ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ ಹೊಸ ವಾದನ ತಂತ್ರಗಳು ಮತ್ತು ಬೇರೆ ವಾದ್ಯಗಳ ಕೆಲವು ತಂತ್ರಗಳನ್ನು ಮೈಗೂಡಿಸಿಕೊಂಡು ಅದು ಬೆಳೆದದ್ದನ್ನು ಕುರಿತು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸ್ವತಃ ಮೂರ್ತಿ ಯವರು ಕೂಡ ತಮ್ಮ ತಲೆಮಾರಿನ ಹಲವರೊಡನೆ ಒಡನಾಡಿ, ಅವರಿಂದ ಕಲಿತು, ಅವೆಲ್ಲವನ್ನೂ ತಮ್ಮ ವಾದನದಲ್ಲಿ ಸೇರಿಸಿಕೊಂಡಿದ್ದಾರೆ. ಅವರ ಮಾತುಗಳು ಅಂದಿನ ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಮೇಲೆಯೂ ಬೆಳಕು ಚೆಲ್ಲುತ್ತವೆ. ಇದು ಸಾಂಗೀತಿಕವಾಗಿ ಮತ್ತು ಐತಿಹಾಸಿಕವಾಗಿ ಮುಖ್ಯವಾದ ಒಂದು ಸಂದರ್ಶನ. ಮೈಸೂರಿನ ಎ ರಾಧೇಶ್ ನಡೆಸಿದ ಈ ಸಂದರ್ಶನವನ್ನು ಕನ್ನಡಕ್ಕೆ ಅನುವಾದಿಸಿ, ಬರವಣಿಗೆಗೆ ಇಳಿಸಿಕೊಟ್ಟಿದ್ದು ಶೈಲಜ. ಇಂದಿಗೂ ಬೆರಗಾಗುವಷ್ಟು ಚುರುಕಾಗಿರುವ ಮೂರ್ತಿಯವರ ನೆನಪಿನಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದೇನೆ.
ತಮ್ಮ ಬಾಲ್ಯ ಕುರಿತು ತಿಳಿಸಿ.
ನಾನು ಹುಟ್ಟಿದ್ದು ಕೇರಳದ ನಯ್ಯಟಿಂಕರದಲ್ಲಿ. ೧೯೨೪ ಆಗಸ್ಟ್ ೩೦ರಂದು. ನಮ್ಮ ತಂದೆ, ನಮ್ಮ ತಾತ, ಮುತ್ತಾತ ಮತ್ತು ನಾನು ಎಲ್ಲರೂ ಸಂಗೀತಗಾರರು. ಅವರೆಲ್ಲರೂ ಅರಮನೆಯ ವಿದ್ವಾಂಸರು. ನಮ್ಮ ತಂದೆಯ ಹೆಸರು ತಾನು ಭಾಗವತರು. ನಾನು ಆರು ವಯಸ್ಸಿನಿಂದಲೇ ಕಚೇರಿ ನುಡಿಸುತ್ತಿದ್ದೆ. ಎಂಟನೆಯ ವಯಸ್ಸಿನ ಹೊತ್ತಿಗೆ ಇಡೀ ಕೇರಳದಲ್ಲಿ ಎಲ್ಲೆಡೆಯಲ್ಲೂ ನುಡಿಸಿದೆ. ತಂಜಾವೂರು ವೈದ್ಯನಾಥ ಅಯ್ಯರ್ ಅವರ ಬಳಿ ಕಲಿಯಬೇಕೆಂದು ನನಗೆ ಆ ಚಿಕ್ಕ ವಯಸ್ಸಿನಲ್ಲಿಯೇ ಆಸೆ. ಆದರೆ ಕೇಳೋದಕ್ಕೆ ಭಯ. ತಿರುವನಂತರ ಪುರದ ಪುಸ್ತಕಂ ತೆರವಿನಲ್ಲಿರುವ ಭಜನಮಠದಲ್ಲಿ ಸಿಂಗಾರನಂಬಿ ಉತ್ಸವದಲ್ಲಿ ವೈದ್ಯನಾಥ ಅಯ್ಯರ್ ಮೃದಂಗ ನುಡಿಸಲು ಬಂದಿದ್ದರು. ನನಗಾಗ ಎಂಟು ವರ್ಷ. ಅವರ ಕಾರ್ಯಕ್ರಮದ ಅನಂತರ ಹರಿಕಥಾ ಕಾಲಕ್ಷೇಪವಿತ್ತು ಈ ಕಾರ್ಯಕ್ರಮಕ್ಕೆ ನೀನು ಮೃದಂಗ ನುಡಿಸುತ್ತೀಯಾ, ಎಂದು ವೈದ್ಯನಾಥ ಅಯ್ಯರ್ ಅವರು ಕೇಳಿದರು. ಅವರೇ ನನಗೆ ಮೃದಂಗವನ್ನು ಶ್ರುತಿಮಾಡಿಕೊಟ್ಟರು. ಮೊದಲನೆಯದು ಪಂಚವಿಧಿ. ಅದು ಭೈರವಿ, ಹುಸೇನಿಯಲ್ಲಿತ್ತು. ಅದು ಆದಿತಾಳ, ಎಂಟು ಅಕ್ಷರವೇ ಆದರೆ ಕೊನೆಯ ಒಂದು ಅಕ್ಷರ ಸೈಲೆಂಟ್. ಇದಕ್ಕೇ ತನಿ ನುಡಿಸು ಎಂದರು. ನುಡಿಸಿದೆ. ತನಿ ಅಂದರೆ ನನಗೆ ಏನೂ ಗೊತ್ತಿಲ್ಲ. ಏನೋ ನುಡಿಸಿದೆ. ಅವರು ತೊಟ್ಟಿದ್ದ ಒಂದು ಜರಿಶಾಲನ್ನು ತೆಗೆದು ನನಗೆ ಹಾಕಿ, ನನ್ನ ಜೊತೆ ಬಾ ನಿನಗೆ ಮೃದಂಗ ಹೇಳಿಕೊಡುತ್ತೇನೆ. ಎಂದರು. ನಾನು ಆಸೆ ಪಟ್ಟಿದ್ದನ್ನು ಒಳ್ಳೆಯ ಕಾಲದಲ್ಲಿ ದೇವರೇ ನನಗೆ ಕರುಣಿಸಿದ.
ಮರುದಿನ ಬೆಳಗ್ಗೆ ನಮ್ಮನೆಗೆ ಬಂದರು. ನನಗೆ ಮಕ್ಕಳಿಲ್ಲ. ಇವನನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿ, ನನ್ನ ಜಾತಕ ನೋಡಿಸಿದರು. ಅದರಲ್ಲಿ ಕೊಡಿ ಅಂತ ಬಂದುಬಿಟ್ಟಿತು. ಮಗುನ ತಕ್ಷಣ ಕಳಿಸೋದು ಕಷ್ಟ ಆಗತ್ತೆ, ಮಗು ನಮ್ಮ ಜೊತೆಗೆ ಒಂದು ತಿಂಗಳು ಇರಲಿ ಅಂತ ನಮ್ಮ ಅಮ್ಮ ಅಂದ್ರು. ಊರಿಗೆ ಹೋಗಿ ಒಂದು ಒಳ್ಳೆಯ ದಿನ ನೋಡಿ ಉಪನಯನ ಮಾಡಬೇಕು. ಅದಾದ ಮೇಲೆ ಸ್ವೀಕರಿಸುತ್ತೇನೆ ಎಂದು ವೈದ್ಯನಾಥ ಅಯ್ಯರ್ ಹೇಳಿದರು. ಒಂದು ತಿಂಗಳ ಅನಂತರ ನಮ್ಮ ತಾಯಿ ತೀರಿಹೋದರು. ನಮ್ಮಮ್ಮ ತೀರಿಹೋಗಿದ್ದರಿಂದ, ಒಂದು ವರ್ಷ ದತ್ತು ಸ್ವೀಕಾರ ಸಾಧ್ಯವಿರಲಿಲ್ಲ. ಆಗ ವೈದ್ಯನಾಥ ಅಯ್ಯರ್ ಇವನಅನ್ನು ಸ್ವೀಕಾರ ಮಾಡಿಕೊಳ್ಳಬೇಕು ಅಂತ ಇದ್ದೆ. ಆದರೆ ಇವರ ಅಮ್ಮ ತೀರಿಹೋದರು. ಹಾಗಾಗಿ ಸ್ವೀಕಾರ ಸಾಧ್ಯವಿಲ್ಲ. ಇವನನ್ನು ನಾನು ಮಗನ ಹಾಗೆ ಬೆಳೆಸುತ್ತೇನೆ, ಎಂದರು. ಕೃಷ್ಣ ಪರಮಾತ್ಮ ದೇವಕಿ ವಸುದೇವರ ಹತ್ತಿರ ಹುಟ್ಟಿದ ಆದರೆ ಯಶೋದೆ ನಂದಗೋಪರ ಬಳಿ ಬೆಳೆದ. ನಾನು ಅನ್ನಪೂರ್ಣಿಗೆ ಹುಟ್ಟಿದೆ, ವೈದ್ಯನಾಥ ಅಯ್ಯರ್ ಮತ್ತು ಮೀನಾಕ್ಷಿ ಯಮ್ಮ ನನ್ನನ್ನು ಬೆಳೆಸಿದರು. ನಾನು ಏನು ಕೇಳಿದರೂ ಅವರು ಇಲ್ಲ ಅಂತ ಅನ್ನುತ್ತಿರಲಿಲ್ಲ. ನಾನು ಅಮ್ಮ ಅಂದ್ರೆ ಮೀನಾಕ್ಷಿಯಮ್ಮನ ಜೊತೆ ಮಲಗ್ತಾ ಇದ್ದೆ.
ಮೃದಂಗಕ್ಕೆ ಸಂಬಂಧಪಟ್ಟಂತೆ ಏನೇನಿದೆಯೋ ಅದನ್ನೆಲ್ಲವನ್ನೂ ಅವರು ಹೇಳಿಕೊಟ್ಟರು. ನನ್ನ ಒಂದು ಕಣ್ಣು ಮಣಿ ಮತ್ತೊಂದು ಕಣ್ಣು ಮೂರ್ತಿ, ಎಂದು ಅವರು ಹೇಳುತ್ತಿದ್ದರು. ನನ್ನನ್ನು ಮತ್ತು ಮಣಿಯನ್ನು ಏಕಸಂಧಿಗ್ರಾಹಿ ಎನ್ನುತ್ತಿದ್ದರು.
ತಂಜಾವೂರು ಬಾನಿ ಎಂದರೇನು? ಅಲ್ಲಿ ಮೃದಂಗ ಹೇಗಿತ್ತು.
ತಂಜಾವೂರಿನಲ್ಲಿ ಮೊದಲು ನಾರಾಯಣಸ್ವಾಮಿ ಅಪ್ಪಾ ಎನ್ನುವವರು ನುಡಿಸುತ್ತಿದ್ದರು. ಅವರೇ ಆರಂಭದ ಮೃದಂಗವಾದಕರು. ತಂಜಾವೂರು ವೈದ್ಯನಾಥ ಅಯ್ಯರ್ ಅವರ ಗುರು ದಾಸಸ್ವಾಮಿಗಳ್. ಅವರು ಸಮಾಧಿಯಾದ ಅನಂತರ ತಂಜಾವೂರು ಸಹೋದರರ ಕುಟುಂಬಕ್ಕೆ ಸೇರಿದ ಕಣ್ಣುಸ್ವಾಮಿ ನಟುವನಾರ್ ಅವರ ಬಳಿ ವೈದ್ಯನಾಥ ಅಯ್ಯರ್ ಕಲಿಯಲಾರಂಭಿಸಿದರು. ಆ ಕಾಲದಲ್ಲಿ ಕೇವಲ ನಾಲ್ಕು ಫರನ್ಸ್ ಮಾತ್ರ ನುಡಿಸುತ್ತಿದ್ದರು.
ತಾಕ್ಕಿಟಕಿಟತಕದಿಗುತರಿಕಿಟತಕ
ಧೀಕ್ಕಿಟಕಿಟತಕದಿಗುತರಿಕಿಟತಕ
ತೋಂಕಿಟಕಿಟತಕದಿಗುತರಿಕಿಟತಕ
ನಂಕಿಟಕಿಟತಕದಿಗುತರಿಕಿಟತಕ
ವೈದ್ಯನಾಥ ಅಯ್ಯರ್ ಅವರಿಗಿಂತ ಹಿಂದೆ ವಾದಕರು ಒಂದು ಅಕ್ಷರ ಬಿಟ್ಟು, ಎರಡು ಅಕ್ಷರ ಬಿಟ್ಟು, ಮೂರು ಅಕ್ಷರ ಬಿಟ್ಟು ನುಡಿಸುತ್ತಿರಲಿಲ್ಲ. ಹಾಗೆ ನುಡಿಸುವುದನ್ನು ಪ್ರಾರಂಭಿಸಿದವರು ಅಯ್ಯರ್. ವರ್ಣಕ್ಕೆ ಹೇಗೆ ನುಡಿಸಬೇಕು, ಒಂದು ಕಳೆ ಚೌಕದಲ್ಲಿ ಹೇಗೆ ನುಡಿಸಬೇಕು, ಎರಡು ಕಳೆ ಚೌಕದಲ್ಲಿ ಹೇಗೆ ನುಡಿಸಬೇಕು ಇದನ್ನೆಲ್ಲಾ ಮಾಡಿದವರು ಇವರೇ.
ಕೋರ್ವೆ ಮೊಹರಾ ಎಲ್ಲಾ ನುಡಿಸುತ್ತಿದ್ದರಾ?
ಅದೆಲ್ಲಾ ಇರಲಿಲ್ಲ. ಮಿಶ್ರಛಾಪುವಿಗೆ ಕೂಡ ನುಡಿಸುತ್ತಿರಲಿಲ್ಲ. ನಾರಾಯಣಸ್ವಾಮಿ ಅಪ್ಪಾ ಅವರ ಶಿಷ್ಯ ಸುಂದರರಾವ್ ಅಂತ ಇದ್ದರು. ಅವರು ನುಡಿಸುವುದನ್ನು ನಾನು ಕೇಳಿದ್ದೆ. ಅವರಿಗೆ ಮಿಶ್ರ ಛಾಪುವಿಗೆ ನುಡಿಸಲು ಬರುತ್ತಿರಲಿಲ್ಲ. ಒಮ್ಮೆ ಕಚೇರಿಯಲ್ಲಿ ಮಧುರೆ ಮಣಿ ಅಯ್ಯರ್ ಪಕ್ಕಲ ನಿಲಬಡಿ ಹಾಡಿದರು. ನನಗೆ ಮಿಶ್ರಛಾಪು ನುಡಿಸುವುದಕ್ಕೆ ಬರುವುದಿಲ್ಲ ಅಂತಲೇ ನೀವು ಅದನ್ನು ಹಾಡಿದಿರಿ ಅಲ್ಲವೇ ಎಂದು ಕೋಪಿಸಿಕೊಂಡು ಅವರು ಕಚೇರಿಗೆ ನುಡಿಸದೇ ಎದ್ದುಹೋದರು. ಆ ಕಾಲದಲ್ಲಿ ಕಚೇರಿಗೆ ನುಡಿಸುವುದಕ್ಕೆ ಹೆಚ್ಚಿಗೆ ಏನೂ ಇರಲಿಲ್ಲ. ರಂಗು ಅಯ್ಯಂಗಾರ್ ಅವರು ತಿಶ್ರದಲ್ಲಿ ಕೀಳ್‌ಕಾಲ ಮಾಡುತ್ತಿದ್ದರು ಅಷ್ಟೆ. ತಿಶ್ರದಲ್ಲಿ ಮೇಲ್‌ಕಾಲವನ್ನು ವೈದ್ಯನಾಥ ಅಯ್ಯರ್ ಅವರು ಮಾಡಿದರು. ಈಗ ಎಲ್ಲರೂ ನುಡಿಸುವ ಈ ಸೊಲ್ಲು ಗಳು ಅವರದ್ದೇ.
ತಳಾಂಗುಕಿಟತಕ ದಿಗುತರಿಕಿಟತಕ ತತ್ತೋಂಕಿಟತಕ ದಿಗುತರಿಕಿಟತಕ ತಧೀತಾಂಕಿಟ ದಿಗುತರಿಕಿಟತಕ
ಕೋರ್ವೆ, ಮೊಹರಾ, ತನಿ ಆವರ್ತನ ಎಲ್ಲವೂ ಪ್ರಾರಂಭವಾದದ್ದು ತಂಜಾವೂರು ವೈದ್ಯನಾಥ ಅಯ್ಯರ್ ಅವರಿಂದಲೇ. ಈವತ್ತು ಪ್ರಪಂಚದಲ್ಲಿ ಒಂದು ಸ್ಟೈಲ್ ಇದೆ ಅಂತ ಅಂದ್ರೆ ಅದು ಇವರ ಶೈಲಿಯೇ. ಬೇರೆ ಶೈಲಿಯೇ ಇಲ್ಲ. ಕಚೇರಿಯಲ್ಲಿ ತನಿಯಾವರ್ತನ ಎನ್ನುವುದನ್ನು ಪ್ರಾರಂಭಿಸಿದ್ದು ಇವರೇ. ಮೃದಂಗಕ್ಕೆ ಒಂದು ಸ್ಥಾನ ದೊರಕಿದ್ದು ಇವರಿಂದಲೇ. ಆ ಕಾಲದಲ್ಲಿ ಲಯವಾದಕರನ್ನು ಮದ್ದಳೆಕಾರ ಎಂದು ಕರೆಯುತ್ತಿದ್ದರು. ಮೃದಂಗ ವಿದ್ವಾನ್ ಎನ್ನುವ ಗೌರವ ತಂದು ಕೊಟ್ಟಿದ್ದು ಇವರೇ. ಆದಿತಾಳಕ್ಕೆ ನಾಲ್ಕಾವರ್ತದ ಮೊಹರಾ ಇದೆ. ಅದನ್ನು ಮಾಡಿದವರೂ ಇವರೇ. ಒಂದೊಂದು ತಾಳಕ್ಕೂ ಮೊಹರಾ ಮಾಡಿದ್ದಾರೆ. ಮಿಶ್ರಛಾಪುವನ್ನು ಹೇಗೆ ನುಡಿಸಬೇಕು, ಅದಕ್ಕೆ ಮೊಹರಾ ಹೇಗೆ, ಇವೆಲ್ಲವನ್ನೂ ಇವರು ಮಾಡಿದರು.
ಅವರು ಮೊದಲು ಕಂಪೋಸ್ ಮಾಡಿದ ಮೊಹರಾ ಯಾವುದು?
||ಧೀತಳಾಂಗುಕಿಟಧಿನ್ ತರಿಕಿಟತಕತಾಂಕಿಟತಕ ಧಿಗುತರಿಕಿಟತಕ | ತದ್ಧಿತ್ತಳಾಂಗುಕಿಟಧಿನ್ ತಾಂಕಿಟತಕತಳಾಂಗುತೋಂ ತಕಝಣುಧಿನ್||
||ಧೀತಳಾಂಗುಕಿಟಧಿನ್ ತರಿಕಿಟತಕತಾಂಕಿಟತಕ ಧಿಗುತರಿಕಿಟತಕ | ತದ್ಧಿತ್ತಳಾಂಗುಕಿಟಧಿನ್ ತಾಂಕಿಟತಕತಳಾಂಗುತೋಂ ತಕಝಣುಧಿನ್||
||ಧೀತಳಾಂಗುಕಿಟಧಿನ್ ತರಿಕಿಟತಕತಾಂಕಿಟತಕ ಧಿಗುತರಿಕಿಟತಕ | ತದ್ಧಿತ್ತಳಾಂಗುಕಿಟಧಿನ್ ತಾಂಕಿಟತಕತಳಾಂಗುತೋಂ ತದ್ಧಿತ್ತಳಾಂಗು||
||ಕಿಟಧಿನ್ ತಾಂಕಿಟತಕತಳಾಂಗುತೋಂ ತದ್ಧಿತ್ತಳಾಂಗುಕಿಟಧಿನ್ ತಾಂಕಿಟ | ತಕ ತಳಾಂಗುತೋಂ ತಾಂಕಿಟತಕ ತಳಾಂಗುತೋಂ ತಾಂಕಿಟತಕ ತಳಾಂಗುತೋಂ||
ಇದೇ ಅವರು ಕಂಪೋಸ್ ಮಾಡಿದ ಮೊತ್ತ ಮೊದಲ ಮೊಹರಾ. ರೂಪಕತಾಳಕ್ಕೆ ಒಂದು ಮೊಹರಾ, ಮಿಶ್ರಛಾಪುವಿಗೆ ಒಂದು ಮೊಹರಾ ಮಾಡಿದ್ದಾರೆ.
ಮೊಹರಾದ ವಿನ್ಯಾಸ ಹೀಗೇ ಇರಬೇಕು ಎನ್ನುವುದಕ್ಕೆ ನಿಯಮಗಳು ಮತ್ತು ಅಳತೆಗೋಲುಗಳೇನು?
ಮೊಹರಾ ಹೇಗೆ ಮಾಡಬೇಕು ಎನ್ನುವುದನ್ನು ಅವರು ನನಗೆ ಹೇಳಿದ್ದರು. ಉದಾಹರಣೆಗೆ ಮಿಶ್ರಜಾತಿ ತ್ರಿಪುಟತಾಳಕ್ಕೆ ೧೧ ಅಕ್ಷರಗಳು. ಅದರ ಅರ್ಧ ಎಂದರೆ ೫೧/೨ ಅಕ್ಷರಗಳು. ೫೧/೨ ಅಕ್ಷರದಲ್ಲಿ ಎರಡು ತೆಗೆದರೆ ೩೧/೨ ಉಳಿಯುತ್ತದೆ. ಅದನ್ನು ನಾಲ್ಕರಿಂದ ಗುಣಿಸಬೇಕು. ಆಗ ಅದು ೧೪ ಆಗುತ್ತದೆ. ಅದು ಎರಡು ೭ ಆಗುತ್ತದೆ. ಹೀಗೆ ೧೩, ೧೭ ಅಕ್ಷರಗಳಿಗೂ ಮಾಡಬಹುದು. ಯಾವುದೇ ತಾಳವನ್ನು ನುಡಿಸಿ ದರೂ ಇದೇ ಲೆಕ್ಕಾಚಾರ.
ಹಿಂದೆ ಐದು ತಾಳಗಳಿದ್ದುವು. ಅದನ್ನು ಪಂಚತಾಳ ಎನ್ನುತ್ತಿದ್ದರು. ಅದರಲ್ಲಿ ಕೊನೆಯದು ಆದಿತಾಳ. ತವಿಲ್ ನುಡಿಸುವವರು ರಾಗಕ್ಕೆ ಮೊದಲು ತಾಳ ನುಡಿಸುತ್ತಾರೆ. ’ಡುಂ ಡುಂ ಡುಂ ಟಕ ಡುಂ,’ ನಾಗಸ್ವರದಲ್ಲಿ ರಾಗ ಪ್ರಾರಂಭಿಸಿದಾಗ ಅದನ್ನು ಆ ತಾಳಕ್ಕೆ ನುಡಿಸುತ್ತಿರುತ್ತಾರೆ. ಹಳೆಯ ಕಾಲದಲ್ಲಿ ರಾಗವನ್ನೂ ತಾಳದೊಂದಿಗೇ ನುಡಿಸಬೇಕು ಎಂದು ಇತ್ತು. ತಾನ ಹಾಡುವಾಗ ತಾಳ ಹಾಕಿಕೊಂಡು ನುಡಿಸಬೇಕಿತ್ತು. ಆಮೇಲೆ ಅದು ಬದಲಾಯಿತು.
ತಂಜಾವೂರು ಶೈಲಿಯ ವಿಶೇಷ ಫರನ್‌ಗಳು ಯಾವುವು?
ಫರನ್ ಎನ್ನುವುದು ಇದ್ದದ್ದೇ ತಂಜಾವೂರು ಶೈಲಿಯಲ್ಲಿ. ಇನ್ನೆಲ್ಲೂ ಇರಲಿಲ್ಲ. ತಂಜಾವೂರು ಶೈಲಿಯ ಫರನ್‌ಗಳು ಎಲ್ಲಾ ತಾಳಕ್ಕೂ ಇವೆ. ಹದಿನಾರು ಅಕ್ಷರದ ಒಂದು ಫರನ್ ಹೇಳುತ್ತೇನೆ:
ತಾಂಕಿಟತಕತರಿಕಿಟತಕ ಧಿನ್ಕಿಟತಕ ತರಿಕಿಟತಕ ತಕತರಿಕಿಟತಕ
ಧಿನ್ತರಿಕಿಟತಕ ಧಿಗುತರಿಕಿಟತಕ ತಕತರಿಕಿಟತಕ ಧಿಗುತರಿಕಿಟತಕ
ತಂಜಾವೂರು ಶೈಲಿಯಲ್ಲಿ ಅರೆಚಾಪು. ಫುಲ್ ಚಾಪು ಕೊಡುತ್ತಿದ್ದರು. ತಾ ಧೀ ತೋಂ ನಂ ಎಂಬ ಸೊಲ್ಲು ನುಡಿಸುತ್ತಿದ್ದರು.
ಹಿಂದೆ ಚಿನ್ನ ಮೊಹರಾ ಮತ್ತು ದೊಡ್ಡ ಮೊಹರಾ ಎಂದು ನುಡಿಸುತ್ತಿದ್ದಂತರಲ್ಲಾ, ಅದೇನು?
ಚಿನ್ನ ಮೊಹರಾ ಎಂದರೆ ಅದು ಕಾಲು ಆವರ್ತದ ಮೊಹರಾ. ನಾಲ್ಕು ಆವರ್ತದ ಮೊಹರಾ ವನ್ನು ದೊಡ್ಡ ಮೊಹರಾ ಎಂದು ಕರೆಯುತ್ತಾರೆ. ಯಾವುದೇ ತಾಳದಲ್ಲಿಯಾದರೂ ಅದು ನಾಲ್ಕು ಆವರ್ತ ಇದ್ದರೆ ಅದನ್ನು ದೊಡ್ಡ ಮೊಹರಾ ಎಂದು ಕರೆಯುತ್ತಾರೆ. ಅರ್ಧ ಆವರ್ತಕ್ಕೆ ಮೊಹರಾ ಮಾಡ ಬಾರದು. ಅದು ತಪ್ಪು. ಮೂರು ಆವರ್ತಕ್ಕೂ ಮೊಹರಾ ಮಾಡಬಾರದು. ಒಂದು, ಎರಡು, ಮತ್ತು ನಾಲ್ಕು ಆವರ್ತಕ್ಕೆ ಮೊಹರಾ ಮಾಡಬೇಕು. ಹಾಡು ಮುಗಿದ ತಕ್ಷಣ ಕಾಲು ಆವರ್ತದ ಒಂದು ಚಿನ್ನ ಮೊಹರಾ ನುಡಿಸಬಹುದು. ದೊಡ್ಡದಾಗಿದ್ದರೆ ದೊಡ್ಡ ಮೊಹರಾವನ್ನೇ ನುಡಿಸಬಹುದು.
ಅರೆ ಛಾಪು ಎನ್ನುವುದನ್ನು ಇವರೇ ಮಾಡಿದ್ದಾ?
ಹಿಂದೆ ಪಖಾವಜ್ ನುಡಿಸುತ್ತಿದ್ದರು. ಅದರಲ್ಲಿ ಎಲ್ಲವನ್ನೂ ಅರೆಛಾಪುವಿನಲ್ಲಿಯೇ ನುಡಿಸುತ್ತಿದ್ದರು. ಅದರಿಂದಲೇ ಅರೆಛಾಪು ಬಂದಿತು. ವಿಷ್ಣು ದಿಗಂಬರ ಪಲುಸ್ಕರ್ ಅವರ ತಂದೆ ಒಮ್ಮೆ ತಂಜಾವೂರಿನಲ್ಲಿ ಬಂದು ಹಾಡಿದರು. ಅವರ ಜೊತೆಗೆ ಪಖಾವಜ್ ಬಂದಿತ್ತು. ಅದರಲ್ಲಿ ಅರೆಛಾಪು ನೋಡಿ ಇವರು ಅದನ್ನು ಸೇರಿಸಿಕೊಂಡರು.
ತಂಜಾವೂರು ಸ್ಕೂಲ್‌ನಲ್ಲಿ ಭರತನಾಟ್ಯಕ್ಕೂ ನುಡಿಸುತ್ತಿದ್ದರಾ?
ನಾನೇ ನುಡಿಸಿದ್ದೇನೆ. ಅದಕ್ಕೆ ಬೇರೆ ತರಹ ನುಡಿಸಬೇಕು. ಭರತನಾಟ್ಯಕ್ಕೆ ಹೇಗೆ ನುಡಿಸಬೇಕು ಎನ್ನುವುದನ್ನೂ ಅವರು ನನಗೆ ಹೇಳಿಕೊಟ್ಟರು. ರವಿಶಂಕರ್ ಅವರ ಅಣ್ಣ ಉದಯಶಂಕರ್, ಮೃಣಾಲಿನಿ ಸಾರಭಾಯಿ ಅವರೆಲ್ಲಾ ನನ್ನನ್ನು ಕರೆದರು. ಆದರೆ ಗುರುಗಳು ಕಳಿಸುವುದಿಲ್ಲ ಎಂದುಬಿಟ್ಟರು. ನಾನು ಭರತನಾಟ್ಯಕ್ಕೆ ನುಡಿಸಲು ಹೋಗಲಿಲ್ಲ. ತಮಿಳು ಇಸೈನಲ್ಲಿ ಒಂದೇ ಒಂದು ಭರತನಾಟ್ಯ ಕಾರ್ಯಕ್ರಮಕ್ಕೆ ನುಡಿಸಿದ್ದೆ ಅಷ್ಟೆ. ಅದು ವೈಜಯಂತಿಮಾಲಾ ಅವರ ಕಾರ್ಯಕ್ರಮ. ಭರತ ನಾಟ್ಯದ ಅಡವುಗಳೆಲ್ಲ್ಲಾ ನನಗೆ ತಿಳಿದಿದ್ದುವು. ಈಗಲೂ ತಿಶ್ರನಡೆ ಮಾಡಿ ಭರತನಾಟ್ಯದ ಒಂದು ಅಡವು ನುಡಿಸುತ್ತೇನೆ. ಅದು ಭರತನಾಟ್ಯದ ಅಡವು ಎಂದು ಯಾರಿಗೂ ತಿಳಿಯದು. ಕಥಾಕಾಲಕ್ಷೇಪಕ್ಕೆ ನುಡಿಸುವುದಕ್ಕೂ ಒಂದು ಗಾಯನ ಕಚೇರಿಗೆ ನುಡಿಸು ವುದಕ್ಕೂ ವ್ಯತ್ಯಾಸವಿದೆ. ಎರಡರ ವಿಷಯವೇ ಬೇರೆ.
ತನಿ ಆವರ್ತನದಲ್ಲಿ ನಡೆಗಳನ್ನು ನುಡಿಸುವುದನ್ನು ಯಾರು ಪರಿಚಯಿಸಿದರು?
ಅದನ್ನೆಲ್ಲಾ ಪರಿಚಯಿಸಿ, ಪ್ರಾರಂಭಿಸಿದವರು ವೈದ್ಯನಾಥ ಅಯ್ಯರ್. ನಡೆಯನ್ನು ಮೊದಲು ಯಾರೂ ನುಡಿಸುತ್ತಿರಲಿಲ್ಲ. ಕೇವಲ ಮೊಹರಾ ನುಡಿಸಿ ಮುಗಿಸಿಬಿಡುತ್ತಿದ್ದರು. ಇವರಿಗೆ ಮೊದಲು ತನಿಯಾವರ್ತನ ಎನ್ನುವುದೇ ಇರಲಿಲ್ಲ. ಇವರಿಗಿಂತ ಹಿಂದೆ ಯಾರೂ ಹೀಗೆಲ್ಲಾ ನುಡಿಸುತ್ತಿರಲಿಲ್ಲ. ಎಲ್ಲದಕ್ಕೂ ನಡೆಗಳನ್ನು ಮಾಡಿದರು. ಇವರನ್ನು ಕಂಡರೇ ಎಲ್ಲರೂ ಹೆದರುತ್ತಿದ್ದರು. ಇವರು ಬಹಳ ದೊಡ್ಡ ಮೇಧಾವಿ. ಮಣಿ ಅಯ್ಯರ್ ಓಹೋ ಎಂದು ನುಡಿಸುವುದಕ್ಕೆ ಕಾರಣ ಇವರೇ.
ಪಳನಿ ಸುಬ್ರಹ್ಮಣ್ಯ ಪಿಳ್ಳೈ ಅವರು ನನಗೆ ಹಲವು ವಿಚಾರಗಳನ್ನು ಕಲಿಸಿದರು. ನಿಜವಾಗಿಯೂ ಅದನ್ನು ಹೇಳುವುದಕ್ಕೇ ಸಾಧ್ಯವಿಲ್ಲ. ದೇವಸ್ಥಾನಗಳಲ್ಲಿ ಹೇಗೆ ನುಡಿಸಬೇಕು ಎನ್ನುವುದನ್ನೆಲ್ಲಾ ಹೇಳಿಕೊಟ್ಟರು. ಅದನ್ನು ನವಸಂಧಿ ತಾಳ ಎನ್ನುತ್ತಾರೆ. ಉತ್ಸವದಲ್ಲಿ ಯಾವ ಯಾವ ದೇವರಿಗೆ ನುಡಿಸಬೇಕು ಎನ್ನುವು ದನ್ನು ಕಲಿಸಿದರು. ಗಣಪತಿಸ್ತೋತ್ರ, ಸುಬ್ರಹ್ಮಣ್ಯೇಶ್ವರ ಸ್ತೋತ್ರ, ನಂದಿಕೇಶ್ವರ ಸ್ತೋತ್ರ ಹೇಳಿಕೊಟ್ಟರು ಮತ್ತು ಕೌತ್ವವನ್ನು ನುಡಿಸುವುದನ್ನು ಹೇಳಿಕೊಟ್ಟರು.
ಮಣಿ ಅಯ್ಯರ್ ಅವರ ವಾದನದ ಮೇಲೆ ಚಂಡೆ ವಾದನದ ಪ್ರಭಾವ ಇದೆ ಎನ್ನುತ್ತಾರಲ್ಲಾ?
ಹೌದು ಇದೆ. ಈ ಸೊಲ್ಲೆಲ್ಲಾ ನೋಡು. ಟ್ರಿಣಾನ್, ಟ್ರಿಣಾನ್ ಈ ನಾದ, ಅದೆಲ್ಲಾ ಚೆಂಡೆಯಿಂದಲೇ ಬಂದಿರುವುದು. ಗುಗುತಕ ತರಿಕಿಟ ಧೀಂ ತಝ್ಝಂ ಇದು ಎಲ್ಲಿಂದ ಬಂದಿರುವುದು? ಚಂಡೆಯಿಂದಲೇ. ತಧಿಮಿ ತಕ ತಧಿನ್ ತಧಿಮಿ ತಕ ತಧಿನ್, ತಧಿಮಿ ಧಿನ್ ತಕ ತಧಿಮಿ ಧಿನ್ ತಕ ಇದನ್ನು ತವಿಲ್‌ಕಾರರು ಆರಂಭಿಸಿದರು. ಅವರಿಗೆ ನಡೈಸೊಲ್ಲು ಎಂದು ಇದೆ. ನಡೆದುಕೊಂಡು ಹೋಗುತ್ತಾ ನುಡಿ ಸುವುದು. ಹೀಗೆ ನುಡಿಸಿಕೊಂಡೇ ಹೋಗುತ್ತಿದ್ದರು. ಅದರಿಂದಲೇ ಇದೆಲ್ಲವೂ ಬಂದಿರುವುದು.
ಗುಮ್ಕಿ ಬಗ್ಗೆ ಹೇಳಿ.
ಗುಮ್ಕಿಯನ್ನು ಮೃದಂಗಕ್ಕೆ ಸೊಗಸಾಗಿ ತಂದವರು ದಕ್ಷಿಣಾಮೂರ್ತಿ ಪಿಳ್ಳೈ. ದಕ್ಷಿಣಾಮೂರ್ತಿ ಪಿಳ್ಳೈ ಗುಮ್ಕಿಯನ್ನು ಅದೆಷ್ಟು ಸೊಗಸಾಗಿ ನುಡಿಸುತ್ತಿದ್ದರು. ಛೇ, ಹಾಗೆ ನುಡಿಸುವುದನ್ನು ನಾನು ಕೇಳಿಯೇ ಇಲ್ಲ. ಗುಮ್ಕಿಯನ್ನು ಸುಬ್ರಹ್ಮಣ್ಯ ಪಿಳ್ಳೈ ಕೂಡ ತುಂಬಾ ಚೆನ್ನಾಗಿ ನುಡಿಸುತ್ತಿದ್ದರು. ಇವರು ಗಳಿಂದಲೇ ಗುಮ್ಕಿ ತಂಜಾವೂರು ಶೈಲಿಯಲ್ಲೂ ಗುಮ್ಕಿ ಇದೆ. ವೀಣೆಗೆ ನುಡಿಸುವಾಗ ಹೊಡೆದು ನುಡಿಸುವುದಕ್ಕಾಗು ತ್ತಿರಲಿಲ್ಲವಲ್ಲ. ಆವಾಗ ಈ ಗುಮ್ಕಿ ಬಂದಿತು. ಗುಮ್ಕಿಗೆಂದು ಯಾವ ಸೊಲ್ಕಟ್ಟೂ ಇಲ್ಲ. ನುಡಿಸ್ತಾರೆ ಅಷ್ಟೆ.
ತಂಜಾವೂರು ಶೈಲಿಯಲ್ಲಿ ಹಾಡಿಗೆ ನುಡಿಸುವುದರಲ್ಲಿ ಯಾವ ವಿಶೇಷತೆ ಇದೆ?
ಹಾಡು ಪ್ರಾರಂಭವಾಗುವಾಗ ಹಿಂದೆಲ್ಲಾ ಅಮೈತ್ತು ನುಡಿಸುತ್ತಿದ್ದರು. ಈಗ ಅದು ಇಲ್ಲ. ಅಮೈತ್ತು ನುಡಿಸುವುದು ಎಂದರೆ ಬೇರೆ ಬೇರೆ ಕಲಾವಿದರು ಹಾಡುವಾಗ ಅವರವರ ಪ್ರಸ್ತುತಿಯ ಲಯವನ್ನು ಅರಿತುಕೊಂಡು ಆ ಹಾಡುಗಾರಿಕೆ ಯನ್ನು ಪೋಷಿಸುವಂತೆ ನುಡಿಸುವುದು. ಸಾಹಿತ್ಯಕ್ಕೆ ಪ್ರಾಮುಖ್ಯ ನೀಡಿ ಅದು ಬೆಳಗುವಂತೆ ಮಾಡುವುದು ತಂಜಾವೂರು ಶೈಲಿ. ಅದೇ ನಿಜವಾದ ನುಡಿಸಾಣಿಕೆ.
ಕೊನೆಯದಾಗಿ ಇನ್ನೊಂದು ಮಾತು. ನಾವು ಶಿಷ್ಯರನ್ನು ನಮ್ಮ ಮನೆಯ ಮಕ್ಕಳಂತೆ ನೋಡಿ ಕೊಳ್ಳಬೇಕು. ಅವರನ್ನು ಬೈಯ್ಯುವುದು, ಹೊಡೆಯು ವುದು, ಹಿಂಸಿಸುವುದು ಮಾಡಬಾರದು. ಅವರಿಗೆ ಬರುವಂತೆ ಹೇಳಿಕೊಡಬೇಕು. ನಾನು ಯಾರನ್ನೂ ಹೊಡೆಯುವುದಿಲ್ಲ. ಇದೆಲ್ಲಾ ಅವರು ಹೇಳಿಕೊಟ್ಟ ಬುದ್ದಿ. ವೈದ್ಯನಾಥ ಅಯ್ಯರ್ ಅವರಿಗೆ ಜಾತಿಮತ ಭೇದ ಇರಲಿಲ್ಲ. ಅವರ ಬಳಿ ಅಬ್ದುಲ್ ಖಾದರ್ ಎಂಬ ಮುಸಲ್ಮಾನರು ಮತ್ತು ಸುಸೈಯನ್ ಎಂಬ ಕ್ರೈಸ್ತರೊಬ್ಬರು ಮೃದಂಗ ಕಲಿತಿದ್ದರು. ಸುಸೈಯನ್ ಅವರು ಅರಿಯಾಕುಡಿ ರಾಮಾನುಜ ಅಯ್ಯಂಗಾ ರ್ಯರ ಕಛೇರಿಗೆ ಮೃದಂಗ ನುಡಿಸಿದ್ದರು. ಅಬ್ದುಲ್ ಖಾದರ್ ಮಧುರೈ ಮಣಿ ಅಯ್ಯರ್ ಅವರ ಕಛೇರಿಗೆ ನುಡಿಸಿದ್ದರು. ಸೂಸೈ ಪಿಳ್ಳೈ ಅವರು ಚೆನ್ನಾಗಿ ನುಡಿಸುತ್ತಿದ್ದರು. ಅವರು ನನ್ನ ಜೊತೆಗೂ ನುಡಿಸಿ ದ್ದಾರೆ. ಇಂತಹ ಪರಂಪರೆಯನ್ನು ನಾವು ಬೆಳೆಸಬೇಕು.