Ponnutai Madhurai, ಮರೆತುಬಿಟ್ಟಿರಾ? ನಾನು ಮಧುರೈ ಪೊನ್ನುತಾಯಿ

ಸಂಗ್ರಹ: ಶೈಲಜ

 

ಮಧುರೆಯ ಪೊನ್ನುತಾಯಿ ಬಹುಶಃ ನಮಗೆ ಲಭ್ಯವಿರುವ ಇತಿಹಾಸದ ಮೊತ್ತ ಮೊದಲ ನಾಗಸ್ವರವಾದಕಿ. ದೇವದಾಸಿ ಕುಟುಂಬಕ್ಕೆ ಸೇರಿದ ಪೊನ್ನುತಾಯಿಯ ಆಯ್ಕೆಯಿಂದಾಗಿ ಇಂದು ಹಲವು ಮಹಿಳೆಯರು ಆ ಕ್ಷೇತ್ರದಲ್ಲಿ ಹೆಸರು ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಇಂದು ಸಂಪೂರ್ಣವಾಗಿ ವಿಸ್ಮೃತಿಗೆ ಸರಿದಿರುವ ನಾಗಸ್ವರದ ಮೊದಲಗಿತ್ತಿ ಪೊನ್ನುತಾಯಿಯ ಸಣ್ಣ ಸ್ವಗತ ಇಲ್ಲಿದೆ. ಈ ಸ್ವಗತ ಆನಂದವಿಕಟನ್ ಪತ್ರಿಕೆಗೆ ಅವರು ನೀಡಿದ ಸಂದರ್ಶನ ಮತ್ತು ಹಿಂದು ಪತ್ರಿಕೆಯಲ್ಲಿ ವಿ ಬಾಲಸುಬ್ರಹ್ಮಣ್ಯಂ ಅವರು ಪ್ರಕಟಿಸಿದ ಪೊನ್ನುತಾಯಿಯ ಸಂದರ್ಶನವನ್ನು ಆಧರಿಸಿದೆ. ಪೊನ್ನುತಾಯಿಯವರು ೨೦೦೨ರ ಜನವರಿ ೧೭ರಂದು ತೀರಿಹೋದರು. – ಸಂ.

ನಾನು ಹುಟ್ಟಿದ್ದು ಜುಲೈ ೫, ೧೯೨೯. ನಮ್ಮೂರು ಪಳನಿಮಲೈ ಸಮೀಪದ ಆಯಕ್ಕುಡಿ. ನಮ್ಮ ತಂದೆ ಶ್ರೀಪತಿ ಮತ್ತು ತಾಯಿ ಶುಭುತಾಯಿ. ಮಧುರೆಗೆ ಬಂದು ನೆಲೆಸಿದರು. ನಮ್ಮದು ಪಾರಂಪರಿಕ ಸಂಗೀತ ಕುಟುಂಬ. ಕೊಳಲು, ಮೃದಂಗ, ಪಿಟೀಲು ನುಡಿಸುತ್ತಿದ್ದರು. ಅದೇನೋ ನಮ್ಮ ತಂದೆ ನನಗೆ ನಾಗಸ್ವರ ಕಲಿಸಬೇಕೆಂದು ನಿರ್ಧರಿಸಿದರು. ನನ್ನನ್ನು ಮಧುರೆಯ ನಟೇಶ ಪಿಳ್ಳೈ ಅವರ ಬಳಿ ಪಾಠಕ್ಕೆ ಸೇರಿಸಿದರು. ಅವರು ಇಂದಿನ ಖ್ಯಾತ ವಿದ್ವಾಂಸರಾದ ಸೇತುರಾಮನ್ ಮತ್ತು ಪೊನ್ನುಸ್ವಾಮಿಯವರ ತಂದೆ. ಇವರಿಬ್ಬರ ಜೊತೆಗೆ ನಾನು, ತಿರುಮೊಗೋರ್ ಮುನಿಯಾಂಡಿ, ಅಳಗು ಸುಂದರಂ ಎಲ್ಲರೂ ಅವರ ಬಳಿ ಒಟ್ಟಿಗೆ ಕಲಿತೆವು. ನನ್ನ ಪಾಠ ಬೆಳಗಿನ ಜಾವವೇ ಪ್ರಾರಂಭವಾಗುತ್ತಿತ್ತು. ಎಷ್ಟೋ ಗಂಟೆಗಳು ನಡೆಯುತ್ತಿತ್ತು. ಹುಡುಗಿಗೆ ಪಾಠ ಹೇಳಿಕೊಡುತ್ತಾರೆಂದು ಪಾಪ ನನ್ನ ಗುರುಗಳನ್ನು ಜನ ತುಂಬಾ ಟೀಕಿಸಿದರು. ಮನೆಗೆ ಬಂದ ಮೇಲೂ ಅಭ್ಯಾಸ ನಿರಂತರವಾಗಿ ನಡೆಯುತ್ತಿತ್ತು. ಮೊದಮೊದಲು ಒಂದು ಸ್ವರ ಹೊರಡಿಸಲು ನನಗೆ ಕಷ್ಟವಾಗುತ್ತಿತ್ತು. ಆದರೆ ನಿರಂತರ ಅಭ್ಯಾಸದಿಂದ ಅವೆಲ್ಲವೂ ಸಲೀಸಾಯಿತು. ನಾಗಸ್ವರ ಊದಲು ಉಸಿರಿನ ಶಕ್ತಿ ತುಂಬಾ ಬೇಕು. ಹಾಗಾಗಿ ಅದನ್ನು ಗಂಡಸರು ಮಾತ್ರವೇ ನುಡಿಸುತ್ತಿದ್ದರು.

ನನ್ನ ರಂಗಪ್ರವೇಶ ನಡೆದದ್ದು ೧೯೪೦ರಲ್ಲಿ. ಒಂಬತ್ತು ವಯಸ್ಸಿನ ಹುಡುಗಿಯೊಬ್ಬಳು ಗಂಡುವಾದ್ಯ ನಾಗಸ್ವರ ನುಡಿಸುತ್ತಾಳೆಂದು ಸಾಕಷ್ಟು ಸುದ್ದಿಯಾಯಿತು. ಆವತ್ತು ನಾನು ನುಡಸೋದು ಕೇಳೋಕ್ಕೆ ಜನವೋ ಜನ. ಕ್ರಮೇಣ ನಾಗಸ್ವರವಾದಕರಲ್ಲಿ ನನಗೊಂದು ಸ್ಥಾನ ದೊರಕಿತು. ನಿಮಗೆ ಗೊತ್ತಾ, ನಾನು ಟಿ ಎನ್ ರಾಜರತ್ನ ಪಿಳ್ಳೈ, ತಿರುವೆಂಕಟರ್ ಮತ್ತು ತಿರುವೀಳಿಮಿಳಾಳೈಯ್ಯಾರ್ ಅಂತಹ ದಿಗ್ಗಜರ ಜೊತೆಗೆಲ್ಲಾ ನಾನು ನುಡಿಸಿದ್ದೇನೆ ಗೊತ್ತಾ? ಆಗ ನನಗಿನ್ನು ಹದಿನಾರು ಕೂಡ ತುಂಬಿರಲಿಲ್ಲ. ಪಂಡಿತ್ ಜವಹರಲಾಲ್ ನೆಹರು ಮತ್ತು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಮುಂದೆಯೂ ನುಡಿಸಿದ್ದೀನಿ. ೧೯೫೯ರಲ್ಲಿ ಗಾಂಧಿ ಸಂಗ್ರಹಾಲಯವನ್ನು ಉದ್ಘಾಟಿಸಿದಾಗ ನನ್ನದೇ ನಾಗಸ್ವರ ಕಾರ್ಯಕ್ರಮವಿತ್ತು. ಸರ್ವೇಪಲ್ಲಿ ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಭಕ್ತವತ್ಸಲಂ ನನಗೆ ಬಂಗಾರ ಮೆಡಲು ಕೊಟ್ಟು ಗೌರವಿಸಿದರು.

೧೯೪೬ರಲ್ಲಿ ಮೊತ್ತ ಮೊದಲ ಬಾರಿಗೆ ತಿರುಚಿನಾಪಳ್ಳಿ ಆಕಾಶವಾಣಿಯಲ್ಲಿ ನುಡಿಸಿದೆ. ೧೯೭೯ರವರಗೆ ಆಕಾಶವಾಣಿಯಲ್ಲಿ ನುಡಿಸುತ್ತಿದ್ದೆ. ನನ್ನ ಹೆಸರು ದೇಶದ ಉದ್ದಗಲಕ್ಕೂ ಪರಿಚಿತವಾದದ್ದು ಆಕಾಶವಾಣಿಯಿಂದಲೆ. ಮದುವೆ ಮನೆಗಳು, ದೇವಾಲಯದ ಉತ್ಸವಗಳಲ್ಲಿ ನುಡಿಸುವಂತೆ ಲೆಕ್ಕವಿಲ್ಲದಷ್ಟು ಆಹ್ವಾನಗಳು ಬರಲಾರಂಭಿಸಿದವು. ನನ್ನದೇ ಆದ ತವಿಲ್, ತಾಳ ಮತ್ತು ಸಹನಾಗಸ್ವರವಾದಕರ ಒಂದು ತಂಡವನ್ನು ಮಾಡಿಕೊಳ್ಳಬೇಕಾಯಿತು. ನಿಮಗೆಲ್ಲಾ ಹೆಂಗಸರಿಗಿರುವ ಸಮಸ್ಯೆ ಗೊತ್ತಲ್ಲ! ನಾನು ಎಷ್ಟೋ ಸಲ ನಿರಂತರ ೧೨ ಗಂಟೆ ನುಡಿಸಿದ್ದೇನೆ, ಗಂಡಸರೂ ದಂಗಾಗುವಂತೆ! ಕೇರಳದಲ್ಲಿ ಸ್ಥಳೀಯ ನಾಗಸ್ವರವಾದಕರೊಂದಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸಿದರು. ನನಗೆ ಅದರಲ್ಲಿ ಬಂಗಾರದ ಮೆಡಲ್ಲು ದೊರಕಿತು.

ಸಿಕಂದರಾಬಾದಿನ ರಾಮನವಮಿ ಉತ್ಸವ, ಬಾಂಬೆಯ ಷಣ್ಮುಗಾನಂದ ಸಭೆ, ಶ್ರೀಲಂಕಾ ಮತ್ತು ಮಲೇಷ್ಯಾದ ಪ್ರಮುಖ ಸಭೆಗಳು ಇಲ್ಲೆಲ್ಲಾ ನಾನು ತುಂಬಾ ನುಡಿಸಿದ್ದೀನಿ. ಆ ಕಾಲಕ್ಕೆ ನನ್ನ ಕುಟುಂಬ ಆರ್ಥಿಕವಾಗಿ ಚೆನ್ನಾಗಿತ್ತು. ಹಾಗಾಗಿಯೇ ನನಗೆ ಅಷ್ಟೊಂದು ಅಭ್ಯಾಸ ಮಾಡುವುದಕ್ಕಾಗುತ್ತಿತ್ತು. ತುಂಬಿದ ಬಸುರಿಯಾಗಿದ್ದಾಗಲೂ ನಾಗಸ್ವರವನ್ನು ಎತ್ತಿಹಿಡಿದು ನಾನು ನುಡಿಸುತ್ತಿದ್ದೆ. ಎಷ್ಟೋ ಸಲ ಅಹೋರಾತ್ರಿ ಕಚೇರಿಗಳನ್ನು ನುಡಿಸಿದ್ದೇನೆ. ಕೆಲವು ಕಚೇರಿಗಳಿಗೆ ೩೦೦೦ ರೂಗಳ ಸಂಭಾವನೆ ಪಡೆದಿದ್ದೇನೆ. ಕಾರ್ತಿಕ ಮಾಸದಿಂದ ಚೈತ್ರ ಮಾಸದವರೆಗೆ ತುಂಬಾ ಕಚೇರಿಗಳಿರುತ್ತಿದ್ದವು. ಆಗ ತುಂಬಾ ಪ್ರಯಾಣ ಮಾಡಬೇಕಾಗುತ್ತಿತ್ತು. ಎರಡನೆಯ ವಿಶ್ವ ತಮಿಳು ಸಮ್ಮೇಳನದಲ್ಲಿ, ಅಷ್ಟೇ ಏಕೆ ಖ್ಯಾತ ನಿರ್ದೇಶಕ ಎಂ ಎಸ್ ವಿಶ್ವನಾಥನ್ ಮದುವೆಯಲ್ಲಿಯೂ ನಾಗಸ್ವರ ನುಡಿಸಿದ್ದು ನಾನೇ. ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಮೂರು ವರ್ಷ ಸತತವಾಗಿ ನಾಗಸ್ವರ ನುಡಿಸಿರುವ ಏಕೈಕ ಹೆಂಗಸು ನಾನು.
ನಾನು ಮೂರು ವರ್ಷ ನಾಗಸ್ವರ ಕಲಾವಿದರ ಅಸೋಸಿಯೇಷನ್ನಿನ ಅಧ್ಯಕ್ಷಿಣಿಯಾಗಿದ್ದೆ. ಆಗ ಸರ್ಕಾರಕ್ಕೆ ಮನವಿ ಮಾಡಿ ಎಲ್ಲಾ ಕಲಾವಿದರಿಗೂ ಒಂದೊಂದು ನಿವೇಶನವನ್ನು ಕೊಡಿಸಿದೆ. ಸರ್ಕಾರ ನನಗೂ ಒಂದು ನಿವೇಶನವನ್ನು ನೀಡಿತು ಆದರೆ ನಾನಾಗ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದೆ ಹಾಗಾಗಿ ನನಗೆ ನಿವೇಶನ ಬೇಡವೆಂದು ಬಿಟ್ಟುಬಿಟ್ಟೆ. ಆದರೆ ಈಗ ಕಳೆದ ಹತ್ತು ವರ್ಷದಿಂದ ಒದ್ದಾಡುತ್ತಿದ್ದೇನೆ. ಮನವಿಯ ಮೇಲೆ ಮನವಿ ಸಲ್ಲಿಸಿದರೂ ಸರ್ಕಾರ ಏನೂ ಮಾಡಿಲ್ಲ. ಹಣ ಮತ್ತು ಸುಖ ಎರಡೂ ಈಗ ನನ್ನ ಬಳಿ ಇಲ್ಲ. ನನ್ನಲ್ಲಿ ಉಳಿದಿರುವುದು ನನ್ನ ಸಂಗೀತ ಮತ್ತು ಹೆಮ್ಮೆ. ಇಂದು ನನ್ನ ಉಸಿರನ್ನು ಹಿಡಿದಿಟ್ಟಿರುವುದು ಅವೆರಡೇ.

ನನ್ನ ಕಂಗೆಟ್ಟ ಸ್ಥಿತಿಯನ್ನು ಕಂಡ ಮಧುರೈ ಸೋಮು, ನನ್ನ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿದರು. ನಿನಗೆ ಕಲೈಮಾಮಣಿ ಬರುತ್ತದೆ ಎಂದು ಹೇಳಿದರು. ನಾನದನ್ನು ನಂಬಿರಲಿಲ್ಲ. ಈಗ ಕಲೈಮಾಮಣಿ ಪ್ರಶಸ್ತಿ ಬಂದಿತು ಆದರೆ ಅದನ್ನು ನೋಡಲು ಮಧುರೈ ಸೋಮು ಅಣ್ಣ ಇರಲಿಲ್ಲ. ಇದಲ್ಲದೆ ನಾದಗಾನ ಅರಸಿ ನಾದಗಾನ ರತ್ನಂ, ನಾದಸ್ವರ ವಿದ್ವಾಂಸಿನಿ ಮುಂತಾದ ಪ್ರಶಸ್ತಿಗಳೂ ಬಂದಿವೆ.
ನನಗೆ ತುಂಬಾ ಇಷ್ಟವಾದ ರಾಗ ತೋಡಿ ಮತ್ತು ಪ್ರಿಯವಾದ ವಾದಕರು ಟಿ ಎನ್ ರಾಜರತ್ನಂ ಪಿಳ್ಳೈ. ನನ್ನ ಸಂಗೀತಕ್ಕೆ ಮನಸೋತ ದೈತ್ಯ ಐಟಿ ಕಂಪನಿ ಮೈಕ್ರೋಸಾಫ್ಟ್ ನಾನು ನುಡಿಸಿರುವ ತೋಡಿಯನ್ನು ತನ್ನ ಮುಖ್ಯ ಕಾರ್ಯಸ್ಥಾನದಲ್ಲಿ ಹಾಕಲು ತೆಗೆದುಕೊಂಡುಹೋಯಿತು. ಅಮೆರಿಕೆ ಹುಡುಗಿ ಕರೀಶಾ ಕಿಂಗ್ ನನ್ನೊಡನೆ ಬಂದು ಒಂದು ವರ್ಷ ಇದ್ದು ಸಂಗೀತ ಕಲಿತಳು. ಹಲವು ದಶಕಗಳ ಹಿಂದೆ ನಡೆದ ಜಪಾನಿನಲ್ಲಿ ನಡೆದ ವಸ್ತುಪ್ರದರ್ಶನವೊಂದರಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಬಿಟ್ಟರೆ ಇನ್ನು ಪ್ರದರ್ಶಿಸಿರುವುದು ನನಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ.

೧೯೫೩ರಲ್ಲಿ ನನಗೆ ಹತ್ತೊಂಬತ್ತು ತುಂಬಿತ್ತು, ಚಿದಂಬರ ಮುದಲಿಯಾರರ ಜೊತೆ ನನ್ನ ವಿವಾಹವಾಯಿತು. ಅವರದ್ದು ಒಳ್ಳೆಯ ಸ್ಥಿತಿವಂತ ಕುಟುಂಬ. ನಮ್ಮ ಮನೆಯ ಹೆಸರು ತಂಗಂ-ಪೊನ್ ಇಲ್ಲಂ ಎಂದು. ಯಾವಾಗಲು ೨೦ರಿಂದ ೩೦ ಮಂದಿ ಅತಿಥಿಗಳು ಇರುತ್ತಿದ್ದರು. ನನ್ನ ಗಂಡ ಮಧುರೆಯ ಮುನಿಸಿಪಲ್ ಛೇರ‍್ಮನ್ ಆದರು. ಸತತ ನಾಲ್ಕು ಬಾರಿ ಎಂಎಲ್‌ಸಿ ಆದರು. ನುಡಿಸಬೇಡ ಅಂತ ನನಗವರು ಎಂದೂ ಹೇಳಲಿಲ್ಲ. ೧೯೭೨ರಲ್ಲಿ ಅವರು ತೀರಿ ಹೋದನಂತರ ನನ್ನ ಸಂಗೀತದ ಬದುಕು ಮುಗಿದೇ ಹೋಯಿತು. ಸುಮಂಗಲಿಯಲ್ಲದ ನಾನು ಮಂಗಳವಾದ್ಯವನ್ನು ನುಡಿಸುವುದು ಅಮಂಗಳ ಎಂದು ಮದುವೆ, ಶುಭಕಾರ್ಯಗಳು, ದೇವಾಲಯದ ಉತ್ಸವಗಳು ಮುಂತಾದವುಗಳಿಗೆ ನನ್ನನ್ನು ಕರೆಯುವುದನ್ನು ನಿಲ್ಲಿಸಿಬಿಟ್ಟರು. ನನ್ನ ಭವ್ಯ ಬದುಕು ನಿಧಾನವಾಗಿ ಕಳೆದುಹೋಯಿತು. ನನ್ನ ಭಾಗದ ಆಸ್ತಿಯನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದೆ.

ಆಗ ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಿಗುತ್ತಿತ್ತು. ೧೯೭೯ರಲ್ಲಿ ಒಂದು ಗಂಟೆ ನುಡಿಸುತ್ತಿದ್ದ ನನ್ನನ್ನು ಚಿಕ್ಕ ಮಕ್ಕಳು ನುಡಿಸುವಂತೆ ಅರ್ಧಗಂಟೆ ನುಡಿಸು ಎಂದು ಹೇಳಿದರು. ಅಂದಿನಿಂದ ಆಕಾಶವಾಣಿಯಲ್ಲಿ ನುಡಿಸುವುದನ್ನು ನಿಲ್ಲಿಸಿಬಿಟ್ಟೆ. ಈಗ ಮಧುರೆಯ ಪುದೂರಿನ ಭಾರತೀ ರಸ್ತೆಯ ಸಂಬಂಧಿಕರ ಮನೆಯ ಔಟ್‌ಹೌಸಿನಲ್ಲಿ ಬಡತನದ ಅಂಚಿನಲ್ಲಿ ಬದುಕುತ್ತಿದ್ದೇನೆ. ನನ್ನ ಬಳಿ ನೂರು ಸವರಿನ್ನಿಗಿಂತಲೂ ಹೆಚ್ಚು ಬಂಗಾರದ ಒಡವೆಗಳಿದ್ದವು ಮತ್ತು ೨೩ ಬಂಗಾರದ ಮೆಡಲ್ಲುಗಳು ಇದ್ದುವು. ಅವೆಲ್ಲವನ್ನೂ ಕರಗಿಸಿ, ಮಾರಿ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿದೆ. ಈಗ ನನ್ನ ಬಳಿ ಏನೂ ಇಲ್ಲ. ಒಬ್ಬ ಮಗ ಆತ್ಮಹತ್ಯೆ ಮಾಡಿಕೊಂಡ. ಇನ್ನೊಬ್ಬ ಮಗ ಜ್ಯೋತಿಷ್ಯ ಹೇಳಿಕೊಂಡು ಬದುಕುತ್ತಿದ್ದಾನೆ. ನನ್ನ ಮಕ್ಕಳ್ಯಾರೂ ಸಂಗೀತ ಕಲಿಯುವ ಆಸಕ್ತಿಯನ್ನೇ ತೋರಿಸಲಿಲ್ಲ. ಈಗ ನನ್ನ ಮೊಮ್ಮಗ ವಿಘ್ನೇಶ್ವರನ್ ನಾಗಸ್ವರ ಕಲಿಯುವ ಆಸಕ್ತಿ ತೋರಿಸುತ್ತಿದ್ದಾನೆ. ಅವನಿಗೆ ಮೃದಂಗ ಚೆನ್ನಾಗಿ ಬರುತ್ತೆ. ಅವನಾದರೂ ನನ್ನ ಹೆಸರು ಉಳಿಸುತ್ತಾನಾ ಎಂದು ನೋಡಬೇಕು. ನಾನು ಇಷ್ಟು ವರ್ಷ ನುಡಿಸಿ, ನನ್ನ ಭಾಗವೇ ಆಗಿದ್ದ ನನ್ನ ವಾದ್ಯವನ್ನು ಕೂಡ ಇಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇಲಿಗಳು ಮತ್ತು ಗೆದ್ದಲು ತಿಂದುಬಿಡುತ್ತವೆ. ಹಾಗಾಗಿ ನಮ್ಮ ಪಕ್ಕದ ಮನೆ ಚೆನ್ನಾಗಿದೆ. ಅಲ್ಲಿ ಇಟ್ಟಿದ್ದೀನಿ. ಸಾಮಾನ್ಯವಾಗಿ ಎಲ್ಲಾ ನಾಗಸ್ವರ ವಿದ್ವಾಂಸರನ್ನೂ ಕಾಡುವ ಖಾಯಿಲೆ ತೀವ್ರಸ್ವರೂಪದ ಅಲ್ಸರ್. ಹದಿಮೂರು ವರ್ಷಗಳಿಂದ ಅಲ್ಸರ್‌ನಿಂದ ಒದ್ದಾಡುತ್ತಿದ್ದೇನೆ. ಮತ್ತೆ ಒಳ್ಳೆಯ ದಿನಗಳನ್ನು ನಾನು ಕಾಣುವುದಿಲ್ಲ.