Ariyakudi Ramanuja Iyengar – ಹೊಸಹಾದಿಯ ಹರಿಕಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್

ಶೈಲಜಾ ಮತ್ತು ವೇಣುಗೋಪಾಲ್

ಒಮ್ಮೆ ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ಯರನ್ನು ಭೇಟಿಯಾಗಲು ಮೈಸೂರು ವಾಸುದೇವಾಚಾರ್ಯರು ಹೋಗಿದ್ದರು. ಆಗ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಪಾಠ ಮುಗಿದ ಮೇಲೆ ಆಚಾರ್ಯರೇ ಇಷ್ಟು ಮಂದಿ ಶಿಷ್ಯರು ಹಾಡಿದ್ದನ್ನು ಕೇಳಿದಿರಿ. ಇವರಲ್ಲಿ ಯಾರ ಹಾಡಿಕೆ ನಿಮ್ಮ ಮನಸ್ಸಿಗೆ ಬಂದಿತು? ಎಂದು ಕೇಳಿದರು. ಅದಕ್ಕೆ ಆಚಾರ್ಯರು ಎಲ್ಲರೂ ಚೆನ್ನಾಗಿಯೇ ಹಾಡಿದರು. ಆದರೂ ಆ ಮೂಲೆಯಲ್ಲಿ ಗೋಡೆಗೆ ಒರಗಿ ಕುಳಿತಿದ್ದ ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ ಎನಿಸುತ್ತದೆ. ಆತನ ಹಾಡಿಕೆಯಲ್ಲಿ ಒಂದು ಬಿಗಿ ಹಾಗೂ ಗಾಂಭೀರ್ಯವಿದೆ ಎಂದರು. ನನ್ನ ಮನಸ್ಸಿನಲ್ಲಿದ್ದುದನ್ನೇ ನೀವು ಹೇಳಿದಿರಿ. ಹುಡುಗ ಚುರುಕು, ಬುದ್ಧಿವಂತ ಆದರೆ ಬಲು ಸೋಮಾರಿ ಎಂದು ಪೂಚಿಯವರು ಆತಂಕಪಟ್ಟರು. ಆ ಸೋಮಾರಿ ಹುಡುಗನೇ ಕರ್ನಾಟಕ ಸಂಗೀತದಲ್ಲಿ ಹೊಸದೊಂದು ಕಚೇರಿ ಪದ್ಧತಿಗೆ ನಾಂದಿ ಹಾಡಿದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್.

ತಿರುವೆಂಗಡನಾಥ ಐಯ್ಯಂಗಾರ್ಯರು ವೇದಶಾಸ್ತ್ರ ಕೋವಿದರು. ವೃತ್ತಿಯಿಂದ ಜ್ಯೋತಿಷಿಗಳು. ಅರಿಯಾಕುಡಿಯ ಸಮೀಪದ ದೇವಕೋಟೆ ಯಲ್ಲಿ ಅವರ ವಾಸ. ಪತ್ನಿ ನಾಚ್ಚಿಯಾರ್. ೧೮೯೦ರ ಮೇ ೧೯ರಂದು ಹುಟ್ಟಿದ ಮಗು ರಾಮಾನುಜನ ಜಾತಕ ನೋಡಿ ಮಗು ದೊಡ್ಡ ಸಂಗೀತಗಾರ ಆಗುತ್ತಾನೆ ಎಂದು ತಿರುವೆಂಗಡನಾಥರು ಭವಿಷ್ಯ ಹೇಳಿದರು. ಬಾಲ್ಯದಿಂದಲೂ ರಾಮಾನುಜನಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಭಜನೆಗೆ ಕರೆದುಕೊಂಡು ಹೋದಾಗ ಉಳಿದ ಮಕ್ಕಳು ತೂಕಡಿಸಿದರೆ, ರಾಮಾನುಜ ಮಾತ್ರ ದೊಡ್ಡದಾಗಿ ಕಣ್ಣುಬಿಟ್ಟು ಕೊಂಡು ಕೇಳಿಸಿಕೊಳ್ಳುತ್ತಿದ್ದ. ಆಗ ತಮಗೆ ತುಂಬಾ ಪರಿಚಿತರಾಗಿದ್ದ ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರ ಸಲಹೆಯಂತೆ ಮಗನನ್ನು ಪುದುಕೋಟೆ ಮಲೆಯಪ್ಪ ಅಯ್ಯರ್ ಅವರಲ್ಲಿ ಸಂಗೀತಕ್ಕೆ ಸೇರಿಸಿದರು. ಮೂರು ವರ್ಷ ಸಂಗೀತದ ಆರಂಭಿಕ ಪಾಠಗಳನ್ನೆಲ್ಲವನ್ನೂ ಅವರಲ್ಲಿ ಕಲಿತ ಮೇಲೆ ೧೯೦೬ರಲ್ಲಿ ಶ್ರೀರಂಗಂನ ನಾಮಕ್ಕಲ್ ನರಸಿಂಹ ಅಯ್ಯಂಗಾರರ ಬಳಿ ಇವರನ್ನು ಕರೆದೊಯ್ದರು. ಅವರು ಕೇದಾರಗೌಳ ಅಯ್ಯಂಗಾರ್ ಎಂದೇ ಹೆಸರು ವಾಸಿಯಾಗಿದ್ದರು. ಸಂಕೀರ್ಣವಾದ ಪಲ್ಲವಿಗಳನ್ನು ಹಾಡುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಪಲ್ಲವಿ ನರಸಿಂಹ ಅಯ್ಯಂಗಾರ್ ಎಂದೂ ಕರೆಯುತ್ತಿದ್ದರು.

ಅವರು ರಾಮಾನುಜನನ್ನು ಶಿಷ್ಯನನ್ನಾಗಿ ಸ್ವೀಕರಿಸುವ ಮೊದಲು ಹಾಡಲು ಹೇಳುತ್ತಾರೆ. ಮಧುರವಾದ ಕಂಠದಲ್ಲಿ ಕೃತಿ ಹಾಡಿ, ಸ್ವರ ಹಾಕಿದಾಗ ಗುರುಗಳಿಗೆ ತೃಪ್ತಿಯಾಗಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಆಗ ಅರಿಯಾಕುಡಿಯವರಿಗೆ ೧೬ರ ಹರೆಯ ಗುರುಗಳಿಗೆ ೬೦ರ ಹರೆಯ. ಅವರ ಶಿಷ್ಯವೃಂದದಲ್ಲಿ ನಾಮಕ್ಕಲ್ ಶೇಷ ಅಯ್ಯಂಗಾರ್, ಮಧುರಾ ಸಹೋದರರು, ಸಾತ್ತೂರ್ ಕೃಷ್ಣ ಅಯ್ಯಂಗಾರ್, ಉಮಯಾಳಪುರಂ ಕಲ್ಯಾಣರಾಮ ಅಯ್ಯರ್, ಕಲ್ಕತ್ತಾ ರಾಘವಾಚಾರಿ ಮುಂತಾದ ಘಟಾನುಘಟಿಗಳಿದ್ದರು. ಅವರಲ್ಲಿ ನಾಮಕ್ಕಲ್ ಶೇಷ ಅಯ್ಯಂಗಾರ್ ಅರಿಯಾಕುಡಿಯವರ ಬಗ್ಗೆ ತುಂಬಾ ಆಸಕ್ತಿ ವಹಿಸಿ, ಅವರಿಗೆ ತುಂಬಾ ಸಹಾಯ ಮಾಡಿದರು. ಅವರಿಬ್ಬರೂ ಒಟ್ಟಿಗೆ ಸೇರಿ ಸಂಗೀತದಲ್ಲಿ ಹಲವು ಹೊಸ ಅಂಶಗಳನ್ನು ರೂಪಿಸಿ ಸೇರಿಸಲು ಪ್ರಯತ್ನಿಸುತ್ತಾರೆ. ಮುಂಜಾವಿನಲ್ಲಿ ಸಾವಿರ ಕಂಬಗಳ ರಂಗನಾಥಸ್ವಾಮಿ ದೇವಾಲಯದ ಹಜಾರದಲ್ಲಿ ಕುಳಿತು, ಅಭ್ಯಾಸಮಾಡಿ, ಕಂಠವನ್ನು ಹಿಡಿತಕ್ಕೆ ತರುವಂತೆ ಶೇಷ ಅಯ್ಯಂಗಾರ್ ಸಲಹೆ ನೀಡುತ್ತಾರೆ. ತಮಗೆ ೧೮ ತುಂಬುವವರೆಗೆ ಅರಿಯಾಕುಡಿಯವರು ಹೀಗೆ ಅಭ್ಯಾಸ ಮಾಡುತ್ತಾರೆ.

ಈ ಅವಧಿಯಲ್ಲಿ ಅವರು ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಶಿಷ್ಯರಾದ ರಾಮನಾಥಪುರಂ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರ ಸಂಗೀತಕ್ಕೆ ಮಾರುಹೋಗಿ, ೧೯೦೮ರಲ್ಲಿ ಅವರ ಶಿಷ್ಯರಾಗುತ್ತಾರೆ. ಆಗ ಅವರಿಗೆ ಸುಮಾರು ೧೮ ವರ್ಷಗಳು. ಈ ಹೊತ್ತಿಗಾಗಲೇ ಅವರು ಕಚೇರಿ ಮಾಡುವ ಮಟ್ಟದಲ್ಲಿ ಇದ್ದರು. ಈ ಗುರುಕುಲವಾಸ ಅವರ ಸಂಗೀತದಲ್ಲಿ ಅಪಕ್ವವಾಗಿದ್ದ ಅಂಶಗಳನ್ನೆಲ್ಲಾ ಪರಿಷ್ಕರಿಸಿ, ಅದಕ್ಕೆ ಒಂದು ಸೊಗಸು ಮತ್ತು ಪಕ್ವತೆಯನ್ನು ನೀಡಿತು. ವೇದಿಕೆಯಲ್ಲಿ ಗುರುಗಳಿಗೆ ಗಾಯನ ಸಹಕಾರ ನೀಡುತ್ತಾ ಅರಿಯಾಕುಡಿ ತಮ್ಮ ಸಂಗೀತದ ಓರೆ ಕೋರೆಗಳನ್ನು ತಿದ್ದಿ, ತೀಡಿ, ಮತ್ತಷ್ಟು ಚೆಂದಗೊಳಿಸಿಕೊಂಡರು.

ಆ ಕಾಲಘಟ್ಟದಲ್ಲಿ ಅವರಿಗೆ ದೊರೆತ ಕೆಲವು ಅವಕಾಶಗಳು ಸಂಗೀತಲೋಕದಲ್ಲಿ ಅವರಿಗೊಂದು ಭದ್ರವಾದ ಸ್ಥಾನ ಕಲ್ಪಿಸಿಕೊಟ್ಟಿತು. ೧೯೧೨ರಲ್ಲಿ ದೇವಕೋಟೆಯ ಚೆಟ್ಟಿನಾಡ್ ಕುಟುಂಬದ ಜಮೀನುದಾರ ಎಸ್.ಎಂ. ಸೋಮಸುಂದರ ಚೆಟ್ಟಿಯಾರ್ ಮನೆಯ ಮದುವೆಯಲ್ಲಿ ಪೂಚಿಯವರು ವರಪೂಜೆಯಂದು ನಾಲ್ಕುವರೆ ಗಂಟೆಗಳು ಹಾಡಿದರು. ಮರುದಿನ ಕೊನೇರಿರಾಜಪುರಂ ವೈದ್ಯನಾಥ ಅಯ್ಯರ್ ಹಾಡಿದರು. ಆಗ ಚೆಟ್ಟಿಯಾರರಿಗೆ ಯುವಕ ರಾಮಾನುಜನ ಹಾಡು ಕೇಳಬೇಕೆಂಬ ಬಯಕೆ ಉಂಟಾಗಿ ಪೂಚಿಯವರ ಅನುಮತಿ ಕೇಳುತ್ತಾರೆ. ಅವರು ಸಮ್ಮತಿಸುತ್ತಾರೆ. ಆಗ ಖ್ಯಾತ, ಹಿರಿಯ ಕಲಾವಿದರಾದ ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್ (ಪಿಟೀಲು), ಕುಂಭಕೋಣಂ ಅಳಗನಂಬಿ ಪಿಳ್ಳೈ (ಮೃದಂಗ), ಪುದುಕೋಟೆ ದಕ್ಷಿಣಾಮೂರ್ತಿ ಪಿಳ್ಳೈ (ಖಂಜಿರಾ) ಅವರ ಪಕ್ಕವಾದ್ಯ ಸಹಕಾರದಲ್ಲಿ ಹಾಡುವ ಅಪರೂಪದ ಸದವಕಾಶ ಅರಿಯಾಕುಡಿಗೆ ದೊರಕುತ್ತದೆ. ತೋಡಿ ರಾಗದ ವೆಡಲನು ಕೋದಂಡ ಪಾಣಿ ಕೃತಿಯಿಂದ ಕಚೇರಿ ಆರಂಭಿಸುವ ಅರಿಯಾಕುಡಿಯವರು ಎಲ್ಲರ ಮನ ಗೆಲ್ಲುತ್ತಾರೆ. ಆಗ ಅವರಿಗೆ ೨೨ರ ಹರೆಯ. ಕಚೇರಿಯ ನಂತರ ಗುರುಗಳು ಅವರನ್ನು ಕರೆದು ಆಶೀರ್ವದಿಸಿ, ಅವರ ಗಾಯನ ತಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿತ್ತು ಎಂದು ಹೇಳಿ, ಮುಂದೆ ಸ್ವತಂತ್ರವಾಗಿ ಕಚೇರಿಗಳನ್ನು ಮಾಡುವಂತೆ ಹೇಳುತ್ತಾರೆ. ಆದರೂ ಅವರು ಪೂಚಿಯವರಲ್ಲಿ ತಮ್ಮ ಶಿಷ್ಯವೃತ್ತಿಯನ್ನು ಮುಂದುವರಿಸುತ್ತಾರೆ. ೧೯೧೮ರಲ್ಲಿ ತಿರುವೈಯ್ಯಾರಿನ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಫಿಡ್ಲ್ ಗೋವಿಂದಸ್ವಾಮಿ ಪಿಳ್ಳೈ ಅರಿಯಾಕುಡಿಯವರಿಗೆ ಒಂದು ಅಮೂಲ್ಯವಾದ ಅವಕಾಶ ಒದಗಿಸಿ, ಸ್ವತಃ ತಾವೇ ಪಿಟೀಲು ಸಹಕಾರ ನೀಡುತ್ತಾರೆ. ಮೃದಂಗದಲ್ಲಿ ಅಳಗನಂಬಿಯವರು ಮತ್ತು ಖಂಜಿರಾದಲ್ಲಿ ದಕ್ಷಿಣಾಮೂರ್ತಿ ಪಿಳ್ಳೈ ಸಹಕಾರ ನೀಡುತ್ತಾರೆ. ಇಂತಹ ಹಿರಿಯರು ಹರೆಯದ

ಯುವಕನೊಬ್ಬನಿಗೆ ಪಕ್ಕವಾದ್ಯ ಸಹಕಾರ ನೀಡಿದ್ದು ಅರಿಯಾಕುಡಿಯವರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅದೇ ವರ್ಷದಲ್ಲಿ ಒದಗಿ ಬರುವ ಮತ್ತೊಂದು ಅನಿರೀಕ್ಷಿತ ಅವಕಾಶ ತಿರುಪರನ್ ಕುನ್ರಾಂ ದೇವಾಲಯದ ಉತ್ಸವ. ಅಲ್ಲಿ ಖ್ಯಾತ ಗಾಯಕ ಮಧುರೈ ಪುಷ್ಪವನಂ ಹಾಡಬೇಕಾಗಿರುತ್ತದೆ. ಆದರೆ ಅವರಿಗೆ ಆರೋಗ್ಯ ತಪ್ಪಿ, ಅಂದು ಹಾಡಲಾಗುವುದಿಲ್ಲ. ಅವರ ಹಾಡಿಕೆ ಕೇಳಲು ತುಂಬಾ ಜನ ಸೇರಿರುತ್ತಾರೆ. ಆಗ ಕಾರ್ಯಕ್ರಮದ ನಿರ್ವಹಣೆಯ ಹೊಣೆ ಹೊತ್ತಿರುವ ದಕ್ಷಿಣಾಮೂರ್ತಿ ಪಿಳ್ಳೈ ಅಲ್ಲಿದ್ದ ಅರಿಯಾಕುಡಿಯವರನ್ನು ಹಾಡುವಂತೆ ಕೇಳಿಕೊಳ್ಳು ತ್ತಾರೆ. ಇವರ ಗಾಯನ ಪ್ರೇಕ್ಷಕರ ಮನ ಗೆಲ್ಲುತ್ತದೆ. ೧೯೨೦ರಲ್ಲಿ ಮದ್ರಾಸಿನ ಟ್ರಿಪ್ಲಿಕೇನಿನಲ್ಲಿ ಸರಸ್ವತಿ ಸಂಗೀತ ಶಾಲೆ ಇವರ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಆನಂತರ ಇವರಿಗೆ ಮದ್ರಾಸಿನ ಸಂಗೀತಲೋಕದಲ್ಲಿ ಒಂದು ಒಳ್ಳೆಯ ಸ್ಥಾನ ದೊರಕುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಇವರಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಿದವರು ಫಿಡ್ಲ್ ಗೋವಿಂದಸ್ವಾಮಿ ಪಿಳ್ಳೈ ಮತ್ತು ದಕ್ಷಿಣಾಮೂರ್ತಿ ಪಿಳ್ಳೈ.

ಕಲಿಕೆ ಮತ್ತು ಅಭ್ಯಾಸವನ್ನು ಅರಿಯಾಕುಡಿ ಎಂದು ನಿಲ್ಲಿಸಲೇ ಇಲ್ಲ. ಕೊನೆಯವರೆಗೂ ದಿನಕ್ಕೆ ಐದು ಗಂಟೆಗಳು ಅಭ್ಯಾಸ ಮಾಡುತ್ತಿದ್ದರು. ಅವರು ಶ್ರೇಷ್ಠ ಕಲಾವಿದರನ್ನು ಕೇಳಿ ಕಲಿತದ್ದಂತೂ ಅಪಾರ. ಅವರ ಕೇಳ್ಮೆಜ್ಞಾನ ಬೆರಗು ಹುಟ್ಟಿಸುತ್ತಿತ್ತು. ಅವರೊಂದು ರೀತಿಯ ತಿಲೋತ್ತಮ. ಪ್ರತಿಯೊಬ್ಬರಿಂದಲೂ ಅತ್ಯುತ್ತಮವಾದ ಒಂದಿಷ್ಟನ್ನು ತೆಗೆದುಕೊಂಡು, ತಮ್ಮದಾಗಿಸಿಕೊಂಡು, ತಮ್ಮದೊಂದು ವಿಶಿಷ್ಟ, ಶ್ರೀಮಂತ ಶೈಲಿಯನ್ನು ರೂಪಿಸಿಕೊಂಡರು. ಇದು ಕೂಡ ಅವರ ಯಶಸ್ಸಿಗೆ ಬಹುಮುಖ್ಯ ಕಾರಣ. ಗುರುಗಳಿಂದ ಸಾಕಷ್ಟು ಕೃತಿಗಳು, ವರ್ಣಗಳುಳನ್ನು ಮತ್ತು ಗುರುಗಳ ಸ್ವಂತ ರಚನೆಗಳನ್ನೂ ಕಲಿತರು. ವೀಣಾ ಧನಮ್ಮಾಳ್ ಅವರಿಂದ ಪದಂಗಳು ಮತ್ತು ಮೈಲಾಪುರ ಗೌರಿ ಅಮ್ಮಾಳ್ ಅವರಿಂದ ಕೆಲವು ಹಾಡುಗಳನ್ನು ಕಲಿತರು. ಅವರು ಸದಾ ತಮ್ಮ ಜೊತೆ ಒಂದು ಬಿಳಿಯ ಹಾಳೆ ಮತ್ತು ಪೆನ್ಸಿಲ್ ಒಯ್ಯುತ್ತಿದ್ದರು. ಹೊಸ ಸಂಗೀತಾತ್ಮಕ ವಿಚಾರಗಳು ಬಂದಾಗ ಅವುಗಳನ್ನು ಅದರಲ್ಲಿ ಗುರುತು ಹಾಕಿ ಕೊಳ್ಳುತ್ತಿದ್ದರು.

ಅರಿಯಾಕುಡಿಯವರಿಗಿಂತ ಮೊದಲೇ ಕಚೇರಿ ಸಂಪ್ರದಾಯದಲ್ಲಿ ಒಂದಿಷ್ಟು ಬದಲಾವಣೆಗಳು ಸಣ್ಣ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿತ್ತು. ಅವರ ಗುರು ಪೂಚಿಯವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಇನ್ನು ಸಂಗೀತ ಕಲಾನಿಧಿ ಸ್ವೀಕರಿಸುವಾಗ ಅರಿಯಾಕುಡಿಯವರೇ ಹೇಳಿರುವಂತೆ ಅಭಿಜಾತ ಸಂಗೀತದ ಉತ್ಕೃಷ್ಟ ಪ್ರತಿನಿಧಿಯಾಗಿದ್ದ ವೀಣಾ ಧನಮ್ಮಾಳ್ ಅವರು ತಮ್ಮ ಕಚೇರಿಯಲ್ಲಿ ಬಹಳ ಮುಂಚಿನಿಂದಲೂ ಗೀತಗೋವಿಂದ, ಅರುಣಾಚಲ ಕವಿಯ ರಾಮನಾಟಕ, ತರಂಗ, ಕ್ಷೇತ್ರಜ್ಞನ ಪದಗಳು, ನಂದನಾರ್ ಚರಿತಂ, ಮುತ್ತು ತಾಂಡವರ್ ಪದಗಳು, ತೇವಾರಂ, ಪ್ರಬಂಧಂ ಇವುಗಳಲ್ಲಿ ಕೆಲವನ್ನಾದರೂ ನುಡಿಸುತ್ತಿದ್ದರು. ಇದರಿಂದ ಅವರ ಹಿರಿಮೆಗಾಗಲಿ, ಅಭಿಜಾತ ಸಂಗೀತಕ್ಕಾಗಲೀ ಕುಂದುಂಟಾಗಲಿಲ್ಲ.

ಸಾಂಪ್ರದಾಯಿಕ ಹಾಗೂ ಗಂಭೀರ ಸಂಗೀತ ಕಚೇರಿಗಳಿಗೆ ಸಭೆಗಳಿಗೆ ಬರುತ್ತಿದ್ದ ಸಾಮಾನ್ಯ ಕೇಳುಗರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಅರಿಯಾಕುಡಿ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಕ್ರಮೇಣ ತಮ್ಮ ಪೂರ್ವಸೂರಿಗಳ ಪ್ರಯತ್ನವನ್ನು ಗಮನಿಸಿ, ಸ್ವತಃ ತಾವು ಕಡಿಮೆ ಅವಧಿಯ ಮತ್ತು ವಿಭಿನ್ನ ಪ್ರಕಾರದ ರಚನೆಗಳನ್ನು ಒಳಗೊಂಡಿರುವ ಕಚೇರಿ ವಿನ್ಯಾಸವನ್ನು ರೂಪಿಸಿದರು. ಕೇವಲ ವಿಭಿನ್ನ ಪ್ರಕಾರದ ಕೃತಿಗಳ ಆಯ್ಕೆ ಮಾತ್ರವಲ್ಲದೆ ಕ್ಲುಪ್ತ, ಸಂಕ್ಷಿಪ್ತ, ಪುನರಾವರ್ತನೆಗಳಿಲ್ಲದ ರಸಭರಿತವಾದ ರಾಗಾಲಾಪನೆಗೂ ಅವರಿಗೆ ವೀಣಾ ಧನಮ್ಮಾಳ್ ಮಾದರಿಯಾಗಿದ್ದರು ಎಂಬ ಅಂಶವನ್ನು ಎಸ್ ವೈ ಕೃಷ್ಣಸ್ವಾಮಿ ತಮ್ಮ ಆತ್ಮಚರಿತ್ರೆಯಲ್ಲಿ ಗುರುತಿಸುತ್ತಾರೆ. ಈ ಬದಲಾವಣೆಗಳಿಗೆ ಬಹು ಬೇಗನೆ ಧನಾತ್ಮಕವಾದ ಪ್ರತಿಕ್ರಿಯೆ ಬಂದು, ಅವರೊಂದು ಹೊಸ ಮಾರ್ಗದ ಪ್ರವರ್ತಕರಾದರು. ಪಲ್ಲವಿಗೆ ರಾಗಮಾಲಿಕೆಯಲ್ಲಿ ಸ್ವರ ಹಾಕುವ ಪರಿಪಾಠವನ್ನು ಮೊದಲು ಆರಂಭಿಸಿದ್ದು ಕೂಡ ಅರಿಯಾಕುಡಿ. ಹೊಸ ತಲೆಮಾರಿನ ಯುವಕರಂತೂ ಅರಿಯಾಕುಡಿಯ ಸಂಗೀತಕ್ಕೆ ಸಂಪೂರ್ಣ ಮರುಳಾದರು. ಇ. ಕೃಷ್ಣಅಯ್ಯರ್ ಹೇಳುವಂತೆ ಅರಿಯಾಕುಡಿಯ ಸಂಗೀತದಲ್ಲಿ ಯಾವುದೇ ಬಗೆಯ ಕಪಿಚೇಷ್ಟೆಗೆ, ದೊಂಬರಾಟಕ್ಕೆ ಅವಕಾಶವಿರಲಿಲ್ಲ. ಅವರ ಸಂಗೀತ ಸರಳವಾಗಿದ್ದು, ಸೊಬಗು, ಲಾಲಿತ್ಯದಿಂದ ಕೂಡಿತ್ತು. ಅದಕ್ಕೊಂದು ನಯ ಮತ್ತು ಮೆರುಗಿತ್ತು. ಅವರು ಯಾವುದನ್ನೂ ಅತಿ ಮಾಡಿ, ಕೇಳುಗನಿಗೆ ಆಯಾಸ ಉಂಟುಮಾಡುತ್ತಿರಲಿಲ್ಲ. ಅವರ ಶೈಲಿ ಅದೆಷ್ಟು ಆಕರ್ಷಕವಾಗಿತ್ತೆಂದರೆ, ಆಗಿನ ಕಾಲೇಜು ಯುವಕರು ಸಿನಿಮಾ ಹಾಡುಗಳನ್ನು ಗುನುಗುವ ಬದಲು ಅರಿಯಾಕುಡಿ ಹಾಡಿ ಜನಪ್ರಿಯವಾಗಿದ್ದ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಹಾಡುಗಳನ್ನು ಹಾಡುತ್ತಿದ್ದರು (ಟಿ. ಶಂಕರನ್). ಹೀಗೆ ಅರಿಯಾಕುಡಿಯವರ ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು.

ಅರಿಯಾಕುಡಿಯವರು ಕರ್ನಾಟಕ ಸಂಗೀತದ ಹೆಗ್ಗರುತಾಗಿದ್ದ ಗಮಕಗಳ ಭಂಡಾರವೇ ಆಗಿದ್ದರು. ಖ್ಯಾತ ಗಾಯಕ ಅಲೆಪ್ಪಿ ವೆಂಕಟೇಶನ್ ಗುರುತಿಸುವಂತೆ ಅವರು ಗಮಕಗಳನ್ನು ಅತ್ಯಂತ ವಿವೇಕದಿಂದ, ವಿವೇಚನೆಯಿಂದ ರಾಗಭಾವಕ್ಕೆ, ಕಲಾತ್ಮಕತೆಗೆ ಪೂರಕವಾಗುವಂತೆ ಬಳಸುತ್ತಿದ್ದರು. ಕೆಲವು ರಾಗಗಳಲ್ಲಿ ಒಂದು ಅಥವಾ ಎರಡು ದೀರ್ಘವಾದ ಶುದ್ಧಸ್ವರಗಳನ್ನು ಪದೇ ಪದೇ ನ್ಯಾಸವಾಗಿ ಬಳಸದೇ ಹೋದರೆ ರಾಗ ವಿಕೃತಗೊಂಡು ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಎಲ್ಲರೂ ಅವರ ಮಧ್ಯಮಕಾಲದ ಬಗ್ಗೆ ತುಂಬಾ ಮಾತಾಡುತ್ತಾರೆ. ಅವರು ಬರೀ ಮಧ್ಯಮಕಾಲವನ್ನೇ ಹಾಡುತ್ತಿದ್ದರು ಎನ್ನುತ್ತಾರೆ. ಅದು ಅಜ್ಞಾನದ ಪರಮಾವಧಿ. ಅವರು ವಿಳಂಬದಲ್ಲಿ ಹಾಡುತ್ತಿದ್ದ ಅಂಬಾ ನನ್ನು ಬ್ರೋವವೇ ಮತ್ತು ನಿನ್ನು ವಿನಾ (ತೋಡಿ), ಶ್ರೀ ಸುಬ್ರಹ್ಮಣ್ಯಾಯ (ಕಾಂಬೋಧಿ), ಅಕ್ಷಯಲಿಂಗ ವಿಭೋ ಮತ್ತು ಸುಂದಸೇಪು (ಶಂಕರಾಭರಣ), ತುಂಬಾ ವೇಗವಾಗಿ ಹಾಡುತ್ತಿದ್ದ ದೇವಮನೋಹರಿಯ ನೀಕೇಲು, ನವರಸ ಕನ್ನಡದ ನೀ ಪಾದಮೇ, ಬಿಲಹರಿಯ ಪರಿಧಾನ ಮಿಚ್ಚಿತೆ, ಸೌರಾಷ್ಟ್ರದ ನಿನ್ನು ಜೂಚಿ ಇವುಗಳನ್ನು ಗಮನಿಸಬೇಕು. ಕೆಲವೇ ಕೆಲವು ಸಂಗೀತಗಾರರಿಗೆ ಮಾತ್ರ ಇಷ್ಟು ವಿಭಿನ್ನವಾದ ಕಾಲಪ್ರಮಾಣಗಳನ್ನು ಅವರಷ್ಟು ಸುಲಲಿತವಾಗಿ, ಪರಿಣಾಮಕಾರಿಯಾಗಿ ಹಾಡುವುದಕ್ಕೆ ಸಾಧ್ಯ.
ಅರಿಯಾಕುಡಿಯವರ ಪ್ರಯತ್ನಕ್ಕೆ ತುಂಬಾ ಗಂಭೀರವಾದ ಟೀಕೆ ಮತ್ತು ವಿರೋಧ ಕೂಡ ವ್ಯಕ್ತವಾಯಿತು. ವಿರೋಧವನ್ನು ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರು ಸಂಗೀತದಲ್ಲಿ ಪರಿಣತರೂ ಜ್ಞಾನಸ್ಥರೂ ಆಗಿದ್ದರು. ಆರ್ ರಂಗರಾಮಾನುಜ ಅಯ್ಯಂಗಾರರು ಅವರಲ್ಲಿ ಪ್ರಮುಖರು. ವೃತಿಪರ ಸಂಗೀತದ ಗುಣವನ್ನೇ ಅರಿಯಾಕುಡಿಯವರ ಸಂಗೀತ ಪ್ರಭಾವಿಸಿ, ಬದಲಿಸಿದ್ದು ಅವರಲ್ಲಿ ಕಳವಳ ಉಂಟುಮಾಡಿತ್ತು. ಅವರ ಪ್ರಕಾರ ರಾಗ, ತಾನ, ಪಲ್ಲವಿ, ಸ್ವರಪ್ರಸ್ತಾರ, ಗ್ರಹಬೇಧ ಇವು ಸಂಗೀತದಲ್ಲಿ ಸೃಜನಶೀಲತೆಯನ್ನು ವ್ಯಕ್ತಪಡಿಸುವ ಪ್ರಕಾರಗಳಾಗಿದ್ದವು. ಆದರೆ ಅರಿಯಾಕುಡಿಯವರ ಸಂಗೀತ ಕಲೆಯ ಒತ್ತನ್ನು ಬದಲಿಸಿತ್ತು. ಕಲೆ ಅರಿವನ್ನು ಮೂಡಿಸಿ, ತಿಳಿವಳಿಕೆಯನ್ನು ನೀಡಬೇಕು ಎನ್ನುವುದಕ್ಕೆ ಬದಲಾಗಿ ಅದು ಮನರಂಜಿಸಬೇಕು ಎಂದು ಮಾಡಿತ್ತು. ಇದರಿಂದ ಕರ್ನಾಟಕ ಸಂಗೀತಕ್ಕೇ ವಿಶಿಷ್ಟ ಮತ್ತು ವಿಶೇಷ ಎನಿಸಿಕೊಂಡಿದ್ದ ಹಲವು ಸಂಪ್ರದಾಯಗಳಿಗೆ ಹಾನಿಯಾಯಿತು. ಲಯದ ಪಾತ್ರ ಗೌಣವಾಗಿ, ಅಪ್ರಧಾನವಾಯಿತು. ಹಲವು ಶತಮಾನಗಳಿಂದ ಲಯಕ್ಕೆ ದೊರಕುತ್ತಿದ್ದ ಗೌರವ ಕ್ರಮೇಣ ಇಲ್ಲವಾಯಿತು ಎಂದು ಬರೆದರು. ಆದರೆ ಸಾರ್ವಜನಿಕರಲ್ಲಿ, ಸಂಘಟಕರಲ್ಲಿ ಅವರನ್ನು ಕುರಿತು ಇದ್ದ ಮೆಚ್ಚುಗೆಯ ಮಹಾಪೂರದಲ್ಲಿ ಈ ಎಲ್ಲ ಟೀಕೆಗಳು ಕೊಚ್ಚಿಹೋದವು. ಅರಿಯಾಕುಡಿ ಒಬ್ಬ ಪ್ರಶ್ನಾತೀತ ನಾಯಕನಾದರು.

ಹಾಗಾದರೆ ೬೦ ವರ್ಷಗಳ ವೃತ್ತಿಬದುಕಿನಲ್ಲಿ ಅರಿಯಾಕುಡಿಯವರಿಗೆ ಸವಾಲೆಸೆಯುವಂತಹ, ಅವರಿಗಿಂತ ಹೆಚ್ಚು ಪ್ರತಿಭಾವಂತ, ಸೃಜನಶೀಲ ಕಲಾವಿದರು ಬರಲೇ ಇಲ್ಲವೇ? ಹಾಗೊಂದು ವೇಳೆ ಬಂದಿದ್ದರೆ ಅರಿಯಾಕುಡಿಯವರು ಪ್ರಶ್ನಾತೀತ ನಾಯಕರಾಗಿ ಉಳಿದುಕೊಂಡದ್ದು ಹೇಗೆ ಎನ್ನುವ ಪ್ರಶ್ನೆ ಯಾರನ್ನೇ ಆಗಲಿ ಕಾಡುತ್ತದೆ. ಮದ್ರಾಸಿನ ಇಎಸ್‌ವಿಐ ಎಂಬ ವಿಮರ್ಶಕರು ಈ ಕುರಿತು ನೀಡುವ ಕೆಲವು ಒಳನೋಟಗಳು ಆಸಕ್ತಿದಾಯಕವಾಗಿವೆ. ಹಾಡುವಾಗ ಎಷ್ಟೋ ಬಾರಿ ಅರಿಯಾಕುಡಿಯವರಿಗೆ ಶ್ರುತಿ ಸೇರುತ್ತಿರಲಿಲ್ಲ. ಆದರೆ ಇರೆಂಡುಕೆಟ್ಟಾನ್ ಕಾಲಂ ಅಥವಾ iಟಿ-beಣತಿeeಟಿ ಎಂದು ಎಲ್ಲರೂ ಕರೆಯುವ ಅವರ ಮಧ್ಯಮ ಕಾಲದಲ್ಲಿ ಹಾಡುವ ಶೈಲಿಯಿಂದ ಅದು ಮುಚ್ಚಿ ಹೋಗುತ್ತಿತ್ತು. ಮೂವತ್ತರ ದಶಕದ ಆರಂಭದಲ್ಲಿ ಪ್ರವರ್ಧಮಾನಕ್ಕೆ ಬಂದ ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರು ಮನೋಧರ್ಮ, ರಾಗವಿಸ್ತಾರ, ಕಲ್ಪನಾಸ್ವರಗಳಲ್ಲಿ ಎಲ್ಲರನ್ನೂ ಮೀರಿಸುವಂಥ ಮೇಧಾವಿ. ಆದರೆ ಅವರು ಮನಸೋಇಚ್ಛೆ ಯದ್ವಾತದ್ವಾ ನಡೆದುಕೊಳ್ಳುತ್ತಿದ್ದರು. ಅವರನ್ನು ನೆಚ್ಚಿಕೊಳ್ಳಲು ಆಗತ್ತಿರಲಿಲ್ಲ. ಜೊತೆಗೆ ಸ್ವಲ್ಪವೂ ಶಿಸ್ತಿಲ್ಲದ ಅವ್ಯವಸ್ಥೆಯ ಮನುಷ್ಯ. ಆದರೆ ಅರಿಯಾಕುಡಿಯವರಲ್ಲಿ ಸಹಜವಾಗಿಯೇ ಇದ್ದ ಶಿಸ್ತು, ಸ್ಥಿಮಿತ, ವ್ಯವಹಾರ ಚತುರತೆ ಮತ್ತು ವಿಶ್ವಾಸಾರ್ಹತೆ ವಿಶ್ವನಾಥ ಅಯ್ಯರ್ ಇವರಿಗೆ ಪ್ರತಿಸ್ಪರ್ಧಿ ಆಗದಂತೆ ಮಾಡಿತು. ಮೂವತ್ತರ ದಶಕದಲ್ಲಿ ಬಂದ ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅರಿಯಾಕುಡಿಯಷ್ಟೇ ಪ್ರತಿಭಾವಂತರು. ಆದರೆ ಅವರು ಸ್ವಲ್ಪ ಕಾಲ ಮಾತ್ರ ಮುಂಚೂಣಿಯಲ್ಲಿದ್ದರು. ಅವರ ನಂತರ ಅರಿಯಾಕುಡಿಗೆ ಸರಿಸಮನಾಗಿ ನಿಲ್ಲಬಲ್ಲ ಸಾಮರ್ಥ್ಯ ಸೆಮ್ಮಂಗುಡಿಯವರಿಗೆ ಇತ್ತು. ಆದರೆ ದುರದೃಷ್ಟವಷಾತ್ ಗಂಟಲು ಮತ್ತು ಮೂಗಿನ ತೊಂದರೆಯಿಂದ ಅವರಿಗೆ ಅದು ಸಾಧ್ಯವಾಗಲಿಲ್ಲ. ನಿಜವಾದ ಅರ್ಥದಲ್ಲಿ ಅವರಿಗೆ ಎಲ್ಲಾ ವಿಧದಲ್ಲಿಯೂ ಪ್ರತಿಸ್ಪರ್ಧಿಯಾಗಿ ನಿಂತು, ಕರ್ನಾಟಕ ಸಂಗೀತದಲ್ಲಿ ಶತಮಾನದ ಸಂಗೀತಗಾರ ಆಗುವ ಸಾಧ್ಯತೆ ಇದ್ದವರು ಜಿಎನ್‌ಬಿ. ಆದರೆ ವಿಧಿಯ ಕ್ರೌರ್ಯದಿಂದ ಅವರನ್ನು ಕಾಡಿದ ಗಂಭೀರವಾದ ಶ್ರುತಿಯ ಸಮಸ್ಯೆ ಇದಕ್ಕೆ ಕಾಲ್ತೊಡಕಾಗಿ ಅರಿಯಾಕುಡಿ ನಿರ್ವಿವಾದಿತ ನಾಯಕನಾಗಿ ಉಳಿದರು.

ಆರಂಭದ ದಿನಗಳಲ್ಲಿ ಅರಿಯಾಕುಡಿಯವರಿಗೆ ಪಿಟೀಲಿನಲ್ಲಿ ಮದ್ರಾಸ್ ಬಾಲಕೃಷ್ಣ ಅಯ್ಯರ್ ಮತ್ತು ಮದ್ರಾಸ್ ವೇಲು ನಾಯ್ಕರ್ ಪಕ್ಕವಾದ್ಯ ಸಹಕಾರ ಒದಗಿಸುತ್ತಿದ್ದರು. ಅವರ ಜೋಡಿ ಅಯ್ಯಂಗಾರ್-ಅಯ್ಯರ್-ನಾಯ್ಕರ್ ಎಂದೇ ಪ್ರಸಿದ್ಧವಾಗಿತ್ತು. ಆದರೆ ದೇವಕೋಟೆಯ ಚಟ್ಟಿಯಾರ್ ಸಮುದಾಯದವರು ಮಾತ್ರ ಅರಿಯಾಕುಡಿಯವರಿಗೆ ಚೌಡಯ್ಯನವರ ಪಕ್ಕವಾದ್ಯವೇ ಬೇಕೆನ್ನುತ್ತಿದ್ದರು. ಮಧ್ಯವಯಸ್ಸಿನ ಹೊತ್ತಿಗೆ ಅವರಿಗೆ ಟಿ.ಎನ್ ಕೃಷ್ಣನ್ ಅತ್ಯಂತ ಪ್ರಿಯವಾದ ಪಿಟೀಲುವಾದಕರಾಗಿದ್ದರು. ಅರಿಯಾಕುಡಿಯವರ ಶ್ರುತಿ ಅಲೆದರೂ ಟಿಎನ್‌ಕೆ ಅದನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸುತ್ತಿದ್ದರು. ಹಲವು ಮೃದಂಗವಾದಕರು ಅವರಿಗೆ ಸಹಕಾರ ನೀಡಿದ್ದರು. ಆದರೆ ಸ್ವತಃ ಅರಿಯಾಕುಡಿಯವರಿಗೆ ಪಾಲ್ಘಾಟ್ ಮಣಿ ಅಯ್ಯರ್ ಎಂದರೆ ಬಲು ಮೆಚ್ಚು. ಅಂತೆಯೇ ಮಣಿ ಅಯ್ಯರ್ ಅವರಿಗೂ ಅರಿಯಾಕುಡಿಯವರ ಸಂಗೀತವೆಂದರೆ ಸ್ವಲ್ಪ ಹೆಚ್ಚು ಒಲವು. ಮಣಿ ಅಯ್ಯರ್ ತೀರಿಹೋಗುವ ಮೊದಲು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ನಾಳೆ ಅರಿಯಾಕುಡಿಯವರ ಕಚೇರಿಗೆ ತಯಾರಾಗಬೇಕು ಎಂದು ಕನವರಿಸುತ್ತಿದ್ದರಂತೆ. ಅಂತಹ ಭಲೇಜೋಡಿ ಅವರಿಬ್ಬರದ್ದು.
ಅರಿಯಾಕುಡಿಯವರು ಬಹಳ ಸೊಗಸಾಗಿ ರಾಗ ಸಂಯೋಜಿಸುತ್ತಿದ್ದರು. ಅರುಣಾಚಲ ಕವಿಯ ರಾಮನಾಟಕ, ತಿರುಪ್ಪಾವೈನ ಹಾಡುಗಳು ಇವರ ರಾಗ ಸಂಯೋಜನೆಯಲ್ಲಿ ತುಂಬಾ ಜನಾದರಣೆ ಪಡೆದವು. ತಮಿಳು ರಚನೆಗಳನ್ನು ತಮ್ಮ ಕಚೇರಿಯ ಉತ್ತರಾರ್ಧದಲ್ಲಿ ಹಾಡಿ ಜನಪ್ರಿಯಗೊಳಿಸಿದ ಆದ್ಯರು ಅರಿಯಾಕುಡಿ. ಆದರೆ ತಮಿಳ್ ಹಾಡುಗಳನ್ನು ಮಾತ್ರವೇ ಕಚೇರಿಯಲ್ಲಿ ಹಾಡಬೇಕೆಂಬ ತಮಿಳ್ ಇಸೈ ಸಂಘದ ನಿಯಮವನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದರು. ಕಲಾವಿದರ ಮೇಲೆ ಅಂತಹ ಕಟ್ಟುಪಾಡುಗಳನ್ನು ಹೇರಬಾರದು ಎನ್ನುವುದು ಅವರ ನಿಲುವಾಗಿತ್ತು. ಅವರು ತಮ್ಮ ಗುರುಗಳು ಮತ್ತು ತ್ಯಾಗರಾಜರ ರಚನೆಗಳನ್ನು ಹಾಡಲು ಅವಕಾಶ ನೀಡಿದರೆ ಮಾತ್ರ ತಮಿಳು ಇಸೈ ಸಂಘದಲ್ಲಿ ಹಾಡುವುದಾಗಿ ಹೇಳಿದಾಗ ತಮಿಳು ಇಸೈ ಸಂಘವು ಅವರ ಮಾತಿಗೆ ಮಣಿಯಬೇಕಾಯಿತು.
ಅರಿಯಾಕುಡಿಯವರಿಗೆ ಹಲವು ಶಿಷ್ಯರಿದ್ದರು. ಅವರಲ್ಲಿ ಪ್ರಮುಖರು ಕೆ.ವಿ. ನಾರಾಯಣಸ್ವಾಮಿ, ಬಿ ರಾಜಂ ಅಯ್ಯರ್, ಮಧುರೈ ಎನ್ ಕೃಷ್ಣನ್, ಕುಂಭಕೋಣಂ ಸಂಪತ್, ಎಸ್ ರಾಜಂ, ದೇವಕೋಟೆ ಎನ್ ನಾರಾಯಣಸ್ವಾಮಿ ಅಯ್ಯರ್, ಕನಕಾಂಬುಜಂ, ಕೆ.ಎಸ್. ಧನಮ್ಮಾಳ್, ಅಪರಂಜಿ, ಮುಂತಾದವರು. ಅವರು ಸಾಮಾನ್ಯವಾಗಿ ಎದುರಿಗೇ ಕೂರಿಸಿಕೊಂಡು ಪಾಠ ಹೇಳಿಕೊಟ್ಟಿದ್ದು ಕಡಿಮೆ ಎನ್ನುತ್ತಾರೆ ಅವರ ವಿದ್ಯಾರ್ಥಿಗಳು. ಕೆಲವರು ಅವರ ಮನೆಯಲ್ಲಿಯೇ ಇದ್ದು, ಮತ್ತೆ ಕೆಲವರು ಅವರ ಮನೆಗೆ ಹೋಗಿ ಕಲಿಯುತ್ತಿದ್ದರು. ಅರಿಯಾಕುಡಿ ಶಿಷ್ಯರನ್ನು ಪ್ರೀತಿಯಿಂದ ಮನೆಯವರಂತೆಯೇ ಕಾಣುತ್ತಿದ್ದರು. ಆದರೆ ಅವರಲ್ಲಿ ಗುರುಕುಲವಾಸ ಮಾಡುವ ಶಿಷ್ಯರು ರುಬ್ಬುವುದು, ಅಡುಗೆ ಮಾಡು ವುದು, ಬಟ್ಟೆ ಒಗೆಯುವುದರಿಂದ ಹಿಡಿದು ಎಲ್ಲಾ ಬಗೆಯ ಕೆಲಸವನ್ನೂ ಮಾಡಬೇಕಿತ್ತು. ಸುಮಾರಾಗಿ ಕಚೇರಿ ಮಾಡುವ ಹಂತಕ್ಕೆ ಬಂದಿರುವವರಿಗೆ ಮಾತ್ರ ಅವರು ಪಾಠ ಹೇಳುತ್ತಿದ್ದರು. ಎಂದೋ ಅಪರೂಪಕ್ಕೆ ಎದುರಿಗೇ ಕುಳಿತು ಕಲಿಸುತ್ತಿದ್ದರು. ಕೆ.ವಿ. ನಾರಾಯಣ ಸ್ವಾಮಿ ಗುರುಗಳು ಹಾಡುವುದನ್ನು, ಅಭ್ಯಾಸ ಮಾಡುವುದನ್ನು ಗಮನಿಸುತ್ತಾ, ಇತರ ವಿದ್ವಾಂಸರ ಜೊತೆ ಅವರು ಚರ್ಚಿಸುವುದನ್ನು ಕೇಳಿಸಿಕೊಳ್ಳುತ್ತಾ, ಕಚೇರಿಯಲ್ಲಿ ಅವರಿಗೆ ಗಾಯನ ಸಹಕಾರ ನೀಡುತ್ತಾ ಕಲಿತರು.
ಸುಮಾರು ೬೦ ವರ್ಷದ ವೃತ್ತಿ ಬದುಕಿನಲ್ಲಿ ಅರಿಯಾಕುಡಿಯವರ ವರ್ಚಸ್ಸು ಕೊನೆಯವರೆಗೂ ಕುಂದಲೇ ಇಲ್ಲ. ಅವರ ತಾರಾ ಮೌಲ್ಯ ಹಾಗೆಯೇ ಉಳಿದಿತ್ತು. ಸೆಮ್ಮಂಗುಡಿ, ಜಿಎನ್‌ಬಿ ಮುಂತಾದ ಪ್ರತಿಭಾವಂತ ಕಲಾವಿದರು ಅವರನ್ನು ತಮ್ಮ ಗುರುಗಳ ಸ್ಥಾನದಲ್ಲಿ ಇಟ್ಟಿದ್ದರು. ರಾಜರು, ಜಮೀನುದಾರರು, ಶ್ರೀಮಂತ ಕುಲೀನರು ಅವರಿಗೆ ಅತ್ಯಂತ ಬೆಲೆ ಬಾಳುವ ಉಡುಪುಗಳು, ಅಮೂಲ್ಯವಾದ ಹರಳುಗಳ ಉಂಗುರಗಳು, ವಾಚುಗಳನ್ನು ಉಡುಗೊರೆಗಳನ್ನು ನೀಡಿ ತಮ್ಮ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಅವರು ಎಂದೂ ಬಟ್ಟೆಯನ್ನಾಗಲಿ ಅಥವಾ ಬಂಗಾರವನ್ನಾಗಲಿ ಕೊಳ್ಳಬೇಕಾದ ಸಂದರ್ಭವೇ ಬರಲಿಲ್ಲ. ಅಂತೆಯೇ ಪ್ರಶಸ್ತಿ ಪುರಸ್ಕಾರಗಳೂ ಅವರ ಪದತಲದಲ್ಲಿ ಬಂದು ಬೀಳುತ್ತಿದ್ದವು. ೧೯೩೨ರಲ್ಲಿ ಸಂಗೀತ ರತ್ನಾಕರ, ೧೯೨೮ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ, ೧೯೪೬ ಮೈಸೂರು ಮಹಾರಾಜರಿಂದ ಗಾಯಕ ಶಿಖಾಮಣಿ, ತಮಿಳ್ ಇಸೈ ಸಂಘದಿಂದ ಇಸೈ ಪೆರಾರಿಂಜ್ಞಾರ್, ೧೯೫೨ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಮತ್ತು ೧೯೫೬ರಲ್ಲಿ ಪ್ರೆಸಿಡೆಂಟ್ಸ್ ಅವಾರ್ಡ್.

ಆಕರ

  1. Sri Ariyakudi Ramanuja Iyengar, Commemoration Volume, 19th May 1990.
  1. Lakshmi Subramanian, From The Tanjore Court to the Madras Music Academy
  1. Lakshmi Subramanian, New Mansions for Music.
  1. Sriram V, Carnatic Summer
  2. Indira Menon, Great Masters of Carnatic  Music
  1. K.S. Mahadevan, Musings on Music and Musicians

೭. ಶ್ರುತಿ ಮಾಸಪತ್ರಿಕೆ, ಸಂಚಿಕೆ ೩೯/೪೦, ಡಿಸೆಂಬರ್ ೧೯೮೭/
ಜನವರಿ ೧೯೮೮
೮. ಶ್ರುತಿ ಮಾಸಪತ್ರಿಕೆ, ಸಂಚಿಕೆ ೪೨, ಮಾರ್ಚ್ ೧೯೮೮