Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ

ಶೈಲಜಾ ಮತ್ತು ವೇಣುಗೋಪಾಲ್

ಅಸಾಧ್ಯ ಪ್ರತಿಭಾವಂತರೂ, ಲೋಕವಿಖ್ಯಾತರೂ ಆಗಿರುವವರ ಮಗನಾಗಿ ಹುಟ್ಟಿ ಬಾಳುವುದು ಸುಲಭವಲ್ಲ. ತಂದೆ ಲೋಕವಿಖ್ಯಾತ ಪಂಡಿತ ತಾರಾನಾಥರು. ಒಂದು ಇಡೀ ತಲೆಮಾರನ್ನು ತಮ್ಮ ಅಗಾಧ ಪ್ರತಿಭೆಯಿಂದ ಬೆರಗುಗೊಳಿಸಿದವರು. ತಾಯಿ ಸುಮತೀಬಾಯಿ ೧೯೨೫ರಷ್ಟು ಹಿಂದೆಯೇ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿ, ಪಂಡಿತ್ ನೆಹರೂ ಅಂತಹವರ ಮೆಚ್ಚುಗೆ ಗಳಿಸಿದವರು. ಇಂತಹವರ ಮಗನಾಗಿ ಸಾಧ್ಯವಿರುವುದು ಎರಡೇ ಆಯ್ಕೆ. ಅವರ ಅಗಾಧ ಪ್ರಭೆಯಲ್ಲಿ, ಅದರ ನೆರಳಿನಲ್ಲಿ, ಅವರ ಅಸ್ಮಿತೆಯಲ್ಲಿ ಕರಗಿಹೋಗುವುದು. ಇಲ್ಲವೇ ಅವರನ್ನು ಪ್ರೀತಿಸುತ್ತಾ, ಅನುಕರಿಸುತ್ತಾ, ಪ್ರಶ್ನಿಸುತ್ತಾ, ಹೋರಾಡುತ್ತಾ, ನಿರಾಕರಿಸುತ್ತಾ, ಮೆಚ್ಚುತ್ತಾ, ಮತ್ತೊಂದು ಅಗಾಧವಾದ, ತ್ರಿವಿಕ್ರಮನಂಥ ಅಸ್ಮಿತೆಯನ್ನು ರೂಪಿಸಿಕೊಳ್ಳುವುದು. ಪಂಡಿತ್ ರಾಜೀವ ತಾರಾನಾಥರು ಪ್ರಜ್ಞಾಪೂರ್ವಕವೋ, ಅಪ್ರಜ್ಞಾಪೂರ್ವಕವೋ ಆಯ್ದುಕೊಂಡದ್ದು ಎರಡನೆಯ ದಾರಿಯನ್ನು. ಅವರ ಇಡೀ ಬದುಕು ಇಂತಹ ಔತ್ತಮ್ಯದ ಹುಡುಕಾಟ, ಹುಡುಕಾಟದ ಭಾಗವೇ ಆದ ರಿಯಾಜ್ ಮತ್ತು ಹೀಗೆ ಹುಡುಕಾಡಿದ್ದನ್ನು ಕಾಪಿಟ್ಟು ತಮ್ಮ ಬುದ್ಧಿ ಬೆರಳುಗಳಿಂದ ತಮ್ಮ ಶಿಷ್ಯರ ಬುದ್ಧಿ ಬೆರಳುಗಳಲ್ಲಿ ಹರಿಯುವಂತೆ ಮಾಡುವತ್ತಲೇ ತುಡಿಯುತ್ತಿತ್ತು. ಸಂಗೀತದಲ್ಲಿನ ಈ ಔತ್ತಮ್ಯದ ಹುಡುಕಾಟ ಅವರನ್ನು ಹಲವು ಬಗೆಯ ಸಂಗೀತದ ಹಾದಿಗಳಲ್ಲಿ ಅತ್ಯಂತ ಗಂಭೀರವಾಗಿ ನಡೆಸಿತು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಪ್ರಶಸ್ತಿವಿಜೇತ ಕನ್ನಡ ಹಾಗೂ ಮಲೆಯಾಳಂ ಚಲನಚಿತ್ರಗಳಿಕ್ಕೆ ಹಿನ್ನೆಲೆ ಸಂಗೀತ, ಚಿತ್ರಗೀತೆಗಳಿಗೆ ಸಂಗೀತ ಸಂಯೋಜನೆ, ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟಿನಲ್ಲಿ ಅಧ್ಯಾಪನ, ಡಾ ನಾ ರತ್ನ ಅವರ ನಾಟಕಕ್ಕೆ, ಸಮುದಾಯದ ಎಂ ಎಸ್ ಸತ್ಯು ಅವರ ’ಕುರಿ’ ನಾಟಕಕ್ಕೆ ಸಂಗೀತ ಸಂಯೋಜನೆ ಇಲ್ಲೆಲ್ಲಾ ಅವರು ತಮ್ಮ ಛಾಪು ಮೂಡಿಸಿದರು.

ಇವೆಲ್ಲವೂ ಬಾಲ್ಯದಲ್ಲಿ ಅವರಿಗರಿವಿಲ್ಲದೆಯೇ ಪ್ರಾರಂಭವಾಯಿತು, ನನ್ನ ತಂದೆ ಪಂಡಿತ ತಾರಾನಾಥರು ಒಂದು ರೀತಿ ಲಿಯೊನಾರ್ದೋ ದ ವಿನ್ಚಿ ಇದ್ದ ಹಾಗೆ- ಅವರು ತಬಲವಾದಕರು, ಗಾಯಕರು, ಒಬ್ಬ ಸ್ವಾತಂತ್ರಯೋಧರು, ಸಮಾಜಸುಧಾರಕರು, ಅಲೋಪತಿ, ಆಯುರ್ವೇದ ಹಾಗೂ ಯುನಾನಿ ವೈದ್ಯರು ಎಲ್ಲವೂ ಆಗಿದ್ದರು. ಬಹುಶಃ ತಮ್ಮ ಸಾವಿನ ಬಗ್ಗೆ ಅವರಿಗೆ ಹತ್ತು ವರ್ಷ ಮೊದಲೇ ಗೊತ್ತಿತ್ತು ಅನ್ನಿಸುತ್ತೆ. ಹಾಗಾಗಿ ತಾವು ಸಾಯುವುದರೊಳಗೆ ತಮಗೆ ತಿಳಿದಿರುವ ಎಲ್ಲಾ ವಿದ್ಯೆಗಳನ್ನೂ ನನಗೆ ಕಲಿಸಬೇಕೆನ್ನುವ ತವಕ ಅವರಿಗೆ. ಅವರಿಗೆ ಅದೊಂದು ಟೈಂಬೌಂಡ್ ಕಾರ್ಯಕ್ರಮವಾಗಿತ್ತು. ನಾನು ಬೆಳಗ್ಗೆ ಕಣ್ಣು ಬಿಡುವಾಗಿನಿಂದಲೇ ನನ್ನ ಪಾಠ ಪ್ರಾರಂಭವಾಗುತ್ತಿತ್ತು. ಅವರು ಹೇಳಿಕೊಡುವುದೆಲ್ಲವನ್ನೂ ನಾನು ಹೇಳಬೇಕಿತ್ತು. ಕೆಲವೊಮ್ಮೆ ನನಗೆ ಪುಟ್ಟ, ಇದನ್ನು ನಾನು ಒಂದು ಸಲ ಹೇಳುತ್ತೇನೆ. ನೀನು ತಕ್ಷಣವೇ ನೆನಪಿಟ್ಟುಕೊಂಡು ಹೇಳಬೇಕು, ಇಲ್ಲದಿದ್ದರೆ ನೀನು ನನ್ನ ಮಗನೇ ಅಲ್ಲ ಎನ್ನುತ್ತಿದ್ದರು. ಹೀಗೆ ಕೆಲವೊಮ್ಮೆ ತುಂಬ ಒತ್ತಡ ಇರುತ್ತಿತ್ತು. ನಮ್ಮ ತಂದೆ ಯಾವುದನ್ನೂ ಅಷ್ಟು ಸಲೀಸಾಗಿ ಒಪ್ಪುತ್ತಿರಲಿಲ್ಲ. ಒಮ್ಮೆ ಬೆಂಗಳೂರಿನಲ್ಲಿ ಯಾವುದೋ ಒಂದು ಕಟ್ಟಡದ ಉದ್ಘಾಟನೆ. ನಮ್ಮ ತಂದೆ ಮುಖ್ಯ ಅತಿಥಿಗಳು. ನನಗೆ ಹಾಡಲು ಹೇಳಿದ್ದರು. ನಾನು ಬಾಗೇಶ್ರೀ ರಾಗವನ್ನು ನನಗೆ ಸಾಧ್ಯವಾದಷ್ಟು ಮಟ್ಟಿಗೆ ವಿಸ್ತರಿಸಿ ಹಾಡಿದೆ. ಎಲ್ಲರೂ ಮೆಚ್ಚಿಕೊಂಡರು. ಅಮ್ಮನಿಗೂ ಸಾಕಷ್ಟು ಖುಷಿಯಾಗಿತ್ತು. ಆದರೆ ನಮ್ಮಪ್ಪ ಮಾತ್ರ ಬರುತ್ತೆ ಅಂತ ಸಿಕ್ಕಸಿಕ್ಕಲ್ಲಿ ತಾನ್‌ಗಳನ್ನು ಹೊಡೆದು ಮನಸ್ಸಿಗೆ ಬಂದಂತೆ ಗಮಕ ಹಾಡುವುದೇ? ಎಂದು ದಾರಿಯುದ್ದಕ್ಕೂ ಬಯ್ಯುತ್ತಾ ಬಂದರು. ನನಗೆ ತುಂಬಾ ದುಃಖವಾಗಿತ್ತು. ಎಲ್ಲರೂ ಅಷ್ಟೊಂದು ಮೆಚ್ಚಿಕೊಂಡರೂ ಅಪ್ಪ ಮಾತ್ರ ಬೈಯುತ್ತಾನಲ್ಲ ಎಂದು ಅಳುವೇ ಬಂದಿತ್ತು. ನಮ್ಮಪ್ಪನ ಕ್ರಮವೇ ಹಾಗೆ. ಆದರೆ ಹೀಗೆ ಸಂಗೀತದ ಅಭಿರುಚಿ ಮಾತ್ರವಲ್ಲ, ಬದುಕಿನಲ್ಲಿ ಕಷ್ಟಕಾರ್ಪಣ್ಯಗಳನ್ನು ಧೈರ್ಯವಾಗಿ ಎದುರಿಸುವುದನ್ನೂ ನನಗವರು ಸಣ್ಣವಯಸ್ಸಿನಲ್ಲೇ ಕಲಿಸಿದರು.

ತಂದೆಯೇ ಮೊದಲ ಗುರು. ಸ್ವರಶುದ್ಧತೆ, ರಾಗಭಾವ ಮತ್ತು ಸ್ವಾನುಭವ ಇವು ಸಂಗೀತದಲ್ಲಿ ತುಂಬಾ ಮುಖ್ಯ ಎಂಬುದನ್ನು ಅವರು ಮನದಟ್ಟು ಮಾಡಿಸಿದ್ದರು. ಪಂಡಿತ್ ಸವಣೂರು ಕೃಷ್ಣಾಚಾರ್ಯರು, ಪಂಡಿತ್ ಸವಾಯಿ ಗಂಧರ್ವ ಅವರ ಮೊದಲ ಶಿಷ್ಯ ವೆಂಕಟರಾವ್ ರಾಮದುರ್ಗಕರ್, ಇನ್ನು ಪಂಚಾಕ್ಷರಿ ಗವಯಿಗಳಿಂದಲೂ ಕೆಲವು ರಾಗಗಳನ್ನು ಕಲಿಯುವ ಸುಯೋಗ ಅವರದಾಗಿತ್ತು. ೧೯೪೨ ಅಕ್ಟೋಬರ್ ೩೧ರಂದು ಅವರ ತಂದೆ ತೀರಿಕೊಂಡು ಎರಡು ಗಂಟೆಗಳ ಕಾಲವಾಗಿತ್ತು, ಆದರೆ ಅವರ ತಂದೆಯ ಆಸೆಯಂತೆ ಅಂದು ನಿಗದಿಗೊಂಡಿದ್ದ ಅವರ ಸಂಗೀತ ತರಗತಿಗಳು ಪಂಡಿತ್ ಶಂಕರ್ ರಾವ್ ಜೋಶಿ ದೇವಗಿರಿಯವರಿಂದ ಪ್ರಾರಂಭವಾಯಿತು. ಅದು ಆಗುವಂತೆ ಮಾಡಿದವರು ಅವರ ದೃಢ ಮನಸ್ಸಿನ ತಾಯಿ ಸುಮತೀಬಾಯಿ. ಇವೆಲ್ಲವೂ ರಾಜೀವ ತಾರಾನಾಥರ ವ್ಯಕ್ತಿತ್ವವನ್ನು ಬಾಲ್ಯದಲ್ಲಿ ರೂಪಿಸಿದವು.

ನಾನು ಹೆಚ್ಚು ಕಡಿಮೆ ಹಾಡುಗಾರಿಕೆಯಲ್ಲೇ ಇದ್ದೆ. ಅದು ಬಿಟ್ಟರೆ ತಬಲಾ, ಸಿತಾರ್, ವಿಚಿತ್ರವೀಣೆ ಹೀಗೆ. ನನಗೆ ಸರೋದ್ ಬಗ್ಗೆ ಯಾವ ರೀತಿಯ ಆಕರ್ಷಣೆಯಾಗಲೀ, ಗೌರವವಾಗಲೀ ಇರಲಿಲ್ಲ. ಅದರ ಸ್ಟಕಾಟೋ ನಾದ ನನಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಸರೋದ್ ರೆಕಾರ್ಡುಗಳನ್ನು ಹಾಕಿದರೆ ನಾನು ಗದ್ದಲ ಮಾಡಿಬಿಡುತ್ತಿದ್ದೆ. ಅವುಗಳನ್ನು ತೆಗೆಯುವವರೆಗೂ ಬಿಡುತ್ತಿರಲಿಲ್ಲ ಅಥವಾ ಅಲ್ಲಿಂದ ಓಡಿಬಿಡುತ್ತಿದ್ದೆ. ಆದರೆ ನನ್ನ ಜೀವನದ ಬಹುದೊಡ್ಡ ವ್ಯಂಗ್ಯವೆಂದರೆ, ನಾನು ಯಾವ ನಾದವನ್ನು ಕೇಳಿದರೆ ಸಾಕು ಓಡಿ ಹೋಗುತ್ತಿದ್ದೆನೋ, ಈಗ ಅದೇ ನಾದದ ಜೊತೆಗೇ ಬದುಕುತ್ತಿದ್ದೇನೆ!

ಇಪ್ಪತ್ತರ ಹರೆಯದಲ್ಲಿ ಪ್ರೀತಿ, ಪ್ರಣಯಕ್ಕೆ ಬೀಳುವ ಬದಲು, ದುಡ್ಡು ಮಾಡುವ ಬದಲು, ಕೆಲಸಕ್ಕೆ ರಾಜೀನಾಮೆ ನೀಡಿ ಉಸ್ತಾದ್ ಅಲಿ ಅಕ್ಬರ್ ಖಾನ್ ಎನ್ನುವ ಕಿಂದರಜೋಗಿಯ ಹಿಂದೆ ಮೋಡಿಗೊಳಗಾದವರಂತೆ ಬಾಂಬೆಗೆ ನಡೆದುಬಿಟ್ಟರು. ಅವರಾದರೂ ಎಂತಹ ಗುರು! ಅರೇ ಆಗಯಾ? ಪಾಗಲ್ ಆದ್ಮಿ ಹೋ ಎನ್ನುತ್ತಾ ಇಪ್ಪತ್ತೆರಡು ವರ್ಷದ ಯುವಕನಿಗೆ ಬೆರಳು ಮಡಿಸುವುದರಿಂದ ಸರೋದ್ ಪಾಠವನ್ನು ಪ್ರಾರಂಭಿಸಿದರು. ಕಲ್ಕತ್ತೆಗೆ ಹೋದ ಗುರುವನ್ನು ಬಾಲದಂತೆ ಇವರೂ ಹಿಂಬಾಲಿಸಿದರು. ಲೋಕದ ಪರಿವೆಯೇ ಇಲ್ಲದೆ ಹತ್ತು ಹನ್ನೆರೆಡು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಸರೋದ್ ಅವರ ಕೈಗಳ ಮುಂದುವರಿದ ಭಾಗವೇನೋ ಎನ್ನುವಂತಾಗಿತ್ತು. ಅಲ್ಲೇ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್‌ನಲ್ಲಿ ಅನ್ನಪೂರ್ಣಾದೇವಿಯ ಪಾಠಕ್ಕೆ ತೆರೆದುಕೊಳ್ಳುವ ಅವಕಾಶ ದೊರಕಿತು. ಖಾನ್ ಸಾಹೇಬರು ಆರು ವರ್ಷಗಳ ಕಾಲ ಯಾವ ಶುಲ್ಕವನ್ನೂ ಪಡೆಯದೆ ಇವರೊಳಗೆ ಹರಿಸಿದ ನಾದಸುಧೆ ಅವರ ಜೀವನದುದ್ದಕ್ಕೂ ಅವರ ಮೌಲ್ಯಗಳನ್ನು ರೂಪಿಸಿತ್ತು. ಗುರು, ಭಕ್ತಿ ಮತ್ತು ಶರಣಾಗತಿಯ ಆಧ್ಯಾತ್ಮಿಕ ಅರ್ಥವನ್ನು ಅವರಿಗೆ ಮನದಟ್ಟು ಮಾಡಿತ್ತು. ಗುರುಋಣ ಎನ್ನುವುದು ಅದೆಷ್ಟು ಅಗಾಧ ಎಂದು ಅರಿವಾಗಿತ್ತು. ಇಂಗ್ಲಿಷ್, ಸಾಹಿತ್ಯ ಇಂತಹ ಹಲವು ಕಲಿಕೆಗಳು ಅವರ ಬದುಕಿನಲ್ಲಿ ನಡೆದಿದ್ದವು. ಆದರೆ ಆ ಯಾವ ಗುರುಗಳ ಅಧ್ಯಾಪನವೂ ಅವರಿಗೆ ತೀರಿಸಬೇಕಾದ ಋಣ ಎಂದು ಅನ್ನಿಸಿರಲಿಲ್ಲ. ಆದರೆ ಸಂಗೀತ ಕಲಿಕೆ ಉಳಿದೆಲ್ಲಾ ಕಲಿಕೆಗಳಿಗಿಂತ ಭಿನ್ನ ಮತ್ತು ಅಲ್ಲಿ ಗುರು-ಶಿಷ್ಯರ ಸಂಬಂಧ ಸಂಪೂರ್ಣವಾಗಿ ಅನನ್ಯವಾದುದು ಎನ್ನುವ ಅರಿವನ್ನು ಖಾನ್ ಸಾಹೇಬರು ಅವರಲ್ಲಿ ಮೂಡಿಸಿ, ಅವರ ಮೂರನೆಯ ಕಣ್ಣನ್ನು ತೆರೆಸಿದ್ದರು. ಇಡೀ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಲೋಕ ಭಯ, ಗೌರವಗಳಿಂದ, ಬೆರಗುಗಣ್ಣುಗಳಿಂದ ನೋಡುತ್ತಿದ್ದ ಅತ್ಯಂತ ಮೇಧಾವಿ ಸಾಹಿತ್ಯ ವಿಮರ್ಶಕ, ಪ್ರಖರ ನಿಶಿತಮತಿ, ಎದುರಾಳಿಯ ಮೇಲೆ ಸಿಂಹದಂತೆ ಎರಗುತ್ತಿದ್ದವರು ರಾಜೀವ್ ತಾರಾನಾಥ್. ಅವರು ಕುಳಿತು ಬರೆಯುವುದಿಲ್ಲ ಎನ್ನುವ ಕಾರಣಕ್ಕೆ ಮೈಸೂರು ರೀಜನಲ್ ಕಾಲೇಜಿಗೆ ಬಂದು ಅವರು ಹೇಳಿದ್ದನ್ನು ಬರೆದುಕೊಂಡು ಹೋಗುತ್ತಿದ್ದರಂತೆ ಕೀರ್ತಿನಾಥ ಕುರ್ತುಕೋಟಿಯವರು. ಅಂಥಾ ರಾಜೀವರಿಗೆ ಸಂಗೀತದಲ್ಲಿ ಗುರು-ಶಿಷ್ಯರಿಗೆ ಇದ್ದ ಅನನ್ಯವಾದ ಸಂಬಂಧದ ಅರಿವನ್ನು ಖಾನ್ ಸಾಹೇಬರು ಮೂಡಿಸಿದ್ದರು. ನನಗೆ ಭಕ್ತಿ ಎಂದರೆ ಏನು ಅಂತ ಗೊತ್ತು. ಅದು ನಮ್ಮ ಉಳಿದ ನವ್ಯರಿಗೆ ಗೊತ್ತಿಲ್ಲ. ಭಕ್ತಿ ಇದ್ದರೆ ನೀನು ದೊಡ್ಡವನಾಗುತ್ತೀಯ ಇಲ್ಲದಿದ್ದರೆ ಇಲ್ಲ. ನಿಮ್ಮನ್ನ ಗುರುವಿಗೆ ಒಪ್ಪಿಸಿಕೊಂಡುಬಿಟ್ಟರೆ, ಗುರು ಏನು ಹೇಳ್ಕೊಡ್ತಾರೋ ಅದು ಸಿಗುತ್ತೆ. ಅವರು ಹೇಳಿಕೊಟ್ಟದ್ದು ನಿಮ್ಮೊಳಕ್ಕೆ ಬರ‍್ತಾ ಹೋಗುತ್ತೆ, ಬೆಳೆದು ಗಿಡ ಆಗುತ್ತೆ, ಮರ ಆಗುತ್ತೆ, ಕೊನೆಗೆ ಹಣ್ಣು ಬಿಡುತ್ತೆ. ಆದರೆ ಆ ಭಕ್ತಿ ಇರಬೇಕು. ಆಗ ಅದು ಮೊಳೆಯುತ್ತೆ, ಚಿಗುರುತ್ತೆ. ಸಂಗೀತ ಹೇಳಿಕೊಡೋದಕ್ಕೂ ಹಾಗೂ ಕಲಿಯೋದಕ್ಕೂ, ಇಂಗ್ಲಿಷ್ ಹೇಳಿಕೊಡೋದಕ್ಕೂ ಮತ್ತು ಕಲಿಯೋದಕ್ಕೂ ಇದೇ ಮುಖ್ಯ ವ್ಯತ್ಯಾಸ. ಈ ಅರಿವು ರಾಜೀವ್ ಅವರ ಇಡೀ ವ್ಯಕ್ತಿತ್ವವನ್ನೂ ಅನನ್ಯವಾಗಿಸಿತ್ತು.

ಆದರೆ ಬದುಕಿನ ಅನಿರೀಕ್ಷಿತ ಏರಿಳಿತಗಳು ಈ ಗುರುಶಿಷ್ಯರನ್ನು ೨೨ ವರ್ಷಗಳ ಕಾಲ ಅಗಲಿಸಿತ್ತು. ದೇಶದ ಪ್ರಖ್ಯಾತ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಸ್ತರಿಕೆ ಮಾಡಿ ತಮ್ಮದಲ್ಲದ ತಾಣಗಳಲ್ಲಿ ಇದ್ದ ತಾರಾನಾಥರನ್ನು ಅವರು ನಿಜವಾಗಿ ಸೇರಬೇಕಾದ ಗಮ್ಯಕ್ಕೆ ಕರೆದೊಯ್ದು ಸೇರಿಸಿದವರು ಪಂಡಿತ್ ರವಿಶಂಕರ್. ನಮ್ಮ ಘರಾನೆಯಲ್ಲಿ ನೀನು ಕಲಿತೆಯಲ್ಲ, ಅದು ಏನೋ ಒಂದಿಷ್ಟು ಈಗ ನಿನ್ನ ಕೈಯಲ್ಲಿ ಕೂತಿದೆಯಲ್ಲ ಆ ಸ್ವರ, ಆ ಧಾಟಿ ಆ ಕಡೇನೂ ನಿನ್ನ ಕರ್ತವ್ಯ ಒಂದಿಷ್ಟು ಇದೆ ಎನ್ನುವ ಯೋಚನೆ ನಿನಗೆಂದಾದರೂ ಬಂದಿದೆಯಾ? ಬಹಳ ಅಮೂಲ್ಯವಾದದ್ದು ನಮ್ಮಿಂದ ಪಡೆದುಕೊಂಡೆಯಲ್ಲ, ಅದಕ್ಕೆ ನೀನೊಂದಿಷ್ಟು ಕೊಡಬೇಕಲ್ಲವೇ? ಎಂದು ಪಂಡಿತ್ ರವಿಶಂಕರ್ ಅವರಿಗೆ ನೆನಪಿಸಿದ ಕೂಡಲೆ, ತಮ್ಮ ೫೦ರ ಹರೆಯದಲ್ಲಿ ಎಲ್ಲವನ್ನೂ ಬಿಟ್ಟು ತಾರಾನಾಥರು ಸರೋದನ್ನು ತಬ್ಬಲು, ಸಂಗೀತ ಸಾಗರದಲ್ಲಿ ಮುಳುಗಿಹೋಗಲು ’ದೀನ ನಾ ಬಂದಿರುವೆ’ ಎಂದು ಗುರುಗಳ ಮನೆ ಬಾಗಿಲನ್ನು ತಟ್ಟಿದ್ದರು. ಈ ಗುರುಋಣದ ಭಾವ ಜೀವನದುದ್ದಕ್ಕೂ ಅವರಲ್ಲಿತ್ತು. ಅಂದಿನಿಂದ ನಾನೇರಿದೆತ್ತರಕೆ ನೀನೇರಬಲ್ಲೆಯಾ?’ ಎಂದು ಯಾರೋ ಸವಾಲು ಹಾಕುತ್ತಿದ್ದಾರೆಯೋ ಎನ್ನುವಂತೆ ಸಂಗೀತವೆಂಬ ಶಿಖರವನ್ನು ಏರಲಾರಂಭಿಸಿದರು. ನಿರಂತರ ಹುಡುಕಾಟ, ರಿಯಾಜ್ ಮತ್ತು ಅಧ್ಯಾಪನ ಅವರ ನಂತರದ ಇಡೀ ಬದುಕನ್ನು ಹತ್ತು ಹಲವು ಬಗೆಗಳಲ್ಲಿ ಆವರಿಸಿಕೊಂಡವು.

ಅವರ ಈ ಹುಡುಕಾಟ, ಸುಮ್ಮನೆ ಹೊಸತನದ ರುಚಿಯ ಬೆನ್ನತ್ತಿ ಹೊರಟ ಒಂದು ಅಪ್ರಯೋಜಕವಾದ, ಕ್ಷುಲ್ಲಕವಾದ, ವ್ಯಾವಹಾರಿಕವಾದ ಹುಡುಕಾಟವಾಗಿರಲಿಲ್ಲ. ಬದಲಾಗಿ ಇವರಿಗೆ ಹುಡುಕಾಟ ಎನ್ನುವುದು ನಿಜವಾಗಿ ಒಂದು ನಿರಂತರ ಶಿಸ್ತಾಗಿತ್ತು. ಈ ಹುಡುಕಾಟದಲ್ಲಿ ಹೆಚ್ಚೆಚ್ಚು ಆಳಕ್ಕೆ ಹೋದಂತೆ, ಮತ್ತು ಎತ್ತರಕ್ಕೆ ಏರಿದಂತೆ ಇದರಿಂದ ಹೊಮ್ಮಿದ ಸಂಗೀತ ಹೆಚ್ಚೆಚ್ಚು ಅರ್ಥಪೂರ್ಣವಾಗುತ್ತಾ ಹೋಗುತ್ತಿತ್ತು. ಅವರು ತಮ್ಮ ಬದುಕಿನ ಕೊನೆಯ ಕ್ಷಣದ ತನಕ ಸವಾಲುಗಳನ್ನು ಮುಂದಿಟ್ಟುಕೊಂಡು ಶೋಧಿಸಿದ್ದು ರಾಗ ಮತ್ತು ಅದನ್ನು ವಾದ್ಯದಲ್ಲಿ ಮೂಡಿಸುವ ಸಾಧ್ಯತೆಗಳನ್ನು. ರಾಗದ ಜೊತೆಗಿನ ಅನುಸಂಧಾನವನ್ನು ತಾರಾನಾಥರು ಅತ್ಯಂತ ಅಪೂರ್ವ ಹಾಗೂ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಗ್ರಹಿಸಿಕೊಂಡಿದ್ದರು.

ರಾಗದ ಮೇಲೆ ಪ್ರಭುತ್ವ ಸಾಧಿಸುವುದು ಅನ್ನೋದೆಲ್ಲಾ ನನಗೆ ಅರ್ಥ ಆಗಲ್ಲರೀ. ರಾಗದ ಜೊತೆ ನಿರಂತರವಾಗಿ ಗೆಳೆತನ ಬೆಳಸ್ಕೋತ, ಅದನ್ನು ಅರ್ಥಮಾಡಿಕೊಳ್ಳೋದೊಂದು ಪ್ರಕ್ರಿಯೆ. ರಾಗ ಒಂದು ವ್ಯಕ್ತಿ. ರಾಗದ ಜೊತೆಗಿನ ಸಾಂಗತ್ಯ ಅಂದರೆ ಒಬ್ಬ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾಗಿ ಹಲೋ ಹೇಳುವುದರಿಂದ ಪ್ರಾರಂಭಿಸಿ, ಕ್ರಮೇಣ ಆರಾಮಾಗಿ ಮೈಮನಗಳನ್ನು ಬಿಚ್ಚಿ ಅವರೊಡನೆ ಮುಕ್ತವಾಗಿ ಒಡನಾಡುವಂತೆ. ಇಂತಹ ಪರಿಚಯಗಳಲ್ಲಿ ಕೆಲವರಷ್ಟೇ ತುಂಬಾ ಆತ್ಮೀಯರಾಗುವಂತೆ, ಅಸಂಖ್ಯಾತ ರಾಗಗಳಲ್ಲಿ ಕೆಲವು ರಾಗಗಳು ಮಾತ್ರ ತುಂಬಾ ಆತ್ಮೀಯವಾಗುತ್ತವೆ. ಅವು ಯಾವಾಗಲೂ ನನ್ನ ಅಕ್ಕಪಕ್ಕದಲ್ಲೇ ಇರುತ್ತವೆ. ಅವುಗಳಿಗೆ ನಾನು ಗೊತ್ತು, ಮತ್ತು ನನಗೆ ಅವು ಗೊತ್ತು. ಅವುಗಳ ಬಳಿ ನನಗೊಂದಿಷ್ಟು ಸಲಿಗೆ ಸಾಧ್ಯ. ಹಾಗಂತ ಅವುಗಳ ವೈಶಿಷ್ಟ್ಯವನ್ನು ಬದಲಿಸಲು ನನಗೆ ಸಾಧ್ಯವಿಲ್ಲ. ಆದರೆ ಅವುಗಳನ್ನು ಆರಾಮವಾಗಿ ನುಡಿಸುವುದಕ್ಕೆ ನನಗೆ ಸಾಧ್ಯವಾಗುತ್ತೆ. ನಾನು ನುಡಿಸದೇ ಇರುವಾಗಲೂ ಅವು ನನ್ನ ಮನದೊಳಗೆ ಹಾಗೇ ಅಡ್ಡಾಡುತ್ತಿರುತ್ತವೆ. ರಾಗದ ವಿಸ್ತಾರ ಮತ್ತು ಅದರ ಸಾಧ್ಯತೆಗಳನ್ನು ಅರಿಯುವುದು ತುಂಬಾ ನಿಧಾನವಾದ, ಹಂತ ಹಂತವಾದ ಪ್ರಕ್ರಿಯೆ. ಅದು ಪರ್ವತಾರೋಹಣದಂತೆ. ಮೇಲೆ ಮೇಲೆ ಏರಿದಂತೆಲ್ಲಾ ಹೆಚ್ಚೆಚ್ಚು ಕಾಣಲು ಪ್ರಾರಂಭವಾಗುತ್ತದೆ. ರಾಗದಲ್ಲೂ ಹಾಗೆ ನೀವು ನಿಧಾನವಾಗಿ ಅದರ ಸೀಮೆಗಳನ್ನು ವಿಸ್ತರಿಸುತ್ತಾ ಹೋಗುತ್ತೀರಿ. ಆದರೆ ಅದು ಮುರಿಯದಂತೆ ಜಾಗ್ರತೆ ವಹಿಸಬೇಕು. ಕ್ರಮೇಣ ಆ ರಾಗದಲ್ಲಿ ಅಡಗಿರುವ ಅಪರಿಚಿತವಾದ ಮೂಲೆಗಳು, ಈ ತನಕ ನೋಡಿಲ್ಲದ ಜಾಗಗಳು ಕಾಣಿಸಲಾರಂಭಿಸುತ್ತದೆ. ನಿಮಗೆ ಸ್ವಲ್ಪ ತಾಳ್ಮೆ ಇದ್ದರೆ ರಾಗವನ್ನು ನಿಮ್ಮ ಜೊತೆಗೆ ಕರೆದುಕೊಂಡು ಹೋಗಬಹುದು. ಇನ್ನೂ ಸ್ವಲ್ಪ ಹೆಚ್ಚಿನ ತಾಳ್ಮೆ ಇದ್ದರೆ, ರಾಗವೇ ನಿಮ್ಮ ಜೊತೆ ಮಾತನಾಡಲು ಪ್ರಾರಂಭಿಸುತ್ತದೆ. ಒಂದು ಪ್ರಬುದ್ಧವಾದ ಹಂತಕ್ಕೆ ಬಂದಾಗ ರಾಗವನ್ನು ಹೇಗೆ ಬೆಳೆಸಬೇಕು ಎನ್ನುವುದಕ್ಕೆ ನಮ್ಮ ಖಾನ್ ಸಾಹೇಬರು ಜೆನ್ ಗುರುವಿನಂತೆ ಹೇಳಿದ್ದರು, ’ರಾಗವೆಂಬ ಹಾದಿಯಲ್ಲಿ ನೀನು ನಡೆಯಲು ಪ್ರಾರಂಭಿಸಿದರೆ, ಆ ಹಾದಿಯೇ ಮಾರ್ಗವನ್ನು ತೋರುತ್ತಾ ಹೋಗುತ್ತದೆ.’

ಆದರೆ ಇದೆಲ್ಲವೂ ಸಂಗೀತದಲ್ಲಿ ಹೆಚ್ಚೆಚ್ಚು ಸಾಧಿಸುತ್ತಾ ಹೋಗಬೇಕು ಅನ್ನೋ ಬಯಕೆ ಯಾವಾಗಲೂ ಇದ್ದಾಗಲಷ್ಟೇ ಸಾಧ್ಯ. ರಿಯಾಜ್ ಇದ್ದಾಗ ಮಾತ್ರ ಇವೆಲ್ಲವೂ ಸಾಧ್ಯ. ನನ್ನ ತಲೆಯಲ್ಲಿ ಬಂದು ಹೋಗುವ ಎಲ್ಲಾ ಆಲೋಚನೆಗಳು ಕೈಯಲ್ಲಿ ಬರೋದಕ್ಕೆ ಸಾಧ್ಯ ಆಗಬೇಕು. ನನ್ನ ಮನಸ್ಸಿನ ಕಲ್ಪನೆಗಳು ಬೆರಳಿಗೆ ಬಂದು, ಬೆರಳುಗಳೇ ನನ್ನ ಕಲ್ಪನೆಗಳಾಗಿಬಿಡಬೇಕು. ನೀವು ಹೆಚ್ಚೆಚ್ಚು ಸಾಧಿಸಿದಷ್ಟೂ ನಿಮ್ಮ ಕಲ್ಪನೆಗಳು ಹೆಚ್ಚೆಚ್ಚು ಗರಿಗೆದರಿಕೊಂಡು ಬೆಳೆಯುತ್ತಾ ಹೋಗುತ್ತವೆ! ಏಕೆಂದರೆ ನಮ್ಮ ಕಲ್ಪನೆಗಳು ಯಾವಾಗಲೂ ನಮಗಿರುವ ನುಡಿಸುವ ಅಥವಾ ಹಾಡುವ ಸಾಮರ್ಥ್ಯಕ್ಕೆ ಸೀಮಿತಗೊಂಡಿರುತ್ತವೆ. ಇದಕ್ಕಾಗಿಯೇ ನಾವು ಅಭ್ಯಾಸ ಮಾಡುವುದು. ಹೆಚ್ಚೆಚ್ಚು ಕಲಿತು, ಸಾಧನೆ ಮಾಡಿದಂತೆಲ್ಲಾ ನಿಮ್ಮ ಬೆರಳುಗಳು ಹೆಚ್ಚೆಚ್ಚು ಕೌಶಲವನ್ನು, ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಬೆರಳುಗಳ ಸಾಧ್ಯತೆಗಳೂ ಹೆಚ್ಚುತ್ತವೆ. ಸಾಮರ್ಥ್ಯ ಹೆಚ್ಚಾದಂತೆ, ಕಲ್ಪನೆಗಳು ಬೆಳೆಯುತ್ತವೆ. ನೀವು ಔತ್ತಮ್ಯದ ಕಡೆಗೆ ಹೋದಷ್ಟೂ ಹೆಚ್ಚೆಚ್ಚು ಕಾಣಿಸಲು ಪ್ರಾರಂಭವಾಗುತ್ತದೆ. ಹೆಚ್ಚು ಮೇಲೆ ಹೋದಷ್ಟೂ ನಿಮಗೆ ಹೆಚ್ಚು ಕಾಣುತ್ತದೆ. ಒಂದು ಇನ್ನೊಂದನ್ನು ಹೆಚ್ಚಿಸುತ್ತದೆ. ಮೇಲೆ ಹೋದಂತೆಲ್ಲಾ ಇನ್ನಷ್ಟನ್ನು ಕಾಣುವ ತವಕ ಉಂಟಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ. ಈ ಕ್ರಿಯೆಯೇ ತುಂಬು ತೃಪ್ತಿಯನ್ನು, ಒಂದು ಪೂರ್ಣತೆಯ ಭಾವವನ್ನು ತಂದುಕೊಡುವಂತಹುದು. ನಾವೆಲ್ಲಾ ಹಾತೊರೆಯುವುದು ಈ ಔತ್ತಮ್ಯಕ್ಕಾಗಿಯೇ.

’ಈ ರಿಯಾಜ್ ಎನ್ನುವುದು ಪ್ರತಿಯೊಬ್ಬ ಸಂಗೀತಗಾರ ಮತ್ತು ವಿದ್ಯಾರ್ಥಿಗೆ ಅಪ್ಪಟ ಖಾಸಗಿ ಕ್ಷಣ. ಇಲ್ಲಿ ಅವರು ತುಂಬಾ ಪ್ರೀತಿ ಮತ್ತು ತಾಳ್ಮೆಯಿಂದ ಪ್ರತಿಯೊಂದು ಸುಕ್ಕನ್ನೂ ಕೊಡವಿ ಸರಿಪಡಿಸಿಕೊಳ್ಳುತ್ತಾರೆ. ತಮ್ಮಲ್ಲಿನ ಕೌಶಲ, ಸಾಮರ್ಥ್ಯ ಹಾಗೂ ತಂತ್ರಗಾರಿಕೆಯನ್ನು ಉಜ್ಜಿ ಉಜ್ಜಿ ಹೊಳಪು ನೀಡುತ್ತಾರೆ. ರಿಯಾಜ್ ಅಂದರೆ ನಾವೇ ನಮಗೆ ಪ್ರತಿಬಂಧಕಗಳನ್ನು ಹಾಕಿಕೊಂಡು ಅದನ್ನು ಯಶಸ್ವಿಯಾಗಿ ಒಂದರ ನಂತರ ಮತ್ತೊಂದನ್ನು ದಾಟುವ ಪ್ರಕ್ರಿಯೆ. ಇದು ಅಂತ್ಯವಿಲ್ಲದ ಪ್ರಕ್ರಿಯೆ. ಇದು ನಮ್ಮ ಸೃಜನಶೀಲ ಸಾಧ್ಯತೆಗಳನ್ನು ಹುಡುಕಾಡುವ ಸ್ಥಳ. ಕೇವಲ ಊಹೆ ಅಥವಾ ಕಲ್ಪನೆಗಳಿಗೆ ಒಂದು ನಿಷ್ಕೃಷ್ಟತೆಯನ್ನು ತರುವ ಜಾಗ. ರಿಯಾಜ್ ಕ್ರಮೇಣ ಕಲಾವಿದನ ಕಲ್ಪನೆಯನ್ನು ವಿಸ್ತರಿಸುತ್ತಾ ಹೋಗುತ್ತದೆ. ಇದು ಒಂದು ಸಣ್ಣ ಬೆಣ್ಣೆಯ ಉಂಡೆಯನ್ನು ದೊಡ್ಡ ತುಂಡು ಬ್ರೆಡ್ ಮೇಲೆ ಮುಕ್ಕಾಗದಂತೆ ಹರಡುತ್ತಾ ಹೋಗುವುದು. ಏನೋ ಒಂದು ಹೊಸದನ್ನು ಮಾಡೋಕ್ಕೆ ಅಂತ ಹೊರಡ್ತೀವಿ. ಕೆಲವು ಸರ್ತಿ ಸಿಕ್ಕೇ ಬಿಡುತ್ತೆ ಮತ್ತೆ ಕೆಲವು ಸರ್ತಿ, ಇನ್ನೇನು ಸಿಕ್ಕೇ ಬಿಡ್ತು ಅನ್ನುವಾಗ ಹೊರಟು ಹೋಗುತ್ತೆ. ಆದರೆ ಆ ಪ್ರಯತ್ನದಲ್ಲಿಯೇ ಎಂಥ ಖುಷಿ ಇರುತ್ತೆ ಅಲ್ವಾ? ಅಂತ ಒಮ್ಮೆ ಹೀಗೇ ಸುಮ್ಮನೆ ಮಾತನಾಡುವಾಗ ಹೇಳಿದ್ದರು. ಶೋಧದ ಫಲ ಬದಲಾಗಿ, ಆ ಪ್ರಕ್ರಿಯೆಯನ್ನೇ ಸಂಭ್ರಮಿಸುತ್ತಿದ್ದ ಅನನ್ಯವಾದ ಮನಃಸ್ಥಿತಿ ಅವರದಾಗಿತ್ತು.

ಅವರ ಶಿಷ್ಯ ಸಚಿನ್ ಹಂಪಿ ಹೇಳುವಂತೆ ಈ ಮನಃಸ್ಥಿತಿಯಿಂದಾಗಿ ಅವರು ತಮ್ಮ ಗುರು ಅಲಿ ಅಕ್ಬರ್ ಖಾನ್ ಸಾಹೇಬರು ೨೦ ವರ್ಷಗಳ ಹಿಂದೆ ನುಡಿಸುವುದನ್ನು ನಿಲ್ಲಿಸಿ, ಬಿಟ್ಟುಹೋಗಿದ್ದ ಸಂಗೀತವನ್ನು ಮತ್ತಷ್ಟು ಮುಂದಕ್ಕೆ ಒಯ್ದರು. ನಿರಂತರ ಅಭ್ಯಾಸ, ಸಂಗೀತದ ಮತ್ತು ತನ್ನತನದ ದಣಿವಿಲ್ಲದ ಹುಡುಕಾಟದ ಮೂಲಕ ಆ ಸಂಗೀತಕ್ಕೆ ಹೊಸ ಹೊಸ ಆಯಾಮಗಳನ್ನು ನೀಡಿ ಬೆಳೆಸಿದರು. ಅವರ ದೇಹಕ್ಕೆ ವಯಸ್ಸಾಗಿತ್ತು. ಆದರೆ ಅವರ ಬುದ್ಧಿ, ಮನಸ್ಸು ಅವರ ತಲೆಮಾರಿನ ಹಾಗೂ ಈ ತಲೆಮಾರಿನ ಉಳಿದೆಲ್ಲರಿಗಿಂತಲೂ ತುಂಬಾ ಮುಂದಕ್ಕೆ ಮತ್ತು ಆಧುನಿಕವಾಗಿ ಆಲೋಚಿಸಿತ್ತು. ಅದೇ ಅವರಿಗೂ ಮತ್ತು ಈಗ ಇರುವ ಉಳಿದೆಲ್ಲಾ ಸರೋದ್‌ವಾದಕರಿಗೂ ಇರುವ ವ್ಯತ್ಯಾಸ. ಈ ಹನ್ನೆರಡು ವರ್ಷಗಳಿಂದ ನಾನು ಗಮನಿಸಿದಂತೆ ದಿನಾ ಬೆಳಗ್ಗೆ ಅವರು ರಿಯಾಜ್ ಪ್ರಾರಂಭಿಸುತ್ತಿದ್ದುದು ನಟಭೈರವ್ ರಾಗದೊಂದಿಗೆ. ಈ ಹನ್ನೆರಡು ವರ್ಷಗಳಲ್ಲಿ ನನಗೆ ಎಂದೂ ಅದೇ ನಟಭೈರವ್ ಕೇಳುತ್ತಿದ್ದೇನೆ ಅಂತ ಅನ್ನಿಸಿರಲಿಲ್ಲ. ಅವರು ಪ್ರತಿದಿನವೂ ಒಂದು ಹೊಸ ಛಾಲೆಂಜನ್ನು ಮುಂದಿಟ್ಟುಕೊಂಡು ಅದನ್ನು ಬಿಡಿಸುತ್ತಾ ಮುಂದಕ್ಕೆ ಹೋಗುತ್ತಿದ್ದರು. ಇದು ಅವರನ್ನು ತುಂಬಾ ಎತ್ತರಕ್ಕೆ ಕರೆದೊಯ್ದಿತ್ತು.

ಇಷ್ಟೇ ತೀವ್ರತೆಯಿಂದ ಅವರು ಸಿನಿಮಾ ಕ್ಷೇತ್ರದಲ್ಲಿಯೂ ಸಂಗೀತದ ಸಾಧ್ಯತೆಗಳನ್ನು ಶೋಧಿಸಿದರು. ಅವರು ಸಂಸ್ಕಾರ ಚಿತ್ರಕ್ಕೆ ಮಾಡಿದ ಸಂಗೀತ ಕನ್ನಡ ಚಿತ್ರರಂಗದ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಹೊಸದೊಂದು ಅಧ್ಯಾಯ ತೆರೆಯಿತು. ಇವಲ್ಲದೆ ಲಂಕೇಶರ ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ ಚಿತ್ರಗಳಿಗೆ ಸಂಗೀತ ನೀಡುವಾಗ ಸಿದ್ಧ ಫಾರ್ಮುಲಾಗಳನ್ನು ಒಡೆದು ಸಂಗೀತ ನೀಡಲು ಯತ್ನಿಸಿದರು. ಶೃಂಗಾರಮಾಸ ಚಲನಚಿತ್ರಕ್ಕೆ ಅವರು ರಾಗಸಂಯೋಜಿಸಿದ ಬೇಂದ್ರೆಯವರ ಕವನ ಬಂತಿದೋ ಶೃಂಗಾರಮಾಸ ಆಲ್ ಟೈಮ್ ಕ್ಲಾಸಿಕ್. ಅಂತೆಯೇ ಮಲೆಯಾಳಂನ ಕಾಂಚನ ಸೀತಾ, ಪೂಕ್ಕುವಯಿಲ್ ಇವೆಲ್ಲಾ ಚಿತ್ರಗಳಿಗೂ ಪ್ರಶಸ್ತಿಗಳು ಬಂದವು. ರಾಜೀವ್ ತಾರಾನಾಥರ ಅಳಲು ಏನೆಂದರೆ ಕೊಟ್ಟಿರುವ ಸಂಗೀತವನ್ನೇ ಐದ್ಸಲ ಕೊಟ್ಟು, ಆರ‍್ಸಲ ಕೊಟ್ಟು, ನೂರಾರ‍್ಸಲ ಕೊಟ್ಟು, ಪ್ರೇಕ್ಷಕರಿಗೆ ಅದೇ ಬೇಕೂಂತ ಅನ್ನಿಸಿಬಿಡಲಾಗಿದೆ. ಪ್ರೇಕ್ಷಕನನ್ನು ಅhಚಿಟಟeಟಿge ಮಾಡುವುದರ ಮೂಲಕ ಅವನ ಅಭಿರುಚಿಯನ್ನು ಚುರುಕುಗೊಳಿಸಬೇಕಾಗುತ್ತೆ. ಅದರ ಜವಾಬ್ದಾರಿ ನಮ್ಮದು, ನಿಮ್ಮದು. ಅವರಿಗೆ ಎ ಆರ್ ರೆಹಮಾನ್ ಬಗ್ಗೆ ತುಂಬಾ ಮೆಚ್ಚುಗೆ. ರೆಹಮಾನ್ ಒಬ್ಬ ಅಸಾಧಾರಣ ಸಂಗೀತ ನಿರ್ದೇಶಕ. ಅವನು ಸ್ಟುಡಿಯೋದಲ್ಲಿ, ಸಂಗೀತ ವಾದ್ಯಗಳ ನಡುವೆಯೇ ಬೆಳೆದ. ನಮಗೆ ಒಂದು ವಾದ್ಯದ ಸಾಧ್ಯತೆ ಮಾತ್ರ ಗೊತ್ತು. ಆದರೆ ರೆಹಮಾನ್‌ಗೆ ಎಲ್ಲಾ ವಾದ್ಯದ ಸಾಧ್ಯತೆಗಳೂ ತಿಳಿದಿವೆ. ಆತ ಒಬ್ಬ ಮೇಧಾವಿ

ಒಮ್ಮೆ ನಾವು ಮೈಸೂರಿನಲ್ಲಿ ‘ರಕ್ತಾಕ್ಷಿ’ ನಾಟಕ ಮಾಡಿದ್ವಿ. ಅದ್ರಲ್ಲಿ ಭೂತ ಬರೋ ಒಂದು ದೃಶ್ಯವಿದೆ. ಅದಕ್ಕೊಂದು ಸ್ಲೈಡ್ ಮಾಡಿದ್ವಿ. ಅದಕ್ಕೆ ಹಿನ್ನೆಲೆ ಸಂಗೀತ ಕೊಡುವಾಗ ರಾಜೀವರು ನಮ್ಮ ಜೊತೆ ಗಂಟೆಗಟ್ಟಲೆ ಕೂತು ಸಂಯೋಜಿಸಿದ್ರು. ತಟ್ಟೆ ಬೀಳಿಸೋ ಸದ್ದು, ರಿವಾಲ್ವಿಂಗ್ ಕುರ್ಚಿಯನ್ನ ತಿರುಗಿಸಿದಾಗ ಬರ‍್ತಿದ್ದ ಕಿರಗುಟ್ಟೋ ಶಬ್ದ, ಹೀಗೆ ಏನೇನೋ ಸದ್ದುಗಳನ್ನು ಅವರು ಬಳಸಿ ಭೂತದ ಹಿನ್ನೆಲೆಗೆ ಧ್ವನಿ ನೀಡಿದ್ರು. ಅವರ ಸಂಗೀತ ಬಹಳ ಪರಿಣಾಮಕಾರಿಯಾಗಿತ್ತು. ಅಷ್ಟು ದೊಡ್ಡ ಸಂಗೀತಗಾರರಾಗಿದ್ದರೂ ನಮಗಾಗಿ ಚಿಕ್ಕಪುಟ್ಟ ಸಂಗೀತ ಸಂಯೋಜನೆ ಮಾಡಿಕೊಡುವಾಗಲೂ ಅತ್ಯಂತ ಆಸ್ಥೆ ವಹಿಸ್ತಾ ಇದ್ರು. ಇದು ನನ್ನನ್ನು ತುಂಬಾನೆ ತಟ್ಟಿದೆ. ಏನೋ ಒಂದು ಚಿಕ್ಕ ಕೆಲಸ, ಹೇಗೋ ಮಾಡಿದ್ರಾಯ್ತು ಅಂತನ್ನೋದು ಅವರ ಜಾಯಮಾನದಲ್ಲಿಯೇ ಇಲ್ಲ, ಏನೇ ಮಾಡಲಿ ಅದು ಪರಿಪೂರ್ಣವಾಗಿರಬೇಕು, ಶ್ರೇಷ್ಠವಾಗಿರಬೇಕು. ಅದರಲ್ಲೊಂದು ಪರಿಪಕ್ವತೆ ಇರಬೇಕು.

ಈ ಅರಿವು ಅವರ ಕಲಿಕೆ ಮತ್ತು ಗುರುತನ ಎರಡನ್ನೂ ರೂಪಿಸಿತ್ತು ಎನಿಸುತ್ತದೆ. ಅವರು ಯಾವ ಶಿಷ್ಯರಿಂದಲೂ ಎಂದೂ ಫೀಸ್ ಪಡೆದವರಲ್ಲ. ಅಮೇರಿಕಾ, ಜಪಾನ್, ಆಸ್ಟ್ರೇಲಿಯಾದ ಹಲವು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅವರ ದೇಹಾಂತವಾಗುವ ಒಂದು ತಿಂಗಳಿಗೆ ಮೊದಲು ಕೂಡ ಕಲಿಸುತ್ತಿದ್ದರು. ಆಸ್ಪತ್ರೆಯಲ್ಲಿ ಅವರೊಡನೆ ಇರಲು ಬಂದಿದ್ದ ಶಿಷ್ಯ ಪುಣೆಯ ಅನುಪಮ್ ಜೋಶಿಗೆ ಆಸ್ಪತ್ರೆಯಲ್ಲಿಯೂ ಸರೋದ್ ಕಲಿಸುತ್ತಿದ್ದರು. ಮಲಗಿದಲ್ಲಿಯೇ ಅವರು ಹಾಡುತ್ತಿದ್ದರು. ಅದನ್ನು ಅನುಪಮ್ ಸರೋದ್‌ನಲ್ಲಿ ನುಡಿಸುತ್ತಿದ್ದರು. ಕಲಿಸುವುದು ಅವರಿಗೆ ಒಂದು ಪ್ಯಾಷನ್ ಆಗಿತ್ತು. ಅದಕ್ಕೊಂದು ಹೊತ್ತು ಗೊತ್ತು ಇರಲಿಲ್ಲ. ೧೨ ವರ್ಷಗಳ ಕಾಲ ಅವರ ಜೊತೆಯಲ್ಲೇ ಇದ್ದು ಸರೋದ್ ಕಲಿಯುತ್ತಿರುವ ಶಿಷ್ಯ ಸಚಿನ್ ಹಂಪಿ ಹೇಳುತ್ತಾರೆ, ಬೆಳಗ್ಗೆ ಮೂರು ಗಂಟೆಗೆ ಲಹರಿ ಬಂದರೆ ಆಗ ಎಬ್ಬಿಸುತ್ತಿದ್ದರು. ರಾತ್ರಿ ಲಹರಿ ಬಂದರೆ ರಾತ್ರಿ. ಆ ಇಡೀ ಪ್ರಕ್ರಿಯೆಯಲ್ಲಿ ಸ್ನೇಹ, ಪ್ರೀತಿ, ಸಿಟ್ಟು, ಮೆಚ್ಚುಗೆ ಇವೆಲ್ಲವೂ ಇತ್ತು. ನನ್ನ ಕಲಿಕೆಯ ಆರಂಭದ ವರ್ಷಗಳ ರೆಕಾರ್ಡಿಂಗ್ ಕೇಳಿದರೆ, ಅದರಲ್ಲಿ ಪಾಠಕ್ಕಿಂತ ಬೈದಿರುವುದೇ ಹೆಚ್ಚಾಗಿದೆ. ನಂತರದ ದಿನಗಳಲ್ಲಿ ನಾನು ಏನನ್ನು ನುಡಿಸಿದರೂ ಅದಕ್ಕಿಂತ ಭಿನ್ನವಾದ, ಸೃಜನಶೀಲವಾದ ಅಂಶವೊಂದನ್ನು ಆ ರಾಗಕ್ಕೆ ಸೇರಿಸಿ ಹೇಳಿಕೊಡುವುದಕ್ಕೆ ಅವರಿಗೆ ಸಾಧ್ಯವಾಗಿತ್ತು. ರಾಗದ ಅನೂಹ್ಯವಾದ ಸಾಧ್ಯತೆಗಳನ್ನು ತೆರೆದಿಡುತ್ತಿದ್ದರು. ಹೀಗೊಂದು ಸೇರ್ಪಡೆ ಇಲ್ಲದೆ ನನ್ನ ಪಾಠ ಎಂದೂ ಮುಗಿದಿರಲಿಲ್ಲ. ಸಾಮಾನ್ಯವಾಗಿ ತಾವು ರಿಯಾಜ್ ಮಾಡುವಾಗ ಸಂಗೀತಗಾರರು ಅಲ್ಲಿ ಯಾರನ್ನೂ ಇರಗೊಡುವುದಿಲ್ಲ. ಆದರೆ ನಮ್ಮ ಗುರುಗಳು ತಾವು ರಿಯಾಜ್ ಮಾಡುವಾಗಲೂ ನಮ್ಮನ್ನು ಅಲ್ಲಿಯೇ ಇರಲು ಅವಕಾಶ ಮಾಡಿಕೊಡುತ್ತಿದ್ದರು. ರಿಯಾಜ್‌ನಲ್ಲಿ ಅವರು ತಮಗೆ ಎದುರಾಗುತ್ತಿದ್ದ ಮಿತಿಗಳನ್ನು ಹೇಗೆ ಮೀರಿಕೊಳ್ಳುತ್ತಿದ್ದರು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಅಳವಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿತ್ತು. ಅವರಿಗೆ ಸಂಗೀತ ಮತ್ತು ಬದುಕು ಎಂದೂ ಬೇರೆ ಬೇರೆ ಆಗಿರಲೇ ಇಲ್ಲ. ಹಾಗಾಗಿ ಅವರು ತಮ್ಮೆಲ್ಲಾ ಶಿಷ್ಯರಿಗೆ ಸಂಗೀತದ ಜೊತೆಗೆ ಅಡುಗೆ ಮುಂತಾದ ಹಲವು ಕೆಲಸಗಳನ್ನು ಮಾಡುವುದನ್ನು ಕಲಿಸುತ್ತಿದ್ದರು. ಅವರ ಅಮೇರಿಕದ ವಿದ್ಯಾರ್ಥಿ ಲೆಸ್ಲಿ ಸ್ನೈಡರ್, ಅಹಮದಾಬಾದಿನ ಹಿರಿಯ ಶಿಷ್ಯ ಸೋಹನ್ ನೀಲಕಂಠ್ ಹಾಗೂ ಸಂಗೀತದ ಶಿಷ್ಯರಲ್ಲದ ನಮಗೆ ಅವರು ಹಲವು ಅಡುಗೆಗಳನ್ನು ಉದಾಹರಣೆಗೆ ದಾಲ್, ಟೊಮ್ಯಾಟೋ ಉಪ್ಪಿಟ್ಟು, ಅಣ್ಣೈ ಕತ್ತರಿಕಾಯಿ ಮುಂತಾದುವನ್ನು ಹೇಳಿಕೊಟ್ಟಿದ್ದರು. ಸ್ವತಃ ಅವರು ಉಸ್ತಾದ್ ಅಲ್ಲಾ ರಖ್ಖಾ ಅವರ ಸೇವೆ ಮಾಡುತ್ತಾ ತಬಲಾದ ಸೂಕ್ಷ್ಮಗಳ ಜೊತೆಗೆ ಮಟನ್ ಕರಿ, ಬಿರಿಯಾನಿ ಇವುಗಳನ್ನು ಮಾಡುವುದನ್ನು ಕಲಿತಿದ್ದೆ ಎಂದು ಅದರ ರೆಸಿಪಿಯನ್ನು ಹೇಳುತ್ತಿದ್ದರು.