೇರೆ ದೇಶಗಳಲ್ಲಿಲ್ಲದ ಯಾವುದೋ ಸಂಪನ್ಮೂಲ ಈ ರಾಷ್ಟ್ರಗಳಲ್ಲಿದೆ. ಅವುಗಳಿಗೆ ತಂತ್ರಜ್ಞಾನವೋ, ಇನ್ಯಾವುದೋ ಅನುಕೂಲ ಇದೆ ಅಂತ ಭಾವಿಸಿಕೊಳ್ಳಬಹುದು. ಆದರೆ ಮೂವತ್ತೋ ನಲವತ್ತೋ ಪಟ್ಟು ಹೆಚ್ಚು ಶ್ರೀಮಂತವಾಗಿದ್ದರೆ ಅದು ಸ್ವಾಭಾವಿಕ ಅಂತ ಭಾವಿಸುವುದಕ್ಕೆ ಆಗುವುದಿಲ್ಲ. ಶಿಕ್ಷಣ, ತಂತ್ರಜ್ಞಾನ, ಯಂತ್ರಗಳ ಪ್ರಮಾಣ, ಸಂಪನ್ಮೂಲ, ಹವಾಮಾನ ಇವೆಲ್ಲಾ ಒಂದು ದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗಿರಬಹುದು. ಆದರೆ ಅವೇ ಪ್ರಧಾನ ಕಾರಣವಾಗುವುದಕ್ಕೆ ಸಾಧ್ಯವಿಲ್ಲ ಅನ್ನುವುದು ಅಸಿಮೊಗ್ಲು ಹಾಗೂ ಗೆಳೆಯರ ಅಭಿಪ್ರಾಯ. ಅವರ ದೃಷ್ಟಿಯಲ್ಲಿ ಒಂದು ದೇಶದಲ್ಲಿರುವ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳು ಅಲ್ಲಿಯ ಪ್ರಗತಿಯ ಹಾದಿಯನ್ನು ಮುಖ್ಯವಾಗಿ ನಿರ್ಧರಿಸುತ್ತವೆ.

ನಿಜ, ವಿಭಿನ್ನ ದೇಶಗಳಲ್ಲಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಆ ವ್ಯತ್ಯಾಸಗಳೇ ಆ ದೇಶಗಳಲ್ಲಿನ ಆರ್ಥಿಕ ವ್ಯತ್ಯಾಸಕ್ಕೆ ಕಾರಣ ಅನ್ನುವುದಕ್ಕೆ ಸಾಧ್ಯವೆ? ಯಾಕೆಂದರೆ ಶ್ರೀಮಂತ ದೇಶಗಳು ಬಡರಾಷ್ಟ್ರಗಳ ನಡುವೆ ಕೇವಲ ಸಾಂಸ್ಥಿಕ ವ್ಯತ್ಯಾಸಗಳು ಮಾತ್ರವಲ್ಲ ಬೇರೆ ಹಲವು ವ್ಯತ್ಯಾಸಗಳೂ ಇವೆ. ದೇಶಗಳ ನಡುವಿನ ಸಂಪತ್ತಿನ ವ್ಯತ್ಯಾಸಕ್ಕೆ ಅವುಗಳೂ ಕಾರಣವಿರಬಹುದು ಅಲ್ಲವೆ? ಅಷ್ಟೇ ಅಲ್ಲ ಆ ವ್ಯತ್ಯಾಸಗಳು ಅಲ್ಲಿಯ ಸಾಂಸ್ಥಿಕ ವ್ಯವಸ್ಥೆಯನ್ನು ಪ್ರಭಾವಿಸುತ್ತಿರಬಹುದಲ್ಲವೆ? ಈ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಈ ಮೂವರು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡರು. ವಸಾಹತೀಕರಣ ಜಗತ್ತಿನ ಬಹುಪಾಲು ದೇಶಗಳ ಮೇಲೆ ವಿಭಿನ್ನ ಪ್ರಭಾವವನ್ನು ಬೀರಿವೆ. ಅವುಗಳ ಬೆಳವಣಿಗೆಯ ಹಾದಿಯನ್ನು ಬದಲಿಸಿವೆ. ಜಗತ್ತಿನ ವಿವಿಧ ಕಡೆ ಐರೋಪ್ಯರ ವಸಾಹತೀಕರಣದ ಪ್ರಕ್ರಿಯೆಯನ್ನು ಹಾಗೂ ಅದರ ಪ್ರಭಾವವನ್ನು ಅಧ್ಯಯನ ಮಾಡುವ ಮೂಲಕ ಈ ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಐರೋಪ್ಯರು ತಾವು ಅಡಳಿತ ನಡೆಸಿದ ವಸಾಹತುಗಳಲ್ಲಿ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ವಿಭಿನ್ನ ಬಗೆಯ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ತಮಗೆ ಅನುಕೂಲವಾಗಿದ್ದ ಸಂಸ್ಥೆಗಳನ್ನು ಉಳಿಸಿಕೊಂಡಿದ್ದಾರೆ. ಅವರು ಎರಡು ಮುಖ್ಯ ಉದ್ದೇಶಗಳಿದ್ದವು. ಒಂದು ವಸಾಹುತುಗಳಲ್ಲಿ ಯುರೋಪಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ನಿಲ್ಲುವುದಕ್ಕೆ ಸಾಧ್ಯವಾಗಬೇಕಿತ್ತು. ಎರಡನೆಯದಾಗಿ ಸಂಪನ್ಮೂಲದ ಜೊತೆಗೆ ತಮಗಾಗಿ ದುಡಿಯುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಬೇಕಿತ್ತು. ವಸಾಹತುಶಾಹಿಗಳ ನಿರ್ಧಾರ ಹೆಚ್ಚಾಗಿ ವಸಾಹತುಗಳಲ್ಲಿದ್ದ ಪರಿಸ್ಥಿತಿಯನ್ನು ಅವಲಂಬಿಸಿತ್ತು. ಮುಖ್ಯವಾಗಿ ಎರಡು ಅಂಶಗಳು ವಸಾಹತುಶಾಹಿಗಳ ನಿಲುವನ್ನು ಪ್ರಭಾವಿಸಿವೆ ಅನ್ನುವುದು ಇವರ ಅಭಿಪ್ರಾಯ. ಒಂದು ವಸಾಹತುಗಳಲ್ಲಿದ್ದ ಆರೋಗ್ಯದ ಸ್ಥಿತಿ. ಎರಡನೆಯದು ಅಲ್ಲಿಯ ಜನಸಂಖ್ಯೆಯ ಸಾಂದ್ರತೆ.

ಅಸಿಮೊಗ್ಲು ಹಾಗೂ ಗೆಳೆಯರ ದೃಷ್ಟಿಯಲ್ಲಿ ವಸಾಹತುಗಳಲ್ಲಿ ಇದ್ದಂತಹ ಆರೋಗ್ಯದ ಸ್ಥಿತಿ ವಸಾಹತುಶಾಹಿಗಳು ಜಾರಿಗೆ ತಂದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬಹುವಾಗಿ ಪ್ರಭಾವಿಸಿವೆ. ವಸಾಹತುಗಳಲ್ಲಿನ ಆರೋಗ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಅವರು ಅಲ್ಲಿನ ಸಾವಿನ ಪ್ರಮಾಣವನ್ನು ಗಮನಿಸಿದರು. ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದರೆ ಅಲ್ಲಿ ಮಲೇರಿಯಾ, ಹಳದಿಜ್ವರ ಇತ್ಯಾದಿ ಗಂಭೀರ ಖಾಯಿಲೆಗಳು ಹೆಚ್ಚು ವ್ಯಾಪಕವಾಗಿವೆ ಎಂದು ಭಾವಿಸಬಹುದು. ಭಾರತದಲ್ಲಿ ಆಗ ಹರಡುತ್ತಿದ್ದ ಖಾಯಿಲೆಗಳು ನ್ಯೂಜಿಲ್ಯಾಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಬ್ರಿಟಿಷರನ್ನು ಕಾಡುತ್ತಿದ್ದ ಖಾಯಿಲೆಗಳಿಗಿಂತ ಹೆಚ್ಚು ಗಂಭೀರವಾಗಿತ್ತು ಹಾಗೂ ವ್ಯಾಪಕವಾಗಿತ್ತು. ಖಾಯಿಲೆಯ ಆತಂಕ ಹೆಚ್ಚಿದ್ದರೆ ಸ್ವಾಭಾವಿಕವಾಗಿಯೇ ಅಂತಹ ವಸಾಹತುಗಳಿಗೆ ಐರೋಪ್ಯರು ಬಂದು ನೆಲಸುವ ಸಾಧ್ಯತೆಗಳು ಕಡಿಮೆ. ಹಾಗಾಗಿ ನೆಲೆ ನಿಂತವರ ಸಂಖ್ಯೆ ಸ್ವಾಭಾವಿಕವಾಗಿಯೇ ಕಡಿಮೆ ಇರುತ್ತಿತ್ತು. ಹಾಗೆ ಅಲ್ಲಿ ನೆಲೆ ನಿಂತ ಕೆಲವೇ ಐರೋಪ್ಯ ಎಲೈಟುಗಳನ್ನು ರಕ್ಷಿಸಬೇಕಿತ್ತು. ಅವರ ಹಿತಾಸಕ್ತಿಯನ್ನು ಕಾಪಾಡಬೇಕಿತ್ತು. ಅದಕ್ಕಾಗಿ ಹೆಚ್ಚು ದಮನಕಾರಿಯಾದ ರಾಜಕೀಯ ಸಂಸ್ಥೆಗಳನ್ನು ಸ್ಥಾಪಿಸುವುದು ಅವರಿಗೆ ಅವಶ್ಯಕವಾಗಿತ್ತು.
ಕೆನಡಾ ಅಮೇರಿಕಾ ಅಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಇಂತಹ ಗಂಭೀರವಾದ ಖಾಯಿಲೆಗಳು ಅಷ್ಟಾಗಿ ಇರಲಿಲ್ಲ. ಹಾಗಾಗಿ ಅಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು. ಅಂತಹ ಪ್ರದೇಶಗಳಿಗೆ ಐರೋಪ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲೆಸಿದರು. ಅಲ್ಲಿ ಅವರು ತಮ್ಮ ಹಕ್ಕಿಗಾಗಿ ಒತ್ತಾಯಿಸುತ್ತಿದ್ದರು. ಸ್ವಾಭಾವಿಕವಾಗಿಯೇ ಎಲ್ಲರನ್ನೂ ಒಳಗೊಳ್ಳುವ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅವರು ಬಯಸುತ್ತಿದ್ದರು. ಅಂತಹ ಸಂಸ್ಥೆಗಳು ರೂಪುಗೊಳ್ಳುವ ಸಾಧ್ಯತೆಯೂ ಆ ವಸಾಹತುಗಳಲ್ಲಿ ಹೆಚ್ಚೇ ಇತ್ತು. ವಸಾಹತುಗಳಲ್ಲಿ ಇದ್ದಂತಹ ಖಾಯಿಲೆಗಳ ತೀವ್ರತೆಯೂ ಅಲ್ಲಿನ ರಾಜಕೀಯ ಹಾಗೂ ಆರ್ಥಿಕ ಸಂಘಟನೆಗಳ ಸ್ವರೂಪವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಅನ್ನುವ ತೀರ್ಮಾನಕ್ಕೆ ಅಸಿಮೊಗ್ಲು ಹಾಗೂ ಅವರ ಗೆಳೆಯರು ಬಂದರು. ಎಲ್ಲಿ ಐರೋಪ್ಯರನ್ನು ಖಾಯಿಲೆ ಹೆಚ್ಚು ತೀವ್ರವಾಗಿ ಬಾಧಿಸಿತ್ತೋ ಅಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ವ್ಯವಸ್ಥೆ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ದಾರಿದ್ರ್ಯ ಹೆಚ್ಚಿಗೆ ಇತ್ತು, ಭ್ರಷ್ಟಾಚಾರ ತೀವ್ರವಾಗಿತ್ತು, ಕಾನೂನು ವ್ಯವಸ್ಥೆ ದುರ್ಬಲವಾಗಿತ್ತು.

ವಸಾಹತುಶಾಹಿಗಳ ನಿಲುವನ್ನು ಪ್ರಭಾವಿಸಿದ ಇನ್ನೊಂದು ಅಂಶವೆಂದರೆ ವಸಾಹತುಗಳಲ್ಲಿನ ಜನಸಂಖ್ಯೆಯ ಸಾಂದ್ರತೆ. ಜನಸಂಖ್ಯೆಯ ಸಾಂದ್ರತೆ ಹೆಚ್ಚಿಗೆ ಇದ್ದ ವಸಾಹತುಗಳಲ್ಲಿ ವಸಾಹತುಶಾಹಿಗಳ ಆಳ್ವಿಕೆಗೆ ಹೆಚ್ಚಿನ ವಿರೋಧ ಬರುವ ಸಾಧ್ಯತೆ ಹೆಚ್ಚಿತ್ತು. ಅಂತಹ ಪ್ರದೇಶಗಳಲ್ಲಿ ಐರೋಪ್ಯರು ನೆಲೆಸುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಸಹಜವಾಗಿಯೇ ಅಲ್ಲಿ ನೆಲೆಸಿದ ಐರೋಪ್ಯರ ಸಂಖ್ಯೆ ಕಡಿಮೆಯಿತ್ತು. ಜೊತೆಗೆ ಅವೆಲ್ಲಾ ಹೆಚ್ಚು ಪ್ರಗತಿಯನ್ನು ಸಾಧಿಸಿದ್ದ ರಾಷ್ಟ್ರಗಳಾಗಿದ್ದವು. ವಸಾಹತುಶಾಹಿಗಳಿಗೆ ದೋಚುವುದಕ್ಕೆ ಚಿನ್ನ, ಬೆಳ್ಳಿ, ಸಕ್ಕರೆ ಇತ್ಯಾದಿ ಸಂಪನ್ಮೂಲಗಳು ಹೇರಳವಾಗಿ ಸಿಗುತ್ತಿತ್ತು. ಅಷ್ಟೇ ಅಲ್ಲ, ಜನ ಹೆಚ್ಚಿಗೆ ಇದ್ದದ್ದರಿಂದ ಒಮ್ಮೆ ಅವರನ್ನು ಬಗ್ಗುಬಡಿಯುವುದಕ್ಕೆ ಸಾಧ್ಯವಾಗಿಬಿಟ್ಟರೆ ದುಡಿಯುವುದಕ್ಕೆ ಜನ ಹೇರಳವಾಗಿ ಸಿಗುತ್ತಿದ್ದರು. ಆದರೆ ಅವರನ್ನು ನಿಯಂತ್ರಿಸುವುದಕ್ಕೆ, ಸಂಪನ್ಮೂಲವನ್ನು ದೋಚುವುದಕ್ಕೆ ಹೆಚ್ಚು ದಮನಕಾರಿಯಾದ ಸಂಸ್ಥೆಗಳು ಬೇಕಾಗುತ್ತಿತ್ತು. ಹಾಗಾಗಿ ನೆಲೆನಿಂತ ಕೆಲವೇ ಎಲೈಟುಗಳ ಹಿತಾಸಕ್ತಿಯನ್ನು ರಕ್ಷಿಸುತ್ತಾ, ಬಹುಸಂಖ್ಯಾತ ಸಾಮಾನ್ಯ ಜನರ ಹಿತಾಸಕ್ತಿಯನ್ನು ಬದಿಗೊತ್ತಲಾಯಿತು. ಸ್ಥಳೀಯರಿಗೆ ರಾಜಕೀಯ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಆಸಕ್ತಿಯನ್ನು ರಕ್ಷಿಸುವಂತಹ ನಾಯಕರನ್ನು ಆರಿಸಿಕೊಳ್ಳುವುದಕ್ಕೆ ಬೇಕಾದ ರಾಜಕೀಯ ಹಕ್ಕುಗಳು ಇರಲಿಲ್ಲ. ಇಂತಹ ದಮನಕಾರಿ ನೀತಿಯಿಂದ ಹಾಗೂ ಸಂಸ್ಥೆಗಳಿಂದ ವಸಾಹತುಗಳ ಆರ್ಥಿಕತೆ ಕ್ರಮೇಣ ನಾಶವಾಗುತ್ತಾ ಬಂದಿತು. ಅದರಿಂದ ಪ್ರಗತಿಗೆ ಅವಕಾಶವಿರಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಕಡಿಮೆ ಜನಸಾಂದ್ರತೆ ಇರುವ ವಸಾಹತುಗಳಲ್ಲಿ ಪ್ರತಿರೋಧದ ಸಾಧ್ಯತೆ ಕಡಿಮೆ. ಹಾಗಾಗಿ ಐರೋಪ್ಯರಿಗೆ ಅಂತಹ ಕಡೆಗಳಲ್ಲಿ ನೆಲೆಸುವುದು ಸುಲಭವಾಗಿತ್ತು. ಸಹಜವಾಗಿಯೇ ಹೆಚ್ಚಿನ ಐರೋಪ್ಯರು ಅಲ್ಲಿ ನೆಲೆಸಿದರು. ಅವರ ಹಿತದೃಷ್ಟಿಯಿಂದ ಹೆಚ್ಚು ಪಾಲುದಾರಿಕೆ ಇರುವ ಆರ್ಥಿಕ ಸಂಸ್ಥೆಗಳನ್ನು ಅಂತಹ ವಸಾಹತುಗಳಲ್ಲಿ ಅವರು ಸ್ಥಾಪಿಸಿದರು. ಅವರು ರಾಜಕೀಯ ಹಕ್ಕಿಗಾಗಿ ಒತ್ತಾಯಿಸಿದರು. ಅಂತಹ ಹಕ್ಕಿನಿಂದ ಅವರಿಗೆ ಲಾಭದಲ್ಲಿ ಪಾಲು ಸಿಗುವುದಕ್ಕೆ ಸಾಧ್ಯವಾಯಿತು. ಅಂತಹ ಸಂಸ್ಥೆಗಳಿಂದ ದೀರ್ಘಕಾಲೀನ ಅವಧಿಯಲ್ಲಿ ಬಹುಸಂಖ್ಯಾತರ ಪ್ರಗತಿಗೆ ಅನುಕೂಲವಾಯಿತು. ನೆಲೆ ನಿಂತವರಿಗೆ ಹೊಸ ನಾಡಿನಲ್ಲಿ ಹೆಚ್ಚು ದುಡಿಯುವುದಕ್ಕೆ, ಹೂಡಿಕೆ ಮಾಡುವುದಕ್ಕೆ ಉತ್ತೇಜನ ಸಿಕ್ಕಿತು. ಈಗಿನ ಅರ್ಥದಲ್ಲಿ ಆಗಿನ ಐರೋಪ್ಯ ವಸಾಹತುಗಳು ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲ. ದಮನಕಾರಿಯಾಗಿದ್ದಂತಹ ಆಡಳಿತ ಜಾರಿಯಲ್ಲಿದ್ದ ದೇಶಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ರಾಜಕೀಯ ಸ್ವಾತಂತ್ರ್ಯವಿತ್ತು. ಅಮೇರಿಕೆ ಅಥವಾ ಆಸ್ಟ್ರೇಲಿಯಾಗಳಲ್ಲಿ ಹೆಚ್ಚು ಪ್ರಜಾಸತ್ತಾತ್ಮಕ ಸಂಸ್ಥೆಗಳು ಚಾಲ್ತಿಯಲ್ಲಿದ್ದವು.

ಯುರೋಪಿನಲ್ಲಿ ಇದ್ದುದಕ್ಕಿಂತಲೂ ಉತ್ತಮವಾದ ಸಂಸ್ಥೆಗಳು ಇದ್ದವು. ಅವೆಲ್ಲಾ ಸಾಧ್ಯವಾಗಿದ್ದು ಅಲ್ಲಿ ನೆಲೆಸಿದ ಐರೋಪ್ಯರ ಒತ್ತಾಯದಿಂದ.
ಆರ್ಥಿಕ ಅಭಿವೃದ್ಧಿಯಲ್ಲಿ ಆಯಾ ದೇಶಗಳಲ್ಲಿರುವ ಸಂಸ್ಥೆಗಳು ಬಹುಮಟ್ಟಿಗೆ ಕಾರಣ ಅನ್ನುವುದು ಅವರ ಅಭಿಪ್ರಾಯ. ಇದಕ್ಕೆ ಅವರು ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಉತ್ತರ ಹಾಗೂ ದಕ್ಷಿಣ ಕೊರಿಯಾದಲ್ಲಿ ಹವಾಮಾನ, ಸಂಸ್ಕೃತಿ ಇತ್ಯಾದಿ ಬಹುತೇಕ ಅಂಶಗಳು ಸಮಾನವಾಗಿವೆ. ವ್ಯತ್ಯಾಸವಿರುವುದು ಅಲ್ಲಿರುವ ಸಂಸ್ಥೆಗಳಲ್ಲಿ. ಹಾಗೆಯೇ ಅಮೇರಿಕ ಹಾಗೂ ಮೆಕ್ಸಿಕೋದ ಗಡಿಪ್ರದೇಶದಲ್ಲಿರುವ ನೋಗಲ್ಸ್ ಪಟ್ಟಣ ಮತ್ತೊಂದು ಉದಾಹರಣೆ. ನಡುವೆ ಇರುವ ಒಂದು ಬೇಲಿ ನೋಗೆಲ್ಸ್ ನಗರವನ್ನು ಎರಡಾಗಿ ವಿಭಜಿಸುತ್ತದೆ. ನೀವು ಆ ಬೇಲಿಯ ಬಳಿ ನಿಂತು ಉತ್ತರಕ್ಕೆ ನೋಡಿದರೆ, ನೋಗಲ್ಸ್, ಅರಿಜೊನ, ಅಮೇರಿಕೆ ನಿಮ್ಮ ಎದುರಿಗಿರುತ್ತದೆ. ಅಲ್ಲಿಯ ನಿವಾಸಿಗಳು ಸಾಕಷ್ಟು ಸ್ಥಿತಿವಂತರು. ಹೆಚ್ಚು ದೀರ್ಘಾಯುಷಿಗಳು. ಮಕ್ಕಳು ಹೆಚ್ಚು ಓದಿರುತ್ತಾರೆ. ಆಸ್ತಿ ಹಕ್ಕು ಹೆಚ್ಚು ಸುಭದ್ರವಾಗಿರುತ್ತದೆ. ತಮ್ಮ ಹೂಡಿಕೆಗೆ ಹೆಚ್ಚಿನ ಲಾಭ ಸಿಗುತ್ತದೆ ಅನ್ನುವ ಖಾತ್ರಿ ಜನರಿಗಿದೆ. ತಮ್ಮ ನಾಯಕರನ್ನು ಆರಿಸಿಕೊಳ್ಳುವುದಕ್ಕೆ ಬೇಕಾದ ಚುನಾವಣಾ ವ್ಯವಸ್ಥೆ ಇದೆ. ಅದೇ ದಕ್ಷಿಣದ ಕಡೆ ಮುಖ ಮಾಡಿ ನಿಂತರೆ ನೋಗಲ್ಸ್, ಸೊನೊರ, ಮೆಕ್ಸಿಕೋ ದೇಶಗಳು ಇವೆ. ಬೇಲಿಯ ಉತ್ತರದ ಕಡೆ ಇರುವವರಿಗೆ ಹೋಲಿಸಿದರೆ ಇಲ್ಲಿಯ ಜನ ಬಡವರು. ಸಂಘಟಿತ ದರೋಡೆ ವಿಪರೀತವಾಗಿದೆ. ಉದ್ದಿಮೆಗಳನ್ನು ನಡೆಸುವುದು ಕಷ್ಟ. ಭ್ರಷ್ಟ ರಾಜಕಾರಣಿಗಳು ಅಧಿಕಾರವನ್ನು ಹಿಡಿದಿದ್ದಾರೆ.

ಒಂದೇ ನಗರದ ಎರಡು ಭಾಗಗಳಲ್ಲಿ ಇರುವ ಈ ಪ್ರಮಾಣದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಭೌಗೋಳಿಕವಾಗಿ ಒಂದು ಸ್ಥಳದಲ್ಲಿವೆ. ಹಾಗಾಗಿ ಅಲ್ಲಿಯ ಹವಾಮಾನದಲ್ಲಿ ವ್ಯತ್ಯಾಸವಿಲ್ಲ. ಎರಡೂ ಕಡೆಯ ಜನ ಒಂದೇ ಮೂಲದಿಂದ ಬಂದವರು. ಸಾಂಸ್ಕೃತಿಕವಾಗಿಯೂ ಸಾಮ್ಯತೆ ಇದೆ. ಒಂದೇ ರೀತಿಯ ಆಹಾರ ತಿನ್ನುತ್ತಾರೆ. ಸುಮಾರಾಗಿ ಒಂದೇ ರೀತಿಯ ಸಂಗೀತ ಕೇಳುತ್ತಾರೆ. ಹಾಗಾಗಿ ವ್ಯತ್ಯಾಸಕ್ಕೆ ಭೌಗೋಳಿಕ, ಸಾಂಸ್ಕೃತಿಕ ಅಂಶಗಳು ಕಾರಣವಲ್ಲ. ಇರುವ ಒಂದೇ ಸಾಧ್ಯತೆ ಅಂದರೆ ಎರಡು ಕಡೆ ಇರುವ ವಿಭಿನ್ನ ಸಂಸ್ಥೆಗಳು ಕಾರಣ. ಬೇಲಿಯ ಉತ್ತರಕ್ಕಿರುವವರು ಅಮೇರಿಕೆಯ ಆರ್ಥಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆ. ತಮ್ಮ ಶಿಕ್ಷಣ ಹಾಗೂ ವೃತ್ತಿಯನ್ನು ಆರಿಸಿಕೊಳ್ಳುವುದಕ್ಕೆ ಜನರಿಗೆ ಹೆಚ್ಚಿನ ಅವಕಾಶಗಳಿವೆ. ಹೆಚ್ಚಿನ ರಾಜಕೀಯ ಹಕ್ಕುಗಳಿವೆ. ಬೇಲಿಯ ದಕ್ಷಿಣಕ್ಕಿರುವ ನಿವಾಸಿಗಳು ಅಷ್ಟು ಅದೃಷ್ಟವಂತರಲ್ಲ. ಅಲ್ಲಿರುವ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ವ್ಯವಸ್ಥೆ ಬೇರೆ. ಅವರಿಗೆ ತಮ್ಮ ದೇಶದ ಆಡಳಿತವನ್ನು ಪ್ರಭಾವಿಸುವ ಯಾವುದೇ ಸಾಮರ್ಥ್ಯವೂ ಇಲ್ಲ.

ನೋಬೆಲ್ ಪುರಸ್ಕೃತರ ಪ್ರಕಾರ ಇದಕ್ಕೆ ನೋಗೆಲ್ಸ್ ಅಪವಾದವಲ್ಲ. ವಸಾಹತೀಕರಣ ನಡೆದ ಎಲ್ಲಾ ಕಡೆಗಳಲ್ಲೂ ಇದೇ ರೀತಿಯ ಪ್ರಕ್ರಿಯೆಯನ್ನು ನೋಡಬಹುದು. ವಸಾಹತುಶಾಹಿಗಳು ಬ್ರಿಟಿಷರು, ಫ್ರೆಂಚರು, ಪೋರ್ಚಗೀಸರು, ಸ್ಪೇನಿನವರು ಯಾರೇ ಆಗಿರಲಿ ಎಲ್ಲಾ ಕಡೆಯೂ ಕಾಣುವುದು ಇದೇ ರೀತಿಯ ಬೆಳೆವಣಿಗೆ. ಇದೇ ಕಾರಣಕ್ಕೆ ೫೦೦ ವರ್ಷಗಳ ತೀರಾ ಶ್ರೀಮಂತವಾಗಿದ್ದ ಹಾಗೂ ಜನಸಂಖ್ಯೆಯ ಸಾಂದ್ರತೆ ಹೆಚ್ಚಿದ್ದ ರಾಷ್ಟ್ರಗಳಲ್ಲಿ ಅವರು ಹೆಚ್ಚು ದಮನಕಾರಿಯಾಗಿದ್ದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಅದು ಪ್ರಗತಿಗೆ ಮಾರಕವಾಗಿತ್ತು. ಆ ವ್ಯವಸ್ಥೆಯ ಎಷ್ಟೋ ಲಕ್ಷಣಗಳು ಇಂದಿಗೂ ಆ ದೇಶಗಳಲ್ಲಿ ಉಳಿದುಕೊಂಡೇ ಬಂದಿವೆ. ಆ ಕಾರಣಕ್ಕಾಗಿಯೇ ಹಿಂದೆ ತೀರಾ ಶ್ರೀಮಂತವಾಗಿದ್ದ ಆ ದೇಶಗಳು ಈಗ ಬಡರಾಷ್ಟ್ರಗಳಾಗಿವೆ.
ಜನಸಂಖ್ಯೆ ಕಡಿಮೆ ಇದ್ದ ಬಡ ದೇಶಗಳಲ್ಲಿ ಹೆಚ್ಚಿನ ಯುರೋಪಿಯನ್ನರು ನೆಲೆ ನಿಂತಿದ್ದರು. ಅವರಿಗೆ ಹೆಚ್ಚಿನ ಸ್ವಾತಂತ್ರವನ್ನು ಕೊಡುವ ಉದ್ದೇಶದಿಂದ ಹಾಗೂ ಅವರ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹೆಚ್ಚು ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಹಾಗಾಗಿ ಕೈಗಾರಿಕೀರಣದ ನಂತರ ಆ ದೇಶಗಳಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. ಆ ರಾಷ್ಟ್ರಗಳು ಹೆಚ್ಚು ಶ್ರೀಮಂತವಾಗಿವೆ. ಉದಾಹರಣೆಗೆ ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಅಮೇರಿಕೆಗಿಂತ ಭಾರತ ಕೈಗಾರಿಕೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿತ್ತು. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಿಂದ ಈ ರಾಷ್ಟ್ರಗಳಲ್ಲಿ ಮೂಲಭೂತ ಬದಲಾವಣೆಯಾಗುವುದಕ್ಕೆ ಪ್ರಾರಂಭವಾಯಿತು. ಹೆಚ್ಚಿನ ಜನರಿಗೆ ಅನುಕೂಲವಾಗುವಂತಹ ಸಂಸ್ಥೆಗಳು ಇರುವ ಕಡೆಗಳಲ್ಲಿ ಮಾತ್ರ ತಾಂತ್ರಿಕ ಅನ್ವೇಷಣೆಗಳು ಚಾಲ್ತಿಗೆ ಬಂದವು. ಅಂತಹ ವಸಾಹತುಗಳಲ್ಲಿ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಆರ್ಥಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಸಾಧ್ಯತೆ ಹೆಚ್ಚು.

ಆರ್ಥಿಕ ಬದಲಾವಣೆಯಾಗಿರುವುದು ವಸಾಹತೀಕರಣಗೊಂಡ ದೇಶಗಳಲ್ಲಿ ಮಾತ್ರ. ವಸಾಹತೀಕರಣಗೊಳ್ಳದ ದೇಶಗಳ ಶ್ರೀಮಂತಿಕೆಯಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ. ಅಷ್ಟೇ ಅಲ್ಲ ವಸಾಹತುಶಾಹೀ ಪೂರ್ವದಲ್ಲೂ ಇಂತಹ ಬದಲಾವಣೆಯಾಗಿಲ್ಲ. ಅಲ್ಲೆಲ್ಲಾ ಶ್ರೀಮಂತ ರಾಷ್ಟ್ರಗಳು ಶ್ರೀಮಂತವಾಗಿಯೇ ಉಳಿದಿವೆ. ಬಡರಾಷ್ಟ್ರಗಳು ಹಾಗೆಯೇ ಉಳಿದಿವೆ. ಎಲ್ಲೆಲ್ಲಿ ಸಂಸ್ಥೆಗಳು ಬದಲಾಗಿವೆಯೋ ಅಲ್ಲೆಲ್ಲಾ ಆರ್ಥಿಕತೆಯೂ ಬದಲಾಗಿದೆ. ೧೬ನೇ ಶತಮಾನದ ನಂತರ ವಸಾಹುತಶಾಹಿಗಳು ಜಾರಿಗೆ ತಂದ ಸಂಸ್ಥೆಗಳು ಈ ಬದಲಾವಣೆಯಲ್ಲಿ ಮಹತ್ತರ ಪಾತ್ರವಹಿಸಿವೆ ಎನ್ನುವ ನಿಲುವಿಗೆ ಈ ಆರ್ಥಿಕತಜ್ಞರು ಬಂದಿದ್ದಾರೆ. ಆಗ ತೀರಾ ಶ್ರೀಮಂತವಾಗಿದ್ದ ರಾಷ್ಟ್ರಗಳಲ್ಲಿ ಅವರು ಪ್ರಾರಂಭಿಸಿದ್ದ ದಮನಕಾರಿಯ ನೀತಿಯಿಂದಾಗಿ ಆ ರಾಷ್ಟ್ರಗಳು ಇಂದು ತೀರಾ ಬಡರಾಷ್ಟ್ರಗಳಾಗಿವೆ. ಹಾಗೆಯೇ ಅಂದು ಬಡವಾಗಿದ್ದ ರಾಷ್ಟ್ರಗಳಲ್ಲಿ ಅವರು ಸ್ಥಾಪಿಸಿದ್ದ ಒಳಗೊಳ್ಳುವ ಒಳ್ಳೆಯ ವ್ಯವಸ್ಥೆಯಿಂದಾಗಿ ಆ ರಾಷ್ಟ್ರಗಳಲ್ಲಿ ಇಂದು ಅಭಿವೃದ್ಧಿ ಸಾಧ್ಯವಾಗಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಅಧ್ಯಯನದ ಮೂಲಕ ದೇಶಗಳ ನಡುವೆ ಇರುವ ಸಂಪತ್ತಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ಮೂರು ಅರ್ಥಶಾಸ್ತ್ರಜ್ಞರು ಒಂದು ಹೊಸ ನೋಟವನ್ನು ನೀಡಿದ್ದಾರೆ. ಈವರೆಗೂ ಸಂಪತ್ತಿನ ವ್ಯತ್ಯಾಸಕ್ಕೆ ಭೌಗೋಳಿಕ ಹಾಗೂ ಹವಾಮಾನದ ವ್ಯತ್ಯಾಸವನ್ನು ಕಾರಣವನ್ನಾಗಿ ನೋಡಲಾಗುತ್ತಿತ್ತು. ಸಮಶೀತೋಷ್ಣ ವಲಯದಲ್ಲಿರುವರು ಆರ್ಥಿಕವಾಗಿ ಹೆಚ್ಚು ಉತ್ಪಾದಕವಾಗಿರುತ್ತಾರೆ. ಭೂಮಧ್ಯರೇಖೆಯ ಸಮೀಪದಲ್ಲಿರುವ ದೇಶಗಳು ಹೆಚ್ಚು ಬಡವಾಗಿರುತ್ತವೆ ಅನ್ನುವ ವಾದವಿತ್ತು. ಆದರೆ ಹವಾಮಾನವೇ ಕಾರಣವಾಗಿದ್ದರೆ ನಂತರದ ದಿನಗಳಲ್ಲಿ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಏಕೆ ಆಯಿತು ಅನ್ನುವ ಪ್ರಶ್ನೆ ಉಳಿಯುತ್ತದೆ. ಬದಲಾವಣೆಯಾಗಿರುವುದು ಅಸ್ತಿತ್ವದಲ್ಲಿದ್ದ ಸಂಸ್ಥೆಗಳು ಮಾತ್ರವಾದ್ದರಿಂದ ಅವೇ ಆರ್ಥಿಕ ಸ್ಥಿತಿಯ ಬದಲಾವಣೆಗೂ ಕಾರಣ ಎನ್ನುವುದು ಇವರ ವಾದ. ಜನರನ್ನು ಶೋಷಿಸಲು ಸೃಷ್ಟಿಸಿದ ದಮನಕಾರಿಯಾದ ಸಂಸ್ಥೆಗಳು ಆ ಸಂಧರ್ಭಕ್ಕೆ ಅನುಕೂಲವಾಗಿರಬಹುದು. ಆದರೆ ದೀರ್ಘಕಾಲೀನ ಬೆಳವಣಿಗೆಗೆ ಅಂತಹ ಸಂಸ್ಥೆಗಳು ಮಾರಕ. ಎಲ್ಲರನ್ನೂ ಒಳಗೊಳ್ಳುವ, ದಮನಕಾರಿಯಲ್ಲದ ಹಾಗೂ ಕಾನೂನು ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುವ ಸಂಸ್ಥೆಗಳು ದೀರ್ಘಕಾಲೀನ ದೃಷ್ಟಿಯಿಂದ ತುಂಬಾ ಅನುಕೂಲ.

ಎಲೈಟುಗಳು ಈಗಿರುವ ಆರ್ಥಿಕ ವ್ಯವಸ್ಥೆಯ ತೆಗೆದುಹಾಕಿ ಎಲ್ಲರಿಗೂ ಅನುಕೂಲಕರವಾಗಿರುವ ಹೊಸ ವ್ಯವಸ್ಥೆಯನ್ನು ಏಕೆ ಜಾರಿಗೆ ತರಬಾರದು ಅನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಅಂದರೆ ವ್ಯವಸ್ಥೆಗಳು ಹಾಗೆ ಬಹುಕಾಲ ಉಳಿಯುವುದಕ್ಕೆ ಕಾರಣಗಳೇನು? ಎಲೈಟುಗಳು ಹಾಗೂ ಜನತೆಯ ನಡುವಿನ ರಾಜಕೀಯ ಅಧಿಕಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಹಾಗೆಯೇ ಅವರ ನಡುವೆ ವಿಶ್ವಾಸಾರ್ಹತೆಯ ಸಮಸ್ಯೆಯೂ ಇದೆ. ರಾಜಕೀಯ ವ್ಯವಸ್ಥೆ ಎಲೈಟುಗಳಿಗೆ ಅನುಕೂಲವಾಗಿರುವ ತನಕ ಅವರು ಅದನ್ನು ಬದಲಿಸುತ್ತಾರೆ ಅನ್ನುವ ನಂಬಿಕೆ ಜನತೆಗೆ ಇರುವುದಿಲ್ಲ. ಅವರನ್ನು ಇಳಿಸಿ, ಹೊಸ ವ್ಯವಸ್ಥೆಯನ್ನು ತಂದರೆ ಸುಧಾರಣೆಗೆ ಅವಕಾಶವಿರುತ್ತದೆ. ಆದರೆ ಅದಕ್ಕೆ ಒಪ್ಪಿಕೊಂಡರೆ ತಮಗೆ ಅನುಕೂಲವಾಗುತ್ತದೆ ಅನ್ನುವ ಭರವಸೆ ಎಲೈಟುಗಳಿಗೆ ಇರುವುದಿಲ್ಲ. ಅವರು ಬದಲಾವಣೆಗೆ ಒಪ್ಪಿಕೊಂಡಿದ್ದಕ್ಕೆ ತಮಗಾದ ನಷ್ಟವನ್ನು ಜನತೆ ತುಂಬಿಕೊಡುತ್ತಾರೆ ಅನ್ನುವ ವಿಶ್ವಾಸ ಎಲೈಟುಗಳಿಗೆ ಇರುವುದಿಲ್ಲ. ಪರಿಹಾರ ನೀಡುವುದಕ್ಕೆ ಒಪ್ಪಿಕೊಂಡಿದ್ದರೂ ಒಮ್ಮೆ ಅಧಿಕಾರವನ್ನು ಬಿಟ್ಟುಕೊಟ್ಟ ಮೇಲೆ ಎಲೈಟುಗಳಿಗೆ ಪರಿಹಾರ ನೀಡಲೇ ಬೇಕಾದ ಒತ್ತಡ ಜನತೆಯ ಮೇಲೆ ಇರುವುದಿಲ್ಲ. ಇದನ್ನು ಅವರು ಬದ್ಧತೆಯ ಸಮಸ್ಯೆ ಎಂದು ಕರೆಯುತ್ತಾರೆ. ಇದನ್ನು ಮೀರಿಕೊಳ್ಳುವುದು ಕಷ್ಟ. ದಮನಕಾರಿಯಾದ, ಶ್ರೀಮಂತ ಎಲೈಟುಗಳ ನಿಯಂತ್ರಣದಲ್ಲಿರುವ ಸಂಸ್ಥೆಯ ಹಿಡಿತದಲ್ಲಿ ಸಮಾಜ ಸಿಕ್ಕಿಬೀಳುತ್ತದೆ. ಆದರೆ ಎಲೈಟುಗಳಿಗೆ ಒಂದು ಆತಂಕ ಯಾವಾಗಲೂ ಕಾಡುತ್ತಿರುತ್ತದೆ. ಅದು ಸಾಮಾನ್ಯ ಜನರ ದೊಡ್ಡ ಸಂಖ್ಯೆ. ಜನ ಸಂಘಟಿತರಾಗಿ ಕ್ರಾಂತಿಕಾರಿ ಶಕ್ತಿಯಾಗಬಹುದಾದ ಭೀತಿ ಅವರನ್ನು ಕಾಡುತ್ತಿರುತ್ತದೆ. ಅಂತಹ ಆಂದೋಲನಗಳು ಹಿಂಸಾತ್ಮಕವೂ ಆಗಬಹುದು ಅನ್ನುವ ಆತಂಕ ಅವರಿಗಿರುತ್ತದೆ. ಈ ಆಪಾಯ ತೀವ್ರವಾದಾಗ ಎಲೈಟುಗಳು ದ್ವಂದ್ವದಲ್ಲಿ ಸಿಕ್ಕಿಬೀಳುತ್ತಾರೆ. ಜನರಿಗೆ ಆರ್ಥಿಕ ಸುಧಾರಣೆಗಳ ಆಶ್ವಾಸನೆ ಕೊಡುವ ಮೂಲಕ ರಮಿಸಿ, ಅಧಿಕಾರದಲ್ಲಿ ಉಳಿಯಲು ಪ್ರಯತ್ನಿಸುತ್ತಾರೆ. ಅದು ಅವರ ಆದ್ಯತೆಯಾಗಿರುತ್ತದೆ. ಆದರೆ ಅಂತಹ ಭರವಸೆಗಳು ಜನರಲ್ಲಿ ವಿಶ್ವಾಸವನ್ನು ಮೂಡಿಸುವುದಿಲ್ಲ. ಯಾಕೆಂದರೆ, ಎಲೈಟುಗಳು ಅಧಿಕಾರದಲ್ಲಿ ಉಳಿದುಕೊಂಡರೆ ಒಮ್ಮೆ ಪರಿಸ್ಥಿತಿ ತಿಳಿಗೊಂಡ ಕೂಡಲೆ ಹಿಂದಿನ ಸ್ಥಿತಿಗೆ ಹೋಗುತ್ತಾರೆ ಎನ್ನುವ ಅರಿವು ಜನರಿಗಿದೆ. ಇಂತಹ ಸಂದರ್ಭದಲ್ಲಿ ಎಲೈಟುಗಳಿಗೆ ಇರುವ ಒಂದೇ ಪರ್ಯಾಯವೆಂದರೆ ಅಧಿಕಾರವನ್ನು ಬಿಟ್ಟ್ಟಕೊಟ್ಟು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅವಕಾಶ ಮಾಡಿಕೊಡುವುದು. ಬ್ರಿಟಿಷರಿಗೆ ಆಗಿದ್ದೂ ಇದೆ. ವಸಾಹತುಗಳಲ್ಲಿ ಹುಟ್ಟಿಕೊಂಡ ಕ್ರಾಂತಿಕಾರಿ ವಿರೋಧವನ್ನು ಸುಧಾರಣೆಯ ಭರವಸೆಯ ಮೂಲಕ ನಿವಾರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಬೇಕಾದ ವಿಶ್ವಾಸವನ್ನು ಅವರು ಕಳೆದುಕೊಂಡಿದ್ದರು. ಮನಸ್ಸಿಲ್ಲದಿದ್ದರೂ ಅಧಿಕಾರವನ್ನು ಬಿಟ್ಟುಕೊಡುವುದು ಅನಿವಾರ್ಯವಾಯಿತು. ಸ್ವೀಡನ್ನಿನಲ್ಲಿಯೂ ಮುಷ್ಕರ ತೀವ್ರವಾದಾಗ ೧೯೧೮ರಲ್ಲಿ ಮತದಾನದ ಹಕ್ಕನ್ನು ಕೊಡಬೇಕಾಯಿತು. ಈ ವಿವರಣೆಯ ಮೂಲಕ ಅವರು ಯಾಕೆ ವಿಭಿನ್ನ ಸಂಸ್ಥೆಗಳು ಉಳಿದುಕೊಂಡು ಬಂದಿವೆ ಹಾಗೂ ಹೇಗೆ ಇವುಗಳನ್ನು ಬದಲಿಸಬಹುದು ಅನ್ನುವುದನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಇಂದು ಜಗತ್ತಿನಾದ್ಯಂತ ಪ್ರಜಾಸತ್ತೆ ಬಿಕ್ಕಟ್ಟಿನಲ್ಲಿದೆ. ಅಷ್ಟೇ ಅಲ್ಲ ಅದಕ್ಕೆ ಜನರ ಸಮರ್ಥನೆಯೂ ಕಡಿಮೆಯಾಗುತ್ತಿದೆ. ಆದರೆ ಈಗ ಇರುವ ಸಂಸ್ಥೆಗಳಲ್ಲಿ ಪ್ರಜಾಸತ್ತೆ ಒಂದು ಉತ್ತಮ ವ್ಯವಸ್ಥೆ ಅನ್ನುವುದು ಅವರ ಅಭಿಪ್ರಾಯ. ಅವರು ಪ್ರಜಾಸತ್ತೆಯಿಂದ ಆರ್ಥಿಕ ಪ್ರಗತಿಗೆ ತೊಂದರೆಯಾಗುತ್ತದೆ ಅನ್ನುವ ವಾದವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ಪ್ರಜಾಸತ್ತೆ ಆರ್ಥಿಕ ಪ್ರಗತಿಯ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತದೆ. ಪ್ರಜಾಸತ್ತೆ ಬಂದ ಕೂಡಲೆ ಸಂಪೂರ್ಣ ಬದಲಾವಣೆಯಾಗಿಬಿಡುತ್ತದೆ ಅಂತ ಅಲ್ಲ. ನೈಜೀರಿಯಾ ಸ್ವಿಟ್ಜರ್‌ಲ್ಯಾಂಡ್ ಆಗಿಬಿಡುವುದಿಲ್ಲ. ಅದರೆ ಅಂತಹ ರಾಷ್ಟ್ರಗಳಲ್ಲಿ ಶೇಕಡ ೨೦ರಿಂದ ೨೫ರಷ್ಟು ಜಿಡಿಪಿಯಲ್ಲಿ ಹೆಚ್ಚಳವಾಗುತ್ತದೆ ಅನ್ನುತ್ತಾರೆ. ಎರಡನೆಯದಾಗಿ ಅಂತಹ ರಾಷ್ಟ್ರಗಳಲ್ಲಿ ಶಿಕ್ಷಣ, ಆರೋಗ್ಯ ಇತ್ಯಾದಿ ಸಾರ್ವಜನಿಕ ಸೇವೆಗಳ ಮೇಲೆ ಸರ್ಕಾರದ ವೆಚ್ಚ ಹೆಚ್ಚುತ್ತದೆ. ಇದು ಸಮಾಜವನ್ನು ಪ್ರಗತಿಯ ಕಡೆಗೆ ಸಮಾನತಯ ಕಡೆಗೆ ಒಯ್ಯುತ್ತದೆ. ಪ್ರಾರಂಭದಲ್ಲಿ ಬದಲಾವಣೆ ನಿಧಾನವಾಗಿ ಆಗುತ್ತದೆ. ಆದರೆ ಏಳೆಂಟು ವರ್ಷಗಳಲ್ಲಿ ಬದಲಾವಣೆಯ ವೇಗ ತೀವ್ರವಾಗುತ್ತದೆ.
ಆದರೆ ಪ್ರಜಾಸತ್ತೆಯನ್ನು ಮೇಲಿನಿಂದ ಹೇರುವುದಕ್ಕೆ ಆಗುವುದಿಲ್ಲ. ಪ್ರಜಾಸತ್ತೆ ಅಂದರೆ ಅದು ಪ್ರಜಾಸತ್ತಾತ್ಮಕ ಪೌರತ್ವ, ಸಹಮತ, ಸಂವಹನ, ಸೋಲನ್ನು ಒಪ್ಪಿಕೊಳ್ಳುವುದು, ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು, ಬೇರೆಯವರ ಅಭಿಪ್ರಾಯವನ್ನು ಕೇಳಿಸಿ ಕೊಳ್ಳುವುದು, ಅವರನ್ನು ಅರ್ಥಮಾಡಿಕೊಳ್ಳುವುದು ಇವೆಲ್ಲವೂ ಆಗಿರುತ್ತದೆ. ಬಿಕ್ಕಟ್ಟಿನ ಸಮಯದಲ್ಲಂತೂ ಇದರ ಆಚರಣೆ ಹೆಚ್ಚು ಕಷ್ಟ. ಸಾಮಾಜಿಕ ಮಾಧ್ಯಮಗಳು, ತಂತ್ರಜ್ಞಾನ ಇವೆಲ್ಲವನ್ನು ಯಾರು ನಿಯಂತ್ರಿಸುತ್ತಾರೆ, ಯಾರಿಗೆ ಅನುಕೂಲವಾಗುತ್ತದೆ. ಇವೆಲ್ಲಾ ಮುಖ್ಯ. ಎಲ್ಲರನ್ನು ಒಳಗೊಳ್ಳುವ, ಶುದ್ಧ ಆಳ್ವಿಕೆಯನ್ನು ನೀಡುವ, ಪ್ರಗತಿಯ ಫಲವನ್ನು ಹಂಚಿಕೊಳ್ಳುವ ವಿಷಯದಲ್ಲಿ ಪ್ರಜಾಸತ್ತಾತ್ಮಕ ಪಕ್ಷಗಳು ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದುಕೊಂಡಿವೆ. ಇಂದು ಪ್ರಜಾಸತ್ತೆ ಸುರಕ್ಷಿತವಾಗಿದೆ ಹಾಗೂ ಅದಕ್ಕೆ ಯಾವುದೇ ಆತಂಕವಿಲ್ಲ ಅನ್ನುವುದು ಮಿಥ್ಯೆ. ಪ್ರಜಾಸತ್ತೆ ಇಂದು ಜಗತ್ತಿನಾದ್ಯಂತ ಅಪಾಯದಲ್ಲಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಅಪಬಳಕೆಯಿಂದ ಈ ಅಪಾಯ ಇನ್ನಷ್ಟು ಹೆಚ್ಚಬಹುದು ಅನ್ನುವ ಆತಂಕ ಅವರಿಗಿದೆ. ಅವರ ಅಧ್ಯಯನ ನಮ್ಮನ್ನು ಆ ಬಗ್ಗೆ ಎಚ್ಚರದಿಂದಿರಲು ಒತ್ತಾಯಿಸುತ್ತದೆ.