Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ

ವೇಣುಗೋಪಾಲ್ ಟಿ ಎಸ್ ಮತ್ತು ಶೈಲಜಾ

ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಕಲಾವಿದ ಶ್ರೀ ಟಿ ಎಂ ಕೃಷ್ಣ. ಕರ್ನಾಟಕ ಸಂಗೀತದ ಹೆಚ್ಚಿನ ಕಲಾವಿದರಂತೆ ಸಾಂಪ್ರದಾಯಿಕ ವೈದಿಕ ಕುಟುಂಬದಿಂದ ಬಂದು, ಸಂಗೀತವನ್ನು ತೀರಾ ಸಂಪ್ರದಾಯಿಕ ರೀತಿಯಲ್ಲಿ ಕಲಿತವರು. ತಾಯಿಯಿಂದ ಸಂಗೀತಕ್ಕೆ ಪ್ರವೇಶ ಪಡೆದ ಕೃಷ್ಣ, ಬಿ ಸೀತಾರಾಮ ಶರ್ಮ ಅವರಲ್ಲಿ ಹಲವು ವರ್ಷಗಳು ಕಲಿತು, ಮುಂದೆ ರಾಗ-ತಾನ-ಪಲ್ಲವಿಯ ತರಬೇತಿಯನ್ನು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಪಡೆದರು. ಅನಂತರ ಅತ್ಯಂತ ಸಂಪ್ರದಾಯವಾದಿಯೂ, ಶ್ರೇಷ್ಠ ವಿದ್ವಾಂಸರೂ ಆದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಮೆಚ್ಚಿನ ಶಿಷ್ಯರಾದರು. ಬಹುಬೇಗ ಖ್ಯಾತಿ ಪಡೆದರು. ಕೀರ್ತಿ-ಹಣ ಯಾವುದಕ್ಕೂ ಕೊರತೆಯಿರಲಿಲ್ಲ. ಜನ ಸದಾ ಅವರ ಸಂಗೀತಕ್ಕೆ ಮುಗಿಬೀಳುತ್ತಿದ್ದರು. ಆದರೆ ಕ್ರಮೇಣ ಏನೋ ಅತೃಪ್ತಿ ಅವರನ್ನು ಕಾಡತೊಡಗಿತು. ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಯ ಹಿನ್ನಲೆಯಲ್ಲಿ ಬೆಳೆದ ಇವರಿಗೆ, ಸಂಗೀತ ಎಂದರೆ ಅದು ಆತ್ಮದ ಅಭಿವ್ಯಕ್ತಿ, ಅದು ಕೇವಲ ಕಲಿತದ್ದರ ಪ್ರಸ್ತುತಿಯಲ್ಲ ಎನಿಸಲಾರಂಭಿಸಿತು.
ಒಂದು ಮಟ್ಟದ ಔತ್ತಮ್ಯ ತಲುಪಿದ ಮೇಲೆ ಕಂಠ, ಗಾಯನ ತಂತ್ರಗಳು, ಇತ್ಯಾದಿ ಎಲ್ಲಾ ಪರಿಕರಗಳೂ ನಿಮ್ಮ ಬೆರಳ ತುದಿಯಲ್ಲಿರುತ್ತವೆ. ಏನು ಹಾಡಬೇಕು, ಜನ ಯಾವುದನ್ನು ಮೆಚ್ಚುತ್ತಾರೆ ಎಲ್ಲಾ ನಿಖರವಾಗಿ ತಿಳಿದಿರುತ್ತದೆ. ನೀವು ಯಾವುದನ್ನು ಸುಂದರ ಎಂದು ಪರಿಗಣಿಸುತ್ತೀರಿ ಮತ್ತು ನಾನೇನನ್ನು ಸುಂದರವೆಂದು ಭಾವಿಸುತ್ತೇನೆ ಎರಡೂ ತಿಳಿದಿರುತ್ತದೆ. ಆ ಸುಂದರವಾದದ್ದನ್ನು ನಿಮಗೆ ನಾನು ಸರಬರಾಜು ಮಾಡಬೇಕು. ಕೊನೆಯಲ್ಲಿ ನಾವಿಬ್ಬರೂ ಸಂತುಷ್ಟರು. ನಿಜವಾಗಿ ಇದು ನನ್ನನ್ನು ತುಂಬಾ ಕಾಡಿಸಿತು. ಸೌಂದರ್ಯವನ್ನು ಡೆಲಿವರ್ ಮಾಡುವುದು ಅನ್ನೋದೇ ಅಸಹ್ಯಕರ ಅಲ್ಲವೇ? ಅದು ಅದರಷ್ಟಕ್ಕೇ ಆಗಬೇಕು. ನೀವು ಸರಬರಾಜು ಮಾಡುವುದಕ್ಕೆ ಸಾಧ್ಯವಿಲ್ಲ. ನನಗಿದು ಮೋಸವೆನಿಸಿತು. ಆದರೆ ನಿಜವಾಗಿ ಏನಾಗುತ್ತಿದೆ ಅನ್ನುವುದು ಸ್ಪಷ್ಟವಾಗಿರಲಿಲ್ಲ. ಅಲ್ಲಿಂದ ನನ್ನ ಒದ್ದಾಟ, ಹುಡುಕಾಟ ಪ್ರಾರಂಭವಾಯ್ತು. ಈ ಸಂಗೀತ ಎಲ್ಲಿಂದ ಬಂತು ಎನ್ನುವುದನ್ನು ಹುಡುಕಲು ಹಲವು ವರ್ಷಗಳು ಪುರಾತನ ಗ್ರಂಥಗಳನ್ನು ಓದಿದೆ. ಅನೇಕ ಸಂಸ್ಕೃತ ವಿದ್ವಾಂಸರು ಸಹಾಯ ಮಾಡಿದರು. ಒಂದು ರಾಗ ಇನ್ನೂರು ವರ್ಷಗಳ ಹಿಂದೆ ಹೇಗಿದ್ದಿರಬಹುದು; ಅದನ್ನು ಮತ್ತೆ ಕಟ್ಟಿಕೊಳ್ಳಬಹುದಾ ಎಂದು ಶೋಧಿಸುತ್ತಾ ಹೋದೆ. ಶಾಸ್ತ್ರಗ್ರಂಥವೊಂದಕ್ಕೆ ಅನುಗುಣವಾಗಿ ರಾಗವನ್ನು ಹಾಡಿದಾಗ ಅದೆಷ್ಟು ಭಯಂಕರವಾಗಿತ್ತೆಂದರೆ, ನಾನು ತುಂಬಾ ಹೆದರಿಬಿಟ್ಟೆ. ನನಗದು ಸುಂದರವಾಗಿ ತೋರಲಿಲ್ಲ. ಹಾಗಾದರೆ ಸೌಂದರ್ಯ ಎನ್ನುವುದು ಆಯಾ ಕಾಲಘಟ್ಟಕ್ಕೆ ಮತ್ತು ಸಂಸ್ಕೃತಿಗೆ ನಿರ್ದಿಷ್ಟವಾದುದೇ ಇತ್ಯಾದಿ ಪ್ರಶ್ನೆಗಳು ಎದುರಾದುವು. ಇವುಗಳಿಗೆ ನನ್ನ ಬಳಿಯೂ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೇ ತಡ ನೂರಾರು ಪ್ರಶ್ನೆಗಳು ಮುತ್ತಿಕೊಂಡವು. ನನ್ನ ಪುಟ್ಟ ಕರ್ನಾಟಕ ಸಂಗೀತದ ಜಗತ್ತಿನಲ್ಲಿ, ಬ್ರಾಹ್ಮಣ ಜಗತ್ತಿನಲ್ಲಿ ಸೌಂದರ್ಯ ಅಂದರೇನು ಎಂದು ನಾನು ಒದ್ದಾಡುತ್ತಿರುವಾಗ, ಇನ್ನು ನಾನು ಗಮನಿಸಿಯೇ ಇಲ್ಲದ ವಿಶಾಲಪ್ರಪಂಚದ ಕಥೆ ಏನು? ನಾನು ಈ ಬಾವಿಯಲ್ಲಿ ಸುರಕ್ಷಿತವಾಗಿದ್ದೆ. ೧೯೯೮ರ ಟಿ ಎಂ ಕೃಷ್ಣ ಈಗ ನನ್ನೊಂದಿಗೆ ಮುಖಾಮುಖಿಯಾದರೆ ಏನು ಮಾತನಾಡುತ್ತಿದ್ದೀಯಾ? ಇದು ಅತ್ಯಂತ ಸುಂದರವಾದ ಸಂಗೀತ. ಇದೆಂತಹ ಹುಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದೀಯ, ಅಂತ ಬೇಸರಿಸಿಕೊಳ್ಳುತ್ತಿದ್ದ. ಆದರೆ ನಮಗೆ ಬೇರೆ ಸಂಗೀತಗಳ ಬಗ್ಗೆ ಗೌರವವಿಲ್ಲ ಅನ್ನೋದು ನಿಜ. ಸಿನಿಮಾ ಸಂಗೀತ, ಜಾನಪದ ಸಂಗೀತ ಇತ್ಯಾದಿಗಳಿಗಿಂತ ನಮ್ಮ ಸಂಗೀತ ಇದೆಯಲ್ಲ ಅದು ತುಂಬಾ ಶ್ರೇಷ್ಠವೆಂಬ ಭಾವನೆ ನಮಗಿದೆ.
ನಾವು ಬೇರೆ ಸಂಗೀತವನ್ನು, ಅದರ ಧ್ವನಿಯನ್ನು ಇಷ್ಟಪಡುತ್ತಿಲ್ಲ ಅಂದರೆ ಅದನ್ನು ನಿಜವಾಗಿ ನಾವು ಕೇಳಿಸಿಕೊಳ್ಳುತ್ತಿಲ್ಲ ಎಂದರ್ಥ. ನಾವು ಬೇರೆ ಧ್ವನಿಗಳನ್ನು ಕೇಳಿಸಿಕೊಳ್ಳಬೇಕಾಗಿದೆ.
ನನ್ನದೊಂದು ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು. ಕಲಿಸುವಾಗ ಸಾಮಾನ್ಯವಾಗಿ ಒಂದು ಕೃತಿಯ ಸಾಲನ್ನು ಹಾಡುತ್ತೇನೆ. ವಿದ್ಯಾರ್ಥಿಗಳು ರಿಪೀಟ್ ಮಾಡುತ್ತಾರೆ. ಆ ಸಾಲನ್ನು ನಾನು ಹತ್ತು ಸಲ ಹಾಡಿದರೂ ಕೆಲವರು ತಪ್ಪಾಗಿಯೇ ಹಾಡುತ್ತಿರುತ್ತಾರೆ. ಇದೇಕೆ ಹೀಗೆ? ನನಗೆ ಕೊನೆಗೆ ತಿಳಿಯಿತು. ನಾನು ಆ ಸಾಲನ್ನು ಹಾಡಲು ಪ್ರಾರಂಭಿಸಿದ ಕೂಡಲೆ ಅವರು ತಮ್ಮ ಮನಸ್ಸಿನಲ್ಲಿ ಹಾಡಿಕೊಳ್ಳಲು ಆರಂಭಿಸುತ್ತಾರೆ. ಹಾಗಾಗಿ ನಾನು ಹಾಡಿದ್ದನ್ನು ಅವರು ಕೇಳಿಸಿಕೊಳ್ಳುತ್ತಿರುವುದಿಲ್ಲ. ತಮ್ಮ ಮನಸ್ಸಿನ ಹಾಡನ್ನು ಕೇಳಿಸಿಕೊಳ್ಳುತ್ತಾ, ಅದನ್ನೇ ಹಾಡುತ್ತಿರುತ್ತಾರೆ. ಸಂಗೀತದಲ್ಲಿ ಹಾಡುವುದಕ್ಕಿಂತ ಕೇಳಿಸಿಕೊಳ್ಳುವುದು ಮುಖ್ಯ. ಇದು ಉಳಿದ ವಿಷಯಕ್ಕೂ ನಿಜ. ವಾಸ್ತವವಾಗಿ ನಾವು ನಮ್ಮ ಸುತ್ತಲಿನ ಧ್ವನಿಗಳನ್ನೂ ಕೇಳಿಸಿಕೊಳ್ಳುವುದಿಲ್ಲ. ನಮ್ಮ ಧ್ವನಿಯನ್ನಷ್ಟೇ ಕೇಳಿಸಿಕೊಳ್ಳುತ್ತಿರುತ್ತೇವೆ. ಅದನ್ನೇ ಉಳಿದವುಗಳ ಮೇಲೆಯೂ ಹೇರುತ್ತಿರುತ್ತೇವೆ.
ಹಾಗಾಗಿಯೇ ಕೃಷ್ಣ ಕೂತ್ತು, ಕೊಡಿಯಾಟ್ಟಂ ಪರೈಯಾಟ್ಟಂ ಕಲಾವಿದರ ಜೊತೆ, ಜೋಗತಿಯರ ಜೊತೆ ಪ್ರಯೋಗಗಳನ್ನು ಮಾಡಿದ್ದಾರೆ. ಕೂತ್ತು ಸಂಗೀತಕ್ಕೆ ಹಿನ್ನೆಲೆಯಾಗಿ ಕರ್ನಾಟಕ ಸಂಗೀತವನ್ನು ಹಾಡಿದ್ದಾರೆ. ಇದೊಂದು ರೀತಿಯಲ್ಲಿ ಸಾಮಾಜಿಕ ಹಾಗೂ ಸಂಗೀತಾತ್ಮಕ ಪ್ರಯೋಗ.

ನಮ್ಮಲ್ಲಿ ಕೂತ್ತು ಎಂಬ ಸಂಪ್ರದಾಯವಿದೆ. ಅದನ್ನು ತೆರಕೂತ್ತು, ಕಟ್ಟೈ ಕೂತ್ತು ಎನ್ನುತ್ತಾರೆ. ಸಾಮಾನ್ಯವಾಗಿ ಇದನ್ನು ರಸ್ತೆಯಲ್ಲಿ ಕೆಲವೊಮ್ಮೆ ದೇವಾಲಯಗಳಲ್ಲಿ ಮಾಡುತ್ತಾರೆ. ಇದು ಮುಖ್ಯವಾಗಿ ದಲಿತರ ಕಲೆ. ನಾನು ಮೊದಲ ಬಾರಿ ಕೂತ್ತು ಸಂಗೀತವನ್ನು ಕೇಳಿದಾಗ ಅದರ ಬಗ್ಗೆ ದ್ವೇಷವುಂಟಾಗಿತ್ತು. ಅದು ಯಾವ ಮಾಧುರ್ಯವೂ ಇಲ್ಲದ ಕಿರುಚಾಟವಾಗಿ ತೋರಿತ್ತು. ಅವರು ಶ್ರುತಿಶುದ್ಧವಾಗಿ ಹಾಡುತ್ತಿರಲಿಲ್ಲ. ಕೂತ್ತು ತುಂಬಾ ಸುಮಾರಾಗಿದೆ ಎಂದು ನನ್ನ ಸಾಮಾಜಿಕ ಹಿನ್ನೆಲೆ ಹೇಳುತ್ತಿತ್ತು. ನನಗದು ಇಷ್ಟವಾಗಿರಲಿಲ್ಲ. ಅಂದರೆ ನಾನದನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಅನಂತರ ದೇಶದಲ್ಲೇ ಅತ್ಯುತ್ತಮ ಕೂತ್ತು ಕಲಾವಿದರಾಗಿದ್ದ ರಾಜಗೋಪಾಲ್ ಜೊತೆ ಕೆಲಸ ಮಾಡಲಾರಂಭಿಸಿದೆ. ಒಂದು ದಿನ ಸಣ್ಣ ಮಕ್ಕಳು ಮಾಡುತ್ತಿದ್ದ ’ಅಭಿಮನ್ಯುವಧಾ ಪ್ರಕರಣ’ ನೋಡುತ್ತಿದ್ದೆ. ಅದು ಅವರ ಮೊದಲ ಪ್ರದರ್ಶನ. ಅದು ನಡುರಾತ್ರಿ ಪ್ರಾರಂಭವಾಗಿ ಬೆಳಗ್ಗೆ ೫ ಗಂಟೆಗೆ ಮುಗಿಯುತ್ತಿತ್ತು. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಾಟಕ ಕ್ಲೈಮಾಕ್ಸ್‌ಗೆ ಬಂದಿತ್ತು. ನನ್ನ ಮಟ್ಟಿಗೆ ಒಂದು ಪವಾಡ ನಡೆದುಹೋಗಿತ್ತು. ಇದ್ದಕ್ಕಿದ್ದಂತೆ ನನಗೆ ಅದು ಸುಂದರ ಎನಿಸಲಾರಂಭಿಸಿತು. ಅದರ ಪ್ರತಿ ಪಾತ್ರದ ಒಳಕ್ಕೆ ಹೋಗಲು ನನಗಾಯಿತು. ಇನ್ನೊಂದು ಪ್ರಪಂಚದೊಳಕ್ಕೆ ಪ್ರವೇಶಿಸಲು ನನಗೆ ಸಾಧ್ಯವಾಗಿತ್ತು. ಆ ಕ್ಷಣಕ್ಕೆ ನನ್ನ ಕರ್ನಾಟಕ ಸಂಗೀತ, ನನ್ನ ಜಾತಿ ಇವೆಲ್ಲಾ ಮರೆತುಹೋಗಿತ್ತು. ನನ್ನೊಳಗೆ ಅದೇನೋ ಆಯಿತು. ನನ್ನ ಅಸ್ಮಿತೆಯ ಹೊರೆಯನ್ನು ಕಳಚಿಕೊಂಡು ಹೊಸದೊಂದು ಸೌಂದರ್ಯಲೋಕವನ್ನು ಪ್ರವೇಶಿಸಲು ಸಾಧ್ಯವಾಗಿತ್ತು. ಸಂಬಂಧ ಎಂದರೆ ಇದು. ಇದು ಎಲ್ಲಾ ಸಂಬಂಧಗಳ ವಿಷಯಕ್ಕೂ ನಿಜ. ಸ್ನೇಹದಲ್ಲಾಗಲಿ, ಪ್ರೇಮದಲ್ಲಾಗಲಿ ಇಬ್ಬರು ವ್ಯಕ್ತಿಗಳು ಸ್ವಲ್ಪ ಹೊತ್ತಾದರೂ ಒಬ್ಬರು ಇನ್ನೊಬ್ಬರ ಲೋಕದೊಳಕ್ಕೆ ಪ್ರವೇಶಿಸಬೇಕು ಮತ್ತು ಪ್ರವೇಶಿಸಲು ಸಾಧ್ಯವಾಗಬೇಕು. ಇದು ಸಮಾಜ ಮತ್ತು ಕಲೆ ಎರಡರ ವಿಷಯಕ್ಕೂ ನಿಜ. ನನಗೆ ಕೂತ್ತು ಕಲಾವಿದರ ಸಮುದಾಯದೊಳಕ್ಕೆ ಮಾನಸಿಕವಾಗಿ ಪ್ರವೇಶಿಸಲು ಸಾಧ್ಯವಾಗಿತ್ತು. ಎರಡು ಕಲಾಪ್ರಕಾರಗಳೂ ಸುಂದರವಾಗಿವೆ ಎನಿಸಿತು. ಜೋಗಪ್ಪಗಳ ಜೊತೆ ಹಾಡುವಾಗಲು ಇದೇ ಆಗಿದ್ದು. ನಮ್ಮ ನಡುವಿನ ಕಂದರ ಮುಚ್ಚಿಕೊಳ್ಳಬೇಕೆಂಬ ತುಡಿತವಿತ್ತು. ಸಮಾಜದಲ್ಲಿ ಕೆಲವರು ಅಂಚಿನಲ್ಲೇ ಉಳಿದುಬಿಟ್ಟಿರುತ್ತಾರೆ. ಕೆಲವರು ಸ್ಥಿತಿವಂತರಾಗಿರುತ್ತಾರೆ. ಇದೊಂದು ಆಕಸ್ಮಿಕವಲ್ಲ. ಸಾಮಾಜಿಕ ರಚನೆಯೇ ಹಾಗಿದೆ. ಅಂಚಿನಲ್ಲಿ ಉಳಿದವರೊಂದಿಗೆ ಸಂಭಾಷಣೆ ಸಾಧ್ಯವಾಗಬೇಕು; ಮತ್ತು ಸಮಾನ ನೆಲೆಯಲ್ಲಿ ಸಾಧ್ಯವಾಗಬೇಕು. ಇದಕ್ಕೆ ದಾರಿ ಕಂಡುಕೊಳ್ಳಬೇಕು. ಇದರಿಂದ ನಾವು ಇನ್ನಷ್ಟು ಸೂಕ್ಷ್ಮಸಂವೇದಿಗಳಾಗುತ್ತೇವೆ. ಇವೆಲ್ಲಾ ಈಸ್ತಟೆಕ್ ಪ್ರಶ್ನೆಗಳೂ ಹೌದು, ರಾಜಕೀಯ ಪ್ರಶ್ನೆಗಳೂ ಹೌದು, ಹಾಗೆಯೇ ಸಾಮಾಜಿಕ ಪ್ರಶ್ನೆಗಳೂ ಆಗಿದ್ದವು.
ಹಾಗಾದರೆ ಕರ್ನಾಟಕ ಸಂಗೀತವನ್ನು ಎಲ್ಲಾ ಸಂಕೋಲೆಗಳಿಂದ ಮುಕ್ತಗೊಳಿಸಿ ಎಲ್ಲರಿಗೂ ತಲುಪಿಸುವುದಕ್ಕೆ ಕೃಷ್ಣ ಹೊರಟಿದ್ದಾರಾ ಅಂದರೆ-
ಬಹುಶಃ ಆರಂಭದಲ್ಲಿ ನನ್ನ ಮನಸ್ಸಿನಲ್ಲಿ ಅಂತಹ ಉದ್ದೇಶ ಇತ್ತೇನೋ, ನನಗೆ ಗೊತ್ತಿಲ್ಲ. ಆದರೆ ಎಲ್ಲರಿಗೂ ಕರ್ನಾಟಕ ಸಂಗೀತ ಬೇಕಿಲ್ಲ ಎಂದು ಅನಂತರದಲ್ಲಿ ಅರಿವಾಯಿತು. ಕರ್ನಾಟಕ ಸಂಗೀತವನ್ನು ಇಷ್ಟಪಡದೇ ಇರುವುದಕ್ಕೂ ಜನರಿಗೆ ಹಕ್ಕಿರಬೇಕು. ಆ ನಿರಾಕರಣೆಯನ್ನು ನಾನು ಗೌರವಿಸುತ್ತೇನೆ. ನಮ್ಮ ಸಮಸ್ಯೆಯೆಂದರೆ ನಾವು ನಿರಾಕರಣೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ನಿರಾಕರಣೆಯೇ ಸಾಧ್ಯವಿಲ್ಲದ, ನೆಮ್ಮದಿಯ ಪರಿಸರವನ್ನು ನಿರ್ಮಿಸಿಕೊಳ್ಳುತ್ತೇವೆ. ನಮ್ಮ ಸಂಗೀತವನ್ನು ಒಪ್ಪಿಕೊಳ್ಳುವವರೇ ನಮ್ಮ ಕಾರ್ಯಕ್ರಮಗಳಿಗೆ ಬರುತ್ತಾರೆ. ಬೇರೆಯವರು ಬರುವುದಿಲ್ಲ ಅಥವಾ ಅವರಿಗೆ ಅವಕಾಶವಿಲ್ಲ ಎನ್ನಬಹುದು. ’ಕಾಕಾ ಮುತ್ತಾ’ ಎನ್ನುವ ತಮಿಳು ಸಿನಿಮಾದಲ್ಲಿ ಇಬ್ಬರು ಪುಟ್ಟ ಮಕ್ಕಳು ಸಿಟಿ ಸೆಂಟರ್‌ಗೆ ನಡೆದು ಬರುತ್ತಿರುವ ದೃಶ್ಯವಿದೆ. ಆಗ ತಮ್ಮ, ಸಿಟಿ ಸೆಂಟರ್ ಎಲ್ಲಿದೆ, ಎಂದು ಕೇಳುತ್ತಾನೆ. ಅದೋ ಅಲ್ಲಿದೆ ಎಂದು ಅಣ್ಣ ತೋರಿಸುತ್ತಾನೆ. ಆಗ ತಮ್ಮ, ಅವರು ನಮ್ಮನ್ನು ಅಲ್ಲಿಗೆ ಬಿಟ್ಟುಕೊಳ್ಳುತ್ತಾರೆ ಅನ್ನಿಸುತ್ತಾ? ಎಂದು ಕೇಳುತ್ತಾನೆ. ಆ ದೃಶ್ಯ ನಮ್ಮ ಸಮಾಜದ ವಿನ್ಯಾಸವನ್ನು ವಿವರಿಸುತ್ತದೆ. ಸ್ಥಳ ಎನ್ನುವುದನ್ನೂ ತಲೆಕೆಳಗು ಮಾಡಬೇಕು.
ಹಾಗಾಗಿಯೇ ಕೃಷ್ಣ ಕರ್ನಾಟಕ ಸಂಗೀತವನ್ನು ಮೀನುಗಾರರ ಕಾಲೋನಿಯಲ್ಲಿ, ಚಲಿಸುವ ಬಸ್ಸಿನಲ್ಲಿ, ಮುನಿಸಿಪಲ್ ಶಾಲೆಗಳಲ್ಲಿ ಬೇರೆ ಸಂಗೀತಗಳ ಜೊತೆಯಲ್ಲಿ ಪ್ರಸ್ತುತಪಡಿಸುವ ಪ್ರಯೋಗಕ್ಕೆ ಕೈಹಾಕಿದರು.
ನನ್ನ ಮನಸ್ಸಿನಲ್ಲಿ ಕರ್ನಾಟಕ ಸಂಗೀತ ಅಂದರೆ ಏನು ಎನ್ನುವುದೇ ತಿಳಿಯದಿದ್ದ ಜನಗಳ ನಡುವೆ, ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಪ್ರಸ್ತುತಪಡಿಸಬೇಕೆಂಬ ಹಂಬಲವಿತ್ತು. ಬಸ್ಸಿನಲ್ಲಿ ಒಂದು ರಿಲೇ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆವು. ಪ್ರತಿ ಸ್ಟಾಪಿನಲ್ಲೂ ಒಬ್ಬೊಬ್ಬ ಸಂಗೀತಗಾರ ಸುಮಾರು ೨೦ ನಿಮಿಷಗಳ ಕಾಲ ಹಾಡುತ್ತಾ ಹೋಗಬೇಕೆನ್ನುವುದು ನಮ್ಮ ಯೋಜನೆಯಾಗಿತ್ತು. ಅದು ರ‍್ಯಾಪ್, ರಾಕ್, ರಾಮಸಂಕೀರ್ತನ, ಕರ್ನಾಟಕ ಸಂಗೀತ ಹೀಗೆ ಏನು ಬೇಕಾದರೂ ಆಗಬಹುದಿತ್ತು. ಏನಾಗುತ್ತಿದೆ ಎಂದು ನೋಡಲು ನಾನೂ ಒಂದು ಸ್ಟಾಪಿನಲ್ಲಿ ಬಸ್ಸು ಹತ್ತಿದೆ. ನನ್ನ ಎಳೆಯ ಗೆಳೆಯರು, ಅಣ್ಣ ನೀವೂ ಒಂದು ಹಾಡು ಹಾಡಿ, ಎಂದರು. ನಾನು ಭಾರತಿಯಾರ್ ಅವರ ಹಾಡನ್ನು ಹಾಡಲಾರಂಭಿಸಿದೆ. ಅಲ್ಲಿ ಚೆನ್ನಾಗಿ ಕುಡಿದಿದ್ದ ವ್ಯಕ್ತಿಯೊಬ್ಬ ನರ್ತಿಸಲು ಪ್ರಾರಂಭಿಸಿದ. ಅದು ನನ್ನ ಬದುಕಿನ ಅತ್ಯಂತ ಸುಂದರವಾದ ಕ್ಷಣ. ನಿಜ ಹೇಳಬೇಕೆಂದರೆ ನಾನು ತುಂಬಾ ಹೆದರಿದ್ದೆ. ಹಾಡುವುದಕ್ಕೆ ನಾನು ಎಂದೂ ಭಯಪಟ್ಟವನಲ್ಲ. ಆದರೆ ಅಂದು ಹೆದರಿದ್ದೆ. ನಾನು ತಿರಸ್ಕಾರಕ್ಕೆ, ನಿರಾಕರಣೆಗೆ ಹೆದರಿದ್ದೆ. ನಾನು ಯಾವ ನಾದ, ಯಾವ ಧ್ವನಿಯನ್ನು ಪ್ರತಿನಿಧಿಸುತ್ತಿದ್ದೆನೋ ಅದನ್ನು ಸಾಂಸ್ಕೃತಿಕವಾಗಿ ತಿರಸ್ಕರಿಸಬಹುದು ಎನ್ನುವ ಗಾಬರಿಯಲ್ಲಿದ್ದೆ. ನಾನು ಹೇಗೆ ಹಾಡಬೇಕು, ಬೇರೆ ರೀತಿಯಲ್ಲಿ ಹಾಡಬೇಕೇ, ಎಂಬ ಒದ್ದಾಟದಲ್ಲಿದ್ದೆ. ಇಬ್ಬರು ಚಿಕ್ಕಹುಡುಗರು ನನ್ನ ಮುಂದಿನ ಸೀಟಿನಲ್ಲಿ ಬೆರಳಿನಿಂದ ಕಿವಿ ಮುಚ್ಚಿಕೊಂಡು ಕುಳಿತಿದ್ದರು. ಅದೂ ಕೂಡ ನನಗೆ ತುಂಬಾ ಒಳ್ಳೆಯ ಅನುಭವವೇ. ನಾವು ವಿಭಿನ್ನ ಸ್ಥಳಗಳಿಗೆ ಹೋಗಬೇಕು ಮತ್ತು ವಿಭಿನ್ನ ಕಲಾಪ್ರಕಾರಗಳೊಡನೆ – ಪರೈಯಾಟ್ಟಂ, ತೈಯ್ಯಂ ಅಥವಾ ಅಂತಹ ಇನ್ನಾವುದೋ ಇರಬಹುದು- ಸಂವಾದ ಮಾಡಬೇಕು. ಆದರೆ ಸಂವಾದಕ್ಕೆ ಶಾಸ್ತ್ರೀಯ ಲೋಕದಲ್ಲಿ ಸ್ಥಳವೆಲ್ಲದೆ? ನೀವು ಮ್ಯೂಸಿಕ್ ಅಕಾಡೆಮಿಯಲ್ಲಿ ಕೊಡಿಯಾಟ್ಟಂ ಮಾಡಿದರೆ ಅಕಾಡೆಮಿಯ ಸದಸ್ಯರು ಬರುತ್ತಾರೆಯೇ? ಖಂಡಿತಾ ಇಲ್ಲ.
ಅವರು ಬಾಯಿಬಿಟ್ಟು ಹೇಳದಿದ್ದರೂ ಅವರ ಈಸ್ತಟೆಕ್ಸ್‌ಗೆ ಅದು ಹೊಂದುವುದಿಲ್ಲ. ಹಾಗಾದರೆ ನಿಜವಾಗಿ ಈ ಈಸ್ತಟೆಕ್ಸ್ ಅಂದರೆ ಏನು?
ನಾವು ಈಸ್ತೆಟೆಕ್ಸ್ ಅಂದರೆ ಸಾಮಾನ್ಯವಾಗಿ ಸುಂದರವಾದದ್ದು ಅಂತ ಭಾವಿಸಿಕೊಂಡಿದ್ದೇವೆ. ಅದು ಹಾಗಲ್ಲ, ಅದೊಂದು ವ್ಯವಸ್ಥೆ, ರಚನೆ. ಈಗ ಪೋಡಿಯಂ ತೆಗೆದುಕೊಳ್ಳಿ. ಅದಕ್ಕೊಂದು ಉದ್ದೇಶವಿದೆ. ನಾನಲ್ಲಿ ನಿಂತು ಮಾತನಾಡಲು, ನೋಟ್ಸ್ ಇತ್ಯಾದಿ ಇಟ್ಟುಕೊಳ್ಳಲು ಅದು ಬೇಕು. ಅದರ ಆಕಾರ, ಸ್ವರೂಪ ಇವೆಲ್ಲಾ ಅನಂತರ ಬರುತ್ತದೆ. ಇವೆಲ್ಲಾ ಒಟ್ಟಾಗಿ ಅದರ ಈಸ್ತೆಟೆಕ್ಸ್‌ನ್ನು ನಿರ್ಧರಿಸುತ್ತದೆ. ಉದ್ದೇಶಕ್ಕೆ ಪೂರಕವಲ್ಲದಿದ್ದರೆ ಅದೆಷ್ಟೇ ಸುಂದರವಾಗಿದ್ದರೂ ನಾವದನ್ನು ಒಪ್ಪಿಕೊಳ್ಳುವುದಿಲ್ಲ. ಕಲೆಯ ವಿಷಯದಲ್ಲೂ ಇದು ನಿಜ. ಅದರ ಉದ್ದೇಶ, ಸ್ವರೂಪ ಇವೆಲ್ಲಾ ಸೇರಿ ಕಲೆಯ ಈಸ್ತೆಟೆಕ್ಸ್ ನಿರ್ಧಾರವಾಗುತ್ತದೆ. ಒಂದು ಕೃತಿಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಭಾಗವಾಗಿ ಹಾಡುವುದಕ್ಕೂ, ಅದನ್ನು ಭಜನ ಮಂಡಳಿಯ ಭಾಗವಾಗಿ ಹಾಡುವುದಕ್ಕೂ ಇರುವ ಉದ್ದೇಶ ಬೇರೆ. ಹಾಗಾಗಿ ಸಂದರ್ಭಾನುಸಾರವಾಗಿ ಅದರ ಈಸ್ತೆಟೆಕ್ಸ್ ಕೂಡ ಬೇರೆಯಾಗುತ್ತದೆ. ಸಮಾಜ ಬದಲಾದಾಗ ಕಲೆಯ ಈಸ್ತೆಟೆಕ್ಸ್ ಬದಲಾಗುತ್ತದೆ. ಹಾಗೆಯೇ ಈಸ್ತೆಟಿಕ್ಸ್ ಸಮಾಜವನ್ನೂ ಪ್ರಭಾವಿಸುತ್ತದೆ. ದುರಂತವೆಂದರೆ ನಮ್ಮ ಸಾಮಾಜಿಕ, ರಾಜಕೀಯ ಚರ್ಚೆಯಲ್ಲಿ ಸಾಮಾನ್ಯವಾಗಿ ಈಸ್ತೆಟೆಕ್ಸ್‌ಅನ್ನು ಚರ್ಚಿಸುವುದೇ ಇಲ್ಲ. ತಾರತಮ್ಯದ ಬಗ್ಗೆ ಮಾತನಾಡುವಾಗ ಈಸ್ತೆಟೆಕ್ಸ್ ಬಗ್ಗೆಯೂ ಮಾತನಾಡಬೇಕು. ಆಗ ನಮಗೆ ನಾವು ಸೃಷ್ಟಿಸಿರುವ ವಿಕೃತಿಗಳ ಅರಿವಾಗುತ್ತದೆ. ಒಂದನ್ನು ಸುಂದರ ಅನ್ನುವಾಗಲೇ ಉಳಿದವು ಸುಂದರವಲ್ಲ ಎನ್ನುತ್ತಿರುತ್ತೇವೆ. ನಮ್ಮ ಸಾಮಾಜಿಕ ಸ್ಥಾನಮಾನ ನಮ್ಮ ಸೌಂದರ್ಯದ ಪರಿಕಲ್ಪನೆಯನ್ನು ನಿರ್ಧರಿಸುತ್ತಿರುತ್ತದೆ. ನಮಗೆ ಉಭಯಲಿಂಗಿ ಸುಂದರವಾಗಿ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಮನಃಸ್ಥಿತಿ ನಮ್ಮನ್ನು ವಿಭಜಿಸುತ್ತಾ ಹೋಗುತ್ತದೆ. ಈ ಕ್ಲಿಷ್ಟಕರವಾದ ವಿಚಾರಗಳೊಳಕ್ಕೆ ಹೆಚ್ಚೆಚ್ಚು ಇಳಿದಂತೆ, ಇವು ಹೆಚ್ಚೆಚ್ಚು ಅರ್ಥವಾದಂತೆ ನಾನು ಹೆಚ್ಚೆಚ್ಚು ಸ್ವತಂತ್ರನಾದೆ ಅನ್ನಿಸುತ್ತಿದೆ. ಎಷ್ಟೋ ಕಟ್ಟುಪಾಡುಗಳಿಂದ ಮುಕ್ತನಾಗಿದ್ದೇನೆ ಎಂದು ಭಾಸವಾಗುತ್ತಿದೆ. ಎಷ್ಟೋ ಧ್ವನಿಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಹದಿನೈದು ವರ್ಷಗಳ ಹಿಂದೆ ನಾನು ತಾಂತ್ರಿಕವಾಗಿ ಹೆಚ್ಚು ಚೆನ್ನಾಗಿ ಮತ್ತು ಸಂಕೀರ್ಣವಾಗಿ ಹಾಡುತ್ತಿದ್ದಿರಬಹುದು. ಆದರೆ ನನ್ನನ್ನು ನಿಜವಾಗಿ ಕಾಡುವುದು ಆಗಿನ ನನ್ನ ಧ್ವನಿ. ಎಷ್ಟೋ ಜನ ಕೃಷ್ಣ, ದಯೆಯಿಟ್ಟು ನೀವು ಹಿಂದೆ ಹಾಡುತ್ತಿದ್ದಂತೆಯೇ ಹಾಡಿ ಎನ್ನುತ್ತಾರೆ. ಆದರೆ ಇಂದು ಆ ಕೃಷ್ಣ ಇಲ್ಲ. ನನಗದು ಸಂತೋಷ ತಂದಿದೆ. ಈಗ ನಾನು ಜೀವಂತವಾಗಿದ್ದೇನೆ. ಹಲವು ವೈರುಧ್ಯಗಳ ಜೊತೆ ಸೆಣಸಾಡುತ್ತಿರುವುದರಿಂದ ಈ ಜೀವಂತಿಕೆ ಸಾಧ್ಯವಾಗಿದೆ. ಹಲವು ರೀತಿಯ ನಂಬಿಕೆಗಳು ಒಟ್ಟೊಟ್ಟಿಗೆ ಇರುವುದಕ್ಕೆ ಸಾಧ್ಯವಾಗಬೇಕು. ಆಗಲೇ ಸಮಾನತೆ, ಜಾತ್ಯಾತೀತತೆ ಸಾಧ್ಯ. ಕಲೆ, ಸಂಸ್ಕೃತಿ ನಮ್ಮನ್ನು ಪ್ರಶ್ನೆಗೆ ಹಚ್ಚಬೇಕು. ಚಿಂತನೆಗೆ ಹಚ್ಚಬೇಕು. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಾ, ವಿಭಿನ್ನ ಧ್ವನಿಗಳನ್ನು ಸಮಾನ ನೆಲೆಯಲ್ಲಿ ಕೇಳಿಸಿಕೊಂಡು ಗೌರವಿಸುವುದರಲ್ಲೇ ಪ್ರಜಾಸತ್ತೆಯ ಪ್ರಾಣ ಇರುವುದು.
ಕಲಾ ಸಂಗೀತವೆನ್ನುವುದು ಅಮೂರ್ತ ಅದು ಅರ್ಥಕ್ಕೆ ಅಂಟಿಕೊಂಡಿಲ್ಲ ಎನ್ನುತ್ತಿದ್ದ ಕೃಷ್ಣ ಅವರಿಗೆ ಈ ಚಿಂತನೆಯಲ್ಲಿದ್ದ ಸಮಸ್ಯೆ ನಿಧಾನವಾಗಿ ಅರಿವಿಗೆ ಬಂದಿತು.
ನಾವು ಇಡೀ ಪ್ರಪಂಚವನ್ನು ಅರ್ಥಗಳ ಮೂಲಕವೇ ಗ್ರಹಿಸಿಕೊಳ್ಳುತ್ತಿದ್ದೇವೆ ಹಾಗಾಗಿ ಏಕಾಏಕಿ ಅರ್ಥ ಬೇಕಾಗಿಲ್ಲ, ಅದು ಮುಖ್ಯವಲ್ಲ ಎನ್ನುವ ಚಿಂತನೆಯನ್ನು ಒಪ್ಪಿಕೊಳ್ಳುವುದು ಎಲ್ಲರಿಗೂ ತುಂಬಾ ಕಷ್ಟ. ಹಾಗಾಗಿ ಮತ್ತೆ ಸಂಗೀತದಲ್ಲಿ ಸ್ವಲ್ಪ ಮಟ್ಟಿಗೆ ಮಾತು ಮತ್ತು ಅರ್ಥದತ್ತ ಹೊರಳಬೇಕಾಯಿತು.
ಆದರೆ ಅಲ್ಲಿಯೂ ಅವರು ತುಳಿದ ದಾರಿ ಸಾಕಷ್ಟು ಬೇರೆಯಾಗಿತ್ತು. ಅಲ್ಲಿ ಅವರು ತಂದ ಮಾತು ಮತ್ತು ಅರ್ಥಗಳು ಪರಿಸರ ಕಾಳಜಿ ತೋರುವ ಪೊರಂಬೋಕ್ಕುವಿನಂತಹ ಹಾಡುಗಳು, ಕಲಾವಿದನ ಸೃಜನಶೀಲತೆಯನ್ನು ಕೊಲ್ಲಲು ಯತ್ನಿಸಿದ ಸಮಾಜದ ವಿರುದ್ಧ ದನಿ ಎತ್ತಿದ ತಮಿಳು ಕವಿ ಪೆರುಮಾಳ್ ಮುರುಗನ್ನರ ಕವನಗಳು, ಸೌಹಾರ್ದವನ್ನು ಮಾತನಾಡಿದ ಸೂಫಿಯ ಹಾಡುಗಳು, ಕ್ರಿಸ್ತನ ಗೀತೆಗಳು, ಶರಣರ ವಚನಗಳು, ಪ್ರಕೃತಿಪ್ರೀತಿಯನ್ನು ವ್ಯಕ್ತಪಡಿಸುವ ಸಂಸ್ಕೃತದ ಹಾಡುಗಳು, ಮುಂತಾದುವು. ಈ ಪಯಣವನ್ನು ಮಾತಿಗೆ ನಿಲುಕದ ಭವ್ಯ ಅಪಾರದತ್ತ ಹೋಗುವ ಹೆಜ್ಜೆಗಳನ್ನಾಗಿ ಭಾವಿಸಿದ್ದಾರೆ.
ತಮ್ಮ ವಿದ್ಯಾರ್ಥಿಗಳು ಸ್ವಂತ ನಿಲುವನ್ನು ಹೊಂದಲು ಕೃಷ್ಣ ಪ್ರಚೋದಿಸುತ್ತಾರೆ. ಒಂದರ್ಥದಲ್ಲಿ ಅವರ ತರಗತಿಗಳು ಸಂಗೀತ, ಸಮಾಜ, ರಾಜಕೀಯ ಎಲ್ಲದಕ್ಕೂ ವಿದ್ಯಾರ್ಥಿಗಳು ತುಡಿಯುವಂತೆ ಮಾಡಿ, ಅವರನ್ನು ಜೀವಂತವಾಗಿರುವುದಕ್ಕೆ ಪ್ರೇರೇಪಿಸುತ್ತದೆ.
ನನ್ನ ತರಗತಿಗಳು ಕೃತಿಗಳನ್ನು ಹಾಡುವುದಕ್ಕೆ ಹಾಗೂ ಕಲಿಯುವುದಕ್ಕಷ್ಟೇ ಎಂದೂ ಸೀಮಿತವಾಗಿಲ್ಲ. ರಾಜಕೀಯವೂ ಸೇರಿದಂತೆ ಪ್ರತಿಯೊಂದೂ ಚರ್ಚೆಯಾಗುತ್ತದೆ. ಆದರೆ ಯಾವುದೇ ಸಿದ್ಧಾಂತ ಅಥವಾ ಮಾರ್ಗವನ್ನು ಅವರ ಮೇಲೆ ನಾನು ಹೇರುವುದಿಲ್ಲ. ನನ್ನನ್ನು ಒಪ್ಪದಿರುವುದಕ್ಕೆ ಎಲ್ಲರಿಗೂ ಸ್ವಾತಂತ್ರವಿದೆ. ತರಗತಿಗಳಲ್ಲಿ ನಾವು ಉದ್ದೇಶಪೂರ್ವಕವಾಗಿ ಪರಸ್ಪರ ಪ್ರಚೋದಿಸುತ್ತೇವೆ. ಅದರಲ್ಲೊಂದು ಸೊಗಸಿದೆ. ಆಳಕ್ಕೆ ಇಳಿಯಬೇಕಾದರೆ ಪ್ರಚೋದನೆ ಬೇಕು. ಆದರೆ ಇವೆಲ್ಲವೂ ಅವರ ಸಂಗೀತದಲ್ಲಿ ಅಭಿವ್ಯಕ್ತಿಯಾಗದೆಯೂ ಇರಬಹುದು. ಅವರ ವೃತ್ತಿಬದುಕಿಗೆ ಇನ್ನೂ ಹಲವು ಆಯಾಮಗಳಿರುತ್ತವೆ. ಅವರಿಗೆ ಅವರದೇ ಆದ ಹೋರಾಟಗಳಿವೆ. ಅವುಗಳನ್ನು ಅವರು ನಿಭಾಯಿಸಬೇಕು. ಅವರು ಏನಾಗಬೇಕು, ಎಲ್ಲಿ ಉಳಿಯಬೇಕು ಎಂಬುದನ್ನು ಅವರು ನಿರ್ಧರಿಸಬೇಕು. ಒಂದು ಸಂತೋಷದ ವಿಷಯವೆಂದರೆ ನನ್ನೊಂದಿಗಿದ್ದು, ಹಾಡುತ್ತಾ, ಸಂವಾದಿಸುತ್ತಿರುವ ವಿದ್ಯಾರ್ಥಿಗಳು ನಿಷ್ಕ್ರಿಯವಾಗಿ, ಎಲ್ಲವೂ ಅದರಿಚ್ಛೆಯಂತೆ ಆಗಲಿ ಎಂದು ಸುಮ್ಮನಿಲ್ಲ. ನಾವು ಮಾತಾನಾಡುತ್ತಲೇ ಇರುತ್ತೇವೆ.
ವರ್ಣವನ್ನು ಮೊದಲೇ ಏಕೆ ಹಾಡಬೇಕು, ಮಂಗಳವನ್ನು ಕೊನೆಯಲ್ಲಿ ಯಾಕೆ ಹಾಡಬೇಕು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಕೃಷ್ಣ ಮೊದಲಿಗರೇನಲ್ಲ. ಅರವತ್ತು ವರ್ಷಗಳ ಹಿಂದೆಯೇ ರಾಳ್ಲಪಳ್ಲಿ ಅನಂತಕೃಷ್ಣ ಶರ್ಮ ಈ ಪ್ರಶ್ನೆಗಳನ್ನೆತ್ತಿದ್ದರು. ಭವಿಷ್ಯದಲ್ಲೂ ಈ ಪ್ರಶ್ನೆಗಳಿರುತ್ತವೆ. ಆದರೆ ಕೃಷ್ಣ ಅವರಿಗೆ ತುಂಬಾ ಕಟುವಾದ ವಿರೋಧ ವ್ಯಕ್ತವಾಯಿತು.
ಪ್ರತಿಯೊಂದು ಸಮಾಜದಲ್ಲೂ ರಾಳ್ಲಪಲ್ಲಿಯಂಥವರು ಇರುತ್ತಾರೆ. ಇಂತಹ ಪ್ರಶ್ನೆಗಳನ್ನು ಜನರ ಮುಂದೆ ಇಟ್ಟು ಚರ್ಚಿಸಲು, ಅರ್ಥಮಾಡಿಕೊಳ್ಳಲು, ಭಿನ್ನಮತ ವ್ಯಕ್ತಪಡಿಸಲು ಒತ್ತಾಯಿಸಿದ್ದಾರೆ. ನಮ್ಮಂತಹವರಿಗೆ ಅದೇ ಬಲ. ನಾನು ಅಂತಹುದೇ ಕಸಿವಿಸಿಗೊಳಿಸುವ, ಕಷ್ಟವಾದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಆದರೆ ಅದರಲ್ಲಿ ಹೊಸದೇನಿಲ್ಲ. ಕೇಳುವ ಕ್ರಮ, ಸನ್ನಿವೇಶ ಭಿನ್ನವಾಗಿರಬಹುದು. ಅದೇ ಪರಿಸ್ಥಿತಿ ಮತ್ತೆ ಮತ್ತೆ ಎದುರಾಗುತ್ತಿದೆ ಅಂದರೆ ಯೋಚಿಸಬೇಕಾಗುತ್ತದೆ. ಒಂದೇ ಸಂತೋಷದ ವಿಷಯವೆಂದರೆ ಈಗ ಹೆಚ್ಚು ಜನ ಪ್ರಶ್ನೆ ಕೇಳುತ್ತಿದ್ದಾರೆ. ವಿಭಿನ್ನ ವರ್ಗದ ಜನರಿಂದ ಪ್ರಶ್ನೆಗಳು ಬರುತ್ತಿವೆ. ನಮ್ಮ ಸಂಗೀತದ ವ್ಯವಸ್ಥೆ ಕೂಡ ಶ್ರೇಣೀಕೃತವೆ. ರಾಳ್ಲಪಲ್ಲಿಯವರನ್ನು ಸಂಗೀತಗಾರರು ಎನ್ನುವುದಕ್ಕಿಂತ ಹೆಚ್ಚಾಗಿ ಸಂಗೀತಜ್ಞರು ಎಂದು ಗುರುತಿಸಿದ್ದರು. ಹಾಗಾಗಿ ಅವರನ್ನು ಯಾರೂ ವಿರೋಧಿಸಲಿಲ್ಲ. ಒಂದರ್ಥದಲ್ಲಿ ಅದನ್ನು ಜನ ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷಿಸಿಬಿಟ್ಟರು. ಅದನ್ನೇ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅಥವಾ ಇನ್ಯಾರಾದರೂ ಸಂಗೀತಗಾರರು ಹೇಳಿದ್ದರೆ, ಹಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು.
ಇಂದು ಸಮಾಜದಲ್ಲಿ ತುಂಬಿರುವ ಅಸಹನೆ, ದ್ವೇಷ ಇವು ಮಾನವೀಯತೆಗೆ ವಿರುದ್ಧವಾದುದು ಅಂತ ಜನರಿಗೆ ತಿಳಿಸಲು ಕಲೆ ನೆರವಾಗಬಹುದೇ ಎನ್ನುವ ಪ್ರಶ್ನೆಯೂ ನಮ್ಮ ಮುಂದಿತ್ತು.
ಇದಕ್ಕೆ ಉತ್ತರ ಕೊಡೋದು ಕಷ್ಟ. ಈ ಹಂತದಲ್ಲಿ ಜನಕ್ಕೆ ತಾವು ದ್ವೇಷವನ್ನು ಹರಡುತ್ತಿದ್ದೇವೆ ಎನ್ನುವ ಅರಿವಿದೆಯೇ ಎನ್ನುವುದೇ ನನಗೆ ಅನುಮಾನ. ಏಕೆಂದರೆ ಅದನ್ನು ಅವರು ಭಾರತೀಯತೆ ಅಂತ ಭಾವಿಸುತ್ತಿದ್ದಾರೆ. ಇಡೀ ವಾತಾವರಣದಲ್ಲಿ ಒಂದಿಷ್ಟು ಬದಲಾವಣೆ ಆಗುವವರೆಗೆ ಅದು ಸಾಧ್ಯ ಎಂದು ನನಗನ್ನಿಸುತ್ತಿಲ್ಲ. ಸೃಜನಶೀಲವಾಗಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯವೆನಿಸುತ್ತದೆ. ವಿಭಿನ್ನ ಸಂವಾದಗಳನ್ನು ಒಂದೆಡೆ ತರುವುದರ ಮೂಲಕ ಕಲಾವಿದರನ್ನು ಒಟ್ಟಿಗೆ ತರಲು ಸಾಧ್ಯವಾಗಬಹುದು ಎನಿಸುತ್ತದೆ. ಕೊನೆಯ ಪಕ್ಷ ಅಂತಹ ಮಾತುಕತೆಯಲ್ಲಿ ತೊಡಗಬಹುದು. ಅದರಿಂದೇನಾದರೂ ಒಳ್ಳೆಯದಾಗಬಹುದು.
ಟಿ ಎಂ ಕೃಷ್ಣ ಸಂಗೀತದಲ್ಲಿ ಒಮ್ಮೊಮ್ಮೆ ತರುವ ಮಾರ್ಪಾಟುಗಳು ನಮ್ಮ ಸಂಗೀತ ಪರಂಪರೆಗೆ ಅನುಗುಣವಾಗೇ ಇದೆ. ನಮ್ಮದು ಧರ್ಮನಿರಪೇಕ್ಷ ಸಂಗೀತ ಪರಂಪರೆ. ಶಿಶುನಾಳ ಶರೀಫ, ಕಬೀರ, ಮುಂತಾದವರನ್ನೂ ಒಳಮಾಡಿಕೊಂಡ ಪರಂಪರೆ. ಮುಸ್ಲಿಂ ಹಾಡುಗಾರ ಶ್ರೀರಾಮನನ್ನು ಹೊಗಳಿ ಹಾಡಿದ್ದನ್ನು ಮೆಚ್ಚಿಕೊಂಡಂತೆಯೇ ಹಿಂದೂ ಸಂಗೀತಗಾರ ಏಸು, ಅಲ್ಲಾರನ್ನು ಕುರಿತು ಹಾಡಿದಾಗಲೂ ಪ್ರೀತಿಯಿಂದಲೇ ಒಳತೆಗೆದುಕೊಳ್ಳುವ ಮನಸ್ಸುಗಳಿವೆ. ನಮ್ಮ ಪರಂಪರೆ ನಮಗೆ ಕಲಿಸಿರುವುದು ಅದನ್ನೇ. ’ಈಶ್ವರ ಅಲ್ಲಾ ತೆರೋ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್.’
ಇವರಿಗೆ ಹಾಗು ಬೆಜವಾಡ ವಿಲ್ಸನ್ ಅವರಿಗೆ ಒಟ್ಟಿಗೆ ಮ್ಯಾಗಸೆಸೆ ಪ್ರಶಸ್ತಿ ಬಂತು. ಬೆಜವಾಡ ವಿಲ್ಸನ್ ಇವರಿಗೆ ತುಂಬಾ ಆತ್ಮೀಯರಾದರು.
ನಾನು ಬೆಜವಾಡ ವಿಲ್ಸನ್ ಅವರನ್ನು ಮೊದಲ ಬೇಟಿಮಾಡಿದ್ದು ಬ್ಯಾಂಕಾಕ್ ವಿಮಾನ ನಿಲ್ದಾನದಲ್ಲಿ. ಇಬ್ಬರೂ ಮನಿಲಾಗೆ ಹೊರೆಟಿದ್ದೆವೆ. ಆದರೆ ಯಾಕೊ ಇವರು ನನಗೆ ತುಂಬಾ ದಿನಿದಂದ ಪರಿಚಯ ಅನ್ನಿಸಿಬಿಟ್ಟಿತು. ಯಾಕೆ ಅಂತ ಗೊತ್ತಿಲ್ಲ. ವಿಲ್ಸನ್ ನಿಮ್ಮನ್ನು ತಬ್ಬಿಕೊಂಡರೆ ಅವರು ಒಳಗಿನಿಂದ ಏನೋ ಕೊಡುತ್ತಿದ್ದಾರೆ ಅನ್ನಿಸುತ್ತದೆ. ಅವರಲ್ಲಿರುವ ಕಾಳಜಿ. ವಾತ್ಸಲ್ಯ, ಪ್ರೀತಿ ಇವೆಲ್ಲಾ ಒಟ್ಟಾಗಿ ನಮ್ಮಲ್ಲಿರುವ ಕೊಳಕುತನವನ್ನು ನೋಡುವುದಕ್ಕೆ, ಅದರ ಒಳಹೊಕ್ಕು ನೋಡುವುದಕ್ಕೆ ಎದರಿಸುವುದಕ್ಕೆ ಬಲಕೊಡುತ್ತದೆ. ಅವರು ಮಾತನಾಡಿದರೆ ಇಲ್ಲೊಬ್ಬ ಎಲ್ಲವನ್ನು ಅರ್ಥಮಾಡಿಕೊಂಡ, ಕಾಳಜಿ ಇರುವ, ತೀವ್ರವಾಗಿ ತೊಡಗಿಸಿಕೊಂಡಿರುವ, ನಮ್ಮನ್ನು ಸದಾ ಜಾಗೃತಗೊಳಿಸುವ ವ್ಯಕ್ತಿ ಇದ್ದಾರೆ ಎಂದು ಮನದಟ್ಟಾಗುತ್ತದೆ. ಅವರು ನಮ್ಮ ಎಚ್ಚರಿಸುವ ಕರೆ. ನಮ್ಮನ್ನು ಮಲಗಬೇಡಿ ಅಂತ ಸದಾ ಎಚ್ಚರಿಸುತ್ತಿರುತ್ತಾರೆ. ಆದರೆ ದುರಂತ ಅಂದರೆ ನಾವು ಪದೇ ಪದೇ ನಿದ್ರೆಮಾಡುತ್ತಿರುತ್ತೇವೆ. ಬಹುಷಃ ಯಾವಾಗಲೂ ನಿದ್ರಾವಸ್ಥೆಯಲ್ಲೇ ಇರುತ್ತೇವೆ. ಅವರು ಎಂಥ ದೈರ್ಯ ನಿಮಗೆ ನಿದ್ದೆ ಮಾಡುತ್ತಿದ್ದೀರಿ ಅಂತ ಕೂಗುತ್ತಿರುತ್ತಾರೆ. ದೇಶದ ಪ್ರತಿ ನಗರದಲ್ಲೂ, ಎಲ್ಲಾ ರಸ್ತೆಯಲ್ಲೂ, ಪ್ರತಿ ಮೂಲೆಯಲ್ಲೂ ಬೆಳಗಿನಿಂದ ಇಷ್ಟೊಂದು ಕೊಳಕುತನ ರಾರಾಜಿಸುತ್ತಿರುವಾಗ ನಿಮಗೆ ಹೇಗೆ ಮಲಗುವುದಕ್ಕೆ ಸಾಧ್ಯ ಅಂತ ಸವಾಲು ಹಾಕುತ್ತಿರುತ್ತಾರೆ.