ಶೈಲಜಾ
ಸಂಗೀತ ಲೋಕದ ಮಾತೃದೇವತೆ ಎನಿಸಿಕೊಂಡು ಬದುಕಿದ್ದಾಗಲೇ ಒಂದು ಐತಿಹ್ಯವಾಗಿದ್ದ ಧನಮ್ಮಾಳ್ ತನ್ನ ಸಮಕಾಲೀನರು ಮತ್ತು ಮುಂದಿನ ಪೀಳಿಗೆಯವರಲ್ಲಿ ಗೌರವ, ಭಯ, ಬೆರಗನ್ನು ಹುಟ್ಟಿಸಿದ ಅಸಾಧಾರಣ ಕಲಾವಿದೆ. ಸಂಗೀತದ ಉತ್ಕೃಷ್ಟತೆಗೆ ಇಂದಿಗೂ ಒಂದು ರೆಫರೆನ್ಸ್ ಪಾಯಿಂಟ್. ಆನೆ ನಡೆದದ್ದೇ ದಾರಿ.-ಸಂ.
ಧನಮ್ಮಾಳ್ ಹುಟ್ಟಿದ್ದು ೧೮೬೮ರಲ್ಲಿ ಮದ್ರಾಸಿನ ಜಾರ್ಜ್ ಟೌನಿನ ನಾಟ್ಟು ಪಿಳ್ಳೈಯಾರ್ ರಸ್ತೆಯಲ್ಲಿ. ಸಮುದಾಯದ ನೆನಪಿನಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದ ಏಳು ತಲೆಮಾರುಗಳ ಇತಿಹಾಸ ವೀಣಾ ಧನಮ್ಮಾಳ್ ಕುಟುಂಬಕ್ಕಿತ್ತು. ವೀಣಾ ಧನಮ್ಮಾಳ ಅಜ್ಜಿಯ ಅಜ್ಜಿ ಪಾಪಮ್ಮಾಳ್ ತಂಜಾವೂರು ರಾಜಾಸ್ಥಾನದ ಸಂಗೀತ ವಿದುಷಿ ಮತ್ತು ರಾಜನರ್ತಕಿಯಾಗಿದ್ದಳು. ಧನಮ್ಮಾಳ ಅಜ್ಜಿ ಕಾಮಾಕ್ಷಮ್ಮ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ಯಾಮ ಶಾಸ್ತ್ರಿಯವರ ಶಿಷ್ಯೆಯಾಗಿದ್ದಳು. ಧನಮ್ಮಾಳ ತಾಯಿ ಸುಂದರಮ್ಮ ಶಾಮಾಶಾಸ್ತ್ರಿಗಳ ಮಗ ಸುಬ್ಬರಾಯ ಶಾಸ್ತ್ರಿಗಳ ಶಿಷ್ಯೆ.
ಧನಮ್ಮಾಳರ ಕಾಲಕ್ಕೆ ವಸಾಹತು ಆಡಳಿತ, ಕ್ರೈಸ್ತ ಮಿಷನರಿಗಳ ಪ್ರಭಾವ ಹಾಗೂ ಪ್ರಚಾರದಿಂದ ನೃತ್ಯದಿಂದ ಸಾಮಾಜದಲ್ಲಿ ನೈತಿಕ ಅಧಃಪತನವಾಗುತ್ತದೆ ಎನ್ನುವ ಅಭಿಪ್ರಾಯ ಬಲವಾಗುತ್ತಿತ್ತು. ಬಹುತೇಕ ಹೆಚ್ಚಿನ ದೇವದಾಸಿಯರು ನೃತ್ಯವನ್ನು ಬಿಟ್ಟು ಸಂಗೀತದತ್ತ, ಸಿನಿಮಾದಲ್ಲಿ ನಟನೆ ಮತ್ತು ಹಿನ್ನೆಲೆಗಾಯನದತ್ತ ಹೊರಳಿಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಧನಮ್ಮಾಳರ ಅಜ್ಜಿ ಕಾಮಾಕ್ಷಿಯಮ್ಮ ಬದುಕನ್ನು ಅರಸುತ್ತಾ ತಂಜಾವೂರಿನಿಂದ ಮದ್ರಾಸಿಗೆ ಬಂದರು. ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ಅವರಿಗೆ ಆಶ್ರಯನೀಡಿ ಪೋಷಕರಾದರು. ಧನಮ್ಮಾ ಮತ್ತು ಅವರ ಸಹೋದರಿ ರೂಪವತಿ ಇಬ್ಬರೂ ಹಾಡುಗಾರಿಕೆ ಕಲಿತರು. ತಾಯಿ ಮತ್ತು ಅಜ್ಜಿಯಿಂದ ಶಾಮಾಶಾಸ್ತ್ರಿ, ಸುಬ್ರಾಯಶಾಸ್ತ್ರಿಗಳ ಕೃತಿಗಳೆಲ್ಲವನ್ನೂ ಅಕ್ಕತಂಗಿಯರಿಬ್ಬರೂ ಕಲಿತರು. ಧನಮ್ಮಾಳ ಧ್ವನಿ ತುಂಬಾ ಮಧುರವಾಗಿತ್ತು. ಆದರೆ ಒಳ್ಳೆಯ ಗಾತ್ರವಿರಲಿಲ್ಲ. ಧನಮ್ಮಾಳ ಧ್ವನಿ ವೀಣೆಯ ನಾದದೊಂದಿಗೆ ಸೊಗಸಾಗಿ ಹೊಂದಿಕೊಳ್ಳುತ್ತದೆ ಎನ್ನುವ ಕಾರಣಕ್ಕಾಗಿ ವೀಣೆ ಕಲಿಯುವಂತೆ ಅಜ್ಜಿ ಧನಮ್ಮಾಳಿಗೆ ಸಲಹೆ ನೀಡಿದರು. ಆದರೆ ಧನಮ್ಮಾಳಿಗೆ ಒಂದು ವಾದ್ಯವಾಗಿ ವೀಣೆಯ ಬಗ್ಗೆ ತನ್ನದೇ ಆದ ಅನುಮಾನಗಳಿದ್ದವು. ಆ ತನಕ ಅವರು ಕೇಳಿದ ವೀಣೆಯಲ್ಲವೂ ಹಾಸಿಗೆ ಹೊಲೆಯುವವರು ಹತ್ತಿಯನ್ನು ಶುದ್ಧ ಮಾಡುವಾಗ ಬಳಸುವ ಪಿಂಜರಾದ ಠೋಯ್ ಠೋಯ್ ಎಂಬ ಅಸಹನೀಯವಾದ ಸದ್ದಿನಂತಿತ್ತು. ಈ ಸಂದರ್ಭದಲ್ಲಿ ಅವರಿಗೆ ಮದ್ರಾಸಿನಲ್ಲಿ ಕಲ್ಯಾಣಕೃಷ್ಣ ಭಾಗವತರ ವೀಣಾವಾದನವನ್ನು ಕೇಳುವ ಅವಕಾಶ ಒದಗಿತು. ಅಂದು ಅವರ ಮನಸ್ಸು ಒಂದು ದೃಢ ನಿರ್ಧಾರಕ್ಕೆ ಬಂದಿತು. ಅದೇ ಕೊನೆ ಅವರು ಅವರ ಸಹೋದರಿ ರೂಪವತಿಯೊಂದಿಗೆ ಹಾಡಿದ್ದು. ಅಳಗಸಿಂಗ್ರಾಚಾರ್ ಅವರ ಬಳಿ ವೀಣೆಯ ಶಿಕ್ಷಣ ಪ್ರಾರಂಭವಾಯಿತು.
ಸಂಗೀತ ಪ್ರಪಂಚದ ಹಲವು ದೈತ್ಯರು ಮತ್ತು ದಿಗ್ಗಜರು ಧನಮ್ಮಾಳ ಸಾಂಗೀತಿಕ ಬದುಕನ್ನು ರೂಪಿಸಿದರು. ಸಾತ್ತನೂರ್ ಪಂಚನದಯ್ಯರ್ (ದೀಕ್ಷಿತರ ಶಿಷ್ಯರು) ತಾನದ ತಂತ್ರಗಾರಿಕೆಯನ್ನು ಕಲಿಸಿದರು. ತಾಯಿ ಮತ್ತು ಅಜ್ಜಿಯಿಂದ ಸಂಗೀತ ತ್ರಿಮೂರ್ತಿಗಳ ಕೃತಿಭಂಡಾರವನ್ನೇ ತಮ್ಮದನ್ನಾಗಿಸಿಕೊಂಡರು. ಅಸಂಖ್ಯಾತ ವರ್ಣಗಳನ್ನು ಕಲಿತರು. ವರ್ಣಗಳು ಅವರ ವಿಶೇಷ ಪರಿಣತಿಯ ಕ್ಷೇತ್ರವೂ ಆಗಿತ್ತು. ಪುರಂದರದಾಸರ ದೇವರನಾಮಗಳು ಮತ್ತು ತಮಿಳು ವಾಗ್ಗೇಯಕಾರರ ಕೃತಿಗಳನ್ನು ಕಲಿತರು. ಆಧುನಿಕ ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಧನಮ್ಮಾಳ್ ಬಿಟ್ಟರೆ ಯಾವುದೇ ಒಬ್ಬ ವ್ಯಕ್ತಿ ಇಷ್ಟೊಂದು ಕೃತಿಗಳನ್ನು ಕಲಿತಿರುವ ನಿದರ್ಶನವೇ ಇಲ್ಲ. ಧನಮ್ಮಾಳ್ ಒಂದು ಅಪರೂಪದ ಉದಾಹರಣೆ. ಅವರು ಸಂಗೀತದ ವಿಶ್ವಕೋಶದಂತಿದ್ದರು. ಮೂರು ತಲೆಮಾರಿನ ಸಂಗೀತದಲ್ಲಿ ಆದ ಬೆಳವಣಿಗೆ, ಬದಲಾವಣೆಗೆ ಅವರು ಧನಮ್ಮಾಳ್ ಜೀವಂತ ದಾಖಲೆಯಾಗಿದ್ದರು. ಆ ಕಾಲದಲ್ಲಿ ಪದಂ ಪ್ರಸ್ತುತಿಗೆ ತುಂಬಾ ಹೆಸರುವಾಸಿಯಾಗಿದ್ದ, ಪದಂ ಬಾಲದಾಸ್ ತಾವು ಗೌರಿ ಅಮ್ಮಾಳ್ ಅವರಿಂದ ಕಲಿತಿದ್ದನ್ನೆಲ್ಲಾ ಧನಮ್ಮಾಳಿಗೆ ಧಾರೆ ಎರೆದರು. ಧನಮ್ಮಾಳ ಮಿಂಚಿನಂತಹ ಗ್ರಹಣಶಕ್ತಿಯನ್ನು ನೋಡಿ ಅವರಿಗೆ ಬೆಂಕಿಪೊಟ್ಟಣ ಎಂಬ ಅಡ್ಡಹೆಸರಿಟ್ಟಿದ್ದರು. ಅವರು ಘನಂ ಕೃಷ್ಣಯ್ಯರ್ ಮತ್ತು ಸುಬ್ಬು ಅಯ್ಯರ್ ಅವರ ತಮಿಳು ಪದಗಳನ್ನು ಪದಂ ಪೊನ್ನುಸ್ವಾಮಿಯಿಂದ ಕಲಿತರು. ತನ್ನ ಸಮಕಾಲೀನರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮತ್ತು ನೈನಾ ಪಿಳ್ಳೆ ಅವರ ಒಡನಾಟದಲ್ಲಿ ಧನಮ್ಮಾ ತನ್ನ ಸಂಗೀತಜ್ಞಾನದ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡರು. ಆ ಕಾಲದಲ್ಲಿ ಆರು ಭಾಷೆಗಳಲ್ಲಿದ್ದ ಸಂಗೀತರಚನೆಗಳನ್ನು ಅರ್ಥವರಿತು, ತಪ್ಪಿಲ್ಲದೆ ಹಾಡುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು.
ಧನಮ್ಮಾಳ್ ವೀಣಾವಾದನವನ್ನು ತನ್ನ ಕ್ಷೇತ್ರವನ್ನಾಗಿ ಆಯ್ಕೆಮಾಡಿಕೊಂಡಿದ್ದು ಕೂಡ ಒಂದು ವಿಶೇಷ. ಏಕೆಂದರೆ ವೀಣಾವಾದನ ಹೆಚ್ಚುಕಡಿಮೆ ಗಂಡಸರ ಏಕಸ್ವಾಮ್ಯವಾಗಿತ್ತು. ತಂಜಾವೂರು, ಮೈಸೂರು, ಆಂಧ್ರದಲ್ಲಿ ಆಗ ಇದ್ದ ಅತ್ಯಂತ ಪ್ರತಿಭಾವಂತ ವೈಣಿಕರೆಲ್ಲರೂ ಪುರುಷರೇ – ಕಾರೈಕುಡಿ ಸಹೋದರರು, ವೀಣಾ ಶೇಷಣ್ಣ ಮತ್ತು ಸುಬ್ಬಣ್ಣ, ವಿಜಯನಗರಂನ ವೀಣಾ ವೆಂಕಟರಮಣದಾಸರು ಮುಂತಾದವರು.
ತಂಜಾವೂರು ಬಾನಿಯ ಪ್ರಮುಖ ಪ್ರತಿನಿಧಿಯಾದ ಧನಮ್ಮಾಳ ಪ್ರಕಾರ ವೀಣೆಯು, ಗಾಯನ ಶೈಲಿಗೆ ಅತ್ಯಂತ ಹತ್ತಿರವಿರಬೇಕಿತ್ತು. ಹೆಚ್ಚುಕಡಿಮೆ ಗಾಯನವನ್ನು ಅನುಕರಿಸಬೇಕಿತ್ತು. ಮಾನವ ಶಾರೀರವು ಹೊರಹೊಮ್ಮಿಸುವ ಪ್ರತಿಯೊಂದು ಗಮಕದ ವಿಶಿಷ್ಟತೆಯನ್ನು ಮತ್ತು ಕೃತಿಯ ಸಾಹಿತ್ಯದ ಪ್ರತಿಯೊಂದು ಅಕ್ಷರವನ್ನೂ ವೀಣಾವಾದನವು ಬಿಂಬಿಸಬೇಕು ಎನ್ನುವುದು ಧನಮ್ಮಾಳ ಅಭಿಪ್ರಾಯವಾಗಿತ್ತು. ಆದರೆ ಮಾನವ ಶಾರೀರಕ್ಕೆ ಸಾಧ್ಯವಾಗುವ ನಿರಂತರತೆಯನ್ನು ವೀಣೆಯಲ್ಲಿ ಮೂಡಿಸುವುದು ತುಂಬಾ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅದನ್ನು ವೀಣೆಯಲ್ಲಿ ಸಾಧಿಸಲು ಒಂದು ವಿಶೇಷವಾದ ನುಡಿಸಾಣಿಕೆಯ ತಂತ್ರವನ್ನೇ ಧನಮ್ಮಾಳ್ ರೂಪಿಸಿಕೊಳ್ಳಬೇಕಾಯಿತು. ಹಾಗಾಗಿಯೇ ಅವರು ಮೀಟುಗಳನ್ನು ಆದಷ್ಟು ಕಡಿಮೆಮಾಡಿಕೊಂಡು ಒಂದು ಮನೆಯೊಳಗೇ ಹಲವಾರು ಸ್ವರಗಳನ್ನು ಎಳೆದು ನುಡಿಸುವ ಭಿನ್ನವಾದ ನುಡಿಸಾಣಿಕೆಯನ್ನು ರೂಢಿಸಿಕೊಂಡರು. ಮೈಸೂರು ಮತ್ತು ಆಂಧ್ರ ಬಾನಿಗಳು ವೀಣೆಗೆ ಒಂದು ವಾದ್ಯವಾಗಿ ವಿಶೇಷ ಅಸ್ಮಿತೆಯನ್ನು ನೀಡುವ ದಿಕ್ಕಿನಲ್ಲಿ ಚಿಂತನೆಯನ್ನು ನಡೆಸಿತು. ಅವರ ಪ್ರಕಾರ ವೀಣೆಯ ಉದ್ದೇಶ ಮಾನವಶಾರೀರವನ್ನು ಅನುಕರಿಸುವುದಾಗಿರಲಿಲ್ಲ. ವೀಣೆಯಲ್ಲಿ ದ್ರುತಕಾಲದ ಲಯವನ್ನು ಸಾಧಿಸುವತ್ತ ಅವರು ಗಮನ ಹರಿಸಿದರು. ಹಾಗಾಗಿಯೇ ಧನಮ್ಮಾಳ್ ಅವರ ವಾದನ ಶೈಲಿ ಇವರೆಲ್ಲರ ಶೈಲಿಗಿಂತ ಭಿನ್ನವಾಗಿತ್ತು
ಇಷ್ಟೆಲ್ಲಾ ಪ್ರತಿಭೆಯಿದ್ದರೂ ನೆರವಲ್ ಮತ್ತು ಕಲ್ಪನಾಸ್ವರಗಳ ಬಗ್ಗೆ ಧನಮ್ಮಾಳ್ ತಲೆಕಡೆಸಿಕೊಂಡಿರಲಿಲ್ಲ. ಅವರು ನೆರವಲ್ ಮಾಡುತ್ತಿದ್ದುದು ತುಂಬಾ ಅಪರೂಪ. ಅವರ ಪ್ರಕಾರ ಮಹಾನ್ ವಾಗ್ಗೇಯಕಾರರು ರಚಿಸಿರುವ ಕೃತಿಗಳ ಸಂಗತಿಗಳಲ್ಲಿ ಸೊಗಸಾದ ರಾಗಭಾವ ಈಗಾಗಲೇ ಇದೆ. ಹಾಗಾಗಿ ಮನೋಧರ್ಮವನ್ನು ಅವರು ರಾಗಾಲಾಪನೆಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ರಾಗವನ್ನು ಅತ್ಯಂತ ವ್ಯವಸ್ಥಿತವಾಗಿ ವಿಸ್ತರಿಸುತ್ತಿದ್ದರು. ಅವರ ವ್ಯಕ್ತಿತ್ವದ ವಿಶಿಷ್ಟ ಛಾಪು ಅವರ ಆಲಾಪನೆ ಮತ್ತು ಕೃತಿಯ ಪ್ರಸ್ತುತಿಯಲ್ಲಿ ಸ್ಪಷ್ಟವಾಗಿ ಮೂಡಿಬರುತ್ತಿತ್ತು.
ವಿಳಂಬಕಾಲ ಧನಮ್ಮಾಳ್ ಬಾನಿಯ ಹೆಗ್ಗುರುತಾಗಿತ್ತು. ಅಷ್ಟೇ ಅಲ್ಲ ಅದನ್ನು ಅವರು ಸಂಗೀತದ ಮೂಲ ಲಕ್ಷಣ ಎಂದು ಭಾವಿಸಿದ್ದರು. ಅವರ ಮೊಮ್ಮಗಳು ಬೃಂದಾ, ಕಾಂಚೀಪುರಂ ನೈನಾ ಪಿಳ್ಳೆಯವರಲ್ಲಿ ಸಂಗೀತವನ್ನು ಕಲಿತಾಗ ದ್ರುತಗತಿಯಲ್ಲಿ ಹಾಡುವುದು ಆಕೆಗೆ ಅಭ್ಯಾಸವಾಯಿತು. ಅಲ್ಲಿಂದ ವಾಪಸ್ಸು ಬಂದು ಅಜ್ಜಿಯ ಮುಂದೆ ಹಾಡಿದಾಗ ಅವರು ವ್ಯಂಗ್ಯವಾಗಿ, ಅದ್ಯಾಕೆ ಇಷ್ಟು ಓಡುತ್ತಿದ್ದೀಯೆ? ನೀನೇನಾದರೂ ಬೋಟ್ ಟ್ರೇನ್ ಹತ್ತಬೇಕಾಗಿದೆಯೇ? ಎಂದು ಕೇಳಿದರು. (ಕೊಲೊಂಬೋನಿಂದ ಇಂಗ್ಲೆಂಡಿಗೆ ಹೋಗಬೇಕಾದ ಪ್ರಯಾಣಿಕರನ್ನು ಮದ್ರಾಸಿನಿಂದ ಕೊಲೊಂಬೋಗೆ ಕೊಂಡೊಯ್ಯುತ್ತಿದ್ದ ರೈಲು).
ಧನಮ್ಮಾಳ್ ವೀಣೆ ನುಡಿಸುವಾಗ ತಂಬೂರಿಯ ಶ್ರುತಿ ಬಿಟ್ಟು ಬೇರೇನನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ವೀಣೆಯ ಮೃದು ಮಧುರ ನಾದವನ್ನು ಮುಚ್ಚಿಹಾಕುತ್ತದೆ ಎಂದು ಪಕ್ಕವಾದ್ಯಕ್ಕೆ ಮೃದಂಗ ಇಟ್ಟುಕೊಳ್ಳುತ್ತಲೇ ಇರಲಿಲ್ಲ. ವೀಣೆಯ ರಚನೆ ತನ್ನಲ್ಲೇ ತಾಳವನ್ನು ಒಳಗೊಂಡಿದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಜೊತೆಗೆ ಇನ್ನೂ ಒಂದು ಕಾರಣವಿದ್ದಿರಬಹುದು. ಆ ಕಾಲದಲ್ಲಿ ಹೆಂಗಸರಿಗೆ ಪಕ್ಕವಾದ್ಯ ನುಡಿಸುವುದರ ಬಗ್ಗೆ ಸಾಕಷ್ಟು ಹಿಂಜರಿಕೆಗಳಿದ್ದವು. ಹೆಂಗಸರಿಗೆ ಪಕ್ಕವಾದ್ಯ ನುಡಿಸುವುದಕ್ಕೆ ಬಹುತೇಕ ಗಂಡಸರು ಒಪ್ಪುತ್ತಿರಲಿಲ್ಲ. ಹಾಗಾಗಿ ಹೆಂಗಸರು ಪಕ್ಕವಾದ್ಯಕ್ಕೆ ತಮ್ಮದೇ ಆದ ಒಂದು ಗುಂಪನ್ನು ಕಟ್ಟಿಕೊಳ್ಳಬೇಕಾಗಿತ್ತು. ಈ ಸಮಸ್ಯೆಯನ್ನು ಆ ಕಾಲದ ಪ್ರತಿಯೊಬ್ಬ ಮಹಿಳೆಯೂ ಬೇರೆ ಬೇರೆ ರೀತಿಯಲ್ಲಿ ಪರಿಹರಿಸಿಕೊಂಡರು. ಧನಮ್ಮಾಳ್ ಅದನ್ನು ಪರಿಹರಿಸಿಕೊಂಡ ರೀತಿ ತೀರಾ ವಿಶಿಷ್ಟವಾಗಿತ್ತು. ವೀಣೆ ಒಂದು ಪರಿಪೂರ್ಣವಾದ ವಾದ್ಯ ಅದಕ್ಕೆ ಯಾವುದೇ ಪಕ್ಕವಾದ್ಯದ ಅವಶ್ಯಕತೆ ಇಲ್ಲ ಎಂಬ ನಿಲುವಿಗೆ ಬಂದರು. ಆದರೆ ಹಾಗೆಂದು ಅವರು ಸಂಗೀತದಲ್ಲಿ ಲಯದ ಪಾತ್ರವನ್ನು ಕಡೆಗಾಣಿಸಿದರು ಎಂದು ಭಾವಿಸಬಾರದು. ಅವರ ಸಮಕಾಲೀನರು ಹೇಳುವ ಪ್ರಕಾರ ಧನಮ್ಮಾಳ್ ಅವರ ಲಯಜ್ಞಾನ ಪರಿಪೂರ್ಣವಾಗಿತ್ತು. ಅವರು ನುಡಿಸುವಂತಹ ವಿಳಂಬಕಾಲವನ್ನು ನಿಭಾಯಿಸಲು ಲಯದ ಮೇಲೆ ಅವರಿಗೆ ಉಳಿದೆಲ್ಲರಿಗಿಂತ ಹೆಚ್ಚಿನ ಪ್ರಭುತ್ವ ಅವರಿಗೆ ಬೇಕಿತ್ತು. ತುಂಬಾ ಸಾಮಾನ್ಯವಾಗಿ ಬಳಕೆಯಲ್ಲಿದ್ದ ತಾಳಗಳನ್ನು ನುಡಿಸುವಾಗಲೂ ಧನಮ್ಮಾಳ್ ತುಂಬಾ ಸ್ವಾತಂತ್ರ್ಯ ವಹಿಸಿ, ಲಯಕ್ಕೆ ಲೋಪವಾಗದಂತೆ ತಮಗೆ ಬೇಕಾದ ಕಾಲಪ್ರಮಾಣದಲ್ಲಿ ನುಡಿಸುತ್ತಿದ್ದರು. ಸಂಗೀತದಲ್ಲಿ ವೇಗವನ್ನು, ದ್ರುತಕಾಲವನ್ನು ಕುರಿತು ಧನಮ್ಮಾಳಿಗಿದ್ದ ಪೂರ್ವಾಗ್ರಹವೇ ಕಲ್ಪನಾಸ್ವರಗಳ ಬಗ್ಗೆ ಅವರಿಗಿದ್ದ ಹೇವರಿಕೆಗೆ ಕಾರಣವಾಗಿತ್ತು. ಸ್ವರಹಾಕುವುದು ಹೆಚ್ಚಿನಬಾರಿ ಒಂದೇ ಸಮನೆ ಪಟಾಕಿ ಸಿಡಿಸಿದಂತೆ ಇರುತ್ತದೆ ಎನ್ನುವ ಕಾರಣಕ್ಕೇ ಅವರು ಸ್ವರಹಾಕುವುದನ್ನು ವಿರೋಧಿಸುತ್ತಿದ್ದರು.
ಧನಮ್ಮಾಳ್ ತನ್ನ ಕಾಲದ ಪ್ರಪಂಚವು ಹೆಂಗಸರಿಗಾಗಿ ರೂಪಿಸಿದ ಮೌಲ್ಯಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದರು. ನಿಧಾನ, ನೆಮ್ಮದಿ, ಮಾಧುರ್ಯ, ಮೃದುತ್ವ, ಇವುಗಳು ಸ್ತ್ರೀತ್ವದ ಆಯಾಮಗಳು ಮತ್ತು ಇವುಗಳನ್ನು ಸೂಕ್ತವಾಗಿ ಅಭಿವ್ಯಕ್ತಿಸುವುದು ಮಹಿಳೆಯರಿಗೆ ಮಾತ್ರ ಸಾಧ್ಯ ಎಂದು ಅವರು ಭಾವಿಸಿದ್ದರು. ಅವರ ಮೊಮ್ಮಗ ಟಿ ಶಂಕರನ್ ಜಾವಳಿಯೊಂದನ್ನು ಅವರ ಮುಂದೆ ಪ್ರಸ್ತುತಪಡಿಸಿ ಅವರನ್ನು ಮೆಚ್ಚಿಸಲು ಪ್ರಯತ್ನಿಸಿದಾಗ, ಉದ್ದುದ್ದನೆಯ ಪೊತ್ತೆ ಮೀಸೆ ಬೆಳೆಸಿಕೊಂಡಿರುವ ನಿನ್ನಂತಹ ಪುಂಡರು ಇಂತಹ ಮುದ್ದು ಪ್ರೇಮಗೀತೆಗೆ ಏನು ನ್ಯಾಯ ಒದಗಿಸಲು ಸಾಧ್ಯ? ಎಂದು ಲೇವಡಿ ಮಾಡಿದರು. ಹೆಂಗಸರು ತೊಡೆಯ ಮೇಲೆ ಜೋರಾಗಿ ತಾಳಬಡಿದುಕೊಂಡು ಹಾಡುವುದು ಮತ್ತು ಹೆಂಗಸರು ತುಂಬಾ ಗತ್ತಿನಿಂದ ಹಾಡುವುದು ಇವೆಲ್ಲಾ ಅವರಿಗೆ ಇಷ್ಟವಾಗುತ್ತಿರಲಿಲ್ಲ. ತಮ್ಮ ಮಗಳು ಕಾಮಾಕ್ಷಿ ಬೃಂದಾಳನ್ನು ಕಾಂಚೀಪುರಂ ನೈನಾ ಪಿಳ್ಳೈ ಅವರ ಬಳಿ ಸಂಗೀತಕ್ಕೆ ಸೇರಿಸಿದಾಗಲೂ ಧನಮ್ಮಾಳಿಗೆ ಇವೇ ಗಾಭರಿಗಳಿದ್ದವು. ಆದರೆ, ಧನಮ್ಮಾಳ ಬದುಕಿನ ಉಳಿದ ಆಯ್ಕೆಗಳು, ಅವರ ಮಾತಿನ ವೈಖರಿ, ಅವರ ಸ್ವತಂತ್ರವಾದ ವ್ಯಕ್ತಿತ್ವ, ಯಾವುದೇ ವಿಚಾರದ ಬಗ್ಗೆಯಾಗಲಿ ಅವರ ಗಟ್ಟಿಯಾದ ನಿಲುವು, ಮತ್ತು ನನ್ನ ವೀಣೆ ಕೇಳಬೇಕೆಂದಿದ್ದರೆ ನನ್ನ ಮನೆಗೆ ಬನ್ನಿ ನಾನು ಯಾರಿಗಾಗಿಯೂ ನುಡಿಸುವವಳಲ್ಲ ಎನ್ನುವ ದಾರ್ಢ್ಯ ಇವುಗಳನ್ನು ಗಮನಿಸಿದಾಗ ಅವರು ಪುರುಷಪ್ರಧಾನ ಮೌಲ್ಯಗಳ ಚೌಕಟ್ಟಿನೊಳಗೆ ಇದ್ದರೋ ಅಥವಾ ಆ ಚೌಕಟ್ಟನ್ನು ತನ್ನ ಪ್ರತಿಭೆಯ ಮೂಲಕ ತಿರುಗುಮುರುಗು ಮಾಡುತ್ತಿದ್ದರೋ ಎನ್ನುವ ಅನುಮಾನ ಕಾಡುತ್ತದೆ. ಸುಲಭದ ಸಮೀಕರಣಗಳಿಗೆ ಸಿಗದ ಸಂಕೀರ್ಣವಾದ ವ್ಯಕ್ತಿತ್ವ ಧನಮ್ಮಾಳ್ ಅವರದ್ದು.
ಜಾವಳಿಯ ಪ್ರಸ್ತುತಿಗೆ ಧನಮ್ಮಾಳ್ ಗೌರವ ಮತ್ತು ಘನತೆ ಒದಗಿಸಿಕೊಟ್ಟರು. ಪಟ್ಟಣಂ ಸುಬ್ರಮಣ್ಯ ಅಯ್ಯರ್, ಪಟ್ಟಾಭಿರಾಮಯ್ಯ, ತಿರುಪತಿ ನಾರಾಯಣಸ್ವಾಮಿ, ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಧರ್ಮಪುರಿ ಸುಬ್ಬರಾಯರ ಜಾವಳಿಗಳನ್ನು ಧನಮ್ಮಾಳ್ ಜನಪ್ರಿಯಗೊಳಿಸಿದರು.
ಧನಮ್ಮಾಳ್ ಬಾನಿಯ ಸಂಗೀತ ಭಾವಪ್ರಧಾನವಾದ, ವಿಳಂಬಗತಿಯ ಸಂಗೀತ. ಮುಕ್ತಾರವರ ಪ್ರಕಾರ ಗಮಕಗಳ ಸೃಷ್ಟಿಗೆ ಕಾರಣವಾದ ಅನುಸ್ವರಗಳು, ಜಾರುಗಳು ಹಾಗೂ ಕಾರ‍್ವೆಗಳು ಇವುಗಳೇ ಧನಮ್ಮಾಳ್ ಬಾನಿಯ ಸಂಗೀತದ ಮುಖ್ಯ ಲಕ್ಷಣ. ಯಾವುದೇ ಸ್ವರವನ್ನು ಬೋಳು ಬೋಳಾಗಿ ಅನುಸ್ವರವಿಲ್ಲದೆ ಒಂಟಿಯಾಗಿ ಬಿಡುವುದನ್ನು ಈ ಬಾನಿಯಲ್ಲಿ ಕಾಣಲು ಸಾಧ್ಯವೇ ಇಲ್ಲ. ಅದು ಯಾವುದೋ ಒಂದು ಅನುಸ್ವರದ ಸಾಹಚರ್ಯದಲ್ಲಿ ಮಾತ್ರವೇ ಕಾಣಿಸಿಕೊಳ್ಳಲು ಸಾಧ್ಯ. ಪ್ರತಿಯೊಂದು ಸ್ವರ ಮತ್ತು ಅನುಸ್ವರವನ್ನೂ ಭಾವತುಂಬಿ ಹಾಡಬೇಕಿತ್ತು. ಯಾವುದೂ ರಸಹೀನವಾಗಿರಬಾರದು. ಇದನ್ನು ಧನಮ್ಮಾಳ್ ಬಾನಿ ಅತ್ಯಂತ ಪರಿಪೂರ್ಣವಾಗಿ ಸಾಧಿಸಿತ್ತು.
ಅತ್ಯಂತ ಸೂಕ್ಷ್ಮವಾದ ಹಾಗೂ ಸಂಕೀರ್ಣವಾದ ಭಾವಾಭಿವ್ಯಕ್ತಿ ಇರುವ ನೃತ್ಯದ ನಿಕಟ ಸಂಪರ್ಕ ಧನಮ್ಮಾಳ್ ಬಾನಿಯ ಸಂಗೀತಕ್ಕೆ ಒಂದು ವಿಶಿಷ್ಟ ಆಯಾಮವನ್ನು ನೀಡಿತ್ತು. ಧನಮ್ಮಾಳ್ ಬಾನಿಯ ಸಂಗೀತಕ್ಕೆ ಅಪೂರ್ವವಾದ ಕಲಾತ್ಮಕ ಅಭಿವ್ಯಕ್ತಿ ಉಂಟಾಗುವುದಕ್ಕೆ ಅವರಿಗೆ ನೃತ್ಯಕ್ಕೆ ಸಂಬಂಧಿಸಿದ ಕೃತಿಭಂಡಾರದ ಪರಿಣತಿ ಇರುವುದೇ ಕಾರಣ ಎಂದು ಭರತನಾಟ್ಯದಲ್ಲಿ ಬಳಕೆಯಾಗುತ್ತಿದ್ದ ಕರ್ನಾಟಕ ಸಂಗೀತದ ಅಧ್ಯಯನಕ್ಕೆ ಭಾರತಕ್ಕೆ ಆಗಮಿಸಿ, ಹಿಗ್ಗಿನ್ಸ್ ಭಾಗವತರೆಂದೇ ಖ್ಯಾತರಾದ ಜಾನ್ ಬಿ ಹಿಗ್ಗಿನ್ಸ್ ಹೇಳುತ್ತಿದ್ದರು.
ಧನಮ್ಮಾಳ್ ಅವರ ಉಛ್ರಾಯದ ದಿನಗಳಲ್ಲಿ ಮೈಸೂರು, ತಿರುವಾಂಕೂರು, ವಿಜಯನಗರಂ, ದರ‍್ಭಂಗಾ, ತೇಹ್ರಿ-ಗರವಾಲ್, ಬರೋಡದ ಗಾಯಕವಾಡ್ ಮಹಾರಾಜರು ಅವರ ಸಂಗೀತದ ಆರಾಧಕರಾಗಿದ್ದರು. ಅವರ ಕಚೇರಿಗಳಿಗೆ ಲಾರ್ಡ್ ರಿಪ್ಪನ್, ಲಾರ್ಡ್ ಕಾರ್ಮಿಕಲ್ ಬರುತ್ತಿದ್ದರು. ಧನಮ್ಮಾಳರಿಗೆ ಹಿಂದುಸಾನಿ ಸಂಗೀತದಲ್ಲಿ ಒಳ್ಳೆಯ ಪರಿಶ್ರಮವಿತ್ತು. ಅವರು ನುಡಿಸುತ್ತಿದ್ದ ಸೋಹನಿ, ಮಾಲ್‌ಕೌಂಸ್, ಮುಲ್ತಾನಿ ರಾಗಗಳಿಗೆ ಆರ್ಕಾಟಿನ ನವಾಬರಾದ ನವಾಬ್ ಅಲಿ ಖಾನ್ ಮಾರುಹೋಗಿದ್ದರು. ಧನಮ್ಮಾಳ್ ಅವರಿಗೆ ಅಬ್ದುಲ್ ಕರೀಂಖಾನ್ ಬಗ್ಗೆ ಅಪಾರ ಮೆಚ್ಚುಗೆ ಇತ್ತು. ಅಬ್ದುಲ್ ಕರೀಂಖಾನರಿಗೆ ಧನಮ್ಮಾಳರ ಸಂಗೀತವೆಂದರೆ ತುಂಬಾ ಗೌರವ. ಕರೀಂಖಾನರು ಮತ್ತು ಅವರ ಶಿಷ್ಯೆ ರೋಷನಾರಾ ಬೇಗಂ ಜೊತೆ ತುಂಬಾ ಧನಮ್ಮಾಳರಿಗೆ ಆತ್ಮೀಯವಾದ ಒಡನಾಟವಿತ್ತು.
ಧನಮ್ಮಾಳರನ್ನು ಅವರ ಸಮಕಾಲೀನ ಪುರುಷ ಸಂಗೀತಗಾರರೆಲ್ಲರೂ ತಮ್ಮ ಸರಿಸಮಾನರೆಂದು ಒಪ್ಪಿಕೊಂಡಿದ್ದರು. ಧನಮ್ಮಾಳ್ ಅವರನ್ನು ಬಿಟ್ಟರೆ ಅಂತಹ ಅಗಾಧ ಪ್ರತಿಭೆಯಿರುವ ಯಾವೊಬ್ಬ ಮಹಿಳೆಯೂ ಆ ಕಾಲದಲ್ಲಿ ಇರಲಿಲ್ಲ ಎನ್ನುತ್ತಿದ್ದರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್. ಆಗಿನ ಘನವಿದ್ವಾಂಸರೆಲ್ಲರೂ ಅವರ ಸಂಗೀತದ ಮೋಡಿಗೆ ಮನಸೋತವರೇ ಆಗಿದ್ದರು. ೧೯೨೦ರಿಂದ ೧೯೩೦ರ ದಶಕದ ಅವಧಿಯಲ್ಲಿ ಜಾರ್ಜ್ ಟೌನಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಶುಕ್ರವಾರದ ಸಂಜೆಯ ವೀಣಾವಿನಿಕೆಗಾಗಿ ರಸಿಕರು ಕಾತರದಿಂದ ಕಾಯುತ್ತಿದ್ದರು. ಸಂಗೀತದ ರಸದೌತಣವನ್ನು ಸವಿಯಲು ರಸಿಕರು ಸದ್ದಿಲ್ಲದೆ ಬೆಕ್ಕಿನ ಹೆಜ್ಜೆಯಿಟ್ಟು ವಿನಿಕೆ ಪ್ರಾರಂಭವಾಗುವ ಮೊದಲೇ ಬಂದು ಕೂರುತ್ತಿದ್ದರು. ತಡವಾಗಿ ಬರುವವರು ಬಹಳ ಹೆದರಿಕೆಯಿಂದ ನಿಶ್ಶಬ್ಧವಾಗಿ ಬರುತ್ತಿದ್ದರು, ಇಲ್ಲದಿದ್ದರೆ ಯಾರದು ಆ ಜ್ಞಾನಶೂನ್ಯ? ಎನ್ನುವ ಮಾತಿನ ಚಾಟಿಯೇಟಿಗೆ ತುತ್ತಾಗುತ್ತಿದ್ದರು. ಒಂದು ಸಲವಂತೂ ಅವರ ಅಂದಿನ ಕಾರ್ಯಕ್ರಮಕ್ಕೆ ಪೋಷಕರೂ, ಘನ ಶ್ರೀಮಂತರೂ ಆಗಿದ್ದ ಚೆಟ್ಟಿಯಾರ್ ಸ್ವಲ್ಪ ತಡವಾಗಿ ಬಂದಾಗ ಧನಮ್ಮಾಳ್ ಅವರನ್ನೂ ಆಕ್ಷೇಪಿಸುತ್ತಾರೆ. ಆಗ ಅವರು ಅತ್ಯಂತ ವಿನಯದಿಂದ ಕ್ಷಮೆಕೋರುತ್ತಾರೆ. ಶುಕ್ರವಾರ ಸಂಜೆಯ ಹೊತ್ತಿನಲ್ಲಿ ಅಮ್ಮ ವೀಣೆ ನುಡಿಸುತ್ತಿದ್ದಾರೆ ಎಂದು ರಸ್ತೆಯಲ್ಲಿ ಮಾರಾಟ ಮಾಡುವವರೂ ಆ ರಸ್ತೆಯಲ್ಲಿ ಮೌನವಾಗಿ ಸಾಗಿಹೋಗುತ್ತಿದ್ದರು. ನೆರೆಹೊರೆಯವರು ನಿಶ್ಶಬ್ಧವಾಗಿರುತ್ತಿದ್ದರು. ಶುಕ್ರವಾರ ೬ರಿಂದ ೮ರವರೆಗೆ ಸಾಸುವೆ ಸಿಡಿದರೆ ಅಜ್ಜಿಯ ಸಂಗೀತಕ್ಕೆ ತೊಂದರೆಯಾಗುತ್ತದೆ ಅಂತ ನಮ್ಮ ಮನೆಯಲ್ಲಿ ಒಗ್ಗರಣೆಯನ್ನೂ ಹಾಕುತ್ತಿರಲಿಲ್ಲ, ಎನ್ನುತ್ತಿದ್ದರು ಅವರ ಮೊಮ್ಮಗಳು ಬಾಲಸರಸ್ವತಿ. ತಡವಾಗಿ ಬರುವುದು ಮತ್ತು ವಿನಿಕೆಯ ಮಧ್ಯೆ ಎದ್ದುಹೋಗುವುದು ಇವೆರೆಡನ್ನೂ ಧನಮ್ಮಾಳ್ ಸಹಿಸುತ್ತಿರಲಿಲ್ಲ. ಸಧ್ಯ, ನೀವು ತೊಲಗಿ ಹೋಗುವವರು ತೊಲಗಿದರೆ ನಾನಾದರೂ ನೆಮ್ಮದಿಯಾಗಿ ನುಡಿಸಿಕೊಳ್ಳಬಹುದು ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು. ಯಾರಾದರೂ ವಿನಿಕೆಯಲ್ಲಿ ಭಲೇ, ಭೇಷ್ ಎಂದರೆ, ಧನಮ್ಮಾಳ್ ತುಂಬಾ ಸಿಟ್ಟಾಗುತ್ತಿದ್ದರು. ತಲೆಮಾರುಗಳಿಂದ ಪುರುಷರು ದೇವದಾಸಿಯರನ್ನು ನಡೆಸಿಕೊಂಡ ಪರಿಯ ಬಗ್ಗೆಯೇ ಇದ್ದ ಸಿಟ್ಟಿನ ಅಭಿವ್ಯಕ್ತಿ ಅದಾಗಿತ್ತಾ?
ಧನಮ್ಮಾಳ್ ಅವರಿಗೆ ಗ್ರಾಮಾಫೋನಿಗೆ ನುಡಿಸುವುದು ಬಿಲ್‌ಕುಲ್ ಇಷ್ಟವಿರಲಿಲ್ಲ. ಆದರೆ ಅವರ ಆತ್ಮೀಯರಾಗಿದ್ದ್ದ ಟಿ.ಟಿ. ಕೃಷ್ಣಮಾಚಾರಿ ಮುಂತಾದವರ ಬಲವಂತಕ್ಕೆ ಕಟ್ಟುಬಿದ್ದು ರೆಕಾರ್ಡಿಗೆ ನುಡಿಸಲು ಒಪ್ಪಿಕೊಂಡರು. ಆದರೆ ಅವುಗಳಲ್ಲಿ ಧನಮ್ಮಾಳ್ ಸಂಗೀತದ ಸೊಗಡಿನ ರುಚಿ ದೊರಕುವುದಿಲ್ಲ.
ಧನಮ್ಮಾಳ್ ಸಣ್ಣಗೆ, ಕಪ್ಪಗಿದ್ದರು. ಪುಟ್ಟ ಆಕಾರದ ಹೆಂಗಸು. ಹೆಚ್ಚಿನ ಒಡವೆಗಳನ್ನು ಧರಿಸುತ್ತಿರಲಿಲ್ಲ. ಯಾವಾಗಲೂ ಹತ್ತಿಯ ಸೀರೆಗಳನ್ನೇ ಉಡುತ್ತಿದ್ದರು. ಅವರ ರಸಪ್ರಜ್ಞೆ ಮಾತ್ರ ಅತ್ಯುತ್ಕೃಷ್ಟ ಮಟ್ಟದ್ದು. ತಾವು ಹಾಕುತ್ತಿದ್ದ ತಾಂಬೂಲಕ್ಕೆ ಲಕ್ನೋದ ಸುಪ್ರಸಿದ್ಧ ಜರದಾ ಅವರಿಗೆ ಬೇಕಿತ್ತು. ಕಚೇರಿಯ ಕೋಣೆಗೆ ಅತ್ಯಂತ ಸುವಾಸನಾಯುಕ್ತವಾದ ಶುಭ್ರವಾದ ತಾಜಾ ಮಲ್ಲಿಗೆಯೇ ಆಗಬೇಕಿತ್ತು. ಬೆರಳಿಗೆ ಹಚ್ಚಿಕೊಳ್ಳಲು ಅತ್ಯಂತ ಒಳ್ಳೆಯ ಸ್ವಾಗ್ ಬೇಕಿತ್ತು. ಇಂಥ ದಿಲ್ದಾರ್ ಐಷಾರಾಮದಿಂದ ತಮ್ಮ ಆಸ್ತಿಯನ್ನೆಲ್ಲಾ ಅವರು ಕಳೆದುಕೊಂಡು ಕೊನೆಗಾಲದ ಹೊತ್ತಿಗೆ ಹೆಚ್ಚುಕಡಿಮೆ ಬಡತನದ ಅಂಚಿನಲ್ಲಿದ್ದರು. ಆದರೆ ಎಂತಹ ಕಷ್ಟದಲ್ಲೂ ಅವರು ಸಂಗೀತವನ್ನು ವಾಣಿಜ್ಯೀಕರಿಸಿ, ಮಾರಾಟದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ.
ಸಂಗೀತದಷ್ಟೇ ತಮ್ಮ ಮಾತಿಗೂ ಕೂಡ ಧನಮ್ಮಾಳ್ ಹೆಸರುವಾಸಿಯಾಗಿದ್ದರು. ಅವರು ಸ್ವಭಾವತಃ ತುಂಬಾ ಮಿತಭಾಷಿ. ಅವರ ಮಾತು ತುಂಬಾ ನಿಷ್ಠುರವಾಗಿ, ಕಟುವಾಗಿರುತ್ತಿತ್ತು. ಅವರ ಮಾತಿನ ಮೊನಚಿಗೆ, ವ್ಯಂಗ್ಯಕ್ಕೆ ಮನೆಯವರೂ ಸೇರಿದಂತೆ ಎಲ್ಲರೂ ಹೆದರುತ್ತಿದ್ದರು. ಧನಮ್ಮಾಳಿಗೆ ನಾಲ್ಕುಜನ ಹೆಣ್ಣುಮಕ್ಕಳಿದ್ದರು – ರಾಜಲಕ್ಷ್ಮಿ, ಲಕ್ಷ್ಮೀರತ್ನಂ, ಜಯಮ್ಮಾಳ್ ಮತ್ತು ಕಾಮಾಕ್ಷಿ. ಸುಪ್ರಸಿದ್ಧ ಹಾಡುಗಾರ್ತಿಯರು ಟಿ ಬೃಂದಾ ಮತ್ತು ಟಿ ಮುಕ್ತ್ತಾ, ಅಪ್ರತಿಮ ನೃತ್ಯಗಾರ್ತಿ ಟಿ ಬಾಲಸರಸ್ವತಿ, ಕೊಳಲುವಾದಕ ಟಿ ವಿಶ್ವನಾಥನ್, ಲೇಖಕ ಟಿ. ಶಂಕರನ್, ಮೃದಂಗಂವಾದಕ ಟಿ. ರಂಗನಾಥನ್, ಇವರೆಲ್ಲರೂ ಧನಮ್ಮಾಳರ ಮೊಮ್ಮಕ್ಕಳು. ಧನಮ್ಮಾಳ್ ಜೊತೆ ಮಾತನಾಡಲು ಮಕ್ಕಳಿಗೆ ಹೋಗಲಿ ಮೊಮ್ಮಕ್ಕಳಿಗೂ ತುಂಬಾ ಹೆದರಿಕೆ, ಏಕೆಂದರೆ ಅವರ ಮಾತಿನ ಹೊಡೆತವನ್ನು ತಡೆದುಕೊಳ್ಳುವುದು ಕಷ್ಟವಾಗಿತ್ತು. ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಾರಂಭವಾದ ಹೊಸತರಲ್ಲಿ ಅಲ್ಲಿ ಸಂಗೀತವನ್ನು ಕುರಿತು ಚರ್ಚೆ ಮತ್ತು ಸೋದಾಹರಣ ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಆಗ ಒಮ್ಮೆ ಧನಮ್ಮಾಳ್ ನಿಮಗೆ ಗೊತ್ತಾ ಮ್ಯೂಸಿಕ್ ಅಕಾಡೆಮಿಯಲ್ಲಿ ಸಂಗೀತವನ್ನು ಮಾತನಾಡುತ್ತಾರಂತೆ. ಎಂದಿದ್ದರು. ಅರಿಯಾಕುಡಿಯವರಿಗೆ ’ಸಂಗೀತ ರತ್ನಾಕರ’ ಬಿರುದನ್ನು ನೀಡಿದ ಸುದ್ದಿ ಕಿವಿಗೆ ಬಿದ್ದಾಗ ಓ ಹೌದಾ, ನಾನು ಅದೊಂದು ಗ್ರಂಥದ ಹೆಸರು ಅಂತ ತಿಳಿದುಕೊಂಡಿದ್ದೆ ಎಂದು ಬಹಳ ಮುಗ್ಧವಾಗಿ ಆದರೆ ವ್ಯಂಗ್ಯಭರಿತವಾಗಿ ಹೇಳಿದರಂತೆ. ಮುಂದೆ ಬೃಂದಾ, ಬಾಲಸರಸ್ವತಿ ಮತ್ತು ವಿಶ್ವನಾಥ್ ಅವರಿಗೆಲ್ಲಾ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ ಬಂದಾಗ ಧನಮ್ಮಾಳ್ ಬದುಕಿದ್ದಿದ್ದರೆ ಏನು ಹೇಳುತ್ತಿದ್ದರೋ ಎಂದು ಅವರೆಲ್ಲರಿಗೂ ಕುತೂಹಲವಿತ್ತಂತೆ.
೧೯೩೮ರಲ್ಲಿ ಧನಮ್ಮಾಳ್ ತಮ್ಮ ೭೨ನೇ ವಯಸ್ಸಿನಲ್ಲಿ ಬಾಲಸರಸ್ವತಿಯ ಮನೆಯಲ್ಲಿ ಮರಣಹೊಂದಿದರು. ಕೊನೆಯುಸಿರೆಳೆಯುವ ಹೊತ್ತಿನಲ್ಲಿ ಗೋಡೆಯ ಕಡೆ ತಿರುಗಿಕೊಂಡು ಮುವ್ವಗೋಪಾಲ ಎಂದು ಹೇಳಿ ತಮ್ಮ ಸಂಗೀತದ ಬದುಕಿನ ಕಾರುಬಾರು (ತ್ಯಾಗರಾಜರ ಮುಖಾರಿ ರಾಗದ ಕೃತಿ, ಅದನ್ನು ಧನಮ್ಮಾ ಅತ್ಯದ್ಭುತವಾಗಿ ನುಡಿಸುತ್ತಿದ್ದರು) ಮುಗಿಸಿದರು. ಮುವ್ವ ಗೋಪಾಲ ಎನ್ನುವುದು ’ಪದ ಚಕ್ರವರ್ತಿ’ ಕ್ಷೇತ್ರಯ್ಯನವರ ಅಂಕಿತವಾಗಿತ್ತು.
ಆಕರ ಗ್ರಂಥಗಳು
ದಿ ಹಿಂದೂ ಆನ್ ಮ್ಯೂಸಿಕ್
ದಿ ಮದ್ರಾಸ್ ಕ್ವಾರ್‌ಟೆಟ್ಸ್, ಇಂದಿರಾ ಮೆನನ್,
ರಂಗ ರಾಮಾನುಜ ಅಯ್ಯಂಗಾರ್, ಮ್ಯೂಸಿಂಗ್ಸ್ ಅಫ್ ಅ ಮ್ಯೂಸಿಷಿಯನ್,
ಮುಕ್ತಾ, ಬೃಂದಾ-ಮುಕ್ತಾ ಸರ್ಟನ್ ಅಸ್ಪೆಪ್ಟ್ಸ್ ಆಫ್ ದೇರ್ ಮ್ಯೂಸಿಕ್, ರವಿ ಮತ್ತು ಶ್ರೀದರ್, ಶ್ರುತಿ ೨೭೪, ಜುಲೈ ೨೦೦೭.
ಬಾಲ ಸರಸ್ವತಿ, ಶ್ರುತಿ, ಫೆಬ್ರುವರಿ ೧, ೧೯೮೪.
ಬೃಂದಾ, ಸಂಗೀತ ನಾಟಕ ಅಕಾಡೆಮಿಗೆ ನೀಡಿದ ಸಂದರ್ಶನ