Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ

ವೇಣುಗೋಪಾಲ್ ಟಿ.ಎಸ್  ಮತ್ತು ಶೈಲಜ

ಮದ್ರಾಸಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ೧೭ರ ಹರೆಯದ ಒಬ್ಬ ಯುವಕ ಸಂಗೀತ ಸ್ಪರ್ಧೆಯೊಂದರಲ್ಲಿ ಹಾಡುತ್ತಾನೆ. ಎರಡನೇ ಬಹುಮಾನ ಬರುತ್ತದೆ. ಬಹುಮಾನ ವಿತರಣೆಯ ಸಂದರ್ಭದಲ್ಲಿ ಬಹುಮಾನ ವಿಜೇತರು ಹಾಡಬೇಕು ಅನ್ನೋದು ಅಲ್ಲಿಯ ಪದ್ಧತಿ. ಬಹುಮಾನ ವಿತರಣೆಗೆ ಬಂದ ಎಸ್ ಜಾನಕಿಯವರು ಹಾಡು ಕೇಳಿ ಸಿಟ್ಟಾಗುತ್ತಾರೆ. ಏನ್ರಿ ಇದ? ಈ ಹುಡುಗ ಎಷ್ಟು ಚೆನ್ನಾಗಿ ಹಾಡ್ತಾನೆ. ಇವನಿಗೆ ಎರಡನೇ ಬಹುಮಾನ ಕೊಟ್ಟಿದ್ದೀರಿ. ಮೊದಲ ಬಹುಮಾನ ಕೊಡಬೇಕಿತ್ತು ಅಂತ ಸಂಘಟಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹುಡುಗನನ್ನು ಕರೆದು ಸಂಗೀತವನ್ನೇ ಮುಂದುವರಿಸು, ನಿನಗೆ ಒಳ್ಳೆಯ ಭವಿಷ್ಯವಿದೆ. ಅಂತ ಅವನಲ್ಲಿ ಸಂಗೀತದ ಕನಸನ್ನು ಬಿತ್ತುತ್ತಾರೆ. ಅವರ ಮಾತಿಗೆ ಬೆಲೆಕೊಟ್ಟು ಆ ಹುಡುಗ ಒಂದೆರಡು ವರ್ಷ ಪ್ರಯತ್ನಿಸುತ್ತಾನೆ. ಏನೂ ಗಿಟ್ಟದೆ, ಓದನ್ನು ಗಂಭೀರವಾಗಿ ಮುಂದುವರಿಸುತ್ತಾನೆ. ಆದರೆ ಇನ್ನೊಂದು ಸ್ಪರ್ಧೆಯಲ್ಲಿ ಹುಡುಗನ ಹಾಡನ್ನು ಕೇಳಿದ ಸಂಗೀತ ನಿರ್ದೇಶಕ ಕೋದಂಡಪಾಣಿಯವರಿಗೆ ತುಂಬಾ ಸಂತೋಷವಾಗುತ್ತದೆ. ಕರೆದುಕೊಂಡು ಹೋಗಿ ಒಂದು ತೆಲುಗು ಸಿನಿಮಾದಲ್ಲ್ಲಿ ಹಾಡಿಸುತ್ತಾರೆ. ಅಂದು ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಪ್ರಕಾಶಮಾನವಾದ ನಕ್ಷತ್ರ ಹುಟ್ಟಿತು. ಅದೇ ಎಸ್‌ಪಿಬಿ – ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯ. ಹುಟ್ಟಿನಿಂದ ಆರಂಭಿಸಿ ಸಾವಿನವರಗೆ ಮಾನವನ ಎದೆ ಮಿಡಿದಿರಬಹುದಾದ ಎಲ್ಲ ಭಾವಗಳನ್ನೂ ತನ್ನ ಕಂಠದಲ್ಲಿ ಮಿಡಿದ ಜೀವ ಅದು. ಶೋಕ, ಹರುಷ, ಕೋಪ, ಪ್ರೀತಿ, ಪ್ರಣಯ, ಸ್ನೇಹ, ಕರುಣೆ, ಮಮತೆ, ಬಾಂಧವ್ಯ ಹೀಗೆ ಅತ್ಯಂತ ವೈವಿಧ್ಯಮಯ ಭಾವಲೋಕವನ್ನು ಅಭಿವ್ಯಕ್ತಿಸಲು ಸಾಧ್ಯವಾಗುತ್ತಿದ್ದ ಅಪರೂಪದ ಕಂಠ ಅವರದು. ನಗು, ಹಾಸ್ಯ, ಲೇವಡಿ, ತಿರಸ್ಕಾರ, ಪ್ರಣಯದ ಮುಲುಗುವಿಕೆ ಇವೆಲ್ಲವನ್ನೂ ಹಾಡಿನ ಭಾಗವಾಗಿಯೇ ಹೊರಹೊಮ್ಮಿಸಬಲ್ಲಂತಹ ಸಹಜ ಶಾರೀರ ಅವರದು. ಅವರು ಹಾಡಿರುವ ’ರೋಜಾ’ ಚಿತ್ರದ ’ಕಾದಲ್ ರೋಜಾವೇ’ ಹಾಡನ್ನು ಕೇಳಿದ ಯಾವುದೇ ಮನಸ್ಸಾದರೂ ಒದ್ದೆಯಾಗದಿರಲು ಸಾಧ್ಯವೇ? ಎಲ್ಲಾ ತರದ ಸಂದರ್ಭಗಳಿಗೂ ಮಿಡಿಯಬಲ್ಲ ಅವರ ಕಂಠ ಎಲ್ಲಾ ತೆರನಾದ ಜನರನ್ನು ಕಲಕುತ್ತಿತ್ತು.

’ಶ್ರೀ ಶ್ರೀ ಮರ್ಯಾದ ರಾಮಣ್ಣ’ ಎಂಬ ತೆಲುಗು ಚಿತ್ರದಿಂದ ೧೯೬೬ರಲ್ಲಿ ತಮ್ಮ ವೃತ್ತಿಬದುಕನ್ನು ಆರಂಭಿಸಿದ ಎಸ್‌ಪಿಬಿ ನನಗೆ ಅತ್ಯಂತ ಪ್ರಿಯವಾದ ಭಾಷೆ ಸಂಗೀತ ಎನ್ನುತ್ತಿದ್ದರು. ಎಲ್ಲ ಭಾರತೀಯ ಭಾಷೆಗಳನ್ನೂ ತಮ್ಮದಾಗಿಸಿಕೊಂಡು, ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಹಾಡಿದ ಎರಡನೆಯ ಹಾಡು ಕನ್ನಡ ಚಿತ್ರದ್ದು. ಬಹುಮುಖ ಪ್ರತಿಭೆ ಅವರದ್ದು. ಕಮಲಹಾಸನ್ ಅಂತಹವರಿಗೆ ಧ್ವನಿ ನೀಡಿದ್ದಾರೆ, ಚಿತ್ರಗಳಲ್ಲಿ ನಟಿಸಿದ್ದಾರೆ, ಸಂಗೀತ ನೀಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಶ್ರೇಷ್ಠ ನಟರಿಗೂ ಹಾಡಿದ್ದಾರೆ. ಅಭಿಮಾನಿಗಳ ಪಾಲಿಗೆ ಅವರು ’ಹಾಡುವ ಚಂದಿರ’. ಆರು ರಾಷ್ಟ್ರಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಎಸ್‌ಪಿಬಿ ಅವರ ಕಂಠದಲ್ಲಿ ಎ.ಎಂ. ರಾಜಾ ಅವರ ತಂಗಾಳಿಯಂತಹ ಕಂಠ, ಪಿ.ಬಿ. ಶ್ರೀನಿವಾಸ್ ಅವರ ಕಂಠದ ಮೃದುತ್ವ, ಮಾರ್ದವತೆ ಮತ್ತು ರಫಿ ಅವರ ಕಂಠದ ಸುಲಲಿತತೆ ಮೇಳೈಸಿತ್ತು.

ತಂದೆ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಕೊನೇಟಮ್ಮಪೇಟದಲ್ಲಿ ಹರಿಕಥಾ ವಿದ್ವಾಂಸರು. ಎಸ್‌ಪಿಬಿ ಹುಟ್ಟಿದ್ದು ಕೂಡ ಅಲ್ಲಿಯೇ ೧೯೪೬ರಲ್ಲಿ. ಸಂಗೀತ ಎಸ್‌ಪಿಬಿಯಲ್ಲಿ ಗುಪ್ತಗಾಮಿನಿಯಾಗಿತ್ತು. ಹಾರ್ಮೋನಿಯಂ ಮತ್ತು ಕೊಳಲು ನುಡಿಸುವುದನ್ನು ಸ್ವಂತವಾಗಿ ಕಲಿತಿದ್ದರು. ಶಾಸ್ತ್ರೀಯ ಸಂಗೀತವನ್ನು ಶಾಸ್ತ್ರೋಕ್ತವಾಗಿ ಕಲಿತಿರಲಿಲ್ಲ. ಆದರೆ ಅದರ ಸೂಕ್ಷ್ಮಗಳನ್ನು ತಿಳಿದುಕೊಂಡಿದ್ದರು. ಜೊತೆಗೆ ಅದಕ್ಕೆ ಬೇರೊಂದು ಘನ ಬೇಕು ಎನ್ನುವ ಅರಿವಿನ ವಿನಯವೂ ಇತ್ತು. ಹಾಗೇ ಚಿತ್ರಸಂಗೀತಕ್ಕೆ ಬೇರೆಯದೇ ಪ್ರತಿಭೆ, ಕೌಶಲ ಹಾಗೂ ಸೃಜನಶೀಲತೆ ಬೇಕು ಅನ್ನುವುದು ಅವರಿಗೆ ಗೊತ್ತಿತ್ತು. ಈ ಅರಿವು ಇದ್ದುದರಿಂದಲೇ ಅವರಿಗೆ ಹಿನ್ನಲೆ ಗಾಯನದಲ್ಲಿ ಮುಗಿಲೆತ್ತರ ಏರುವುದಕ್ಕೆ ಸಾಧ್ಯವಾಯಿತು. ಇಲ್ಲದೇ ಹೋಗಿದ್ದರೆ ಘಂಟಸಾಲಾ, ಪಿ ಬಿ ಶ್ರೀನಿವಾಸ್, ಜೇಸುದಾಸ್ ಸೌಂದರ್‌ರಾಜನ್ ಇಂತಹ ಘಟಾನುಘಟಿಗಳೆಲ್ಲಾ ಚಿತ್ರರಂಗದಲ್ಲಿದ್ದ ಸಮಯದಲ್ಲಿ ಸಂಗೀತದ ವ್ಯಾಕರಣವೂ ತಿಳಿಯದ ಪುಡಿಹುಡುಗ ಉಳಿಯುವುದು ಸಾಧ್ಯವಿರಲಿಲ್ಲ.

ಅವರು ಸಿನಿಮಾರಂಗಕ್ಕೆ ೧೯೬೬ರಲ್ಲಿ ಕಾಲಿಟ್ಟರೂ ತಮಿಳಿನಲ್ಲಿ ಹಾಡಿದ್ದು ಸ್ವಲ್ಪ ತಡವಾಗಿ ೧೯೬೯ರಲ್ಲಿ. ಎಂ.ಎಸ್. ವಿಶ್ವನಾಥನ್ ಎಸ್‌ಪಿಬಿಯವರ ಗಾಯನವನ್ನು ತುಂಬಾ ಮೆಚ್ಚಿಕೊಂಡಿದ್ದರು. ತುಂಬಾ ಅವಕಾಶವನ್ನೂ ಕೊಟ್ಟರು. ಇಳೆಯರಾಜ ಜೊತೆಯಾದಾಗ, ಮತ್ತು ರಜನಿಕಾಂತ್ ಹಾಗೂ ಕಮಲಾಹಾಸನ್ ಅವರಿಗೆ ಹಾಡಿದಾಗ ಎಸ್‌ಪಿಬಿಯ ಗ್ರಾಫ್ ಮೇಲಕ್ಕೆ ಜಿಗಿಯಿತು. ಇಳೆಯರಾಜ ಜೊತೆ ಆರ್ಕೆಸ್ಟ್ರಾ ತಂಡವನ್ನು ಮಾಡಿಕೊಂಡು ದೇಶಾದ್ಯಂತ ಸುತ್ತಿ ಸಾವಿರಾರು ಕಾರ್ಯಕ್ರಮ ನೀಡಿದರು. ಆಗ ಬಸ್ಸಿನಲ್ಲಿ, ರೈಲಿನಲ್ಲಿ, ಎಷ್ಟೋ ಬಾರಿ ರಿಸರ‍್ವೇಷನ್ ಇಲ್ಲದೆ ಹಸುಕರುಗಳನ್ನು ಸಾಗಿಸುವ ಕಂಪಾರ್ಟ್‌ಮೆಂಟಿನಲ್ಲೆಲ್ಲಾ ಪ್ರಯಾಣ ಮಾಡಿದ್ದಾರೆ. ಅದೇ ಬೇರೆ ಅನುಭವ. ಸಿಗುತ್ತಿದ್ದ ದುಡ್ಡೂ ಕಡಿಮೆ. ಆದರೂ ಅವೆಲ್ಲಾ ಅವರ ಮನಸ್ಸಿನಲ್ಲಿ ಉಳಿದುಕೊಂಡಿರುವ ನೆನಪುಗಳು. ಅಮೇಲೆ ಎ.ಆರ್ ರಹೆಮಾನರ ತಂದೆ ಆರ್ ಕೆ ಶೇಖರ್ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು.

ಆಗ ದೊಡ್ಡ ಹಿನ್ನಲೆ ಸಂಗೀತಗಾರ ಆಗಿಬಿಡುತ್ತೇನೆ ಅನ್ನೋ ವಿಶ್ವಾಸ ಇನ್ನೂ ಬೆಳೆದಿರಲಿಲ್ಲ. ಒಂದಿಷ್ಟು ಹಣ ಬಂದರೆ ಅಪ್ಪನಿಗೆ ಹಣ ಕಳುಹಿಸುವ ಹೊರೆ ತಪ್ಪುತ್ತಲ್ಲ ಅಂತ ನೆಮ್ಮದಿ ಪಟ್ಟುಕೊಳ್ಳುತ್ತಿದ್ದರು. ಆದರೆ ನಿರೀಕ್ಷೆಗೆ ಮೀರಿ ಅವಕಾಶಗಳು ಬರಲಾರಂಭಿಸಿದವು. ಕ್ಲಾಸಿಗೆ ಹೋಗೋದು ಕಷ್ಟ ಆಯಿತು. ಏನು ಮಾಡಲಿ ಅಂತ ಅಪ್ಪನನ್ನೇ ಕೇಳಿದರು. ಅಪ್ಪ ಕಥಕಾಲಕ್ಷೇಪ ಮಾಡಿಕೊಂಡು ಬಂದಿದ್ದವರು. ನೋಡಪ್ಪ ನೀನು ತುಂಬಾ ಜಾಣ, ಚೆನ್ನಾಗಿ ಓದುತ್ತಿದ್ದೀಯ. ಜೀವನಕ್ಕೆ ಯಾವುದನ್ನು ನೆಚ್ಚಿಕೊಳ್ಳಬಹುದು ಅಂತ ನನಗೂ ಗೊತ್ತಿಲ್ಲ. ಆದರೆ ಒಂದು ನಿಜ. ಎರಡು ಕುದುರೆಯ ಮೇಲೆ ಹೋಗಬೇಡ. ಯೋಚಿಸಿ, ನೀನೇ ಒಂದನ್ನು ಆರಿಸಿಕೋ, ಅಂತ ಆಯ್ಕೆಯನ್ನು ಮಗನಿಗೆ ಬಿಟ್ಟರು. ಸಂಗೀತವನ್ನೇ ಆರಿಸಿಕೊಂಡರು. ಆದರೆ ಇರಲಿ ಅಂತ ಇಂಜಿನಿಯರಿಂಗ್ ಪುಸ್ತಕಗಳನ್ನು ಐದು ವರ್ಷ ಜೋಪಾನವಾಗಿ ಇಟ್ಟುಕೊಂಡಿದ್ದರು!

ಅವರಿಗೆ ತಮ್ಮ ಸಾಮರ್ಥ್ಯ ಮತ್ತು ಮಿತಿ ಎರಡೂ ಚೆನ್ನಾಗಿ ಗೊತ್ತಿತ್ತು. ತಮ್ಮ ಕ್ಷೇತ್ರವನ್ನು ಕುರಿತಂತೆ ಸ್ಪಷ್ಟ ಜ್ಞಾನವಿತ್ತು. ಹಿನ್ನೆಲೆ ಗಾಯನ ಅಂದರೇನು? ತನ್ನ ಪಾತ್ರವೇನು ಅನ್ನೋದನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ ಹಿನ್ನೆಲೇ ಗಾಯನ ಅಂದರೆ ಹೀಗಿರಬೇಕು ಅಂತ ಒಂದು ಮಾರ್ಗವನ್ನು ಹಾಕಿಕೊಟ್ಟವರು ಅವರೇ ಅಂದರೆ ತಪ್ಪಾಗಲಾರದು. ಸಂಗೀತ ಅಥವಾ ಯಾವುದೇ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದರ ಅರಿವೂ ಇರಬೇಕು ಎನ್ನುವುದು ಅವರ ನಿಲುವಾಗಿತ್ತು. ಅದೆ ಕಾರಣಕ್ಕೆ ಅವರು ಇಳಯರಾಜ ಅವರನ್ನು ಮೆಚ್ಚಿಕೊಂಡಿದ್ದರು.

ಒಬ್ಬ ಗಾಯಕನಿಗೆ ತನಗೇನು ಸಾಧ್ಯವಿಲ್ಲ ಎನ್ನುವುದು ತಿಳಿದಿರಬೇಕು. ವೃತ್ತಿಯಲ್ಲಿ ಒಂದು ನಿಜಾಯ್ತಿ ಇರಬೇಕು. ಕೆಲವನ್ನು ನನಗೆ ಹಾಡೋದಕ್ಕೆ ಸಾಧ್ಯವಿಲ್ಲ. ಅಪ್ಪಟ ಭೈರವಿ ರಾಗದಲ್ಲಿ ಒಂದು ಹಾಡನ್ನು ರಚಿಸಿ, ಹಾಡಲು ಹೇಳಿದರೆ, ಅದನ್ನು ನನಗೆ ಹಾಡಲಾಗುವುದಿಲ್ಲ. ಇದನ್ನು ಜೇಸುದಾಸ್, ಅಥವಾ ಬಾಲಮುರಳೀಕೃಷ್ಣ ಅಥವಾ ಈಗ ಉನ್ನಿ ಕೃಷ್ಣನ್ ಕೈಲಿ ಹಾಡಿಸಿ. ಈ ಹಾಡನ್ನು ನಾನು ಕೆಡಿಸಿಬಿಡುತ್ತೇನೆ ಎಂದು ಹೇಳಿಬಿಡುತ್ತೇನೆ. ಪ್ರತಿಯೊಂದು ಹಾಡೂ ಒಬ್ಬ ಸಂಗೀತ ನಿರ್ದೇಶಕನ ಕಲ್ಪನೆಯ ಕೂಸು. ಅವರಿಗೆ ಒಬ್ಬ ಹಿನ್ನೆಲೆಗಾಯಕನ ಹಾಗೆ ಹಾಡಲಾಗುವುದಿಲ್ಲ ಎನ್ನುವ ಕಾರಣಕ್ಕೆ, ನೋಡಿ, ಇದು ನಾನು ಸೃಷ್ಟಿಸಿದ ಕೂಸು. ಇದನ್ನು ನಿಮ್ಮ ಮಡಿಲೊಳಗೆ ಇಡುತ್ತಿದ್ದೇನೆ. ಚೆನ್ನಾಗಿ ಸಾಕಿ ಎಂದು ನಮಗೆ ಕೊಡುತ್ತಾರೆ. ಅವರ ನಿರೀಕ್ಷೆಯಂತೆ ನಮಗೆ ಅದನ್ನು ಸಾಕಲು ಸಾಧ್ಯವಿಲ್ಲ ಎಂದರೆ, ತೆಪ್ಪಗೆ ಮಗುವನ್ನು ಅವರಿಗೇ ವಾಪಸ್ಸು ಕೊಟ್ಟು, ನನಗೆ ಅಷ್ಟು ಸಾಮರ್ಥ್ಯವಿಲ್ಲ. ನೀವೇ ಸರಿಯಾಗಿ ನೋಡಿಕೊಳ್ಳಿ ಎಂದು ಹೇಳುವಷ್ಟು ಸತ್ಯಸಂಧತೆ ನಮಗಿರಬೇಕು.

ಅವರ ಮತ್ತೊಂದು ಗುಣ ಬೇರೆಯವರು ಹಾಡುವುದನ್ನು ಸೂಕ್ಷ್ಮವಾಗಿ ಕೇಳುತ್ತಿದ್ದರು. ಮೆಚ್ಚುಗೆಯಾದದನ್ನು ತಮ್ಮದು ಮಾಡಿಕೊಳ್ಳುತ್ತಿದ್ದರು. ಗೈಡ್ ಸಿನಿಮಾದ ’ತೇರೆ ಮೇರೆ ಸಪನೆ’ ತುಂಬಾ ಸೊಗಸಾದ ಹಾಡು. ಅದರ ಬ್ಯಾಕ್‌ಗ್ರೌಂಡ್ ರಿದಂ, ಅದರ ಒಂದು ಹಂ ಅದ್ಭುತವಾಗಿದೆ. ಅದೊಂದು ಅದ್ಭುತವಾದ ರಚನೆ. ನಿಜವಾಗಿ ಹೇಳಬೇಕೆಂದರೆ ನನಗೆ ಹಾಡುವುದಕ್ಕೆ ಮತ್ತು ನನ್ನ ಅಭಿವ್ಯಕ್ತಿಗೆ ತುಂಬಾ ಮುಖ್ಯವಾಗಿ ಪ್ರೇರಣೆ ನೀಡಿದ್ದೇ ಹಿಂದಿ ಸಿನಿಮಾ ಸಂಗೀತ. ಅದರಲ್ಲೂ ಮುಖ್ಯವಾಗಿ ರಫಿ. ಒಳ್ಳೆಯ ಹಿನ್ನಲೆ ಸಂಗೀತದ ಪ್ರಮುಖ ಗುಣ ಅಂದರೆ ಹಾಡನ್ನು ಕೇಳುತ್ತಿದ್ದಂತೆ ಕೇಳುಗರ ಮನಸ್ಸಿನಲ್ಲಿ ಆ ದೃಶ್ಯ ಮೂಡಬೇಕು. ಹಾಡಿನ ಮೂಲಕ ದೃಶ್ಯ ಮೂರ್ತಗೊಳ್ಳಬೇಕು. ರಫಿಯವರಿಗೆ ಇದು ಸಾಧ್ಯವಾಗಿತ್ತು. ಎಸ್‌ಪಿಬಿ ಅವರ ಸಂಗೀತಕ್ಕೆ ಇದು ಸಾಧ್ಯವಾಗಿದೆ. ಇಂತಹ ಹಿನ್ನೆಲೆ ಗಾಯನ ನಟರ ನಟನೆಗೆ ತುಂಬಾ ಪೂರಕವಾಗಿರುತ್ತದೆ. ಹಿನ್ನೆಲೆಗಾಯನಕ್ಕೆ ಎಸ್‌ಪಿಬಿ ಬೇಕು ಅನ್ನುವುದು ವಿಷ್ಣುವರ್ಧನ್ ಅವರ ಸಿನಿಮಾದ ಕಾಂಟ್ರಾಕ್ಟಿನ ಭಾಗವಾಗಿರುತ್ತಿತ್ತು. ನಟನೆ ಶೇಕಡ ೮೦. ಇನ್ನು ಉಳಿದದ್ದು ಹಾಡು ಮೂಡಿಸುವ ಭಾವನೆಯಿಂದ ಬರೋದು. ಹಾಡು ಒಂದು ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುವಷ್ಟು ಭಾವನಾತ್ಮಕವಾಗಿರಬೇಕು. ಇಲ್ಲದೇ ಹೋದರೆ ನಟನೆಯ ಒಂದು ಅಂಗವೇ ಹೋಗಿಬಿಟ್ಟಂತೆ ಅಂತ ವಿಷ್ಣುವರ್ಧನ್ ಎನ್ನುತ್ತಿದ್ದರು.

ಹಿನ್ನೆಲೆ ಗಾಯಕನಿಗೆ ತಾನು ಯಾರಿಗಾಗಿ ಹಾಡುತ್ತೇನೆ, ಅವರ ಸ್ವಭಾವ ಏನು ಅನ್ನೋದರ ತಿಳಿವಳಿಕೆ ಇರಬೇಕು. ಎಸ್‌ಪಿಬಿ ಹಾಡು ಕೇಳಿದರೆ ಸಿನಿಮಾದ ಹೀರೋ ಯಾರು ಅನ್ನೋದು ತಕ್ಷಣ ಗೊತ್ತಾಗಿಬಿಡುತ್ತದೆ. ಅದು ಸಾಧ್ಯವಾಗಬೇಕಾದರೆ ನೀವು ಆ ನಟ ಮಾಡುತ್ತಿರುವುದನ್ನು ನಿಮ್ಮೊಳಗೆ ಎನಾಕ್ಟ್ ಮಾಡಬೇಕು. ಅವರೊಳಗೆ ಪ್ರವೇಶಿಸಬೇಕು. ಅವರು ಮಾತನಾಡುವ ಶೈಲಿ, ಅವರು ಪದಗಳ ಮೂಲಕ ಹೇಗೆ ತಮ್ಮ ಭಾವವನ್ನು ಅಭಿವ್ಯಕ್ತಿಸುತ್ತಾರೆ, ಇವುಗಳನ್ನು ಸದಾ ಗಮನಿಸಿ, ಅಂತರ್ಗತಗೊಳಿಸಿಕೊಳ್ಳಬೇಕು. ಇವೆಲ್ಲವೂ ಹಾಡಿಗೆ, ಸಂಗೀತಕ್ಕೆ, ಲಯಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ಸಹಜವಾಗಿ ಸೇರಿಕೊಳ್ಳಬೇಕು. ನಾವು ಹಾಡುವಾಗ ಅದಕ್ಕೆ ನಮ್ಮ ಮನೋಧರ್ಮವನ್ನು, ಕಲ್ಪನೆಯನ್ನು ಸೇರಿಸಿ ವಿಸ್ತರಿಸಬೇಕು. ಆದರೆ ಮೂಲ ದೇವರನ್ನು ವಿರೂಪಗೊಳಿಸಬಾರದು. ಅದು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬೇಕು. ಅದಕ್ಕೆ ಎಂ ಎಸ್ ವಿಶ್ವನಾಥನ್ ಸರ್ ನನ್ನನ್ನು ಬ್ಲಾಟಿಂಗ್ ಪೇಪರ್ ಬಾಲು ಅಂತ ಕರೆಯುತ್ತಿದ್ದರು. ಇದು ಮಿಮಿಕ್ರಿಯಲ್ಲ. ಹಾಗಾದಲ್ಲಿ ಅದು ತುಂಬಾ ಅಸಹ್ಯವಾಗಿರುತ್ತದೆ. ಕಾಮೆಡಿ, ಕ್ಯಾರಿಕೇಚರ್ ಆಗಿಬಿಡುತ್ತದೆ.
ಹಿನ್ನೆಲೆಗಾಯನವನ್ನು ಸಂಗೀತ ನಿರ್ದೇಶಕನ ಕನಸಿಗೆ ತಕ್ಕಂತೆ ಹಾಡಬೇಕು. ಆ ಚೌಕಟ್ಟಿನಲ್ಲೇ ತಮ್ಮ ಸ್ವಂತಿಕೆಯನ್ನೂ ಸೇರಿಸಿ ಬೆಳೆಸಬೇಕು. ಅದು ಸುಲಭದ ಮಾತಲ್ಲ. ನೂರಾರು ವಿಭಿನ್ನ ಸಂಗೀತ ನಿರ್ದೇಶಕರ ಕನಸನ್ನು ಸಾಕಾರಗೊಳಿಸುವುದು ಸುಲಭದ ಮಾತಲ್ಲ. ಅದು ಎಸ್‌ಪಿಬಿಗೆ ಸಾಧ್ಯವಾಗಿತ್ತು. ಹಾಗಾಗಿಯೇ ಅವರಿಗೆ ಹಲವು ದಶಕಗಳು ದಿನವಿಡೀ ದುಡಿಯುತ್ತಿದ್ದರೂ ಜೀವಂತವಾಗಿ, ಸೃಜನಶೀಲವಾಗಿ ಇರೋದಕ್ಕೆ ಸಾಧ್ಯವಾಯಿತು. ನಿಜವಾಗಿ ಹಿನ್ನೆಲೆ ಗಾಯನ ಅಂದರೇನು, ಹಿನ್ನೆಲೆ ಗಾಯಕನ ಪಾತ್ರವೇನೂ ಅನ್ನೋದನ್ನು ತಿಳಿಸಿಕೊಟ್ಟಿದ್ದು ಅವರ ಹೆಗ್ಗಳಿಕೆ.
ಸದಾ ನಗುತ್ತಾ, ಆತ್ಮೀಯವಾಗಿ ಇರೋ ಇವರನ್ನು ದೂರಮಾಡೋದು ಯಾರಿಗೂ ಕಷ್ಟ. ಎಲ್ಲರೂ ಆತ್ಮೀಯರೆ. ಇವರ ವೃತ್ತಿಬದುಕಿನಲ್ಲಿ ನೆರವಾದ ಹಿರಿಯರು ಅದೆಷ್ಟೋ ಜನ. ಕೋದಂಡಪಾಣಿ, ಎಂ ಎಸ್ ವಿಶ್ವನಾಥನ್, ಇಳೆಯರಾಜ, ರೆಹಮಾನ್, ಎಂಜಿಆರ್ ಹೀಗೆ ನೂರಾರು ಜನ. ಒಮ್ಮೆ ಎಂಜಿಆರ್ ಅವರ ’ಅಡಿಮೈ ಪೆಣ್’ ಚಿತ್ರದ ’ಆಯಿರಂ ನಿಲವೇ ವಾ’ ಹಾಡಿನ ಪ್ರಾಕ್ಟೀಸ್ ಮುಗಿದಿತ್ತು. ರಾಜಸ್ತಾನದಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಎಸ್‌ಪಿಬಿ ಟೈಫಾಯಿಡ್ ಬಂದು ಮಲಗಿಬಿಟ್ಟರು. ಎಂಜಿಆರ್ ಒಂದು ತಿಂಗಳು ಚಿತ್ರೀಕರಣ ಮುಂದೂಡಿದರು. ಚಿತ್ರೀಕರಣ ಮುಗಿದ ಮೇಲೆ ಕುತೂಹಲ ತಡೆಯಲಾಗದೆ ಎಂಜಿಆರ್ ಸರ್ ನೀವು ಬೇರೆಯವರನ್ನು ಹಾಕಿಕೊಂಡು ಚಿತ್ರೀಕರಣ ಮುಗಿಸದೆ ನನಗಾಗಿ ಏಕೆ ಕಾದಿರಿ, ಎಂದು ಕೇಳುತ್ತಾರೆ. ಇಲ್ಲ ಹಾಗೆ ಮಾಡಿದ್ದರೆ ಉಳಿದವರು ನೀನು ಹಾಡಿದ್ದು ನನಗೆ ಇಷ್ಟವಾಗಿಲ್ಲ. ಅದಕ್ಕೇ ನಾನು ಬೇರೆಯವರ ಕೈಲಿ ಹಾಡಿಸಿದೆ ಎನ್ನಬಹುದು. ಅಂತಹ ಒಂದು ಮಾತು ಬಂದರೆ ನಿನ್ನ ಇಡೀ ಕೆರಿಯರ್ ಹಾಳಾಗಿಬಿಡುತ್ತಲ್ಲಾ ಎಂದು ಒಂದು ತಿಂಗಳು ಕಾದೆ ಎಂದು ಹೇಳಿದರು. ಅವರ ದೊಡ್ಡತನದ ಮುಂದೆ ನಾನೆಷ್ಟರವನು ಅಂತ ಅನ್ನಿಸಿಬಿಟ್ಟಿತು.
ಇದು ನಮ್ಮ ಎಸ್‌ಪಿಬಿ. ವರ್ಷಕ್ಕೆ ೩೬೫ ದಿನ, ದಿನಕ್ಕೆ ೧೫ ಗಂಟೆ ನಿರಂತರವಾಗಿ, ಸಂತೋಷದಿಂದ ಹಾಡಿದ್ದಾರೆ. ಹಾಡನ್ನು ಹೃದಯಕ್ಕೆ ತಂದುಕೊಂಡು ಸಂತೋಷದಿಂದ ಹಾಡಿದ್ದಾರೆ. ಎಲ್ಲರೊಂದಿಗೂ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಅಂತಹವರಿಗೆ ಇಂದಿನ ಸಿಂತಸೈಸರ್ ಯುಗದ ತಾಂತ್ರಿಕ ಬದುಕಿನ ಜೀವನ ಸಂಕಟದ್ದಾಗಿರಬಹುದು. ಸ್ವಲ್ಪ ಅಪಶ್ರುತಿ ಬಂದರೂ ಮತ್ತೆ ಮೊದಲಿನಿಂದ ಹಾಡಿ ಸರಿಪಡಿಸುತ್ತಿದ್ದ ಜೀವಕ್ಕೆ, ಈಗ ಯಾರಾದರೂ ಗಾಯಕರು ಟಕ್ನಿಷಿಯನ್ನಿಗೆ ಮೆಲೋಡೈಸ್ ಬಳಸಿ ಅದನ್ನು ಸರಿಮಾಡಿಬಿಡಿ ಅಂತ ಹೇಳಿದಾಗ ಕಷ್ಟವಾಗಬಹುದು. ತಾಂತ್ರಿಕತೆಯನ್ನು ಎಷ್ಟು ಬಳಸಿಕೊಳ್ಳಬೇಕು ಅನ್ನುವ ವಿವೇಕವಿರಬೇಕು ಅಂತ ನಂಬಿದವರು ಅವರು. ಜೊತೆಯಲ್ಲಿ ಕೆಲಸ ಮಾಡಿದ್ದ ಎಷ್ಟೋ ಜನ ಲೈವ್‌ವಾದಕರು ಯಂತ್ರಗಳಿಂದಾಗಿ ಕೆಲಸ ಕಳೆದುಕೊಂಡಿರುವುದಕ್ಕೆ ಮಿಡಿಯುವ ಮನಸ್ಸು ಅವರದು. ಹಾಗಾಗಿಯೇ ಬಾಲ್ಯದಲ್ಲಿ ಸಂಗೀತದ ಕ್ಯಾಸೆಟ್ಟನ್ನು ಕೇಳಿಸುತ್ತಿದ್ದ ಅಂಗಡಿಯವರೊಡನೆ ಇಂದು ಹೋಗಿ, ಸಂತೋಷವಾಗಿ ಟೀ ಹೀರಲು ಅವರಿಗೆ ಸಾಧ್ಯವಾಗುತ್ತದೆ. ರಸ್ತೆ ಬದಿಯ ಚಮ್ಮಾರನಿಂದ ನಾಲ್ಕಾಣೆ ಪಡೆದು, ಟೀ ಕುಡಿದದ್ದು ಅಷ್ಟೇ ಹಸುರಾಗಿದೆ. ಅವರೊಂದಿಗೆ ಅಷ್ಟೇ ಮಧುರವಾದ ಬಾಂಧವ್ಯವೂ ಸಾಧ್ಯವಾಗಿದೆ.

ಆಯರ್‌ಪಾಡಿ ಮಾಳಿಗೆಯಿಲ್ ತಾಯ್‌ಮಡಿಲಿಲ್ ಎಂದು ಕೃಷ್ಣನಿಗೆ ಜೋಗುಳ ಹಾಡಿದ ಎಸ್‌ಪಿಬಿ ಎಂದು ಸ್ವತಃ ಆ ಜೋಗುಳವನ್ನು ಆಲಿಸುತ್ತಾ ಚಿರನಿದ್ರೆಯಲ್ಲಿದ್ದಾರೆ.