Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ

ಕಡೂರು ವೆಂಕಟಲಕ್ಷಮ್ಮ ಹುಟ್ಟಿದ್ದು ೨೯, ಮೇ ೧೯೦೬. ಮೈಸೂರು ಶೈಲಿಯ ನೃತ್ಯ ಅದರಲ್ಲೂ ಅಭಿನಯಕ್ಕೆ ತುಂಬಾ ಹೆಸರುವಾಸಿಯಾಗಿದ್ದವರು. ಅವರ ನೃತ್ಯವನ್ನು, ಬದುಕನ್ನು ಅರ್ಥಮಾಡಿಕೊಳ್ಳಬೇಕೆಂದು ಅವರನ್ನು ಬಲ್ಲ ಕೆಲವರನ್ನು ಸಂದರ್ಶಿಸಲು ಪ್ರಾರಂಭಿಸಿದ್ದೆವು. ಅದೇಕೊ ಮುಂದುವರಿಯಲೇ ಇಲ್ಲ. ಇತ್ತೀಚೆಗೆ ನಮ್ಮನ್ನು ಅಗಲಿದ ಭಾನುಮತಿ ಮೇಡಂ ಅನ್ನು ಸಂದರ್ಶಿಸಿದ್ದೆವು. ಅವರು ಒಂದು ಕಾರ್ಯಾಗಾರ ನಡೆಸಿಕೊಡಲು ಗಾನಭಾರತಿಗೆ ಬಂದಿದ್ದಾಗ ಈ ಸಂದರ್ಶನ ಸಾಧ್ಯವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ನೃತ್ಯಕಲಾವಿದೆ, ಗುರು ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ
ಸಂದರ್ಶಕರು ಶೈಲಜ ಮತ್ತು ವೇಣುಗೋಪಾಲ್
ಸುಪ್ರಸಿದ್ಧ ನೃತ್ಯಕಲಾವಿದರಾದ ವಿದುಷಿ ಭಾನುಮತಿಯವರು ನೃತ್ಯದ ವಿಭಿನ್ನ ಅಂಶಗಳು, ಸಂಯೋಜನೆ ಕುರಿತು ಮತ್ತು ಪ್ರಸಿದ್ಧ ನೃತ್ಯಶೈಲಿಗಳಲ್ಲಿ ಒಂದಾದ ಮೈಸೂರು ನೃತ್ಯಶೈಲಿಯ ವಿಶೇಷತೆಗಳು ಹಾಗೂ ವೈಶಿಷ್ಟ್ಯ ಕುರಿತು ಹಾಗೂ ನೃತ್ಯದ ಅಧ್ಯಾಪನವನ್ನು ಕುರಿತು ಮಾತನಾಡಿದ್ದಾರೆ.
ನಿಮ್ಮ ನೃತ್ಯದ ಶಿಕ್ಷಣ ಕುರಿತು ತಿಳಿಸಿ.
ನಾವು ಬೆಂಗಳೂರಿಗೆ ಬಂದ್ದು ೧೯೭೯ರಲ್ಲಿ. ಇಲ್ಲಿಗೆ ಬರುವ ಮೊದಲು ನಾನು ವಿದ್ವಾನ್ ದಂಡಾಯುಧಪಾಣಿ ಪಿಳ್ಳೈ ಅವರಲ್ಲಿ ಕಲಿಯುತ್ತಿದ್ದೆ. ಅವರು ೧೯೭೪ರಲ್ಲಿ ತೀರಿಹೋದರು. ನನಗೆ ಬೆಂಗಳೂರಿನ ನೃತ್ಯಗುರುಗಳ ಬಗ್ಗೆ ಏನೂ ತಿಳಿದಿರಲಿಲ್ಲ. ನಾನು ಸುಮ್ಮನೆ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ನೋಡುತ್ತಿದ್ದೆ ಅಷ್ಟೆ. ಈ ಸಂದರ್ಭದಲ್ಲಿ ನನಗೆ ನೃತ್ಯಮಾಡಲು ಒಂದು ಸಣ್ಣ ಅವಕಾಶ ಸಿಕ್ಕಿತು. ಅಂದು ನನಗೆ ಮೃದಂಗ ನುಡಿಸಿದ ವಾದಕರು ಶ್ಯಾಮಲಾ ಭಾವೆ ಅವರಲ್ಲಿ ಹೋಗಿ ಈ ಹುಡುಗಿ ಚೆನ್ನಾಗಿ ನೃತ್ಯಮಾಡುತ್ತಾಳೆ ಸಾಧ್ಯವಾದರೆ ಒಂದು ಅವಕಾಶ ಕೊಡಿ ಎಂದು ಹೇಳಿದರು. ಆಗ ಜಪಾನಿನ ೨೦ ಜನರ ತಂಡವೊಂದು ಯಾವುದೋ ವಾಣಿಜ್ಯ ಸಭೆಗಾಗಿ ಆಗಮಿಸಿದ್ದರು. ಅವರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದಕ್ಕಾಗಿ ನನ್ನನ್ನು ಇಪ್ಪತ್ತು ನಿಮಿಷ ನರ್ತಿಸುವಂತೆ ಹೇಳಿದರು. ನಾನು ಒಪ್ಪಿದೆ. ಇದು ನನ್ನ ಭಾಗ್ಯದ ಬಾಗಿಲನ್ನು ತೆರೆಯಿತು. ಅಂದು ಕಾರ್ಯಕ್ರಮದಲ್ಲಿ ಬಿ.ವಿ.ಕೆ ಶಾಸ್ತ್ರಿ ಮತ್ತು ಎಸ್ ಎನ್ ಚಂದ್ರಶೇಖರ್ ಇಬ್ಬರೂ ಇದ್ದರು. ನಾನೊಬ್ಬ ವಿಮರ್ಶಕ ಆದರೆ ಇಷ್ಟು ಚಿಕ್ಕ ಕಾರ್ಯಕ್ರಮಕ್ಕೆ ಕವರೇಜ್ ಕೊಡುವುದಕ್ಕೆ ಸಾಧ್ಯವಿಲ್ಲ. ನೀನು ಎಲ್ಲಾದರೂ ವರ್ಣ ಕೃತಿ ಇವುಗಳನ್ನು ಮಾಡುವ ಸಂದರ್ಭವಿದ್ದಾಗ ನನಗೆ ತಿಳಿಸು. ನಾನು ಕವರೇಜ್ ಕೊಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರನಟ ಶ್ರೀಧರ್ ರಾಧಾ ಶ್ರೀಧರ್ ಅವರಲ್ಲಿ ಕಲಿಯುತ್ತಿದ್ದರು. ನನ್ನ ನೃತ್ಯ ನೋಡಿ ನನ್ನ ಬಳಿ ಕಲಿಯಲು ಬಂದರು. ಅವರ ಶೈಲಿ ಅಷ್ಟಾಗಿ ಪುರುಷರಿಗೆ ಹೊಂದುವಂತಿರಲಿಲ್ಲ. ಅದನ್ನು ಅವರಿಗೆ ತಿಳಿಸಿ ಅವರು ತಮ್ಮ ಶೈಲಿಯನ್ನು ಬದಲಿಸಿಕೊಳ್ಳಲು ಹೇಳಿದೆ. ಸಂಗೀತದಲ್ಲಿಯೂ ಹೆಣ್ಣುಮಕ್ಕಳ ಪ್ರಸ್ತುತಿಗೂ ಪುರುಷರ ಪ್ರಸ್ತುತಿಗೂ ವ್ಯತ್ಯಾಸವಿಲ್ಲವೇ ಹಾಗೆ ಇಲ್ಲೂ ಇದೆ. ಆಗ ಅವರು ಸಿಸಿಆರ್‌ಟಿ ಪರೀಕ್ಷೆಗೆ ಹಾಜರಾದರು. ಅವರಿಗೆ ನಟುವಾಂಗವನ್ನು ನಾನು ಮಾಡಿದೆ. ಅಂದು ಪರೀಕ್ಷಕರಾಗಿ ವಸುಂಧರಾ ದೊರೆಸ್ವಾಮಿ, ಉಷಾ ದಾತಾರ್, ಯು. ಎಸ್ ಕೃಷ್ಣರಾವ್ ಬಂದಿದ್ದರು. ಅವರ ಪರೀಕ್ಷೆ ಆದ ನಂತರ ಅವರು ನನ್ನನ್ನು ಕರೆಸಿದರು. ಆಗ ನಾನು ಇನ್ನೂ ಲಂಗ ದಾವಣಿ ಹಾಕುತ್ತಿದ್ದೆ. ಏನಮ್ಮಾ ನೀನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನಟುವಾಂಗ ಮಾಡುತ್ತಿದ್ದೀಯಲ್ಲಾ, ನೃತ್ಯ ಮಾಡುವುದಿಲ್ಲವೇ? ಎಂದು ಕೇಳಿದರು. ಮಾಡ್ತೀನಿ, ಅಂದೆ. ಪರೀಕ್ಷೆ ಮುಗಿಯುವ ತನಕ ನನ್ನನ್ನು ಇರಲು ಹೇಳಿದರು. ಮುಗಿದ ಮೇಲೆ ನನ್ನನ್ನು ಕರೆದು ವರ್ಣದ ಒಂದು ಭಾಗ ಮಾಡ್ತೀಯಾ ಎಂದರು. ನಮ್ಮ ಅಮ್ಮ ತುಂಬಾ ಒಳ್ಳೆಯ ಗಾಯಕಿ. ಅವರು ಹಾಡಿದರು ಮತ್ತು ರಂಗಸ್ವಾಮಿಗಳು ಮೃದಂಗ ನುಡಿಸಿದರು. ನಾನು ನರ್ತಿಸಿದೆ. ಮುಗಿದ ಕೂಡಲೆ ನೀನು ಕಲ್ಕತ್ತಾಗೆ ಹೋಗ್ತೀಯಾ? ಅಂತ ಕೇಳಿದರು. ಯಾರು ತಾನೆ ಹೋಗಲ್ಲ ಅಂತ ಹೇಳ್ತಾರೆ? ಅಡ್ರೆಸ್ ಕೊಡು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪತ್ರ ಬರುತ್ತೆ, ಅಂತ ಅಂದರು. ಹದಿನೈದು ದಿನ ಕಳೆದ ಮೇಲೆ ಪತ್ರ ಬಂತು. ಅದೊಂದು ಎಕ್ಸ್‌ಛೇಂಜ್ ಕಾರ್ಯಕ್ರಮ. ಕಲ್ಕತ್ತೆಯ ಕಲಾವಿದರು ಇಲ್ಲಿಗೆ ಮತ್ತು ಇಲ್ಲಿಯ ಕಲಾವಿದರು ಕಲ್ಕತ್ತೆಗೆ ಹೋಗುವ ಕಾರ್ಯಕ್ರಮ. ಅದೃಷ್ಟ ಅನ್ನೋದು ಹೇಗಿರುತ್ತೆ ನೋಡಿ.
ಅಂದು ಕಲ್ಕತ್ತೆಯ ಖ್ಯಾತ ವಿಮರ್ಶಕರೊಬ್ಬರು ಡಾನ್ಸ್ ಕಾರ್ಯಕ್ರಮಕ್ಕೆ ಬಂದರು. ಪೂರ್ತಿ ಡಾನ್ಸ್ ನೋಡಿದ ಮೇಲೆ, ಕಾಂಪೀರ್ ಮಾಡುತ್ತಿದ್ದ ನನ್ನ ಅಣ್ಣನನ್ನು ಕರೆದು ನನ್ನ ಬಗ್ಗೆ ಕೇಳಿಕೊಂಡು. ನಾನು ಈ ಪ್ರೋಗ್ರಾಮ್‌ಗೆ ಕವರೇಜ್ ಕೊಡುತ್ತಿದ್ದೇನೆ. ಟೈಮ್ಸ್ ಆಫ್ ಇಂಡಿಯಾದ ಡೆಲ್ಲಿ, ಕಲ್ಕತ್ತಾ ಮತ್ತು ಮುಂಬೈ ಆವೃತ್ತಿಗಳಲ್ಲಿ ಇದು ಪ್ರಕಟವಾಗುತ್ತೆ, ಎಂದರು. ಜೊತೆಗೆ ಈ ರಿವ್ಯೂದ ಒಂದು ಪ್ರತಿ ಹಾಕಿ, ಎಲ್ಲಾ ಪ್ರಸಿದ್ಧ ಕಲಾಉತ್ಸವಗಳ ಸಂಘಟಕರಿಗೆ ನಾನು ಹೇಳಿದೆ ಎಂದು ಹೇಳಿ, ಅವಕಾಶ ಕೇಳಿ ಪತ್ರ ಬರಿ. ಮತ್ತು ಬಿವಿಕೆ ಶಾಸ್ತ್ರಿಗಳಿಗೆ ನಾನು ಕೊಡುವ ಪತ್ರವನ್ನು ಕೊಡು, ಎಂದರು. ಆ ಪತ್ರದಲ್ಲಿ ಇಂತಹ ಒಬ್ಬ ಕಲಾವಿದೆಯನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡು ನೀನು ನಿದ್ದೆ ಮಾಡ್ತಾ ಇದ್ದೀಯಾ ಅಂತ ಬಿವಿಕೆ ಶಾಸ್ತ್ರಿಗಳನ್ನು ಸ್ವಲ್ಪ ಬಿರುಸಾಗಿಯೇ ಕೇಳಿದ್ದರು. ಪತ್ರ ಓದಿದ ಶಾಸ್ತ್ರಿಯವರು, ಏನಮ್ಮ ಬೈಯಿಸಿಬಿಟ್ಟಿದ್ದೀಯಾ? ಅಂದರು. ನನಗೆ ಏನೂ ತೋಚಲಿಲ್ಲ. ನಂತರ ಅವರೇ ಹೇಳಿದರು, ಆವತ್ತು ನಿನ್ನ ಕಾರ್ಯಕ್ರಮ ನೋಡಿದಾಗ ನಿನಗೆ ಅಭಿನಯದಲ್ಲಿ ಇನ್ನಷ್ಟು ಪರಿಶ್ರಮ ಬೇಕು ಅಂತ ಅನ್ನಿಸಿತ್ತು. ನೀನು ಅಭಿನಯ ಕಲಿಯೋದಕ್ಕೆ ಸಿದ್ಧವಾಗಿದ್ದೀಯಾ? ಅಂದರು. ವೆಂಕಟಲಕ್ಷಮ್ಮ ಅಂತ ಬಹಳ ದೊಡ್ಡ ಕಲಾವಿದೆ ಇದ್ದಾರೆ ಅವರ ಹತ್ತಿರ ಅಭಿನಯ ಕಲಿಯೋದಕ್ಕೆ ನೀನು ಸಿದ್ಧವಾಗಿದ್ದೀಯಾ, ಅಂತ ಕೇಳಿದರು.
ನೃತ್ಯದಲ್ಲಿ ನೃತ್ತ ಮತ್ತು ಅಭಿನಯ ಎರಡೂ ಸರಿಸಮನಾಗಿ ಇರಬೇಕು. ಸಂಗೀತದಲ್ಲಿ ಬರೀ ತಾಳಜ್ಞಾನ ಇದ್ದು ರಾಗಜ್ಞಾನ ಇಲ್ಲದಿದ್ದರೆ ಹೇಗೋ, ಹಾಗೆ ನೃತ್ಯದಲ್ಲಿ ಕೇವಲ ನೃತ್ತವಿದ್ದು ಅಭಿನಯವಿಲ್ಲದಿದ್ದರೆ. ನನ್ನ ಗುರುಗಳು ಆಗ ನನಗೆ ಹೆಚ್ಚು ಅಭಿನಯವನ್ನೇನೂ ಹೇಳಿಕೊಟ್ಟಿರಲಿಲ್ಲ. ಸಾಂಪ್ರದಾಯಿಕವಾಗಿ ತಟ್ಟುಮೆಟ್ಟುಗಳನ್ನು ಹೇಳಿಕೊಟ್ಟಿದ್ದರು. ಅವರು ಯಾವುದರ ವಾಚ್ಯಾರ್ಥವನ್ನಾಗಲಿ ಅಥವಾ ಸೂಚ್ಯಾರ್ಥವನ್ನಾಗಲಿ ತುಂಬಾ ವಿವರಿಸಿ ಹೇಳುತ್ತಿರಲಿಲ್ಲ. ನಾಯಕಿಯ ಬಗ್ಗೆಯಾಗಲೀ ಏನೂ ಹೇಳುತ್ತಿರಲಿಲ್ಲ. ನಾವು ಸುಮ್ಮನೆ ಮಾಡುತ್ತಿದ್ದೆವು. ಎಂದೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ನಮಗೆ ಬೇರೊಂದು ಸಾಧ್ಯತೆ ಇತ್ತು ಎನ್ನುವ ಆಲೋಚನೆ ಕೂಡ ಇರಲಿಲ್ಲ. ನಮ್ಮನ್ನು ಮನೆಯಲ್ಲಿಯೂ ಹಾಗೆಯೇ ಬೆಳೆಸಿದ್ದರು. ಹಾಗಾಗಿ ಅಭಿನಯ ಎಂದರೆ ಏನು ಅನ್ನೋದು ಗೊತ್ತಿಲ್ಲದಿದ್ದ ಹೊತ್ತಿನಲ್ಲಿ ನನಗೆ ವೆಂಕಟಲಕ್ಷಮ್ಮನವರ ಪರಿಚಯವಾಯಿತು. ಇಂದು ಅಭಿನಯದ ಹೆಚ್ಚಿನ ವಿಚಾರಗಳಿಗೆ ನಾನು ವೆಂಕಟಲಕ್ಷಮ್ಮನವರಿಗೆ ಋಣಿ. ಅಭಿನಯದ ಆಳ ಅಗಲಗಳನ್ನು ನನಗವರು ಪರಿಚಯಿಸಿದರು. ಅದರಲ್ಲಿ ಎಷ್ಟೆಲ್ಲಾ ಸೂಕ್ಷ್ಮಗಳಿವೆ, ಅದನ್ನು ಎಷ್ಟು ಸೃಜನಶೀಲವಾಗಿ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟರು.
೧೯೮೨ರಲ್ಲಿ ಆರು ತಿಂಗಳ ಕಾಲ ಮೈಸೂರು ಶೈಲಿಯ ಅಭಿನಯವನ್ನು ಕಲಿಸುವ ಯೋಜನೆಯೊಂದನ್ನು ಸಂಗೀತ ನಾಟಕ ಅಕಾಡೆಮಿಯು ರೂಪಿಸಿತು. ಅದಕ್ಕೆ ನಾನೂ ಸೇರಿದಂತೆ ರಾಧಾ ಶ್ರೀಧರ್, ಲಲಿತಾ ಶ್ರೀನಿವಾಸನ್, ವಸಂತಲಕ್ಷ್ಮಿ, ಕಲ್ಪನಾರಾಣಿ, ಸುಮನ್ ಶಿರೀಷ್ ಆಯ್ಕೆ ಮಾಡಿಕೊಂಡರು. ನಮಗೆಲ್ಲಾ ತಿಂಗಳಿಗೆ ೨೫೦ ರೂಗಳ ಸ್ಟೈಪೆಂಡ್ ಕೊಟ್ಟರು. ಪಾಠ ಹೇಳಿಕೊಡಲು ಒಂದು ಮನೆಯನ್ನು ವ್ಯವಸ್ಥೆಮಾಡಿದರು. ಆಗ ಜಾಹ್ನವಿ ಜಯಪ್ರಕಾಶ್ ವೆಂಕಟಲಕ್ಷಮ್ಮನವರಿಗಾಗಿ ಹಾಡುತ್ತಿದ್ದರು. ಅವರನ್ನೂ ಅಲ್ಲಿಗೆ ಬರಬೇಕೆಂದು ನಿಗದಿ ಮಾಡಿದರು. ನಮಗೆ ಈ ಆರು ತಿಂಗಳಲ್ಲಿ ಒಂದು ದಿನದ ರಜೆಯೂ ಇರಲಿಲ್ಲ. ತರಗತಿಗಳು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರಗೆ ಇರುತ್ತಿತ್ತು. ಆಗ ನನಗೆ ಕನ್ನಡ ಚೆನ್ನಾಗಿ ಅರ್ಥವಾಗ್ತಿತ್ತು ಆದರೆ ಮಾತನಾಡೋಕ್ಕೆ ಬರ್ತಾ ಇರ್ಲಿಲ್ಲ. ಅವರಿಗೆ ತಮಿಳು ಚೆನ್ನಾಗಿ ಅರ್ಥ ಆಗ್ತಿತ್ತು ಆದ್ರೆ ಮಾತಾಡೋಕ್ಕೆ ಬರ್ತಾ ಇರ್ಲಿಲ್ಲ. ನಾನು ತಮಿಳಲ್ಲಿ ಮಾತಾಡ್ತಿದ್ದೆ, ಅವರು ಕನ್ನಡದಲ್ಲಿ ಮಾತಾಡ್ತಿದ್ರು. ಮೇಡಂಗೆ ಭಾಷೆಯ ತೊಡಕಿದ್ದುದರಿಂದ ತುಂಬಾ ವಿವರಿಸೋದು ಅವರಿಗೆ ಕಷ್ಟವಾಗುತ್ತಿತ್ತು. ಆದರೆ ನಾನು ಯಾವುದನ್ನೇ ಕೇಳಿದರೂ ನೂರು ಸಲ ಬೇಕಾದರೂ ಅಭಿನಯಿಸಿ ತೋರಿಸುತ್ತಿದ್ದರು. ಹಾಗಾಗಿ ನಾನು ಸಂಪೂರ್ಣವಾಗಿ ನೋಡಿ ಕಲಿಯಬೇಕಿತ್ತು. ಅದು ನಿಜವಾಗಿ ಒಳ್ಳೆಯದಾಯಿತು. ಅವರು ತಲೆ ಬಳಸೋದು, ಕಣ್ಣು ಬಳಸೋದು, ಕುತ್ತಿಗೆ ತಿರುಗಿಸೋದು ಎಲ್ಲವನ್ನೂ ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಇಂದಿಗೂ ಕಣ್ಣು ಮುಚ್ಚಿಕೊಂಡರೆ ಅವೆಲ್ಲವೂ ನನ್ನ ಮನಸ್ಸಿನ ಕಣ್ಣ ಮುಂದೆ ಹಾಗೆಯೇ ಬರುತ್ತವೆ. ವೆಂಕಟಲಕ್ಷಮ್ಮ ಒಬ್ಬ ಅದ್ಭುತವಾದ ಪರ್‌ಫಾರ್ಮರ್ ಅಂತಹ ಅದ್ಭುತವಾದ ಟೀಚರ್ ಅಲ್ಲ. ಶಿಷ್ಯರು ಮಾಡುವಾಗ ಕೆಲವೆಲ್ಲಾ ಸರಿಯಾಗಿ ಬರ್ತಿಲ್ಲ ಅನ್ನೋದನ್ನು ಅವರು ಗುರುತಿಸಿ ಹೇಳೋರು. ಆದರೆ ತುಂಬಾ ನಿರ್ದಿಷ್ಟವಾಗಿ ಯಾವುದು ಬರ್ತಿಲ್ಲ ಎಲ್ಲಿ ಅನ್ನೋದನ್ನ ವಿಶ್ಲೇಷಿಸಿ ಅವರು ಹೇಳ್ತಿರ್ಲಿಲ್ಲ. ಟೀಚಿಂಗ್ ಮತ್ತು ಪರ್‌ಫಾರ್ಮಿಂಗ್ ಎರಡಕ್ಕೂ ಬೇಕಾದ ಕೌಶಲಗಳು ಬೇರೆ ಬೇರೆ. ವೆಂಕಟಲಕ್ಷಮ್ಮನವರ ಬಳಿ ಕಲಿಯುವವರು ಮುಖ್ಯವಾಗಿ ಅವರನ್ನು ನೋಡಿ, ನೋಡಿ, ಗಮನಿಸಿ ಕಲಿಯಬೇಕಿತ್ತು.
ನಮ್ಮ ತರಬೇತಿಯ ಅವಧಿಯಲ್ಲಿ ಮೂರು ವಾರಗಳು ಕಳೆದಿತ್ತು. ಆಗ ಬಿವಿಕೆ ಶಾಸ್ತ್ರಿಯವರು ಮೇಡಂ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಈ ಆರು ಜನರಲ್ಲಿ ಯಾರು ನಿಮ್ಮ ಶೈಲಿಯನ್ನು ಉಳಿಸಿಕೊಳ್ತಾರೆ ಅಂತ ನಿಮಗೆ ಅನ್ಸುತ್ತೆ, ಅಂತ ಕೇಳಿದಾಗ, ಅವರು ಭಾನುಮತಿ ಒಬ್ಬಳು ಉಳಿಸಿಕೊಳ್ತಾಳೆ, ಉಳಿದವರ ಬಗ್ಗೆ ನಾನೇನೂ ಹೇಳಲಾರೆ ಎಂದಿದ್ದರು. ಆರು ತಿಂಗಳು ಕಲಿತಾದ ಮೇಲೆ ಸಂಪೂರ್ಣ ಮೈಸೂರು ಶೈಲಿಯ ಐಟಂಗಳನ್ಮು ಮಾಡುವಂತೆ ಹೇಳಿ, ಬಿವಿಕೆ ಶಾಸ್ತ್ರಿಗಳು ನನಗೊಂದು ಕಾರ್ಯಕ್ರಮ ನೀಡಿದರು. ಅದು ರಾಜ್ಯೋತ್ಸವ ಅನ್ನಿಸುತ್ತೆ. ಆವತ್ತಿನ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಅಯ್ಯಂಗಾರ್ಯರು ಇದ್ದರು, ಭಾರತೀಯ ವಿದ್ಯಾಭವನದ ಮುಖ್ಯಸ್ಥರು ಒಬ್ಬರು ಇದ್ದರು. ನಾನು ಎಲ್ಲೆಲ್ಲಿ ಅಭಿನಯಿಸಿದೆನೋ ಅಲ್ಲಿ ಎಲ್ಲರೂ ವೆಂಕಟಲಕ್ಷಮ್ಮನವರನ್ನೇ ನೋಡಿದಂತಾಗುತ್ತದೆ ಎನ್ನುತ್ತಿದ್ದರು.
ವೆಂಕಟಲಕ್ಷಮ್ಮನವರಲ್ಲಿ ಅವರದ್ದೇ ಆದ ಕೆಲವು ವಿಶೇಷತೆಗಳಿದ್ದವು. ಇದು ಮೈಸೂರು ಶೈಲಿಯ ವಿಶೇಷತೆಗಳೂ ಆಗಿದ್ದವು. ಮೈಸೂರು ಆಸ್ಥಾನ ಶೈಲಿ ಉಳಿದಿರೋದು ವೆಂಕಟಲಕ್ಷ್ಮನವರಿಂದಲೇ. ತುಂಬಾ ದೊಡ್ಡ ದುರಂತವೆಂದರೆ ಇಂದು ಅದರ ಸೂಕ್ಷ್ಮಗಳನ್ನು ಅರಿತು ಅದನ್ನು ಮುಂದುವರೆಸುವವರೇ ಇಲ್ಲ. ನಾನು ಇದೇನೇ ಸಖಿ ಮತ್ತು ಇನ್ನೂ ಕೆಲವು ಜಾವಳಿಗಳು, ಪದಂಗಳು, ಒಂದು ವರ್ಣ ಮನವಿಚೈಕೊನಲು, ಕೆಲವು ತಿಲ್ಲಾನ, ಜತಿಸ್ವರ ಮತ್ತು ಒಂದು ಚೂರ್ಣಿಕೆ ಇವುಗಳನ್ನು ಅವರಲ್ಲಿ ಕಲಿತೆ. ಮೈಸೂರು ಮಹಾರಾಜರಿಗೆ ಸರಸ್ವತಿ ಎಂದರೆ ತುಂಬಾ ಭಕ್ತಿ. ಹಾಗಾಗಿ ಅವರು ತಮ್ಮ ಆಸ್ಥಾನದ ಸಂಸ್ಕೃತ ವಿದ್ವಾಂಸರಾದ ಸುಬ್ರಹ್ಮಣ್ಯ ಶಾಸ್ತ್ರಿಗಳಿಂದ ಸರಸ್ವತಿ ಕುರಿತ ಚೂರ್ಣಿಕೆಯನ್ನು ರಚನೆ ಮಾಡಿಸಿದರು. ಹಾಡಿದರೆ ಅಷ್ಟು ಸೊಗಸಾಗಿರುವ ರಚನೆಯನ್ನು ಅಭಿನಯಿಸಿದರೆ ಇನ್ನೆಷ್ಟು ಚೆನ್ನಾಗಿರಬಹುದು ಅಂತ ಅನ್ನಿಸಿ ಮಹಾರಾಜರು ಅದಕ್ಕೆ ಅಭಿನಯ ಸಂಯೋಜಿಸುವಂತೆ ಜಟ್ಟಿತಾಯಮ್ಮನವರಿಗೆ ಹೇಳಿದರು. ಚೂರ್ಣಿಕೆಯನ್ನು ಆರಭಿಯಲ್ಲಿಯೇ ಹಾಡಬೇಕು ಎನ್ನುವ ನಿಯಮವಿದೆ. ಅದನ್ನು ಜಟ್ಟಿ ತಾಯಮ್ಮನವರು ಅಭಿನಯಿಸಿದಾಗ ಮಹಾರಾಜರು ರೋಮಾಂಚಿತರಾದರು. ಅಂದಿನಿಂದ ಚೂರ್ಣಿಕೆಯನ್ನು ಅಭಿನಯಿಸುವುದು ಹೆಚ್ಚುಕಡಮೆ ಮೈಸೂರು ಶೈಲಿಯ ಸಂಪ್ರದಾಯವೇ ಆಗಿಬಿಟ್ಟಿದೆ.
ನೃತ್ಯದಲ್ಲಿ ಉಳಿದಂತೆ ಎಲ್ಲೂ ಚೂರ್ಣಿಕೆಯನ್ನು ಅಭಿನಯಿಸುವುದಿಲ್ಲ. ಅವರು ನನದನ್ನು ಹೇಳಿಕೊಟ್ಟರು. ನಾನು ಅದನ್ನು ಚೆನ್ನೈನಲ್ಲಿ ಮಾಡಿದೆ. ಅದನ್ನು ನಾನು ಮಾಡಿದ ಕೂಡಲೆ ಪದ್ಮಾ ಸುಬ್ರಹ್ಮಣ್ಯಂ ತುಂಬಾ ಅಚ್ಚರಿಗೊಂಡರು. ಇದನ್ನು ನೃತ್ಯದಲ್ಲಿ ಮಾಡುವುದಿಲ್ಲ ಅಲ್ಲವೇ, ಎಂದು ಕೇಳಿದರು. ಆಗ ನಾನು ಅವರಿಗೆ ಇದರ ಹಿನ್ನೆಲೆಯನ್ನು ವಿವರಿಸಿದೆ. ಇದು ಇಲ್ಲಿನ ಪಠ್ಯಕ್ರಮದಲ್ಲಿಯೂ ಸೇರಿಕೊಂಡಿದೆ ಹಾಗಾಗಿ ಇದನ್ನು ಕಲಿಯಲೇ ಬೇಕು. ಬಂಗಾಲಿಯ ಟ್ಯಾಗೋರರ ಹಾಡು, ಮರಾಠಿಯ ಭಜನ್, ಕಬೀರರ ಹಾಡಿಗೆ ಅಭಿನಯಿಸಬಹುದಾದರೆ ಇದನ್ಯಾಕೆ ಅಭಿನಯಿಸಬಾರದು?
ಇನ್ನು ನೃತ್ಯದಲ್ಲಿ ಪೂರ್ವರಂಗ ಅಂತ ಇದೆ. ಅದು ತುಂಬಾ ಸುದೀರ್ಘವಾದ ಪ್ರಸ್ತುತಿ; ಮೈಸೂರು ಶೈಲಿಗೆ ಪೂರ್ವರಂಗ ಹೇಗೆ ಬಂತು ಎನ್ನುವುದು ನನಗೆ ತಿಳಿಯದು ಅದನ್ನು ನೀವು ಲಲಿತಾ ಶ್ರೀನಿವಾಸನ್ ಅವರ ಬಳಿ ಕೇಳಬೇಕು. ವೆಂಕಟಲಕ್ಷಮ್ಮನವರ ಮೊಮ್ಮಗಳು ಶಕುಂತಲಾ ಅವರ ಬಳಿಯೂ ನೀವು ಈ ಬಗ್ಗೆ ಕೇಳಿ ತಿಳಿದುಕೊಳ್ಳಬಹುದು. ಈ ಪೂರ್ವರಂಗವನ್ನು ಆಡಿಟೋರಿಯಂನಲ್ಲಿ ಮಾಡಲಾಗದು. ಅದಕ್ಕೆ ದೇವತೆಗಳು ಬೇಕು. ಇದನ್ನು ದೇವಾಲಯದಲ್ಲಿ ಮಾತ್ರ ಮಾಡುವುದಕ್ಕೆ ಸಾಧ್ಯ. ಆದರೆ ಇದನ್ನು ಮೈಸೂರು ಅರಮನೆಯಲ್ಲಿ ಹೇಗೆ ಮಾಡ್ತಿದ್ರು ಅಂತ ಗೊತ್ತಿಲ್ಲ. ಅರಮನೆಯಲ್ಲಿ ವಿಚಾರಿಸಬೇಕು. ಅವರು ಅರಮನೆಯಲ್ಲಿ ಕೇವಲ ಪೂರ್ವರಂಗವನ್ನೇ ಮಾಡುತ್ತಿದ್ದರು ಅಂತ ಅನ್ನಿಸುತ್ತದೆ.
ಪೂರ್ವರಂಗದಲ್ಲಿ ಒಂದು ಸಣ್ಣ ಭಾಗದಲ್ಲಿ ತುಂಬಾ ಜತಿಗಳು, ಸೊಲ್ಕಟ್ಟುಗಳು ಇರುತ್ತವೆ ಮತ್ತು ಸಾಹಿತ್ಯವೂ ಇರುತ್ತದೆ. ಸಾಹಿತ್ಯ ಮೊದಲು ಗಣೇಶನನ್ನು ಕುರಿತು ಮತ್ತು ನಂತರ ಆಶ್ರಯದಾತ ದೊರೆಯನ್ನು ಕುರಿತು ಇರುತ್ತದೆ. ಇದು ಅತ್ಯಂತ ವಿಶೇಷವಾದ ಮತ್ತು ವಿಶಿಷ್ಟವಾದುದು. ಕೇವಲ ಮೈಸೂರು ಶೈಲಿಯಲ್ಲಿ ಮಾತ್ರ ಇರುವಂಥದ್ದು. ಮೈಸೂರಲ್ಲಿ ಒಂದು ಶೈಲಿನೇ ಇಲ್ಲ ಅಂತ ತುಂಬಾ ಜನ ಹೇಳಿದ್ದಾರೆ ಅದು ನನಗೆ ತುಂಬಾ ಬೇಸರದ ವಿಚಾರ. ನಮ್ಮ ಊರಿನ ಆಸ್ತಿ ಏನಿದೆಯೋ ಅದನ್ನೇ ನಾವು ಏನೂ ಇಲ್ಲ ಅಂತ ಹೇಳೋದು ತುಂಬಾ ತಪ್ಪಲ್ಲವಾ? ನಮ್ಮಲ್ಲಿರುವ ವಿಶೇಷತೆಯನ್ನು ನಾವು ಕೊಂಡಾಡದಿದ್ದರೆ ಇನ್ಯಾರು ಕೊಂಡಾಡುತ್ತಾರೆ? ತಂಜಾವೂರು, ತಂಜಾವೂರು ಅಂದ್ಕೊಂಡು ಅವರು ತಮ್ಮ ಹೆಚ್ಚುಗಾರಿಕೆಯನ್ನು ಹೇಳ್ಕೊಳ್ತಾನೇ ಇರ್ತಾರೆ. ನಾವು ಸುಮ್ಮನಿರಬಾರದು. ಬಾಲಸರಸ್ವತಿಯವರ ಹೆಸರಲ್ಲಿ ಇಂಟರ್‌ನ್ಯಾಷನಲ್ ಡಾನ್ಸ್ ಅಲೈಯನ್ಸ್ ಅಂತ ಮಾಡಿಕೊಂಡಿದ್ದಾರೆ. ಅಲ್ಲಿ ನಾನು ಈ ಮೈಸೂರು ಜತಿಯನ್ನು ಮಾಡಿದೆ. ಮ್ಯೂಸಿಕ್ ಅಕಾಡೆಮಿಯಲ್ಲಿ ಕೂರಲು ಜಾಗವಿಲ್ಲದೆ ಜನ ನಿಂತಿದ್ದರು. ಅಲ್ಲಿ ಎಲ್ಲರೂ ಕೇಳಿದರು ಇದೇನು, ಇದ್ಯಾವ ಐಟಂ? ಅದ್ಹೇಗೆ ನಾವ್ಯಾರೂ ಇದನ್ನು ಎಂದೂ ನೋಡೇ ಇಲ್ಲ ಎಂದು. ಮೈಸೂರು ಜತಿ ಎನ್ನುವುದು ತುಂಬಾ ವಿಶೇಷವಾದದ್ದು. ಅದು ಸುಮಾರು ಏಳು ಅಥವಾ ಎಂಟು ನಿಮಿಷ ಹಿಡಿಯುತ್ತದೆ. ಅದರಲ್ಲಿ ತಾಳಗಳೂ ಕೂಡ ತುಂಬಾ ಬೇರೆ ಬೇರೆ ಇರುತ್ತದೆ. ನೀವು ಸಾಮಾನ್ಯವಾಗಿ ಕೇಳುವುದಕ್ಕಿಂತ ಅದರ ಸೊಲ್ಕಟ್ಟು ತುಂಬಾ ಬೇರೆಯಾಗಿರುತ್ತದೆ. ಸಾಹಿತ್ಯದ ಭಾಗ ಬರುವಾಗ ಅದು ಕೂಡ ಜತಿಯೊಡನೆ ಹೆಣೆದುಕೊಂಡು ಬರುತ್ತದೆ. ಇದರಲ್ಲಿನ ಸೊಲ್ಕಟ್ಟುಗಳ ವಿಶೇಷವೇನೆಂದರೆ ಇದರಲ್ಲಿ ಒಡೆಸ್ಸಿ ಸೊಲ್ಕಟ್ಟು ಮತ್ತು ಕಥಕ್ ಸೊಲ್ಕಟ್ಟು ಇದೆ. ತಬಲಾ ಮತ್ತು ಪಖಾವಜ್ ಸೊಲ್ಕಟ್ಟು, ಇದೆ. ಜೊತೆಗೆ ಅಡವುಗಳನ್ನು ಮಾಡುವಾಗಲೂ ಅದರಲ್ಲಿ ಒಡೆಸ್ಸಿಯ ಅಡವುಗಳು ಕೂಡ ಇವೆ. ಅದು ಮೈಸೂರು ಮಹಾರಾಜರ ಆಸ್ಥಾನದ ಸಂಸ್ಕೃತಿಯನ್ನು ತೋರಿಸುತ್ತದೆ. ಅದು ಉಳಿದ ಹಲವು ಪ್ರಭಾವಗಳು ಬಂದು ಸೇರಿಕೊಳ್ಳಲು ಅವಕಾಶಮಾಡಿಕೊಟ್ಟ ಒಳಗೊಳ್ಳುವ ಸಂಸ್ಕೃತಿಯಾಗಿತ್ತು.
ಕಲೆಯಲ್ಲಿ ಇದು ಸರಿ, ಇದು ಸರಿಯಿಲ್ಲ ಎಂದು ಯೋಚಿಸುವುದು ತುಂಬಾ ಸಂಕುಚಿತವಾದ ಮನಃಸ್ಥಿತಿ. ಕಲೆಗೆ ವಿಶಾಲವಾದ ಮನಸ್ಸು ಮತ್ತು ತೆರೆದ ಹೃದಯ ಬೇಕು. ಈಗ ಎಂಎಸ್‌ಜಿ ವಯೋಲಿನ್ ನುಡಿಸುವಾಗ ಅದೆಷ್ಟು ಸೊಗಸಾಗಿ ಹಿಂದುಸ್ತಾನಿಯ ಪರಿಮಳವನ್ನು ಮತ್ತು ರುಚಿಯನ್ನು ಕರ್ನಾಟಕ ಸಂಗೀತಕ್ಕೆ ತರುತ್ತಿದ್ದರು. ಲಾಲ್ಗುಡಿಯದು ಸಂಪೂರ್ಣ ಕರ್ನಾಟಕ ಬಾನಿ. ಹಾಗಂತ ಇದು ಉತ್ತಮ ಅದು ಅಲ್ಲ ಎಂದು ಹೇಳುವುದಕ್ಕಾಗುವುದಿಲ್ಲ ಮತ್ತೆ ಹಾಗೆ ಹೇಳುವುದು ಸರಿಯೂ ಅಲ್ಲ. ಹಾಗೆ ಡಾನ್ಸಿನಲ್ಲಿಯೂ ಬೇರೆ ಬೇರೆ ಪ್ರಭಾವಕ್ಕೆ ಪಕ್ಕಾಗುವುದರಲ್ಲಿ ತಪ್ಪೇನಿಲ್ಲ. ಈಗ ಕಥಕ್‌ನಲ್ಲಿ ಭ್ರಮರಿ ಮಾಡ್ತಾರೆ. ನಾವೂ ಭ್ರಮರಿ ಮಾಡ್ತೀವಿ. ಆದರೆ ನಾವು ಒಂದೇ ಭ್ರಮರಿ ಮಾಡ್ತೀವಿ. ಅವರು ತುಂಬಾ ಭ್ರಮರಿಗಳನ್ನು ಒಟ್ಟಿಗೆ ಮಾಡುತ್ತಾರೆ. ಈಗ ಭರತನಾಟ್ಯದಲ್ಲಿಯೂ ಮೂರು ಅಥವಾ ನಾಲ್ಕು ಭ್ರಮರಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ನಮ್ಮ ಭ್ರಮರಿ ಅವರ ತರಹ ಇಲ್ಲ. ಆದರೆ ನಾವು ಅದನ್ನು ಅವರಂತೆಯೇ ಮಾಡಿ ಭರತನಾಟ್ಯ ಕಥಕ್ ತರಹ ಕಾಣುವಂತೆ ಮಾಡಬಾರದು. ಭರತನಾಟ್ಯದ ಗುಣವನ್ನು ನಾವು ಉಳಿಸಿಕೊಳ್ಳಲೇಬೇಕು. ಆದರೆ ಬೇರೊಂದರ ಉದಾಹರಣೆಗೆ ಕಥಕ್‌ನ ಒಂದು ಐಡಿಯಾವನ್ನು ಅಳವಡಿಸಿಕೊಳ್ಳಬೇಕು. ಇಂತಹ ವಿಶಾಲವಾದ ಮನಸ್ಸು ಮೈಸೂರು ಮಹಾರಾಜರಲ್ಲಿತ್ತು.
ಮೈಸೂರು ಶೈಲಿಯ ಮತ್ತು ವೆಂಕಟಲಕ್ಷಮ್ಮನವರ ಶೈಲಿಯಲ್ಲಿನ ಮತ್ತೊಂದು ತುಂಬಾ ವಿಶಿಷ್ಟವಾದ ಅಂಶ ಎಂದರೆ ಅಟ್ಟಮಿಯ ಬಳಕೆ. ಅಟ್ಟಮಿ ಎಂದರೆ ಗ್ರೀವಾಭೇಧ ಅಂದರೆ ಕುತ್ತಿಗೆಯ ಬಳಕೆ. ತಂಜಾವೂರು ಶೈಲಿಯಲ್ಲಿ ಅಟ್ಟಮಿಯನ್ನು ಹೆಚ್ಚಿಗೆ ಬಳಸೋದಿಲ್ಲ. ಅದರಲ್ಲೂ ನೃತ್ತದಲ್ಲಂತೂ ಅದನ್ನು ಹೆಚ್ಚಿಗೆ ಬಳಸೋದೇ ಇಲ್ಲ. ಆದರೆ ವೆಂಕಟಲಕ್ಷಮ್ಮನವರು ಅದನ್ನು ಬಹಳ ಸೊಗಸಾಗಿ ಲಾಲಿತ್ಯಪೂರ್ಣವಾಗಿ ಬಳಸುತ್ತಿದ್ದರು.
ಅವರ ಅಭಿನಯದ ಮತ್ತೊಂದು ವಿಶೇಷತೆಯೆಂದರೆ ಅದರ ಚುರುಕುತನ, ಲವಲವಿಕೆ. ಇನ್ಯಾವುದೇ ಕಲಾವಿದೆಯಲ್ಲಿಯೂ ನಾನು ಆ ಮಟ್ಟಕ್ಕೆ ಅದನ್ನು ನೋಡಿಲ್ಲ. ಅಭಿನಯದಲ್ಲಿ ಒಂದು ಭಾವದಿಂದ ಮತ್ತೊಂದು ಭಾವಕ್ಕೆ ಮಿಂಚಿನಂತೆ ಚಲಿಸುತ್ತಿದ್ದರು. ಕಣ್ಣುಗಳನ್ನು ಬಲು ಸೊಗಸಾಗಿ ಬಳಸುತ್ತಿದ್ದರು. ಅವರ ಕಣ್ಣುಗಳು ತುಂಬಾ ಚಿಕ್ಕದಾಗಿದ್ದವು. ಆದರೆ ಅವುಗಳಿಗೆ ಅಸಾಧಾರಣ ಸಂವಹನ ಶಕ್ತಿಯಿತ್ತು. ಅವರಿಗೆ ೮೦ ವಯಸ್ಸಾಗಿದ್ದಾಗಿ ಅವರು ಕುಳಿತುಕೊಂಡು ಹದಿನಾರು ವರ್ಷದ ’ಮುಗ್ಧ ನಾಯಕಿಯನ್ನು’ ಅಭಿನಯಿಸಿದ್ದರು. ಅದು ನಿಜವಾಗಿಯೂ ವರ್ಣನಾತೀತವಾಗಿತ್ತು. ಅವರು ಕುಳಿತೇ ಮಾಡುತ್ತಿದ್ದರು ಆದರೆ ನಮಗೆ ಹದಿನಾರರ ಮುಗುದೆ ಇಡೀ ರಂಗದ ಮೇಲೆ ಓಡುತ್ತಿದ್ದಾಳೆ ಎಂದು ಭಾಸವಾಗುತ್ತಿತ್ತು. ಕೂತ ಜಾಗದಿಂದಲೇ ಅವಳು ಓಡಾಡುತ್ತಿರುವ ಕಲ್ಪನೆಯನ್ನು ಮೂಡಿಸಿದ್ದರು. ಇದು ಅವರ ಸಂವಹನ ಸಾಮರ್ಥ್ಯ.
ನೃತ್ಯದಲ್ಲಿ ಪರ್‌ಫೆಕ್ಟ್ ಡಾನ್ಸಿಂಗ್ ಬೇರೆ, ಬ್ಯೂಟಿಫುಲ್ ಡಾನ್ಸಿಂಗ್ ಬೇರೆ. ನೃತ್ಯದ ಉದ್ದೇಶ ಪರಫಕ್ಟ್ ಡಾನ್ಸಿಂಗ್ ಅಲ್ಲ. ಪರ್‌ಫೆಕ್ಷನ್ ಅನ್ನೋದು ಕಲಿಯುವಾಗ ಬೇಕು. ಆದರೆ ಕಲಿತ ಮೇಲೆ ಅದರ ಸೌಂದರ್ಯ ಮುಖ್ಯ ಆಗಬೇಕು. ನರ್ತಿಸುವ ನಮ್ಮ ದೇಹ ಆ ಸೌಂದರ್ಯವನ್ನು ಅನುಭವಿಸಲು ಪ್ರಾರಂಭಿಸಬೇಕು. ಆಗ ಮಾತ್ರ ಆ ಶೈಲಿಯ ಸೌಂದರ್ಯ ಹೊರಹೊಮ್ಮಲು ಸಾಧ್ಯ. ಆ ಶೈಲಿ ಏನು ಎನ್ನುವುದು ಅರ್ಥವಾಗದಿದ್ದರೆ ಅದರ ಕಲಾತ್ಮಕತೆಯನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ ಅಷ್ಟೇ ಅಲ್ಲ ಅದನ್ನು ಸವಿಯುವುದೂ ಸಾಧ್ಯವಿಲ್ಲ. ನೋಡೋದು ಮತ್ತು ಹೇಗೆ ನೋಡ್ಬೇಕು ಅನ್ನೋದು ಇವೆಲ್ಲವೂ ಬಾನಿಯ ಬಗ್ಗೆ ಮಾತನಾಡುವಾಗ ಮುಖ್ಯವಾಗುತ್ತದೆ. ನೀವು ಇಂತಹ ಎಲ್ಲಾ ಸಣ್ಣ ಸಣ್ಣ ಸೂಕ್ಷ್ಮಗಳನ್ನೂ ತುಂಬಾ ಕಟ್ಟುನಿಟ್ಟಗಾಗಿ ಅನುಸರಿಸಿದಾಗ ಮಾತ್ರ ಬಾನಿ ಅನ್ನೋದು ಸೂಕ್ತವಾದ ರೀತಿಯಲ್ಲಿ ವ್ಯಕ್ತವಾಗುತ್ತೆ. ಹಾಗಾಗಿ ಒಂದು ಬಾನಿಯ ವಿಶಿಷ್ಟ ಐಟಂ ಏನಾದ್ರೂ ಇದ್ರೆ ಅದನ್ನು ಏನೂ ಬದಲಾಯಿಸದೆ ಹಾಗೇ ಮಾಡಿದರೆ ಮಾತ್ರ ಅದು ಆ ಬಾನಿಯನ್ನು ಪ್ರತಿನಿಧಿಸುತ್ತೆ. ಹಾಗಾಗಿ ನಾನು ಈ ಬಗ್ಗೆ ತುಂಬಾ ಪರ್ಟಿಕ್ಯುಲರ್ ಆಗಿ ಇರ್ತೀನಿ.
ಈವತ್ತಿಗೂ ವಿದ್ಯಾರ್ಥಿಗಳು ಮೈಸೂರು ಜತಿ ಮಾಡುವಾಗ ನಾನು ಅಲ್ಲೇ ಇರ್ತೀನಿ. ಅಟ್ಟಮಿ ಬರಲಿಲ್ಲ, ಕಣ್ಣು ಬರಲಿಲ್ಲ ಅಂತ ಕರೆಕ್ಟ್ ಮಾಡ್ತಾನೆ ಇರ್ತೀನಿ. ಈ ಶೈಲಿಯನ್ನು ಉಳಿಸಿಕೊಂಡು ಅದನ್ನು ಮ್ಯೂಸಿಕ್ ಅಕಾಡೆಮಿಯಲ್ಲಿ ಮಾಡಿದಾಗ ಎಲ್ಲರೂ ಅಚ್ಚರಿಪಟ್ಟರು. ಅಷ್ಟೇ ಅಲ್ಲ ಚಿತ್ರಾ ವಿಶ್ವೇಶ್ವರನ್ ನೀವು ಮೈಸೂರು ಶೈಲಿಯ ಒಂದು ವಿಶಿಷ್ಟವಾದ ಕೃತಿಯನ್ನು ಮಾಡಿದಿರಲ್ಲಾ ಅದು ತುಂಬಾ ಚೆನ್ನಾಗಿತ್ತು, ಅಂತ ಹೇಳಿದರು. ನೀವು ನಂಬ್ತೀರೋ ಇಲ್ಲವೋ ನನಗೆ ತಿಳಿಯದು. ಪ್ರಿಯದರ್ಶಿನಿ ಗೋವಿಂದ್ ತನ್ನ ವಿದ್ಯಾರ್ಥಿ ಅಪೂರ್ವ ಎನ್ನುವವರನ್ನು ಇದನ್ನು ಕಲಿಯಲೆಂದೇ ನನ್ನ ಬಳಿ ಕಳಿಸಿದರು. ಇದನ್ನು ಮೂರೇ ಮೂರು ದಿನಗಳಲ್ಲಿ ಕಲಿತ ಮೊಟ್ಟ ಮೊದಲ ಹುಡುಗಿ ಆಕೆ. ಅಕಾಡೆಮಿಯಲ್ಲಿ ಅದನ್ನು ನಾನು ಹೇಳಿಕೊಟ್ಟಂತೆಯೇ ಆಕೆ ಅದನ್ನು ಮಾಡಿದಳು. ಪ್ರಿಯದರ್ಶಿನಿ ಹೇಳಿದರು, ಭಾನುಮತಿ, ಎಂಥ ಸುಂದರವಾದ ವರ್ಣವೊಂದನ್ನು ಅವಳಿಗಾಗಿ ಸಂಯೋಜಿಸಿಕೊಟ್ಟಿದ್ದೆ ಆದರೆ ಎಲ್ಲರೂ ಮೈಸೂರಿನ ಈ ಕೃತಿಯನ್ನು ತುಂಬಾ ಮೆಚ್ಚಿಕೊಂಡರು, ಎಂದು ನನಗೆ ಹೇಳಿದರು. ಬೇರೆಯವರಿಗೆ ಅದು ವಿಶಿಷ್ಟ ಅಂತ ಅನ್ನಿಸಿದೆ. ಆದರೆ ನಮ್ಮ ಮೈಸೂರಿನವರಿಗೆ ಇಂಥದ್ದರ ಬಗ್ಗೆ ಅಭಿಮಾನವೇ ಇಲ್ಲ. ಮೈಸೂರು ಶೈಲಿ ಅಂತ ಏನಿದೆ ಅನ್ನುತ್ತಾರಲ್ಲ ಅದೇ ನನಗೆ ಬೇಜಾರು.
ಮೈಸೂರು ಶೈಲಿಯಲ್ಲಿ ವಿದ್ಯೆಯನ್ನು ಅಪಾತ್ರರಿಗೆ ದಾನ ಮಾಡಬಾರದು ಅನ್ನುವ ಭಾವನೆ ತುಂಬಾ ಬಲವಾಗಿತ್ತು. ಹಾಗಾಗಿ ತುಂಬಾ ಜನ ಶಿಷ್ಯರು ತಯಾರಾಗಲೇ ಇಲ್ಲ. ವೆಂಕಟಲಕ್ಷಮ್ಮನವರಿಗೂ ಈ ಗಾಬರಿಯಿತ್ತು, ಈ ಶೈಲಿಯನ್ನು ಹಾಳು ಮಾಡ್ತಾರೆ, ಬದಲಾಯಿಸಿಬಿಡ್ತಾರೆ ಅಂತೆಲ್ಲ. ಆದರೆ ಬಾನಿ ಅನ್ನೋದು ಮುಂದುವರೆಯೋದಕ್ಕೆ ಸಾಧ್ಯ ಇರೋದು ಕೇವಲ ಪರ್‌ಫಾರ್ಮರ್ಸ್ ಮೂಲಕ ಮಾತ್ರ. ಆದರೆ ನನ್ನ ಸಮಸ್ಯೆಯೆಂದರೆ ಅಪಾತ್ರರು ಅಂತ ತೀರ್ಮಾನಿಸುವುದಾದರೂ ಹೇಗೆ? ಆದರೆ ತಂಜಾವೂರಿನಲ್ಲಿ ಇಂತಹ ಒಂದು ಥಿಯರಿ ಇರಲಿಲ್ಲ. ಅಲ್ಲಿ ಲೆಕ್ಕವಿಲ್ಲದಷ್ಟು ನಟುವನಾರುಗಳೂ ಇದ್ದರು. ಅವರು ಬೇರೆ ಬೇರೆ ಗುಂಪಿನ ಜನಗಳಿಗೆ ವಿದ್ಯಾದಾನ ಮಾಡಿದರು. ಉದಾಹರಣೆಗೆ ಮುತ್ತಯ್ಯ ಪಿಳ್ಳೈ ಬಹಳಷ್ಟು ಫ್ರೆಂಚರಿಗೆ ಪಾಠ ಹೇಳಿಕೊಟ್ಟರು. ಪ್ರದರ್ಶಕ ಕಲೆಗಳು ಹೆಚ್ಚಿನ ಪ್ರಮಾಣದ ಶಿಷ್ಯರು ಇಲ್ಲದಿದ್ದರೆ ಅದು ಮುಂದಕ್ಕೆ ಬೆಳೆಯುವುದೇ ಇಲ್ಲ. ಮೈಸೂರು ಶೈಲಿಗೆ ಸ್ವಲ್ಪ ಮಟ್ಟಿಗೆ ಆದದ್ದೂ ಇದೇ. ಈಗ ನೋಡಿ ಮಧುರೆ ಮಣಿ ಅಯ್ಯರ್ ಅವರ ಶೈಲಿ ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಅವರ ಶೈಲಿಯನ್ನು ಮೈಗೂಡಿಸಿಕೊಂಡು ಹಾಡುವವರೇ ಇಲ್ಲವಾಗಿದ್ದಾರೆ ನೋಡಿ. ಬಹುಶಃ ಅವರದ್ದು ತುಂಬಾ ವಿಶಿಷ್ಟವಾದ ಶೈಲಿ ಹಾಗಾಗಿ ಎಲ್ಲರಿಗೂ ಕಲಿಯಲಿಕ್ಕೆ ಕಷ್ಟ ಆಗಿರಬೇಕು. ವೆಂಕಟಲಕ್ಷ್ಮನವರ ವಿಶೇಷತೆ ಇದ್ದದ್ದೇ ಅವರು ಕುತ್ತಿಗೆಯನ್ನು, ಕಣ್ಣನ್ನು ಮತ್ತು ಸ್ವಲ್ಪ ಮಟ್ಟಿಗೆ ಬಾಯನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತಿದ್ದುದು. ನನಗೆ ಮೊದಲೆರಡನ್ನು ಹಾಗೇ ಮಾಡುವುದಕ್ಕೆ ಸಾಧ್ಯವಾದರೂ ಬಾಯಿಯ ಚಲನೆಯ ಸಾಧ್ಯವಾಗಲಿಲ್ಲ ಏಕೆಂದರೆ ಉಳಿದ ಯಾವ ಶೈಲಿಯಲ್ಲಿಯೂ ಬಾಯಿ ಹಾಗೆ ಬಳಸುವುದಿಲ್ಲ.
ನೃತ್ಯದಲ್ಲಿ ಆಶ್ಚರ್ಯ, ಭಯ, ಕೋಪ ಇವುಗಳನ್ನು ತೋರಿಸುವುದು ನಿಜವಾದ ಸವಾಲು ಏಕೆಂದರೆ ಇವುಗಳ ನಡುವೆ ಇರುವುದು ತುಂಬಾ ಸಣ್ಣ ವ್ಯತ್ಯಾಸ. ಹಗಾಗಿ ತುಂಬಾ ಸೂಕ್ಷ್ಮ ಇಲ್ಲದಿದ್ದಲ್ಲಿ ಅವುಗಳ ವ್ಯತ್ಯಾಸವನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಈ ಎಲ್ಲಾ ಭಾವಗಳನ್ನು ಅಭಿವ್ಯಕ್ತಿಸುವುದಕ್ಕೂ ಕಣ್ಣು ಅಗಲಿಸುತ್ತೇವೆ. ಆದರೆ ಒಳಗಿನ ಭಾವನೆ ಬದಲಾದಾಗ ಮಾತ್ರ ಕಣ್ಣು ಬೇರೆ ರೀತಿ ಕಾಣುತ್ತದೆ.
ಅಭಿನಯದ ಸೂಕ್ಷ್ಮಗಳನ್ನು ಒಬ್ಬ ಪ್ರದರ್ಶಕಿಯಾಗಿ ಹೇಗೆ ಪರಿಣಾಮಕಾರಿಯಾಗಿ ಮಾಡಬೇಕು ಎನ್ನುವುದನ್ನು ನಾನು ವೆಂಕಟಲಕ್ಷ್ಮಮ್ಮನವರಿಂದ ಕಲಿತೆ. ನೃತ್ಯದ ಕಾರ್ಯಕ್ರಮ ನೋಡಲು ಬಂದ ಪ್ರೇಕ್ಷಕನೊಬ್ಬ ನಾವು ಮೊದಲ ಹೆಜ್ಜೆ ಇಟ್ಟಕೂಡಲೆ, ಇದನ್ನು ಪೂರ್ತಿ ನೋಡಲೇ ಬೇಕು ಎಂದು ತನ್ನ ಸೀಟಿಗೆ ಅಂಟಿಕೊಳ್ಳುವಂತೆ ಹೇಗೆ ಮಾಡಬೇಕು ಎನ್ನುವುದನ್ನು ನಾನು ವೆಂಕಟಲಕ್ಷಮ್ಮನವರಿಂದ ಕಲಿತೆ. ಏಕೆಂದರೆ ಅವರು ಮಾಡುವುದಕ್ಕೆ ಶುರುಮಾಡಿದ ಮೇಲೆ ನೀವು ಕಣ್ಣು ಮಿಟುಕಿಸುವುದನ್ನೂ ಮರೆತುಬಿಡುತ್ತೀರಿ. ಅವರ ಅಭಿನಯ ಹಾಗಿರುತ್ತಿತ್ತು. ಒಬ್ಬ ಗುರುಗಳಾಗಿ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹೇಗೆ ಬಿಡಿಸಿ, ವಿವರಿಸಿ, ತೋರಿಸಿಕೊಡಬೇಕು ಎನ್ನುವುದನ್ನು, ಯಾವ ವಿದ್ಯಾರ್ಥಿಗೆ ಯಾವ ಪಾತ್ರ ಹೊಂದುತ್ತದೆ. ಎಂತಹ ನಡೆಗಳು ಹೊಂದುತ್ತವೆ ಎನ್ನುವುದನ್ನು, ಯಾವ ವಯಸ್ಸಿನವರಿಗೆ ಏನೇನು ಹೇಳಿಕೊಡಬಹುದು ಎನ್ನುವುದನ್ನು ಕಲಾನಿಧಿ ನಾರಾಯಣ್ ಅವರಿಂದ ಕಲಿತೆ. ಉದಾಹರಣೆಗೆ ನನ್ನ ವಯಸ್ಸಿನಲ್ಲಿ ನಾನು ಗುಮ್ಮನ ಕರೆಯದಿರೆ ಎನ್ನುವುದನ್ನು ಮಾಡಬಹುದು. ಆದರೆ ಹತ್ತು ಹನ್ನೆರೆಡು ವರ್ಷದ ಹುಡುಗಿಗೆ ಅದು ಕಷ್ಟವಾಗಬಹುದು. ಏಕೆಂದರೆ ಅಲ್ಲಿ ಮಗುವಿನ ಹಾಗೆ (ಛಿhiಟಜಟiಞe), ಅಭಿನಯಿಸಬೇಕೇ ಹೊರತು, ಬಾಲಿಶವಾಗಿ ಎಳಸಾಗಿ (ಛಿhiಟಜish) ಅಭಿನಯಿಸಬಾರದು. ವಯಸ್ಸಾದಂತೆಲ್ಲಾ ಅಭಿನಯದಲ್ಲಿ ಪ್ರಬುದ್ಧತೆ, ಪ್ರೌಢತೆ ಬರುತ್ತದೆ. ನೃತ್ತ ಹಾಗಲ್ಲ. ಚಿಕ್ಕವಯಸ್ಸಿನಲ್ಲಿ ಕಲಿತುಬಿಟ್ಟರೆ ಗಟ್ಟಿಯಾಗಿ ಕುಳಿತುಬಿಡುತ್ತದೆ.
ನೀವು ನೃತ್ಯ ಸಂಯೋಜಿಸಿರುವುದರಲ್ಲಿ ಬರುವ ಸಂಚಾರಿಗಳನ್ನೇ ನಿಮ್ಮ ವಿದ್ಯಾರ್ಥಿಗಳು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಥವಾ ಅವರ ಮನೋಧರ್ಮದಲ್ಲಿ ಹುಟ್ಟುವ ಕೆಲವು ಸಂಚಾರಿ ಅಭಿನಯವನ್ನು ಸೇರಿಸಿಕೊಳ್ಳುವುದಕ್ಕೆ ನೀವು ಅವರಿಗೆ ಅವಕಾಶ ಕೊಡುತ್ತೀರೋ?
ನಾನು ಅವಕಾಶ ಕೊಡುತ್ತೀನಿ. ಹೀಗೆ ಮಾಡಬೇಕು ಅಂತ ಅವರಿಗೆ ಕಲಿಸುತ್ತೀನಿ. ಆದರೆ ಅವರಿಗೆ ಸ್ವಾತಂತ್ರ್ಯವನ್ನೂ ಕೊಡುತ್ತೀನಿ. ಅವರವರೇ ಕೋರಿಯೋಗ್ರಾಫ್ ಮಾಡಿದ ಮೇಲೆ ನನಗೆ ತೋರಿಸುತ್ತಾರೆ. ಅದನ್ನು ನೋಡಿ, ತಿದ್ದುವ ಅವಶ್ಯಕತೆ ಇರುವ ಕಡೆ ನಾನು ತಿದ್ದುತ್ತೀನಿ. ಅವರು ಮಾಡಿರುವುದರ ಸರಿ ತಪ್ಪುಗಳನ್ನು ಅವರಿಗೆ ಮನಗಾಣಿಸಲು ಪ್ರಯತ್ನಿಸುತ್ತೇನೆ. ಸಾಮಾನ್ಯವಾಗಿ ನನ್ನ ವಿದ್ಯಾರ್ಥಿಗಳು ನನ್ನ ಬಳಿ ಕಲಿತಿರುವ ಐಟಂಗಳನ್ನು ಪುನರ್‌ಸಂಯೋಜಿಸುವುದಿಲ್ಲ. ನಿರ್ದಿಷ್ಟವಾಗಿ ನನಗೆ ವೆಂಕಟಲಕ್ಷಮ್ಮ ಹೇಳಿಕೊಟ್ಟಿರುವುದನ್ನು ಅಥವಾ ಕಲಾನಿಧಿ ನಾರಾಯಣನ್ ಹೇಳಿಕೊಟ್ಟಿರುವುದಕ್ಕೆ ಕೈಹಾಕಿ ಬದಲಿಸಬೇಡಿ, ಅದನ್ನು ಒಂದು ಸೊವನಿಯರ್ ಅಂತ ಇಟ್ಕೊಳ್ಳಿ, ಇದು ಅವರ ಕೋರಿಯೋಗ್ರಫಿ ಮತ್ತು ಅವರ ಬಾನಿ ಅಂತ ಹೇಳಿ, ಅದನ್ನು ಪ್ರಸ್ತುತಪಡಿಸಿ ಅಂತ ಅವರಿಗೆ ಹೇಳ್ತೀನಿ. ಬೇರೆ ಯಾವುದಾದರೂ ಒಂದು ಜಾವಳಿ ಆರಿಸಿಕೊಂಡು ಸಂಯೋಜನೆ ಮಾಡಿ ತೋರಿಸಿ ಅಂತ ಹೇಳ್ತೀನಿ. ಅಲ್ಲಿಂದ ಅಷ್ಟು, ಇಲ್ಲಿಂದ ಅಷ್ಟು, ಇನ್ನೆಲ್ಲೋ ನೋಡಿದ್ದು ಇವುಗಳನ್ನು ಸೇರಿಸಿ ಚೌ ಚೌ ಮಾಡಬೇಡಿ. ಒಂದು ಸಂಯೋಜನೆಯಲ್ಲಿ ಒಂದು ಮನಸ್ಸು ನಿರಂತರ ಕೆಲಸ ಮಾಡ್ತಾ ಇರಬೇಕು ಅಂತ ಹೇಳ್ತೀನಿ.
ಮಾಯೂರಂ ವಿಶ್ವನಾಥ ಶಾಸ್ತ್ರಿಗಳು ಗಾಂಧಿಯವರ ಬಗ್ಗೆ ರಚಿಸಿರುವ ಕೃತಿಗೆ ನೃತ್ಯ ಸಂಯೋಜಿಸಿದಾಗ ಅದರಲ್ಲಿ ಡೌನ್ ಟ್ರಾಡನ್ ಉದ್ಧಾರಕ್ಕೆ ಗಾಂಧಿ ಮಾಡಿದ ಎಲ್ಲಾ ಕ್ರಮಗಳನ್ನೂ ನೃತ್ಯಕ್ಕೆ ಅಳವಡಿಸಿದ್ದೆವು. ಕಳ್ಳರು, ಜೂಜಾಡುವವರು, ಹಿಂದು ಮುಸ್ಲಿಂ ಗದ್ದಲ, ಚರಕ, ಕೈಮಗ್ಗ ಹೀಗೆ. ಇದಕ್ಕೆ ನಮಗೆ ಮಾರ್ಗದರ್ಶನ ನೀಡಿದವರು ಎಸ್ ಕೆ ರಾಮಚಂದ್ರರಾವ್. ಅವರು ಗಾಂಧಿಯನ್ನು ಒಬ್ಬ ಸಮಾಜಸುಧಾರಕನನ್ನಾಗಿ ಪ್ರತಿಬಿಂಬಿಸಿ ಎಂದು ನಮಗೆ ತಿಳಿಸಿದರು. ಇಂಗ್ಲಿಷಿನಲ್ಲಿ ವ್ಯಾಖ್ಯಾನವಿದೆ. ಸಂಯೋಜನೆ ವೈಷ್ಣವ ಜನತೋತೇನೆ ಇಂದ ಪ್ರಾರಂಭವಾಗುತ್ತದೆ. ನಾವು ಗಾಂಧಿಯ ಒಂದು ದೊಡ್ಡ ಚಿತ್ರವನ್ನು ಇಟ್ಟಿದ್ದೆವು. ಈ ಐಟಂ ಅನ್ನು ಎಲ್ಲರೂ ತುಂಬಾ ಇಷ್ಟಪಟ್ಟರು.
ನೃತ್ಯಕ್ಕೆಂದೇ ವಿಶಿಷ್ಟವಾದ ರಚನೆಗಳಿವೆ. ಅವುಗಳನ್ನು ಮಾಡಬೇಕು. ತ್ರಿಮೂರ್ತಿಗಳ ರಚನೆಗಳೆಲ್ಲವನ್ನೂ ನರ್ತಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ರಚನೆಗಳಲ್ಲಿ ಅಭಿನಯಕ್ಕೆ ಸ್ಪೇಸ್ ಬೇಕು ಅಂತ ಹೇಳ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇಲ್ಲ ನಾನು ಈ ಮಾತನ್ನು ಒಪ್ಪುವುದಿಲ್ಲ. ಸಂತ ತ್ರಿಮೂರ್ತಿಗಳ ರಚನೆಗಳೆಲ್ಲವೂ ಭಕ್ತಿ ಪ್ರಧಾನವಾದವು. ಹಾಗಾಗಿ ಭಕ್ತಿಯ ಅಭಿನಯಕ್ಕೆ ಅವುಗಳನ್ನು ಖಂಡಿತಾ ಬಳಸಬಹುದು. ನಾನು ಶಾಮಶಾಸ್ತ್ರಿಗಳ ಅಂಬ ಕಾಮಾಕ್ಷೀ ಮಾಡಿದ್ದೇನೆ. ಜನ ಅದನ್ನು ನೋಡುತ್ತಾ ಕಣ್ಣೀರಿಟ್ಟಿದ್ದಾರೆ. ದೀಕ್ಷಿತರ ಶ್ರೀಮಹಾಗಣಪತೇ ಸುರಪತೇ ಗ್ರೂಪ್‌ನಲ್ಲಿ ಮಾಡಿದ್ದೀನಿ. ತ್ಯಾಗರಾಜರ ಶಂಭೋ ಮಹಾದೇವ ಮಾಡಿದೆ.
ನೃತ್ಯ ಅಂದರೆ ಅದು ಕೇವಲ ಶೃಂಗಾರವಲ್ಲ. ಭಕ್ತಿಯೂ ಇದೆ. ನನ್ನ ದೃಷ್ಟಿಯಲ್ಲಿ ಎಲ್ಲ ರಸಗಳೂ ಒಟ್ಟಾಗಿ ಭಕ್ತಿಯಲ್ಲಿ ಸೇರಿಕೊಳ್ಳುತ್ತವೆ. ಅದು ಶಾಂತರಸದಲ್ಲಿ ಕೊನೆಗೊಳ್ಳುತ್ತದೆ. ತ್ಯಾಗರಾಜರಲ್ಲಿ, ಪುರಂದರದಾಸರಲ್ಲಿ ನಿಂದಾಸ್ತುತಿ ಇದೆ, ಪ್ರಶ್ನಿಸುತ್ತಾರೆ. ಆದರೆ ತ್ರಿಮೂರ್ತಿಗಳಲ್ಲಿ ಭಕ್ತಿಯೇ ಪ್ರಧಾನ. ನಾನು ತ್ಯಾಗರಾಜರ ವಿದುಲಕು ಮ್ರೊಕ್ಕೇದಾ ಮಾಡಲು ಹೊರಟಾಗ ಶತಾವಧಾನಿ ಗಣೇಶ್ ಮತ್ತು ಎಸ್ ಎನ್ ಚಂದ್ರಶೇಖರ್ ಇದೇನು ಭಾನುಮತಿಗೆ ತಲೆ ಇಲ್ಲವಾ ಇದನ್ನು ನೃತ್ಯಕ್ಕೆ ಆರಿಸಿಕೊಂಡಿದ್ದಾರಲ್ಲಾ. ನಾನು ಅವರು ತುಂಬಾ ಇಂಟೆಲಿಜೆಂಟ್ ಸಂಯೋಜಕಿ ಎಂದು ಕೇಳಿದ್ದೆ ಎಂದು ಕಾಮೆಂಟ್ ಮಾಡಿದರು. ನಾವು ಪ್ರಸ್ತುತಪಡಿಸಿದ್ದು ಏಳು ನಿಮಿಷಗಳ ಪೀಸ್. ಅದು ಮುಗಿದು ಮುಂದಿನ ಅನೌನ್ಸಸಮೆಂಟ್‌ಗೆ ನನ್ನ ಸೋದರ ಎದ್ದಾಗ ಗಣೇಶ್ ಎದ್ದು ಬಂದು ಮೈಕಿನಲ್ಲಿ ಹೇಳಿದರು, ಈ ಪ್ರಸ್ತುತಿ ಶುರುವಾದಾಗ ನಾನು ಮೇಲೆ ಹೇಳಿದಂತೆ ಟೀಕಿಸಿದ್ದೆ. ಆದರೆ ಈಗ ನನ್ನ ಮಾತನ್ನು ನಾನು ವಾಪಸ್ಸು ತೆಗೆದುಕೊಳ್ಳುತ್ತೇನೆ. ಈ ಕೃತಿಯನ್ನು ಈ ರೀತಿಯಲ್ಲಿ ವಿಷುಯಲೈಸ್ ಮಾಡಬಹುದು ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ. ಇದನ್ನು ಮದ್ರಾಸಿನಲ್ಲಿ ಮಾಡಿದಾಗ ಉಮಯಾಳಪುರಂ ಅವರು ಬಂದು ಏನಮ್ಮಾ ಮಾಡಿದ್ದೀಯಾ, ನನಗೆ ಈ ಹಾಡು ಎಂದರೆ ಅಷ್ಟು ಇಷ್ಟ. ಎಂಎಸ್ ಅಮ್ಮ ಹಾಡುವಾಗಲೆಲ್ಲಾ ಈ ಹಾಡನ್ನು ಹಾಡಿ ಎಂದು ನಾನು ಕೇಳಿಕೊಳ್ಳುತ್ತಿದ್ದೆ. ಆದರೆ ಈ ಹಾಡನ್ನು ಈ ರೀತಿಯಲ್ಲಿ ವಿಷುಯಲೈಸ್ ಮಾಡಬಹುದು ಎಂದು ಮಾತ್ರ ಕಲ್ಪಿಸಿಕೊಂಡಿರಲಿಲ್ಲ ಎಂದರು. ದೀಕ್ಷಿತರ ಚಂದ್ರಶೇಖರಂ ಭಜಾಮಿ ಸತತಂ ಕೂಡ ಹಾಗೆ ಮಾಡಬಹುದು. ತಾಂಡವ ಮಾಡುವ ನಾಲ್ಕು ಹುಡುಗರ ಗುಂಪು ಇದನ್ನು ಸೊಗಸಾಗಿ ಮಾಡುತ್ತಾರೆ. ಆ ಹುಡುಗರು ನಾದಾ ತನುಮನಿಷಂ ಕೂಡ ಸೊಗಸಾಗಿ ಮಾಡಿದ್ದಾರೆ.
ವಿದೇಶೀ ವಿದ್ಯಾರ್ಥಿಗಳಿಗೆ ಮತ್ತು ಇಲ್ಲಿನ ಭಾರತೀಯರಿಗೆ ಹೇಳಿಕೊಡುವಾಗ ನಿಮಗೆ ಏನಾದರೂ ವ್ಯತ್ಯಾಸವಿದೆ ಮತ್ತು ಶ್ರಮದಲ್ಲಿಯೂ ವ್ಯತ್ಯಾಸವಿದೆ ಅಂತ ಅನ್ನಿಸುತ್ತಾ?
ಸಾಮಾನ್ಯವಾಗಿ ಡಾನ್ಸ್ ಕಲಿಯಲು ಇಲ್ಲಿಗೆ ಬರುವ ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುತ್ತಾರೆ. ಅವರಲ್ಲಿ ಹೆಚ್ಚಿನವರಿಗೆ ಇಮೋಟ್ ಮಾಡಲು ಸಾಧ್ಯವಾಗುತ್ತದೆ ಆದರೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಒಬ್ಬ ಉಕ್ರೇನಿಯನ್ ಬಂದಳು ಅವಳಿಗೆ ಪ್ರತಿಯೊಂದೂ ನಮಗಿಂತ ಚೆನ್ನಾಗಿ ಗೊತ್ತಿತ್ತು. ಅವರಿಗೆ ನಮ್ಮ ಅಭಿನಯ ತುಂಬಾ ಇಷ್ಟವಾಗುತ್ತದೆ ಏಕೆಂದರೆ ಅವರ ನೃತ್ಯದಲ್ಲಿ ಅಭಿನಯ ಹೆಚ್ಚಾಗಿ ಇಲ್ಲ. ಅವರು ಯಾವಾಗಲೂ ನೃತ್ತಕ್ಕಿಂತ ಅಭಿನಯದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ನಮ್ಮ ಡಾನ್ಸಿನ ಹಿನ್ನೆಲೆ ಮತ್ತು ನಮ್ಮ ಪುರಾಣಗಳು ಗೊತ್ತಿಲ್ಲದಿರುವವರಿಗೆ ಹೇಳಿಕೊಡುವುದು ಹೆಚ್ಚು ಕಷ್ಟ. ಅಲ್ಲಿ ಬೆಳೆದಿರುವ ನಮ್ಮ ಎಷ್ಟೋ ಭಾರತೀಯ ಮಕ್ಕಳಿಗೆ ಏನೂ ಬರೋದೇ ಇಲ್ಲ. ಜೊತೆಗೆ ಅವರಿಗೆ ತುಂಬಾ ಆಟ್ಟಿಟ್ಯೂಡ್ ಇರುತ್ತೆ. ಅವರಿಗೂ ಬರಲ್ಲ.
ನಿಮ್ಮ ಗುಂಪಿನಲ್ಲಿ ಒಬ್ಬ ಕ್ರಿಶ್ಚಿಯನ್ನ ಹುಡುಗಿಯನ್ನು ಗಮನಿಸಿದೆ. ಅವಳಿಗೆ ಹೇಳಿಕೊಡುವಾಗ ನಿಮಗೆ ಕಷ್ಟವಾಯಿತೇ?
ಅವಳು ಜೋಸ್‌ಫಿನ್. ಕಷ್ಟವಾಗಲಿಲ್ಲ. ಅವಳೊಬ್ಬ ತಮಿಳು ಹುಡುಗಿ. ಅವರೆಲ್ಲರಿಗೂ ನಾನು ಕಥೆ ಹೇಳುತ್ತಾ ಇರುತ್ತೇನೆ. ಅವಳು ಕ್ರಿಶ್ಚಿಯನ್ ಇರಬಹುದು ಆದರೆ ಅವಳು ಇಂಡಿಯನ್. ತುಂಬಾ ವರ್ಸಟೈಲ್ ಹುಡುಗಿ. ಒಬ್ಬ ಒಳ್ಳೆಯ ಟೀಚರ್ ಯಾರನ್ನೂ ಜಾತಿಯ ದೃಷ್ಟಿಯಿಂದ, ಧರ್ಮದ ದೃಷ್ಟಿಯಿಂದ ಅಥವಾ ಉತ್ತರ ದಕ್ಷಿಣ ಎಂಬ ದೃಷ್ಟಿಯಿಂದ ಕಂಡೆಮ್ ಮಾಡುವುದಿಲ್ಲ. ಅವರಿಗೆ ಮುಖ್ಯವಾಗುವುದು ಆ ಮಗುವಿಗೆ ಮಾಡುವುದಕ್ಕೆ ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವುದು ಮಾತ್ರ. ಅಭಿನಯದ ವಿಷಯಕ್ಕೆ ಬಂದರೆ ನಿಮಗೆ ತುಂಬಾ ತಾಳ್ಮೆ ಇರಬೇಕು. ಇಲ್ಲವಾದಲ್ಲಿ ಅವರಿಂದ ಅದನ್ನು ಹೊರಡಿಸುವುದಕ್ಕಾಗುವುದಿಲ್ಲ. ಜೊತೆಗೆ ಕಲಿಯುವವರೂ ತುಂಬಾ ಶ್ರಮಪಡಬೇಕು.