ಈ ಬಾರಿಯ ಅರ್ಥಶಾಸ್ತ್ರದ ನೋಬೆಲ್ ಬಹುಮಾನ ಬ್ಯಾಂಕ್ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಾಷಿಂಗ್‌ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕಿ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಸೆಂಟ್ ಲೂಯಿಸ್‌ನ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಫಿಲಿಪ್ ಎಚ್ ಡಿವಿಗ್ ಇವರಿಗೆ ಲಭಿಸಿದೆ.
ಇಂದು ನಮ್ಮನ್ನು ಕಾಡುತ್ತಿರುವ ಹಣಕಾಸು ಬಿಕ್ಕಟ್ಟು ಇದಕ್ಕೆ ಪ್ರೇರಣೆಯಾಗಿರಬಹುದು. ಬಹುಮಾನ ಪಡೆದವರಲ್ಲಿ ಬೆನ್ ಬರ್ನಾಂಕಿಯವರ ಸಂಶೋಧನೆ ೧೯೩೦ರ ಮಹಾನ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ಅದು ಮಹಾನ್ ಆರ್ಥಿಕ ಬಿಕ್ಕಟ್ಟನ್ನು ಬ್ಯಾಂಕಿಂಗ್ ಬಿಕ್ಕಟ್ಟಿನ ಮೂಲಕ ಆರ್ಥಮಾಡಿಕೊಳ್ಳಲು ನೆರವಾಗುತ್ತದೆ. ಬರ್ನಾಂಕಿ ಆಗಿನ ಬ್ಯಾಂಕುಗಳ ವೈಫಲ್ಯವನ್ನು ಪರಿಶೀಲಿಸುತ್ತಾ ೧೯೩೦ರ ಬಿಕ್ಕಟ್ಟಿಗೆ ಬ್ಯಾಂಕುಗಳ ವೈಫಲ್ಯವೇ ಮುಖ್ಯ ಕಾರಣ ಎನ್ನುತ್ತಾರೆ. ಅವರ ಸಂಶೋಧನೆ ಪ್ರಕಟವಾಗುವವರೆಗೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬ್ಯಾಂಕಿನ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಬರ್ನಾಂಕಿಯವರ ಅಧ್ಯಯನ ಬ್ಯಾಂಕ್ ಬಿಕ್ಕಟ್ಟೇ ಆರ್ಥಿಕ ಕುಸಿತಕ್ಕೆ ಕಾರಣ ಎಂದು ಪುರಾವೆಗಳ ಸಹಿತ ತೋರಿಸಿದರು. ಆಗ ಅದು ಹೊಸದು. ಆ ಭೀಕರ ಬಿಕ್ಕಟ್ಟಿನಲ್ಲಿ ಬ್ಯಾಂಕಿನ ಪಾತ್ರ ಅಷ್ಟು ಮುಖ್ಯವಾಗಿತ್ತು ಎಂದು ಜನ ಅರ್ಥಮಾಡಿಕೊಂಡಿರಲಿಲ್ಲ.
೧೯೨೯ರಲ್ಲಿ ಒಂದು ಸಾಧಾರಣ ಆರ್ಥಿಕ ಹಿಂಜರಿತವಾಗಿ ಪ್ರಾರಂಭವಾದದ್ದು ೧೯೩೦ರಲ್ಲಿ ಒಂದು ದೊಡ್ಡ ಬಿಕ್ಕಟ್ಟಾಗಿ ರೂಪ ಪಡೆಯಿತು. ಆಗ ಬ್ಯಾಂಕುಗಳಿಗೆ ಜನರ ಉಳಿತಾಯವನ್ನು ಉತ್ಪಾದನಾ ಹೂಡಿಕೆಯಾಗಿ ಪರಿವರ್ತಿಸುವುದಕ್ಕೆ ಸಾಧ್ಯವಾಗಲಿಲ್ಲ. ಉದ್ದಿಮೆದಾರರಿಗೆ ಹೂಡುವುದಕ್ಕೆ ಹಣ ಇರಲಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡ ಜನ ಹಣ ಹಿಂತೆಗೆದುಕೊಳ್ಳಲು ಬ್ಯಾಂಕುಗಳಿಗೆ ಮುಗಿಬಿದ್ದರು. ಬ್ಯಾಂಕುಗಳು ಇಕ್ಕಟ್ಟಿಗೆ ಸಿಲುಕಿದವು. ಸಾಲ ಕೊಡಲು ಹಿಂದೇಟು ಹಾಕಿದವು. ಎಷ್ಟೋ ಬ್ಯಾಂಕುಗಳು ದಿವಾಳಿಯಾದವು. ಜಗತ್ತು ಕಂಡರಿಯದಿದ್ದ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಯಿತು. ಬ್ಯಾಂಕಿಂಗ್ ವ್ಯವಸ್ಥೆಯ ಬಿಕ್ಕಟ್ಟಿನ ಪರಿಣಾಮ ಭೀಕರವಾಗಿರುತ್ತದೆ. ಅಷ್ಟೇ ಅಲ್ಲ ದೀರ್ಘಕಾಲೀನವೂ ಆಗಿರುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರ ಇರಬೇಕು.
ಬರ್ನಾಂಕಿಗೆ ಈ ಅರಿವು ಮುಂದೆ ನೆರವಿಗೆ ಬಂತು. ೨೦೦೮-೨೦೦೯ರಲ್ಲಿ ಅಮೇರಿಕೆಯ ಫೆಡರಲ್ ಬ್ಯಾಂಕಿನ ಮುಖ್ಯಸ್ಥನಾಗಿದ್ದಾಗ ಅವರಿಗೆ ತಮ್ಮ ಸಂಶೋಧನೆಯನ್ನು ನೀತಿಯಾಗಿ ರೂಪಿಸುವುದಕ್ಕೆ ಸಾಧ್ಯವಾಯಿತು. ಹಾಗೆಯೇ ೨೦೨೦ರ ಕೋವಿಡ್ ಪಿಡುಗಿನ ಸಂದರ್ಭದಲ್ಲೂ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ತಪ್ಪಿಸುವಲ್ಲಿ ಅವರ ಸಂಶೋಧನೆ ನೆರವಾಯಿತು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಅವರ ಸಂಶೋಧನೆಗೆ ಈ ಬಾರಿಯ ನೋಬೆಲ್ ಬಹುಮಾನ ಲಭಿಸಿದೆ.
ಬ್ಯಾಂಕಿನೊಂದಿಗೆ ನಾವೆಲ್ಲಾ ಒಂದಲ್ಲ ಒಂದು ರೀತಿ ಸಂಬಂಧ ಇಟ್ಟುಕೊಂಡಿದ್ದೇವೆ. ನಮ್ಮ ಹಣವನ್ನು ಬ್ಯಾಂಕಿನಲ್ಲಿ ಇಡುತ್ತೇವೆ. ಬೇಕಾದಾಗ ಅದನ್ನು ಹಿಂತೆಗೆದುಕೊಳ್ಳುತ್ತಿರುತ್ತೇವೆ. ಕೆಲವೊಮ್ಮೆ ಮನೆಯನ್ನೋ, ಇನ್ನೇನನ್ನೋ ಕೊಳ್ಳುವುದಕ್ಕೂ ದೊಡ್ಡ ಪ್ರಮಾಣದ ಸಾಲ ಬೇಕಾಗುತ್ತದೆ. ಹಾಗೆಯೇ ಉದ್ದಿಮೆಗಳಿಗು ಕೂಡ ಹೂಡಿಕೆಗೆ ಹಣ ಬೇಕಾಗುತ್ತದೆ. ಇವನ್ನೆಲ್ಲಾ ಬ್ಯಾಂಕಿನ ಮೂಲಕ ಮಾಡುತ್ತೇವೆ. ಕಾರ್ಡುಗಳನ್ನೋ ಅಥವಾ ಇನ್ಯಾವುದೋ ಮಾಧ್ಯಮದ ಮೂಲಕ ಹಣ ಪಾವತಿ ಮಾಡುತ್ತಿರುತ್ತೇವೆ. ಎಲ್ಲಾ ಸರಿಯಾಗಿ ನಡೆದರೆ ಒಳ್ಳೆಯದು. ಎಲ್ಲಾದಾರೂ ಎಡವಟ್ಟಾದರೆ ಅದೂ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸಮಸ್ಯೆಗೆ ಸಿಕ್ಕಿಬಿದ್ದರೆ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿಯಬಹುದು. ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಬಹುದು. ಇದನ್ನು ೧೯೩೦ರ ಬಿಕ್ಕಟ್ಟಿನ ಅಧ್ಯಯನದ ಮೂಲಕ ಬರ್ನಾಂಕಿ ತೋರಿಸಿದ್ದಾರೆ. ಇತಿಹಾಸದಲ್ಲಿ ಇವನ್ನೆಲ್ಲಾ ನೋಡಿದ್ದೇವೆ.
ಹಾಗಾದರೆ ಬ್ಯಾಂಕುಗಳು ಏಕೆ ಬೇಕು? ಡೈಮಂಡ್ ಹಾಗೂ ಡಿವಿಗ್ ಅವರು ಸರಳ ಮಾಡೆಲ್ ಮೂಲಕ ಬ್ಯಾಂಕಿನ ಪ್ರಾಮುಖ್ಯತೆ ಹಾಗು ಅವುಗಳ ಆಂತರಿಕ ಸಮಸ್ಯೆಗಳನ್ನು, ಅದಕ್ಕೆ ಪರಿಹಾರವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರು ಬ್ಯಾಂಕ್ ಹಾಗೂ ಅಂತಹ ಸಂಸ್ಥೆಗಳು ಹೇಗೆ ಠೇವಣಿಯಂತಹ ಅಲ್ಪಕಾಲೀನ ಸ್ವತ್ತುಗಳನ್ನು ಸಾಲಗಳಂತಹ ಧೀರ್ಘಕಾಲಿನ ಸ್ವತ್ತುಗಳನ್ನಾಗಿ ಪರಿವರ್ತಿಸುತ್ತವೆ ಎಂಬುದನ್ನು ತೋರಿಸಿದ್ದಾರೆ. ಹೀಗೆ ಅಲ್ಪಕಾಲೀನ ಠೇವಣಿಗಳನ್ನು ದೀರ್ಘಕಾಲೀನ ಸಾಲಗಳನ್ನಾಗಿ ಪರಿವರ್ತಿಸುವುದನ್ನು ಮೆಚುರಿಟಿ ಪರಿವರ್ತನೆ ಅಂತ ಕರೆಯುತ್ತಾರೆ. ಇದು ತುಂಬಾ ಮುಖ್ಯ.
ಬ್ಯಾಂಕ್ ಇಲ್ಲದೇ ಹೋದರೆ ಆರ್ಥಿಕತೆ ನಡೆಯುವುದಿಲ್ಲ. ಅವು ಸಂಕಷ್ಟದಲ್ಲಿದ್ದಾಗಲೂ ಆರ್ಥಿಕತೆ ನಡೆಯುವುದಿಲ್ಲ. ಉದಾಹರಣೆಗೆ ಬ್ಯಾಂಕಿನಲ್ಲಿ ಸಮಸ್ಯೆಯಿದೆ ಅಂತ ಸುಧ್ದಿ ಹರಡಿದರೆ, ಜನ ತಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಬ್ಯಾಂಕಿಗೆ ನುಗ್ಗುತ್ತಾರೆ. ಇದೇ ೧೯೩೦ರಲ್ಲಿ ಮುಖ್ಯ ಸಮಸ್ಯೆಯಾಗಿದ್ದು. ಇದಕ್ಕೆ ಪರಿಹಾರ ಏನು? ಡೈಮಂಡ್ ಹಾಗೂ ಡಿವಿಗ್ ಅವರು ಠೇವಣಿ ವಿಮೆಯನ್ನು ಒಂದು ಪರಿಹಾರವಾಗಿ ಸೂಚಿಸಿದರು. ಅಂದರೆ ಸರ್ಕಾರ ಎಲ್ಲಾ ಠೇವಣಿಗೂ ವಿಮೆಯನ್ನು ಘೋಷಿಸಿದರೆ, ಅಂದರೆ ಜನರ ಠೇವಣಿಗೆ ಗ್ಯಾರಂಟಿ ನೀಡಿದರೆ ಜನ ಬ್ಯಾಂಕಿಗೆ ನುಗ್ಗುವ ಅವಶ್ಯಕತೆ ಬರುವುದಿಲ್ಲ. ಬಿಕ್ಕಟ್ಟೂ ತಪ್ಪುತ್ತದೆ. ಹೀಗೆ ಸಂಕಷ್ಟದ ಸಮಯದಲ್ಲಿ ಏನು ಮಾಡಬೇಕು ಅನ್ನುವುದನ್ನು ಸೂಚಿಸುವ ಪ್ರಯತ್ನ ಇವರ ಅಧ್ಯಯನದಲ್ಲಿ ನಡೆದಿದೆ. ಅವರ ಒಳನೋಟ ಆಧುನಿಕ ಬ್ಯಾಂಕ್ ನೀತಿಗಳ ಬುನಾದಿಯಾಗಿದೆ. ಒಂದು ಸ್ಥಿರವಾದ ಹಣಕಾಸು ವ್ಯವಸ್ಥೆಯನ್ನಾಗಿ ರೂಪಿಸುವಲ್ಲಿ ನೆರವಾಗಿದೆ.
ಡೈಮಂಡ್ ಹಾಗೂ ಡಿವಿಗ್ ಅವರ ಸೈದ್ದಾಂತಿಕ ಒಳನೋಟ, ಹಾಗೂ ವಾಸ್ತವದಲ್ಲಿ ಏನಾಗಿತ್ತು ಅನ್ನುವ ಬರ್ನಾಂಕಿಯವರ ಅಧ್ಯಯನದಿಂದ ಬ್ಯಾಂಕು, ಬ್ಯಾಂಕಿನ ನಿಯಮಗಳು, ಬ್ಯಾಂಕಿನ ಹಾಗೂ ಹಣಕಾಸಿನ ಬಿಕ್ಕಟ್ಟನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಕುರಿತಂತೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ. ಆದರೆ ಸಮಸ್ಯೆ ಅಂದರೆ ಬ್ಯಾಂಕಿಂಗ್ ವ್ಯವಸ್ಥೆಯೂ ವಿಕಾಸಗೊಳ್ಳುತ್ತಾ ಸಾಗಿದೆ. ೨೦೦೮ರಲ್ಲಿ ಬ್ಯಾಂಕುಗಳು ತಮ್ಮ ಮೂಲ ಉದ್ದೇಶಕ್ಕಿಂತ ಭಿನ್ನವಾದ ಕೆಲಸಗಳಲ್ಲಿ ತೊಡಗಿಕೊಂಡವು. ಭಾರತದಲ್ಲಿ ಈಗ ಬ್ಯಾಂಕುಗಳು ಮೂಲಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಖಾಸಗಿ ಕಾರ್ಪೋರೇಟುಗಳಿಗೆ ದೊಡ್ಡ ಪ್ರಮಾಣದ ಧೀರ್ಘಕಾಲಿನ ಸಾಲಗಳನ್ನು ನೀಡುತ್ತಿವೆ. ಅವು ಬಹುಪಾಲು ಅನುತ್ಪಾದಕ ಸಾಲಗಳಾಗಿರುವುದನ್ನು ಈ ಸಂದರ್ಭದಲ್ಲಿ ನೋಡಬಹುದು. ಇವನ್ನು ಅಪಾಯಕಾರಿ ಬೆಳವಣಿಗೆ ಎಂದು ಹಲವರು ಹೇಳಿದ್ದಾರೆ. ಇದು ಬ್ಯಾಂಕಿನ ವ್ಯವಸ್ಥೆಯಲ್ಲಿನ ಬಿಕ್ಕಟ್ಟಿಗೆ ಕಾರಣವಾಗಬಹುದು. ೨೦೦೮-೨೦೦೯ರಲ್ಲಿ ಬರ್ನಾಂಕೆ ಇದನ್ನು ಗಮನಿಸಿದರು. ಸಕಾಲದಲ್ಲಿ ಬ್ಯಾಂಕುಗಳಿಗೆ ನೆರವಾಗುವ ಮೂಲಕ ಬಿಕ್ಕಟ್ಟು ತಲೆದೋರುವುದನ್ನು ತಪ್ಪಿಸಿದರು ಎನ್ನಲಾಗಿದೆ.
ಹಣಕಾಸು ಮಾರುಕಟ್ಟೆಗಳು ಜನರ ಉಳಿತಾಯವನ್ನು ಉತ್ಪಾದಕ ಹೂಡಿಕೆಯಾಗಿ ಪರಿವರ್ತಿಸಬೇಕು. ಆದರೆ ಬಿಕ್ಕಟ್ಟಿಗೆ ಸಿಲುಕದಂತೆ ಎಚ್ಚರಿಕೆಯಿಂದ ಇದನ್ನು ನಿಭಾಯಿಸಬೇಕು. ಬ್ಯಾಂಕುಗಳು ಕುಸಿಯದಂತೆ ನೋಡಿಕೊಳ್ಳಬೇಕು. ಅದು ತುಂಬಾ ಮುಖ್ಯ. ಇಲ್ಲದೇ ಹೋದರೆ ಅದು ಹಣಕಾಸು ಬಿಕ್ಕಟ್ಟನ್ನು ಸೃಷ್ಟಿಯಾಗಬಹುದು. ಈ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಹಣಕಾಸು ಬಿಕ್ಕಟ್ಟು ಹಾಗೂ ಆರ್ಥಿಕ ಮುಗ್ಗಟ್ಟು ಯಾವುದೇ ಆರ್ಥಿಕತೆಯಲ್ಲಿ ಆಗಬಹುದಾದ ಅತಿದೊಡ್ಡ ದುರಂತ. ೧೯೩೦ರ ಬಿಕ್ಕಟ್ಟಿನಲ್ಲಿ ಶ್ರೀಮಂತ ರಾಷ್ಟ್ರಗಳಲ್ಲೂ ಜನ ಹಸಿವಿನಿಂದ ಸತ್ತರು. ಅಂತಹ ಅಪಾಯ ಈಗಲೂ ಇದೆ. ಬಿಕ್ಕಟ್ಟುಗಳು ಯಾಕೆ ಆಗುತ್ತವೆ ಹಾಗೂ ಆದಾಗ ಅಥವಾ ಆಗದಂತೆ ಮಾಡುವುದು ಹೇಗೆ ಅನ್ನುವುದರ ಅರಿವು ನಮಗಿರಬೇಕು. ಇದು ಸಂಶೋಧಕರು ಹಾಗೂ ರಾಜಕಾರಣಿಗಳು ನಿರಂತರವಾಗಿ ಎದುರಿಸಬೇಕಾದ ಸವಾಲು. ಈ ವರ್ಷ ಪ್ರಶಸ್ತಿ ಪಡೆದ ಈ ಸಂಶೋಧನೆ ಹಾಗೂ ಇದರ ಮುಂದುವರಿಕೆಯಾಗಿ ನಡೆಯುತ್ತಿರುವ ಇತರ ಸಂಶೋಧನೆಗಳು ಈ ಸವಾಲನ್ನು ಎದುರಿಸಲು ಸಮಾಜವನ್ನು ಇನ್ನಷ್ಟು ಸಜ್ಜುಗೊಳಿಸುತ್ತವೆ. ಈ ಅರಿವಿನಿಂದ ರೂಪುಗೊಳ್ಳುವ ನೀತಿಗಳಿಂದಾಗಿ ಹಣಕಾಸು ಬಿಕ್ಕಟ್ಟು ದೀರ್ಘಕಾಲಿನ ಬಿಕ್ಕಟ್ಟಾಗಿ ಪರಿವರ್ತನೆಗೊಂಡು ಸಮಾಜವನ್ನು ತೀವ್ರವಾಗಿ ಕಾಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದು ಸಾಧ್ಯವಾದರೆ ನಮ್ಮೆಲ್ಲರಿಗೂ ಅತ್ಯಂತ ಒಳ್ಳೆಯದು. ಆದರೆ ಜಗತ್ತು ಇಂದು ಆತುಕೊಂಡಿರುವ ಆರ್ಥಿಕ ನೀತಿಯಲ್ಲೇ ಬಿಕ್ಕಟ್ಟನ್ನು ಸೃಷ್ಟಿಸುವ ಸ್ವಭಾವವೂ ಇದೆಯೇ ಎಂಬುದನ್ನೂ ಚಿಂತಿಸಬೇಕು.