ಟಿ ಎಸ್ ವೇಣುಗೋಪಾಲ್
“ಒಂದು ಮದ್ಯಾಹ್ನ, ಒಬ್ಬ ಯುವಕ ಜೋರಾಗಿ ಕಿರುಚಿಕೊಂಡು ನಮ್ಮ ಮನೆಯ ಮುಂದೆ ಓಡಿಕೊಂಡು ಬಂದ. ಮೈಯೆಲ್ಲಾ ರಕ್ತಮಯವಾಗಿತ್ತು. ಯಾರೋ ಅವನನ್ನು ಚಾಕುವಿನಿಂದ ಇರಿದಿದ್ದರು. ಆತ ಖಾದಿರ್ ಮಿಯಾ ಅಂತ ಒಬ್ಬ ಮುಸ್ಲಿಂ ಕೆಲಸಗಾರ. ಕೆಲಸ ಹುಡುಕಿಕೊಂಡ ಇಲ್ಲಿಗೆ ಬಂದಿದ್ದ. ದಾರಿಯಲ್ಲಿ ಯಾರೋ ಮತಾಂಧರು ಅವನನ್ನು ಇರಿದಿದ್ದರು. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ’ಆಗದವರೂ ಇರುವ ಕಡೆ, ಅದೂ ಕೋಮು ಗಲಭೆಯ ಸಮಯದಲ್ಲಿ ಹೋಗಬೇಡ’ ಅಂತ ಅವನ ಹೆಂಡತಿ ಹೇಳುತ್ತಲೇ ಇದ್ದಳಂತೆ. ಅವನು ಅದನ್ನು ರಸ್ತೆಯ ಉದ್ದಕ್ಕೂ ಜ್ಞಾಪಿಸಿಕೊಳ್ಳುತ್ತಲೇ ಇದ್ದನಂತೆ. ಆದರೆ ಕುಟುಂಬದ ಹೊಟ್ಟೆಪಾಡಿಗೆ ಕೆಲಸ ಅನಿವಾರ್ಯವಾಗಿತ್ತು. ಅವನ ಈ ’ಆರ್ಥಿಕ ಅಸ್ವಾತಂತ್ರ ಅವನ ಸಾವಿಗೆ ಕಾರಣವಾಯಿತು. ಅವನು ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ.”
ಈ ಘಟನೆ, ಅಮರ್ತ್ಯಸೇನ್ ಅವರನ್ನು ತುಂಬಾ ಘಾಸಿಗೊಳಿಸಿತು. ನಾವು ಅಸ್ಮಿತೆಗಳನ್ನು ಸಂಕುಚಿತವಾಗಿ ಅರ್ಥಮಾಡಿಕೊಂಡಿರುತ್ತೇವೆ. ನಾವೆಲ್ಲಾ ಮನಸ್ಸುಗಳನ್ನು ಒಡೆಯುವ ಮತೀಯ ರಾಜಕೀಯದಲ್ಲಿ ಹೂತು ಹೋಗಿರುತ್ತೇವೆ. ಈ ಅಪಾಯ ಉಂಟುಮಾಡುವ ಅನಾಹುತಗಳು ಅವರನ್ನು ತೀವ್ರವಾಗಿ ಅಲ್ಲಾಡಿಸಿತ್ತು. ಖಾದಿರ್ ಮಿಯಾ ಅವರ ದಾರಿದ್ರ್ಯ ಅವರ ಆರ್ಥಿಕ ಅಸ್ವಾತಂತ್ರಕ್ಕೆ ಕಾರಣವಾಗಿತ್ತು. ಆರ್ಥಿಕ ಅಸ್ವಾತಂತ್ರ್ಯ ಉಳಿದೆಲ್ಲಾ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿಬಿಡುತ್ತದೆ. ಮನುಷ್ಯ ತೀರಾ ಅಸಹಾಯಕ ಬಲಿಪಶು ಆಗಿಬಿಡುತ್ತಾನೆ. ಖಾದಿರ್ ಮಿಯಾಗೆ ಬೇರೆ ದಾರಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ತನ್ನನ್ನು ದ್ವೇಷಿಸುವವರೇ ತುಂಬಿರುವ ಪ್ರದೇಶಕ್ಕೆ ಬರುವ ಅವಶ್ಯಕತೆ ಅವನಿಗಿರುತ್ತಿರಲಿಲ್ಲ.
ಅಮರ್ತ್ಯ ಸೇನ್ ಅವರ ಇಡೀ ಚಿಂತನೆಯ ಹಿಂದೆ ಕೆಲಸ ಮಾಡುತ್ತಿರುವುದು ಈ ಮನಸ್ಸು. ಬದುಕನ್ನು ನೋಡುವ ಇಂತಹ ಕ್ರಮವನ್ನು ಪೋಷಿಸಿ, ಅವರಲ್ಲಿ ಬೆಳೆಸಿದ್ದು ರವೀಂದ್ರರ ಶಾಂತಿನಿಕೇತನ. ಅಲ್ಲಿ ಕಲಿಯುವುದಕ್ಕೆ ತೀರಾ ಮುಕ್ತ ವಾತಾವರಣವಿತ್ತು. ರ‍್ಯಾಂಕ್, ಗ್ರೇಡ್ ಇವುಗಳ ಗೊಡವೆ ಅಲ್ಲಿರಲಿಲ್ಲ. ಭಾರತೀಯ ಸಾಂಸ್ಕೃತಿಕ, ವೈಜ್ಞಾನಿಕ ಪರಂಪರೆಯೊಂದಿಗೆ ಜಗತ್ತಿನ ಇತರ ಎಲ್ಲಾ ಸಂಸ್ಕೃತಿಗಳ ಪ್ರಭಾವಕ್ಕೂ ಅಲ್ಲಿ ಮಕ್ಕಳು ತೆರೆದುಕೊಳ್ಳುತ್ತಿದ್ದರು. ಬೌದ್ಧಿಕ ಕುತೂಹಲವಿರುವ ಹಲವಾರು ಸಹಪಾಠಿಗಳಿದ್ದರು. ಸ್ನೇಹಪರವಾದ ಅಧ್ಯಾಪಕರಿದ್ದರು. ಪಠ್ಯಕ್ರಮಕ್ಕೆ ಸಂಬಂಧಪಡದ ವಿಷಯಗಳ ಬಗ್ಗೆಯೂ ಅವರನ್ನು ಪ್ರಶ್ನೆ ಕೇಳಬಹುದಿತ್ತು. ಆ ಕಾಲದ ಎಷ್ಟೋ ಘಟನೆಗಳೊಡನೆ ಮಕ್ಕಳು ಮುಖಾಮುಖಿ ಆಗುತ್ತಿದ್ದರು. ಬಂಗಾಲದ ಕ್ಷಾಮದ ಮೊದಲ ಅನುಭವ ಸೇನರಿಗೆ ಆಗಿದ್ದೂ ಅಲ್ಲೆ. ಅದು ಮುಂದೆ ಅವರ ಬಹುದೊಡ್ಡ ಅಧ್ಯಯನಕ್ಕೂ ಕಾರಣವಾಯಿತು.
ಶಾಂತಿನಿಕೇತನದ ನಂತರ ಇವರು ಪ್ರಸಿಡೆನ್ಸಿ ಕಾಲೇಜು ಸೇರಿದರು. ಅಲ್ಲಿಗೆ ಬರುವ ವೇಳೆಗೆ ಅವರಲ್ಲಿ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಒಂದು ಸ್ಪಷ್ಟ ನಿಲುವು ಬೆಳೆದಿತ್ತು. ಬಹುತ್ವ ಅನಿವಾರ್ಯ ಅನ್ನುವುದು ಅವರಿಗೆ ಸ್ಪಷ್ಟವಾಗಿತ್ತು. ಹಾಗೆಯೇ ಸಮಾನತೆ ಅವರಿಗೆ ತೀರಾ ಕಾಳಜಿಯ ವಿಷಯವಾಗಿತ್ತು. ಪ್ರೆಸಿಡೆನ್ಸಿ ಕಾಲೇಜಿನ ಶೈಕ್ಷಣಿಕ ಉತ್ಕೃಷ್ಟತೆ ಇವರನ್ನು ಆಕರ್ಷಿಸಿತ್ತು. ಅಲ್ಲಿ ಬಾಬುತೋಷ್ ದತ್ತ, ತಪಸ್ ಮಜುಂದಾರ್ ಇಂತಹ ಘಟಾನುಘಟಿಗಳೆಲ್ಲಾ ಅಧ್ಯಾಪಕರಾಗಿದ್ದರು. ಜೊತೆಗೆ ಸುಕುಮಾಯ್ ಚಕ್ರವರ್ತಿ, ಮೃಣಾಲ್ ದತ್ತ ಚೌಧುರಿಯಂತಹ ಸಹಪಾಠಿಗಳಿದ್ದರು. ಬೇರೆ ವಿಭಾಗಗಳೊಂದಿಗೂ ಅವರಿಗೆ ಒಳ್ಳೆಯ ಒಡನಾಟ ಸಾಧ್ಯವಾಗಿತ್ತು. ಇತಿಹಾಸ ವಿಭಾಗದಲ್ಲಿ ಬರುನ್ ಡೆ, ಪಾರ್ಥಗುಪ್ತ ಹಾಗೂ ಬಿನಾಯ್ ಚೌಧರಿ ಮುಂತಾದವರು ಇವರ ಆತ್ಮೀಯ ಸ್ನೇಹಿತರಾಗಿದ್ದರು. ಹಾಗಾಗಿ ಇವರ ಬೌದ್ಧಿಕ ಹರವು ವಿಸ್ತಾರಗೊಂಡಿತ್ತು.
ಪ್ರೆಸಿಡೆನ್ಸಿ ಕಾಲೇಜು ಆಗ ರಾಜಕೀಯವಾಗಿ ತೀರಾ ಸಕ್ರಿಯವಾಗಿದ್ದ ಕಾಲ. ಆದರೆ ಸೇನರಿಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಉತ್ಸಾಹ ಇರಲಿಲ್ಲ. ಆದರೆ ಎಡಪಂಥೀಯರ ಉನ್ನತ ನೈತಿಕತೆ ಹಾಗೂ ಅವರ ಸಾಮಾಜಿಕ ಅನುಕಂಪೆ, ರಾಜಕೀಯ ಅರ್ಪಣಾ ಮನೋಭಾವದ ಬದ್ಧತೆ ಹಾಗೂ ಸಮಾನತೆ ಕುರಿತ ಕಾಳಜಿಯ ಬಗ್ಗೆ ಸೇನ್ ಅವರಿಗೆ ಅಪಾರವಾದ ಗೌರವವಿತ್ತು. ಜೊತೆಗೆ ಅವರ ಬಗ್ಗೆ ತಕರಾರೂ ಇತ್ತು. ಎಡಪಂಥೀಯರಿಗೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ನಂಬಿಕೆ ಇರಲಿಲ್ಲ. ಅವುಗಳನ್ನು ಬೂರ್ಜ್ವಾ ಡೆಮಾಕ್ರೆಸಿ ಎಂದು ತಳ್ಳಿಹಾಕುತ್ತಿದ್ದರು. ಅವುಗಳ ಕೊರತೆಯ ಬಗ್ಗೆ ಮಾತ್ರ ಅವರು ಗಟ್ಟಿದನಿಯಲ್ಲಿ ಮಾತನಾಡುತ್ತಾರೆ ಅನ್ನುವುದೇ ಅವರ ಒಂದು ತಕರಾರು. ಎಡಪಂಥೀಯರು ಪ್ರಜಾಸತ್ತೆಯ ಬಗ್ಗೆ ಮಾಡುತ್ತಿದ್ದ ಕೆಲವು ಟೀಕೆಗಳನ್ನು ಸೇನ್ ಕೂಡ ಒಪ್ಪಿಕೊಳ್ಳುತ್ತಿದ್ದರು. ಉದಾಹರಣೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಣದ ಬಲವನ್ನು ಕುರಿತಂತೆ ಎಡಪಂಥೀಯರೊಂದಿಗೆ ಅವರಿಗೆ ಸಹಮತವಿತ್ತು. ಆದರೆ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಅನುಕೂಲಗಳೂ ಇವೆ. ಅವುಗಳನ್ನೂ ಗುರುತಿಸಬೇಕೆನ್ನುವುದು ಇವರ ವಾದವಾಗಿತ್ತು. ಜೊತೆಗೆ ಎಡಪಂಥೀಯರು ಸೂಚಿಸುವ ಪರ್ಯಾಯ ವ್ಯವಸ್ಥೆಯಲ್ಲಿರುವ ಮಿತಿಗಳನ್ನು ಅವರು ಚರ್ಚಿಸುವುದಿಲ್ಲ ಅನ್ನುವ ಬೇಸರವೂ ಇತ್ತು. ಉದಾಹರಣೆಗೆ ಒಂದು ವ್ಯವಸ್ಥೆಯಲ್ಲಿ ವಿರೋಧಕ್ಕೆ ಅವಕಾಶವೇ ಇಲ್ಲದ ಹೋದರೆ ಅಲ್ಲಿ ರಾಜಕೀಯ ದುರ್ಬಳಕೆಯ ಸಾಧ್ಯತೆಯಿರುತ್ತದೆ. ಈ ಬಗ್ಗೆ ಎಡಪಂಥೀಯರು ಗಂಭೀರವಾಗಿ ಯೋಚಿಸಬೇಕು ಅನ್ನುತ್ತಿದ್ದರು. ಹಾಗೆಯೇ ರಾಜಕೀಯ ಸಹಿಷ್ಣುತೆಯನ್ನು ಎಡಪಂಥೀಯರು ಕೇವಲ ಪಾಶ್ಚಾತ್ಯ ಉದಾರವಾದವನ್ನಾಗಿ ನೋಡುವುದು ಕೂಡ ಅವರಿಗೆ ಒಂದು ಗಂಭೀರ ಮಿತಿಯಾಗಿಯೇ ತೋರಿತ್ತು. ಪಾಶ್ಚಾತ್ಯ ಉದಾರವಾದವನ್ನು ತಿರಸ್ಕರಿಸುವ ಭರದಲ್ಲಿ ನಾವು ವಿವಿಧ ಸಂಸ್ಕೃತಿಗಳಲ್ಲಿ ಬೆಳೆದು ಬಂದಿರುವ ಸಹಿಷ್ಣುತೆ ಸಾಂಪ್ರದಾಯಿಕ ಮೌಲ್ಯಗಳನ್ನು ಅಲ್ಲಗೆಳೆಯುತ್ತಿರುತ್ತೇವೆ ಅನ್ನುತ್ತಿದ್ದರು. ಉದಾಹರಣೆಗೆ ಆಶೋಕ ಮೂರನೇ ಶತಮಾನದಲ್ಲೇ ಈ ಬಗ್ಗೆ ತೀರಾ ಸ್ಪಷ್ಟವಾಗಿ ಹೇಳಿದ್ದ- “ಯಾವನು ತನ್ನ ಧiದ ಘನತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇನ್ನೊಂದು ಮತವನ್ನು ಹೀಗಳೆಯುತ್ತಾನೋ ಅವನು ವಾಸ್ತವದಲ್ಲಿ ತನ್ನ ಮತವನ್ನು ಗಂಭೀರವಾಗಿ ಘಾಸಿಗೊಳಿಸುತ್ತಿರುತ್ತಾನೆ”.
ಸೇನ್ ಅವರು ಜೀವನವಿಡೀ ತೊಡಗಿಸಿಕೊಂಡಿದ್ದ ಶೈಕ್ಷಣಿಕ ವಿಷಯಗಳಾದ ಯೋಗಕ್ಷೇಮ ಅರ್ಥಶಾಸ್ತ್ರ, ಆರ್ಥಿಕ ಅಸಮಾನತೆ ಹಾಗೂ ಬಡತನ, ಸಾಮಾಜಿಕ ಆಯ್ಕೆ ಇವೆಲ್ಲಾ ಕಲ್ಕತ್ತಾ ದಿನಗಳಲ್ಲೇ ಇವರನ್ನು ಆವರಿಸಿಕೊಂಡಿತ್ತು. ಕೆನೆತ್ ಆರೋ ಅವರ ಕೃತಿ “ಸಾಮಾಜಿಕ ಆಯ್ಕೆ ಹಾಗೂ ವೈಯಕ್ತಿಕ ಮೌಲ್ಯಗಳು ಇವರನ್ನು ಬಲವಾಗಿ ಪ್ರಭಾವಿಸಿತ್ತು. ಸಹಪಾಟಿ ಸುಕುಮಾಯ್ ಚಕ್ರವರ್ತಿ ಪುಸ್ತಕದ ಅಂಗಡಿಯಿಂದ ಕೆಲ ಗಂಟೆಗಳಿಗೆ ಎರವಲು ತಂದಿದ್ದನ್ನು ಕಾಫಿ ಕ್ಲಬ್‌ನಲ್ಲಿ ಕೂತು ಓದಿ ಮುಗಿಸಿದ್ದರು. ಸುಕುಮಾಯ್ ಜೊತೆಗೆ ಈ ಬಗ್ಗೆ ಗಂಭಿರವಾಗಿ ಚರ್ಚಿಸಿದ್ದನ್ನು ಸೇನ್ ಆಗಾಗ ನೆನೆಸಿಕೊಳ್ಳುತ್ತಿದ್ದರು.
ಇವರು ಕೇಂಬ್ರಿಡ್ಜಿನ ಟ್ರಿನಿಟಿ ಕಾಲೇಜು ಸೇರುವ ವೇಳೆಗಾಗಲೇ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಬಿಎ ಮುಗಿಸಿಯಾಗಿತ್ತು. ಆದರೂ ಮತ್ತೆ ಕೇಂಬ್ರಿಡ್ಜಿನಲ್ಲಿ ಬಿಎ ಮಾಡಬೇಕಾಗಿ ಬಂತು. ಕಲ್ಕತ್ತೆಗೆ ಹೋಲಿಸಿದರೆ ಅಲ್ಲಿ ಅರ್ಥಶಾಸ್ತ್ರ ಅಷ್ಟೊಂದು ಗಣಿತೀಯವಾಗಿರಲಿಲ್ಲ. ಜೊತೆಗೆ ಇವರನ್ನು ಆವರಿಸಿಕೊಂಡಿದ್ದ ಬಹುತೇಕ ವಿಷಯಗಳ ಬಗ್ಗೆ ಅಲ್ಲಿ ಯಾರಿಗೂ ಆಸಕ್ತಿಯೂ ಇರಲಿಲ್ಲ. ಕೇಂಬ್ರಿಡ್ಜಿನಲ್ಲಿ ಆಗ ಕೇನ್ಸ್ ಅರ್ಥಶಾಸ್ತ್ರದ ಗುಣಾವಗುಣಗಳ ಬಗ್ಗೆ ತೀವ್ರ ಚರ್ಚೆಯಾಗುತ್ತಿತ್ತು. ಪರ ವಿರೋಧದ ಎರಡು ಬಣಗಳೇ ಆಗಿಬಿಟ್ಟಿತ್ತು. ರಿಚರ್ಡ್ ಕ್ಹನ್, ನಿಕೊಲಸ್ ಕಾಲ್ಡರ್, ಜೋನ್ ರಾಬಿನ್ಸನ್ ಮೊದಲಾದ ಕೇನ್ಸ್ ಪರವಾದ ಅರ್ಥಶಾಸ್ತ್ರಜ್ಞರು ಒಂದು ಕಡೆ. ಹಾಗೆಯೇ ಕೇನ್ಸನ್ನು ಅನುಮಾನದಿಂದ ನೋಡುತ್ತಿದ್ದ ನವ ಕ್ಲಾಸಿಕಲ್ ಅರ್ಥಶಾಸ್ತ್ರಜ್ಞರಾದ ಡೆನ್ನಿಸ್ ರಾಬರ್ಟಸನ್, ಹ್ಯಾರಿ ಜಾನಸನ್, ಮೈಕೆಲ್ ಫಾರೆಲ್ ಮೊದಲಾದವರು ಇನ್ನೊಂದು ಕಡೆ. ಎರಡೂ ಗುಂಪಿಗೆ ಸೇರದ ಕೆಲವು ಅತ್ಯುತ್ತಮ ಅಧ್ಯಾಪಕರೂ ಇದ್ದರು. ಸೇನ್ ಅವರಿಗೆ ಇವರೆಲ್ಲರ ಜೊತೆ ಒಳ್ಳೆಯ ಸಂಬಂಧವಿತ್ತು.
ಟ್ರಿನಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರಜ್ಞರ ನಡುವೆ ತೀವ್ರ ಭಿನ್ನಾಭಿಪ್ರಾಯ ಇತ್ತು. ಆದರೂ ಅವರಿಗೆ ಒಟ್ಟಿಗೆ ಕೆಲಸಮಾಡುವುದಕ್ಕೆ, ಚರ್ಚಿಸುವುದಕ್ಕೆ ಸಾಧ್ಯವಾಗಿತ್ತು. ಸೇನ್ ಅಲ್ಲಿಗೆ ಸೇರಿದ್ದೂ ಕೂಡ ಇದೇ ಕಾರಣಕ್ಕೆ. ಅಲ್ಲಿ ವಿಭಿನ್ನ ರಾಜಕೀಯ ನಿಲುವಿನ ಮೂವರು ಮಹಾನ್ ಮೇಧಾವಿಗಳು ಇದ್ದರು. ಮಾರ್ಕ್ಸವಾದಿ ನಿಲುವಿನ ಮಾರಿಸ್ ಡಾಬ್. ಸಂಪ್ರದಾಯವಾದಿ ನಿಯೋ ಕ್ಲಾಸಿಕಲ್ ಪಂಥಕ್ಕೆ ಸೇರಿದ್ದ ಡೆನಿಸ್ ರಾಬರ್ಟ್‌ಸನ್ ಹಾಗೂ ಪಿಯೆರೋ ಸ್ರಾಫಾ ಅಲ್ಲಿ ಒಟ್ಟಿಗೆ ಅತ್ಮೀಯವಾಗಿ ಕೆಲಸ ಮಾಡುತ್ತಿದ್ದರು. ಬೇರೆ ಕಡೆ ಅರ್ಥಶಾಸ್ತ್ರಜ್ಞರ ನಡುವೆ ಸಮರವೇ ನಡೆಯುತ್ತಿದ್ದಾಗ, ಇದು ನಿಜವಾಗಿ ಆಶ್ವರ್ಯಕರವಾದ ವಿಷಯ. ಇವರಲ್ಲಿ ಪರಸ್ಪರ ಗೌರವ ಮತ್ತು ಸಹನೆ ಇದ್ದವು. ಇದಕ್ಕೆ ಸ್ರಾಫಾ ಅವರು ಸೇನ್ ಅವರೊಂದಿಗೆ ಹಂಚಿಕೊಂಡ ಒಂದು ಘಟನೆ ಒಳ್ಳೆಯ ಉದಾಹರಣೆ. ಡಾಬ್ ಅವರನ್ನು ಟ್ರಿನಿಟಿ ಕಾಲೇಜಿಗೆ ಉದ್ಯೋಗಕ್ಕೆ ರಾಬರ್ಟ್‌ಸನ್ ಅಹ್ವಾನಿಸುತ್ತಾರೆ. ಡಾಬ್ ಖುಷಿಯಾಗೇ ಒಪ್ಪಿಕೊಂಡು ಬಿಡುತ್ತಾರೆ. ನಂತರ ಡಾಬ್ ಅವರಿಗೆ ತಾನು ರಾಬರ್ಟ್ಸನ್ನಿಗೆ ತನ್ನ ಬಗ್ಗೆ ಪೂರ್ಣ ಮಾಹಿತಿ ನೀಡಿಲ್ಲ ಎಂಬ ಗಿಲ್ಟ್ ಕಾಡುತ್ತದೆ. ಡಾಬ್ ತಕ್ಷಣ ಕ್ಷಮೆ ಕೋರಿ ಪತ್ರ ಬರೆದರು, “ನಾನು ಕಮ್ಯುನಿಸ್ಟ್ ಪಕ್ಷದ ಸದಸ್ಯ ಎಂಬುದನ್ನು ತಮ್ಮ ಗಮನಕ್ಕೆ ತಂದಿಲ್ಲ. ಈ ಕಾರಣದಿಂದಾಗಿ ನಾನು ಟ್ರಿನಿಟಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಗೆ ಯೋಗ್ಯನಲ್ಲ ಎಂದು ನಿಮಗೆ ಅನಿಸಿದರೆ, ಅದು ನನಗೆ ಅರ್ಥ ಆಗುತ್ತದೆ.” ಅದಕ್ಕೆ ರಾಬರ್ಟ್‌ಸನ್ “ನೀವು ಚಾಪೆಲ್ ಒಡೆಯುತ್ತೇನೆ ಅಂತ ೧೫ ದಿನಗಳ ನೋಟಿಸ್ ಕೊಡುವ ದಿನ ಬರುವವರೆಗೆ ಯಾವುದೇ ತೊಂದರೆಯೂ ಇಲ್ಲ.” ಎಂದು ಉತ್ತರಿಸುತ್ತಾರೆ.
ಹೀಗೆ ಸೇನ್ ಬಾಲ್ಯದಿಂದ ಬೆಳೆದುಕೊಂಡು ಬಂದಿದ್ದ ಒಂದು ಪ್ರಜಾಸತ್ತಾತ್ಮಕ, ಪರಸ್ಪರ ಸಹನಶೀಲತೆಯ ವಾತಾವರಣ ಟ್ರಿನಿಟಿ ಕಾಲೇಜಿನಲ್ಲೂ ಮುಂದುವರಿದಿತ್ತು. ಆದರೆ ಅವರಿಗೆ ತೀರಾ ಪ್ರಿಯ ವಿಷಯವಾಗಿದ್ದ ಯೋಗಕ್ಷೇಮ ಅರ್ಥಶಾಸ್ತ್ರದಲ್ಲಿ ಅಲ್ಲಿ ಯಾರಿಗೂ ಆಸಕ್ತಿ ಇರಲಿಲ್ಲ. ಹಾಗಾಗಿ ಸಂಶೋಧನಾ ಪ್ರಬಂಧಕ್ಕೆ ಅವರು ಬೇರೆಯ ವಿಷಯವನ್ನು ಆರಿಸಿಕೊಳ್ಳಬೇಕಾಯಿತು. ಇವರ ಮಾರ್ಗದರ್ಶಿ ಜೋನ್ ರಾಬಿನ್‌ಸನ್ ಅವರಿಗೆ ಪ್ರಿಯವಾಗಿದ್ದ “ವಿವಿಧ ಕಾರ್ಯವಿಧಾನಗಳ ನಡುವಿನ ಆಯ್ಕೆ” ಎಂಬ ವಿಷಯವನ್ನು ಸಂಶೋಧನೆಗೆ ಆರಿಸಿಕೊಂಡರು. ಅದರಲ್ಲೂ ವಿಶೇಷವಾಗಿ ಉತ್ಪಾದನೆಗೆ ಸಂಬಂಧಿಸಿದಂತೆ ಸಾಮಾಜಿಕ ದೃಷ್ಟಿಕೋನದಿಂದ ಸೂಕ್ತವಾದ ಕಾರ್ಯವಿಧಾನವನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಇವರು ಸಂಶೋಧನೆಯ ವಿಷಯವನ್ನಾಗಿ ಆರಿಸಿಕೊಂಡರು. ಅದಕ್ಕಾಗಿ ಅವರು ತೀವ್ರ ನಿರುದ್ಯೋಗವಿರುವ ಹಾಗೂ ಕಡಿಮೆ ಕೂಲಿ ಇರುವ ಆರ್ಥಿಕತೆಯನ್ನು ಆರಿಸಿಕೊಂಡಿದ್ದರು.
ಒಂದೇ ವರ್ಷದಲ್ಲಿ ಸಂಶೋಧನೆ ಮುಗಿಯುವ ಹಂತಕ್ಕೆ ಬಂದಿತ್ತು. ಆದರೆ ಸಂಶೋಧನೆಯ ಅವಧಿ ಮೂರು ವರ್ಷಗಳು. ಅದಕ್ಕೆ ಮೊದಲು ಪ್ರಬಂಧವನ್ನು ಮಂಡಿಸುವುದಕ್ಕೆ ಅವಕಾಶವಿರಲಿಲ್ಲ. ಉಳಿದ ಎರಡು ವರ್ಷ ಭಾರತದಲ್ಲಿ ಕಲಿಯೋಣ ಅನ್ನಿಸಿ ಅವಕಾಶಕ್ಕೆ ಮನವಿ ಮಾಡಿಕೊಂಡರು. ಅವಕಾಶ ಸಿಕ್ಕಿತು. ಆದರೆ ಭಾರತದಲ್ಲಿ ಮಾರ್ಗದರ್ಶಿಯೊಬ್ಬರು ಇರಲೇಬೇಕೆಂಬ ಶರತ್ತನ್ನು ವಿಧಿಸಿದರು. ಆರ್ಥಿಕ ವಿಧಾನಶಾಸ್ತ್ರದಲ್ಲಿ ಅಪಾರ ಅಧ್ಯಯನ ಮಾಡಿದ್ದ ಎ ಕೆ ದಾಸ್‌ಗುಪ್ತ ಅದಕ್ಕೆ ಒಪ್ಪಿಕೊಂಡರು. ಸೇನ್ ಭಾರತಕ್ಕೆ ಮರಳಿದರು.
ಜಾಧವಪುರ್ ವಿಶ್ವವಿದ್ಯಾನಿಲಯದಲ್ಲಿ ಆಗಷ್ಟೇ ಅರ್ಥಶಾಸ್ತ್ರ ಪೀಠ ಪ್ರಾರಂಭವಾಗಿತ್ತು. ಅದಕ್ಕೆ ಸೇನ್ ಅವರನ್ನು ಪ್ರೊಫೆಸರ್ ಆಗಿ ಆಯ್ಕೆ ಮಾಡಲಾಯಿತು. ಇವರಿಗೆ ಆಗ ಇನ್ನೂ ೨೩ರ ಹರೆಯ. ಪ್ರತಿಭಟನೆಯ ಮಹಾಪೂರವೇ ಹರಿದು ಬಂದಿತು. ತೊಟ್ಟಲಿನಿಂದ “ಹೊಸ ಪ್ರೊಫೆಸರ್ ಅವರನ್ನು ಅಪಹರಿಸಿಕೊಂಡು ಬರಲಾಗಿದೆ, ಇತ್ಯಾದಿ ಬರಹಗಳು ಗೋಡೆಗಳ ಮೇಲೆಲ್ಲಾ ಕಾಣಿಸಿಕೊಂಡವು. ಅಲ್ಲಿ ಇವರ ಜೊತೆ ಹಲವು ಹೆಸರಾಂತ ಚಿಂತಕರು ಕೆಲಸ ಮಾಡುತ್ತಿದ್ದರು. ಇವರಿಗೆ ಅದೊಂದು ಒಳ್ಳೆಯ ಅವಕಾಶವಾಯಿತು. ಕೇಂಬ್ರಿಡ್ಜ್‌ನಲ್ಲಿ ಕೈಬಿಟ್ಟಿದ್ದ ತಮ್ಮ ಆತ್ಮೀಯ ವಿಷಯಗಳ ಬಗ್ಗೆ ಮತ್ತೆ ಅಧ್ಯಯನ ಆರಂಭಿಸಿದರು. ಮೂರು ವರ್ಷ ಕಳೆಯುವ ವೇಳೆಗೆ ಇವರ ಸಂಶೋಧನಾ ಪ್ರಬಂಧವೂ “ಮಾಗುತ್ತಾ” ಹೋಯಿತು. ಅದನ್ನು ಟ್ರಿನಿಟಿ ಕಾಲೇಜಿನ ಸ್ಪರ್ಧಾತ್ಮಕ ಫೆಲೋಷಿಪ್ ಬಹುಮಾನಕ್ಕೂ ಸಲ್ಲಿಸಿದರು. ಫೆಲೋಷಿಪ್ ಕೂಡ ದೊರಕಿತು. ಫೆಲೋಷಿಪ್ಪಿನ ಅವಧಿ ನಾಲ್ಕು ವರ್ಷ. ಆ ಅವಧಿಯಲ್ಲಿ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯ ಅವರಿಗಿತ್ತು. ಸೇನ್ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಲು ನಿರ್ಧರಿಸಿದರು. ಮೊದಲಿನಿಂದಲೂ ಅವರಿಗೆ ತರ್ಕ ಹಾಗೂ ಜ್ಞಾನಶಾಸ್ತ್ರದ ಬಗ್ಗೆ ವಿಶೇಷ ಒಲವಿತ್ತು. ನಂತರ ನೈತಿಕ ಹಾಗೂ ರಾಜಕೀಯ ತತ್ವಶಾಸ್ತ್ರದ ಕಡೆಗೂ ಅವರ ಆಸಕ್ತಿ ಹರಡಿಕೊಂಡಿತು. ಅವರಿಗೆ ಪ್ರಜಾಸತ್ತಾತ್ಮಕತೆ ಹಾಗೂ ಸಮಾನತೆಯನ್ನು ಕುರಿತಂತೆ ಇದ್ದ ಕಾಳಜಿಗೂ ತತ್ತ್ವಶಾಸ್ತ್ರದ ಈ ಆಸಕ್ತಿಗೂ ಹೊಂದಿಕೆಯಾಗುತ್ತಿತ್ತು. ಅಂದರೆ ಅರ್ಥಶಾಸ್ತ್ರದಲ್ಲಿ ಅವರ ಆಸಕ್ತಿಯ ಕ್ಷೇತ್ರಕ್ಕೂ ತತ್ತ್ವಶಾಸ್ತ್ರದಲ್ಲಿ ಅವರು ಅಧ್ಯಯನ ಮಾಡಲು ಆರಿಸಿಕೊಂಡ ವಿಷಯಕ್ಕೂ ಹತ್ತಿರದ ನೆಂಟಿತ್ತು. ಉದಾಹರಣೆಗೆ ಸಾಮಾಜಿಕ ಆಯ್ಕೆಯ ಸಿದ್ದಾಂತದಲ್ಲಿ ಗಣಿತೀಯ ತರ್ಕವನ್ನು ಬಹಳವಾಗಿ ಬಳಸುತ್ತಾರೆ. ಜೊತೆಗೆ ಸೇನ್ ನೈತಿಕ ತತ್ವಶಾಸ್ತ್ರವನ್ನೂ ತಮ್ಮ ಅಧ್ಯಯನದಲ್ಲಿ ಒಟ್ಟಿಗೆ ತಂದಿದ್ದರು. ಅಸಮಾನತೆ ಹಾಗು ಬಡತನವನ್ನು ಕುರಿತಂತೆ ಅವರ ದೃಷ್ಟಿಕೋನದಲ್ಲೂ ಇವೆರಡೂ ಒಟ್ಟಿಗೆ ಹೆಣೆದುಕೊಂಡಿರುವುದನ್ನು ಕಾಣಬಹುದು. ಅರ್ಥಶಾಸ್ತ್ರ ಹಾಗೂ ತತ್ವಶಾಸ್ತ್ರಗಳೆರಡನ್ನು ಬೆಸೆದುಕೊಂಡೇ ಅವರ ದೃಷ್ಟಿಕೋನ ರೂಪುಗೊಂಡಿದೆ.
ಹಾಗೆ ಅವರ ಅಧ್ಯಯನದ ಹರಿವು ವಿಸ್ತಾರಗೊಳ್ಳುತ್ತಾ ಹೋಯಿತು. ನಂತರ ಟ್ರಿನಿಟಿ ಕಾಲೇಜಿನಿಂದ ರಜೆ ಪಡೆದುಕೊಂಡು ಎಂಐಟಿಯಲ್ಲಿ ಸೇವೆ ಸಲ್ಲಿಸಲು ಹೋದರು. ಅಲ್ಲಿ ಇವರು ಪಾಲ್ ಸ್ಯಾಮ್ಯುಯಲ್‌ಸನ್ ಮೊದಲಾದವರೊಂದಿಗೆ ಚರ್ಚಿಸುವುದಕ್ಕೆ ಸಾಧ್ಯವಾಯಿತು. ೧೯೬೩ರ ವೇಳೆಗೆ ಕೇಂಬ್ರಿಡ್ಜನ್ನು ಪೂರ್ಣವಾಗಿ ಬಿಟ್ಟು ದೆಹಲಿಗೆ ಮರಳಲು ನಿರ್ಧರಿಸಿದರು. ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸಿನಲ್ಲಿ ಹಾಗೂ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ೧೯೭೧ರವರೆಗೆ ಕೆಲಸಮಾಡಿದರು. ಅಲ್ಲಿ ಕೆ ಎನ್ ರಾಜ ಅವರ ನೇತೃತ್ವದಲ್ಲಿ ಅಡ್ವಾನ್ಸ್ಡ್ ಸ್ಕೂಲ್ ಆಫ್ ಎಕನಾಮಿಕ್ಸನ್ನು ಬೆಳೆಸಿದರು. ಇವರ ಜೊತೆಗೆ ಅರ್ಥಶಾಸ್ತ್ರ ವಿಭಾಗಕ್ಕೆ ಸುಕುಮಾಯ್ ಚಕ್ರವರ್ತಿ, ಜಗದೀಶ್ ಭಗವತಿ, ಮನಮೋಹನ್ ಸಿಂಗ್, ಸುರೇಶ್ ತೆಂಡುಲ್ಕರ್ ಇವರೆಲ್ಲಾ ಸೇರಿಕೊಂಡರು. ಅಲ್ಲಿಯ ಸಮಾಜಶಾಸ್ತ್ರದ ವಿಭಾಗವು ಬಲವಾಗಿಯೇ ಇತ್ತು. ಎಂ ಎನ್ ಶ್ರೀನಿವಾಸ್, ಅಂಡ್ರೆ ಬೆಟೆಲ್, ವೀಣಾ ದಾಸ್ ಮೊದಲಾದವರು ಆ ವಿಭಾಗದಲ್ಲಿದ್ದರು. ಇವರು ೧೯೭೪ರಲ್ಲಿ ದೆಹಲಿ ಬಿಟ್ಟು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸೇರಿದರು. ಆ ವೇಳೆಗೆ ಅರ್ಥಶಾಸ್ತ್ರ ಹಾಗೂ ಸಮಾಜವಿಜ್ಞಾನದ ಬೋಧನೆಗೆ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸಾಕಷ್ಟು ಪ್ರಖ್ಯಾತವಾಗಿತ್ತು.
ಸಾಮಾಜಿಕ ಆಯ್ಕೆಯ ಸಾಧ್ಯತೆ:
ಸಾಮಾಜಿಕ ಆಯ್ಕೆಗಳನ್ನು ನಿರ್ಧರಿಸುವ ವಿಧಾನವನ್ನು ಕುರಿತಂತೆ ಸೇನ್ ಅವರಿಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಆಸಕ್ತಿ ಮೂಡಿತ್ತು. ಆರೋ ಅವರ ಪುಸ್ತಕದ ಓದು, ಈ ಕುರಿತು ಅವರನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿತು. ಇದು ಒಂದು ಸಮಾಜದ ಪ್ರಜೆಗಳ ವೈಯಕ್ತಿಕ ಆದ್ಯತೆಗಳನ್ನು ಕ್ರೋಡೀಕರಿಸಿ, ಸಾಮುದಾಯಿಕ ಆದ್ಯತೆಗಳನ್ನು ರೂಪಿಸುವ ಸಮಸ್ಯೆಯತ್ತ ಗಮನ ಹರಿಸುತ್ತದೆ.
ಇದು ಮುಖ್ಯ. ಯಾಕೆಂದರೆ, ಅರ್ಥಶಾಸ್ತ್ರ ಹಾಗೂ ರಾಜಕೀಯದಲ್ಲಿ ನಾವು ನಿರಂತರವಾಗಿ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ, ಅಲ್ಲಿಯ ಕ್ರಮಗಳ ಬಗ್ಗೆ, ಅದರ ಫಲಿತಗಳ ಬಗ್ಗೆ ತೀರ್ಮಾನಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತೇವೆ. ಒಂದು ರಾಜಕೀಯ ವ್ಯವಸ್ಥೆಯನ್ನು, ಸಮಾಜವನ್ನು ಹಾಗೂ ಆರ್ಥಿಕತೆಯನ್ನು ಅದು ಪ್ರಜಾಸತ್ತಾತ್ಮಕವಾಗಿದೆ ಅಥವಾ ಅದು ನಿರಂಕುಶ ಪ್ರಭುತ್ವ ಎಂದು; ಅದು ಭ್ರಷ್ಟವಾಗಿದೆ ಅಥವಾ ಶುದ್ಧವಾಗಿದೆ ಎಂದು; ಅದು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳುತ್ತಲೇ ಇರುತ್ತೇವೆ. ಈ ಅಭಿಪ್ರಾಯಗಳು ನಮ್ಮ ನೈತಿಕ ನಿಲುವನ್ನೋ, ಅಭಿರುಚಿಯನ್ನೋ, ನಮ್ಮ ಆಸೆಯನ್ನೋ ಆಥವಾ ಇಂತಹ ಇನ್ಯಾವುದೋ ಅಂಶಗಳನ್ನು ಆಧರಿಸಿರುತ್ತವೆ. ಅವು ಒಟ್ಟಾರೆಯಾಗಿ ನಮ್ಮ ನಮ್ಮ ವೈಯಕ್ತಿಕ ಆದ್ಯತೆಗಳನ್ನು ಆಧರಿಸಿರುತ್ತವೆ ಎಂದು ಸಾಮಾಜಿಕ ಆಯ್ಕೆಯ ಸಿದ್ಧಾಂತ ಭಾವಿಸುತ್ತದೆ. ಸಾಮಾಜಿಕ ಆಯ್ಕೆಯ ಸಿದ್ಧಾಂತದ ಉದ್ದೇಶವೇ ನಿರ್ಧಾರಗಳು ಸಾಮೂಹಿಕವಾಗಿ ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಅಧ್ಯಯನ ಮಾಡುವುದು. ಅದು ಒಂದು ಸಮಾಜದಲ್ಲಿ ವ್ಯಕ್ತಿಗಳ ಆದ್ಯತೆಗಳನ್ನು ಕ್ರೋಡೀಕರಿಸಿ ಹೇಗೆ “ಸಾಮಾಜಿಕ ಆದತೆಗಳನ್ನಾಗಿ” ರೂಪಿಸಬಹುದು ಎಂಬುದನ್ನು ಮುಖ್ಯವಾಗಿ ಗಮನಿಸುತ್ತದೆ. ಸಾಮಾಜಿಕ ಆಯ್ಕೆಯನ್ನು ನಿರ್ಧರಿಸುವುದಕ್ಕೆ ಹಲವಾರು ಪರ್ಯಾಯ ಕ್ರಮಗಳು ಹಾಗೂ ನಿಯಮಗಳು ಸಾಧ್ಯ. ಉದಾಹರಣೆಗೆ ವೈಯಕ್ತಿಕ ಉಪಯುಕ್ತತೆಯನ್ನು ಕ್ರೋಡೀಕರಿಸಬಹುದು. ಅಥವಾ ಯಾವುದಾದರೂ “ನ್ಯಾಯ”ದ ಕಲ್ಪನೆಯನ್ನು ಬಳಸಿಕೊಂಡು ಸಾಮಾಜಿಕ ಆದ್ಯತೆಯನ್ನು ಕಂಡುಹಿಡಿಯಬಹುದು. ಯಾವ ನಿಯಮವನ್ನು ಅನುಸರಿಸಬಹುದು ಅನ್ನುವುದನ್ನು ಕೆನೆತ್ ಆರೋ ಅವರ ಪ್ರಮೇಯ ಚರ್ಚಿಸುವುದಿಲ್ಲ. ಅದರ ಉದ್ದೇಶವೂ ಅದಲ್ಲ. ಸಮಾಜದ ವಿಭಿನ್ನ ವ್ಯಕ್ತಿಗಳು ತಮ್ಮ ನಂಬಿಕೆಯ ವಿಭಿನ್ನ ಕ್ರಮಗಳನ್ನು ಬಳಸಿಕೊಂಡು ಸಾಮಾಜಿಕ ಯೋಗಕ್ಷೇಮವನ್ನು ಕುರಿತಂತೆ ವಿಭಿನ್ನ ನಿಲುವನ್ನು ತಳೆಯುತ್ತಾರೆ. ಸಾಮಾಜಿಕ ಸ್ಥಿತಿಯನ್ನು ಅರಿಯುವುದಕ್ಕೆ ಈ ವೈಯಕ್ತಿಕ ನಿಲುವುಗಳನ್ನು ಕ್ರೋಡೀಕರಿಸುವುದಕ್ಕೆ ಸಾಧ್ಯವೇ ಅನ್ನುವುದು ಆರೋ ಎದುರಿಸುವ ಸಮಸ್ಯೆ. ಆರೋ ಅವರ ಪ್ರಮೇಯ ಇದು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ. ಆ ಮೂಲಕ ಅದು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ರೂಪಿಸುವ ಪ್ರಕ್ರಿಯೆಯ ಸಾಧ್ಯತೆಯ ಬಗ್ಗೆಯೇ ಅನುಮಾನವನ್ನು ಮೂಡಿಸುತ್ತದೆ. ಸೇನ್ ಅವರ ಅಧ್ಯಯನ ಈ ಕ್ಷೇತ್ರದಲ್ಲಿ ಕವಿದಿದ್ದ ನಿರಾಸೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ.
ಸಾಮಾಜಿಕ ಆಯ್ಕೆ ಸಿಧ್ದಾಂತದ ಹರವು ತೀರಾ ವಿಶಾಲ. ಇದರಲ್ಲಿ ತೀರಾ ವಿಭಿನ್ನವಾದ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಸೇನರು ಎತ್ತಿಕೊಂಡ ಕೆಲವು ಪ್ರಶ್ನೆಗಳನ್ನು ಉದಾಹರಣೆಯಾಗಿ ಕೊಡಬಹುದು. ಬಹುಜನರ ಆಳ್ವಿಕೆಯಲ್ಲಿ ಯಾವ ಸಂದರ್ಭದಲ್ಲಿ ಅಸಂದಿಗ್ಧವಾದ ಹಾಗೂ ಸುಸಂಗತವಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ? ಒಂದು ಸಮಾಜದ ಜನರ ಆಸಕ್ತಿಗಳು ಅಷ್ಟೊಂದು ಭಿನ್ನವಾಗಿರುವಾಗ ಒಂದು ಸಮಾಜ ಎಷ್ಟರ ಮಟ್ಟಿಗೆ ಸಮರ್ಪವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ನಿರ್ಧರಿಸುವುದು ಹೇಗೆ? ಜನರ ಕಷ್ಟಕಾರ್ಪಣ್ಯಗಳೂ ತೀರಾ ಭಿನ್ನವಾಗಿರುವಾಗ ಒಟ್ಟು ಬಡತನವನ್ನು ಅಳತೆ ಮಾಡುವುದು ಹೇಗೆ? ಜನರ ಅದ್ಯತೆಗೆ ಸಾಕಷ್ಟು ಮಾನ್ಯತೆ ಕೊಡುವಾಗ ವ್ಯಕ್ತಿಯ ಹಕ್ಕು, ಸ್ವಾತಂತ್ರ್ಯಕ್ಕೆ ಅವಕಾಶ ಮಾಡಿಕೊಡುವುದು ಹೇಗೆ? ಇಂತಹ ಹಲವಾರು ಪ್ರಶ್ನೆಗಳು ಅವರ ಅಧ್ಯಯನದಲ್ಲಿ ಬಂದಿವೆ. ಜೊತೆಗೆ ಸಾಮಾಜಿಕ ಆಯ್ಕೆಯ ಸಿದ್ದಾಂತಕ್ಕೆ ನೇರವಾಗಿ ಸಂಬಂಧಪಡದ ಕೆಲವು ವಿಚಾರಗಳು ಇವರ ಅಧ್ಯಯನದ ಭಾಗವಾಗಿವೆ. ಉದಾಹರಣೆಗೆ ಬರಗಾಲ ಹಾಗೂ ಹಸಿವಿಗೆ ಕಾರಣ ಮತ್ತು ಪರಿಹಾರ, ಲಿಂಗತಾರತಮ್ಯಕ್ಕೆ ಇರುವ ಕಾರಣ ಮುಂತಾದವು.
ಸೇನ್ ಅವರ ಬರಹಗಳು ಸಾಮಾಜಿಕ ಆಯ್ಕೆಯ ಸಿದ್ದಾಂತವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲ, ಅದರ ಅಧ್ಯಯನಕ್ಕೆ ಹೊಸದಾದ ಹಾಗೂ ತುಂಬಾ ಮುಖ್ಯವಾದ ಕ್ಷೇತ್ರಗಳನ್ನು ತೆರೆದವು. ಅನೇಕ ಸಂಶೋಧಕರಲ್ಲಿ ಯೋಗಕ್ಷೇಮ ಅರ್ಥಶಾಸ್ತ್ರವನ್ನು ಕುರಿತಂತೆ ಆಸಕ್ತಿ ಮೂಡಿಸಿತು.
ಸಾಮಾಜಿಕ ಆಯ್ಕೆಯಿಂದ ಅಸಮಾನತೆ ಹಾಗೂ ಬಡತನದ ಕಡೆಗೆ:
ಸಾಮಾಜಿಕ ಆಯ್ಕೆಯ ಸಿದ್ದಾಂತವನ್ನು ಕುರಿತಂತೆ ನಡೆದ ಅಧ್ಯಯನಗಳು ಹೊಸ ಹೊಸ ಕ್ರಿಯಾತ್ಮಕ ಸಾಧ್ಯತೆಗಳಿಗೆ ಅವಕಾಶಮಾಡಿಕೊಟ್ಟವು. ಲಭ್ಯವಿರುವ ಅಂಕಿಅಂಶಗಳನ್ನು ತೀರಾ ವಿಭಿನ್ನವಾದ ಆರ್ಥಿಕ ಹಾಗೂ ಸಾಮಾಜಿಕ ವಿಶ್ಲೇಷಣೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞರು ಯೋಚಿಸತೊಡಗಿದರು. ಆರ್ಥಿಕ ಅಸಮಾನತೆ, ಬಡತನವನ್ನು ಅಳೆಯುವುದು, ನಿರುದ್ಯೋಗದ ವಿಶ್ಲೇಷಣೆ, ಲಿಂಗತಾರತಮ್ಯ ಹೀಗೆ ನೂರಾರು ಸಾಧ್ಯತೆಗಳ ಬಗ್ಗೆ ಸೇನ್ ಹಾಗೂ ಇತರರು ಯೋಚಿಸುವಂತಾಯಿತು. ಟೋನಿ ಅಟ್ಕಿನ್ಸನ್ ಅವರ ಸಂಶೋಧನೆ ಸೇನ್ ಅವರನ್ನು ಅಸಮಾನತೆ ಕಡೆ ಗಮನ ಹರಿಸಲು ಪ್ರೇರೇಪಿಸಿತು. ಅಲ್ಲಿಯವರೆಗೂ ಕೇವಲ ಸಿದ್ದಾಂತದ ಮಟ್ಟದಲ್ಲಿ ಯೋಚಿಸುತ್ತಿದ್ದ ಸೇನ್ ಅವರು ಹೆಚ್ಚೆಚ್ಚು ’ಪ್ರಾಯೋಗಿಕ’ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರು. ಆ ವೇಳೆಗೆ ಲಭ್ಯವಿದ್ದ ಅಪಾರ ಮಾಹಿತಿಯನ್ನು ಬಳಸಿಕೊಂಡು ಸಾಮಾಜಿಕ ಆಯ್ಕೆಯ ಸಿದ್ದಾಂತ ಸಾಕಷ್ಟು ಬೆಳೆದಿತ್ತು. ಇದು ಇವರಲ್ಲಿ ಒಂದು ವಿಶ್ವಾಸ ಮೂಡಿಸಿತ್ತು. ಯಾಕೆಂದರೆ ಬಲವಾದ ಸೈದ್ದಾಂತಿಕ ಬುನಾದಿ ಇಲ್ಲದ ಪ್ರಾಯೋಗಿಕ ವಿಶ್ಲೇಷಣೆಗಳು ಆಳದಲ್ಲಿ ಪೊಳ್ಳಾಗಿಬಿಡುವ ಅಪಾಯವಿರುತ್ತದೆ. ಇವರ ಅಧ್ಯಯನಕ್ಕೆ ಆ ಅಪಾಯವಿರಲಿಲ್ಲ. ಅದಕ್ಕೆ ಬಲವಾದ ಸೈದ್ದಾಂತಿಕ ಅಧ್ಯಯನದ ಬುನಾದಿಯಿತ್ತು.
ಇವರು ಲಿಂಗತಾರತಮ್ಯ ಕುರಿತು ಮೊದಲು ಮಾಡಿದ ಅಧ್ಯಯನ ಭಾರತದಲ್ಲಿ ಸ್ತ್ರೀಪುರುಷ ಅಸಮಾನತೆಗೆ ಸಂಬಂಧಿಸಿದ ಅಂಕಿ ಅಂಶಗಳ ವಿಶ್ಲೇಷಣೆಗೆ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಅಧ್ಯಯನದ ವ್ಯಾಪ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದರು. ಜೊತೆ ಜೊತೆಗೆ ಕೆಲವು ಸಾರ್ವತ್ರಿಕ ಸಿದ್ದಾಂತಗಳನ್ನು ರೂಪಿಸುವ ಪ್ರಯತ್ನವನ್ನೂ ಮಾಡಿದರು. ಅವರು ತಮ್ಮ ಈ ಎಲ್ಲಾ ಅಧ್ಯಯನಗಳನ್ನು ಕೇವಲ ಲಭ್ಯವಿರುವ ಅಂಕಿಅಂಶಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲಿಲ್ಲ. ಸ್ವಂತವಾಗಿ ಅಂಕಿಅಂಶಗಳನ್ನು ಸಂಗ್ರಹಿಸಿತೊಡಗಿದರು. ಸುನಿಲ್ ಸೇನ್‌ಗುಪ್ತ ಅವರ ಜೊತೆ ಸೇರಿಕೊಂಡು ಪಶ್ವಿಮ ಬಂಗಾಳದ ಹಳ್ಳಿಯೊಂದರಲ್ಲಿ ಐದು ವರ್ಷದವರೆಗಿನ ಮಕ್ಕಳಿಗೆ ಸಂಬಂಧಿಸಿದಂತೆ ಸ್ವತಃ ಟೇಪು ಹಿಡಿದು ಅಳತೆ ಮಾಡಿ ಮಾಹಿತಿ ಸಂಗ್ರಹಿಸಿದರು. ಆಗಿನ ಅವರ ಅನುಭವವೇ ರೋಚಕವಾಗಿದೆ. ಅಳತೆಗೆ ಒಲ್ಲದ ಮಕ್ಕಳನ್ನು ರಮಿಸಿ, ಒಲಿಸಿ, ಅಳತೆ ಮಾಡುವ ಕಲೆ ಇವರಿಗೆ ಕರಗತವಾಯಿತು. ಆ ಸಮಯದಲ್ಲಿ ಮಕ್ಕಳು ಇವರ ಜೊತೆಗಾರರನ್ನು ಕಚ್ಚಿದ ಘಟನೆಗಳೂ ಇವೆಯಂತೆ.
ದಾರಿದ್ರ್ಯ, ಬರಗಾಲ ಹಾಗೂ ಕೊರತೆ
ಆ ಸಮಯದಲ್ಲಿ ಇವರು ಬರಗಾಲಕ್ಕೆ ಕಾರಣ ಹಾಗು ಪರಿಹಾರವನ್ನು ಕುರಿತು ಕೂಡ ಅಧ್ಯಯನ ಮಾಡಿದರು. ಈ ಕ್ಷೇತ್ರದಲ್ಲಿ ಸೇನ್ ಅವರ ಮುಖ್ಯವಾದ ಪುಸ್ತಕ ’ಪಾವರ್ಟಿ ಅಂಡ್ ಫ್ಯಾಮಿನ್. ಆಹಾರದ ಕೊರತೆ ಕ್ಷಾಮಕ್ಕೆ ಕಾರಣ ಅನ್ನುವುದು ಸಾಮಾನ್ಯ ನಂಬಿಕೆ. ಆದರೆ ಸೇನ್ ಈ ನಿಲುವನ್ನು ಪ್ರಶ್ನಿಸುತ್ತಾರೆ. ಭಾರತ, ಬಾಂಗ್ಲಾದೇಶ, ಸಹಾರಾದ ದೇಶಗಳಲ್ಲಿನ ಕ್ಷಾಮಗಳನ್ನು ಕುರಿತಂತೆ ಅಧ್ಯಯನ ನಡೆಸಿದರು. ಕ್ಷಾಮಕ್ಕೆ ನಿಜವಾದ ಕಾರಣ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು. ತೀವ್ರ ಕ್ಷಾಮ ಅನುಭವಿಸಿದ ಎಷ್ಟೋ ಪ್ರದೇಶಗಳಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಆಹಾರ ಉತ್ಪಾದನೆಯಾಗಿದೆ. ಅಷ್ಟೇ ಅಲ್ಲ, ಕ್ಷಾಮದಿಂದ ನರಳುತ್ತಿರುವ ಕೆಲವು ದೇಶಗಳು ಆಹಾರವನ್ನು ರಫ್ತು ಮಾಡಿರುವ ಉದಾಹರಣೆಗಳೂ ಇವೆ. ಹಾಗಾಗಿ ಕ್ಷಾಮಕ್ಕೆ ಆಹಾರದ ಪೂರೈಕೆಯ ಕೊರತೆ ಕಾರಣ ಎನ್ನುವುದಕ್ಕೆ ಆಗುವುದಿಲ್ಲ.
ಕ್ಷಾಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳು ಹೇಗೆ ಸಮಾಜದ ವಿಭಿನ್ನ ಗುಂಪುಗಳನ್ನು ಪ್ರಭಾವಿಸುತ್ತವೆ ಎಂಬುದನ್ನು ಪೂರ್ಣವಾಗಿ ವಿಶ್ಲೇಷಿಸಬೇಕಾಗುತ್ತದೆ. ಅವರಿಗಿದ್ದ ನಿಜವಾದ ಅವಕಾಶಗಳನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ ಬಾಂಗ್ಲಾದೇಶದಲ್ಲಿ ೧೯೭೪ರ ಕ್ಷಾಮದ ಸಮಯದಲ್ಲಿ ಪ್ರವಾಹದಿಂದ ಆಹಾರದ ಬೆಲೆಗಳು ಗಣನೀಯವಾಗಿ ಏರಿದವು. ಕೆಲವು ಬೆಳೆಗಳನ್ನು ಕಟಾವು ಮಾಡುವುದಕ್ಕೆ ಸಾಧ್ಯವಾಗದೇ ಹೋಗಿದ್ದಕ್ಕೆ ರೈತರಿಗೆ ಹೆಚ್ಚಿನ ಉದ್ಯೋಗವಕಾಶಗಳು ತಪ್ಪಿಹೋದವು. ಇದರಿಂದ ಈ ಜನರ ಕೊಳ್ಳುವ ಶಕ್ತಿ ಕಡಿಮೆಯಾಯಿತು. ಈ ಗುಂಪಿನ ಜನ ತೀವ್ರ ಹಸಿವಿನಿಂದ ಬಳಲಬೇಕಾಯಿತು. ಹಾಗಾಗಿ ಜನರಲ್ಲಿ ಆಹಾರವನ್ನು ಕೊಳ್ಳುವ ಶಕ್ತಿ ಇಲ್ಲದ್ದು ಬಹುತೇಕ ಕ್ಷಾಮಗಳಿಗೆ ಕಾರಣ ಎಂದು ಸೇನ್ ವಾದಿಸುತ್ತಾರೆ. ಅಂದರೆ ಇದಕ್ಕೆ ಪರಿಹಾರ ಸಾಧ್ಯ.
ಸೇನ್ ಮುಂದುವರಿದು, ಕ್ಷಾಮವನ್ನು ಹೇಗೆ ತಪ್ಪಿಸುವುದು ಅನ್ನುವುದನ್ನು ಗಮನಿಸುತ್ತಾರೆ. ಇನ್ನೂ ಮುಂದುವರಿದು ಒಂದೊಮ್ಮೆ ಕ್ಷಾಮ ಕಾಣಿಸಿಕೊಂಡರೂ ಅದರ ಪರಿಣಾಮವನ್ನು ತಗ್ಗಿಸುವುದು ಹೇಗೆ ಅನ್ನುವುದನ್ನು ಚರ್ಚಿಸುತ್ತಾರೆ. ಕೆಲವರು ಪಾವರ್ಟಿ ಅಂಡ್ ಫ್ಯಾಮಿನ್ ಕೃತಿಯಲ್ಲಿ ಅವರು ನೀಡಿರುವ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಪುಸ್ತಕ ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಮಹತ್ವದ ಕೊಡುಗೆ ಅನ್ನುವುದರಲ್ಲಿ ಅನುಮಾನವಿಲ್ಲ. ಪಾವರ್ಟಿ ಅಂಡ್ ಫ್ಯಾಮಿನ್ ಪುಸ್ತಕದಲ್ಲಿ ಅವರು ಮುಂದಿಡುವ ಮುಖ್ಯವಾದ ವಾದವೆಂದರೆ ಕ್ಷಾಮ ಆಹಾರದ ಲಭ್ಯತೆಯ ಕುಸಿತದಿಂದ ಉಂಟಾಗಿದ್ದಲ್ಲ. ಬದಲಿಗೆ ಜನರಿಗೆ ಕೊಳ್ಳುವ ಸಾಮರ್ಥ್ಯದಲ್ಲಿನ ಕುಸಿತ ಕ್ಷಾಮಕ್ಕೆ ನಿಜವಾದ ಕಾರಣ. ಹಾಗಾಗಿ ಅದನ್ನು ತಪ್ಪಿಸುವುದಕ್ಕೆ ಸಾಧ್ಯ. ಅದಕ್ಕೆ ಸಾರ್ವಜನಿಕ ಕ್ರಿಯೆಯ (ಪಬ್ಲಿಕ್ ಅಕ್ಷನ್) ಅವಶ್ಯಕತೆಯಿದೆ. ಸಾರ್ವಜನಿಕ ಒತ್ತಡದಿಂದ ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತಾಗಬೇಕು. ಅದು ಸಾಧ್ಯವಾಗಬೇಕಾದರೆ ಪತ್ರಿಕಾ ಸ್ವಾತಂತ್ರ್ಯ, ಹಾಗೂ ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸಕ್ರಿಯವಾಗಿರಬೇಕು. ಆಗ ಕ್ಷಾಮವನ್ನು ನಿರ್ಲಕ್ಷಿಸುವುದಕ್ಕೆ ಸರ್ಕಾರಗಳಿಗೆ ಕಷ್ಟವಾಗುತ್ತದೆ. ಹಾಗೆ ನಿರ್ಲಕ್ಷಿಸುವುದು ಅವರ ರಾಜಕೀಯ ಭವಿಷ್ಯಕ್ಕೆ ಕುತ್ತಾಗುತ್ತದೆ. ಅದೇ ರೀತಿಯಲ್ಲಿ ಬಡತನ, ಹಸಿವು ಇತ್ಯಾದಿ ಸಂಕಷ್ಟಗಳು ಕ್ಷಾಮದಷ್ಟು ತೀವ್ರವಲ್ಲದಿದ್ದರೂ ಅವು ಕೂಡ ಗಂಭೀರವಾದ ಸಮಸ್ಯೆಗಳೆ. ಮನುಷ್ಯನ ಇಂತಹ ಸಂಕಷ್ಟಗಳನ್ನು ನಿವಾರಿಸುವುದಕ್ಕೆ ಸಾರ್ವಜನಿಕ ಕ್ರಿಯೆ ಬೇಕಾಗುತ್ತದೆ. ಹಾಗೆಯೇ ಸೇನ್ ಅವರ ಇನ್ನೊಂದು ಕಾಳಜಿಯ ವಿಷಯ ಭಾರತೀಯರನ್ನು ಹಾಗೂ ಭಾರತದ ಬಹುತ್ವದ ಸಂಪ್ರದಾಯವನ್ನು ಒಡೆಯುವ ಪ್ರಯತ್ನ, ಮಿಲಿಟರಿವಾದ ಇತ್ಯಾದಿ ಜನವಿರೋಧಿ ಪ್ರವೃತ್ತಿಗಳನ್ನು ವಿರೋಧಿಸುವುದು. ಸೇನ್ ಅವರಷ್ಟು ಆಳವಾದ ನೈತಿಕ ಕಾಳಜಿ ಹಾಗೂ ಅಷ್ಟೇ ತೀಕ್ಣವಾದ ತಾರ್ಕಿಕ ಮನಸ್ಸಿರುವ ಚಿಂತಕರು ಕಡಿಮೆ. ಸೇನ್ ಅವರ ಚಿಂತನೆಗಳಲ್ಲಿ ಇವೆರಡೂ ಸೊಗಸಾಗಿ ಬೆಸೆದುಕೊಂಡಿದೆ.
ಹಾಗಾಗಿಯೇ ಅಮರ್ತ್ಯಸೇನ್ ಅವರಿಗೆ ನೋಬೆಲ್ ಬಹುಮಾನ ಬಂದಾಗ ನೋಬೆಲ್ ಬಹುಮಾನದಲ್ಲಿ ವಿಶ್ವಾಸವೇ ಇಲ್ಲದವರೂ ಸಂಭ್ರಮಿಸಿದ್ದು. ನೋಬೆಲ್ ಕಮಿಟಿಯವರಿಗೆ ತಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಿಕೊಳ್ಳಬೇಕಿದೆ ಎನ್ನುವುದರ ಅರಿವು ಬಂದಿದೆ ಎಂದು ಅವರೆಲ್ಲಾ ಭಾವಿಸಿದ್ದರು. ಕೇವಲ ಸಮಿತಿಗೆ ಮಾತ್ರವಲ್ಲ, ಪಟ್ನಾಯಕ್ ಗುರುತಿಸುವಂತೆ, “ಸಾಂಪ್ರದಾಯಿಕ ಅರ್ಥಶಾಸ್ತ್ರಕ್ಕೆ ತಾನು ಅನುಭವಿಸುತ್ತಿರುವ ಬಿಕ್ಕಟ್ಟನ್ನು ಇದು ಹೊರಗೆ ತಂದಿದೆ” ಎನ್ನುವುದೂ ನಿಜ. ಏನೇ ಇರಲಿ ಅಮರ್ತ್ಯಸೇನ್ ಅವರ ವಿಚಾರಗಳನ್ನು ಚರ್ಚಿಸುತ್ತಾ, ಅದರ ಹರವನ್ನು ವಿಸ್ತರಿಸುತ್ತಾ ಹೋಗಬೇಕಾಗಿದೆ. ಆ ಮೂಲಕ ಬಡತನ, ಅಸಮಾನತೆ ಇತ್ಯಾದಿ ಸೇನ್ ಚರ್ಚಿಸುವ ವಿಷಯಗಳು ಇನ್ನಷ್ಟು ವ್ಯಾಪಕವಾಗಿ ಚರ್ಚೆಯಾಗುವುದು ಒಳ್ಳೆಯದು. ಜೊತೆಗೆ ಈ ಬಗ್ಗೆ ಸರ್ಕಾರಗಳ ಕ್ರಮಕ್ಕಾಗಿ ಸಾರ್ವಜನಿಕ ಒತ್ತಾಯವೂ ಹೆಚ್ಚಾಗಬೇಕಾದ ಜರೂರು ಇದೆ.
[ಹೊಸತು ಮಾಸಿಕದಲ್ಲಿ ಪ್ರಕಟವಾಗಿದ್ದ ಲೇಖನ]