ಬೆಂಕಿಯಲ್ಲಿ ಅರಳಿದ ಗಾನತಪಸ್ವಿನಿ ಕೇಸರ್‌ಬಾಯಿ ಕೇರ‍್ಕರ್
ಶೈಲಜಾ
ಎಲ್ಲಾ ಘರಾನೆಯ ಅತ್ಯಂತ ಒಳ್ಳೆಯ ಗಾಯಕರನ್ನು ನಾನು ಕೇಳಿದ್ದೇನೆ. ಕೇಸರ್‌ಬಾಯಿಯವರ ಗಾಯನ ತುಂಬಾ ಕೇಳಿದ್ದೇನೆ. ಅವರೊಡನೆ ನನಗೆ ತುಂಬಾ ಒಡನಾಟವಿತ್ತು. ನನ್ನ ಗಾಯನ ಮತ್ತು ನನ್ನ ಪ್ರತಿಯೊಂದು ತಾನ್ ಮೇಲೆ ಕೇಸರ್‌ಬಾಯಿಯ ಒಂದಿಷ್ಟು ಪ್ರಭಾವವಿದೆ. ಆ ಪ್ರಭಾವದಿಂದ ನನ್ನ ತಾನ್ ಹೀಗೆ ಬರುತ್ತದೆ. ಭಾರತರತ್ನ ಪಂಡಿತ್ ಭೀಮಸೇನ ಜೋಶಿ.
ಒಮ್ಮೆ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಖ್ಯಾತ ಗಾಯಕಿಯೊಬ್ಬರ ಹಾಡು ಕೇಳಿ ಪುಲಕಿತರಾಗಿ ಅವರ ಕೈಯನ್ನು ತೆಗೆದು ತನ್ನ ಗಂಟಲ ಮೇಲೆ ಇಟ್ಟುಕೊಂಡು ಇಂತಹ ಮಹಾನ್ ಗಾಯಕಿಯ ಸ್ಪರ್ಶದಿಂದ ತನ್ನ ಕಂಠ ಸದಾ ಚೆನ್ನಾಗಿರುತ್ತದೆಂದು ಹೇಳಿದರು. ಅದಕ್ಕೆ ಆ ಗಾಯಕಿ ನಿರ್ದಾಕ್ಷಿಣ್ಯವಾಗಿ ನಿಮ್ಮ ಕಂಠ ಚೆನ್ನಾಗಿಯೇ ಇದೆ. ಆದರೆ ನೀವು ಸ್ವಲ್ಪ ಹೆಚ್ಚಾಗಿಯೇ ಕಿರುಚಿ ಕೊಳ್ಳುತ್ತೀರಿ ಎನ್ನುತ್ತಾ ಇಂದಿರಾ ಗಾಂಧಿಯವರನ್ನು ದಿಗ್ಭ್ರಮೆಗೊಳಿಸಿ ಅಲ್ಲಿಂದ ತೇಲಿ ಹೋದರು. ಇಂತಹ ಬೆಂಕಿಯ ಉಂಡೆ, ಫಿರಂಗಿ ಗುಂಡು ಕೇಸರ್‌ಬಾಯಿ.
ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ತನ್ನದೊಂದು ವಿಶಿಷ್ಟ ಛಾಪನ್ನು ಮೂಡಿಸಿ, ಯಾವ ಹಿಂದುಸ್ತಾನಿ ಗಾಯಕರೂ ತಪ್ಪಿಸಿಕೊಳ್ಳಲಾಗದ ಪ್ರಭಾವವೊಂದನ್ನು ಬೀರಿಹೋದ ಅಸಾಧಾರಣ ಕಲಾವಿದೆ ಕೇಸರ್ ಬಾಯಿ. ಅಪಮಾನ, ಅವಜ್ಞೆ ಹಾಗೂ ಯಾತನೆಯ ಕುಲುಮೆಯಲ್ಲಿ ಬೆಂದು ರೂಪುಗೊಂಡವಳು. ಹಲವು ಬಗೆಯ ಅಪಮಾನಗಳ ಮುದ್ರೆ ಇವರ ಮನದಲ್ಲಿತ್ತು. ಅಶೋಕ್ ದಾ ರಾನಡೆಯವರು ಗುರುತಿಸುವಂತೆ, ಹಿಂದುಸ್ತಾನಿ ಸಂಗೀತದ ಘರಾನೇದಾರ್ ಪುರುಷ ಕಲಾವಿದರ ಲೋಕವು ಅಸಾಧಾರಣ ಪ್ರತಿಭೆಯಿದ್ದ ಕೇಸರಳನ್ನು ಅವಳೊಬ್ಬ ಬಾಯಿ ಅಷ್ಟೆ ಅಂತಲೇ ಪರಿಗಣಿಸಹೊರಟಿತ್ತು. ಆದರೆ ಈ ಪಾರಮ್ಯದ ವಿರುದ್ಧ ಬದುಕಿನುದ್ದಕ್ಕೂ ಏಕಾಂಗಿಯಾಗಿ ಕೇಸರ್‌ಬಾಯಿ ಹೋರಾಡಿದರು. ಯಾರೂ ಕಡೆಗಣಿಸಲಾಗದ ಪ್ರಭಾವ ಬೀರಿದರ. ಅಪಮಾನ, ನೋವಿನ ಬೆಂಕಿಯಲ್ಲಿ ಮಿಂದೆದ್ದ ಅವರ ಸಂಗೀತ ಭವ್ಯವೂ, ಮಹೋನ್ನತವೂ ಆಗಿತ್ತು. ಕೇಸರ್‌ಬಾಯಿಯನ್ನು ಸಂಗೀತಕ್ಷೇತ್ರದ ದೇವತೆ ಎಂದು ಎಲ್ಲರೂ ಕೊಂಡಾಡುವಂತಾಯಿತು. ಆದರೆ ಅವರ ಮನಸ್ಸಿನಲ್ಲಿದ್ದ ಅಳಿಸಲಾಗದ ನೋವಿನ ಗುಳ್ಳೆಗಳು ಅವರ ನಾಲಿಗೆಯನ್ನು ಚಾಟಿಯನ್ನಾಗಿಸಿ, ಮಾತು ಗಳನ್ನು ಹರಿತಗೊಳಿಸಿತ್ತು.
ಕೇಸರ್‌ಬಾಯ್ ಕೇರ‍್ಕರ್ ಹುಟ್ಟಿದ್ದು ೧೮೯೦ರ ಜುಲೈ ೧೦ರಂದು ಗೋವಾದ ಪಣಜಿ ಸಮೀಪದ ಕೇರಿ ಎಂಬ ಸಣ್ಣ ಹಳ್ಳಿಯಲ್ಲಿ ಸಾಂಪ್ರದಾಯಿಕ ಕಲಾವಂತರ (ದೇವದಾಸಿ) ಕುಟುಂಬವೊಂದರಲ್ಲಿ. ಮಗುವಿನಿಂದಲೂ ಸಂಗೀತಕ್ಕೆ ಒಲಿದಿದ್ದ ಜೀವವನ್ನು ಬಾಲ್ಯದಲ್ಲಿ ಆಕರ್ಷಿಸಿದ್ದು ದೇವಾಲಯದಲ್ಲಿ ಹಾಡು ತ್ತಿದ್ದ ಕೀರ್ತನೆಗಳು, ಭಜನೆಗಳು. ಇವುಗಳನ್ನೇ ಪದೇ ಪದೇ ಹೇಳಿಕೊಳ್ಳುತ್ತಿದ್ದಳು. ಆದರೆ ಪಾಠ ಅಂತ ಪ್ರಾರಂಭವಾದದ್ದು ೮ನೆಯ ವಯಸ್ಸಿನಲ್ಲಿ, ಕೊಲ್ಹಾಪುರ ದಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಂಖಾನ್ ಅವರ ಬಳಿ. ಆದರೆ ಒಂದು ವರ್ಷದೊಳಗೇ ಮರಳಿ ಗೋವಾಕ್ಕೆ ಹೋಗಬೇಕಾಯಿತು. ಕಲಿಕೆ ನಿಂತು ಹೋಯಿತು. ಮುಂದಿನ ೧೯ ವರ್ಷಗಳು ಕೇಸರ್ ಬಾಯಿಯವರ ಬದುಕಿನಲ್ಲಿ ದುರದೃಷ್ಟವೇ ಅವರ ಸಂಗಾತಿಯಾಗಿತ್ತು. ಸಂಗೀತ ಕಲಿಕೆಗೆ ಬಂದ ವಿಘ್ನಗಳು ನೂರಾರು, ಆದ ನಿರಾಶೆ ಎಣೆಯಿಲ್ಲದ್ದು, ಬದುಕು ಬರೀ ಹತಾಶೆಯನ್ನೇ ಹಾಸಿಹೊದ್ದಿತ್ತು. ಈ ಅವಧಿಯಲ್ಲಿ ಬರ‍್ಖತ್ತುಲ್ಲಾ ಖಾನ್, ಭಾಸ್ಕರ ಬುವಾ ಬಖಲೆ, ರಾಮಕೃಷ್ಣ ವಜ಼ೆ ಮುಂತಾದ ಹಲವು ಗುರುಗಳಿಂದ ಅವರು ಕಲಿತರು. ಆದರೆ ಯಾವುದೂ ಕೂಡಿ ಬರಲಿಲ್ಲ. ಕೊನೆಗೆ ಕಲಿತರೆ ಜೈಪುರ್ ಅತ್ರೌಲಿಯ ಉಸ್ತಾದ್ ಅಲ್ಲಾದಿಯಾ ಖಾನ್ ಅವರಿಂದ ಕಲಿಯುತ್ತೇನೆ. ಇಲ್ಲವಾದರೆ ಸಂಗೀತವೇ ಬೇಡ, ಅಂತ ನಿರ್ಧರಿಸಿದರು. ಈ ಹಿಂದೆ ಕಲಿತಿದ್ದ ಗ್ವಾಲಿಯರ್ ಘರಾನೆಯ ಪಾಠದ ಪ್ರಭಾವ ಅವರ ವೃತ್ತಿಬದುಕಿನುದ್ದಕ್ಕೂ ಉಳಿದಿತ್ತು ಎಂದು ಖ್ಯಾತ ಗಾಯಕ ಉಲ್ಲಾಸ್ ಕಶಾಲ್ಕರ್ ಗುರುತಿಸುತ್ತಾರೆ.
ಉಸ್ತಾದ್ ಅಲ್ಲಾದಿಯಾ ಖಾನ್ ಇವರಿಗೆ ಕಲಿಸಲು ಸಿದ್ಧರಿರಲಿಲ್ಲ. ಆದರೆ ಕೊನೆಗೆ ಕೇಸರ್‌ಬಾಯಿ ಯವರ ಪೋಷಕರಾಗಿದ್ದ ಸೇಟ್ ಗೋಪಾಲದಾಸ್ ಅವರ ಒತ್ತಡಕ್ಕೆ ಮಣಿದು ಅಲ್ಲಾದಿಯಾಖಾನ್ ಇವರಿಗೆ ಹೇಳಿಕೊಡಲು ಒಪ್ಪಿಕೊಂಡರು. ಆದರೆ ಯಾರಿಗೂ ಅಸಾಧ್ಯವೆನಿಸುವ ಕರಾರುಗಳನ್ನು ಮುಂದಿಟ್ಟರು. ಪಾಠ ಆರಂಭಿಸುವ ಮೊದಲೇ ೫೦೦೦ ರುಪಾಯಿಗಳನ್ನು ನೀಡಬೇಕು. ಪ್ರತಿ ತಿಂಗಳೂ ಪಾಠ ಆಗಲಿ ಬಿಡಲಿ, ೨೦೦ ರುಪಾಯಿಗಳ ಶುಲ್ಕ ನೀಡಬೇಕು. ಹತ್ತು ವರ್ಷಗಳ ಕಾಲ ಪಾಠ ಕಲಿಯಬೇಕು. ಈ ಅವಧಿಯಲ್ಲಿ ಅಲ್ಲಾದಿಯಾ ಖಾನರು ಎಲ್ಲೆಲ್ಲಿ ಹೋಗುತ್ತಾರೆಯೋ ಅಲ್ಲಿಗೆಲ್ಲಾ ಕೇಸರ್‌ಬಾಯಿಯೂ ಹೋಗಬೇಕು. ಆಗ ಅವರಿಗೆ ಒಂದೂವರೆ ವರ್ಷದ ಮಗು ಇತ್ತು. ಛಲದ ಹೆಣ್ಣು ಕೇಸರ್‌ಬಾಯಿ ಇವೆಲ್ಲಾ ಕರಾರಿಗೆ ಒಪ್ಪಿದ ನಂತರ ೧೯೨೧ರಲ್ಲಿ ಗಂಡಾಬಂಧನ್ ನಡೆದು ಅವರು ವಿಧ್ಯುಕ್ತವಾಗಿ ಅಲ್ಲಾದಿಯಾ ಅವರ ಶಿಷ್ಯರಾದರು. ಆಗ ಕೇಸರಳಿಗೆ ೨೯ ವರ್ಷಗಳು.
ಆದರೆ ನಂತರದಲ್ಲಿ ಕೇಸರಳ ಸಂಗೀತನಿಷ್ಠೆಯನ್ನು ಮೆಚ್ಚಿದ ಅಲ್ಲಾದಿಯಾ ಖಾನ್ ಸಾಹೇಬರು ದಿನಕ್ಕೆ ೯ರಿಂದ ೧೦ ಗಂಟೆಗಳು ಅವರಿಗೆ ಪಾಠ ಹೇಳುತ್ತಾ ಅವರ ರಿಯಾಜನ್ನು ತಿದ್ದುತ್ತಿದ್ದರು. ಅವರು ಮೊತ್ತ ಮೊದಲು ಗಮನ ಹರಿಸಿದ್ದು ಧ್ವನಿ ಸಂಸ್ಕರಣದತ್ತ. ಪ್ರತಿಯೊಂದು ಪಲ್ಟಾ ಸ್ವರಶುದ್ಧವಾಗಿ, ಶ್ರುತಿಶುದ್ಧವಾಗಿ ಬರಬೇಕೆಂದು ನೂರು ಸಲ ಅಭ್ಯಾಸ ಮಾಡಿಸು ತ್ತಿದ್ದರು. ಅವರ ಈ ರಿಯಾಜ್ ಮತ್ತು ತಾಲೀಮ್ ಅದರ ಉತ್ತುಂಗದಲ್ಲಿದ್ದಾಗ ದಿನವಿಡೀ ಇವರು ಮಾಡುತ್ತಿದ್ದ ರಿಯಾಜ಼್ ಪಕ್ಕದ ಮನೆಯ ಓದುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಬಂದಾಗ ಅಲ್ಲಾದಿಯಾ ಖಾನರು ಬಾಂಬೆಯ ಸಮೀಪದ ಸಾಂಗ್ಲಿಯಲ್ಲಿ ಕೇಸರಳಿಗೆ ಒಂದು ಮನೆ ಮಾಡಿಕೊಟ್ಟರು. ಅದು ಅಕ್ಕಪಕ್ಕ ಮನೆಗಳಿಲ್ಲದ ಬಯಲಿನಲ್ಲಿತ್ತು. ಅಲ್ಲಿ ಕೇಸರಳನ್ನು ಅವಳ ಅಣ್ಣ ಮತ್ತು ಅತ್ತಿಗೆಯೊಡನೆ ಇರಿಸಿದರು. ಪಾಠ ಹೇಳಲು ತಾವೂ ಅಲ್ಲಿಯೇ ಹೋಗಿ ಇದ್ದರು.
೧೯೨೦ರಿಂದ ೧೯೪೬ರಲ್ಲಿ ಗುರುಗಳು ತೀರಿ ಹೋಗುವ ತನಕ ಕೇಸರ್‌ಬಾಯಿ ಅತ್ಯಂತ ಕಠಿಣವಾದ ತರಬೇತಿಯನ್ನು ಆ ಜ್ಞಾನಮಹರ್ಷಿಯ ಬಳಿ ಪಡೆದರು. ಗುರು ಬಯಸಿದಂತಹ ಮಟ್ಟವನ್ನು ತಲುಪಿದರು. ಈ ಸುದೀರ್ಘ ತರಬೇತಿ ಅವರಿಗೆ ಅಗಾಧವಾದ ಆತ್ಮವಿಶ್ವಾಸವನ್ನೂ ಮತ್ತು ವೃತ್ತಿಪರ ಅನುಭವವನ್ನೂ ತಂದುಕೊಟ್ಟಿತು. ಉಸ್ತಾದರು ಎಲ್ಲಾ ಕಚೇರಿಗೂ ಅವರನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ತಮ್ಮ ಬದುಕಿನ ಅತ್ಯುತ್ತಮವಾದ ಸಮಯವನ್ನು ಕೇಸರ್‌ಬಾಯಿ ಸಾಧನೆಯಲ್ಲಿ ಕಳೆದರು. ಅದನ್ನೊಂದು ತಪಸ್ಸಿನಂತೆ ಮಾಡಿದರು. ಹಾಗಾಗಿ ಅವರು ನಿಜವಾದ ಅರ್ಥದಲ್ಲಿ ತಮ್ಮ ವೃತ್ತಿಬದುಕನ್ನು ಪ್ರಾರಂಭಿಸಿದಾಗ ಅವರ ಸೊಗಸಾಗಿ ಸಂಸ್ಕರಣಗೊಂಡ ಕಂಠ, ಅದರ ನಯ, ನುಣುಪು, ಪಕ್ವತೆ ಮತ್ತು ಪ್ರಭುತ್ವಕ್ಕೆ ಜನ ಬೆಕ್ಕಸಬೆರಗಾದರು. ಅವರು ಆ ಕಾಲಘಟ್ಟದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದೆಯಾಗಿದ್ದರು.
ಕೇಸರ್‌ಬಾಯಿಯವರ ಕಲಿಯುವ ದಾಹಕ್ಕೆ ಇತಿಮಿತಿಯೇ ಇರಲಿಲ್ಲ. ಅಲ್ಲಾದಿಯಾ ಖಾನರು ತೀರಿಹೋಗುವ ಕೆಲವು ತಿಂಗಳುಗಳಿಗೆ ಮೊದಲು ಬಾಂಬೆಯ ಕಲಾಭಿಮಾನಿಯೊಬ್ಬರ ಮನೆಯಲ್ಲಿ ಖಾಸಗಿ ಕಚೇರಿಯೊಂದರಲ್ಲಿ ಖಾನ್‌ಸಾಹೇಬರು ಸಂಪೂರ್ಣ ಮಾಲಕೌಂಸ್ ರಾಗವನ್ನು ಹಾಡಿದರು. ಅಂದು ಖಾನ್‌ಸಾಹೇಬರ ಅದ್ಭುತ ಪ್ರಸ್ತುತಿ ಕೇಳಿದ ಕೇಸರ್‌ಬಾಯಿ ನಿಬ್ಬೆರಗಾಗಿ, ಮರುದಿನ ಅವರ ಮನೆಗೆ ಹೋಗಿ ಆ ರಾಗವನ್ನು ಅವರಿಂದ ಕಲಿಯಲು ಪ್ರಾರಂಭಿಸಿದರು. ಆಗ ಕೇಸರ್‌ಗೆ ೫೦ ವರ್ಷ ಮತ್ತು ಖಾನ್‌ಸಾಹೇಬರಿಗೆ ೯೦ ವರ್ಷ!
೧೯೩೮ರಲ್ಲಿ ಅವರ ಸಂಗೀತ ಕೇಳಿದ ರವೀಂದ್ರನಾಥ ಟ್ಯಾಗೋರ್ ಅವರನ್ನು ’ಸುರಶ್ರೀ’ ಎಂದು ಕರೆದರು. ಕೇಸರ್‌ಬಾಯಿಯ ಗಾಯನವನ್ನು ಆಲಿಸುವ ಅವಕಾಶ ದೊರೆತದ್ದು ನನ್ನ ಅದೃಷ್ಟವೆಂದು ನಾನು ಭಾವಿಸುತ್ತೇನೆ. ಅತ್ಯುತ್ಕೃಷ್ಟ ಪರಿಪೂರ್ಣತೆಯಿಂದ ಕೂಡಿದ ಅವರ ಗಾಯನ ಅತ್ಯಂತ ಕಲಾತ್ಮಕ ವಾದುದು. ಸೊಗಸಾದ ಹಾಗೂ ಅತ್ಯಂತ ಸೂಕ್ಷ್ಮ ವಾದ ಏರಿಳಿತಗಳಿಂದ ಕೂಡಿದ ಅವರ ಮಾಂತ್ರಿಕ ಕಂಠ ತಾಂತ್ರಿಕ ಸೂಕ್ಷ್ಮಗಳನ್ನು ಕೇವಲ ಪಾಂಡಿತ್ಯ ಪ್ರದರ್ಶನಕ್ಕಾಗಿ ಎಲ್ಲೂ ನೀರಸವಾಗಿ, ಶುಷ್ಕವಾಗಿ ಅಭಿವ್ಯಕ್ತಿಸುತ್ತಿರಲಿಲ್ಲ. ಬದಲಾಗಿ ಸಂಗೀತದ ಮಾಂತ್ರಿಕತೆಯನ್ನು ಅಭಿವ್ಯಕ್ತಿಸುತ್ತಿತ್ತು. ಇದು ಹುಟ್ಟಿ ನಿಂದಲೇ ಪ್ರತಿಭೆ ಇರುವವರಿಗೆ ಮಾತ್ರ ಸಾಧ್ಯ ಎಂದು ಬರೆದರು.
ಅವರದ್ದು ಮಂದ್ರ ಸಪ್ತಕದಿಂದ ತಾರಸಪ್ತಕದ ತನಕ ಅತ್ಯಂತ ನಿರಾಯಾಸವಾಗಿ ಸಂಚರಿಸುತ್ತಿದ್ದ ಕಂಠ. ಮಹಿಳೆಯರ ಕಂಠದಲ್ಲಿ ಅಪರೂಪ ವೆನಿಸುವಂತಹ ವಜನ್ ಮತ್ತು ಗಹನತೆಗಳಿಂದಾಗಿ ಅವರ ಶಾರೀರ ಅನನ್ಯವೆನಿಸಿಕೊಂಡಿತ್ತು. ಧ್ವನಿ ಸಂಸ್ಕರಣದಿಂದ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಅವರ ಕಂಠ ಒಂದು ಅಪೂರ್ವ ಉದಾಹರಣೆ. ಸ್ಥಿರವಾದ, ಆದರೆ ಹೇಳಿದಂತೆ ಕೇಳುವ, ಸೊಗಸಾಗಿ ಸಂಸ್ಕರಣಗೊಂಡಿರುವ, ಪಳಗಿದ ಕಂಠ ಕೇಸರ್ ಬಾಯಿಯವರ ಆಸ್ತಿ. ತಾರಸ್ಥಾಯಿಯಲ್ಲಿಯೂ ಅವರು ಮುಕ್ತ ಕಂಠದಿಂದ ಹಾಡುತ್ತಿದ್ದರು. ಕೀರಲು, ಕಳ್ಳಧ್ವನಿಯಲ್ಲಿ ಹಾಡುತ್ತಿರಲಿಲ್ಲ. ಶುದ್ಧ ಅಭಿಜಾತ ಸಂಗೀತಕ್ಕೆ ಬಹು ಮುಖ್ಯವಾಗಿ ಬೇಕಾಗಿದ್ದ ಸ್ಥಿರವಾದ, ಸೊಗಸಾದ ತಾಲೀಮಿಗೆ ಒಳಪಟ್ಟಿದ್ದ ಕಂಠ, ರಾಗದ ಶುದ್ಧತೆ, ಸಾಹಿತ್ಯ ಶುದ್ಧತೆ, ಕಂಠದಲ್ಲಿ ಸ್ಪಷ್ಟವಾದ ಏರಿಳಿತ, ರಾಗಕ್ಕೆ ಎಷ್ಟು ಬೇಕೋ ಅಷ್ಟೇ ಸಿಂಗಾರ ಮತ್ತು ಭಾವಪೂರ್ಣವಾದ ಪ್ರಸ್ತುತಿ ಇವೆಲ್ಲವೂ ಅವರಲ್ಲಿತ್ತು. ಅವರಿಗೆ ಉಸಿರಿನ ಮೇಲಿದ್ದ ನಿಯಂತ್ರಣ ಅನಿರ್ವಚನೀಯ. ಅತ್ಯಂತ ಸುದೀರ್ಘವಾದ ತಾನ್ ಗಳನ್ನು ಹಾಡಿದ ಮೇಲೂ ಅವರು ಉಸಿರಿಗಾಗಿ ಚಡಪಡಿಸುತ್ತಿರಲಿಲ್ಲ ಆದರೆ ಪ್ರೇಕ್ಷಕರೇ ಎಷ್ಟೋ ಬಾರಿ ಏದುಸಿರು ಬಿಡುತ್ತಿದ್ದರು ಎಂದು ಅಶೋಕ್ ರಾನಡೆಯವರು ಹೇಳುತ್ತಾರೆ.
ಅಲ್ಲಾದಿಯಾ ಖಾನ್ ಅವರ ಜೈಪುರ್ ಘರಾಣೆಯ ವಿಶೇಷತೆಗಳೆಲ್ಲವೂ ಅವರ ಗಾಯನದಲ್ಲಿ ಹೊರಹೊಮ್ಮುತ್ತಿದ್ದವು. ಅದರಲ್ಲೂ ಮುಖ್ಯವಾಗಿ ಖಯಾಲನ್ನು ವಿಳಂಬ ಮತ್ತು ಮಧ್ಯಲಯದಲ್ಲಿ ಹೆಚ್ಚಾಗಿ ವಿಸ್ತರಿಸುವುದು; ವಿಭಿನ್ನ ಲಯವಿನ್ಯಾಸಗಳಿಗೆ ಸೊಗಸಾಗಿ, ಜಾಗರೂಕತೆಯಿಂದ ಸಂಯೋಜಿಸಿದ ಸ್ವರಗಳನ್ನು ಹೆಣೆದು, ಆ ಹೆಣಿಗೆಗೆ ಪದಗಳನ್ನು ಹರಡಿ ವಿಸ್ತರಿಸುತ್ತಾ, ’ಅಕಾರ’ದಲ್ಲಿ ಅದನ್ನು ಹಾಡುವುದು; ದೀರ್ಘವಾದ ಒಂದು ಉಸಿರಿನಲ್ಲಿ ದ್ರುತಕಾಲದ ತಾನ್‌ಗಳನ್ನು ಅಕಾರದಲ್ಲಿ ಹಾಡುವುದು; ಮಿಶ್ರರಾಗಗಳಾದ ಬಸಂತಿ-ಕೇದಾರ್, ಸವಾನಿ-ನಟ್, ನಟ್-ಬಿಲಾವಲ್, ಸವಾನಿ-ಕಲ್ಯಾಣ್, ಮುಂತಾದ ರಾಗಗಳನ್ನು ಹಾಡುವುದು ಇವೇ ಮುಂತಾದ ಘರಾಣೆಯ ವಿಶೇಷತೆಗಳೆಲ್ಲವೂ ಅವರ ಗಾಯನ ದಲ್ಲಿತ್ತು. ಕೂದಲೆಳೆಯಷ್ಟು ವ್ಯತ್ಯಾಸವಿರುವ ರಾಗ ಗಳಾದ ಮಲ್ಹಾರ್, ನಟ್, ಕಾನಡಾ ಇವುಗಳನ್ನು ತೀರಾ ಸಲೀಸಾಗಿ ಹಾಡುತ್ತಿದ್ದರು. ಕೇಸರ್‌ಬಾಯಿಯ ಸಂಗೀತವನ್ನು ಅತ್ತರನ್ನು ಚಿಮುಕಿಸಿದ ಸುಗಂಧಭರಿತ ಹೂವಿನ ಗುಚ್ಛಕ್ಕೆ ಹೋಲಿಸುತ್ತಾರೆ. ಅವರು ಜೋನ್ ಪುರಿಯಲ್ಲಿ ಹಾಡಿರುವ ಹು ತೋ ಜಯ್ಯೋ ಪಿಯಾ ಕೆ ದೇಶ್ ಖಯಾಲಿನಲ್ಲಿ ಜೈಪುರ್ ಘರಾಣೆಯ ಪ್ರಾತಿನಿಧಿಕ ಅಂಶಗಳೆಲ್ಲವೂ ಕಂಡು ಬರುತ್ತದೆ.
ಭಾವ ಮತ್ತು ಅರ್ಥಗಳಿಗೆ ಸಮಾನ ಪ್ರಾಮುಖ್ಯ ನೀಡಬೇಕು ಎನ್ನುವುದು ಕೇಸರ್‌ಬಾಯಿಯವರ ನಂಬಿಕೆಯಾಗಿತ್ತು. ಆದರೆ ಅವರ ಸಂಗೀತದ ನಿಜವಾದ ಮೋಡಿ ಇದ್ದದ್ದು ಭಾವಪೂರ್ಣ ಅಭಿ ವ್ಯಕ್ತಿಗಿಂತಲೂ ಅವರ ಸ್ವರ, ತಾಳ ಮತ್ತು ಬೋಲ್ ಸಂಯೋಜನೆಯಲ್ಲಿ ಇದ್ದ ನಿಖರತೆಯಲ್ಲಿ. ಅತ್ಯಂತ ವ್ಯವಸ್ಥಿತವಾದ, ಕಡೆದಿಟ್ಟಂತಹ ಆಲಾಪನೆಗಳಲ್ಲಿ, ಅತ್ಯಂತ ಕರಾರುವಾಕ್ಕಾಗಿ ಮುಕುಡಾಕ್ಕೆ (ಹಾಡಿನ ಪಲ್ಲವಿಯ ಆರಂಭ) ಬಂದು ಸೇರುತ್ತಿದ್ದ ತಾನ್ ಮತ್ತು ಬೋಲ್ ತಾನ್‌ಗಳಲ್ಲಿ. ಅವುಗಳನ್ನು ಹಾಡುವಾಗ ಅವರ ಹಲವು ವರ್ಷಗಳ ಕಠಿಣ ಪರಿಶ್ರಮ, ತಾಲೀಮು ಎದ್ದು ಕಾಣುತ್ತಿತ್ತು. ಇಂತಹ ಬಲು ದೀರ್ಘವಾದ ತಾನ್‌ಗಳು ತಮ್ಮ ಆವರ್ತನ ವನ್ನು ಮುಗಿಸಿ ವಾಪಸ್ಸು ಬರುವಾಗ ಅದರ ಸೊಗಸಿಗೆ ಮರುಳಾಗಿ ಮುಕಡಾ ಎನ್ನುವುದು ಅಲಂಕೃತಗೊಂಡ ನವವಧುವಿನಂತೆ ಆಸೆಯಿಂದ ಅದನ್ನು ಸೇರಲು ಹೋಗುತ್ತಿದೆಯೇನೋ ಎನಿಸುತ್ತಿತ್ತು ಎಂದು ಖ್ಯಾತ ಸಾರಂಗಿವಾದಕ ರಹಮತ್ ಖುರೇಷಿ ಹೇಳುತ್ತಿದ್ದರು.
ಕೇಸರ್‌ಬಾಯಿ ಅತ್ಯಂತ ಜಾಗರೂಕತೆಯಿಂದ ಸಂಯೋಜಿಸಿ ರೂಪಿಸಿದ ಸ್ವರಗಳ ಗುಚ್ಛವು ವೆಲ್ವೆಟ್ ಮೇಲೆ ಜೋಡಿಸಿಟ್ಟ ವಜ್ರದಂತೆ ಹೊಳಪಿನಿಂದ ಮಿನುಗುತ್ತಿದ್ದವು. ಅವರ ಶಕ್ತಿಶಾಲಿಯಾದ ತಾನ್ ಗಳನ್ನು ಕಾರಂಜಿಯಿಂದ ಚಿಮ್ಮುವ ಜಲಧಾರೆಗೆ, ಹೂಕುಂಡಗಳು ಸಿಡಿದಾಗ ಹೊರಚೆಲ್ಲುವ ವರ್ಣ ರಂಜಿತ ಕಿಡಿಗಳಿಗೆ ಹೋಲಿಸುತ್ತಾರೆ. ಅವರ ಸಂಗೀತದ ಪರಿಣಾಮ ಏಕಕಾಲಕ್ಕೆ ಬೌದ್ಧಿಕ ಹಾಗೂ ಭಾವುಕ ಎರಡೂ ಆಗಿತ್ತು. ಅತ್ಯಂತ ದ್ರುತಕಾಲದಲ್ಲಿ ತಾನ್‌ಗಳನ್ನು ಹಾಡುವಾಗಲೂ ಅವುಗಳು ರಾಗಭಾವ ವಿಲ್ಲದ ನೀರಸ ಸ್ವರಗಳ ಜೋಡಣೆ ಎನಿಸುತ್ತಿರಲಿಲ್ಲ. ಅಷ್ಟು ವೇಗದಲ್ಲೂ ಸ್ವರಗಳಲ್ಲಿ ರಾಗರಸ ಒಸರುತ್ತಿತ್ತು.
ಅವರ ಖಯಾಲ್ ಪ್ರಸ್ತುತಿ ಆಕರ್ಷಕವೂ ಸುಂದರವೂ ಆಗಿತ್ತು. ಖಯಾಲ್ ಪ್ರಸ್ತುತಿಗೆ ಅದು ಮಾದರಿಯಾಗಿತ್ತು. ರಾಗದ ಪೂರ್ಣ ಸ್ವರೂಪವನ್ನು ತಮ್ಮ ಆಳವಾದ ತುಂಬು ಧ್ವನಿಯಲ್ಲಿ ಅವರು ಹರವುತ್ತಿದ್ದರು. ರಾಗವನ್ನು ಅತ್ಯಂತ ಶಾಂತವಾಗಿ, ಘನತೆಯಿಂದ ಆಲಾಪಿಸುತ್ತಿದ್ದರು. ಲಯಬದ್ಧವಾದ ಬಂದಿಶ್ ಹಾಡುವಾಗಲೂ ರಾಗ ಸೊಗಸಾಗಿ ಅರಳಿಕೊಳ್ಳುತ್ತಿತ್ತು. ಅವರ ತಾನ್ ಮತ್ತು ಪಲ್ಟಾಗಳು ಕೇಳುಗರನ್ನು ವಶೀಕರಿಸಿಬಿಡುತ್ತಿದ್ದವು. ತಮ್ಮ ಅನನ್ಯವಾದ, ಭವ್ಯ ಪ್ರಸ್ತುತಿಯಿಂದ ಅವರು ಭಾರತದ ಉದ್ದಗಲಕ್ಕೂ ಖ್ಯಾತಿ ಪಡೆದರು.
ಇಷ್ಟು ಶುದ್ಧವಾಗಿ ತಪಸ್ಸಿನೋಪಾದಿಯಲ್ಲಿ ಖಯಾಲ್ ಹಾಡುತ್ತಿದ್ದ ಕೇಸರ್‌ಬಾಯಿಯವರು ಅಷ್ಟೇ ಸೊಗಸಾಗಿ ಠುಮ್ರಿಯನ್ನೂ ಹಾಡುತ್ತಿದ್ದರು. ಠುಮ್ರಿಯನ್ನು ಹಾಡುವಾಗ ಆ ರಚನೆಯ ಭಾವಕ್ಕೆ ಒತ್ತುಕೊಟ್ಟು ಹಾಡುತ್ತಿದ್ದರು. ಸಾಹಿತ್ಯವನ್ನು ಅತ್ಯಂತ ಜಾಣತನದಿಂದ ವಿಸ್ತರಿಸಿ ಆಟ ಆಡುತ್ತಿದ್ದರು. ಠುಮ್ರಿಯನ್ನು ಹಾಡುವಾಗ ಅದರಲ್ಲಿ ಅವಶ್ಯವಾಗಿ ಇರಬೇಕಾದ ಆರ್ತತೆ, ಕಾರುಣ್ಯ ಅವರ ಶಾರೀರದಲ್ಲಿ ಹೊಮ್ಮುತ್ತಿತ್ತು. (ಅನೀಶ್ ಪ್ರಧಾನ್)
ಇಂತಹ ಉನ್ನತಮಟ್ಟದ ಕಠಿಣವಾದ ಶೈಲಿ ಯನ್ನು ಸಾಧಿಸಲು ಹಲವು ದಶಕಗಳು ಬದುಕನ್ನು ಮುಡಿಪಾಗಿಟ್ಟಿದ್ದ ಕೇಸರ್ ತನ್ನ ಸಂಗೀತದಲ್ಲಿ ಯಾವುದೇ ಹೊಂದಾಣಿಕೆಗಳಿಗೆ ಸಿದ್ಧವಿರಲಿಲ್ಲ. ಹಾಗಾಗಿ ದೊಡ್ಡ ಸಂಖ್ಯೆಯ ಜನರನ್ನು ತಲುಪುತ್ತಿದ್ದ ಏಕೈಕ ಮಾಧ್ಯಮವಾಗಿದ್ದ ಆಕಾಶವಾಣಿಯಿಂದ ಅವರು ಹಲವು ಕಾಲ ದೂರವೇ ಉಳಿದಿದ್ದರು. ಇದರಿಂದಾಗಿ ಇಂತಹ ಅದ್ಭುತ ಸಂಗೀತವನ್ನು ಕೇಳುವ ಅವಕಾಶ ಎಷ್ಟೋ ಸಂಗೀತಪ್ರೇಮಿಗಳಿಗೆ ದೊರಕಲೇ ಇಲ್ಲ.
ಅಂತೆಯೇ ಅವರು ಗ್ರಾಮಾಫೋನಿಗೆ ಹಾಡುವು ದಕ್ಕೂ ಕೂಡ ತುಂಬಾ ವರ್ಷಗಳು ಒಪ್ಪಲೇ ಇಲ್ಲ. ನನ್ನ ಹಾಡನ್ನು ಯಾವುದೋ ಕಿರಾಣಿ ಅಂಗಡಿ ಯಲ್ಲಿ, ಹೇರ್‌ಕಟ್ಟಿಂಗ್ ಸಲೂನಿನಲ್ಲಿ ಹಾಕುವುದು ನನಗೆ ಇಷ್ಟವಿಲ್ಲ’ ಎನ್ನುತ್ತಿದ್ದರು. ಹಾಗಾಗಿ ಅವರ ಧ್ವನಿತಟ್ಟೆಗಳೂ ಕೂಡ ಕೆಲವೇ ಕೆಲವಿವೆ. ತಮ್ಮ ವೃತ್ತಿಬದುಕಿನುದ್ದಕ್ಕೂ ಕೇಸರ್‌ಬಾಯಿ ತಮ್ಮ ಘನತೆ, ಗೌರವ ಮತ್ತು ಸಂಗೀತದ ಉನ್ನತಮಟ್ಟವನ್ನು ಕಾಯ್ದುಕೊಂಡು ಬಂದರು. ಒಂದು ವೃತ್ತಿಯಾಗಿ ಸಂಗೀತಕ್ಕೆ ನಾನು ಘನತೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟಿದ್ದೇನೆ, ಎನ್ನುತ್ತಿದ್ದರು.
ಅವರು ತಮ್ಮ ಪ್ರತಿ ಕಚೇರಿಗೂ ಹಲವು ತಿಂಗಳು ಗಳಿಗೆ ಮೊದಲಿನಿಂದ ತುಂಬಾ ಗಂಭೀರವಾಗಿ ವಿಶೇಷವಾಗಿ ಅಭ್ಯಾಸ ಮಾಡುತ್ತಿದ್ದರು. ಕಚೇರಿ ಕೇಳಲು ಬರುವ ಶ್ರೋತೃಗಳಿಗೆ ಅತ್ಯುತ್ತಮವಾದ್ದನ್ನು ನೀಡಬೇಕು ಎಂದು ತಮ್ಮ ಏಕೈಕ ಶಿಷ್ಯೆ ಧೋಂಡು ತಾಯಿಗೂ ಹೇಳುತ್ತಿದ್ದರು. ಅವರಿಗೆ ೮೨ ವರ್ಷ ಗಳಾಗಿದ್ದಾಗ ಅವರನ್ನು ಸಂದರ್ಶಿಸಿದ ಸಂಗೀತ ವಿಮರ್ಶಕರೊಬ್ಬರಿಗೆ ನನ್ನ ಕೊನೆಯ ಪಯಣಕ್ಕೆ ನಾನು ಸಿದ್ಧಳಿದ್ದೇನೆ. ನನಗೆ ಯಾವ ವಿಷಾದವೂ ಇಲ್ಲ. ಒಳ್ಳೆಯ ಕೆಲಸ ಮಾಡಿದ್ದೇನೆಂಬ ಸಂತೃಪ್ತಿ ನನಗಿದೆ. ೭೦ ವರ್ಷಗಳು ನಿರಂತರವಾಗಿ ನಾನು ದೇವತೆಗಳಿಗಾಗಿ ಹಾಡಿದ್ದೇನೆ. ಪ್ರಾಸಂಗಿಕವಾಗಿ ಅದು ಭಾರತದ ಜನರನ್ನೂ ಖುಷಿಪಡಿಸಿದ್ದರೆ ನನಗದು ಎರಡು ಪಟ್ಟು ಸಂತೋಷವನ್ನು ಉಂಟುಮಾಡಿದೆ. ಎಂದರು.
ಘನತೆ ತುಂಬಿದ ಅವರ ವ್ಯಕ್ತಿತ್ವದಲ್ಲಿ ಒಂದು ರಾಜಠೀವಿ ಇತ್ತು. ಬಹುಶಃ ಹಾಗಾಗಿಯೇ ಕಾಶ್ಮೀರ, ಬರೋಡ, ಕೊಲ್ಹಾಪುರ, ಜೈಪುರ ಮತ್ತು ಜೋಧ್ ಪುರದ ರಾಜಕುಟುಂಬಗಳು ಅವರಿಗೆ ಆಶ್ರಯ ನೀಡಿದ್ದವು. ಅವರು ಅತ್ಯಂತ ಸದಭಿರುಚಿಯಿಂದ ಅಲಂಕರಿಸಿಕೊಳ್ಳುತ್ತಿದ್ದರು. ಸದಾ ಬಿಳಿಯ ಬಣ್ಣದ ಬೆಲೆಬಾಳುವ ಸೀರೆಗಳನ್ನು ಉಡುತ್ತಿದ್ದರು. ಕೊರಳು, ಕಿವಿಗಳಲ್ಲಿ ಅಮೂಲ್ಯವಾದ ಮುತ್ತು ಅಥವಾ ವಜ್ರದ ಆಭರಣ ತೊಡುತ್ತಿದ್ದರು. ತುಂಬಾ ಆಕರ್ಷಕವಾಗಿ, ಕಣ್ಸೆಳೆಯುವಂತಿದ್ದರು. ಅವರಿಗೆ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದ ಸಂಪೂರ್ಣ ಅರಿವಿತ್ತು. ಹಾಗಾಗಿ ವೇದಿಕೆಯ ಮೇಲೆ ಸಂಪೂರ್ಣ ಆತ್ಮವಿಶ್ವಾಸದಿಂದ ಕುಳಿತುಕೊಳ್ಳುತ್ತಿದ್ದರು. ಇದನ್ನು ಹಲವರು ಜಂಬ ಮತ್ತು ಅಹಂಕಾರ ಎಂದು ಅಪಾರ್ಥ ಮಾಡಿಕೊಳ್ಳು ತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಶೋಕ್ ರಾನಡೆಯವರ ಒಳನೋಟ ಅತ್ಯಂತ ಸೂಕ್ಷ್ಮವಾಗಿದೆ. ಅವರ ಇಡೀ ಬದುಕು ಮಡಿವಂತಿಕೆಯ ವಿರುದ್ಧದ ಹೋರಾಟವಾಗಿತ್ತು. ಮಡಿವಂತಿಕೆಯನ್ನು ಮೀರಿ ಕೊಳ್ಳಬೇಕು ಎನ್ನುವುದು ಅವರ ಆಕಾಂಕ್ಷೆಯಾಗಿತ್ತು. ಆದರೆ ಅವರ ಸುತ್ತಲಿನ ಸಮಾಜ ಮಹಿಳಾ ಕಲಾವಿದೆಯರು ಹೀಗೇ ಇರಬೇಕು ಎಂದು ನಿರೀಕ್ಷಿಸುತ್ತಿತ್ತು. ವೇದಿಕೆಯ ಮೇಲೆ ಅವರು ಒಬ್ಬ ಪುರುಷ ಕಲಾವಿದನಂತೆ ಕುಳಿತುಕೊಳ್ಳುತ್ತಿದ್ದರು. ಏಕೆಂದರೆ ಒಬ್ಬ ಪುರುಷ ಕಲಾವಿದ ನೀಡುತ್ತಿರುವಷ್ಟೇ ಘನವಾಗಿರುವುದನ್ನು ತಾನು ನೀಡುತ್ತಿದ್ದೇನೆ ಎಂಬ ಭಾವನೆ ಅವರಲ್ಲಿ ಗಾಢವಾಗಿತ್ತು. (SIಖಅ ಎouಡಿಟಿಚಿಟ) ಕಲಾವಿದರನ್ನು ತುಂಬು ಗೌರವದಿಂದ ನಡೆಸಿಕೊಳ್ಳಬೇಕೆಂದು ಅವರು ನಿರೀಕ್ಷಿಸುತ್ತಿದ್ದರು. ತನ್ನ ಕಠಿಣವಾದ ಶೈಲಿ ಪರಿಶ್ರಮಗಳಿಂದಾಗಿ ಕೇಸರಬಾಯಿ ಸಂಗೀತಗಾರರ ಸಂಗೀತಗಾರ್ತಿಯಾಗಿ ಉಳಿದಳು. ಬೇಗಂ ಅಖ್ತರ್, ಸಿದ್ಧೇಶ್ವರೀದೇವೀ, ಎಂ.ಎಸ್. ಸುಬ್ಬುಲಕ್ಷ್ಮಿ ಮುಂತಾದವರ ಆರಾಧ್ಯ ದೈವವಾಗಿದ್ದರು.
ತನ್ನ ಜೀವಿತಕಾಲದಲ್ಲಿಯೇ ಒಂದು ಐತಿಹ್ಯವಾಗಿ, ಪುರಾಣವಾಗಿದ್ದ ಕೇಸರ್‌ಬಾಯಿ ೧೯೭೭ರ ಸೆಪ್ಟೆಂಬರ್ ೧೬ರಂದು ತಮ್ಮ ೮೭ನೆಯ ವಯಸ್ಸಿನಲ್ಲಿ ತೀರಿಹೋದರು. ಆದರೆ ತುಂಬಾ ಸೂಕ್ಷ್ಮ ಸಂವೇದನೆಯ, ಅತಿ ವಿಮರ್ಶಾತ್ಮಕ ಸ್ವಭಾವದ ಅವರು ತಮ್ಮ ಕಂಠ ವೃದ್ಧಾಪ್ಯದಿಂದಾಗಿ ಕುಂದುತ್ತಿದೆ ಎಂದು ಅರಿವಾದ ಕೂಡಲೆ ೧೯೬೫ರಿಂದಲೇ ವೇದಿಕೆಯಲ್ಲಿ ಹಾಡುವುದನ್ನು ಪೂರ್ತಿ ನಿಲ್ಲಿಸಿಬಿಟ್ಟರು ಮತ್ತು ಸಾರ್ವಜನಿಕ ಬದುಕಿಗೆ ಸಂಪೂರ್ಣವಾಗಿ ಬೆನ್ನು ತಿರುಗಿಸಿದರು.
ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ಪದ್ಮ ಭೂಷಣ, ಮಹಾರಾಷ್ಟ್ರ ಸರ್ಕಾರದ ರಾಜಗಾಯಿಕಾ ಸಂಮಾನ (ಅದಕ್ಕೆ ಪಾತ್ರರಾದ ಮೊತ್ತ ಮೊದಲ ಕಲಾವಿದೆ) ಮುಂತಾದ ಹಲವು ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಹಿಂದುಸ್ತಾನಿ ಸಂಗೀತದಲ್ಲಿ ಪ್ರೆಸಿಡೆಂಟ್ಸ್ ಅವಾರ್ಡ್ ಬಂದ ಮೊದಲ ಮಹಿಳೆ ಕೇಸರ್‌ಬಾಯಿ.
ಅವರು ಹಾಡಿರುವ ಜಾತ್ ಕಹಾ ಹೋ ಎಂಬ ಭೈರವಿಯ ಮೂರುವರೆ ನಿಮಿಷದ ಧ್ವನಿಮುದ್ರಿಕೆಯು ವಾಯೇಜರ್ ಗೋಲ್ಡನ್ ರೆಕಾರ್ಡ್‌ನಲ್ಲಿ ಸೇರ್ಪಡೆ ಯಾಗಿ ೧೯೭೭ರಲ್ಲಿ ಆಕಾಶಕ್ಕೆ ಹಾರಿದ ವಾಯೇಜರ್ ೧ ಮತ್ತು ೨ ಸ್ಪೇಸ್‌ಕ್ರಾಫ್ಟ್ ಮೂಲಕ ಗಗನವನ್ನೂ ಮುಟ್ಟಿದೆ. ಅದನ್ನು ಭಾರತೀಯ ಅಭಿಜಾತ ಸಂಗೀತದ ಅತ್ಯುತ್ತಮ ಮಾದರಿ ಎಂದು ಶಿಫಾರಸ್ಸು ಮಾಡಿ ಸೇರಿಸಿದವರು ರಾಬರ‍್ಟ್ ಇ ಬ್ರೌನ್ ಎಂಬ ಖ್ಯಾತ ಎತ್ನೋಮ್ಯೂಸಿಕಾಲಜಿ ವಿದ್ವಾಂಸ.
ಕೇಸರ್‌ಬಾಯಿ ಸದಾ ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಮಹಿಳೆ. ಅವರಿಗೆ ಒಳ್ಳೆಯ ಅಡುಗೆ ಮಾಡಿ ಊಟ ಮಾಡುವುದು, ಶಿಸ್ತಿನಿಂದ ಕಲಾತ್ಮಕ ವಾಗಿ ಅಲಂಕರಿಸಿಕೊಳ್ಳುವುದು, ಅಂದದ ಒಡವೆ ಗಳನ್ನು ತೊಡುವುದು, ಷೇರ್ ಮತ್ತು ಸ್ಟಾಕ್‌ಗಳಲ್ಲಿ ಹಣ ಹೂಡಿ ಜೂಜಾಡುವುದು ಇವೆಲ್ಲವೂ ಬಲು ಇಷ್ಟ. ಅವರು ಸೊಗಸಾಗಿ ಅಡುಗೆ ಮಾಡುತ್ತಿದ್ದರು. ಪ್ರತಿಬಾರಿ ಬೇರೆ ಬೇರೆ ಸ್ಥಳಗಳಿಗೆ ಕಚೇರಿಗೆಂದು ಹೋದಾಗ ಅಲ್ಲಿನ ವಿಶೇಷ ಅಡುಗೆಯನ್ನು ಕಲಿಯುತ್ತಿದ್ದರು. ತಾವು ತುಂಬಾ ಬಯಸಿಕೊಂಡು ತಿನ್ನುತ್ತಿದ್ದ ಮೀನಿನ ಸಾರಿಗೆ ಮಸಾಲೆಯನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರು. ಇಂತಹ ಸಂಗೀತ ಕ್ಷೇತ್ರದ ದೇವತೆಗೆ ಈ ದೇಶದಲ್ಲಿ ಜಾತಿ ಮತ್ತು ಕುಲದ ರೋಗ ನಿರಂತರ ಕಾಡಿತು. ಬಾಲ್ಯದಿಂದಲೂ ಈ ಕಹಿಯನ್ನು ಅನುಭವಿಸಿದ್ದ ಕೇಸರ್ ಅವರ ಮನಸ್ಸಿನಲ್ಲಿ ಇವೆಲ್ಲವೂ ಮಾಯದ ಗಾಯಗಳಾಗಿ ಉಳಿದಿದ್ದವು. ಹಾಗಾಗಿ ಮಗಳನ್ನು ಅವರ ಸಂಗೀತಲೋಕದಿಂದ ದೂರವೇ ಇಟ್ಟರು.
ಅವರಿಗೆ ಕೆಲವು ವಿಲಕ್ಷಣವಾದ ನಡವಳಿಕೆಗಳು ಇದ್ದವು. ಅವರಿಗೆ ಧ್ವನಿವರ್ಧಕಗಳನ್ನು ನೋಡಿದರೆ ಆಗುತ್ತಿರಲಿಲ್ಲ. ಮಾಧ್ಯಮದವರು ಮತ್ತು ಛಾಯಾ ಗ್ರಾಹಕರನ್ನು ಕಂಡರೆ ಹುಚ್ಚುಹುಚ್ಚಾಗಿ ನಡೆದು ಕೊಳ್ಳುತ್ತಿದ್ದರು. ಆದರೆ ಅವರ ವಿಲಕ್ಷಣತೆಗಳು ಏನೇ ಇರಲಿ ಅವರೊಂದಿಗೆ ಸಂಗೀತದ ಒಂದು ಭವ್ಯ ಯುಗವೇ ಕೊನೆಗೊಂಡಿತು. ಹಿಂದುಸ್ತಾನಿ ಸಂಗೀತದ ಒಂದು ಮಹತ್ತರವಾದ ನಿರ್ಣಾಯಕ ಘಟ್ಟ ಮುಗಿದು ಹೋಯಿತು. ಕೇಸರ್‌ರಬಾಯಿ ಕೇಸರಿಯಷ್ಟೇ ಅನನ್ಯವಾದವರು.
ಆಕರ
೧ ಸುಶೀಲ ಮಿಶ್ರ, ಕೇಸರಬಾಯಿ ಕೇರ‍್ಕರ್
೨ ನಮಿತಾ ದೇವೀದಯಾಲ್, ದ ಮ್ಯೂಸಿಕ್ ರೂಮ್
೩ ಕುಮಾರ್ ಪ್ರಸಾದ್ ಮುಖರ್ಜಿ, ದ ಲಾಸ್ಟ್ ವರ‍್ಲ್ಡ್ ಆಫ್ ಹಿಂದುಸ್ತಾನಿ ಮ್ಯೂಸಿಕ್
೪ ರಾಜೀವ್ ನೈಯ್ಯರ್, ಎ ರಸಿಕಾಸ್ ಜರ್ನಿ ಥ್ರೂ ಹಿಂದುಸ್ತಾನಿ ಮ್ಯೂಸಿಕ್
೫ ಜಿ ಎನ್ ಜೋಶಿ, ಡೌನ್ ಮೆಲಡಿ ಲೇನ್
೬ ಮೋಹನ್ ನಾಡಕರ್ಣಿ, ಮೆಮೊರಬಲ್ ಮೊಮೆಂಟ್ಸ್ ವಿತ್ ಕೇಸರ್‌ಬಾಯ್ ಕೇರ‍್ಕರ್
೭ SIRC Journal
