
ರಾಷ್ಟ್ರಪತಿ ಭವನದಲ್ಲಿ ಯೋಜನಾ ಆಯೋಗದ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಜೆ ಸಿ ಕುಮಾರಪ್ಪನವರು ಟಾಂಗದಲ್ಲಿ ಅಲ್ಲಿಗೆ ಬರುತ್ತಿದ್ದರು. ಜವಹರಲಾಲ್ ಅವರ ಕಾರು ಆ ಹಾದಿಯಲ್ಲೇ ಬರಬೇಕಾದ್ದರಿಂದ ಟಾಂಗವನ್ನು ರಸ್ತೆಯ ಆಚೆಗೆ ತೆಗೆಯಲು ಹೇಳಿದರು. ಸಿಟ್ಟಾದ ಕುಮಾರಪ್ಪನವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಂದಿನ ಬಾರಿ ತಾನು ಎತ್ತಿನಗಾಡಿಯಲ್ಲಿ ಬರುವುದಾಗಿ ಹೇಳಿದರು. ಪ್ರಜಾಸತ್ತೆಯಲ್ಲಿ ಪ್ರಧಾನ ಮಂತ್ರಿಯೂ ಒಂದೇ, ಎತ್ತಿನ ಗಾಡಿ ಓಡಿಸುವವನೂ ಒಂದೇ ಎಂದರು. ನೆಹರು ಕುಮಾರಪ್ಪನವರನ್ನು ಸಮಾಧಾನ ಪಡಿಸುತ್ತಾ ಆ ರಸ್ತೆಯಲ್ಲಿ ಮಿಲಿಟರಿ ವಾಹನಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಹಾಗಾಗಿ ಗಾಡಿಯವರ ಸುರಕ್ಷತೆಗಾಗಿಯೇ ಈ ಏರ್ಪಾಡು ಮಾಡಲಾಗಿದೆ ಎಂದು ಸಮಝಾಯಿಸಿ ನೀಡಿದರು. ಅದನ್ನು ಒಪ್ಪದ ಕುಮಾರಪ್ಪನವರು ಮಿಲಿಟರಿ ಗಾಡಿಯಿಂದ ಟಾಂಗದವರಿಗೆ ಅಪಾಯ ಇದೆಯೆಂದಾದರೆ ನಿರ್ಬಂಧಗಳನ್ನು ಮಿಲಿಟರಿ ವಾಹನಗಳಿಗೆ ಹಾಕಬೇಕು ಎಂದರು.
ಇದು ಕುಮಾರಪ್ಪನವರು ಹಾಗೂ ನೆಹರು ಅವರ ನಡುವಿನ ವ್ಯತ್ಯಾಸವನ್ನೂ ಹೇಳುತ್ತದೆ. ಕುಮಾರಪ್ಪನವರದ್ದು ಎತ್ತಿನ ಗಾಡಿಯ, ಗ್ರಾಮೀಣ ಆರ್ಥಿಕತೆಯ, ವಿಕೇಂದ್ರೀಕರಣದ ಹಾದಿ. ನೆಹರು ಅವರದ್ದು ಬೃಹತ್ ಕೈಗಾರಿಕೀರಣದ, ಕೇಂದ್ರೀಕರಣದ ಹಾದಿ. ಅದನ್ನು ಅವರು ಆಧುನಿಕ ಭಾರತದ ದೇವಸ್ಥಾನಗಳು ಅಂತ ಕರೆದರು. ಹಾಗಾಗಿಯೇ ಭಾರತದ ಬಾವುಟದಲ್ಲಿ ಗಾಂಧಿಯ ಚರಕದ ಬದಲು ಆಶೋಕ ಚಕ್ರವೂ ಬಂತು. ಅದನ್ನು ಪಿ ಚಿದಂಬರಂ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ಪಟ್ಟಣಗಳಲ್ಲಿ ಶೇಕಡ ೮೫ರಷ್ಟು ಜನ ಬದುಕುವಂತಾಗಬೇಕು. ಗ್ರಾಮೀಣ ಸಮಾಜವಾಗುವುದು ಅಂದರೆ ಬಡ, ದುರ್ಬಲ ದೇಶವಾಗುವುದು. ಮುಂದುವರಿಯುವುದು ಅಂದರೆ ಕೈಗಾರಿಕೀಕರಣಗೊಳ್ಳುವುದು ಹಾಗೂ ನಗರೀಕರಣಗೊಳ್ಳುವುದು.
ಕುಮಾರಪ್ಪನವರ ದೃಷ್ಟಿಯಲ್ಲಿ ಕೇಂದ್ರೀಕರಣ ಎನ್ನುವುದು ಹಿಂಸೆಯ, ಯುದ್ಧದ ಹಾದಿ. ಕುಮಾರಪ್ಪನವರು ನೆಹರು ಮಾದರಿಗೆ ದಾರಿಬಿಟ್ಟುಕೊಟ್ಟು ಯೋಜನಾ ಆಯೋಗದಿಂದ ಹೊರಬಂದದ್ದು ಬೇರೆ ಕಥೆ. ಕುಮಾರಪ್ಪನವರು ಕೊನೆಯವರಗೆ ವಿಕೇಂದ್ರ್ರೀಕರಣದ ಗ್ರಾಮೀಣ ಸಮುದಾಯಿಕ ಬದುಕಿನ ಪರವಾಗಿ ನಿಂತವರು. ಅದೇ ಕಾರಣಕ್ಕೆ ಅವರು ಬಂಡವಾಳಶಾಹಿ ಹಾಗೂ ಕಮ್ಯುನಿಸ್ಟ್ ವ್ಯವಸ್ಥೆ ಎರಡನ್ನೂ ಒಪ್ಪುತ್ತಿರಲಿಲ್ಲ. ಎರಡೂ ಕೇಂದ್ರೀಕರಣದ ಹಾದಿ ಹಿಡಿದ ವ್ಯವಸ್ಥೆಗಳು ಅನ್ನೋದು ಅವರ ತಕರಾರು.
ಕುಮಾರಪ್ಪನವರು ಅಮೇರಿಕೆಯಲ್ಲಿ ಫೈನಾನ್ಸ್ ವಿಷಯದಲ್ಲಿ ಉನ್ನತ ಅಧ್ಯಯನ ಮಾಡಿ, ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಲಹೆಗಾರರಾಗಿ ಕೊನೆಗೆ ಗಾಂಧಿಯವರ ಚಿಂತನೆಗಳಿಂದ ಪ್ರಭಾವಿತರಾಗಿ ಭಾರತಕ್ಕೆ ಬಂದವರು. ೧೯೨೯ರಲ್ಲಿ ಭಾರತಕ್ಕೆ ಬಂದಾಗ ಅವರಿಗೆ ಭಾರತ ಗೊತ್ತಿರಲಿಲ್ಲ. ಗಾಂಧಿಯನ್ನಾಗಲಿ, ಚರಕವನ್ನಾಗಲಿ ನೋಡಿರಲಿಲ್ಲ. ಪಂಚೆ ಕೊಳ್ಳೋದಕ್ಕೆ ಅಂಗಡಿಗೆ ಹೋಗಿ ಅಳತೆ ತಗೊಳ್ಳಿ ನಂಗೆ ಪಂಚೆ ಬೇಕು ಅಂತ ಕೇಳಿದ್ದರು. ಇಲ್ಲಾ ಸಾರ್ ಪಂಚೆಯನ್ನು ಪ್ಯಾಂಟ್ ತರಹ ಅಳತೆಗೆ ಸಿದ್ದ ಮಾಡೋಲ್ಲ ಅಂತ ಅಂಗಡಿಯವನು ಹೇಳಿದ್ದ.
ತುಂಬಾ ಬೇಗ ಬೆಳೆದರು. ಭಾರತವನ್ನು ಅರ್ಥಮಾಡಿಕೊಂಡರು. ಗಾಂಧಿಯವರ ಅರ್ಥಶಾಸ್ತ್ರಜ್ಞ ಅಂತಲೇ ಪ್ರಖ್ಯಾತರಾದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ೧೯೪೫ರಲ್ಲಿ ಪ್ರಕಟವಾದ ಎಕಾನಮಿ ಆಫ್ ಪರ್ಮನೆನ್ಸ್ ಹೆಚ್ಚು ಪ್ರಸಿದ್ದವಾದ ಪುಸ್ತಕ. ಇದೊಂದು ರೀತಿಯಲ್ಲಿ ಗಾಂಧಿಯನ್ ಅರ್ಥಶಾಸ್ತ್ರದ ಮ್ಯಾನಿಫೆಸ್ಟೊ ಇದ್ದ ಹಾಗೆ. ಸಿದ್ದವನಳ್ಳಿ ಕೃಷ್ಣಶರ್ಮ ಇದನ್ನು ಕನ್ನಡಕ್ಕೆ ಅನುವಾದಿಸಿದ್ದರು. ಸುರೇಂದ್ರ ಕೌಲಗಿಯವರು ಅದನ್ನು ಪರಿಷ್ಕರಿಸಿ ತಂದಿದ್ದಾರೆ. ಪುಸ್ತಕ ಬಂದ ನಂತರದ ೮೦ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಇದರಲ್ಲಿನ ಹಲವು ಚಿಂತನೆಗಳು ಇಂದಿಗೂ ಪ್ರಸ್ತುತ. ಕುಮಾರಪ್ಪನವರು ಅರ್ಥಶಾಸ್ತ್ರದ ಪದವೀಧರರು. ಹಲವು ಕ್ಷೇತ್ರ ಸಮೀಕ್ಷೆಗಳ ಮೂಲಕ ಭಾರತದ ವಾಸ್ತವವನ್ನು ಗ್ರಹಿಸಿಕೊಂಡವರು. ಹಾಗಾಗಿ ಅವರ ಚಿಂತನೆಗಳನ್ನು ಗಂಭೀರವಾಗಿ ನೋಡುವ ಅವಶ್ಯಕತೆ ಇದೆ.
ಅವರು ನೈತಿಕ ಕಾಳಜಿಯನ್ನು ತಮ್ಮ ಆರ್ಥಿಕ ಚಿಂತನೆಯ ಭಾಗವಾಗಿ ಪರಿಗಣಿಸಿದ್ದರು. ಭೌತಶಾಸ್ತ್ರ ಅಥವಾ ಇನ್ಯಾವುದೋ ಜ್ಞಾನಶಾಖೆಯ ಮಾದರಿಯಲ್ಲಿ ಅದು ನೈತಿಕವಾಗಿ ತಟಸ್ಥವಾದದ್ದು ಎಂದು ಒಪ್ಪಿದವರಲ್ಲ. ಹಾಗಾಗಿ ಒಳಿತು ಕೆಡಕುಗಳ ಚರ್ಚೆ ಸೌಭಾವಿಕವಾಗಿಯೇ ಅವರ ಚಿಂತನೆಯುದ್ದಕ್ಕೂ ತೆಕ್ಕೆಹಾಕಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಐದು ಬಗೆಯ ಆರ್ಥಿಕ ವ್ಯವಸ್ಥೆಗಳನ್ನು ಗುರುತಿಸುತ್ತಾರೆ. ಪರೋಪಜೀವಿ, ಪರಾಪಹಾರ ವರ್ಗ, ಉದ್ಯಮಶೀಲತೆಯ ವ್ಯವಸ್ಥೆ, ಸಾಂಘಿಕ ಅರ್ಥವ್ಯವಸ್ಥೆ, ಸೇವಾ ವ್ಯವಸ್ಥೆ. ನೀವು ಈ ಶ್ರೇಣಿಯಲ್ಲಿ ಮೇಲೆ ಹೋಗುತ್ತಿರೋ ಅಥವಾ ಕೆಳಗೆ ಇಳಿಯುತ್ತಿರೋ ಅನ್ನುವುದು ಒಳ್ಳೆಯದು ಹಾಗು ಕೆಟ್ಟದ್ದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಅಮ್ಮ ಮಗುವನ್ನು ಅರೈಕೆ ಮಾಡಿದಾಗ ಆಕೆಗೆ ಸಿಗುವುದು ಕೇವಲ ತೃಪ್ತಿ. ಅದೇ ಆಕೆಗೆ ಸಿಗುವ ’ಕೂಲಿ’. ದಾದಿಯೊಬ್ಬಳು ಮಗುವನ್ನು ನೋಡಿಕೊಳ್ಳುವ ಸ್ಥಿತಿ ಇದಕ್ಕಿಂತ ಕೆಳಮಟ್ಟದ್ದು. ಲಾಭದ ಉದ್ದೇಶದಿಂದ ತಯಾರಾದ ಮಕ್ಕಳ ಆಹಾರವನ್ನು ನೀಡಿ ಮಗುವನ್ನು ಸಾಕುವುದು ಪರೋಪಜೀವಿ ಆರ್ಥಿಕ ವ್ಯವಸ್ಥೆಯಾಗುತ್ತದೆ.
ಶಾಶ್ವತ ಅಂದರೇನು? ಇದನ್ನು ಅವರು ಸಸ್ಟೇನಬಲ್ ಅಥವಾ ತಾಳಿಕೆಯ ವ್ಯವಸ್ಥೆ ಅನ್ನೋ ಅರ್ಥದಲ್ಲಿ ಮಾತನಾಡುತ್ತಿಲ್ಲ. ಆ ಅಂಶವೂ ಅದರಲ್ಲಿ ಇರಬಹುದು. ಆದರೆ ಅದೇ ಅಲ್ಲ.
ಅವರ ಪ್ರಕಾರ ’ದೇವನೊಬ್ಬನನ್ನು ಬಿಟ್ಟು ಬೇರೆ ಯಾವುದನ್ನೂ ಶಾಶ್ವತವಾದದ್ದು ಅನ್ನುವುದಕ್ಕೆ ಸಾಧ್ಯವಿಲ್ಲ. ಆದಿಯೂ ಅಂತ್ಯವೂ ಇಲ್ಲದವನು ಅವನೊಬ್ಬನೆ. ಬ್ರಹ್ಮಾಂಡದಲ್ಲಿ ಎಲ್ಲವೂ ಎಲ್ಲಿಯೋ ಪ್ರಾರಂಭವಾಗಿ ಕೆಲವು ಸಮಯದ ನಂತರ ಕೊನೆಗಾಣುತ್ತವೆ. ಕೆಲವು ಬೇಗ ಸಾಯುತ್ತವೆ. ಕೆಲವು ಹೆಚ್ಚು ಕಾಲ ಇರುತ್ತವೆ.’ ಹೂವು ಒಂದೇ ದಿನದಲ್ಲಿ ಅರಳಿ ಬಾಡಿಹೋಗುತ್ತದೆ. ಆಮೆ ಹೆಚ್ಚು ವರ್ಷ ಬದುಕುತ್ತವೆ. ಹೂವಿನ ಆಯು?ಕ್ಕೆ ಹೋಲಿಸಿದರೆ ಆಮೆಯ ಆಯು? ದೀರ್ಘವಾದುದು. ಆಮೆಗೆ ಹೋಲಿಸಿದರೆ ಜಗತ್ತು ಹೆಚ್ಚು ಶಾಶ್ವತ. ಹಾಗಾಗಿ ’ಶಾಶ್ವತ ಆರ್ಥಿಕತೆ’ ಅನ್ನೋದು ಒಂದು ಸಾಪೇಕ್ಷವಾದ ಪರಿಕಲ್ಪನೆ. ಪ್ರಕೃತಿಯಲ್ಲಿ ಕಲ್ಲಿದ್ದಲು, ಕಬ್ಬಿಣ, ಪೆಟ್ರೋಲ್ ಮೊದಲಾದ ನಿರ್ಜಿವ ವಸ್ತುಗಳು ಬೆಳೆಯುವುದೂ ಇಲ್ಲ, ಹೆಚ್ಚುವುದೂ ಇಲ್ಲ. ಬಳಸಿದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಇವು ಕ್ಷಣಿಕ. ಹರಿಯುವ ನೀರು, ಬೆಳೆಯುವ ಕಾಡು ಇವೆಲ್ಲಾ ಶಾಶ್ವತ.
ಅವಕ್ಕೆ ಈ ಶಾಶ್ವತತೆ ಹೇಗೆ ಬರುತ್ತದೆ. ಮರದಿಂದ ಬೀಜ ಬಿದ್ದು, ಮೊಳೆತು, ಮತ್ತೆ ವೃಕ್ಷವಾಗಿ ಬೆಳೆಯುತ್ತ ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆ. ಮರದ ಈ ನಿರಂತರತೆಗೆ ನೀರು, ಮಣ್ಣು ಎರೆಹುಳ, ಜೇನು ಇವೆಲ್ಲಾ ನೆರವಾಗುತ್ತಿರುತ್ತವೆ. ಜೇನು ಮಕರಂದಕ್ಕಾಗಿ ಹೂವನ್ನು ಆಶ್ರಯಿಸುತ್ತದೆ. ಆದರೆ ಆ ಪ್ರಕ್ರಿಯೆಯಲ್ಲಿ ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಅಂದರೆ ಸ್ವಹಿತಕ್ಕಾಗಿ ಕೆಲಸ ಮಾಡುತ್ತಲೇ ತಮಗೆ ಅರಿವಿಲ್ಲದಂತೆ ಒಂದು ದೊಡ್ಡ ವ್ಯವಸ್ಥೆ ನಿರಂತರವಾಗಿ ಉಳಿಯುವುದಕ್ಕೂ ನೆರವಾಗುತ್ತಿರುತ್ತದೆ. ಪ್ರಕೃತಿ ಇವುಗಳನ್ನೆಲ್ಲಾ ಒಂದು ಸಾಮಾನ್ಯ ಉದ್ದೇಶಕ್ಕಾಗಿ ಪರಸ್ಪರ ಹೆಣೆದಿರುತ್ತದೆ. ಇದರಲ್ಲಿ ನಿರ್ಜಿವ, ಸಜೀವ, ಅಗೋಚರ, ಗೋಚರ, ಚಲಿಸುವ, ಚಲನೆಯಿಲ್ಲದ ಎಲ್ಲಾ ತರಹದ ವಸ್ತುಗಳೂ ಇವೆ. ಯಾವುದೂ ತನ್ನ?ಕ್ಕೆ ತಾನು ಇಲ್ಲ. ಇವುಗಳ ಸೌಹಾರ್ದಯುತ ಸಂಬಂಧದಿಂದ ಪ್ರಕೃತಿಯಲ್ಲಿನ ಈ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿರುತ್ತವೆ. ಈ ನಿರಂತರ ಚಲನೆಯ ಆವರ್ತಕ್ಕೆ ಯಾವುದಾದರೂ ಹಂತದಲ್ಲಿ ತಿಳಿದೋ ತಿಳಿಯದೆಯೋ ಅಡಚಣೆಯಾದರೆ, ಅದರ ಪರಿಣಾಮವಾಗಿ ಪ್ರಕೃತಿಯಲ್ಲಿ ಹಿಂಸೆಯುಂಟಾಗುತ್ತದೆ. ಈ ಹಿಂಸೆಯ ಫಲವಾಗಿ ಬೆಳವಣಿಗೆ ಅಥವಾ ಪ್ರಗತಿ ನಿಂತು ಹೋಗುತ್ತವೆ.
ಮನುಷ್ಯ ಕೂಡ ಈ ವ್ಯವಸ್ಥೆಯ ಭಾಗವೆ. ಆದರೆ ಅವನು ಉಳಿದ ಪ್ರಾಣಿಗಳಿಗಿಂತ ಭಿನ್ನ. ಅವನಿಗೆ ’ಇಚ್ಛಾ ಸ್ವಾತಂತ್ರ್ಯ’ ಎನ್ನುವ ಸಾಮರ್ಥ್ಯವಿದೆ. ಅದನ್ನು ಕುಮಾರಪ್ಪನವರು ದೈವದತ್ತ ಅಂತಾರೆ. ಅದೂ ಕೂಡ ಈ ಪ್ರಾಕೃತಿಕ ಪ್ರಕ್ರಿಯೆಯಲ್ಲಿ ವಿಕಾಸಗೊಂಡಿದ್ದು ಅಂತ ನಾನು ಅಂದುಕೊಂಡಿದ್ದೇನೆ. ಈ ಇಚ್ಛಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಮನುಷ್ಯ ತನ್ನ ಸುತ್ತಲಿನ ವಾತಾವರಣವನ್ನೂ, ಪರಿಸ್ಥಿತಿಯನ್ನೂ ಬದಲಿಸಿಬಿಡಬಲ್ಲ. ಬದಲಿಸಿದ್ದಾನೆ ಕೂಡ. ಕಳೆದು ಕೆಲವು ಶತಮಾನಗಳಲ್ಲಿ ನಾವು ಸುತ್ತಮುತ್ತ ಇರುವ ಪ್ರಾಣಿಗಳ, ಗಿಡಗಳ ಸ್ವರೂಪವನ್ನೇ ಬದಲಿಸಿಬಿಟ್ಟಿದ್ದೇವೆ. ಅಟೆನ್‌ಬರೊ ಒಂದು ಕಡೆ ಹೇಳ್ತಾನೆ. ನಾವು ಹಾಗೂ ನಮ್ಮ ಆಹಾರಕ್ಕೇ ಅಂತ ಸಾಕಿರುವ ಸಸ್ತನಿಗಳು ಒಟ್ಟಾಗಿ ಈ ಜಗತ್ತಿನ ಸಸ್ತನಿಗಳು ಶೇಕಡ ೯೬% ಆಗ್ತೀವಿ. ಇನ್ನೂ ಆನೆ, ಹುಲಿ, ಕೋತಿ ಇವೆಲ್ಲಾ ಸೇರಿ ಇರೋದು ಕೇವಲ ೪%. ಹಾಗೆಯೆ ಒಟ್ಟಾರೆ ಪಕ್ಷಿಗಳಲ್ಲಿ ೭೦%ರಷ್ಟು ನಾವು ತಿನ್ನಲು ಸಾಕಿರುವ ಕೋಳಿ, ಬಾತು ಇತ್ಯಾದಿ. ಅದು ನಾವು ಜೀವ ವೈವಿಧ್ಯವನ್ನು ನಾಶ ಮಾಡಿರುವ ಪ್ರಮಾಣವನ್ನು ತೋರಿಸುತ್ತದೆ.
ಇದರ ನಡುವೆಯೂ ಮನುಷ್ಯನಿಗೆ ಗ್ರಾಮೀಣ ಸಮಾಜದಲ್ಲಿ ಒಂದು ನಿರಂತರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿತ್ತು. ಅವರ ದೃಷ್ಟಿಯಲ್ಲಿ ಈ ಗ್ರಾಮೀಣ ಅರ್ಥಿಕತೆ ಅನ್ನೋದು ಸ್ಥಳೀಯವಾದದ್ದು. ಉತ್ಪಾದಕರೂ ಸ್ಥಳೀಯರೆ, ಬಳಸುವವರೂ ಸ್ಥಳೀಯರೆ, ಸಂಪನ್ಮೂಲವೂ ಸ್ಥಳೀಯವಾದದ್ದೆ. ಅಂದರೆ ಸ್ಥಳೀಯ ಮಾರುಕಟ್ಟೆ, ಸ್ಥಳೀಯ ಸಂಪನ್ಮೂಲದ ಮೇಲೆ ಸ್ಥಳೀಯರಿಗೆ ನಿಯಂತ್ರಣವಿರಬೇಕು. ಉತ್ಪಾದನೆಯನ್ನು ಸ್ಥಳೀಯ ಅವಶ್ಯಕತೆ ನಿರ್ಧರಿಸುತ್ತಿತ್ತು. ಹಾಗಾಗಿ ಉತ್ಪಾದಕನಿಗೆ ಗ್ರಾಹಕನ ಅವಶ್ಯಕತೆಯ ಅರಿವಿರುತ್ತದೆ. ಗ್ರಾಹಕನಿಗೆ ಉತ್ಪಾದನೆಯ ಬಗ್ಗೆ ಅರಿವಿರುತ್ತದೆ. ಈ ಸ್ವದೇಶಿ ತತ್ತ್ವ ಗ್ರಾಮೀಣ ಆರ್ಥಿಕತೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಬರುವಲ್ಲಿ ಮುಖ್ಯ ಅಂಶವಾಗಿತ್ತು.
ಗಾಂಧಿಯವರು ಸ್ಥಳೀಯತೆಯ ಕಲ್ಪನೆಯನ್ನು ಜ್ಞಾನಕ್ಕೂ ವಿಸ್ತರಿಸುತ್ತಾರೆ. ಅಂದರೆ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಸ್ಥಳೀಯ ಜ್ಞಾನ ಅಂದರೆ ಲೋಕ ವಿದ್ಯೆಯ ಬಳಕೆಯಾಗಬೇಕು. ಸ್ಥಳೀಯ ರೈತರ, ಕುಶಲಕರ್ಮಿಗಳ, ಅದಿವಾಸಿಗಳ ಜ್ಞಾನವನ್ನು ಬಳಸಿಕೊಳ್ಳಬೇಕು. ಆಗ ಶ್ರಮದ ಕೆಲಸ ಹಾಗೂ ಬುದ್ಧಿಯ ಕೆಲಸ ಅಂತ ಪ್ರತ್ಯೇಕ ಆಗೊಲ್ಲ. ಅದು ತುಂಬಾ ಮುಖ್ಯ. ಕೆಲಸದಲ್ಲಿ ಡ್ರಡ್ಜರಿ ಹಾಗೂ ಕ್ರಿಯೆಟಿವಿಟಿ ಎರಡೂ ಇರುತ್ತದೆ. ಡ್ರಡ್ಜರಿಯ ಕೆಲಸವನ್ನು ಅಂದರೆ ಶ್ರಮದ ಕೆಲಸವನ್ನು ಒಬ್ಬನಿಗೆ ಕೊಟ್ಟು ಬುದ್ದಿಯ ಅಂದರೆ ಕ್ರಿಯೆಟಿವಿಟಿಯ ಕೆಲಸವನ್ನು ಇನ್ನೊಬ್ಬನಿಗೆ ಹಂಚುವ ಶ್ರಮವಿಭಜನೆಯನ್ನು ಕುಮಾರಪ್ಪನವರು ವಿರೋಧಿಸುತ್ತಾರೆ. ಶ್ರಮದ ಕೆಲಸ ಒಬ್ಬರಿಗೆ, ಬುದ್ದಿಯ ಕೆಲಸ ಇನ್ನೊಬ್ಬರಿಗೆ ಹಂಚಿ, ಹಳ್ಳಿಯಿಂದ ಆ ಜ್ಞಾನವನ್ನು ದೂರಮಾಡಿ ಅವರನ್ನು ನಗರವನ್ನು ಅವಲಂಬಿಸುವಂತೆ ಮಾಡಿಬಿಡುತ್ತಾರೆ. ಕುಶಲಕರ್ಮಿ, ಗ್ರಾಹಕ ಹಾಗೂ ಜ್ಞಾನದ ನಡುವಿನ ಸಂಬಂಧ ಕಳಚಿಹೋಗುತ್ತದೆ. ಜ್ಞಾನ ಪ್ರತ್ಯೇಕವಾಗಿ ಬೆಳೆಯೋದಕ್ಕೆ ಪ್ರಾರಂಭವಾದೊಡನೆ ಅದು ಸೃಷ್ಟಿಸುವ ತಂತ್ರಜ್ಞಾನ ಮನುಷ್ಯನ ಕೆಲಸಕ್ಕೆ ನೆರವಾಗುವ ಬದಲು, ಮನುಷ್ಯನನ್ನು ರಿಪ್ಲೇಸ್ ಮಾಡೋಕೆ ಶುರು ಮಾಡುತ್ತದೆ. ಮನುಷ್ಯ ಮಾಡೋ ಕೆಲಸವನ್ನು ಯಂತ್ರದ ಹತ್ರ ಮಾಡಿಸೋಕೆ ಶುರು ಮಾಡಿಬಿಡುತ್ತೇವೆ. ಮನುಷ್ಯ ಕೆಲಸ ಕಳೆದುಕೊಳ್ಳುತ್ತಾನೆ. ನಿರುದ್ಯೋಗ ಸೃಷ್ಟಿಯಾಗುತ್ತದೆ. ಗಾಂಧಿಜಿಯವರಿಗೆ ಮತ್ತು ಕುಮಾರಪ್ಪನವರಿಗೆ ತಂತ್ರಜ್ಞಾನದಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ ಅನ್ನೋದು ೧೯೪೦ರಲ್ಲೇ ತುಂಬಾ ಸ್ಪಷ್ಟವಾಗಿ ಅರ್ಥ ಆಗಿತ್ತು.
ಪ್ರಭಾತ್ ಪಟ್ನಾಯಕ್ ಗುರುತಿಸುವಂತೆ ಗ್ರಾಮೀಣ ಆರ್ಥಿಕತೆಯ ವ್ಯವಸ್ಥೆಯಲ್ಲಿ ನಿರುದ್ಯೋಗ ಇನ್ನೂ ಒಂದು ಕಾರಣಕ್ಕೆ ಆಗಬಹುದು. ಒಂದು ಪುಟ್ಟ ಗ್ರಾಮೀಣ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಿ. ಅಲ್ಲಿ ರೈತರು, ಕುಶಲಕರ್ಮಿಗಳು, ಹೀಗೆ ಹಲವು ಸಣ್ಣ ಉದ್ದಿಮೆದಾರರು ಉತ್ಪಾದನೆಯಲ್ಲಿ ತೊಡಗಿರುತ್ತಾರೆ. ಅವರ ಒಟ್ಟಾರೆ ಉತ್ಪಾದನೆ ಸಮುದಾಯದ ಒಟ್ಟು ಉತ್ಪಾದನೆಯಾಗಿರುತ್ತದೆ. ತಮ್ಮ ದುಡಿಮೆಯಿಂದ ಬಂದದ್ದನ್ನು ಇನ್ನೊಬ್ಬರ ಉತ್ಪಾದನೆಯನ್ನು ಕೊಳ್ಳಲು ಬಳಸುತ್ತಾರೆ. ಆ ಸಮುದಾಯದಲ್ಲಿ ಉತ್ಪಾದನೆಯಾಗುವುದೆಲ್ಲಾ ಪರಸ್ಪರ ವಿನಿಮಯವಾಗುವುದರಿಂದ ನಿರುದ್ಯೋಗ ಅನ್ನುವುದು ಇರುವುದಿಲ್ಲ.
ಹೊರಗಡೆ ಉತ್ಪಾದನೆಯಾದ ಸರಕೊಂದು ಅಂತಹ ಆರ್ಥಿಕತೆಯನ್ನು ಪ್ರವೇಶಿಸಿತು ಅಂತ ಭಾವಿಸಿಕೊಳ್ಳಿ. ಅದನ್ನು ಈ ಸಮುದಾಯದ ಒಂದಿಷ್ಟು ಜನ ಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಿ. ಆಗ ಸಮುದಾಯದೊಳಗೆ ತಯಾರಾದ ಒಂದಿಷ್ಟು ವಸ್ತುಗಳು ಮಾರಾಟವಾಗದೆ ಉಳಿಯುತ್ತವೆ. ಅದನ್ನು ಉತ್ಪಾದಿಸುವ ಜನರಿಗೆ ಕೆಲಸವಿರುವುದಿಲ್ಲ. ಅವರಿಗೆ ತಮ್ಮ ಉತ್ಪನ್ನವನ್ನು ಬೇರೆಯವರೊಂದಿಗೆ ವಿನಿಮಯ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಆಗ ಅವರ ಉತ್ಪಾದನೆ ನಿಲ್ಲುತ್ತದೆ. ನಿರುದ್ಯೋಗ ಸೃಷ್ಟಿಯಾಗುತ್ತದೆ. ಗ್ರಾಮೀಣ ಆರ್ಥಿಕತೆಯ ನಿರಂತರತೆಗೆ, ಶಾಶ್ವತತೆಗೆ ಭಂಗ ಬರುತ್ತದೆ. ಹಾಗಾಗಿಯೇ ಗಾಂಧಿಯವರು ನೆರೆಯವನಿಗೆ ಹಸಿವಾಗುತ್ತದೆ ಅಂತಾದರೆ ನಾನು ಸ್ವಲ್ಪ ಒರಟಾದ ಸ್ಥಳೀಯವಾಗಿ ತಯಾರಾದ ಬಟ್ಟೆಯನ್ನೇ ಕೊಂಡುಕೊಳ್ಳುತ್ತೇನೆ ಅನ್ನುತ್ತಾರೆ.
ಅಮೇರಿಕೆಯ ಗೋಧಿಯನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ನೆರೆಯ ಗೋಧಿ ಮಾರಾಟಗಾರನನ್ನು ಉಪವಾಸ ಬೀಳುವಂತೆ ಮಾಡುತ್ತಿರುತ್ತೇವೆ. ಅದು ಪಾಪ. ಹಾಗೆಯೇ ನನ್ನ ಪಕ್ಕದವನು ನೇಯ್ದ ಬಟ್ಟೆಯನ್ನು ಬಿಟ್ಟು ವಿದೇಶದ ರೀಜೆಂಟ್ ರಸ್ತೆಯಲ್ಲಿ ತಯಾರಾದ ನವಿರಾದ ಬಟ್ಟೆಯನ್ನು ಕೊಳ್ಳುವುದು ಮಹಾ ಪಾಪ. ನಾನು ನನ್ನ ನೆರೆಯವನು ತಯಾರಿಸಿದ ಬಟ್ಟೆಯನ್ನೇ ಧರಿಸಬೇಕಿತ್ತು. ಅದರಿಂದ ಅವನ ಹೊಟ್ಟೆ ತುಂಬುತ್ತಿತ್ತು. ನನ್ನ ಪಾಪದ ಅರಿವು ಆದ ಮೇಲೆ ನಾನು ವಿದೇಶಿ ಬಟ್ಟೆಯನ್ನು ಸುಟ್ಟು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಮತ್ತು ಮುಂದೆ ನನ್ನ ನೆರೆಯವನು ತಯಾರಿಸಿದ ಖಾದಿಯಿಂದ ತೃಪ್ತನಾಗಬೇಕು.
ಗಾಂಧಿಯವರಿಗೆ ವಿದೇಶಿ ಸರಕಿನ ಬದಲು ಸ್ಥಳೀಯ ಉತ್ಪನ್ನವನ್ನು ಕೊಳ್ಳುವುದನ್ನು ನೆರೆಯವನಿಗೆ ಒಳ್ಳೆಯದನ್ನು ಬಯಸುವ ಒಂದು ನೈತಿಕ ಕ್ರಿಯೆಯಷ್ಟೇ ಆಗಿರಲಿಲ್ಲ. ಅವರಿಗೆ ಅದೊಂದು ಸಾಮುದಾಯಿಕ ಬದುಕನ್ನು ಪುನರಾರಂಭಿಸುವ ಪ್ರಕ್ರಿಯೆಯೂ ಆಗಿತ್ತು. ನಮ್ಮ ಮನಸ್ಸನ್ನು ಆಳವಾಗಿ ಆವರಿಸಿಕೊಂಡಿರುವ ವಸಾಹತೀಕರಣವನ್ನು ಮೀರಿಕೊಳ್ಳುವ ಕ್ರಮವೂ ಆಗಿತ್ತು. ಸ್ವದೇಶಿ ವಸ್ತುಗಳನ್ನು ಕೊಳ್ಳುವುದು ಕೇವಲ ಪರ್ಯಾಯ ಆರ್ಥಿಕ ಪ್ರಗತಿಯ ಕ್ರಮವಷ್ಟೇ ಅಲ್ಲ. ಅದು ಮನಸ್ಸನ್ನು ಆಕ್ರಮಿಸಿಕೊಂಡಿರುವ ವಸಾಹತೀಕರಣದ ಮನಸ್ಥಿತಿಯನ್ನು ತೆರವುಗೊಳಿಸುವ ಕ್ರಮವೂ ಹೌದು. ಸ್ಥಳೀಯ ಪದಾರ್ಥಗಳನ್ನು ಕೊಳ್ಳುವಾಗ ನೀವು ಕೇವಲ ಸರಕುಗಳನ್ನು ವಿನಿಮಯ ಮಾಡಿಕೊಳ್ಳುತ್ತಿಲ್ಲ. ಪ್ರೀತಿಯನ್ನೂ ವಿನಿಮಯ ಮಾಡಿಕೊಳ್ಳುತ್ತಾ ಇರುತ್ತೀರಿ. ಅಂತಹ ಅಂತಃಕರಣ ಗ್ರಾಮೀಣ ಸಮುದಾಯದ ಸೃಷ್ಟಿಗೆ ತುಂಬಾ ಅವಶ್ಯಕ.
ತಂತ್ರಜ್ಞಾನವನ್ನು ಕುರಿತಂತೆ ಚರ್ಚಿಸುತ್ತಾ ಅದು ತುಂಬಾ ಎಫಿಷಿಯೆಂಟ್ ಅನ್ನುವ ವಾದವನ್ನು ಅಲ್ಲಗೆಳೆಯುತ್ತಾರೆ. ಅದು ಅಗ್ಗ ಅಲ್ಲ. ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಉತ್ಪಾದನೆಗೆ ಬೇಕಾದ ಕಚ್ಚಾಮಾಲನ್ನು ಅಗ್ಗದ ದರದಲ್ಲಿ ಹಳ್ಳಿಗಳಿಂದ, ಬಡದೇಶಗಳಿಂದ ಬಲವಂತವಾಗಿ ತರಲಾಗುತ್ತದೆ. ಕಡಿಮೆ ಕೂಲಿ ಕೊಟ್ಟು ಕೆಲಸಗಾರರನ್ನು ದುಡಿಸಿಕೊಳ್ಳಲಾಗುತ್ತದೆ. ಹೈಟಿಯಂತಹ ದೇಶಗಳಿಂದ ಅಲ್ಲಿಯ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲಾಯಿತು. ಸ್ವಾತಂತ್ರ ಬಯಸಿದ ಗುಲಾಮರೇ ಗುಲಾಮರ ಒಡೆಯರಿಗೆ ಶತಮಾನಗಳ ಕಾಲ ನಷ್ಟ ತುಂಬಿಕೊಡಬೇಕಾಯಿತು. ಇಂದು ದೇಶಗಳು ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ. ಅದು ಪರಿಸರಕ್ಕೆ ಮಾಡುತ್ತಿರುವ ಹಾನಿಯನ್ನು, ಸೃಷ್ಟಿಸುತ್ತಿರುವ ಖಾಯಿಲೆಯನ್ನು, ಉಂಟುಮಾಡುತ್ತಿರುವ ಹಿಂಸೆಯನ್ನು ನೋಡಿ. ಈ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕಿದರೆ ಅದನ್ನು ಅಗ್ಗ ಅನ್ನುವುದು ಹೇಗೆ.
ನಾವು ಕೇವಲ ಕಾರ್ಖಾನೆಯ ಮಾಲಿಕ ಮಾಡುತ್ತಿರುವ ಖರ್ಚನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ. ಬೆಲೆ ಕಟ್ಟುವುದರಲ್ಲೇ ಸಮಸ್ಯೆಯಿದೆ. ಇಷ್ಟು ಸಾಲದು ಅಂತ ಇವಕ್ಕೆ ಬಂಡವಾಳ ಕ್ರೋಡೀಕರಿಸಲು ಜನರ ಮೇಲೆ ಪರೋಕ್ಷ ತೆರಿಗೆಯನ್ನು ಹಾಕಲಾಗುತ್ತದೆ. ಕುಮಾರಪ್ಪನವರು ರೈಲ್ವೆಗೆ ಸಂಬಂಧಿಸಿದ ತಮ್ಮ ವಿಶ್ಲೇಷಣೆಯಲ್ಲಿ ಇದನ್ನು ತುಂಬಾ ಸ್ಪಷ್ಟವಾಗಿ ಚರ್ಚಿಸಿದ್ದಾರೆ. ಭಾರತ ಅವಶ್ಯಕತೆಗಿಂತ ಅಥವಾ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರೈಲ್ವೆ ನಿರ್ಮಾಣದಲ್ಲಿ ತೊಡಗಿತ್ತು. ಅದರ ಹಿಂದೆ ಇದ್ದುದು ಲಾಭದ ಉದ್ದೇಶ. ಭಾರತ ಸರ್ಕಾರ ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ಭರವಸೆ ನೀಡಿದ್ದರಿಂದ ಹೂಡಿಕೆಗೆ ಜನ ನುಗ್ಗಿಬರುತ್ತಿದ್ದರು. ಹೂಡಿಕೆದಾರರಿಗೆ ಲಾಭ ಕೊಡುವುದಕ್ಕೆ ರೈತರಿಂದ ತೆರಿಗೆ ವಸೂಲು ಮಾಡಲಾಗುತ್ತಿತ್ತು. ಹಾಗಾಗಿ ಇದರ ಹಿಂದೆ ರಾಜಕೀಯ ಆಯಾಮವೂ ಇದೆ.
ದೊಡ್ಡ ಕೈಗಾರಿಕೆಗಳಿಗೆ ಸರ್ಕಾರದ ನೆರವು ಇಲ್ಲದೇ ಹೋದರೆ ಸಂಪನ್ಮೂಲವೂ, ಸಂಗ್ರಹವೂ ಸಾಧ್ಯವಿಲ್ಲ. ಉತ್ಪಾದಿಸಿದ್ದನ್ನು ಮಾರುವುದಕ್ಕೂ ಸಾಧ್ಯವಿಲ್ಲ. ಉದಾಹರಣೆಗೆ ಮಧುರೆಯ ಸಕ್ಕರೆ ಕಾರ್ಖಾನೆಯ ಪ್ರಕರಣವನ್ನು ಗಮನಿಸೋಣ. ಕಾರ್ಖಾನೆಗೆ ಕಬ್ಬು ಅಗ್ಗದ ದರದಲ್ಲಿ ಬೇಕಿತ್ತು. ಆದರೆ ರೈತರು ತಾವೇ ಬೆಲ್ಲ ತಯಾರಿಸಿಕೊಳ್ಳುತ್ತಿದ್ದರು. ಹಾಗಾಗಿ ಈ ಕಾರ್ಖಾನೆಗೆ ಅಗ್ಗದ ದರದಲ್ಲಿ, ಬೇಕಾದಷ್ಟು ಪ್ರಮಾಣದಲ್ಲಿ ಕಬ್ಬು ಸಿಗುತ್ತಿರಲಿಲ್ಲ. ದೆಹಲಿಯ ಸರ್ಕಾರ ಮದರಾಸು ಸರ್ಕಾರಕ್ಕೆ ತಾಕೀತು ಮಾಡಿತು. ಸಕ್ಕರೆ ಮಿಲ್ ಇರುವ ೨೦ ಮೈಲಿ ಫಾಸಲೆಯಲ್ಲಿ ಬೆಲ್ಲ ತಯಾರಿಸುವುದಕ್ಕೆ ಲೈಸೆನ್ಸ್ ಪಡೆಯಬೇಕೆಂಬ ಸುತ್ತೋಲೆ ಹೊರಡಿಸುವಂತೆ ತಿಳಿಸಿತು. ಲೈಸೆನ್ಸ್ ಪಡೆಯುವುದು ಸುಲಭವಾಗಿರಲಿಲ್ಲ. ಲೈಸೆನ್ಸ್ ಪಡೆಯದೆ ತಯಾರಿಸಿದ ಬೆಲ್ಲವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಕೊನೆಗೆ ಅಗ್ಗದ ಬೆಲೆಗೆ ಕಬ್ಬನ್ನು ರೈತರು ಮಿಲ್ಲಿಗೆ ಮಾರಬೇಕಾಯಿತು. ಕುಮಾರಪ್ಪ ಈ ಕಾನೂನಿನ ವಿರುದ್ದ ಹೋರಾಟ ಆರಂಭಿಸಿದ್ದರು. ಬೆಲ್ಲವನ್ನು ವಶಪಡಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಹಾಕಿ ಪ್ರತಿಭಟಿಸಲಾಯಿತು.
ಗ್ರಾಮೀಣ ಆರ್ಥಿಕತೆಯ ಮತ್ತೊಂದು ಬಹುಮುಖ್ಯ ಲಕ್ಷಣ ಅಂದರೆ ಉತ್ಪಾದನೆ ಮತ್ತು ಬಳಕೆಯ ಸಾಮೀಪ್ಯ. ಅವೆರಡೂ ಒಂದೇ ಕಡೆ ಆಗುತ್ತಿತ್ತು. ಒಮ್ಮೆ ಉತ್ಪಾದನೆಯ ಉದ್ದೇಶ ಲಾಭ ಎಂದಾಕ್ಷಣ, ಬೆಲೆ ಹೆಚ್ಚು ಸಿಗುವ ಕಡೆ ಪದಾರ್ಥಗಳನ್ನು ಸಾಗಿಸಲಾಗುತ್ತದೆ. ಕುಮಾರಪ್ಪನವರು ಜೇನು ಸಹಕಾರ ಸಂಘವೊಂದರಲ್ಲಿ ಆದ ಅನುಭವವನ್ನು ಉಲ್ಲೇಖಿಸುತ್ತಾರೆ. ಅದು ತುಂಬಾ ಯಶಸ್ವಿಯಾಗಿ ನಡೆಯುತ್ತಿರುವ ಸಂಘ ಅಂತ ಹೇಳಲಾಗಿತ್ತು. ಅಲ್ಲಿ ಜೇನು ಬೆಳೆಯುವ ರೈತರ ಮನೆಯಲ್ಲಿದ್ದ ಮಗುವನ್ನು ಮಾತನಾಡಿಸುತ್ತಾ ಜೇನು ಹೇಗಿದೆ ಮಗು? ಎಂದು ಕೇಳುತ್ತಾರೆ. ನಾನು ರುಚೀನೆ ನೋಡಿಲ್ಲ ಅನ್ನುತ್ತೆ ಮಗು. ರೈತನಿಗೆ ಹೆಚ್ಚಿನ ಬೆಲೆ ಕೊಟ್ಟು ಅವರನ್ನು ಮರುಳು ಮಾಡಿ ಮಗುವಿನ ಬಾಯಿಯಿಂದ ಜೇನುತುಪ್ಪವನ್ನು ಕಸಿದು ಈಗಾಗಲೇ ತುಂಬಿ ತುಳುಕುತ್ತಿರುವ ಶ್ರೀಮಂತರ ಊಟದ ಮೇಜುಗಳಿಗೆ ರವಾನಿಸಲಾಗುತ್ತಿದೆ ಎನ್ನುತ್ತಾರೆ ಕುಮಾರಪ್ಪನವರು. ಇದೇ ಕತೆ ಮೊಟ್ಟೆ, ಹಾಲು ಮತ್ತು ಇತರ ಹೆಚ್ಚಿನ ಪೋಶಕಾಂಶ ಹೊಂದಿರುವ ವಸ್ತುಗಳದ್ದೂ ಆಗಿದೆ. ವಾಯವ್ಯ ಪ್ರಾಂತ್ಯಗಳಲ್ಲಿ ಮೊಟ್ಟೆಗಳನ್ನು ಯಥೇಚ್ಛವಾಗಿ ಉತ್ಪಾದಿಸಿ ಸ್ಥಳೀಯವಾಗಿಯೇ ಬಳಸಲಾಗುತ್ತಿತ್ತು. ಸೈನ್ಯ ಪಡೆಗಳಿಗಾಗಿ ಮೊಟ್ಟೆಗಳ ಬೇಡಿಕೆ ಹೆಚ್ಚಿದ್ದರಿಂದ ರಾವಲ್ಪಿಂಡಿಯಿಂದ ಅಂಬಾಲಾವರಗೆ ಸ್ಥಳೀಯರು ಬಳಸುತ್ತಿದ್ದ ಮೊಟ್ಟೆಯ ಪ್ರಮಾಣ ಕಡಿಮೆಯಾಗಿರುವುದನ್ನು ಗುರುತಿಸಬಹುದು. ಅಲ್ಲಿಗೇ ನಿಲ್ಲೋದಿಲ್ಲ. ನಾವು ಬಳಸುವ ಅಕ್ಕಿ ಎತನೋಲ್ ಆಗಿ ಪೆಟ್ರೋಲಿಗೆ ಬೆರಕೆಯಾಗುತ್ತದೆ. ಅಕ್ಕಿಯನ್ನು ಅಡುಗೆಗೆ ಬಳಸುವುದು ಅಪರಾಧ ಅನಿಸಿಕೊಳ್ಳುತ್ತದೆ. ಅಂದರೆ ಅಕ್ಕಿ ಬೆಳೆಯುವ ಭೂಮಿಯಲ್ಲಿ ಎಥನಾಲ್ ಬೆಳೆಯಲು ಪ್ರಾರಂಭಿಸಿದ್ದೇವೆ. ಇಂತಹದೇ ಪರಿಸ್ಥಿತಿಯಿಂದಾಗಿಯೇ ೧೯೪೩ರಲ್ಲಿ ಕ್ಷಾಮ ಉಂಟಾಗಿದ್ದು ಅನ್ನುತ್ತಾರೆ ಕುಮಾರಪ್ಪನವರು.
ಅವಶ್ಯಕತೆಯನ್ನು ಆಧರಿಸಿ ಉತ್ಪಾದನೆ ನಡೆಯೊಲ್ಲ. ಈಗ ಅದು ಅವಶ್ಯಕತೆ ಅನಿಸಿಕೊಳ್ಳೊಲ್ಲ. ಬೇಡಿಕೆಯ ಭಾಷೆಯಲ್ಲಿ ಆರ್ಥಿಕ ತಜ್ಞರು ಮಾತನಾಡುತ್ತಾರೆ. ಅದು ತಂತ್ರಜ್ಞಾನದ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ತಯಾರಾಗುತ್ತದೆ. ೫೦೦ ಶೂಗಳನ್ನು ತಯಾರಿಸುವುದು ಎಫಿಷಿಯೆನ್ಸಿ ಅಂತಾದರೆ, ನಮಗೆ ೩೦೦ ಶೂಗಳು ಸಾಕಿದ್ದರೂ ೫೦೦ ಶೂಗಳನ್ನು ತಯಾರಿಸಲಾಗುತ್ತದೆ. ಹೆಚ್ಚಾದ ೨೦೦ ಶೂಗಳಿಗೆ ಬೇಡಿಕೆ ಸೃಷ್ಟಿಸುವ ಕೆಲಸ ನಡೆಯುತ್ತದೆ. ಜಾಹಿರಾತೋ, ಬಲವಂತವೋ ಏನೋ ಮಾಡಿ ಅದನ್ನು ಮಾರಾಟ ಮಾಡಲಾಗುತ್ತದೆ. ಕುಮಾರಪ್ಪನವರು ಹೇಳುವಂತೆ ಯುದ್ಧಗಳು ಆರಂಭವಾದದ್ದೇ ಹೀಗೆ ಉಳಿದು ಹೋದ ಸರಕುಗಳನ್ನು ಮಾರುವುದಕ್ಕೆ. ತಮ್ಮ ಉತ್ಪನ್ನಗಳಿಗೆ ಗ್ರಾಹಕರನ್ನು ಸೃಷ್ಟಿಸುವುದಕ್ಕೆ. ಮೊದಲು ಉತ್ಪಾದನೆ ಹೆಚ್ಚಾಗುತ್ತದೆ. ನಂತರ ಬೇಡಿಕೆಯನ್ನು ಬಂದೂಕಿನ ತುದಿಯಿಂದ ಸೃಷ್ಟಿಸಲಾಗುತ್ತದೆ. ಅಂದರೆ ಕೇಂದ್ರೀಕೃತ ಬೃಹತ್ ಉದ್ಯಮಗಳು ಯುದ್ಧಗಳಿಗೆ ಮೂಲ. ಲಾಭವೇ ಉದ್ದೇಶವಾದ್ದರಿಂದ ಜನರ ಅವಶ್ಯಕತೆ, ಒಳಿತು, ನೈತಿಕತೆ ಇವೆಲ್ಲಾ ಮುಖ್ಯವಾಗುವುದಿಲ್ಲ.
ಮೊದಲ ವಾಣಿಜ್ಯ ಕಂಪೆನಿಗಳಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಅಥವಾ ಡಚ್ ಈಸ್ಟ್ ಇಂಡೀಸ್ ಕಂಪೆನಿಗಳು ಭಾರತದಲ್ಲಿ ಅಫೀಮು ಬೆಳೆದು ಚೀನಾಕ್ಕೆ ಮಾರಿ ದುಡ್ಡು ಮಾಡುತ್ತಿದ್ದರು. ಅಫೀಮು ಬಳಸಿ ಜನ ಹಾಳಾಗುತ್ತಿದ್ದಾರೆ ಎಂದು ಚೀನಾದ ದೊರೆ ಕ್ವಿಂಗ್‌ಗೆ ಅನ್ನಿಸಿ ಅದರ ವ್ಯಾಪಾರವನ್ನು ನಿಲ್ಲಿಸಿದ. ಆದರೆ ಯುರೋಪ್ ಅವನ ಮೇಲೆ ಯುದ್ಧ ಮಾಡಿ, ಅವನಿಂದ ಯುದ್ಧದ ಖರ್ಚು, ವ್ಯಾಪಾರದಲ್ಲಿ ಆದ ನಷ್ಟ ಇತ್ಯಾದಿ ವಸೂಲಿ ಮಾಡಿಬಿಟ್ಟರು. ಜೊತೆಗೆ ಹಾಂಕಾಂಗ್ ಅನ್ನು ಕಿತ್ತುಕೊಂಡರು. ಈ ಹಣವನ್ನು ಕಟ್ಟಿಕೊಡಲು ಚೀನಾದ ರಾಜನಿಗೆ ತನ್ನ ಜನರ ಮೇಲೆ ವಿಪರೀತ ತೆರಿಗೆಯನ್ನು ವಿಧಿಸುವುದು ಅನಿವಾರ್ಯವಾಯಿತು. ಈ ಹಣವನ್ನು ಯುರೋಪ್ ಆಂತರಿಕ ಯುದ್ದಕ್ಕೆ ಬಳಸಿಕೊಳ್ಳುತ್ತಿತ್ತು. ಹೀಗೆ ಪಾಶ್ಚಾತ್ಯ ದೇಶಗಳು ವಸಾಹತುಶಾಹಿ ಹಾಗೂ ಮಿಲಿಟರಿ ಪ್ರಾಬಲ್ಯದ ಮೂಲಕ ಜಾಗತಿಕ ಆರ್ಥಿಕತೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಘಟಿಸಿಕೊಂಡವು. ಹಾಗೂ ಜಗತ್ತಿನ ಉಳಿದ ದೇಶಗಳನ್ನು ತಮ್ಮ ಅಧೀನ ದೇಶಗಳಾಗಿ ಮಾಡಿಕೊಂಡವು.
ಇಂದು ಸರ್ಕಾರಗಳು ಬಹುತೇಕ ಕಾರ್ಪೋರೇಟ್ ಮಂದಿಯ ಬೆಂಬಲಕ್ಕೆ ನಿಂತಿರುವುದನ್ನು ನೋಡುತ್ತಿದ್ದೇವೆ. ಬಿಲಿಯನೇರುಗಳು ಹೆಚ್ಚುವುದು ಹಾಗೂ ಬಡತನದ ಸೂಚಿಯಲ್ಲಿ ನಮ್ಮ ಸ್ಥಾನ ಕುಸಿಯುತ್ತಿರುವುದರ ನಡುವಿನ ನಂಟು ನಮಗೆ ತಿಳಿಯುತ್ತಿಲ್ಲ. ಆರ್ಥಿಕ ಕ್ಷೇತ್ರಗಳಲ್ಲಿ ಸರ್ವಾಧಿಕಾರದ ಪ್ರವೃತ್ತಿ ಢಾಳಾಗಿ ಕಾಣುತ್ತಿದೆ. ಇಲ್ಲೊಂದು ಬಹುಮುಖ್ಯ ಅಂಶವನ್ನು ಕುಮಾರಪ್ಪನವರು ಗುರುತಿಸುತ್ತಾರೆ. ಆರ್ಥಿಕ ಕ್ಷೇತ್ರದಲ್ಲಿ ಸರ್ವಾಧಿಕಾರ ಇಟ್ಟುಕೊಂಡು ರಾಜಕೀಯವಾಗಿ ಪ್ರಜಾಸತ್ತೆ ಸಾಧ್ಯವಿಲ್ಲ ಅನ್ನುತ್ತಾರೆ. ಬಹುಶಃ ಬೆಳವಣಿಗೆಗೂ ಪ್ರಜಾಸತ್ತೆಗೂ ಇರುವ ಸಂಬಂಧವನ್ನು ಗುರುತಿಸಿರುವ ಮೊದಲಿಗರಲ್ಲಿ ಇವರೂ ಒಬ್ಬರೂ ಅನಿಸುತ್ತದೆ. ಇಂದು ಹಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ.
ಹೀಗೆ ಹಲವು ಕಾರಣಕ್ಕೆ ಗಾಂಧಿ ಮತ್ತು ಕುಮಾರಪ್ಪ ಮುಖ್ಯವಾಗುತ್ತಾರೆ. ಇಂದು ಈ ವಿಷಯಗಳ ಬಗ್ಗೆ ಹಲವರು ಯೋಚಿಸಿದ್ದಾರೆ. ಸಮಾನತೆ, ನೈತಿಕತೆ ಹಾಗೂ ಅರ್ಥಶಾಸ್ತ್ರ ಇವುಗಳ ಬಗ್ಗೆ ಅಮರ್ತ್ಯ ಸೇನ್ ಅವರ ಚಿಂತನೆಗಳು ನಮ್ಮ ಮುಂದಿವೆ. ಡೆರೆನ್ ಅಸಿಮೊಗ್ಲು ತಂತ್ರಜ್ಞಾನದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಪಿಕೆಟ್ಟಿಯಂತಹವರು ಅಸಮಾನತೆಯ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಪರಿಸರ, ಮಹಿಳೆ ಇತ್ಯಾದಿ ಹಲವು ಕ್ಷೇತ್ರಗಳ ಬಗ್ಗೆಯೂ ಇಂತಹ ಹಲವು ಮನಸ್ಸುಗಳು ಕೆಲಸ ಮಾಡಿವೆ, ಮಾಡುತ್ತಿವೆ. ಹಲವು ಚಳುವಳಿಗಳು ನಮ್ಮನ್ನು ಕಾಡುತ್ತಿರುವ ಹಲವು ಬಹುಮುಖ್ಯ ವಿಷಯಗಳನ್ನು ಮುನ್ನೆಲೆಗೆ ತಂದಿವೆ. ಇವಕ್ಕೆ ತೆರೆದುಕೊಳ್ಳುವುದರ ಮೂಲಕ ಗಾಂಧಿ ಚಿಂತನೆಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಹುದು ಅನಿಸುತ್ತದೆ. ಆ ಮೂಲಕ ನಾವು ಬಯಸುವ ಪರ್ಯಾಯ ಆರ್ಥಿಕ ವ್ಯವಸ್ಥೆಯ ಸ್ವರೂಪ ಇನ್ನೂ ಹೆಚ್ಚು ಸ್ಪಷ್ಟವಾಗಬಹುದು.