೧೯೭೦ರಲ್ಲಿ ಸಾಮಾಜಿಕ ಚರಿತ್ರೆಯ ಬಗ್ಗೆ, ಕುಟುಂಬ ಹಾಗೂ ಕುಟುಂಬದ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡೋ ಆಸಕ್ತಿ ಪ್ರಾರಂಭವಾಗಿತ್ತು. ಆದರೆ ಒಬ್ಬ ವ್ಯಕ್ತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆಕೆ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ಅದ್ಯಾಕೊ ಎಲ್ಲರೂ ಮನೆಯೊಳಗೆ ದುಡಿಯುತ್ತಿದ್ದ ಮಡದಿ, ತಾಯಿಯನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅವಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಇನ್ನೂ ಮಾತನಾಡೋದು ಎಲ್ಲಿಂದ ಬಂತು. ಅವಳ ಚರಿತ್ರೆಯನ್ನು ಬರೆಯಬೇಕು ಅಂತ ತೀರ್ಮಾನಿಸಿದೆ.
ಹೀಗೆ ಶುರು ಆಯಿತು ಕ್ಲಾಡಿಯಾ ಗೋಲ್ಡಿನ್ ಅವರ ಜೆಂಡರ್ ಗ್ಯಾಪ್ ಕುರಿತ ಅಧ್ಯಯನ. ಈ ವರ್ಷ ನೋಬೆಲ್ ಬಹುಮಾನ ಪಡೆದ ಈಕೆ ಅರ್ಥಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಪಡೆದ ಮೂರನೇ ಮಹಿಳೆ. ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಮಾಡಿದ ಅಧ್ಯಯನಕ್ಕೆ ಈ ಬಹುಮಾನ ಸಂದಿದೆ.
ಈಕೆ ಜನಿಸಿದ್ದು ೧೯೪೬ರಲ್ಲಿ. ಹೈಸ್ಕೂಲ್ ಓದುತ್ತಿದ್ದಾಗ ಪತ್ತೆದಾರಿಣಿ ಆಗಬೇಕು ಅಂದುಕೊಂಡಿದ್ದಳು. ಈಕೆ ಮೊದಲು ಮರುಳಾಗಿದ್ದು ಪುರಾತತ್ತ್ವಶಾಸ್ತ್ರಕ್ಕೆ. ನಂತರ ಹುಚ್ಚು ಹತ್ತಿದ ಸೂಕ್ಷ್ಮಜೀವಶಾಸ್ತ್ರವನ್ನು ಓದಲು ಕಾರ್ನೆಲ್ ವಿಶ್ವವಿದ್ಯಾನಿಲಯಕ್ಕೆ ಹೋದರು. ಆದರೆ ಕೊನೆಗೆ ಚರಿತ್ರೆ ಹಾಗೂ ಅರ್ಥಶಾಸ್ತ್ರವನ್ನು ಆರಿಸಿಕೊಂಡರು. ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕೈಗಾರಿಕಾ ಸಂಘಟನೆ ಹಾಗು ಕಾರ್ಮಿಕ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು.
ಅರ್ಥಶಾಸ್ತ್ರಕ್ಕೆ ಚರಿತ್ರೆ ತುಂಬಾ ಮುಖ್ಯ ಅಂತ ಮೊದಲಿನಿಂದಲೂ ಭಾವಿಸಿದ್ದರು. ತಮಗೆ ಎದುರಾದ ಆರ್ಥಿಕ ಸಮಸ್ಯೆಯನ್ನು ಇತಿಹಾಸದ ಮಸೂರದ ಮೂಲಕ ನೋಡುವ ಕೆಲಸವನ್ನು ಉದ್ದಕ್ಕೂ ಮಾಡಿದ್ದಾರೆ. ಮಹಿಳಾ ಕಾರ್ಮಿಕ ಮಾರುಕಟ್ಟೆಯಲ್ಲಿ ಕಳೆದ ೨೦೦ ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡಿದ್ದಾರೆ. ಅದು ಅವರಿಗೆ ನೋಬೆಲ್ ತಂದುಕೊಟ್ಟಿದೆ. ನಿಜವಾಗಿ ಅದೊಂದು ತೀರಾ ಸವಾಲಿನ ಕೆಲಸ. ಯಾಕೆಂದರೆ ಇನ್ನೂರು ವರ್ಷಗಳ ಹಿಂದಿನ ಅಂಕಿಅಂಶಗಳನ್ನು ಕಲೆಹಾಕುವುದು ಸುಲಭವಲ್ಲ. ಜೊತೆಗೆ ೩೦ ವರ್ಷಗಳ ಹಿಂದೆ ಆಕೆ ಈ ಕೆಲಸ ಪ್ರಾರಂಭಿಸಿದಾಗ ಕಂಪ್ಯೂಟರ್ ಇತ್ಯಾದಿ ಸೌಲಭ್ಯಗಳು ಈಗಿರುವಂತೆಲ್ಲಾ ಇರಲಿಲ್ಲ. ಒಂದರ್ಥದಲ್ಲಿ ಪತ್ತೆದಾರಿಣಿಯಂತೆಯೇ ಕೆಲಸ ಮಾಡಿದ್ದಾರೆ. ಉದ್ಯೋಗಕ್ಕೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಿರಲಿಲ್ಲ. ಉದಾಹರಣೆಗೆ ಅಮೇರಿಕೆಯ ಸೆನ್ಸಸ್ನಲ್ಲಿ ಮಹಿಳೆಯ ವೃತ್ತಿ ’ಪತ್ನಿ’ ಎಂದಷ್ಟೇ ದಾಖಲಾಗಿತ್ತು. ಆದರೆ ಮಹಿಳೆಯರು ಸುಮ್ಮನೆ ಮನೆಯಲ್ಲಿ ಕುಳಿತಿರುತ್ತಿರಲಿಲ್ಲ. ಮನೆಯ ಕೆಲಸದ ಜೊತೆಗೆ ಹೊಲದಲ್ಲೋ, ತೋಟಗಳಲ್ಲೊ, ಗಂಡನ ಸಣ್ಣಪುಟ್ಟ ಉದ್ದಿಮೆಗಳಲ್ಲೋ ಗಂಡಂದಿರ ಜೊತೆ ದುಡಿಯುತ್ತಿದ್ದರು. ಹಾಗಾಗಿ ದಾಖಲೆಗಳು ಹೇಳುತ್ತಿದ್ದುದಕ್ಕಿಂತ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚೇ ಇತ್ತು.
ಇರೋ ಮಾಹಿತಿ ಸಂಪೂರ್ಣ ಕಥೆ ಹೇಳುತ್ತಿರಲಿಲ್ಲ. ಅವುಗಳನ್ನು ಬೇರೆ ಮೂಲಗಳನ್ನು ಗಮನಿಸಿ ಸರಿಪಡಿಸಬೇಕಿತ್ತು. ಇರೋ ಮಾಹಿತಿಯನ್ನು ಸಂಗ್ರಹಿಸಿ ಒಪ್ಪಮಾಡಿ ನೋಡಿದಾಗ ೧೮೯೦ರಲ್ಲಿ ಕೃಷಿಯಲ್ಲಿ ದಾಖಲೆಗಳು ಹೇಳುವುದಕ್ಕಿಂತ ೭% ಹೆಚ್ಚು ಮಹಿಳೆಯರು ದುಡಿಯುತ್ತಿದ್ದರು ಅನ್ನುವುದು ತಿಳಿಯಿತು. ಎಲ್ಲಾ ಕ್ಷೇತ್ರಗಳನ್ನು ಒಟ್ಟಿಗೆ ಗಮನಿಸಿದಾಗ ದಾಖಲೆಗಳು ಹೇಳೋದಕ್ಕಿಂತ ಮಹಿಳೆಯರು ಐದು ಪಟ್ಟು ಹೆಚ್ಚು ದುಡಿಯುತ್ತಿದ್ದರು. ಅಂದರೆ ದಾಖಲೆ ಹೇಳುವಂತೆ ೨.೫% ಅಲ್ಲ್ಲ ೧೨.೫% ಮಹಿಳೆಯರು ದುಡಿಯುತ್ತಿದ್ದರು ಅನ್ನೋದು ತಿಳಿದು ಬಂದಿತು.

ಹೀಗೆ ಗೋಜಲಾಗಿದ್ದ ಹಲವು ಪ್ರಕರಣಗಳನ್ನು ಈ ಪತ್ತೇದಾರಿಣಿ ಯಶಸ್ವಿಯಾಗಿ ಬಿಡಿಸಿದ್ದಾರೆ. ಅವುಗಳಲ್ಲಿ ಮೂರು ತುಂಬಾ ಮುಖ್ಯವಾದವು.
ಹೆಚ್ಚಿನ ಆರ್ಥಿಕ ಬೆಳವಣಿಗೆಯ ಸಿದ್ದಾಂತಗಳ ಪ್ರಕಾರ ಆರ್ಥಿಕತೆ ಬೆಳೆಯುತ್ತಿದ್ದಂತೆ ಮಹಿಳೆಗೆ ತನ್ನಷ್ಟಕ್ಕೆ ಕಾರ್ಮಿಕ ಮಾರುಕಟ್ಟೆಯ ಬಾಗಿಲು ತೆಗೆದುಕೊಳ್ಳುತ್ತದೆ. ಆಕೆಯ ವರಮಾನ ಹೆಚ್ಚುತ್ತದೆ. ಆಕೆ ಪುರುಷನೊಂದಿಗೆ ಸಲೀಸಾಗಿ, ಸಮಾನವಾಗಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗುತ್ತಾಳೆ. ಗೋಲ್ಡಿನ್ ಇದೊಂದು ಮಿಥ್ಯೆ ಅಂತ ತೋರಿಸಿದರು. ಎರಡು ಶತಮಾನಗಳ ಅಮೇರಿಕೆಯ ಅಂಕಿಅಂಶಗಳ ಆಧಾರದ ಮೇಲೆ ಗೋಲ್ಡಿನ್ ಕಾರ್ಮಿಕರ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹಾಗೂ ಆರ್ಥಿಕ ಬೆಳವಣಿಗೆಯ ನಡುವಿನ ಸಂಬಂಧ U ಆಕಾರದಲ್ಲಿ ಸಾಗಿದೆ ಎಂದು ತೋರಿಸಿದರು.
ಮೊದಲು ಅಂದರೆ ೧೭೯೦ರಲ್ಲಿ ಅಮೇರಿಕೆಯಲ್ಲಿ ಶೇಕಡ ೬೦ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು. ಆಗ ಅಮೇರಿಕೆಯ ಆರ್ಥಿಕತೆ ಬಹುತೇಕ ಕೃಷಿಯನ್ನು ಆಧರಿಸಿತ್ತು. ಮಹಿಳೆಯರು ಕೃಷಿಯಲ್ಲಿ ಅದರಲ್ಲೂ ಹೆಚ್ಚಾಗಿ ಕುಟುಂಬದ ತೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೆ ವೇತನ ಸಿಗುತ್ತಿರಲಿಲ್ಲ.
ಅಮೇರಿಕೆಯಲ್ಲಿ ೧೯ನೇ ಶತಮಾನದ ಮೊದಲ ದಶಕಗಳಲ್ಲಿ ಕೈಗಾರಿಕಾ ಕ್ರಾಂತಿ ಪ್ರಾರಂಭವಾಯಿತು. ಫ್ಯಾಕ್ಟರಿಗಳಲ್ಲಿ ಉತ್ಪಾದನೆ ಪ್ರಾರಂಭವಾಯಿತು. ಕೃಷಿಯಿಂದ ಕೈಗಾರಿಕೆಯ ಕಡೆಗೆ ಚಲನೆ ಪ್ರಾರಂಭವಾಯಿತು. ಕೃಷಿಗೆ ಹೋಲಿಸಿದರೆ ಉತ್ಪಾದನೆಯಲ್ಲಿ ಹೆಚ್ಚಿನ ವೇತನ ಸಿಗುತ್ತಿತ್ತು. ಪುರುಷ ಹಾಗೂ ಮಹಿಳೆಯರ ನಡುವೆ ವೇತನದ ಅಂತರ ಅಷ್ಟಾಗಿ ಇರಲಿಲ್ಲ. ಹೆಣ್ಣುಮಕ್ಕಳಿಗೆ ಕೈಗಾರಿಕೀಕರಣದಿಂದ ಅನುಕೂಲವಾಯಿತು. ಆದರೆ ವಿವಾಹಿತರು ಹಾಗೂ ವಯಸ್ಸಾದವರಿಗೆ ಇದರ ಅನುಕೂಲ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಖಾನೆಗಳಲ್ಲಿ ಕೆಲಸದ ವಾತಾವರಣ ಅಷ್ಟು ಚೆನ್ನಾಗಿರಲಿಲ್ಲ. ವಿವಾಹದ ನಂತರವೂ ಫ್ಯಾಕ್ಟರಿಯಲ್ಲಿ ದುಡಿಯುವ ಮಹಿಳೆಯನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು. ಜೊತೆಗೆ ಹೊರಗೆ ಕೆಲಸಕ್ಕೆ ಹೋದರೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳೋರು ಯಾರು? ಅನ್ನುವ ಸಮಸ್ಯೆಯೂ ಇತ್ತು. ಹಾಗಾಗಿ ಬಹುತೇಕ ಮಹಿಳೆಯರು ಮದುವೆಯಾದ ಮೇಲೆ ಕೆಲಸಬಿಡುತ್ತಿದ್ದರು. ಮನೆಯ ಕೆಲಸ ಹಾಗೂ ಹೊರಗಿನ ಕೆಲಸಗಳೆರಡನ್ನು ಒಟ್ಟಿಗೆ ನಿರ್ವಹಿಸುವುದಕ್ಕೆ ಅವಕಾಶವಿರಲಿಲ್ಲ. ೧೯ನೇ ಶತಮಾನದ ಬಹುಭಾಗ ವಿವಾಹಿತ ಮಹಿಳೆಯರು ಮನೆಯಾಚೆ ದುಡಿಯುವುದು ಕಡಿಮೆಯಾಗತೊಡಗಿತು. ಸಾಮಾಜಿಕ ರಿವಾಜುಗಳು ಅವರಿಗೆ ಅಡ್ಡಿಯಾದವು.
೨೦ನೇ ಶತಮಾನದ ಮೊದಲ ದಶಕಗಳಲ್ಲಿ ಅವಿವಾಹಿತ ಮಹಿಳೆಯರು ಅಷ್ಟಾಗಿ ಓದಿರಲಿಲ್ಲ. ಮಹಿಳೆಯರು ಹೆಚ್ಚಾಗಿ ಶೂ, ಬಟ್ಟೆ ಉತ್ಪಾದನೆ ಅಥವಾ ಹಣ್ಣು ತರಕಾರಿಗಳನ್ನು ಪ್ಯಾಕ್ ಮಾಡುವುದು ಇತ್ಯಾದಿ ಕೆಲಸಗಳಲ್ಲಿ ಅಥವಾ ಮನೆಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಇದಕ್ಕೆ ಯಾವುದೇ ಶಿಕ್ಷಣವೂ ಬೇಕಿರಲಿಲ್ಲ. ಇಂತಹ ಉದ್ಯೋಗಗಳಲ್ಲಿ ಬಡ್ತಿಗೂ ಅವಕಾಶವಿರಲಿಲ್ಲ. ಇವೆಲ್ಲಾ ಬಹುತೇಕ ಪೀಸ್ ಆಧಾರದ ಮೇಲೆ ಅಂದರೆ, ಇಷ್ಟು ತಯಾರಿಸಿದರೆ ಇಷ್ಟು ಹಣ ಅನ್ನುವ ಒಪ್ಪಂದದ ಮೇಲೆ ನಡೆಯುತ್ತಿತ್ತು. ಹೆಚ್ಚಿನ ಓದಿಗೆ ಯಾವುದೇ ಉತ್ತೇಜನವೂ ಇರಲಿಲ್ಲ. ಆದರೆ ಅದೇ ದಶಕದಲ್ಲಿ ಬದಲಾವಣೆಯ ಮೊಳಕೆಗಳು ಕಾಣಿಸಿಕೊಂಡವು. ಟೈಪ್ರೈಟರ್ ಇತ್ಯಾದಿ ತಂತ್ರಜ್ಞಾನದ ಪ್ರವೇಶದಿಂದ ಹಾಗೂ ಕ್ಯಾಷ್ ರಿಜಿಸ್ಟರುಗಳು ಹಾಗೂ ಸ್ಟೆನೊಗಳು ಬಂದಿದ್ದರಿಂದ ಕಚೇರಿಯ ಕೆಲಸದ ಸ್ವರೂಪವೇ ಬದಲಾಯಿತು. ಅದು ೨೦ನೆಯ ಶತಮಾನದ ವೇಳೆಗೆ ಹೆಚ್ಚೆಚ್ಚು ಯಾಂತ್ರೀಕರಣಗೊಂಡಿತು. ಜೊತೆಗೆ ಉದ್ದಿಮೆಯ ಗಾತ್ರವೂ ಬೆಳೆಯಿತು. ಆಡಳಿತದ ನೆರವಿಗೆ ಹೆಚ್ಚೆಚ್ಚು ಕೆಲಸಗಾರರು ಬೇಕಾದರು. ೧೮೭೦ರಿಂದ ೧೯೩೦ರ ವೇಳೆಗೆ ಒಟ್ಟು ಉದ್ಯೋಗಸ್ಥರಲ್ಲಿ ಕಛೇರಿ ಸಿಬ್ಬಂದಿಗಳ ಸಂಖ್ಯೆ ೧% ರಿಂದ ೧೦%ಗೆ ಏರಿತು.
೧೯೧೦ರಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಆಂದೋಲನ ಪ್ರಾರಂಭವಾಯಿತು. ಪ್ರೌಢಶಿಕ್ಷಣ ಪಡೆದವರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಮಹಿಳೆಯರೂ ಶಿಕ್ಷಣದ ಲಾಭ ಪಡೆದುಕೊಂಡರು. ಪುರುಷರಿಗಿಂತ ಪ್ರೌಢ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಕಛೇರಿಗಳಲ್ಲಿ ದುಡಿಯುವ ವಾತಾವರಣವೂ ಉತ್ತಮವಾಗಿತ್ತು. ಕೆಲವೊಮ್ಮೆ ಕೆಲಸಕ್ಕೆ ಬರಲಾಗದಿದ್ದರೆ ಕೆಲಸ ಕಳೆದುಕೊಳ್ಳುವ ಭೀತಿಯೂ ಅಷ್ಟಾಗಿ ಇರಲಿಲ್ಲ. ವೇತನವೂ ಸಾಪೇಕ್ಷವಾಗಿ ಉತ್ತಮವಾಗಿತ್ತು. ಆದರೂ ೧೮೯೦ ಹಾಗೂ ೧೯೩೦ರ ನಡುವೆ ಕಛೇರಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸಕ್ಕೆ ಬರಲಿಲ್ಲ. ಯಾಕೆ?
೧೯ನೇ ಶತಮಾನದಲ್ಲಿ ಇದ್ದಂತೆ ಇಲ್ಲೂ ಆಚರಣೆಯಲ್ಲಿದ್ದ ಸಾಮಾಜಿಕ ರೀತಿ ರಿವಾಜುಗಳು ವಿವಾಹಿತ ಮಹಿಳೆಯರಿಗೆ ಅಡ್ಡಿಯಾಗಿದ್ದವು. ಹಾಗಾಗಿ ಮದುವೆಯಾದ ಮೇಲೆ ಮಹಿಳೆಯರು ಕೆಲಸ ಬಿಡಬೇಕಾಗುತ್ತಿತ್ತು. ೧೯ ಹಾಗೂ ೨೦ನೇ ಶತಮಾನದ ಪ್ರಾರಂಭದಲ್ಲಿ ಮಹಿಳೆಯರನ್ನು ಕೆಲಸಕ್ಕೆ ಹೋಗದಂತೆ ಕಾನೂನುಗಳೂ ತಡೆಯುತ್ತಿದ್ದವು. ಎರಡು ರೀತಿಯ ನಿಯಮಗಳು ಚಾಲ್ತಿಯಲ್ಲಿದ್ದವು. ಒಂದು ಕಾನೂನಿನ ಪ್ರಕಾರ ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿರಲಿಲ್ಲ. ಆದರೆ ಉದ್ಯೋಗದಲ್ಲಿದ್ದ ಮಹಿಳೆಗೆ ಕೆಲಸದಲ್ಲಿ ಮುಂದುವರಿಯುವುದಕ್ಕೆ ಅವಕಾಶವಿತ್ತು. ಎರಡನೆಯ ಕಾನೂನು ಮಹಿಳೆಯರ ವಿಷಯದಲ್ಲಿ ಹೆಚ್ಚು ಕಠಿಣವಾಗಿತ್ತು. ಅದು ವಿವಾಹಿತ ಮಹಿಳೆಯರನ್ನು ಕೆಲಸದಲ್ಲಿ ಉಳಿಯುವುದಕ್ಕೆ ಬಿಡುತ್ತಿರಲಿಲ್ಲ. ಮದುವೆಯಾದ ಕೂಡಲೇ ಮಹಿಳೆಯರನ್ನು ಕೆಲಸದಿಂದ ತೆಗೆಯಬೇಕಿತ್ತು. ಗೋಲ್ಡಿನ್ ಪ್ರಕಾರ ೩೫-೪೦% ಉದ್ದಿಮೆಗಳು ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ಕಛೇರಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದರೂ ಮಹಿಳೆಯರಿಗೆ ಅದನ್ನು ಬಳಸಿಕೊಳ್ಳಲು ಲಿಂಗಾಧಾರಿತ ನಿಯಂತ್ರಣಗಳು ಬಿಡುತ್ತಿರಲಿಲ್ಲ.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಸರ್ಕಾರ ಪುರಷರನ್ನು ಯುದ್ದಕ್ಕೆ ನೇಮಿಸಿಕೊಳ್ಳತೊಡಗಿತ್ತು. ಕೆಲಸಕ್ಕೆ ಜನ ಬೇಕಿತ್ತು. ಮಹಿಳಾ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿತ್ತು. ಮಹಿಳೆಯರು ಅಷ್ಟಾಗಿ ಓದಿರಲಿಲ್ಲ. ಆದರೆ ವಯಸ್ಸಾದ ಹಾಗೂ ವಿವಾಹಿತ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿದ್ದರು. ಅವರಿಗೆ ಕಚೇರಿಯಲ್ಲಿ ಕೆಲಸ ಮಾಡಿದ ಅನುಭವವೂ ಇತ್ತು. ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ವಾಷಿಂಗ್ ಮೆಷಿನ್, ರೆಫ್ರಿಜಿರೇಟರ್ ಮೊದಲಾದ ತಂತ್ರಜ್ಞಾನದಿಂದ ಮನೆಯ ಕೆಲಸದ ಹೊರೆಯೂ ಸ್ವಲ್ಪಮಟ್ಟಿಗೆ ಕಮ್ಮಿಯಾಗಿತ್ತು. ಅವರು ಮತ್ತೆ ಕೆಲಸಕ್ಕೆ ಬರಲು ತಯಾರಿದ್ದರು. ಉದ್ದಿಮೆಗಳ ಒತ್ತಾಯದಿಂದ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಬಾರದು ಎನ್ನುವ ನಿಯಮವೂ ರದ್ದಾಯಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅನುಕೂಲವಾಯಿತು. ವಿವಾಹಿತ ಮಹಿಳೆಯರು ದುಡಿಯುವುದನ್ನು ಸಮಾಜ ಒಪ್ಪಿಕೊಳ್ಳತೊಡಗಿತು. ಉದ್ದಿಮೆಗಳು ಮಹಿಳೆಯರಿಗೆ ಅನುಕೂಲವಾಗುವಂತಹ ಮಾರ್ಪಾಡುಗಳನ್ನು ಮಾಡಿಕೊಳ್ಳತೊಡಗಿದವು. ಅರೆಕಾಲಿಕ ಹುದ್ದೆಗಳು ಸೃಷ್ಟಿಯಾದವು. ಅರೆಕಾಲಿಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ ೧೯೪೦ರಲ್ಲಿ ೧೮% ಇದ್ದುದು ೧೯೬೦ರಲ್ಲಿ ೨೮% ಆಯಿತು. ಮಹಿಳೆಯರಿಗೆ ಹೊರಗಿನ ಹಾಗೂ ಮನೆಯೊಳಗಿನ ಕೆಲಸವನ್ನು ಹೊಂದಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು.
ಕೆಲಸಕ್ಕೆ ಬಂದ ಮಹಿಳೆಯರಲ್ಲಿ ಬಹುತೇಕ ಜನ ಮದುವೆಯಾದ ಮೇಲೆ ಕೆಲಸ ಬಿಟ್ಟು, ಸುದೀರ್ಘಕಾಲ ಮನೆಯಲ್ಲಿ ಮಕ್ಕಳು ಮರಿಗಳನ್ನು ನೋಡಿಕೊಂಡು ಇದ್ದವರು. ಅವರಿಗೆ ಕೆಲಸ ಬಿಡುವಾಗ ಮತ್ತೆ ಕೆಲಸಕ್ಕೆ ಮರಳುವ ನಿರೀಕ್ಷೆಯೂ ಇರಲಿಲ್ಲ. ಹಾಗಾಗಿ ಶಿಕ್ಷಣದ ಬಗ್ಗೆ ಅಂತಹ ಆಸಕ್ತಿಯೇನು ಅವರಿಗಿರಲಿಲ್ಲ. ಅದರಿಂದಾಗಿ ಮರಳಿ ಕೆಲಸಕ್ಕೆ ಬಂದ ಈ ಹಿರಿಯ ಮಹಿಳೆಯರಿಗೆ ಅಂತಹ ನಿಪುಣತೆಯೂ ಇರಲಿಲ್ಲ. ಕಚೇರಿಗಳಲ್ಲೂ ತೀರಾ ಯಾಂತ್ರಿಕವಾದ ಕೆಲಸವನ್ನಷ್ಟೇ ಮಾಡುತ್ತಿದ್ದರಿಂದ ಅಲ್ಲೂ ನಿಪುಣತೆಯನ್ನು ಬೆಳೆಸಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ಅವರು ಮಾಡುತ್ತಿದ್ದ ಕೆಲಸಗಳಲ್ಲಿ ಬಡ್ತಿಗೂ ಅವಕಾಶವಿರಲಿಲ್ಲ.
೧೯೭೦ರ ನಂತರ ಪರಿಸ್ಥಿತಿ ಬದಲಾಯಿತು. ಮಹಿಳೆಯರು ಹೆಚ್ಚೆಚ್ಚು ಓದುವುದಕ್ಕೆ ಪ್ರಾರಂಭಿಸಿದರು. ಕಾಲೇಜಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿತು. ಪುರಷರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಪದವೀಧರರಾದರು. ವೃತ್ತಿಶಿಕ್ಷಣದಲ್ಲೂ ಹೆಚ್ಚೆಚ್ಚು ತೊಡಗಿಕೊಂಡರು. ಹೆಚ್ಚೆಚ್ಚು ಪರಿಣತರಾದಂತೆ ವೇತನದಲ್ಲಿ ಲಿಂಗಾಧಾರಿತ ಅಂತರ ೧೯೮೦ರ ವೇಳೆಗೆ ಕಡಿಮೆಯಾಯಿತು. ಹೆಚ್ಚೆಚ್ಚು ಮಹಿಳೆಯರು ಕೆಲಸಕ್ಕೆ ಬರತೊಡಗಿದರು. ಆದರೆ ಈ ಹೆಚ್ಚಳದ ವೇಗ ಕಡಿಮೆ ಇತ್ತು. ಹೆಚ್ಚೆಚ್ಚು ಮಹಿಳೆಯರು ಉದ್ಯೋಗಕ್ಕೆ ಬರುವುದಕ್ಕೆ ಗೋಲ್ಡಿನ್ ಎರಡು ವಿವರಣೆಗಳನ್ನು ನೀಡುತ್ತಾರೆ. ಒಂದು ಹೆಣ್ಣುಮಕ್ಕಳ ನಿರೀಕ್ಷೆಯಲ್ಲಿ ಬದಲಾವಣೆಯಾಗಿದ್ದು ಹಾಗೂ ಎರಡನೆಯದು ಗರ್ಭನಿರೋಧಕ ಮಾತ್ರೆಗಳ ಅನ್ವೇಷಣೆ. ೧೯೭೦ರಲ್ಲಿ ಮಹಿಳೆಯರ ಮೊದಲ ಆಯ್ಕೆ ವೃತ್ತಿಯಾಯಿತು. ೧೯೮೦ ಹಾಗೂ ೧೯೯೦ರಲ್ಲಿ ಮಹಿಳೆಯರು ವೃತ್ತಿ ಹಾಗೂ ಕುಟುಂಬ ಎರಡನ್ನೂ ಒಪ್ಪಿಕೊಳ್ಳತೊಡಗಿದರು. ಮಹಿಳೆಯರ ಸ್ಥಿತಿಯಲ್ಲಿ ಸುಧಾರಣೆ ಆಯಿತು.
ಮುಂದುವರಿದ ವೇತನ ಅಸಮಾನತೆ:
ಗಲ್ಡಿನ್ ಅವರ ಎರಡನೆ ಮುಖ್ಯ ಕೊಡುಗೆ ಇರುವುದು ಇಲ್ಲಿ. ಮಹಿಳೆಯರ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಸಮಾನತೆ ಸಾಧ್ಯವಾಗಿದ್ದರೂ ವೇತನದಲ್ಲಿ ತಾರತಮ್ಯ ಮುಂದುವರಿದೇ ಇದೆ. ಅಮೇರಿಕೆಯಲ್ಲಿ ಗಂಡಸಿಗೆ ೧ ಡಾಲರ್ ಸಿಕ್ಕರೆ, ಮಹಿಳೆಯರಿಗೆ ಸಿಗುವುದು ಸುಮಾರು ೭೭ರಿಂದ ೮೨ ಸೆಂಟ್ವರೆಗೆ. ೨೫ ವರ್ಷಗಳಿಂದ ಈ ಅನುಪಾತ ಹಾಗೇ ಉಳಿದಿದೆ. ಕರಿಯ ಮಹಿಳೆ ಇನ್ನಷ್ಟು ಕೆಟ್ಟ ಸ್ಥಿತಿಯಲ್ಲಿದ್ದಾಳೆ.
ಮೊದಲಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿನ ವ್ಯತ್ಯಾಸ ಈ ಅಂತರಕ್ಕೆ ಕಾರಣವಾಗಿತ್ತು. ಅದರೆ ಈಗ ಮಹಿಳೆಯರು ಓದಿನಲ್ಲಿ ಪುರುಷರನ್ನು ಮೀರಿಸಿದ್ದಾರೆ. ಜೊತೆಗೆ ಒಂದೇ ರೀತಿಯ ಉದ್ಯೋಗದೊಳಗೇ ಅಂತರ ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಕಡಿಮೆ ಸಂಬಳದ ಕೆಲಸ ಆರಿಸಿಕೊಳ್ಳುತ್ತಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಮಹಿಳೆಯರ ಗ್ರಹಿಕಾ ಸಾಮರ್ಥ್ಯದ ಕೊರತೆ ಇದಕ್ಕೆ ಕಾರಣ ಅಂತಲೂ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ವೇತನದಲ್ಲಿ ಅಂತಹ ಅಂತರವಿರುವುದಿಲ್ಲ. ಹಾಗಾಗಿ ಈ ವೇತನದ ಅಂತರವನ್ನು ಅರ್ಥಮಾಡಿಕೊಳ್ಳುವುದಕ್ಕೆ ವೃತ್ತಿಯೊಳಗಿನ ಬೆಳವಣಿಗೆಯನ್ನು ಗಮನಿಸುವುದು ಮುಖ್ಯವಾಗುತ್ತದೆ.
ಗೋಲ್ಡಿನ್ ಕಂಡುಕೊಂಡ ಕಾರಣ ತುಂಬಾ ಸರಳವಾಗಿದೆ. ಬಡ್ತಿಯಾಗುತ್ತಾ ಉನ್ನತ ಮಟ್ಟದ ಮೇಲ್ಸ್ತರದ ಹುದ್ದೆಗಳಿಗೆ ಹೋದಂತೆ ವೇತನ ಹೆಚ್ಚುತ್ತಾ ಹೋಗುತ್ತದೆ. ಉನ್ನತ ಹುದ್ದೆಗಳಲ್ಲಿ ಕೆಲಸದ ಅವಧಿ ಹೆಚ್ಚಿರುತ್ತದೆ. ರಾತ್ರಿ ಹೊತ್ತು ಮೀಟಿಂಗ್ಗಳು ಇರುತ್ತವೆ. ಹೆಚ್ಚು ಪ್ರಯಾಣಿಸಬೇಕಾಗುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಕೆಲಸಗಳಿಗೆ ಹೆಚ್ಚಿನ ವೇತನ ಹಾಗೂ ಉತ್ತೇಜನ ಸಿಗುತ್ತದೆ. ಅಂತಹ ಕೆಲಸಗಳನ್ನು ಗೋಲ್ಡಿನ್ ಗ್ರೀಡಿ (ದುರಾಸೆಯ) ಕೆಲಸಗಳು ಅನ್ನುತ್ತಾರೆ. ಅಂದರೆ ರಾತ್ರಿ ಹೊತ್ತಿನಲ್ಲಿ, ರಜದ ದಿನಗಳಲ್ಲಿ ಹೀಗೆ ಕರೆದಾಗಲೆಲ್ಲಾ ಕೆಲಸಕ್ಕೆ ಹೋಗಬೇಕು. ಅದಕ್ಕಾಗಿ ನೀವು ಇಡೀ ಬದುಕನ್ನು ನೀಡಬೇಕು. ಆಗ ನಿಮಗೆ ಬಡ್ತಿ ಸಿಗುತ್ತದೆ. ಒಳ್ಳೆಯ ವೇತನ ಸಿಗುತ್ತದೆ.
ಇಬ್ಬರೂ ದುಡಿಯುತ್ತಿರುವ ಕುಟುಂಬಗಳಲ್ಲಿ ಒಬ್ಬರಿಗಷ್ಟೇ ಅಂತಹ ಕೆಲಸಗಳಿಗೆ ಹೋಗುವುದಕ್ಕೆ ಸಾಧ್ಯ. ಮತ್ತೊಬ್ಬರು ಮಕ್ಕಳನ್ನು ನೋಡಿಕೊಳ್ಳುವ, ಓದಿಸುವ, ಆಟಕ್ಕೆ, ಸಂಗೀತಕ್ಕೆ, ವೈದ್ಯರ ಬಳಿ ಕರೆದುಕೊಂಡು ಹೋಗುವ ಅಮ್ಮನ ಕೆಲಸ ಮಾಡಬೇಕಾಗುತ್ತದೆ. ಅದನ್ನು ಇಬ್ಬರಲ್ಲಿ ಯಾರು ಬೇಕಾದರೂ ಮಾಡಬಹುದಿತ್ತು. ಆದರೆ ಸಾಮಾನ್ಯವಾಗಿ ಗ್ರೀಡಿ ಕೆಲಸಗಳು ಗಂಡಸಿಗೆ ಹೋಗುತ್ತವೆ. ಹೆಂಗಸಿಗೆ ’ಅಮ್ಮನ ಕೆಲಸ’ ಸಿಗುತ್ತದೆ. ಮಗುವನ್ನು ಬೆಳೆಸುವ ಜವಾಬ್ದಾರಿ ಸಾಮಾನ್ಯವಾಗಿ ಮಹಿಳೆಯರದೇ ಆಗಿರುತ್ತದೆ. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಬೇಕಾದ ಫ್ಲೆಕ್ಸಿಬಿಲಿಟಿ ಇರುವುದಿಲ್ಲ. ಕರೆ ಬಂದ ತಕ್ಷಣ ’ಅಮ್ಮನ ಕೆಲಸಕ್ಕೆ’ ಮರಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಕೆಲಸಕ್ಕೆ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ಪುರುಷರಿಗೆ ದಿನವಿಡೀ, ಅದೂ ಯಾವುದೇ ಸಮಯದಲ್ಲೂ ಕೆಲಸ ಮಾಡುವುದಕ್ಕೆ ಸ್ವಾತಂತ್ರ್ಯವಿರುತ್ತದೆ. ಕಚೇರಿಯಿಂದ ಕರೆ ಬಂದಾಕ್ಷಣ ಹೋಗುವುದಕ್ಕ್ಕೆ ಸಾಧ್ಯವಿರುತ್ತದೆ. ಹಾಗಾಗಿ ಬಡ್ತಿ, ಹೆಚ್ಚಿನ ವೇತನ ಇತ್ಯಾದಿ ಸೌಲಭ್ಯ ಪುರುಷರಿಗೇ ಹೋಗುತ್ತದೆ. ಮಗು ಸಂಸಾರದಲ್ಲಿ ಕಾಲಿಡುತ್ತಿದ್ದಂತೆ ಗೃಹಿಣಿಯನ್ನು ಸಮಯಕ್ಕಾಗಿ ಒತ್ತಾಯಿಸುವ ಇನ್ನೊಂದು ಶಕ್ತಿ ಹುಟ್ಟಿಕೊಳ್ಳುತ್ತದೆ. ಮಗುಗೆ ಹುಷಾರಿಲ್ಲ ಅಂತ ಶಾಲೆಯಿಂದ ಫೋನ್ ಬಂದರೆ ತಕ್ಷಣ ಎಲ್ಲಾ ಮರೆತು ನೀವು ಓಡಬೇಕು. ಆದರೆ ಕಂಪೆನಿಗಳು ನಿರಂತರವಾಗಿ ಕೆಲಸ ಮಾಡುವರಿಗಷ್ಟೇ ಹೆಚ್ಚಿನ ಸಂಬಳ, ಭಡ್ತಿ ನೀಡುವುದು. ೪೫ ವಯಸ್ಸಾಗುವ ವೇಳೆಗೆ ಮಹಿಳೆಯರ ಸಂಪಾದನೆ ಪುರುಷರಿಗೆ ಹೋಲಿಸಿದರೆ ಅರ್ಧಕ್ಕೆ ಇಳಿಯುತ್ತದೆ.
ನಿರೀಕ್ಷೆಯಲ್ಲಿನ ಬದಲಾವಣೆಗಳು
ಗೋಲ್ಡಿನ್ ಹೇಳುವ ಮೂರನೆಯ ಮಹತ್ವದ ವಿಷಯ ಅಂದರೆ ಮಹಿಳೆಯರ ಭವಿಷ್ಯವನ್ನು ರೂಪಿಸುವಲ್ಲಿ ಅವರ ನಿರೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತವೆ ಅನ್ನುವುದು. ಮಕ್ಕಳು ತಾವು ಚಿಕ್ಕವರಿದ್ದಾಗಲೇ ಭವಿಷ್ಯದ ಬಗ್ಗೆ ನಿರೀಕ್ಷೆಗಳನ್ನು ಬೆಳೆಸಿಕೊಂಡಿರುತ್ತಾರೆ. ಮದುವೆ, ಉದ್ಯೋಗ, ಮಕ್ಕಳು, ಓದು ಹೀಗೆ ಎಲ್ಲದರ ಬಗ್ಗೆ ಮೊದಲೇ ನಿರೀಕ್ಷೆಗಳು ರೂಪುಗೊಂಡಿರುತ್ತವೆ. ತಮ್ಮ ಹಿಂದಿನ ತಲೆಮಾರಿನ ಅಂದರೆ ಅವರ ಅಮ್ಮಂದಿರ, ಅಜ್ಜಿಯರ ಉದ್ಯೋಗ, ಬದುಕು, ಆಗಿನ ಸಾಮಾಜಿಕ ರಿವಾಜುಗಳು ಇವೆಲ್ಲಾ ಅವರ ನಿರೀಕ್ಷೆಗಳನ್ನು ಪ್ರಭಾವಿಸುತ್ತಿರುತ್ತವೆ. ನಿರೀಕ್ಷೆಗಳು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಹೋಗುತ್ತಿರುತ್ತವೆ. ಹಾಗಾಗಿ ಅವರಿಗೆ ಹಿಂದಿನ ತಲೆಮಾರಿನವರ ಅನುಭವಗಳನ್ನೆಲ್ಲಾ ಗಮನಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ. ಹಾಗಾಗಿ ಭವಿಷ್ಯದ ಬಗೆಗಿನ ನಿರೀಕ್ಷೆಗಳು ನಿಖರವಾಗಿರುವ ಸಾಧ್ಯತೆಗಳು ಕಡಿಮೆ. ಉದ್ಯೋಗದ ನಿರೀಕ್ಷೆ ಕಡಿಮೆ ಇದ್ದಿರಬಹುದಾದ ಸಾಧ್ಯತೆ ಇರುವುದರಿಂದ ಓದಿನ ವಿಷಯದಲ್ಲೂ ನಿರೀಕ್ಷೆ ಕಡಿಮೆಯೇ ಇರುತ್ತದೆ. ತಲೆಮಾರಿನಿಂದ ತಲೆಮಾರಿಗೆ ನಿರೀಕ್ಷೆಗಳು ಬದಲಾಗುತ್ತಾ ಹೋಗುತ್ತಿವೆ. ಅವರ ಓದು ಇತ್ಯಾದಿಗಳು ಈ ನಿರೀಕ್ಷೆಯನ್ನು ಅವಲಂಬಿಸಿರುತ್ತವೆ.
ಗೋಲ್ಡಿನ್ ಅಧ್ಯಯನದ ಪ್ರಕಾರ ೧೯೬೭ರಲ್ಲಿ ಹೆಣ್ಣುಮಕ್ಕಳಿಗೆ ತಾವು ೩೫ ವರ್ಷವಾದ ಮೇಲೂ ಕೆಲಸದಲ್ಲಿ ಮುಂದುವರಿಯುವ ನಿರೀಕ್ಷೆ ಅಷ್ಟಾಗಿ ಇರಲಿಲ್ಲ. ಕೇವಲ ೩೫% ರಷ್ಟು ಜನರಷ್ಟೇ ಕೆಲಸದಲ್ಲಿ ಮುಂದುವರಿಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣ ಅವರ ಹಿಂದಿನ ತಲೆಮಾರಿನವರು ಮದುವೆಯಾದ ಮೇಲೆ ಹೆಚ್ಚಾಗಿ ಮನೆಯಲ್ಲಿ ಇದ್ದುದ್ದನ್ನು ಅವರು ನೋಡಿದ್ದರು. ಆದರೆ ವಾಸ್ತವದಲ್ಲಿ ಆಗಿದ್ದೇ ಬೇರೆ. ನಿರೀಕ್ಷೆಗೂ ಮೀರಿ ೬೫%ರಷ್ಟು ಮಂದಿ ಉದ್ಯೋಗದಲ್ಲಿ ಮುಂದುವರಿದಿದ್ದರು. ಸ್ವಾಭಾವಿಕವಾಗಿಯೇ ಮುಂದಿನ ತಲೆಮಾರಿನವರಲ್ಲಿ ಈ ನಿರೀಕ್ಷೆ ಹೆಚ್ಚಾಯಿತು. ೧೯೭೦ರಲ್ಲಿ ೮೦% ಜನ ಕೆಲಸದಲ್ಲಿ ಮುಂದುವರಿಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಉದ್ಯೋಗದ ನಿರೀಕ್ಷೆಗಳು ಹೆಚ್ಚಾದಂತೆ ಹೆಣ್ಣುಮಕ್ಕಳು ಹೆಚ್ಚೆಚ್ಚು ಓದುವುದಕ್ಕೆ ಪ್ರಾರಂಭಿಸಿದರು. ಕೊನೆಗೆ ೧೯೭೦ರ ವೇಳೆಗೆ ಗಂಡುಮಕ್ಕಳನ್ನು ಮೀರಿಸಿ ಬೆಳೆದರು. ಅಷ್ಟೇ ಅಲ್ಲ ವಿಭಿನ್ನ ಬಗೆಯ ವೃತ್ತಿ ಶಿಕ್ಷಣಗಳನ್ನು, ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದರು. ಇದರಿಂದ ಲಿಂಗಾಧಾರಿತ ವರಮಾನದ ಅಂತರ ಕಡಿಮೆಯಾಗತೊಡಗಿತು. ಇದನ್ನು ಗೋಲ್ಡಿನ್ ಸದ್ದಿಲ್ಲದ ಕ್ರಾಂತಿ, ಅಥವಾ ಕ್ರಾಂತಿಕಾರಿ ಹಂತ ಅಂತ ಕರೀತಾರೆ. ಗೋಲ್ಡಿನ್ ಪ್ರಕಾರ ಇಂತಹ ಕ್ರಾಂತಿಕಾರಕ ಬದಲಾವಣೆಗೆ ಗರ್ಭನಿರೋಧಕ ಮಾತ್ರೆಗಳ ಅನ್ವೇಷಣೆ ಒಂದು ಮುಖ್ಯ ಕಾರಣ. ಅದು ಮಹಿಳೆಯರಿಗೆ ಗರ್ಭಧಾರಣೆಯ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿತು. ಅದರಿಂದ ಮಹಿಳೆಯರಿಗೆ ಮದುವೆಯ ಸಮಯವನ್ನು ಮುಂದಕ್ಕೆ ಹಾಕುವುದಕ್ಕೆ ಸಾಧ್ಯವಾಯಿತು. ಹೆಚ್ಚೆಚ್ಚು ಓದುವುದಕ್ಕೆ ಸಮಯ ಸಿಕ್ಕಿತು. ದುಬಾರಿಯಾದ ಶಿಕ್ಷಣದಲ್ಲೂ ತೊಡಗುವ ಧೈರ್ಯ ತಂದುಕೊಟ್ಟಿತು.
ಅಮೇರಿಕೆಯಲ್ಲಿ ಮೊದಲಲ್ಲಿ ಕೇವಲ ೨೧ ವಯಸ್ಸಿನ ಅವಿವಾಹಿತ ಹೆಣ್ಣು ಮಕ್ಕಳಿಗೆ ಮಾತ್ರ ಗರ್ಭನಿರೋಧಕ ಮಾತ್ರೆಯನ್ನು ಬಳಸಲು ಅನುಮತಿಯಿತ್ತು. ಜೊತೆಗೆ ಪೋಷಕರ ಅನುಮತಿ ಬೇಕಿತ್ತು. ನಂತರ ವಯಸ್ಸಿನ ಮಿತಿಯನ್ನು ೧೮ಕ್ಕೆ ಇಳಿಸಲಾಯಿತು. ಪೋಷಕರ ಅನುಮತಿಯ ಷರತ್ತನ್ನು ಸಡಿಲಿಸಲಾಯಿತು. ವಿವಾಹಿತ ಮಹಿಳೆಯರಿಗೆ ಮಾತ್ರೆಗಳನ್ನು ಬಳಸಲು ೧೯೬೦ರಲ್ಲಿ ಸಮ್ಮತಿ ನೀಡಲಾಯಿತು. ಆದರೆ ನಿಯಮಗಳು ಅಮೇರಿಕೆಯಲ್ಲಿ ಎಲ್ಲಾ ಕಡೆ ಒಂದೇ ರೀತಿ ಇರಲಿಲ್ಲ. ಒಂದಿಷ್ಟು ವ್ಯತ್ಯಾಸಗಳಿದ್ದವು. ಮಹಿಳೆಯರಿಗೆ ಇದರಿಂದ ತಮ್ಮ ದೇಹದ ಮೇಲೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿತು. ೧೯೬೮ರಲ್ಲಿ ಕಾಲೇಜಿನಿಂದ ಹೊರಬಂದು ಮದುವೆಯಾಗುವ ಮಹಿಳೆಯರ ವಯಸ್ಸು ಸುಮಾರು ೨೩ ವರ್ಷವಾಗಿರುತ್ತಿತ್ತು. ೧೯೭೪ರಲ್ಲಿ ಮದುವೆಯ ವಯಸ್ಸು ೨೫, ೨೬ ಆಗಿರುತ್ತಿತ್ತು. ಆ ಎರಡು ವರ್ಷದಲ್ಲಿ ನೀವು ಎಂಬಿಎ ಮುಗಿಸಬಹುದಿತ್ತು. ಪಿಎಚ್ಡಿ ಸೇರಬಹುದಿತ್ತು. ಮೆಡಿಕಲ್ ಡಿಗ್ರಿ ಮುಗಿಸಬಹುದಿತ್ತು. ಮದುವೆಯಾಗದೆ ಇವೆಲ್ಲಾ ಮಾಡಬಹುದಿತ್ತು. ಅದು ಆಕೆಯ ಆರ್ಥಿಕ ಅವಕಾಶವನ್ನು ಹೆಚ್ಚಿಸಿತು. ಅಷ್ಟೇ ಅಲ್ಲ ಸಮಾಜದಲ್ಲಿ ನಿರೀಕ್ಷೆಗಳು ಬದಲಾದವು. ಅವರಿಗೆ ಕೆಲಸವನ್ನು ಬೇರೆ ರೀತಿಯಲ್ಲಿ ನೋಡುವುದಕ್ಕೆ ಸಾಧ್ಯವಾಯಿತು. ಅವರಿಗೆ ಸಾಮಾನ್ಯವಾದ ಸಾಮಾಜಿಕ ಬದುಕನ್ನು ಬದುಕುವುದಕ್ಕೆ ಸಾಧ್ಯವಾಯಿತು. ಲೈಂಗಿಕವಾಗಿ ಸಕ್ರ್ರಿಯವಾಗಿದ್ದುಕೊಂಡು, ಶಿಕ್ಷಣವನ್ನು ತೀವ್ರವಾಗಿ ಮುಂದುವರಿಸುವುದಕ್ಕೂ ಸಾಧ್ಯವಾಯಿತು. ಮದುವೆಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಮುಂದುವರಿದ ವೇತನ ತಾರತಮ್ಯಕ್ಕೆ ಪರಿಹಾರವೇನು?
ಇಂದು ಮಹಿಳೆಯರಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಪ್ರತ್ಯೇಕಿಸಿ ಬದುಕುವ ಸ್ವಾತಂತ್ರ್ಯವಿಲ್ಲ. ಮಹಿಳೆಯರು ಇಂದು ಮಕ್ಕಳನ್ನು ನೀಡುವುದಕ್ಕೆ ಅತಿದೊಡ್ಡ ಬೆಲೆ ತೆರಬೇಕಾಗುತ್ತಿದೆ ಅನ್ನುವುದನ್ನು ಅರ್ಥಶಾಸ್ತ್ರ ಅರ್ಥ ಮಾಡಿಕೊಳ್ಳಬೇಕು. ಅದು ವರಮಾನದ ವಿಷಯದಲ್ಲೂ ಹೌದು ಸ್ವಾತಂತ್ರ್ಯದ ವಿಷಯದಲ್ಲೂ ಹೌದು.
ಎರಡು ರೀತಿಯಲ್ಲಿ ನೀತಿಗಳನ್ನು ರೂಪಿಸುವ ಸಾಧ್ಯತೆಯಿದೆ. ಮೊದಲನೆಯದಾಗಿ ಮದುವೆ ಹಾಗೂ ಮಕ್ಕಳನ್ನು ಸಾಕುವ ನಿಟ್ಟಿನಲ್ಲಿ ಬದಲಾವಣೆಯನ್ನು ಯೋಚಿಸಬಹುದು. ಉದಾಹರಣೆಗೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಕೆಲಸದ ಸ್ಥಳದಲ್ಲಿ ವ್ಯವಸ್ಥೆ ಮಾಡಬಹುದು. ಅಥವಾ ಗೋಲ್ಡಿನ್ ಹೇಳುವಂತೆ ಅರ್ಥಿಕತೆಯನ್ನೇ ಮಹಿಳೆಯರಿಗೆ ಹೊಂದಿಕೆಯಾಗುವಂತೆ ಮರು ರೂಪಿಸಬಹುದು. ಮಕ್ಕಳನ್ನು ನೋಡಿಕೊಳ್ಳಬೇಕಾಗಿ ಬಂದಾಗ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವುದು, ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಕಲ್ಪಿಸುವುದು ಇತ್ಯಾದಿ. ಕೋವಿಡ್ ಸಮಯದಲ್ಲಿ ಮನೆಯಲ್ಲಿ ಇದ್ದುಕೊಂಡೇ ಬೇಕಾದಷ್ಟು ಕೆಲಸವನ್ನು ಮಾಡಬಹುದು ಅನ್ನುವುದು ಸ್ಪಷ್ಟವಾಯಿತು. ನೀವು ಮೀಟಿಂಗ್ ನಡೆಸಲು ಬೇರೆ ದೇಶಕ್ಕೆ ಹೋಗಬೇಕಾಗಿಲ್ಲ. ಅಂದರೆ ಗ್ರೀಡಿ ಕೆಲಸಗಳು ಹೆಚ್ಚು ಫ್ಲೆಕ್ಸಿಬಲ್ ಆಗಿರುವುದಕ್ಕೆ ಸಾಧ್ಯ. ಫ್ಲೆಕ್ಸಿಬಲ್ ಅದ ತಕ್ಷಣ ಉತ್ಪಾದಕತೆ ಕಮ್ಮಿಯಾಗಬೇಕಾಗಿಲ್ಲ. ಅಂದರೆ ಕೆಲಸವನ್ನು ಹೆಚ್ಚು ಫ್ಲೆಕ್ಸಿಬಲ್ ಹಾಗೂ ಕಡಿಮೆ ಗ್ರೀಡಿ ಮಾಡಿ ಹೆಚ್ಚು ಅನುಕಂಪೆಯಿಂದ ನೋಡುವುದಕ್ಕೆ ಸಾಧ್ಯವಾಗಬೇಕು. ಗೋಲ್ಡಿನ್ ಗುರುತಿಸುವಂತೆ ತಂತ್ರಜ್ಞಾನ, ವಿಜ್ಞಾನ ಹಾಗೂ ಆರೋಗ್ಯ ಸೇವೆಯು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಬದಲಾವಣೆಯಾಗಿದೆ. ಇದರಿಂದ ಪುರುಷರು ಹಾಗೂ ಮಹಿಳೆಯರು ಇಬ್ಬರಿಗೂ ಅನುಕೂಲವಾಗುತ್ತದೆ. ಹೆಚ್ಚು ಫ್ಲೆಕ್ಸಿಬಲ್ ಆದ ಕೆಲಸಕ್ಕೆ ಕೇವಲ ಮಹಿಳೆಯರಿಂದ ಮಾತ್ರವಲ್ಲ ಪುರುಷರಿಂದಲೂ ಒತ್ತಾಯ ಬರಬೇಕು ಅನ್ನುತ್ತಾರೆ ಗೋಲ್ಡಿನ್.
ಇನ್ನು ಇವರ ಅಧ್ಯಯನವನ್ನು ಭಾರತಕ್ಕೆ ಅನ್ವಯಿಸಿ ಹೇಳುವುದಾದರೆ ಅಜೀಂ ಪ್ರೇಮ್ಜೀ ಸಂಸ್ಥೆಯ ಅಧ್ಯಯನ ಮಹಿಳೆಯರ ಬಗ್ಗೆ ಒಂದಿಷ್ಟು ವಿವರವನ್ನು ಕೊಡುತ್ತದೆ. ಅದನ್ನು ಗಮನಿಸಿದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿರುವುದು ಕಾಣುತ್ತದೆ. ಅಂದರೆ ಗೋಲ್ಡಿನ್ ರೇಖೆಯಲ್ಲಿನ ಇಳಿಮುಖ ಚಲನೆಯನ್ನು ಭಾರತದಲ್ಲಿ ಕಾಣಬಹುದು. ಆದರೆ ಸೇವಾಕ್ಷೇತ್ರದಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಉದ್ಯೋಗ ಭಾರತದಲ್ಲಿ ಸೃಷ್ಟಿಯಾಗಿಲ್ಲ. ಹಾಗಾಗಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಳವನ್ನು ಇಲ್ಲಿ ಅಷ್ಟಾಗಿ ಕಾಣುವುದಿಲ್ಲ. ಜೊತೆಗೆ ಆರ್ಥಿಕವಾಗಿ ನಮ್ಮಷ್ಟೇ ಬೆಳೆದಿರುವ ದೇಶಗಳಿಗೆ ಹೋಲಿಸಿ ನೋಡಿದರೆ, ನಮ್ಮಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಅಂದರೆ ಕೆಳಗಿಳಿದ U ರೇಖೆ ಸ್ಥಗಿತವಾಗಿರುವುದಷ್ಟೇ ಅಲ್ಲ, ಕೆಳಮಟ್ಟದಲ್ಲೂ ಇದೆ. ಇಲ್ಲಿ ಎದ್ದು ಕಾಣುವ ಇನ್ನೊಂದು ಅಂಶವೆಂದರೆ, ವರಮಾನ ಹೆಚ್ಚಿರುವ ಕುಟುಂಬಗಳಲ್ಲಿ ಮಹಿಳೆಯರು ಹೆಚ್ಚಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಬಿಡುತ್ತಾರೆ. ವರಮಾನ ಕಡಿಮೆ ಇರುವ ಕುಟುಂಬಗಳಲ್ಲಿ, ಪರಿಶಿಷ್ಠ ಜಾತಿ ವರ್ಗಗಳ ಮಹಿಳೆಯರು ಹೆಚ್ಚಾಗಿ ದುಡಿಯಲು ಹೋಗುತ್ತಿದ್ದಾರೆ. ಅದು ಅವರಿಗೆ ಅನಿವಾರ್ಯ.
ಒಟ್ಟಾರೆಯಾಗಿ ಗೋಲ್ಡಿನ್ ಅಧ್ಯಯನ ಹಲವು ಕಾರಣಕ್ಕೆ ತುಂಬಾ ಮುಖ್ಯ. ಮಹಿಳಾ ಅಧ್ಯಯನದ ವ್ಯಾಪ್ತಿಯನ್ನು ಹಿಗ್ಗಿಸಿದೆ. ಕೇವಲ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ ದೇಶದ ಸಮೃದ್ಧಿಯ ದೃಷ್ಟಿಯಿಂದಲೂ ಮಹಿಳೆಯನ್ನು ಆರ್ಥಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಅನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ. ಮಹಿಳೆಯರ ಪರಿಣತಿಯನ್ನು ಬಳಸಿಕೊಳ್ಳದೇ ಹೋದರೆ ಶ್ರಮದ ಬಳಕೆ ಪರಿಣಾಮಕಾರಿಯಾಗಿ ಆಗುವುದಿಲ್ಲ. ಅದರಿಂದ ಆರ್ಥಿಕತೆಗೆ ನಷ್ಟವಾಗುತ್ತದೆ, ಹೊರೆಯಾಗುತ್ತದೆ. ಹಾಗಾಗಿ ಈ ಲಿಂಗಾಧಾರಿತ ಅಂತರವನ್ನು ಕಡಿಮೆ ಮಾಡುವುದು, ಮಹಿಳೆಯರ ಪ್ರತಿಭೆಯನ್ನು ಬಳಸಿಕೊಳ್ಳುವುದು ಜಾಗತಿಕ ಅಭಿವೃದ್ಧಿಗೆ, ಜಿಡಿಪಿಯ ಹೆಚ್ಚಳಕ್ಕೆ ಅವಶ್ಯಕ.
ಗೋಲ್ಡಿನ್ ಅಧ್ಯಯನದಿಂದ ಈವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೊಸ ಆಯಾಮವೊಂದು ಅರ್ಥಶಾಸ್ತ್ರಕ್ಕೆ ಸೇರ್ಪಡೆಯಾಗುವುದಕ್ಕೆ ಸಾಧ್ಯವಾಗಿದೆ. ಕೇವಲ ಮಹಿಳಾ ಪತ್ರಿಕೆಗಳು ಚರ್ಚಿಸುತ್ತಿದ್ದ ವಿಷಯ ಇಂದು ಅರ್ಥಶಾಸ್ತ್ರದ ಜರ್ನಲ್ಗಳು ಚರ್ಚಿಸುವಂತಾಗಿದೆ. ಅರ್ಥಶಾಸ್ತ್ರದ ಅಧ್ಯಯನದಲ್ಲಿ ಸ್ತ್ರೀವಾದಿ ಚಿಂತನೆ ಮುನ್ನೆಲೆಗೆ ಬಂದಿದೆ. ಆರ್ಥಿಕ ಚರಿತ್ರೆ ಹಾಗೂ ಅನ್ವಯಿಕ ಅರ್ಥಶಾಸ್ತ್ರವನ್ನು ಒಟ್ಟಿಗೆ ತರುವ ಮೂಲಕ ಆಕೆ ಮಹತ್ವದ ಕೆಲಸವನ್ನು ಮಾಡಿದ್ದಾರೆ. ನೋಬೆಲ್ ಸಮಿತಿ ತನ್ನ ಸೀಮಿತ ಚಿಂತನೆಯಿಂದ ಹೊರಬರುತ್ತಿರುವುದು ಭರವಸೆಯನ್ನು ಮೂಡಿಸುತ್ತದೆ.