Parama shivan-ಪರಮಶಿವನ್ ಸಂದರ್ಶನ

ಸಂದರ್ಶಿಸಿದವರು – ಎ ರಾಧೇಶ ಮತ್ತು ವೇಣುಗೋಪಾಲ್ ಟಿ ಎಸ್

 

ನೀವು ನಿಮ್ಮ ಗುರು ದೇವೇಂದ್ರಪ್ಪನವರ ಬಳಿ ಕಲಿತದ್ದರ ಬಗ್ಗೆ ಹೇಳಿ. ನಿಮಗೆ ಸಂಗೀತದ ಗೀಳು ಹತ್ತಿದ್ದರ ಬಗ್ಗೆ ಹೇಳಿ.
ಚಾಮುಂಡೇಶ್ವರಿ ಕಂಪನಿಯಲ್ಲಿ ಬಾಲಕನ ಪಾತ್ರ ಮಾಡ್ತಾ ಇದ್ದೆ. ನಾಲ್ಕೈದು ವರ್ಷ. ಕಂಠ ಚೆನ್ನಾಗಿತ್ತು ಅಂತ ಹಾರ್ಮೋನಿಯಂ ಮೇಷ್ಟ್ರು ಸರಿಗಮ ಶುರುಮಾಡಿದ್ರು. ಸರಳೆ ಜಂಟಿ ಅಲಂಕಾರ ಎಲ್ಲವನ್ನೂ ಪಾಠ ಮಾಡಿ, ಅಕಾರ ಉಕಾರಗಳಲ್ಲಿ ಹಾಡಿಸೋರು. ಅಂಕಾರ ಕಷ್ಟ ಅಂತ ಅಂಕಾರ ಮಾಡಿಸೋರು. ಬಾಯಿ ಮುಚ್ಚಿಕೊಂಡು ಮಾಡಬೇಕಿತ್ತು. ಅಂಕಾರ ಅಭ್ಯಾಸ ಮಾಡದೇ ಇದ್ದವರಿಗೆ ಅಂತರಂಗ ಅನ್ನೋದು ಸರಿಯಾಗಿ ಬರೋಲ್ಲ. ನನಗೆ ಇನ್ನೇನು ಎಂಟು ತುಂಬೋದ್ರಲ್ಲಿತ್ತು. ನಾಟಕ ಮುಗಿಸಿ ಬೆಳಗಿನ ಜಾವ ವಾಪಸ್ಸು ಬಂದಿದ್ದರೂ ೪ ಗಂಟೆಯಲ್ಲಿ ಅಭ್ಯಾಸ ಮಾಡಲೇ ಬೇಕಿತ್ತು. ಶಿವಪ್ಪನವರು ದೇವೇಂದ್ರಪ್ಪನವರಷ್ಟು ದೊಡ್ಡ ವಿದ್ವಾಂಸರೇನಲ್ಲ ಅದರೆ ಶುದ್ಧವಾಗಿ ಕಲಿತಿದ್ರು. ಆಗಲೇ ನನಗೆ ಎರಡು ಕಾಲ ವರ್ಣ ಆಭ್ಯಾಸ ಮಾಡಿಸಿದ್ದರು. ಮಂದಾರಿ ಅಭೋಗಿ ಮುಂತಾದ ೧೦ ವರ್ಣಗಳನ್ನು ಕಲಿಸಿದ್ದರು. ನನಗೆ ಎರಡು ಕಾಲ ಮೂರು ಕಾಲ ಅವೆಲ್ಲಾ ಗೊತ್ತಿರಲಿಲ್ಲ. ಆದರೆ ಅವರು ಹೇಳಿದ್ದನ್ನು ತಾಳ ಹಾಕ್ಕೊಂಡು ಹಾಡ್ತಿದ್ದೆ. ಒಂದಿಪ್ಪತ್ತು ಶುದ್ಧವಾದ ಕೀರ್ತನೆ ಹೇಳಿಕೊಟ್ರು – ಶೋಭಿಲ್ಲು, ನೀರಜಾಕ್ಷಿ, ವಾತಾಪಿ ಹೀಗೆ. ಇದೇ ಪ್ರಾರಂಭ. ಯಾರು ಏನು ಹೇಳ್ತಾರೋ ಅದನ್ನು ಹಾಗೆ ಹಾಡೋದು ನನಗೊಂದು ಅಭ್ಯಾಸ. ನಾಗೇಶರಾಯರಂತಹ ದೊಡ್ಡ ವಿದ್ವಾಂಸರು ಏನು ಹಾಡ್ತಾರೋ ಅದನ್ನು ನಾನೂ ಹಾಗೇ ಹಾಡಿಬಿಡಬೇಕೆಂಬ ಹುಚ್ಚು ನನಗೆ. ಹಾಗಾಗಿ ಅವರು ಹಾಡೋ ಕಂದಗಳನ್ನೆಲ್ಲಾ ಕೇಳಿಕೊಂಡು, ನಾನು ನನ್ನ ಕಂದಗಳಲ್ಲಿ ಸೇರಿಸಿಕೊಂಡು ರಿಪೀಟ್ ಮಾಡ್ತಾ ಇದ್ದೆ. ಒಂದು ನಾಟಕದಲ್ಲಿ ಜರಾಸಂಧನ ಮಗ ಸಹದೇವನ ಪಾತ್ರ ನನ್ನದು. ತಂದೆ ಸತ್ತು ಹೋದಾಗ ಬೇಹಾಗ್ ರಾಗದಲ್ಲಿ ಜನಕಂ ಎಲ್ಲಿರ್ಪನೋ ಎಂಬ ಕಂದವನ್ನು ಹಾಡುತ್ತಾನೆ. ಅದರಲ್ಲಿ ಕೆಲವು ತುಂಬಾ ಮಿಂಚಿನ ವೇಗದ ಸಂಚಾರಗಳನ್ನು ಹಾಡಿದೆ. ಅದರಲ್ಲಿ ನಾಗೇಶರಾಯರು ಹಾಡುತ್ತಿದ್ದ ಸಂಚಾರಗಳನ್ನೆಲ್ಲಾ ಸೇರಿಸಿ ಹಾಡಿದೆ. ಆವತ್ತು ನಾಟಕ ನೋಡಲು ದೇವೇಂದ್ರಪ್ಪನವರು ಬಂದಿದ್ದರು. ಅವರು ಅದು ಮುಗಿಯುತ್ತಲೇ ವೇದಿಕೆಯ ಹಿಂದೆ ಬಂದು ವಿದ್ವತ್ತಿನ ರಾಗಗಳನ್ನೆಲ್ಲಾ ಹಾಡುತ್ತಿರುವ ಈ ಹುಡುಗ ಯಾರು ಎಂದೆಲ್ಲಾ ವಿಚಾರಿಸಿ ಇಷ್ಟೆಲ್ಲ ಜ್ಞಾನ ಇಟ್ಟುಕೊಂಡು ನಾಟಕದಲ್ಲಿ ಇರುವುದು ಎಂದರೇನು ಎಂದು ನನ್ನನ್ನು ಅವರ ಮನೆಗೆ ಪಾಠ ಹೇಳಿಕೊಡಲು ಕರೆದುಕೊಂಡು ಬಂದರು. ಅವರ ಮನೆಯಲ್ಲಿ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಇನ್ನೂ ಮುಂತಾದ ಹಲವು ಬ್ರಾಹ್ಮಣ ಹುಡುಗರಿದ್ದರು. ಅವರ ಜೊತೆಗೆ ನನ್ನನ್ನೂ ಬಿಟ್ಟರು. ಬ್ರಾಹ್ಮಣ ಹುಡುಗರಿಗೆ ಅಡುಗೆ ಮಾಡಲೆಂದೇ ಒಬ್ಬ ಅಡುಗೆಯವನನ್ನು ಇಟ್ಟಿದ್ದರು. ಏಕೆಂದರೆ ಅವರು ನಾಯಕರು. ಹೀಗೆ ಊಟ ಹಾಕಿ ವಿದ್ಯೆ ಹೇಳಿಕೊಟ್ಟವರು ನನಗೆ ತಿಳಿದ ಪ್ರಕಾರ ಕರ್ನಾಟಕದಲ್ಲಿಯೇ ಯಾರೂ ಇಲ್ಲ. ಕರ್ನಾಟಕದಲ್ಲಿ ಇನ್ನೂ ಹಲವು ದೊಡ್ಡ ದೊಡ್ಡ ವಿದ್ವಾಂಸರಿದ್ದರು. ಆದರೆ ಯಾರೂ ಈ ಕೆಲಸ ಮಾಡಲಿಲ್ಲ. ಅವರ ಶಿಷ್ಯರು ಮೃದಂಗದಲ್ಲಿ, ಪಿಟೀಲಿನಲ್ಲ ಹಾಡುಗಾರಿಕೆಯಲ್ಲಿ, ಕೊಳಲಿನಲ್ಲಿ ಹೀಗೆ ಎಲ್ಲದರಲ್ಲೂ ಇದ್ದಾರೆ. ಫ್ಲೂಟಿನಲ್ಲಿ ರಂಗಪ್ಪ ಅಂತ ಇದ್ದರು. ಅವರು ತುಂಬಾ ಕುಡಿಯೋರು. ಆದರೆ ಒಂದು ಫ್ಲೂಟಿನಲ್ಲಿ ಏನು ಬೇಕಾದರೂ ಲೀಲಾಜಾಲವಾಗಿ ನುಡಿಸಿಬಿಡ್ತಾ ಇದ್ರು. ಯಾರೇ ಹಾಡ್ತಾ ಇರ್ಲಿ. ಅವರ ಶ್ರುತಿಗೆ ಸರಿಯಾಗಿ ನುಡಿಸ್ತಾ ಇದ್ರು. ಮದ್ರಾಸ್ ಆಕಾಶವಾಣಿಯಲ್ಲಿ ಇದ್ದರು. ವರ್ಗ ಆಗಿ ಇಲ್ಲಿಗೆ ಬಂದಿದ್ದರು. ಕುಡಿದ ಮತ್ತಿನಲ್ಲಿ ಡೈರೆಕ್ಟರ್ ಜೊತೆಗೆ ಜಗಳ ಕಾದುಬಿಟ್ಟ. ಏನೇನೋ ಅಂದುಬಿಟ್ಟ. ಅವನನ್ನು ಡಿಸ್‌ಮಿಸ್ ಮಾಡಿಬಿಟ್ಟರು. ಅವರು ನನಗೆ ಮೂರು ಕಾಲ ವರ್ಣ, ವಿದ್ವತ್ತಿನ ರಾಗಗಳು, ರಾಗ ತಾನ ಪಲ್ಲವಿ ಇವೆಲ್ಲವನ್ನೂ ಹೇಳಿಕೊಟ್ಟರು. ನನಗೆ ತುಂಬಾ ಸಹಾಯ ಮಾಡಿದ್ದು ನಾಟಕದ ಸಂಗೀತವೇ ಏಕೆಂದರೆ ಅದರ ಎಲ್ಲಾ ರಾಗಗಳು ವಿದ್ವತ್ತಿನ ರಾಗಗಳೇ. ಉದಾಹರಣೆಗೆ ಸೌರಾಷ್ಟ್ರ, ದೇವಗಾಂಧಾರಿ. ನಾನು ಚಿಕ್ಕ ಹುಡುಗ ಆರಭಿ ದೇವಗಾಂಧಾರಿ ಎರಡೂ ಒಂದೇ ಎಂದು ಅಂದ್ಕೊಂಡು ಬಿಟ್ಟಿದ್ದೆ. ನಾಟಕಗಳಲ್ಲಿ ಎಷ್ಟೋ ಬಾರಿ ಕಂಪೋಸರ್ಸ್ ಅಂತ ಇಲ್ಲದೇ ಇದ್ದಾಗ ಇದ್ದ ಕೀರ್ತನೆಗಳು, ತಿಲ್ಲಾನ, ಜಾವಳಿಗಳು ಇವುಗಳನ್ನೇ ಬಳಸಿಕೊಳ್ತಾ ಇದ್ವಿ. ನಾಟಕಕ್ಕೆ ತಕ್ಕಂತೆ ಅದರ ಮಟ್ಟನ್ನು, ಸಂಗೀತವನ್ನು ಬದಲಿಸಿಕೊಳ್ತಾ ಇದ್ವಿ. ಕೊಟ್ಟೂರಪ್ಪನವರು, ಮಲ್ಲಪ್ಪನವರು, ನಾಗೇಶರಾಯರದ್ದು ಕಂಚಿನ ಕಂಠ ಅವರು ಕಪ್ಪು ನಾಲ್ಕು ಅಂದರೆ ಜಿ ಷಾರ್ಪ್‌ನಲ್ಲಿ ಹಾಡ್ತಾ ಇದ್ದರು. ಗ, ಮ, ಪ, ಎಲ್ಲಾ ಮುಟ್ತಾ ಇದ್ದರು. ಇವರ್ಯಾರೂ ಫಾಲ್ಸ್ ವಾಯ್ಸ್‌ನಲ್ಲಿ/ಕಳ್ಳದನಿಯಲ್ಲಿ ಹಾಡ್ತಾ ಇರಲಿಲ್ಲ. ಎಲ್ಲಾ ನುಡಿಕಾರಗಳೂ ಸೊಗಸಾಗಿ ಬರ್ತಾ ಇದ್ವು. ಇವರೆಲ್ಲರೂ ಟಾಪ್‌ಗ್ರೇಡ್ ಕಲಾವಿದರು. ಇನ್ನು ಎರಡಡನೇ ಗ್ರೇಡ್ ಕಲಾವಿದರಲ್ಲಿ ಗಂಗಾಧರ ಶಾಸ್ತ್ರಿಗಳು, ಪಳನಿ ಸುಬ್ರಹ್ಮಣ್ಯ ಅವರೆಲ್ಲಾ ಎಫ್‌ನಲ್ಲಿ ಹಾಡ್ತಾ ಇದ್ದರು. ನಾಗೇಶರಾಯರು ಮತ್ತು ಮಳವಳ್ಳಿ ಸುಂದರಮ್ಮನವರು ಇಬ್ಬರೂ ಜಿ ಷಾರ್ಪ್‌ನಲ್ಲಿ ಹಾಡ್ತಾ ಇದ್ರು. ಸಂಗೀತ ಸುಭದ್ರಾ ನಾಟಕದಲ್ಲಿ ಪೂಜೆಯ ದೃಶ್ಯದಲ್ಲಿ ಸಂಗೀತದಲ್ಲೇ ಪ್ರಶ್ನೋತ್ತರ ಆಗ್ತಾ ಇತ್ತು. ಅದು ಸುಮಾರು ಒಂದು ಗಂಟೆ ಆಗ್ತಾ ಇತ್ತು. ಸುಂದರಮ್ಮನವರಿಗೆ ಒಳ್ಳೆಯ ಪಲ್ಲವಿ ಜ್ಞಾನ ಇತ್ತು. ಪಲ್ಲವಿ ಸುಬ್ಬಣ್ಣನವರು ನಾಟಕದ ಪರದೆಯ ಹಿಂದೆ ಪಿಟೀಲು ನುಡಿಸ್ತಾ ಇದ್ದರು. ನಾಲ್ವಡಿಯವರು ಇದ್ಯಾವ ವಾದ್ಯ ಹೀಗೆ ಇಷ್ಟು ಜೋರಾಗಿ ಕೇಳುತ್ತಲ್ಲಾ ಅನ್ನೋರು. ಆಮೇಲೆ ಅವರನ್ನು ಕರೆಸಿ ನುಡಿಸಿದರು. ನಾನು ನಾಲ್ವಡಿಯವರ ಮುಂದೆ ನಟಿಸಿದ್ದೇನೆ. ಜಯಚಾಮರಾಜ ಒಡೆಯರ್ ಮುಂದೆಯೂ ನಟಿಸಿದ್ದೇನೆ. ಜಗನ್ಮೋಹನ ಅರಮನೆಯಲ್ಲಿ ನಾನು ಹಾಡೋದು ಕೇಳಿ ನನ್ನನ್ನು ಅರಮನೆಗೆ ಕರೆದುಕೊಂಡು ಹೋಗಿ ಮೂರು ಕಾಲ ವರ್ಣ, ಪಲ್ಲವಿ ಎಲ್ಲಾ ಹಾಡಿಸಿ, ಸ್ವರವನ್ನೂ ಮೂರು ಕಾಲ ಹಾಕು. ಎರಡು ಕಾಲ ಎಲ್ಲರೂ ಹಾಕುತ್ತಾರೆ ಎಂದರು. ಮೆಪ್ಪುಲಕೈ ಕನಕಾ ಎನ್ನುವುದಕ್ಕೆ ಸ್ವರ ಹಾಕಿಸಿದರು. ಇದು ೪೨ನೇ ಇಸವಿಯಲ್ಲಿ. ನಾನು ಗುರುಗಳ ಮನೆಗೆ ಸುಮಾರು ದೂರ ನಡೆದು ಹೋಗ್ತಾ ಇದ್ದೆ. ಸ್ವಲ್ಪ ಕಡಲೇಕಾಯಿ ಬಾಯಾಡ್ತಾ ಹೋಗ್ತಾ ಇದ್ದೆ. ಅಲ್ಲಿ ಹೋದರೆ ಹೇಳಿದ್ದನ್ನೇ ಮತ್ತೆ ಹೇಳಿಸಿ ಕಳಿಸೋರು. ನಾನು ಅದನ್ನಾ ಮತ್ತೆ ಹೇಳಿಸುತ್ತಾರಲ್ಲಾ ಎಂದು ಗೊಣಗಾಡಿಕೊಂಡು ವಾಪಸ್ಸು ಬರುತ್ತಿದ್ದೆ. ಈಗ ನನಗೆ ಅದು ಎಷ್ಟು ಒಳ್ಳೆಯದಾಯಿತು ಅಂತ ಅರ್ಥ ಆಗ್ತಾ ಇದೆ. ೫೨ನೇ ಇಸವಿಯಲ್ಲಿ ವಿದ್ವತ್ ಮಾಡಿಕೊಂಡೆ. ನಾನು ಚಿಕ್ಕ ಹುಡುಗನಾಗಿದ್ದಾಗ ೬.೫ ಮನೆ ಶ್ರುತಿಯಲ್ಲಿ ಹಾಡ್ತಿದ್ದೆ. ಅದ್ರೆ ಈಗ ಗಂಟಲು ಒಡೆದ ಮೇಲೆ ಎರಡೂವರೆ ಮನೆ ಶ್ರುತಿಯಲ್ಲಿ ಹಾಡ್ತಾ ಇದ್ದೀನಿ.
ರಂಗಸಂಗೀತದಲ್ಲಿಯೂ ಮನೋಧರ್ಮ ಇದೆಯಾ?
ಅದರಲ್ಲಿ ಜಾಸ್ತಿ. ರಂಗಸಂಗೀತದಲ್ಲಿ ಕಂದ ಎಷ್ಟಿರುತ್ತೆ. ನಾಲ್ಜು ಸಾಲು ಇರುತ್ತೆ. ಅಷ್ಟರಲ್ಲಿ ಕಾಂಬೋಧಿ ರಾಗ ಮುಗಿಯಬೇಕಲ್ಲಾ. ನಾಟಕದಲ್ಲಿ ಕಾಂಬೋಧಿ ರಾಗದ ಸಾರವನ್ನು ನಾಲ್ಕು ಸಾಲಿನಲ್ಲಿ ಹಾಡಿ ತೋರಿಸಿ ಮುಗಿಸಿಬಿಡುತ್ತಾರೆ. ಈ ಚಾಕಚಕ್ಯತೆ ಸಂಗೀತಗಾರರಿಗೆ ಇಲ್ಲ. ಒಂದು ರಾಗದ ಸಾರವನ್ನು ನಾಲ್ಕೇ ನಾಲ್ಕು ಸಾಲಿನಲ್ಲಿ ಹಾಡಿತೋರಿಸುವ ಸಾಮರ್ಥ್ಯವನ್ನು ರಂಗಸಂಗೀತ ಹುಟ್ಟುಹಾಕುತ್ತೆ. ಒಬ್ಬ ಕಲಾವಿದ ನಾಟಕದಲ್ಲಿ ರಾಗವನ್ನು ನಿಧಾನವಾಗಿ ವಿಸ್ತರಿಸುತ್ತಾ ನಿಂತ್ರೆ ಪಕ್ಕದಲ್ಲಿರುವ ಕಲಾವಿದ ಏನು ಮಾಡಬೇಕು? ಎಲ್ಲಾ ಅತಂತ್ರ ಆಗಿ ಬಿಡುತ್ತೆ.
ದೇವೆಂದ್ರಪ್ಪನವರು ಸಂಗೀತ ಕಲಿಸುವ ಕ್ರಮ ಹೇಗಿತ್ತು? ಕೃತಿಗಳ ಸ್ಕ್ರಿಪ್ಟ್ ಕೊಡ್ತಿದ್ರಾ?
ಬಹಳಾ ಮುತುವರ್ಜಿಯಿಂದ ಮಾಡೋರು. ಹಾಡಿಸೋರು. ಜೊತೆಗೆ ಕೂತ್ಕೊಂಡು ಹಾಡೋರು. ಭಾವವಾಗಿ ಹಾಡೋದು ಹೇಗೆ ಅಂತ ಹೇಳಿಕೊಡೋರು. ಸಾಹಿತ್ಯಾನ ಅರ್ಥಮಾಡಿಕೋ ಆಗ ಮನೋಧರ್ಮ ಬರುತ್ತೆ ಎನ್ನೋರು. ಮುಖಾರಿಯ ಏಲಾವತಾರ ಮೆತ್ತಿತಿವೋ ಎನ್ನುವುದನ್ನು ಹಾಡುವಾಗ ನೀನು ಯಾಕೆ ಅವತಾರ ಎತ್ತಿದ್ದೀಯೆ ಎನ್ನುವುದನ್ನು ಕೇಳುವ ಟೋನ್ ಅದರಲ್ಲಿ ಇರಬೇಕೇ ಹೊರತು, ಜಗಳವಾಡುವ ಟೋನ್ ಇರಬಾರದು ಎನ್ನುತ್ತಿದ್ದರು. ಮನೋಧರ್ಮ ಸಂಗೀತವನ್ನು ಹೆಚ್ಚಿಸಕೋ. ನಾಟಕಕ್ಕೂ ಅದು ಬೇಕೇ ಬೇಕು ಎನ್ನುತ್ತಿದ್ದರು. ರಂಗಭೂಮಿಯಲ್ಲಿ ಮನೋಧರ್ಮ ಸಂಗೀತವೇ ಜಾಸ್ತಿ. ಬಿಡಾರಂ ಕೃಷ್ಣಪ್ಪನವರ ಕಾಲದ ಒಂದೆರಡು ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ಯಾವ ಕೀರ್ತನೆ ಹೇಳ್ಕೊಡ್ತಿದ್ದರೋ ಅದರ ಸ್ಕ್ರಿಪ್ಟ್ ಕೊಟ್ಟು. ಬರ್ಕೊಳೋ ಅಂತ ಅನ್ನೋರು. ಸ್ಕ್ರಿಪ್ಟ್‌ನಲ್ಲಿ ಕೇವಲ ಔಟ್‌ಲೈನ್ ಇರುತ್ತೆ ಅಷ್ಟೇ. ಭಾವವಾಗಿ, ಸೂಕ್ಷ್ಮವಾಗಿ ಹಾಡೋದು ಗುರುಗಳು ಹೇಳ್ಕೊಡೋರು. ದೇವೆಂದ್ರಪ್ಪನವರು ವಚನಗಳಿಗೆ ಸ್ವರ ಹಾಕಿ, ಪುಸ್ತಕ ಮಾಡಿಸಿದ್ದರು. ಅದೊಂದು ದೊಡ್ಡ ಕಥೆ. ಜೆಎಸ್‌ಎಸ್ ದೊಡ್ಡ ಸ್ವಾಮಿಗಳು ಒಂದು ನೂರು ವಚನಗಳಿಗೆ ಸ್ವರಹಾಕಿ ಪುಸ್ತಕ ಮಾಡಿಸೋಣ ಎಂದು ಇವರಿಗೆ ಹೇಳಿದರು. ಅವರು ಖರ್ಚುಹಾಕಿಕೊಂಡು ಎಲ್ಲವನ್ನೂ ಸಿದ್ಧಮಾಡಿದರು. ವಚನ ಮಂಜರಿ ಸಿದ್ಧವಾಯಿತು. ಆದರೆ ಅದರ ಖರ್ಚನ್ನು ಸಂಸ್ಥೆ ಭರಿಸಲೇ ಇಲ್ಲ. ರಾಗ ಸಾಹಿತ್ಯ ಎರಡೂ ಸಮತೂಕದಲ್ಲಿದ್ದರೆ ಅದು ಕೇಳುಗರ ಮೇಲೆ ಮತ್ತು ಕಲಾವಿದರ ಮೇಲೆ ಇಬ್ಬರ ಮೇಲೆಯೂ ಒಳ್ಳೆಯ ಪರಿಣಾಮವಾಗುತ್ತದೆ ಎಂದು ಹೇಳೋರು.
ನಾನು ದೇವೇಂದ್ರಪ್ಪನವರ ಬಳಿ ಇಷ್ಟು ವರ್ಷ ಕಲಿತೆ ಅಂತ ಹೇಳೋದು ಕಷ್ಟ. ಏಕಂತಂದ್ರೆ, ನಾನು ನಾಟಕದ ಕಂಪನಿಯಲ್ಲಿದ್ದೆ. ಬಿಜಾಪುರಕ್ಕೆ ನಾಲ್ಕು ತಿಂಗಳು ಹೋಗಿ ಬಿಡ್ತಿದ್ದೆ. ಅಲ್ಲಿಂದ ಇನ್ನೊಂದು ಊರಿಗೆ ಬಿಡಾರ ಸಾಗಿಸುವಾಗ ಒಂಉದ ಹತ್ತು ದಿನ ಟೈಮ್ ಇರ್ತಿತ್ತು. ಆಗ ಓಡಿ ಬರತಿದ್ದೆ. ಕಲೀತಿದ್ದೆ. ಹೀಗೇ ನಡೆಯೋದು. ಅವರ ಎರಡನೇ ಹೆಂಡತಿಯವರಿಗೆ ಮಕ್ಕಳು ಇರಲಿಲ್ಲ. ನನ್ನನ್ನೇ ಮಗ ಅಂತ ಅಂದ್ಕೊಂಡಿದ್ರು. ನಾನು ಬಂದರೆ ನೋಡಿ ನಿಮ್ಮ ಮಗ ಬಂದ ಅಂತ ಅನ್ನೋರು. ಹೋಗೋ ಇದೇನು ಛತ್ರ ಕೆಟ್ಹೋಯ್ತಾ ಅಂತ ಬಯ್ಯೋರು. ಆಗ ಅವರು ಅಯ್ಯೋ ಪಾಪ ಕಷ್ಟಪಟ್ಟುಕೊಂಡು ಬಂದಿದ್ದಾನೆ. ಹೇಳಿಕೊಟ್ಟುಬಿಡಿ ಅಂತ ಅನ್ನೋರು. ಮೇಷ್ಟ್ರು ನಿಮ್ಮದೇನು ರೆಕಮಂಡೇಷನ್ ಅಂತ ಬಯ್ಯೋರು. ಆಮೇಲೆ ಆಯ್ತು ಕೂತ್ಕೋ ಅಂತ ಹೇಳೋರು. ಮನೋಧರ್ಮ ಸಂಗೀತವನ್ನು ಭಾವವಾಗಿ ಹಾಡಬೇಕು ಅಂತ ಹೇಳಿಕೊಟ್ಟಿದ್ದು ದೇವೇಂದ್ರಪ್ಪನವರು.
ಕಚೇರಿಗಳಲ್ಲಿ ವಚನಗಳನ್ನು ಹಾಡೋದನ್ನ ರೂಢಿಗೆ ತಂದವರು ಮಲ್ಲಿಕಾರ್ಜುನ ಮನ್ಸೂರರು. ದೇವರನಾಮಗಳನ್ನು ಗಂಟೆಗಟ್ಟಲೆ ಕಚೇರಿಗಳಲ್ಲಿ ಹಾಡಬಹುದು ಅಂತ ತೋರಿಸಿಕೊಟ್ಟವರು ದೇವೇಂದ್ರಪ್ಪನವರು. ಅವರು ದೇವರನಾಮಗಳನ್ನು ಕೇವಲ ರಾಗಕ್ಕಾಗಿ ಹಾಡದೆ ಅದರ ಅರ್ಥ ಸ್ಫುರಿಸುವಂತೆ ಬಿಡಿಸಿ, ಸಾಹಿತ್ಯಕ್ಕೆ ಒತ್ತು ಕೊಟ್ಟು ಹಾಡುತ್ತಿದ್ದರು. ಕೃತಿಗಳಲ್ಲಿಯೂ ಸಾಹಿತ್ಯವನ್ನು ಸರಿಯಾಗಿ ಬಿಡಿಸಬೇಕು ಎಂದು ಅವರು ಹೇಳುತ್ತಿದ್ದರು. ಅವರು ವಿದ್ಯೆಯನ್ನು ಗುಟ್ಟು ಮಾಡ್ತಾ ಇರ್ಲಿಲ್ಲ. ಮನಸ್ಸು ಬಿಚ್ಚಿ ಹೇಳಿಕೊಡೋರು. ಅವರು ಕಛೇರಿಗಳಿಗೆ ಹಾಡಿದಾಗ ನಾನು ಪಿಟೀಲು ನುಡಿಸ್ತಾ ಇದ್ದೆ. ಮತ್ತು ನಾನು ಹಾಡಿದಾಗ ಅವರು ಪಿಟೀಲು ನುಡಿಸೋರು. ಅವರಿಗ ತಾನು ದೊಡ್ಡೋನು, ಉಳಿದವರು ಚಿಕ್ಕೋರು ಅವರಿಗ್ಯಾಕೆ ನಾನು ನುಡಿಸಬೇಕು ಅನ್ನೋ ಉದಾಸೀನ ಇಲ್ಲ. ಅವರು ಏಳು ತಂತಿ ಪಿಟೀಲನ್ನೂ ನುಡಿಸೋರು. ವಾಸುದೇವಾಚಾರ್ಯರ ಕೃತಿಗಳನ್ನು ಹೇಳಿಕೊಟ್ಟಿದ್ದರು. ಮಹಾರಾಜರ ಸಿಂಹೇಂದ್ರಮಧ್ಯಮದ ಬಾಲೆ ಬಾಲೇಂದು, ಬ್ರಹ್ಮಾಂಡವಲಯೇ ಮುಂತಾದುವನ್ನೂ ಹೇಳಿಕೊಟ್ಟಿದ್ದರು. ನಾನು ಒಂದಿನ ಹುಸೇನಿ ಹೇಳಿಕೊಡಿ ಅಂದದ್ದಕ್ಕೆ ತಮಾಷಿಯಾಗಿ ಏನೋ ಯಾರದರೂ ಮುಸಲ್ಮಾನರನ್ನು ನೋಡಿಕೊಂಡಿದ್ದೀಯೇನು? ನಾಟಕದ ಕಂಪನೀನಲ್ಲಿ ಇದ್ದೀಯಲ್ಲಾ? ಅದಕ್ಕೆ ಅಮ್ಮ ಅದ್ಯಾಕೆ ಆ ಹುಡುಗನನ್ನು ಗೋಳು ಹುಯ್ಕೊತೀರ ಪಾಪ ಅನ್ನೋರು. ಅಮ್ಮನಿಗೆ ಅಂತ ಒಂದು ಒಳ್ಳೆ ವೀಣೆ ಮಾಡಿಸಿದ್ದರು. ನಾನು ವೀಣೆ ಬೇಕು ಅಂತ ತುಂಬಾ ಆಸೆ ಪಡ್ತಿದ್ದೆ ಅಂತ ಅಮ್ಮ ಆ ವೀಣೆಯನ್ನು ಗುರುಗಳಿಗೆ ಹೇಳಿ ನನಗೇ ಕೊಡಿಸಿಬಿಟ್ಟರು. ಅವರಿಗೆ ಬಹಳ ಅಭಿಮಾನ. ಇದು ಮಾರುತಿ ಸಂಘ, ಅದರಲ್ಲಿ ನಾನು ದೊಡ್ಡ ಕೋತಿ, ಇವನು ನನ್ನ ಶಿಷ್ಯ ಚಿಕ್ಕ ಕೋತಿ, ಇವನು ಹಾಡ್ತಾನೆ ಕೇಳಿ ಆಶೀರ್ವಾದ ಮಾಡಿ ಅಂತ ಅನ್ನೋರು. ಅಂತ ಹೇಳ್ತಿದ್ದರು. ಅವರ ಮನೇಲಿ ತಿಂಗಳಾನುಗಟ್ಟಲೆ ಹನುಮಜ್ಜಯಂತಿ ಮಾಡೋರು. ಅಡುಗೆಯವರನ್ನು ಕರೆಸಿ ಎಲ್ಲರಿಗೂ ಊಟ ಹಾಕೋರು. ಅವರು ಸಂಪಾದನೆ ಮಾಡಿ ದುಡ್ಡು ಇಟ್ಟಿದ್ದರೆ ಬೇಕಾದಷ್ಟು ಇಡಬಹುದಾಗಿತ್ತು. ನಾಲ್ಕು ಜನ ಅಡುಗೆಯವರನ್ನು ಇಟ್ಟುಕೊಂಡಿದ್ದರು. ತಿಂಡಿ ಎರಡು ಹೊತ್ತು ಊಟ ಎಲ್ಲವನ್ನೂ ಬಂದವರಿಗೆ ಮಾಡಿಸೋರು. ಕಚೇರಿ ಮಾಡೋ ಐದು ಜನ, ಕೇಳಕ್ಕೆ ಬರೋರು. ಉಳಿದ ಕಲಾವಿದರು ಹೀಗೆ ಎಲ್ಲರಿಗೂ ಎಲ್ಲವನ್ನೂ ಮಾಡುತ್ತಿದ್ದರು. ಬರೀ ಅನ್ನ ಸಾರು ಅಲ್ಲ. ಹಬ್ಬದ ಊಟ. ಲೋ ಪರಮಶಿವ, ಮಾರ್ಕೆಟ್ ಹೋಗಿ ಗಾಡೀಲಿ ತರಕಾರಿ ಹಾಕ್ಕೊಂಬಾ, ನಾನು ಅವನಿಗೆ ಹೇಳಿದೀನಿ. ಅವನು ಒಪ್ಕೊಂಡಿದಾನೆ ಅನ್ನೋರು. ಕಡೇ ದಿನ ಗುರುರಾಜುಲು ನಾಯ್ಡು ಬಹಳ ಚೆನ್ನಾಗಿ ಮಾಡೋರು. ಯಾರಾರು ಭಾಗವಹಿಸಿದ್ದರೋ ಅವರಿಗೆಲ್ಲಾ ಕೊನೇ ದಿನ ಒಂದು ಬೆಳ್ಳಿಯ ಮಾರುತಿ ಡಾಲರ್ ಕೊಟ್ಟರು. ಗುರುರಾಜುಲು ನಾಯ್ಡು ಕೂಡ ಅಕ್ಕಿ ಬೇಳೆ ಹೀಗೆ ಎಲ್ಲವನ್ನೂ ಕೊಡೋರು. ಆಗ ದೇವೇಂದ್ರಪ್ಪನವರು ಆಸ್ಥಾನ ವಿದ್ವಾನ್ ಆಗಿದ್ದರು. ಅವರಿಗೆ ಅರಮನೆಯಿಂದಲೂ ಸ್ವಲ್ಪ ನೆರವು ಬರ್ತಾ ಇತ್ತು. ಆದರೆ ನಂತರ ರಾಜಕೀಯ ಕಾರಣಕ್ಕೆ ಅರಸೊತ್ತಿಗೆ ಹೋದಮೇಲೆ ಅವರು ಬಂಬೂ ಬಜಾರಿನ ಕುರುಡರ ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸುಮಾರು ಅದೇ ಹೊತ್ತಿಗೆ ಮೇಷ್ಟ್ರಿಗೆ ಟೈಫಾಯಿಡ್ ಬಂದು ತುಂಬ ಸುಸ್ತಾಗಿದ್ದರು. ಹಾಗಾಗಿ ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗೋರು. ಅಲ್ಲಿ ಗೋರಖನಾಥ ಅಂತ ಒಬ್ಬ ಹುಡುಗ ಇದ್ದ ತುಂಬಾ ಲಕ್ಷಣವಾಗಿದ್ದ. ಪಾಪ ಕುರುಡ. ಅವನಿಗೆ ಯಾವುದೋ ಕೀರ್ತನೆಯ ಪಲ್ಲವಿ ಬರೆಸಿಕೊಡು, ಇನ್ಯಾವುದರದ್ದೋ ಚರಣ ಬರೆಸು ಅಂತ ನನಗೆ ಹೇಳೋರು. ಹೀಗೆ ಅವರದ್ದೆಲ್ಲಾ ಪಾಠ ಆದ ಮೇಲೆ ನನಗೆ ಪಾಠ ಮಾಡೋರು.
ಅದಕ್ಕೆ ಮೊದಲು ವೀಣೆ ಮತ್ತು ಪಿಟೀಲು ನುಡಿಸ್ತಾ ಇದ್ದೆ. ೧೯೬೦ರಲ್ಲಿ ವೀಣೆ ಮತ್ತು ಪಿಟೀಲಿನಲ್ಲಿಯೂ ಸೀನಿಯರ್ ಮಾಡಿಸಿದರು. ನಾನು ಬೆಳಗಿನ ಹೊತ್ತು ವೀಣೆ ನುಡಿಸ್ತಾ ಇದ್ದೆ ಏಕೆಂದರೆ ಅದರ ನಾದ ಮೃದುಮಧುರ. ಅದರ ನಾದ ಯಾರಿಗೂ ತೊಂದರೆ ಕೊಡೋಲ್ಲ. ಸಾಯಂಕಾಲದ ಹೊತ್ತು ಪಿಟೀಲು ಅಭ್ಯಾಸ ಮಾಡ್ತಿದ್ದೆ. ನನ್ನ ಹತ್ತಿರ ಪಿಟೀಲು ತೊಗೊಳೋಕ್ಕೆ ದುಡ್ಡಿರಲಿಲ್ಲ. ಹಾಗಾಗಿ ೧೫ ರುಪಾಯಿ ಕೊಟ್ಟು ಮೊದಲು ಒಂದು ಬೋ ತೆಗೆದುಕೊಂಡೆ. ಇದು ಹೈಸ್ಕೂಲು ಟೀಚರ್ ಕೆಲಸಕ್ಕೆ ಸೇರಿಕೊಳ್ಳಲು ಇವುಗಳನ್ನು ಕಲಿತದ್ದು ಒಂದು ಅಡಿಷನಲ್ ಕ್ವಾಲಿಫಿಕೇಷನ್ ಆಯಿತು.
ಸಾಹಿತ್ಯಕ್ಕೆ ತಕ್ಕಂತೆ ರಾಗ ಅಳವಡಿಸಬೇಕು ಅಂತ ಕಲಿಸಿದೋರು ಕಾಳಿಂಗರಾಯರು. ಸಾಹಿತ್ಯ ಮೃದುವಾಗಿದ್ದಾಗ ರಾಗವೂ ಹಾಗೇ ಇರಬೇಕು ಅನ್ನೋರು. ವೀರರೆಲ್ಲರೂ ಸಾಗಿ ಬೇಗನೆ ಅಂತ ಸಾಹಿತ್ಯ ಇದ್ದಾಗ ಅದಕ್ಕೆ ಮೃದುಮಧುರವಾದ ರಾಗ ಹಾಕದ್ರೆ ಭಾವ ಬರುತ್ತೇನೋ? ಒಳ್ಳೆ ಜರ್ಬಾಗಿ ಬಿರುಸಾಗಿ ಇರೋ ಮಟ್ಟು ಹಾಕಬೇಕು ಅನ್ನೋರು. ನಾನು ಕಾಳಿಂಗರಾಯರ ಜೊತೆ ಹಲವು ವರ್ಷಗಳು ಕೆಲಸ ಮಾಡಿದ್ದೇನೆ. ಮೂರು ನಾಲ್ಕು ಸಿನಿಮಾಗಳಲ್ಲಿ ಸಂಗೀತ ನಿರ್ದೇಶನಕ್ಕೆ ಸಹಾಯಕನಾಗಿ ದುಡಿದಿದ್ದೇನೆ. ಕೃಷ್ಣಸುಧಾಮ ಅಂತ ಮೈಸೂರಿನಲ್ಲಿ ಚಿತ್ರಿತವಾದ ಮೊದಲ ಕನ್ನಡ ಸಿನಿಮಾ ಶಂಕರ್ ಸಿಂಗ್ ಅವರು ತೆಗೆದದ್ದು. ಸರಸ್ವತೀಪುರಂನಲ್ಲಿ ಅದನ್ನು ನವಜ್ಯೋತಿ ಸ್ಟುಡಿಯೋ ಅಂತ ಕರೀತಾ ಇದ್ದರು. ಡಿ ಕೆಂಪರಾಜ ಅರಸು ಅವರು ದೇವರಾಜ ಅರಸರ ತಮ್ಮ ಕಂಸನ ಪಾತ್ರ, ಎಲ್ಲಾ ನಾಟಕದವರನ್ನೇ ಹಾಕಿಕೊಂಡಿದ್ದರು. ನನಗೆ ೪೨ರಲ್ಲಿ ಕಾಳಿಂಗರಾಯರ ಸಂಪರ್ಕ, ಮದ್ರಾಸಿನಲ್ಲಿ ರೇಡಿಯೋದಲ್ಲಿ ಹಾಡೋದಕ್ಕೆ ಹೋಗಿದ್ದಾಗ. ಮೈಸೂರಿನಿಂದ ೧೨ ವರ್ಷಕ್ಕೆ ಹೋಗಿ ಹಾಡುತ್ತಿದ್ದ ಚಿಕ್ಕ ಹುಡುಗ ನಾನೊಬ್ಬನೇ. ಆಗ ಅವರು ಅಲ್ಲಿಗೆ ಬಂದಿದ್ರು. ನೀನೇಯೋ ಹಾಡಿದ್ದು ಬಾಯ್, ವೆರಿಗುಡ್ ವೆರಿಗುಡ್, ಕೀಪ್ ಇಟ್ ಅಪ್ ಅಂತಂದ್ರು. ಅಲ್ಲಿಂದ ನಂತರ ಅವರ ಜೊತೆ ಕೃಷ್ಣಲೀಲೆಗೆ, ರಾಮದಾಸ್‌ಗೆ ಮಾಡಿದೆ. ಅವರ ಜೊತೆ ಕೆಲಸ ಮಾಡಿದಾಗ ಹಾರ್ಮೋನಿಯಂ ಕಲಿತೆ. ನಾನು ೧೯೪೨ರಿಂದ ಸುಮಾರು ೫೦ರ ತನಕ ಅವರ ಜೊತೆ ಕೆಲಸ ಮಾಡಿದೆ. ಅವರು ಸುಮ್ಮನೆ ಗುನುಗಿ ಬಿಡೋರು. ನಾನು ಅದಕ್ಕೆ ಸ್ವರ ಬರೀತಿದ್ದೆ. ಅದನ್ನ ಬೇರೆ ವಾದ್ಯದವರು ನುಡಿಸೋರು. ಉಳಿದ ವಾದ್ಯದೋರಿಗೆ ಸ್ವಲ್ಪ ಅಸಮಾಧಾನ. ಇಷ್ಟು ಚಿಕ್ಕ ಹುಡುಗ ಹೇಳಿದ್ದನ್ನು ನಾವು ಮಾಡಬೇಕಲ್ಲಾ ಅಂತ. ಪಿಟೀಲು ತಾತಾಚಾರ್ ಬಗ್ಗೆ ನಿಮಗೆ ತಿಳಿದಿದೆ ಅಂದ್ಕೊತೀನಿ. ಅವರು ದೊಡ್ಡ ವಿದ್ವಾಂಸರು. ಅವರು ಶಾಮಣ್ಣ, ರಾಜಯ್ಯಂಗಾರರು, ಇವರೆಲ್ಲರೂ ಪಿಟೀಲುವಾದಕರು. ಕಾಳಿಂಗರಾಯರು ಮಾತ್ರ ಅದ್ಭುತವಾದ ಮನುಷ್ಯ. ಅವರಿಗೆ ಎಂತಹ ಅದ್ಭುತವಾದ ಸ್ವರಜ್ಞಾನವಿತ್ತು ಗೊತ್ತಾ? ಅವರಿಗೆ ಎಲ್ಲಾ ವಿಧವಾದ ಸಂಗೀತ ಗೊತ್ತಿತ್ತು. ಪಾಶ್ಚಾತ್ಯ, ಹಿಂದುಸ್ತಾನಿ, ಕರ್ನಾಟಕ ಹೀಗೆ. ಅವರ ಜೊತೆಯಲ್ಲ ಇದ್ದದ್ದರಿಂದ ನನಗೆ ಸುಗಮ ಸಂಗೀತ, ನಾಟಕ, ಸಿನಿಮಾ, ನೃತ್ಯ ಹೀಗೆ ಎಲ್ಲರ ಜೊತೆಯಲ್ಲಯೂ ಹೊಂದಿಕೊಂಡು ಹೋಗುವುದಕ್ಕೆ ಸಾಧ್ಯವಾಯಿತು.
ನಮ್ಮ ಗುರುಗಳು ಹಾಗೇ ಎಲ್ಲಾ ವಾದ್ಯಗಳನ್ನು ನುಡಿಸೋರು. ಯಾರಾದ್ರೂ ಕೇಳಿದ್ರೆ ಅದೇನ್ಮಹಾ, ಸ್ವರಜ್ಞಾನ ಇದ್ದು ಅಭ್ಯಾಸ ಇದ್ರೆ ಯಾವ ವಾದ್ಯವನ್ನು ಬೇಕಾದ್ರೂ ನುಡಿಸಬಹುದು. ಒಂದು ಸಲ ರಾಮಸೇವಾ ಮಂಡಲಿಯಲ್ಲಿ ಇವರ ಜಲತರಂಗ್ ಕಛೇರಿ ಇತ್ತು. ಇವರ ಕೈ ಎಷ್ಟು ವೇಗವಾಗಿ ನುಡೀತಿತ್ತು ಅಂದ್ರೆ, ಮದ್ರಾಸಿನಿಂದ ಬಂದ ವಯೋಲಿನ್ ವಿದ್ವಾಂಸನಿಗೆ ಕೈ ಓಡದೆ ಅವನು ಸುಮ್ಮನೆ ಕುಳಿತುಬಿಟ್ಟ. ನನಗೆ ನಾಟಕದಲ್ಲಿ ಹಾರ್ಮೋನಿಯಂ ನುಡಿಸಿ ಅಭ್ಯಾಸವಿತ್ತಲ್ಲ ಕೊನೆಗೆ ನಾನೇ ಜೊತೆಗೆ ನುಡಿಸಿದೆ.
ರಂಗಸಂಗೀತದಲ್ಲಿ ಸ್ವರಕಲ್ಪನೆ ಮಾಡ್ತಿರಲಿಲ್ಲವಾ?
ಹೆಚ್ಚಾಗಿ ಇಲ್ಲ. ಆದರೆ ಹೊನ್ನಪ್ಪ ಭಾಗವತರು ಮಾಡ್ತಿದ್ದರು. ಅವರಿಗೆ ಬಹಳ ಸಂತೋಷ. ಸುಭದ್ರೇನಲ್ಲಿ ಹಾಡ್ತಾ ಹಾಡ್ತಾ ರಾಗ ಚೆನ್ನಾಗಿ ಆಗಿಬಿಡ್ತು ಅಂದ್ರೆ ಹಾಗೆ ಸ್ವರ ಶುರುಮಾಡಿಬಿಡ್ತಿದ್ರು. ಅವರಿಗೆ ನಾಟಕ ಅನ್ನೋದು ಮರೆತೋ ಹೋಗೋದು. ಹಾರ್ಮೋನಿಯಂ ನಾನು ನುಡಿಸೋನು. ನಾನು ಸುಮ್ಮನೆ ಕುಳಿತಿದ್ರೆ, ನುಡಿಸ್ರಿ ಎಂದು ಜೋರು ಮಾಡೋರು.
ಆಗಿನ ಕಾಲದಲ್ಲಿ ಕಾಲದಲ್ಲಿ ನಾಟಕದಲ್ಲಿ ಮಾಡೋರಿಗೆಲ್ಲಾ ಸಂಗೀತ ಗೊತ್ತಿರಲೇಬೇಕಿತ್ತಾ?
ಹೌದು. ಹೆಚ್ಚು ಕಡಿಮೆ ಕಡ್ಡಾಯ ಅಂತ ಅಂದ್ಕೊಳ್ಳಿ. ಮನೋಧರ್ಮ ಇಲ್ಲದಿದ್ದರೂ ಕಲಿಸಿದ್ದನ್ನು ಗಿಣಿಪಾಠದ ರೀತಿಯಲ್ಲಿ ಒಪ್ಪಿಸುವುದಕ್ಕಾದರೂ ಬರಲೇಬೇಕಿತ್ತು.
ನೀವು ನಾಟಕದಲ್ಲಿ ಹಾಡೋದರ ಬಗಗೆ ಅವರಿಗೇನು ಆಕ್ಷೇಪವಿರಲಿಲ್ಲವೇ?
ಹಾಗೆಲ್ಲ ಏನಿರಲಿಲ್ಲ. ಆಗ ನಾಟಕದಲ್ಲಿ ಹಾಡ್ತಾ ಇದ್ದದ್ದೂ ಶುದ್ಧ ಸಂಗೀತವೇ ತಾನೇ. ಅವರು ನಾಟಕದಲ್ಲಿ ನನ್ನ ಸಂಗೀತ ಕೇಳಿ ತಾನೆ ನನ್ನನ್ನು ಕರೆದುಕೊಂಡು ಹೋಗಿ ವಿದ್ವತ್ ಮಾಡಿಸಿದ್ದು.
ರಂಗಸಂಗೀತಕ್ಕೆ ಬೇರೆ ಬೇರೆ ಸಂಗೀತದ ಜೊತೆ ತುಂಬಾ ಕೊಡುಕೊಳೆ ಆಗಿದೆಯಾ?
ಬೇಕಾದಷ್ಟು ಆಗಿದೆ. ನಮ್ಮ ಸಂಗೀತವನ್ನು ಮರಾಠಿಯವರು ತೆಗೆದುಕೊಂಡರು. ಮರಾಠಿ ಸಂಗೀತವನ್ನು ನಾವು ತೆಗೆದುಕೊಂಡೆವು. ಮರಾಠಿಯ ಸತ್ಯವದೇ ವಚನಾಲ ಎನ್ನುವ ಹಾಡನ್ನು ಗುಬ್ಬಿ ವೀರಣ್ಣನವರು ಮುತ್ತಿನಂಥ ಘನಹಾರ ಎಂದು ಮಾಡಿಕೊಂಡರು. ತುಕಾರಾಮನ ಅಭಂಗವನ್ನು ಹಿರಣ್ಣಯ್ಯನವರು ತಮ್ಮ ನಾಟಕದಲ್ಲಿ ರಾಮ ರವಿಚಂದ್ರಮ ಎಂದು ಮಾಡಿಕೊಂಡರು. ಮರಾಠಿಯಲ್ಲಿ ಲಕ್ಷಣಗೀತೆ ಇರಲಿಲ್ಲ. ನಮ್ಮಲ್ಲಿ ಇರೋದನ್ನ ನೋಡ್ಕೊಂಡು ಆಮೇಲೆ ಭಾತ್ಕಂಡೆ ಅಲ್ಲಿ ಹೋಗಿ ಮಾಡಿದರು. ತಬಲಾದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಫಾಲೋಯಿಂಗ್ ಮಾಡುವಾಗ ಇಷ್ಟು ಸ್ಫುಟವಾಗಿ ನುಡಿಸೋಕ್ಕೆ ಆಗ್ತಾ ಇರಲಿಲ್ಲ. ಮೃದಂಗದೋರು ಏನು ಮಾಡ್ತಿದ್ದಾರೋ ಅಷ್ಟು ಮಾಡಕ್ಕೆ ಆಗ್ತಾ ಇರಲಿಲ್ಲ. ಆಗಲೂ ತಬಲಾದಲ್ಲಿ ತನಿ ಆವರ್ತನ ಮಾಡೋರು. ಆಗ ಡಿ ಶೇಷಪ್ಪ ಅಂತ ಚೆನ್ನಾಗಿ ತಬಲಾ ನುಡಿಸೋರು. ಚೊಕ್ಕಮ್ಮನವರ ಜೊತೆ ಪರ್ಮನೆಂಟ್ ಆಗಿ ಅವರೇ ನುಡಿಸ್ತಾ ಇದ್ದದ್ದು. ಹಳೇ ದಟ್ಟಿ ಪಂಚೆ ಮತ್ತು ಟೋಪಿ ಹಾಕ್ಕೊಳೋರು. ವೀಣೆ ಶ್ರುತಿಗೆ ನುಡಿಸಿದರೆ ಅದು ಮೃದಂಗದ ಹಾಗೆ ಕೇಳೋದು. ಅದೇ ನಡೆಗಳನ್ನು ನುಡಿಸೋರು ಆದರೆ ಮುಕ್ತಾಯಗಳು ಮೃದಂಗದಷ್ಟು ನಯವಾಗಿ ಬರುತ್ತಿರಲಿಲ್ಲ. ಎಡ ಸ್ವಲ್ಪ ಡಬ್ ಡಬ್ ಅಂತ ಬರ್ತಾ ಇತ್ತು. ಆದರೆ ತಬಲಾ ನಾಟಕಕ್ಕೆ ಚೆನ್ನಾಗಿ ಹೊಂದಿಕೊಳ್ತಾ ಇತ್ತು. ಮೃದಂಗ ನಾಟಕಕ್ಕೆ ನಡೆಯೋದಿಲ್ಲ. ಮೃದಂಗದ ಡುಗುಡುಗು ಸದ್ದಿಗೆ ನಾಟಕದ ಹಾಡು ಹೋಗಿಬಿಡುತ್ತೆ. ನಾಟಕಕ್ಕೆ ಆರ್ಭಟ ಬೇಕು. ತಬಲಾ ಮೊದಲು ನಾಟಕಕ್ಕೆ ಬಂತು ನಂತರ ಅದನ್ನು ಸಂಗೀತಕ್ಕೆ ಅಳವಡಿಸಿಕೊಂಡರು.
ನಾಟಕದಲ್ಲಿಯೂ ನಾವು ಪಲ್ಲವಿ ಹಾಡ್ತಾ ಇದ್ವಿ. ಆದ್ರೆ ಅದು ಪಲ್ಲವಿ ಅಂತ ಅನೌನ್ಸ್ ಮಾಡ್ತಾ ಇರಲಿಲ್ಲ. ಇದನ್ನು ನಾನು ಗಾನಕಲಾಪರಿಷತ್ತಿನ ಸಮ್ಮೇಳನದಲ್ಲಿಯೂ ಹೇಳಿದೆ. ಸಂಗೀತ ಕಚೇರಿಯಲ್ಲಿ ಕಲಾವಿದ ತಾಳ ತೋರಿಸ್ತಾ ಇರ್ತಾನೆ ಅದನ್ನು ನೋಡಿಕೊಂಡು ನೀವು ಪಕ್ಕವಾದ್ಯ ನುಡಿಸ್ತೀರ. ಆದರೆ ನಾಟಕದಲ್ಲಿ ನಟ ತಾಳವನ್ನು ತೋರಿಸೋದಕ್ಕೆ ಸಾಧ್ಯವೇ ಹಾಗಿದ್ದಾಗ್ಯೂ ಪಕ್ಕವಾದ್ಯದವರು ಹೇಗೆ ಅನುಸರಿಸ್ತಾರೆ ನೋಡಿ. ನಿಮಗೆ ಅದು ಎಂದೂ ದೊಡ್ಡದು ಅಂತ ಅನ್ನಿಸಿಲ್ಲವಲ್ಲ. ನಿಜವಾಗಿಯೂ ನಾಟಕಕ್ಕೆ ನುಡಿಸುವವನ ಸಾಮರ್ಥ್ಯ ದೊಡ್ಡದು. ನಟನ ಸಾಮರ್ಥ್ಯವೂ ದೊಡ್ಡದು ಏಕೆಂದರೆ ಅವನು ತನ್ನ ಪಾತ್ರ, ಅದರ ಚಲನವಲನ, ಅದರ ಭಾವದತ್ತ ಗಮನಕೊಡಬೇಕು. ಅದೇ ಸಮಯದಲ್ಲಿ ಹಾಡು ಅದರ ಲಯ, ಭಾವ, ತಾಳ ಇವು ಅವನ/ಅವಳ ಮನಸ್ಸಿನಲ್ಲಿಯೇ ಓಡುತ್ತಾ ಇರಬೇಕು. ಅದು ಕತ್ತಿಯಲುಗಿನ ಮೇಲೆ ನಡೆದಂತೆ. ಸಂಗೀತದ ಅತೀತ ಅನಾಗತಗಳು, ನಡೆ ಭೇದಗಳು ಕಪಿಯ ಹಾಡಿನಲ್ಲಿ ಬಂದುಬಿಡುತ್ತವೆ. ಸಂಗೀದಲ್ಲಿ ಏನೇನು ಶಾಸ್ತ್ರವಿದೆಯೋ ಅದೆಲ್ಲವೂ ನಾಟಕದಲ್ಲಿ ಬಂದುಬಿಡುತ್ತದೆ. ಇದನ್ನೆಲ್ಲಾ ಅಂದು ಸಮ್ಮೇಳನದಲ್ಲಿ ಮಾಡಿ ತೋರಿಸಿದ ಮೇಲೆ ಎಲ್ಲರೂ ಇದೇನ್ರಿ ರಂಗಸಂಗೀತ ಅಂದರೆ ಹೀಗಿರುತ್ತಾ ನಮಗೆ ಗೊತ್ತೇ ಇರಲಿಲ್ಲ ಅಂತ ಕೇಳೋವ್ರೆ. ಆಕಾಶವಾಣಿಯಲ್ಲಿ ಎ ದರ್ಜೆ ಕಲಾವಿದೆಯಾಗಿದ್ದ ಪಿ ರಮಾ ಬಂದು ಸುಸ್ತಾಗಿಬಿಟ್ಟಳು. ಏನ್ ಸಾರ್ ಬಿಡುವಿಲ್ಲದೆ ಹೀಗೆ ಹಾಡೋದು.
ರಂಗಪಂಚಾಮೃತ ಅಂತ ಹೇಳಿದ್ರಿ. ಹಾಗಂದ್ರೆ?
ರಂಗ ಸಂಗೀತ ಎಲ್ಲಾದರ ಚೌಚೌ. ಸುಗಮಸಂಗೀತ, ಜಾನಪದ ಸಂಗೀತ, ಪಾಶ್ಚಾತ್ಯ ಸಂಗೀತ – ೧೯೩೯ರಲ್ಲಿ ಪಾಶ್ಚಾತ್ಯ ಸಂಗೀತವನ್ನು ಪೌರಾಣಿಕ ನಾಟಕಕ್ಕೆ ಅಳವಡಿಸಿಕೊಂಡಿತ್ತು. ಸಂಗೀತದಲ್ಲಿ ಕಲಿಯೋದು ನಾಲ್ಕಾಣೆಯಾದರೆ, ಕೇಳೋದು ಹನ್ನೆರಡಾಣೆ.
ಬಿ ವಿ ಕಾರಂತರು ಬಂದ ಮೇಲೆ ರಂಗಸಂಗೀತದಲ್ಲಿ ಬದಲಾವಣೆ ಆಯಿತು ಅಂತಾರೆ?
ಹೌದು ಸಂಗೀತ ಹೋಗೇ ಬಿಟ್ಟಿತ್ತು. ಯಾಕೇ ಅಂದ್ರೆ ಹಾಡೋದು ಕಷ್ಟ ಆಯ್ತಲ್ಲ. ಈಗ ಇದನ್ನೆಲ್ಲಾ ಯಾರು ಹಾಡ್ತಾರೆ? ತಾಳ ಹಾಕ್ಕೊಂಡು ಯಾರ್ ಹಾಡ್ತಾರೆ ಅಂತ ಅನ್ನೋ ಹಾಗೆ ಆಯಿತು. ನಮ್ಮ ಸಂಗೀತ ಅಳಿಸಿಹೋಗಿತ್ತು. ಅದನ್ನು ಉಳಿಸಿಕೊಟ್ಟವರು ಕಂಬಾರ ಮತ್ತು ಕಾರಂತ. ಅವರು ಸುಲಭ ಮಾಡಿದರು. ಯಾರಾದರೂ ಹಾಡಬಹುದು ಅಂತ ತೋರಿಸಿದರು. ಬಿ ವಿ ಕಾರಂತರು, ಕಂಬಾರರು ಬಂದ ಮೇಲೆ ಹಳೇ ಸಂಗೀತ ಹೋಯ್ತು ಮತ್ತು ರಂಗಸಂಗೀತ ಅನ್ನೋದು ಬಂತು. ಈಗ ಜಯಶ್ರೀ ಎರಡನ್ನೂ ಹಾಡುವುದಕ್ಕೆ ಇರುವ ಲಿಂಕ್. ಎರಡನ್ನೂ ಹಾಡುವವರು ಅವರೊಬ್ಬರೇ. ಯಾರೂ ಮ್ಯೂಸಿಕ್ ಡೈರೆಕ್ಟರ್ ಇಲ್ಲ ಅಂತ ವೀರಣ್ಣನವರು ಕಾಳಿಂಗರಾಯರನ್ನು ಕರೆಸಿದರು. ಅವರು ದಶಾವತಾರ ಮತ್ತು ಲವಕುಶಕ್ಕೆ ಸಂಗೀತ ನೀಡಿದರು. ನಮ್ಮ ರಾಗಗಳೇ ಆದರೆ ಅದನ್ನು ಲೈಟ್ ಮಾಡಿದರು. ಚಾರುಕೇಶಿಯನ್ನು ಹಾಗೆ ಬಳಸಿದರು. ಕಾಳಿಂಗರಾಯರ ತರಹ ಕಾರಂತರಿಗೆ ಸಂಗೀತ ಬರ್ತಿಲಿಲ್ಲ ಅವರು ನೊಟೇಷನ್ ಕೊಟ್ಟು ಕಲಿಸುತ್ತಿರಲಿಲ್ಲ. ಆದರೆ ಅವರು ಮಾಡೋದು ಜನಗಳಿಗೆ ಹಿತವಾಗೋದು. ಅಶ್ವಥ್‌ಗೆ ಕೂಡ ನೊಟೇಷನ್ ಹೇಳೋದಕ್ಕೆ ಗೊತ್ತಾಗ್ತಾ ಇರಲಿಲ್ಲ. ಅದಕ್ಕೆ ಅವರು ಗಿಟಾರ್ ಪ್ರಸಾದ್ ಅವರನ್ನು ಕರೆದುಕೊಂಡು ಹೋಗ್ತಾ ಇದ್ರು. ಆದರೆ ಕಾಳಿಂಗರಾಯರು ಹಾಗಲ್ಲ. ಅವರು ಆಕಾಶವಾಣಿಗೆ ಹೋದರೆ ಅಲ್ಲಿ ಯಾವುದೋ ಒಂದು ಪುಸ್ತಕ ಮತ್ತು ಅದರಲ್ಲಿ ಒಂದು ಕವನ ಆರಿಸಿಕೊಳ್ಳೋರು. ಅದನ್ನು ಪಾರ್ಕಿನಲ್ಲಿ ಓಡಾಡುತ್ತಾ ಟ್ಯೂನ್ ಮಾಡೋರು. ಅನಂತರ ಪುಸ್ತಕ ಇಟ್ಟು ಒಳಗೆ ಹೋಗಿ ನೊಟೇಷನ್ ಹೇಳಿಬಿಡೋರು. ಅಂತಹ ಜ್ಞಾನ ಅವರಿಗಿತ್ತು. ಕಾಳಿಂಗರಾವ್ ಬಂದರೆ ಆಕಾಶವಾಣಿಯಲ್ಲಿ ಎಲ್ಲರಿಗೂ ಖುಷಿ. ಕಣ್ಮುಚ್ಚಿ ಕಣ್ತೆರೆಯೋದ್ರೊಳಗೆ ರೆಕಾರ್ಡಿಂಗ್ ಮುಗಿದುಹೋಗುತ್ತಿತ್ತು. ಚೆಕ್ಕು ಬಂದುಬಿಡ್ತಿತ್ತು. ಅದನ್ನು ಅಲ್ಲೇ ಅಡವಿಟ್ಟು ಸಾಯಂಕಾಲದೊಳಗೆ ಅದನ್ನು ಮುಗಿಸಿಬಿಡೋರು. ರಾಜರತ್ನಂ ಎಲ್ಲರಿಗೂ ಗೊತ್ತಾಗಿದ್ದೇ ಇವರಿಂದ. ಬ್ರಹ್ಮ ನಿಂಗೆ ಜೋಡಿಸ್ತೀನಿ ಇವರು ಹಾಡಿದ ಮೇಲೆ. ವಾಸ್ತವವಾಗಿ ಕವಿಗಳ ಹೆಸರು ಬಂದಿದ್ದೇ ಕಾಳಿಂಗರಾಯರಿಂದ. ಕಾಳಿಂಗರಾಯರಿಂದ ಸುಗಮ ಸಂಗೀತ ಉಳ್ಕೊಂಡ್ತು. ಕಾಳಿಂಗರಾಯರು ಯಾರೋ ಭಟ್ಟರು ಅಂತ ಉಡುಪಿ ಹತ್ತಿರ ಅವರಿಂದ ಹಿಂದುಸ್ತಾನಿ ಕಲಿತಿದ್ರು. ಆದರೆ ಒಳ್ಳೇ ಕೇಳ್ಮೆ ಅವರಿಗಿತ್ತು.
ರಂಗಸಂಗೀತಕ್ಕೆ ಯಕ್ಷಗಾನದಿಂದಲೂ ಕೊಡುಗೆ ಇದೆಯೇ?
ಯಕ್ಷಗಾನವೂ ಸೇರಿದೆ.
ನೀವೂ ಕಂಪೋಸ್ ಮಾಡುತ್ತಿದ್ದಿರಾ?
ಹೌದು. ಅದಕ್ಕೂ ಕಾಳಿಂಗರಾಯರೇ ಕಾರಣ. ಒಂದು ಸಾಲನ್ನು ಒಂದೇ ರಾಗದಲ್ಲಿ ನಾಲ್ಕು ತರಹ ಹಾಡೋರು. ಅದರಲ್ಲಿ ಯಾವುದು ಚೆನ್ನಾಗಿ ಕೇಳಿಸ್ತಾ ಇತ್ತೋ ಅದನ್ನು ಇಟ್ಟುಕೊಳ್ಳೋರು. ನಾನು ಸುಮಾರು ಒಂದಿಪ್ಪತ್ತು ಬ್ಯಾಲೆಗಳಿಗೆ ರಾಗಸಂಯೋಜನೆ ಮಾಡಿದ್ದೇನೆ. ಚೆಲುವ ಕನ್ನಡ ನಾಡು ತುಂಬಾ ಚೆನ್ನಾಗಿ ಬಂದಿತು. ಇನ್ನೊಂದು ಬುದ್ದನನ್ನು ಕುರಿತು ಅದಕ್ಕೆ ಸಂಪೂರ್ಣವಾಗಿ ಹಿಂದುಸ್ತಾನಿ ಸಂಗೀತವನ್ನೇ ಬಳಸಿದೆ.
ಹಳೇ ಹಾಡುಗಳ ರೆಕಾರ್ಡ್ ಮಾಡಿದ್ದೀರಾ?
ಮಹಾರಾಜರ ಕಾಲದ ನಾಟಕಗಳ ಹಾಡುಗಳನ್ನು ರೆಕಾರ್ಡ್ ಮಾಡಿದ್ದೇನೆ. ೧೨೦೦ ಹಾಡು ರೆಕಾರ್ಡ್ ಮಾಡಿದ್ದೀನಿ. ೧೦ ಭಾಗ ಇದೆ. ಅದು ಲಹರಿಯಲ್ಲಿ ಸಿಗುತ್ತೆ. ರಾಮಾಯಣದಲ್ಲಿ ರಂಗಸಂಗೀತದ ಪಂಚಾಮೃತವೂ ಸಿಗುತ್ತದೆ.
ನಾನು ಕೊಟ್ಟೂರಪ್ಪನವರಿಂದ ಹಿಡಿದು ಪ್ರತಿಯೊಬ್ಬರಿಗೂ ಹಾರ್ಮೋನಿಯಂ ನುಡಿಸಿದ್ದೇನೆ. ಹೊನ್ನಪ್ಪ ಭಾಗವತರ ಸಿನಿಮಾದಲ್ಲಿ ನಾನು ಚಿಕ್ಕ ಹುಡುಗ ಪಾರ್ಟು ಮಾಡುದ್ದೀನಿ. ಅವರಿಗೂ ಹಾರ್ಮೋನಿಯಂ ನುಡಿಸಿದ್ದೀನಿ.
ಸುಬ್ಬಯ್ಯ ನಾಯ್ಡು ಮೂರು ಕಾರು ಇಟ್ಟಿದ್ರು. ಇನ್ನೂರು ಜನ ಕೆಲಸಗಾರರು ಅವರ ಕಂಪನಿಯಲ್ಲಿ ಇದ್ದರು. ಅವರಿಗೆಲ್ಲಾ ಊಟ ಕೊಡ್ತಿದ್ದರು. ಆದರೆ ಸಾಯುವ ಕಾಲದಲ್ಲಿ ಹರಕಲು ಪಂಚೆ ಮತ್ತು ಬಣ್ಣ ಮಾಸಿದ ಟೋಪಿಯಲ್ಲಿ ಬಸ್ ಕಾಯುವ ಸ್ಥಿತಿಯಲ್ಲಿದ್ದರು. ಆದ್ರೆ ಗುಬ್ಬಿ ವೀರಣ್ಣೋರು ದುಡ್ಡು ಚಲ್ಲಿದರು ಹಾಗೆ ದುಡ್ಡು ಮಾಡಿದರು ಕೂಡ. ಅವರು ಬಹಳ ಹುಷಾರಿ. ಎಂದೂ ಕುಡೀಲಿಲ್ಲ. ಜೂಜಾಡಲಿಲ್ಲ. ಚೆನ್ನಾಗಿ ದುಡ್ಡು ಮಾಡಿದರು. ನಾನು ಅವರ ಶಿವಾನಂದ ಥಿಯೇಟರ್ಸ್‌ನಲ್ಲಿ ಮೃಚ್ಛಕಟಿಕ ನಾಟಕ. ಅದರಲ್ಲಿ ದೇವದತ್ತನ ಮಗನ ಪಾತ್ರ ನನ್ನದು. ನಾನು ನಾಲ್ಕು ವರ್ಷದ ಹುಡುಗ. ನನಗೆ ಎರಡು ಡೈಲಾಗ್ ಎರಡು ಹಾಡು. ನಾನು ಚೆನ್ನಾಗಿ ಮಾಡಿದೆ ಎಂದು ಪ್ರೇಕ್ಷಕರಲ್ಲಿ ಒಬ್ಬರು ಮೂರು ಬೆಳ್ಳಿ ದುಡ್ಡು ಕೊಟ್ಟರು.
ನೀವು ವಾಯ್ಸ್ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ತೀರಾ
ಹುಳಿ ಪದಾರ್ಥಗಳನ್ನು ಹೆಚ್ಚಿಗೆ ತಿನ್ನೋದಿಲ್ಲ ಅನ್ನುವುದನ್ನು ಬಿಟ್ಟರೆ ಇನ್ನೇನು ಕೇರ್ ತೆಗೆದುಕೊಳ್ಳೋದಿಲ್ಲ. ಎಷ್ಟೋ ಸಾರಿ ಪಕೋಡ ತಿನ್ಕೊಂಡು ಹೋಗಿದ್ದೀನಿ. ರಂಗಸಂಗೀತವನ್ನು ಬೇರೆ ಬೇರೆ ಶ್ರುತಿಯಲ್ಲಿ ಹಾಡಬೇಕಾಗುತ್ತದೆ. ನಾಟಕದಲ್ಲಿ ಸಂಧರ್ಭ ಹಾಗೂ ಹಾಡುಗಳ ಭಾವಕ್ಕೆ ತಕ್ಕಂತೆ ಹಾಡಿನ ಪಿಚ್ ಕೂಡ ಬದಲಾಗುತ್ತದೆ.