ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ

ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು

ಶೈಲಜ

 

೨೦೨೧ರಲ್ಲಿ ಗಾಯಕ ಟಿ.ಎಂ ಕೃಷ್ಣ ಅಶೋಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಶೋಕನ ಶಿಲಾಶಾಸನಗಳನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಹಾಡುವ ಯೋಜನೆಯೊಂದನ್ನು ಹಾಕಿಕೊಂಡರು. ಬಹುಶಃ ಅಂತಹ ಪ್ರಯತ್ನವೊಂದನ್ನು ಈ ತನಕ ಯಾರೂ ಮಾಡಿದಂತಿಲ್ಲ. ಅವು ಸುಮಾರು ೨೨೦೦ ವರ್ಷಗಳಷ್ಟು ಪುರಾತನವಾದ (ಕ್ರಿ.ಪೂ. ೨೬೮-೨೩೨) ಶಿಲಾಶಾಸನಗಳು. ಅವುಗಳಲ್ಲಿ ಇವರಿಗೇಕೆ ಅಷ್ಟೊಂದು ಆಸಕ್ತಿ ಮೂಡಿತು? ಅವನ್ನು ಹಾಡೋದಕ್ಕೆ ಇವರಿಗೇಕೆ ಅಷ್ಟೊಂದು ಉತ್ಸಾಹ? ಇಂದಿಗೆ ಅವು ಹೇಗೆ ಪ್ರಸ್ತುತ?

ಒಮ್ಮೆ ಗೋಪಾಲಕೃಷ್ಣ ಗಾಂಧಿಯವರು ಅಶೋಕನ ಶಿಲಾಶಾಸನಗಳನ್ನು ಓದುವಂತೆ ನನಗೆ ಸೂಚಿಸಿದರು. ನಾನದನ್ನು ಓದಲು ಪ್ರಾರಂಭಿಸಿದೆ. ಅವುಗಳನ್ನು ಓದುತ್ತಿದ್ದಾಗ, ಆಶೋಕ ನನ್ನೊಂದಿಗೇ ಮಾತನಾಡುತ್ತಿದ್ದಾನೆ, ನಾನೇ ಆ ಸಂಘರ್ಷಗಳನ್ನು ಅನುಭವಿಸುತ್ತಿದ್ದೇನೆ ಅನ್ನಿಸುತ್ತಿತ್ತು. ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ ಹೇಗಿರಬೇಕೆಂದು ಅನ್ನುವ ಪ್ರಶ್ನೆ ನಮ್ಮೆಲ್ಲರನ್ನೂ ಕಾಡಿದೆ. ಎಲ್ಲರೂ ಒಟ್ಟಿಗೆ ಬದುಕುವುದು; ಪರಸ್ಪರ ಒಬ್ಬರಿಗೊಬ್ಬರು ತುಡಿಯುವುದು ಹೇಗೆ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತೇವೆ. ಏಕೆಂದರೆ, ನಾವೆಲ್ಲರೂ ಬೇರೆ ಬೇರೆ ಬ್ಯಾಗೇಜುಗಳನ್ನು, ಪೂರ್ವಗ್ರಹಗಳನ್ನು ಹೊತ್ತುಕೊಂಡೇ ಇರುತ್ತೇವೆ. ಈ ಪ್ರಶ್ನೆಗಳು ನನ್ನೊಳಗೇ ಬಂದಾಗ ಈ ತಾತ್ವಿಕ ಪ್ರಶ್ನೆಗಳಿಗೆ ಮತ್ತು ವಿಚಾರಗಳಿಗೆ ವಾಸ್ತವದೊಡನೆ ಸಂಬಂಧ ಕಲ್ಪಿಸುವುದು ಒಳ್ಳೆಯದೆನಿಸಿತು. ಆ ಕೆಲಸವನ್ನು ಅಶೋಕ ಮಾಡಿದ್ದ. ನಾವು ಕೂಡ ಆ ಕ್ರಮದಲ್ಲಿ ಯೋಚಿಸುವುದು ಸೂಕ್ತವೆನಿಸಿತು. ಇದು ನನ್ನನ್ನು ಅಶೋಕನೆಡೆಗೆ ತಳ್ಳಿತು.

ಸಾಮಾನ್ಯವಾಗಿ ಪ್ರತಿಯೊಂದು ತಲೆಮಾರು ತನ್ನ ಆ ಕ್ಷಣದ ತುರ್ತಿನಿಂದ ಐತಿಹಾಸಿಕ ವ್ಯಕ್ತಿಗಳನ್ನು ಹೊಸದಾಗಿ ಆವಿಷ್ಕರಿಸಿ, ಮರುಕಲ್ಪಿಸಿಕೊಳ್ಳುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಭಾರತದಲ್ಲಿ ಕೋಮು ಸೌಹಾರ್ದ ಕದಡಿದ್ದಾಗ ಅಶೋಕನ ’ಸರ್ವ ಧರ್ಮ ಸಮಭಾವ’ ಸಿದ್ಧಾಂತ ನೆಹರೂ ಆಳ್ವಿಕೆಯಲ್ಲಿ ಮರುಹುಟ್ಟು ಪಡೆಯಿತು. ಈಗ ೨೧ನೇ ಶತಮಾನದಲ್ಲಿ ನಾವು ಅಂತಹುದೇ ಸಂಕೀರ್ಣ ಧಾರ್ಮಿಕ, ಸಾಮಾಜಿಕ ಬಿಕ್ಕಟ್ಟಿನ ವಾತಾವರಣದಲ್ಲಿ ಬಂದು ನಿಂತಿದ್ದೇವೆ. ಜನರಿಗೂ ಜನನಾಯಕರಿಗೂ ನಡುವೆ ಪರಸ್ಪರ ಸಂವಹನವೇ ಕಡಿದು ಹೋಗಿದೆ. ಸ್ವತಃ ಜನಗಳ ನಡುವೆಯೂ ಸಂವಹನ ತಪ್ಪಿದೆ. ಯಾರೂ ಯಾರನ್ನೂ ಕೇಳಿಸಿಕೊಳ್ಳುತ್ತಿಲ್ಲ. ಸಂಶಯದ ಮನಃಸ್ಥಿತಿ ಆವರಿಸಿಕೊಂಡಿದೆ. ತಾನು ಮತ್ತು ಇತರರು ಎನ್ನುವ ಭಾವನೆ ಮತ್ತು ಇತರರನ್ನು ಕುರಿತ ಅಸಹನೆ ಮುಗಿಲು ಮುಟ್ಟಿದೆ. ಭಾಷಾ ಗೊಂದಲ ಹಿಂದೆಂದೂ ಇಲ್ಲದಂತೆ ತಲೆಯೆತ್ತಿದೆ. ಹಾಗಾಗಿ ಕೃಷ್ಣ ಅವರಿಗೆ ಆಶೋಕನ ಶಾಸನಗಳು ಪ್ರಸ್ತುತವೆನಿಸಿದೆ.

ಅಶೋಕನ ಶಿಲಾಶಾಸನಗಳೆಲ್ಲವೂ ಕಳಿಂಗ ಯುದ್ಧದ ನಂತರದದ. ಒಂದರ್ಥದಲ್ಲಿ ಕಳಿಂಗ ಯುದ್ಧ ಅಶೋಕನ ಬದುಕಿನಲ್ಲಿ ಮತ್ತು ಅವನಿಂದಾಗಿ ಇಡೀ ಭರತ ಖಂಡದ ರಾಜಕೀಯ, ಸಾಮಾಜಿಕ, ಧಾರ್ಮಿಕ ವಲಯಗಳಲ್ಲಿ ವಿಭಿನ್ನ ಬಗೆಯ ಪಲ್ಲಟಗಳಿಗೆ ಕಾರಣವಾದ ಘಟನೆ. ಈ ಶಾಸನಗಳಲ್ಲಿ ರಾಜ್ಯದ ಆಡಳಿತವನ್ನು ಹೇಗೆ ನಡೆಸಬೇಕೆನ್ನುವುದಕ್ಕೆ ಪ್ರಾಯೋಗಿಕ ಸಲಹೆಗಳಿವೆ. ಅಲ್ಲಿ ಸಾಮ್ರಾಜ್ಯವನ್ನು ಧರ್ಮಶೀಲತೆ, ಸದಾಚಾರ, ಶಾಂತಿಯ ಬುನಾದಿಯ ಮೇಲೆ ಕಟ್ಟಬೇಕೆಂಬ ಹಂಬಲವಿದೆ. ತನ್ನ ಪ್ರಜೆಗಳ ನೈತಿಕ ಮತ್ತು ಆಧ್ಯಾತ್ಮಿಕ ಕ್ಷೇಮವೇ ತನ್ನ ಆಡಳಿತದ ಮೂಲಭೂತ ಕಾಳಜಿಯಾಗಬೇಕೆಂಬ ಆಸೆಯಿದೆ. ಈ ಧಮ್ಮವನ್ನು ಜನರ ನಡುವೆ ಕಾನೂನು, ಕಟ್ಟಲೆಗಳನ್ನು ವಿಧಿಸುವ ಮೂಲಕ ಜಾರಿಗೆ ತರಬಹುದು. ಅಥವಾ ನಂಬಿಕೆ ಮತ್ತು ಮನವೊಲಿಸಿಕೆಯ ಮೂಲಕವೂ ಅನುಷ್ಠಾನಗೊಳಿಸಬಹುದು. ಆದರೆ ನೈತಿಕ ವರ್ತನೆಯನ್ನು ಕಾನೂನಿನ ಮೂಲಕ ನಿಯಂತ್ರಿಸುವುದಕ್ಕಿಂತ, ಮನವೊಲಿಸುವ ಮೂಲಕ ಸಾಧಿಸುವುದು ಪರಿಣಾಮಕಾರಿ ಎನ್ನುತ್ತದೆ ಅಶೋಕನ ಶಾಸನ. ಉಳಿದ ದೊರೆಗಳಂತೆ ಅವನು ಬಲಪ್ರಯೋಗ ಮತ್ತು ಯುದ್ಧವನ್ನು ಒಂದು ಕ್ರಮವಾಗಿ ಸೂಚಿಸುವುದಿಲ್ಲ. ಅದು ಆ ಕಾಲಘಟ್ಟದಲ್ಲಿ ಒಂದು ಅದ್ಭುತವಾದ ನಿಲುವು ಎನ್ನುತ್ತಾರೆ ಇತಿಹಾಸತಜ್ಞೆ ರೋಮಿಲಾ ಥಾಪರ್. ಕಳಿಂಗದಲ್ಲಿ ಅಶೋಕ ನಿಜವಾಗಿಯು ಗೆದ್ದನೇ? ಎಂದು ಶಾಸನವೊಂದರಲ್ಲಿ ಸಾರ್ವಜನಿಕವಾಗಿ ಸ್ವತಃ ಅಶೋಕ ಮಾಡಿಕೊಳ್ಳುವ ಪಶ್ಚಾತ್ತಾಪಭರಿತ ಆತ್ಮವಿಮರ್ಶೆ ಬೆರಗುಗೊಳಿಸುತ್ತದೆ. ಕೃಷ್ಣ ಹೇಳುವಂತೆ ಅದೊಂದು ಅದ್ಭುತವಾದ ಪೊಲಿಟಿಕಲ್ ಸ್ಟೇಟ್‌ಮೆಂಟ್.

ಅಶೋಕ ಈ ನಾಡನ್ನು ಬಹುಧರ್ಮೀಯ, ಬಹುಭಾಷಿಕ, ಬಹುತ್ವದ ನೆಲೆಯಲ್ಲಿ ಗ್ರಹಿಸಿಕೊಂಡಿದ್ದ. ಸಮಾಜದ ಪರಿವರ್ತನೆಗೆ ನೈತಿಕತೆ ಆಧಾರವಾಗಬೇಕು, ಅನುಕಂಪ ಮತ್ತು ಕಕ್ಕುಲತೆಯೇ ಈ ಬದಲಾವಣೆಯ ಬುನಾದಿಯಾಗಬೇಕೆನ್ನುತ್ತಾನೆ. ನಮ್ಮ ಇಂದಿನ ಹೆಚ್ಚಿನ ಹೋರಾಟಗಳಲ್ಲಿ ಈ ಎಲ್ಲ ವಿಚಾರಗಳ ಅನುರಣನವನ್ನು ಕಾಣಬಹುದು. ಇಂದು ನಾವೆಲ್ಲಾ ಅತಿಯಾದ ದ್ವೇಷ, ರೋಷದಲ್ಲ್ಲಿ, ಬಹುತ್ವವನ್ನು ಮರೆತು ದ್ವಿತ್ವದಲ್ಲಿ ಯೋಚಿಸುತ್ತಿದ್ದೇವೆ. ಪರಸ್ಪರ ಒಬ್ಬರನ್ನೊಬ್ಬರು ಕೇಳಿಸಿಕೊಳ್ಳುತ್ತಲೇ ಇಲ್ಲ. ಜನನಾಯಕರು ಪ್ರಜೆಗಳ ನಡುವಿನ ಸಂವಹವನವೇ ಮರೆಯಾಗಿರುವ ಹೊತ್ತಿನಲ್ಲಿ ಅಶೋಕ ಹೇಳುವ ಮಾತುಗಳು ಮೌಲಿಕವೆನಿಸುತ್ತದೆ. ನನ್ನ ಪ್ರಜೆಗಳು ನನ್ನ ಮಕ್ಕಳು. ಅವರ ಕಲ್ಯಾಣಕ್ಕಾಗಿ ನಾನು ಹಂಬಲಿಸುತ್ತೇನೆ. ಅವರಿಗೆ ಸೂಕ್ತವಾದ ನ್ಯಾಯ ಒದಗಿಸುವುದಕ್ಕಿಂತ ದೊಡ್ಡ ಕೊಡುಗೆ ಇನ್ಯಾವುದೂ ಇಲ್ಲ. ಧಮ್ಮವನ್ನು (ನ್ಯಾಯ) ಸಂಭ್ರಮಿಸಿ ಅದರಲ್ಲಿ ಭಾಗವಹಿಸುವುದಕ್ಕಿಂತ ದೊಡ್ಡದು ಮತ್ಯಾವುದೂ ಇಲ್ಲ. ಸಾಮರಸ್ಯವೇ ಅತ್ಯಂತ ಶ್ರೇಷ್ಠ. ಹಾಗಾದರೆ ಸಾಮರಸ್ಯ ಅಂದರೇನು? ಧಮ್ಮವನ್ನು ಕುರಿತ ಚಿಂತನೆಗಳನ್ನು ಎಲ್ಲರೂ ಇಷ್ಟಪಟ್ಟು ಕೇಳಿಸಿಕೊಳ್ಳುವುದೇ ಸಾಮರಸ್ಯ.

ತಾನು ಹೇಳುವುದೆಲ್ಲವೂ ಪ್ರಜೆಗಳಿಗೆ ಸುಲಭವಾಗಿ ಅರ್ಥವಾಗಬೇಕೆಂಬ ಉದ್ದೇಶ ಅಶೋಕನದು. ತನ್ನ ಶಾಸನಗಳನ್ನು ಆಯಾ ಪ್ರಾಂತ್ಯದ ಜನಕ್ಕೆ ಅರ್ಥವಾಗುವ ಭಾಷೆ, ಲಿಪಿಗಳಲ್ಲಿ ಬರೆಸಿ ಜನಪ್ರೀತಿ ಮೆರೆದಿದ್ದಾನೆ. ಸ್ಥಳೀಯವಾಗಿ, ಜನ ಅದನ್ನು ಓದಿ ಸ್ಪಂದಿಸಬೇಕೆನ್ನುವುದು ಅವನ ಉದ್ದೇಶ. ಉದಾಹರಣೆಗೆ ಪರ್ಷಿಯನ್ ಪ್ರಭಾವಕ್ಕೆ ಒಳಪಟ್ಟಿದ್ದ ಮನ್ಸೇರಾ ಮತ್ತು ಷಹಬಾಜ್‌ಘರಿ ಪ್ರದೇಶಗಳಲ್ಲಿ ಖರೋಷ್ಟಿ ಲಿಪಿಯನ್ನು ಬಳಸಿದ್ದಾನೆ. ಗ್ರೀಕರ ಪ್ರಭಾವಕ್ಕೆ ಒಳಪಟ್ಟಿದ್ದ ಗಾಂಧಾರದಲ್ಲಿ ಗ್ರೀಕ್ ಮತ್ತು ಅರ್ಮೇನಿಕ್ ಭಾಷೆ ಬಳಸಲಾಗಿದೆ. ಕಾಂದಹಾರ್‌ನಲ್ಲಿ ದೊರಕಿರುವ ಶಾಸನ ಗ್ರೀಕ್ ಭಾಷೆಯಲ್ಲಿದೆ.

ಒಂದು ನಾಡಿನಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದಾದ ಎಲ್ಲಾ ಸೂಕ್ಷ್ಮ ವಿಚಾರಗಳನ್ನೂ ಅಶೋಕ ಅತ್ಯಂತ ವಿವೇಚನೆಯಿಂದ ಗಮನಿಸಿ ನಿಯಮಗಳನ್ನು ರೂಪಿಸಿದ್ದಾನೆ. ಈ ಶಾಸನಗಳಲ್ಲಿ ಪರಿಸರ, ಕಾಡುಗಳು ಮತ್ತು ವನ್ಯಮೃಗಳ ಸುರಕ್ಷೆ ಕುರಿತು ಹಲವಾರು ವಿಚಾರಗಳಿವೆ. ಪ್ರಾಣಿಗಳನ್ನು ಕೊಲ್ಲಬಾರದು ಎನ್ನುವ ಅಶೋಕನಿಗೆ ಮಾಂಸಾಹಾರ ಈ ಸಂಸ್ಕೃತಿಯ ಬೇರ‍್ಪಡಿಸಲಾಗದ ಭಾಗ ಎಂಬ ವಾಸ್ತವ ತಿಳಿದಿದೆ. ಅವನು ಅಹಿಂಸೆಯ ತತ್ವ ಮತ್ತು ಸಂಸ್ಕೃತಿಯ ನಡುವಿನ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸಿದ್ದಾನೆ. ಹಾಗಾಗಿ ಒಂದು ವಿಶಾಲವಾದ ರಾಜಕೀಯ ಚರ್ಚೆಯ ಹಿನ್ನೆಲೆಯಲ್ಲಿ ಅಶೋಕನ ಶಾಸನಗಳು ಗಮನಾರ್ಹ.

ಅವನ ವಿಚಾರಗಳಲ್ಲಿ ಬಹಳಷ್ಟನ್ನು ಇಂದಿಗೂ ಪ್ರಯೋಗಕ್ಕೆ ಹಚ್ಚಬಹುದು. ಧರ್ಮನಿಷ್ಠವಾದ ಬದುಕು, ಅಸಮಾನತೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಘರ್ಷಣೆಗಳು ಅಶೋಕನಲ್ಲಿದ್ದವು. ಅವು ಈಗಲೂ ಇವೆ. ಅನುಕಂಪೆಯನ್ನು ತನ್ನ ಆಡಳಿತದ ನಿರ್ಣಾಯಕ ತತ್ವವಾಗಿ ಅಶೋಕ ಕಲ್ಪಿಸಿಕೊಂಡ. ಭಾರತದ ಸಂವಿಧಾನ ಮುಖ್ಯವಾಗುವುದು ಕೂಡ ಈ ಕಾರಣಕ್ಕೇ. ಅನುಕಂಪೆಯೆಂಬುದು ನಿರ್ಣಾಯಕ ತತ್ವವಾದಾಗ ಮಾತ್ರ ಸಮಾನತೆ ಮುಂತಾದಂತಹ ವಿಚಾರಗಳೆಲ್ಲವೂ ಮುನ್ನೆಲೆಗೆ ಬರುವುದಕ್ಕೆ ಸಾಧ್ಯ.

ಭಾರತದ ಪ್ರಾಚೀನ ಇತಿಹಾಸವನ್ನು ಒಂದು ರೀತಿಯ ನಿಗೂಢತೆ ಆವರಿಸಿಕೊಂಡಿದೆ. ಈ ನಿಗೂಢತೆಯ ತೆರೆಯನ್ನು ಕಿತ್ತೆಸೆಯದಿದ್ದರೆ ಗತವನ್ನು ವೈಭವೀಕರಿಸಲಾಗುತ್ತದೆ. ಆಗ ಗತವನ್ನು ಪ್ರಶ್ನಿಸುವುದಕ್ಕೇ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ನಿಗೂಢತೆಯನ್ನು ಇಲ್ಲವಾಗಿಸುವುದು ಕೂಡ ಈ ಯೋಜನೆಯ ಉದ್ದೇಶಗಳಲ್ಲಿ ಒಂದು ಎನ್ನುತ್ತಾರೆ ಕೃಷ್ಣ.

ಈ ಶಾಸನಗಳನ್ನು ಹಾಡಬೇಕೆಂದುಕೊಂಡಾಗ ಹಲವಾರು ಸವಾಲುಗಳು ಎದುರಾದವು. ಈ ಶಾಸನಗಳನ್ನು ಹಾಡುವುದಿರಲಿ, ಜೋರಾಗಿ ಓದಿರುವಂತಹ ಪೂರ್ವನಿದರ್ಶನಗಳೂ ಇರಲಿಲ್ಲ. ಜನಸಾಮಾನ್ಯರ ಭಾಷೆಯಾದ ಮಾಗಧೀ ಪ್ರಾಕೃತ ಸಂಸ್ಕೃತದಂತೆ ಸಾಹಿತ್ಯಕವಾಗಿ ಪರಿಷ್ಕೃತ ಭಾಷೆಯಲ್ಲ. ಹಾಗಾಗಿ ಪ್ರಾಕೃತದಲ್ಲಿ ಸ್ವರಗಳನ್ನು ದೀರ್ಘವಾಗಿ ಎಳೆಯುತ್ತಾರೆ. ಸಾಂಗೀತಿಕ ಭಾಷೆಯಾಗಿ ಅದನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಆಧುನಿಕ ಯುಗದಲ್ಲಿ ಪ್ರಯೋಗಗಳು ನಡೆದೇ ಇರಲಿಲ್ಲ ಆದರೆ ಇದ್ಯಾವುದೂ ಅವರ ಉತ್ಸಾಹಕ್ಕೆ, ಬದ್ಧತೆಗೆ ಅಡ್ಡಿಯಾಗಲಿಲ್ಲ. ನನ್ನ ಗಾಢವಾದ ನಂಬಿಕೆಯೇನೆಂದರೆ ಇವುಗಳನ್ನು ಹಾಡುವುದು, ಮಾತನಾಡುವುದು, ಚರ್ಚಿಸುವುದು, ಅಥವಾ ಶಾಲೆಯಲ್ಲಿ ಮಕ್ಕಳು ಅಶೋಕನನ್ನು ಕುರಿತು ಓದುವಾಗ ಈ ವಿಚಾರಗಳನ್ನು ಮುನ್ನೆಲೆಗೆ ತರುವುದರ ಮೂಲಕ ಬದಲಾವಣೆ ಖಂಡಿತಾ ಸಾಧ್ಯ. ಆದರೆ ನಾವೆಲ್ಲ ನಿರೀಕ್ಷಿಸುವಂತೆ ಇದು ರಾತ್ರೋರಾತ್ರಿ, ಪವಾಡದಂತೆ ನಡೆಯುವುದಿಲ್ಲ. ಉಪ್ಪಿನಕಾಯಿಯಂತೆ, ವಿಚಾರಗಳು ಊರಿಕೊಳ್ಳುವುದಕ್ಕೂ ಸ್ವಲ್ಪ ಸಮಯ ಬೇಕು. ಈ ತರಹದ ಗದ್ಯವನ್ನು ಹಿಂದೆಂದೂ ಹಾಡಿರದ ಕೃಷ್ಣ ಅವರಿಗೆ ಅದನ್ನು ಹಾಡುವಾಗ ಅಶೋಕನೊಡನೆ ಒಂದು ಭಾವನಾತ್ಮಕ ನಂಟು ಮೂಡಿತು. ಅದೊಂದು ಅಪೂರ್ವ ಅನುಭವ. ಅವನ ಮಾತುಗಳಲ್ಲಿರುವ ಯಾವುದೋ ಒಂದು ಅಂಶ ನನ್ನ ಮನಸ್ಸಿಗೆ ತುಂಬಾ ಹತ್ತಿರವೆನಿಸಿತು. ಹಾಡುವಾಗ ಅದು ಮತ್ತಷ್ಟು ಆಪ್ತವೆನಿಸಿತು. ಸಂಗೀತಗಾರನಾಗಿ ಯಾವುದನ್ನೇ ಹಾಡಬೇಕಾದರೂ ಅದರ ಜೊತೆಯಲ್ಲಿ ನಮಗೊಂದು ತಾದಾತ್ಮ್ಯ ಬೇಕು.

ಶಾಸನಗಳನ್ನು ಹಾಡುವ ಯೋಜನೆಯನ್ನು ಸಧ್ಯಕ್ಕೆ ಎರಡು ಕಂತುಗಳಲ್ಲಿ ರೂಪಿಸಿಕೊಂಡಿದ್ದಾರೆ. ಮೊದಲನೆಯ ಕಂತಿಗೆ ನಾಲ್ಕು ಶಾಸನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಶೋಕನ ಚಿಂತನೆಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಾಗುವಂತಹ ಪಠ್ಯವಿರುವ ಶಾಸನಗಳನ್ನೇ ಕೃಷ್ಣ ಆಯ್ಕೆ ಮಾಡಿಕೊಂಡಿದ್ದಾರೆ. ಇವುಗಳನ್ನು ಅವರು ಕಾಪಿ, ಶುಭಪಂತುವರಾಳಿ, ಮೋಹನ ಮತ್ತು ದೇಶ್ ರಾಗಗಳಲ್ಲಿ ಹಾಗೂ ಆದಿತಾಳ, ಚತುರಶ್ರ ಝಂಪೆ, ಮಿಶ್ರ ಛಾಪು ಮತ್ತು ಖಂಡ ಛಾಪು ತಾಳಗಳಲ್ಲಿ ಕ್ರಮವಾಗಿ ಪ್ರಸ್ತುತಪಡಿಸಿದ್ದಾರೆ. ಕೃಷ್ಣ ತಮ್ಮ ಮೊದಲ ಯೋಜನೆಯನ್ನು ಅಂಬೇಡ್ಕರ್ ಬೌದ್ಧ ಧರ್ಮವನ್ನು ಅಪ್ಪಿದ ಅಕ್ಟೋಬರ್ ೧೪ರಂದು ೯೨೦೨೦) ಲೋಕಾರ್ಪಣೆ ಮಾಡಿದರು.

ಈ ಯೋಜನೆಯ ಎರಡನೆಯ ಕಂತನ್ನು ಸೆಪ್ಟೆಂಬರ್ ೨೨, ೨೦೨೨ರಲ್ಲಿ ಲೋಕಾರ್ಪಣೆ ಮಾಡಿದರು. ಇದು ಆಡಳಿತಕ್ಕೆ, ಅಧಿಕಾರಕ್ಕೆ, ಸಾಮರಸ್ಯಕ್ಕೆ, ಸಹನೆ ಮತ್ತು ಪ್ರೀತಿಗೆ ಸಂಬಂಧಿಸಿದಂತೆ ತುಂಬಾ ಪ್ರಮುಖವಾದ ಮತ್ತು ಹೆಚ್ಚು ಸೂಕ್ಷ್ಮವಾದ ವಿಚಾರಗಳನ್ನು ಮುನ್ನೆಲೆಗೆ ತರುತ್ತವೆ. ಅನುಕಂಪೆಯನ್ನು ತನ್ನ ಆಡಳಿತ ಬುನಾದಿ ಎಂದು ಭಾವಿಸಿದ ಅಶೋಕ ತನ್ನ ಆಡಳಿತವನ್ನು ವಿಮರ್ಶಿಸಿಕೊಂಡು, ನಾನು ಬಹಳ ಕಾಲದಿಂದ ಜನಗಳಿಗಾಗಿ ಏನನ್ನೂ ಮಾಡಿಲ್ಲ ಮತ್ತು ಅವರ ದನಿಗಳನ್ನು ಕೇಳಿಸಿಕೊಂಡಿಲ್ಲ. ನಾನು ಊಟ ಮಾಡುತ್ತಿದ್ದಾಗ, ವಿಶ್ರಮಿಸುತ್ತಿದ್ದಾಗ, ಮಲಗಿದ್ದಾಗ, ಸ್ನಾನಮಾಡುತ್ತಿದ್ದಾಗ, ಕೆಲಸ ಮಾಡುತ್ತಿದ್ದಾಗ ಅಥವಾ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಹೀಗೆ ಯಾವಾಗ ಬೇಕಾದರೂ ಜನ ನನ್ನ ಬಳಿಗೆ ತಮ್ಮ ಅಹವಾಲುಗಳೊಡನೆ ಬರಲಿ. ಇದು ನನ್ನ ಆಜ್ಞೆ. ಎಲ್ಲೆಡೆ ಇರುವ ಜನಗಳಿಗಾಗಿ ನಾನು ಶ್ರಮಿಸುತ್ತೇನೆ. ತನ್ನ ಯುದ್ಧಗಳು, ಕೊಲ್ಲುವಿಕೆ, ಸಾವುಗಳು, ಮತ್ತು ಸ್ಥಳಾಂತರಗಳು ಇವುಗಳಿಗಾಗಿ ಅವನು ಪಶ್ಚಾತ್ತಾಪ ಪಡುತ್ತಿದ್ದಾನೆ, ಎನ್ನುತ್ತಾನೆ.

ಅಶೋಕ ವಿಶ್ವವಿದ್ಯಾನಿಲಯದ ಇತಿಹಾಸತಜ್ಞೆ ನವಜ್ಯೋತ್ ಲಾಹಿರಿ ಹೇಳುವಂತೆ ಅಶೋಕ ಸಾರ್ವಜನಿಕ ವಲಯದಲ್ಲಿ ತನ್ನ ಆಡಳಿತದ ಮೂಲಕ ಅತ್ಯಂತ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಜನರನ್ನು ತಲುಪಲು ಪ್ರಯತ್ನಿಸಿದ. ಇದು ಇಂದು ಆಗಲೇಬೇಕಾದ್ದಲ್ಲವೇ? ಅಶೋಕನ ತತ್ವಗಳನ್ನು ಮರುಕಲ್ಪಿಸಿಕೊಳ್ಳಲು ನಮಗೆ ಇದಕ್ಕಿಂತ ಸೂಕ್ತ ಕಾರಣ ಬೇಕೇ?

Project Link 01- https://www.youtube.com/watch?v=cwffR1MoISU

Project Link 02 –  https://www.youtube.com/watch?v=xXWuHNHPX6g