Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ

ಸಂಗೀತವನ್ನರಸಿ ಹೊರಟ ಭೀಮಸೇನ

ಶೈಲಜ ಮತ್ತು ವೇಣುಗೋಪಾಲ್

ಸಾಮಾನ್ಯವಾಗಿ ’ಪ್ರಯಾಣ’ ಎನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರಲ್ಲಿ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತದ ಸಾಕ್ಷಾತ್ಕಾರವೇ ಆಗಿದೆ. ಇವರು ಹುಟ್ಟಿದ್ದು ೧೯೨೨ರ ಫೆಬ್ರುವರಿಯಲ್ಲಿ. ಅವರದ್ದು ಸಂಗೀತದ ಮನೆತನವಲ್ಲ. ಅಧ್ಯಯನಶೀಲತೆ ಮತ್ತು ವಿದ್ವತ್ತಿಗೆ ಹೆಸರಾದ ಮನೆ. ತಂದೆ ಗುರುರಾಜ ಜೋಶಿ ಬಹುಭಾಷಾ ಪಂಡಿತರು ಮತ್ತು ಶಿಕ್ಷಣತಜ್ಞರು. ಚಿಕ್ಕಪ್ಪ ಗೋವಿಂದಾಚಾರ್ಯರು ಪ್ರಖ್ಯಾತ ಮನೋಹರ ಗ್ರಂಥಮಾಲೆಯ ಸಂಸ್ಥಾಪಕರು.

ಎಳೆಯ ಕಿವಿಗಳಿಗೆ ಸ್ವರಗಳು ಬಿದ್ದದ್ದು ಅಮ್ಮ ಹಾಡುತ್ತಿದ್ದ ದೇವರನಾಮಗಳಿಂದ. ಮನೆಯ ಬಳಿಯ ಮಸೀದಿಯೊಂದರ ಅಲ್ಲಾ ಹೋ ಅಕ್ಬರ ಎಂಬ ಧ್ವನಿ ಎಳೆಯ ಕಿವಿಗೆ ಬೀಳುತ್ತಿತ್ತು. ಅದನ್ನು ಕೇಳಲು ಮಸೀದಿಯಲ್ಲಿ ಕುಳಿತಿದ್ದೂ ಉಂಟು. ಒಮ್ಮೆ ಮನೆಯ ಮುಂದೆ ಹಾದುಹೋಗುತ್ತಿದ್ದ ಮದುವೆಯ ಬಜಂತ್ರಿಯ ಹಿಂದೆ ಹೋಯಿತು ಐದು ವರ್ಷದ ಮಗು.

ಶಾಲೆಯಿಂದ ಬಂದ ಕೂಡಲೇ ಭೀಮಸೇನರು ಅಣ್ಣಾ ಭೂಸದರ ಗ್ರಾಮಾಫೋನ್ ಅಂಗಡಿಯಲ್ಲಿ ಕುಳಿತು ರಾತ್ರಿಯವರೆಗೂ ಸಂಗೀತ ಕೇಳುತ್ತಿದ್ದರು. ಒಂದು ಬಾರಿ ಅಮ್ಮ ’ಆಡಿಸಿದಳೆ ಯಶೋದಾ’ ಹಾಡುತ್ತಿದ್ದಾಗ ಅದರ ಧ್ವನಿಮುದ್ರಿಕೆ ಕೇಳಿದ್ದ ಮಗ ಈ ಹಾಡು ಹಿಂಗ ಅನ್ನೋದಲ್ಲ, ನಾ ಅಂದ ತೋರಸತೀನ ನೋಡು ಅಂದ. ಅವರಿಗೆ ಸಂಗೀತ ಕಲಿಸುವಂತೆ ಪ್ರೋತ್ಸಾಹಿಸಿದವರು ಹಣಮಂತರಾವ್. ಪ್ರತಿ ಗುರುವಾರ ಅವರ ಮನೆಯಲ್ಲಿ ನಡೆಯುತ್ತಿದ್ದ ಭಜನೆಯನ್ನು ಭೀಮಸೇನ ತಪ್ಪಿಸುತ್ತಿರಲಿಲ್ಲ. ಅವರಿಗೆ ಒಂಭತ್ತು ವರ್ಷವಾಗಿದ್ದಾಗ ತಂದೆ ಅವರಿಗೆ ಹಾರ್ಮೋನಿಯಂ ಕೊಂಡುಕೊಟ್ಟರು. ಭೀಮಸೇನರ ಮೊದಲ ಗುರು ಹುಲಕೋಟಿಯ ಚನ್ನಪ್ಪನವರು, ಅವರು ಸಾಂಗಲಿಯ ಇನಾಯತ್‌ಖಾನ್ ಹಾಗೂ ಪಂಚಾಕ್ಷರಿ ಬುವಾರಿಂದ ಸಂಗೀತ ಕಲಿತಿದ್ದರು. ಅಸಾಧಾರಣ ಗ್ರಹಣಶಕ್ತಿಯ ಜೋಶಿ ಬೇಗದಲ್ಲೇ ಹದಿನೈದು ಇಪ್ಪತ್ತು ರಾಗಗಳನ್ನು ಕಲಿತುಬಿಟ್ಟರು. ನಂತರ ಪಂಡಿತ ಶಾಮಾಚಾರ್ಯರಿಂದ ಗಾಯನ ಮತ್ತು ಹಾರ್ಮೋನಿಯಂ ಎರಡನ್ನೂ ಕಲಿತರು. ಇನ್ನೂ ಹೆಚ್ಚಿಗೆ ಕಲಿಯಬೇಕೆಂಬ ಬಯಕೆ ದಿನದಿಂದ ದಿನಕ್ಕೆ ಅವರಲ್ಲಿ ತೀವ್ರವಾಯಿತು.

ಬಾಲ್ಯದಲ್ಲಿ ತುಪ್ಪಕ್ಕಾಗಿ ಜಗಳವಾಡಿಕೊಂಡು ಅವರು ಮನೆ ಬಿಟ್ಟರು ಎನ್ನುತ್ತಾರೆ. ಆದರೆ ಅವರೇ ಹೇಳುವಂತೆ, ಅದು ಕೇವಲ ನೆವ ಆಗಿತ್ತು ಅಷ್ಟೆ. ನಾನು ಮನೆ ಬಿಡುವುದು ಅಂತ ಗಟ್ಟಿಯಾಗಿ ನಿರ್ಧರಿಸಿದ್ದೆ. ನಾನು ಓಡಿಹೋಗಿದ್ದು ಗುರುವಿನ ಹುಡುಕಾಟದಲ್ಲಿ. ನನಗೆ ೧೧ ವರ್ಷವಾಗಿದ್ದಾಗ ಉಸ್ತಾದ್ ಅಬ್ದುಲ್ ಕರೀಂಖಾನರ ’ಪಿಯಾ ಬಿನ್ ನಹಿ ಆವತ್ ಚೈನ್.’ ಎಂಬ ಧ್ವನಿಮುದ್ರಿಕೆ ಕೇಳಿದೆ. ಹಾಡಿದರೆ ಹೀಗೆ ಹಾಡಬೇಕೆಂದು ನಿಶ್ಚಯಿಸಿಕೊಂಡೆ. ನಮ್ಮ ಕಡೆ ಹೀಗೆ ಕಲಿಸುವಂತಹ ದೊಡ್ಡವರು ಯಾರೂ ಇದ್ದಿಲ್ಲ. ಅವರಿವರ ಬಾಯಲ್ಲಿ ಗ್ವಾಲಿಯರ್ ಹೆಸರು ಕೇಳಿದ್ದೆ. ಅಲ್ಲಿಗೇ ಹೋಗುವುದು ಅಂತ ಹೊರಟೆ. ಕೈಯಲ್ಲಿ ಒಂದು ಪೈಸೆ ಹಣವಿರಲಿಲ್ಲ. ಉದ್ದಕ್ಕೂ ಟಿಕೇಟಿಲ್ಲದ ಪ್ರಯಾಣ. ನಾನು ಕೆಲವು ಹಾಡುಗಳನ್ನು ಖ್ಯಾತನಾಮರು ಹಾಡಿದಂತೆಯೇ ಹಾಡುತ್ತಿದ್ದೆ. ಮಹಾರಾಷ್ಟ್ರದಲ್ಲಂತೂ ಎಲ್ಲರೂ ಸಂಗೀತಪ್ರೇಮಿಗಳು. ರೈಲಿನ ಸಂಗೀತಪ್ರೇಮಿ ಕಲೆಕ್ಟರ್‌ಗಳು ನನಗೆ ತೊಂದರೆ ಕೊಡಲಿಲ್ಲ. ಅಂತೂ ಇಂತು ಗ್ವಾಲಿಯರ್ ತಲುಪಿದೆ. ಅಲ್ಲಿ ಸುಮಾರು ಒಂದೂವರೆ ವರ್ಷ ಸರೋದ್‌ವಾದಕ ಅಮ್ಜದ್ ಅಲಿ ಅವರ ತಂದೆ ಹಾಫೀಸ್ ಅಲಿ ಅವರ ಬಳಿ ಇದ್ದೆ. ಗ್ವಾಲಿಯರ್ ಮಹಾರಾಜರು ಸಂಗೀತ ಕಲಿಯುತ್ತಿದ್ದವರಿಗೆ ಒಂದು ಹೊತ್ತಿನ ಊಟ ನೀಡುತ್ತಿದ್ದರು. ಬೆಳಿಗ್ಗೆ ಊಟ ಮಾಡಿಕೊಂಡು ಸಂಜೆ ಹೋಗಿ ಅವರ ರಿಯಾಜ್ ಕೇಳುತ್ತಿದ್ದೆ. ಪೂರಿಯಾ ಮತ್ತು ಮಾರ‍್ವಾ ರಾಗಗಳನ್ನು ಅವರಲ್ಲಿ ಕಲಿತೆ. ಆಗ ಯಾರೋ ಹೇಳಿದರು ಕಲ್ಕತ್ತೆಯಲ್ಲಿ ತುಂಬಾ ಸಂಗೀತವಿದೆ ಅಂತ. ಸರಿ ಕಲ್ಕತ್ತೆಯತ್ತ ನಡೆದೆ.

ಕಲ್ಕತ್ತೆಯಲ್ಲಿ ಖ್ಯಾತ ಗಾಯಕ ನಟ ಪಹಾಡಿ ಸೆನ್ಯಾಲ್ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅವರು ಸ್ಫುರದ್ರೂಪಿ ಜೋಶಿಯನ್ನೂ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು, ಆದರೆ ಭೀಮಸೇನರ ಒಲವೆಲ್ಲಾ ಸಂಗೀತದ ಕಡೆಗಿತ್ತು. ನಂತರ ಜಲಂಧರ್‌ನಲ್ಲಿ ಭಕ್ತ ಮಂಗತ್‌ರಾಮ್ ಬಳಿ ಧ್ರುಪದ್ ಕಲಿಯಲಾರಂಭಿಸಿದರು. ಜಲಂಧರಿನ ಪ್ರಖ್ಯಾತ ಹರಿವಲ್ಲಭ ಸಮಾರೋಹದಲ್ಲಿ ವಿನಾಯಕರಾವ್ ಪಟವರ್ಧನ್ ಅವರ ಭೇಟಿಯಾಯಿತು. ಅವರು ಗದಗದ ಸಮೀಪದ ಕುಂದಗೋಳದಲ್ಲಿದ್ದ ಉಸ್ತಾದ್ ಕರೀಂಖಾನ್ ಸಾಹೇಬರ ಶಿಷ್ಯ ಸವಾಯಿ ಗಂಧರ್ವರ ಬಳಿಗೆ ಜೋಶಿಯವರನ್ನು ಕಳಿಸಿದರು. ನಾನು ಗುರುಗಳ ಮನೆಯಲ್ಲಿಯೇ ಐದು ವರ್ಷಗಳಿದ್ದೆ. ಅವರು ಹಣ ತೆಗೆದುಕೊಳ್ಳಲಿಲ್ಲ. ಅವರ ಸೇವೆ ಮಾಡುತ್ತಿದ್ದೆ. ಶಾಲಾಕಾಲೇಜುಗಳಲ್ಲಿ ಕಲಾವಿದರು ಹುಟ್ಟಿಕೊಳ್ಳುವುದಿಲ್ಲ. ಕಲಾವಿದ ಹುಟ್ಟಬೇಕಾದರೆ ಹಗಲೂ ರಾತ್ರಿ ಗುರುವಿನ ಸಾಂಗತ್ಯದಲ್ಲಿ ಇರಬೇಕು. ಒಂದು ವಿಶ್ವಾಸವಿರಬೇಕು. ಅದು ಎಲ್ಲದಕ್ಕಿಂತ ದೊಡ್ಡ ವಸ್ತು. ಪ್ರತಿಯೊಬ್ಬ ಕಲಾವಿದನಿಗೂ ನಿಜವಾದ ಪ್ರಶಸ್ತಿ ಎಂದರೆ ಗುರುಕೃಪೆ ಮತ್ತು ಕಂಠ. ರಾಗಗಳನ್ನು ನಮ್ಮದು ಮಾಡಿಕೊಳ್ಳಬೇಕಾದರೆ ಮೊದಲು ಗುರು ಸಿಗಬೇಕು.

ಜೋಶಿಯವರ ಕಲಿಯುವ ದಾಹಕ್ಕೆ ಕೊನೆಯೇ ಇರಲಿಲ್ಲ. ರಾಂಪುರದಲ್ಲಿ ಉಸ್ತಾದ್ ಮುಷ್ತಾಕ್ ಹುಸೇನ್‌ಜೀ ಅವರ ಬಳಿ ಒಂದು ವರ್ಷ ಕಲಿತರು. ಠುಮ್ರಿ ಕೇಳುವ ಮತ್ತು ಕಲಿಯುವ ಉದ್ದೇಶದಿಂದಲೇ ಲಕ್ನೋಗೆ ಬಂದರು. ಬೇಗಂ ಅಖ್ತರ್, ರಸೂಲನ್ ಬಾಯಿ, ಮತ್ತು ಸಿದ್ಧೇಶ್ವರಿ ದೇವಿ ಅವರ ಠುಮ್ರಿ ಗಾಯನ ಕೇಳಿದರು. ಬೇಗಂ ಅಖ್ತರ್ ಅವರ ಶಿಫಾರಸ್ಸಿನ ಮೇರೆಗೆ ಅಲ್ಲಿನ ಆಕಾಶವಾಣಿಯ ನಿಲಯದ ಕಲಾವಿದರೂ ಆಗಿದ್ದರು. ಅವರ ಠುಮ್ರಿಗಾಯನದಲ್ಲಿ ಲಕ್ನೋದ ಪ್ರಭಾವ ತುಂಬಾ ಗಾಢವಾಗಿದೆ.

ಜೋಶಿಯವರ ತಾನ್ ಅತ್ಯಂತ ವಿಶೇಷ. ಅದರ ಹಿಂದೆ ಒಂದು ರೀತಿಯ ಗೂಂಜ್ ಇರುತ್ತದೆ. ಅವರ ತಾನ್ ತ್ರಿಸ್ಥಾಯಿಯಲ್ಲಿ ನಿರಾಯಾಸವಾಗಿ ಸಂಚರಿಸುತ್ತದೆ. ಅದು ತುಂಬಾ ಅಪರೂಪ. ಜೋಶಿ ಹೇಳುತ್ತಾರೆ, ನನ್ನ ಗಾಯನ ಮತ್ತು ನನ್ನ ಪ್ರತಿಯೊಂದು ತಾನ್ ಮೇಲೆ ಕೇಸರ್‌ಬಾಯಿಯ ಪ್ರಭಾವವಿದೆ. ಅದರಿಂದ ನನ್ನ ತಾನ್ ಹೀಗೆ ಬರುತ್ತದೆ. ಅದು ನನ್ನ ಅದೃಷ್ಟ. ಬಡೇ ಗುಲಾಂ ಅಲಿ ಖಾನ್, ಅಮೀರ್ ಖಾನ್, ಕೇಸರಬಾಯಿ ಕೇರ‍್ಕರ್ ಮುಂತಾದ ಎಲ್ಲಾ ಘರಾನೆಯ ಅತ್ಯಂತ ಒಳ್ಳೆಯ ಗಾಯಕರ ಸಂಗೀತ ಕೇಳಿದ್ದೇನೆ. ಭಾರತೀಯ ಸಂಗೀತದಲ್ಲಿ ಎಷ್ಟು ಘರಾನೆಗಳಿವೆಯೋ ಅವುಗಳಲ್ಲಿನ ಅತ್ಯುತ್ತಮ ಅಂಶಗಳೆಲ್ಲವನ್ನೂ ಮೇಳೈಸಿ ಜನಗಳ ಮುಂದಿಡಬೇಕೆಂಬುದು ನನ್ನ ಆಸೆ. ಒಬ್ಬ ಒಳ್ಳೆಯ ಕಲಾವಿದನಾಗಲು ನಮ್ಮದೊಂದು ಅಸ್ಮಿತೆಯನ್ನು ರೂಪಿಸಿಕೊಳ್ಳುವುದು ತುಂಬಾ ಮುಖ್ಯ. ಒಬ್ಬ ಒಳ್ಳೆಯ ಕಲಾವಿದ ಒಬ್ಬ ಚೋರ. ಗುರುಗಳ ಸಂಗೀತಕ್ಕೆ ಇತರ ಒಳ್ಳೆಯ ಸಂಗೀತದಿಂದ ಒಂದಿಷ್ಟನ್ನು ಸೇರಿಸಿಕೊಳ್ಳಬೇಕು. ನಮ್ಮ ಸ್ವಂತ ಕಲ್ಪನೆಯೂ ಅದಕ್ಕೆ ಸೇರಬೇಕು. ಗುರುವನ್ನು ಸಾರಾಸಗಟಾಗಿ ನಕಲು ಮಾಡುವುದು ಸುಲಭ. ಆದರೆ ನನ್ನ ಗಾಯನ ನನ್ನ ವ್ಯಕ್ತಿತ್ವದ ಅಭಿವ್ಯಕ್ತಿ ಮತ್ತು ನನ್ನ ಅಸ್ಮಿತೆ ಆಗಿರಬೇಕು. ನಾನು ನನ್ನ ಶಿಷ್ಯರಿಗೂ ನನ್ನಂತೆ ಹಾಡದೆ ನಿಮ್ಮ ಶೈಲಿಯಲ್ಲಿ ಹಾಡಿ. ನಿಮ್ಮ ಕಂಠದ ಮನೋಧರ್ಮ ಏನಿದೆಯೋ ಆ ರೀತಿ ಹಾಡಿ. ಆಗಷ್ಟೇ ಸಂಗೀತ ಮುಂದುವರಿಯುತ್ತದೆ ಮತ್ತು ಅದು ಸಮೃದ್ಧವಾಗಿರುತ್ತದೆ.

ಜನಪ್ರಿಯತೆ ಮತ್ತು ಖ್ಯಾತಿಯನ್ನು ಜೋಶಿಯವರಷ್ಟು ಧೀರ್ಘಕಾಲ ಅನುಭವಿಸಿದ ಸಮಕಾಲೀನ ಹಿಂದುಸ್ತಾನಿ ಗಾಯಕರಿಲ್ಲ. ಸಂಪ್ರದಾಯವನ್ನು ತುಂಬಾ ಗೌರವಿಸುತ್ತಿದ್ದ ಭೀಮಸೇನರು ಸಂಗೀತದಲ್ಲಿ ಸಾಂಪ್ರದಾಯಿಕವೆಂದು ಗೌರವಿಸಲ್ಪಟ್ಟಿರುವ ಮೌಲ್ಯಗಳು ಮತ್ತು ಸಮೂಹ-ಸಂಸ್ಕೃತಿಯ ಅಭಿರುಚಿಗಳ ನಡುವೆ ಸಮತೋಲನ ಸಾಧಿಸಿದರು. ಅದಕ್ಕೆ ಬೇಕಾದ ಶೈಲಿಯನ್ನು ರೂಪಿಸಿಕೊಂಡರು ಎನ್ನುತ್ತಾರೆ ವಿಮರ್ಶಕರು. ಹಲವಾರು ಶೈಲಿಗಳು ಹಾಗೂ ಪದ್ಧತಿಗಳು ಅವರ ಸಂಗೀತದಲ್ಲಿ ನವಿರಾಗಿ ಸೇರಿಕೊಂಡಿದೆ. ಅಮೀರ್‌ಖಾನರ ಸಂಗೀತ ಅವರನ್ನು ಪ್ರಭಾವಿಸಿದೆ. ಅವರ ದ್ರುತ್ ಗಾಯನದಲ್ಲಿ ಗ್ವಾಲಿಯರ್, ಅತ್ರೌಳಿ-ಜಯಪುರ ಮತ್ತು ಪಟಿಯಲಾಗಳಂತಹ ಭಿನ್ನ ಶೈಲಿಗಳ ರಸಮಿಶ್ರಣವನ್ನು ಕಾಣಬಹುದು.

ಸಾಮಾನ್ಯವಾಗಿ ಅವರು ಹಾಡುವುದು ಮಿಯಾ ಕಿ ತೋಡಿ, ಗುಜರಿ ತೋಡಿ, ಜೋಗಿಯಾ, ಕೋಮಲ ರಿಷಭ ಅಸಾವರಿ, ಗೌಡ ಸಾರಂಗ, ಬೃಂದಾವನಿ ಸಾರಂಗ, ಯಮನ್, ಯಮನ್‌ಕಲ್ಯಾಣ, ಶುದ್ಧ ಕಲ್ಯಾಣ, ಪೂರಿಯಾ ಕಲ್ಯಾಣ, ಮಾರು ಬಿಹಾಗ, ದರಬಾರಿ, ಅಭೋಗಿ, ಮಾಲಕಂಸ್ ಮುಂತಾದ ಕೆಲವೇ ರಾಗಗಳು. ತಮ್ಮ ಸ್ವಭಾವ ಮತ್ತು ತಮ್ಮ ಸಂಗೀತದ ಸ್ವರೂಪಗಳಿಗೆ ಈ ರಾಗಗಳು ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ಭೀಮಸೇನರು. ಸಂಕೀರ್ಣ ಮತ್ತು ವಿಚಿತ್ರವಾಗಿ ಕೇಳುವ ರಾಗಗಳನ್ನು ಕಚೇರಿ ವೇದಿಕೆಗಳ ಮೇಲೆ ನಿರೂಪಣೆ ಮಾಡುವುದು ಭೀಮಸೇನರಿಗೆ ಸುತರಾಂ ಇಷ್ಟವಿರಲಿಲ್ಲ. ರಾಗಾಲಾಪನೆ ಪ್ರಾರಂಭಿಸಿದ ತಕ್ಷಣ ರಾಗದ ಸ್ಪಷ್ಟ ಚಿತ್ರ ಮೂಡಬೇಕು. ಆಗ ಕೇಳುಗನಿಗೆ ಗೊಂದಲವಿರುವುದಿಲ್ಲ. ಗಾಯಕ ಹಾಗೂ ಕೇಳುಗನ ನಡುವಿನ ಸಂವಹನ ಸುಸೂತ್ರವಾಗುತ್ತದೆ. ಶಾಸ್ತ್ರೀಯ ಸಂಗೀತವನ್ನು ಆಕರ್ಷಕ ಮಾಡಿ ಪ್ರಸ್ತತ ಪಡಿಸಿದರೆ, ಜನರು ಮೆಚ್ಚಿಕೊಳ್ಳುತ್ತಾರೆ. ಎನ್ನುತ್ತಿದ್ದರು.

ಭೀಮಸೇನರನ್ನು ಆರಂಭದಿಂದಲೂ ಪೋಷಿಸಿದವರು ಮುಂಬೈನ ಮರಾಠಿ ಶ್ರೋತೃಗಳು. ಅವರೆಲ್ಲೂ ತಾನಪ್ರಧಾನವಾದ ನಾಟ್ಯ ಸಂಗೀತವನ್ನು ತುಂಬಾ ಮೆಚ್ಚಿಕೊಂಡಿದ್ದವರು. ಅವರಿಗಿದ್ದ ತಾನಕಾರಿಯ ಒಲವನ್ನು ತೃಪ್ತಿಪಡಿಸಲು ಜೋಶಿಯವರು ಶ್ರಮಿಸಿದರು. ಅವರು ಹೇಳಿದಂತೆ ಕೇಳುವ ಕಂಠ ಅವರಿಗಿತ್ತು. ಅದನ್ನು ಬಳಸಿಕೊಂಡರು. ಮರಾಠಾ ಶ್ರೋತೃಗಳ ಮೆಚ್ಚುಗೆ ಗಳಿಸಿಕೊಂಡರು. ಶಾಸ್ತ್ರೀಯ ಗಾಯಕರಾಗಿ ಪ್ರಸಿದ್ಧರಾದ ಮೇಲೆ ಮರಾಠಿ ಶ್ರೋತೃಗಳಿಗಾಗಿ ಜನಪ್ರಿಯ ಮರಾಠಿ ಪದಗಳನ್ನು, ಕನ್ನಡಿಗರಿಗಾಗಿ ಕನ್ನಡ ಭಕ್ತಿಗೀತೆಗಳನ್ನು ಹಾಡಲು ಪ್ರಾರಂಭಿಸಿದರು. ತಮ್ಮ ರಂಗು, ವೈವಿಧ್ಯ ಮತ್ತು ಹೊಳಪುಗಳಿಂದ ಸಂತವಾಣಿ ಅವರ ಜನಪ್ರಿಯತೆಯನ್ನು ವಿಪರೀತವಾಗಿ ಬೆಳೆಸಿತು.

ಹಿನ್ನೆಲೆಗಾಯನದಲ್ಲಿ ಅವರಿಗೆ ಒಲವಿರಲಿಲ್ಲ. ಶಾಸ್ತ್ರೀಯ ಸಂಗೀತವಿದ್ದ ಕೆಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ಮೊದಲು ಮರಾಠಿಯ ಗುಳಾಚಾ ಗಣಪತಿ, ಮೀ ತುಳಸೀ ತುಝಾ ಆಂಗಣಿ ಚಿತ್ರಗಳಿಗೆ ಹಾಡಿದರು. ಬಸಂತ್ ಬಹಾರ್ ಅವರು ಹಾಡಿದ ಮೊದಲ ಹಿಂದಿ ಸಿನಿಮಾ. ಭೈರವಿ, ಅನ್‌ಹೋನಿ, ಅನ್‌ಕಹೀ ಚಿತ್ರದಲ್ಲಿ ಹಾಡಿದ್ದಾರೆ. ರಘುವರ್ ತುಮ್‌ಕೋ ಮೇರಿ ಲಾಜ್ ಎಂಬ ಭಜನ್ ಗಾಯನಕ್ಕೆ ಪ್ರೆಸಿಡೆಂಟ್ಸ್ ಅವಾರ್ಡ್ ಲಭಿಸಿತು. ಕನ್ನಡದ ಸಂಧ್ಯಾರಾಗ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಮಕ್ಕಳಿರಲವ್ವಾ ಮನೆ ಇವುಗಳಲ್ಲಿಯೂ ಹಾಡಿದ್ದಾರೆ.

ತಮ್ಮ ವೃತ್ತಿಬದುಕಿನ ನಡುವಿನಲ್ಲಿ ಅಂಟಿದ ಕುಡಿತದ ಚಟ ಅವರ ಸಂಗೀತದ ಮೇಲೂ ಪರಿಣಾಮ ಬೀರಿತು. ಇದರ ಅರಿವು ಅವರಿಗೂ ಇತ್ತು. ಕುಡಿತದಿಂದಾಗಿ ಕೆಲವೊಮ್ಮೆ ನನ್ನ ಕಾರ್ಯಕ್ರಮಗಳು ಕೂಡ ಕೆಟ್ಟು ಹೋಗುತ್ತಿದ್ದವು. . . . . ಗಾಯನ ಎಷ್ಟು ಸೂಕ್ಷ್ಮ ಕೆಲಸವೆಂದರೆ, ಕುಡಿದ ಮೇಲೆ ಅದನ್ನು ಮಾಡಲಾಗದು. ನೀವು ನಿಮ್ಮ ಕಲೆಯ ಮೇಲೆ ಅಗತ್ಯವಾದ ಹಿಡಿತ ಇಟ್ಟುಕೊಳ್ಳಲಾರಿರಿ, ಎಂದಿದ್ದರು.

ಕ್ರಮೇಣ ಬದಲಾದ ಅವರ ಸಂಗೀವನ್ನು ಕಲಾವಿಮರ್ಶಕ ಮೋಹನ್ ನಾಡಕರ್ಣಿಯವರು ಸ್ವಲ್ಪ ವಿಮರ್ಶಾತ್ಮಕವಾಗಿ ನೋಡುತ್ತಾರೆ. ಐವತ್ತರ ದಶಕದ ಆರಂಭದಿಂದ ಭೀಮಸೇನರ ಗಾಯನದಲ್ಲಿ ಖಯಾಲ ನಿರೂಪಣೆಯ ವಿಧಾನ ಬದಲಾಯಿತು. ವಿಲಂಬಿತದಲ್ಲಿ ಅವರ ಆಲಾಪ ಶ್ರೇಷ್ಠವಾಗಿರುತ್ತಿತ್ತು. ಆದರೆ ಕ್ರಮೇಣ ದ್ರುತಕಾಲದ ಗೀಳಿನಿಂದಾಗಿ ಆರಂಭದಲ್ಲಿ ಅರಳಿದ್ದ ಗಂಭೀರ ಶಾಂತ ವಾತಾವರಣ ಸಂಪೂರ್ಣ ನಾಶವಾಗದಿದ್ದರೂ ಕ್ರಮೇಣ ಕಲುಷಿತಗೊಳ್ಳುತ್ತಿತ್ತು. ಅವರ ವಿಲಂಬಿತ ಖಯಾಲ್‌ಗಳು ಕ್ರಮೇಣ ಹೆಚ್ಚು ಚಿಕ್ಕವಾದವು. ಬೇರೆ ಬೇರೆ ಸ್ವರಗಳಿಗೆ ಸಮ್ ಅನ್ನು ಬದಲಾಯಿಸುವ ಹೊಸ ಪದ್ಧತಿಯನ್ನೂ ಅವರು ಆರಂಭಿಸಿದರು. ಒಟ್ಟಂದದಲ್ಲಿ ಭೀಮಸೇನರು ಪ್ರಾಯಶಃ ಇಪ್ಪತ್ತನೆಯ ಶತಮಾನದ ಜೀವನ ಮತ್ತು ವಿಚಾರಕ್ಕನುಗುಣವಾಗಿ ಖಯಾಲ ಗಾಯನದ ಶೈಲಿಯಲ್ಲಿ ಮಹತ್ತರ ಮರುಹೊಂದಿಕೆ ತಂದರು.

ಸಂಗೀತವಲ್ಲದೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಜೋಶಿಯವರಿಗೆ ಅಪಾರ ಪ್ರತಿಭೆಯಿತ್ತು. ತಾವು ಸಂಗೀತಗಾರ ಆಗದೇ ಹೋಗಿದ್ದರೆ ಕಾರ್ ಮೆಕ್ಯಾನಿಕ್ ಆಗುತ್ತಿದ್ದೆ ಅಂತಲೂ ಹೇಳಿಕೊಂಡಿದ್ದಾರೆ. ಅವರಿಗೆ ಡ್ರೈವಿಂಗ್ ಒಂದು ಗೀಳಾಗಿತ್ತು. ಸೊಗಸಾಗಿ ಕಾರನ್ನು ರಿಪೇರಿಯನ್ನು ಮಾಡಬಲ್ಲವರಾಗಿದ್ದರು. ನಾಟಕಗಳಲ್ಲೂ ನಟಿಸಿದ್ದಾರೆ. ನಾಟಕಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಹೊಸ ರಾಗಗಳು ಬೇಕು ಎಂದ ನಿರ್ದೇಶಕರಿಗಾಗಿ ಕಲಾಶ್ರೀ, ಲಲಿತ್‌ಭಟಿಯಾರ್, ಮಾರವಾಶ್ರೀ ಇಂತಹ ರಾಗಗಳನ್ನು ಸೃಷ್ಟಿಸಿದರು. ಅವರೊಬ್ಬ ಒಳ್ಳೆಯ ಯೋಗಪಟು. ಸೊಗಸಾಗಿ ಈಜುತ್ತಿದ್ದರು ಮತ್ತು ಫುಟ್‌ಬಾಲ್ ಆಡುತ್ತಿದ್ದರು. ಒಳ್ಳೆಯ ಸಂಘಟಕರೂ ಕೂಡ. ಪುಣೆಯಲ್ಲಿ ಪ್ರತಿವರ್ಷವೂ ಸವಾಯಿ ಗಂಧರ್ವರ ಹೆಸರಿನಲ್ಲಿ ಬೃಹತ್ ಸಂಗೀತ ಸಮಾರೋಹವನ್ನು ನಡೆಸುತ್ತಿದ್ದರು. ಮಾಧವ ಗುಡಿ, ವಿನಾಯಕ ತೊರವಿ, ನಾಗರಾಜ ಹವಾಲ್ದಾರ್, ಶ್ರೀನಿವಾಸ ಜೋಶಿ, ಶ್ರೀಕಾಂತ ದೇಶಪಾಂಡೆ ಅಂತಹ ಶಿಷ್ಯರನ್ನು ಹೊಂದಿದ್ದರು.

ಭಾರತರತ್ನವೂ ಸೇರಿದಂತೆ ಬಹುಪಾಲು ಪ್ರತಿಷ್ಠಿತ ಪ್ರಶಸ್ತಿಗಳೆಲ್ಲಾ ಅವರಿಗೆ ಲಭಿಸಿವೆ. ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಶ್ರೋತೃಗಳ ಸಮೂಹವೇ ಇತ್ತು. ಇಂದು ಜೋಶಿಯವರಿದ್ದರೆ ನೂರು ವರ್ಷವಾಗುತ್ತಿತ್ತು. ಭೀಮಸೇನರು ಕಿರಾಣಾ ಘರಾಣೆಗೆ ಗಮನಾರ್ಹ ಮಾರ್ಪಾಡನ್ನು ಮತ್ತು ಖಯಾಲ ಗಾಯಕಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ಅವರದು ಬಂಡಾಯಗಾರನ ಮನಸ್ಸಲ್ಲ, ಪಾರಂಪರಿಕ ಸಂಗೀತವನ್ನು ಕುರಿತಂತೆ ಅಪಾರ ನಂಬಿಕೆಯನ್ನು ಉಳಿಸಿಕೊಂಡು ಬದಲಾವಣೆಗೆ ಹಾತೊರೆಯುವ ಮೌನ ಸುಧಾರಕನ ಮನಸ್ಸು.

೨೭/೦೧/೨೦೨೧
ಸಿಹೆಚ್ ೭೩, ೭ನೇ ಮುಖ್ಯರಸ್ತೆ
ಸರಸ್ವತೀಪುರಂ
ಮೈಸೂರು – ೫೭೦-೦೦೯
ಸೆಲ್ ನಂ ೯೯೦೦೦೮೨೭೭೩