ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು

[ವಾರ್ತಾಭಾರತಿಯಲ್ಲಿ ಪ್ರಕಟವಾದ ಶೈಲಜ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.]
ಶೈಲಜ ವೇಣುಗೋಪಾಲ್
ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು ಆಗಿದ್ದಾರೆ. ನೆರೆಹೊರೆಯವರು, ಸರ್ಕಾರ, ಪೋಲಿಸ್, ಸೈನ್ಯ ಮತ್ತು ತಮ್ಮ ಸಹಮಾನವರ ಬಗ್ಗೆ ನಿರಂತರ ಭಯ ಹಾಗೂ ಅಪನಂಬಿಕೆಯಲ್ಲಿ ತೊಳಲಾಡುತ್ತಿದ್ದಾರೆ. ೫೦ ದಿನಗಳಿಂದ ಮಣಿಪುರದಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲವಾಗಿದೆ. ಹರ ಕೊಲ್ಲಲ್ ಪರ ಕಾಯ್ವನೆ ಎಂಬಂತೆ ತಂದೆಯ ಸ್ಥಾನದಲ್ಲಿ ನಿಂತು ಎಲ್ಲರನ್ನೂ ಪೊರೆದು ಎಲ್ಲರ ಹಿತ ಕಾಯಬೇಕಾಗಿದ್ದ ದೇಶದ ಮುಖ್ಯಸ್ಥರು ಒಂದು ಮಾತಲ್ಲ ಒಂದು ಅಕ್ಷರವನ್ನೂ ಉಚ್ಚರಿಸದೆ ದಿವ್ಯ ಮೌನದಲ್ಲಿ ಇದು ತನ್ನ ದೇಶದ ಭಾಗವೇ ಅಲ್ಲವೇನೋ ಎಂಬಂತಿದ್ದಾರೆ.
ನೆಲಜಲಕ್ಕೆ, ಅಸ್ಮಿತೆಗೆ, ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣ. ಇದು ಎಥ್ನಿಕ್ ಕ್ಲಾಶ್. ಈ ಎಲ್ಲಾ ಬುಡಕಟ್ಟು ಸಮುದಾಯಗಳು ತಮ್ಮದೇ ಶಸ್ತ್ರಗಳನ್ನು ಹೊಂದಿವೆ. ಹಾಗಾಗಿ ಹೊಡೆದಾಡುತ್ತವೆ ಎನ್ನುವ ಮಾತುಗಳು ಎಲ್ಲೆಲ್ಲೂ ಹರಿದಾಡುತ್ತಿವೆ. ಹಾಗೆಯೇ ಅಧಿಕಾರ ಮತ್ತು ಸವಲತ್ತುಗಳಿಗೆ ಸಂಬಂಧಿಸಿದಂತೆ ಎರಡೂ ಸಮುದಾಯಗಳ ನಡುವೆ ಇರುವ ತೀವ್ರ ಅಸಮಾಧಾನ ಈ ಸಂಘರ್ಷಕ್ಕೆ ಕಾರಣ ಎನ್ನುತ್ತಿದ್ದಾರೆ. ಎಲ್ಲಾ ಆಧುನಿಕ ಸವಲತ್ತುಗಳಾದ ಉನ್ನತ ಶಿಕ್ಷಣ, ಮಲ್ಟಿಸ್ಪೆಷಾಲಿಟಿ ಆರೋಗ್ಯ ಸೇವೆಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಸವಲತ್ತುಗಳು, ಉತ್ತಮ ಸಂಪರ್ಕ ಸಾಧನಗಳು ಮುಂತಾದುವನ್ನು ಕಣಿವೆಯಲ್ಲಿ ಸಾಂದ್ರವಾಗಿ ನೆಲೆಸಿರುವ ಮೈತೈಗಳು ಪೂರ್ಣ ಪ್ರಮಾಣದಲ್ಲಿ ಪಡೆಯುತ್ತಿದ್ದಾರೆ ಆದರೆ ಮೊದಲಿನಿಂದಲೂ ಗುಡ್ಡಗಾಡು ಪ್ರದೇಶದಲ್ಲಿರುವ ಕುಕಿಗಳಿಗೆ ಅವುಗಳ ಅನುಕೂಲ ಸೂಕ್ತವಾಗಿ ದೊರಕುತ್ತಿಲ್ಲ. ಮೈತೈ ಶಾಸಕರನ್ನೇ ಹೆಚ್ಚಾಗಿ ಹೊಂದಿರುವ ರಾಜ್ಯ ಸರ್ಕಾರ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಯತ್ತ ತುಂಬಾ ತಲೆಕಡಿಸಿಕೊಂಡಿಲ್ಲ. ಈಗ ಕುಕಿಗಳು ನೆಚ್ಚಿಕೊಂಡಿರುವ ಕಾಡಿಗೂ ಕೈ ಇಡಲು ಮೈತೈಗಳು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಎಸ್ ಟಿ ಸ್ಥಾನಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ ಎಂಬ ಅಸಮಾಧಾನ ಕುಕಿಗಳದ್ದು. ಜೊತೆಗೆ ಎಲ್ಲ ಕುಕಿಗಳೂ ಮಾದಕವಸ್ತುಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಾರಾಸಗಟಾಗಿ ಆರೋಪಿಸಲಾಗಿದೆ. ಕುಕಿಗಳು ಹೊರಗಿನಿಂದ ಬಂದವರು ಎಂದು ಆರೋಪವೂ ಬಲವಾಗಿದೆ. ಹೀಗೆ ಪರಸ್ಪರರ ಕುರಿತು ಬಗೆ ಬಗೆಯ ಅಸಮಾಧಾನಗಳಿವೆ. ಜನಾಂಗೀಯ ಯುದ್ಧದ ಮುಸುಕಿನಲ್ಲಿ ನಡೆಯುತ್ತಿರುವುದು ಹಿಂದುತ್ವದ ಸ್ಥಾಪನೆಯ ಹುನ್ನಾರವೇ ಎನ್ನುವ ಪ್ರಶ್ನೆಯೂ ಹಲವರನ್ನು ಕಾಡುತ್ತಿದೆ. ಏಕೆಂದರೆ ಇಂಫಾಲಾ ಕಣಿವೆಯೊಂದರಲ್ಲೇ ೨೭೫ ಚರ್ಚುಗಳನ್ನು ಈಗಾಗಲೇ ಒಡೆದುಹಾಕಲಾಗಿದೆ. ಇದು ಘರವಾಪಸಿ ಕಾರ್ಯಕ್ರಮದ ಒಂದು ಭಾಗವೇ ಎನ್ನುವ ಪ್ರಶ್ನೆಯೂ ಮುನ್ನೆಲೆಯಲ್ಲಿದೆ. ಅದಕ್ಕೆಲ್ಲಾ ಆಡಳಿತಾರೂಢ ಸರ್ಕಾರ ಮೌನ ಬೆಂಬಲ ನೀಡುತ್ತಿದೆ ಎನ್ನುವ ಗುಮಾನಿ ಬಹುತೇಕ ಎಲ್ಲರನ್ನೂ ಕಾಡುತ್ತಿದೆ.
ಈ ಎಲ್ಲಾ ಗುಂಪುಗಳ ನಡುವೆ ಹಿಂದಿನಿಂದಲೂ ಸಣ್ಣ ಪುಟ್ಟ ಘರ್ಷಣೆಗಳು ಇದ್ದದ್ದು ವಾಸ್ತವವೇ. ಆದರೆ ಸಹಬಾಳ್ವೆಯೇ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿಯಂತೂ ಅವರೇ ಹೇಳುವ ಪ್ರಕಾರ ಈ ತನಕ ಎಂದೂ ಬಂದಿರಲಿಲ್ಲ. ಮಣಿಪುರದ ಎಲ್ಲಾ ಸಮುದಾಯಗಳಿಗೂ ಹಲವು ಸಮಾನ ದುಃಖಗಳಿದ್ದವು. ಭಾರತ ಸ್ವತಂತ್ರವಾದ ದಿನದಿಂದಲೂ ಮಣಿಪುರಕ್ಕೆ ಅದರ ಕಷ್ಟಗಳಿಗೆ, ಅದರ ಅಭಿವೃದ್ಧಿಗೆ ಎಂದೂ ಈ ಭಾರತ ಗಣರಾಜ್ಯ ಆದ್ಯತೆ ನೀಡಿರಲಿಲ್ಲ. ಮಣಿಪುರದ ಜನ ನಿರಂತರ ಕೇಳಿಕೊಳ್ಳುತ್ತಾ ಬಂದಿರುವ ಪ್ರಶ್ನೆಯೆಂದರೆ, ನಾವು ನಿಜವಾಗಿಯೂ ಈ ದೇಶದ ಪ್ರಜೆಗಳೇ? ನಮಗೆ ಸಹಾಯ ಮಾಡಲು ಯಾರೂ ಇಲ್ಲವಲ್ಲ? ಭಾರತ ನಮ್ಮತ್ತ ಬೆನ್ನು ತಿರುಗಿಸಿ ನಿಂತಿದೆ. ಮಾಧ್ಯಮಗಳು ಎಂದೂ ನಮ್ಮ ಕಷ್ಟ ನಷ್ಟ, ನೋವು ಸಂಕಟಗಳನ್ನು ಆದ್ಯತೆಯ ಮೇರೆಗೆ ವರದಿ ಮಾಡಿಲ್ಲ. ಟಿ ವಿ ಅಥವಾ ರೇಡಿಯೋದಲ್ಲಿ ಕಲ್ಕತ್ತೆಯಿಂದ ಮುಂದೆ, ಪೂರ್ವಕ್ಕೆ ಭಾರತ ದೇಶದಲ್ಲಿ ಏನೂ ಇಲ್ಲವೇನೋ ಎಂಬಂತೆ ಹವಾ ವರ್ತಮಾನ ಕಲ್ಕತ್ತೆಗೆ ನಿಂತುಹೋಗುತ್ತದೆ. ಮಣಿಪುರದ ಎಲ್ಲಾ ಸಮುದಾಯದವರು, ಬುದ್ಧಿಜೀವಿಗಳು, ಪರ್ತಕರ್ತರು, ಮುಂತಾದವರೆಲ್ಲರೂ ಹೇಳುವುದು ಒಂದೇ ಮಾತು, ಮಣಿಪುರದ ಇತಿಹಾಸದಲ್ಲೇ ಈ ೭ ವಾರಗಳಲ್ಲಿ ಸಂಭವಿಸಿರುವ ಪ್ರಮಾಣದ ಸಂಘರ್ಷ, ಹಿಂಸೆ, ಸಾವು, ನೋವು ಕಹಿ, ದ್ವೇಷವನ್ನು ಯಾರೂ ನೋಡಿಲ್ಲ. ಇಲ್ಲಿ ಹಲವು ಶತಮಾನಗಳಿಂದ ೩೫ ಬುಡಕಟ್ಟುಗಳು ಸಹಬಾಳ್ವೆ ನಡೆಸಿವೆ. ಹಿಂದೆಂದೂ ಇಂಥದ್ದು ಇಲ್ಲಿ ನಡೆದಿರಲಿಲ್ಲ. ಎಂಟು ಹತ್ತು ತಿಂಗಳ ಹಿಂದೆಯೂ ಇಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಇಲ್ಲಿನ ಕಾನೂನು ಮತ್ತು ಆಡಳಿತಾತ್ಮಕ ಸುವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ ಎಂದು ರಾಜ್ಯ ಸಚಿವ ಆರ್ ಕೆ ರಂಜನ್ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಆದರೆ ದೇಶದ ಪ್ರಧಾನಿಯ ಮೌನ ಮಣಿಪುರಿಗಳ ಎದೆಯಲ್ಲಿ ಈಗಾಗಲೇ ಇರುವ ಗಾಯದ ಮೇಲೆ ಉಪ್ಪು ಮೆಣಸನ್ನು ಎರಚಿದೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕರಾಗಿದ್ದ ತೈಯ್ಯಂ ಹೇಳುವಂತೆ ಮೋದಿಯ ಮೌನದ ಹಿಂದಿರುವ ಹಿಡನ್ ಅಜೆಂಡಾ ಏನು? ಇಲ್ಲಿ ಏನಾಗಬಹುದು, ಏನಾಗುತ್ತಿದೆ ಎನ್ನವುದರ ಬಗ್ಗೆ ಇಂಟೆಲಿಜೆನ್ಸ್ ರಿಪೋರ್ಟ್ ಕೇಂದ್ರಕ್ಕೆ ಖಂಡಿತಾ ಇದ್ದಿರಲೇಬೇಕು. ಹಾಗಿದ್ದರೂ ಯಾಕೆ ಏನನ್ನೂ ಮಾಡುತ್ತಿಲ್ಲ? ಪ್ರಧಾನಿಯವರು ತಮ್ಮ ಮನ್ ಕಿ ಬಾತ್‌ನಲ್ಲಿ ಮಣಿಪುರದ ಬಗ್ಗೆ ಚಕಾರವೇ ಎತ್ತಲಿಲ್ಲ ಎಂದು ನೊಂದ ಹಲವರು ತಮ್ಮ ಟ್ರಾನ್ಸಿಸ್ಟರ್‌ಗಳನ್ನು ಒಡೆದುಹಾಕಿದ್ದಾರೆ. ಟರ್ಕಿಯಲ್ಲಿ ಭೂಕಂಪವಾಗಿ ನೂರಾರು ಜನ ಸತ್ತುಹೋದಾಗ ಮೊದಲು ಟ್ಟೀಟ್ ಮಾಡಿದ್ದು ಮೋದಿ. ಆದರೆ ಮಣಿಪುರದಲ್ಲಿ ಪರಿಸ್ಥಿತಿ ಅದಕ್ಕಿಂತ ಗಂಭೀರವಾಗಿರುವಾಗ ತನಗಿರುವ ಜನಪ್ರಿಯತೆಗೆ, ಬೆಂಬಲಕ್ಕೆ ಪ್ರಧಾನಿಯವರು ಏನನ್ನೂ ಮಾಡಬಹುದಿತ್ತು. ಖಂಡಿತವಾಗಿಯೂ ಮಣಿಪುರದಲ್ಲಿ ಶಾಂತಿ ನೆಲೆಗೊಳಿಸಬಹುದಿತ್ತು. ಈ ಸಂದರ್ಭದಲ್ಲಿ ಧಾರ್ಮಿಕ ನಾಯಕರದ್ದೂ ಒಂದು ಪಾತ್ರವಿದೆ ಎನ್ನುವುದು ಹೆಚ್ಚಿನವರ ಅಂಬೋಣ. ಅವರೆಲ್ಲರೂ ಗಟ್ಟಿಯಾಗಿ ಮಾತನಾಡಿದರೆ ಶಾಂತಿ ನೆಲೆಗೊಳ್ಳುವ ಸಾಧ್ಯತೆಯಿದೆ ಎಂದೆನ್ನಿಸಿದೆ. ಆದರೆ ಶಾಂತಿ ಸಾಧ್ಯವಾಗಬೇಕಾದರೆ ಒಂದು ಗಟ್ಟಿಯಾದ ರಾಜಕೀಯ ವಿಲ್ ಅವಶ್ಯಕ. ಅದಿಲ್ಲವಾದರೆ ಈ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತವೆ. ಹಲವು ಮಹಿಳಾ ಸಂಘಟನೆಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ, ಶಾಂತಿಯನ್ನು ನೆಲೆಗೊಳಿಸುವ ಹಂಬಲದಲ್ಲಿ ಮತ್ತೆ ಮತ್ತೆ ಕೇಂದ್ರ ಸರ್ಕಾರದತ್ತ ಎಡತಾಕುತ್ತಿದೆ. ಈ ಹಿಂಸೆಗಳೆಲ್ಲಾ ಚುನಾವಣೆಗೆ ಮೊದಲು ನಡೆಯುತ್ತಿವೆ ಎನ್ನುವುದು ಗಮನಾರ್ಹ ಎನ್ನುತ್ತಾರೆ ಹಲವು ಸಂವೇದನಾಶೀಲರು.
ಈ ಪರಿಸ್ಥಿತಿ ಹಲವು ಗಂಭೀರವಾದ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಬಹುಭಾಷಿಕ, ಬಹುಜನಾಂಗೀಯ, ಬಹುಧರ್ಮೀಯ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಎದುರಿಸುವ ಸಮಸ್ಯೆಗಳೇನು ಮತ್ತು ಅದರ ಕಾರ್ಯಸೂಚಿ ಹೇಗಿರಬೇಕು? ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿನ ಅಭಿವೃದ್ಧಿ ಮಾದರಿಯ ಬಗ್ಗೆಯೇ ಅನುಮಾನ ಹುಟ್ಟುಹಾಕುತ್ತದೆ. ಒಂದು ಗಣರಾಜ್ಯದಲ್ಲಿ ಕೇಂದ್ರದ ಪಾತ್ರವನ್ನು ಪ್ರಶ್ನೆಗೊಡ್ಡುತ್ತದೆ. ಈ ಸಂಘರ್ಷದಲ್ಲಿ ಎರಡು ಗುಂಪಿನ ಮಹಿಳೆಯರೂ ಸಮಾನದುಃಖಿಗಳು. ಹಾಗಿದ್ದಾಗ್ಯೂ ಅವರನ್ನು ಒಗ್ಗೂಡಿಸಿ ಘರ್ಷಣೆಯಲ್ಲಿ ತೊಡಗಿರುವ ಗುಂಪುಗಳನ್ನು ಶಾಂತಿ ಸಹಬಾಳ್ವೆಯತ್ತ ಒಯ್ಯಲು ಸಾಧ್ಯವಾಗದಿರುವುದು ಇಡೀ ಮಹಿಳಾ ಚಳುವಳಿಗೂ ಒಂದು ಸವಾಲೊಡ್ಡಿದೆ. ಅತಿ ಸೂಕ್ಷ್ಮ ಸನ್ನಿವೇಶಗಳಲ್ಲಿ ಮಹಿಳೆಯರ ಹಿತವನ್ನೂ ಮತ್ತು ಆ ಮೂಲಕ ಇಡೀ ಸಮಾಜದ ಹಿತವನ್ನು ಕಾಪಾಡಲು ಮಹಿಳಾ ಚಳುವಳಿ ಏನು ಮಾಡಬೇಕೆಂಬ ಪ್ರಶ್ನೆಗೆ ಮುಖಾಮುಖಿಯಾಗಬೇಕಾದ ತುರ್ತನ್ನು ಇದು ಕಾಣಿಸಿದೆ. ಮಹಿಳೆಯರು ಅಧಿಕಾರ ರಾಜಕಾರಣ ಮತ್ತು ಹಿಂಸೆಯ ಭಾಗವಾಗದೇ ಇರಲು ಏನು ಮಾಡಬೇಕು? ನಾರ್ದರನ್ ಐಲ್ಯಾಂಡ್ಸ್‌ನಲ್ಲಿ ಕ್ಯಾಥೊಲಿಕ್ ಮತ್ತು ಪ್ರಾಟಸ್ಟೆಂಟ್ ಗುಂಪುಗಳ ನಡುವೆ ತೀವ್ರ ಸಂಘರ್ಷವಾದಾಗ ಎರಡೂ ಕಡೆಯ ಮಹಿಳೆಯರು ಹಿಂಸೆಯನ್ನು ವಿರೋಧಿಸುವ ನಿಲುವು ತಳೆದು ಶಾಂತಿಯನ್ನು ನೆಲೆಗೊಳಿಸಿದರು. ಹಾಗಾಗಬೇಕಾದರೆ ಇಂತಹ ಸನ್ನಿವೇಶಗಳಲ್ಲಿ ಮಹಿಳೆಯರು ಮತ್ತು ಮಹಿಳಾ ಚಳುವಳಿ ಯಾವ ರೀತಿಯಲ್ಲಿ ಮಾರ್ಪಾಡಾಗಬೇಕು? ಇಂತಹ ಪ್ರಶ್ನೆಗಳನ್ನು ಕುರಿತು ಯೋಚಿಸುವುದೂ ಒಂದು ಪರಿಹಾರದ ದಾರಿಯನ್ನು ಕಾಣಿಸಬಹುದೇ? ಹಲವು ಪ್ರಶ್ನೆಗಳನ್ನು ಹುಟ್ಟುಹಾಕರುವ, ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಮಣಿಪುರದಲ್ಲಿನ ಹಿಂಸೆ ಅಂತ್ಯವಾಗಬೇಕು. ಮೂಡಿರುವ ಅಪನಂಬಿಕೆ ಹೋಗಿ ಮತ್ತೆ ವಿಶ್ವಾಸ ಮೂಡುವಂತಾಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿ. ಮಣಿಪುರ ನಮಗೂ ಸೇರಿದ್ದು. ಅದರ ನೋವು ನಮ್ಮ ನೋವೂ ಹೌದು. ಅದೊಂದು ಪ್ರವಾಸಿ ತಾಣವಷ್ಟೇ ಅಲ್ಲ.
೨೬/೦೬/೨೩
ಮೈಸೂರು