ಎನಿತು ಇನಿದು ಈ ಮಂಗಳವಾದ್ಯ
ಒಸರುತ ಉಸಿರಲಿ ರಾಗರಸ
ನಾಗಸ್ವರದ ಕಥೆ ವ್ಯಥೆ.
ಶೈಲಜಾ
ತಿರುವೈಯ್ಯಾರಿನ ಆರಾಧನೆಯ ಹೊತ್ತಿನಲ್ಲಿ ಕಾವೇರಿಯ ಸೇತುವೆಯ ಮೇಲೆ ಕುಳಿತು ನಾಗಸ್ವರದ ಆಳವಾದ, ಸತ್ವಯುತ ಸಂಗೀತದಲ್ಲಿ ಮೈಮರೆಯುತ್ತಿದ್ದೆ. ಆ ಕೇಳ್ಮೆಯ ಅನುಭವ ನನಗೆ ಹಾಡಲು ಸಹಕಾರಿಯಾಯಿತು. ರಾಗಜ್ಞಾನವನ್ನು ಬೆಳೆಸಿಕೊಳ್ಳಬೇಕೆಂಬ ಆಸೆಯಿದಲ್ಲಿ ನಾಗಸ್ವರವನ್ನು ಎಷ್ಟು ಸಾಧ್ಯವೋ ಅಷ್ಟು ಕೇಳಬೇಕು, ಎನ್ನುತ್ತಿದ್ದರು ಖ್ಯಾತ ಗಾಯಕ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್. ಚುಕ್ಕಿಗಳು ಹೊಳೆಯುವ ರಾತ್ರಿಯ ನೀರವತೆಯಲ್ಲಿ ತುಂಬು ನಾದದಿಂದ ಮೊರೆಯುವ ನಾಗಸ್ವರ ಕೇಳುವಾಗ ಭಕ್ತಿಯೆಂಬ ಸಮುದ್ರದಲ್ಲಿ ಮಿಂದೆದ್ದಂಥ ಶುದ್ಧ ಅನುಭವ ಆಗುತ್ತಿತ್ತು ಎನ್ನುತ್ತಿದ್ದರು ಡಾ ರಂಗ ರಾಮಾನುಜ ಅಯ್ಯಂಗಾರ್. ಹೀಗೆ ಕರ್ನಾಟಕ ಸಂಗೀತದಲ್ಲಿ ಮಾತಿನ ಮೈಲಿಗೆಯಿಲ್ಲದ, ಭಾಷೆಯೂ, ವಸ್ತುವೂ, ಭಕ್ತಿಯೂ, ಎಲ್ಲವೂ ಶುದ್ಧಸಂಗೀತವೇ ಆಗಿದ್ದ ವಾದ್ಯ ನಾದರಾಜ ನಾಗಸ್ವರ. ಕರ್ನಾಟಕ ಸಂಗೀತಕ್ಕೆ ನಮ್ಮ ಪುರಾತನ ವಾದ್ಯಗಳಲ್ಲಿ ಒಂದಾದ ನಾಗಸ್ವರದ ಕೊಡುಗೆ ಅಪಾರ. ಅದರಿಂದ ಪ್ರಭಾವಿತರಾಗದ ಕಲಾವಿದರೇ ಕಡಿಮೆ. ಮನೋಧರ್ಮ ಸಂಗೀತ ಅಂದರೆ ನಾಗಸ್ವರ ಎಂದು ಮುಕ್ತಕಂಠದಿಂದ ಹೇಳುತ್ತಾರೆ. ಕರ್ನಾಟಕ ಸಂಗೀತದಲ್ಲಿ ಎಲ್ಲವೂ ಗಾಯನವನ್ನು ಆಧರಿಸಿದೆ. ಆದರೆ ಗಾಯನ ನಾಗಸ್ವರವನ್ನು ಆಧರಿಸಿದೆ ಎನ್ನುವುದೇ ವಿಶೇಷ. ಇಷ್ಟಾಗಿಯೂ ನಾಗಸ್ವರಕ್ಕೆ ಸಿಗಬೇಕಾದ ನ್ಯಾಯಯುತ ಸ್ಥಾನ ಸಿಗುತ್ತಿಲ್ಲ. ಒಂದು ರೀತಿಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಅದು ಕೇವಲ ಮಂಗಳವಾದ್ಯವಾಗಿಯೇ ಉಳಿದು, ಬಹುತೇಕ ಸಂಗೀತ ಸಭೆಗಳಲ್ಲಿ ಅವುಗಳಿಗೆ ಅವಕಾಶ ದೊರಕುತ್ತಿಲ್ಲ.
ಈ ಮಂಗಳವಾದ್ಯ, ಅದರ ಸಂಗೀತ, ಅದಕ್ಕೆ ಕಾರಣರಾಗಿದ್ದ ಕಲಾವಿದರ ಇತಿಹಾಸದ ಅಧ್ಯಯನ ತುಂಬಾ ಕುತೂಹಲಕಾರಿಯಾಗಿದೆ. ಅದು ನಮ್ಮ ಮುಂದೆ ಬಿಚ್ಚಿ ಇಡುವ ವಿಚಾರಗಳು ತುಂಬಾ ಸಂಕೀರ್ಣವಾಗಿವೆ. ನಾವು ಈತನಕ ನಂಬಿಕೊಂಡು ಬಂದಿರುವ ಹಲವು ನಂಬಿಕೆ ಮತ್ತು ಕಲ್ಪನೆಗಳನ್ನು ಅದು ಪ್ರಶ್ನೆಗೆ ಒಡ್ಡುತ್ತದೆ. ನಾವು ಮರೆತುಬಿಟ್ಟಿರುವ ಹಲವು ವಿಚಾರಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಇಂದು ನಾವು ಕೇಳುತ್ತಿರುವ ಸಂಗೀತ ಯಾವ ರೀತಿಯ ಬದಲಾವಣೆಗಳಿಗೆ ಒಳಗಾಗಿದೆ? ಹಿಂದೆ ಈ ಸಂಗೀತವನ್ನು ಬೆಳೆಸಿ ಕಾಪಾಡಿದ್ದವರು ಯಾರು? ಇಂದು ಬದಲಾದ ಸನ್ನಿವೇಶದಲ್ಲಿ ಅದರಲ್ಲಿ ಸಕ್ರಿಯವಾಗಿರುವವರು ಯಾರು? ಹಿಂದೆ ಸಂಗೀತದ ಕೃತಿಭಂಡಾರ ಏನಾಗಿತ್ತು? ಈಗ ಏನಾಗಿದೆ? ಈ ಬದಲಾವಣೆಗೆ ಕಾರಣಗಳೇನು? ಎನ್ನುವ ಹಲವು ವಿಚಾರಗಳನ್ನು ನಾಗಸ್ವರಕ್ಕೆ ಸಂಬಂಧಿಸಿದ ಅಧ್ಯಯನ ಎಳೆಎಳೆಯಾಗಿ ನಮ್ಮ ಮುಂದೆ ಬಿಡಿಸಿಡುತ್ತದೆ. ಕರ್ನಾಟಕ ಸಂಗೀತ ಲೋಕದಲ್ಲಿ ಆದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಪಲ್ಲಟಗಳ ಕಥೆಯನ್ನೂ ಹೇಳುತ್ತದೆ.
ನಾಗಸ್ವರ ಎಷ್ಟು ಹಳೆಯದು?
ಈಜಿಪ್ಟ್ ನಾಗರಿಕತೆಯಷ್ಟು ಹಿಂದೆಯೇ ಡಬ್ಬಲ್ ರೀಡ್ ಪೈಪ್‌ಗಳು ಇದ್ದವು ಎನ್ನುವುದು ಅಲ್ಲಿ ದೊರಕಿರುವ ವರ್ಣಚಿತ್ರಗಳಿಂದ ಅರಿವಾಗುತ್ತದೆ. ಮೆಸೆಪೊಟೇಮಿಯಾದಲ್ಲಿಯೂ ಅಂತಹ ನೀಳವಾದ ಪೈಪ್‌ಗಳು ಇದ್ದವು ಎನ್ನುವುದಕ್ಕೆ ಪುರಾವೆಯಿದೆ. ಭಾರತದಲ್ಲಿ ಅಷ್ಟು ಪುರಾತನ ಪುರಾವೆ ನಮಗಿನ್ನೂ ಲಭ್ಯವಿಲ್ಲ. ಹಲವು ಶಿಲ್ಪ ಮತ್ತು ಕೆಲವು ಗ್ರಾಂಥಿಕ ದಾಖಲೆಗಳು ಇಂತಹ ವಾದ್ಯಕ್ಕೆ ಸಂಬಂಧಿಸಿದಂತೆ ದೊರಕಿವೆ. ಆದರೆ ಅವು ಇಂದು ನಾವು ಬಳಸುತ್ತಿರುವ ನಾಗಸ್ವರವೇ ಎಂದು ಹೇಳುವುದು ಕಷ್ಟವಾಗಬಹುದು. ಆದರೆ ಇವೆಲ್ಲವೂ ನಮ್ಮ ಇಂದಿನ ನಾಗಸ್ವರದ ಪೂರ್ವಜರು ಎಂದು ಖಂಡಿತವಾಗಿಯೂ ಹೇಳಬಹುದು.
ಗ್ರಂಥಗಳಲ್ಲಿ ಉಲ್ಲೇಖ
ಸಂಗೀತಶಾಸ್ತ್ರ ಗ್ರಂಥಗಳಾದ ಸಾರಂಗದೇವನ ಸಂಗೀತ ರತ್ನಾಕರ (೧೩ನೆಯ ಶತಮಾನ) ಮತ್ತು ಪಾರ್ಶ್ವದೇವನ ಸಂಗೀತ ಸಮಯಸಾರ (೧೩ನೇ ಶತಮಾನ) ವಾದ್ಯಗಳನ್ನು ಕುರಿತ ಅಧ್ಯಾಯದಲ್ಲಿ ಮುಖವೀಣೆಯನ್ನು ಉಲ್ಲೇಖಿಸುತ್ತವೆ. ಆದರೆ ಅಲ್ಲಿ ನಾಗಸ್ವರದ ಉಲ್ಲೇಖವಿಲ್ಲ. ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಈ ವಾದ್ಯದ ಉಲ್ಲೇಖವಿರುವುದು ಅಹೋಬಲನ (೧೭ನೇ ಶತಮಾನ) ಸಂಗೀತ ಪಾರಿಜಾತದಲ್ಲಿ ಮಾತ್ರ. ಶಾಸ್ತ್ರಗ್ರಂಥಗಳಲ್ಲಿ ನಾಗಸ್ವರ ಅಥವಾ ನಾಗಸರ ಎಂದು ಬಳಸಿದ್ದಾರೆ. ಪ್ರಾಕೃತದಲ್ಲಿ ’ಸ್ವರ’ ಎನ್ನುವುದು ’ಸರ’ ಎಂದಾಗುವುದು ತುಂಬಾ ಸಹಜವಾದ ಪ್ರಕ್ರಿಯೆ. ಶ್ರೀಕಾಂತನ ತೆಲುಗು ಗ್ರಂಥ ಕ್ರೀಡಾಭಿರಾಮದಲ್ಲಿ (ಶಕೆ ೧೪೦೦) ನಾಗಸ್ವರ ಕುರಿತ ಎರಡು ಉಲ್ಲೇಖಗಳಿವೆ. ಈ ಎರಡೂ ಉಲ್ಲೇಖಗಳ ಸಂದರ್ಭದಲ್ಲಿ ಲೇಖಕ ’ಗ’ ಎಂಬ ಧ್ವನಿಯ ಆದಿಪ್ರಾಸ ಬಳಸಿದ್ದಾನೆ – ನಾಗಸ್ವರ, ನಾಗಸ್ವರಾವಲಿ. ಕೃಷ್ಣದೇವರಾಯನ ಸಮಕಾಲೀನ ತೆಲುಗುಕವಿ ಹರಿಭಟ್ಟನ ನರಸಿಂಹ ಪುರಾಣದ ಮೂರನೆಯ ಸರ್ಗದ ಎಪ್ಪತ್ತೆರಡನೆಯ ಶ್ಲೋಕದಲ್ಲಿರುವ ವಾದ್ಯಗಳ ದೊಡ್ಡ ಪಟ್ಟಿಯಲ್ಲಿ ನಾಗಸ್ವರ ಕೂಡ ಒಂದು. ಸಿಂಗಿರಾಜನ ಕನ್ನಡ ಕೃತಿ ಸಿಂಗಿರಾಜ ಪುರಾಣದಲ್ಲಿ (೧೫ನೇ ಶತಮಾನ) ನಾಗಸ್ವರದ ಉಲ್ಲೇಖವಿದೆ. ೧೬ನೆಯ ಶತಮಾನದ ಕನ್ನಡ ಕವಿ ರತ್ನಾಕರ ವರ್ಣಿ ನಾಗಸರಕೆ ನರ್ತಿಪ ನಾಗಕನ್ನಿಕೆಯಂತಾಡಿದವಳು ಎನ್ನುತ್ತಾನೆ. ಕನ್ನಡದಲ್ಲಿ ನಾಗಸ್ವರ ನುಡಿಸಿದರೆ ನಾಯಿ ನರ್ತಿಸಬಲ್ಲುದೇ? ಎಂಬ ನಾಣ್ಣುಡಿ ಇದೆ. ಇನ್ನು ತಮಿಳಿನ ೧೬ನೆಯ ಶತಮಾನದ ಕೃತಿ ಇರತ್ತಿನಾಗಿರಿ ಉಲಾ ನಾಗಸ್ವರವನ್ನು ಉಲ್ಲೇಖಿಸುತ್ತದೆ. ೧೮ನೇ ಶತಮಾನದ ಕೂಲಪ್ಪನಾಯಕನ್‌ಕಾದಲ್ ಕೃತಿಯಲ್ಲಿಯೂ ಉಲ್ಲೇಖವಿದೆ. ಆದರೆ ತೀರ ಇತ್ತೀಚಿನ ಕೃತಿಯಾದ ತುಳಜಾಜಿ ಮಹಾರಾಜನ ಸಂಗೀತ ಸಾರಾಮೃತದಲ್ಲಿ ನಾಗಸ್ವರದ ಉಲ್ಲೇಖವಿಲ್ಲ.
ಶಾಸನಗಳ ಉಲ್ಲೇಖ
ಕ್ರಿ ಶ ೧೫೪೯ ಮತ್ತು ಕ್ರಿ.ಶ. ೧೫೫೪ರ ಕಾಲದ ವಿಜಯನಗರದ ಶಾಸನಗಳಲ್ಲಿ ನಾಗಸ್ವರವಾದಕರ ಪೋಷಣೆಗೆ ಜಮೀನು ದತ್ತಿ ನೀಡಿರುವ ಉಲ್ಲೇಖಗಳಿವೆ. ಕ್ರಿ.ಶ. ೧೬೩೨ರ ಶಾಸನದಲ್ಲಿ ಒಬ್ಬ ಡೋಲುವಾದಕ, ಮತ್ತು ಒಬ್ಬ ನಾಗಸರಕಾರ ಸೇರಿದಂತೆ ನಾಲ್ವರ ಸಂಬಳಕ್ಕಾಗಿ ದೇವಾಲಯದಲ್ಲಿ ಹಣ ಮೀಸಲಿಟ್ಟಿದ್ದಾರೆ. ತಮಿಳು ಪ್ರಾಂತ್ಯದ ದಕ್ಷಿಣ ಆರ್ಕಾಟ್ ಜಿಲ್ಲೆಯ ೧೬ನೆಯ ಶತಮಾನದ ಜೈನಾಲಯದಲ್ಲಿ ಇರುವ ಶಾಸನ ಡೋಲು ಅಥವಾ ತವಿಲ್‌ವಾದಕ, ನಾಗಸ್ವರವಾದಕ ಮತ್ತು ಒಬ್ಬ ನಟುವನಾರನ್ನು ಪೋಷಿಸಲು ತಂಜಾವೂರಿನ ದೊರೆ ಅಚ್ಯುತಪ್ಪ ನಾಯಕನ ಪ್ರತಿನಿಧಿ ತಮ್ಮಯ್ಯ ನಾಯಕ ಖುಷ್ಕಿ ಮತ್ತು ನೀರಾವರಿ ಜಮೀನನ್ನು ದತ್ತಿ ನೀಡಿದ್ದನ್ನು ಉಲ್ಲೇಖಿಸುತ್ತದೆ.
ಶಿಲ್ಪಗಳಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಪ್ರಾತಿನಿಧ್ಯ
ಶಿಲ್ಪಗಳಲ್ಲಿ ಕೂಡ ನಾಗಸ್ವರವನ್ನೇ ಹೋಲುವ ವಾದ್ಯಗಳು ವಿಜಯನಗರ ಕಾಲಕ್ಕೆ ಸೇರಿದ ಮೇಲುಕೋಟೆಯ ನಾರಾಯಣಸ್ವಾಮಿ ದೇವಾಲಯದಲ್ಲಿದೆ. ಚಿದಂಬರದ ನಟರಾಜನ ದೇವಾಲಯದ ಕನಕಸಭೆಯ ಗೋಡೆಗಳ ಮೇಲೆ ಇರುವ ಮೂರು ಸಾಲುಗಳಲ್ಲಿ ನಾಗಸ್ವರ ಮತ್ತು ಡೋಲು ನುಡಿಸುತ್ತಿರುವ ಪುರುಷರ ವಿಗ್ರಹಗಳಿವೆ. ಮೊದಲನೆಯ ಸಾಲಿನಲ್ಲಿ ನಾಗಸ್ವರ ಮತ್ತು ಓತ್ತು ನುಡಿಸುತ್ತಿರುವ ಇಬ್ಬರು ಪುರುಷರ ಮೂರ್ತಿಗಳಿವೆ. ಅವರು ಅದರ ಮೇಲೆ ಬೆರಳುಗಳನ್ನು ಇಟ್ಟಿರುವ ರೀತಿ ನೋಡಿದರೆ ಅವರು ಆ ರಂಧ್ರಗಳ ಮೇಲೆ ಬೆರಳುಗಳನ್ನು ತೆರೆದು ಮುಚ್ಚುತ್ತಿದ್ದಾರೇನೋ ಎನಿಸುತ್ತದೆ. (ತೆರಾಡಾ). ಎರಡನೆಯ ಸಾಲಿನಲ್ಲಿ ಇಬ್ಬರು ಪುರುಷರ ಶಿಲ್ಪವಿದೆ ಒಬ್ಬ ನಾಗಸ್ವರದಂತಹ ವಾದ್ಯವನ್ನು ನುಡಿಸುತ್ತಿರುವಂತೆ ಇದೆ. ಅದರ ಪೀಪಿ (ಜೊಂಡು) ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದು ಶಿಲ್ಪದ ಕೈಯ್ಯಲ್ಲಿ ತಾಳವಿದೆ. ಇನ್ನು ಮೂರನೇ ಸಾಲಿನಲ್ಲಿ ಇನ್ನಿಬ್ಬರು ಪುರುಷ ಕಲಾವಿದರಿದ್ದಾರೆ. ಇದರಲ್ಲಿ ನಾಗಸ್ವರ ಊದುತ್ತಿರುವ ಪುರುಷನ ಚಲನವಲನಗಳು ಹೆಚ್ಚು ಸ್ಪಷ್ಟವಾಗಿದೆ. ಮತ್ತೊಬ್ಬ ತನ್ನ ಎಡತೋಳಿಗೆ ಇಂದಿನ ತವಿಲ್ ಹೋಲುವ ವಾದ್ಯವನ್ನು ನೇತುಹಾಕಿಕೊಂಡಿದ್ದಾನೆ ಮತ್ತು ಎರಡು ಕೈಗಳು ಅದರ ಎರಡು ಬದಿಯಲ್ಲಿ ಇವೆ. ಕಾಲನ್ನು ಸ್ವಲ್ಪ ಅಗಲಿಸಿ ಸ್ವಲ್ಪ ಮುಂದಕ್ಕೆ ಬಾಗಿದ್ದಾನೆ. ಇಲ್ಲಿ ಕೆತ್ತಿರುವ ಆರು ಜನ ಕಲಾವಿದರೂ ಮೇಲುದಿಗೆಯನ್ನು ತೊಟ್ಟಿಲ್ಲ ಮತ್ತು ಇಂದಿನ ಪಂಚೆಯನ್ನು ಹೋಲುವಂತಹ ಬಟ್ಟೆಯನ್ನು ಧರಿಸಿದ್ದಾರೆ. ಎಲ್ಲರೂ ಸರ, ಹಾರ ತೋಳ್ಬಂದಿ, ಮತ್ತು ಕಂಕಣಗಳು, ಆಭರಣಗಳನ್ನು ತೊಟ್ಟಿದ್ದಾರೆ (ತೆರಾಡಾ). ಶ್ರವಣಬೆಳಗೊಳದ ಶಾಂತಿನಾಥ ಬಸದಿಯ ಗೌಂಡಲಿ ನರ್ತಕಿಯ ಶಿಲ್ಪವು ಹಿಡಿದಿರುವ ವಾದ್ಯ ಮತ್ತು ಅದನ್ನು ನುಡಿಸುತ್ತಿರುವ ಬಾಗಿ ಡೊಂಕಾಗಿರುವ ಕೋಲು ನಮ್ಮ ಇಂದಿನ ಡೋಲನ್ನೇ ಹೋಲುತ್ತದೆ. ಚೆನ್ನಕೇಶವ ದೇವಾಲಯದಲ್ಲಿ ಡೋಲು (ಕೈಯ್ಯಲ್ಲಿ ನುಡಿಸುವುದು) ಮತ್ತು ಡವನೆ (ಡೊಂಕಾಗಿರುವ ಕೋಲಿನಿಂದ ನುಡಿಸುವುದು) ನುಡಿಸುತ್ತಿರುವ ಮಹಿಳೆ ಮತ್ತು ಪುರುಷರ ಶಿಲ್ಪಗಳಿವೆ. ತಿರುವಾರೂರಿನ ತ್ಯಾಗರಾಜಸ್ವಾಮಿ ದೇವಾಲಯದ ಮೂರನೇ ಪ್ರಾಕಾರದ ಚಾವಣಿಯಲ್ಲಿ ಪೌರಾಣಿಕ ಚೋಳ ದೊರೆ ಮುಚುಕುಂದನ ಸಾಹಸಗಳನ್ನು ವರ್ಣಿಸುವ ವರ್ಣಚಿತ್ರದ ಮೆರವಣಿಗೆಯಲ್ಲಿ ನಾಗಸ್ವರದಂತೆಯೇ ಇರುವ ವಾದ್ಯದ ಚಿತ್ರವಿದೆ.
ನಾಗಸ್ವರ ಹೇಗಿರುತ್ತದೆ?
ನಾಗಸ್ವರದಲ್ಲಿ ಎರಡು ಪ್ರತ್ಯೇಕ ಭಾಗಗಳಿರುತ್ತವೆ. ಅದರ ಪ್ರಮುಖ ಪ್ರಮುಖ ಭಾಗಗಳು ಉರವು ಮತ್ತು ಅನಾಸು. ಉರವು ಭಾಗವನ್ನು ಗಟ್ಟಿಯಾದ ಮರದಿಂದ ಮಾಡುತ್ತಾರೆ. ಸಾಮಾನ್ಯವಾಗಿ ಅಚ್ಚಾಮರ ಅಂದರೆ ಗಟ್ಟಿಯಾದ ಕರಿಮರದಿಂದ ಮಾಡಿರುತ್ತಾರೆ. ಅದರಲ್ಲಿ ಸಮವಾದ ಅಂತರವನ್ನು ಹೊಂದಿರುವ ೭ ರಂಧ್ರಗಳನ್ನು ಕೊರೆದಿರುತ್ತಾರೆ. ಇನ್ನೂ ಕೆಳಗಿನ ಭಾಗದಲ್ಲಿ ಶ್ರುತಿಮಾಡಲು ಸಹಾಯಕವಾಗುವಂತಹ ೫ ರಂಧ್ರಗಳನ್ನು ಕೊರೆದಿರುತ್ತಾರೆ. ನಾಗಸ್ವರದ ಮೇಲ್ಭಾಗದಲ್ಲಿ ’ಮೇಲ್ ಅನೈಚ್ಚು ಎಂದು ಕರೆಯುವ ಒಂದು ಲೋಹದ ಕೊಂಡಿ ಇರುತ್ತದೆ. ಅದರೊಳಕ್ಕೆ ಒಂದು ಸಣ್ಣ ಲೋಹದ ಕೊಳವೆಯನ್ನು ತೂರಿಸಿರುತ್ತಾರೆ. ಅದನ್ನು ಕೆಂಡೈ ಎನ್ನುತ್ತಾರೆ. ಅದರೊಳಗೆ ಬಿದಿರಿನಿಂದ ಮಾಡಿದ ಪೀಪಿ/ಕೊಳವಿ ಇರುತ್ತದೆ. ವಾದ್ಯದ ಕೆಳಭಾಗವನ್ನು ’ಅನಾಸು’ ಎನ್ನುತ್ತಾರೆ. ಅದನ್ನು ’ವಾಗೈ’ (ರೇನ್‌ಟ್ರೀ) ಮರದಿಂದ ಮಾಡಿರುತ್ತಾರೆ. ಅದನ್ನು ನೀಳವಾದ ಕೊಳವೆಗೆ ಅದರ ತುದಿಯಲ್ಲಿ ಸೇರಿಸಿರುತ್ತಾರೆ. ಇವೆರಡು ಭಾಗವನ್ನು ಒಂದು ರೇಷ್ಮೆಯ ದಾರದಿಂದ ಕಟ್ಟಿರುತ್ತಾರೆ. ಆ ದಾರದ ಒಂದು ತುದಿಯನ್ನು ನಾಗಸ್ವರದ ಮೇಲ್ಭಾಗದ ಕೊಳವೆಗೆ ಜೋಡಿಸಿರುತ್ತಾರೆ. ಅದು ನಾದವನ್ನು ವರ್ಧಿಸುತ್ತದೆ. ಹೆಚ್ಚುವರಿ ರೀಡ್‌ಗಳೇ ಅಲ್ಲದೆ, ಒಂದು ಸಣ್ಣ ದಂತದ ಅಥವಾ ಕೊಂಬಿನ ಕಡ್ಡಿ ಅಥವಾ ಸೂಜಿಯನ್ನು (ನೀಡಲ್) ಅಳವಡಿಸಿರುತ್ತಾರೆ. ಕೊಳವಿಯಲ್ಲಿನ ಎಂಜಲನ್ನು ಹೊರತೆಗೆದು ಶುದ್ಧಮಾಡಿ, ಗಾಳಿಯ ಚಲನೆಯನ್ನು ಸಲೀಸು ಮಾಡಲು ಇದನ್ನು ಬಳಸುತ್ತಾರೆ.
ತಿಮಿರಿ ಮತ್ತು ಬಾರಿ ಎಂಬ ಎರಡು ವಿಧವಾದ ನಾಗಸ್ವರಗಳಿವೆ. ತಿಮಿರಿಯು ಚಿಕ್ಕದಾಗಿದ್ದು ಹಿಂದುಸ್ತಾನಿಯ ಷಹನಾಯಿಯನ್ನು ಹೋಲುತ್ತದೆ. ತಿಮಿರಿ ನಾಗಸ್ವರದಲ್ಲಿ ಮಧ್ಯಮಸ್ವರ ನುಡಿಸುವುದು ಸ್ವಲ್ಪ ಕಷ್ಟವಾಗಿತ್ತು. ಬಾರಿ ನಾಗಸ್ವರವು ಎರಡರಿಂದ ಎರಡೂವರೆ ಅಡಿ ಉದ್ದವಿರುತ್ತದೆ. ಬಾರಿ ಎಂಬ ಪದ ಉರ್ದು ಭಾಷೆಯ ’ಭಾರಿ’ ಅಂದರೆ ಭಾರವಾದದ್ದು, ದೊಡ್ಡದು ಎಂಬ ಪದದಿಂದ ಬಂದಿದೆ. ಇದರ ಆಕಾರ ದೊಡ್ಡದಿದ್ದು, ಶ್ರುತಿ ಕಡಿಮೆ ಇರುತ್ತದೆ ಮತ್ತು ನಾದ ತುಂಬಾ ಗಂಭೀರವಾಗಿ ಇರುತ್ತದೆ. ಇಂತಹ ಅತ್ಯುತ್ತಮವಾದ ಬಾರಿ ನಾಗಸ್ವರಗಳನ್ನು ಮಾಡುತ್ತಿದ್ದವರು ನರಸಿಂಗನಪೇಟೆಯ ಎನ್ ಜಿ ಎನ್ ರಂಗನಾಥ ಆಚಾರಿ. ನಾಗಸ್ವರದಲ್ಲಿದ್ದ ಸಮಸ್ಯೆಗಳನ್ನು ಸರಿಪಡಿಸಿ ಅದನ್ನೊಂದು ಪರಿಪೂರ್ಣ ವಾದ್ಯವನ್ನಾಗಿ ಮಾಡಬೇಕು ಎನ್ನುವುದು ಟಿ ಎನ್ ರಾಜರತ್ನಂ ಪಿಳ್ಳೈ ಅವರ ಆಶಯವಾಗಿತ್ತು. ಅದಕ್ಕೆ ಬೇಕಾದ ಸಂಶೋಧನೆಯನ್ನು ಮಾಡಿ ಅವರಿಗೆ ಸಹಕರಿಸಿದವರು ನರಸಿಂಗನಪೇಟೆಯ ಎನ್ ಜಿ ಎನ್ ರಂಗನಾಥ ಆಚಾರಿ.
ಇದನ್ನು ಯಾರು, ಯಾವುದರಿಂದ ಮಾಡುತ್ತಾರೆ?
ನಾಗಸ್ವರವನ್ನು ಸಾಮಾನ್ಯವಾಗಿ ಆಚ್ಚಾ ಎಂದು ಕರೆಯುವ ಕರಿಮರದಿಂದ ಮಾಡುತ್ತಾರೆ. ಏಕೆಂದರೆ ಆಗ ಇದು ತೇವ ಹೀರಿಕೊಳ್ಳುವುದಿಲ್ಲ (ಒದ್ದೆಯಾಗುವುದಿಲ್ಲ). ಈ ಚೌಬೀನೆ ಕೊನೇ ಪಕ್ಷ ೨೦೦ ವರ್ಷಗಳಷ್ಟಾದರೂ ಹಳತಲ್ಲದಿದ್ದರೆ ಒಳ್ಳೆಯ ನಾಗಸ್ವರ ಮಾಡಲು ಸಾಧ್ಯವೇ ಇಲ್ಲ. ಅದು ಒಳ್ಳೆಯ ಮರ ಹೌದೋ ಅಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದಕ್ಕೆ ಅದರ ಕಪ್ಪು ಬಣ್ಣವೇ ಸಾಕ್ಷಿ. ಅದು ನೀರನ್ನು ಹೀರಿಕೊಳ್ಳುವುದಿಲ್ಲ. ಕನ್ನಡಿಯಂತೆ ಮಿರಿಮಿರಿ ಮಿಂಚುತ್ತಿರುತ್ತದೆ. ಅದರ ಪೀಪಿಯನ್ನು ತಮಿಳುನಾಡಿನಲ್ಲಿ ಸ್ಥಳೀಯ ವಾಗಿ ಬೆಳೆಯುವ ನಾನಲ್ ಎಂಬ ಒಂದು ಜಾತಿಯ ಬಿದಿರಿನಿಂದ ಮಾಡುತ್ತಾರೆ. ಕೆಲವೊಮ್ಮೆ ಇದಕ್ಕೆ ಬೇಕಾದ ಚೌಬೀನೆ ದೊರಕದಿದ್ದಾಗ ಇದನ್ನು ಕುಡ್ಡಲೂರು, ಪಾಂಡಿಚೇರಿ, ವಿಲ್ಲುಪುರಂ, ತಿರುವಣ್ಣಾಮಲೈ, ತಂಜಾವೂರು ಮತ್ತು ಆರಣಿ ಪ್ರದೇಶದ ಹಳೆಯ ಮನೆಗಳಲ್ಲಿ ದೊರಕುವ ಚೌಬೀನೆ ತೊಲೆಗಳಿಂದ ಮಾಡುತ್ತಾರೆ.
ನರಸಿಂಗನಪೇಟೆ ನಾಗಸ್ವರದ ತಯಾರಿಕೆ ಅತ್ಯಂತ ಹೆಸರುವಾಸಿ. ಈ ಗ್ರಾಮ ಕುಂಭಕೋಣಂನಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಸಿದ್ಧವಾಗುವ ನಾಗಸ್ವರಗಳಿಗೆ ಜಿಐ ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಇದೆ. ಸಮಾನ್ಯವಾಗಿ ಮೂರು ಜನ ಸೇರಿ ಒಂದು ನಾಗಸ್ವರ ಮಾಡುತ್ತಾರೆ. ವರ್ಷಕ್ಕೆ ೫ ಅಥವಾ ೬ ನಾಗಸ್ವರಗಳನ್ನು ಮಾಡುತ್ತಾರೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಕೆಲವರು ಮೋಟರ್ ಇಟ್ಟುಕೊಂಡು ಕೆಲಸಮಾಡುತ್ತಾರೆ. ಮೊದಲು ೩೦೦ ದಿನಗೂಲಿ ನೀಡುತ್ತಿದ್ದರು. ಇದು ತುಂಬಾ ಶ್ರಮ ಬೇಡುವ ಕೆಲಸ ಹಾಗಾಗಿ ಈಗ ೫೦೦ಕ್ಕೆ ಕಡಿಮೆ ಯಾರೂ ಸಿಗುವುದಿಲ್ಲ. ಸಾಮಾನ್ಯವಾಗಿ ನಾಗಸ್ವರ ಮಾಡುವವರ‍್ಯಾರೂ ಅದನ್ನು ನುಡಿಸುವುದಿಲ್ಲ. ನಾಗಸ್ವರದ ವಿಭಿನ್ನ ಭಾಗಗಳು ವಿಭಿನ್ನ ಮಾರುಕಟ್ಟೆಗಳಲ್ಲಿ ದೊರಕುತ್ತವೆ. ಇವು ಇನ್ನೂ ಗಡಿಕೈಗಾರಿಕೆಯಾಗಿಯೇ ಇದೆ. ಸುಮ್ಮನೆ ಅಂಗಡಿಗೆ ಹೋಗಿ ಒಂದು ಒಳ್ಳೆಯ ನಾಗಸ್ವರವನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲ.
ಲೌಕಿಕ ಅಲೌಕಿಕಗಳ ನಡುವಿನ ಸೇತುವೆ
ಆರಂಭದಿಂದಲೂ ದೇವಾಲಯದ ಜೊತೆಗೆ ತಳಕುಹಾಕಿಕೊಂಡೇ ಬೆಳೆದಿರುವ ವಾದ್ಯ ನಾಗಸ್ವರ. ದೇವಾಲಯದ ಆಚರಣೆಗಳ ಬಹು ಪ್ರಮುಖ ಭಾಗವಾಗಿ ನಾಗಸ್ವರ ಬೆಳೆಯಿತು ಎನ್ನುತ್ತಾರೆ. ಶಿಲ್ಪ ಹಾಗೂ ಶಾಸನಗಳಲ್ಲಿನ ದತ್ತಿ ವಿವರಗಳೂ ಇದಕ್ಕೆ ಸಮರ್ಥನೆ ನೀಡುತ್ತದೆ. ಜೊತೆಗೆ ಆರಂಭದಿಂದಲೂ ಡೋಲು/ತವಿಲ್ ಹೋಲುವಂತಹ ತಾಳವಾದ್ಯವೊಂದು ಅದರ ಜೊತೆಗೆ ಇರುವುದು ಕಾಣುತ್ತದೆ. ಬಹುಶಃ ಅದು ಮೊದಲಿನಿಂದಲೂ ಮೇಳವಾಗಿಯೇ ರೂಪುಗೊಂಡಿತು ಎನಿಸುತ್ತದೆ. ಕನ್ನಡದ ಓಲಗ ಎನ್ನುವ ಪದವೂ ಸುಮಾರಾಗಿ ಅದನ್ನೇ ಸೂಚಿಸುತ್ತದೆ. ಮುಖ್ಯವಾಗಿ ತಮಿಳುನಾಡು, ಕರ್ನಾಟಕ, ಆಂಧ್ರ ಹಾಗೂ ಸ್ವಲ್ಪ ಮಟ್ಟಿಗೆ ಕೇರಳ ಈ ರಾಜ್ಯಗಳ ಪ್ರಮುಖ ದೇವಾಲಯಗಳಲ್ಲಿ ನಾಗಸ್ವರದ ಮೇಳಗಳು ಸಾಕಷ್ಟು ಹಿಂದಿನಿಂದಲೂ ಅಂದರೆ ಸುಮಾರು ೧೪ ಅಥವಾ ೧೫ನೆಯ ಶತಮಾನದಿಂದಲೂ ಇದ್ದವು ಎನಿಸುತ್ತದೆ. ತಮಿಳುನಾಡಿನಲ್ಲಿ ಇಂತಹ ಮೇಳಗಳನ್ನು ಪೆರಿಯಮೇಳ ಎನ್ನುತ್ತಿದ್ದರು. ವಿಜಯನಗರ, ಚೋಳ ಮತ್ತು ತಂಜಾವೂರು ದೊರೆಗಳ ಆಳ್ವಿಕೆಯಲ್ಲಿ ನಾಗಸ್ವರಮೇಳಗಳು ಇದ್ದವು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಕೂಡ ದೊರಕಿವೆ. ಈ ಪೆರಿಯಮೇಳಗಳು ಕರ್ನಾಟಕ ಸಂಗೀತದ ಬೆಳವಣಿಗೆಯಲ್ಲಿ ತುಂಬಾ ಮಹತ್ತರವಾದ ಮತ್ತು ನಿರ್ಣಾಯಕವಾದ ಪಾತ್ರವನ್ನು ವಹಿಸಿದ್ದವು ಎನ್ನುವುದು ವಿದ್ವಾಂಸರ ಅಧ್ಯಯನದಿಂದ ಅರಿವಾಗುತ್ತದೆ.
ಈ ಮೇಳಗಳು ಸಂಗೀತದ ಬಹುಮುಖ್ಯವಾದ ಅಂಗವಾದ ಮನೋಧರ್ಮ ಸಂಗೀತ ಅಂದರೆ ರಾಗವನ್ನು ಬೆಳೆಸುವುದರಲ್ಲಿ ಬಹುದೊಡ್ಡ ಪಾತ್ರ ವಹಿಸಿತ್ತು. ಈ ಸಂಗೀತವನ್ನು ಎಲ್ಲಾ ವರ್ಗ, ಜಾತಿ, ಸಮುದಾಯದ ಜನರ ನಡುವೆ ಜನಪ್ರಿಯಗೊಳಿಸುವ ಸೇತುವೆಯಾಗಿಯೂ ಕೆಲಸಮಾಡಿತ್ತು. ದಿನವೂ ದೇವರಿಗೆ ಬೇರೆ ಬೇರೆ ಹೊತ್ತಿನಲ್ಲಿ ಸೇವೆಯ ಭಾಗವಾಗಿ ನುಡಿಸುತ್ತಿದ್ದ ನಾಗಸ್ವರದ ಸಂಗೀತ ಜನಸಾಮಾನ್ಯರ ಕಿವಿಯ ಮೇಲೆ ಬೀಳುತ್ತಿತ್ತು. ಹಾಗೆಯೇ ಹಬ್ಬ ಹರಿದಿನಗಳು, ದೇವಾಲಯದ ಸಮಾರಂಭಗಳಲ್ಲಿ ಇಡೀ ರಾತ್ರಿ ಗ್ರಾಮದೊಳಗೆ, ಇಲ್ಲವೇ ಊರೊಳಗೆ ಪ್ರತಿಯೊಂದು ರಸ್ತೆಯಲ್ಲಿಯೂ ತೇರು ಅಥವಾ, ಪಲ್ಲಕ್ಕಿಸಾಗುತ್ತಿತ್ತು. ಇಡೀ ರಾತ್ರಿ ನಾಗಸ್ವರವಾದಕರು ಅದರ ಜೊತೆಗೆ ನುಡಿಸುತ್ತಿದ್ದರು. ರಾತ್ರಿಯ ನೀರವತೆಯಲ್ಲಿ ಅದು ಬಹುದೂರದ ತನಕ ಕೇಳುತ್ತಿತ್ತು. ಹೀಗೆ ಜನಸಾಮಾನ್ಯರು ಅಪ್ರಜ್ಞಾಪೂರ್ವಕವಾಗಿಯೇ ಸಂಗೀತವನ್ನು ಆಲಿಸುತ್ತಾ, ಅದರ ಸೊಗಸು ಸವಿಯುವುದನ್ನು ಮೈಗೂಡಿಸಿಕೊಂಡರು. ಊರಿನ ಎಲ್ಲಾ ಜಾತಿ, ವರ್ಗ ಸಮುದಾಯಗಳ ಜನರಿಗೂ ಈ ಸಂಗೀತ ಪರಿಚಿತವಾಯಿತು. ಯಾವುದೇ ಭಾಷೆಯ ಹಂಗಿಲ್ಲದೆ ಶುದ್ಧ ಸಂಗೀತವನ್ನು ಮತ್ತು ಲಯವನ್ನು ಸ್ವೀಕರಿಸುವುದಕ್ಕೆ ಜನರಿಗೆ ಸಾಧ್ಯವಾಯಿತು. ದೇವಾಲಯದ ಕಲ್ಪಗಳೇ ಅಲ್ಲದೆ ಕೌಟುಂಬಿಕ ಆಚರಣೆಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಪೆರಿಯ ಮೇಳದ ಸಂಗೀತವನ್ನು ಬಳಸಲಾಗುತ್ತಿತ್ತು. ಇದರ ಮೇಳದಲ್ಲಿ ನಾಗಸ್ವರ, ತವಿಲ್, ತಾಳ ಮತ್ತು ಶ್ರುತಿಪೆಟ್ಟಿಗೆ ಇರುತ್ತಿದ್ದವು.
ಆಗೆಲ್ಲಾ ನಾಗಸ್ವರವಾದಕರು ಎಂಟು ಅಥವಾ ಹತ್ತು ತಾಸುಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ನುಡಿಸಬೇಕಾಗುತ್ತಿತ್ತು. ಇದರಿಂದ ನಾಗಸ್ವರವಾದಕರು ತಮಗರಿವಿಲ್ಲದೆಯೇ ರಾಗವನ್ನು ವಿಭಿನ್ನ ರೀತಿಗಳಲ್ಲಿ ಕಲ್ಪಿಸಿಕೊಂಡು ತಮ್ಮ ಕಲ್ಪನಾಶೀಲತೆಯಿಂದ ಸುದೀರ್ಘವಾಗಿ ಬೆಳೆಸುವ ಕಲೆಯನ್ನು ಮತ್ತು ಪರಿಣತಿಯನ್ನು ಮೈಗೂಡಿಸಿಕೊಂಡರು. ಅದೇ ರೀತಿಯಲ್ಲಿ ಅವರಿಗೆ ತವಿಲ್ ಸಹಕಾರ ನೀಡುತ್ತಿದ್ದವರಿಗೆ ನಡುನಡುವೆ ತುಂಬಾ ಹೊತ್ತು ಲಯವನ್ನು ಪ್ರಸ್ತುತಪಡಿಸುವಾಗ ಏಕತಾನತೆಯನ್ನು ಮೀರಿಕೊಳ್ಳುವ ಸವಾಲು ಮುಂದಿತ್ತು. ಸುಮ್ಮನೆ ಸರ್ವಲಘು ನಡೆಯನ್ನು ನುಡಿಸುತ್ತಾ ಹೋದರೆ ಕೇಳುಗರು ಆಸಕ್ತಿ ಕಳೆದುಕೊಳ್ಳುತ್ತಿದ್ದರು. ಹಾಗಾಗಿ ಅವರು ಲಯದಲ್ಲಿ ನಾಗಸ್ವರವಾದಕರಂತೆಯೇ ಅಪರಿಮಿತವಾದ ಸೃಜನಶೀಲತೆಯನ್ನು, ಹೊಸತನವನ್ನು ತೋರಿಸಬೇಕಿತ್ತು. ನಾಗಸ್ವರ ಮತ್ತು ತವಿಲ್ ವಾದಕರಿಬ್ಬರೂ ನಿರಂತರವಾಗಿ ಪ್ರಯೋಗಶೀಲರೂ ಮತ್ತು ಸೃಜನಶೀಲರೂ ಆಗಿರಬೇಕಿತ್ತು. ಹಾಗಾಗಿ ಪೆರಿಯಮೇಳದ ರಾಗ ಮತ್ತು ಲಯ ಎರಡೂ ತುಂಬಾ ಸಂಕೀರ್ಣವಾಗಿ ಬೆಳೆದವು.
ಕರ್ನಾಟಕ ಸಂಗೀತದಲ್ಲಿ ತ್ರಿಮೂರ್ತಿಗಳ ಕಾಲಕ್ಕಿಂತಲೂ ಮುಂಚಿತವಾಗಿಯೇ ರಾಗ ಮತ್ತು ಲಯದಲ್ಲಿ ಸಾಕಷ್ಟು ಪ್ರಯೋಗ ನಡೆದಿತ್ತು. ಈ ಪ್ರಕ್ರಿಯೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದವರು. ದಕ್ಷಿಣಭಾರತದ ಎಲ್ಲೆಡೆಯಲ್ಲಿಯೂ ಇವರು ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದ್ದವರು. ಶಿವನ ದೇವಾಲಯಗಳಲ್ಲಿ ಪಾಶುರಗಳನ್ನು ಹಾಡುತ್ತಿದ್ದವರನ್ನು ಓದುವಾರ್ ಎನ್ನುತ್ತಿದ್ದರು. ಪೆರಿಯಮೇಳದ ಹೆಚ್ಚಿನ ಕಲಾವಿದರು ಈ ಸಮುದಾಯದವರು. ಇವರ ಸಮುದಾಯದ ಮಹಿಳೆಯರು ದೇವದಾಸಿಯರು. ಇವರದ್ದು ಮಾತೃಪ್ರಧಾನ ಕುಟುಂಬ. ಹಾಗಿದ್ದಾಗ್ಯೂ ಪೆರಿಯಮೇಳ ಮಾತ್ರ ಹೆಚ್ಚು ಕಡಿಮೆ ಗಂಡಸರ ಏಕಸ್ವಾಮ್ಯ. ಹೆಂಗಸರು ಇದ್ದರೂ ಅವರ ಸಂಖ್ಯೆ ನಗಣ್ಯ. ಪೆರಿಯಮೇಳದ ಸಂಗೀತಗಾರರು, ದೇವದಾಸಿಯರಿಗೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ಕುಟುಂಬದ ಜೊತೆ ಒಳ್ಳೆಯ ಕೊಡುಕೊಳ್ಳುವಿಕೆಯತ್ತು. ನಾಗಸ್ವರದ ವಿಳಂಬನಡೆ ದೀಕ್ಷಿತರ ರಚನೆಗಳನ್ನು ಪ್ರಭಾವಿಸಿತ್ತು. ದೀಕ್ಷಿತರ ಕೃತಿಗಳನ್ನು ಕಾಪಿಟ್ಟು ತುಂಬಾ ಪ್ರಚುರಪಡಿಸಿದವರು ದೇವದಾಸಿಯರು ಮತ್ತು ಪೆರಿಯಮೇಳದವರು.
ನಾಗಸ್ವರ ಕ್ಷೇತ್ರದಲ್ಲಿ ಎಲ್ಲ ಕಾಲಕ್ಕೂ ಸಲ್ಲುವಂತಹ ಮಹಾನ್ ವಾದಕರಿದ್ದರು. ತಿರುಪ್ಪಾಂಬರಂ ನಟರಾಜಸುಂದರಂ ಪಿಳ್ಳೈ, ತಿರುಮಂಗಳಂ ನಟೇಶಪಿಳ್ಳೈ, ಮನ್ನಾರ್‌ಗುಡಿ ಚಿನ್ನ ಪಕ್ಕೀರಿಯಾ ಪಿಳ್ಳೈ, ಮಧುರೈ ಪೊನ್ನುಸ್ವಾಮಿ ಪಿಳ್ಳೈ, ತಿರುವೀಳಿಮಿಳಾಲೈ ಸುಬ್ರಮಣ್ಯ ಪಿಳ್ಳೈ, ಟಿ ಎಸ್ ಲಚ್ಚಪ್ಪ ಪಿಳ್ಳೈ, ಸೆಂಪನ್ನಾರ್‌ಕೋಯಿಲ್ ರಾಮಸ್ವಾಮಿ ಪಿಳ್ಳೈ, ಕಾರುಕುರಿಚ್ಚಿ ಅರುಣಾಚಲಂ, ಶೇಕ್ ಚಿನ್ನ ಮೌಲಾನ ಮುಂತಾದವರು. ಇನ್ನು ನಾಗಸ್ವರಕ್ಕೊಬ್ಬರೇ ಟಿ ಎನ್ ರಾಜರತ್ನಂ ಪಿಳ್ಳೈ.
ತಮಿಳುನಾಡಿನಲ್ಲಿ ಓದುವಾರ್ ಸಮುದಾಯದವರಲ್ಲದೆ ಅಂಬತ್ತನ್ ಎಂದರೆ ಕ್ಷೌರಿಕರು ನಾಗಸ್ವರ ನುಡಿಸುತ್ತಿದ್ದರು. ಇವರಿಗಿಂತ ತಾವು ಜಾತಿಯ ಏಣಿಯಲ್ಲಿ ಮೇಲಿದ್ದೇವೆ ಎನ್ನುವುದನ್ನು ತಿಳಿಯಪಡಿಸಲು ಓದುವಾರ್ ಸಮುದಾಯವು ಇಸೈ ವೆಳ್ಳಾಳರ್ ಎಂದರೆ ಸಂಗೀತ ಕೃಷಿಕರು ಎಂಬ ಹೊಸ ಹೆಸರಿಟ್ಟುಕೊಂಡರು. ಉತ್ತರ ತಮಿಳುನಾಡಿನ ಮರುತ್ತುವರ್ ಸಮುದಾಯ, ಕೇಂದ್ರ ತಮಿಳುನಾಡಿನ ಪರಿಯಾರಿ, ದಕ್ಷಿಣ ತಮಿಳುನಾಡಿನ ಪಂಡಾರಂ, ಮತ್ತು ಪಶ್ಚಿಮ ತಮಿಳುನಾಡಿನ ಮುದಲಿಯಾರ್, ಆಂಧ್ರಪ್ರದೇಶದ ನಾಯಡು ಮತ್ತು ಮಂಗಳ, ಕೇರಳದ ದಕ್ಷಿಣ ಜಿಲ್ಲೆಗಳ ಕಂಬಾರರು ಮತ್ತು ನಾಯರ್ ವೃತ್ತಿಯಿಂದ ನಾಗಸ್ವರವಾದಕರು. ಕರ್ನಾಟಕದ ಬಜಂತ್ರಿ, ದಕ್ಷಿಣ ಕರ್ನಾಟಕದ ನಾಯಿಂದರು, ಟಿ ನರಸೀಪುರದ ಸಮೀಪದಲ್ಲಿ ಹಲವು ದಲಿತ ಕುಟುಂಬಗಳು ನಾಗಸ್ವರ ನುಡಿಸುತ್ತಾರೆ. ಆ ಕುರಿತು ಇನ್ನೂ ಕ್ಷೇತ್ರಸಮೀಕ್ಷೆ ನಡೆಯಬೇಕಿದೆ. ಇವರಲ್ಲಿ ಮರುತ್ತುವರ್, ಪರಿಯಾರಿ, ಬಜಂತ್ರಿ, ನಾಯ್ಡು ಮತ್ತು ಮಂಗಳ ಸಮುದಾಯದವರು ಜಾತಿಯ ಏಣಿಯಲ್ಲಿ ತುಂಬಾ ಕೆಳಗಿದ್ದಾರೆ. ಹಾಗಾಗಿ ಅವರನ್ನು ತಿರಸ್ಕಾರದಿಂದ ಕಾಣುವ ಪರಿಪಾಠವಿದೆ. ಆಂಧ್ರದ ಗುಂಟೂರಿನಲ್ಲಿ, ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಕೆಲವು ಮುಸ್ಲಿಂ ಕುಟುಂಬಗಳು ಪೆರಿಯಮೇಳದ ಕಲಾವಿದರು. ತಮಿಳುನಾಡಿನ ಮಧುರೆಯಲ್ಲಿಯೂ ಇದನ್ನು ಕಾಣಬಹುದು. ಇವರಲ್ಲರಿಗೂ ಕರ್ನಾಟಕ ಸಂಗೀತದಲ್ಲಿ ಮತ್ತು ನಾಗಸ್ವರವಾದನದಲ್ಲಿ ಇರುವ ಪರಿಣತಿ, ಮನೋಧರ್ಮ ಪ್ರಶ್ನಾತೀತವಾದುದು ಎಂದು ಸಂಗೀತ ವಿದ್ವತ್‌ವಲಯ ಹಗೂ ಬ್ರಾಹ್ಮಣ ಕಲಾವಿದರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗಿದ್ದಾಗ್ಯೂ ಅವರನ್ನು ತಮಗಿಂತ ಕೀಳೆಂದು ಭಾವಿಸುತ್ತಿದ್ದರು. ಕಲಾವಿದರ ನಡುವೆ ಅವರಿಗೆ ಸಮಾನ ಹಾಗೂ ಗೌರವಯುತವಾದ ಸ್ಥಾನಮಾನ ಇರಲಿಲ್ಲ.
ಪೆರಿಯಮೇಳದ ಕೃತಿಭಂಡಾರ ಹೇಗಿತ್ತು?
ಪೆರಿಯಮೇಳ ಪ್ರಮುಖವಾಗಿ ರಾಗಕೇಂದ್ರಿತವಾಗಿತ್ತು. ದೇವಾಲಯದಲ್ಲಿ ದಿನದ ಆಯಾ ಸಮಯಕ್ಕೆ ಹೊಂದಿಕೊಳ್ಳುವಂತಹ ರಾಗಗಳನ್ನು ನುಡಿಸಬೇಕೆಂಬುದು ಪೂರ್ವನಿರ್ಧಾರಿತವಾಗಿರುತ್ತದೆ. ಬೆಳಗಿನ ಜಾವ ದೇವರನ್ನು ಎಬ್ಬಿಸುವಾಗ ಭೂಪಾಲ ರಾಗವನ್ನು ಮತ್ತು ಆರು ಗಂಟೆಗೆ ಭೌಳಿ, ಮಲಯಮಾರುತ, ಮಾಯಾಮಾಳವಗೌಳ, ನಾದನಾಮಕ್ರಿಯಾ, ರೇವಗುಪ್ತಿ, ವಲಚಿ ನುಡಿಸುತ್ತಿದ್ದರು. ಇನ್ನು ಬೆಳಗ್ಗಿನ ಪೂಜೆಯ ಹೊತ್ತಿನಲ್ಲಿ ಆಭೋಗಿ, ಆರಭಿ, ಅಸಾವೇರಿ, ಬಿಲಹರಿ, ಧನ್ಯಾಸಿ, ದೇವಗಾಂಧರಿ, ಕೇದಾರ, ಶುದ್ಧಬಂಗಾಳ, ಶುದ್ಧಸಾವೇರಿ, ಸುರಟಿ. ಸಂಜೆಗೆ (೫ ಗಂಟೆಗೆ) ಭೈರವಿ, ದರ್ಬಾರ್, ಕಲ್ಯಾಣಿ, ಕಾಂಭೋಜಿ, ನಾಟಕುರಂಜಿ, ಖರಹರಪ್ರಿಯ, ಶಂಕರಾಭರಣ, ಪಂತುವರಾಳಿ, ಷಣ್ಮುಗಪ್ರಿಯ ಮುಂತಾದ ರಾಗಗಳನ್ನು ನುಡಿಸಬೇಕಿತ್ತು. ಮುಸ್ಸಂಜೆಯಲ್ಲಿ ಆಭೇರಿ, ಆನಂದಭೈರವಿ, ಅಠಾಣ, ಕಾನಡಾ, ಕೇದಾರಗೌಳ, ಮೋಹನ ಮಂತಾದ ರಾಗಗಳನ್ನು ನುಡಿಸುತ್ತಿದ್ದರು. ರಾತ್ರಿ ನವರೋಜು ಮತ್ತು ಲಲಿತಾ ನುಡಿಸುತ್ತಿದ್ದರು. ಶಯನೋತ್ಸವಕ್ಕೆ ನೀಲಾಂಬರಿ. ಹೀಗೆ ಅವರ ದಿನ ಶಬ್ದಸೂತಕವಿಲ್ಲದೆಯೇ ಕಳೆದುಹೋಗುತ್ತಿತ್ತು. ಹಾಗಾಗಿ ರಾಗಗಳ ಚಕ್ರವರ್ತಿ ಅವರಲ್ಲದೆ ಬೇರಾರು ಆಗಬಹುದಿತ್ತು?
ಇನ್ನು ಉತ್ಸವಗಳು ’ಮಲ್ಲಾರಿ’ಯಿಂದ ಆರಂಭವಾಗುತ್ತಿತ್ತು. ಇದನ್ನು ಆರಂಭದಲ್ಲಿ ಮಾತ್ರ ನುಡಿಸುತ್ತಿದ್ದರು. ವಿಭಿನ್ನ ತಾಳಗಳಲ್ಲಿ ನುಡಿಸುತ್ತಿದ್ದರು. ಆದರೆ ರಾಗ ಮಾತ್ರ ಯಾವಾಗಲೂ ಗಂಭೀರನಾಟ. ಮೂರು ಕಾಲ ಮತ್ತು ವಿಭಿನ್ನ ನಡೆಗಳಲ್ಲಿ ನುಡಿಸುತ್ತಿದ್ದರು. ಇದರ ಪ್ರಸ್ತುತಿಯಲ್ಲಿ ಕಾಲಪ್ರಮಾಣ ನಿಖರವಾಗಿ, ಕರಾರುವಾಕ್ಕಾಗಿ ಇರಬೇಕಿತ್ತು. ಇದರಲ್ಲಿ ಜತಿಸ್ವರದಂತೆ ಕೇವಲ ಸ್ವರಪುಂಜಗಳಿರುತ್ತವೆ, ಸಾಹಿತ್ಯ ಇರುವುದಿಲ್ಲ. ಶಿವನನ್ನು ಮಲ್ಲಯುದ್ಧಕ್ಕೆ ಆಹ್ವಾನಿಸುತ್ತದೆ ಎನ್ನುವ ಕಾರಣಕ್ಕೆ ಇದಕ್ಕೆ ಮಲ್ಲಾರಿ ಎಂಬ ಹೆಸರು ಎನ್ನುತ್ತಾರೆ.
ಮೆರವಣಿಗೆ ಊರನ್ನು ಪ್ರವೇಶಿಸಿದಾಗ ಹೆಚ್ಚು ವಿಸ್ತರಿಸುವುದಕ್ಕೆ ಅವಕಾಶವಿರುವ ರಾಗವನ್ನು ನಾಗಸ್ವರವಾದಕರು ನುಡಿಸುತ್ತಿದ್ದರು. ಅದನ್ನು ನೆಮ್ಮದಿಯಿಂದ ಎರಡು ಮೂರು ಗಂಟೆಗಳ ಕಾಲ ವಿಸ್ತರಿಸುತ್ತಿದ್ದರು. ನಾಗಸ್ವರ ವಿದ್ವಾನ್ ಚಿನ್ನ ಪಕ್ಕಿರಿಯವರು ಬೇಗಡೆಯನ್ನು ಆರುಗಂಟೆಗಳ ಕಾಲ ವಿಸ್ತರಿಸಿದ್ದರೆಂದು ಪ್ರತೀತಿಯಿದೆ. ರಾಗವನ್ನು ವಿಸ್ತಾರವಾಗಿ ನುಡಿಸಿದ ಅನಂತರ ಪಲ್ಲವಿಯನ್ನು ಪ್ರಾರಂಭಿಸುತ್ತಿದ್ದರು. ಪೆರಿಯ ಮೇಳದ ವಿಶೇಷ ಪರಿಣತಿಯ ಕ್ಷೇತ್ರ ಪಲ್ಲವಿ. ಕರ್ನಾಟಕ ಸಂಗೀತಕ್ಕೆ ಇದು ಪೆರಿಯ ಮೇಳದ ಕೊಡುಗೆ ಎನ್ನುತ್ತಾರೆ. ಇನ್ನು ರಕ್ತಿ ಎನ್ನುವುದು ಕೂಡ ನಾಗಸ್ವರವಾದಕರ ಒಂದು ವಿಶೇಷ. ರಕ್ತಿ ಮೇಳವು ಪಲ್ಲವಿಯಷ್ಟೇ ಕ್ಲಿಷ್ಟವಾದ ಭಾಗ. ಸಾಮಾನ್ಯವಾಗಿ ಇದನ್ನು ಕೀರವಾಣಿ, ಕಾಂಬೋಧಿ ಅಥವಾ ನಾಟಕುರಂಜಿಯಲ್ಲಿ ನುಡಿಸುತ್ತಾರೆ. ಒಂದರ್ಥದಲ್ಲಿ ಇದು ತವಿಲ್ ವಿದ್ವಾಂಸರಿಗೆ ಒಂದು ಸವಾಲು ಕೂಡ. ಇದಕ್ಕೆ ಸಾಹಿತ್ಯ ಇರುವುದಿಲ್ಲ. ಆದರೆ ಮಿಶ್ರಗತಿಯ ’ಧೀಂ ತಕ ಧಿತ್ತೋಂ’ ಎಂಬ ಸ್ಥಿರವಾದ ಸೂತ್ರವಿರುತ್ತದೆ. ಮಿಶ್ರದ ನಂತರ ತಿಶ್ರ ಮತ್ತು ಚತುರಶ್ರವನ್ನು ನುಡಿಸುತ್ತಾರೆ. ಸಂಪ್ರದಾಯದ ಪ್ರಕಾರ ರಕ್ತಿ ಎನ್ನುವುದು ನಟರಾಜನ ನೃತ್ಯವೇ ಆಗಿದೆ. ಈ ರಕ್ತಿಮೇಳವೇ ಪಲ್ಲವಿಯ ಮೂಲ ಎಂದು ಕೆಲವರು (ಬಿ ಎಂ ಸುಂದರಂ) ಅಭಿಪ್ರಾಯ ಪಡುತ್ತಾರೆ. ರಕ್ತಿ ನುಡಿಸುವುದರಲ್ಲಿ ಸೆಂಬನ್ನಾರ್‌ಕೋಯಿಲ್ ರಾಮಸಾಮಿ ಪಿಳ್ಳೈ (೧೮೮೦-೧೯೨೩) ಅತ್ಯಂತ ಶ್ರೇಷ್ಠರು. ರಕ್ತಿಮೇಳಕ್ಕೆ ತುಂಬಾ ಸೊಗಸಾಗಿ ಹೊಂದಿಕೆಯಾಗುತ್ತಿದ್ದ ರಾಗ ನಾಟಕುರಂಜಿ ಎನ್ನುತ್ತಾರೆ.
ರಾಗವನ್ನು ನುಡಿಸುವಾಗ ಮಧ್ಯ ಮಧ್ಯದಲ್ಲಿ ತುಂಬಾ ಸಂಕೀರ್ಣವಾದ ಲಯವಿನ್ಯಾಸಗಳನ್ನು ಒಳಗೊಂಡಂತೆ ತವಿಲ್ ನುಡಿಸುತ್ತಿದ್ದರು. ಎರಡು ಮೂರ ಗಂಟೆಗಳ ಕಾಲ ನುಡಿಸಿ ಸುಸ್ತಾಗಿರುತ್ತಿದ್ದ ನಾಗಸ್ವರವಾದಕನಿಗೆ ಇದು ಒಂದಿಷ್ಟು ವಿಶ್ರಾಂತಿಯನ್ನು ನೀಡುತ್ತಿತ್ತು. ಹೀಗೆ ರಾಗವನ್ನು ನುಡಿಸಿದ ನಂತರ ಪಲ್ಲವಿಯನ್ನು ನುಡಿಸುತ್ತಿದ್ದರು. ಕೆಲವು ಹಿರಿಯ ಕಲಾವಿದರ ಪ್ರಕಾರ ಪಲ್ಲವಿಯನ್ನು ಸಾರ್ವಜನಿಕ ಪ್ರಸ್ತುತಿಗಳಲ್ಲಿ ಹೇಗೆ ನುಡಿಸಬೇಕು ಎನ್ನುವುದನ್ನು ರೂಪಿಸಿ ಬೆಳೆಸಿದವರು ನಾಗಸ್ವರ ಕಲಾವಿದರು. ಮೆರವಣಿಗೆ ಕೊನೆಯ ಹಂತಕ್ಕೆ ಬರುತ್ತಿರುವಾಗ ಪದಂ, ಜಾವಳಿ ಮತ್ತು ತಿರುಪ್ಪುಗಳ್ ನುಡಿಸುತ್ತಿದ್ದದು. ಮೊದಲೆರಡು ಪ್ರಕಾರ ಮೂಲತಃ ನೃತ್ಯಕ್ಕೆ ಸೇರಿದ್ದವು. ಅವುಗಳನ್ನು ನಾಗಸ್ವರವಾದನಕ್ಕೆ ಅಳವಡಿಸಿಕೊಳ್ಳಲಾಯಿತು. ತಿರುಪ್ಪುಗಳ್ ೧೫ನೆಯ ಶತಮಾನಕ್ಕೆ ಸೇರಿದ ಅರುಣಗಿರಿನಾಥರ್ ಅವರ ರಚನೆ. ಅವುಗಳು ವಿಶೇಷವಾದ ಅಪರೂಪದ ತಾಳಗಳಲ್ಲಿ ಇದ್ದವು. ಉತ್ಸವಮೂರ್ತಿ ದೇವಾಲಯದ ಒಳಕ್ಕೆ ಮತ್ತೆ ಪ್ರವೇಶಿಸುವಾಗ ಸಾವೇರಿ ರಾಗ ರೂಪಕ ತಾಳದಲ್ಲಿದ್ದ ’ಹೆಚ್ಚರಿಕಾ’ ಎನ್ನುವ ಕೃತಿಯಿಂದ. ನಾದವನ್ನೇ ಪರಮಾತ್ಮ ಎಂದು ಭಾವಿಸುವುದಾದಲ್ಲಿ ಅದಕ್ಕೆ ಪೆರಿಯಮೇಳಕ್ಕಿಂತ ನಿಜವಾದ ಉದಾಹರಣೆ ಸಾಧ್ಯವೇ ಇಲ್ಲ. ಮುತ್ತುಸ್ವಾಮಿ ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರು ಆರ್ಕಾಟ್ ಪ್ರಾಂತ್ಯದಿಂದ ತಿರುವಾರೂರಿಗೆ ಬಂದರು. ಅವರು ತಿರುವಾರೂರಿನ ತ್ಯಾಗರಾಜಸ್ವಾಮಿಗಳ ದೇಗುಲದಲ್ಲಿ ನಾಗಸ್ವರ ಮೇಳದ ಕೃತಿಭಂಡಾರವನ್ನು, ನುಡಿಸಬೇಕಾದ ಅನುಕ್ರಮಣಿಯನ್ನು ತುಂಬಾ ವ್ಯವಸ್ಥಿತ ಪಡಿಸಿದರು ಎನ್ನುತ್ತಾರೆ. ಪ್ರತಿಯೊಂದು ದೇವಾಲಯದಲ್ಲಿಯೂ ಈ ಕ್ರಮದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿರುತ್ತವೆ. ನಾಗಸ್ವರ ಮೇಳದ ಸಂಪ್ರದಾಯವನ್ನು ಕುರಿತು ತಮಿಳುನಾಡಿನಲ್ಲಿ ಆದಷ್ಟು ಅಧ್ಯಯನ ಮತ್ತು ಮಾಹಿತಿ ದಾಖಲಾತಿ ಕರ್ನಾಟಕದಲ್ಲಿ ನಡೆದಿಲ್ಲ. ಇದು ಬಹಳಷ್ಟು ಅಧ್ಯಯನಕ್ಕೆ ಅವಕಾಶವಿರುವ ಕ್ಷೇತ್ರ. ದೇವಾಲಯದ ಕಲ್ಪಗಳೇ ಅಲ್ಲದೆ ಕೌಟುಂಬಿಕ ಆಚರಣೆಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಪೆರಿಯ ಮೇಳದ ಸಂಗೀತವನ್ನು ಬಳಸಲಾಗುತ್ತಿತ್ತು. ಇದರ ಮೇಳದಲ್ಲಿ ನಾಗಸ್ವರ, ತವಿಲ್, ತಾಳ ಮತ್ತು ಶ್ರುತಿಪೆಟ್ಟಿಗೆ ಇರುತ್ತಿದ್ದವು.
ಬದಲಾವಣೆಯ ಗಾಳಿ
ಇಪ್ಪತ್ತನೆಯ ಶತಮಾನ ಭಾರತ ಹಲವು ಬಗೆಯ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾಯಿತು. ವಸಾಹತುಶಾಹಿಯ ಸಾಂಸ್ಕೃತಿಕ ಪೂರ್ವಗ್ರಹಗಳು ಮತ್ತು ನೈತಿಕ ಕಲ್ಪನೆಗಳಿಂದ ಇಲ್ಲಿನ ಸಂಗೀತ, ನೃತ್ಯ ಮತ್ತು ಅದರ ಕಲಾತ್ಮಕತೆ ಗಂಭೀರ ರೂಪದ ಪ್ರಭಾವಕ್ಕೆ ಒಳಗಾಯಿತು. ಅದರಿಂದ ಇಲ್ಲಿನ ಸಂಗೀತ, ನೃತ್ಯ, ಅದರಲ್ಲಿ ತೊಡಗಿಕೊಂಡಿದ್ದ ಕಲಾವಿದರ ಬದುಕು ಕೂಡ ಬಹುದೊಡ್ಡ ಬದಲಾವಣೆಗೆ ಒಳಗಾಯಿತು. ವಸಾಹತು ಪೂರ್ವಗ್ರಹಗಳಿಗೆ ರಾಜಕೀಯ ಅಧಿಕಾರವೂ ಒತ್ತಾಸೆಯಾಗಿ ಇತ್ತು. ಅದರಿಂದ ದೇವಾಲಯ ಮತ್ತು ಅದನ್ನು ಆಧರಿಸಿದ ಸಂಗೀತನೃತ್ಯಗಳಿಗೆ ದೊರಕುತ್ತಿದ್ದ ಪೋಷಣೆ ಗಮನಾರ್ಹವಾಗಿ ಕಡಮೆಯಾಯಿತು. ಇಡೀ ಆರ್ಥಿಕ ವ್ಯವಸ್ಥೆಯಲ್ಲಿ ಆದ ಏರುಪೇರುಗಳಿಂದ ಎಲ್ಲರ ಬದುಕಿನ ಕ್ರಮದಲ್ಲೂ ಹಲವು ಬಗೆಯ ಬದಲಾವಣೆಗಳು ಆದವು. ನಗರ ಪ್ರದೇಶಗಳಿಗೆ ವಲಸೆ ಬರುವುದು ಸಾಮಾನ್ಯವಾಯಿತು. ನಗರಪ್ರದೇಶಗಳಲ್ಲಿ ಸಂಗೀತದ ಪೋಷಣೆಗೆ ಸಭೆ ಎನ್ನುವ ಹೊಸ ವ್ಯವಸ್ಥೆ ಬಂದಿತು. ಕ್ರಮೇಣ ದೇವಾಲಯ, ರಾಜರ ಆಸ್ಥಾನ, ಮತ್ತು ಶ್ರೀಮಂತ ಕಲಾಪೋಷಕರ ಸ್ಥಾನವನ್ನು ಸಭೆಗಳು ಪಡೆದವು. ಮುಕ್ತ ಹೊರಾಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಪ್ರಸ್ತುತಿಗಳು ಧ್ವನಿವರ್ಧಕ ವ್ಯವಸ್ಥೆಯೊಡನೆ ಒಳಾಂಗಣಕ್ಕೆ ಸ್ಥಳಾಂತರವಾಯಿತು. ಹೊಸ ಮಾಧ್ಯಮಗಳಾದ ರೇಡಿಯೋ ಮತ್ತು ಗ್ರಾಮಾಫೋನ್ ಅಸ್ತಿತ್ವಕ್ಕೆ ಬಂದವು. ನಾಗಸ್ವರದ ಬಗ್ಗೆ ಹಿಂದಿದ್ದ ಭೇದಭಾವಗಳು ಈಗ ಹೊಸರೂಪದಲ್ಲಿ ಮುಂದುವರಿದವು.
ನಗರದ ಬದುಕಿನ ಗತಿ ಮತ್ತು ಕ್ರಮ ಹೆಚ್ಚು ವೇಗವಾಗಿದ್ದವು. ಅವರಿಗೆ ಬದುಕಿನಲ್ಲಿ ಪುರುಸೊತ್ತು ಇರಲಿಲ್ಲ. ಇವು ನಗರದ ಕೇಳುವವರ್ಗ, ಅವರ ಅಭಿರುಚಿ, ನಿರೀಕ್ಷೆಗಳನ್ನು ಬದಲಿಸಿದವು. ಅವರ ಕಲಾನುಭವದ ಕಲ್ಪನೆ, ಸಂಗೀತಜ್ಞಾನ ಮತ್ತು ನಿರೀಕ್ಷೆಗಳು ಹಿಂದಿನವರಿಗಿಂತ ಭಿನ್ನವಾಗಿದ್ದವು. ಹಿಂದಿನವರ ವಿಸ್ತಾರವಾದ, ಗಹನವಾದ ಮನೋಧರ್ಮ ಇವರಿಗೆ ಕ್ಲಿಷ್ಟವೆನಿಸಿತ್ತು. ಹೊಸ ಮಾಧ್ಯಮಗಳು ಸಂಗೀತವು ಚಿಕ್ಕದಾಗಿ, ಕ್ಲುಪ್ತವಾಗಿ ಇರಬೇಕೆಂದು ಬಯಸುತ್ತಿತ್ತು. ಅವರಿಗೆ ಸಂಕ್ಷಿಪ್ತವಾಗಿದ್ದು, ಇಂಪಾಗಿ, ಹೆಚ್ಚು ಸಾಹಿತ್ಯವಿರುವ ರಚನೆಗಳು ಪ್ರಿಯವಾದವು. ವ್ಯಾಪಕವಾಗಿ ಜನರನ್ನು ತಲುಪುತ್ತಿದ್ದ ಸಿನಿಮಾ ಸಂಗೀತವೂ ಜನರ ಅಭಿರುಚಿಯನ್ನು ಪ್ರಭಾವಿಸಿತ್ತು.
ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದ ಕಾರ್ಮಿಕರು, ರಿಕ್ಷಾ ಮತ್ತು ಗಾಡಿ ಚಾಲಕರು, ಮತ್ತು ಅಧಿಕಾರಿಶಾಹಿಗಳ ಬದುಕಿನ ಕ್ರಮವೇ ಬದಲಾಗಿ, ಬೆಳಗಾಗುತ್ತಿದ್ದಂತೆ ಅವರು ಕೆಲಸದ ಕರೆಗೆ ಓಗೊಡಬೇಕಿತ್ತು. ಹಾಗಾಗಿ ನಡುರಾತ್ರಿಯವರೆಗೆ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಅವರ ಬದುಕಿನಲ್ಲಿ ಸಮಯವಿರಲಿಲ್ಲ. ತೆರೆದ ಸ್ಥಳಗಳಿಂದ ಒಳಾಂಗಣಕ್ಕೆ ಸ್ಥಳಾಂತರಗೊಂಡ ಸಂಗೀತವನ್ನು ನಿಯಂತ್ರಿಸುತ್ತಿದ್ದವರು, ಮೇಲ್ಜಾತಿಯವರು ಮತ್ತು ದೊಡ್ಡ ಉದ್ದಿಮೆಯ ಮಾಲಿಕರು. ಇವರ ಚಿಂತನೆಯಿಂದಾಗಿ ಆ ಸ್ಥಳಗಳಲ್ಲಿ ಒಂದು ಅಗೋಚರವಾದ ತಡೆಗೋಡೆ ರೂಪುಗೊಂಡಿತ್ತು. ಸಂಗೀತ ಶಿಕ್ಷಣ ಸಂಪೂರ್ಣವಾಗಿ ಕೈಗಳನ್ನು ಬದಲಾಯಿಸಿತ್ತು. ಅದು ಮೇಲ್ಜಾತಿಯವರ ಅಧೀನದಲ್ಲಿತ್ತು. ಉಳಿದವರೆಲ್ಲಾ ಅದರಿಂದ ದೂರಾಗಿದ್ದರು.
ಪೆರಿಯಮೇಳದ ಪ್ರಸ್ತುತಿಯಲ್ಲಿ ಗಮನಾರ್ಹ ಬದಲಾವಣೆ ಆಗಿದ್ದು ೧೯೩೦ರ ದಶಕದಲ್ಲಿ. ಮನೋಧರ್ಮದ ರಾಗವಿಸ್ತಾರ ಕಡಮೆಯಾಗಿ ಕೃತಿಗಳ ಪ್ರಸ್ತುತಿ ಹೆಚ್ಚಾಯಿತು. ಪೆರಿಯಮೇಳದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕೃತಿ ಪ್ರಸ್ತುತಿ ಮಾಡಿದವರು ತಿರುವಿಳಿಮಿಳಾಲೈ ಸೋದರರು ಎನ್ನುತ್ತಾರೆ. ಅವರು ಕೃತಿಗಳನ್ನು ಕೊನೇರಿರಾಜಪುರಂ ವೈದ್ಯನಾಥ ಅಯ್ಯರ್ ಎಂಬ ಖ್ಯಾತ ಗಾಯಕರಿಂದ ಕಲಿತರು. ಮೊದಮೊದಲು ಕೃತಿಪ್ರಸ್ತುತಿಗೆ ಮುನ್ನ ದೀರ್ಘವಾದ ರಾಗಾಲಾಪನೆ ಇರುತ್ತಿತ್ತು. ನಂತರ ಕೆಲವೊಮ್ಮೆ ಸುಮ್ಮನೆ ಒಂದಾದ ಮೇಲೆ ಒಂದರಂತೆ ಕೃತಿಗಳನ್ನು ನುಡಿಸಲು ಆರಂಭಿಸಿದರು. ಆಗ ಮುಖ್ಯ ನಾಗಸ್ವರವಾದಕ ಕೃತಿ ನುಡಿಸುವಾಗ ಜೊತೆಯಲ್ಲಿ ಒಬ್ಬ ಸಹನಾಗಸ್ವರವಾದಕ ನುಡಿಸುವ ಪರಿಪಾಠ ಪ್ರಾರಂಭವಾಯಿತು ಎನ್ನುತ್ತಾರೆ.
ಬದಲಾವಣೆಯ ಹರಿಕಾರ – ಟಿ ಎನ್ ರಾಜರತ್ನಂ ಪಿಳ್ಳೈ
ಇಂತಹ ಸಂಕೀರ್ಣ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗಿದ್ದು ಕೆಲವೇ ಕೆಲವು ಪ್ರತಿಭಾವಂತರಿಗೆ ಮಾತ್ರ. ಗಾಯನದಲ್ಲಿ ಅರಿಯಾಕುಡಿಯವರು ವಹಿಸಿದ ಪಾತ್ರವನ್ನು ನಾಗಸ್ವರ ಕ್ಷೇತ್ರದಲ್ಲಿ ಟಿ ಎನ್ ರಾಜರತ್ನಂ ಪಿಳ್ಳೈ ವಹಿಸಿದರು. ಅವರನ್ನು ನಾಗಸ್ವರ ಚಕ್ರವರ್ತಿ ಎಂದೇ ಕರೆಯುತ್ತಿದ್ದರು. ಅವರು ಹಲವು ತಲೆಮಾರುಗಳಿಗೆ ಒಮ್ಮೆ ಹುಟ್ಟುವಂತಹ ಮಹಾನ್ ಮೇಧಾವಿ. ಅವರು ನಾಗಸ್ವರ ಎನ್ನುವ ಮಾಧ್ಯಮವನ್ನೇ ಬದಲಿಸಿದರು. ಆ ಮೂಲಕ ಅದರಿಂದ ಹೊಮ್ಮುವ ಸಂಗೀತವನ್ನು ಕೂಡ.
ಅವರು ನಾಗಸ್ವರದಲ್ಲಿ ಸಾಕಷ್ಟು ಸುಧಾರಣೆ ತಂದರು. ಹಿಂದೆ ತಿಮಿರಿ ನಾಗಸ್ವರವನ್ನು ಹೆಚ್ಚಾಗಿ ಬಳಸುತ್ತಿದ್ದರು. ಅದು ಗಾತ್ರದಲ್ಲಿ ಚಿಕ್ಕದಾಗಿತ್ತು. ಅದರ ಶ್ರುತಿ ಐದು ಅಥವಾ ಐದೂವರೆ ಇರುತ್ತಿತ್ತು. ರಾಜರತ್ನಂ ಬಾರಿ ನಾಗಸ್ವರವನ್ನು ಬಳಕೆಗೆ ತಂದರು. ಶ್ರುತಿಯನ್ನು ಎರಡು ಅಥವಾ ಎರಡೂವರೆ ಮನೆಗೆ ಇಳಿಸಿದರು. ನಾಗಸ್ವರದ ರಚನೆಯಲ್ಲಿ ಒಂದಿಷ್ಟು ಬದಲಾವಣೆ ತಂದರು. ಬಾರಿಯ ಬಳಕೆಯಿಂದಾಗಿ ನಾಗಸ್ವರ ಒಳಾಂಗಣ ಕಚೇರಿ ವಾದ್ಯವಾಗುವುದಕ್ಕೆ ಸಾಧ್ಯವಾಯಿತು. ಅಷ್ಟೇ ಅಲ್ಲ, ಅಲ್ಲಿಯವರೆಗೆ ನಾಗಸ್ವರ ವಿದ್ವಾಂಸರಿಗೆ ಕಷ್ಟವಾಗಿದ್ದ ಶುದ್ಧ ಮಧ್ಯಮವನ್ನು ನುಡಿಸುವುದಕ್ಕೆ ಇದು ದಾರಿ ಮಾಡಿಕೊಟ್ಟಿತು. ಇದರಿಂದ ಕೇಳುಗರು ಬರೀ ತೋಡಿಯಷ್ಟೇ ಅಲ್ಲ, ಎಲ್ಲಾ ಶುದ್ಧ ಮಧ್ಯಮ ರಾಗಗಳನ್ನೂ ಅಪಸ್ವರದ ಭೀತಿಯಿಲ್ಲದೆ ಕೇಳುವಂತಾಯ್ತು. ಅವರು ಒಟ್ಟುವಿಗೆ ಬದಲು ಶ್ರುತಿಪೆಟ್ಟಿಗೆಯನ್ನು ಮತ್ತು ಕಚೇರಿಯಲ್ಲಿ ತಂಬೂರಿಯ ಶ್ರುತಿಯನ್ನು ಬಳಸಲಾರಂಭಿಸಿದರು. ಪಿಟೀಲು ಮತ್ತು ಮೃದಂಗವನ್ನು ಪಕ್ಕವಾದ್ಯಕ್ಕೆ ಹಾಕಿಕೊಂಡವರಲ್ಲಿ ರಾಜರತ್ನಂ ಮೊದಲಿಗರು. ಸಂಗೀತಗಾರರೊಂದಿಗೆ, ಸಂಗೀತಜ್ಞರೊಂದಿಗೆ ನಿರಂತರವಾಗಿ ಚರ್ಚಿಸುತ್ತಾ ಕಲಿಕೆಯನ್ನು ಸದಾ ಜೀವಂತವಾಗಿಟ್ಟುಕೊಂಡಿದ್ದರು.
ಅವರು ನಾಗಸ್ವರಕ್ಕೆ ಉಳಿದ ವಾದ್ಯಗಳ ಜೊತೆಗೆ ಸಮಾನ ಸ್ಥಾನಮಾನ ದೊರಕಿಸಲು ಹೆಣಗಾಡಿದರು. ನಾಗಸ್ವರ, ತವಿಲ್ ವಿದ್ವಾಂಸರಿಗೆ ಸೂಕ್ತವಾದ ಸ್ಥಾನಮಾನ, ಗೌರವಾದರಗಳು ಸಿಗುತ್ತಿರಲಿಲ್ಲ. ಅವರನ್ನು ಸ್ವಲ್ಪ ಕೀಳಾಗಿಯೇ ಕಾಣುತ್ತಿದ್ದರು. ಅವರು ಎಲ್ಲಾ ಕಡೆಯೂ ನಿಂತೇ ನುಡಿಸಬೇಕಿತ್ತು. ತಿರುವೈಯ್ಯಾರಿನ ತ್ಯಾಗರಾಜ ಉತ್ಸವದಲ್ಲಿ ಉಳಿದವರೆಲ್ಲ ಕುಳಿತು ನುಡಿಸಿದರೆ, ನಾಗಸ್ವರವಾದಕರು ಮಾತ್ರ ನಿಂತೆ ನುಡಿಸಿಬೇಕಿತ್ತು. ರಾಜರತ್ನಂ ಅವರಿಗೆ ಇದು ಬಿಲ್‌ಕುಲ್ ಸರಿ ಅನ್ನಿಸಲಿಲ್ಲ. ಆತ್ಮಗೌರವ ಅವರಿಗೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ಕಲಾವಿದನಾಗಿ, ಮನುಷ್ಯನಾಗಿ ಘನತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವೆನಿಸಿತ್ತು. ಹಾಗಾಗಿ ಅವರು ಸಂಘಟಕರ ಮೇಲೆ ಒತ್ತಡ ಹೇರಿದರು. ಹಾಗಾಗಿ ಮನಸ್ಸಿಲ್ಲದಿದ್ದರೂ ಸಂಘಟಕರು ಇವರ ಒತ್ತಾಯಕ್ಕೆ ಮಣಿಯುತ್ತಿದ್ದರು. ತಾನು ಕುಳಿತೇ ನುಡಿಸುವುದು ಎಂದು ಹೇಳಿ ಅದಕ್ಕಾಗಿ ವೇದಿಕೆಗಳನ್ನು ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರು. ಮದುವೆಯ ಮೆರವಣಿಗೆಯಲ್ಲಿ ಹಲವು ಕಡೆ ವೇದಿಕೆ ಹಾಕಿಸಿಕೊಂಡು, ಕುಳಿತು ನುಡಿಸುತ್ತಿದ್ದರು. ಕೆಲವೊಮ್ಮೆ ಲಾರಿಗಳ ಮೇಲೆ ವೇದಿಕೆಗಳನ್ನು ಹಾಕಿಸಿಕೊಂಡು ಅದರಲ್ಲಿ ಕುಳಿತು ನುಡಿಸಿದ್ದಾರೆ. ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಆರಾಧನೆಯ ಮೆರವಣಿಗೆಯಲ್ಲಿಯೂ ಇವರು ಕುಳಿತೇ ನುಡಿಸಿದರು.
ಮೇಳದವರು ಮೇಲುದಿಗೆ ಧರಿಸುವಂತೆ ಇರಲಿಲ್ಲ. ರಾಜರತ್ನಂ ಮೇಲುದಿಗೆ ತೊಡದೆ, ಬರೀ ಮೈಯಲ್ಲಿ ನುಡಿಸುತ್ತಿರಲಿಲ್ಲ. ಸೊಗಸಾದ ಸಿಲ್ಕ್ ಕುರ್ತಾ ಹಾಗು ಧೋತಿ ತೊಡುತ್ತಿದ್ದರು. ಜುಟ್ಟು ತೆಗೆದು ಚೆನ್ನಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದರು. ಕೆಲಮೊಮ್ಮೆ ಷೇರ್‌ವಾನಿ ಪೈಜಾಮಾ ಧರಿಸುತ್ತಿದ್ದರು. ಕೋಟು ಟೈ ಹಾಕಿದ್ದೂ ಉಂಟು! ಸ್ವಲ್ಪ ಅತಿ ಅನಿಸುವಂತಹ ಕಾರಿನ ಹೆಡ್‌ಲೈಟ್ ಗಾತ್ರದ ವಜ್ರದ ಓಲೆಗಳನ್ನು ಧರಿಸುತ್ತಿದ್ದರು. ಸೊಗಸಾದ ಶೂಸುಗಳನ್ನು ಹಾಕಿಕೊಳ್ಳುತ್ತಿದ್ದರು. ಎಲ್ಲದರಲ್ಲೂ ಚಕ್ರವರ್ತಿಯೇ. ಅಮೇರಿಕೆಯ ಕಾರು ಬಳಸುತ್ತಿದ್ದರು. ಚಿನ್ನದ ದೊಡ್ಡ ಪಾನ್ ಡಬ್ಬಿ, ಅದನ್ನು ಹೊತ್ತು ಬರುವುದಕ್ಕೆ ಒಬ್ಬ ಸೇವಕ.
ಹೀಗೆ ಉಳಿದೆಲ್ಲ ಕ್ಷೇತ್ರಗಳ ಪರಿವರ್ತನೆಯ ಹರಿಕಾರರಂತೆ ಅವರ ಅಕ್ಷರಶಃ ಒಬ್ಬ ಕ್ರಾಂತಿಕಾರಿಯಾಗಿದ್ದರು. ಸೃಜನಶೀಲರೂ ಪ್ರಯೋಗಶೀಲರೂ ಆಗಿದ್ದರು. ಒಳಾಂಗಣಕ್ಕೆ ನಾಗಸ್ವರ ಹೊಂದಿಕೊಳ್ಳುವುದಿಲ್ಲ ಎನ್ನುವ ಟೀಕೆಯ ಹಿಂದಿನ ವಾಸ್ತವವನ್ನು ಮತ್ತು ನಗರಕೇಂದ್ರಿತ ಬದುಕಿನ ಒತ್ತಡಗಳು ಹಾಗೂ ಆ ಸ್ಥಿತ್ಯಂತರದ ಪರಿಣಾಮಗಳನ್ನು ಗ್ರಹಿಸಿದ ಅಗ್ರಗಣ್ಯರು ರಾಜರತ್ನಂ. ಹಾಗಾಗಿಯೇ ನಾಗಸ್ವರ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡರು. ಶ್ರುತಿ ಕಡಿಮೆ ಮಾಡಿಕೊಂಡು, ಉಸಿರಿನ ನಿಯಂತ್ರಣದಿಂದ ನಾದವನ್ನು ನಿಯಂತ್ರಿಸಿದರು. ಆದರೆ ಇಂತಹ ಮಹಾನ್ ಮೇಧಾವಿಗಳ ಬದುಕು ಸಮಾಜದ ಕಟ್ಟುಪಾಡುಗಳಿಗೆ ಅನುಗುಣವಾಗಿ ಇರುವುದೇ ಇಲ್ಲ. ಮೈಲಾಪುರದ ಮನಃಸ್ಥಿತಿಗೆ ಇವರ ವ್ಯಕ್ತಿತ್ವ ಪಥ್ಯವಾಗುತ್ತಿರಲಿಲ್ಲ. ಹಾಗಾಗಿ ಇಂತಹ ಪ್ರತಿಭಾವಂತರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ನೀಡಲಿಲ್ಲ. ನಂತರದಲ್ಲಿ ಷೇಕ್ ಚಿನ್ನ ಮೌಲಾನ ಅವರಿಗೆ ಸಂಗೀತ ಕಲಾನಿಧಿ ನೀಡಿದಾಗ ಅವರು ಅದನ್ನು ರಾಜರತ್ನಂ ಅವರ ಕಾಲ ಬಳಿ ಇಟ್ಟು, ಅನಂತರ ತಾವು ಪಡೆಯುವುದಾಗಿ ಹೇಳಿದ್ದು ಸಂಗೀತ ಲೋಕದ ಬಹುದೊಡ್ಡ ವಿಪರ್ಯಾಸಗಳಲ್ಲಿ ಒಂದು.
ಹಲವು ನಾಗಸ್ವರವಾದಕರು ರೇಡಿಯೋ, ಗ್ರಾಮಾಫೋನುಗಳಿಗಾಗಿ ರಾಗ ವಿಸ್ತರಣೆಯನ್ನು ಕ್ಲುಪ್ತಗೊಳಿಸಿಕೊಂಡರು. ಅಷ್ಟಾಗಿಯೂ ರೇಡಿಯೋ ಮತ್ತು ಸಂಗೀತ ಸಭೆಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು ಸಾಕಷ್ಟು ತಡವಾಗಿ. ಆದರೆ ರಾಗವಿಸ್ತರಣೆಯನ್ನು ಕಡಿತಗೊಳಿಸಿಕೊಳ್ಳುವ ಬಗ್ಗೆ, ಶ್ರುತಿ ತಗ್ಗಿಸಿಕೊಳ್ಳುವ ಮತ್ತು ಹೆಚ್ಚು ಕೃತಿಗಳನ್ನು ನುಡಿಸುವ ಬಗ್ಗೆ ಸ್ವತಃ ಕೆಲವು ನಾಗಸ್ವರವಾದಕರಿಗೇ ಪ್ರತಿರೋಧವಿತ್ತು. ಇನ್ನು ಹಲವರಿಗೆ ಪ್ರತಿರೋಧವಿಲ್ಲದಿದ್ದರೂ ಬದಲಾವಣೆಗಳಿಗೆ ಹಂದಿಕೊಳ್ಳುವುದು ಸಾಧ್ಯವಾಗಲಿಲ್ಲ. ಇಂತಹ ಸಂಕೀರ್ಣ ಪಲ್ಲಟಗಳ ನಡುವೆ ವಿಭಿನ್ನ ಭಾಹ್ಯ ಮತ್ತು ಆಂತರಿಕ ಕಾರಣಗಳಿಗಾಗಿ ಸೊರಗಿ ಹೋಗಿದ್ದು ಕರ್ನಾಟಕ ಸಂಗೀತಕ್ಕೆ ರಾಗಸಂಗೀತದ ಭದ್ರ ಬುನಾದಿ ಒದಗಿಸಿದ್ದ ಪೆರಿಯಮೇಳಕಾರರ ಬದುಕು.
ಅಂತಿಂಥ ಹೆಣ್ಣು ನಾನಲ್ಲ
ಪುರುಷರ ಭದ್ರಕೋಟೆಯಾಗಿದ್ದ ನಾಗಸ್ವರ ಕ್ಷೇತ್ರಕ್ಕೆ ಕ್ರಾಂತಿಕಾರಕವಾಗಿ ಕಾಲಿಟ್ಟವರು ಮಧುರೆಯ ಪೊನ್ನುತಾಯಿ. ಕೇವಲ ಪುರುಷರಷ್ಟೇ ನಿರ್ವಹಿಸುತ್ತಿದ್ದ ಪೆರಿಯಮೇಳವನ್ನು ಮುನ್ನಡೆಸುವ ನಾಯಕಿಯಾಗಿ ಆತ್ಮವಿಶ್ವಾಸದಿಂದ ನಿಂತ ಹೆಣ್ಣು ಮಧುರೆಯ ಪೊನ್ನುತಾಯಿ. ಈ ವಾದ್ಯಗಳು ದೈಹಿಕವಾಗಿ ತುಂಬಾ ಶಕ್ತಿಯನ್ನು ಬೇಡುತ್ತದೆ. ಹಾಗಾಗಿ ಇವು ಹೆಂಗಸರಿಗೆ ಅಷ್ಟೊಂದು ಸೂಕ್ತವಲ್ಲ. ಜೊತೆಗೆ ನಾಗಸ್ವರ ನುಡಿಸುವುದಕ್ಕೆ ಅವಶ್ಯಕವಾದ ಕಠಿಣ ಅಭ್ಯಾಸ ಮತ್ತು ಅದನ್ನು ನುಡಿಸುವುದಕ್ಕೆ ಬೇಕಾದ ಅಸಾಧ್ಯ ಶ್ರಮ ಇವು ಹೆಂಗಸರಿಗೆ ಸಾಧ್ಯವಿಲ್ಲ ಎನ್ನುವ ನಂಬಿಕೆ ಗಾಢವಾಗಿತ್ತು. ತಾನು ಎದುರಿಸಿ ಗೆಲ್ಲಬೇಕಾದ ದೊಡ್ಡ ಸವಾಲು ಇದೇ ಎನ್ನುವುದು ಪೊನ್ನುತಾಯಿಗೆ ಮನವರಿಕೆಯಾಯಿತು. ಇದು ಅವರ ಹೋರಾಟವನ್ನು ಮತ್ತು ಕಲಿಕೆಯನ್ನು ತೀವ್ರಗೊಳಿಸಿತು. ತನ್ನನ್ನು ತಾನು ಒಬ್ಬ ಗಂಭೀರ, ವೃತ್ತಿಪರ ಸಂಗೀತಗಾರ್ತಿಯಾಗಿ ಮೊದಲು ರೂಪಿಸಿಕೊಳ್ಳಬೇಕು ಎಂದು ಪೊನ್ನುತಾಯಿಗೆ ಅರಿವಾಯಿತು. ಅವರ ಈ ದೃಢ ನಿರ್ಧಾರವನ್ನು ಅವರ ಕುಟುಂಬವೂ ಬೆಂಬಲಿಸಿತು. ಆಕಾಶವಾಣಿಯಲ್ಲಿ ಅವರು ಮೊತ್ತಮೊದಲು ನುಡಿಸಿದ್ದು ೧೯೪೬ರಲ್ಲಿ. ತಮ್ಮಂತಹ ಹಲವು ಮಹಿಳೆಯರಿಗೆ ಅವರು ಮಾದರಿಯಾದರು. ಪೊನ್ನುತಾಯಿ ಜವಹರಲಾಲ್ ನೆಹರೂ, ಡಾ ರಾಧಾಕೃಷ್ಣನ್ ಮುಂತಾದ ಖ್ಯಾತ ರಾಜಕೀಯ ಧುರೀಣರ ಮುಂದೆ ನುಡಿಸಿದರು. ಸೊಗಸಾದ ಕಂಚಿ ರೇಷ್ಮೆಯುಟ್ಟು, ಬಂಗಾರದ ಒಡವೆಗಳನ್ನು ತೊಟ್ಟು ಅತ್ಯಂತ ಸುಂದರವಾಗಿ ಕಾಣುತ್ತಿದ್ದ ಪೊನ್ನುತಾಯಿ ಬರೀ ಪುರುಷರೇ ಇರುವ ಪೆರಿಯಮೇಳದ ನಾಯಕಿಯಾಗಿ ಸಾಗುತ್ತಿರುವ ಚಿತ್ರ ತನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಎಂ ಎ ಮೀರಾ (೧೯೪೬) ಹೇಳುತ್ತಾರೆ.
೧೯೪೪ರಲ್ಲಿ ಅನಿರಿಕ್ಷಿತವಾಗಿ ಟಿ ಎನ್ ರಾಜರತ್ನಂ ಪಿಳ್ಳೈ ಅವರೊಡನೆ ನುಡಿಸಲು ದೊರೆತ ಅವಕಾಶ ಅವರ ಬದುಕಿಗೆ ಮಹತ್ತರ ತಿರುವು ನೀಡಿತು. ಅತ್ಯಂತ ಹಿರಿಯ ವಿದ್ವಾಂಸರು ಕೂಡ ರಾಜರತ್ನಂ ಅವರೊಡನೆ ನುಡಿಸಲು ಹೆದರುತ್ತಿದ್ದ ಕಾಲದಲ್ಲಿ ಪೊನ್ನುತಾಯಿ ನಿರ್ಭಿಡೆಯಿಂದ ಅವರೊಡನೆ ನುಡಿಸಿದ್ದು ಅವರ ಪ್ರತಿಭೆ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಇದು ಅವರಿಗೆ ತುಂಬಾ ಗೌರವ ಮತ್ತು ಮೆಚ್ಚುಗೆ ಎರಡನ್ನೂ ಗಳಿಸಿಕೊಟ್ಟಿತು. ಅವರ ಪ್ರತಿಭೆಯಿಂದ ಪ್ರಭಾವಿತರಾದ ರಾಜರತ್ನಂ ಸ್ವತಃ ಅವರನ್ನು ತಮ್ಮೊಡನೆ ನುಡಿಸುವಂತೆ ಎರಡು ಬಾರಿ ಆಹ್ವಾನಿಸಿದ್ದರು. ಪೊನ್ನುತಾಯಿ ಅವರೊಡನೆ ಮದ್ರಾಸಿನಲ್ಲಿ ನುಡಿಸಿದರು. ಇದು ಅವರಿಗೆ ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಎಲ್ಲಾ ಪುರುಷ ನಾಗಸ್ವರವಾದಕರು ಗೌರವಿಸುತ್ತಿದ್ದುದು ಪೊನ್ನುತಾಯಿಯನ್ನು ಮಾತ್ರ. ಪೊನ್ನುತಾಯಿ ಒಬ್ಬ ಮಹಿಳೆಯ ಸಾಮರ್ಥ್ಯ ಯಾವ ಮಟ್ಟದ್ದಾಗಿರಬಹುದು ಎನ್ನುವಕ್ಕೆ ಒಂದು ದೊಡ್ಡ ಸಂಕೇತವಾಗಿದ್ದರು. ನಾಗಸ್ವರವಾದಕರ ಮೇಳ ಕೇವಲ ಪೊನ್ನುತಾಯಿ ಜೊತೆಗೆ ಮಾತ್ರ ನುಡಿಸಲು ಒಪ್ಪಿಕೊಳ್ಳುತ್ತಿತ್ತು. ಈ ಕ್ಷೇತ್ರಕ್ಕೆ ೧೯೪೦ರಲ್ಲಿ ಕಾಲಿಟ್ಟ ನಂತರ ಕೊನೇ ಪಕ್ಷ ೧೦-೧೨ ಮಹಿಳೆಯರಾದರೂ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ನಾಗಸ್ವರವಾದಕಿಯರಿಗೆ ಅವರ ವೃತ್ತಿಯಲ್ಲಿ ಹೆಚ್ಚು ತೊಂದರೆ ಮತ್ತು ಅಡ್ಡಿಯನ್ನು ಉಂಟುಮಾಡಿದ್ದು ಹೆಣ್ಣಿನ ದೇಹವನ್ನು ಕುರಿತು ಸಮಾಜದಲ್ಲಿರುವ ಮನಃಸ್ಥಿತಿ. ಪುರುಷನಿರ್ಮಿತ ಕಟ್ಟಲೆಗಳಲ್ಲಿ ಇರುವ ಮಡಿ, ಮೈಲಿಗೆ ಹಾಗೂ ಅಶುಭದ ಕಲ್ಪನೆಗಳು. ಮುಟ್ಟಾದವರು ಕೊನೇಪಕ್ಷ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡಿ, ಪೂಜೆ ಮಾಡಿದರೆ ಅವರಿಗೆ ಮೈಲಿಗೆ ಇಲ್ಲ ಎನ್ನುವ ನಂಬಿಕೆಯಿತ್ತು. ಆದರೆ ವೈಧವ್ಯ ವೃತ್ತಿಯ ದೃಷ್ಟಿಯಂದ ತುಂಬ ಹಾನಿಕಾರಕವಾಗಿತ್ತು. ವಿಧವೆಯರು ಅಶುಭ ಎಂದು ಈ ಸಮಾಜವು ಪರಿಗಣಿಸಿತ್ತು. ಹಾಗಾಗಿ ಸಮಾಜದಲ್ಲಿ ಯಾವುದೇ ಶುಭಕಾರ್ಯಗಳಿಗೆ ಅವರು ವಾದ್ಯವನ್ನು ನುಡಿಸಲು ಸಾಧ್ಯವಾಗುತ್ತಿರಲಿಲ್ಲ. ೧೯೭೨ರಲ್ಲಿ ಪೊನ್ನುತಾಯಿಯ ಪತಿ ತೀರಿಹೋಗಿದ್ದು ಮುಂದಿನ ದಿನಗಳಲ್ಲಿ ಅವಳು ಪೆರಿಯಮೇಳದಲ್ಲಿ ನುಡಿಸದಂತೆ ಮಾಡಿತ್ತು. ಆದರೆ ಅವರು ೧೯೭೯ರ ತನಕ ಆಕಾಶವಾಣಿಯಲ್ಲಿ ನುಡಿಸುತ್ತಿದ್ದರು.
೧೯೮೦ರ ದಶಕದ ನಂತರದಲ್ಲಿ ತುಂಬಾ ಹೆಸರು ಮಾಡಿರುವ ನಾಗಸ್ವರವಾದಕಿ ಕಾಲೀಶಾಬೀ ಮೆಹಬೂಬ್. ಇವರು ಆಂಧ್ರದವರು ಆದರೆ ಈಗ ತಿರುಚಿನಾಪಳ್ಳಿಯಲ್ಲಿ ನೆಲೆಸಿದ್ದಾರೆ.
ಕರ್ನಾಟಕದಲ್ಲಿ ನಾಗಸ್ವರ
ಕರ್ನಾಟದಲ್ಲಿ ನಾಗಸ್ವರ ಒಂದು ಕಾಲದಲ್ಲಿ ಸಾಕಷ್ಟು ಪ್ರಸಾರದಲ್ಲಿತ್ತು. ಶ್ರೀರಂಗಪಟ್ಟಣ ಹಾಗೂ ನಂಜನಗೂಡಿನ ಹಲವು ದೇವಾಲಯಗಳಲ್ಲಿ ನಾಗಸ್ವರ ವಿದ್ವಾಂಸರು ಇದ್ದರು ಎಂದು ತಿಳಿದು ಬರುತ್ತದೆ. ಅಲ್ಲಿ ನಾಗಸ್ವರದ ಉತ್ಸವಗಳೂ ನಡೆಯುತ್ತಿದ್ದವಂತೆ. ನಂಜನಗೂಡಿನ ಕಳಲೆ ಗ್ರಾಮದಲ್ಲಿ ನಡೆಯುತ್ತಿದ್ದ ಅಂತಹ ರಥೋತ್ಸವವನ್ನು ಕೆ ರಾಘವೇಂದ್ರರಾವ್ ನೆನಪಿಸಿಕೊಳ್ಳುತ್ತಾರೆ. ನಂಜನಗೂಡಿನ ಗಿರಿಜಾ ಕಲ್ಯಾಣದ ಸಂದರ್ಭದಲ್ಲೂ ನಾಗಸ್ವರ ಕಾರ್ಯಕ್ರಮ ನಡೆಯುತ್ತಿತ್ತು. ಇಂದು ಶ್ರೀರಂಗಪಟ್ಟಣದಲ್ಲಿ ಅದರ ಸೂಚನೆಗಳು ಸಿಗುತ್ತವೆ. ಆದರೆ ಸೂಕ್ತ ದಾಖಲೆಗಳು ಲಭ್ಯವಿಲ್ಲ. ಮತ್ತಷ್ಟು ಅಧ್ಯಯನದ ಅವಶ್ಯಕತೆಯಿದೆ.
ಬೆಂಗಳೂರಿನಲ್ಲಿ ಓಲಗದವರಿಗೆ ಸಾಕಷ್ಟು ಪ್ರೋತ್ಸಾಹವಿತ್ತು. ತಾಲ್ಲೂಕು ಹಾಗೂ ಪಟ್ಟಣಗಳಲ್ಲಿ ಒಳ್ಳೊಳ್ಳೆ ಮೇಳಗಾರರಿದ್ದರು ಎಂದು ಡಿವಿಜಿ ಬರೆಯುತ್ತಾರೆ. ಬೆಂಗಳೂರಿನಲ್ಲಿ ಕರಗದ ಸಂದರ್ಭದಲ್ಲಿ, ಗಣೇಶ ಚೌತಿ ಮತ್ತು ಅಲಸೂರಿನಲ್ಲಿ ಸೋಮೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಭರ್ಜರಿ ಓಲಗ ಇರುತ್ತಿತ್ತೆಂದು ಡಿವಿಜಿ ತಮ್ಮ ಕಲೋಪಾಸಕರು ಕೃತಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಮುಳಬಾಗಿಲಿನಲ್ಲಿ ಬಹಳ ಸೊಗಸಾಗಿ ಮೇಳ ನುಡಿಸುವವರು ಇದ್ದರಂತೆ. ವೆಂಕಟಪ್ಪ, ಅಲಸೂರಿನ ಮುನಿವೆಂಕಟಪ್ಪನವರು ಬೆಂಗಳೂರು ನಾಗಭೂಷಣ, ಮುನಿವೆಂಕಟದಾಸಯ್ಯ ಹಾಗೂ ವಸಂತಪುರದ ರಾಮಯ್ಯನವರು ತುಂಬಾ ಪ್ರಸಿದ್ಧ ವಾದಕರು.
ಕರ್ನಾಟಕದ ಪ್ರಸಿದ್ಧ ಮೇಳಕಾರರಲ್ಲಿ ಹೆಚ್ಚಿನವರು ತಂಜಾವೂರು ವಿದ್ವಾಂಸರಿಂದ ಶಿಕ್ಷಣ ಪಡೆದವರಾಗಿದ್ದರು ಮತ್ತು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕರ್ನಾಟಕದ ತುಂಬಾ ಹಿರಿಯ ನಾಗಸ್ವರವಾದಕರಲ್ಲಿ ಒಬ್ಬರಾದ ಬೆಂಗಳೂರಿನ ಎ ವಿ ನಾರಾಯಣಪ್ಪನವರು (೧೯೧೨-೧೯೯೪) ಪೆರಂಬಲೂರಿನ ಅಂಗಪ್ಪ ಪಿಳ್ಳೈ (೧೮೮೯-೧೯೬೬) ಅವರಲ್ಲಿ ಕಲಿತರು. ನಾರಾಯಣಪ್ಪನವರು ತುಂಬಾ ಹೆಸರು ಮಾಡಿದರು. ೧೯೭೦ರ ದಶಕದಲ್ಲಿ ಅವರು ಶ್ರೀರಂಗಪಟ್ಟಣದಲ್ಲಿ ನಾಗಸ್ವರ ಶಾಲೆಯೊಂದನ್ನು ತೆರೆದರು. ಅಲ್ಲಿ ಶಿಷ್ಯರಿಗೆ ತರಬೇತಿ ನೀಡಿದರು. ಅವರ ಶಿಷ್ಯರಲ್ಲಿ ಪ್ರಮಖರು ಪಿ ರಾಜಗೋಪಾಲ್. ನಂತರದಲ್ಲಿ ರಾಜಗೋಪಾಲ್ ದರುಮಪುರಂ ಗೋವಿಂದರಾಜು ಅವರಲ್ಲಿಯೂ ಹಲವು ವರ್ಷಗಳು ಶಿಷ್ಯವೃತ್ತಿ ಮಾಡಿದರು. ಕರ್ನಾಟಕದ ಮತ್ತೊಬ್ಬ ಪ್ರಸಿದ್ಧ ನಾಗಸ್ವರ ಕಾಲವಿದರಾದ ದಮರೂರು ಸಂಜೀವಪ್ಪನವರು ಕೂಡ ಗೋವಿಂದರಾಜು ಅವರಲ್ಲಿ ಕಲಿತರು. ಆಗ ಬೆಂಗಳೂರು ಆಕಾಶವಾಣಿಯಲ್ಲಿ ’ಎ ಗ್ರೇಡ್’ ಪಡೆದಿದ್ದ ಏಕೈಕ ನಾಗಸ್ವರ ಕಲಾವಿದರು ಎಂ ಕೋದಂಡರಾಮ್. ಅವರು ತಂಜಾವೂರಿನ ತಿರುವೆಂಗಾಡ ಟಿ ಆರ್ ಜಯರಾಮ ಪಿಳ್ಳೈ ಮತ್ತು ಮಾಯೂರಂ ಮಾಮುಂಡಿಯಾ ಪಿಳ್ಳೈ ಅವರಲ್ಲಿ ಹಲವು ವರ್ಷಗಳು ಕಲಿತಿದ್ದರು. ಇನ್ನು ಮೈಸೂರು ಆಕಾಶವಾಣಿಯಲ್ಲಿ ’ಎ ದರ್ಜೆ’ ಪಡೆದಿದ್ದ ಕಲಾವಿದರು ಎನ್ ನಾಗರಾಜು ಅವರು ತಿರುವಲಪುತ್ತೂರ್ ವೇಣು ಪಿಳ್ಳೈ ಅವರ ಶಿಷ್ಯರು
ಮೈಸೂರಿನಲ್ಲಿ ಹಲವು ಮೇಳದವರಿದ್ದರು. ವಿದ್ವಾನ್ ಆರ್ ಪಾರ್ಥಸಾರಥಿ, ಮೈಸೂರು ಬೇಲೂರು ಅಯ್ಯ ಹಾಗೂ ಎನ್ ನಾಗರಾಜು
ಇನ್ನು ದಕ್ಷಿಣ ಕನ್ನಡದ ಭಜಂತ್ರಿ ಸಂಗೀತಕಲಾವಿದರು ಕ್ರಮೇಣ ನಾಗಸ್ವರದಿಂದ ಸ್ಯಾಕ್ಸೋಫೋನ್ ಕಡೆಗೆ ವಾಲಿದರು. ಅಲ್ಲಿನ ಹಲವು ದೇವಾಲಯಗಳಲ್ಲಿ ದೇವರ ನಿತ್ಯಸೇವೆಯಲ್ಲಿ ಇತ್ತೀಚೆಗೆ ನಾಗಸ್ವರದ ಬದಲು ಸ್ಯಾಕ್ಸೋಪೋನ್ ನುಡಿಸಲು ಪ್ರಾರಂಭಿಸಿದ್ದಾರೆ. ಭಜಂತ್ರಿ ಸಮುದಾಯಕ್ಕೆ ಸೇರಿದ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಕದ್ರಿ ಗೋಪಾಲನಾಥ್ ಕೂಡ ಆರಂಭದಲ್ಲಿ ನಾಗಸ್ವರವನ್ನೇ ನುಡಿಸುತ್ತಿದ್ದರು. ನಂತರದಲ್ಲಿ ಅವರು ಸ್ಯಾಕ್ಸೋಪೋನ್‌ಗೆ ಬದಲಾಯಿಸಿಕೊಂಡರು.
ಕರಾವಳಿ ಕರ್ನಾಟಕದ ಮುಸ್ಲಿಂ ನಾಗಸ್ವರವಾದಕರು.
ದಕ್ಷಿಣಕನ್ನಡದ ಕಾಪುವಿನ ಮಾರಿಗುಡಿ ದೇವಾಲಯದಲ್ಲಿ ನಾಲ್ಕು ತಲೆಮಾರುಗಳಿಂದ ನಾಗಸ್ವರ ಸೇವೆ ಮಾಡುತ್ತಿದ್ದಾರೆ ಶೇಕ್ ಜಲೀಲ್ ಸಾಹೇಬ್ ಅವರ ಕುಟುಂಬದವರು. ಅವರ ತಂದೆ ಬಾಬು ಸಾಹೇಬ್, ತಾತ ಇಮಾಂ ಸಾಹೇಬರು ಮತ್ತು ಮುತ್ತಾತ ಮುದ್ಗಂ ಸಾಹೇಬರು ದೇವಾಲಯದಲ್ಲಿ ನಾಗಸ್ವರವಾದಕರಾಗಿದ್ದರು (Prakash Samaga, Muslim Nadaswaram player from coastal Karnataka, Mangalore Today, Sep 07, 2022). . ದೇವರ ಸೇವೆ ಮಾಡುವುದು ನನ್ನ ಕರ್ತವ್ಯ ಸಮುದಾಯದಲ್ಲಿ ಕೋಮು ಸೌಹಾರ್ದ ನನಗೆ ತುಂಬಾ ಮುಖ್ಯ. ಎನ್ನುತ್ತಾರೆ. ಸಾಮರಸ್ಯ ಕುರಿತು ಇಂತಹ ಪ್ರೀತಿಯಿರುವ ಜಲೀಲ್ ಸಾಹೇಬರು ನವೆಂಬರ್ ೧೨, ೨೦೨೩ರ ಬೆಳಗ್ಗೆ ಹೃದಯಾಘಾತದಿಂದ ತೀರಿಕೊಂಡರು. ಸಾಯುವ ಎರಡು ದಿನ ಮೊದಲು ಶನಿವಾರ ಅವರು ಕೊಪ್ಪಲಂಗಡಿಯ ಮುಲ್ಲಮುತ್ತೆಯ ಸಂದರ್ಭದಲ್ಲಿ ನಾಗಸ್ವರ ನುಡಿಸಿದ್ದರು. ದೀಪಾವಳಿಯ ಆಚರಣೆಗಳಲ್ಲಿ ಭಾಗವಹಿಸಿದ್ದರು ಮತ್ತೆ ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ಭಾನುವಾರ ನುಡಿಸಿದ್ದರು (ಉದಯವಾಣಿ ಸಮಾಚಾರ, ನವೆಂಬರ್ ೧೩, ೨೦೨೩).
ಮರುಚಿಂತನೆಯಲ್ಲಿ
ಈ ವಿವರಗಳು ಕರ್ನಾಟಕ ಸಂಗೀತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಾನತೆಯನ್ನು ಬದುಕಿನ ಬುನಾದಿಯಾಗಿ ಸ್ವೀಕರಿಸುವ ಸೂಕ್ಷ್ಮಸಂವೇದಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳನ್ನು ಇಡುತ್ತದೆ. ಕಲೆ ಯಾರ ಮಡಿಲಿನಿಂದ ಯಾರ ಮಡಿಲಿಗೆ ಹೋಗಿದೆ? ಸೃಜನಶೀಲತೆಗೆ ಜಾತಿ, ಧರ್ಮ ಮತ್ತು ಲಿಂಗಗಳ ಕಟ್ಟು ಇದೆಯೇ? ಸಂಸ್ಕಾರ ಎಂದರೇನು? ಕರ್ನಾಟಕ ಸಂಗೀತ ನಿಜವಾಗಿಯೂ ಒಳಗೊಳ್ಳುವಿಕೆಯನ್ನು ಹೊಂದಿದೆಯೇ ಅಥವಾ ಸದ್ದಿಲ್ಲದೆ ಉಳಿದ ಸಮುದಾಯದವರನ್ನು ಹೊರಗಿಡುತ್ತಿದೆಯೇ? ವಿಜ್ಞಾನ, ಶಿಕ್ಷಣ ಮತ್ತು ತಂತ್ರಜ್ಞಾನಗಳ ಬೆಳವಣಿಗೆ ನಮ್ಮ ಮನಸ್ಸನ್ನು ಬೆಳೆಸಿ ವಿಶಾಲವನ್ನಾಗಿಸುತ್ತಿಲ್ಲವೇ? ನಮ್ಮ ಮನಸ್ಸುಗಳೇಕೆ ಸಂಕುಚಿತವಾಗುತ್ತಾ ಸಾಗುತ್ತಿದೆ? ಇವೆಲ್ಲವೂ ಜಾತಿ, ಧರ್ಮ, ಲಿಂಗ ಇವುಗಳಿಗೆ ಸಂಬಂಧಿಸಿದಂತೆ ಇರುವ ಪೂರ್ವಗ್ರಹಗಳನ್ನು ಪ್ರಶ್ನಿಸಬೇಕಾದ ತುರ್ತನ್ನು ಮುಂದಿಡುತ್ತಿದೆ.
