ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ. ಸಂತೋಷ, ದುಃಖ, ನೋವು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳು ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಸ್ವಿಟ್ಜರ್ಲ್ಯಾಂಡಿನ, ಜ್ಯೂರಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಬ್ರುನೊ ಎಸ್. ಫ್ರೆ ಹೀಗೆ ಭಯೋತ್ಪಾದನೆಯನ್ನು ಕುರಿತು ಒಂದು ಕುತೂಹಲಕಾರಿ ಅಧ್ಯಯನವನ್ನು ಮಾಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಈವರೆಗಿನ ಹಲವಾರು ಆಲೋಚನೆಗಳನ್ನು ಮರುಚಿಂತಿಸುವಂತೆ ಈ ಅಧ್ಯಯನ ನಮ್ಮನ್ನು ಒತ್ತಾಯಿಸುತ್ತದೆ.
ಭಯೋತ್ಪಾದನೆಯನ್ನು ಹತ್ತಿಕ್ಕಬೇಕು ಅಥವಾ ನಿರ್ಮೂಲನ ಮಾಡಬೇಕು ಅಂದ ತಕ್ಷಣ ನಮಗೆ ಕಾಣಿಸುವುದು ಮಿಲಿಟರಿ, ಪೋಲಿಸ್ ಇತ್ಯಾದಿ. ಭಯೋತ್ಪಾದನೆಯನ್ನು ನಿಯಂತ್ರಿಸಲು ನಮಗೆ ಗೊತ್ತಿರುವ ಏಕೈಕ ವಿಧಾನ ಬಲಪ್ರಯೋಗ. ಇದೇ ಪ್ರವೃತ್ತಿಯ ಮುಂದುವರಿಕೆಯಾಗಿ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುತ್ತಿದೆ ಅಥವಾ ದಾಳಿ ಮಾಡಲಾಗುತ್ತಿದೆ. ಈ ಕುರಿತು ಜಗತ್ತಿನಾದ್ಯಂತ ಅಧ್ಯಯನ ಮಾಡಿರುವ ಬ್ರುನೋ, ಇವು ಪರಿಣಾಮಕಾರಿಯಾದ ಕ್ರಮಗಳಲ್ಲ, ಇವುಗಳಿಂದ ಭಯೋತ್ಪಾದನೆ ಕಮ್ಮಿಯಾಗಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ’ಸ್ಟಿಕ್’ ಬಳಸುವುದಕ್ಕಿಂತ ’ಕ್ಯಾರೆಟ್’ ಬಳಕೆ ಹೆಚ್ಚು ಪರಿಣಾಮಕಾರಿ ಎನ್ನುವುದು ಇವರ ವಾದ. ಭಯೋತ್ಪಾದನೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಅವರು ಮೂರು ಸಲಹೆಗಳನ್ನು ನೀಡುತ್ತಾರೆ:
೧. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಭಯೋತ್ಪಾದನೆ ಅಷ್ಟಾಗಿ ಆಗುತ್ತಿಲ್ಲ. ಅಲ್ಲಿ ಹಲವಾರು ಕೇಂದ್ರಗಳಿರುವುದರಿಂದ ಎಲ್ಲಿ ದಾಳಿ ಮಾಡಬೇಕು ಎನ್ನುವ ಗೊಂದಲವೂ ಭಯೋತ್ಪಾದಕರಿಗೆ ಇರುತ್ತದೆ. ಜೊತೆಗೆ ದಾಳಿಯಿಂದ ಒಂದು ಕಡೆ ತೊಂದರೆಯಾದರೆ ಇನ್ನೊಂದು ಕಡೆಯಿಂದ ಅದನ್ನು ಸರಿದೂಗಿಸುವುದಕ್ಕೆ ಅವಕಾಶವಿರುತ್ತದೆ. ಹಾಗಾಗಿ ವಿಕೇಂದ್ರೀಕೃತ ವ್ಯವಸ್ಥೆಯಿರುವ ಕಡೆ ಭಯೋತ್ಪಾದಕರ ದಾಳಿಯಿಂದಾಗುವ ತೊಂದರೆಗಳು ಕಡಿಮೆ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಎಲ್ಲಾ ನಿರ್ಧಾರಗಳು ಮತ್ತು ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾಗಿರುವುದರಿಂದ ಭಯೋತ್ಪಾದಕರ ದಾಳಿಯಿಂದ ಇಡೀ ವ್ಯವಸ್ಥೆ ಕುಸಿದು, ಅರಾಜಕತೆ ಉಂಟಾಗಬಹುದು. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ವಿಕೇಂದ್ರೀಕೃತ ವ್ಯವಸ್ಥೆ ಭಯೋತ್ಪಾದನೆಯನ್ನು ತಡೆಯುವ ನಿಟ್ಟಿನಲ್ಲಿ ಒಳ್ಳೆಯ ವ್ಯವಸ್ಥೆ.
೨. ತೀವ್ರಗಾಮಿಗಳು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಹಲವಾರು ಅವಕಾಶಗಳನ್ನು ಕಳೆದುಕೊಂಡಿರುತ್ತಾರೆ. ಅವರಿಗೆ ಸಕಾರಾತ್ಮಕವಾದ ಹೊಸ ಪರ್ಯಾಯ ಅವಕಾಶಗಳನ್ನು ಕಲ್ಪಿಸಿ, ಧನಾತ್ಮಕ ಪ್ರೋತ್ಸಾಹ ನೀಡಬೇಕು. ಮನುಷ್ಯರಿಗೆ ಯಾವುದಾದರೂ ಒಂದು ವಿಷಯದ ಜೊತೆಗೆ ಗುರುತಿಸಿಕೊಳ್ಳುವ ತವಕ ಸಹಜವಾಗಿಯೇ ಇರುತ್ತದೆ. ಅದು ಭಯೋತ್ಪಾದಕರ ವಿಷಯದಲ್ಲೂ ನಿಜ. ಅವರು ಉಳಿದೆಲ್ಲಾ ಸಾಮಾಜಿಕ ಚಹರೆಗಳಿಂದ ಪ್ರತ್ಯೇಕವಾಗಿಬಿಟ್ಟಿರುತ್ತಾರೆ. ಹಾಗಾಗಿ ಅವರಿಗೆ ಬಿಲಾಂಗಿಂಗ್ನೆಸ್ನ ಭಾವನೆ ಅದೊಂದೇ ಕಡೆ ಇರುವುದಕ್ಕೆ ಸಾಧ್ಯ. ಅವರನ್ನು ಅಲ್ಲಿಂದ ಹೊರಕ್ಕೆ ತರಬೇಕಾದರೆ ಈ ಪ್ರತ್ಯೇಕತೆಯನ್ನು ಮುರಿಯಬೇಕು. ಅವರಿಗೆ ಉಳಿದ ಸಾಮಾಜಿಕ ಸಂಸ್ಥೆಗಳ ಅನುಭವವೂ ಆಗಬೇಕು. ಉಳಿದವರೊಂದಿಗೆ ಬೆರೆಯುವುದು ಸಾಧ್ಯವಾದರೆ ಅವರ ತೀವ್ರವಾದಿ ನಿಲುವು ಸಡಿಲವಾಗುತ್ತದೆ. ಇಲ್ಲವಾದಲ್ಲಿ ಒಂದೇ ರೀತಿಯಲ್ಲಿ ಯೋಚಿಸುವ ಜನರ ಜೊತೆಯೇ ಇದ್ದು, ಅವರ ಯೋಚನೆಗಳು ಇನ್ನಷ್ಟು ತೀವ್ರವಾಗುವ ಸಾಧ್ಯತೆಯೇ ಹೆಚ್ಚು. ಈ ವಿಷವೃತ್ತವನ್ನು ಮುರಿದು, ಅವರು ಸಂವಾದದಲ್ಲಿ ಪಾಲ್ಗೊಳ್ಳುವಂತಾಗಬೇಕು. ಹೆಚ್ಚು ವಿಶಾಲವಾದ, ತಮಗಿಂತ ಭಿನ್ನವಾಗಿ ಯೋಚಿಸುವವರ ಜೊತೆ ಮುಖಾಮುಖಿ ಸಾಧ್ಯವಾಗಬೇಕು. ಅಷ್ಟೇ ಅಲ್ಲ, ರಾಜಕೀಯದಲ್ಲಿ ಭಾಗವಹಿಸುವುದಕ್ಕೂ ಅವರಿಗೆ ಸಾಧ್ಯವಾಗಬೇಕು. ಆಗ ತೀವ್ರಗಾಮಿತ್ವದ ಮೊನುಚು ಕಡಿಮೆಯಾಗುತ್ತದೆ. ಇನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ಹತಾಶರಾಗಿ ಆ ಮಾರ್ಗವನ್ನು ಬಿಡಲು ನಿರ್ಧರಿಸಿರುವವರೂ ಇರುತ್ತಾರೆ. ಅವರಿಗೆ ಬೆಂಬಲ ನೀಡಬೇಕು. ಶಿಕ್ಷೆಯಲ್ಲಿ ರಿಯಾಯಿತಿ ನೀಡಬೇಕು. ಅವರ ಸುಭದ್ರ ಬದುಕಿಗೆ ನೆರವು ನೀಡಬೇಕು.
ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ದೇಶಗಳ ವಿಷಯದಲ್ಲೂ ಇದೇ ನಿಲುವು ಒಳ್ಳೆಯದು. ಅಂತಹ ರಾಷ್ಟ್ರಗಳನ್ನು ದುಷ್ಟ ರಾಜ್ಯಗಳೆಂದು ಕರೆದು ಜಾಗತಿಕ ಮಟ್ಟದಲ್ಲಿ ಪ್ರತ್ಯೇಕವಾಗಿಟ್ಟರೆ ಆ ದೇಶದೊಳಗೆ ಹೆಚ್ಚೆಚ್ಚು ಜನ ತೀವ್ರವಾದಿಗಳಾಗುತ್ತಾ ಹೋಗುತ್ತಾರೆ. ಅದರ ಬದಲು ಆ ದೇಶಗಳಿಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮರುಪ್ರವೇಶಕ್ಕೆ ಅವಕಾಶಮಾಡಿಕೊಟ್ಟು ಅಲ್ಲಿಯ ರೀತಿರಿವಾಜುಗಳನ್ನು ಅನುಸರಿಸುವಂತೆ ಮಾಡುವುದು ಹೆಚ್ಚು ಪರಿಣಾಮಕಾರಿ ಕ್ರಮ.
೩. ನಮ್ಮ ಗಮನ ಭಯೋತ್ಪಾದನಾ ಗುಂಪುಗಳ ಆಚೆಗೆ ಇರಬೇಕು:
ಮಾಧ್ಯಮಗಳು ಹಾಗೂ ಭಯೋತ್ಪಾದಕ ಗುಂಪುಗಳ ಆಸಕ್ತಿಗಳು ಒಂದೇ. ಇಬ್ಬರೂ ಸುದ್ದಿಮಾಡುವವರೇ. ಒಂದು ಘಟನೆ ಸಾಧ್ಯವಾದಷ್ಟು ದಿನ ಮುಖಪುಟದಲ್ಲಿದ್ದರೆ ಇಬ್ಬರಿಗೂ ಸಂತೋಷ. ಭಯೋತ್ಪಾದಕರು ಮಾಧ್ಯಮಗಳನ್ನು ಬಳಸಿಕೊಳ್ಳುವುದರಲ್ಲಿ ನಿಷ್ಣಾತರು. ತಮ್ಮ ರಾಜಕೀಯ ಅವಶ್ಯಕತೆಗಳಿಗೆ ತಕ್ಕಂತೆ ಮಾಧ್ಯಮಗಳನ್ನು ಬಳಸಿಕೊಳ್ಳುವ ವಿಧಾನವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಕೋಟ್ಯಂತರ ಜನರಿಗೆ ತುಲುಪುವುದು ಈಗ ಅವರಿಗೆ ಸಲೀಸಾಗಿದೆ. ಪ್ರಚಾರ ಸಿಗದೇ ಹೋದರೆ ಹತಾಶರಾಗುತ್ತಾರೆ. ಹಾಗಾಗಿ ಅವರ ಕೃತ್ಯಗಳಿಗೆ ಪ್ರಚಾರ ಸಿಗದ ಹಾಗೆ ನೋಡಿಕೊಳ್ಳುವುದು ಸರ್ಕಾರದ ಗುರಿಯಾಗಬೇಕು. ಅವರಲ್ಲೂ ಹಲವು ಗುಂಪುಗಳಿರುತ್ತವೆ. ಭಯೋತ್ಪಾದಕರ ದಾಳಿ ನಡೆದಾಗ ಅದನ್ನು ಯಾರು ಮಾಡಿದ್ದಾರೆ ಎನ್ನುವುದು ನಿಖರವಾಗಿ ಗೊತ್ತಿದ್ದರೂ ಅದನ್ನು ಹೆಸರಿಸದೇ ಇರುವುದು ಬುದ್ಧಿವಂತಿಕೆ. ಆಗ ಯಾವುದೇ ಗುಂಪಿಗೂ ಅದರ ಕ್ರೆಡಿಟ್ ಸಿಗುವುದಿಲ್ಲ. ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಮುಗುಂ ಆಗಿದ್ದು, ಹಲವಾರು ಸಾಧ್ಯತೆಗಳನ್ನು ಚರ್ಚಿಸುವ ಮೂಲಕ ಯಾವ ಒಂದು ಗುಂಪಿಗೂ ಪ್ರಚಾರ ಸಿಗದ ಹಾಗೆ ನೋಡಿಕೊಳ್ಳಬೇಕು. ಹೀಗೆ ಯಾವುದೇ ಒಂದು ನಿರ್ದಿಷ್ಟ ಗುಂಪಿಗೆ ಅದನ್ನು ಆರೋಪಿಸದೇ ಇರುವುದರಿಂದ ಭಯೋತ್ಪಾದಕರ ವರ್ತನೆಯಲ್ಲಿ ವ್ಯವಸ್ಥಿತವಾಗಿ ಬದಲಾವಣೆ ಆಗುತ್ತದೆ. ನಿಜವಾಗಿಯೂ ಭಯೋತ್ಪಾದಕ ಕೃತ್ಯವನ್ನು ಎಸಗಿದವರಿಗೆ ಅವರು ನಿರೀಕ್ಷಿಸಿದ್ದ ಸಾರ್ವಜನಿಕ ಗಮನ ಸಿಗುವುದಿಲ್ಲ. ಅವರ ರಾಜಕೀಯಕ್ಕೆ ಅಂತಹ ಪ್ರಚಾರವೂ ಸಿಗುವುದಿಲ್ಲ. ಆಧುನಿಕ ಭಯೋತ್ಪಾದನೆ ನಿಂತಿರುವುದೇ ಪ್ರಚಾರದ ಮೇಲೆ. ಬೇಕಾದ ಪ್ರಚಾರ ಸಿಗದೇ ಹೋದಾಗ ನಿರಾಶರಾಗುತ್ತಾರೆ. ಅಷ್ಟೇ ಅಲ್ಲ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಸುಮ್ಮನೆ ಇದ್ದ ಗುಂಪಿಗೆ ಪ್ರಚಾರ ಸಿಕ್ಕರಂತೂ ಈ ನಿರಾಸೆ ಇನ್ನಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ವಿವಿಧ ಗುಂಪುಗಳ ಉದ್ದೇಶ ಒಂದೇ ಆಗಿದ್ದರೂ ಅವುಗಳ ನಡುವೆ ಪೈಪೋಟಿ ಇರುತ್ತದೆ.
ಭಯೋತ್ಪಾದಕರನ್ನು ಮುಖ್ಯವಾಹಿನಿಗೆ ತರುವ ಕಡೆ ನಾವು ಗಮನ ಹರಿಸಬೇಕು. ಅದಕ್ಕೆ ಅವರಿಗೆ ಪರ್ಯಾಯ ಅನುಕೂಲಗಳನ್ನು ಮಾಡಿಕೊಡುವುದು ಒಳ್ಳೆಯ ಕ್ರಮ. ಇದನ್ನು ಬಿಟ್ಟು ಶಿಕ್ಷೆಯ ದಾರಿ ಹಿಡಿದರೆ ತಮ್ಮ ತಮ್ಮ ಸಂಘಟನೆಗಳಿಗೆ ಅಂಟಿಕೊಳ್ಳುವುದು ಅವರಿಗೆ ಅನಿವಾರ್ಯವಾಗುತ್ತದೆ. ಬೇರೆ ಯಾವ ಪರ್ಯಾಯ ಮಾರ್ಗವೂ ಅವರಿಗೆ ಕಾಣುವುದಿಲ್ಲ.
ಸಕಾರಾತ್ಮಕ ಕ್ರಮವನ್ನು ಅನುಸರಿಸುವುದರಿಂದ ಎರಡು ಅನುಕೂಲಗಳಿವೆ. ಮೊದಲನೆಯದಾಗಿ ಭಯೋತ್ಪಾದಕರು ಹಾಗೂ ಸರ್ಕಾರದ ನಡುವೆ ಸಂವಾದ ಸಾಧ್ಯವಾಗುತ್ತದೆ. ಇದರಿಂದ ಎರಡು ಕಡೆಯವರಿಗೂ ಅನುಕೂಲ. ಸರ್ಕಾರ ತೀವ್ರಗಾಮಿಗಳ ನಾಶವನ್ನು ತನ್ನ ಗುರಿಮಾಡಿಕೊಳ್ಳದೆ, ಭಯೋತ್ಪಾದನೆಯಿಂದ ಅವರನ್ನು ಹೊರತರುವ ಕಡೆ ಗಮನಕೊಡುತ್ತದೆ. ಹೊರಬಂದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಚಿಸುತ್ತದೆ. ಇದರಿಂದ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ ಒಂದು ಪರ್ಯಾಯ ಸಿಕ್ಕಂತಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಬಲಪ್ರಯೋಗದ ಹಾದಿ ಅನುಸರಿಸಿದರೆ ಎರಡು ಕಡೆಯವರಿಗೂ ಅಪಾರ ಹಾನಿ. ಭಯೋತ್ಪಾದಕರಿಗೆ ವಿಪರೀತವಾಗಿ ಪ್ರಾಣಹಾನಿಯಾಗುತ್ತದೆ. ಸರ್ಕಾರಕ್ಕೆ ಆರ್ಥಿಕ ಹಾಗೂ ರಾಜಕೀಯ ನಷ್ಟ ವಿಪರೀತ. ಜೊತೆಗೆ ಅಭದ್ರತೆಯ ಪರಿಸ್ಥಿತಿ.
ಎರಡನೆಯದಾಗಿ ಭಯೋತ್ಪಾದಕ ಸಂಘಟನೆಗಳು ಅನುಸರಿಸುತ್ತಿರುವ ಹಿಂಸಾತ್ಮಕ ಮಾರ್ಗದ ಮಹತ್ವ ಕೂಡ ಕಡಿಮೆಯಾಗುತ್ತದೆ. ಸಂಘಟನೆಯೊಳಗೆ ಆ ಮಾರ್ಗವನ್ನು ತ್ಯಜಿಸಿ ಹೊರಬರುವ ಪ್ರವೃತ್ತಿ ಹೆಚ್ಚುತ್ತದೆ. ಸಂಘಟನೆಯ ನಾಯಕರಿಗೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವುದೇ ತಿಳಿಯುವುದಿಲ್ಲ. ಒಂದು ಹಂತದಲ್ಲಿ ನಾಯಕರಿಗೆ ಸಂಘಟನೆಯ ಮೇಲಿನ ನಿಯಂತ್ರಣವೂ ತಪ್ಪಬಹುದು. ಕೊನೆಗೆ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುವುದಕ್ಕೂ ಅವುಗಳಿಗೆ ಸಾಧ್ಯವಾಗುವುದಿಲ್ಲ.
ಶಿಕ್ಷೆ ಹಾಗೂ ಸಾವಿಗೆ ಭಯೋತ್ಪಾದಕರು ಹೆದರುತ್ತಾರೆ ಎಂಬ ವಾದ ಸರಿಯಲ್ಲ ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಅವರು ತಮ್ಮ ಅಧ್ಯಯನದಲ್ಲಿ ಸ್ಪಷ್ಟಪಡಿಸಿದ್ದಾರೆ. ಬದಲಿಗೆ ಅದರಿಂದ ಉಂಟಾಗುವ ಆರ್ಥಿಕ ಅಸ್ಥಿರತೆ, ತಗಲುವ ಅಪಾರ ವೆಚ್ಚ, ಇತ್ಯಾದಿಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಸರ್ಕಾರದ ಒತ್ತಡ ಜಾಸ್ತಿಯಾದರೆ ಭಯೋತ್ಪಾದಕರು ಬೇರೆ ಕಡೆಗೆ ಹೋಗುತ್ತಾರೆ ಅಥವಾ ನಿಗ್ರಹಿಸಲು ಹೆಚ್ಚು ಕಷ್ಟಕರವಾದ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ಇದು ಸರ್ಕಾರಗಳಿಗೆ ಗೊತ್ತಿಲ್ಲ ಅಂತಲ್ಲ. ಅದರೂ ವೈಯಕ್ತಿಕ ಲಾಭಕ್ಕಾಗಿ ಬಲವನ್ನು ಬಳಸುತ್ತಾರೆ. ಇದನ್ನು ಜಗತ್ತಿನಾದ್ಯಂತ ಹಲವಾರು ಘಟನೆಗಳು ರುಜುವಾತು ಪಡಿಸಿವೆ. ಹೆಚ್ಚು ಸಾಕಾರಾತ್ಮಕವಾದ ಪರ್ಯಾಯ ಕ್ರಮಗಳನ್ನು ಅನುಸರಿಸುವುದನ್ನು ದೌರ್ಬಲ್ಯವೆಂದು ಭಾವಿಸದೆ ಜಗತ್ತಿನ ಭವಿಷ್ಯದ ದೃಷ್ಟಿಯಿಂದ ಅಂತಹ ಕ್ರಮಗಳನ್ನು ಪ್ರಯತ್ನಿಸುವುದಕ್ಕೆ ಬ್ರುನೋ ಅವರ ಅಧ್ಯಯನ ಪ್ರೇರೇಪಿಸುತ್ತದೆ. ವರ್ತನ ಅರ್ಥಶಾಸ್ತ್ರಜ್ಞರು ಹೀಗೆ ಬೇರೆ ಬೇರೆ ಆಯಾಮಗಳಿಂದ ನಮ್ಮನ್ನು ಯೋಚನೆಗೆ ಹಚ್ಚುವುದರಿಂದಾಗಿಯೇ ಇಂದು ಪ್ರಸ್ತುತವಾಗುತ್ತಿರುವುದು.