ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ


ಒಂದು ಪ್ರಕಟಣೆ : ಆರು ವರ್ಷದ ಮುದ್ದಾದ ಮಗು. ತುಂಬಾ ಹುಷಾರಿಲ್ಲ. ತಕ್ಷಣ ಆಪರೇಷನ್ ಆಗಬೇಕು. ಆದರೆ ಆಪರೇಷನ್ ತುಂಬಾ ದುಬಾರಿ. ಅಪ್ಪ ಅಮ್ಮನ ಹತ್ತಿರ ಹಣ ಇಲ್ಲ. ನಮ್ಮ ಕರುಳು ಕಿವುಚುತ್ತದೆ. ಹಣ ಹರಿದು ಬರುತ್ತದೆ. ಇನ್ನೊಂದು ಸುದ್ದಿ ಅದೇ ಪತ್ರಿಕೆಯಲ್ಲಿ ಬಂದಿದೆ. ಒಂದು ದೊಡ್ಡ ಆಸ್ಪತ್ರೆ. ಇಲ್ಲಿಯವರೆಗೆ ಇಂತಹ ಸಾವಿರಾರು ತುರ್ತು ಶಸ್ತ್ರಚಿಕಿತ್ಸೆ ಮಾಡಿ ಜನರನ್ನು ಉಳಿಸಿದೆ. ಈಗ ತೆರಿಗೆ ಕಟ್ಟಲಾರದೆ ರೋಗಿಗೆ ಯಾವ ಸೌಲಭ್ಯವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಜನ ನೆರವಾಗುವುದಿರಲಿ, ಬಹುಶಃ ಒಂದು ತೊಟ್ಟು ಕಣ್ಣೀರನ್ನೂ ಹಾಕುವುದಿಲ್ಲ.
ಸಾವಿನಂಚಿನಲ್ಲಿರುವ ಮಗುವಿನ ನೋವು ನಮ್ಮದಾಗಿಬಿಡುತ್ತದೆ. ಆದರೆ ಅಂತಹ ನೂರಾರು ಜೀವಗಳನ್ನು ಉಳಿಸಿಕೊಳ್ಳುತ್ತಿದ್ದ ಆಸ್ಪತ್ರೆಯೊಂದಿಗೆ ಸ್ಪಂದಿಸುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆ ಮಗು ನಮಗೆ ಪರಿಚಯದ ಮಗುವಾಗಿಬಿಡುತ್ತದೆ. ಆಸ್ಪತ್ರೆಯ ಜೀವಗಳು ಸಂಖ್ಯೆಗಳಾಗಿ ಮಾತ್ರ ಕಾಣುತ್ತವೆ. ಅದು ಸಂಕಷ್ಟದಲ್ಲಿರುವ ಮಗುವಿನ ಹಾಗೆ ಪರಿಚಿತ ಜೀವವಲ್ಲ. ಬೋರ್‌ವೆಲ್ಲಿನಲ್ಲಿ ಸಿಕ್ಕಿಬಿದ್ದ ಮಗು ದೇಶದಾದ್ಯಂತ ದೊಡ್ಡ ಸುದ್ದಿಯಾಗುತ್ತದೆ. ನಾವೆಲ್ಲಾ ಮಗುವಿನ ಜೀವಕ್ಕಾಗಿ ಪ್ರಾರ್ಥಿಸುತ್ತಿರುತ್ತೇವೆ. ಕೇವಲ ದುಡ್ಡಿಲ್ಲ ಅನ್ನುವ ಕಾರಣಕ್ಕೆ ಒಂದು ಪರಿಚಿತ ಜೀವ ಕಮರಿಹೋಗುವುದನ್ನು ಸಹಿಸಿಕೊಳ್ಳುವುದು ನಮಗೆ ಕಷ್ಟ. ಆದರೆ ಸಾವಿರಾರು ಅಪರಿಚಿತ ಜೀವಗಳು ಒಳ್ಳೆಯ ನೀರಿಲ್ಲದೆಯೋ, ಸೊಳ್ಳೆ ಕಚ್ಚಿಯೋ, ಚುಚ್ಚು ಮದ್ದು ಇಲ್ಲದೆಯೋ ಅಸು ನೀಗುತ್ತಲೇ ಇರುತ್ತವೆ.


ಸರ್ಕಾರಿ ನೀತಿಗಳು ತುಂಬಾ ಅಮೂರ್ತ. ಸಾವಿನಂಚಿನಲ್ಲಿರುವ ಮಗುವಿನಂತಲ್ಲ. ಅದಕ್ಕೆ ಅಂತಹ ಭಾವನಾತ್ಮಕವಾದ ಪರಿಣಾಮ ಇರುವುದಿಲ್ಲ. ಹೊಸದಾಗಿ ಒಂದು ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದು ಭಾವಿಸಿಕೊಳ್ಳಿ. ಮಧ್ಯದಲ್ಲಿ ಒಂದು ಡಿವೈಡರ್ ಹಾಕಿದರೆ ವರ್ಷಕ್ಕೆ ಕನಿಷ್ಠ ಎರಡು ದೊಡ್ಡ ಅಪಘಾತಗಳು ತಪ್ಪುತ್ತವೆ. ಅದಕ್ಕೆ ೪೦೦೦ ಕೋಟಿ ಹೆಚ್ಚು ವೆಚ್ಚವಾಗಬಹುದು. ಖರ್ಚು ಮಾಡಿ ಡಿವೈಡರ್ ನಿರ್ಮಿಸಬಹುದಾ? ಹಾಗೆ ಅಪಘಾತದಲ್ಲಿ ಸಾಯುವವರು ಯಾರು? ಸಧ್ಯಕ್ಕೆ ಅದು ಕೇವಲ ಸಂಖ್ಯೆಯಾಗಿಯಷ್ಟೇ ಕಾಣುತ್ತದೆ.


ಈಗ ನಮ್ಮ ಮುಂದಿರುವ ಪ್ರಶ್ನೆ – ಒಂದು ಜೀವಕ್ಕೆ ಬೆಲೆ ನಿರ್ಧರಿಸುವುದು ಹೇಗೆ?


ಇದಕ್ಕೆ ಉತ್ತರ ಕಂಡುಕೊಳ್ಳಲು ಹಲವು ಪ್ರಯತ್ನಗಳು ನಡೆದಿವೆ. ಸರಿಯಾದ ಉತ್ತರ ಸಿಗಬೇಕಾದರೆ ಸರಿಯಾದ ಪ್ರಶ್ನೆಯನ್ನು ಕೇಳಿಕೊಳ್ಳಲು ನಮಗೆ ಸಾಧ್ಯವಾಗಬೇಕು. ಹೆದ್ದಾರಿಯ ಮೇಲಿನ ಪ್ರಯಾಣ ಹೆಚ್ಚು ಸುರಕ್ಷಿತವಾಗಿರಬೇಕು. ಹಾಗಾಗಿ ಅದನ್ನು ಬಳಸುವ ಪ್ರತಿಯೊಬ್ಬ ಪ್ರಯಾಣಿಕ ಪ್ರತಿಯೊಂದು ಬಾರಿ ಪ್ರಯಾಣಿಸುವಾಗಲೂ ಎಷ್ಟು ಹಣ ಕೊಡಲು ತಯಾರಿರುತ್ತಾನೆ? ಇದು ಜೀವದ ಬೆಲೆಯನ್ನು ಕುರಿತಂತೆ ನಮಗೆ ಒಂದು ಅಂದಾಜನ್ನು ಕೊಡಬಹುದು. ಪ್ರಶ್ನೆಯೇನೋ ಸರಿ. ಆದರೆ ಅದಕ್ಕೆ ಉತ್ತರ ಸುಲಭವಲ್ಲ. ಉತ್ತರ ಕಂಡುಕೊಳ್ಳುವುದಕ್ಕೆ ರಿಚರ್ಡ್ ಥೇಲರ್ ಒಂದು ಭಿನ್ನವಾದ ಪ್ರಯತ್ನ ಮಾಡಿದರು. ಅದಿರುಗಣಿಗಳಲ್ಲಿ ಕೆಲಸಮಾಡುವುದು, ಅತಿಎತ್ತರದ ಕಟ್ಟಡಗಳ ಕಿಟಕಿಗಳನ್ನು ಶುಚಿಗೊಳಿಸುವುದು ಇತ್ಯಾದಿ ಉದ್ಯೋಗಗಳು ಜೀವಕ್ಕೆ ಹೆಚ್ಚು ಅಪಾಯಕಾರಿ. ಅಂತಹ ಕೆಲಸ ಮಾಡುವುದಕ್ಕೆ ಜನ ಎಷ್ಟು ಕೂಲಿ ಕೇಳಬಹುದು? ಅವರು ಆ ಬಗ್ಗೆ ಒಂದು ಅಧ್ಯಯನ ಮಾಡಿ ಒಂದು ಜೀವವನ್ನು ಉಳಿಸುವುದರ ಮೌಲ್ಯ ಎಂದು ಒಂದು ಲೇಖನವನ್ನು ಪ್ರಕಟಿಸಿದರು.


ತಮ್ಮ ಉತ್ತರವನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳುವ ದೃಷ್ಟಿಯಿಂದ ಥೇಲರ್ ಒಂದು ಸಮೀಕ್ಷೆ ನಡೆಸಿದರು. ಸಾಮಾನ್ಯವಾಗಿ ಎಲ್ಲಾ ವರ್ತನ ಅರ್ಥಶಾಸ್ತ್ರಜ್ಞರು ಮಾಡುವಂತೆ ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆ ಅವರು ಎರಡು ಪ್ರಶ್ನೆಗಳನ್ನು ಕೇಳಿದರು.


೧. ನನ್ನ ಭಾಷಣವನ್ನು ಕೇಳಿದರೆ ನಿಮಗೆ ಅಪರೂಪದ ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆ ಇದೆ. ಆ ಖಾಯಿಲೆ ಬಂದರೆ ನೀವು ಯಾವುದೇ ನೋವನ್ನು ಅನುಭವಿಸದೆ ಒಂದು ವಾರದಲ್ಲಿ ಸಾಯುತ್ತೀರಿ. ನಿಮಗೆ ಖಾಯಿಲೆ ಬರುವ ಸಾಧ್ಯತೆ ಸಾವಿರದಲ್ಲಿ ಒಂದು. ಅದಕ್ಕೆ ಒಬ್ಬರಿಗಾಗುವಷ್ಟು ಮದ್ದು ಇದೆ. ಅದನ್ನು ಗರಿಷ್ಠ ಹಣ ಕೊಡುವವರಿಗೆ ಕೊಡುತ್ತೇನೆ. ಅದನ್ನು ತೆಗೆದುಕೊಂಡರೆ ನೀವು ಸಾಯುವುದಿಲ್ಲ. ನೀವು ಆ ಮದ್ದಿಗೆ ಗರಿಷ್ಠ ಎಷ್ಟು ಹಣಕೊಡಲು ತಯಾರಿದ್ದೀರಿ?


೨. ಈ ಅಪರೂಪದ ಖಾಯಿಲೆಯ ಬಗ್ಗೆ ಒಬ್ಬರು ಸಂಶೋಧನೆ ಮಾಡುತ್ತಿದ್ದಾರೆ. ಅವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ. ಐದು ನಿಮಿಷಗಳ ಕಾಲ ಆ ಖಾಯಿಲೆಯ ವೈರಾಣುಗಳಿಗೆ ನಿಮ್ಮನ್ನು ಒಡ್ಡಿಕೊಳ್ಳಬೇಕು. ನಿಮಗೆ ಖಾಯಿಲೆ ಬರುವ ಸಾಧ್ಯತೆ ಸಾವಿರದಲ್ಲಿ ಒಂದು. ಇದಕ್ಕೆ ಯಾವುದೇ ಮದ್ದು ಇಲ್ಲ. ಈ ಪ್ರಯೋಗಕ್ಕೆ ನಿಮ್ಮನ್ನು ಒಡ್ಡಿಕೊಳ್ಳಲು ಕನಿಷ್ಠ ಎಷ್ಟು ಹಣ ಕೇಳುತ್ತೀರಿ?


ಅರ್ಥಶಾಸ್ತ್ರದ ದೃಷ್ಟಿಯಿಂದ ಎರಡು ಪ್ರಶ್ನೆಗಳೂ ಒಂದೇ. ಎರಡು ಸನ್ನಿವೇಶಗಳಲ್ಲೂ ಹಣದ ಪ್ರಮಾಣ ಹೆಚ್ಚು ಕಡಿಮೆ ಅಷ್ಟೇ ಇರಬೇಕು. ಆದರೆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರಗಳು ತುಂಬಾ ಭಿನ್ನವಾಗಿದ್ದವು. ಉತ್ತರಗಳನ್ನು ಕ್ರೋಢೀಕರಿಸಿ ಹೇಳುವುದಾದರೆ ಔಷಧಿಗೆ ೨೦೦೦ ಡಾಲರಿಗಿಂತ ಹೆಚ್ಚು ಹಣ ಕೊಡುವುದಕ್ಕೆ ಬಹುಪಾಲು ಜನ ತಯಾರಿರಲಿಲ್ಲ. ಆದರೆ ವಾಲಂಟಿಯರ್ ಆಗಲು ಕನಿಷ್ಠ ೫೦೦,೦೦೦ ಡಾಲರ್ ಆದರೂ ಬೇಕು ಎಂದು ಕೇಳುತ್ತಿದ್ದರು.


ಒಂದೇ ಪ್ರಶ್ನೆಗೆ ಇಷ್ಟೊಂದು ವಿಭಿನ್ನ ಉತ್ತರಗಳು! ಯಾವುದೇ ಅರ್ಥಶಾಸ್ತ್ರಜ್ಞನೂ ಇದನ್ನು ಒಪ್ಪಿಕೊಳ್ಳಲಾರ. ಇದು ಅಸಂಬದ್ಧವಾಗಿ ಅವರಿಗೆ ತೋರುತ್ತದೆ. ಜನರ ಮನಸ್ಸಿನಲ್ಲಿ ಏನಾಗುತ್ತಿದೆ? ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಥೇಲರ್ ಇನ್ನೊಂದಿಷ್ಟು ಉದಾಹರಣೆಗಳನ್ನು ಕಲೆ ಹಾಕಲಾರಂಭಿಸಿದರು.
ಗೆಳೆಯ ಅರ್ಥಶಾಸ್ತ್ರಜ್ಞ ರೋಸೆಟ್ ಹತ್ತಿರ ಹತ್ತಿರ ತುಂಬಾ ಹಿಂದೆ ೧೦ ಡಾಲರಿಗೆ ಖರೀದಿಸಿದ್ದ ಒಂದು ಬಾಟಲ್ ವೈನ್ ಇತ್ತು. ಈಗ ಅದರ ಬೆಲೆ ೧೦೦ಡಾಲರ್ ಆಗಿದೆ. ಅದನ್ನು ಕೊಂಡುಕೊಳ್ಳುವುದಕ್ಕೆ ಹಲವರು ತಯಾರಿದ್ದರು. ಆದರೆ ಅವನು ಅದನ್ನು ಮಾರುವುದಕ್ಕೆ ತಯಾರಿರಲಿಲ್ಲ. ಅಂದರೆ ಅವನ ದೃಷ್ಟಿಯಲ್ಲಿ ತನ್ನ ಬಳಿ ಇರುವ ವೈನ್ ಮಾರುಕಟ್ಟೆಯಲ್ಲಿ ಸಿಗುವುದಕ್ಕಿಂತ ಹೆಚ್ಚು ಬೆಲೆ ಬಾಳುವಂತಥದ್ದು. ಹಾಗಂತ ಅವನು ಮಾರುಕಟ್ಟಿಯಲ್ಲಿ ೧೦೦ ಡಾಲರಿಗೆ ಸಿಗುತ್ತಿದ್ದ ಅದೇ ಗುಣಮಟ್ಟದ ವೈನನ್ನು ಕೊಂಡುಕೊಳ್ಳುವುದಕ್ಕೂ ತಯಾರಿರಲಿಲ್ಲ! ಇದೊಂದು ವೈಚಾರಿಕ ನಿಲುವಲ್ಲ ಎನ್ನುವುದು ಅರ್ಥಶಾಸ್ತ್ರಜ್ಞನಾಗಿ ಅವನಿಗೂ ಗೊತ್ತು.
ಇದನ್ನು ಅರ್ಥಶಾಸ್ತ್ರದಲ್ಲಿ ಅಪಾರ್ಚುನಿಟಿ ಕಾಸ್ಟ್ ಅಥವಾ ಅವಕಾಶ ವೆಚ್ಚ ಅಂತ ಕರೆಯುತ್ತಾರೆ. ಕ್ರಿಕೆಟ್ ಆಟ ನೋಡಲು ನಿಮ್ಮ ಬಳಿ ಒಂದು ಟಿಕೆಟ್ ಇದೆ ಎಂದಿಟ್ಟುಕೊಳ್ಳಿ. ಅದನ್ನು ಮಾರಿದರೆ ನಿಮಗೆ ೧೦೦೦ ರೂಪಾಯಿ ಸಿಗುತ್ತದೆ ಅಂತಾದರೆ. ನೀವು ಆ ಟಿಕೀಟನ್ನು ಎಷ್ಟಕ್ಕೆ ಬೇಕಾದರೂ ಕೊಂಡಿರಬಹುದು. ಆದರೆ ನೀವು ಕ್ರಿಕೆಟ್ ನೋಡುವುದರ ವೆಚ್ಚ ೧೦೦೦ ರೂಪಾಯಿ ಅಂತಲೇ ಭಾವಿಸಬೇಕು. ಅದು ಅದರ ಅವಕಾಶ ವೆಚ್ಚ. (ರೈತ ತನ್ನ ಭೂಮಿಯಲ್ಲಿ ಸ್ವಂತ ಸಾಗುವಳಿ ಮಾಡದೆ ಬೇರೆಯವರಿಗೆ ಕೊಟ್ಟಿದ್ದರೆ ಬರುತ್ತಿದ್ದ ಗುತ್ತಿಗೆ ರೈತನ ಸಾಗುವಳಿಯ ಅವಕಾಶವೆಚ್ಚ. ಹಾಗಾಗಿಯೇ ಬರಬಹುದಾಗಿದ್ದ ಗುತ್ತಿಗೆಯನ್ನೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸ್ವಾಮಿನಾಥನ್ ಹೇಳಿದ್ದು.)


ರೋಸೆಟ್ಟಿನ ವೈನ್ ಉದಾಹರಣೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ೧೦೦ ಡಾಲರ್ ಅದರ ಅವಕಾಶ ವೆಚ್ಚ. ಅವನು ತನ್ನ ವೈನನ್ನೇ ಕುಡಿಯಲಿ ಅಥವಾ ಮಾರುಕಟ್ಟೆಯಿಂದ ತಂದು ಕುಡಿಯಲಿ, ಅದರ ಅವಕಾಶ ವೆಚ್ಚ ಮಾತ್ರ ೧೦೦ ಡಾಲರ್.


ನಮ್ಮಲ್ಲಿ ಇರುವುದಕ್ಕೆ ನಾವು ತುಂಬಾ ಬೆಲೆ ಕೊಡುತ್ತೇವೆ. ಥೇಲರ್, ಇದನ್ನು ಎಂಡೋಮೆಂಟ್ ಎಫೆಕ್ಟ್ – ಒಡೆತನದ ಪರಿಣಾಮ ಅಂತ ಕರೆದ. ಅಂದರೆ ನಾವು ನಮ್ಮ ಒಡೆತನದಲ್ಲಿರುವುದಕ್ಕೆ ಹೆಚ್ಚಿನ ಮೌಲ್ಯವನ್ನು ಕಟ್ಟುತ್ತೀವಿ. ಥೇಲರ್ ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಕೆಲವರಿಗೆ ಸ್ವಿಸ್ ಚಾಕಲೇಟನ್ನು ಇನ್ನು ಕೆಲವರಿಗೆ ಕಾಫಿಮಗ್ಗನ್ನು ಕೊಟ್ಟ. ನಂತರ ಅದನ್ನು ಅದಲುಬದಲು ಮಾಡಿಕೊಳ್ಳಲು ಕೇಳಿಕೊಂಡಾಗ ಹೆಚ್ಚಿನವರು ಅದಕ್ಕೆ ಸಿದ್ಧರಿರಲಿಲ್ಲ. ಅದು ಕೆಲವೇ ಕ್ಷಣಗಳಲ್ಲಿ ಅವರದಾಗಿಬಿಟ್ಟಿತ್ತ್ತು.


ಇನ್ನೊಂದು ಪ್ರಯೋಗ ಇನ್ನೂ ಹೆಚ್ಚು ಕುತೂಹಲಕರವಾಗಿತ್ತು. ಪ್ರಖ್ಯಾತ ಬಾಸ್ಕೆಟ್‌ಬಾಲ್ ಪಂದ್ಯವೊಂದಕ್ಕೆ ಟಿಕೇಟುಗಳನ್ನು ಮಾರಲಾಯಿತು. ಟಿಕೇಟುಗಳು ತುಂಬಾ ಕಡಿಮೆ ಇದ್ದವು. ಹಾಗಾಗಿ ತೀವ್ರ ಪೈಪೋಟಿಯಿತ್ತು. ಕೆಲವರಿಗೆ ಟಿಕೇಟು ಸಿಕ್ಕಿತು, ಕೆಲವರಿಗೆ ಸಿಗಲಿಲ್ಲ. ಆಮೇಲೆ ಟಿಕೇಟು ಪಡೆದವರನ್ನು ಸಂಪರ್ಕಿಸಿ ನಿಮ್ಮ ಟಿಕೇಟನ್ನು ಮಾರುವುದಾದರೆ ಎಷ್ಟಕ್ಕೆ ಮಾರುತ್ತೀರಿ ಎಂದು ಕೇಳಲಾಯಿತು. ಹಾಗೆಯೇ ಟಿಕೇಟು ಸಿಗದವರನ್ನು ನೀವು ಟಿಕೇಟನ್ನು ಎಷ್ಟಕ್ಕೆ ಕೊಂಡುಕೊಳ್ಳಲು ತಯಾರಿದ್ದೀರಿ ಎಂದೂ ಕೇಳಲಾಯಿತು. ಟಿಕೇಟ್ ಪಡೆದವರು ಹೆಚ್ಚಿನ ಬೆಲೆಯನ್ನು ಕೇಳಿದರು. ಟಿಕೇಟ್ ಇಲ್ಲದವರು ಅದನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದರು. ಇಬ್ಬರನ್ನೂ ಅವರವರ ನಿರ್ಧಾರಕ್ಕೆ ಕಾರಣಗಳನ್ನು ಕೇಳಲಾಯಿತು. ಅವರು ಕೊಟ್ಟ ಉತ್ತರ ತುಂಬಾ ಕುತೂಹಲಕಾರಿಯಾಗಿತ್ತು. ಟಿಕೇಟ್ ಪಡೆದವರು ಮ್ಯಾಚು ನೋಡುವುದು ಒಂದು ಅದ್ಭುತವಾದ ಘಟನೆ. ಅದು ತಮ್ಮ ಜೀವನದ ಅಮೃತಘಳಿಗೆ ಇತ್ಯಾದಿ ವಿವರಣೆ ನೀಡಿದರು. ಟಿಕೇಟ್ ಇಲ್ಲದವರನ್ನು ಕೇಳಿದಾಗ, ಆ ಹಣಕ್ಕೆ ಸಿಗುವ ಇತರ ವಸ್ತುಗಳ ಪಟ್ಟಿಯನ್ನು ಕೊಟ್ಟರು. ಇಬ್ಬರಿಗೂ ಅವರ ಬಳಿ ಇರುವುದೇ ಹೆಚ್ಚು ಮೌಲಿಕವಾಗಿತ್ತು. ಅಷ್ಟೇ ಅಲ್ಲ, ಅದು ಅವರ ನಿಲುವನ್ನು ಬೇರೆ ಬೇರೆಯಾಗಿಸಿಬಿಟ್ಟಿತ್ತು.


ಮಾರುಕಟ್ಟೆಯಲ್ಲಿ ಇದರ ಪರಿಣಾಮವನ್ನು ನೋಡಿ. ಈ ಸೋಪನ್ನು ಕೊಂಡುಕೊಂಡು ಬಳಸಿ ನೋಡಿ. ತೃಪ್ತಿಯಾಗದಿದ್ದರೆ ಹಿಂತಿರುಗಿಸಿ ಈ ರೀತಿಯ ಪ್ರಚಾರವನ್ನು ನಾವೆಲ್ಲಾ ಕೇಳಿದ್ದೇವೆ. ನಿಜ ನೀವು ತೃಪ್ತರಾಗದಿದ್ದರೆ ವಾಪಸ್ಸು ಕೊಡಬಹುದು. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ನೀವು ಕೊಂಡ ಸರಕು ಕೆಲವೇ ಕ್ಷಣಗಳಲ್ಲಿ ನಿಮ್ಮದಾಗಿಬಿಡುತ್ತದೆ. ನೀವು ಹಿಂತಿರುಗಿಸುವ ಮನಸ್ಸು ಮಾಡುವುದಿಲ್ಲ! ಇದೇ ಒಡೆತನದ ಪರಿಣಾಮ.