Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ.

ಪಂಡಿತ್ ರಾಜನ್ ಮಿಶ್ರ ಇನ್ನಿಲ್ಲ. ಜಗತ್ತನ್ನು ಮೋಡಿ ಮಾಡಿದ ಮಿಶ್ರ ಸಹೋದರರಲ್ಲಿ ಒಬ್ಬರನ್ನು ಕೊರೋನ ಬಲಿ ತೆಗೆದುಕೊಂಡಿದೆ. ಇದು ಸಂಗೀತಕ್ಷೇತ್ರಕ್ಕೆ ಒಂದು ದೊಡ್ಡ ಆಘಾತ. ಬನಾರಸ್ ಘರಾನೆಯ ಅಪ್ರತಿಮ ಸಂಗೀತಗಾರನ್ನು ಸಂಗೀತ ಕ್ಷೇತ್ರ ಕಳೆದುಕೊಂಡಿದೆ.
ವಾರಣಾಸಿಯ ಸಂಗೀತದ ಮನೆತನದಲ್ಲಿ ರಾಜನ್ ಮಿಶ್ರ ಜನಿಸಿದ್ದು ೧೯೫೧ರಲ್ಲಿ, ಹನುಮಾನ್ ಜಯಂತಿಯಂದು. ಅವರದ್ದು ಬನಾರಸ್ ಘರಾನೆ. ಖಯಾಲ್ ಗಾಯನ ಅಂದರೆ ಹೀಗಿರಬೇಕು ಎಂದು ವ್ಯಾಖ್ಯಾನಿಸಿದ ಘರಾನೆ ಅದು. ನೇಪಾಳದ ಅಸ್ಥಾನ ವಿದ್ವಾಂಸರಾಗಿದ್ದ ಗಾಯನಾಚಾರ್ಯ ಬಡೇ ರಾಂದಾಸ್ ಮಿಶ್ರ ಅದರ ಪ್ರವರ್ತಕರು. ರಾಂದಾಸ್ ಮಿಶ್ರ ಅವರು ರಾಜನ್ ಅವರ ತಾತನ ಸೋದರ. ರಾಜನ್ ಅವರ ತಂದೆ ಪಂಡಿತ್ ಹನುಮಾನ್ ಪ್ರಸಾದ್ ಮಿಶ್ರ ಹೆಸರಾಂತ ಸಾರಂಗಿವಾದಕರು. ಚಿಕ್ಕಪ್ಪ ಗೋಪಾಲ್ ಮಿಶ್ರ ಸಾರಂಗಿ ವಾದನದ ದಿಗ್ಗಜ. ತಾಯಿ ಕೂಡ ಪ್ರತಿಭಾವಂತ ಗಾಯಕಿ. ಆದರೆ ಬಹುಪಾಲು ಕುಟುಂಬಗಳಲ್ಲಿ ಆಗುವಂತೆ ಅವರು ಕೂಡ ಅವಕಾಶ ಸಿಗದೆ ಹಾಗೆ ತೆರೆಮರೆಯಲ್ಲೇ ಉಳಿದರು. ಮಿಶ್ರ ಸೋದರರು ಬೆಳೆದದ್ದು ಇವರೆಲ್ಲರ ತಾಲೀಮಿನಲ್ಲಿ. ಜೊತೆಗೆ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪದವೀಧರ. ಆದರಿಂದ ಆಧುನಿಕ ಜಗತ್ತಿಗೆ ತೆರೆದುಕೊಳ್ಳುವುದು ಅವರಿಗೆ ಸಲೀಸಾಯಿತು. ಹಲವು ವರ್ಷಗಳ ಸತತ ರಿಯಾಜು, ಸ್ವಂತ ಚಿಂತನೆ, ಧಾನಸ್ಥ ಮನಸ್ಸು ಇದಕ್ಕೆ ಪೂರಕವಾಗಿ ಅವರ ಶ್ರೀಮಂತ, ಆಳವಾದ, ಅನುರಣಿಸುವ ಧ್ವನಿ ಇವುಗಳಿಂದ ಅವರಿಗೆ ತಮ್ಮ ಕಲೆಯನ್ನು ಅದರ ಎಲ್ಲಾ ಸೂಕ್ಷ್ಮಗಳೊಂದಿಗೆ ಅಭಿವ್ಯಕ್ತಿಸಲು ಸಾಧ್ಯವಾಯಿತು. ಹಾಗಾಗಿ ಅವರ ಉತ್ಕೃಷ್ಟ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿತು.
ಅವರು ಬನಾರಸ್ಸಿನ ದೊಡ್ಡ ಸಂಗೀತಗಾರರ ಸಂಗೀತವನ್ನು ಕೇಳುತ್ತಾ ಮಹಾನ್ ಉಸ್ತಾದರೊಂದಿಗೆ ಸಂವಾದಿಸುತ್ತಾ ಬೆಳೆದರು. ಬನಾರಸ್ಸಿನಲ್ಲಿ ಬೆಳೆದ ಈ ಸೋದರರ ಮೊದಲ ಕಾರ್ಯಕ್ರಮ ನಡೆದದ್ದು ೧೯೬೮ರಲ್ಲಿ ಸಂಕಟ್ ಮೋಚಾನ್ ದೇಗುಲದಲ್ಲಿ. ಚಿಕ್ಕಪ್ಪ ಪಂಡಿತ್ ಗೋಪಾಲ್ ಮಿಶ್ರ ಅವರ ಸಲಹೆಯಂತೆ ೧೯೭೩ರಲ್ಲಿ ದೆಹಲಿಯ ಆಕಾಶವಾಣಿಯಲ್ಲಿ ಧ್ವನಿಪರೀಕ್ಷೆ ಮುಗಿಸಿಕೊಂಡರು. ಮುಂದೆ ಕಾರ್ಯಕ್ರಮಗಳಲ್ಲಿ ಹೆಚ್ಚಳವಾದಂತೆ ದೆಹಲಿಯಲ್ಲೇ ನೆಲೆಸಿದರು.
ಮಿಶ್ರ ಅವರು ಬನಾರಸ್ ಘರಾನೆಗೆ ಬದ್ಧರಾಗಿದ್ದರೂ ಬೇರೆ ಹಿರಿಯ ಸಂಗೀತಗಾರರಿಂದ ಒಳ್ಳೆಯದನ್ನು ತೆಗೆದುಕೊಳ್ಳಲು ಎಂದೂ ಹಿಂಜರಿಯಲಿಲ್ಲ. ಹಾಗಾಗಿಯೇ ಮಿಶ್ರ ಅವರು ಉಸ್ತಾದ್ ಬಡೇ ಗುಲಾಂ ಆಲಿ ಖಾನ್, ಅಮೀರ್ ಖಾನ್ ಹಾಗೂ ಪಂಡಿತ್ ಭೀಮಸೇನ್ ಜೋಷಿ ಹೀಗೆ ಹಲವು ಶ್ರೇಷ್ಠರಿಂದ ಹಲವು ಅಂಶಗಳನ್ನು ಹೆಕ್ಕಿಕೊಂಡು ತಮ್ಮ ಸಂಗೀತವನ್ನು ಶ್ರೀಮಂತಗೊಳಿಸಿಕೊಂಡರು.
ಸಹೋದರ ಪಂಡಿತ್ ಸಾಜನ್ ಮಿಶ್ರ ಜೊತೆಗಿನ ಅವರ ಹಾಡುಗಾರಿಕೆ ಕೇವಲ ಒಟ್ಟಿಗೆ ಹಾಡುವ ಜುಗಲ್‌ಬಂದಿ ಆಗಿರಲಿಲ್ಲ. ಅದು ಸಹಗಾಯನವೂ ಆಗಿರಲಿಲ್ಲ, ಸಂಗಮವಾಗಿತ್ತು. ಅವರದು ಎರಡು ದೇಹ ಒಂದು ಆತ್ಮ.ಅವರು ಸಾಂಪ್ರದಾಯಿಕ ಖಯಾಲ್ ಗಾಯನದಲ್ಲಿ ಹಲವು ರೀತಿಯ ಹೊಸತನ್ನು ಸೃಷ್ಟಿಸಿದರು. ಅವರು ಅರ್ಧ ಶತಮಾನ ಗೋಲದ ಉದ್ದಗಲಕ್ಕೂ ನೀಡಿದ ಕಾರ್ಯಕ್ರಮಗಳು ಶ್ರೋತೃಗಳನ್ನು ಮಂತ್ರಮುಗ್ದರನ್ನಾಗಿಸಿವೆ. ಸೊಗಸಾದ ಗಾಯಕ, ಪ್ರೀತಿಯ ಗುರು, ಉತ್ತಮ ಗೆಳೆಯ, ನಿಜವಾದ ಕಲಾವಿದ, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಹೃದಯವಂತಿಕೆಯಿಂದ ಎಲ್ಲಾ ತಲೆಮಾರಿನವರಿಗೂ ಪ್ರಿಯರಾಗಿದ್ದರು. ಪದ್ಮಭೂಷಣವೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಕಿರಿಯ ಕಲಾವಿದರಲ್ಲಿ, ಸಹಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಿ, ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಒಮ್ಮೆ ಅವರೊಂದಿಗೆ ಹಾರ್ಮೋನಿಯಂ ಸಹಕಾರ ನೀಡಬೇಕಾದ ಅಜಯ್ ಜೋಗ್ಲೆಕರ್ ಗಾಬರಿಗೊಂಡಿದದರು. ಅದನ್ನು ಗಮನಿಸಿ, ಅವರನ್ನು ಬಳಿಗೆ ಕರೆದು, ಸಮಾಧಾನಿಸಿ, ನಾನು ಹೇಗೆ ಹಾಡುತ್ತೇನೆ ಅನ್ನುವುದರ ಬಗ್ಗೆ ಆತಂಕ ಮಾಡಿಕೊಳ್ಳದೆ, ಸಂಗೀತವನ್ನು ಆಸ್ಥೆಯಿಂದ ಕೇಳು, ಸಂಗೀತದ ಚಲನ್‌ಗಳು ಅದರಷ್ಟಕ್ಕೆ ಮೂಡಿಬರುತ್ತವೆ ಎಂದು ಸಹಕಲಾವಿದನೊಬ್ಬ ಕಲಿಯಬೇಕಾದ ಮೊದಲ ಪಾಠವನ್ನು ಕಲಿಸಿಕೊಟ್ಟರು. ಸಂಗೀತ ಅನ್ನೋದು ಒಂದು ವರ್ಣಚಿತ್ರದಂತೆ. ಕಲಾವಿದರೆಲ್ಲರೂ ವೇದಿಕಯಲ್ಲಿ ಒಟ್ಟಿಗೆ, ಹೊಂದಿಕೊಂಡು ಅದನ್ನು ಸೃಷ್ಟಿಸಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು.
ಸಹೋದರರ ನಡುವೆ ಸೊಗಸಾದ ಹೊಂದಾಣಿಕೆ ಇತ್ತು. ‘ಇದು ಸಾಧ್ಯವಾಗಬೇಕಾದರೆ ಇಬ್ಬರ ನಡುವೆ ಪರಸ್ಪರ ಗೌರವ ಇರಬೇಕು. ನಾವಿಬ್ಬರು ಒಟ್ಟಿಗೆ ಹಾಡುತ್ತೇವೆ. ಆದರೆ ನಾವು ಒಟ್ಟಿಗೆ ಹಾಡುವಾಗ ಅದನ್ನು ಸ್ಪರ್ಧೆ ಎಂದು ನಾವೆಂದೂ ಭಾವಿಸಲಿಲ್ಲ. ನಾವು ಪರಸ್ಪರ ಪ್ರೀತಿಸುತ್ತೇವೆ. ಒಬ್ಬರ ಸಂಗೀತವನ್ನು ಇನ್ನೊಬ್ಬರು ಮೆಚ್ಚಿಕೊಳ್ಳುತ್ತೇವೆ. ಈ ಮೆಚ್ಚುಗೆ ಉತ್ತಂಗಕ್ಕೆ ಹೋದಾಗ, ನಮ್ಮ ಆತ್ಮ ಒಂದೇ ಆಗಿಬಿಡುತ್ತದೆ.’ ಎನ್ನುತ್ತಿದ್ದರು ರಾಜನ್ ಮಿಶ್ರ. ಅದನ್ನು ಮುಂದುವರಿಸುತ್ತಾ ಸಾಜನ್, “ನಾವಿಬ್ಬರೂ ವಿಭಿನ್ನ ವ್ಯಕ್ತಿಗಳು, ಎರಡು ಕಂಠಗಳಿವೆ. ಎರಡೂ ತುಂಬಾ ವಿಭಿನ್ನ. ಆದರೆ ನಾವು ’ಏಕಕಂಠ’ದಿಂದ ಶ್ರೋತೃಗಳನ್ನು ತಲುಪುತ್ತೇವೆ.”
ನಿಜ ಅವರಿಬ್ಬರ ಕಂಠಗಳು ತುಂಬಾ ವಿಭಿನ್ನ. ರಾಜನ್ ಅವರದು ಆಳವಾದ, ಅನುರಣಿಸುವ ಶಾರೀರ. ಮಂದ್ರಸ್ಥಾಯಿಯಲ್ಲಿ ಸಲೀಸಾಗಿ ಸಂಚರಿಸುತ್ತಿತ್ತು. ತೀರಾ ಪರಿಣಾಮಕಾರಿಯಾಗಿ ಕೇಳಿಸುತ್ತಿತ್ತು. ಸಾಜನ್ ಮಿಶ್ರ ಅವರ ಶಾರೀರ ಸ್ವಲ್ಪ ಮೊನುಚು. ತಾರಸ್ಥಾಯಿಯಲ್ಲಿ ಸುಲಲಿತವಾಗಿ ನುಡಿಯುತ್ತಿತ್ತು. ಎರಡೂ ಬಗೆಯ ಶಾರೀರಗಳು ಪರಸ್ಪರ ಪೂರಕವಾಗಿ ಮೇಳೈಸಿ, ಸಂಗೀತದಲ್ಲಿ ಔತ್ತಮ್ಯವನ್ನು ಸಾಧಿಸುತ್ತಿತ್ತು. ವಿಳಂಬಿತ್‌ನಲ್ಲಿ ಅವರ ರಾಗವಿಸ್ತಾರ ಸೊಗಸಾಗಿ, ಶುದ್ಧವಾಗಿ, ಸಾವಧಾನವಾಗಿ ಇರುತ್ತದೆ. ಅವರ ಧ್ರುತ್ ಮತ್ತು ತರಾನಾ ಪ್ರಸ್ತುತಿ ಮನಮೋಹಕ. ಲವವಿಕೆಯಿಂದ ಕೂಡಿದ ಅವರ ಶಕ್ತಿಯುತವಾದ ತಾನ್‌ಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತವೆ. ಬಂದಿಶ್‌ನ ಭಡತ್‌ನಲ್ಲಿ ಅವರು ಆ ಬಂದಿಶ್‌ನ ಒಟ್ಟು ಭಾವಕ್ಕೆ ತುಂಬಾ ಗಮನ ಕೊಟ್ಟು, ಆ ಭಾವಕ್ಕೆ ಹೊಂದುವಂತಹ ಸೊಗಸಾದ, ಸಂಕೀರ್ಣವಾದ ಸ್ವರಗುಚ್ಛಗಳನ್ನು ಕಲ್ಪಿಸಿ, ವಿಭಿನ್ನ ಬಗೆಯ ಗಮಕಗಳಿಂದ ಅದನ್ನು ಸಿಂಗರಿಸಿ ವರ್ಣರಂಜಿತವಾಗಿ ಮಾಡುತ್ತಾರೆ.
ಬನಾರಸ್ ಠುಮ್ರಿ, ದಾದ್ರ ಮುಂತಾದವುಗಳಿಗೆ ಹೆಸರುವಾಸಿಯಾಗಿತ್ತು. ಇದನ್ನು ಬದಲಿಸಲು ಸೋದರರು ಬನಾರಸ್ ಘರಾನೆಯ ಖಯಾಲ್ ಪ್ರಸ್ತುತಿಗೆ ಹೆಚ್ಚು ಗಮನ ನೀಡಲಾರಂಭಿಸಿದರು. ಕಾರ್ಯಕ್ರಮದಲ್ಲಿ ಅವರು ಠುಮ್ರಿ ಹಾಡುತ್ತಿರಲಿಲ್ಲ. “ನಾವು ವೇದಿಕೆಯ ಮೇಲೆ ಠುಮ್ರಿ ಹಾಡುವುದಿಲ್ಲ. ಬನಾರಸ್ಸಿನಲ್ಲಿ ಕೇವಲ ಠುಮ್ರಿ ಹಾಡುತ್ತಾರೆ ಎಂದು ಜನ ಭಾವಿಸಿದ್ದಾರೆ. ನಾವು ನಮ್ಮ ಘರಾನೆಯ ಗಾಯನ ಹಾಗೂ ವಾದನ ಶೈಲಿಯನ್ನು ಮುನ್ನೆಲೆಗೆ ತರಬೇಕು ಎಂದು ಅಂದುಕೊಂಡೆವು” ಆದರೆ ಬನಾರಸ್ ಸಂಪ್ರದಾಯದ ಟಪ್ಪಾ ಮತ್ತು ಭಜನ್‌ಗಳನ್ನು ಮನಮುಟ್ಟುವಂತೆ ಹಾಡುತ್ತಾರೆ.
ಹಲವು ಬಂದಿಶ್‌ಗಳನ್ನು ರಚಿಸಿದ್ದಾರೆ. ಅವರ ಶಿಷ್ಯ ವಿರಾಜ್ ಅಮರ್ ಹೇಳುವಂತೆ” ಅವರಿಗೆ ಕಾವ್ಯ ಅಂದರೆ ತುಂಬಾ ಇಷ್ಟ. ಅವರೆಲ್ಲಾ ರಚನೆಗಳಲ್ಲಿ ಭಾವ ಮತ್ತು ಲಯಕರಿ ಸೊಗಸಾಗಿ ಮೇಳೈಸಿದೆ.”
ರಾಜನ್ ಮಿಶ್ರ ಅವರದ್ದು ತುಂಬಾ ಆಕರ್ಷಕ ವ್ಯಕ್ತಿತ್ವ. ಅವರ ಹಾಸ್ಯಪ್ರಜ್ಞೆ ಕುರಿತು ಅವರ ನಿಕಟವರ್ತಿಗಳೆಲ್ಲರೂ ಹೇಳುತ್ತಾರೆ. ತಮ್ಮ ಬಾಲ್ಯದ ವಾರಣಾಸಿಯ ಕುರಿತ ಅನುಭವಗಳು, ಕುಸ್ತಿ, ಕ್ರಿಕೆಟ್, ಸಿನಿಮಾ ಇವುಗಳ ಬಗ್ಗೆ ತಮಗಿರುವ ಪ್ರೀತಿ ಮುಂತಾದವುಗಳನ್ನು ಹೇಳುತ್ತಾ ತಮ್ಮ ಸುತ್ತ ನೆರೆದವರನ್ನು ರಂಜಿಸುತ್ತಿದ್ದರು. ಈ ಮನಸ್ಸೇ ಅವರ ದೆಹಲಿಯ ’ಸ್ವರಾಂಗನ್’ ಮನೆಯ ಯಶಸ್ವೀ ಕೂಡುಕುಟುಂಬದ ಹಿಂದಿನ ಗುಟ್ಟೇನೋ!
ಡೆಹರಾಡೂನ್ ಹೊರವಲಯದಲ್ಲಿ ವಿರಾಮ್ ಎಂಬ ಗುರುಕುಲವನ್ನು ಪ್ರಾರಂಭಿಸಿದರು. ಸಂಗೀತ ಕಲಿಸಲು ಒಂದು ಒಳ್ಳೆಯ ವಾತಾವರಣ ಬೇಕು ಎನ್ನುವ ಕಾರಣಕ್ಕೆ ಅಲ್ಲಿ ಪ್ರಾರಂಭಿಸಿದ್ದರು. ಅದು ಬಹುಕಾಲ ಉಳಿಯುವಂಥದ್ದು.
ಎರಡು ದೇಹಗಳಲ್ಲಿ ಒಂದು ದೇಹ ಹೋದರೂ ಕೂಡ ಒಂದಾಗಿದ್ದ ಅವರ ಆತ್ಮ ಸಾಜನ್ ಮಿಶ್ರಾ ಅವರ ದೇಹದ ಮೂಲಕ ಮತ್ತು ಮಕ್ಕಳಾದ ರಿತೇಶ್, ರಜನೀಶ್ ಹಾಗೂ ಸ್ವರಾಂಶ್ ಮಿಶ್ರ ಮೂಲಕ ನಿರಂತರವಾಗಿ ಹಾಡುತ್ತದೆ ಎಂದು ಆಶಿಸೋಣ.