ನೋವೇ ದನಿಯಾದ – ನೋವಿಗೆ ದನಿಯಾದ
ಬೇಗಂ ಅಖ್ತರ್
ಶೈಲಜಾ
ಭಾರತೀಯ ಸಂಗೀತ ಕ್ಷೇತ್ರದ ಉಜ್ವಲ ತಾರೆ ಬೇಗಂ ಅಖ್ತರ್. ಬದುಕು ಮತ್ತು ಸಂಗೀತವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಅತ್ಯಂತ ಭಾವುಕ ಗಾಯಕಿ. ಸದಾ ಪ್ರೀತಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮತ್ತು ಅದು ದೊರಕದಿದ್ದಾಗ ವ್ಯಥೆಯಿಂದ ತೀವ್ರ ವಿಷಾದದಲ್ಲಿ ಪರಿತಪಿಸುತ್ತಿದ್ದ, ತಮ್ಮೆದೆಯ ನೋವು, ಸಂತೋಷಗಳೆಲ್ಲವನ್ನೂ ಹಾಡಾಗಿಸುತ್ತಿದ್ದ ಅಪರೂಪದ ಗಾಯಕಿ. ಅವರ ಕಂಠ ಅವರ ನೋವಿನ ಧ್ವನಿಯೇ ಆಗಿತ್ತು.
ಹೀಗೆ ನೋವೇ ಬದುಕಾಗಿದ್ದ ಬೇಗಂ ಅಖ್ತರ್ ಹುಟ್ಟಿದ್ದು ೧೯೧೪ರ ಅಕ್ಟೋಬರ್ ೭ರಂದು ಫೈಜ಼ಾಬಾದ್ ಜಿಲ್ಲೆಯ ಭದರಸಾ ಎಂಬಲ್ಲಿ. ಅವರ ತಾಯಿ ಮುಷ್ತರೀ ಬಾಯಿ ಒಬ್ಬ ತವಾಯಿಫ್. ಆದರೆ ಫೈಜ಼ಾಬಾದ್‌ನ ನ್ಯಾಯಾಧೀಶ, ಖ್ಯಾತ ಸೈಯದ್ ಕುಟುಂಬಕ್ಕೆ ಸೇರಿದ ಅಸ್ಗರ್ ಹುಸೇನ್ ಅವರನ್ನು ಪ್ರೀತಿಸಿ ಮದುವೆಯಾದರು. ಅಖ್ತರೀ ಬಾಯ್ ಫೈಜ಼ಾಬಾದಿ ಅಥವಾ ಬಿಬ್ಬೀ ಈ ಪ್ರಣಯದ ಕೂಸು. ತಮ್ಮ ಎರಡನೆಯ ಪತ್ನಿಯನ್ನು ಇಂದಲ್ಲ ನಾಳೆ ತನ್ನ ಮೊದಲ ಪತ್ನಿ ಮತ್ತು ಮಕ್ಕಳು ಒಪ್ಪಿಕೊಳ್ಳುತ್ತಾರೆ ಎನ್ನುವ ಅಸ್ಗರ್ ಕನಸು ನನಸಾಗಲೇ ಇಲ್ಲ. ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದ ಮುಷ್ತರೀ ಫೈಜಾಬಾದ್ ಬಿಟ್ಟು ಗಯೆಗೆ ನಂತರ ಕಲ್ಕತ್ತೆಗೆ ಬದುಕನ್ನು ಹುಡುಕಿಕೊಂಡು ಅಲೆಯುತ್ತಾರೆ. ಭಾರತದಲ್ಲಿ ೧೯೩೫ರಿಂದ ೧೯೫೦ರ ನಡುವಿನ ಅವಧಿಯಲ್ಲಿ ಸಾಂಸ್ಕೃತಿಕವಾಗಿ ಆಗುತ್ತಿದ್ದ ಮಹತ್ತರ ಬದಲಾವಣೆಯ ಬಿಸಿ ಮತ್ತು ಬವಣೆಯನ್ನು ಉಂಡ ಹೆಚ್ಚಿನ ತವಾಯಿಫ್‌ಗಳು ತಮ್ಮ ಮಕ್ಕಳಿಗಾಗಿ ತಮ್ಮ ಬದುಕು ಮತ್ತು ಪ್ರತಿಭೆಯನ್ನು ಸಂಪೂರ್ಣವಾಗಿ ತ್ಯಾಗಮಾಡಿ, ತಾವು ನೇಪಥ್ಯದಲ್ಲಿಯೇ ಉಳಿದು, ಪಡಬಾರದ ಕಷ್ಟಗಳನ್ನು ಪಟ್ಟು, ತಮ್ಮ ಮಕ್ಕಳು ಸೂಕ್ತವಾಗಿ ನೆಲೆಯೂರುವಂತೆ ನೋಡಿಕೊಂಡರು. ಅಖ್ತರಿಯ ಬದುಕಿನಲ್ಲಿಯೂ ತಾಯಿ ಮುಷ್ತರಿ ಬಾಯಿಯ ಪಾತ್ರ ತೀರಾ ನಿರ್ಣಾಯಕ. ಅಖ್ತರಿಯ ಮನೆಯಲ್ಲಿ ಮುಷ್ತರಿ ಬಾಯಿಯನ್ನು ಬಡೇ ಸಾಹೆಬ್ ಎಂದೇ ಕರೆಯುತ್ತಿದ್ದರು.
ಬಾಲ್ಯದಲ್ಲಿ ಅಖ್ತರಿಯ ಮೇಲೆ ಫೈಜ಼ಾಬಾದಿನ ಜಾತ್ರೆಯ ನೌಟಂಕಿ ಪ್ರದರ್ಶನದಲ್ಲಿ ಹಾಡಿ ನರ್ತಿಸಿದ ಪ್ರಸಿದ್ಧ ನರ್ತಕಿ ಚಂದಾಬಾಯಿಯ ಸಂಗೀತ ತುಂಬಾ ಪ್ರಭಾವ ಬೀರಿತ್ತು. ಆಕೆಯ ಸಂಗೀತದ ಲಾಲಿತ್ಯ, ಆಕೆಯ ಶಾಂತತೆ ಹಾಗೂ ಸಮಾಧಾನಚಿ ಅಖ್ತರಿಯನ್ನು ತುಂಬಾ ಪ್ರಭಾವಿಸಿತ್ತು. ಅದನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನಂತರ ಅವರ ಮೇಲಾದ ಇನ್ನೊಂದು ಅಳಿಸಲಾಗದ ಪ್ರಭಾವ ಗಯಾದಲ್ಲಿ ರಮ್‌ಜ಼ಾನ್ ಸಮಯದಲ್ಲಿ ಭಿಕ್ಷುಕಿಯೊಬ್ಬಳು ಹಾಡಿಕೊಂಡು ಹೋದ ಸೂಫೀ ಸಂತನೊಬ್ಬನ ಹಾಡು. ನನಗೆ ನಿಜವಾದ ಸಂಗೀತ ಎಂದರೇನು ಎಂದು ಆವತ್ತು ಅರ್ಥವಾಯಿತು. ಅಂದು ನಾನು ಚಂದನಬಾಯಿಯನ್ನು ಮರೆತುಬಿಟ್ಟೆ.
ಬಾಲ್ಯದಲ್ಲೇ ಆ ಮಗುವಿನ ಪ್ರತಿಭೆಯನ್ನು ಗುರುತಿಸಿದ ಮುಷ್ತರೀ ಬಾಯಿ ಸಂಗೀತ ಕಲಿಸಲು ಮಗಳನ್ನು ಕಲ್ಕತ್ತೆಗೆ ಕರೆದೊಯ್ದಳು. ಅಲ್ಲಿ ಪಟಿಯಾಲಾ ಘರಾನೆಯ ಉಸ್ತಾದ್ ಅತಾ ಮಹಮದ್ ಬಳಿ ಕಲಿಯಲು ಆರಂಭಿಸಿದ ೧೦ರ ಹರೆಯದ ಅಖ್ತರಿಗೆ ಅವರ ಪಾಠ ತುಂಬಾ ಬೇಸರ ಹುಟ್ಟಿಸುತ್ತಿತ್ತು. ಆದರೆ ಗುರುಗಳ ಮುಂದೆ ಅವರ ಹಟ ನಡೆಯುತ್ತಿತ್ತು. ಅವರಲ್ಲಿ ಖಯಾಲ್ ಠುಮ್ರಿ, ದಾದ್ರಾ ಮತ್ತು ಘಜಲ್‌ಗಳನ್ನು ಕಲಿತರು. ನಂತರ ಕಿರಣಾ ಘರಾನೆಯ ಅಬ್ದುಲ್ ವಹೀದ್ ಖಾನ್ ಅವರಲ್ಲಿ ಮೂರು ವರ್ಷಗಳ ಕಾಲ ಶುದ್ಧ ಅಭಿಜಾತ ಸಂಗೀತವನ್ನು ಕಲಿತರು. ಆ ಹೊತ್ತಿಗೆ ಮಾನಸಿಕವಾಗಿ ಹೆಚ್ಚು ಪಕ್ವವಾಗಿದ್ದ ಅಖ್ತರಿ ಖಯಾಲ್ ಗಾಯನದ ಸೂಕ್ಷ್ಮಗಳೆಲ್ಲವನ್ನೂ ಮನಸ್ಸಿಟ್ಟು ಅವರಲ್ಲಿ ಕಲಿತರು. ಕಲ್ಕತ್ತೆಯಲ್ಲಿದ್ದಾಗ ಮೆಗಾಫೋನ್ ರೆಕಾರ್ಡಿಂಗ್ ಕಂಪನಿಗಾಗಿ ಧ್ವನಿಮುದ್ರಿಸಿದ ’ದೀವಾನ ಬನಾನಾ ಹೈ ತೋ’ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಖ್ತರಿ ಮೊದಲ ಬಾರಿ ಸಾರ್ವಜನಿಕವಾಗಿ ಹಾಡಿದ್ದು ಕಲ್ಕತ್ತೆಯ ಒಂದು ಛಾರಿಟಿ ಶೋನಲ್ಲಿ. ನನ್ನ ಎದೆ ಧಡಧಡ ಎಂದು ಹೊಡೆದುಕೊಳ್ಳುತ್ತಿತ್ತು. ನೇಪಥ್ಯದಲ್ಲಿ ನಾನು ಅಳುತ್ತಾ ನಿಂತಿದ್ದೆ. ನನ್ನ ಗುರು ಅತಾ ಮಹಮದ್ ನನಗೆ ಸಮಾಧಾನ ಹೇಳಿ ಅಲ್ಲಾನನ್ನು ನೆನಸಿಕೊಂಡು ಹಾಡು ಎಲ್ಲವೂ ಸರಿಯಾಗುತ್ತದೆ ಎಂದು ಸಮಾಧಾನಿಸಿದರು. ಒಂದು ಠುಮ್ರಿ, ಒಂದು ಘಜ಼ಲ್ ಮತ್ತು ಒಂದು ದಾದ್ರಾ ಹಾಡಿ ಮುಗಿಸು ಎಂದರು. ನಾನು ಗಾಬರಿಯಲ್ಲಿ ಮೊದಲು ಘಜಲ್ ಹಾಡಲು ಪ್ರಾರಂಭಿಸಿದೆ. ಕೈಕಾಲೆಲ್ಲಾ ತಣ್ಣಗಾಗಿತ್ತು. ಆದರೆ ಕಲ್ಕತ್ತೆಯ ಜನ ಅರಿವುಳ್ಳ ಕೇಳುಗರು. ನನ್ನ ಗಾಯನ ಮುಂದುವರಿಯುತ್ತಿದ್ದಂತೆ ನನಗೆ ದಾದ್ ಅಂದರೆ ಮೆಚ್ಚುಗೆ ಸೂಚಿಸಲು ಪ್ರಾರಂಭಿಸಿದರು. ನಿಧಾನವಾಗಿ ನನ್ನ ಹೆದರಿಕೆ ಕಡಿಮೆಯಾಗತೊಡಗಿತು.
ನಂತರ ಮುಷ್ತರೀಬಾಯಿ ಮಗಳನ್ನು ಮುಂಬೈಗೆ ಕರೆತಂದು ಪಾರ್ಸಿ ನಾಟಕಗಳು ಮತ್ತು ಸಿನಿಮಾಗಳಲ್ಲಿ ಮಗಳ ಭವಿಷ್ಯವನ್ನು ಅರಸಿದರು. ಅಖ್ತರೀಬಾಯಿ ಸತ್ಯಜಿತ್ ರೇ ಅವರ ಜಲಸಾಘರ್ ಸೇರಿದಂತೆ ಸುಮಾರು ಎಂಟು ಚಲನಚಿತ್ರಗಳಲ್ಲಿ ನಟಿಸಿದ್ದರು. ಇಂದಿಗೂ ಅವರು ಜಲಸಾಘರ್ ಚಿತ್ರದಲ್ಲಿ ಹಾಡಿರುವ ದಾದ್ರ ’ಹೇ ಭರ್ ಭರ್ ಆಯಿ ಮೋರೆ ಅಖಿಯನ್ ಪಿಯಾ’ ಎನ್ನುವ ದಾದ್ರಾ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ ಬೆಳ್ಳಿತೆರೆಯ ಬದುಕು ಅಖ್ತರಿಗೆ ನೆಮ್ಮದಿ ಸಮಾಧಾನಗಳನ್ನು ನೀಡಲಿಲ್ಲ. ಅದು ತನ್ನದಲ್ಲ ಎಂದು ಅವರಿಗೆ ಸದಾ ಅನ್ನಿಸುತ್ತಿತ್ತು. ಆ ಬದುಕಿಗೆ ವಿದಾಯ ಹೇಳಿ ತಾಯಿ ಮಗಳು ಸಾಂಸ್ಕೃತಿಕ ಕೇಂದ್ರವೆನಿಸಿದ್ದ ಲಕ್ನೋಗೆ ಬಂದು ನೆಲೆಸಿದರು.
ಲಕ್ನೋದ ಹಜ಼ರತ್ ಗಂಜ್‌ನ ಲಾಲ್‌ಬಾಗ್‌ನಲ್ಲಿ ಅಖ್ತರೀ ಮಂಜ಼ಿಲ್ ಖರೀದಿಸಿ ಅಲ್ಲಿ ನೆಲೆಸಿದರು. ಆ ತನಕ ತವಾಯಿಫ್‌ಗಳು ಯಾರೂ ಅಂತಹ ಕುಲೀನ ಬಡಾವಣೆಯಲ್ಲಿ ನೆಲೆಸುವ ಧೈರ್ಯ ಮಾಡಿರಲಿಲ್ಲ. ಆಗ ಅಖ್ತರಿಗೆ ದೂರ ದೂರದಿಂದ ಕಾರ್ಯಕ್ರಮ ನೀಡಲು ಆಹ್ವಾನ ಬರುತ್ತಿತ್ತು. ಅವರಿಗೆ ತಬಲಾ ಸಾಥ್ ನೀಡುತ್ತಿದ್ದವರು ಮುನ್ನೇ ಖಾನ್. ಉತ್ತರಪ್ರದೇಶದ ಪೂರಬಿ, ಅವಧೀ, ಭೋಜ್‌ಪುರಿ, ಹಿಂದಿ ಮತ್ತು ಉರ್ದು ಭಾಷೆಗಳ ಸಹಜ ಲಯ, ಉಲಿ, ಉಚ್ಚಾರ ಮತ್ತು ಏರಿಳಿತಗಳನ್ನು ಅಖ್ತರಿ ಸೊಗಸಾಗಿ ಮೈಗೂಡಿಸಿಕೊಂಡರು. ಅಖ್ತರಿಯವರ ನಡವಳಿಕೆ ಮತ್ತು ಇರುಸರಿಕೆ ತುಂಬಾ ಘನತೆಯಿಂದ ಕೂಡಿದ್ದು ಸುಸಂಸ್ಕೃತವಾಗಿತ್ತು. ಉರ್ದುಕಾವ್ಯದ ಶ್ರೀಮಂತಿಕೆ ಮತ್ತು ಅರ್ಥವಂತಿಕೆಯನ್ನು ಅಖ್ತರಿ ಚೆನ್ನಾಗಿ ಗ್ರಹಿಸಿಕೊಂಡಿದ್ದರು. ಹಾಗಾಗಿ ಅವರನ್ನು ಬಹಳಷ್ಟು ನವಾಬರು ಮತ್ತು ರಾಜರು ತಮ್ಮ ದರ್ಬಾರಿಗೆ ಆಹ್ವಾನಿಸುತ್ತಿದ್ದರು. ೧೯೩೮ರಿಂದ ೧೯೪೫ರ ಅವಧಿಯಲ್ಲಿ ಶ್ರೀಮಂತರು, ಕುಲೀನರ ಮುಂದೆ ನಿಂತು ಠುಮ್ರಿಗಳನ್ನು ಹಾಡಿ, ನರ್ತಿಸಿ, ಮುಜ್ರಾ ಮಾಡುತ್ತಿದ್ದರು ಎನ್ನುತ್ತಾರೆ ಇತಿಹಾಸಕಾರ ಸಲೀಂ ಕಿದ್ವಾಯ್. ಮಲಿಕಾ ಪುಖ್‌ರಾಜ್ ಕೂಡ ಈ ಅಂಶವನ್ನು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸುತ್ತಾರೆ. ಆರ್ಥಿಕವಾಗಿ ಅವರು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ಅವರಿಗೆ ಸಾಮಾಜಿಕವಾಗಿ ಒಂದು ಗೌರವಾನ್ವಿತವಾದ ಬದುಕು ಬೇಕೆನಿಸಿತ್ತು. ಸಾಮಾಜಿಕವಾಗಿ ಒಂದು ಬಲವಾದ ಆಸರೆ ಬೇಕಿತ್ತು. ಅದನ್ನು ಒದಗಿಸಿದ್ದು ಇಷ್ತಿಯಾಕ್ ಮಹಮ್ಮದ್ ಅಬ್ಬಾಸಿ. ಅವರು ಲಕ್ನೋದ ಕುಲೀನ, ಶ್ರೀಮಂತ ಮನೆತನಕ್ಕೆ ಸೇರಿದವರು. ಕಾಕೋರಿ ಪ್ರಾಂತ್ಯದ ನವಾಬರ ಕುಟುಂಬ ಅವರದು. ಲಂಡನ್ನಿನಲ್ಲಿ ಓದಿ ಬ್ಯಾರಿಸ್ಟರ್ ಪದವಿ ಪಡೆದಿದ್ದರು. ಗಾಯನದಲ್ಲಿ ಅವರಿಗೆ ತುಂಬಾ ರುಚಿಯಿತ್ತು. ೧೯೪೫ರಲ್ಲಿ ಅವರನ್ನು ವಿವಾಹವಾಗಿ ಅಖ್ತರೀ ಬಾಯಿ ಬೇಗಂ ಅಖ್ತರ್ ಆದರು.
ಮದುವೆಯಾಗಿ ಏಳು ವರ್ಷಗಳು ಬೇಗಂ ಅಖ್ತರ್ ಹಾಡಲೇ ಇಲ್ಲ. ಅಪ್ಪಟ ಗೃಹಿಣಿಯಾಗಿಯೇ ಇದ್ದು ಬಿಟ್ಟರು. ಆದರೆ ಅದು ಅವರಿಗೆ ಉಸಿರು ಕಟ್ಟಿಸಲಾರಂಭಿಸಿತು. ಅದೇ ಹೊತ್ತಿಗೆ ಅವರ ತಾಯಿಯೂ ತೀರಿಹೋದರು. ಖಿನ್ನತೆಗೆ ಒಳಗಾದ ಬೇಗಂ ಅಖ್ತರ್ ತುಂಬಾ ಖಾಯಿಲೆ ಮಲಗಿದರು. ಅವರಿಗೆ ಹಾಸಿಗೆಯಲ್ಲಿ ಮಲಗುವುದಕ್ಕೇ ಆಗುತ್ತಿರಲಿಲ್ಲ. ಅಸಾಧ್ಯವಾದ ಹೊಟ್ಟೆನೋವು ಬರುತ್ತಿತ್ತು. ಆಗ ಅವರಿಗೆ ನೋವು ನಿವಾರಕ ಪೆಥಡಿನ್ ಚುಚ್ಚುಮದ್ದು ನೀಡುತ್ತಿದ್ದರು. ಅದ ಅವರಿಗೆ ಒಂದು ಚಟವಾಗಿಬಿಟ್ಟಿತು. ಅದು ಹೇಗೋ ಒಂದು ದಿನ ಇದ್ದಕ್ಕಿದ್ದಂತೆ ಅದನ್ನು ತಾವೇ ನಿಲ್ಲಿಸಿದರು. ಆಮೇಲೆ ಒಂದು ದಿನ ದಿಢೀರ್ ಎಂದು ಕುಡಿಯಲಾರಂಭಿಸಿದರು. ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋದರು. ಆಗ ಅವರ ವೈದ್ಯರು ಮತ್ತು ಮನೆಯ ಹಿತೈಷಿಗಳು ಅವರು ಹಾಡದೇ ಇದ್ದರೆ ಸತ್ತುಹೋಗುತ್ತಾರೆ ಎಂದು ಅಬ್ಬಾಸಿಯವರಿಗೆ ತಿಳಿಸಿದರು. ಏಳು ವರ್ಷಗಳ ನಂತರ ಅಬ್ಬಾಸಿ ಅವರಿಗೆ ಲಕ್ನೋ ಬಿಟ್ಟು ಬೇರೆ ಕಡೆಗಳಲ್ಲಿ ಹಾಡಲು ಅನುಮತಿ ನೀಡಿದರು. ಫೀನಿಕ್ಸ್ ಪಕ್ಷಿಯಂತೆ ಬೇಗಂ ಅಖ್ತರ್ ಮತ್ತೆ ಮೇಲೆದ್ದರು.
ಬೇಗಂ ಅಖ್ತರ್ ಅವರ ಕಾಲದಲ್ಲಿ ಖಯಾಲ್ ಹಾಡುತ್ತಿದ್ದವರ‍್ಯಾರೂ ಠುಮ್ರಿ, ಘಜಲ್ ದಾದ್ರಾ ಇವುಗಳನ್ನು ಹಾಡುತ್ತಲೇ ಇರಲಿಲ್ಲ. ಆದರೆ ಬೇಗಂ ಅದನ್ನು ಅದ್ಭುತವಾಗಿ ಹಾಡಿ ಅವುಗಳನ್ನು ಒಂದು ಕಚೇರಿಯ ಮಟ್ಟಕ್ಕೆ ತಂದರು. ಬೇಗಂ ಅಖ್ತರ್ ಬೋಲ್ ಬಾಂತ್ ಕಿ ಠುಮ್ರಿ ಮತ್ತು ಬೋಲ್ ಬನಾವ್ ಕಿ ಠುಮ್ರಿ ಎರಡನ್ನೂ ಅತ್ಯಂತ ಸುಲಲಿತವಾಗಿ, ಸಮರ್ಥವಾಗಿ ಹಾಡುತ್ತಿದ್ದರು. ಹೆಚ್ಚಿನ ಠುಮ್ರಿಗಳ ವಿರಹದ ನೋವನ್ನು ತಮ್ಮ ಗಾಯನದಲ್ಲಿ ಅಭಿವ್ಯಕ್ತಿಸುವುದು ಅವರಿಗೆ ಮಕ್ಕಳಾಟದಷ್ಟು ಸುಲಭವಾಗಿತ್ತು. ಅವರಿಗೆ ಹಾಡುವಾಗ ಎಲ್ಲಿ, ಯಾವಾಗ ತಮ್ಮ ಸ್ವಂತಿಕೆಯನ್ನು, ಸೃಜನಶೀಲತೆಯನ್ನು ಅಭಿವ್ಯಕ್ತಿಸಬೇಕೆನ್ನುವುದು ತಿಳಿದಿತ್ತು. ಅವರದು ತುಂಬಾ ಸ್ವೋಪಜ್ಞವಾದ ಶೈಲಿ. ಅವರು ಖಯಾನ್ನು ಜಾನಪದ ಜೊತೆ ಮತ್ತು ದಾದ್ರ, ಟಪ್ಪಾಗಳನ್ನು ಗಜ಼ಲ್ ಜೊತೆಗೆ ಬೆಸೆದರು. ಇವೆಲ್ಲವೂ ಒಟ್ಟಿಗೆ ಸೇರಿ ಅವರನ್ನು ವಿಭಿನ್ನ ಹಾಗೂ ವಿಶಿಷ್ಟವನ್ನಾಗಿಸಿತು (ಪಂಡಿತ್ ರವಿಶಂಕರ್). ದಿನನಿತ್ಯದ ನೋವಿಗೆ, ದಿನನಿತ್ಯದ ಬದುಕಿಗೆ ಒಂದು ಅಭಿಜಾತ ಘನತೆಯನ್ನು ಗಾಯನದ ಮೂಲಕ ನೀಡಬಹುದು ಎನ್ನುವುದಕ್ಕೆ ಬೇಗಂ ಅಖ್ತರ್ ಒಂದು ಉದಾಹರಣೆ. ಅವರ ಶೈಲಿಯಲ್ಲಿದ್ದ ಸಹಜತೆ, ಸ್ವಯಂಸ್ಫೂರ್ತಿ ಮತ್ತು ಸಮ್ಮೋಹಗೊಳಿಸುವ ಮಾಧುರ್ಯದ ಜೊತೆಗೆ ಅವರ ಕಂಠದಲ್ಲಿ ಸಹಜವಾಗಿಯೇ ತುಂಬಿತುಳುಕುತ್ತಿದ್ದ ತಾರುಣ್ಯದ ಹುರುಪು, ಹುಮ್ಮಸ್ಸು ಅವರ ಜನಪ್ರಿಯತೆಗೆ ಬಹುದೊಡ್ಡ ಕಾರಣ. (ಮೋಹನ್ ನಾಡಕರ್ಣಿ). ಅವರು ಹಾಡಿದ ಘಜಲ್ ದೀವಾನಾ ಬನಾನಾ ಹೈತೋ ದಿವಾನಾ ಬನಾ ದೆ ಕೇಳುಗರನ್ನು ಅಕ್ಷರಶಃ ಹುಚ್ಚರನ್ನಾಗಿಸಿತ್ತು. ಬೇಗಂ ಅಖ್ತರ್ ಹಾಡುತ್ತಿದ್ದ ಗಜ಼ಲ್ ’ಯೆ ಮೊಹಬ್ಬತ್ ತೇರೆ ಅಂಜಾಮ್ ಸೆ ರೋನಾ ಆಯಾ’ ಒಮ್ಮೆ ಕೇಳಿದವರಿಗೆ ಮರೆಯುವುದಕ್ಕೇ ಸಾಧ್ಯವಿಲ್ಲ. ಅಂತಹ ಯಾತನೆ, ನೋವು, ಶೋಕ ಅದರಲ್ಲಿದೆ. ಕೇಳುತ್ತಾ ಕೇಳುತ್ತ ನಾವು ಅದರ ಭಾಗವಾಗಿ ನಮ್ಮೊಳಗೆ ಅಡಗಿಸಿಟ್ಟಿರುವ ಯಾತನೆಯಲ್ಲವೂ ಕಣ್ಣೀರಾಗಿ ಹೊರಗೆ ಹರಿಯುತ್ತದೆ.
ಘಜಲ್ ಸಾಮ್ರಾಜ್ಞಿ ಎನಿಸಿಕೊಂಡಿದ್ದ ಅಖ್ತರಿ ಬಾಯಿ ಫೈಜ಼ಾಬಾದಿ ಉರ್ದುಕಾವ್ಯದ ಅತ್ಯಂತ ನೈಜ ಪ್ರತಿನಿಧಿ ಎನಿಸಿಕೊಂಡಿದ್ದರು. ಅಖ್ತರೀ ಬಾಯಿ ಗಜ಼ಲ್ಲನ್ನು ಅದೆಷ್ಟು ಸೂಕ್ಷ್ಮಸಂವೇದನೆ, ಪರಿಜ್ಞಾನ ಮತ್ತು ಒಳನೋಟಗಳೊಡನೆ ಹಾಡುತ್ತಿದ್ದರೆಂದರೆ ಅವರು ಕಾವ್ಯ ಮತ್ತು ಸಂಗೀತ ಎರಡರ ಸಾಧ್ಯತೆಗಳನ್ನೂ ವಿಸ್ತರಿಸುವಂತಹ ಒಂದು ಹೊಸ ಕ್ಷೇತ್ರವನ್ನೇ ಹುಟ್ಟುಹಾಕಿದರು. ಅವರು ಖಯಾಲಿನ ಭದ್ರ ಬುನಾದಿಯ ಮೇಲೆ ಠುಮ್ರಿ, ದಾದ್ರ, ಟಪ್ಪಾ, ಘಜಲ್‌ಗಳ ಮಹಲ್ಲುಗಳನ್ನು ಕಟ್ಟಿದರು. ಅವರ ಅಸಾಧಾರಣ ಸಾಂಗೀತಿಕ ಕೌಶಲದಿಂದ ಕವನದ ಕಲ್ಲಿನಂತಹ ಸಾಲುಗಳು ಕೂಡ ಕಿವಿಗೆ ಆಪ್ಯಾಯಮಾನವಾಗಿ ಕೇಳುತ್ತಿತ್ತು. ಇನ್ನೂ ಬೆರಗಿನ ಅಂಶವೆಂದರೆ ಈ ಸಾಂಗೀತಿಕ ಕೌಶಲದಲ್ಲಿ ಕಾವ್ಯದ ಅರ್ಥ ಮುಳುಗಿಹೋಗುತ್ತಿರಲಿಲ್ಲ. ಎರಡೂ ಒಂದಕ್ಕೊಂದು ಪೂರಕವಾಗಿರುತ್ತಿತ್ತು. ಯಾವುದರ ಮೇಲಾಟವೂ ಇರುತ್ತಿರಲಿಲ್ಲ. ಉಸಿರು ಒಡಲಿನಂತೆ ಬೆರೆತುಹೋಗಿತ್ತು. ಅವರ ಗಾಯನ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತದಲ್ಲಿ ಅದ್ದಿ ತೆಗೆದಂತಿರುತ್ತಿತ್ತು. ಹಾಗೆ ಘಜ಼ಲ್ ಹಾಡುವುದು ಅವರೊಬ್ಬರಿಗೇ ಸಾಧ್ಯ (ಪಂಡಿತ್ ಜಸ್ರಾಜ್). ಬೇಗಂ ಅಖ್ತರ್ ಅವರ ಕಂಠದಲ್ಲಿ ಒಂದು ವಿಚಿತ್ರವಾದ ಸೆಳೆತವಿತ್ತು. ಇದನ್ನು ಅಕಾರ್ ಕಿ ತಾನ್ ಎಂದು ಕರೆಯುತ್ತಾರೆ. ಇದರರ್ಥ ’ಆ’ ಎಂದು ಹಾಡುವಾಗ ಧ್ವನಿ ಸ್ವಲ್ಪ ಒಡೆಯುತ್ತದೆ. ಅದು ಅವಳ ವಿಶಿಷ್ಟತೆ. ಅದು ಅವರ ಧ್ವನಿಯ ಮಧುರ ಯಾತನೆ. (ಬಿಸ್ಮಿಲ್ಲಾಖಾನ್) ಇದಕ್ಕಾಗಿ ಬೇಗಂ ಅಖ್ತರ್ ಅವರ ಕಚೇರಿಯಲ್ಲಿ ಜನ ಗಂಟೆಗಟ್ಟಲೆ ಕಾಯುತ್ತಿದ್ದರು.
ಬೇಗಂ ಅಖ್ತರ್ ಅವರ ಸಂಗೀತ ಮತ್ತು ವ್ಯಕ್ತಿತ್ವ ಒಂದು ಇಡೀ ತಲೆಮಾರನ್ನು ಹಲವು ಬಗೆಗಳಲ್ಲಿ ಪ್ರಭಾವಿಸಿತು. ಅವರ ಹಲವು ಸಮಕಾಲೀನರು ಅವರಷ್ಟೇ ಪ್ರತಿಭಾವಂತರೂ, ಒಳ್ಳೆಯ ತರಬೇತಿ, ತಾಲೀಮನ್ನು ಹೊಂದಿದ್ದವರೂ ಆಗಿದ್ದರು. ತಮ್ಮ ಕೇಳುಗರ ಮೇಲೆ ಒಳ್ಳೆಯ ಪ್ರಭಾವ ಬೀರಿದ್ದರು. ಕೆಲವರು ಬೇಗಂ ಅಖ್ತರ್‌ಗಿಂತ ಹೆಚ್ಚು ಕಠಿಣ ಪರಿಶ್ರಮ ಪಡುತ್ತಿದ್ದರು. ಒಂದು ದಿನವೂ ತಪ್ಪದೆ ಅಭ್ಯಾಸ ಮಾಡುತ್ತಿದ್ದರು. ಅವರಿಗಿಂತ ಹೆಚ್ಚು ಶ್ರೀಮಂತ ಕೃತಿಭಂಡಾರವಿತ್ತು ಮತ್ತು ಕಂಠದ ವ್ಯಾಪ್ತಿ ಕೂಡ ಹೆಚ್ಚಿಗೆ ಇತ್ತು. ಬೇಗಂ ಅಖ್ತರ್‌ಗಿಂತಲೂ ಹೆಚ್ಚು ವಿಸ್ತಾರವಾಗಿ, ಸಂಕೀರ್ಣವಾದ ಶೈಲಿಯಲ್ಲಿ ಹಾಡುತ್ತಿದ್ದರು. ಆದರೆ ಬೇಗಂ ಅಖ್ತರ್ ಅವರ ಕಂಠದಲ್ಲಿ ವಿವರಿಸಲಾಗದಂತಹ ಮಾಂತ್ರಿಕತೆಯಿತ್ತು. ನಿಜವಾಗಿ ಅದಕ್ಕೂ ಸಂಗೀತದ ಕೌಶಲಕ್ಕೂ ಮತ್ತು ತಾಲೀಮಿಗೂ ಏನೇನೂ ಸಂಬಂಧವಿರಲಿಲ್ಲ. ಅವರ ಶೈಲಿಯಲ್ಲಿ ಎದ್ದು ಕಾಣುತ್ತಿದ್ದ ಅತಿಮುಖ್ಯವಾದ ಲಕ್ಷಣ ಸುಲಲಿತತೆ ಮತ್ತು ನಿರಾಯಾಸತೆ. ಅವರು ಸ್ವಚ್ಛಂದವಾದ ಬಾನಾಡಿಯಂತೆ ಹಾಡುತ್ತಿದ್ದರು. ಹಾರ್ಮೋನಿಯಂ ಮೇಲೆ ಅವರ ಸುಂದರವಾದ ಬೆರಳುಗಳು ನೀರಿನಂತೆ ಹರಿದಾಡುತ್ತಿತ್ತು. ಅವರು ತಮ್ಮ ತುಟಿಗಳಿಗಿಂತ ಹೆಚ್ಚಾಗಿ ಕಣ್ಣುಗಳಿಂದ ನಗುತ್ತಿದ್ದರು. ಅವರ ವ್ಯಕ್ತಿತ್ವದಲ್ಲಿ ಒಂದು ಸಹಜವಾದ ಲಾಲಿತ್ಯ, ಲಾವಣ್ಯ ಮತ್ತು ಸುಸಂಸ್ಕೃತತೆ ಇತ್ತು. ಅವರ ಸಂಗೀತ ಉಳಿದವರಿಗಿಂತ ಭಿನ್ನವಾಗುತ್ತಿದ್ದುದು ಅವರ ಸ್ವಯಂಸ್ಫೂರ್ತಿಯಿಂದ ಮತ್ತು ಅದು ಅಭಿಜಾತ ನುಡಿಗಟ್ಟಿಗೆ ನಿಷ್ಠವಾಗಿ ಇದ್ದುದರಿಂದ. ಅವರು ಹಾಡುತ್ತಿದ್ದ ಯಾವುದೂ ಸಿದ್ಧಪಾಕವಲ್ಲ. ಅಲ್ಲೇ ವೇದಿಕೆಯಲ್ಲೇ ಸಿದ್ಧವಾಗುತ್ತಿದ್ದ ಪಾಕ. ಗಾಲಿಬ್ ಅವರ ಶತಮಾನೋತ್ಸವಕ್ಕೆ ಅವರ ಆಯ್ದ ನಾಲ್ಕು ಘಜಲ್ ಹಾಡಲು ಆಕಾಶವಾಣಿ ಅವರನ್ನು ಆಹ್ವಾನಿಸಿತ್ತು. ಛಾಯಾನಟ್, ಕೇದಾರ್, ದರ್ಬಾರಿ ಮತ್ತು ಖಮಾಜ್ ರಾಗಗಳಲ್ಲಿ ಹಾಡುತ್ತೇನೆ ಎಂದು ಆಕಾಶವಾಣಿಯ ಅಧಿಕಾರಿಗಳಿಗೆ ಬೇಗಂ ಅಖ್ತರ್ ಹೇಳಿದ್ದರು. ಹಾಡಲು ಕುಳಿತಾಗ ಅವರ ಮೂಡ್ ಸಂಪೂರ್ಣವಾಗಿ ಬದಲಾಗಿತ್ತು. ಅವರು ನಾಲ್ಕು ಘಜಲ್‌ಗಳನ್ನೂ ಭೈರವಿಯಲ್ಲಿಯೇ ಹಾಡಿದರು. ಪ್ರತಿಯೊಂದೂ ಒಂದಕ್ಕಿಂತ ಒಂದು ಭಿನ್ನವಾಗಿತ್ತು ಅಷ್ಟೇ ಅಲ್ಲ ಮಹೋನ್ನತವಾಗಿತ್ತು (ಶೀಲಾ ಧರ್).
ಪ್ರೀತಿ, ಯಾತನೆ ಮತ್ತು ಸಂಗೀತ ಮೂರು ಬೇಗಂ ಅಖ್ತರ್ ಅವರ ಪಾಲಿಗೆ ಬೇರೆ ಬೇರೆಯಾಗಿರಲಿಲ್ಲ. ಎಲ್ಲವೂ ಒಂದಕ್ಕೊಂದು ಪರ್ಯಾವಾಗಿತ್ತು. ಬದುಕಿನ ಸಂತೋಷ ಹುಟ್ಟುವುದು ಪ್ರೀತಿಯ ತೀವ್ರತೆಯಿಂದ. ಆ ಪ್ರೀತಿಯ ತೀವ್ರತೆ ನೋವನ್ನು ಶಮನ ಮಾಡುತ್ತದೆ. ಆದರೆ ಆ ಪ್ರೀತಿಯೇ ಒಂದು ಪರಿಹಾರವಿಲ್ಲದ ನೋವು ಎನ್ನುವ ಗಾಲಿಬ್ ಅವರ ಶಾಯರಿಯನ್ನು ಅಕ್ಷರಶಃ ಅಂಗರ್ತತಗೊಳಿಸಿಕೊಂಡಿದ್ದರು (ಶೀಲಾ ಧರ್). ಅವರು ಹಾಡುತ್ತಿದ್ದುದೇ ನೋವಿಗಾಗಿ. ಅದನ್ನು ಖ್ಯಾತ ಗಾಯಕಿ ಶ್ರುತಿ ಸದೋಲೀಕರ್ ಅವರಿಗೆ ಸ್ವತಃ ಬೇಗಂ ಅಖ್ತರ್ ಹೇಳಿದ್ದರು. ಪ್ರತಿ ಬಾರಿ ನೋವು ನಿಮ್ಮ ಜೀವದಾಳದಿಂದ ಉಕ್ಕಿ ಬಂದಾಗ ಅದು ನಿಮ್ಮ ಕಂಠದಲ್ಲಿ ಸೇರಿಕೊಳ್ಳುತ್ತದೆ. ಆ ನೋವು ತುಂಬಾ ಮುಖ್ಯ. ಅದು ನಿಮ್ಮ ಕಂಠವನ್ನು ಬಡಿದೆಬ್ಬಿಸುತ್ತದೆ. ಅದಕ್ಕೆ ಜೀವ ತುಂಬುತ್ತದೆ. ನೀನು ಯಾರಿಗೋಸ್ಕರ ಹಾಡುತ್ತೀಯೆ? ನೋವಿಗಾಗಿ ಹಾಡಬೇಕು. ನನ್ನ ಸಂಗೀತವನ್ನು ಜನ ಏಕೆ ಇಷ್ಟಪಡುತ್ತಾರೆ ಅಂತ ನಿನಗೆ ಗೊತ್ತಾ? ಈ ಜಗದ ಜನರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಏಕಾಂಗಿಗಳು. ನಾನು ಸದಾ ಏಕಾಂಗಿ. ಈ ಒಂಟಿತನದ ನೋವು ನನ್ನ ಸಂಗೀತವನ್ನು ಆವರಿಸಿಕೊಂಡಿದೆ. ಜನ ನನ್ನ ಕಂಠದಲ್ಲಿ ಇಷ್ಟ ಪಡುವುದು ಈ ನೋವನ್ನೇ. ಜನ ತಮ್ಮ ದುಃಖವನ್ನು ನನ್ನ ಸಂಗೀತದಲ್ಲಿ ಕಂಡುಕೊಂಡು ಸುಖಪಡುತ್ತಾರೆ(ರೀಟಾ ಗಂಗೂಲಿ-ಸಂದರ್ಶನ).
ಬೇಗಂ ಅಖ್ತರ್ ಮತ್ತು ಸಿದ್ಧೇಶ್ವರೀ ದೇವಿ ಠುಮ್ರಿಯ ಇತಿಹಾಸದಲ್ಲಿ ಮರೆಯಲಾರದ ಕಲಾವಿದೆಯರು. ಸಮಕಾಲೀನರಾಗಿದ್ದ ಅವರು ಠುಮ್ರಿಗೆ ಒಂದು ಗೌರವಾನ್ವಿತ ಸ್ಥಾನವನ್ನು ಮತ್ತು ಘನತೆಯನ್ನು ತಂದಿತ್ತರು. ಆದರೆ ಅವರ ಗಾಯನ ಮತ್ತು ವ್ಯಕ್ತಿತ್ವ ಸಂಪೂರ್ಣ ವಿಭಿನ್ನವಾಗಿತ್ತು. ಅವರಿಬ್ಬರ ನಡುವೆ ತೀವ್ರ ಸ್ಪರ್ಧೆಯಿತ್ತು ಆದರೆ ಪರಸ್ಪರ ಗೌರವವೂ ಇತ್ತು. ತೀರಾ ಸಂಕೀರ್ಣವಾದ ಸಂಬಂಧವಿತ್ತು. ತಮಗಿಂತ ಕಿರಿಯರಾದ ಬೇಗಂ ಅಖ್ತರ್ ತೀರಿಹೋದಾಗ ಸಿದ್ಧೇಶ್ವರಿಯ ದುಃಖ ಮನಕಲಕುತ್ತದೆ. ಅಖ್ತರ್ ಹೋಗಿಬಿಟ್ಟಳು. ಅವಳೊಡನೆ ಠುಮ್ರಿ ಮತ್ತು ಗಜ಼ಲ್‌ಗಾಯನದ ಲೋಕವೇ ಹೋಗಿಬಿಟ್ಟಿತಲ್ಲಾ! ಅಖ್ತರ್ ಒಂದು ವಿಸ್ಮಯ. ಎಂತಹ ಪ್ರತಿಭೆ, ಎಂತಹ ಕಂಠ! ಅಖ್ತರ್ ಇಷ್ಟು ಬೇಗ ಹೋಗಿಬಿಡುತ್ತಾಳೆ ಅಂತ ನಾನು ಅಂದುಕೊಂಡಿರಲಿಲ್ಲ. ಇನ್ನು ಅವಳಂತೆ ಗಜ಼ಲ್ ಹಾಡುವವರು ಯಾರು? ಹೊಸ ತಲೆಮಾರಿನವರು ಯಾರಿಂದ ಕಲಿಯುತ್ತಾರೆ?
ಬೇಗಂ ಅಖ್ತರ್ ಮತ್ತು ಸಿದ್ಧೇಶ್ವರೀ ದೇವಿಯವರಲ್ಲಿದ್ದ ಒಂದು ಸಮಾನ ಅಂಶವೆಂದರೆ ಅವರಿಬ್ಬರ ಕೃತಿಭಂಡಾರ. ಠುಮ್ರಿ, ದಾದ್ರಾ ಇಬ್ಬರೂ ಹಾಡುತ್ತಿದ್ದರು. ಆದರೆ ಸಿದ್ಧೇಶ್ವರೀದೇವೀ ಘಜ಼ಲ್ ಹಾಡುತ್ತಿರಲಿಲ್ಲ. ಅವರಿಬ್ಬರನ್ನು ಸಂಪೂರ್ಣ ವಿಭಿನ್ನವಾಗಿಸಿದ್ದು ಸಂಗೀತವನ್ನು ಕುರಿತ ಅವರ ಮನೋಭಾವ. ಸಿದ್ಧೇಶ್ವರೀದೇವಿ ಸಗ್ಗದ ಹಕ್ಕಿ. ತಮ್ಮ ಆತ್ಮ ಮತ್ತು ಹೃದಯವನ್ನು ಅಪಾರ ಶಕ್ತಿ ಚೈತನ್ಯದ ಸಹಾಯದಿಂದ ಸ್ವರ್ಗದತ್ತ ಕಳುಹಿಸುತ್ತಿದ್ದರು. ಆದರೆ ಬೇಗಂ ಅಖ್ತರ್ ಇನ್ನೂ ತುಂಬಾ ಸೂಕ್ಷ್ಮ. ಅವರ ಪ್ರಸ್ತುತಿ ತುಂಬಾ ನಿರಾಯಾಸವಾಗಿರುತ್ತಿತ್ತು. ಅವರು ಶ್ರಮವನ್ನೇ ಹಾಕುತ್ತಿರಲಿಲ್ಲ ಅನಿಸುತ್ತಿತ್ತು. ಅವರ ಪ್ರಸ್ತುತಿ ಅತ್ಯಂತ ಸಂಕೀರ್ಣವಾಗಿ ಸಂಯಮದಿಂದ ಕೂಡಿರುತ್ತಿತ್ತು (ಶೀಲಾ ಧರ್).
ಬೇಗಂ ಅಖ್ತರ್ ಮತ್ತು ಸಿದ್ಧೇಶ್ವರೀ ದೇವಿ ಇಬ್ಬರಲ್ಲೂ ಕಲಿತಿದ್ದ ರೀಟಾ ಗಂಗೂಲಿಯವರು ಅವರಿಬ್ಬರ ಶೈಲಿಯನ್ನು ಕುರಿತು ಹೇಳುವ ಮಾತುಗಳು ಗಮನಾರ್ಹ. ಅವರಿಬ್ಬರ ಶೈಲಿಯನ್ನು ಆನೆ ಮತ್ತು ಚಿಗರೆಗೆ ಹೋಲಿಸಬಹುದು. ಬೇಗಂ ಅಖ್ತರ್ ಚಿಗರೆಯಂತೆ ನೆಗೆಯುತ್ತಾ, ಜಿಗಿಯುತ್ತಾ ಸಂಗೀತವೆಂಬ ಕಾಡನ್ನು ದಾಟಿಕೊಂಡು ಹೋಗುತ್ತಿದ್ದರು. ಛಂಗ್ ಛಂಗ್ ಎಂದು ನಿರಾಯಾಸವಾಗಿ ಹಾರುವ ಜಿಂಕೆಯ ಸೌಂದರ್ಯ, ಲಾಲಿತ್ಯ ಅವರಲ್ಲಿತ್ತು. ಸಿದ್ಧೇಶ್ವರೀ ದೇವಿಯವರು ಆನೆಯಂತೆ. ಗಜಗಾಂಭೀರ್ಯದಿಂದ ನಿಧಾನವಾಗಿ ಸಾಗುತ್ತಾ ತಮ್ಮ ಸಮಗ್ರತೆ ಮತ್ತು ವೈಶಾಲ್ಯದಿಂದ ಎಲ್ಲರನ್ನೂ ಸಮ್ಮೋಹಗೊಳಿಸುತ್ತಿದ್ದರು. ಅವರಿಬ್ಬರೂ ಕಲಿಸುವ ರೀತಿಯೂ ತುಂಬಾ ಭಿನ್ನವಾಗಿತ್ತು. ಸಿದ್ಧೇಶ್ವರಿಯವರು ತಾವು ಹೇಳಿಕೊಟ್ಟಿದ್ದನ್ನು ತದ್ವತ್ ಹಾಡಿ ಒಪ್ಪಿಸುವವರೆಗೆ ಬಿಡುತ್ತಿರಲಿಲ್ಲ. ಆದರೆ ಬೇಗಂ ಅಖ್ತರ್ ತಾವು ಹಾಡಿದಂತೆಯೇ ಹಾಡಿದರೆ ’ನೀನು ನಿನ್ನ ರೀತಿಯಲ್ಲಿ ಹಾಡು, ನನ್ನಂತೆ ಏಕೆ ಹಾಡುತ್ತೀಯೆ?’ ಎಂದು ಬೈಯ್ಯುತ್ತಿದ್ದರು. ಶಿಷ್ಯರನ್ನು ಸ್ವೀಕರಿಸಿ ಅವರಿಗೆ ಗಂಡಾಬಂಧನ್ ಮಾಡಿದ ಮೊತ್ತಮೊದಲ ಕಲಾವಿದೆ ಬೇಗಂ ಅಖ್ತರ್. ಅಲ್ಲಿಯ ತನಕ ಕೇವಲ ಉಸ್ತಾದರು ಮಾತ್ರವೇ ಗಂಡಾಬಂಧನ್ ಆಚರಿಸಿ ಶಿಷ್ಯರನ್ನು ಸ್ವೀಕರಿಸುತ್ತಿದ್ದರು. ಬೇಗಂ ಅಖ್ತರ್ ಹಾಗೆ ಸ್ವೀಕರಿಸಿದ ಶಿಷ್ಯರು ಶಾಂತಿ ಹೀರಾನಂದ್ ಮತ್ತು ಅಂಜಲಿ ಬ್ಯಾನರ್ಜಿ. ತಮ್ಮ ಶಿಷ್ಯರಿಂದ ಎಂದೂ ಅವರು ಯಾವುದೇ ಶುಲ್ಕವನ್ನೂ ಸ್ವೀಕರಿಸಲಿಲ್ಲ. ತಮ್ಮಲ್ಲಿರುವುದನ್ನು ಮುಕ್ತವಾಗಿ ಕಲಿಸಿಕೊಟ್ಟರು.
ಆಕೆ ತುಂಬಾ ವಿಶಾಲ ಹೃದಯಿ, ಉದಾರಿ, ಎಲ್ಲರಿಗೂ ತುಂಬಾ ಸಹಾಯ ಮಾಡುತ್ತಿದ್ದರು. ಎಲ್ಲರನ್ನೂ ತಾಯಿಯ ಮಮತೆಯಿಂದ ಕಾಣುತ್ತಿದ್ದರು. ಹೆಚ್ಚಿನವರು ಅವರನ್ನು ಅಮ್ಮಿ ಎಂದೇ ಕರೆಯುತ್ತಿದ್ದರು. ಅವರು ಆಕಾಶವಾಣಿಗೆ ಹಾಡಲು ಬರುವಾಗ ಒಂದು ದೊಡ್ಡ ಫ್ಲಾಸ್ಕಿನಲ್ಲಿ ಸೊಗಸಾದ ಟೀ, ತುಂಬಾ ನಾಜೂಕಾಗಿರುವ ಪಿಂಗಾಣಿಯ ಬಟ್ಟಲುಗಳು ಮತ್ತು ಬಗೆಬಗೆಯಾದ ಬಿಸ್ಕತ್ತುಗಳನ್ನು ತಂದು ಎಲ್ಲರಿಗೂ ಕೊಟ್ಟು, ಎಲ್ಲರ ಜೊತೆಯಲ್ಲ ತಾವೂ ಕುಡಿಯುತ್ತಿದ್ದರು. ಎಂದು ಆಕಾಶವಾಣಿಯಲ್ಲಿ ಇದ್ದ ಯೋಗೇಶ್ ಪ್ರವೀಣ್ ಹೇಳುತ್ತಿದ್ದರು.
ಸ್ವತಃ ಕವಿ ಹೃದಯದ ಬೇಗಂ ಅಖ್ತರ್‌ಗೆ ಶ್ರೇಷ್ಠ ಉರ್ದು ಕವಿಗಳೊಡನೆ ಆತ್ಮೀಯವಾದ ಒಡನಾಟವಿತ್ತು. ಕಾವ್ಯ ಮತ್ತು ಸಾಹಿತ್ಯವನ್ನು ಅವರು ತುಂಬಾ ಸುಖಿಸುತ್ತಿದ್ದರು. ಕವಿ ಕೈಫಿ ಅಜ಼್ಮಿ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಸಾಮಾನ್ಯವಾಗಿ ಕವಿತೆಗಳನ್ನು ಮಾತ್ರ ಬರೆಯುತ್ತಿದ್ದ ಕೈಫಿ ಅಜ್ಮಿ ಗಜ಼ಲ್‌ಗಳನ್ನು ಬರೆಯಲು ಪ್ರಾರಂಭಿಸಿದರು. ಅದಕ್ಕೆ ಕಾರಣವೇನೆಂದು ದೂರದರ್ಶನದ ಸಂದರ್ಶನದಲ್ಲಿ ಕೇಳಿದಾಗ ನನಗೆ ಗಜ಼ಲ್‌ಗೆ ತುಂಬಾ ಸಮೀಪವಾಗಿರಬೇಕು ಎಂದು ಆಸೆ. ನನ್ನ ಪ್ರಕಾರ ಗಜ಼ಲ್ ಎಂದರೆ ಬೇಗಂ ಅಖ್ತರ್ ಎಂದರು. ಬೇಗಂ ಅಖ್ತರ್ ತಾವು ಸಾಯುವುದಕ್ಕೆ ಒಂದು ವಾರ ಮೊದಲು ಆಕಾಶವಾಣಿಗೆ ಒಂದು ಧ್ವನಿಮುದ್ರಣವನ್ನು ಮಾಡಿಕೊಟ್ಟರು. ಅದು ಅವರ ಕೊನೆಯ ಧ್ವನಿಮುದ್ರಣ. ಅಂದು ಅವರು ಹಾಡಿದ್ದು ಕೈಫಿ ಅಜ್ಮಿಯವರ ಗಜ಼ಲ್.
ಭಾರತದಲ್ಲಿ ಜನ ಸಂಗೀತ ಮತ್ತು ಸಂಗೀತಗಾರರನ್ನು ’ಹಿಂದು ಸಂಗೀತ’ ’ಮುಸಲ್ಮಾನ ಸಂಗೀತ’ ಎನ್ನುವ ಡಬ್ಬಗಳಲ್ಲಿ ಬೇರ‍್ಪಡಿಸಿಡುವ ಕಾಲದಲ್ಲಿಯೂ ಬೇಗಂ ಅಖ್ತರಳನ್ನು ಯಾವ ಡಬ್ಬಿಯಲ್ಲಿ ಹಾಕಬೇಕೆಂಬುದು ಪ್ರಶ್ನೆಯಾಗಿಯೇ ಉಳಿದಿತ್ತು. ಅವರು ಮೊಹರಂ ಹಾಡುಗಳನ್ನು ಹಾಡುತ್ತಿದ್ದಷ್ಟೇ ಪ್ರೀತಿ, ನಿಷ್ಠೆ, ಭಾವಪೂರ್ಣತೆಯಿಂದ ಹೋಲಿಯ ಹೋರಿಗಳನ್ನು ಹಾಡಿ, ಕೃಷ್ಣ ಮತ್ತು ಗೋಪಿಕೆಯರನ್ನು ಕಣ್ಮುಂದೆ ನಿಲ್ಲಿಸುತ್ತಿದ್ದರು.
ಸಾಕಷ್ಟು ಗಂಭೀರವಾದ ಹೃದಯದ ತೊಂದರೆಯಿದ್ದ ಬೇಗಂ ಅಖ್ತರ್ ಅದರ ಬಗ್ಗೆ ಎಂದೂ ತಲೆಕೆಡಿಸಿಕೊಂಡಿರಲಿಲ್ಲ. ಅಕ್ಟೋಬರ್ ೨೭, ೧೯೭೪ರಂದು ಆರೋಗ್ಯ ಸಾಕಷ್ಟು ಹದಗೆಟ್ಟಿದ್ದರೂ ಅಹಮದಾಬಾದಿನಲ್ಲಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಿಲ್ಲ. ಬೆಳಗಿನ ಝಾವ ಮೂರು ಗಂಟೆಯ ತನಕ ಹಾಡಿದರು. ಅವರು ಕೊನೆಯಲ್ಲಿ ಹಾಡಿದ್ದು ಸೋವತ್ ನಿಂದಿಯಾ ಜಗಾಯೇ ಓ ರಾಮ ಎನ್ನುವ ಚೈತಿ. ಅಲ್ಲಿಂದ ಅವರನ್ನು ಕರೆದೊಯ್ದಿದ್ದು ಆಸ್ಪತ್ರೆಗೆ. ಅಕ್ಟೋಬರ್ ೩೦ರಂದು ಅವರು ತಮ್ಮ ಕಲ್ಪನೆಯ ಪ್ರೇಮಲೋಕಕ್ಕೆ ಪಯಣಿಸಿದರು.