ನಾವು ಗೆದ್ದೇ ಗೆಲ್ಲುತ್ತೇವೆ ಅಂತ ಅವಳಿಗೆ ಭರವಸೆ ಕೊಡಬೇಕಾಗಿದೆ

ವಿನೇಶ್ ಪೋಗಟ್

[ಬ್ರಿಜುಭೂಷಣ್ ದೌರ್ಜನ್ಯದ ವಿರುದ್ಧ ಹಲವು ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು. ಅವರ ಹೋರಾಟ ಈ ಸಮಯದಲ್ಲಿ ತುಂಬಾ ಕಾಡುತ್ತೆ. ಆ ಸಮಯದಲ್ಲಿ ವಿನೇಶ್ ಪೋಗಟ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದರು. ಅದನ್ನು ಸುಮ್ಮನೆ ಅನುವಾದಿಸಿ ಹಂಚಿಕೊಳ್ಳುತ್ತಿದ್ದೇನೆ.]
ನ್ಯಾಯಕ್ಕಾಗಿ ನಮ್ಮ ಹೋರಾಟ ಪ್ರಾರಂಭವಾಗಿ ಒಂದು ತಿಂಗಳಷ್ಟೇ ಆಗಿದೆ. ಆದರೆ ಒಂದು ವರ್ಷದಿಂದ ಜಂತರ್ ಮಂತರನಲ್ಲಿದ್ದೇವೆ ಅನಿಸುತ್ತಿದೆ. ಬಿಸಿಲಿನಲ್ಲಿ ಫುಟ್‌ಪಾತಿನಲ್ಲಿ ಮಲಗುತ್ತಿದ್ದೇವೆ, ಸೊಳ್ಳೆಗಳು ಕಚ್ಚುತ್ತಿವೆ, ಸಂಜೆಯಾದ ಮೇಲೆ ಬೀದಿನಾಯಿಗಳು ಜೊತೆಗೆ ಬರುತ್ತವೆ ಅಥವಾ ಒಳ್ಳೆಯ ಟಾಯಲೆಟ್ ಇಲ್ಲ ಅನ್ನೋ ಕಾರಣಕ್ಕೆ ಅಲ್ಲ. ನ್ಯಾಯದ ಚಕ್ರ ಎಷ್ಟು ನಿಧಾನವಾಗಿ ತಿರುಗುತ್ತಿದೆ ಅಂದರೆ ಎಷ್ಟೋ ವರ್ಷದಿಂದ ಹೊರಾಡುತ್ತಿದ್ದೇವೆ ಅನಿಸುತ್ತಿದೆ.
ನಾವು ಏಳು ಜನ ಮಹಿಳಾ ಕುಸ್ತಿಪಟುಗಳು, ಜೊತೆಗೆ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯೂ ಸೇರಿದಂತೆ ನಾವು ಏಳು ಜನ ಮಹಿಳಾ ಕುಸ್ತಿಪಟುಗಳು ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ನಿಂದ ಲೈಂಗಿಕ ದೌರ್ಜನ್ಯ ಆಗಿದೆ ಅಂತ ದೂರುಕೊಟ್ಟ ಮೇಲೂ ಹೀಗಾಗಿದೆ. ನಿಜ ಹೇಳಬೇಕೆಂದರೆ ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಹಾಗೂ ಫೆಡರೇಷನ್ನಿನ ದುರಾಡಳಿತದ ಬಗ್ಗೆ ಜನವರಿಯಲ್ಲಿ ಈ ಬಗ್ಗೆ ಮಾತನಾಡಬೇಕು ಅಂದುಕೊಂಡಿದ್ದಾಗ ನಮ್ಮ ಧ್ವನಿಗೆ ಮಹತ್ವ ಇದೆ ಅಂದು ಕೊಂಡಿದ್ದೆವು. ಕೆಲ ಕಾಲ ಹಾಗೆ ನಂಬಿಕೊಂಡಿದ್ದೆವು ಕೂಡ. ನಮ್ಮ ದೂರನ್ನು ಕುರಿತು ವಿಚಾರಣೆ ನಡೆಸುವುದಕ್ಕೆ ಒಂದು ಸಮಿತಿಯನ್ನೂ ಕ್ರೀಡಾ ಮಂತ್ರಾಲಯ ನೇಮಿಸಿತ್ತು ಕೂಡ. ಆದರೆ ಅದು ಕೇವಲ ಕಣ್ಣೊರೆಸುವ ತಂತ್ರ ಅಂತ ನಮಗೆ ಗೊತ್ತಾಯ್ತು.
ಜನವರಿಯಲ್ಲಿ ಬಜ್ರಂಗ್, ಸಾಕ್ಷಿ ಮತ್ತು ನಾನು ಜಂತರ್ ಮಂತರಿನಲ್ಲಿ ಹೋರಾಟ ಪ್ರಾರಂಭಿಸಲು ನಿರ್ಧರಿಸಿದಾಗ ಎರಡು ಮೂರು ದಿನಗಳಲ್ಲಿ ಇತ್ಯರ್ಥವಾಗಿಬಿಡುತ್ತದೆ ಅಂತ ಅಂದುಕೊಂಡಿದ್ದೆವು. ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲು ಧೈರ್ಯ, ಅಪ್ರತಿಮ ಧೈರ್ಯ ತೋರಿದ ಮಹಿಳಾ ಕುಸ್ತಿಪಟುಗಳು ಮಾನ ಹಾಗೂ ಸಮ್ಮಾನಕ್ಕಾಗಿ ಮತ್ತೆ ಹೋರಾಡಬೇಕಾಗುತ್ತದೆ ಅಂದುಕೊಂಡಿರಲಿಲ್ಲ.
ನ್ಯಾಯ ಸಿಗಬೇಕಾದರೆ ಬಲಿಪಶುಗಳು ಎಷ್ಟು ಸಲ ಮಾತನಾಡಬೇಕು?
ನಾನು ‘ಮಾತನಾಡು’ ಅಂದಾಗ ಇದನ್ನು ಊಹಿಸಿಕೊಳ್ಳಿ. ಅವರು ತಾವು ಅನುಭವಿಸಿದ ಅತ್ಯಂತ ನೋವಿನ ಘಟನೆಯ ಬಗ್ಗೆ ಮಾತನಾಡಬೇಕು. ಒಂದು ಸಲ ಅಲ್ಲ ಹಲವು ಸಲ್ಲ. ವಿಚಾರಣಾ ಸಮಿತಿಯ ಮುಂದೆ, ಭಾರತದ ಒಲಂಪಿಕ್ ಅಸೋಸಿಯೇಷನ್ ಸಮಿತಿಯ ಮುಂದೆ, ಪೋಲಿಸರ ಮುಂದೆ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಾಗ ಮತ್ತು ನಂತರ ನ್ಯಾಯಾಧೀಶರ ಮುಂದೆ.
ಏಷಿಯನ್ ಗೇಮ್ಸ್ ಹತ್ತಿರದಲ್ಲಿ. ಅದರಲ್ಲಿ ಭಾರತವನ್ನು ಪ್ರತಿನಿಧಿಸಬೇಕು. ಮೆಡಲ್ಲುಗಳನ್ನು ಗೆಲ್ಲಬೇಕು. ಆದರೆ ಇದು ಅದಕ್ಕಿಂತ ದೊಡ್ಡ ಹೋರಾಟ. ನ್ಯಾಯಕ್ಕಾಗಿ ಹೋರಾಡದಿದ್ದರೆ ಮೆಡಲ್ಲುಗಳನ್ನು ಕತ್ತಿಗೆ ಹಾಕಿಕೊಳ್ಳುವುದರಲ್ಲಿ ಹಾಕಿಕೊಳ್ಳುವುದಕ್ಕೆ ಅರ್ಥವಾದರೂ ಏನು?
ಆದರೆ, ಇಂದಿಗೆ ನಾವು ಪ್ರತಿಭಟನೆ ಪ್ರಾರಂಭಿಸಿ ಒಂದು ತಿಂಗಳಾಗಿದೆ. ನ್ಯಾಯ ಸಿಗುವ ಯಾವ ಸೂಚನೆಯೂ ಕಾಣುತ್ತಿಲ್ಲ. ದೂರುಕೊಟ್ಟವರಿಗೆ ಲೈಂಗಿಕ ದೌರ್ಜನ್ಯವನ್ನು ಕುರಿತು ಮತ್ತೆ ಮತ್ತೆ ಹೇಳಿಕೊಳ್ಳುವುದು ನಿಜವಾಗಿ ಹಿಂಸೆ. ನಾನು ಕೆಲವು ಹುಡುಗಿಯರಂತೆ ಈ ಮನುಷ್ಯನಿಂದಾಗಿ ಇಷ್ಟು ಕಾಲ ಮೌನವಾಗಿ ನರಳಬೇಕಾಯ್ತು. ಬ್ರಿಜ್‌ಭೂಷಣ್, ಪಾರ್ಲಿಮೆಂಟಿನ ಸದಸ್ಯನಾದ ಬ್ರಿಜ್‌ಭೂಷಣನನ್ನು ಯಾಕೆ ರಕ್ಷಿಸಲಾಗುತ್ತಿದೆ ಯಾರೂ ಊಹಿಸಬಹುದು.
ಆದರೆ, ನಾವು ಹೇಳಿದಂತೆ, ಅವನು ಬ್ರಿಜ್‌ಭೂಷಣ್‌ನನ್ನು ಬಂಧಿಸುವವರೆಗೆ ನಾವು ನಾವು ಜಂತರ್ ಮಂತರ್‌ನಿಂದ ಕದಲುವುದಿಲ್ಲ. ಕಳೆದ ಕೆಲವು ತಿಂಗಳು ನನಗೆ ತುಂಬಾ ಒತ್ತಡದ ದಿನಗಳು. ಅತ್ತಿದ್ದೇನೆ. ಆದರೆ ಮಹಿಳೆಯರಿಗೆ ನ್ಯಾಯ ಪಡೆಯುವುದಕ್ಕೆ ಇದು ದೀರ್ಘವಾದ ಹಾಗೂ ಪರೀಕ್ಷೆಯ ಕಾಲ. ನಾನು ಯಾವುದೇ ತ್ಯಾಗಕ್ಕೂ ತಯಾರಿದ್ದೇನೆ.
ಏಷಿಯನ್ ಗೇಮ್ಸ್ ಸಧ್ಯದಲ್ಲೇ ನಡೆಯಲಿದೆ. ಒಲಿಂಪಿಕ್ಸ್ ಅರ್ಹತೆಯ ಸುತ್ತು ಪ್ರಾರಂಭವಾಗುತ್ತಿದೆ. ನಾವು ಭಾರತವನ್ನು ಪ್ರತಿನಿಧಿಸಿ ಮೆಡಲ್ಲುಗಳನ್ನು ಗೆಲ್ಲಬೇಕು. ಆದರೆ ಸಧ್ಯಕ್ಕೆ ಇದು ದೊಡ್ಡ ಹೋರಾಟ. ನ್ಯಾಯ ಸಿಗದೆ ನಾವು ಪ್ರತಿಭಟನೆಯನ್ನು ಮಧ್ಯದಲ್ಲಿ ನಿಲ್ಲಿಸಿಬಿಟ್ಟರೆ, ಲೈಂಗಿಕ ದೌರ್ಜನ್ಯವನ್ನು ಅನುಭವಿಸುತ್ತಿರುವ ಮಹಳೆಯರು ಮೌನವಾಗಿ ಅನುಭವಿಸುತ್ತಿರುತ್ತಾರೆ.
ನಾನು ಅನಿಸಿದ್ದನ್ನು ಹೇಳಿಬಿಡುತ್ತೇನೆ. ಎಲ್ಲರಿಗೂ ಅದು ಇಷ್ಟವಾಗುವುದಿಲ್ಲ. ಅದು ಕ್ರೀಡಾ ಮಂತ್ರಾಲಯದ ಜನ ಇರಬಹುದು ಅಥವಾ ಭಾರತದ ಕ್ರೀಡಾ ಪ್ರಾಧಿಕಾರದ ಮಂದಿ ಇರಬಹುದು ಅಥವಾ ಯಾರೇ ಇರಬಹುದು. ಏಷಿಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದೆ. ನಾನು ನನಗೆ ಅನಿಸಿದ್ದನ್ನು ಹೇಳಿದಾಗ ಇವಳಿಗೆ ಜಂಬ ಬಂದಿದೆ ಅಂದರು. ಅನ್ಯಾಯ ಆದಾಗ ಮಹಿಳೆಯರು ಧ್ವನಿ ಎತ್ತುವುದು ತಪ್ಪಾ? ಜನವರಿಯಲ್ಲಿ ಮೊದಲ ಪ್ರತಿಭಟನೆಯ ನಂತರ ನಾನು ಅತ್ತೆ. ಅದು ನಮ್ಮಲ್ಲಿನ ಒಗ್ಗಟ್ಟನ್ನು ಮುರಿಯಲು ಪ್ರಯತ್ನ ಮಾಡಲಾಗುತ್ತಿದೆ ಅಂತ ತಿಳಿದಾಗ. ಆದರೆ ನಮ್ಮ ನಿರ್ಧಾರವನ್ನು ವಿಫಲಗೊಳಿಸಲು ಸಾಧ್ಯವಾಗಲಿಲ್ಲ. ನಾವು ಮತ್ತೆ ಬಲವಾಗಿ ಮರಳಿದ್ದೇವೆ.
ಮೊದಲು ನಾವು ಒಂದು ರಾಜಕೀಯ ಆಟದಲ್ಲಿ ದಾಳಗಳಾಗಿಬಿಟ್ಟಿದ್ದೆವು. ಈಗ ನಾವು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್ ನಮಗೆ ಅವಮಾನ ಮಾಡಿದ್ದಾರೆ. ನಾನು ಕ್ರೀಡಾ ಮಂತ್ರಿ ನಾನು ಹೇಳಿದ್ದನ್ನು ನೀವು ಕೇಳಬೇಕು ಎನ್ನುವ ಮನೋಭಾವ ಅವರದ್ದು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ತಮ್ಮ ನೋವನ್ನು ಹೇಳಿಕೊಂಡಾಗ ಅವರು ದಿಟ್ಟಿಸಿ ನೋಡುತ್ತಾ ಪುರಾವೆ ಕೊಡಿ ಅಂದರು. ಹಾಗೆಯೇ ವಿಚಾರಣಾ ಸಮಿತಿಯವರು ನಡೆದುಕೊಂಡರು.
ಜನವರಿಯಲ್ಲಿ ಮೂರು ದಿನಗಳ ನಂತರ ಕ್ರೀಡಾ ಮಂತ್ರಿಗಳನ್ನು ಭೇಟಿಯಾದ ನಂತರ ಹಾಗೂ ಇಂಡಿಯಾದ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡೆವು. ಈಗ ಕುರುಡಾಗಿ ನಂಬುವುದು ತಪ್ಪು ಅಂತ ಗೊತ್ತಾಗಿದೆ. ನನ್ನ ಗಂಡ ಸೋಮವೀರ್ ಹಾಗೂ ನಾನು ಪರಸ್ಪರ ಮಾತನಾಡಿಕೊಂಡೆವು. ಯಾವುದೇ ಕಾರಣಕ್ಕೆ ಉಳಿದವರು ಹೋರಾಟ ನಿಲ್ಲಿಸಿದರೂ ನಾವು ಮುಂದುವರೆಸುವುದಾಗಿ ನಿರ್ಧರಿಸಿದೆವು.
ಜನವರಿಯಲ್ಲಿ, ನಮಗೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರಲಿಲ್ಲ. ನಾವು ತುಂಬಾ ಮುಗ್ಧರಾಗಿದ್ದೆವು. ನಾವು ಜನವರಿಯಲ್ಲಿ ಎಫ್‌ಐಆರ್ ಫೈಲ್ ಮಾಡಲಿಲ್ಲ. ಯಾಕೆ? ನಮಗೆ ಪೋಲಿಸರೆಂದರೆ ಹೆದರಿಕೆ. ನಾವು ಹಳ್ಳಿಗಳಿಂದ ಬಂದವರು. ನಾವು ಹೇಗೆ ಬದುಕುತ್ತೇವೆ ಅಂತ ನೋಡಿದ್ದೀರಾ? ಪೋಲಿಸರು ಎಫ್‌ಐಅರ್ ಫೈಲು ಮಾಡುತ್ತಾರೆ. ಮಾಧ್ಯಮಗಳು ಅವುಗಳ ಬಗ್ಗೆ ವರದಿ ಮಾಡುತ್ತವೆ. ಹೆಸರುಗಳು ಹೊರಬರುತ್ತವೆ. ಎಲ್ಲರೂ ವಿಕ್ಟಿಮ್‌ಗಳ ಮೇಲೆ ದಾಳಿ ಮಾಡುತ್ತಾರೆ. ನಮ್ಮ ಹಳ್ಳಿಗಳಲ್ಲಿ ಎಫ್‌ಐಆರ್ ಅಂದರೆ ಜನರಿಗೆ ದೊಡ್ಡ ವಿಷಯ. ಅದೂ ಲೈಂಗಿಕ ದೌರ್ಜನ್ಯ ಅಂದರಂತೂ ಮುಗಿದೇ ಹೋಯಿತು. ನಾವು ಎಫ್‌ಐಆರ್ ಫೈಲು ಮಾಡಿದ ಕೂಡಲೆ ಬ್ರಿಜ್‌ಭೂಷಣ್ ನಮ್ಮನ್ನು ಕೊಲ್ಲಿಸುತ್ತಾನೆ ಅಂತ ಭಾವಿಸಿದೆವು. ನಮಗೆ ಬ್ರಿಜ್‌ಭೂಷಣನ ದುಷ್ಕೃತ್ಯಗಳನ್ನು ಬಯಲುಗೊಳಿಸಬೇಕೆಂಬ ಯೋಜನೆ ಹಲವು ಬಾರಿ ಬಂದಿದ್ದರೂ ಪ್ರತಿಭಟನೆ ಕೂರುವ ವಿಚಾರ ಎಂದೂ ಬಂದೇ ಇರಲಿಲ್ಲ. ಮಾಧ್ಯಮಗಳ ಜೊತೆ ಮಾತನಾಡಬೇಕು ಅಂದುಕೊಂಡೆ, ಅದರಲ್ಲೂ ವಿಶೇಷವಾಗಿ ಟೋಕಿಯೊ ಒಲಂಪಿಕ್ಸ್ ನಂತರ ಅಂದುಕೊಂಡಿದ್ದೆ. ಆದರೆ ಹಿಂದೆ ಸರಿದೆ. ಜನ ಮೆಡಲ್ ಸಿಗಲಿಲ್ಲ ಅದಕ್ಕೆ ನಿರಾಶಳಾಗಿದ್ದಾಳೆ ಎನ್ನಬಹುದು ಅಂತ ಹಿಂದೇಟು ಹಾಕಿದೆ.
೨೦೨೨ ಡಿಸೆಂಬರ್‌ನಲ್ಲಿ, ಇನ್ನೂ ಸುಮ್ಮನಿದ್ದುದು ಸಾಕು ಅನಿಸಿತು. ನನ್ನ ಗಂಡ ಸೋವಿರ್ ಜೊತೆ ಮಾತನಾಡಿದೆ. ನಂತರ ಬಜ್ರಂಗ್ ಜೊತೆ ಮಾತನಾಡಿದೆ. ಮಾತನಾಡಬೇಕಾದ ಸಮಯ ಬಂದಿದೆ ಅನಿಸಿತು. ಏಳು ಜನ ದೂರು ನೀಡಿದ್ದರು. ಆದರೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇನ್ನು ಹಲವರಿದ್ದರು. ಹೆದರಿಕೆಯಿಂದ ಮುಂದೆ ಬರುತ್ತಿರಲಿಲ್ಲ. ಈಗ ನಮಗೆ ಯಾವ ಹೆದರಿಕೆಯೂ ಇಲ್ಲ.
ನಮಗಿದ್ದ ಒಂದೇ ಹೆದರಿಕೆಯೆಂದರೆ ನಾವು ಕುಸ್ತಿಯನ್ನು ಬಿಡಬೇಕಾಗಬಹುದು ಅನ್ನುವುದು. ನಮಗೆ ಇನ್ನೂ ಐದು ವರ್ಷಗಳ ಆಡುವುದಕ್ಕೆ ಸಾಧ್ಯವಿತ್ತು. ಆದರೆ ಈ ಪ್ರತಿಭಟನೆಯ ನಂತರ ನಮಗೆ ಭವಿಷ್ಯದಲ್ಲಿ ಏನು ಕಾದಿದೆಯೋ ಯಾರಿಗೆ ಗೊತ್ತು? ನಮ್ಮ ಜೀವ ಆಪಾಯದಲ್ಲಿದೆ ಅನ್ನುವುದು ನಮಗೆ ಗೊತ್ತು. ನಾವು ಕೇವಲ ಬ್ರಿಜ್‌ಭೂಷಣನನ್ನು ಎದುರು ಹಾಕಿಕೊಂಡಿಲ್ಲ. ಇನ್ನೂ ಹಲವು ಪ್ರಬಲ ಶಕ್ತಿಗಳನ್ನು ಎದರುಹಾಕಿಕೊಂಡಿದ್ದೇವೆ. ಆದರೆ ನನಗೆ ಸಾವಿನ ಹೆದರಿಕೆಯಿಲ್ಲ.
ಇತರ ಸಕ್ರಿಯ ಕ್ರೀಡೆಯ ಆಟಗಾರರು ನಮ್ಮೊಂದಿಗೆ ಜಂತರ್ ಮಂತರಿನಲ್ಲಿ ಸೇರಿಕೊಳ್ಳಬಹುದಿತ್ತು. ಕೆಲವರು ಒಮ್ಮೆ ಟ್ವೀಟ್ ಮಾಡಿದ್ದಾರೆ. ಅವರ ಬೆಂಬಲವನ್ನು ಸ್ಮರಿಸುತ್ತೇವೆ. ನಾವು ಸುಮ್ಮನಿದ್ದು ಬಿಟ್ಟಿದ್ದರೆ ಬದುಕಿಡೀ ಪಶ್ಚಾತಾಪ ಪಡುತ್ತಿದ್ದೆವು. ನ್ಯಾಯಕ್ಕಾಗಿ ಹೊರಾಡದೇ ಹೋದರೆ ಕತ್ತಿನ ತುಂಬಾ ಮೆಡಲು ಹಾಕಿಕೊಂಡರೆ ಏನು ಲಾಭ? ನಾವು ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆ. ಮುಂದಿನ ತಲೆಮಾರಿನ ಮಹಿಳೆಯರು ಕುಸ್ತಿಯಾಡಬಹುದು. ಭಯವಿಲ್ಲದ ವಾತಾವರಣದಲ್ಲಿ ಆಡುವುದಕ್ಕೆ ಹಾಗೂ ಸ್ಪರ್ಧಿಸುವುದಕ್ಕೆ ಸಾಧ್ಯವಾಗಬಹುದು.
ನಾವು ಏಪ್ರಿಲ್ ೨೩ ರಂದು ಎರಡನೆ ಸುತ್ತಿನ ಪ್ರತಿಭಟನೆಯನ್ನು ಪ್ರಾರಂಭಿಸಿದೆವು. ಫುಟ್‌ಪಾತಿನಲ್ಲಿ ಮಲಗುತ್ತಿದ್ದೆವು. ನೂರಾರು ಒಳ್ಳೆಯ ಜನರನ್ನು ಬೇಟಿ ಮಾಡುತ್ತಿದ್ದೆವು. ಅವರು ನಮಗೆ ಆಶೀರ್ವಾದ ಮಾಡುತ್ತಿದ್ದರು, ಸಲಹೆಗಳನ್ನು ನೀಡುತ್ತಿದ್ದರು. ನಾವು ಅಂತಹ ಪರಿಸ್ಥಿತಿಯಲ್ಲಿ ಎಂದೂ ಇರಲಿಲ್ಲ. ಕೆಲವೊಮ್ಮೆ ಮುಂದೆ ಏನು ಮಾಡುವುದು ಅನ್ನುವುದು ತೋರುತ್ತಿರಲಿಲ್ಲ.
ನಮಗೆ ಜಗತ್ತು ಹಾಗು ನಮ್ಮ ನಡುವೆ ಹೋರಾಟ ಅನಿಸಿಬಿಟ್ಟಿದೆ. ದೇವರ ದಯದಿಂದ ನಾವಿನ್ನೂ ಇಲ್ಲೇ ಇದ್ದೇವೆ. ಎಲ್ಲೂ ಹೋಗುತ್ತಿಲ್ಲ. ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ಕೊಡುವುದಕ್ಕೆ ಹಾಗೂ ನಮ್ಮ ಐಕ್ಯತೆಯನ್ನು ಮುರಿಯುವುದಕ್ಕೆ ಮುಸುಕಿನ ಹಾಗೂ ಬಹಿರಂಗ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾವು ಹೋರಾಡುತ್ತಿದ್ದೇವೆ.
ನಮ್ಮ ತಂದೆ ತಾಯಿಯರು ಹೆದರಿದ್ದಾರೆ. ನನ್ನ ಅಣ್ಣ ಇಲ್ಲಿಗೆ ಬರುತ್ತಾನೆ. ಆದರೆ ಅವನು ನನ್ನ ಬಗ್ಗೆ ಚಿಂತಿತನಾಗಿದ್ದಾನೆ. ನಮ್ಮ ಅಮ್ಮ ಮನೆಯಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಅವಳಿಗೆ ಇವೆಲ್ಲಾ ಪೂರ್ತಿಯಾಗಿ ಅರ್ಥ ಆಗಿಲ್ಲ. ಮಗಳೆ ಏನಾದರೂ ಆಗುತ್ತದಾ? ಅಂತ ಕೇಳುತ್ತಲೇ ಇರುತ್ತಾಳೆ. ‘ನಮ್ಮ ಹೋರಾಟ ವ್ಯರ್ಥವಾಗುವುದಿಲ್ಲ ನಾವು ಗೆದ್ದೇ ಗೆಲ್ಲುತ್ತೇವೆ’ ಅಂತ ಅವಳಿಗೆ ನಾನು ಭರವಸೆ ಕೊಡಬೇಕಾಗಿದೆ.